ಗೃಹ ವ್ಯವಹಾರಗಳ ಸಚಿವಾಲಯ
ದೇಶಾದ್ಯಂತ ಮುಂಗಾರು ಪರಿಸ್ಥಿತಿಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿರುವ ಗೃಹ ಸಚಿವಾಲಯ (MHA)
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರಿ ಮಳೆಯಿಂದ ಉಂಟಾಗಿರುವ ಸವಾಲುಗಳನ್ನು ನಿರ್ವಹಿಸುವಲ್ಲಿ ಸಂತ್ರಸ್ತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯವು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಿದೆ
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಗಳು ಮತ್ತು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ಸಮಯೋಚಿತ ಎಚ್ಚರಿಕೆಗಳನ್ನು ರವಾನಿಸಲು ಐಎಂಡಿ (IMD), ಸಿಡಬ್ಲ್ಯೂಸಿ (CWC) ಮತ್ತು ಇನ್ಕೋಯಿಸ್ (INCOIS) ಸೇರಿದಂತೆ ಇತರ ಕೇಂದ್ರ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸುವುದಲ್ಲದೆ, ಎಲ್ಲಾ ರಕ್ಷಣಾ ಚಟುವಟಿಕೆಗಳನ್ನು ಗಡಿಯಾರ ಸುತ್ತು (24/7) ಮೇಲ್ವಿಚಾರಣೆ ಮಾಡುತ್ತಿರುವ ನಿಯಂತ್ರಣ ಕೊಠಡಿ
ಕಳೆದ ಒಂದು ವಾರದಲ್ಲಿ, ಎಲ್ಲಾ ಸಂತ್ರಸ್ತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 52 ನಾಗರಿಕರನ್ನು ರಕ್ಷಿಸಲಾಗಿದೆ ಮತ್ತು 2,206 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ನಿರ್ದೇಶನದಂತೆ, ಹಾನಿಯ ಪ್ರಮಾಣವನ್ನು ಪರಿಶೀಲಿಸಲು ಮತ್ತು ಎನ್‌ಡಿಆರ್‌ಎಫ್‌ನಿಂದ (NDRF) ಈ ರಾಜ್ಯಗಳಿಗೆ ಅಗತ್ಯ ಆರ್ಥಿಕ ನೆರವು ನೀಡಲು ಅಂತರ-ಸಚಿವಾಲಯಗಳ ಕೇಂದ್ರ ತಂಡಗಳು ಈಗಾಗಲೇ 2026 ರ ಜುಲೈ 07 ರಿಂದ 10 ರವರೆಗೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿವೆ
ನಿರಂತರ ಮಳೆ ಮತ್ತು ಪ್ರವಾಹದಿಂದ ಉಂಟಾದ ನಷ್ಟ ಮತ್ತು ಹಾನಿಯನ್ನು ಪರಾಮರ್ಶಿಸಲು ಮತ್ತೊಂದು ಅಂತರ-ಸಚಿವಾಲಯಗಳ ಕೇಂದ್ರ ತಂಡವು 2026 ರ ಜುಲೈ 25 ರಿಂದ ಅಸ್ಸಾಂನ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ
प्रविष्टि तिथि:
23 JUL 2026 6:08PM by PIB Bengaluru
ಗೃಹ ಸಚಿವಾಲಯವು (MHA) ದೇಶಾದ್ಯಂತ ಮುಂಗಾರು ಪರಿಸ್ಥಿತಿಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರಿ ಮಳೆಯಿಂದ ಉಂಟಾಗಿರುವ ಸವಾಲುಗಳನ್ನು ನಿರ್ವಹಿಸುವಲ್ಲಿ ಸಂತ್ರಸ್ತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯವು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಿದೆ.
ಜುಲೈ, 2026 ರ ತಿಂಗಳಿನಲ್ಲಿ, ದೇಶದ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ದಾದ್ರಾ ಮತ್ತು ನಾಗರ ಹವೇಲಿ, ದಮನ್, ಜಮ್ಮು ಮತ್ತು ಕಾಶ್ಮೀರ ಮುಂತಾದ ಕೆಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಭೂಕುಸಿತಗಳು ಸಂಭವಿಸಿವೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಗಳು ಮತ್ತು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ಸಮಯೋಚಿತ ಎಚ್ಚರಿಕೆಗಳನ್ನು ರವಾನಿಸಲು ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯು (ICR-ER) ಭಾರತೀಯ ಹವಾಮಾನ ಇಲಾಖೆ (IMD), ಕೇಂದ್ರ ಜಲ ಆಯೋಗ (CWC) ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (INCOIS) ಸೇರಿದಂತೆ ಇತರ ಕೇಂದ್ರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸುವುದಲ್ಲದೆ, ನಿಯಂತ್ರಣ ಕೊಠಡಿಯು ಎಲ್ಲಾ ರಕ್ಷಣಾ ಚಟುವಟಿಕೆಗಳನ್ನು ಗಡಿಯಾರ ಸುತ್ತು (24/7) ಮೇಲ್ವಿಚಾರಣೆ ಮಾಡುತ್ತಿದೆ.
ಮಾನವ ಜೀವಗಳನ್ನು ಉಳಿಸಲು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಈ ಎಲ್ಲಾ ಸ್ಥಳಗಳಲ್ಲಿ ರಾಜ್ಯ ಸರ್ಕಾರಿ ಸಂಸ್ಥೆಗಳು, ರಾಜ್ಯ ಪೊಲೀಸ್ ಮತ್ತು ಎಸ್‌ಡಿಆರ್‌ಎಫ್ (SDRF) ಜೊತೆ ಶ್ರಮಿಸಿದೆ. ಸ್ಪಂದನಾ ಸಮಯವನ್ನು ಕಡಿಮೆ ಮಾಡಲು ಎನ್‌ಡಿಆರ್‌ಎಫ್ ತನಗೆ ಸೂಕ್ಷ್ಮವೆನಿಸಿದ ಸ್ಥಳಗಳಲ್ಲಿ ತನ್ನ ತಂಡಗಳನ್ನು ಮುಂಚಿತವಾಗಿಯೇ ನಿಯೋಜಿಸಿತ್ತು. ಕಳೆದ ಒಂದು ವಾರದಲ್ಲಿ, ಎನ್‌ಡಿಆರ್‌ಎಫ್ ತಂಡಗಳು 52 ನಾಗರಿಕರನ್ನು ರಕ್ಷಿಸಿದ್ದರೆ, ಎಲ್ಲಾ ಸಂತ್ರಸ್ತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2,206 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಗೃಹ ಸಚಿವಾಲಯದ ಸಮನ್ವಯದೊಂದಿಗೆ, ರಕ್ಷಣಾ ಸಚಿವಾಲಯವು (MoD) ಸಿಲುಕಿಕೊಂಡ ಜನರನ್ನು ರಕ್ಷಿಸಲು, ಸಿಬ್ಬಂದಿ ಮತ್ತು ಸಾಮಗ್ರಿಗಳ ಸಾಗಣೆಯಲ್ಲಿ ರಕ್ಷಣಾ ಸಂಸ್ಥೆಗಳಿಗೆ ಸಹಾಯ ಮಾಡಲು ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ತನ್ನ ಸಂಪನ್ಮೂಲಗಳನ್ನು ನಿಯೋಜಿಸಿದೆ.
ದೇಶಾದ್ಯಂತ ಮುಂಗಾರು ಪೂರ್ವ ಪ್ರವಾಹಗಳು ಮತ್ತು ಶಾಖದ ಅಲೆಗಳ ಸಿದ್ಧತೆಯ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು 2026 ರ ಮೇ 10 ರಂದು ವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ, ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದ ಒಟ್ಟಾರೆ ಸಿದ್ಧತೆಯನ್ನು ಪರಿಶೀಲಿಸಲು ಗೃಹ ಸಚಿವಾಲಯವು 2026 ರ ಜೂನ್ 03 ರಂದು ಮತ್ತೊಂದು ಸಭೆಯನ್ನು ನಡೆಸಿತು. ಚಾರ್ ಧಾಮ್ ಯಾತ್ರೆ ಮಾರ್ಗದಲ್ಲಿನ ಸಿದ್ಧತೆಯನ್ನು ಗೃಹ ಸಚಿವಾಲಯವು ನಿಯಮಿತವಾಗಿ ಪರಿಶೀಲಿಸಿದೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ನಿರ್ದೇಶನದಂತೆ, ಹಾನಿಯ ಪ್ರಮಾಣವನ್ನು ಪರಿಶೀಲಿಸಲು ಮತ್ತು ಎನ್‌ಡಿಆರ್‌ಎಫ್‌ನಿಂದ ಈ ರಾಜ್ಯಗಳಿಗೆ ಅಗತ್ಯ ಆರ್ಥಿಕ ನೆರವು ನೀಡಲು ಅಂತರ-ಸಚಿವಾಲಯಗಳ ಕೇಂದ್ರ ತಂಡಗಳು ಈಗಾಗಲೇ 2026 ರ ಜುಲೈ 07 ರಿಂದ 10 ರವರೆಗೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿವೆ. ನಿರಂತರ ಮಳೆ ಮತ್ತು ಪ್ರವಾಹದಿಂದ ಉಂಟಾದ ನಷ್ಟ ಮತ್ತು ಹಾನಿಯನ್ನು ಪರಾಮರ್ಶಿಸಲು ಮತ್ತೊಂದು ಅಂತರ-ಸಚಿವಾಲಯಗಳ ಕೇಂದ್ರ ತಂಡವು 25.07.2026 ರಿಂದ ಅಸ್ಸಾಂನ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ.
ಇತ್ತೀಚಿನ ಮಳೆಯು ಕೆಲವು ರಾಜ್ಯಗಳಲ್ಲಿ ಜನರಿಗೆ ಕಷ್ಟವನ್ನು ಉಂಟುಮಾಡಿದ್ದರೂ, ಒಟ್ಟಾರೆಯಾಗಿ ಇದು ಮುಂಚಿತವಾಗಿ ಅಂದಾಜಿಸಲಾಗಿದ್ದ ಸುಮಾರು ಶೇಕಡಾ 30 ರಷ್ಟು ಮಳೆ ಕೊರತೆಯನ್ನು ಸುಮಾರು ಶೇಕಡಾ 15 ಕ್ಕೆ ಕಡಿಮೆ ಮಾಡಿದೆ.
*****
(रिलीज़ आईडी: 2288555)
आगंतुक पटल : 12