ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಲೋಕಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಈ ಸಮಯದಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿ ಕಳವಳಕಾರಿಯಾಗಿದೆ: ಪ್ರಧಾನಮಂತ್ರಿ
ಕಳೆದ ಎರಡು-ಮೂರು ವಾರಗಳಲ್ಲಿ, ಶ್ರೀ ಜೈಶಂಕರ್ ಮತ್ತು ಶ್ರೀ ಹರ್ ದೀಪ್ ಪುರಿ ಅವರು ಈ ವಿಷಯದ ಬಗ್ಗೆ ಸದನಕ್ಕೆ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ: ಪ್ರಧಾನಮಂತ್ರಿ
ಈ ಬಿಕ್ಕಟ್ಟು ಈಗ ಮೂರು ವಾರಗಳಿಗೂ ಹೆಚ್ಚು ಕಾಲ ನಡೆಯುತ್ತಿದೆ, ಇದು ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನದ ಮೇಲೆ ಬಹಳ ಪ್ರತಿಕೂಲ ಪರಿಣಾಮ ಬೀರುತ್ತಿದೆ, ಇಡೀ ಜಗತ್ತು ಈ ಬಿಕ್ಕಟ್ಟಿನ ಶೀಘ್ರ ಪರಿಹಾರಕ್ಕಾಗಿ ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತಿದೆ: ಪ್ರಧಾನಮಂತ್ರಿ
ಸುಮಾರು ಒಂದು ಕೋಟಿ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ ಎಂಬ ಇನ್ನೊಂದು ಕಾರಣಕ್ಕಾಗಿ ಈ ಪ್ರದೇಶವು ನಮಗೆ ಮುಖ್ಯವಾಗಿದೆ: ಪ್ರಧಾನಮಂತ್ರಿ
ಈ ಸಮುದ್ರಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಲ್ಲಿ ಭಾರತೀಯ ಸಿಬ್ಬಂದಿಗಳ ಸಂಖ್ಯೆಯೂ ಬಹಳ ಹೆಚ್ಚಿದೆ: ಪ್ರಧಾನಮಂತ್ರಿ
ಈ ಹಲವಾರು ಕಾರಣಗಳಿಂದಾಗಿ, ಭಾರತದ ಕಳವಳಗಳು ಸಹಜವಾಗಿಯೇ ಹೆಚ್ಚಿವೆ, ಈ ಬಿಕ್ಕಟ್ಟಿನ ಬಗ್ಗೆ ಭಾರತದ ಸಂಸತ್ತಿನಿಂದ ಸರ್ವಾನುಮತದ ಮತ್ತು ಏಕೀಕೃತ ಧ್ವನಿಯು ಜಗತ್ತನ್ನು ತಲುಪುವುದು ಅತ್ಯಗತ್ಯ: ಪ್ರಧಾನಮಂತ್ರಿ
ಯುದ್ಧದಲ್ಲಿ ತೊಡಗಿರುವ ಮತ್ತು ಯುದ್ಧದಿಂದ ಬಾಧಿತವಾಗಿರುವ ದೇಶಗಳೊಂದಿಗೆ ಭಾರತವು ವ್ಯಾಪಕವಾದ ವ್ಯಾಪಾರ ಸಂಬಂಧಗಳನ್ನು ಹೊಂದಿದೆ, ಯುದ್ಧ ನಡೆಯುತ್ತಿರುವ ಪ್ರದೇಶವು ವಿಶ್ವದ ಇತರ ದೇಶಗಳೊಂದಿಗೆ ನಮ್ಮ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾಗಿದೆ: ಪ್ರಧಾನಮಂತ್ರಿ
ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳಂತಹ ಹೆಚ್ಚಿನ ಪ್ರಮಾಣದ ಅಗತ್ಯ ವಸ್ತುಗಳು ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬರುತ್ತವೆ, ಯುದ್ಧ ಪ್ರಾರಂಭವಾದಾಗಿನಿಂದ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವು ಅತ್ಯಂತ ಸವಾಲಿನದ್ದಾಗಿದೆ: ಪ್ರಧಾನಮಂತ್ರಿ
ಇದರ ಹೊರತಾಗಿಯೂ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಗೆ ಹೆಚ್ಚು ತೊಂದರೆಯಾಗದಂತೆ ಮತ್ತು ದೇಶದ ಸಾಮಾನ್ಯ ಕುಟುಂಬಗಳಿಗೆ ಕನಿಷ್ಠ ಅನಾನುಕೂಲವಾಗುವಂತೆ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ, ಇದು ನಮ್ಮ ಗಮನವಾಗಿದೆ: ಪ್ರಧಾನಮಂತ್ರಿ
ಮಾನವೀಯತೆಯ ಹಿತದೃಷ್ಟಿಯಿಂದ ಭಾರತವು ಯಾವಾಗಲೂ ಶಾಂತಿಯ ಪರವಾಗಿ ನಿಂತಿದೆ, ಸಂವಾದ ಮತ್ತು ರಾಜತಾಂತ್ರಿಕತೆ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಿದೆ: ಪ್ರಧಾನಮಂತ್ರಿ
ನಮ್ಮ ಪ್ರಯತ್ನಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮತ್ತು ಈ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿವೆ: ಪ್ರಧಾನಮಂತ್ರಿ
ಈ ಯುದ್ಧದಲ್ಲಿ ಯಾರೊಬ್ಬರ ಜೀವವನ್ನೂ ಪಣಕ್ಕಿಡುವುದು ಮಾನವೀಯತೆಯ ಹಿತಾಸಕ್ತಿಯಲ್ಲಿಲ್ಲ, ಎಲ್ಲಾ ಪಕ್ಷಗಳು ಆದಷ್ಟು ಬೇಗ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಪ್ರೋತ್ಸಾಹಿಸುವುದು ಭಾರತದ ಪ್ರಯತ್ನವಾಗಿದೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
23 MAR 2026 3:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದು ಭಾರತಕ್ಕೆ ಒಡ್ಡುತ್ತಿರುವ ವ್ಯಾಪಕ ಸವಾಲುಗಳ ಬಗ್ಗೆ ಪ್ರಸ್ತಾಪಿಸಿದರು. ಈ ಬಿಕ್ಕಟ್ಟು ಈಗ ಮೂರು ವಾರಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು, ಜಾಗತಿಕ ಆರ್ಥಿಕತೆ ಮತ್ತು ಮಾನವ ಜೀವಗಳ ಮೇಲೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇದರ ಪರಿಹಾರದ ತುರ್ತು ಅಗತ್ಯವನ್ನು ಒತ್ತಿಹೇಳಿದರು. ಪರಿಸ್ಥಿತಿಯ ಗಂಭೀರತೆಯನ್ನು ಉಲ್ಲೇಖಿಸುತ್ತಾ ಶ್ರೀ ಮೋದಿಯವರು, "ಈ ಬಿಕ್ಕಟ್ಟನ್ನು ಆದಷ್ಟು ಬೇಗ ಪರಿಹರಿಸುವಂತೆ ಇಡೀ ಜಗತ್ತು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತಿದೆ" ಎಂದು ಹೇಳಿದರು.
ಭಾರತವು ಎದುರಿಸುತ್ತಿರುವ ಸವಾಲುಗಳ ಸ್ವರೂಪದ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ಯುದ್ಧವು ದೊಡ್ಡ ಆರ್ಥಿಕ, ರಾಷ್ಟ್ರೀಯ ಭದ್ರತೆ ಮತ್ತು ಮಾನವೀಯ ಒತ್ತಡಗಳನ್ನು ಸೃಷ್ಟಿಸಿದೆ ಎಂದು ಸೂಚಿಸಿದರು. ಯುದ್ಧದಲ್ಲಿ ತೊಡಗಿರುವ ಮತ್ತು ಯುದ್ಧಪೀಡಿತ ದೇಶಗಳೊಂದಿಗೆ ಭಾರತವು ವ್ಯಾಪಕ ವ್ಯಾಪಾರ ಸಂಬಂಧಗಳನ್ನು ಹೊಂದಿದೆ, ಸಂಘರ್ಷದ ವಲಯವು ಪ್ರಮುಖ ವ್ಯಾಪಾರ ಮಾರ್ಗಗಳ ಮಧ್ಯದಲ್ಲಿದೆ ಮತ್ತು ಭಾರತದ ಕಚ್ಚಾ ತೈಲ ಹಾಗೂ ಅನಿಲ ಅಗತ್ಯಗಳ ದೊಡ್ಡ ಪಾಲು ಇದೇ ಪ್ರದೇಶದಿಂದ ಪೂರೈಕೆಯಾಗುತ್ತದೆ ಎಂಬುದನ್ನು ಅವರು ಗಮನಿಸಿದರು. ಕೊಲ್ಲಿ ದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಸುಮಾರು ಒಂದು ಕೋಟಿ ಭಾರತೀಯರು ಮತ್ತು ಆ ಭಾಗದ ವಾಣಿಜ್ಯ ಹಡಗುಗಳಲ್ಲಿರುವ ಗಣನೀಯ ಸಂಖ್ಯೆಯ ಭಾರತೀಯ ಸಿಬ್ಬಂದಿಗಳ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, "ಭಾರತದ ಆತಂಕಗಳು ಸಹಜವಾಗಿಯೇ ಹೆಚ್ಚಿವೆ, ಆದ್ದರಿಂದ ಈ ಬಿಕ್ಕಟ್ಟಿನ ಬಗ್ಗೆ ಭಾರತದ ಸಂಸತ್ತಿನಿಂದ ಜಗತ್ತಿಗೆ ಒಗ್ಗಟ್ಟಿನ ಮತ್ತು ಸರ್ವಾನುಮತದ ಧ್ವನಿ ಹೋಗುವುದು ಅತ್ಯಗತ್ಯ," ಎಂದು ಪ್ರತಿಪಾದಿಸಿದರು.
ಭಾರತೀಯ ಪ್ರಜೆಗಳನ್ನು ರಕ್ಷಿಸಲು ಸರ್ಕಾರವು ಕೈಗೊಂಡ ತ್ವರಿತ ಕ್ರಮಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಯುದ್ಧ ಪ್ರಾರಂಭವಾದಾಗಿನಿಂದ ಪೀಡಿತ ದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯನಿಗೂ ಅಗತ್ಯ ನೆರವು ನೀಡಲಾಗಿದೆ ಎಂದು ಸದನಕ್ಕೆ ತಿಳಿಸಿದರು. ತಾವೇ ಖುದ್ದಾಗಿ ಎರಡು ಹಂತಗಳಲ್ಲಿ ಬಹುತೇಕ ಪಶ್ಚಿಮ ಏಷ್ಯಾ ದೇಶಗಳ ರಾಷ್ಟ್ರದ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಅವರೆಲ್ಲರೂ ಭಾರತೀಯರ ಸುರಕ್ಷತೆಯ ಬಗ್ಗೆ ಸಂಪೂರ್ಣ ಭರವಸೆ ನೀಡಿದ್ದಾರೆ ಎಂದು ತಿಳಿಸಿದ ಶ್ರೀ ಮೋದಿಯವರು, "ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಲಾಗುತ್ತಿದೆ ಮತ್ತು ಇಂತಹ ಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುತ್ತಿದೆ," ಎಂದು ಹೇಳಿದರು.
ವಿದೇಶದಲ್ಲಿರುವ ಭಾರತೀಯರಿಗಾಗಿ ಸಕ್ರಿಯಗೊಳಿಸಲಾದ ಕಾನ್ಸುಲರ್ ಮತ್ತು ಸಾಂಸ್ಥಿಕ ಬೆಂಬಲ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರು ಮತ್ತಷ್ಟು ವಿವರಗಳನ್ನು ನೀಡಿದರು. ಪೀಡಿತ ದೇಶಗಳಲ್ಲಿರುವ ಎಲ್ಲಾ ಭಾರತೀಯ ಮಿಷನ್ ಗಳು ನಿರಂತರವಾಗಿ ಸಹಾಯ ಮಾಡುತ್ತಿವೆ, ನಿಯಮಿತವಾಗಿ ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ ಮತ್ತು ಭಾರತದಲ್ಲಿ ಹಾಗೂ ಇತರ ಪೀಡಿತ ದೇಶಗಳಲ್ಲಿ 24/7 ನಿಯಂತ್ರಣ ಕೊಠಡಿಗಳು ಮತ್ತು ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಗಮನಿಸಿದರು. ಸರ್ಕಾರದ ಸಕ್ರಿಯ ಸಂಪರ್ಕದ ಬಗ್ಗೆ ಒತ್ತಿಹೇಳಿದ ಪ್ರಧಾನಮಂತ್ರಿ ಮೋದಿ ಅವರು, "ಈ ಕಾರ್ಯವಿಧಾನಗಳ ಮೂಲಕ, ಭಾರತೀಯ ಕಾರ್ಮಿಕರಾಗಿರಲಿ ಅಥವಾ ಪ್ರವಾಸಿಗರಾಗಿರಲಿ, ಬಾಧಿತರಾದ ಎಲ್ಲರಿಗೂ ತಕ್ಷಣದ ಮಾಹಿತಿಯನ್ನು ಒದಗಿಸಲಾಗುತ್ತಿದೆ," ಎಂದು ತಿಳಿಸಿದರು.
ಸ್ಥಳಾಂತರದ ಪ್ರಯತ್ನದ ಪ್ರಮಾಣವನ್ನು ಉಲ್ಲೇಖಿಸುತ್ತಾ, ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 3,75,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ಪ್ರಧಾನಮಂತ್ರಿಯವರು ಸದನಕ್ಕೆ ತಿಳಿಸಿದರು. ಇದರಲ್ಲಿ ಇರಾನ್ ನಿಂದಲೇ ಬಂದ ಸುಮಾರು 1,000 ಭಾರತೀಯರು ಸೇರಿದ್ದಾರೆ ಮತ್ತು ಅವರಲ್ಲಿ 700ಕ್ಕೂ ಹೆಚ್ಚು ಮಂದಿ ಯುವ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯ ಶಾಲೆಗಳಲ್ಲಿ ನಿಗದಿಯಾಗಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು CBSE ರದ್ದುಗೊಳಿಸಿದೆ ಮತ್ತು ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ಸರ್ಕಾರದ ಧೋರಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ ಶ್ರೀ ಮೋದಿಯವರು, "ಸರ್ಕಾರವು ಸೂಕ್ಷ್ಮವಾಗಿದೆ, ಜಾಗರೂಕವಾಗಿದೆ ಮತ್ತು ಪ್ರತಿ ಸಹಾಯವನ್ನು ನೀಡಲು ಸಿದ್ಧವಾಗಿದೆ," ಎಂದು ಪ್ರತಿಪಾದಿಸಿದರು.
ಇಂಧನ ಪೂರೈಕೆಯ ನಿರ್ಣಾಯಕ ಪ್ರಶ್ನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೆಚ್ಚಿನ ಪ್ರಮಾಣದ ಕಚ್ಚಾ ತೈಲ, ಅನಿಲ, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳು ಹಾರ್ಮುಜ್ ಜಲಸಂಧಿಯ ಮೂಲಕ ಭಾರತವನ್ನು ತಲುಪುತ್ತವೆ ಮತ್ತು ಯುದ್ಧದ ನಂತರ ಈ ಜಲಸಂಧಿಯ ಮೂಲಕ ಹಡಗು ಸಂಚಾರವು ಅತ್ಯಂತ ಸವಾಲಿನದ್ದಾಗಿದೆ ಎಂದು ಒಪ್ಪಿಕೊಂಡರು. ಸಾಮಾನ್ಯ ಕುಟುಂಬಗಳನ್ನು ಸಂಕಷ್ಟದಿಂದ ರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಒತ್ತಿಹೇಳಿದ ಅವರು, ಎಲ್‌ಪಿಜಿ (LPG) ಯನ್ನು ದೇಶೀಯ ಬಳಕೆಗೆ ಆದ್ಯತೆ ನೀಡುವುದು ಮತ್ತು ಅದರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವಂತಹ ಕ್ರಮಗಳನ್ನು ಉಲ್ಲೇಖಿಸುತ್ತಾ, "ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಿರಂತರ ಕೆಲಸ ಮಾಡಲಾಗಿದೆ," ಎಂದು ಶ್ರೀ ಮೋದಿಯವರು ತಿಳಿಸಿದರು.
ಕಳೆದ ದಶಕದಲ್ಲಿ ಅನುಸರಿಸಿದ ಇಂಧನ ವೈವಿಧ್ಯೀಕರಣದ ಕಾರ್ಯತಂತ್ರವು ಪ್ರಸ್ತುತ ಬಿಕ್ಕಟ್ಟಿನಲ್ಲಿ ತನ್ನ ಮೌಲ್ಯವನ್ನು ಹೇಗೆ ಸಾಬೀತುಪಡಿಸಿದೆ ಎಂಬುದನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಕಳೆದ 11 ವರ್ಷಗಳಲ್ಲಿ ಭಾರತವು ತನ್ನ ಇಂಧನ ಆಮದು ಮೂಲಗಳನ್ನು 27 ದೇಶಗಳಿಂದ 41 ದೇಶಗಳಿಗೆ ವಿಸ್ತರಿಸಿದೆ, ಆ ಮೂಲಕ ಯಾವುದೇ ಒಂದು ಪ್ರದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ಅವರು ಸದನಕ್ಕೆ ತಿಳಿಸಿದರು. ಈ ಧೋರಣೆಯ ದೂರದೃಷ್ಟಿಯನ್ನು ಎತ್ತಿ ತೋರಿಸುತ್ತಾ ಶ್ರೀ ಮೋದಿಯವರು, "ಇಂದಿನ ಸಂದರ್ಭಗಳಲ್ಲಿ, ಇಂಧನ ಭದ್ರತೆಗೆ ಸಂಬಂಧಿಸಿದಂತೆ ಕಳೆದ ದಶಕದಲ್ಲಿ ತೆಗೆದುಕೊಂಡ ಕ್ರಮಗಳು ಇನ್ನಷ್ಟು ಪ್ರಸ್ತುತವಾಗಿವೆ," ಎಂದು ಹೇಳಿದರು.
ಕಾರ್ಯತಂತ್ರದ ಮೀಸಲು ವಿಷಯದ ಕುರಿತು ಮಾತನಾಡುತ್ತಾ, ಇಂತಹ ಬಿಕ್ಕಟ್ಟಿನ ಸಮಯಗಳಿಗಾಗಿಯೇ ಭಾರತವು ಕಚ್ಚಾ ತೈಲದ ಸಂಗ್ರಹಣೆಗೆ ಆದ್ಯತೆ ನೀಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತವು ಇಂದು 53 ಲಕ್ಷ ಮೆಟ್ರಿಕ್ ಟನ್ ಗಳಿಗಿಂತ ಹೆಚ್ಚು ತೈಲದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲನ್ನು ಹೊಂದಿದೆ ಮತ್ತು ತೈಲ ಕಂಪನಿಗಳು ಹೊಂದಿರುವ ಪ್ರತ್ಯೇಕ ಮೀಸಲುಗಳ ಹೊರತಾಗಿ, 65 ಲಕ್ಷ ಮೆಟ್ರಿಕ್ ಟನ್ ಗಳಿಗಿಂತ ಹೆಚ್ಚಿನ ಮೀಸಲುಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು. ಭಾರತದ ಸಂಸ್ಕರಣಾ ವ್ಯವಸ್ಥೆಯ ಒಟ್ಟಾರೆ ಸುಧಾರಣೆಯನ್ನು ಉಲ್ಲೇಖಿಸುತ್ತಾ ಪ್ರಧಾನಮಂತ್ರಿ ಮೋದಿ ಅವರು, "ಕಳೆದ 11 ವರ್ಷಗಳಲ್ಲಿ ನಮ್ಮ ಸಂಸ್ಕರಣಾ ಸಾಮರ್ಥ್ಯದಲ್ಲಿಯೂ ಗಮನಾರ್ಹ ಹೆಚ್ಚಳವಾಗಿದೆ," ಎಂದು ಪ್ರತಿಪಾದಿಸಿದರು.
ಭಾರತಕ್ಕೆ ತೈಲ, ಅನಿಲ, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುವ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ಪೂರೈಕೆದಾರರೊಂದಿಗೆ ಸರ್ಕಾರದ ಸಕ್ರಿಯ ತೊಡಗಿಸಿಕೊಳ್ಳುವಿಕೆ ಮತ್ತು ಕೊಲ್ಲಿಯ ಹಡಗು ಮಾರ್ಗಗಳ ಮೇಲೆ ವಹಿಸಿರುವ ತೀವ್ರ ನಿಗಾದ ಬಗ್ಗೆ ಪ್ರಧಾನಮಂತ್ರಿಯವರು ವಿವರ ನೀಡಿದರು. ಕಡಲ ಕಾರಿಡಾರ್ಗಳನ್ನು ಸುರಕ್ಷಿತವಾಗಿರಿಸಲು ಎಲ್ಲಾ ಜಾಗತಿಕ ಪಾಲುದಾರರೊಂದಿಗೆ ನಿರಂತರ ಸಂವಾದ ನಡೆಸುತ್ತಿರುವುದನ್ನು ಉಲ್ಲೇಖಿಸುತ್ತಾ ಶ್ರೀ ಮೋದಿಯವರು, "ಇಂತಹ ಪ್ರಯತ್ನಗಳಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ನಮ್ಮ ಹಲವಾರು ಹಡಗುಗಳು ಸಹ ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಬಂದಿವೆ," ಎಂದು ತಿಳಿಸಿದರು.
ಭಾರತದ ದೇಶೀಯ ಇಂಧನ ರೂಪಾಂತರದ ವಿಷಯಕ್ಕೆ ಬರುವುದಾದರೆ, ಪ್ರಧಾನಮಂತ್ರಿಯವರು ಒಂದು ದಶಕದ ಹಿಂದೆ ಕೇವಲ ಶೇಕಡಾ 1–1.5 ರಷ್ಟಿದ್ದ ಎಥನಾಲ್ ಮಿಶ್ರಣವು ಇಂದು ಸುಮಾರು ಶೇಕಡಾ 20 ಕ್ಕೆ ಏರಿರುವ ಅಸಾಧಾರಣ ಪ್ರಗತಿಯನ್ನು ಉಲ್ಲೇಖಿಸಿದರು, ಇದು ತೈಲ ಆಮದನ್ನು ವರ್ಷಕ್ಕೆ ಸುಮಾರು ನಾಲ್ಕುವರೆ ಕೋಟಿ ಬ್ಯಾರೆಲ್ ಗಳಷ್ಟು ಕಡಿಮೆ ಮಾಡಿದೆ. ವಾರ್ಷಿಕವಾಗಿ ಸುಮಾರು 180 ಕೋಟಿ ಲೀಟರ್ ಡೀಸೆಲ್ ಉಳಿಸಿದ ರೈಲ್ವೆ ವಿದ್ಯುದ್ದೀಕರಣ, 2014 ರಲ್ಲಿ 250 ಕಿ.ಮೀ ಗಿಂತ ಕಡಿಮೆ ಇದ್ದ ಮೆಟ್ರೋ ಜಾಲ ಇಂದು ಸುಮಾರು 1,100 ಕಿ.ಮೀ ಗೆ ವಿಸ್ತರಣೆಯಾಗಿರುವುದು ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ 15,000 ಎಲೆಕ್ಟ್ರಿಕ್ ಬಸ್ ಗಳನ್ನು ನೀಡಿರುವುದನ್ನು ಅವರು ಉಲ್ಲೇಖಿಸಿದರು. ಭಾರತದ ಇಂಧನ ಭವಿಷ್ಯದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಮೋದಿ ಅವರು, "ಪರ್ಯಾಯ ಇಂಧನಗಳ ಮೇಲೆ ಇಂದು ನಡೆಯುತ್ತಿರುವ ಕೆಲಸದ ಪ್ರಮಾಣವು ಭಾರತದ ಭವಿಷ್ಯವನ್ನು ಇನ್ನಷ್ಟು ಸುರಕ್ಷಿತವಾಗಿಸುತ್ತದೆ," ಎಂದು ಪ್ರತಿಪಾದಿಸಿದರು.
ವ್ಯಾಪಕ ಆರ್ಥಿಕ ಪರಿಣಾಮಗಳ ಕುರಿತು ಮಾತನಾಡುತ್ತಾ, ಇಂಧನವು ಆಧುನಿಕ ಆರ್ಥಿಕತೆಯ ಬೆನ್ನೆಲುಬು ಮತ್ತು ಪಶ್ಚಿಮ ಏಷ್ಯಾವು ಜಾಗತಿಕ ಇಂಧನ ಅಗತ್ಯಗಳಿಗೆ ಪ್ರಮುಖ ಮೂಲವಾಗಿದೆ, ಇದು ಪ್ರಸ್ತುತ ಬಿಕ್ಕಟ್ಟನ್ನು ವಿಶ್ವದಾದ್ಯಂತದ ಆರ್ಥಿಕತೆಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದು ಪ್ರಧಾನಮಂತ್ರಿಯವರು ಗುರುತಿಸಿದರು. ಸದೃಢವಾದ ಆರ್ಥಿಕ ಮೂಲಭೂತ ಅಂಶಗಳು, ಕ್ಷೇತ್ರ-ವಾರು ಪಾಲುದಾರರ ಸಮಾಲೋಚನೆಗಳು ಮತ್ತು ಭಾರತದ ಆಮದು-ರಫ್ತು ಸರಪಳಿಯಲ್ಲಿನ ಪ್ರತಿಯೊಂದು ತೊಂದರೆಯನ್ನು ನಿರ್ಣಯಿಸಲು ಮತ್ತು ಪರಿಹರಿಸಲು ಪ್ರತಿದಿನ ಸಭೆ ಸೇರುವ ಮೀಸಲಾದ ಅಂತರ-ಸಚಿವಾಲಯ ಗುಂಪಿನ ಬೆಂಬಲದೊಂದಿಗೆ ಸರ್ಕಾರವು ಸಮಗ್ರ ಅಲ್ಪಾವಧಿಯ, ಮಧ್ಯಮ ಅವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು. ಆಶಾವಾದ ವ್ಯಕ್ತಪಡಿಸಿದ ಶ್ರೀ ಮೋದಿಯವರು, "ಸರ್ಕಾರ ಮತ್ತು ಉದ್ಯಮದ ಜಂಟಿ ಪ್ರಯತ್ನಗಳ ಮೂಲಕ ನಾವು ಈ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ," ಎಂದು ದೃಢಪಡಿಸಿದರು.
ಕೃಷಿಯ ಮೇಲೆ ಯುದ್ಧದ ಪರಿಣಾಮದ ಕುರಿತು ಮಾತನಾಡುತ್ತಾ, ಭಾರತದ ರೈತರು ಸಮರ್ಪಕ ಆಹಾರಧಾನ್ಯದ ದಾಸ್ತಾನನ್ನು ಖಚಿತಪಡಿಸಿದ್ದಾರೆ ಮತ್ತು ಸರ್ಕಾರವು ಸರಿಯಾದ ಖಾರೀಫ್ ಬಿತ್ತನೆಗೆ ಅನುಕೂಲ ಮಾಡಿಕೊಡಲು ಕೆಲಸ ಮಾಡುತ್ತಿದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ದೃಢವಾದ ತುರ್ತು ಆಹಾರ ವ್ಯವಸ್ಥೆಗಳನ್ನು ನಿರ್ಮಿಸಿದೆ ಎಂದು ಪ್ರಧಾನಮಂತ್ರಿಯವರು ಸದನಕ್ಕೆ ಭರವಸೆ ನೀಡಿದರು. ಕೋವಿಡ್-19 ಸಾಂಕ್ರಾಮಿಕ ಮತ್ತು ಅದಕ್ಕೆ ಸಂಬಂಧಿಸಿದ ಜಾಗತಿಕ ಪೂರೈಕೆ ಸರಪಳಿ ಅಡೆತಡೆಗಳ ಸಮಯದಲ್ಲಿಯೂ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಯೂರಿಯಾ ಬೆಲೆಗಳು ಪ್ರತಿ ಚೀಲಕ್ಕೆ 3,000 ರೂ.ಗೆ ಏರಿದಾಗ, ಭಾರತದ ರೈತರಿಗೆ ಅದೇ ಚೀಲವು 300 ರೂ.ಗಿಂತ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಸರ್ಕಾರವು ಖಚಿತಪಡಿಸಿತು ಎಂಬುದನ್ನು ನೆನಪಿಸಿಕೊಳ್ಳುತ್ತಾ ಶ್ರೀ ಮೋದಿಯವರು, "ಹಿಂದೆಯೂ ಸಹ, ನಮ್ಮ ಸರ್ಕಾರವು ಜಾಗತಿಕ ಬಿಕ್ಕಟ್ಟುಗಳ ಹೊರೆಯನ್ನು ರೈತರ ಮೇಲೆ ಬೀಳಲು ಬಿಡಲಿಲ್ಲ," ಎಂದು ಹೇಳಿದರು.
ಭಾರತೀಯ ಕೃಷಿಯನ್ನು ಬಾಹ್ಯ ಆಘಾತಗಳಿಂದ ರಕ್ಷಿಸಲು ತೆಗೆದುಕೊಂಡ ರಚನಾತ್ಮಕ ಕ್ರಮಗಳ ಬಗ್ಗೆ ವಿವರಿಸುತ್ತಾ, ಕಳೆದ ದಶಕದಲ್ಲಿ ಆರು ಹೊಸ ಯೂರಿಯಾ ಸ್ಥಾವರಗಳನ್ನು ಕಾರ್ಯಾರಂಭ ಮಾಡಲಾಗಿದೆ, ಇದು ವಾರ್ಷಿಕ ಉತ್ಪಾದನಾ ಸಾಮರ್ಥ್ಯಕ್ಕೆ 76 ಲಕ್ಷ ಮೆಟ್ರಿಕ್ ಟನ್ ಗಿಂತಲೂ ಹೆಚ್ಚಿನದನ್ನು ಸೇರಿಸಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಹಾಗೆಯೇ ಡಿಎಪಿ ಮತ್ತು ಎನ್ಪಿಕೆಎಸ್ ರಸಗೊಬ್ಬರಗಳ ದೇಶೀಯ ಉತ್ಪಾದನೆಯನ್ನು ಸುಮಾರು 50 ಲಕ್ಷ ಮೆಟ್ರಿಕ್ ಟನ್ಗಳಷ್ಟು ಹೆಚ್ಚಿಸಲಾಗಿದೆ ಮತ್ತು ರಸಗೊಬ್ಬರ ಆಮದು ಮೂಲಗಳನ್ನು ವೈವಿಧ್ಯಗೊಳಿಸಲಾಗಿದೆ ಎಂದು ಅವರು ಗಮನಿಸಿದರು. ಈ ಪ್ರಯತ್ನಗಳ ವ್ಯಾಪ್ತಿಯನ್ನು ಒತ್ತಿಹೇಳುತ್ತಾ ಪ್ರಧಾನಮಂತ್ರಿ ಮೋದಿ ಅವರು, "ನಾವು ತೈಲ ಮತ್ತು ಅನಿಲ ಆಮದುಗಳನ್ನು ವೈವಿಧ್ಯಗೊಳಿಸಿದಂತೆಯೇ, ಡಿ ಎ ಪಿ ಮತ್ತು ಎನ್ ಪಿ ಕೆ ಎಸ್ ಆಮದಿಗಾಗಿ ನಮ್ಮ ಆಯ್ಕೆಗಳನ್ನು ಸಹ ವಿಸ್ತರಿಸಿದ್ದೇವೆ," ಎಂದು ತಿಳಿಸಿದರು.
ಮೇಡ್-ಇನ್-ಇಂಡಿಯಾ ನ್ಯಾನೋ ಯೂರಿಯಾದಂತಹ ನಾವೀನ್ಯತೆಗಳು, ನೈಸರ್ಗಿಕ ಕೃಷಿಯ ಉತ್ತೇಜನ ಮತ್ತು ರೈತರ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪಿಎಂ-ಕುಸುಮ್ ಯೋಜನೆಯಡಿ 22 ಲಕ್ಷಕ್ಕೂ ಹೆಚ್ಚು ಸೌರ ಪಂಪ್ ಗಳ ವಿತರಣೆಯ ಮೂಲಕ ರೈತರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.
ನಡೆಯುತ್ತಿರುವ ಯುದ್ಧದ ನಡುವೆ ಹೆಚ್ಚುತ್ತಿರುವ ಬೇಸಿಗೆಯ ವಿದ್ಯುತ್ ಬೇಡಿಕೆಯ ಸವಾಲನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶಾದ್ಯಂತದ ಎಲ್ಲಾ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಲಭ್ಯವಿದೆ ಮತ್ತು ಭಾರತವು ಸತತ ಎರಡನೇ ವರ್ಷವೂ 100 ಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸುವ ದಾಖಲೆ ಬರೆದಿದೆ ಎಂದು ಸದನಕ್ಕೆ ತಿಳಿಸಿದರು. ವಿದ್ಯುತ್ ಉತ್ಪಾದನೆಯಿಂದ ಹಿಡಿದು ವಿದ್ಯುತ್ ಪೂರೈಕೆಯವರೆಗಿನ ಎಲ್ಲಾ ವ್ಯವಸ್ಥೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಕಳೆದ ದಶಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಾಧಿಸಿದ ಪರಿವರ್ತನಾತ್ಮಕ ಪ್ರಗತಿಯಿಂದ ಸರ್ಕಾರದ ಸನ್ನದ್ಧತೆಯು ಗಮನಾರ್ಹವಾಗಿ ಬಲಗೊಂಡಿದೆ ಎಂದು ಅವರು ಹೈಲೈಟ್ ಮಾಡಿದರು. ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅರ್ಧದಷ್ಟು ಭಾಗವು ಈಗ ನವೀಕರಿಸಬಹುದಾದ ಮೂಲಗಳಿಂದ ಬರುತ್ತಿದೆ ಮತ್ತು ದೇಶದ ಒಟ್ಟು ನವೀಕರಿಸಬಹುದಾದ ಸಾಮರ್ಥ್ಯವು 250 ಗಿಗಾವಾಟ್ ಗಳ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ ಎಂದು ಅವರು ತಿಳಿಸಿದರು. ಕಳೆದ 11 ವರ್ಷಗಳಲ್ಲಿ ಸೌರ ವಿದ್ಯುತ್ ಸಾಮರ್ಥ್ಯವೊಂದೇ ಸುಮಾರು 3 ಗಿಗಾವಾಟ್ ನಿಂದ 140 ಗಿಗಾವಾಟ್ ಗೆ ಏರಿದೆ, ಸುಮಾರು 40 ಲಕ್ಷ ರೂಫ್ ಟಾಪ್ ಸೋಲಾರ್ ಅಳವಡಿಕೆಗಳನ್ನು ಮಾಡಲಾಗಿದೆ, ಗೋಬರ್ಧನ್ ಯೋಜನೆಯಡಿ 200 ಸಂಕುಚಿತ ಬಯೋಗ್ಯಾಸ್ ಸ್ಥಾವರಗಳು ಈಗ ಕಾರ್ಯನಿರ್ವಹಿಸುತ್ತಿವೆ ಮತ್ತು ಪರಮಾಣು ಇಂಧನ ಉತ್ಪಾದನೆಯನ್ನು ಉತ್ತೇಜಿಸಲಾಗುತ್ತಿದೆ ಹಾಗೂ ಹೊಸದಾಗಿ ಅನುಮೋದಿಸಲಾದ ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 1,500 ಮೆಗಾವಾಟ್ ಸಾಮರ್ಥ್ಯವನ್ನು ಸೇರಿಸಲಿದೆ ಎಂದು ಹೇಳಿದ ಶ್ರೀ ಮೋದಿಯವರು, "ಈ ಎಲ್ಲಾ ಪ್ರಯತ್ನಗಳು ಇಂದು ದೇಶಕ್ಕೆ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿವೆ ಮತ್ತು ಅವು ಭಾರತದ ಇಂಧನ ಭವಿಷ್ಯವನ್ನು ಇನ್ನಷ್ಟು ಸುರಕ್ಷಿತವಾಗಿಸುತ್ತವೆ, " ಎಂದು ಪ್ರತಿಪಾದಿಸಿದರು.
ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಭಾರತದ ರಾಜತಾಂತ್ರಿಕ ಪ್ರತಿಕ್ರಿಯೆಯ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡುತ್ತಾ, ಭಾರತದ ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿದೆ, ಅದು ಆಳವಾದ ಕಳವಳ ವ್ಯಕ್ತಪಡಿಸುವುದು, ಸಂಘರ್ಷವನ್ನು ತಗ್ಗಿಸಲು ಪ್ರತಿಪಾದಿಸುವುದು ಮತ್ತು ನಾಗರಿಕರ ಮೇಲೆ ಹಾಗೂ ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ವಿರೋಧಿಸುವುದಾಗಿದೆ ಎಂದು ತಿಳಿಸಿದರು. ತಾವು ಪಶ್ಚಿಮ ಏಷ್ಯಾದ ಎಲ್ಲಾ ಸಂಬಂಧಿತ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂಘರ್ಷವನ್ನು ಕೊನೆಗೊಳಿಸಲು ಅವರನ್ನು ಒತ್ತಾಯಿಸಿರುವುದಾಗಿ ಸದನಕ್ಕೆ ತಿಳಿಸಿದ ಪ್ರಧಾನಮಂತ್ರಿ ಮೋದಿ ಅವರು, ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳ ತಡೆಯುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದರು. "ಯುದ್ಧದ ವಾತಾವರಣದ ನಡುವೆಯೂ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತವು ರಾಜತಾಂತ್ರಿಕತೆಯ ಮೂಲಕ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ," ಎಂದು ಅವರು ಪ್ರತಿಪಾದಿಸಿದರು.
ಮಾನವೀಯತೆ ಮತ್ತು ಶಾಂತಿಯ ಬಗ್ಗೆ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಸಂವಾದ ಮತ್ತು ರಾಜತಾಂತ್ರಿಕತೆ ಮಾತ್ರ ಪರಿಹಾರದ ಏಕೈಕ ಮಾರ್ಗವಾಗಿದೆ ಎಂದು ಒತ್ತಿ ಹೇಳಿದರು. ಭಾರತದ ಪ್ರತಿಯೊಂದು ಪ್ರಯತ್ನವೂ ಸಂಘರ್ಷವನ್ನು ಕಡಿಮೆ ಮಾಡುವ ಮತ್ತು ಹಗೆತನವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಹಾಗೂ ಈ ಯುದ್ಧದಲ್ಲಿ ಯಾವುದೇ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾನವೀಯತೆಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಗಮನಿಸಿದ ಶ್ರೀ ಮೋದಿಯವರು, "ಎಲ್ಲಾ ಪಕ್ಷಗಳು ಆದಷ್ಟು ಬೇಗ ಶಾಂತಿಯುತ ಪರಿಹಾರಕ್ಕೆ ಬರುವಂತೆ ಪ್ರೋತ್ಸಾಹಿಸುವುದು ಭಾರತದ ಪ್ರಯತ್ನವಾಗಿದೆ," ಎಂದು ಹೇಳಿದರು.
ಇಂತಹ ಪರಿಸ್ಥಿತಿಗಳನ್ನು ಕೆಲವು ಶಕ್ತಿಗಳು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ ಎಂದು ಎಚ್ಚರಿಸುವ ಮೂಲಕ, ಪ್ರಧಾನಮಂತ್ರಿಯವರು ಈ ಬಿಕ್ಕಟ್ಟಿನ ಆಂತರಿಕ ಭದ್ರತೆಯ ಆಯಾಮದ ಬಗ್ಗೆಯೂ ಸದನದ ಗಮನ ಸೆಳೆದರು. ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆ ಏಜೆನ್ಸಿಗಳನ್ನು ಹೈ ಅಲರ್ಟ್ ನಲ್ಲಿ ಇರಿಸಲಾಗಿದೆ ಮತ್ತು ಕರಾವಳಿ, ಗಡಿ, ಸೈಬರ್ ಹಾಗೂ ಕಾರ್ಯತಂತ್ರದ ಸ್ಥಾಪನೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದ ಪ್ರಧಾನಮಂತ್ರಿ ಮೋದಿ ಅವರು, "ಕರಾವಳಿ ಭದ್ರತೆ, ಗಡಿ ಭದ್ರತೆ, ಸೈಬರ್ ಭದ್ರತೆ ಅಥವಾ ಕಾರ್ಯತಂತ್ರದ ಸ್ಥಾಪನೆಗಳೇ ಇರಲಿ, ಎಲ್ಲದರ ಭದ್ರತೆಯನ್ನು ಬಲಪಡಿಸಲಾಗುತ್ತಿದೆ," ಎಂದು ಎಚ್ಚರಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಈ ಯುದ್ಧದಿಂದ ಉಂಟಾದ ಕಷ್ಟಕರವಾದ ಜಾಗತಿಕ ಪರಿಸ್ಥಿತಿಗಳು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು ಮತ್ತು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ದೇಶವು ಹೇಗೆ ಒಗ್ಗಟ್ಟಾಗಿ ನಿಂತಿತ್ತೋ, ಹಾಗೆಯೇ ಸಿದ್ಧವಾಗಿ ಮತ್ತು ಒಗ್ಗಟ್ಟಾಗಿ ಇರುವಂತೆ ದೇಶವಾಸಿಗಳಿಗೆ ಕರೆ ನೀಡಿದರು. ತಾಳ್ಮೆ, ಸಂಯಮ ಮತ್ತು ಜಾಗರೂಕತೆಗೆ ಕರೆ ನೀಡಿದ ಶ್ರೀ ಮೋದಿಯವರು, ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ, ಕಪ್ಪು ಮಾರುಕಟ್ಟೆ ದಂಧೆಯಲ್ಲಿ ತೊಡಗುವ ಮೂಲಕ ಅಥವಾ ಅಕ್ರಮ ದಾಸ್ತಾನು ಮಾಡುವ ಮೂಲಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಎಚ್ಚರಿಕೆ ನೀಡಿದರು. ಅಂತಹ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ನಿಗಾ ಮತ್ತು ತ್ವರಿತ ಕ್ರಮವನ್ನು ಖಚಿತಪಡಿಸಿಕೊಳ್ಳಲು ಅವರು ಸದನದ ಮೂಲಕ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು. ರಾಷ್ಟ್ರದ ಸಾಮೂಹಿಕ ಸಂಕಲ್ಪದಲ್ಲಿ ತಮ್ಮ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ ಮೋದಿ ಅವರು, "ಈ ದೇಶದ ಪ್ರತಿಯೊಂದು ಸರ್ಕಾರ ಮತ್ತು ಪ್ರತಿಯೊಬ್ಬ ನಾಗರಿಕ ಒಟ್ಟಾಗಿ ನಡೆದಾಗ, ನಾವು ಪ್ರತಿ ಸವಾಲನ್ನೂ ಎದುರಿಸಬಹುದು, ಇದು ನಮ್ಮ ಗುರುತು ಮತ್ತು ಇದು ನಮ್ಮ ಶಕ್ತಿ," ಎಂದು ಪ್ರತಿಪಾದಿಸಿದರು.
*****
(ಪ್ರಕಟಣೆ ಐ.ಡಿ.: 2243978)
ವಿಸಿಟರ್ ಕೌಂಟರ್ : 18