ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳನ್ನು ಎದುರಿಸಲು ಕೈಗೊಂಡ ಕ್ರಮಗಳ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ.
ಪ್ರಕಟಣಾ ದಿನಾಂಕ:
12 MAR 2026 5:09PM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಇಂದು ಲೋಕಸಭೆಯಲ್ಲಿ ಹೇಳಿಕೆ ನೀಡಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗೆ ಪ್ರತಿಕ್ರಿಯೆಯಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕೈಗೊಂಡ ಕ್ರಮಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು. ವಿಕಸನಗೊಳ್ಳುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಇಂಧನ ಭದ್ರತೆಯನ್ನು ಕಾಪಾಡಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಚಿವರು ಸದನಕ್ಕೆ ವಿವರಿಸಿದರು.
ಸಚಿವರು ನೀಡಿದ ಹೇಳಿಕೆಯು ಈ ಕೆಳಗಿನಂತಿದೆ:
ಮಾನ್ಯ ಸಭಾಧ್ಯಕ್ಷರೇ,
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗೆ ಪ್ರತಿಕ್ರಿಯೆಯಾಗಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸದನಕ್ಕೆ ತಿಳಿಸಲು ನಾನು ಇಂದು ನಿಂತಿದ್ದೇನೆ.
ಮಾನ್ಯ ಸಭಾಧ್ಯಕ್ಷರೇ,
1. ಆಧುನಿಕ ಇಂಧನ ಇತಿಹಾಸದಲ್ಲಿ ಜಗತ್ತು ಇಂತಹ ಕ್ಷಣವನ್ನು ಎಂದೂ ಎದುರಿಸಿಲ್ಲ. ಇರಾನ್, ಇಸ್ರೇಲ್ ಮತ್ತು ಯುಎಸ್ ನಡುವಿನ ಮಿಲಿಟರಿ ಕಾರ್ಯಾಚರಣೆಯ ನಂತರ, ವಿಶ್ವದ ಶೇ 20 ರಷ್ಟು ಕಚ್ಚಾ ತೈಲ, ಶೇ 20 ರಷ್ಟು ನೈಸರ್ಗಿಕ ಅನಿಲ ಮತ್ತು ಶೇ 20 ರಷ್ಟು ಎಲ್ ಪಿ ಜಿ ಹಾದುಹೋಗುವ ಹಾರ್ಮುಜ್ ಜಲಸಂಧಿಯ ಸಂಚಾರವು ಅಸ್ತವ್ಯಸ್ತಗೊಂಡು ಇಂದು 13ನೇ ದಿನವಾಗಿದೆ. ದಾಖಲಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗು ಸಂಚಾರಕ್ಕೆ ಪರಿಣಾಮಕಾರಿಯಾಗಿ ಮುಚ್ಚಲಾಗಿದೆ. ಈ ಸಂಘರ್ಷವನ್ನು ಉಂಟುಮಾಡುವಲ್ಲಿ ಭಾರತದ ಯಾವುದೇ ಪಾತ್ರವಿಲ್ಲದಿದ್ದರೂ, ಅನೇಕ ದೇಶಗಳಂತೆ ಭಾರತವೂ ಇದರ ಪರಿಣಾಮಗಳನ್ನು ಎದುರಿಸಬೇಕಾಗಿದೆ.
2.ಇತರ ರಾಷ್ಟ್ರಗಳು ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಿವೆ ಎಂಬುದಕ್ಕೆ ಹೋಲಿಸಿದರೆ ಭಾರತದ ಪ್ರತಿಕ್ರಿಯೆಯು ಅತ್ಯಂತ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ನಮ್ಮ ನೆರೆಯ ರಾಷ್ಟ್ರವೊಂದು ಎರಡು ವಾರಗಳ ಕಾಲ ಎಲ್ಲಾ ಶಾಲೆಗಳನ್ನು ಮುಚ್ಚಿದೆ, ಸರ್ಕಾರಿ ಕಚೇರಿಗಳನ್ನು ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಗೆ ಬದಲಾಯಿಸಿದೆ, ಶೇ 50 ರಷ್ಟು ಸಾರ್ವಜನಿಕ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಆದೇಶಿಸಿದೆ, ಅಧಿಕೃತ ವಾಹನಗಳ ಇಂಧನ ಭತ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿದೆ ಮತ್ತು ಶೇ 60 ರಷ್ಟು ಸರ್ಕಾರಿ ವಾಹನಗಳನ್ನು ರಸ್ತೆಯಿಂದ ಹೊರಗಿಟ್ಟಿದೆ. ಈ ದೇಶವು ತನ್ನ ಇತಿಹಾಸದಲ್ಲೇ ಅತಿದೊಡ್ಡ ಏಕೈಕ ಇಂಧನ ಬೆಲೆ ಏರಿಕೆಯನ್ನು ಅನುಭವಿಸಿದೆ, ಒಂದು ವಾರದಲ್ಲಿ ಪೆಟ್ರೋಲ್ ಬೆಲೆ ಸರಿಸುಮಾರು ಶೇ 20 ರಷ್ಟು ಏರಿಕೆಯಾಗಿದೆ. ಮತ್ತೊಂದು ನೆರೆಯ ರಾಷ್ಟ್ರವು ಇಂಧನ ಉಳಿಸಲು ವಿಶ್ವವಿದ್ಯಾಲಯಗಳನ್ನು ಮೊದಲೇ ಮುಚ್ಚಿದೆ ಮತ್ತು ಈದ್-ಉಲ್-ಫಿತರ್ ರಜೆಯನ್ನು ಮುಂಚಿತವಾಗಿ ಘೋಷಿಸಿದೆ. ಆಗ್ನೇಯ ಏಷ್ಯಾದ ದೇಶಗಳೂ ಸಹ ಇಂಧನ ಪಡಿತರ ಮತ್ತು ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಬಂದಿದೆ.
ಕಚ್ಚಾ ತೈಲ ಮತ್ತು ಪೆಟ್ರೋಲ್, ಡೀಸೆಲ್:
ಮಾನ್ಯ ಸಭಾಧ್ಯಕ್ಷರೇ,
3. ಭಾರತದ ಕಚ್ಚಾ ತೈಲ ಪೂರೈಕೆಯ ಸ್ಥಿತಿಯು ಸುರಕ್ಷಿತವಾಗಿದೆ ಮತ್ತು ಹಾರ್ಮುಜ್ ಮೂಲಕ ನಮಗೆ ದೊರೆಯುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ.. ಈ ಬಿಕ್ಕಟ್ಟಿಗಿಂತ ಮೊದಲು, ಭಾರತದ ಕಚ್ಚಾ ತೈಲ ಆಮದಿನ ಸರಿಸುಮಾರು ಶೇ 45 ರಷ್ಟು ಹಾರ್ಮುಜ್ ಮಾರ್ಗದ ಮೂಲಕವೇ ಸಾಗುತ್ತಿತ್ತು. ಮಾನ್ಯ ಪ್ರಧಾನಮಂತ್ರಿಯವರ ಅತ್ಯುತ್ತಮ ರಾಜತಾಂತ್ರಿಕ ಸಂಪರ್ಕ ಮತ್ತು ಸೌಹಾರ್ದತೆಯ ಫಲವಾಗಿ, ಅಸ್ತವ್ಯಸ್ತಗೊಂಡಿರುವ ಈ ಜಲಸಂಧಿಯ ಮಾರ್ಗವು ಅದೇ ಅವಧಿಯಲ್ಲಿ ಎಷ್ಟು ತೈಲವನ್ನು ಪೂರೈಸುತ್ತಿತ್ತೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಭಾರತವು ಈಗ ಪಡೆದುಕೊಂಡಿದೆ. ಹಾರ್ಮುಜ್ ಮಾರ್ಗವನ್ನು ಹೊರತುಪಡಿಸಿ ಇತರ ಮೂಲಗಳಿಂದ ಪಡೆಯುವ ಆಮದು ಪ್ರಮಾಣವು ಶೇ 55 ರಿಂದ ಸರಿಸುಮಾರು ಶೇ 70 ಕ್ಕೆ ಏರಿದೆ. ಭಾರತವು ಈಗ 40 ದೇಶಗಳಿಂದ ಕಚ್ಚಾ ತೈಲವನ್ನು ಪಡೆಯುತ್ತಿದೆ, ಇದು 2006-07 ರಲ್ಲಿ ಕೇವಲ 27 ದೇಶಗಳಿಗೆ ಸೀಮಿತವಾಗಿತ್ತು; ಸತತ ವರ್ಷಗಳಲ್ಲಿ ಸುಸ್ಥಿರ ನೀತಿಯ ಮೂಲಕ ನಿರ್ಮಿಸಲಾದ ಈ ರಚನಾತ್ಮಕ ವೈವಿಧ್ಯೀಕರಣವು ಇಂದು ಇತರ ರಾಷ್ಟ್ರಗಳ ಬಳಿ ಇಲ್ಲದಂತಹ ಆಯ್ಕೆಗಳನ್ನು ನಮಗೆ ನೀಡಿದೆ. ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ; ಹಲವಾರು ಸಂದರ್ಭಗಳಲ್ಲಿ ಅವು ಶೇ 100 ಕ್ಕಿಂತ ಹೆಚ್ಚು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
4. ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಎಟಿಎಫ್ ಅಥವಾ ಇಂಧನ ತೈಲದ ಕೊರತೆ ಇಲ್ಲ. ಪೆಟ್ರೋಲ್, ಡೀಸೆಲ್, ಏವಿಯೇಷನ್ ಟರ್ಬೈನ್ ಫ್ಯೂಯಲ್, ಸೀಮೆಎಣ್ಣೆ ಮತ್ತು ಇಂಧನ ತೈಲದ ಲಭ್ಯತೆಯನ್ನು ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ. ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಾಕಷ್ಟು ದಾಸ್ತಾನು ಇದೆ ಮತ್ತು ಈ ಉತ್ಪನ್ನಗಳ ಪೂರೈಕೆ ಸರಪಳಿಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ರಾಜ್ಯಗಳಿಗೆ ಪಡಿತರ ವ್ಯವಸ್ಥೆಯ ಸೀಮೆಎಣ್ಣೆಯ ಹೆಚ್ಚುವರಿ ಹಂಚಿಕೆಯನ್ನು ಮಾಡಲಾಗಿದೆ.
ನೈಸರ್ಗಿಕ ಅನಿಲ:
ಮಾನ್ಯ ಸಭಾಧ್ಯಕ್ಷರೇ,
5. ನೈಸರ್ಗಿಕ ಅನಿಲದ ಪೂರೈಕೆಯನ್ನು ಆದ್ಯತೆಯ ಹಂಚಿಕೆಯ ಮೂಲಕ ನಿರ್ವಹಿಸಲಾಗಿದೆ ಮತ್ತು ಪರಿಸ್ಥಿತಿಯು ತಕ್ಷಣದ ಅಗತ್ಯಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸ್ಥಿರವಾಗಿದೆ. ಭಾರತವು ದೇಶೀಯವಾಗಿ ಸುಮಾರು 90 ಎಂ ಎಂ ಎಸ್ ಸಿ ಎಂ ಡಿ (ದಿನಕ್ಕೆ ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಗಳು) ನೈಸರ್ಗಿಕ ಅನಿಲವನ್ನು ಉತ್ಪಾದಿಸುತ್ತದೆ. ಕತಾರ್ ನ ಪ್ರಮುಖ ಸಂಸ್ಕರಣಾ ಘಟಕವೊಂದು 'ಫೋರ್ಸ್ ಮಜೂರ್' (ಅನಿವಾರ್ಯ ಪರಿಸ್ಥಿತಿ) ಘೋಷಿಸಿದ್ದರಿಂದ ಈಗ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು, ಈ ಹಿಂದೆ ಗಲ್ಫ್ ಮೂಲಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಹೆಚ್ಚುವರಿ 30 ಎಂ ಎಂ ಎಸ್ ಸಿ ಎಂ ಡಿ ಅನಿಲಕ್ಕೆ ಇದರಿಂದ ಅಡಚಣೆಯಾಗಿದೆ. ಅತ್ಯಗತ್ಯ ವಸ್ತುಗಳ ಕಾಯ್ದೆಯಡಿ 9 ಮಾರ್ಚ್ 2026 ರಂದು ಹೊರಡಿಸಲಾದ 'ನೈಸರ್ಗಿಕ ಅನಿಲ ನಿಯಂತ್ರಣ ಆದೇಶ'ವು ತಕ್ಷಣದ ಆದ್ಯತೆಯ ಅನುಕ್ರಮವನ್ನು ಸ್ಥಾಪಿಸಿದೆ. ಮನೆಗಳಿಗೆ ಪೂರೈಸುವ ದೇಶೀಯ ಪೈಪ್ಡ್ ಗ್ಯಾಸ್ ಮತ್ತು ವಾಹನಗಳಿಗೆ ನೀಡುವ ಸಿ ಎನ್ ಜಿ ಗೆ ಯಾವುದೇ ಕಡಿತವಿಲ್ಲದೆ ಶೇ 100 ರಷ್ಟು ಪೂರೈಕೆಯನ್ನು ಮುಂದುವರಿಸಲಾಗುತ್ತಿದೆ. ಕೈಗಾರಿಕಾ ಮತ್ತು ಉತ್ಪಾದನಾ ಗ್ರಾಹಕರು ತಮ್ಮ ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಶೇ 80 ರಷ್ಟು ಪೂರೈಕೆಯನ್ನು ಪಡೆಯುತ್ತಾರೆ. ಬಿತ್ತನೆ ಹಂಗಾಮಿಗಿಂತ ಮೊದಲು ಕೃಷಿ ಉತ್ಪಾದನಾ ಸರಪಳಿಯನ್ನು ರಕ್ಷಿಸಲು ಗೊಬ್ಬರ ಕಾರ್ಖಾನೆಗಳಿಗೆ ಶೇ 70 ರಷ್ಟು ಪೂರೈಕೆ ಮಾಡಲಾಗುವುದು. ತೈಲ ಸಂಸ್ಕರಣಾಗಾರಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳು ಪೂರೈಕೆಯಲ್ಲಿ ನಿರ್ವಹಿಸಬಹುದಾದ ಇಳಿಕೆಯನ್ನು ಭರಿಸಲಿವೆ ಮತ್ತು ಆ ಅನಿಲವನ್ನು ಹೆಚ್ಚಿನ ಆದ್ಯತೆಯ ವಲಯಗಳಿಗೆ ಮರುನಿರ್ದೇಶಿಸಲಾಗುತ್ತದೆ. ಪರ್ಯಾಯ ಸಂಗ್ರಹಣೆಯ ಮೂಲಕ ಈ ಕೊರತೆಯನ್ನು ಗಣನೀಯವಾಗಿ ಸರಿದೂಗಿಸಲಾಗಿದೆ ಎಂದು ಸದನಕ್ಕೆ ತಿಳಿಸಲು ನಾನು ಸಂತೋಷಪಡುತ್ತೇನೆ. ದೊಡ್ಡ ಪ್ರಮಾಣದ ಎಲ್ ಎನ್ ಜಿ ಹಡಗುಗಳು ಪರ್ಯಾಯ ಪೂರೈಕೆ ಮಾರ್ಗಗಳ ಮೂಲಕ ಪ್ರತಿದಿನವೂ ಆಗಮಿಸುತ್ತಿವೆ. ಸಂಘರ್ಷ ದೀರ್ಘಕಾಲ ಮುಂದುವರಿದರೂ ಸಹ ಈ ಸ್ಥಿತಿಯನ್ನು ಕಾಯ್ದುಕೊಳ್ಳಲು ಭಾರತವು ಪೂರಕವಾದ ಅನಿಲ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಗಳನ್ನು ಹೊಂದಿದೆ. ಪ್ರತಿಯೊಂದು ಮನೆಗೆ ಮತ್ತು ಕೈಗಾರಿಕೆಗೆ ಬೇಕಾದ ವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ.
ಎಲ್ ಪಿ ಜಿ:
ಮಾನ್ಯ ಸಭಾಧ್ಯಕ್ಷರೇ,
6. ಭಾರತವು ಈ ಹಿಂದೆ ತನ್ನ ಎಲ್ ಪಿ ಜಿ ಅಗತ್ಯದ ಸುಮಾರು ಶೇ 60 ರಷ್ಟನ್ನು ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಕುವೈತ್ ನಂತಹ ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿತ್ತು ಮತ್ತು ಶೇ 40 ರಷ್ಟು ದೇಶೀಯವಾಗಿ ಉತ್ಪಾದನೆಯಾಗುತ್ತಿತ್ತು ಎಂಬುದನ್ನು ಗಮನಿಸಬೇಕು. ಈಗ ಸಂಗ್ರಹಣೆಯನ್ನು ಸಕ್ರಿಯವಾಗಿ ವೈವಿಧ್ಯಗೊಳಿಸಲಾಗಿದೆ. ಗಲ್ಫ್ ಮೂಲಗಳ ಜೊತೆಗೆ ಯುನೈಟೆಡ್ ಸ್ಟೇಟ್ಸ್, ನಾರ್ವೆ, ಕೆನಡಾ, ಅಲ್ಜೀರಿಯಾ ಮತ್ತು ರಷ್ಯಾದಿಂದಲೂ ಅನಿಲ ಹಡಗುಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. 8 ಮಾರ್ಚ್ 2026 ರಂದು ಹೊರಡಿಸಲಾದ 'ಎಲ್ ಪಿ ಜಿ ನಿಯಂತ್ರಣ ಆದೇಶ'ವು ಎಲ್ ಪಿ ಜಿ ಇಳುವರಿಯನ್ನು ಗರಿಷ್ಠಗೊಳಿಸಲು ಮತ್ತು ಪ್ರೋಪೇನ್, ಬ್ಯುಟೇನ್, ಪ್ರೊಪಿಲೀನ್ ಮತ್ತು ಬ್ಯುಟೀನ್ ಗಳನ್ನು ಒಳಗೊಂಡಿರುವ C3 ಮತ್ತು C4 ಹೈಡ್ರೋಕಾರ್ಬನ್ ಸ್ಟ್ರೀಮ್ ಗಳ ಸಂಪೂರ್ಣ ಉತ್ಪಾದನೆಯನ್ನು ಕೇವಲ ಗೃಹಬಳಕೆಯ ಅಡುಗೆ ಅನಿಲಕ್ಕಾಗಿ ಮೂರು ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾತ್ರ ನೀಡುವಂತೆ ಎಲ್ಲಾ ಸಂಸ್ಕರಣಾಗಾರಗಳಿಗೆ ನಿರ್ದೇಶಿಸಿದೆ. ಇದರ ಪರಿಣಾಮವಾಗಿ, ಕಳೆದ 5 ದಿನಗಳಲ್ಲಿ ಸಂಸ್ಕರಣಾಗಾರಗಳಿಗೆ ನೀಡಿದ ನಿರ್ದೇಶನಗಳ ಮೂಲಕ ಎಲ್ ಪಿ ಜಿ ಉತ್ಪಾದನೆಯನ್ನು ಶೇ 28 ರಷ್ಟು ಹೆಚ್ಚಿಸಲಾಗಿದೆ ಮತ್ತು ಮುಂದಿನ ಸಂಗ್ರಹಣಾ ಪ್ರಕ್ರಿಯೆಯು ಸಕ್ರಿಯವಾಗಿ ನಡೆಯುತ್ತಿದೆ.
7. ಭಾರತದ 33 ಕೋಟಿಗೂ ಅಧಿಕ ಕುಟುಂಬಗಳ, ವಿಶೇಷವಾಗಿ ಬಡವರು ಮತ್ತು ಹಿಂದುಳಿದವರ ಅಡುಗೆಮನೆಗಳು ಯಾವುದೇ ಕೊರತೆಯನ್ನು ಎದುರಿಸಬಾರದು ಎಂಬುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶೀಯ ಪೂರೈಕೆಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಮತ್ತು ವಿತರಣಾ ಚಕ್ರವು ಬದಲಾಗಿಲ್ಲ. ದೇಶೀಯ ಎಲ್ಪಿಜಿ ಸಿಲಿಂಡರ್ ಗಳ ಬುಕ್ಕಿಂಗ್ನಿಂದ ವಿತರಣೆಯವರೆಗಿನ ಪ್ರಮಾಣಿತ ಸಮಯವು 2.5 ದಿನಗಳಾಗಿದ್ದು, ಇದು ಬಿಕ್ಕಟ್ಟಿನ ಪೂರ್ವದ ಮಾನದಂಡಗಳಂತೆಯೇ ಮುಂದುವರಿದಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅಡೆತಡೆಯಿಲ್ಲದ ಆದ್ಯತೆಯ ಪೂರೈಕೆಯನ್ನು ಒದಗಿಸಲಾಗಿದೆ; ಒಟ್ಟಾರೆ ಬೇಡಿಕೆಯ ಪರಿಸ್ಥಿತಿ ಏನೇ ಇದ್ದರೂ ಇವುಗಳಿಗೆ ಎಲ್ ಪಿ ಜಿ ಲಭ್ಯತೆಯನ್ನು ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ. ವಿತರಕರು ಮತ್ತು ಚಿಲ್ಲರೆ ಮಟ್ಟದಲ್ಲಿ ಸಂಗ್ರಹಣೆ (hoarding) ಮತ್ತು ಭೀತಿಯ ಬುಕ್ಕಿಂಗ್ ನಡೆಯುತ್ತಿರುವುದಾಗಿ ಕ್ಷೇತ್ರ ವರದಿಗಳು ಸೂಚಿಸುತ್ತಿವೆ, ಇದು ಪೂರೈಕೆಯ ನೈಜ ಕೊರತೆಗಿಂತ ಹೆಚ್ಚಾಗಿ ಗ್ರಾಹಕರ ಆತಂಕದಿಂದ ಪ್ರೇರಿತವಾಗಿದೆ. ಈ ಬಗ್ಗೆ ಸದನಕ್ಕೆ ಸ್ಪಷ್ಟತೆ ಇರಲಿ: ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತಿರುವ ರಶ್-ಬುಕ್ಕಿಂಗ್ ಒತ್ತಡವು ಬೇಡಿಕೆಯ ವಿರೂಪವನ್ನು ಪ್ರತಿಬಿಂಬಿಸುತ್ತದೆಯೇ ಹೊರತು ಉತ್ಪಾದನೆ ಅಥವಾ ಪೂರೈಕೆಯ ವೈಫಲ್ಯವನ್ನಲ್ಲ. ಡೆಲಿವರಿ ಅಥೆಂಟಿಕೇಶನ್ ಕೋಡ್ ವ್ಯಾಪ್ತಿಯನ್ನು ಶೇ 50 ರಿಂದ ಶೇ 90 ರಷ್ಟು ಗ್ರಾಹಕರಿಗೆ ವಿಸ್ತರಿಸಲಾಗುತ್ತಿದೆ; ಈ ವ್ಯವಸ್ಥೆಯ ಅಡಿಯಲ್ಲಿ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಗೆ ಬರುವ ಒನ್-ಟೈಮ್ ಕೋಡ್ ಮೂಲಕ ಸ್ವೀಕೃತಿಯನ್ನು ಖಚಿತಪಡಿಸಿದಾಗ ಮಾತ್ರ ಸಿಲಿಂಡರ್ ವಿತರಣೆಯಾಗಿದೆ ಎಂದು ದಾಖಲಿಸಲು ಸಾಧ್ಯವಾಗುತ್ತದೆ. ಇದರಿಂದ ದಾಖಲೆರಹಿತ ಅಕ್ರಮ ವರ್ಗಾವಣೆಯನ್ನು ಮರೆಮಾಚುವುದು ಅಸಾಧ್ಯವಾಗುತ್ತದೆ. ಬೇಡಿಕೆ ನಿರ್ವಹಣಾ ಕ್ರಮವಾಗಿ ನಗರ ಪ್ರದೇಶಗಳಲ್ಲಿ ಕನಿಷ್ಠ 25 ದಿನಗಳ ಮತ್ತು ಗ್ರಾಮೀಣ ಹಾಗೂ ದುರ್ಗಮ ಕ್ಷೇತ್ರ ಪ್ರದೇಶಗಳಲ್ಲಿ 45 ದಿನಗಳ ಬುಕ್ಕಿಂಗ್ ಅಂತರವನ್ನು ಪರಿಚಯಿಸಲಾಗಿದೆ. ಒಎಂಸಿ ಕ್ಷೇತ್ರ ಅಧಿಕಾರಿಗಳು ಮತ್ತು ಕಲಬೆರಕೆ ವಿರೋಧಿ ಘಟಕವು ವಿತರಕರ ಮಟ್ಟದಲ್ಲಿ ಜಾರಿ ಕ್ರಮಗಳನ್ನು ಸಂಯೋಜಿಸುತ್ತಿವೆ. ಕೇಂದ್ರದ ಪೂರೈಕೆ ಮತ್ತು ಜಾರಿ ಚೌಕಟ್ಟಿನೊಂದಿಗೆ ರಾಜ್ಯ ಮಟ್ಟದ ಆಡಳಿತವನ್ನು ಹೊಂದಿಸಲು ಗೃಹ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.
ಮಾನ್ಯ ಸಭಾಧ್ಯಕ್ಷರೇ,
8. ವಾಣಿಜ್ಯ ಎಲ್ ಪಿ ಜಿ ಯನ್ನು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಲು ನಿಯಂತ್ರಿಸಲಾಗಿದೆಯೇ ಹೊರತು ಆತಿಥ್ಯ ಕ್ಷೇತ್ರಕ್ಕೆ ದಂಡ ವಿಧಿಸಲು ಅಲ್ಲ. ವಾಣಿಜ್ಯ ಎಲ್ ಪಿ ಜಿಯನ್ನು ಯಾವುದೇ ಸರ್ಕಾರಿ ಸಬ್ಸಿಡಿ ಇಲ್ಲದೆ, ಸಂಪೂರ್ಣವಾಗಿ ಅನಿಯಂತ್ರಿತವಾದ 'ಓವರ್-ದಿ-ಕೌಂಟರ್' ಮಾರುಕಟ್ಟೆಯಲ್ಲಿ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದಕ್ಕೆ ಯಾವುದೇ ನೋಂದಣಿ ವ್ಯವಸ್ಥೆ, ಬುಕ್ಕಿಂಗ್ ಅಗತ್ಯತೆ, ಡಿಜಿಟಲ್ ದೃಢೀಕರಣ ಅಥವಾ ವಿತರಣಾ ದೃಢೀಕರಣ ಕಾರ್ಯವಿಧಾನವಿರುವುದಿಲ್ಲ. ಸಾಮಾನ್ಯ ಸಮಯದಲ್ಲಿ ಯಾವುದೇ ವ್ಯಾಪಾರ ಅಥವಾ ವ್ಯಕ್ತಿಯು ಯಾವುದೇ ಪ್ರಮಾಣದ ಸಿಲಿಂಡರ್ ಗಳನ್ನು ಮಾರಾಟದ ಸ್ಥಳದಲ್ಲಿ ಖರೀದಿಸಬಹುದು, ಅಲ್ಲಿ ಸರ್ಕಾರದ ನಿಯಂತ್ರಣವಿರುವುದಿಲ್ಲ. ಪೂರೈಕೆಯ ಮಿತಿ ಇರುವ ಮತ್ತು ಸಾರ್ವಜನಿಕ ಆತಂಕ ಹೆಚ್ಚಿರುವ ಇಂತಹ ಪರಿಸ್ಥಿತಿಯಲ್ಲಿ, ಈ ಅನಿಯಂತ್ರಿತ ರಚನೆಯು ದಾಸ್ತಾನು ಸಂಗ್ರಹಣೆ, ಅಕ್ರಮ ವರ್ಗಾವಣೆ ಮತ್ತು ಹೆಚ್ಚಿನ ಬೆಲೆಗೆ ಮರುಮಾರಾಟ ಮಾಡಲು ನೇರವಾದ ಮತ್ತು ಅನಿಯಂತ್ರಿತ ದಾರಿಯನ್ನು ಮಾಡಿಕೊಡುತ್ತದೆ. ಒಂದು ವೇಳೆ ವಾಣಿಜ್ಯ ಪೂರೈಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸದೆ ಬಿಟ್ಟಿದ್ದರೆ, ಕೌಂಟರ್ ಗಳಲ್ಲಿ ಖರೀದಿಸಿದ ಸಿಲಿಂಡರ್ ಗಳನ್ನು ನೈಜ ವಾಣಿಜ್ಯ ಗ್ರಾಹಕರು ಮತ್ತು ದೇಶೀಯ ಕುಟುಂಬಗಳ ಹಿತಾಸಕ್ತಿಗೆ ಧಕ್ಕೆ ತಂದು ಕಪ್ಪು ಮಾರುಕಟ್ಟೆಗೆ ವರ್ಗಾಯಿಸುವ ಸಾಧ್ಯತೆಯಿರುತ್ತಿತ್ತು. ಆದ್ದರಿಂದ ಸರ್ಕಾರವು ಜವಾಬ್ದಾರಿಯುತ ಕ್ರಮವನ್ನು ಕೈಗೊಂಡಿದೆ: ಸ್ಪಷ್ಟ ಆದ್ಯತೆಗಳು ಮತ್ತು ಪಾರದರ್ಶಕ ಹಂಚಿಕೆ ಕಾರ್ಯವಿಧಾನದೊಂದಿಗೆ ಈ ಚಾನಲ್ ಅನ್ನು ನಿಯಂತ್ರಿಸುವುದು. IOCL, HPCL ಮತ್ತು BPCL ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು 9 ಮಾರ್ಚ್ 2026 ರಂದು ರಚಿಸಲಾಗಿದೆ. ದೇಶಾದ್ಯಂತದ ರಾಜ್ಯ ನಾಗರಿಕ ಪೂರೈಕೆ ಇಲಾಖೆಗಳು ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಗಳೊಂದಿಗೆ ವ್ಯಾಪಕವಾದ ಸಭೆಗಳನ್ನು ನಡೆಸಲಾಗಿದೆ ಮತ್ತು ಅವು ಮುಂದುವರಿಯುತ್ತಿವೆ. ಲಭ್ಯವಿರುವ ವಾಣಿಜ್ಯ ಪ್ರಮಾಣವು ಮೊದಲು ನೈಜ ಬಳಕೆದಾರರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ಸಮಿತಿಯು ಭೌಗೋಳಿಕ ಮತ್ತು ವಲಯವಾರು ನೈಜ ಅಗತ್ಯಗಳನ್ನು ಮೌಲ್ಯಮಾಪನ ಮಾಡಿದೆ. ಒಂದು ಪ್ರಮುಖ ನಿರ್ಧಾರದಲ್ಲಿ, ಸರಾಸರಿ ಮಾಸಿಕ ವಾಣಿಜ್ಯ ಎಲ್ಪಿಜಿ ಅಗತ್ಯದ ಶೇ 20 ರಷ್ಟನ್ನು ಇಂದಿನಿಂದಲೇ ಒಎಂಸಿಗಳು (OMCs) ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ಹಂಚಿಕೆ ಮಾಡುತ್ತಿವೆ, ಇದರಿಂದ ಯಾವುದೇ ಸಂಗ್ರಹಣೆ ಅಥವಾ ಕಪ್ಪು ಮಾರುಕಟ್ಟೆ ನಡೆಯುವುದಿಲ್ಲ.
ಮಾನ್ಯ ಸಭಾಧ್ಯಕ್ಷರೇ,
9. ಎಲ್ ಪಿ ಜಿ ಮತ್ತು ಅನಿಲ ಮಾರ್ಗಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪರ್ಯಾಯ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಚಿಲ್ಲರೆ ಮಳಿಗೆಗಳು ಮತ್ತು ಪಡಿತರ (PDS) ಚಾನೆಲ್ ಗಳ ಮೂಲಕ ಸೀಮೆಎಣ್ಣೆಯನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ ಮತ್ತು ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರಿಗೆ ಇಂಧನ ತೈಲವನ್ನು (fuel oil) ಒದಗಿಸಲಾಗುತ್ತಿದೆ. ಈ ಬಿಕ್ಕಟ್ಟಿನ ಅವಧಿಯಲ್ಲಿ, 1 ತಿಂಗಳವರೆಗೆ ಆತಿಥ್ಯ ಮತ್ತು ರೆಸ್ಟೋರೆಂಟ್ ವಿಭಾಗಕ್ಕೆ ಪರ್ಯಾಯ ಇಂಧನಗಳಾಗಿ ಜೈವಿಕ ರಾಶಿ (biomass), ಆರ್ಡಿಎಫ್ (RDF) ಪೆಲೆಟ್ ಗಳು ಮತ್ತು ಸೀಮೆಎಣ್ಣೆ/ಕಲ್ಲಿದ್ದಲನ್ನು ಬಳಸಲು ಅನುಮತಿಸುವಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಲಹೆ ನೀಡಿದೆ. ಇದು ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಇಂಧನ ಬದಲಾವಣೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಆದ್ಯತೆಯ ಗ್ರಾಹಕರಿಗೆ ಎಲ್ಪಿಜಿಯನ್ನು ಮುಕ್ತಗೊಳಿಸುತ್ತದೆ.
10. ಗ್ರಾಹಕರ ಬೆಲೆಗಳನ್ನು ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳಿಂದ ರಕ್ಷಿಸಲಾಗಿದೆ. ಜುಲೈ 2023 ಮತ್ತು ಮಾರ್ಚ್ 2026 ರ ನಡುವೆ ಸೌದಿ ಕಾಂಟ್ರಾಕ್ಟ್ ಬೆಲೆಯು ಶೇ 41 ರಷ್ಟು ಏರಿಕೆಯಾಗಿದ್ದರೂ, ಇದೇ ಅವಧಿಯಲ್ಲಿ PMUY ಫಲಾನುಭವಿಗಳ ಬೆಲೆಯು ಶೇ 32 ರಷ್ಟು ಇಳಿಕೆಯಾಗಿದೆ ಮತ್ತು ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ರೂ. 613 ರಷ್ಟಿದೆ. ಸುಮಾರು ರೂ. 987 ರಷ್ಟು ಮಾರುಕಟ್ಟೆ ನಿರ್ಧಾರಿತ ಬೆಲೆಯ ವಿರುದ್ಧವಾಗಿ, ಇತ್ತೀಚಿನ ರೂ. 60 ರ ಹೊಂದಾಣಿಕೆಯ ನಂತರ ಸಬ್ಸಿಡಿ ರಹಿತ ಗ್ರಾಹಕರ ಬೆಲೆ ರೂ. 913 ರಷ್ಟಿದೆ. ಪ್ರಸ್ತುತ ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಪ್ರತಿ ಸಿಲಿಂಡರ್ ಗೆ ಅಗತ್ಯವಿದ್ದ ರೂ. 134 ರ ಹೊಂದಾಣಿಕೆಯಲ್ಲಿ ಸರ್ಕಾರವು ರೂ. 74 ನ್ನು ಭರಿಸಿದೆ. ಒಂದು PMUY ಕುಟುಂಬಕ್ಕೆ ತಗುಲುವ ಪರಿಣಾಮಕಾರಿ ಹೆಚ್ಚುವರಿ ವೆಚ್ಚ ದಿನಕ್ಕೆ 80 ಪೈಸೆಗಿಂತ ಕಡಿಮೆಯಿದೆ. ನೆರೆಹೊರೆಯ ದೇಶಗಳಲ್ಲಿನ ಸಮಾನ ಎಲ್ಪಿಜಿ ಬೆಲೆಗಳು ಪಾಕಿಸ್ತಾನದಲ್ಲಿ ರೂ. 1,046, ಶ್ರೀಲಂಕಾದಲ್ಲಿ ರೂ. 1,242 ಮತ್ತು ನೇಪಾಳದಲ್ಲಿ ರೂ. 1,208 ರಷ್ಟಿವೆ. 2024-25ರಲ್ಲಿ ಸಂಭವಿಸಿದ ಸರಿಸುಮಾರು ರೂ. 40,000 ಕೋಟಿ ನಷ್ಟದ ವಿರುದ್ಧ ಒಎಂಸಿಗಳಿಗೆ ರೂ. 30,000 ಕೋಟಿ ಪರಿಹಾರವನ್ನು ಅನುಮೋದಿಸಲಾಗಿದೆ.
ಮಾನ್ಯ ಸಭಾಧ್ಯಕ್ಷರೇ,
11. ರಾಜ್ಯ ಸರ್ಕಾರಗಳು ಪೂರ್ಣ ಸಹಕಾರ ಮತ್ತು ಸಕ್ರಿಯ ಸಮನ್ವಯದೊಂದಿಗೆ ಸ್ಪಂದಿಸಿವೆ. 11 ಮಾರ್ಚ್ 2026 ರಂದು, ಹಿರಿಯ ಒಎಂಸಿ (OMC) ಅಧಿಕಾರಿಗಳು ಪ್ರತಿಯೊಂದು ಪ್ರಮುಖ ರಾಜ್ಯಗಳ ಆಡಳಿತಗಳನ್ನು ಭೇಟಿ ಮಾಡಿದ್ದಾರೆ: ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಗಢ, ಗುಜರಾತ್, ಗೋವಾ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಪಂಜಾಬ್, ಹೈಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಉತ್ತರಾಖಂಡ, ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ. ಮುಖ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಪೂರೈಕೆಯ ಸ್ಥಿತಿ, ಆದ್ಯತೆಯ ಅನುಕ್ರಮ ಮತ್ತು ಜಾರಿ ಚೌಕಟ್ಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸಲಾಗುತ್ತಿದೆ. ಅಕ್ರಮ ವರ್ಗಾವಣೆ ವಿರೋಧಿ ದಾಳಿಗಳನ್ನು ನಡೆಸಲಾಗಿದ್ದು, ಹಲವು ರಾಜ್ಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ರಾಷ್ಟ್ರೀಯ ಸವಾಲಿಗೆ ಅಗತ್ಯವಿರುವ ಸಮನ್ವಯದೊಂದಿಗೆ ಸ್ಪಂದಿಸುತ್ತಿರುವ ಸಹಕಾರಿ ಒಕ್ಕೂಟ ವ್ಯವಸ್ಥೆಯಾಗಿದೆ.
ಮಾನ್ಯ ಸಭಾಧ್ಯಕ್ಷರೇ,
12. ಇದು ವದಂತಿಗಳನ್ನು ಹರಡಲು ಅಥವಾ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಲು ಸರಿಯಾದ ಸಮಯವಲ್ಲ. ದಾಖಲಿತ ಇತಿಹಾಸದಲ್ಲೇ ಅತ್ಯಂತ ತೀವ್ರವಾದ ಜಾಗತಿಕ ಇಂಧನ ಅಡಚಣೆಯನ್ನು ಭಾರತವು ಎದುರಿಸುತ್ತಿದೆ. ಕಚ್ಚಾ ತೈಲ ಪೂರೈಕೆಯು ಹರಿಯುತ್ತಿದೆ. ಮನೆಗಳು ಮತ್ತು ಹೊಲಗಳಿಗೆ ಅನಿಲ ಪೂರೈಕೆಗೆ ಆದ್ಯತೆ ನೀಡಲಾಗಿದೆ. ಎಲ್ ಪಿ ಜಿ ಉತ್ಪಾದನೆಯನ್ನು ಶೇ 28 ರಷ್ಟು ಹೆಚ್ಚಿಸಲಾಗಿದೆ. ಗ್ರಾಹಕರ ಬೆಲೆಗಳನ್ನು ಮಾರುಕಟ್ಟೆ ಮತ್ತು ಪ್ರಾದೇಶಿಕ ತುಲನಾತ್ಮಕ ಬೆಲೆಗಳಿಗಿಂತ ತೀರಾ ಕಡಿಮೆ ಮಟ್ಟದಲ್ಲಿ ಇರಿಸಲಾಗಿದೆ. ಶಾಲೆಗಳು ತೆರೆದಿವೆ. ಪೆಟ್ರೋಲ್ ಲಭ್ಯವಿದೆ. ರಾಜಕೀಯ ಸಂಬಂಧಗಳನ್ನು ಮೀರಿ ಪ್ರತಿಯೊಬ್ಬ ನಾಗರಿಕನಿಗೂ ಇದರಲ್ಲಿ ಹಿತಾಸಕ್ತಿಯಿದೆ. ಭಾರತವು ತನ್ನ ಇಂಧನ ಯೋಧರ ಹಿಂದೆ, ಈ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ಸಂಸ್ಥೆಗಳ ಹಿಂದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಹಿಂದೆ ಒಗ್ಗಟ್ಟಿನಿಂದ ನಿಲ್ಲಬೇಕು. ನಮ್ಮ ಸಿದ್ಧತೆ ಮತ್ತು ಸ್ಪಂದನೆಯ ದಾಖಲೆಗಳೇ ಎಲ್ಲವನ್ನೂ ಹೇಳುತ್ತವೆ.
******
(ಪ್ರಕಟಣೆ ಐ.ಡಿ.: 2239105)
ವಿಸಿಟರ್ ಕೌಂಟರ್ : 32