ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರಾ ಭಾಷಣ

ಪ್ರಕಟಣಾ ದಿನಾಂಕ: 14 APR 2026 4:23PM by PIB Bengaluru

ಭಾರತ್ ಮಾತಾ ಕೀ ಜೈ.
ಭಾರತ್ ಮಾತಾ ಕೀ ಜೈ.
ಭಾರತ್ ಮಾತಾ ಕೀ ಜೈ.

ಉತ್ತರಾಖಂಡ ರಾಜ್ಯಪಾಲರಾದ ಗುರ್ಮೀತ್ ಸಿಂಗ್ ಜಿ, ಇಲ್ಲಿನ ಜನಪ್ರಿಯ ಮತ್ತು ಶ್ರಮಜೀವಿ ಯುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಜಿ, ಅಜಯ್ ತಮ್ತಾ ಜಿ, ವರ್ಚುವಲ್ ಮೂಲಕ ಸಮಾರಂಭದಲ್ಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ರಾಜ್ಯಪಾಲರಾದ ಆನಂದಿಬೆನ್, ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಜಿ, ಮಾಜಿ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಜಿ, ಮಾಜಿ ಮುಖ್ಯಮಂತ್ರಿ ಸಹೋದರ ರಮೇಶ್ ಪೋಖ್ರಿಯಾಲ್, ವಿಜಯ್ ಬಹುಗುಣ ಜಿ, ತಿರತ್ ಸಿಂಗ್ ರಾವತ್ ಜಿ, ತ್ರಿವೇಂದ್ರ ಸಿಂಗ್ ರಾವತ್ ಜಿ, ಉತ್ತರಾಖಂಡ ಸರ್ಕಾರದ ಎಲ್ಲಾ ಸಚಿವರೆ, ಸಂಸದರೆ ಮತ್ತು ಶಾಸಕರೆ ಮತ್ತು ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.

ಉತ್ತರಾಖಂಡದ ಈ ಪವಿತ್ರ ದೈವಭೂಮಿಯಲ್ಲಿ ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು. ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ಪೂಜ್ಯ ಸಂತರಿಗೂ ನಮಸ್ಕಾರಗಳು. ಪ್ರೀತಿಯ ಕಿರಿಯ ಸಹೋದರರೆ, ಸಹೋದರಿಯರೆ, ಉತ್ತರಾಖಂಡದ ಹಿರಿಯರೆ, ನಿಮ್ಮೆಲ್ಲರಿಗೂ ನನ್ನ ನಮಸ್ಕಾರ! ನನ್ನ ಪ್ರೀತಿಯ ಹಿರಿಯ ಸಹೋದರರೆ, ಸಹೋದರಿಯರೆ, ಅಜ್ಜ ಅಜ್ಜಿಯರೆ, ನಾನು ಎಲ್ಲರಿಗೂ ನನ್ನ ಗೌರವಯುತ ಶುಭಾಶಯಗಳನ್ನು ಅರ್ಪಿಸುತ್ತೇನೆ.

ದೆಹಲಿ ಮತ್ತು ಯುಪಿಯ ಅನೇಕ ಜನರು ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿದ್ದಾರೆ, ನಾನು ಅವರೆಲ್ಲರನ್ನೂ ಸ್ವಾಗತಿಸುತ್ತೇನೆ. ಮೊದಲನೆಯದಾಗಿ, ನಾನು ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ, ಉತ್ತರ ಪ್ರದೇಶ ಮತ್ತು ದೆಹಲಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜನರಿಗೆ ನಾನು ಕ್ಷಮೆ ಯಾಚಿಸುತ್ತೇನೆ, ನಾನು ಇಲ್ಲಿಗೆ ತಲುಪಲು 1 ತಾಸಿಗೂ ಹೆಚ್ಚು ಸಮಯ ವಿಳಂಬವಾಯಿತು, ನೀವೆಲ್ಲರೂ ಈ ಸ್ಥಳಗಳಲ್ಲಿ ಬಹಳ ಸಮಯ ಕಾಯಬೇಕಾಯಿತು, ಕಾರಣ ಇಷ್ಟೇ: ನಾನು ಸಮಯಕ್ಕೆ ಸರಿಯಾಗಿ ಹೊರಟಿದ್ದೆ, ಆದರೆ ಕಾಳಿ ದೇವಸ್ಥಾನದಿಂದ ಇಲ್ಲಿಗೆ ಸುಮಾರು 12 ಕಿಲೋಮೀಟರ್ ರೋಡ್ ಶೋ - ತುಂಬಾ ಉತ್ಸಾಹಭರಿತವಾಗಿತ್ತು. ಕಾರನ್ನು ವೇಗವಾಗಿ ಓಡಿಸುವುದು ಸಾಧ್ಯವಾಗಲಿಲ್ಲ, ಅಷ್ಟೊಂದು ಜನರು ಕಿಕ್ಕಿರಿದು ತುಂಬಿದ್ದರು. ಹಾಗಾಗಿ, ನಿಧಾನವಾಗಿ ಜನರನ್ನು ಸ್ವಾಗತಿಸುತ್ತಾ, 'ಜನಾರ್ದನ'ರ ಆಶೀರ್ವಾದ ಪಡೆಯುತ್ತಾ, ನಾನು ಇಲ್ಲಿಗೆ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ವಿಳಂಬವಾಯಿತು, ಇದಕ್ಕಾಗಿ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. 12 ಕಿಲೋಮೀಟರ್‌ ದೂರದ ಬಿಸಿಲಿನಲ್ಲಿ ಈ ಜನಸಮೂಹ, ಉತ್ತರಾಖಂಡದ ಈ ಪ್ರೀತಿ, ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ - ಇಂದು ನಾನು ಉತ್ತರಾಖಂಡದಿಂದ ಹೊಸ ಶಕ್ತಿ ಪಡೆದಿದ್ದೇನೆ. ನಾನು ಹೊಸ ಸ್ಫೂರ್ತಿ ಪಡೆಯುತ್ತಿದ್ದೇನೆ. ಇದಕ್ಕಾಗಿ, ನನ್ನ ಹೃದಯಾಂತರಾಳದಿಂದ ಎಲ್ಲರಿಗೂ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

ಸ್ನೇಹಿತರೆ,
ಇಂದು ದೇಶದಲ್ಲಿ ಹಬ್ಬಗಳ ಉತ್ಸಾಹವಿದೆ. ಹೊಸ ವರ್ಷವು ವಿವಿಧ ಭಾಗಗಳಲ್ಲಿ ಬಂದಿದೆ. ನಾನು ದೇಶವಾಸಿಗಳಿಗೆ ಬೈಸಾಖಿ, ಬೊಹಾಗ್ ಬಿಹು ಮತ್ತು ಪುತಂಡುವಿನ ಶುಭಾಶಯಗಳನ್ನು ಸಲ್ಲಿಸುತ್ತೇನೆ!

ಸ್ನೇಹಿತರೆ,

ಮುಂದಿನ ಕೆಲವು ದಿನಗಳಲ್ಲಿ ಯಮುನೋತ್ರಿ, ಗಂಗೋತ್ರಿ, ಬಾಬಾ ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಪ್ರಯಾಣವೂ ಪ್ರಾರಂಭವಾಗಲಿದೆ. ದೇಶದ ಕೋಟ್ಯಂತರ ನಿಷ್ಠಾವಂತ ಜನರು ಈ ಪವಿತ್ರ ಸಮಯಕ್ಕಾಗಿ ಭಕ್ತಿಭಾವದಿಂದ ಕಾಯುತ್ತಾರೆ. ನಾನು ಪಂಚ ಬದ್ರಿ, ಪಂಚ ಕೇದಾರ, ಪಂಚ ಪ್ರಯಾಗ ಮತ್ತು ಇಲ್ಲಿನ ಪೀಠಾಧಿಪತಿ ದೇವತೆಗಳಿಗೆ ಗೌರವದಿಂದ ನಮಸ್ಕರಿಸುತ್ತೇನೆ. ನಾನು ಸಂತಲ ಮಾತೆಗೂ ನಮಸ್ಕರಿಸುತ್ತೇನೆ. ಇಲ್ಲಿಗೆ ಬರುವ ಮೊದಲು, ಮಾತೆ ದಾತ್ ಕಾಳಿಯ ದರ್ಶನ ಪಡೆಯುವ ಅದೃಷ್ಟ ನನಗೆ ಸಿಕ್ಕಿತ್ತು. ಡೆಹ್ರಾಡೂನ್ ನಗರದ ಮೇಲೆ ಮಾತೆ ದಾತ್ ಕಾಳಿಯ ಅನುಗ್ರಹ ಅಪಾರವಾಗಿದೆ. ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ನ ಇಷ್ಟು ದೊಡ್ಡ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ, ಮಾತೆ ದಾತ್ ಕಾಳಿಯ ಆಶೀರ್ವಾದವೇ ಬಹಳ ದೊಡ್ಡ ಶಕ್ತಿಯಾಗಿದೆ.

ಸ್ನೇಹಿತರೆ,

ಉತ್ತರಾಖಂಡ ರಾಜ್ಯ ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸುವುದರ ಜೊತೆಗೆ, 26ನೇ ವರ್ಷಕ್ಕೆ ಕಾಲಿಟ್ಟಿದೆ. ಇಂದು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯೊಂದಿಗೆ, ಈ ಪ್ರಗತಿಗೆ ಮತ್ತೊಂದು ದೊಡ್ಡ ಸಾಧನೆ ಸೇರ್ಪಡೆಯಾಗಿದೆ. ಬಾಬಾ ಕೇದಾರ ದರ್ಶನದ ನಂತರ, ಈ ಶತಮಾನದ 3ನೇ ದಶಕವು ಉತ್ತರಾಖಂಡದ ದಶಕವಾಗಲಿದೆ ಎಂದು ನನ್ನ ಬಾಯಿಂದ ಸ್ವಯಂಪ್ರೇರಿತವಾಗಿ ಹೊರಬಂದಿದ್ದು ನಿಮಗೆ ನೆನಪಿರಬಹುದು. ಡಬಲ್-ಎಂಜಿನ್ ಸರ್ಕಾರದ ನೀತಿಗಳು ಮತ್ತು ಉತ್ತರಾಖಂಡದ ಜನರ ಕಠಿಣ ಪರಿಶ್ರಮದಿಂದಾಗಿ, ಈ ಯುವ ರಾಜ್ಯವು ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೇರಿಸುತ್ತಿದೆ ಎಂಬುದರಿಂದ ನನಗೆ ತುಂಬಾ ಸಂತೋಷವಾಗಿದೆ. ಈ ಯೋಜನೆಯು ಉತ್ತರಾಖಂಡದ ಅಭಿವೃದ್ಧಿಗೆ ಹೊಸ ಆವೇಗ ನೀಡುತ್ತದೆ. ಈ ಎಕ್ಸ್‌ಪ್ರೆಸ್‌ವೇಯ ಬಹುಪಾಲು ಭಾಗವು ಉತ್ತರ ಪ್ರದೇಶದ ಮೂಲಕ ಹಾದುಹೋಗುತ್ತದೆ. ಇದರಿಂದ ಗಾಜಿಯಾಬಾದ್, ಬಾಗ್‌ಪತ್, ಬರೌತ್, ಶಾಮ್ಲಿ ಮತ್ತು ಸಹರಾನ್‌ಪುರದಂತಹ ಅನೇಕ ನಗರಗಳು ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಪ್ರವಾಸೋದ್ಯಮದ ದೃಷ್ಟಿಕೋನದಿಂದ ಈ ಯೋಜನೆಯು ಬಹಳ ಮುಖ್ಯವಾಗಿದೆ. ಈ ಯೋಜನೆಗಾಗಿ ನಾನು ಇಡೀ ದೇಶಕ್ಕೆ ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯೂ ಆಗಿದೆ. ಕೋಟ್ಯಂತರ ದೇಶವಾಸಿಗಳ ಪರವಾಗಿ ನಾನು ಬಾಬಾ ಸಾಹೇಬರಿಗೆ ಗೌರವ ಸಲ್ಲಿಸುತ್ತೇನೆ. ಕಳೆದ ದಶಕದಲ್ಲಿ, ನಮ್ಮ ಸರ್ಕಾರ ಮಾಡಿದ ನೀತಿಗಳು, ತೆಗೆದುಕೊಂಡ ನಿರ್ಧಾರಗಳು ಸಂವಿಧಾನದ ಘನತೆಯನ್ನು ಪುನಃ ಸ್ಥಾಪಿಸಿವೆ. 370ನೇ ವಿಧಿ ತೆಗೆದುಹಾಕಿದ ನಂತರ ಇಂದು ಭಾರತದ ಸಂವಿಧಾನವು ಇಡೀ ದೇಶದಲ್ಲಿ ಅನ್ವಯಿಸುತ್ತದೆ. ಮಾವೋವಾದ-ನಕ್ಸಲ್ ವಾದವು ಕೊನೆಗೊಂಡ ಡಜನ್ ಗಟ್ಟಲೆ ಜಿಲ್ಲೆಗಳಲ್ಲಿ, ಈಗ ಅಲ್ಲಿಯೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ನಮ್ಮ ಸಂವಿಧಾನದ ನಿರೀಕ್ಷೆಯಾಗಿದೆ. ಉತ್ತರಾಖಂಡ, ಸಂವಿಧಾನದ ಈ ಮನೋಭಾವದೊಂದಿಗೆ ಮುಂದುವರಿಯುವ ಮೂಲಕ ಮತ್ತು ಆ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ, ಇಡೀ ದೇಶಕ್ಕೆ ದಾರಿ ತೋರಿಸಿದೆ.

ಸ್ನೇಹಿತರೆ,

ಬಾಬಾ ಸಾಹೇಬ ಅವರ ಜೀವನವು ಬಡವರು, ಸೌಲಭ್ಯವಂಚಿತರು ಮತ್ತು ಶೋಷಿತರಿಗೆ ನ್ಯಾಯಯುತ ವ್ಯವಸ್ಥೆಯನ್ನು ನೀಡಲು ಸಮರ್ಪಿತವಾಗಿತ್ತು. ಇಂದು ನಮ್ಮ ಸರ್ಕಾರವು ಅದೇ ಮನೋಭಾವದಿಂದ, ಪ್ರತಿಯೊಬ್ಬ ಬಡವರಿಗೆ ಮತ್ತು ಪ್ರತಿಯೊಬ್ಬ ವಂಚಿತ ವ್ಯಕ್ತಿಗೆ ನಿಜವಾದ ಸಾಮಾಜಿಕ ನ್ಯಾಯ ನೀಡುವಲ್ಲಿ ತೊಡಗಿಸಿಕೊಂಡಿದೆ. ಸಾಮಾಜಿಕ ನ್ಯಾಯದ ಒಂದು ದೊಡ್ಡ ಮಾಧ್ಯಮವೆಂದರೆ ದೇಶದ ಸಮತೋಲಿತ ಅಭಿವೃದ್ಧಿ, ಎಲ್ಲರಿಗೂ ಸೌಲಭ್ಯಗಳು ಮತ್ತು ಎಲ್ಲರಿಗೂ ಸಮೃದ್ಧಿ. ಅದಕ್ಕಾಗಿಯೇ ಬಾ ಬಾಸಾಹೇಬ್ ಆಧುನಿಕ ಮೂಲಸೌಕರ್ಯ ಮತ್ತು ಕೈಗಾರಿಕೀಕರಣವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಸ್ನೇಹಿತರೆ,

ಭವಿಷ್ಯದ ಸ್ಥಿತಿ ಮತ್ತು ದಿಕ್ಕು ಹೇಗಿರುತ್ತದೆ, ಜನರು ಆಗಾಗ್ಗೆ ಇದಕ್ಕಾಗಿ ಹಸ್ತದ ರೇಖೆಗಳನ್ನು ನೋಡುತ್ತಾರೆ ಮತ್ತು ತೋರಿಸುತ್ತಾರೆ. ಭವಿಷ್ಯ ಹೇಳುವವರು, ಅವರು ತಾಳೆ ರೇಖೆಗಳನ್ನು ನೋಡುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯದ ಬಗ್ಗೆ ಹೇಳುತ್ತಾರೆ. ನನಗೆ ಈ ವಿಜ್ಞಾನ ತಿಳಿದಿಲ್ಲ, ಆದರೆ ಇದು ಕೂಡ ಒಂದು ಶಾಸ್ತ್ರ ಎಂದು ಅವರು ಹೇಳುತ್ತಾರೆ. ಈಗ, ಇದು ಒಬ್ಬ ವ್ಯಕ್ತಿಯ ಕೈಯಲ್ಲಿರುವ ರೇಖೆಗಳಲ್ಲಿರುವ ಅದೃಷ್ಟದ ಬಗ್ಗೆ, ಆದರೆ ನಾನು ಈ ಸಂದರ್ಭವನ್ನು ರಾಷ್ಟ್ರೀಯ ಜೀವನಕ್ಕೆ ಸಂಪರ್ಕಿಸುವ ಮೂಲಕ ನೋಡಿದರೆ, ಒಂದು ರಾಷ್ಟ್ರದ ಅದೃಷ್ಟ ರೇಖೆಗಳು ಯಾವುವು? ಒಂದು ರಾಷ್ಟ್ರದ ಅದೃಷ್ಟ ರೇಖೆಗಳು ನಮ್ಮ ಈ ರಸ್ತೆಗಳು, ನಮ್ಮ ಹೆದ್ದಾರಿಗಳು, ನಮ್ಮ ಎಕ್ಸ್‌ಪ್ರೆಸ್‌ವೇಗಳು, ವಾಯುಮಾರ್ಗಗಳು, ರೈಲ್ವೆಗಳು, ಜಲಮಾರ್ಗಗಳು - ಇವು ನಮ್ಮ ರಾಷ್ಟ್ರದ ಅದೃಷ್ಟ ರೇಖೆಗಳು. ಕಳೆದ ಒಂದು ದಶಕದಿಂದ, ನಮ್ಮ ದೇಶವು ಅಭಿವೃದ್ಧಿ ಹೊಂದಿದ ಭಾರತ ಮಾಡಲು ಅಭಿವೃದ್ಧಿಯ ಅಂತಹ ಗತಿ ರೇಖೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಈ ಅಭಿವೃದ್ಧಿ ರೇಖೆಗಳು ಕೇವಲ ಇಂದಿನ ಸೌಲಭ್ಯಗಳಲ್ಲ; ಅವು ಮುಂಬರುವ ಪೀಳಿಗೆಗೆ ಸಮೃದ್ಧಿಯ ಖಾತರಿಯಾಗಿದ್ದು, ಇದು ಮೋದಿ ಅವರ ಖಾತರಿಯಾಗಿದೆ. ಕಳೆದ ದಶಕದಿಂದ ನಮ್ಮ ಸರ್ಕಾರವು ರಾಷ್ಟ್ರದ ಈ ಅಭಿವೃದ್ಧಿ ರೇಖೆಗಳಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ನಾನು ನಿಮಗೆ ಒಂದು ಅಂಕಿಅಂಶ ನೀಡುತ್ತೇನೆ. ಇದೀಗ ನಿತಿನ್ ಜಿ ಅವರು ಉತ್ತರಾಖಂಡಕ್ಕೆ ಸಂಬಂಧಿಸಿದ ಹಲವು ಅಂಕಿಅಂಶಗಳನ್ನು ನಿಮಗೆ ಹೇಳಿದ್ದಾರೆ. ನೋಡಿ, 2014ರ ವರೆಗೆ, ಅಂತಹ ಮೂಲಸೌಕರ್ಯಕ್ಕಾಗಿ ಒಂದು ವರ್ಷದಲ್ಲಿ, ಇಡೀ ದೇಶದಲ್ಲಿ, 2 ಲಕ್ಷ ಕೋಟಿ ರೂಪಾಯಿಗಳನ್ನು ಸಹ ಖರ್ಚು ಮಾಡಿರಲಿಲ್ಲ. ನಾನು ಇಡೀ ಭಾರತದ ವಾಸ್ತವವನ್ನು ಹೇಳುತ್ತಿದ್ದೇನೆ - ಇದು 2 ಲಕ್ಷ ಕೋಟಿ ಇರಲಿಲ್ಲ. ಆದರೆ ಇಂದು ಇದು 6  ಪಟ್ಟು ಹೆಚ್ಚು  ಅಂದರೆ 12 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಇಲ್ಲಿ ಉತ್ತರಾಖಂಡದಲ್ಲಿಯೇ, ಎರಡೂವರೆ ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೂಲಸೌಕರ್ಯ ಯೋಜನೆಗಳ ಕೆಲಸ ನಡೆಯುತ್ತಿದೆ. 2014ರ ಮೊದಲು ಇಡೀ ದೇಶಕ್ಕೆ 2 ಲಕ್ಷ ಕೋಟಿ ರೂ. ಆದರೆ ಇಂದು ಉತ್ತರಾಖಂಡಕ್ಕೆ ಮಾತ್ರ ಎರಡೂವರೆ ಲಕ್ಷ ಕೋಟಿ ರೂಪಾಯಿಗಳು. ಒಂದು ಕಾಲದಲ್ಲಿ ಉತ್ತರಾಖಂಡದ ಹಳ್ಳಿಗಳಲ್ಲಿ, ರಸ್ತೆಗಾಗಿ ಕಾಯುವ ತಲೆಮಾರುಗಳು ಬದಲಾಗುತ್ತಿದ್ದವು. ಇಂದು ಡಬಲ್-ಎಂಜಿನ್ ಸರ್ಕಾರದ ಪ್ರಯತ್ನಗಳಿಂದಾಗಿ, ಈಗ ರಸ್ತೆ ಗ್ರಾಮವನ್ನು ತಲುಪುತ್ತಿದೆ. ಹಿಂದೆ ನಿರ್ಜನವಾಗಿದ್ದ ಹಳ್ಳಿಗಳು ಮತ್ತೆ ಚೈತನ್ಯಶೀಲವಾಗುತ್ತಿವೆ. ಅದು ಚಾರ್‌ಧಾಮ್ ಮಹಾಮಾರ್ಗ್ ಯೋಜನೆಯಾಗಿರಲಿ, ರೈಲು ಯೋಜನೆಗಳ ವಿಸ್ತರಣೆಯಾಗಿರಲಿ, ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ರೋಪ್‌ವೇ ಆಗಿರಲಿ - ಈ ಅಭಿವೃದ್ಧಿಯ ಮಾರ್ಗಗಳು ಈ ಪ್ರದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಜೀವನದ ಗತಿಯಾಗುತ್ತಿವೆ.

21ನೇ ಶತಮಾನದ ಭಾರತ ಇಂದು ಯಾವ ವೇಗ ಮತ್ತು ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಇಡೀ ಜಗತ್ತು ಚರ್ಚಿಸುತ್ತಿದೆ. ನಾನು ನಿಮಗೆ ಉತ್ತರಾಖಂಡ, ಪಶ್ಚಿಮ ಯುಪಿ ಮತ್ತು ದೆಹಲಿಯ ಉದಾಹರಣೆಯನ್ನು ನೀಡುತ್ತೇನೆ. ಕೆಲವೇ ವಾರಗಳ ಹಿಂದೆ, ದೆಹಲಿ ಮೆಟ್ರೋ ವಿಸ್ತರಿಸಲಾಯಿತು, ಮೀರತ್‌ನಲ್ಲಿ ಮೆಟ್ರೋ ಸೇವೆ ಆರಂಭವಾಯಿತು, ದೆಹಲಿ-ಮೀರತ್ ನಮೋ ಭಾರತ್ ರೈಲು ದೇಶಕ್ಕೆ ಸಮರ್ಪಿಸಲಾಯಿತು, ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸಲಾಯಿತು, ವಿಮಾನಗಳಿಗಾಗಿ ಎಂಆರ್ ಒ ಸೌಲಭ್ಯದ ಕೆಲಸ ಆರಂಭವಾಯಿತು, ಮತ್ತು ಇಂದು, ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಆರಂಭವಾಗುತ್ತಿದೆ.

ಸ್ನೇಹಿತರೆ,

ಇಷ್ಟು ಸಣ್ಣ ಪ್ರದೇಶದಲ್ಲಿ ಇದೆಲ್ಲವೂ ಇಷ್ಟು ಕಡಿಮೆ ಸಮಯದಲ್ಲಿ ನಡೆಯುತ್ತಿದೆ. ದೇಶದಲ್ಲಿ ಎಷ್ಟು ದೊಡ್ಡ ಪ್ರಮಾಣದ ಮೂಲಸೌಕರ್ಯ ನಿರ್ಮಿಸಲಾಗುತ್ತಿದೆ ಎಂಬುದನ್ನು ನೀವೇ ಊಹಿಸಿ. ಅದಕ್ಕಾಗಿಯೇ ನಾನು ಹೇಳುತ್ತೇನೆ - 21ನೇ ಶತಮಾನದ ಭಾರತ, ಅದು ಪ್ರವೇಶಿಸುತ್ತಿರುವ ಆಧುನಿಕ ಮೂಲಸೌಕರ್ಯದ ಹೊಸ ಯುಗವು ಅಭೂತಪೂರ್ವವಾಗಿದೆ, ಅದನ್ನು ಊಹಿಸಲು ಸಹ ಆಗದು.

ಸ್ನೇಹಿತರೆ,

ಇಂದು ಭಾರತದ ವಿವಿಧ ಭಾಗಗಳನ್ನು ಸಂಪರ್ಕಿಸುವ ಅನೇಕ ಆರ್ಥಿಕ ಕಾರಿಡಾರ್‌ಗಳಲ್ಲಿ ಕೆಲಸ ನಡೆಯುತ್ತಿದೆ. ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್, ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್, ಪೂರ್ವ ಕರಾವಳಿ ಆರ್ಥಿಕ ಕಾರಿಡಾರ್, ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್‌ - ದೇಶದಲ್ಲಿ ಇಂತಹ ಅನೇಕ ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಆರ್ಥಿಕ ಕಾರಿಡಾರ್‌ಗಳು ಪ್ರಗತಿಯ ಹೊಸ ಬಾಗಿಲುಗಳು, ದ್ವಾರಗಳಾಗಲಿವೆ. ಭರವಸೆಗಳ ಸರಮಾಲೆಯೂ ಇವುಗಳೊಂದಿಗೆ ಸಂಪರ್ಕ ಹೊಂದಿದೆ. ಈ ಆರ್ಥಿಕ ಕಾರಿಡಾರ್‌ಗಳು, ರಸ್ತೆಯ ಹೊರತಾಗಿ, ಹೊಸ ವ್ಯಾಪಾರ ಮತ್ತು ವ್ಯವಹಾರಕ್ಕೆ ಮಾರ್ಗಗಳನ್ನು ಸೃಷ್ಟಿಸುತ್ತವೆ. ಅವು ಕಾರ್ಖಾನೆಗಳು ಮತ್ತು ಗೋದಾಮುಗಳ ಸಂಪೂರ್ಣ ಜಾಲಕ್ಕೆ ಭದ್ರ ಅಡಿಪಾಯ ಸಿದ್ಧಪಡಿಸುತ್ತವೆ.

ಸ್ನೇಹಿತರೆ,

ಈ ಇಡೀ ಪ್ರದೇಶದ ರೂಪಾಂತರವು ಡೆಹ್ರಾಡೂನ್-ದೆಹಲಿ ಆರ್ಥಿಕ ಕಾರಿಡಾರ್ ಮೂಲಕವೂ ಆಗಲಿದೆ. ಮೊದಲ ಪ್ರಯೋಜನವೆಂದರೆ ಅದು ಸಮಯವನ್ನು ಉಳಿಸುತ್ತದೆ, ಪ್ರಯಾಣವು ಅಗ್ಗ ಮತ್ತು ವೇಗವಾಗಿರುತ್ತದೆ, ಜನರ ಪೆಟ್ರೋಲ್ ಮತ್ತು ಡೀಸೆಲ್ ಗೆ ಕಡಿಮೆ ಖರ್ಚು ಮಾಡಲಾಗುತ್ತದೆ, ದರಗಳು ಕಡಿಮೆಯಾಗುತ್ತವೆ ಮತ್ತು ಎರಡನೆಯ ದೊಡ್ಡ ಪ್ರಯೋಜನವೆಂದರೆ ಉದ್ಯೋಗ. ಇದೀಗ ಇದರ ನಿರ್ಮಾಣಕ್ಕಾಗಿ 12 ಸಾವಿರ ಕೋಟಿ ರೂಪಾಯಿನ್ನು ಖರ್ಚು ಮಾಡಲಾಗಿದೆ, ಆದ್ದರಿಂದ ಸಾವಿರಾರು ಕಾರ್ಮಿಕರಿಗೆ ಕೆಲಸ ಸಿಕ್ಕಿತು. ಇದರೊಂದಿಗೆ, ಎಂಜಿನಿಯರ್‌ಗಳು, ಇತರ ಕೌಶಲ್ಯಪೂರ್ಣ ಕಾರ್ಯಪಡೆ, ಸಾರಿಗೆಗೆ ಸಂಬಂಧಿಸಿದ ಪಾಲುದಾರರು - ಅವರಿಗೂ ಸಹ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಸಿಕ್ಕಿದೆ. ರೈತರು ಮತ್ತು ಹೈನುಗಾರರ ಉತ್ಪನ್ನಗಳು ಈಗ ದೊಡ್ಡ ಮಂಡಿಗಳು ಮತ್ತು ದೊಡ್ಡ ಮಾರುಕಟ್ಟೆಗಳನ್ನು ವೇಗವಾಗಿ ತಲುಪುತ್ತವೆ.

ಸ್ನೇಹಿತರೆ,

ಈ ಭವ್ಯವಾದ ಎಕ್ಸ್‌ಪ್ರೆಸ್‌ವೇಯಿಂದ ಉತ್ತರಾಖಂಡದ ಪ್ರವಾಸೋದ್ಯಮವು ಬಹುದೊಡ್ಡ ಪ್ರಯೋಜನ ಪಡೆಯಲಿದೆ. ಇದು ಡೆಹ್ರಾಡೂನ್, ಹರಿದ್ವಾರ, ಋಷಿಕೇಶ, ಮಸ್ಸೂರಿ ಮತ್ತು ಚಾರ್‌ಧಾಮ್ ಯಾತ್ರೆಗೆ ಅತ್ಯಂತ ಪ್ರಮುಖ ಮಾರ್ಗವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೊಂಡಾಗ, ಪ್ರತಿಯೊಬ್ಬರೂ ಏನಾದರೂ ಗಳಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದು ಹೋಟೆಲ್‌ಗಳು, ಡಾಬಾ ಮಾಲೀಕರು, ಟ್ಯಾಕ್ಸಿಗಳು, ಆಟೋಗಳು, ಹೋಂ ಸ್ಟೇಗಳು - ಪ್ರತಿಯೊಬ್ಬರೂ ಇದರಿಂದ ಪ್ರಯೋಜನ ಪಡೆಯುತ್ತಾರೆ.

ಸ್ನೇಹಿತರೆ,

ಇಂದು ಉತ್ತರಾಖಂಡ್ ಚಳಿಗಾಲದ ಪ್ರವಾಸೋದ್ಯಮ, ಚಳಿಗಾಲದ ಕ್ರೀಡೆಗಳು ಮತ್ತು 'ಭಾರತದಲ್ಲಿ ವಿವಾಹಗಳಿಗೆ ಅತ್ಯುತ್ತಮ ತಾಣವಾಗುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.

ಸ್ನೇಹಿತರೆ,

ಉತ್ತರಾಖಂಡದ ಆರ್ಥಿಕತೆಗೆ ದೀರ್ಘಕಾಲಿಕ ಪ್ರವಾಸೋದ್ಯಮ ಬಹಳ ಅವಶ್ಯಕ. ಅದಕ್ಕಾಗಿಯೇ ಚಳಿಗಾಲದಲ್ಲಿ ನಡೆಯುವ ಧಾರ್ಮಿಕ ಪ್ರಯಾಣಗಳಿಗೆ ನಾನು ತುಂಬಾ ಒತ್ತಾಯಿಸುತ್ತಿದ್ದೇನೆ. ಪ್ರತಿ ವರ್ಷ ಈ ಪ್ರಯಾಣಗಳಲ್ಲಿ ಜನರ ಸಂಖ್ಯೆ ಹೆಚ್ಚುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ನಿಮಗೆ ನೆನಪಿರಬಹುದು, ನಾನು 2023ರಲ್ಲಿ ಆದಿ ಕೈಲಾಸ ಮತ್ತು ಓಂ ಪರ್ವತಕ್ಕೆ ಪ್ರಯಾಣ ಬೆಳೆಸಿದ್ದೆ. ನಾನು ಬಹಳ ಹಿಂದೆಯೇ ಹೋಗಿದ್ದೆ, ನಡುವೆ ಹೋಗಲು ಸಾಧ್ಯವಾಗಲಿಲ್ಲ, ನಾನು ಹಲವು ವರ್ಷಗಳ ನಂತರ ಹೋಗಿದ್ದೆ, ಮುಖ್ಯಮಂತ್ರಿಗಳು ನನಗೆ ಹೇಳುತ್ತಿದ್ದರು, ರಾಜ್ಯಪಾಲರು ನಡುವೆ ಬಂದರು, ನಾನು 2023ರಲ್ಲಿ ಅಲ್ಲಿಗೆ ಹೋಗಿದ್ದೆ ಎಂದು ಅವರು ಹೇಳುತ್ತಿದ್ದರು. ಅದರ ನಂತರ, ಬಹಳ ದೊಡ್ಡ ಸಂಖ್ಯೆಯ ಭಕ್ತರು ಅಲ್ಲಿಗೆ ಹೋಗುತ್ತಿದ್ದಾರೆ. ಹಿಂದೆ ಚಳಿಗಾಲದಲ್ಲಿ ಪ್ರಯಾಣಕ್ಕಾಗಿ ಕೆಲವು ನೂರು ಜನರು ಮಾತ್ರ ಅಲ್ಲಿಗೆ ಹೋಗುತ್ತಿದ್ದರು. 2025ರಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನರು ಈ ಪವಿತ್ರ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ. ಒಂದು ಕಾಲದಲ್ಲಿ ಅದು ಒಂದು ಸಾವಿರವೂ ಇರಲಿಲ್ಲ, 40 ಸಾವಿರ ತಲುಪಿದರೆ, ಇಲ್ಲಿನ ಜನರ ಜೀವನೋಪಾಯಕ್ಕೆ ಎಷ್ಟು ಶಕ್ತಿ ಬರುತ್ತದೆ. ಅದೇ ರೀತಿ, 2024ರ ಚಳಿಗಾಲದ ಚಾರ್‌ಧಾಮ್ ಯಾತ್ರೆಯಲ್ಲಿ ಸುಮಾರು 80 ಸಾವಿರ ಭಕ್ತರು ಬಂದಿದ್ದರು. 2025ರಲ್ಲಿ, ಈ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ.

ಸ್ನೇಹಿತರೆ,

ಪ್ರಗತಿ, ಪ್ರಕೃತಿ ಮತ್ತು ಸಂಸ್ಕೃತಿ ಇರುವಂತಹ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಅದಕ್ಕಾಗಿಯೇ, ಇಂದು ನಡೆಯುತ್ತಿರುವ ಪ್ರತಿಯೊಂದು ನಿರ್ಮಾಣವನ್ನು 'ತ್ರಿವೇಣಿ'ಯ ಈ ಮೌಲ್ಯಗಳನ್ನು ಆಧರಿಸಿ ಅಭಿವೃದ್ಧಿಪಡಿಸಲಾಗುತ್ತಿದೆ - ಪ್ರಗತಿ, ಪ್ರಕೃತಿ ಮತ್ತು ಸಂಸ್ಕೃತಿಯ ತ್ರಿಮೂರ್ತಿಗಳು. ಮೂಲಸೌಕರ್ಯದಿಂದ ಮನುಷ್ಯರಿಗೆ ಸೌಲಭ್ಯ ಇರಬೇಕು, ಅಲ್ಲಿ ವಾಸಿಸುವ ವನ್ಯಜೀವಿಗಳಿಗೆ ಯಾವುದೇ ಅನನುಕೂಲತೆ ಉಂಟಾಗಬಾರದು - ಇದು ನಮ್ಮ ಪ್ರಯತ್ನ. ಅದಕ್ಕಾಗಿಯೇ ಈ ಎಕ್ಸ್‌ಪ್ರೆಸ್‌ವೇಯಲ್ಲಿ, ಸುಮಾರು 12 ಕಿಲೋಮೀಟರ್ ಉದ್ದದ ಎತ್ತರದ ವನ್ಯಜೀವಿ ಕಾರಿಡಾರ್ ನಿರ್ಮಿಸಲಾಗಿದೆ. ಆನೆಗಳು ಸಹ ಅನನುಕೂಲತೆ ಎದುರಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಸ್ನೇಹಿತರೆ,

ಇಂದು ನಾನು ದೇಶಾದ್ಯಂತದ ಎಲ್ಲಾ ಪ್ರವಾಸಿಗರು ಮತ್ತು ಯಾತ್ರಿಕರಿಗೆ ಮನವಿ ಮಾಡಲು ಬಯಸುತ್ತೇನೆ. ನಮ್ಮ ಪರ್ವತಗಳು, ಈ ಅರಣ್ಯ ಪ್ರದೇಶಗಳು, ದೈವಭೂಮಿಯ ಈ ಪರಂಪರೆ - ಇವು ತುಂಬಾ ಪವಿತ್ರ ಸ್ಥಳಗಳು. ಅಂತಹ ಸ್ಥಳಗಳನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಇಲ್ಲಿ ವಾಸಿಸುವವರು ಮತ್ತು ಪ್ರಯಾಣಿಕರಾಗಿ ಬರುವವರು. ಪ್ಲಾಸ್ಟಿಕ್ ಬಾಟಲಿಗಳು, ಈ ಪ್ರದೇಶಗಳಲ್ಲಿ ಕಸದ ರಾಶಿಗಳು ದೈವಭೂಮಿಯ ಪಾವಿತ್ರ್ಯಕ್ಕೆ ಧಕ್ಕೆ ತರುತ್ತವೆ. ಆದ್ದರಿಂದ, ನಮ್ಮ ಈ ತೀರ್ಥಯಾತ್ರಾ ಸ್ಥಳಗಳಾದ ದೈವಭೂಮಿಯ ಈ ಸ್ಥಳಗಳನ್ನು ಸ್ವಚ್ಛ ಮತ್ತು ಸುಂದರವಾಗಿಡುವುದು ಬಹಳ ಅವಶ್ಯಕ.

ಸ್ನೇಹಿತರೆ,

ಮುಂದಿನ ವರ್ಷ ಹರಿದ್ವಾರದಲ್ಲಿ ಕುಂಭಮೇಳ ಆಯೋಜಿಸಲಾಗುವುದು. ಈ ನಂಬಿಕೆಯ ಸಂಗಮವನ್ನು ದೈವಿಕ, ಭವ್ಯ ಮತ್ತು ಸ್ವಚ್ಛವಾಗಿಸಲು ನಾವು ಯಾವುದೇ ಅವಕಾಶವನ್ನು ಬಿಡಬಾರದು.

ಸ್ನೇಹಿತರೆ,

ನಂದಾ ದೇವಿ ರಾಜ್ ಜಾತ್ ಯಾತ್ರೆಯು ಉತ್ತರಾಖಂಡದಲ್ಲಿಯೂ ನಡೆಯುತ್ತದೆ. ಇದು ನಂಬಿಕೆಯ ಹಬ್ಬ, ಇದು ನಮ್ಮ ಸಾಂಸ್ಕೃತಿಕ ಪ್ರಜ್ಞೆಯ ಜೀವಂತ ಉದಾಹರಣೆಯಾಗಿದೆ. ತಾಯಿ ನಂದಾ ಅವರನ್ನು ಮಗಳೆಂದು ಪರಿಗಣಿಸುವ ಮತ್ತು ಪೂರ್ಣ ಗೌರವದಿಂದ ವಿದಾಯ ಹೇಳುವ ಸ್ಥಳ ಇದು. ಈ ಪ್ರಯಾಣದಲ್ಲಿ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಭಾಗವಹಿಸುವಿಕೆಯು ಇದನ್ನು ವಿಶೇಷವಾಗಿಸುತ್ತದೆ. ಮಾತೆ ನಂದಾಗೆ ನಮಸ್ಕರಿಸುವಾಗ, ದೇಶಾದ್ಯಂತ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೂ ನಾನು ವಿಶೇಷ ಸಂದೇಶ ನೀಡಲು ಬಯಸುತ್ತೇನೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದಾಗಿದೆ. ಈ ದೇಶದ ಹೆಣ್ಣು ಮಕ್ಕಳು, ಈ ದೇಶದ ತಾಯಂದಿರು, ಸಹೋದರಿಯರ ಪಾತ್ರ ಬಹಳ ದೊಡ್ಡದಾಗಿದೆ ಎಂದು ನಾನು ನೋಡುತ್ತಿದ್ದೇನೆ. ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಪ್ರಜಾಪ್ರಭುತ್ವದಲ್ಲಿ ಅವರ ಅನುಕೂಲತೆ, ಸುರಕ್ಷತೆ ಮತ್ತು ಭಾಗವಹಿಸುವಿಕೆಯು ಡಬಲ್-ಎಂಜಿನ್ ಸರ್ಕಾರದ ಒಂದು ದೊಡ್ಡ ಆದ್ಯತೆಯಾಗಿದೆ. ಜಗತ್ತಿನಲ್ಲಿ ಎಂತಹ ದೊಡ್ಡ ಬಿಕ್ಕಟ್ಟು ಬಂದಿದೆ ಎಂಬುದನ್ನು ನೀವು ಈಗ ನೋಡುತ್ತಿದ್ದೀರಿ. ಇದರಿಂದ, ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಸಹ ಎಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಹ ಕಠಿಣ ಸಂದರ್ಭಗಳಲ್ಲಿಯೂ ಸಹ, ನಮ್ಮ ಸಹೋದರಿಯರು ಕನಿಷ್ಠ ತೊಂದರೆ ಎದುರಿಸಬಾರದು ಎಂಬುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ.

ಸ್ನೇಹಿತರೆ,

ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಭಾಗವಹಿಸುವಿಕೆಯ ಮತ್ತೊಂದು ಪ್ರಮುಖ ಮೈಲಿಗಲ್ಲು ಈಗ ದೇಶದ ಮುಂದಿದೆ. 4 ದಶಕಗಳ ಕಾಯುವಿಕೆಯ ನಂತರ, ಸಂಸತ್ತು ನಾರಿ ಶಕ್ತಿ ವಂದನ ಅಧಿನಿಯಮ ಅಂಗೀಕರಿಸಿತು. ಇದರ ಮೂಲಕ, ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನಿಗದಿಪಡಿಸಲಾಯಿತು. ಎಲ್ಲಾ ಪಕ್ಷಗಳು ಮುಂದೆ ಬಂದು ಈ ಮಹತ್ವದ ಕಾನೂನನ್ನು ಬೆಂಬಲಿಸಿದವು. ಈಗ ಮಹಿಳೆಯರು ಈ ಹಕ್ಕು ಪಡೆದಿರುವುದರಿಂದ, ಈ ಹಕ್ಕನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ವಿಳಂಬ ಮಾಡಬಾರದು. ಈಗ ಇದನ್ನು ಜಾರಿಗೆ ತರಬೇಕು. ಈಗ 2029ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಳು ಮತ್ತು ಶಾಸಕಾಂಗ ಚುನಾವಣೆಗಳು ಬರುತ್ತಿವೆ,  ಯಾವುದೇ ಚುನಾವಣೆಗಳು ಬರುತ್ತಲೇ ಇರುತ್ತವೆ - ಇದನ್ನು 2029ರಿಂದಲೇ ಜಾರಿಗೆ ತರಬೇಕು. ಇದು ದೇಶದ ಭಾವನೆ, ಇದು ದೇಶದ ಪ್ರತಿಯೊಬ್ಬ ಸಹೋದರಿ ಮತ್ತು ಹೆಣ್ಣು ಮಕ್ಕಳ ಆಶಯ. ಮಾತೃಶಕ್ತಿಯ(ಮಾತೃಶಕ್ತಿ) ಈ ಆಶಯಕ್ಕೆ ತಲೆಬಾಗಿ, ಏಪ್ರಿಲ್ 16ರಿಂದ ಸಂಸತ್ತಿನಲ್ಲಿ ವಿಶೇಷ ಚರ್ಚೆ ನಿಗದಿಪಡಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ, ಒಮ್ಮತದ ಮೂಲಕ, ದೇಶದ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಈ ಕೆಲಸವನ್ನು ಮುಂದಕ್ಕೆ ತೆಗೆದುಕೊಂಡು ಅದನ್ನು ಪೂರ್ಣಗೊಳಿಸಬೇಕು. ಇಂದು ನಾನು ದೇಶದ ಎಲ್ಲಾ ಸಹೋದರಿಯರ ಹೆಸರಿನಲ್ಲಿ ಒಂದು ಮುಕ್ತ ಪತ್ರ ಬರೆದಿದ್ದೇನೆ; ಬಹುಶಃ ನನ್ನ ಈ ಪತ್ರವು ನಿಮ್ಮನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಲುಪಬಹುದಿತ್ತು, ಟಿವಿ ಮತ್ತು ಪತ್ರಿಕೆಯ ಜನರು ಸಹ ಈ ಪತ್ರವನ್ನು ಉಲ್ಲೇಖಿಸುತ್ತಿರಬಹುದು. ನಾನು ದೇಶದ ತಾಯಂದಿರು ಮತ್ತು ಸಹೋದರಿಯರನ್ನು ಈ ಕೆಲಸದಲ್ಲಿ ಭಾಗವಹಿಸಲು ಬಹಳ ಹಠದಿಂದ ಆಹ್ವಾನಿಸಿದ್ದೇನೆ. ನನ್ನ ದೇಶದ ತಾಯಂದಿರು ಮತ್ತು ಸಹೋದರಿಯರು ಖಂಡಿತವಾಗಿಯೂ ಪತ್ರವನ್ನು ಓದುತ್ತಾರೆ ಎಂಬ ದೃಢ ನಂಬಿಕೆ ನನಗಿದೆ. ಅವರು ಪ್ರತಿಯೊಂದು ಪದವನ್ನೂ ಚಿಂತಿಸುತ್ತಾರೆ, ಇಷ್ಟು ದೊಡ್ಡ ಪವಿತ್ರ ಕೆಲಸವನ್ನು ಮಾಡಿದ್ದಕ್ಕಾಗಿ, ಏ.16, 17 ಮತ್ತು 18ರಂದು ಸಂಸತ್ತಿಗೆ ಬರುವ ಸಂಸದರು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಇಂದು ದೈವಭೂಮಿಯಿಂದ ನಾನು ಮತ್ತೊಮ್ಮೆ ದೇಶದ ಎಲ್ಲಾ ಪಕ್ಷಗಳಿಗೆ ನಾರಿ ಶಕ್ತಿ ವಂದನ ಅಧಿನಿಯಮದ ತಿದ್ದುಪಡಿಯನ್ನು ಖಂಡಿತವಾಗಿಯೂ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. 2029ರಲ್ಲಿ ನಮ್ಮ ದೇಶದ ಜನಸಂಖ್ಯೆಯ 50 ಪ್ರತಿಶತ - ನಮ್ಮ ತಾಯಂದಿರು, ಸಹೋದರಿಯರು, ನಮ್ಮ ಹೆಣ್ಣು ಮಕ್ಕಳು - ಅವರಿಗೆ ಅವರ ಹಕ್ಕುಗಳನ್ನು ನೀಡೋಣ.

ನಾನು ಉತ್ತರಾಖಂಡಕ್ಕೆ ಬಂದಾಗ ಮತ್ತು ಸೈನ್ಯದ ಬಗ್ಗೆ ಯಾವುದೇ ಮಾತುಕತೆ ಇಲ್ಲದಿದ್ದರೆ, ಮಾತು ಅಪೂರ್ಣವಾಗಿ ಉಳಿಯುತ್ತದೆ. ಈ ಸಭೆ ನಡೆಯುವ ಸ್ಥಳವಾದ ಈ ಗರ್ರಿ ಕ್ಯಾಂಟ್, ಉತ್ತರಾಖಂಡದ ಶ್ರೇಷ್ಠ ಮಿಲಿಟರಿ ಸಂಪ್ರದಾಯಕ್ಕೆ ಪುರಾವೆಯಾಗಿದೆ. ಇಲ್ಲಿ ಹತ್ತಿರದಲ್ಲಿ ದೇಶದ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಅನೇಕ ಸಂಸ್ಥೆಗಳಿವೆ; 1962ರ ಯುದ್ಧದಲ್ಲಿ ಶಹೀದ್ ಜಸ್ವಂತ್ ಸಿಂಗ್ ರಾವತ್ ಜಿ ಅವರ ಶೌರ್ಯವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಸ್ನೇಹಿತರೆ,

ಸೇನೆಯ ಸಾಮರ್ಥ್ಯವನ್ನು ಬಲಪಡಿಸುವುದಾಗಲಿ ಅಥವಾ ನಮ್ಮ ಸೈನಿಕರ ಕುಟುಂಬಗಳ ಸೌಲಭ್ಯ ಮತ್ತು ಗೌರವವಾಗಲಿ, ಇವುಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಒಂದು ಶ್ರೇಣಿ-ಒಂದು ಪಿಂಚಣಿ ಮೂಲಕ, ನಮ್ಮ ಸರ್ಕಾರವು ಇಲ್ಲಿಯವರೆಗೆ ಮಾಜಿ ಸೈನಿಕರ ಖಾತೆಗಳಿಗೆ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಜಮಾ ಮಾಡಿದೆ. ಉತ್ತರಾಖಂಡದ ಸಾವಿರಾರು ಕುಟುಂಬಗಳು ಸಹ ಅದರ ಪ್ರಯೋಜನ ಪಡೆದಿವೆ. ಇದರ ಹೊರತಾಗಿ, ಈ ವರ್ಷ ಮಾಜಿ ಸೈನಿಕರ ಆರೋಗ್ಯ ಯೋಜನೆಯ ಬಜೆಟ್ ಅನ್ನು ಶೇಕಡ 36ರಷ್ಟು ಹೆಚ್ಚಿಸಲಾಗಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಾಜಿ ಸೈನಿಕರಿಗೆ, ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವುದನ್ನು ಸಹ ಆರಂಭಿಸಲಾಗಿದೆ. ಮಾಜಿ ಸೈನಿಕರ ಮಕ್ಕಳಿಗೆ ಶಿಕ್ಷಣ ಅನುದಾನ ದ್ವಿಗುಣಗೊಳಿಸಲಾಗಿದೆ. ಮತ್ತು ಹೆಣ್ಣು ಮಕ್ಕಳ ಮದುವೆ ಸಹಾಯವನ್ನು 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

ಸ್ನೇಹಿತರೆ,

ದೇಶಭಕ್ತಿ, ದೇವರ ಮೇಲಿನ ಭಕ್ತಿ ಮತ್ತು ಪ್ರಗತಿಯಂತಹ ಪ್ರತಿಯೊಂದು ಆಯಾಮವನ್ನು ಸಂಪರ್ಕಿಸುವ ಮೂಲಕ, ನಾವು ದೇಶವನ್ನು ಅಭಿವೃದ್ಧಿಗೊಳಿಸಬೇಕು. ಮತ್ತೊಮ್ಮೆ ದೆಹಲಿಯ ಜನರಿಗೆ, ಉತ್ತರ ಪ್ರದೇಶದ ಜನರಿಗೆ ಮತ್ತು ಒಂದು ರೀತಿಯಲ್ಲಿ ದೇಶವಾಸಿಗಳಿಗೆ, ಈ ಭವ್ಯವಾದ ಎಕ್ಸ್‌ಪ್ರೆಸ್‌ವೇಗಾಗಿ ನಾನು ಅನೇಕ, ಅನೇಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ಹೃತ್ಪೂರ್ವಕ ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2252181) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Punjabi , Gujarati , Telugu , Malayalam