ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ
ಕೈಗಾರಿಕಾ ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆ ಸರಪಳಿಗಳನ್ನು ಸ್ಥಿರಗೊಳಿಸಲು ಡಿಪಿಐಐಟಿಯಿಂದ ನಿಯಂತ್ರಕ ಮತ್ತು ಸುಗಮಗೊಳಿಸುವ ಕ್ರಮಗಳ ವೇಗವರ್ಧನೆ
ಮಾರ್ಚ್ 25, 2026 ರಿಂದ ಸಿ ಎನ್ ಜಿ ಮತ್ತು ಸಿಬಿಜಿ ವಿತರಣಾ ಕೇಂದ್ರಗಳಿಗಾಗಿ ಸಲ್ಲಿಕೆಯಾಗಿದ್ದ 467 ಕ್ಕೂ ಹೆಚ್ಚು ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲಾಗಿದೆ; ಅನಿಲ ಮೂಲಸೌಕರ್ಯ ವಿಸ್ತರಣೆಗೆ ವೇಗ ನೀಡಲಾಗಿದೆ
41 ಬಯೋಗ್ಯಾಸ್ ಸಿಲಿಂಡರ್ ತುಂಬುವ ಮತ್ತು ಸಂಗ್ರಹಿಸುವ ಘಟಕಗಳಿಗೆ ಅನುಮೋದನೆ ನೀಡಲಾಗಿದೆ; ಇದು ಪರ್ಯಾಯ ಮತ್ತು ಸ್ವಚ್ಛ ಇಂಧನ ಲಭ್ಯತೆಯನ್ನು ಉತ್ತೇಜಿಸುತ್ತದೆ
ನಿರಂತರ ಇಂಧನ ಪೂರೈಕೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸೀಮೆಎಣ್ಣೆ ಸಂಗ್ರಹಣೆ, ಎಲ್ ಪಿ ಜಿ ಇಳಿಸುವಿಕೆ ಮತ್ತು ಎಲ್ ಎನ್ ಜಿ ತುಂಬುವಿಕೆಗೆ ಸಂಬಂಧಿಸಿದಂತೆ ತಾತ್ಕಾಲಿಕ ನಿಯಂತ್ರಕ ಸಡಿಲಿಕೆಗಳನ್ನು ನೀಡಲಾಗಿದೆ
ದುರುಪಯೋಗ ಅಥವಾ ಅಡ್ಡದಾರಿಗೆ ಹೋಗುವುದನ್ನು ತಡೆಯಲು ಡಿಎಸಿ ಆಧಾರಿತ ವಿತರಣೆಗಳನ್ನು ಸುಮಾರು ಶೇಕಡಾ 94 ಕ್ಕೆ ಹೆಚ್ಚಿಸಲಾಗಿದೆ
ಮಾರ್ಚ್ 23, 2026 ರಿಂದ ಇದುವರೆಗೆ 20.08 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ
ಸುಮಾರು 5.10 ಲಕ್ಷ ಪಿ ಎನ್ ಜಿ ಸಂಪರ್ಕಗಳಿಗೆ ಅನಿಲ ಪೂರೈಕೆ ಮಾಡಲಾಗಿದೆ. ಹೆಚ್ಚುವರಿ 2.56 ಲಕ್ಷ ಸಂಪರ್ಕಗಳಿಗಾಗಿ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ ಮತ್ತು ಸುಮಾರು 5.77 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ
31 ಭಾರತೀಯ ನಾವಿಕರನ್ನು ಹೊತ್ತ ಭಾರತೀಯ ಧ್ವಜದ ಕಚ್ಚಾ ತೈಲ ಟ್ಯಾಂಕರ್ 'ದೇಶ್ ಗರಿಮಾ' ಇಂದು ಸುಮಾರು 18:00 ಗಂಟೆಗೆ ಮುಂಬೈ ತಲುಪುವ ನಿರೀಕ್ಷೆಯಿದೆ
ಫೆಬ್ರವರಿ 28 ರಿಂದ ಇದುವರೆಗೆ ಆ ಪ್ರಾಂತ್ಯದಿಂದ ಸುಮಾರು 11.91 ಲಕ್ಷ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಿದ್ದಾರೆ
ಪ್ರಕಟಣಾ ದಿನಾಂಕ:
22 APR 2026 5:42PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ನಿರಂತರ ಪ್ರಯತ್ನದ ಭಾಗವಾಗಿ, ಭಾರತ ಸರ್ಕಾರವು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಆ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ) ಸಹ ಈ ಸಂದರ್ಭದಲ್ಲಿ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿತು.
ಕೈಗಾರಿಕಾ ಚಟುವಟಿಕೆಗಳು ಮತ್ತು ವಲಯವಾರು ಮಾಹಿತಿ:
ಪಶ್ಚಿಮ ಏಷ್ಯಾದ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ ಕೈಗಾರಿಕಾ ಚಟುವಟಿಕೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ಪೂರೈಕೆ ಸರಪಳಿಯ ಸ್ಥಿರತೆಯನ್ನು ಕಾಪಾಡಲು ಮತ್ತು ಪ್ರಮುಖ ಉತ್ಪಾದನಾ ವಲಯಗಳಿಗೆ ಬೆಂಬಲ ನೀಡಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ) ಹಲವಾರು ನಿಯಂತ್ರಕ ಮತ್ತು ಸುಗಮಗೊಳಿಸುವ ಕ್ರಮಗಳನ್ನು ಸಕ್ರಿಯವಾಗಿ ಜಾರಿಗೆ ತರುತ್ತಿದೆ.
ಈ ಕ್ರಮಗಳು ಕೈಗಾರಿಕೆಗಳು ಎದುರಿಸುತ್ತಿರುವ ಕಾರ್ಯಾಚರಣೆಯ ಸವಾಲುಗಳನ್ನು ಪರಿಹರಿಸುವ ಜೊತೆಗೆ ಇಂಧನ ಮತ್ತು ಅಗತ್ಯ ಇನ್‌ಪುಟ್ ಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ. ಡಿಪಿಐಐಟಿಯು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಪಾಲುದಾರರೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದೆ ಮತ್ತು ಇಲ್ಲಿ ವಿವರಿಸಲಾದ ಕ್ರಮಗಳು ಇಂದಿನವರೆಗೆ ಕೈಗೊಳ್ಳಲಾದ ಕ್ರಮಗಳನ್ನು ಪ್ರತಿನಿಧಿಸುತ್ತವೆ.
ಇಂಧನ ಮತ್ತು ಅನಿಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸುಗಮಗೊಳಿಸುವ ಕ್ರಮಗಳು:
ಪ್ರಸ್ತುತ ಬಿಕ್ಕಟ್ಟಿನ ನಡುವೆ ಇಂಧನ ಮತ್ತು ಅನಿಲದ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯು (ಪಿ ಇ ಎಸ್ ಒ) ಹಲವಾರು ಸುಗಮಗೊಳಿಸುವ ಮತ್ತು ಸುರಕ್ಷತಾ ಆಧಾರಿತ ಕ್ರಮಗಳನ್ನು ಕೈಗೊಂಡಿದೆ:
- ಸಂಕುಚಿತ ನೈಸರ್ಗಿಕ ಅನಿಲ (ಸಿ ಎನ್ ಜಿ) ಮತ್ತು ಸಂಕುಚಿತ ಬಯೋ ಗ್ಯಾಸ್ (ಸಿಬಿಜಿ) ವಿತರಣಾ ಕೇಂದ್ರಗಳಿಗಾಗಿ ಒಟ್ಟು 467 ಅರ್ಜಿಗಳನ್ನು ಪಿ ಇ ಎಸ್ ಒ ಸ್ವೀಕರಿಸಿದ್ದು, ಮಾರ್ಚ್ 25, 2026 ರಿಂದ ಏಪ್ರಿಲ್ 21, 2026 ರವರೆಗೆ ಅವೆಲ್ಲವನ್ನೂ ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲಾಗಿದೆ. ಈ 467 ಪ್ರಕರಣಗಳ ಪೈಕಿ 157 ಪ್ರಕರಣಗಳಲ್ಲಿ ಅಂತಿಮ ಪರವಾನಗಿಗಳನ್ನು ನೀಡಲಾಗಿದೆ ಮತ್ತು ಹೊಸ ಸಿ ಎನ್ ಜಿ/ಸಿಬಿಜಿ ವಿತರಣಾ ಕೇಂದ್ರಗಳ ನಿರ್ಮಾಣಕ್ಕಾಗಿ 38 ಪೂರ್ವ ಅನುಮೋದನೆಗಳನ್ನು ನೀಡಲಾಗಿದೆ.
- ಮಾರ್ಚ್ 2026 ರಿಂದ, 41 ಬಯೋ ಗ್ಯಾಸ್ ಸಿಲಿಂಡರ್ ತುಂಬುವ ಮತ್ತು ಸಂಗ್ರಹಿಸುವ ಘಟಕಗಳಿಗೆ ಅನುಮೋದನೆ ನೀಡಲಾಗಿದ್ದು, ತರುವಾಯ 14 ಘಟಕಗಳಿಗೆ ಪರವಾನಗಿಗಳನ್ನು ನೀಡಲಾಗಿದೆ.
- ಸೀಮೆಎಣ್ಣೆಗಾಗಿ ತಾತ್ಕಾಲಿಕ ಸಂಗ್ರಹಣಾ ಸಡಿಲಿಕೆಗಳನ್ನು ನೀಡಲಾಗಿದ್ದು, ಮಾರ್ಚ್ 12, 2026 ರಂದು 2,500 ಲೀಟರ್ ಗಳವರೆಗೆ ಸಂಗ್ರಹಿಸಲು ಅನುಮತಿ ನೀಡಲಾಗಿದೆ. ಅಲ್ಲದೆ, ಪಡಿತರ ವ್ಯವಸ್ಥೆಯ ಸೀಮೆಎಣ್ಣೆ ವಿತರಣಾ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಚ್ 13, 2026 ರಂದು 5,000 ಲೀಟರ್ ಗಳವರೆಗೆ ಒಂದು ಬಾರಿಯ ಸಡಿಲಿಕೆಯನ್ನು ನೀಡಲಾಗಿದೆ.
- ದೇಶೀಯ ಲಭ್ಯತೆಯನ್ನು ರಕ್ಷಿಸಲು, ಮಾರ್ಚ್ 18, 2026 ರಂದು ಅಮೋನಿಯಂ ನೈಟ್ರೇಟ್ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.
- ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಾಗ ಇಂಧನ ಲಭ್ಯತೆಯನ್ನು ಹೆಚ್ಚಿಸಲು ಮತ್ತು ವಿಕೇಂದ್ರೀಕೃತ ಎಲ್ ಎನ್ ಜಿ ಪೂರೈಕೆಯನ್ನು ಉತ್ತೇಜಿಸಲು ಕ್ರಯೋಜೆನಿಕ್ ಸಿಲಿಂಡರ್‌ಗಳಲ್ಲಿ ಎಲ್ ಎನ್ ಜಿ ತುಂಬಲು ಅನುಮತಿ ನೀಡುವ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
- ಮೂಲಸೌಕರ್ಯ ವಿಸ್ತರಣೆಯನ್ನು ವೇಗಗೊಳಿಸಲು ಸಿ ಎನ್ ಜಿ ಕೇಂದ್ರಗಳು ಮತ್ತು ಡಿಕಂಪ್ರೆಷನ್ ಘಟಕಗಳ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ (10 ದಿನಗಳ ಒಳಗೆ) ವಿಲೇವಾರಿ ಮಾಡುವಂತೆ ಮಾರ್ಚ್ 20, 2026 ರಂದು ಪಿ ಇ ಎಸ್ ಒ ನಿರ್ದೇಶನ ನೀಡಿದೆ.
- ತಕ್ಷಣದ ಪೂರೈಕೆ ಕೊರತೆಯನ್ನು ನೀಗಿಸಲು ಮಾರ್ಚ್ 14, 2026 ರಂದು ಪೋರಬಂದರ್ ಜೆಟ್ಟಿಯಲ್ಲಿ ಎಲ್ ಪಿ ಜಿ ಇಳಿಸಲು ಅನುಮತಿ ನೀಡಲಾಯಿತು.
- ಹೆಚ್ಚಿನ ಪಾರದರ್ಶಕತೆಗಾಗಿ, ಪಡಿತರ ಸೀಮೆಎಣ್ಣೆ ಮತ್ತು ಡೀಸೆಲ್ ಪೂರೈಕೆಗಾಗಿ ಪಿ ಇ ಎಸ್ ಒ ಅನುಮೋದಿತ ಕಂಟೇನರ್ ತಯಾರಕರು ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಏಪ್ರಿಲ್ 01, 2026 ರಂದು ಪಿ ಇ ಎಸ್ ಒ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ.
- ವಿತರಣಾ ಕೇಂದ್ರಗಳ ಕಾರ್ಯಾರಂಭವನ್ನು ವೇಗಗೊಳಿಸಲು ಸಿ ಎನ್ ಜಿ/ಸಿಬಿಜಿ ಕಂಪ್ರೆಸರ್ ಗಳಿಗೆ ಅನುಮೋದನೆ ಪಡೆಯುವ ಅಗತ್ಯತೆಯಿಂದ ತಾತ್ಕಾಲಿಕವಾಗಿ ಆರು ತಿಂಗಳ ವಿನಾಯಿತಿಯನ್ನು ಏಪ್ರಿಲ್ 01, 2026 ರಂದು ನೀಡಲಾಗಿದೆ.
ಪರ್ಯಾಯ ಇಂಧನಗಳನ್ನು ಉತ್ತೇಜಿಸಲು ಜಾರಿಗೆ ತರಲಾದ ದೀರ್ಘಕಾಲೀನ ಕ್ರಮಗಳು:
- ಜಾಗದ ಮಿತಿಯನ್ನು ಎದುರಿಸಲು ಮತ್ತು ಅನಿಲ ವಿತರಣಾ ಮೂಲಸೌಕರ್ಯವನ್ನು ವಿಸ್ತರಿಸಲು ಸಿ ಎನ್ ಜಿ/ಸಿಬಿಜಿ ಕೇಂದ್ರಗಳಲ್ಲಿ ಡಿಸ್ಟ್ರಿಕ್ಟ್ ಪ್ರೆಶರ್ ರೆಗ್ಯುಲೇಟಿಂಗ್ ಸ್ಕಿಡ್ಸ್ (ಡಿ ಪಿ ಆರ್ ಎಸ್) ಅಳವಡಿಸಲು ಮಾರ್ಚ್ 25, 2026 ರಂದು ಮಾರ್ಗಸೂಚಿಗಳನ್ನು ಹೊರಡಿಸಲಾಯಿತು.
- ದೂರದ ಅಥವಾ ಪೈಪ್‌ಲೈನ್ ಇಲ್ಲದ ಪ್ರದೇಶಗಳಿಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ಸುಗಮಗೊಳಿಸಲು ಕ್ರಯೋಜೆನಿಕ್ ಸಿಲಿಂಡರ್ ಗಳಲ್ಲಿ ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್ ಎನ್ ಜಿ) ತುಂಬಲು ಅನುಮತಿ ನೀಡುವ ಮಾರ್ಗಸೂಚಿಗಳನ್ನು ಮಾರ್ಚ್ 25, 2026 ರಂದು ಹೊರಡಿಸಲಾಯಿತು.
- ಡೈಮಿಥೈಲ್ ಈಥರ್ (ಡಿಎಂಇ) ಅನ್ನು ಪರ್ಯಾಯ ಕೈಗಾರಿಕಾ ಇಂಧನವಾಗಿ ಬಳಸುವುದನ್ನು ಉತ್ತೇಜಿಸಲು, ಯಶಸ್ವಿ ಮೂಲಮಾದರಿಯ ಪರೀಕ್ಷೆಗಳ ನಂತರ ಡಿಎಂಇ ಜಂಬೋ ಸಿಲಿಂಡರ್ ಗಳ ಕಾಂಬಿನೇಷನ್ ವಾಲ್ವ್ ಗಳಿಗೆ ಮಾರ್ಚ್ 25, 2026 ರಂದು ಮತ್ತು ಪ್ರೆಶರ್ ರಿಲೀಫ್ ವಾಲ್ವ್ ಗಳಿಗೆ ಮಾರ್ಚ್ 27, 2026 ರಂದು ಅನುಮೋದನೆ ನೀಡಲಾಯಿತು.
- ಎಲ್ ಪಿ ಜಿ ಬಾಟ್ಲಿಂಗ್ ಘಟಕಗಳಲ್ಲಿ ರಾತ್ರಿ ವೇಳೆಯ ಕಾರ್ಯಾಚರಣೆಗೆ ಅನುಮತಿ ನೀಡುವ ಮಾರ್ಗಸೂಚಿಗಳನ್ನು ಏಪ್ರಿಲ್ 02, 2026 ರಂದು ಹೊರಡಿಸಲಾಯಿತು, ಇದು ಕಾರ್ಯಾಚರಣೆಯ ಅವಧಿಯನ್ನು ವಿಸ್ತರಿಸಲು ಮತ್ತು ಆ ಮೂಲಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
- ದಹೇಜ್ ಟರ್ಮಿನಲ್ ನಲ್ಲಿ ಪೆಟ್ರೋನೆಟ್ ಎಲ್ ಎನ್ ಜಿ ಗೆ ಹೆಚ್ಚುವರಿ 5 ಎಂಎಂಟಿಪಿಎ ಮರು-ಅನಿಲೀಕರಣ ಸಾಮರ್ಥ್ಯಕ್ಕೆ ಮಾರ್ಚ್ 30, 2026 ರಂದು ಅನುಮತಿ ನೀಡಲಾಗಿದ್ದು, ಇದರಿಂದ ಒಟ್ಟು ಸಾಮರ್ಥ್ಯವು 22.5 ಎಂಎಂಟಿಪಿಎಗೆ ಏರಿಕೆಯಾಗಿದೆ. ಇದು ಸಿಜಿಡಿ ಜಾಲಗಳಿಗೆ ನೈಸರ್ಗಿಕ ಅನಿಲದ ಲಭ್ಯತೆಯನ್ನು ಸುಧಾರಿಸುತ್ತದೆ.
ತೈಲ ಬಳಕೆಯನ್ನು ಕಡಿಮೆ ಮಾಡುವ ಕ್ರಮಗಳು (ಬಾಯ್ಲರ್ ಗಳು):
ಬಾಯ್ಲರ್ ಕಾಯ್ದೆ 2025ರ ಸೆಕ್ಷನ್ 38 ರ ಉಪವಿಭಾಗ (3) ರ ಅಡಿಯಲ್ಲಿ ಏಪ್ರಿಲ್ 07, 2026 ರಂದು ರಾಜ್ಯ ಸರ್ಕಾರಗಳಿಗೆ ಈ ಕೆಳಗಿನ ಕ್ರಮಗಳೊಂದಿಗೆ ಸಲಹೆ ನೀಡಲಾಗಿದೆ:
- ವಿದ್ಯುತ್ ಸ್ಥಾವರಗಳು ಮತ್ತು ಇತರ ಹೆಚ್ಚಿನ ಸಾಮರ್ಥ್ಯದ ಬಾಯ್ಲರ್ ಗಳಿಗೆ (≥100 TPH), ಕಾರ್ಯಾಚರಣೆಯ ನಿಯತಾಂಕಗಳ ಪರಿಶೀಲನೆ ಮತ್ತು ಸಕ್ಷಮ ವ್ಯಕ್ತಿಗಳಿಂದ ತೃಪ್ತಿಕರ ಬಾಹ್ಯ ತಪಾಸಣೆಗೆ ಒಳಪಟ್ಟು, ಬಾಯ್ಲರ್ ಪ್ರಮಾಣಪತ್ರಗಳಿಗೆ ಮೂರು ತಿಂಗಳ ತಾತ್ಕಾಲಿಕ ವಿಸ್ತರಣೆ ನೀಡಲಾಗಿದೆ.
- ಸಂಸ್ಕರಣಾಗಾರಗಳು, ಪೆಟ್ರೋಕೆಮಿಕಲ್ಸ್ ಮತ್ತು ರಸಗೊಬ್ಬರ ಘಟಕಗಳು ಸೇರಿದಂತೆ ಪ್ರಮುಖ ತೈಲ ಮತ್ತು ಅನಿಲ ಘಟಕಗಳಲ್ಲಿನ ಹೆಚ್ಚಿನ ಸಾಮರ್ಥ್ಯದ ಬಾಯ್ಲರ್ ಗಳಿಗೆ, ನಿಗದಿತ ಸುರಕ್ಷತಾ ಕ್ರಮಗಳು ಮತ್ತು ತಪಾಸಣೆಗೆ ಒಳಪಟ್ಟು, ಬಾಯ್ಲರ್ ಪ್ರಮಾಣಪತ್ರಗಳಿಗೆ ಮೂರು ತಿಂಗಳ ತಾತ್ಕಾಲಿಕ ವಿಸ್ತರಣೆ ನೀಡಲಾಗಿದೆ.
- ಕೈಗಾರಿಕಾ ವಲಯಗಳಲ್ಲಿ ಪರ್ಯಾಯ ಇಂಧನಗಳ ಅಳವಡಿಕೆಯನ್ನು ಉತ್ತೇಜಿಸುವ ಮೂಲಕ ಇಂಧನ ಬಳಕೆಯಲ್ಲಿ ವೈವಿಧ್ಯತೆಯನ್ನು ತರಲಾಗುವುದು.
ಕುಕ್ಟಾಪ್ / ಇಂಡಕ್ಷನ್ ಕುಕ್ಟಾಪ್ ವಲಯ:
- ಇಂಡಕ್ಷನ್ ಕುಕ್‌ಟಾಪ್ ವಲಯದಲ್ಲಿನ ಬೇಡಿಕೆ ಮತ್ತು ಪೂರೈಕೆಯ ಸವಾಲುಗಳನ್ನು ಎದುರಿಸಲು ಹಾಗೂ ಬೆಲೆಗಳನ್ನು ಸ್ಥಿರಗೊಳಿಸಲು ಅಗತ್ಯವಿರುವ ತಕ್ಷಣದ ಕ್ರಮಗಳನ್ನು ಮೌಲ್ಯಮಾಪನ ಮಾಡಲು ವಾಣಿಜ್ಯ ಇಲಾಖೆ ಮತ್ತು ಇಂಧನ ಸಚಿವಾಲಯದ ಸಮನ್ವಯದೊಂದಿಗೆ ಡಿಪಿಐಐಟಿಯು ಪಾಲುದಾರರ ಸಭೆಯನ್ನು ನಡೆಸಿತು.
- ಇಂಡಕ್ಷನ್ ಕುಕ್‌ಟಾಪ್ ಗಳಿಗೆ ಕಡ್ಡಾಯವಾದ ಇಂಧನ ದಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಆದೇಶದ (ಕ್ಯೂಸಿಒ) ಕಾಲಮಿತಿಯನ್ನು ವಿಸ್ತರಿಸಲಾಗಿದ್ದು, ಈ ಕುರಿತು ಏಪ್ರಿಲ್ 06, 2026 ರಂದು ತಿದ್ದುಪಡಿ ಮತ್ತು ಇ-ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ತಯಾರಕರು ಈ ಮೊದಲು ನಿಗದಿಪಡಿಸಿದ ಗಡುವನ್ನು ತಲುಪಲು ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಣ್ಣ ಉದ್ದಿಮೆ
ಅಂತರ-ಸಚಿವಾಲಯ ಸಮಾಲೋಚನೆಗಳು ಮತ್ತು ಜಂಟಿ ಕಾರ್ಯಕಾರಿ ಗುಂಪಿನ ಸಭೆಯ ಆಧಾರದ ಮೇಲೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ:
· ಕಚ್ಚಾ ವಸ್ತುಗಳ ಕೊರತೆಯನ್ನು ನೀಗಿಸಲು ಏಪ್ರಿಲ್ 01, 2026 ರ ಅಧಿಸೂಚನೆಯಂತೆ HDPE, LLDPE ಮತ್ತು PPCP (HSN 3901 ಮತ್ತು 3907) ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು (ಬಿಸಿಡಿ) ಶೂನ್ಯಕ್ಕೆ ಇಳಿಸಲಾಗಿದೆ.
· ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಏಪ್ರಿಲ್ 08, 2026 ರ ಆದೇಶದಂತೆ, ಕೈಗಾರಿಕಾ ಎಲ್ ಪಿ ಜಿ ಹಂಚಿಕೆಯನ್ನು ಮಾರ್ಚ್ 2026 ಕ್ಕಿಂತ ಮೊದಲು ಇದ್ದ ಒಟ್ಟು ಗೃಹಬಳಕೆಯಲ್ಲದ ಎಲ್ ಪಿ ಜಿ ಬಳಕೆಯ ಶೇಕಡಾ 50 ರಿಂದ ಶೇಕಡಾ 70 ಕ್ಕೆ ಹೆಚ್ಚಿಸಲಾಗಿದೆ.
· ಡಿಪಿಐಐಟಿಯು ಏಪ್ರಿಲ್ 08, 2026 ರ ಪತ್ರದ ಮೂಲಕ ಬಣ್ಣ ಉದ್ದಿಮೆಯ ಕಚ್ಚಾ ವಸ್ತುಗಳ ಅಗತ್ಯತೆಗಳನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಿದೆ; ಇದರ ಬೆನ್ನಲ್ಲೇ ಸಚಿವಾಲಯವು ಪ್ರತಿದಿನ 0.2 ಟಿಎಂಟಿ ಪ್ರೊಪಿಲೀನ್ ಗೆ ಸಮನಾದ ಬ್ಯುಟೈಲ್ ಅಕ್ರಿಲೇಟ್ ಅನ್ನು ಪೂರೈಸುವಂತೆ ಐಒಸಿಎಲ್ (ಮಥುರಾ ಮತ್ತು ವಡೋದರಾ) ಗೆ ಸೂಚನೆ ನೀಡಿದೆ. ಸಚಿವಾಲಯದ ಕೋರಿಕೆಯಂತೆ, ಡಿಪಿಐಐಟಿಯು ಪಾಲಿಪ್ರೊಪಿಲೀನ್ ಕೋಪೋಲಿಮರ್ ಅಗತ್ಯತೆ ಮತ್ತು ಖರೀದಿದಾರರ ವಿವರಗಳನ್ನು ಏಪ್ರಿಲ್ 13, 2026 ರಂದು ಒದಗಿಸಿದೆ.
· ಮುಂದುವರಿದು, ಡಿಪಿಐಐಟಿಯು ಏಪ್ರಿಲ್ 16, 2026 ರಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆಯುವ ಮೂಲಕ ಬಣ್ಣ ಉದ್ದಿಮೆಗೆ ಅಗತ್ಯವಿರುವ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳು ಮತ್ತು ಪ್ಯಾಕೇಜಿಂಗ್ ಕಚ್ಚಾ ವಸ್ತುಗಳ ಉದ್ದಿಮೆವಾರು ಹಂಚಿಕೆಯ ವಿವರಗಳನ್ನು ನೀಡಿದೆ.
· ದೇಶೀಯ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯು (ಡಿಸಿಪಿಸಿ) ಏಪ್ರಿಲ್ 10, 2026 ರಂದು ಬ್ಯುಟೈಲ್ ಅಕ್ರಿಲೇಟ್ ಮೇಲಿನ ಗುಣಮಟ್ಟ ನಿಯಂತ್ರಣ ಆದೇಶವನ್ನು (ಕ್ಯುಸಿಒ) ಜುಲೈ 10, 2026 ರವರೆಗೆ ಸಡಿಲಿಸಿದೆ.
ಕಾಗದದ ಉದ್ದಿಮೆ
- ಪ್ರಮುಖ ರಾಸಾಯನಿಕಗಳ ಕೊರತೆಯನ್ನು ನೀಗಿಸಲು, ಏಪ್ರಿಲ್ 01, 2026 ರಂದು ಸ್ಟೈರೀನ್, ಮೆಥನಾಲ್ ಮತ್ತು ಎಬಿಎಸ್ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದ್ದು, ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಲಾಗಿದೆ.
ಟೈರ್ ಉದ್ದಿಮೆ
- ಪ್ರಮುಖ ರಾಸಾಯನಿಕಗಳ ಕೊರತೆಯನ್ನು ನೀಗಿಸಲು, ಟೈರ್ ತಯಾರಿಕೆಯಲ್ಲಿ ಕಚ್ಚಾ ವಸ್ತುಗಳಾಗಿ ಬಳಸುವ ರಾಸಾಯನಿಕಗಳು ಮತ್ತು ದ್ರಾವಕಗಳಾದ — ಪಾಲಿಬುಟಾಡೀನ್, ಸ್ಟೈರೀನ್ ಬುಟಾಡೀನ್ ರಬ್ಬರ್ ಮತ್ತು ರೆಸಿನ್ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.
- ಫೆಬ್ರವರಿ 2026 ರಲ್ಲಿ ಶೇಕಡಾ 50 ರಷ್ಟು ಕಡಿತಗೊಳಿಸಿ ಸುಮಾರು 0.6–0.7% ಕ್ಕೆ ಇಳಿಸಲಾಗಿದ್ದ ಟೈರ್ ಗಳ ಮೇಲಿನ RoDTEP ದರವನ್ನು, ಮಾರ್ಚ್ 2026 ರಲ್ಲಿ ಅದರ ಮೂಲ ಮಟ್ಟಕ್ಕೆ (~1.3%) ಮರುಸ್ಥಾಪಿಸಲಾಗಿದೆ.
ಗಾಜಿನ ಉದ್ದಿಮೆ
ಕುಲುಮೆಯ ಕಾರ್ಯಾಚರಣೆಗಳು ಅಡೆತಡೆಯಿಲ್ಲದೆ ನಡೆಯುವ ಅಗತ್ಯವನ್ನು ಗುರುತಿಸಿ:
- ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಶೇಕಡಾ 80 ರಷ್ಟು ಪಿ ಎನ್ ಜಿ ಹಂಚಿಕೆ ಮಾಡುವುದಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾರ್ಚ್ 09, 2026 ರಂದು ಸೂಚಿಸಿದೆ.
- ಸಚಿವಾಲಯದ ಏಪ್ರಿಲ್ 08, 2026 ರ ಆದೇಶದಂತೆ, ಕೈಗಾರಿಕಾ ಎಲ್ ಪಿ ಜಿ ಹಂಚಿಕೆಯನ್ನು ಮಾರ್ಚ್ 2026 ಕ್ಕಿಂತ ಮೊದಲು ಇದ್ದ ಒಟ್ಟು ಗೃಹಬಳಕೆಯಲ್ಲದ ಎಲ್ ಪಿ ಜಿ ಬಳಕೆಯ ಶೇಕಡಾ 50 ರಿಂದ ಶೇಕಡಾ 70 ಕ್ಕೆ ಹೆಚ್ಚಿಸಲಾಗಿದೆ.
ಚರ್ಮ ಮತ್ತು ಪಾದರಕ್ಷೆ ವಲಯ
- ಏಪ್ರಿಲ್ 01, 2026 ರಂದು ಹೊರಡಿಸಲಾದ ಕಸ್ಟಮ್ಸ್ ಅಧಿಸೂಚನೆ ಸಂಖ್ಯೆ 12/2026 ರ ಮೂಲಕ ಇವಿಎ, ಪಿವಿಸಿ, ಪಿಯು ಮತ್ತು ಎಸ್ ಬಿ ಎಸ್ ನಂತಹ ಪ್ರಮುಖ ಇನ್‌ಪುಟ್ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕದ ಸಡಿಲಿಕೆಗಳನ್ನು ವಿಸ್ತರಿಸಲಾಗಿದೆ.
- ಉದ್ದಿಮೆಯ ಪಾಲುದಾರರು ಎತ್ತಿದ ಪಿವಿಸಿ ಪೇಸ್ಟ್ ರೆಸಿನ್ ನ (39041010 ರ ಅಡಿಯಲ್ಲಿ ಬರುವ) ಬೆಲೆ ಏರಿಕೆ ಮತ್ತು ಪೂರೈಕೆ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು, ಈ ವಿಷಯವನ್ನು ಆ್ಯಂಟಿ-ಡಂಪಿಂಗ್ ಸುಂಕದ (ಎಡಿಡಿ) ಕಡಿತದ ಪರಿಶೀಲನೆಗಾಗಿ ಏಪ್ರಿಲ್ 21, 2026 ರಂದು ವ್ಯಾಪಾರ ಪರಿಹಾರಗಳ ಮಹಾನಿರ್ದೇಶನಾಲಯಕ್ಕೆ (ಡಿಜಿಟಿಆರ್) ಶಿಫಾರಸು ಮಾಡಲಾಗಿದೆ.
ಸೆರಾಮಿಕ್ ವಲಯ
- ಮೊರ್ಬಿಯಲ್ಲಿ ಸುಮಾರು ಶೇಕಡಾ 80 ರಷ್ಟು ಸೆರಾಮಿಕ್ ಘಟಕಗಳು ಪ್ರೊಪೇನ್/ಎಲ್ ಪಿ ಜಿ ಬಳಸುತ್ತಿದ್ದರೆ, ಕೇವಲ ಶೇಕಡಾ 20 ರಷ್ಟು ಘಟಕಗಳು ಗುಜರಾತ್ ಗ್ಯಾಸ್ ಪೂರೈಸುವ ಪೈಪ್ಡ್ ನೈಸರ್ಗಿಕ ಅನಿಲವನ್ನು ಬಳಸುತ್ತಿದ್ದವು. ಮಾರ್ಚ್ 09, 2026 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಶೇಕಡಾ 80 ರಷ್ಟು ಪಿ ಎನ್ ಜಿ ಹಂಚಿಕೆಯನ್ನು ಘೋಷಿಸಿತು, ಇದು ಅಸ್ತಿತ್ವದಲ್ಲಿರುವ ಅನಿಲ ಬಳಕೆದಾರರಿಗೆ (ಸುಮಾರು ಶೇ. 20 ರಷ್ಟು ಘಟಕಗಳು) ಪೂರೈಕೆಯ ನಿರಂತರತೆಯನ್ನು ಖಚಿತಪಡಿಸಿತು.
- ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೊರೇಷನ್, ಉದ್ದಿಮೆಯ ಪಾಲುದಾರರೊಂದಿಗೆ ಸಮಾಲೋಚಿಸಿ, ಈ ಮೊದಲು ಪೈಪ್ಡ್ ಗ್ಯಾಸ್ ಬಳಸದ ಉಳಿದ ಶೇಕಡಾ 80 ರಷ್ಟು ಘಟಕಗಳಿಗೆ ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸಿತು. ಅಸ್ತಿತ್ವದಲ್ಲಿರುವ ಮತ್ತು ಹೊಸ ಬಳಕೆದಾರರೆಲ್ಲರಿಗೂ ಅನಿಲ ಬೆಲೆಯನ್ನು ತರ್ಕಬದ್ಧಗೊಳಿಸುವ ಮೂಲಕ ಬೆಲೆ ವ್ಯತ್ಯಾಸದ ಸಮಸ್ಯೆಯನ್ನು ಸಹ ಬಗೆಹರಿಸಲಾಗಿದೆ.
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ ಪಿ ಜಿ ಅಡೆತಡೆಯಿಲ್ಲದೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಚಿವಾಲಯದ ಪ್ರಕಾರ:
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ
· ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಇವುಗಳನ್ನು ಆತಂಕದಿಂದ ಖರೀದಿಸದಂತೆ ಸೂಚಿಸಲಾಗಿದೆ.
· ವದಂತಿಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
· ಎಲ್ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್‌ಫಾರ್ಮ್ ಗಳನ್ನು ಬಳಸಲು ಮತ್ತು ವಿತರಕರ ಬಳಿ ಭೇಟಿ ನೀಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
· ನಾಗರಿಕರು ಪಿ ಎನ್ ಜಿ (PNG) ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ಟಾಪ್‌ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಪ್ರೋತ್ಸಾಹಿಸಲಾಗಿದೆ.
· ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.
ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು
· ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಗೃಹಬಳಕೆ ಎಲ್ ಪಿ ಜಿ, ಗೃಹಬಳಕೆ ಪಿ ಎನ್ ಜಿ ಮತ್ತು ಸಿ ಎನ್ ಜಿ (ಸಾರಿಗೆ) ಗೆ ಶೇಕಡಾ 100 ರಷ್ಟು ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ.
· ವಾಣಿಜ್ಯ ಎಲ್ ಪಿ ಜಿಗೆ ಸಂಬಂಧಿಸಿದಂತೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಮುಂತಾದ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಅಲ್ಲದೆ, ವಲಸೆ ಕಾರ್ಮಿಕರಿಗೆ ನೀಡಲಾಗುವ 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳ ಪೂರೈಕೆಯನ್ನು 2026 ರ ಮಾರ್ಚ್ 2 ಮತ್ತು 3 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
· ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಹಾಗೂ ಪೂರೈಕೆಗಾಗಿ ಆದ್ಯತೆಯ ವಲಯಗಳನ್ನು ಗುರುತಿಸುವುದು ಸೇರಿದೆ.
· ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
· ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಪೂರೈಸುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲರೀಸ್ ಗೆ ನಿರ್ದೇಶನ ನೀಡಿದೆ.
· ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು
· ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು ಹಾಗೂ ಕಾಳಸಂತೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
· ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಇದನ್ನು ಪುನರುಚ್ಚರಿಸಿದೆ.
· ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 27.03.2026 ಮತ್ತು 02.04.2026 ರ ಪತ್ರಗಳ ಮೂಲಕ, ಇಂಧನದ ಸಮರ್ಪಕ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತವಾಗಿ ಪರಾಮರ್ಶೆ ಸಭೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ, 02.04.2026 ರಂದು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ) ಮತ್ತು 06.04.2026 ರಂದು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಪ್ರಸಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ) ಸಭೆಗಳನ್ನು ಆಯೋಜಿಸಲಾಗಿತ್ತು, ಅಲ್ಲಿ ಈ ಕೆಳಗಿನ ಅಂಶಗಳಿಗೆ ಒತ್ತು ನೀಡಲಾಯಿತು:
- ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ಹೊರಡಿಸುವುದು.
- ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ/ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅದನ್ನು ಎದುರಿಸುವುದು.
- ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕ್ರಮಗಳನ್ನು ತೀವ್ರಗೊಳಿಸುವುದು ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸುವುದು.
- ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
- ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
- ಪಿ ಎನ್ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
- ಎಲ್ ಪಿ ಜಿ ಪೂರೈಕೆಯಲ್ಲಿ, ವಿಶೇಷವಾಗಿ ದೇಶೀಯ ಅಗತ್ಯಗಳಿಗೆ ಆದ್ಯತೆ ನೀಡುವುದು ಮತ್ತು ಪೂರೈಕೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳುವುದು.
· ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.
· ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ/ಹೊರಡಿಸುತ್ತಿವೆ.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು
· ಎಲ್ ಪಿ ಜಿ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. ನಿನ್ನೆ ದೇಶಾದ್ಯಂತ 3200 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 285 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
· ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಅನಿರೀಕ್ಷಿತ ತಪಾಸಣೆಗಳನ್ನು ಬಲಪಡಿಸಿವೆ ಮತ್ತು ಮುಂದುವರಿಸಿವೆ. ಇದುವರೆಗೆ 290 ಎಲ್ ಪಿ ಜಿ ವಿತರಕರಿಗೆ ದಂಡ ವಿಧಿಸಲಾಗಿದ್ದು, ನಿನ್ನೆಯವರೆಗೆ 68 ಎಲ್ ಪಿ ಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ.
ಎಲ್ ಪಿ ಜಿ ಪೂರೈಕೆ
ಗೃಹಬಳಕೆ ಎಲ್ ಪಿ ಜಿ ಪೂರೈಕೆ ಸ್ಥಿತಿ:
· ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಬೀರುವುದು ಮುಂದುವರಿದಿದೆ.
· ಮನೆಗಳಿಗೆ ಎಲ್ ಪಿ ಜಿ ಪೂರೈಕೆ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ.
· ಎಲ್ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ಇಂಧನ ಖಾಲಿಯಾದ ವರದಿಯಾಗಿಲ್ಲ.
· ನಿನ್ನೆ ಉದ್ದಿಮೆಯಾದ್ಯಂತ ಆನ್‌ಲೈನ್ ಎಲ್ ಪಿ ಜಿ ಸಿಲಿಂಡರ್ ಬುಕಿಂಗ್ ಪ್ರಮಾಣವು ಶೇಕಡಾ 98 ಕ್ಕೆ ಏರಿಕೆಯಾಗಿದೆ.
· ದುರುಪಯೋಗ ಅಥವಾ ಅಡ್ಡದಾರಿಗೆ ಹೋಗುವುದನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಗಳನ್ನು ಸುಮಾರು ಶೇಕಡಾ 94 ಕ್ಕೆ ಹೆಚ್ಚಿಸಲಾಗಿದೆ. ಈ ಡಿಎಸಿ ಕೋಡ್ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
· ದಿನಾಂಕ 21.04.2026 ರಂದು 51 ಲಕ್ಷಕ್ಕೂ ಹೆಚ್ಚು ದೇಶೀಯ ಎಲ್ ಪಿ ಜಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ.
ವಾಣಿಜ್ಯ ಎಲ್ ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
· ಒಟ್ಟು ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಸುಮಾರು ಶೇಕಡಾ 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇಕಡಾ 10 ರಷ್ಟು ಸುಧಾರಣೆ-ಆಧಾರಿತ ಹಂಚಿಕೆಯೂ ಸೇರಿದೆ.
· ಭಾರತ ಸರ್ಕಾರವು ಏಪ್ರಿಲ್ 06, 2026 ರ ಪತ್ರದ ಮೂಲಕ, ವಲಸೆ ಕಾರ್ಮಿಕರಿಗೆ ವಿತರಿಸಲು ಪ್ರತಿ ರಾಜ್ಯದಲ್ಲಿ ಲಭ್ಯವಿರುವ 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳ ದೈನಂದಿನ ಪ್ರಮಾಣವನ್ನು ದ್ವಿಗುಣಗೊಳಿಸಿದೆ. ಇದನ್ನು ಮಾರ್ಚ್ 2-3, 2026 ರ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ನೀಡಲಾದ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ನಿರ್ಧರಿಸಲಾಗಿದ್ದು, ಮಾರ್ಚ್ 21, 2026 ರ ಪತ್ರದಲ್ಲಿ ತಿಳಿಸಲಾದ ಶೇಕಡಾ 20 ರ ಮಿತಿಗಿಂತ ಹೆಚ್ಚಾಗಿರುತ್ತದೆ. ಈ 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳು ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ಮಾತ್ರ ಪೂರೈಸಲು ರಾಜ್ಯ ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತವೆ ಮತ್ತು ಇದಕ್ಕೆ ತೈಲ ಮಾರುಕಟ್ಟೆ ಕಂಪನಿಗಳು ನೆರವು ನೀಡುತ್ತವೆ.
· ಏಪ್ರಿಲ್ 03, 2026 ರಿಂದ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳಿಗಾಗಿ 7,800 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿದ್ದು, ಅಲ್ಲಿ 1,17,000 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ. ನಿನ್ನೆ ಒಂದೇ ದಿನ 350 ಕ್ಕೂ ಹೆಚ್ಚು ಶಿಬಿರಗಳ ಮೂಲಕ 8,112 ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ.
· ಇತ್ತೀಚೆಗೆ, ಏಪ್ರಿಲ್ 21, 2026 ರಂದು ನವಿ ಮುಂಬೈನ ತುರ್ಭೆಯಲ್ಲಿ ಐಒಸಿಎಲ್ ಆಯೋಜಿಸಿದ್ದ 5 ಕೆಜಿ ಎಫ್ ಟಿ ಎಲ್ ಜಾಗೃತಿ ಶಿಬಿರವೊಂದರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ ದಿನ ಸುಮಾರು 410 ಸಿಲಿಂಡರ್ ಗಳು ಮಾರಾಟವಾಗಿವೆ.
· ದಿನಾಂಕ 21.04.2026 ರಂದು ಸುಮಾರು 80,000 - 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳು ಮಾರಾಟವಾಗಿವೆ.
· ಮಾರ್ಚ್ 23, 2026 ರಿಂದ ಇದುವರೆಗೆ 20.08 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ.
· ಐಒಸಿಎಲ್, ಎಚ್ ಪಿ ಸಿ ಎಲ್ ಮತ್ತು ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಉದ್ದಿಮೆ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್ ಪಿ ಜಿ ವಿತರಣೆಯನ್ನು ಯೋಜಿಸುತ್ತಿದೆ.
· ಏಪ್ರಿಲ್-26 ತಿಂಗಳಲ್ಲಿ (21.04.26 ರವರೆಗೆ), ಒಟ್ಟು 1,31,879 ಮೆಟ್ರಿಕ್ ಟನ್ (69.4 ಲಕ್ಷಕ್ಕೂ ಹೆಚ್ಚು 19 ಕೆಜಿ ಎಲ್ ಪಿ ಜಿ ಸಿಲಿಂಡರ್ ಗಳಿಗೆ ಸಮನಾದ) ವಾಣಿಜ್ಯ ಎಲ್ ಪಿ ಜಿಯನ್ನು ಮಾರಾಟ ಮಾಡಲಾಗಿದೆ.
· ದಿನಾಂಕ 21.04.2026 ರಂದು 8,199 ಮೆಟ್ರಿಕ್ ಟನ್ ವಾಣಿಜ್ಯ ಎಲ್ ಪಿ ಜಿ (4.3 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್ ಗಳಿಗೆ ಸಮನಾದ) ಮಾರಾಟವಾಗಿದೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್ ಜಿ ವಿಸ್ತರಣೆಯ ಉಪಕ್ರಮಗಳು:
· ಡಿ-ಪಿ ಎನ್ ಜಿ ಮತ್ತು ಸಿ ಎನ್ ಜಿ-ಸಾರಿಗೆಗೆ ಶೇಕಡಾ 100 ರಷ್ಟು ಪೂರೈಕೆ ಮಾಡುವ ಮೂಲಕ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
· ರಸಗೊಬ್ಬರ ಘಟಕಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವರ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇಕಡಾ 95 ಕ್ಕೆ ಹೆಚ್ಚಿಸಲಾಗಿದೆ.
· ಹೆಚ್ಚುವರಿಯಾಗಿ, ಸಿಜಿಡಿ ಜಾಲಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇಕಡಾ 80 ರವರೆಗೆ ಹೆಚ್ಚಿಸಲಾಗಿದೆ.
· ವಾಣಿಜ್ಯ ಎಲ್ ಪಿ ಜಿಯ ಲಭ್ಯತೆಯ ಬಗೆಗಿನ ಕಳವಳಗಳನ್ನು ಹೋಗಲಾಡಿಸಲು, ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್ ಜಿ ಸಂಪರ್ಕಗಳನ್ನು ನೀಡಲು ಆದ್ಯತೆ ನೀಡುವಂತೆ ಸಿಜಿಡಿ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.
· ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ಸೇರಿದಂತೆ ಸಿಜಿಡಿ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಪಿ ಎನ್ ಜಿ ಸಂಪರ್ಕಗಳಿಗಾಗಿ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
· ಸಿಜಿಡಿ ಜಾಲಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಲಾಗಿದೆ.
· ಭಾರತ ಸರ್ಕಾರವು ಮಾರ್ಚ್ 18, 2026 ರ ಪತ್ರದ ಮೂಲಕ, ಎಲ್ ಪಿ ಜಿ ಯಿಂದ ಪಿ ಎನ್ ಜಿ ಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡುವ ರಾಜ್ಯಗಳಿಗೆ ಹೆಚ್ಚುವರಿ ಶೇಕಡಾ 10 ರಷ್ಟು ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ನೀಡಲು ಮುಂದಾಗಿದೆ.
· 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿ ಎನ್ ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ.
· ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾರ್ಚ್ 24, 2026 ರ ಪತ್ರದ ಮೂಲಕ, ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ಪ್ರಕ್ರಿಯೆಗೊಳಿಸಲು 3 ತಿಂಗಳ ಅವಧಿಗೆ 'ಕಡಿಮೆ ಕಾಲಮಿತಿಯೊಂದಿಗೆ ತ್ವರಿತ ಅನುಮೋದನಾ ಚೌಕಟ್ಟನ್ನು' ಅಳವಡಿಸಿಕೊಂಡಿದೆ.
· ಭಾರತ ಸರ್ಕಾರವು ಮಾರ್ಚ್ 24, 2026 ರ ಗೆಜೆಟ್ ಮೂಲಕ, ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ (ಪೈಪ್‌ಲೈನ್ ಗಳು ಮತ್ತು ಇತರ ಸೌಲಭ್ಯಗಳನ್ನು ಅಳವಡಿಸುವುದು, ನಿರ್ಮಿಸುವುದು, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್ ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುಗಮ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ; ಅನುಮೋದನೆಗಳ ವಿಳಂಬ ಮತ್ತು ಭೂಮಿಯ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಹಾಗೂ ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ವೇಗದ ಅಭಿವೃದ್ಧಿಯನ್ನು ಸಾಧ್ಯವಾಗಿಸುತ್ತದೆ. ಇದು ಪಿ ಎನ್ ಜಿ ಜಾಲದ ಬೆಳವಣಿಗೆಯನ್ನು ವೇಗಗೊಳಿಸುವ, ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸುವ ಮತ್ತು ಸ್ವಚ್ಛ ಇಂಧನಗಳತ್ತ ಪರಿವರ್ತನೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
· ಪಿ ಎನ್ ಜಿ ಆರ್ ಬಿ ಸಂಸ್ಥೆಯು ಡಿ-ಪಿ ಎನ್ ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಘಟಕಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಿ ಎನ್ ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು 'ನ್ಯಾಷನಲ್ ಪಿ ಎನ್ ಜಿ ಡ್ರೈವ್ 2.0' ಅನ್ನು ಜೂನ್ 30, 2026 ರವರೆಗೆ ವಿಸ್ತರಿಸಲಾಗಿದೆ.
· ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ ನೀತಿಯನ್ನು ಅಭಿವೃದ್ಧಿಪಡಿಸಿದೆ. ಈ ಮಾದರಿ ನೀತಿಯು ಸಿಬಿಜಿ ಅಭಿವೃದ್ಧಿಗಾಗಿ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನಕ್ಕೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ರಾಜ್ಯಗಳಿಗೆ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಅಳವಡಿಸಿಕೊಳ್ಳುವ ರಾಜ್ಯಗಳಿಗೆ ಮುಂದಿನ ಹಂತದ ಹೆಚ್ಚುವರಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
· ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಏಪ್ರಿಲ್ 07, 2026 ರ ಆದೇಶದ ಮೂಲಕ, ಸಿಜಿಡಿ ಜಾಲ/ಮೂಲಸೌಕರ್ಯ ಸ್ಥಾಪನೆಗೆ 15 ದಿನಗಳ ಒಳಗೆ ಅನುಮತಿ ನೀಡುವಂತೆ ಎಸ್ ಪಿ ಸಿ ಬಿ/ಪಿಸಿಸಿಗಳಿಗೆ ನಿರ್ದೇಶನ ನೀಡುವಂತೆ ಸಿಪಿಸಿಬಿಗೆ ಸೂಚಿಸಿದೆ.
· ಮಾರ್ಚ್ 2026 ರಿಂದ, ಸುಮಾರು 5.10 ಲಕ್ಷ ಪಿ ಎನ್ ಜಿ ಸಂಪರ್ಕಗಳಿಗೆ ಅನಿಲ ಪೂರೈಕೆ ಮಾಡಲಾಗಿದೆ ಮತ್ತು ಹೆಚ್ಚುವರಿ 2.56 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯ ಸೃಷ್ಟಿಸಲಾಗಿದೆ, ಇದರಿಂದ ಒಟ್ಟು ಸಂಖ್ಯೆ 7.66 ಲಕ್ಷ ಸಂಪರ್ಕಗಳಿಗೆ ಏರಿದೆ. ಇದಲ್ಲದೆ, ಸುಮಾರು 5.77 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
· ದಿನಾಂಕ 21.04.2026 ರವರೆಗೆ, 40,600 ಕ್ಕೂ ಹೆಚ್ಚು ಪಿ ಎನ್ ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್ ಪಿ ಜಿ ಸಂಪರ್ಕಗಳನ್ನು ಬಿಟ್ಟುಕೊಟ್ಟಿದ್ದಾರೆ
ಕಚ್ಚಾ ತೈಲದ ಸ್ಥಿತಿ ಮತ್ತು ಸಂಸ್ಕರಣಾಗಾರ ಕಾರ್ಯಾಚರಣೆಗಳು
- ಎಲ್ಲಾ ತೈಲ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳಲ್ಲಿ ಸಮರ್ಪಕ ಕಚ್ಚಾ ತೈಲ ದಾಸ್ತಾನು ಇದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
- ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಗೃಹಬಳಕೆ ಎಲ್ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
- ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸಲಾಗಿದೆ. ತರುವಾಯ, ಭಾರತ ಸರ್ಕಾರವು ಏಪ್ರಿಲ್ 01, 2026 ರ ಆದೇಶದ ಮೂಲಕ, ಹೈ ಟೆಕ್ನಾಲಜಿ ಕೇಂದ್ರವು ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಕನಿಷ್ಠ ಪ್ರಮಾಣದ ಸಿ3 ಮತ್ತು ಸಿ4 ಸ್ಟ್ರೀಮ್ ಗಳನ್ನು ಲಭ್ಯವಾಗುವಂತೆ ಮಾಡಲು ಪೆಟ್ರೋಕೆಮಿಕಲ್ ಸಂಕೀರ್ಣಗಳು ಸೇರಿದಂತೆ ತೈಲ ಸಂಸ್ಕರಣಾ ಕಂಪನಿಗಳಿಗೆ ಅನುಮತಿ ನೀಡಿದೆ.
- ಫಾರ್ಮಾಸ್ಯುಟಿಕಲ್ಸ್ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಗಳ ವಿನಂತಿಗಳ ಆಧಾರದ ಮೇಲೆ, ಫಾರ್ಮಾ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗಾಗಿ ಎಲ್ ಪಿ ಜಿ ಪೂಲ್‌ನಿಂದ ಪ್ರತಿದಿನ 1000 ಮೆಟ್ರಿಕ್ ಟನ್ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
- ಏಪ್ರಿಲ್ 09, 2026 ರಿಂದ ಇದುವರೆಗೆ ಮುಂಬೈ, ಕೊಚ್ಚಿ ಮತ್ತು ಮಥುರಾ ಸಂಸ್ಕರಣಾಗಾರಗಳಿಂದ ರಾಸಾಯನಿಕ ಮತ್ತು ಫಾರ್ಮಾ ಉದ್ಯಮಕ್ಕೆ 5600 ಮೆಟ್ರಿಕ್ ಟನ್ ಗಿಂತಲೂ ಹೆಚ್ಚು ಪ್ರೊಪಿಲೀನ್ ಅನ್ನು ಮಾರಾಟ ಮಾಡಲಾಗಿದೆ.
ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು
- ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
- ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಅಸಹಜ ಏರಿಕೆಯಾಗಿದೆ; ಆದಾಗ್ಯೂ, ಗ್ರಾಹಕರ ಹಿತರಕ್ಷಣೆಗಾಗಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹10 ರಷ್ಟು ಕಡಿತಗೊಳಿಸಿದೆ.
- ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಏಪ್ರಿಲ್ 11, 2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹55.50 ಕ್ಕೆ ಮತ್ತು ಎಟಿಎಫ್ ಮೇಲಿನ ಸುಂಕವನ್ನು ₹42 ಕ್ಕೆ ಹೆಚ್ಚಿಸಿದೆ.
- ಪೆಟ್ರೋಲ್ ಮತ್ತು ಡೀಸೆಲ್ ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಬೆಲೆ ಏರಿಕೆಯಾಗಿಲ್ಲ.
ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು
- ನಿಯಮಿತ ಹಂಚಿಕೆಯ ಜೊತೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಒದಗಿಸಲಾಗಿದೆ.
- 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮಗೆ ಇದರ ಅಗತ್ಯವಿಲ್ಲ ಎಂದು ತಿಳಿಸಿವೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಪರ್ಷಿಯನ್ ಗಲ್ಫ್ ನಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿ ಮತ್ತು ಭಾರತೀಯ ಹಡಗುಗಳು ಹಾಗೂ ಸಿಬ್ಬಂದಿಯನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಮಾಹಿತಿ ನೀಡಿದೆ:
- ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಕ್ಕಿಗಾಗಿ 'ಸನ್ಮಾರ್ ಹೆರಾಲ್ಡ್' ಹಡಗಿನ ಕ್ಯಾಪ್ಟನ್ ಐ ಆರ್ ಜಿ ಸಿ ನೌಕಾಪಡೆಯ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಗೆ ಅಮೆರಿಕನ್ ಡಾಲರ್ ನಲ್ಲಿ ಹಣ ಪಾವತಿಸಿದ್ದಾರೆ ಮತ್ತು ನಂತರ ಸೈಬರ್ ಅಪರಾಧಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಚಿವಾಲಯವು ಹಡಗಿನ ಮಾಲೀಕರೊಂದಿಗೆ ಮಾತನಾಡಿದ್ದು, ಅಂತಹ ಯಾವುದೇ ಪಾವತಿ ಮಾಡಲಾಗಿಲ್ಲ ಮತ್ತು ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಖಚಿತಪಡಿಸಲಾಗಿದೆ. ಅದರಂತೆ, ಈ ಸಂಬಂಧ ಹರಿದಾಡುತ್ತಿರುವ ವರದಿಗಳು ಸುಳ್ಳು ಮತ್ತು ವಾಸ್ತವಕ್ಕೆ ದೂರವಾಗಿವೆ.
- ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್ ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.
- ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
- ಹಡಗಿನ ಮಾಹಿತಿ: ಭಾರತೀಯ ಧ್ವಜದ ಕಚ್ಚಾ ತೈಲ ಟ್ಯಾಂಕರ್ 'ದೇಶ್ ಗರಿಮಾ' ಏಪ್ರಿಲ್ 18, 2026 ರಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. 31 ಭಾರತೀಯ ನಾವಿಕರನ್ನು ಹೊತ್ತಿರುವ ಈ ಹಡಗು ಇಂದು (22 ಏಪ್ರಿಲ್ 2026) ಸುಮಾರು 18:00 ಗಂಟೆಗೆ ಮುಂಬೈ ತಲುಪುವ ನಿರೀಕ್ಷೆಯಿದೆ.
- ಹಡಗು ಮಹಾನಿರ್ದೇಶನಾಲಯದ ನಿಯಂತ್ರಣ ಕೊಠಡಿ ಮಾಹಿತಿ: ನಿಯಂತ್ರಣ ಕೊಠಡಿಯು ಆರಂಭವಾದಾಗಿನಿಂದ ಇದುವರೆಗೆ 7,242 ಕರೆಗಳನ್ನು ಮತ್ತು 15,319 ಕ್ಕೂ ಹೆಚ್ಚು ಇಮೇಲ್ ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ 156 ಕರೆಗಳು ಮತ್ತು 344 ಇಮೇಲ್ ಗಳನ್ನು ಸ್ವೀಕರಿಸಲಾಗಿದೆ.
- ಸ್ವದೇಶಕ್ಕೆ ವಾಪಸಾತಿ ಮಾಹಿತಿ: ಸಚಿವಾಲಯವು ಹಡಗು ಮಹಾನಿರ್ದೇಶನಾಲಯದ ಮೂಲಕ ಇದುವರೆಗೆ 2,615 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ತರಲು ಅನುಕೂಲ ಮಾಡಿಕೊಟ್ಟಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ ಬಂದ 25 ನಾವಿಕರು ಸೇರಿದ್ದಾರೆ.
- ಬಂದರು ಕಾರ್ಯಾಚರಣೆ: ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.
ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ
ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಗಮನಹರಿಸಲಾಗುತ್ತಿದೆ. ಈ ಕುರಿತು ನೀಡಲಾದ ಮಾಹಿತಿ ಹೀಗಿದೆ:
· ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸ್ಥಾಪಿಸಲಾದ ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಮಿಷನ್ ಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿವೆ.
· ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪ್ರಯತ್ನಗಳನ್ನು ಉತ್ತಮವಾಗಿ ಸಂಘಟಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
· ಭಾರತೀಯ ಮಿಷನ್ ಗಳು ಮತ್ತು ಪೋಸ್ಟ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಗಳನ್ನು ನಡೆಸುತ್ತಿವೆ ಮತ್ತು ಭಾರತೀಯ ಪ್ರಜೆಗಳಿಗೆ ಸಹಾಯ ಮಾಡುತ್ತಿವೆ. ಇವುಗಳು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ.
· ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ಕಾನ್ಸುಲರ್ ಸೇವೆಗಳು ಹಾಗೂ ನಮ್ಮ ಸಮುದಾಯಕ್ಕೆ ಬೆಂಬಲ ನೀಡಲು ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನೊಳಗೊಂಡ ಸಲಹೆಗಳನ್ನು ನಿಯಮಿತವಾಗಿ ಹೊರಡಿಸಲಾಗುತ್ತಿದೆ.
· ಭಾರತೀಯ ಮಿಷನ್ ಗಳು ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ರಾಯಭಾರಿಗಳು ಭಾರತೀಯ ಸಮುದಾಯದ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ಅವರ ಕಳವಳಗಳನ್ನು ಬಗೆಹರಿಸಲು ನಿಯಮಿತವಾಗಿ ಸಂವಾದ ನಡೆಸುತ್ತಿದ್ದಾರೆ.
· ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಕಲ್ಯಾಣಕ್ಕೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಭಾರತೀಯ ಮಿಷನ್ ಗಳು ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ಕಾನ್ಸುಲರ್ ನೆರವು ನೀಡುವುದು ಮತ್ತು ಭಾರತಕ್ಕೆ ಮರಳಲು ಬಯಸುವವರ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿವೆ.
· ವಾಯುಪ್ರದೇಶ ಮುಕ್ತವಾಗಿರುವ ದೇಶಗಳಿಂದ ಭಾರತಕ್ಕೆ ವಿಮಾನಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ಫೆಬ್ರವರಿ 28 ರಿಂದ ಇದುವರೆಗೆ ಸುಮಾರು 11,91,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
· ಯುಎಇ: ಕಾರ್ಯಾಚರಣೆ ಮತ್ತು ಸುರಕ್ಷತೆಯ ಅಂಶಗಳನ್ನು ಪರಿಗಣಿಸಿ ಯುಎಇ ಮತ್ತು ಭಾರತದ ನಡುವೆ ಸೀಮಿತ ವಾಣಿಜ್ಯ ವಿಮಾನಗಳ ಸಂಚಾರ ಮುಂದುವರಿದಿದೆ. ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 110 ವಿಮಾನಗಳ ಸಂಚಾರವನ್ನು ನಿರೀಕ್ಷಿಸಲಾಗಿದೆ.
· ಸೌದಿ ಅರೇಬಿಯಾ ಮತ್ತು ಓಮನ್: ಇಲ್ಲಿನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ನಗರಗಳಿಗೆ ವಿಮಾನಗಳು ಎಂದಿನಂತೆ ಸಂಚರಿಸುತ್ತಿವೆ.
· ಕತಾರ್: ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿದ್ದು, ಕತಾರ್ ಏರ್ವೇಸ್ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದೆ.
· ಕುವೈತ್: ಕುವೈತ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ. ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿವೆ.
· ಬಹ್ರೇನ್: ಬಹ್ರೇನ್ ವಾಯುಪ್ರದೇಶ ಮುಕ್ತವಾಗಿದ್ದು, ಗಲ್ಫ್ ಏರ್ ಸಂಸ್ಥೆಯು ಬಹ್ರೇನ್ ನಿಂದ ಭಾರತದ ವಿವಿಧ ಭಾಗಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದೆ.
· ಇರಾಕ್: ಇರಾಕ್ ವಾಯುಪ್ರದೇಶ ಮುಕ್ತವಾಗಿದ್ದು, ಈ ಪ್ರದೇಶದ ಇತರ ಸ್ಥಳಗಳಿಗೆ ಸೀಮಿತ ವಿಮಾನ ಸಂಚಾರವಿದೆ. ಇದನ್ನು ಭಾರತಕ್ಕೆ ಪ್ರಯಾಣಿಸಲು ಬಳಸಿಕೊಳ್ಳಬಹುದಾಗಿದೆ.
· ಇರಾನ್: ಇರಾನ್ ವಾಯುಪ್ರದೇಶವು ಸರಕು ಸಾಗಣೆ ಮತ್ತು ಚಾರ್ಟರ್ಡ್ ವಿಮಾನಗಳಿಗೆ ಭಾಗಶಃ ಮುಕ್ತವಾಗಿದೆ. ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡುತ್ತಿದೆ.
· ಇಸ್ರೇಲ್: ಇಸ್ರೇಲ್ ವಾಯುಪ್ರದೇಶ ಮುಕ್ತವಾಗಿದ್ದು, ಈ ಪ್ರದೇಶದ ಇತರ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆ ಪುನರಾರಂಭಗೊಂಡಿದೆ. ಭಾರತಕ್ಕೆ ಪ್ರಯಾಣ ಮುಂದುವರಿಸಲು ಇದನ್ನು ಬಳಸಬಹುದಾಗಿದೆ.
******
(ಪ್ರಕಟಣೆ ಐ.ಡಿ.: 2254658)
ವಿಸಿಟರ್ ಕೌಂಟರ್ : 11