ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇದಿಕೆ ಸಿದ್ಧ: 2030ರ ವೇಳೆಗೆ ನೇರ ಕಾರ್ಯಕ್ರಮಗಳ (ಲೈವ್ ಇವೆಂಟ್ಸ್) ಜಾಗತಿಕ ನಾಯಕತ್ವದತ್ತ ಭಾರತದ ಗುರಿ
ಮಾದರಿ ಪರವಾನಗಿ ಚೌಕಟ್ಟು, ಪಾರಂಪರಿಕ ತಾಣಗಳ ಎಸ್ ಒ ಪಿ ಮತ್ತು ಗ್ರೀನ್‌ಫೀಲ್ಡ್ ತಾಣಗಳ ನೀತಿ - ಇವು ಎಲ್ ಇ ಡಿ ಸಿ ಯ ಪ್ರಮುಖ ಸುಧಾರಣೆಗಳಲ್ಲಿ ಸೇರಿವೆ
ಇಂಡಿಯಾ ಸಿನಿ ಹಬ್ ಪೋರ್ಟಲ್ ನಲ್ಲಿ ನೇರ ಕಾರ್ಯಕ್ರಮಗಳ ಅನುಮತಿಗಾಗಿ 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನೋಡಲ್ ಅಧಿಕಾರಿಗಳನ್ನು ನೇಮಿಸಿವೆ
ಎಂ ಇ ಎಸ್ ಸಿ ಮತ್ತು ಇಇಎಂಎ ಸಹಯೋಗದೊಂದಿಗೆ ಐಐಎಂಸಿ, ನೇರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಮತ್ತು ಅಲ್ಪಾವಧಿಯ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಲಿದೆ
प्रविष्टि तिथि:
29 JUL 2026 3:16PM by PIB Bengaluru
ನೇರ ಕಾರ್ಯಕ್ರಮಗಳ (ಲೈವ್ ಇವೆಂಟ್ಸ್) ಕ್ಷೇತ್ರವನ್ನು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರಚಾರದ ಪ್ರಮುಖ ಚಾಲಕ ಶಕ್ತಿಯನ್ನಾಗಿ ಸರ್ಕಾರವು ಗುರುತಿಸಿದೆ.
ಈ ಕ್ಷೇತ್ರದ ಸುಸ್ಥಿರ ಬೆಳವಣಿಗೆಯನ್ನು ಸುಗಮಗೊಳಿಸಲು ಮತ್ತು 2030ರ ವೇಳೆಗೆ ಭಾರತವನ್ನು ನೇರ ಕಾರ್ಯಕ್ರಮಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ, ಜುಲೈ 2025 ರಲ್ಲಿ 'ನೇರ ಕಾರ್ಯಕ್ರಮಗಳ ಅಭಿವೃದ್ಧಿ ಕೋಶ'ವನ್ನು (ಲೈವ್ ಇವೆಂಟ್ಸ್ ಡೆವಲಪ್‌ಮೆಂಟ್ ಸೆಲ್ - ಎಲ್ ಇ ಡಿ ಸಿ) ರಚಿಸಲಾಯಿತು. ಈ ಕೋಶದ ಅಧ್ಯಕ್ಷತೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು ವಹಿಸಿದ್ದು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು, ಉದ್ಯಮ ಸಂಘಟನೆಗಳು ಮತ್ತು ಇತರ ಪಾಲುದಾರರ ಪ್ರತಿನಿಧಿಗಳನ್ನು ಇದು ಒಳಗೊಂಡಿದೆ.
26.08.2025, 16.10.2025, 04.02.2026 ಮತ್ತು 30.04.2026 ರಂದು ಎಲ್ ಇ ಡಿ ಸಿ ಯ ನಾಲ್ಕು ಸಭೆಗಳು ಜರುಗಿದ್ದು, ಮೂಲಸೌಕರ್ಯಗಳನ್ನು ಬಲಪಡಿಸಲು, ನಿಯಂತ್ರಣ ಪ್ರಕ್ರಿಯೆಗಳನ್ನು ಸರಳೀಕರಿಸಲು, ಸುಲಭ ವ್ಯವಹಾರವನ್ನು ಉತ್ತೇಜಿಸಲು ಮತ್ತು ನೇರ ಕಾರ್ಯಕ್ರಮಗಳ ಕ್ಷೇತ್ರಕ್ಕೆ ಬಲವಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಲಾಗಿದೆ.
ಇದರ ಪ್ರಮುಖ ಫಲಿತಾಂಶಗಳು ಈ ಕೆಳಗಿನಂತಿವೆ:
- ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಒಂದು ಸಮಗ್ರ ಕಾರ್ಯತಂತ್ರವನ್ನು ಒಳಗೊಂಡ 'ಕಾರ್ಯಗತಗೊಳಿಸುವಿಕೆ ಚೌಕಟ್ಟು' ಸಿದ್ಧಪಡಿಸಿ, ಎಲ್ಲಾ ಪಾಲುದಾರರಿಗೆ ವಿತರಿಸಲಾಗಿದೆ.
- 'ಇಂಡಿಯಾ ಸಿನಿ ಹಬ್' (ಐಸಿಎಚ್) ಪೋರ್ಟಲ್ ನಲ್ಲಿ ನೇರ ಕಾರ್ಯಕ್ರಮಗಳ ಅನುಮತಿಗಾಗಿ ಆನ್‌ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ. ಇದು ಅರ್ಜಿ ಸಲ್ಲಿಕೆ, ಸಮನ್ವಯತೆ, ಅನುಮೋದನೆಗಳು, ಪಾವತಿಗಳು ಮತ್ತು ತಪಾಸಣೆಗಳನ್ನು ಒಳಗೊಂಡ ಸಿಂಗಲ್ ಡಿಜಿಟಲ್ ವರ್ಕ್‌ಫ್ಲೋ ಪ್ರಕ್ರಿಯೆಯನ್ನು ಒದಗಿಸುತ್ತದೆ. ಜೊತೆಗೆ ಸಮಯಬದ್ಧ ಪ್ರಕ್ರಿಯೆ, ನೈಜ ಸಮಯದ ಟ್ರ್ಯಾಕಿಂಗ್, ವಿಳಂಬಗಳ ತನಿಖೆ, ಸಂಯೋಜಿತ ಡಿಜಿಟಲ್ ಪಾವತಿಗಳು ಮತ್ತು ಡಿಜಿಟಲ್ ಆಡಿಟ್ ಟ್ರೇಲ್ ಗಳನ್ನು ಇದು ನೀಡುತ್ತದೆ.
- 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಐಸಿಹೆಚ್ ಪೋರ್ಟಲ್ ನಲ್ಲಿ ನೇರ ಕಾರ್ಯಕ್ರಮಗಳ ಅನುಮತಿಗಾಗಿ ತಮ್ಮ ನೋಡಲ್ ಅಧಿಕಾರಿಗಳನ್ನು ನೇಮಿಸಿವೆ.
- "ಭಾರತದಲ್ಲಿ ನೇರ ಕಾರ್ಯಕ್ರಮಗಳಿಗೆ ಪರವಾನಗಿ ಮತ್ತು ಅನುಮತಿಗಳನ್ನು ಸರಳೀಕರಿಸುವ ಮಾದರಿ ಕಾರ್ಯನಿರ್ವಾಹಕ ಆದೇಶ, 2026" ಅನ್ನು ಎಲ್ ಇ ಡಿ ಸಿ ಸಿದ್ಧಪಡಿಸಿದ್ದು, 13.03.2026 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದೆ. ಪ್ರಸ್ತುತ, 3 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇದನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತಂದಿವೆ.
- ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎ ಎಸ್ ಐ) ಸಂರಕ್ಷಿತ ಸ್ಮಾರಕಗಳಲ್ಲಿ ನೇರ ಕಾರ್ಯಕ್ರಮಗಳನ್ನು ಸಂಘಟಿಸಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್ ಒ ಪಿ) ರೂಪಿಸಿದೆ ಮತ್ತು ಈ ಉದ್ದೇಶಕ್ಕಾಗಿ 224 ಪಾರಂಪರಿಕ ತಾಣಗಳ ಪಟ್ಟಿಯನ್ನು ಹಂಚಿಕೊಂಡಿದೆ.
- ಗ್ರೀನ್‌ಫೀಲ್ಡ್ ತಾಣಗಳ ಅಭಿವೃದ್ಧಿ ನೀತಿಯ ಕುರಿತು ಒಂದು ಪರಿಕಲ್ಪನಾ ಟಿಪ್ಪಣಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಗಳು, ಕ್ರೀಡಾ ಪ್ರಾಧಿಕಾರಗಳು ಮತ್ತು ಉದ್ಯಮ ಪಾಲುದಾರರಿಗೆ ರವಾನಿಸಲಾಗಿದೆ.
- ಕೌಶಲ್ಯ ಸಮಿತಿಯೊಂದನ್ನು ರಚಿಸಲಾಗಿದೆ. ಭಾರತೀಯ ಸಮೂಹ ಸಂವಹನ ಸಂಸ್ಥೆಯು ಮಾಧ್ಯಮ ಮತ್ತು ಮನರಂಜನಾ ಕೌಶಲ್ಯ ಮಂಡಳಿ ಮತ್ತು ಈವೆಂಟ್ ಮತ್ತು ಮನರಂಜನಾ ನಿರ್ವಹಣಾ ಸಂಘದ ಸಹಯೋಗದೊಂದಿಗೆ, ನೇರ ಕಾರ್ಯಕ್ರಮಗಳಲ್ಲಿ ಪ್ರಮಾಣಪತ್ರ ಮತ್ತು ಅಲ್ಪಾವಧಿಯ ಕೋರ್ಸ್ ಗಳು ಹಾಗೂ ತನ್ನ ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳಲ್ಲಿ ಐಚ್ಛಿಕ ಮಾಡ್ಯೂಲ್ ಗಳಿಗೆ (ಎಲೆಕ್ಟಿವ್ ಮಾಡ್ಯೂಲ್ಸ್) ಸಂಬಂಧಿಸಿದ ಪೂರ್ವಭಾವಿ ಕೆಲಸಗಳನ್ನು ಕೈಗೆತ್ತಿಕೊಂಡಿದೆ.
- ಭೇಟಿ ನೀಡುವ ಕಲಾವಿದರು ಮತ್ತು ಸಿಬ್ಬಂದಿಗೆ ವೀಸಾ ಮತ್ತು ಎಫ್ ಆರ್ ಆರ್ ಒ ಸೌಲಭ್ಯ, ಕ್ರೀಡೆ ಮತ್ತು ಪಾರಂಪರಿಕ ತಾಣಗಳ ಬಳಕೆ, ಸಂಗೀತ ಪರವಾನಗಿ ಸರಳೀಕರಣ, ರಾತ್ರಿ 10 ಗಂಟೆಯ ನಂತರ ಕಾರ್ಯಕ್ರಮಗಳಿಗೆ ಅನುಮತಿ, ತೆರಿಗೆ ಮತ್ತು ಹಣಕಾಸಿನ ಲಭ್ಯತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಲ್ ಇ ಡಿಸಿ ಗುರುತಿಸಿದ್ದು, ಸೂಕ್ತ ಪರಿಶೀಲನೆಗಾಗಿ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಹಂಚಿಕೊಂಡಿದೆ.
- ಎಲ್ ಇ ಡಿ ಸಿ ಯ ಶಿಫಾರಸಿನ ಮೇರೆಗೆ, ಭಾರತೀಯ ರಿಸರ್ವ್ ಬ್ಯಾಂಕ್ 15 ಜನವರಿ 2026 ರಂದು ಅಧಿಸೂಚಿಸಲಾದ 'ವಿದೇಶಿ ವಿನಿಮಯ ನಿರ್ವಹಣಾ ನಿಯಮಾವಳಿಗಳು, 2026' ರ ಅಡಿಯಲ್ಲಿ, ಸೇವೆಗಳ ಆಮದಿಗಾಗಿ $500,000 ಮತ್ತು ಅದಕ್ಕಿಂತ ಹೆಚ್ಚಿನ ಮುಂಗಡ ಹಣ ವರ್ಗಾವಣೆಗೆ ಬ್ಯಾಂಕ್ ಗ್ಯಾರಂಟಿ ಒದಗಿಸುವ ಅಗತ್ಯವನ್ನು ತೆಗೆದುಹಾಕಿದೆ. ಈ ನಿಯಮಾವಳಿಗಳು 01.10.2026 ರಿಂದ ಜಾರಿಗೆ ಬರಲಿವೆ.
ಈ ಮಾಹಿತಿಯನ್ನು ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಲೋಕಸಭೆಯಲ್ಲಿ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗೆ ಲಿಖಿತ ಉತ್ತರವಾಗಿ ನೀಡಿದ್ದಾರೆ.
*****
(रिलीज़ आईडी: 2291103)
आगंतुक पटल : 11