ಸಹಕಾರ ಸಚಿವಾಲಯ
ʻಭಾರತ್ ಟ್ಯಾಕ್ಸಿʼಯ ʻಸಾರಥಿʼಗಳ ಜೊತೆ ಸಂವಾದ ನಡೆಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
'ಸಹಕಾರ' ಎಂದರೆ ದುಡಿಮೆ ಮಾಡುವವರಿಗೆ ಲಾಭದಲ್ಲಿ ಪಾಲು ನೀಡುವುದು ಎಂದರ್ಥ
'ಸಾರಥಿ'ಗಳನ್ನು ಸಂಸ್ಥೆಯ ಲಾಭದಲ್ಲಿ ಮಾಲೀಕರನ್ನಾಗಿ ಮಾಡುವುದೇ 'ಭಾರತ್ ಟ್ಯಾಕ್ಸಿ'ಯ ಉದ್ದೇಶವಾಗಿದೆ
ʻಭಾರತ್ ಟ್ಯಾಕ್ಸಿʼಯು ಕೇವಲ ಟ್ಯಾಕ್ಸಿ ಯೋಜನೆಯಲ್ಲ; ಚಾಲಕ ಸಹೋದರರು ಮತ್ತು ಸಹೋದರಿಯರನ್ನು ಗೌರವಾನ್ವಿತ 'ಸಾರಥಿ'ಗಳನ್ನಾಗಿ ಪರಿವರ್ತಿಸುವ ಉಪಕ್ರಮ ಇದಾಗಿದೆ
'ಸಾರಥಿ' ಎಂಬ ಪದವು ಈಗ ಘನತೆ ಮತ್ತು ಸ್ವಾಭಿಮಾನದ ಸಂಕೇತವಾಗಲಿದೆ
ಗ್ರಾಹಕರು ಮತ್ತು ʻಸಾರಥಿʼಗಳಿಗೆ ಶಿಸ್ತು ತರುವ ಮೂಲಕ ʻಭಾರತ್ ಟ್ಯಾಕ್ಸಿʼಯು ನಾಗರಿಕ ಪ್ರಜ್ಞೆಯನ್ನು ಉತ್ತೇಜಿಸುತ್ತದೆ
ಟ್ಯಾಕ್ಸಿ ಕಂಪನಿಗಳು ಚಾಲಕರಿಗೆ ವಿಧಿಸುತ್ತಿದ್ದ ಕಮಿಷನ್ ಕಡಿತಗೊಳಿಸಿರುವುದು, ಪ್ರಯಾಣಿಕರಿಗೆ ರಿಯಾಯಿತಿ ನೀಡುತ್ತಿರುವುದು 'ಭಾರತ್ ಟ್ಯಾಕ್ಸಿ'ಯ ಬಲದ ಪರಿಣಾಮವಾಗಿದೆ. ಟ್ಯಾಕ್ಸಿ ಕಂಪನಿಗಳ ಗುರಿ ಚಾಲಕರು ಅಥವಾ ಪ್ರಯಾಣಿಕರ ಅನುಕೂಲವಲ್ಲ, ಬದಲಿಗೆ, ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದೇ ಆಗಿರುತ್ತದೆ
ʻಸಾರಥಿʼಗಳು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ʻಭಾರತ್ ಟ್ಯಾಕ್ಸಿʼ ದಾರಿ ಮಾಡಿಕೊಡುತ್ತದೆ
'ಭಾರತ್ ಟ್ಯಾಕ್ಸಿ'ಯ ನಿರ್ದೇಶಕರ ಮಂಡಳಿಯಲ್ಲಿ ʻಸಾರಥಿʼಗಳ ಪ್ರತಿನಿಧಿಗಳನ್ನು ಸಹ ಸೇರಿಸಲಾಗಿದೆ
ಮುಂದಿನ ಮೂರು ವರ್ಷಗಳಲ್ಲಿ ದೇಶದ ಪ್ರತಿ ಮಹಾನಗರ ಪಾಲಿಕೆಯಲ್ಲಿ 'ಭಾರತ್ ಟ್ಯಾಕ್ಸಿ' ಇರಲಿದೆ
ʻಸಾರಥಿʼಗಳಿಗೆ ಷೇರುಗಳನ್ನು ನೀಡುವ ಮೂಲಕ ಮತ್ತು ಅವರನ್ನು ಮಾಲೀಕರನ್ನಾಗಿ ಮಾಡುವ ಮೂಲಕ, ವಿಮೆ ಮತ್ತು ಸುಲಭ ಸಾಲಗಳನ್ನು ಒದಗಿಸುವ ಮೂಲಕ, ʻಭಾರತ್ ಟ್ಯಾಕ್ಸಿʼಯು ಇಂತಹ ಪ್ರಯೋಜನಗಳನ್ನು ನೀಡುವ ಮೊದಲ ಟ್ಯಾಕ್ಸಿ ಸೇವೆ ಎನಿಸಲಿದೆ
ನೋಟಿಫಿಕೇಶನ್‌ಗಳ ಮುಖೇನ ʻಸಾರಥಿʼಗಳಿಗೆ ಪ್ರತಿಯೊಂದು ಮಾಹಿತಿಯನ್ನು ಒದಗಿಸುವ ಮೂಲಕ, 'ಭಾರತ್ ಟ್ಯಾಕ್ಸಿ' ವಿಶ್ವದ ಅತ್ಯಂತ ಪಾರದರ್ಶಕ ʻಕ್ಯಾಬ್ʼ ಸೇವೆಯಾಗಲಿದೆ
ಭಾರತ್ ಟ್ಯಾಕ್ಸಿಯ 'ಸಾರಥಿ ದೀದಿ' ಸೌಲಭ್ಯವು ಮಹಿಳಾ ಸಾರಥಿಗಳನ್ನು ಸ್ವಾವಲಂಬಿಗಳಾಗಲು; ಜೊತೆಗೆ ಮಹಿಳಾ ಪ್ರಯಾಣಿಕರು ಮತ್ತು ಚಾಲಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ
ದೂರು ವ್ಯವಸ್ಥೆಯ ಮೂಲಕ, ʻಸಾರಥಿʼಗಳ ಎಲ್ಲಾ ಕಳವಳಗಳನ್ನು ʻಭಾರತ್ ಟ್ಯಾಕ್ಸಿʼಯಲ್ಲಿ ಪರಿಹರಿಸಲಾಗುವುದು
ಪ್ರಕಟಣಾ ದಿನಾಂಕ:
23 FEB 2026 2:42PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ʻಭಾರತ್ ಟ್ಯಾಕ್ಸಿʼಯ 'ಸಾರಥಿ'ಗಳ ಜೊತೆ ಸಂವಾದ ನಡೆಸಿದರು.
ಸಂವಾದದ ಸಮಯದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕಾರ್ಮಿಕರು ಲಾಭವನ್ನು ಪಡೆಯಬೇಕು ಎಂದು ಒತ್ತಿ ಹೇಳಿದರು. ಟ್ಯಾಕ್ಸಿ ಮಾಲೀಕರನ್ನು ಸಮೃದ್ಧರನ್ನಾಗಿ ಮಾಡುವುದು ಇದರ ಉದ್ದೇಶವಾಗಿದ್ದು, 'ಸಾರಥಿ'ಗಳೇ ನಿಜವಾದ ಮಾಲೀಕರು ಎಂದು ಅವರು ಹೇಳಿದರು. 'ಸಾರಥಿಗಳು' ಭಾರತ್ ಟ್ಯಾಕ್ಸಿಯ ಮಾಲೀಕರಾಗಿದ್ದಾರೆ ಮತ್ತು ಅದರ ಲಾಭದಲ್ಲಿ ಪಾಲು ಹೊಂದಿರುತ್ತಾರೆ ಎಂದು ಶ್ರೀ ಶಾ ಹೇಳಿದರು. ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಪ್ರತಿ ಮಹಾನಗರ ಪಾಲಿಕೆಯಲ್ಲಿ 'ಭಾರತ್ ಟ್ಯಾಕ್ಸಿ' ಇರಲಿದೆ ಎಂದು ಸಹಕಾರ ಸಚಿವರು ಹೇಳಿದರು.
ದೇಶದ ಐದು ಪ್ರಮುಖ ಸಹಕಾರಿ ಸಂಘಗಳನ್ನು ಒಟ್ಟುಗೂಡಿಸುವ ಮೂಲಕ ʻಭಾರತ್ ಟ್ಯಾಕ್ಸಿʼಯನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 'ಸಾರಥಿ'ಗಳ ಸಂಖ್ಯೆ ಹೆಚ್ಚಾದಂತೆ, ಪಾಲುದಾರರಾಗಲು ಬಯಸುವ ಯಾವುದೇ 'ಸಾರಥಿ' ₹500 ಮೌಲ್ಯದ ಷೇರುಗಳನ್ನು ಖರೀದಿಸುವ ಮೂಲಕ ಮಾಲೀಕತ್ವದ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಅವರು ಮಾಹಿತಿ ನೀಡಿದರು. ʻಭಾರತ್ ಟ್ಯಾಕ್ಸಿʼಯ ನಿರ್ದೇಶಕರ ಮಂಡಳಿಗೆ ಚುನಾವಣೆ ನಡೆದಾಗ, ಕೆಲವು ಸ್ಥಾನಗಳನ್ನು ʻಸಾರಥಿʼಗಳಿಗೆ ಮೀಸಲಿಡಲಾಗುವುದು. ʻಸಾರಥಿʼಗಳು ನಿರ್ದೇಶಕರ ಮಂಡಳಿಯ ಭಾಗವಾದ ನಂತರ, ಅವರು ಸ್ವತಃ ಇತರ ಚಾಲಕರ ಹಿತಾಸಕ್ತಿಗಳು ಮತ್ತು ಕಾಳಜಿಗಳನ್ನು ರಕ್ಷಿಸುತ್ತಾರೆ ಮತ್ತು ಪ್ರತಿನಿಧಿಸುತ್ತಾರೆ ಎಂದು ಶ್ರೀ ಶಾ ಹೇಳಿದರು
ಖಾಸಗಿ ಕಂಪನಿಯಂತೆ ದೊಡ್ಡ ಲಾಭ ಗಳಿಸುವುದು ʻಭಾರತ್ ಟ್ಯಾಕ್ಸಿʼಯ ಉದ್ದೇಶವಲ್ಲ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ನಮ್ಮ ಚಾಲಕ ಸಹೋದರರನ್ನು ಬಲಪಡಿಸುವುದು ʻಭಾರತ್ ಟ್ಯಾಕ್ಸಿʼಯ ಗುರಿಯಾಗಿದೆ. ʻಭಾರತ್ ಟ್ಯಾಕ್ಸಿʼಯ ಷೇರುಗಳನ್ನು ಸಾರಥಿಗಳು ಹೊಂದಿದ್ದು, ಅವರೇ ಟ್ಯಾಕ್ಸಿಯ ಮಾಲೀಕರಾಗಿರುತ್ತಾರೆ. ಆದ್ದರಿಂದ, ʻಭಾರತ್ ಟ್ಯಾಕ್ಸಿʼಯ ನೀತಿಗಳನ್ನು ಸಹ ಸಾರಥಿಗಳೇ ನಿರ್ಧರಿಸುತ್ತಾರೆ. ʻಭಾರತ್ ಟ್ಯಾಕ್ಸಿʼಯು ಚಾಲಕರ ಸ್ವಂತ ಕಂಪನಿಯಾಗಿದ್ದು, ಸಹಕಾರವು ಅದರ ಮಾರ್ಗದರ್ಶಿ ಸೂತ್ರವಾಗಬೇಕು ಎಂದು ಅವರು ಹೇಳಿದರು. ʻಭಾರತ್ ಟ್ಯಾಕ್ಸಿʼ ಸೇವೆಯು ʻಸಾರಥಿʼಗಳ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆಯೇ ಹೊರತು ಅವರನ್ನು ಶೋಷಣೆ ಮಾಡುವುದಿಲ್ಲ ಎಂದು ಹೇಳಿದರು.
ʻಭಾರತ್ ಟ್ಯಾಕ್ಸಿʼಯ ಒಟ್ಟು ಗಳಿಕೆಯ ಶೇಕಡಾ 20 ರಷ್ಟನ್ನು ಸಾರಥಿಗಳ ಬಂಡವಾಳದ ರೂಪದಲ್ಲಿ ʻಭಾರತ್ ಟ್ಯಾಕ್ಸಿಯ ಖಾತೆಗೆ ಜಮಾ ಮಾಡಲಾಗುವುದು ಮತ್ತು ಟ್ಯಾಕ್ಸಿ ಎಷ್ಟು ಕಿಲೋಮೀಟರ್ ಪ್ರಯಾಣಿಸಿದೆ ಎಂಬುದರ ಆಧಾರದ ಮೇಲೆ ಶೇಕಡಾ 80 ರಷ್ಟು ಹಣವನ್ನು ʻಸಾರಥಿʼಗಳ ಖಾತೆಗಳಿಗೆ ಹಿಂದಿರುಗಿಸಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಆರಂಭಿಕ 3 ವರ್ಷಗಳು ಭಾರತ್ ಟ್ಯಾಕ್ಸಿಯ ವಿಸ್ತರಣೆಗೆ ವಿನಿಯೋಗವಾಗಲಿವೆ ಮತ್ತು ಅದರ ನಂತರ, ಗಳಿಸಿದ ಲಾಭದಲ್ಲಿ ಶೇಕಡಾ 20 ರಷ್ಟು ಭಾರತ್ ಟ್ಯಾಕ್ಸಿಯಲ್ಲಿಯೇ ಉಳಿಯುತ್ತದೆ ಮತ್ತು ಶೇಕಡಾ 80 ರಷ್ಟನ್ನು ಸಾರಥಿ ಸಹೋದರರಿಗೆ ಹಿಂದಿರುಗಿಸಲಾಗುವುದು ಎಂದು ಶ್ರೀ ಶಾ ಹೇಳಿದರು.
ʻಭಾರತ್ ಟ್ಯಾಕ್ಸಿʼಯ ಪ್ರಾರಂಭವು ಒಂದು ಪ್ರಮುಖ ಸಹಕಾರಿ ಆಂದೋಲನವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇದರ ಅಡಿಯಲ್ಲಿ ʻಭಾರತ್ ಟ್ಯಾಕ್ಸಿʼಯು ಸಾರಥಿಗಳ ಟ್ಯಾಕ್ಸಿಗಳನ್ನು ಅಡಮಾನ ಇಡುತ್ತದೆ ಮತ್ತು ಅವರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಒದಗಿಸುತ್ತದೆ ಎಂದು ಅವರು ಹೇಳಿದರು.
ʻಭಾರತ್ ಟ್ಯಾಕ್ಸಿʼಯಲ್ಲಿ ಮರೆಮಾಚುವಂಥದ್ದು ಏನೂ ಇರುವುದಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ನೋಟಿಫಿಕೇಶನ್‌ಗಳ ಮುಖೇನ ಸಾರಥಿಗಳಿಗೆ ಪ್ರತಿಯೊಂದು ಮಾಹಿತಿಯನ್ನು ಒದಗಿಸುವ ಮೂಲಕ, 'ಭಾರತ್ ಟ್ಯಾಕ್ಸಿ' ವಿಶ್ವದ ಅತ್ಯಂತ ಪಾರದರ್ಶಕ ಕ್ಯಾಬ್ ಸೇವೆಯಾಗಲಿದೆ ಎಂದು ಅವರು ಹೇಳಿದರು. ಸಾರಥಿಗಳ ಕನಿಷ್ಠ ಕಾರ್ಯಸಾಧ್ಯತೆಯ ಆಧಾರದ ಮೇಲೆ ಬೇಸ್‌ಲೈನ್ ಕಿಲೋಮೀಟರ್ ದರವನ್ನು ನಿಗದಿಪಡಿಸುವ ಮೂಲಕ ಭಾರತ್ ಟ್ಯಾಕ್ಸಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ʻಭಾರತ್ ಟ್ಯಾಕ್ಸಿʼಯಲ್ಲಿ, ವಾಹನದ ವೆಚ್ಚ, ಇಂಧನ ಬಳಕೆ ಮತ್ತು ಕನಿಷ್ಠ ಲಾಭವನ್ನು ಸಂಯೋಜಿಸುವ ಮೂಲಕ ಮೂಲ ದರವನ್ನು ನಿರ್ಧರಿಸಲಾಗುವುದು ಮತ್ತು ಸೇವೆಯು ಈ ದರಕ್ಕಿಂತ ಕಡಿಮೆ ಮಟ್ಟದ್ಲಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಶ್ರೀ ಶಾ ವಿವರಿಸಿದರು. ಲಾಭ ಗಳಿಸುವುದು ಭಾರತ್ ಟ್ಯಾಕ್ಸಿಯ ಉದ್ದೇಶವಲ್ಲ, ಏಕೆಂದರೆ ಸಾರಥಿಗಳು ಸ್ವತಃ ಈ ಸಹಕಾರಿ ಸಂಘದ ಮಾಲೀಕರಾಗಿದ್ದಾರೆ ಎಂದು ಶ್ರೀ ಶಾ ಹೇಳಿದರು.
ʻಭಾರತ್ ಟ್ಯಾಕ್ಸಿʼಯಲ್ಲಿ 'ಸಾರಥಿ ದೀದಿ' (ಮಹಿಳಾ ಚಾಲಕರು) ಪರಿಕಲ್ಪನೆಯನ್ನು ರೂಪಿಸಲಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಮಾಹಿತಿ ನೀಡಿದರು. ʻಭಾರತ್ ಟ್ಯಾಕ್ಸಿʼಯ 'ಸಾರಥಿ ದೀದಿ' ಸೌಲಭ್ಯವು ಮಹಿಳೆಯರನ್ನು ಸಾರಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ; ಜೊತೆಗೆ ಮಹಿಳಾ ಪ್ರಯಾಣಿಕರು ಮತ್ತು ಸಾರಥಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಮುಂಬರುವ ದಿನಗಳಲ್ಲಿ, ಭಾರತ್ ಟ್ಯಾಕ್ಸಿ ತಂತ್ರಾಂಶದಲ್ಲಿ 'ಸಾರಥಿ ದೀದಿ' ಹೆಸರಿನಲ್ಲಿ ಅವಕಾಶ ಕಲ್ಪಿಸಲಾಗುವುದು. ಇದರಿಂದಾಗಿ ಏಕವ್ಯಕ್ತಿ ಮಹಿಳಾ ಪ್ರಯಾಣಿಕರು ಇದ್ದಾಗಲೆಲ್ಲಾ, ಸ್ವಾಭಾವಿಕವಾಗಿ ಅವರಿಗೆ 'ಸಾರಥಿ ದೀದಿ'ಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಸಾರಥಿಗಳ ಕುಂದುಕೊರತೆಗಳಿಗಾಗಿ ʻಭಾರತ್ ಟ್ಯಾಕ್ಸಿʼ ವೆಬ್‌ಸೈಟ್‌ನಲ್ಲಿ ಒಂದು ವಿಭಾಗವನ್ನು ತೆರೆಯಲಾಗುವುದು, ಅಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಬಹುದು ಮತ್ತು ಅವರ ಎಲ್ಲಾ ಸಮಸ್ಯೆಗಳನ್ನು ದಾಖಲಿಸಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಇವುಗಳ ಆಧಾರದ ಮೇಲೆ, ನಾವು ಅದಕ್ಕೆ ಅನುಗುಣವಾಗಿ ನೀತಿಗಳನ್ನು ಪರಿಷ್ಕರಿಸಲು ಸಾಧ್ಯವಾಗುತ್ತದೆ. ʻಭಾರತ್ ಟ್ಯಾಕ್ಸಿʼ ಸಾರಥಿಗಳ ಸಮಸ್ಯೆಗಳನ್ನು ಪರಿಹರಿಸುವಂತೆಯೇ, ಇತರ ಟ್ಯಾಕ್ಸಿ ಕಂಪನಿಗಳು ಸಹ ಅದೇ ರೀತಿ ಮಾಡಬೇಕಾಗುತ್ತದೆ. ಭಾರತ್ ಟ್ಯಾಕ್ಸಿಯ ಉದ್ದೇಶವು ಗ್ರಾಹಕರನ್ನು ಸಂತೋಷವಾಗಿಡುವುದು ಮತ್ತು ಸಾರಥಿಯ ಕಲ್ಯಾಣವನ್ನು ಖಾತರಿಪಡಿಸುವುದೇ ಆಗಿರಬೇಕು ಎಂದು ಶ್ರೀ ಶಾ ಹೇಳಿದರು.
ಸಾರಥಿಗಳು ತಮ್ಮನ್ನು ಎಂದಿಗೂ ಚಾಲಕರು ಎಂದು ಗುರುತಿಸಿಕೊಳ್ಳಬಾರದು. ಬದಲಿಗೆ ಅವರು ಹೆಮ್ಮೆಯಿಂದ ತಮ್ಮನ್ನು ಸಾರಥಿಗಳು ಎಂದು ಪರಿಚಯಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸಾರಥಿಗಳ ಮನಸ್ಸಿನಲ್ಲಿ ಈ ಘನತೆ ಮತ್ತು ಹೆಮ್ಮೆಯ ಪ್ರಜ್ಞೆಯನ್ನು ತುಂಬುವುದು ʻಭಾರತ್ ಟ್ಯಾಕ್ಸಿʼಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ʻಭಾರತ್ ಟ್ಯಾಕ್ಸಿʼ ಸುಧಾರಣೆಯ ಎಲ್ಲಾ ಸಾಧ್ಯತೆಗಳನ್ನು ಅನ್ವೇಷಿಸುತ್ತದೆ ಮತ್ತು ಅದು ಮುಂದುವರಿಯುತ್ತಿದ್ದಂತೆ, ಪ್ರತಿಯೊಂದು ಸಮಸ್ಯೆಗೂ ಪರಿಹಾರಗಳು ಸಹ ಹೊರಹೊಮ್ಮುತ್ತವೆ. ʻಸಾರಥಿʼಗಳನ್ನು ನೋಡುವ ಬಗ್ಗೆ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದು ಸಹ ಸಾರಥಿಗಳ ಜವಾಬ್ದಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು.
ಸೂಕ್ತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮಾತ್ರ ಟ್ಯಾಕ್ಸಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಸ್ತುತ ಅಸ್ತಿತ್ವದಲ್ಲಿರುವ ಕಂಪನಿಗಳು ʻಸಾರಥಿʼಗಳ ಕಲ್ಯಾಣವನ್ನು ತಮ್ಮ ಉದ್ದೇಶವಾಗಿ ಹೊಂದಿಲ್ಲ. ಆದರೆ, ಭಾರತ್ ಟ್ಯಾಕ್ಸಿಯು ʻಸಾರಥಿʼಗಳ ಕಲ್ಯಾಣ ಮತ್ತು ಗ್ರಾಹಕರನ್ನು ಚೆನ್ನಾಗಿ ನಡೆಸಿಕೊಳ್ಳುವುದು ಎರಡೂ ಉದ್ದೇಶಗಳನ್ನು ಹೊಂದಿದೆ ಶ್ರೀ ಶಾ ಅವರು ಹೇಳಿದರು. ʻಸಾರಥಿʼಗಳೊಂದಿಗೆ ನಿರಂತರ ಸಂವಾದ ನಡೆಸುವ ಮತ್ತು ಅವರ ತೊಂದರೆಗಳನ್ನು ಆಲಿಸುವ ʻಭಾರತ್ ಟ್ಯಾಕ್ಸಿʼಯ ಕಾರ್ಯಕ್ರಮವು ನಿರಂತರ ಸಕ್ರಿಯವಾಗಿರುತ್ತದೆ. ಆನ್‌ಲೈನ್ ವಿಧಾನಗಳು, ಭೌತಿಕ ಸಭೆಗಳು ಮತ್ತು ಕಾಲ್‌ಸೆಂಟರ್‌ಗಳ ಮೂಲಕ ʻಸಾರಥಿʼಗಳೊಂದಿಗೆ ಸಂವಹನ ಮುಂದುವರಿಯುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
*****
(ಪ್ರಕಟಣೆ ಐ.ಡಿ.: 2231748)
ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Gujarati
,
Odia
,
Tamil
,
Telugu
,
Malayalam