ಆಯುಷ್
ಯೂಟ್ಯೂಬ್ ಲೈವ್ ಯೋಗ ಸ್ಟ್ರೀಮ್ ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದುವ ಮೂಲಕ ಹೊಸ ಗಿನ್ನಿಸ್ ವಿಶ್ವ ದಾಖಲೆ ಬರೆದ ಆಯುಷ್ ಸಚಿವಾಲಯ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026ರ ಮುನ್ನ ನಡೆದ ಜಾಗತಿಕ ಆನ್‌ಲೈನ್ ಯೋಗ ಕಾರ್ಯಕ್ರಮವನ್ನು ನೋಡಿದ 4,35,831 ದೃಢೀಕೃತ ವೀಕ್ಷಕರು
प्रविष्टि तिथि:
14 JUN 2026 12:56PM by PIB Bengaluru
ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಐಡಿವೈ) 2026 ಕ್ಕೆ ಮುಂಚಿತವಾಗಿ ಒಂದು ಮಹತ್ವದ ಸಾಧನೆಯಾಗಿ, ಆಯುಷ್ ಸಚಿವಾಲಯವು ಇಂದು 'ಯೂಟ್ಯೂಬ್ ಲೈವ್ ಯೋಗ ಸ್ಟ್ರೀಮ್ (ನೇರ ಪ್ರಸಾರ) ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದ' ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಆಯುಷ್ ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರವಾದ ವಿಶೇಷ ಜಾಗತಿಕ ಆನ್‌ಲೈನ್ ಯೋಗ ಜಾಗೃತಿ ಅಭಿಯಾನದಲ್ಲಿ 4,35,831 ವೀಕ್ಷಕರು ಸೇರಿದ್ದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026 ರ ಸಚಿವಾಲಯದ ಸಂಪರ್ಕ ವಿಸ್ತರಣಾ ಚಟುವಟಿಕೆಗಳ ಭಾಗವಾಗಿ ಈ ದಾಖಲೆಯ ಪ್ರಯತ್ನವನ್ನು ಆಯೋಜಿಸಲಾಗಿತ್ತು. ಭಾರತ ಮತ್ತು ವಿಶ್ವದಾದ್ಯಂತದ ಯೋಗ ಮಾಡುವವರು, ವಿದ್ಯಾರ್ಥಿಗಳು, ಸಂಸ್ಥೆಗಳು, ವೃತ್ತಿಪರರು ಮತ್ತು ಆರೋಗ್ಯ ಉತ್ಸಾಹಿಗಳು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಸಾಮಾನ್ಯ ಯೋಗ ಶಿಷ್ಟಾಚಾರವನ್ನು (ಸಿವೈಪಿ) ಒಳಗೊಂಡಿತ್ತು ಮತ್ತು 'ಯೋಗ 365' ಆಂದೋಲನದ ಮೂಲಕ ಯೋಗವನ್ನು ದೈನಂದಿನ ಅಭ್ಯಾಸವಾಗಿ ಉತ್ತೇಜಿಸುವ ಸಚಿವಾಲಯದ ದೂರದೃಷ್ಟಿಯನ್ನು ಬಲಪಡಿಸಿತು.
ಆಯುಷ್ ಸಚಿವಾಲಯವು 4,35,831 ದೃಢೀಕೃತ ವೀಕ್ಷಕರನ್ನು ದಾಖಲಿಸುವ ಮೂಲಕ, 2024ರಲ್ಲಿ ಇದ್ದ 2,46,252 ವೀಕ್ಷಕರ ಹಿಂದಿನ ಗಿನ್ನಿಸ್ ವಿಶ್ವ ದಾಖಲೆಯನ್ನು ಹಿಂದಿಕ್ಕಿದೆ. ಹೊಸ ದಾಖಲೆಯು ಹಿಂದಿನ ಮೈಲಿಗಲ್ಲುಗಿಂತ 1,89,579 ವೀಕ್ಷಕರನ್ನು ಹೆಚ್ಚು ಹೊಂದುವ ಮೂಲಕ ಯೂಟ್ಯೂಬ್ ಲೈವ್ ಯೋಗ ಸ್ಟ್ರೀಮ್ ನ ಅತಿ ದೊಡ್ಡ ವೀಕ್ಷಕರ ಸಂಖ್ಯೆಯ ಹೊಸ ಜಾಗತಿಕ ದಾಖಲೆಯನ್ನು ನಿರ್ಮಿಸಿದೆ.
ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆಯುಷ್ (ಸ್ವತಂತ್ರ ಉಸ್ತುವಾರಿ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು, ಈ ಐತಿಹಾಸಿಕ ಸಾಧನೆಗೆ ಕೊಡುಗೆ ನೀಡಿದ ಪ್ರಪಂಚದಾದ್ಯಂತದ ನಾಗರಿಕರನ್ನು ಅಭಿನಂದಿಸುತ್ತಾ ಹೀಗೆ ಹೇಳಿದರು: "ಇಂದಿನ ಸಾಧನೆಯು ಆರೋಗ್ಯ ಮತ್ತು ಯೋಗಕ್ಷೇಮದ ಮೇಲಿನ ಅನ್ಯೋನ್ಯ ಬದ್ಧತೆಯ ಮೂಲಕ ವಿವಿಧ ಪ್ರದೇಶಗಳು, ಸಂಸ್ಕೃತಿಗಳು ಮತ್ತು ರಾಷ್ಟ್ರಗಳ ಜನರನ್ನು ಒಟ್ಟುಗೂಡಿಸುವ ಯೋಗದ ಅಸಾಮಾನ್ಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ಈ ಹೊಸ ಗಿನ್ನಿಸ್ ವಿಶ್ವ ದಾಖಲೆಯು ಯೋಗವನ್ನು ಜೀವನ ಪದ್ಧತಿಯಾಗಿ ಜಾಗತಿಕವಾಗಿ ಸ್ವೀಕರಿಸುತ್ತಿರುವುದನ್ನು ಬಿಂಬಿಸುತ್ತದೆ ಮತ್ತು ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಸುವ ನಮ್ಮ ಸಾಮೂಹಿಕ ಸಂಕಲ್ಪವನ್ನು ಬಲಪಡಿಸುತ್ತದೆ. ನಾವು ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026ರ ಕಡೆಗೆ ಸಾಗುತ್ತಿರುವಾಗ, ಪ್ರತಿಯೊಬ್ಬರೂ 'ಯೋಗ 365' ರ ಮನೋಭಾವವನ್ನು ಅಳವಡಿಸಿಕೊಳ್ಳಲು ಮತ್ತು ಆರೋಗ್ಯಕರ, ಬಲವಾದ ಮತ್ತು ಹೆಚ್ಚು ಚೇತರಿಸಿಕೊಳ್ಳುವ ಸಮಾಜವನ್ನು ನಿರ್ಮಿಸಲು ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ."
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ಅವರು ಈ ಐತಿಹಾಸಿಕ ಸಾಧನೆಗೆ ಕಾರಣರಾದ ಎಲ್ಲಾ ಪಾಲುದಾರರು ಮತ್ತು ಭಾಗವಹಿಸಿದವರನ್ನು ಅಭಿನಂದಿಸಿದರು ಮತ್ತು ಹೀಗೆ ಹೇಳಿದರು : "ನಾವು ಕೇವಲ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುತ್ತಿಲ್ಲ, ಬದಲಾಗಿ ಜಗತ್ತಿಗೆ ಒಂದು ಉತ್ತಮ ಸಂದೇಶವನ್ನು ನೀಡುತ್ತಿದ್ದೇವೆ. ಈ ಅಗಾಧವಾದ ಭಾಗವಹಿಸುವಿಕೆಯು ಯೋಗವನ್ನು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಒಂದು ಶಕ್ತಿಶಾಲಿ ಸಾಧನವಾಗಿ ಗುರುತಿಸುತ್ತಿರುವುದನ್ನು ತೋರಿಸುತ್ತದೆ. ನಮ್ಮ ಉದ್ದೇಶವು ಜನರು ಯೋಗವನ್ನು ಒಂದು ದಿನದ ಕಾರ್ಯಕ್ರಮವಾಗಿ ನೋಡದೆ, ಜೀವನಪೂರ್ತಿಯ ಅಭ್ಯಾಸವಾಗಿ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಮತ್ತು 'ಯೋಗ 365' ಅನ್ನು ಸಾಕಾರಗೊಳಿಸುವುದಾಗಿದೆ."
ಕಾರ್ಯಕ್ರಮದಲ್ಲಿ ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮುಕೇಶ್ ಮಹಾಲಿಂಗ್; ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸೇರಿದಂತೆ ಗೌರವಾನ್ವಿತ ಸಚಿವರ ವಿಶೇಷ ಸಂದೇಶಗಳನ್ನು ಪ್ರಸಾರ ಮಾಡಲಾಯಿತು. ಐತಿಹಾಸಿಕ ಸಾಧನೆಗಾಗಿ ಭಾಗವಹಿಸಿದವರನ್ನು ಅಭಿನಂದಿಸಿದ ಅವರು, ಆನಾರೋಗ್ಯ ತಡೆಗಟ್ಟುವ ರಕ್ಷಣೆ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಯೋಗದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ನಾಗರಿಕರು ಯೋಗವನ್ನು ತಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳುವ ಮೂಲಕ ಯೋಗ 365 ರ ಮನೋಭಾವವನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
ಆಯುಷ್ ಸಚಿವಾಲಯವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಇತರ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭಾರತ ಮತ್ತು ಪ್ರಪಂಚದಾದ್ಯಂತದ ಭಾಗವಹಿಸುವವರು ಆಯುಷ್ ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರದಲ್ಲಿ ಭಾಗವಹಿಸಿ, ಸಾಮಾನ್ಯ ಯೋಗ ಶಿಷ್ಟಾಚಾರವನ್ನು (ಸಿವೈಪಿ) ಜಂಟಿಯಾಗಿ ಪ್ರದರ್ಶಿಸಿದರು. ಇಡೀ ಕಾರ್ಯಕ್ರಮದಾದ್ಯಂತ 'ಹ್ಯಾಬಿಲ್ಡ್' ತಂಡವು ತಜ್ಞರ ಮಾರ್ಗದರ್ಶನವನ್ನು ಒದಗಿಸಿತು.
ಭಾರತವು ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026 ಅನ್ನು *"ಆರೋಗ್ಯಕರ ವಯೋವೃದ್ಧಿಗಾಗಿ ಯೋಗ" (Yoga for Healthy Ageing)* ಎಂಬ ವಿಷಯದ ಅಡಿಯಲ್ಲಿ ಆಚರಿಸಲು ಸಿದ್ಧತೆ ನಡೆಸುತ್ತಿರುವಾಗ ಈ ಸಾಧನೆ ಮೂಡಿಬಂದಿದೆ. ಈ ವಿಷಯವು ಆರೋಗ್ಯಕರ ದೀರ್ಘಾಯುಷ್ಯವನ್ನು ಉತ್ತೇಜಿಸುವಲ್ಲಿ, ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಎಲ್ಲಾ ವಯೋಮಾನದವರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಬೆಂಬಲಿಸುವಲ್ಲಿ ಯೋಗದ ಪಾತ್ರವನ್ನು ಒತ್ತಿಹೇಳುತ್ತದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ (ಐಡಿವೈ) 2026 ರ ಪ್ರಮುಖ ಆಚರಣೆಯು ಜೂನ್ 21 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಆರೋಗ್ಯ ಮತ್ತು ಸಾಮರಸ್ಯದ ಜಾಗತಿಕ ಚಳುವಳಿಯನ್ನು ಗುರುತಿಸಲು ಯೋಗಾಸಕ್ತರು, ಯೋಗ ಮಾಡುವವರು ಮತ್ತು ಪಾಲುದಾರರನ್ನು ಒಟ್ಟುಗೂಡಿಸಲಿದೆ.
ಆಯುಷ್ ಸಚಿವಾಲಯವು ಎಲ್ಲಾ ಭಾಗವಹಿಸುವವರಿಗೆ, ಯೋಗ ಸಂಸ್ಥೆಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಸರ್ಕಾರಿ ಇಲಾಖೆಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ, ಸಾಮಾಜಿಕ ಗುಂಪುಗಳಿಗೆ ಮತ್ತು ಜಾಗತಿಕ ಭಾರತೀಯ ಸಮುದಾಯದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದೆ, ಅವರ ಉತ್ಸಾಹಭರಿತ ಭಾಗವಹಿಸುವಿಕೆಯಿಂದಾಗಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ.
ದೇಶವು ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026ರ ಕಡೆಗೆ ಸಾಗುತ್ತಿರುವಾಗ, ಸಚಿವಾಲಯವು ನಾಗರಿಕರು ಯೋಗವನ್ನು ಜೀವನವಿಧಾನವನ್ನಾಗಿ ಅಳವಡಿಸಿಕೊಳ್ಳಲು ಮತ್ತು ʻʻಮನೆ ಮನೆಗೆ ಯೋಗ, ದಿನ ದಿನವೂ ಯೋಗʼʼ ಎಂಬ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಲು ತನ್ನ ಕರೆಯನ್ನು ಪುನರುಚ್ಚರಿಸಿದೆ.




*****
(रिलीज़ आईडी: 2272672)
आगंतुक पटल : 9
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Gujarati
,
Odia
,
Tamil
,
Telugu
,
Malayalam