ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ವಿದ್ಯಮಾನಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ


ಪಿ ಎನ್‌ ಜಿ  ಸಂಪರ್ಕಗಳನ್ನು ಉತ್ತೇಜಿಸಲು ಸಿಜಿಡಿ ಕಂಪನಿಗಳಿಂದ ಪ್ರೋತ್ಸಾಹಕಗಳ ಕೊಡುಗೆ

ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್‌ ಪಿ ಜಿ ಪೂರೈಕೆಯ ಮೇಲೆ ನಿರಂತರ ನಿಗಾ ಇಡಲಾಗಿದೆ

ದೇಶೀಯ ಎಲ್‌ ಪಿ ಜಿ ಉತ್ಪಾದನೆಯಲ್ಲಿ ಶೇಕಡಾ 36 ರಷ್ಟು ಹೆಚ್ಚಳ

ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಪ್ರಮಾಣ ಸುಮಾರು ಶೇ. 84 ರಿಂದ ಶೇ. 90 ಕ್ಕೆ ಏರಿಕೆ

ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ರಾಜ್ಯ ಸರ್ಕಾರಗಳಿಂದ ಜಾರಿ ಕ್ರಮಗಳ ಅನುಷ್ಠಾನ

ಎಲ್‌ ಪಿ ಜಿ ವಾಹಕ ನೌಕೆ 'ಶಿವಾಲಿಕ್' ಇಂದು ಭಾರತಕ್ಕೆ; 'ನಂದಾ ದೇವಿ' ನಾಳೆ ಮುಂಜಾನೆ ಆಗಮನದ ನಿರೀಕ್ಷೆ

ಫೆಬ್ರವರಿ 28 ರಿಂದ ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಿಂದ ಸುಮಾರು 2,20,000 ಪ್ರಯಾಣಿಕರು ಭಾರತಕ್ಕೆ ವಾಪಸ್

ಟೆಹ್ರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ

ಪ್ರಕಟಣಾ ದಿನಾಂಕ: 16 MAR 2026 5:09PM by PIB Bengaluru

ಪಶ್ಚಿಮ ಏಷ್ಯಾದ ವಿದ್ಯಮಾನಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿಗಳನ್ನು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಿಯಮಿತವಾಗಿ ಆಯೋಜಿಸಲಾಗುತ್ತಿದೆ. ಇಂದಿನ (16 ಮಾರ್ಚ್ 2026) ಪತ್ರಿಕಾಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು, ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಕ್ಷೇಮ ಮತ್ತು ಸಂಬಂಧಿತ ಪ್ರಯತ್ನಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡವು. ಇದಕ್ಕೂ ಮೊದಲು ಮಾರ್ಚ್ 11, 12, 13 ಮತ್ತು 14 ರಂದು ಪತ್ರಿಕಾಗೋಷ್ಠಿಗಳು ನಡೆದಿದ್ದವು.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇಂಧನ ಪೂರೈಕೆಯ ಸ್ಥಿತಿಗತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಎಲ್‌ ಪಿ ಜಿ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿತು. ಸಚಿವಾಲಯದ ಪ್ರಕಾರ:

ಕಚ್ಚಾ ತೈಲ ಮತ್ತು ಸಂಸ್ಕರಣಾಗಾರಗಳು

  • ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಮರ್ಪಕ ಕಚ್ಚಾ ತೈಲ ದಾಸ್ತಾನುಗಳನ್ನು ಕಾಯ್ದುಕೊಂಡಿವೆ. ಭಾರತವು ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಉಳಿದಿದೆ ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ಈ ಇಂಧನಗಳ ಆಮದು ಅಗತ್ಯವಿಲ್ಲ.

ಚಿಲ್ಲರೆ ಮಾರಾಟ ಕೇಂದ್ರಗಳು

  • ತೈಲ ಮಾರುಕಟ್ಟೆ ಕಂಪನಿಗಳು ಯಾವುದೇ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಇಂಧನ ಖಾಲಿಯಾದ ಪ್ರಕರಣಗಳನ್ನು ವರದಿ ಮಾಡಿಲ್ಲ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯನ್ನು ನಿಯಮಿತವಾಗಿ ಕಾಯ್ದುಕೊಳ್ಳಲಾಗುತ್ತಿದೆ.
  • ಪೆಟ್ರೋಲ್ ಮತ್ತು ಡೀಸೆಲ್ ಸಮರ್ಪಕ ದಾಸ್ತಾನು ಲಭ್ಯವಿರುವುದರಿಂದ ನಾಗರಿಕರು ಆತಂಕದಿಂದ ಖರೀದಿ ಮಾಡಬಾರದು ಎಂದು ಸೂಚಿಸಲಾಗಿದೆ.

ನೈಸರ್ಗಿಕ ಅನಿಲ

  • ಆದ್ಯತೆಯ ವಲಯಗಳಿಗೆ ಸಂರಕ್ಷಿತ ಅನಿಲ ಪೂರೈಕೆ ಮುಂದುವರಿದಿದೆ, ಇದರಲ್ಲಿ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ ಯ 100 ಪ್ರತಿಶತ ಪೂರೈಕೆ ಸೇರಿದೆ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯನ್ನು ಸುಮಾರು 80 ಪ್ರತಿಶತಕ್ಕೆ ನಿಯಂತ್ರಿಸಲಾಗುತ್ತಿದೆ.
  • ಪ್ರಮುಖ ನಗರಗಳು ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್‌ ಪಿ ಜಿ ಗ್ರಾಹಕರು ಪಿ ಎನ್‌ ಜಿ ಗೆ ಬದಲಾಗಲು ಉತ್ತೇಜಿಸಲಾಗುತ್ತಿದೆ. ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು, ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ ಗಳಂತಹ ಸಂಸ್ಥೆಗಳು ಅಧಿಕೃತ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಘಟಕಗಳ ಮೂಲಕ ಪಿ ಎನ್‌ ಜಿ  ಸಂಪರ್ಕಗಳನ್ನು ಪಡೆಯಬಹುದು.
  • ಗ್ರಾಹಕರು ಇಮೇಲ್, ಗ್ರಾಹಕ ಪೋರ್ಟಲ್‌ ಗಳು, ಪತ್ರಗಳು ಅಥವಾ ಸಿಜಿಡಿ ಕಂಪನಿಗಳ ಕಾಲ್ ಸೆಂಟರ್‌ ಗಳ ಮೂಲಕ ಪಿ ಎನ್‌ ಜಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು. ಪೈಪ್‌ಲೈನ್ ಜಾಲ ಈಗಾಗಲೇ ಇರುವ ಕಡೆಗಳಲ್ಲಿ ತ್ವರಿತವಾಗಿ ಸಂಪರ್ಕ ನೀಡಲಾಗುವುದು.
  • ಪಿ ಎನ್‌ ಜಿ ಸಂಪರ್ಕಗಳನ್ನು ಉತ್ತೇಜಿಸಲು ಹಲವಾರು ಸಿಜಿಡಿ ಕಂಪನಿಗಳು ಪ್ರೋತ್ಸಾಹಕಗಳನ್ನು ನೀಡುತ್ತಿವೆ:
    • ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಮತ್ತು ಗೇಲ್ ಗ್ಯಾಸ್ ಲಿಮಿಟೆಡ್: ಮನೆಬಳಕೆ ಗ್ರಾಹಕರಿಗೆ ₹500 ಮೌಲ್ಯದ ಉಚಿತ ಅನಿಲ.
    • ಮಹಾನಗರ ಗ್ಯಾಸ್ ಲಿಮಿಟೆಡ್: ಮನೆಬಳಕೆ ಗ್ರಾಹಕರಿಗೆ ₹500 ನೋಂದಣಿ ಶುಲ್ಕ ಮನ್ನಾ ಮತ್ತು ವಾಣಿಜ್ಯ ಗ್ರಾಹಕರಿಗೆ ಭದ್ರತಾ ಠೇವಣಿ ಮನ್ನಾ.
    • ಬಿಪಿಸಿಎಲ್ : ಎಲ್ಲಾ ವಾಣಿಜ್ಯ ಸಂಪರ್ಕಗಳಿಗೆ ಭದ್ರತಾ ಠೇವಣಿ ಮನ್ನಾ.
  • ಸರ್ಕಾರವು ಸಿಜಿಡಿ ಜಾಲವನ್ನು ವಿಸ್ತರಿಸುತ್ತಿದೆ ಮತ್ತು ಸಂಪನ್ಮೂಲಗಳ ನಿಯೋಜನೆಯನ್ನು ವೇಗಗೊಳಿಸಲು, ಅಸ್ತಿತ್ವದಲ್ಲಿರುವ ಸಂಪರ್ಕಗಳ ಬಳಕೆಯನ್ನು ಉತ್ತೇಜಿಸಲು ಹಾಗೂ ಪೂರೈಕೆ ಪ್ರಾರಂಭದ ಸಮಯವನ್ನು ಕಡಿಮೆ ಮಾಡಲು ಸಿಜಿಡಿ ಸಂಸ್ಥೆಗಳಿಗೆ ಪಿ ಎನ್‌ ಜಿ ಆರ್‌ ಬಿ ಸಲಹೆ ನೀಡಿದೆ.

ಎಲ್ಪಿ ಜಿ

  • ಪ್ರಚಲಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ದೃಷ್ಟಿಯಿಂದ ಎಲ್‌ ಪಿ ಜಿ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
  • ಎಲ್‌ ಪಿ ಜಿ ವಿತರಕರಲ್ಲಿ ಯಾವುದೇ 'ಡ್ರೈ-ಔಟ್' (ದಾಸ್ತಾನು ಖಾಲಿ) ವರದಿಯಾಗಿಲ್ಲ.
  • ಉದ್ದಿಮೆಯಾದ್ಯಂತ ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಸುಮಾರು ಶೇ. 84 ರಿಂದ ಸುಮಾರು ಶೇ. 90 ಕ್ಕೆ ಹೆಚ್ಚಾಗಿದೆ.
  • ವಿತರಕರ ಮಟ್ಟದಲ್ಲಿ ಸಿಲಿಂಡರ್‌ ಗಳ ದುರುಪಯೋಗ ತಡೆಯಲು ವಿತರಣಾ ದೃಢೀಕರಣ ಕೋಡ್ (ಡಿಎಸಿ) ವ್ಯಾಪ್ತಿಯನ್ನು ಬಿಕ್ಕಟ್ಟಿನ ಮೊದಲಿದ್ದ ಶೇ. 53 ರಿಂದ ಸುಮಾರು ಶೇ. 72 ಕ್ಕೆ ವಿಸ್ತರಿಸಲಾಗಿದೆ.
  • ಬಿಹಾರ, ದೆಹಲಿ, ಹರಿಯಾಣ, ರಾಜಸ್ಥಾನ, ಮಣಿಪುರ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗೃಹೇತರ ಎಲ್‌ ಪಿ ಜಿ ಹಂಚಿಕೆಗೆ ಆದೇಶ ಹೊರಡಿಸಿವೆ.

ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಮುಖ ಪಾತ್ರ ವಹಿಸುತ್ತಿವೆ.
  • ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯನ್ನು ಗಮನಿಸಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ ಮತ್ತು ನಾಗರಿಕರಿಗೆ ಮಾಹಿತಿ ನೀಡಲು ಮಾಧ್ಯಮ ಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಕ್ರಮಗಳು

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ರಾಜ್ಯ ಸರ್ಕಾರಗಳು ಜಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ.
  • ಎಲ್‌ ಪಿ ಜಿ ದಾಸ್ತಾನು ಮತ್ತು ಕಾಳಸಂತೆಯನ್ನು ಪರಿಶೀಲಿಸಲು ಉತ್ತರ ಪ್ರದೇಶ, ಹರಿಯಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ಮತ್ತು ಮಿಜೋರಾಂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ.
  • ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮಗಳನ್ನು ತಡೆಯಲು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು 1,100 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಕೇಂದ್ರಗಳು ಮತ್ತು ಎಲ್‌ ಪಿ ಜಿ ವಿತರಕರಲ್ಲಿ ಹಠಾತ್ ತಪಾಸಣೆ ನಡೆಸಿದ್ದಾರೆ.

ಇತರ ಸರ್ಕಾರಿ ಕ್ರಮಗಳು

  • ವಿಶೇಷವಾಗಿ ಮನೆಗಳು ಮತ್ತು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಂತಹ ಆದ್ಯತೆಯ ವಲಯಗಳಿಗೆ ಅಡೆತಡೆಯಿಲ್ಲದ ದೇಶೀಯ ಎಲ್‌ ಪಿ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ.
  • ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಸುಮಾರು 36 ಪ್ರತಿಶತದಷ್ಟು ಹೆಚ್ಚಿಸಲಾಗಿದೆ.
  • 14 ಮಾರ್ಚ್ 2026 ರ ಎಲ್‌ ಪಿ ಜಿ ನಿಯಂತ್ರಣ ಆದೇಶದ ತಿದ್ದುಪಡಿಯ ಅಡಿಯಲ್ಲಿ, ಪಿ ಎನ್‌ ಜಿ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ದೇಶೀಯ ಎಲ್‌ ಪಿ ಜಿ ಸಂಪರ್ಕಗಳನ್ನು ವಾಪಸ ನೀಡಬೇಕಾಗುತ್ತದೆ ಮತ್ತು ಹೊಸ ಎಲ್‌ ಪಿ ಜಿ ಸಂಪರ್ಕಗಳನ್ನು ಪಡೆಯಲು ಸಾಧ್ಯವಿಲ್ಲ.
  • ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಮಧ್ಯಂತರಗಳನ್ನು ನಗರ ಪ್ರದೇಶಗಳಲ್ಲಿ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಪರಿಷ್ಕರಿಸಲಾಗಿದೆ.
  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ ಮತ್ತು ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಡಿಜಿಟಲ್ ಎಲ್‌ ಪಿ ಜಿ ರೀಫಿಲ್ ಬುಕಿಂಗ್‌ ಗಳನ್ನು ಉತ್ತೇಜಿಸುತ್ತಿವೆ ಮತ್ತು ಆತಂಕದ ಬುಕಿಂಗ್‌ ಗಳನ್ನು ನಿರುತ್ಸಾಹಗೊಳಿಸುತ್ತಿವೆ, ಹಾಗೆಯೇ ರಾಜ್ಯ ಮತ್ತು ಕೇಂದ್ರಡಳಿತ ಸರ್ಕಾರಗಳು ದುಷ್ಕೃತ್ಯಗಳನ್ನು ನಿಗ್ರಹಿಸಲು ಸಂಘಟಿತ ತಪಾಸಣೆಗಳನ್ನು ನಡೆಸುವಂತೆ ಕೋರಲಾಗಿದೆ.

ಸಾರ್ವಜನಿಕ ಸಲಹೆ

  • ಮನೆಗಳು ಮತ್ತು ಅಗತ್ಯ ವಲಯಗಳಿಗೆ ಸಮರ್ಪಕ ಎಲ್‌ ಪಿ ಜಿ ಲಭ್ಯತೆಯನ್ನು ಕಾಪಾಡಿಕೊಳ್ಳಲು ಸರ್ಕಾರ ಬದ್ಧವಾಗಿರುವುದರಿಂದ ನಾಗರಿಕರು ಆತಂಕಪಡಬಾರದು ಎಂದು ಸಲಹೆ ನೀಡಲಾಗಿದೆ.
  • ಈ ಹಿಂದೆ ಕಡಿತಗೊಳಿಸಲಾಗಿದ್ದ ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್‌ ಗಳ ಮಾರಾಟವನ್ನು ಭಾಗಶಃ ಪುನಃಸ್ಥಾಪಿಸಲಾಗಿದೆ ಮತ್ತು ಆದ್ಯತೆಯ ವಿತರಣೆಗಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ.
  • ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಐ ವಿ ಆರ್‌ ಎಸ್, ಎಸ್‌ ಎಂ ಎಸ್, ವಾಟ್ಸಾಪ್, ತೈಲ ಮಾರುಕಟ್ಟೆ ಕಂಪನಿಗಳ ಮೊಬೈಲ್ ಅಪ್ಲಿಕೇಶನ್‌ ಗಳು ಮತ್ತು ಜನಪ್ರಿಯ ಇ-ಕಾಮರ್ಸ್ ವೇದಿಕೆಗಳಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳ ಮೂಲಕ ಬುಕ್ ಮಾಡಬಹುದು.
  • ನಾಗರಿಕರು ಅನಗತ್ಯ ಬುಕಿಂಗ್ ಮಾಡದಂತೆ, ಡಿಜಿಟಲ್ ಬುಕಿಂಗ್ ಪ್ಲಾಟ್‌ಫಾರ್ಮ್‌ ಗಳನ್ನು ಬಳಸಲು ಮತ್ತು ಎಲ್‌ ಪಿ ಜಿ ವಿತರಕರಿಗೆ ಅನಗತ್ಯ ಭೇಟಿ ನೀಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ಸಾಧ್ಯವಿರುವ ಕಡೆಗಳಲ್ಲಿ ಪಿ ಎನ್‌ ಜಿ ಮತ್ತು ಇಂಡಕ್ಷನ್ ಅಥವಾ ಎಲೆಕ್ಟ್ರಿಕ್ ಸ್ಟೌವ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಮತ್ತು ಇಂಧನವನ್ನು ಉಳಿಸಲು ಗ್ರಾಹಕರನ್ನು ಪ್ರೋತ್ಸಾಹಿಸಲಾಗುತ್ತದೆ.
  • ಸರ್ಕಾರ ಮತ್ತು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ನಿರಂತರ ಎಲ್‌ ಪಿ ಜಿ ಮರುಪೂರಣ ವಿತರಣೆಗಳ ಬಗ್ಗೆ ಜಾಗೃತಿ ಮೂಡಿಸುವುದನ್ನು ಮುಂದುವರೆಸಿವೆ ಮತ್ತು ತಪ್ಪು ಮಾಹಿತಿ ಮತ್ತು ಅನಗತ್ಯ ಭೀತಿಯನ್ನು ತಪ್ಪಿಸಲು ಮಾಧ್ಯಮ ಸಂಸ್ಥೆಗಳು ಅಧಿಕೃತ ಮೂಲಗಳನ್ನು ಅವಲಂಬಿಸುವಂತೆ ವಿನಂತಿಸಲಾಗಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್ ಪ್ರದೇಶದ ಕಡಲ ಪರಿಸ್ಥಿತಿ ಮತ್ತು ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿತು:

  • ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ನಾವಿಕರಿಗೆ ಸಂಬಂಧಿಸಿದ ಯಾವುದೇ ಹಡಗು ಅಪಘಾತ ವರದಿಯಾಗಿಲ್ಲ.
  • ಪ್ರಸ್ತುತ, 611 ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಉಳಿದಿವೆ. ಹಡಗು ಮಾಲೀಕರು ಮತ್ತು ಭಾರತೀಯ ಮಿಷನ್‌ ಗಳ ಸಮನ್ವಯದೊಂದಿಗೆ ಹಡಗು ನಿರ್ದೇಶನಾಲಯವು ಪರಿಸ್ಥಿತಿಯನ್ನು ಗಮನಿಸುತ್ತಿದೆ.
  • ಸುಮಾರು 92,712 ಮೆಟ್ರಿಕ್ ಟನ್ ಎಲ್‌ ಪಿ ಜಿ ಹೊತ್ತು ಮಾರ್ಚ್ 14 ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿದ ಎರಡು ಭಾರತೀಯ ಎಲ್‌ ಪಿ ಜಿ ವಾಹಕಗಳಲ್ಲಿ, 'ಶಿವಾಲಿಕ್' ಹಡಗು ಇಂದು ಸಂಜೆ 17:00 ಗಂಟೆಗೆ ಮುಂದ್ರಾ ಬಂದರಿಗೆ ತಲುಪಲಿದ್ದು, ಆದ್ಯತೆಯ ಮೇಲೆ ಸರಕು ಇಳಿಸಲು ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. 'ನಂದಾ ದೇವಿ' ಹಡಗು ನಾಳೆ ಮುಂಜಾನೆ ತಲುಪುವ ನಿರೀಕ್ಷೆಯಿದೆ.
  • ಸುಮಾರು 80,800 ಮೆಟ್ರಿಕ್ ಟನ್ ಮರ್ಬನ್ ಕಚ್ಚಾ ತೈಲವನ್ನು ಹೊತ್ತ ಭಾರತೀಯ ಹಡಗು 'ಜಗ್ ಲಾಡ್ಕಿ' 14 ಮಾರ್ಚ್ 2026 ರಂದು ಯುಎಇಯಿಂದ ಪ್ರಯಾಣ ಬೆಳೆಸಿದ್ದು, ಸುರಕ್ಷಿತವಾಗಿ ಭಾರತದತ್ತ ಬರುತ್ತಿದೆ. ಹಡಗು ಮತ್ತು ಅದರಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ.
  • ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿ ಸಕ್ರಿಯಗೊಂಡ ನಂತರ, ಕಳೆದ 48 ಗಂಟೆಗಳಲ್ಲಿ 310 ಕ್ಕೂ ಹೆಚ್ಚು ಕರೆಗಳು ಮತ್ತು 597 ಇಮೇಲ್‌ ಗಳು ಸೇರಿದಂತೆ ಸಹಾಯವನ್ನು ಬಯಸುವ ನಾವಿಕರು, ಅವರ ಕುಟುಂಬಗಳು ಮತ್ತು ಸಮುದ್ರ ಪಾಲುದಾರರಿಂದ 3,030 ಫೋನ್ ಕರೆಗಳು ಮತ್ತು ಸುಮಾರು 5,497 ಇಮೇಲ್‌ ಗಳನ್ನು ನಿರ್ವಹಿಸಲಾಗಿದೆ.
  • ಹಡಗು ನಿರ್ದೇಶನಾಲಯವು ಇದುವರೆಗೆ ಗಲ್ಫ್ ಪ್ರದೇಶದಿಂದ 286 ಭಾರತೀಯ ನಾವಿಕರ ಸುರಕ್ಷಿತ ವಾಪಸಾತಿಗೆ ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 48 ಗಂಟೆಗಳಲ್ಲಿ 33 ವಾಪಸಾತಿಗಳು ಸೇರಿವೆ.
  • ದೇಶಾದ್ಯಂತದ ಪ್ರಮುಖ ಬಂದರುಗಳು ಹಡಗು ಚಲನವಲನಗಳು ಮತ್ತು ಸರಕು ಕಾರ್ಯಾಚರಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಲಂಗರು ಹಾಕುವಿಕೆ, ಬರ್ತ್ ಬಾಡಿಗೆ ಮತ್ತು ಸಂಗ್ರಹಣೆ ಶುಲ್ಕಗಳಲ್ಲಿ ರಿಯಾಯಿತಿಗಳು ಸೇರಿದಂತೆ ಹಡಗು ಮಾರ್ಗಗಳು ಮತ್ತು ಸರಕು ಪಾಲುದಾರರಿಗೆ ಬೆಂಬಲವನ್ನು ನೀಡುತ್ತಿವೆ.
  • ಸರಕು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಬಂದರುಗಳು ಕಸ್ಟಮ್ಸ್ ಮತ್ತು ಇತರ ಪಾಲುದಾರರೊಂದಿಗೆ ಸಮನ್ವಯ ಸಾಧಿಸುತ್ತಿವೆ.
  • ಜೆ ಎನ್‌ ಪಿ ಎ ಮಧ್ಯಪ್ರಾಚ್ಯಕ್ಕೆ ಹೋಗುವ ಕಂಟೇನರ್‌ ಗಳಿಗೆ ತಾತ್ಕಾಲಿಕ ಟ್ರಾನ್ಸ್ಶಿಪ್‌ಮೆಂಟ್ ಸಂಗ್ರಹಣೆಯನ್ನು ಒದಗಿಸಿದೆ ಮತ್ತು ನೆಲದ ಬಾಡಿಗೆ ಮತ್ತು ಇತರ ಶುಲ್ಕಗಳಲ್ಲಿ ಶೇಕಡಾ 100 ರಷ್ಟು ರಿಯಾಯಿತಿ ಮತ್ತು ಜೆ ಎನ್‌ ಪಿ ಎ ನಲ್ಲಿ ಆರಂಭವಾಗುವ ಕಂಟೇನರ್‌ ಗಳಿಗೆ 15 ದಿನಗಳವರೆಗೆ ರೀಫರ್ ಕಂಟೇನರ್ ಪ್ಲಗ್-ಇನ್ ಶುಲ್ಕಗಳಲ್ಲಿ ಸುಮಾರು ಶೇಕಡಾ 80 ರಷ್ಟು ರಿಯಾಯಿತಿಯನ್ನು ನೀಡಿದೆ.
  • • ಯಾವುದೇ ಪ್ರಮುಖ ಬಂದರಿನಲ್ಲಿ ಪ್ರಸ್ತುತ ಯಾವುದೇ ದಟ್ಟಣೆ ಇಲ್ಲ, ಮತ್ತು JNPA ನಲ್ಲಿ ರಫ್ತು-ನಿರ್ಗಮನದ ಕಂಟೇನರ್‌ಗಳು ಸುಮಾರು 5,600 ರಿಂದ ಸುಮಾರು 3,900 ಕ್ಕೆ ಇಳಿದಿವೆ.
  • ಬಂದರುಗಳು ಪ್ರಸ್ತುತ ಸಾಗಿಸಲು ಸಾಧ್ಯವಾಗದ ಕೊಲ್ಲಿಗೆ ಹೋಗುವ ಲೋಡ್ ಮಾಡಲಾದ ಹಡಗುಗಳಿಗೆ ಸುರಕ್ಷಿತ ಲಂಗರು ಹಾಕುವಿಕೆಯನ್ನು ಸಹ ಒದಗಿಸುತ್ತಿವೆ.
  • ಕಾರ್ಯಾಚರಣೆಯ ಸಮಸ್ಯೆಗಳನ್ನು ಪರಿಹರಿಸಲು ಕಸ್ಟಮ್ಸ್, ಬಂದರುಗಳು ಮತ್ತು ಇತರ ಪಾಲುದಾರರ ಸದಸ್ಯರೊಂದಿಗೆ ಹಡಗು ನಿರ್ದೇಶನಾಲಯದ ಅಡಿಯಲ್ಲಿ ಅಂತರ-ಸಚಿವಾಲಯ ಗುಂಪನ್ನು ರಚಿಸಲಾಗಿದೆ.
  • ಸಮುದ್ರ ವ್ಯಾಪಾರ ಮತ್ತು ಬಂದರು ಕಾರ್ಯಾಚರಣೆಗಳ ನಿರಂತರತೆಯನ್ನು ಕಾಪಾಡಿಕೊಳ್ಳುವಾಗ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್‌ ಗಳು, ಹಡಗು ಕಂಪನಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವುದನ್ನು ಮುಂದುವರೆಸಿದೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಮಿಷನ್‌ ಗಳು (ರಾಯಭಾರ ಕಚೇರಿಗಳು) ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿವೆ ಎಂದು ತಿಳಿಸಿದೆ. ಸಚಿವಾಲಯವು ಹೀಗೆ ಹೇಳಿದೆ:

· ಇರಾನ್‌ ನಲ್ಲಿರುವ ಭಾರತೀಯ ಪ್ರಜೆಗಳ ಪರಿಸ್ಥಿತಿಯನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ, ಅವರ ಸುರಕ್ಷತೆ ಮತ್ತು ಕ್ಷೇಮಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಟೆಹ್ರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಇರಾನ್‌ನಲ್ಲಿದ್ದ 550 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಭೂ ಗಡಿಯ ಮೂಲಕ ಅರ್ಮೇನಿಯಾವನ್ನು ಪ್ರವೇಶಿಸಿದ್ದಾರೆ, ಹಾಗೆಯೇ 90 ಕ್ಕೂ ಹೆಚ್ಚು ಪ್ರಜೆಗಳು ಅಜೆರ್ಬೈಜಾನ್‌ ಗೆ ತೆರಳಿದ್ದಾರೆ.

· ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

· ಕಳೆದ ಕೆಲವು ದಿನಗಳಲ್ಲಿ, ಟೆಹ್ರಾನ್‌ ನ ಹೊರಗಿನ ಸ್ಥಳಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಇರಾನ್‌ ನೊಳಗಿನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

· ಭಾರತೀಯ ನಾವಿಕರು ಮತ್ತು ಮೀನುಗಾರ ಸಮುದಾಯದ ಸದಸ್ಯರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಕಂಪನಿಗಳೊಂದಿಗೆ ಸರ್ಕಾರವು ಸಂಪರ್ಕದಲ್ಲಿದ್ದು, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ. ಎಲ್ಲಾ ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿಯ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

· ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ಸಮುದಾಯದ ಸುರಕ್ಷತೆ, ಕ್ಷೇಮ ಮತ್ತು ಭದ್ರತೆಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ.

· ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳ ಪ್ರಶ್ನೆಗಳಿಗೆ ಉತ್ತರಿಸಲು ವಿಶೇಷ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮುಂದುವರೆದಿದೆ.

· ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್‌ ಗಳು ಮತ್ತು ಕಚೇರಿಗಳು 24x7 ಸಹಾಯವಾಣಿಗಳನ್ನು ನಡೆಸುತ್ತಿವೆ, ಭಾರತೀಯ ಸಮುದಾಯದ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿವೆ ಮತ್ತು ಕಾಲಕಾಲಕ್ಕೆ ನವೀಕರಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿವೆ.

· ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ವೀಸಾ ಬೆಂಬಲ, ವ್ಯವಸ್ಥಾಪನಾ ನೆರವು ಮತ್ತು ಪ್ರಯಾಣದ ಸೌಕರ್ಯ ಸೇರಿದಂತೆ ಎಲ್ಲಾ ಅಗತ್ಯ ಸಹಾಯಗಳನ್ನು ಒದಗಿಸುತ್ತಿವೆ. ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರಿಗೆ ಸಹಾಯ ಮಾಡಲು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದೊಂದಿಗೆ ಸಮನ್ವಯ ನಡೆಸಲಾಗುತ್ತಿದೆ.

· 28 ಫೆಬ್ರವರಿ 2026 ರಿಂದ ಇದುವರೆಗೆ, ಸುಮಾರು 2,20,000 ಪ್ರಯಾಣಿಕರು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ.

· ಯುಎಇಯಲ್ಲಿ, ಇಂದು ಬೆಳಗ್ಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಗಳು ಕ್ರಮೇಣ ಪುನರಾರಂಭಗೊಳ್ಳುತ್ತಿವೆ.

· ಅಬುಧಾಬಿ, ರಾಸ್ ಅಲ್ ಖೈಮಾ ಮತ್ತು ಫುಜೈರಾದಿಂದಲೂ ಭಾರತೀಯ ಮತ್ತು ಯುಎಇ ವಿಮಾನಯಾನ ಸಂಸ್ಥೆಗಳ ಸೀಮಿತ ವಿಮಾನಗಳು ಸಂಚರಿಸುತ್ತಿವೆ. ಲಭ್ಯವಿರುವ ಮಾಹಿತಿಯಂತೆ, ಇಂದು ಭಾರತದ ವಿವಿಧ ನಗರಗಳಿಗೆ 45 ಕ್ಕೂ ಹೆಚ್ಚು ವಿಮಾನಗಳನ್ನು ಯೋಜಿಸಲಾಗಿದೆ.

· ಪ್ರಯಾಣಿಕರು ನವೀಕರಿಸಿದ ವೇಳಾಪಟ್ಟಿಗಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಸಹಾಯಕ್ಕಾಗಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ದುಬೈನಲ್ಲಿರುವ ಕಾನ್ಸುಲೇಟ್‌ನ 24x7 ಸಹಾಯವಾಣಿಗಳನ್ನು ಸಂಪರ್ಕಿಸಬಹುದು.

· ಸೌದಿ ಅರೇಬಿಯಾ ಮತ್ತು ಓಮನ್‌ ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ನಗರಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

· ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿದ್ದು, ಕತಾರ್ ಏರ್ವೇಸ್ ಇಂದು ಮತ್ತು ನಾಳೆ ಭಾರತಕ್ಕೆ 3 ವಿಮಾನಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

· ಕುವೈತ್ ವಾಯುಪ್ರದೇಶವು 28 ಫೆಬ್ರವರಿ 2026 ರಿಂದ ಮುಚ್ಚಲ್ಪಟ್ಟಿದೆ. 'ಜಜೀರಾ ಏರ್ವೇಸ್' ಮೂಲಕ ಸೌದಿ ಅರೇಬಿಯಾದ ಅಲ್ ಖೈಸೂಮಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ವಿಶೇಷ ವಾಣಿಜ್ಯ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

· ವಾಯುಪ್ರದೇಶ ಮುಚ್ಚಲ್ಪಟ್ಟಿರುವ ಬಹ್ರೇನ್ ಮತ್ತು ಇರಾಕ್‌ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸೌದಿ ಅರೇಬಿಯಾ ಮೂಲಕ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

· 13 ಮಾರ್ಚ್ 2026 ರಂದು ಓಮನ್‌ ನ ಸೋಹರ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು, ಮಸ್ಕತ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅವರ ಕುಟುಂಬಗಳು ಮತ್ತು ಓಮನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಮೃತದೇಹಗಳನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸುವ ನಿರೀಕ್ಷೆಯಿದೆ. ರಾಯಭಾರ ಕಚೇರಿಯು ಗಾಯಗೊಂಡ ಭಾರತೀಯರ ಸ್ಥಿತಿಯನ್ನೂ ಗಮನಿಸುತ್ತಿದೆ, ಅವರಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ.

· ಬಸ್ರಾದಲ್ಲಿರುವ ಮಿಷನ್ ತಂಡವು 'ಸೇಫ್ ಸೀ ವಿಷ್ಣು' ಹಡಗಿನ 15 ಭಾರತೀಯ ಸಿಬ್ಬಂದಿಗೆ ಸಹಾಯ ಮಾಡುತ್ತಿದೆ. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಬಸ್ರಾದ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದಾರೆ. ಅವರು ಶೀಘ್ರವಾಗಿ ಭಾರತಕ್ಕೆ ಮರಳಲು ಮತ್ತು ಮೃತಪಟ್ಟ ಭಾರತೀಯ ಪ್ರಜೆಯ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಕಳುಹಿಸಲು ಮಿಷನ್ ಇರಾಕ್ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುತ್ತಿದೆ.

ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ಸರ್ಕಾರವು ನಿರಂತರವಾಗಿ ಗಮನಿಸುತ್ತಿದೆ ಮತ್ತು ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಏಜೆನ್ಸಿಗಳ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುತ್ತಿದೆ ಎಂದು ಸರ್ಕಾರವು ಪುನರುಚ್ಚರಿಸಿದೆ. ಪ್ರಮುಖ ವಲಯಗಳಲ್ಲಿ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 

*****


(ಪ್ರಕಟಣೆ ಐ.ಡಿ.: 2240937) ವಿಸಿಟರ್ ಕೌಂಟರ್ : 29