ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತಾದ ಮಾಹಿತಿಗಳು


ಮಾನ್ಯವಾದ ಗುರುತಿನ ಚೀಟಿ ಆಧಾರದ ಮೇಲೆ ಎಲ್‌ ಪಿ ಜಿ ವಿತರಕರಲ್ಲಿ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌‌ ಗಳು ಲಭ್ಯ, ಯಾವುದೇ ವಿಳಾಸ ಪುರಾವೆ ಅಗತ್ಯವಿಲ್ಲ.

ನಿನ್ನೆ ಒಂದೇ ದಿನ 71,000 ಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌‌ ಗಳ ಮಾರಾಟ; ಮಾರ್ಚ್ 23 ರಿಂದ ಇದುವರೆಗೆ 5.7 ಲಕ್ಷ ವಿತರಣೆ

ಮಾರ್ಚ್ 2026 ರಿಂದ ಇದುವರೆಗೆ 3.5 ಲಕ್ಷಕ್ಕೂ ಹೆಚ್ಚು ಪಿ ಎನ್‌ ಜಿ ಸಂಪರ್ಕಗಳ ಅನಿಲೀಕರಣ

ಏಪ್ರಿಲ್ 6 ರಿಂದ ರಸಗೊಬ್ಬರ ಘಟಕಗಳಿಗೆ ಅನಿಲ ಪೂರೈಕೆಯು ಕಳೆದ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 90 ಕ್ಕೆ ಏರಿಕೆ

ಎಲ್‌ ಪಿ ಜಿ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯ ವಿರುದ್ಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಕೆ; ನಿನ್ನೆ ಒಂದೇ ದಿನ 3700 ಕ್ಕೂ ಹೆಚ್ಚು ಕಡೆ ದಾಳಿ

46,650 ಮೆಟ್ರಿಕ್ ಟನ್ ಎಲ್‌ ಪಿ ಜಿ ಸರಕನ್ನು ಹೊತ್ತ 'ಗ್ರೀನ್ ಸಾನ್ವಿ' ನೌಕೆಯು ಹಾರ್ಮುಜ್ ಜಲಸಂಧಿಯನ್ನು ದಾಟಿದೆ

ಇದುವರೆಗೆ 1,320 ಕ್ಕೂ ಹೆಚ್ಚು ಭಾರತೀಯ ನಾವಿಕರ ಸ್ವದೇಶ ವಾಪಸಾತಿಗೆ ಅನುಕೂಲ ಮಾಡಿಕೊಡಲಾಗಿದೆ

ಭಾರತೀಯ ಮಿಷನ್‌ ಗಳಿಂದ 24x7 ಸಹಾಯವಾಣಿ ಕಾರ್ಯಾಚರಣೆ; ಈ ಭಾಗದಲ್ಲಿರುವ ಭಾರತೀಯರಿಗೆ ಅಗತ್ಯ ನೆರವು ವಿಸ್ತರಣೆ

ಪ್ರಕಟಣಾ ದಿನಾಂಕ: 04 APR 2026 3:06PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಮುಖ ವಲಯಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇಂಧನ ಪೂರೈಕೆ, ಸಾಗರ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೀಡುತ್ತಿರುವ ಬೆಂಬಲದ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ:

ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ

ಹಾರ್ಮುಜ್ ಜಲಸಂಧಿಯ ಪ್ರಸ್ತುತ ಮುಚ್ಚುವಿಕೆಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಚಿವಾಲಯದ ಪ್ರಕಾರ:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ:

· ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ನಾಗರಿಕರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಗಾಬರಿಯಿಂದ ಖರೀದಿಸುವುದು ಹಾಗೂ ಎಲ್‌ ಪಿ ಜಿಯ ಅನಗತ್ಯ ಬುಕಿಂಗ್ ಮಾಡುವುದನ್ನು ತಪ್ಪಿಸಲು ಸೂಚಿಸಲಾಗಿದೆ.

· ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಸರಿಯಾದ ಮಾಹಿತಿಗಾಗಿ ಕೇವಲ ಅಧಿಕೃತ ಮೂಲಗಳನ್ನು ಅವಲಂಬಿಸಬೇಕು ಎಂದು ಸೂಚಿಸಲಾಗಿದೆ.

· ಎಲ್‌ ಪಿ ಜಿಗಾಗಿ ನಾಗರಿಕರು ಡಿಜಿಟಲ್ ಬುಕಿಂಗ್ ವಿಧಾನಗಳನ್ನು ಬಳಸಲು ಮತ್ತು ಅಗತ್ಯವಿದ್ದಲ್ಲಿ ಮಾತ್ರ ಎಲ್‌ ಪಿ ಜಿ ವಿತರಕರನ್ನು ಭೇಟಿ ಮಾಡಲು ವಿನಂತಿಸಲಾಗಿದೆ.

· ಸಾಧ್ಯವಿರುವ ಕಡೆಗಳಲ್ಲಿ ಪಿ ಎನ್‌ ಜಿ, ಇಂಡಕ್ಷನ್ ಮತ್ತು ಎಲೆಕ್ಟ್ರಿಕ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ.

· ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನ ಉಳಿತಾಯ ಮಾಡಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.

ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು:

· ಈ ಯುದ್ಧದ ಪರಿಸ್ಥಿತಿಯ ಹೊರತಾಗಿಯೂ, ಸರ್ಕಾರವು ದೇಶೀಯ ಎಲ್‌ ಪಿ ಜಿ ಮತ್ತು ಪಿ ಎನ್‌ ಜಿ ಗೆ ಅತ್ಯುನ್ನತ ಆದ್ಯತೆ ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

· ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸಂಸ್ಕರಣಾಗಾರಗಳ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳನ್ನು ಆದ್ಯತೆ ಮೇರೆಗೆ ನಿಗದಿಪಡಿಸುವುದು ಸೇರಿದೆ.

· ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.

· ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲರಿಗಳಿಗೆ ಆದೇಶ ನೀಡಿದೆ.

· ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಕಲ್ಪಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

· ಇತ್ತೀಚೆಗೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ (ಆಹಾರ ಮತ್ತು ನಾಗರಿಕ ಸರಬರಾಜು) ಇಂಧನ ಪೂರೈಕೆ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಕೈಗೊಂಡ ಕ್ರಮಗಳನ್ನು ಎತ್ತಿ ತೋರಿಸಿದರು. ರಾಜ್ಯಗಳು ಎಲ್‌ ಪಿ ಜಿ ವಿತರಣೆಗೆ, ವಿಶೇಷವಾಗಿ ಗೃಹಬಳಕೆ ಮತ್ತು ಅಗತ್ಯ ಅಗತ್ಯಗಳಿಗೆ ಆದ್ಯತೆ ನೀಡಲು ಮತ್ತು ದಾಸ್ತಾನು, ಅಕ್ರಮ ಮಾರಾಟ ಮತ್ತು ತಪ್ಪು ಮಾಹಿತಿಯ ವಿರುದ್ಧ ಕಠಿಣ ನಿಗಾ ವಹಿಸಲು ನಿರ್ದೇಶನ ನೀಡಲಾಯಿತು. ವಲಸೆ ಕಾರ್ಮಿಕರಿಗೆ 5 ಕೆಜಿ ಎಲ್‌ ಪಿ ಜಿ ಪೂರೈಕೆಯ ಕುರಿತಾದ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯಗಳು, ವಲಸಿಗರಿಗೆ ಬಾಧಿಸುವಂತಹ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಮತ್ತು ಪೂರೈಕೆ ಸ್ಥಿರವಾಗಿದೆ ಎಂದು ತಿಳಿಸಿವೆ.  ರಾಜ್ಯಗಳು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ತೈಲ ಕಂಪನಿಗಳೊಂದಿಗೆ ಸೇರಿ 5 ಕೆಜಿ ಎಲ್‌ ಪಿ ಜಿ ಸಿಲಿಂಡರ್‌‌ ಗಳ ಉದ್ದೇಶಿತ ವಿತರಣೆಯನ್ನು ನಿರ್ವಹಿಸುವ ಬಗ್ಗೆ ಪರಿಗಣಿಸಬಹುದು ಎಂದು ಕಾರ್ಯದರ್ಶಿಗಳು ತಿಳಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನ:

· ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ, ಯಾವುದೇ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗಿದೆ. ಭಾರತ ಸರ್ಕಾರವು ಇದನ್ನು ಅನೇಕ ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ ಮೂಲಕ ಎಲ್ಲಾ ರಾಜ್ಯಗಳಿಗೆ ಪುನರುಚ್ಚರಿಸಿದೆ.

· ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿಗಳಿಗೆ ಈ ಕೆಳಗಿನವುಗಳನ್ನು ಮಾಡಲು ವಿನಂತಿಸಲಾಗಿದೆ:

o ರಾಜ್ಯ/ಜಿಲ್ಲಾ ಮಟ್ಟದಲ್ಲಿ ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ಸಾಂಸ್ಥಿಕಗೊಳಿಸುವುದು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡುವುದು.

o ಮೀಸಲಾದ ನಿಯಂತ್ರಣ ಕೊಠಡಿಗಳು/ಸಹಾಯವಾಣಿಗಳನ್ನು ಸ್ಥಾಪಿಸುವುದು.

o ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಎದುರಿಸುವುದು.

o ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದು ಮತ್ತು ತೈಲ ಕಂಪನಿಗಳೊಂದಿಗೆ ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸುವುದು.

o ತಮ್ಮ ರಾಜ್ಯಗಳಲ್ಲಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆ ಆದೇಶಗಳನ್ನು ನೀಡುವುದು.

o ರಾಜ್ಯಗಳಿಗೆ ಹಂಚಿಕೆಯಾದ ಹೆಚ್ಚುವರಿ ಸೀಮೆಎಣ್ಣೆಗಾಗಿ ಹಂಚಿಕೆ ಆದೇಶಗಳನ್ನು ನೀಡುವುದು.

o ಸಿಜಿಡಿ ಮೂಲಸೌಕರ್ಯ ವಿಸ್ತರಣೆಯನ್ನು ವೇಗಗೊಳಿಸುವುದು, ಇದರಲ್ಲಿ RoW/RoU ಅನುಮತಿಗಳು ಮತ್ತು 24x7 ಕೆಲಸದ ಅನುಮತಿಗಳನ್ನು ತ್ವರಿತವಾಗಿ ನೀಡುವುದು ಸೇರಿದೆ.

o ಪಿ ಎನ್‌ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.

o ಪೆಟ್ರೋಲಿಯಂ ಸಚಿವಾಲಯದೊಂದಿಗೆ ಸಮನ್ವಯಕ್ಕಾಗಿ ಹಿರಿಯ ನೋಡಲ್ ಅಧಿಕಾರಿಗಳನ್ನು ನೇಮಿಸುವುದು.

· ಭಾರತ ಸರ್ಕಾರವು ಮಾರ್ಚ್ 27 ಮತ್ತು ಏಪ್ರಿಲ್ 2 ರಂದು ರಾಜ್ಯಗಳಿಗೆ ಪತ್ರ ಬರೆದು, ಸಾರ್ವಜನಿಕರೊಂದಿಗೆ ನಿರಂತರ ಸಂವಹನ ನಡೆಸಲು, ದೈನಂದಿನ ಪತ್ರಿಕಾಗೋಷ್ಠಿ ನಡೆಸಲು ಮತ್ತು ಎಲ್‌ ಪಿ ಜಿ ಲಭ್ಯತೆಯ ಬಗ್ಗೆ ವಿಶ್ವಾಸ ತುಂಬಲು ಸೂಚಿಸಿದೆ.

· ಪ್ರಸ್ತುತ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು:

· ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ರಾಜ್ಯಗಳಲ್ಲಿ ದಾಳಿಗಳು ಮುಂದುವರಿದಿವೆ. ನಿನ್ನೆ ಒಂದೇ ದಿನ 3700 ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ.

· ಸಾರ್ವಜನಿಕ ವಲಯದ ತೈಲ ಕಂಪನಿಗಳ ಅಧಿಕಾರಿಗಳಿಗೆ ಹಠಾತ್ ತಪಾಸಣೆಗಳನ್ನು ಬಲಪಡಿಸಲು ಸೂಚಿಸಲಾಗಿದೆ.

· ತೈಲ ಕಂಪನಿಗಳು ಇದುವರೆಗೆ ಎಲ್‌ ಪಿ ಜಿ ವಿತರಕರಿಗೆ 1000 ಶೋಕಾಸ್ ನೋಟಿಸ್‌ ಗಳನ್ನು ನೀಡಿವೆ. ಅಲ್ಲದೆ, 27 ವಿತರಕರನ್ನು ಇದುವರೆಗೆ ಅಮಾನತುಗೊಳಿಸಲಾಗಿದೆ.

ಎಲ್‌ ಪಿ ಜಿ ಪೂರೈಕೆ

ದೇಶೀಯ ಎಲ್ಪಿ ಜಿ ಪೂರೈಕೆ ಸ್ಥಿತಿ:

· ಸದ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಆದರೂ, ಎಲ್‌ ಪಿ ಜಿ ವಿತರಕರಲ್ಲಿ ಎಲ್ಲಿಯೂ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ.

· ನಿನ್ನೆ ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಶೇ. 95 ಕ್ಕೆ ಏರಿದೆ.

· ವಿತರಕರ ಮಟ್ಟದಲ್ಲಿ ಅಕ್ರಮ ವರ್ಗಾವಣೆಯನ್ನು ತಡೆಯಲು, ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಯನ್ನು ಫೆಬ್ರವರಿ 2026 ರಲ್ಲಿದ್ದ ಶೇ. 53 ರಿಂದ ನಿನ್ನೆ ಶೇ. 89 ಕ್ಕೆ ಹೆಚ್ಚಿಸಲಾಗಿದೆ.

· ನಿನ್ನೆ ಸುಮಾರು 51 ಲಕ್ಷ ದೇಶೀಯ ಎಲ್‌ ಪಿ ಜಿ ಸಿಲಿಂಡರ್‌‌ ಗಳನ್ನು ವಿತರಿಸಲಾಗಿದೆ.

ವಾಣಿಜ್ಯ ಎಲ್ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

· ಭಾರತ ಸರ್ಕಾರದ ಏಪ್ರಿಲ್ 1, 2026 ರ ಆದೇಶದಂತೆ, ಔಷಧೀಯ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಗಳಂತಹ ನಿರ್ಣಾಯಕ ವಲಯಗಳಿಗೆ ಅಗತ್ಯ ಕನಿಷ್ಠ ಪ್ರಮಾಣದ ಸಿ3 ಮತ್ತು ಸಿ4 ಸ್ಟ್ರೀಮ್‌ ಗಳನ್ನು ಲಭ್ಯವಾಗುವಂತೆ ಮಾಡಲು ಸಂಸ್ಕರಣಾ ಕಂಪನಿಗಳಿಗೆ ಅನುಮತಿ ನೀಡಲಾಗಿದೆ.

· ಒಟ್ಟು ವಾಣಿಜ್ಯ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇಕಡಾ 70 ರಷ್ಟು (ಶೇ. 10 ರಷ್ಟು ಸುಧಾರಣೆ ಆಧಾರಿತ ಸೇರಿ) ನಿಗದಿಪಡಿಸಲು ನಿರ್ಧರಿಸಲಾಗಿದೆ.

· ನಿನ್ನೆ 71,000 ಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌‌ ಗಳು ಮಾರಾಟವಾಗಿವೆ.

· ಮಾರ್ಚ್ 23 ರಿಂದ ಇದುವರೆಗೆ ಸುಮಾರು 5.7 ಲಕ್ಷ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌‌ ಗಳು ಮಾರಾಟವಾಗಿವೆ.

· ಈ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌‌ ಗಳು ಹತ್ತಿರದ ಎಲ್‌ ಪಿ ಜಿ ವಿತರಕರಲ್ಲಿ ಲಭ್ಯವಿದ್ದು, ಯಾವುದೇ ಮಾನ್ಯ ಗುರುತಿನ ಚೀಟಿ ತೋರಿಸಿ ಖರೀದಿಸಬಹುದು. ಯಾವುದೇ ವಿಳಾಸ ಪುರಾವೆಯ ಅಗತ್ಯವಿಲ್ಲ.

· ಐಒಸಿಎಲ್‌, ಎಚ್‌ ಪಿ ಸಿ ಎಲ್‌ ಮತ್ತು ಬಿಪಿಸಿಎಲ್‌ ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವಾಣಿಜ್ಯ ಎಲ್‌ ಪಿ ಜಿ ಮಾರಾಟದ ಯೋಜನೆಯನ್ನು ಅಂತಿಮಗೊಳಿಸುತ್ತದೆ.

· ಮಾರ್ಚ್ 14 ರಿಂದ ಇದುವರೆಗೆ ಒಟ್ಟು 72,047 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಮಾರಾಟವಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್‌ ಜಿ ವಿಸ್ತರಣೆ ಉಪಕ್ರಮಗಳು

· ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಮನೆಗಳಿಗೆ ಪೂರೈಸುವ ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ ಸಾರಿಗೆಗೆ ಶೇ. 100 ರಷ್ಟು ಪೂರೈಕೆ ನೀಡಲಾಗಿದೆ.

· ಜಾಲಕ್ಕೆ ಸಂಪರ್ಕ ಹೊಂದಿದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ ಶೇ. 80 ರಷ್ಟು ಪೂರೈಕೆ ಮಾಡಲಾಗುತ್ತಿದೆ.

· ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಘಟಕಗಳಿಗೆ ಅನಿಲ ಪೂರೈಕೆಯು ಈಗ ಕಳೆದ 6 ತಿಂಗಳ ಸರಾಸರಿ ಬಳಕೆಯ ಶೇ. 70-75 ರಷ್ಟಿದ್ದು ಸ್ಥಿರವಾಗಿದೆ. ಲಭ್ಯವಿರುವ ದಾಸ್ತಾನು ಮತ್ತು ನಿಗದಿತ ಎಲ್‌ ಎನ್‌ ಜಿ ಕಾರ್ಗೋ ಆಗಮನವನ್ನು ಪರಿಗಣಿಸಿ, ಏಪ್ರಿಲ್ 6, 2026 ರಿಂದ ಜಾರಿಗೆ ಬರುವಂತೆ ರಸಗೊಬ್ಬರ ಘಟಕಗಳಿಗೆ ಒಟ್ಟು ಅನಿಲ ಪೂರೈಕೆಯನ್ನು ಕಳೆದ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 90 ಕ್ಕೆ ಹೆಚ್ಚಿಸಲಾಗುವುದು. ಹೆಚ್ಚುವರಿಯಾಗಿ, ಸಿಜಿಡಿ ಜಾಲಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಏಪ್ರಿಲ್ 6 ರಿಂದ ಅನ್ವಯವಾಗುವಂತೆ ಇನ್ನು ಶೇ. 10 ರಷ್ಟು ಹೆಚ್ಚಿಸಲಾಗುವುದು.

· ರಸಗೊಬ್ಬರ ಘಟಕಗಳು ಸೇರಿದಂತೆ ಎಲ್ಲಾ ಕೈಗಾರಿಕಾ ಗ್ರಾಹಕರಿಗೆ ತಮ್ಮ ಹೆಚ್ಚುವರಿ ಅಗತ್ಯವನ್ನು 'ಸ್ಪಾಟ್' ಆಧಾರದ ಮೇಲೆ ನೀಡಲು ಸೂಚಿಸಲಾಗಿದೆ, ಇದರಿಂದ ಗ್ಯಾಸ್ ಮಾರ್ಕೆಟಿಂಗ್ ಕಂಪನಿಗಳು ಅದನ್ನು ವ್ಯವಸ್ಥೆಗೊಳಿಸಬಹುದು.

· ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಬಗ್ಗೆ ಇರುವ ಕಳವಳಗಳನ್ನು ಹೋಗಲಾಡಿಸಲು ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕ ನೀಡಲು ಆದ್ಯತೆ ನೀಡುವಂತೆ ಭಾರತ ಸರ್ಕಾರವು ಸಿಜಿಡಿ ಘಟಕಗಳಿಗೆ ಸಲಹೆ ನೀಡಿದೆ.

· ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ನಂತಹ ಸಿಜಿಡಿ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹಕಗಳನ್ನು ನೀಡಿವೆ.

· ಸಿಜಿಡಿ ಜಾಲದ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಿದೆ.

· ಭಾರತ ಸರ್ಕಾರವು ಮಾರ್ಚ್ 18, 2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಶೇ. 10 ರಷ್ಟು ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ನೀಡುವ ಪ್ರಸ್ತಾಪ ಮಾಡಿದೆ, ಆದರೆ ಅವರು ದೀರ್ಘಾವಧಿಯಲ್ಲಿ ಎಲ್‌ ಪಿ ಜಿಯಿಂದ ಪಿ ಎನ್‌ ಜಿಗೆ ಬದಲಾಗಲು ಸಹಾಯ ಮಾಡಬೇಕಾಗುತ್ತದೆ. ಪಿ ಎನ್‌ ಜಿ ವಿಸ್ತರಣೆಯ ಸುಧಾರಣಾ ಕ್ರಮಗಳ ಅಡಿಯಲ್ಲಿ ಈಗಾಗಲೇ 12 ರಾಜ್ಯಗಳು ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ. ಇದರ ಜೊತೆಗೆ, 1 ಕೇಂದ್ರಾಡಳಿತ ಪ್ರದೇಶದ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅದು ಪರಿಶೀಲನೆಯಲ್ಲಿದೆ.

· ಪೈಪ್‌ಲೈನ್ ಮೂಲಸೌಕರ್ಯವು ಹತ್ತಿರದಲ್ಲೇ ಲಭ್ಯವಿರುವ ಕಡೆಗಳಲ್ಲಿ ವಸತಿ ಶಾಲೆಗಳು ಮತ್ತು ಕಾಲೇಜುಗಳು, ಹಾಸ್ಟೆಲ್‌ ಗಳು, ಸಮುದಾಯ ಅಡುಗೆ ಮನೆಗಳು, ಅಂಗನವಾಡಿ ಅಡುಗೆ ಮನೆಗಳು ಇತ್ಯಾದಿಗಳಿಗೆ 5 ದಿನಗಳೊಳಗೆ ಪಿ ಎನ್‌ ಜಿ ಸಂಪರ್ಕ ಕಲ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಪಿ ಎನ್‌ ಜಿ ಆರ್‌ ಬಿ ಮಾರ್ಚ್ 23, 2026 ರ ಆದೇಶದ ಮೂಲಕ ಎಲ್ಲಾ ಸಿಜಿಡಿ ಘಟಕಗಳಿಗೆ ನಿರ್ದೇಶನ ನೀಡಿದೆ.

· ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾರ್ಚ್ 24, 2026 ರ ಪತ್ರದ ಮೂಲಕ ತಿಳಿಸಿರುವಂತೆ, ಅವರು ಸಿಜಿಡಿ ಮೂಲಸೌಕರ್ಯಕ್ಕಾಗಿ "ವೇಗವರ್ಧಿತ ಅನುಮೋದನೆ ಚೌಕಟ್ಟನ್ನು" ವಿಶೇಷ ಕ್ರಮವಾಗಿ 3 ತಿಂಗಳವರೆಗೆ ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪ್ರಕ್ರಿಯೆಗೊಳಿಸಲಾಗುತ್ತದೆ.

· ಭಾರತ ಸರ್ಕಾರವು ಮಾರ್ಚ್ 24, 2026 ರ ಗ್ಯಾಜೆಟ್ ಮೂಲಕ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ ಮತ್ತು ಇತರ ಸೌಲಭ್ಯಗಳ ಹಾಕುವಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ ಗಳನ್ನು ಹಾಕಲು ಮತ್ತು ವಿಸ್ತರಿಸಲು ಸುಗಮ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ. ಇದು ಅನುಮೋದನೆಗಳಲ್ಲಿನ ವಿಳಂಬ ಮತ್ತು ಭೂಮಿಯ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ವೇಗದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಇದು ಪಿ ಎನ್‌ ಜಿ ಜಾಲದ ಬೆಳವಣಿಗೆಯನ್ನು ವೇಗಗೊಳಿಸುವ, ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸುವ ಮತ್ತು ಸ್ವಚ್ಛ ಇಂಧನಗಳತ್ತ ಬದಲಾಗುವುದನ್ನು ಬೆಂಬಲಿಸುವ ನಿರೀಕ್ಷೆಯಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.

· ರಕ್ಷಣಾ ಸಚಿವಾಲಯವು ಮಾರ್ಚ್ 27, 2026 ರ ಪತ್ರದ ಮೂಲಕ ಅಲ್ಪಾವಧಿಯ ನೀತಿ ಮಾರ್ಪಾಡನ್ನು ಹೊರಡಿಸಿದೆ. ಇದು ಜೂನ್ 30, 2026 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ರಕ್ಷಣಾ ಪಡೆಯ ಎಲ್ಲಾ ವಸತಿ ಪ್ರದೇಶಗಳಲ್ಲಿ/ಘಟಕದ ಸಾಲುಗಳಲ್ಲಿ ಪಿ ಎನ್‌ ಜಿ ಮೂಲಸೌಕರ್ಯ ಅಳವಡಿಕೆಯನ್ನು ತ್ವರಿತಗೊಳಿಸುತ್ತದೆ.

· ಪಿ ಎನ್‌ ಜಿ ಆರ್‌ ಬಿ ಮನೆಗಳಿಗೆ ನೀಡುವ ಪಿ ಎನ್‌ ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಘಟಕಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಿ ಎನ್‌ ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು 'ರಾಷ್ಟ್ರೀಯ ಪಿ ಎನ್‌ ಜಿ ಅಭಿಯಾನ 2.0' (ರಾಷ್ಟ್ರೀಯ ಪಿ ಎನ್‌ ಜಿ ಅಭಿಯಾನ 2.0 - 01.01.2026 ರಿಂದ 31.03.2026) ಅನ್ನು ಈಗ ಜೂನ್ 30, 2026 ರವರೆಗೆ ವಿಸ್ತರಿಸಲಾಗಿದೆ.

· ಮಾರ್ಚ್ 2026 ರಿಂದ ಇದುವರೆಗೆ 3.5 ಲಕ್ಷಕ್ಕೂ ಹೆಚ್ಚು ಪಿ ಎನ್‌ ಜಿ ಸಂಪರ್ಕಗಳನ್ನು ಅನಿಲೀಕರಣಗೊಳಿಸಲಾಗಿದೆ. ಇದಲ್ಲದೆ, 3.8 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಕಚ್ಚಾ ತೈಲ ಸ್ಥಿತಿ ಮತ್ತು ಸಂಸ್ಕರಣಾಗಾರ ಕಾರ್ಯಾಚರಣೆಗಳು

· ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನು ಇದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಇದೆ.

· ದೇಶೀಯ ಬಳಕೆಗಾಗಿ ಸಂಸ್ಕರಣಾಗಾರಗಳಿಂದ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

· ಎಲ್ಲಾ ಚಿಲ್ಲರೆ ಮಾರಾಟ ಕೇಂದ್ರಗಳು (ಪೆಟ್ರೋಲ್ ಬಂಕ್‌ ಗಳು) ದೇಶಾದ್ಯಂತ ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.

· ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಅಸಹಜ ಏರಿಕೆಯಾಗಿದೆ. ಗ್ರಾಹಕರನ್ನು ಈ ಹೊರೆಯಿಂದ ರಕ್ಷಿಸಲು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸುವ ಮೂಲಕ ಈ ಹೊರೆಯ ಒಂದು ಭಾಗವನ್ನು ತಾನೇ ಭರಿಸಲು ನಿರ್ಧರಿಸಿದೆ.

· ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಡೀಸೆಲ್ ಮತ್ತು ಎಟಿಎಫ್ ರಫ್ತು ಮೇಲೆ ಸುಂಕ ವಿಧಿಸಲಾಗಿದೆ.

· ವದಂತಿಗಳಿಂದಾಗಿ ಕೆಲವು ಕಡೆ ಗಾಬರಿಯಿಂದ ಖರೀದಿಸುವ ಘಟನೆಗಳು ನಡೆದಿದ್ದು, ಜನಸಂದಣಿ ಕಂಡುಬಂದಿದೆ. ಆದರೆ ದೇಶದ ಎಲ್ಲಾ ಪೆಟ್ರೋಲ್ ಬಂಕ್‌ ಗಳಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ತಿಳಿಸಲಾಗಿದೆ.

· ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

· ವದಂತಿಗಳನ್ನು ನಂಬಬೇಡಿ ಎಂಬ ತನ್ನ ಸಲಹೆಯನ್ನು ಸರ್ಕಾರ ಪುನರುಚ್ಚರಿಸಿದೆ. ವದಂತಿಗಳನ್ನು ನಿಗ್ರಹಿಸುವ ಸಲುವಾಗಿ, ರಾಜ್ಯ ಸರ್ಕಾರಗಳು ಪತ್ರಿಕಾಗೋಷ್ಠಿಗಳ ಮೂಲಕ ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡುವಂತೆಯೂ ಕೋರಲಾಗಿದೆ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

· ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಯ ಹೊರತಾಗಿ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.

· ಭಾರತ ಸರ್ಕಾರವು 29.03.2026 ರ ದಿನಾಂಕದ ಗೆಜೆಟ್ ಅಧಿಸೂಚನೆಯ ಮೂಲಕ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸೀಮೆಎಣ್ಣೆ ಮುಕ್ತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕಾಗಿ ಪಿಡಿಎಸ್ ಸೀಮೆಎಣ್ಣೆ ವಿತರಣೆಗೆ ಅನುಕೂಲ ಮಾಡಿಕೊಟ್ಟಿದೆ –

o ಪ್ರತಿ ಜಿಲ್ಲೆಗೆ ಗರಿಷ್ಠ ಎರಡು ಸಾರ್ವಜನಿಕ ವಲಯದ ತೈಲ ಕಂಪನಿಗಳ (ಸೇವಾ ಕೇಂದ್ರಗಳಿಗೆ (ಆದ್ಯತೆಯ ಮೇರೆಗೆ ಕಂಪನಿ ಮಾಲೀಕತ್ವದ ಮತ್ತು ಕಂಪನಿ ಚಾಲಿತ) 5,000 ಲೀಟರ್‌ ಗಳವರೆಗೆ ಪಿಡಿಎಸ್ ಸೀಮೆಎಣ್ಣೆಯನ್ನು ದಾಸ್ತಾನು ಮಾಡಲು ಅನುಮತಿ ನೀಡಲಾಗಿದೆ.

o ಈ ಸಾರ್ವಜನಿಕ ವಲಯದ ತೈಲ ಕಂಪನಿಗಳ ಸೇವಾ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು ಗೊತ್ತುಪಡಿಸತಕ್ಕದ್ದು.

· 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಇದಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಸೀಮೆಎಣ್ಣೆಯ ಅವಶ್ಯಕತೆಯಿಲ್ಲ ಎಂದು ತಿಳಿಸಿವೆ.

ಸಾಗರ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನೌಕೆಗಳು ಮತ್ತು ನಾವಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಚಿವಾಲಯವು ಹೀಗೆ ತಿಳಿಸಿದೆ:

· ಬಂದರುಗಳು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಸಮುದ್ರ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಹಡಗುಗಳ ಚಲನೆ, ಬಂದರು ಕಾರ್ಯಾಚರಣೆಗಳು ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.

· ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

· ಎಲ್‌ ಪಿ ಜಿ ನೌಕೆ 'ಗ್ರೀನ್ ಸಾನ್ವಿ', 46,650 ಮೆಟ್ರಿಕ್ ಟನ್ ಎಲ್‌ ಪಿ ಜಿ ಸರಕು ಮತ್ತು 25 ನಾವಿಕರೊಂದಿಗೆ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ.

· ಒಟ್ಟು 17 ಭಾರತೀಯ ಧ್ವಜ ಹೊಂದಿರುವ ಹಡಗುಗಳು, 460 ಭಾರತೀಯ ನಾವಿಕರೊಂದಿಗೆ ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿದ್ದು; ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳೊಂದಿಗೆ ಸಮನ್ವಯ ಸಾಧಿಸಿ ಹಡಗು ನಿರ್ದೇಶನಾಲಯವು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

· ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು 24×7 ಕಾರ್ಯಾಚರಣೆಯಲ್ಲಿದೆ ಮತ್ತು ಇದು ಸಕ್ರಿಯಗೊಂಡಾಗಿನಿಂದ 5,015 ಕರೆಗಳನ್ನು ಮತ್ತು 10,425 ಇಮೇಲ್‌ ಗಳನ್ನು ನಿರ್ವಹಿಸಿದೆ; ಕಳೆದ 24 ಗಂಟೆಗಳಲ್ಲಿ 31 ಕರೆಗಳು ಮತ್ತು 129 ಇಮೇಲ್‌ ಗಳನ್ನು ಸ್ವೀಕರಿಸಲಾಗಿದೆ.

· ಹಡಗು ನಿರ್ದೇಶನಾಲಯವು ಇದುವರೆಗೆ 1,320 ಕ್ಕೂ ಹೆಚ್ಚು ಭಾರತೀಯ ನಾವಿಕರ ಸುರಕ್ಷಿತ ವಾಪಸಾತಿಯನ್ನು ಸುಗಮಗೊಳಿಸಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಕೊಲ್ಲಿಯಾದ್ಯಂತದ ವಿಮಾನ ನಿಲ್ದಾಣಗಳು ಮತ್ತು ವಿವಿಧ ಪ್ರಾದೇಶಿಕ ಸ್ಥಳಗಳಿಂದ ಮರಳಿದ 190 ನಾವಿಕರು ಸೇರಿದ್ದಾರೆ.

· ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿವೆ ಮತ್ತು ಯಾವುದೇ ದಟ್ಟಣೆ ವರದಿಯಾಗಿಲ್ಲ; ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಸಾಗರ ಮಂಡಳಿಗಳು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿವೆ.

· ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಸಾಗರ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್‌ಗಳು ಮತ್ತು ಸಾಗರ ವಲಯದ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.

ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ಈ ಪ್ರದೇಶದಾದ್ಯಂತ, ಭಾರತೀಯ ಮಿಷನ್‌ ಗಳು ಮತ್ತು ಪೋಸ್ಟ್‌ ಗಳು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿವೆ, ಜೊತೆಗೆ ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಿರಂತರ ಸಹಾಯವನ್ನು ನೀಡುತ್ತಿವೆ ಮತ್ತು ಅಗತ್ಯ ಸಲಹೆಗಳನ್ನು ನೀಡುತ್ತಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿರುವಂತೆ:

· ಇರಾನ್‌ ನಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರ ತಂಡವೊಂದು ಇಂದು ಅರ್ಮೇನಿಯಾ ಮಾರ್ಗವಾಗಿ ತಾಯ್ನಾಡಿಗೆ ಮರಳುತ್ತಿದೆ; ಅವರ ವಿಮಾನವು ಇಂದು ಸಂಜೆ ಭಾರತವನ್ನು ತಲುಪುವ ನಿರೀಕ್ಷೆಯಿದೆ.

· ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ.

· ಸಚಿವಾಲಯದಲ್ಲಿ ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯಾಚರಣೆಯಲ್ಲಿದೆ; ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಭಾರತೀಯ ಮಿಷನ್‌ ಗಳೊಂದಿಗೆ ನಿಯಮಿತ ಸಮನ್ವಯವನ್ನು ಕಾಯ್ದುಕೊಳ್ಳಲಾಗಿದೆ.

· ಮಿಷನ್‌ಗಳು ಮತ್ತು ಪೋಸ್ಟ್‌ ಗಳು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ನಡೆಸುತ್ತಿವೆ, ನಿಯಮಿತ ಸಲಹೆಗಳನ್ನು ನೀಡುತ್ತಿವೆ ಮತ್ತು ಭಾರತೀಯ ಸಮುದಾಯದ ಸಂಘಗಳು, ಕಂಪನಿಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ತೊಡಗಿಸಿಕೊಂಡಿವೆ.

· ವಾಯುಪ್ರದೇಶದ ನಿರ್ಬಂಧಗಳ ನಡುವೆಯೂ ಮಿಷನ್‌ ಗಳು ವೀಸಾ, ಕಾನ್ಸುಲರ್ ಸೇವೆಗಳು, ನೆರೆಯ ದೇಶಗಳ ಮೂಲಕ ಸಾಗಣೆ ಮತ್ತು ಅಗತ್ಯವಿರುವ ಕಡೆ ಲಾಜಿಸ್ಟಿಕಲ್ ಬೆಂಬಲವನ್ನು ಸುಗಮಗೊಳಿಸುತ್ತಿವೆ.

· ಭಾರೀಯ ವಿದ್ಯಾರ್ಥಿಗಳ ಕಲ್ಯಾಣವು ಆದ್ಯತೆಯಾಗಿ ಮುಂದುವರಿದಿದೆ; ಕಳವಳಗಳನ್ನು ಪರಿಹರಿಸಲು ಮಿಷನ್‌ ಗಳು ಸ್ಥಳೀಯ ಅಧಿಕಾರಿಗಳು, ಭಾರತೀಯ ಶಾಲೆಗಳು, ಮಂಡಳಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸುತ್ತಿವೆ.

· ಮಿಷನ್‌ ಗಳು ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾನ್ಸುಲರ್ ನೆರವು, ಕುಟುಂಬದೊಂದಿಗೆ ಸಂವಹನಕ್ಕೆ ಬೆಂಬಲ ಮತ್ತು ವಾಪಸಾತಿ ವಿನಂತಿಗಳನ್ನು ಸುಗಮಗೊಳಿಸುತ್ತಿವೆ.

· ವಿಮಾನ ಕಾರ್ಯಾಚರಣೆಗಳು ಸುಧಾರಿಸುತ್ತಿವೆ; ಫೆಬ್ರವರಿ 28 ರಿಂದ ಈ ಪ್ರದೇಶದಿಂದ ಸುಮಾರು 6,75,000 ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಿದ್ದಾರೆ.

o ಯುಎಇ: ಸೀಮಿತ ನಾನ್‌ ಷೆಡ್ಯೂಲ್ಡ್ ವಿಮಾನಗಳು ಮುಂದುವರಿದಿವೆ; ಭಾರತಕ್ಕೆ ಸುಮಾರು 90 ವಿಮಾನಗಳನ್ನು ನಿರೀಕ್ಷಿಸಲಾಗಿದೆ.

o ಸೌದಿ ಅರೇಬಿಯಾ ಮತ್ತು ಓಮನ್: ಬಹು ವಿಮಾನ ನಿಲ್ದಾಣಗಳಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

o ಖತಾರ್: ವಾಯುಪ್ರದೇಶದ ಭಾಗಶಃ ಮರು-ಆರಂಭದೊಂದಿಗೆ, ಇಂದು ಭಾರತಕ್ಕೆ ಸುಮಾರು 8-10 ವಿಮಾನಗಳನ್ನು ನಿರೀಕ್ಷಿಸಲಾಗಿದೆ.

o ಕುವೈತ್ ಮತ್ತು ಬಹ್ರೇನ್: ವಾಯುಪ್ರದೇಶವು ಮುಚ್ಚಲ್ಪಟ್ಟಿದೆ; ಆಯಾ ವಿಮಾನಯಾನ ಸಂಸ್ಥೆಗಳು ಸೌದಿ ಅರೇಬಿಯಾದ ದಮ್ಮಾಮ್ ಮೂಲಕ ವಿಮಾನಗಳನ್ನು ನಿರ್ವಹಿಸಿವೆ.

o ಇರಾನ್: ವಾಯುಪ್ರದೇಶದ ಮುಚ್ಚುವಿಕೆಯಿಂದಾಗಿ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.

o ಇಸ್ರೇಲ್: ನಿರ್ಬಂಧಗಳ ನಡುವೆ ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.

o ಇರಾಕ್: ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.

o ಕುವೈತ್ ಮತ್ತು ಬಹ್ರೇನ್ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಮೂಲಕ ಪ್ರಯಾಣವನ್ನು ಸುಗಮಗೊಳಿಸಲಾಗುತ್ತಿದೆ.

· ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದರು; ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಷನ್ ಪೂರ್ಣ ಪ್ರಮಾಣದ ಸಹಾಯವನ್ನು ನೀಡುತ್ತಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.

 

*****


(ಪ್ರಕಟಣೆ ಐ.ಡಿ.: 2248997) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Odia , Tamil , Telugu , Malayalam