ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಆಕಾಶವಾಣಿಯ 90 ವರ್ಷಗಳ ಆಚರಣೆಯ ಭಾಗವಾಗಿ ‘ಸ್ವರ ಪ್ರೇರಣಾ ವೀಥಿಕಾ’ ಉದ್ಘಾಟನೆ
ಖ್ಯಾತ ಸಂಗೀತಗಾರರನ್ನು ಗೌರವಿಸುವ ಫೋಟೋ ಗ್ಯಾಲರಿಯನ್ನು ಉದ್ಘಾಟಿಸಿದ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ
प्रविष्टि तिथि:
01 JUL 2026 6:23PM by PIB Bengaluru
ಆಕಾಶವಾಣಿಯ 90 ವರ್ಷಗಳ ಸಂಭ್ರಮಾಚರಣೆ ಹಾಗೂ 2027ರಲ್ಲಿ ಭಾರತದಲ್ಲಿ ರೇಡಿಯೋ ಪ್ರಸಾರದ ಶತಮಾನೋತ್ಸವದ ಪೂರ್ವಭಾವಿಯಾಗಿ, ಆಕಾಶವಾಣಿ ಮತ್ತು ಭಾರತದ ಖ್ಯಾತ ಸಂಗೀತಗಾರರ ನಡುವಿನ ಸುದೀರ್ಘ ಬಾಂಧವ್ಯವನ್ನು ಆಚರಿಸುವ ವಿಶೇಷ ಫೋಟೋ ಗ್ಯಾಲರಿ ‘ಸ್ವರ ಪ್ರೇರಣಾ ವೀಥಿಕಾ’ ವನ್ನು ಆಕಾಶವಾಣಿ ಇಂದು ಉದ್ಘಾಟಿಸಿತು. ನವದೆಹಲಿಯ ಆಕಾಶವಾಣಿ ಭವನದ ಆಕಾಶವಾಣಿ ರಂಗ ಭವನ ಸಭಾಂಗಣದಲ್ಲಿ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರು ಈ ಗ್ಯಾಲರಿಯನ್ನು ಉದ್ಘಾಟಿಸಿದರು.
ಸುಮಾರು ಒಂಬತ್ತು ದಶಕಗಳಿಂದ, ಆಕಾಶವಾಣಿಯು ದೇಶದ ಅಗ್ರಗಣ್ಯ ಸಾರ್ವಜನಿಕ ಸೇವಾ ಪ್ರಸಾರಕನಾಗಿ ಸೇವೆ ಸಲ್ಲಿಸುತ್ತಿದೆ, ದೇಶಾದ್ಯಂತ ಕೋಟ್ಯಂತರ ಕೇಳುಗರಿಗೆ ಪ್ರಸಿದ್ಧ ಕಲಾವಿದರ ಪ್ರದರ್ಶನಗಳನ್ನು ತಲುಪಿಸುವ ಮೂಲಕ ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಸಂರಕ್ಷಿಸುತ್ತಿದೆ ಮತ್ತು ಉತ್ತೇಜಿಸುತ್ತಿದೆ. ಈ ಸುದೀರ್ಘ ಪರಂಪರೆಗೆ ಗೌರವ ನಮನವಾಗಿ ರೂಪಿಸಲಾದ 'ಸ್ವರ ಪ್ರೇರಣಾ ವೀಥಿಕಾ', ಆಕಾಶವಾಣಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮತ್ತು ದೇಶದ ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದ ಪ್ರಖ್ಯಾತ ಕಲಾವಿದರನ್ನು ಗೌರವಿಸುತ್ತದೆ. ಈ ಉಪಕ್ರಮವು ಭಾರತೀಯ ಸಂಗೀತಕ್ಕೆ ಅವರ ಅಮೂಲ್ಯವಾದ ಕೊಡುಗೆಯನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಯ ಕಲಾವಿದರು ಹಾಗೂ ಸಂಗೀತ ಪ್ರೇಮಿಗಳಿಗೆ ಸ್ಫೂರ್ತಿ ನೀಡಲು ಶ್ರಮಿಸುತ್ತದೆ.

ಈ ಉಪಕ್ರಮದ ಮೊದಲ ಹಂತದಲ್ಲಿ, 20 ಮಂದಿ ಖ್ಯಾತ ಸಂಗೀತ ದಿಗ್ಗಜರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು. ಈ ಗ್ಯಾಲರಿಯಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ (ಕರ್ನಾಟಕ ಗಾಯನ), ಪಂಡಿತ್ ರವಿಶಂಕರ್ (ಸಿತಾರ್), ವಿದುಷಿ ಲತಾ ಮಂಗೇಶ್ಕರ್ (ಹಿನ್ನೆಲೆ ಗಾಯನ), ಉಸ್ತಾದ್ ಬಿಸ್ಮಿಲ್ಲಾ ಖಾನ್ (ಶೆಹನಾಯಿ), ಪಂಡಿತ್ ಭೀಮಸೇನ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯನ) ಮತ್ತು ಡಾ. ಭೂಪೇನ್ ಹಜಾರಿಕಾ (ಜಾನಪದ ಸಂಗೀತ) ಅವರ ಚಿತ್ರಗಳಿವೆ. ಇದು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಹರಿಪ್ರಸಾದ್ ಚೌರಾಸಿಯಾ (ಕೊಳಲು), ಉಸ್ತಾದ್ ಅಮ್ಜದ್ ಅಲಿ ಖಾನ್ (ಸರೋದ್) ಮತ್ತು ಉಸ್ತಾದ್ ಅಲ್ಲಾವುದ್ದೀನ್ ಖಾನ್ (ಸರೋದ್) ಅವರನ್ನೂ ಗೌರವಿಸುತ್ತದೆ, ಜೊತೆಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಉಸ್ತಾದ್ ಹಫೀಜ್ ಅಲಿ ಖಾನ್ (ಸರೋದ್), ಪಂಡಿತ್ ಬಿರ್ಜು ಮಹಾರಾಜ್ (ಕಥಕ್), ಉಸ್ತಾದ್ ಅಹಮದ್ ಜಾನ್ ತಿರಖ್ವಾ (ತಬಲಾ), ಪಂಡಿತ್ ಕೃಷ್ಣರಾವ್ ಶಂಕರ್ ಪಂಡಿತ್ (ಹಿಂದೂಸ್ತಾನಿ ಗಾಯನ), ವಿದುಷಿ ಶನ್ನೋ ಖುರಾನಾ (ಗಾಯನ), ಪಂಡಿತ್ ದೇಬು ಚೌಧುರಿ (ಸಿತಾರ್), ವಿದುಷಿ ಶರಣ್ ರಾಣಿ ಬ್ಯಾಕ್ಲಿವಾಲ್ (ಸರೋದ್), ಉಸ್ತಾದ್ ಸಾಬ್ರಿ ಖಾನ್ (ಸಾರಂಗಿ), ಪಂಡಿತ್ ರಾಜನ್ ಮಿಶ್ರಾ ಮತ್ತು ಪಂಡಿತ್ ಸಾಜನ್ ಮಿಶ್ರಾ (ಹಿಂದೂಸ್ತಾನಿ ಗಾಯನ), ಉಸ್ತಾದ್ ಅಸದ್ ಅಲಿ ಖಾನ್ (ರುದ್ರ ವೀಣೆ) ಮತ್ತು ಉಸ್ತಾದ್ ಮುಷ್ತಾಕ್ ಹುಸೇನ್ ಖಾನ್ (ಹಿಂದೂಸ್ತಾನಿ ಗಾಯನ) ಅವರನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗೌರವ್ ದ್ವಿವೇದಿ ಅವರು, ಸ್ವರ ಪ್ರೇರಣಾ ವೀಥಿಕಾದ ಉದ್ಘಾಟನೆಯು ಆಕಾಶವಾಣಿಯನ್ನು ದೇಶದ ಅಗ್ರಗಣ್ಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದನ್ನಾಗಿ ಸ್ಥಾಪಿಸಲು ಅಪಾರ ಕೊಡುಗೆ ನೀಡಿದ ಪ್ರಸಿದ್ಧ ಕಲಾವಿದರಿಗೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಆಕಾಶವಾಣಿಯ ಪ್ರಯತ್ನಗಳ ಮೊದಲ ಹಂತವಾಗಿದೆ ಎಂದು ಹೇಳಿದರು. ಮುಂದಿನ ಹಂತಗಳಲ್ಲಿ ಗ್ಯಾಲರಿಗೆ ಇನ್ನಷ್ಟು ಪ್ರಖ್ಯಾತ ಕಲಾವಿದರ ಭಾವಚಿತ್ರಗಳನ್ನು ಸೇರಿಸಲಾಗುವುದು ಮತ್ತು ದೇಶಾದ್ಯಂತ ಇರುವ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಿದ್ಧ ಸ್ಥಳೀಯ ಸಂಗೀತಗಾರರಿಗೆ ಮೀಸಲಾದ ಇಂತಹ ಗ್ಯಾಲರಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಭಾರತೀಯ ಸಂಗೀತಕ್ಕೆ ಆಕಾಶವಾಣಿಯ ನಿರಂತರ ಬದ್ಧತೆಯನ್ನು ಒತ್ತಿಹೇಳಿದ ಅವರು, ಸಾರ್ವಜನಿಕ ಪ್ರಸಾರಕ ಸಂಸ್ಥೆಯು ಕೇಳುಗರ ವೈವಿಧ್ಯಮಯ ಆದ್ಯತೆಗಳನ್ನು ಪೂರೈಸುವ ಜೊತೆಗೆ, ತಲೆಮಾರುಗಳ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಮೂಲಕ ವಿವಿಧ ಸಂಗೀತ ಸಂಪ್ರದಾಯಗಳನ್ನು ಸತತವಾಗಿ ಪೋಷಿಸಿದೆ ಎಂದು ಹೇಳಿದರು. ಆಕಾಶವಾಣಿಯ ಪ್ರತ್ಯೇಕ ಡಿಜಿಟಲ್ ಚಾನೆಲ್ ಗಳಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕಾಗಿ ‘ರಾಗಂ’ ಮತ್ತು ಭಕ್ತಿ ಸಂಗೀತಕ್ಕಾಗಿ ‘ಆರಾಧನಾ’ ಚಾನೆಲ್ ಗಳು ಯೂಟ್ಯೂಬ್, ನ್ಯೂಸ್-ಆನ್-ಏರ್ ಆ್ಯಪ್ ಹಾಗೂ ವೇವ್ಸ್ ಒಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ದಿನದ 24 ಗಂಟೆಯೂ ಲಭ್ಯವಿವೆ ಎಂದು ಅವರು ಹೇಳಿದರು. ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ದೇಶ ಮತ್ತು ಪ್ರಪಂಚದಾದ್ಯಂತದ ಕೇಳುಗರಿಗೆ ತಲುಪಿಸುವಲ್ಲಿ ಆಕಾಶವಾಣಿಯ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರು, ಈ ಸಂದರ್ಭವನ್ನು "ಮರಳಿ ಮನೆಗೆ" (ಹೋಮ್ ಕಮಿಂಗ್) ಎಂದು ಬಣ್ಣಿಸಿದರು, ಆಕಾಶವಾಣಿಯೊಂದಿಗಿನ ತಮ್ಮ ಸಂಗೀತ ಪಯಣವು ಮಕ್ಕಳ ಕಾರ್ಯಕ್ರಮದ ಮೂಲಕ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಂಡರು. ಆಕಾಶವಾಣಿಯನ್ನು ತಲೆಮಾರುಗಳ ಕಲಾವಿದರನ್ನು ಪೋಷಿಸಿದ ಒಂದು ಕುಟುಂಬ ಎಂದು ಉಲ್ಲೇಖಿಸಿದ ಅವರು, ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಮುಂದುವರಿಯುತ್ತದೆ ಮತ್ತು ಈ ಸಂಸ್ಥೆಯು ದೇಶಾದ್ಯಂತದ ಕೇಳುಗರ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುತ್ತಲೇ ಇರುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಅತ್ಯಂತ ಪ್ರತಿಭಾವಂತ ಶಿಷ್ಯರಲ್ಲಿ ಒಬ್ಬರಾದ ಪಂಡಿತ್ ರೂಪಕ್ ಕುಲಕರ್ಣಿ ಅವರ ಆಕರ್ಷಕ ಕೊಳಲು ವಾದನದ ಮೂಲಕ ಈ ಸಂದರ್ಭವು ಮತ್ತಷ್ಟು ಕಳೆಗಟ್ಟಿತು. ಮೈಹರ್ ಘರಾನಾದ ಪ್ರಮುಖ ಪ್ರತಿಪಾದಕರಾದ ಪಂಡಿತ್ ಕುಲಕರ್ಣಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕೊಳಲು ವಾದಕರಾಗಿದ್ದಾರೆ, ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳನ್ನು ಪಡೆದಿದ್ದಾರೆ ಮತ್ತು ಆಕಾಶವಾಣಿಯ ಉನ್ನತ ದರ್ಜೆಯ (ಟಾಪ್-ಗ್ರೇಡ್) ಕಲಾವಿದರಾಗಿದ್ದಾರೆ. ತಮ್ಮ ಪೂಜ್ಯ ಗುರುವಿನ ಸಮ್ಮುಖದಲ್ಲಿ ಪ್ರಸ್ತುತಪಡಿಸಿದ ಅವರ ಭಾವಪೂರ್ಣ ಪ್ರದರ್ಶನವನ್ನು ಪ್ರೇಕ್ಷಕರು ಹೃತ್ಪೂರ್ವಕವಾಗಿ ಶ್ಲಾಘಿಸಿದರು.

ಸ್ವರ ಪ್ರೇರಣಾ ವೀಥಿಕಾದ ಉದ್ಘಾಟನೆಯು ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಸಂರಕ್ಷಿಸುವ ಮತ್ತು ದೇಶದ ಸಾರ್ವಜನಿಕ ಸೇವಾ ಪ್ರಸಾರ ಸಂಪ್ರದಾಯವನ್ನು ಶ್ರೀಮಂತಗೊಳಿಸಿದ ಪ್ರಖ್ಯಾತ ಕಲಾವಿದರನ್ನು ಗೌರವಿಸುವ ಆಕಾಶವಾಣಿಯ ನಿರಂತರ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
******
(रिलीज़ आईडी: 2280089)
आगंतुक पटल : 13