ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಎಸ್ಟೋನಿಯಾ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 FEB 2026 8:35PM by PIB Bengaluru

ನವದೆಹಲಿಯಲ್ಲಿ ನಡೆದಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ನೇಪಥ್ಯದಲ್ಲಿ 2026ರ ಫೆಬ್ರವರಿ 18 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಸ್ಟೋನಿಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಅಲರ್ ಕಾರಿಸ್ ಅವರನ್ನು ಭೇಟಿಯಾದರು.

ಪ್ಯಾರಿಸ್‌ನಲ್ಲಿ ಕಳೆದ ವರ್ಷ ನಡೆದ ಎಐ ಕ್ರಿಯಾ ಶೃಂಗಸಭೆಯ ಸಂದರ್ಭದಲ್ಲಿನ ಭೇಟಿಯನ್ನು ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಅಧ್ಯಕ್ಷ ಕಾರಿಸ್ ಅವರು ನೆನಪಿಸಿಕೊಂಡರು. ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮದ ಹಂಚಿತ ಮೌಲ್ಯಗಳು ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಯ ಹಂಚಿತ ಗುರಿಗಳ ಆಧಾರದ ಮೇಲೆ ಭಾರತ-ಎಸ್ಟೋನಿಯಾ ಬಾಂಧವ್ಯವನ್ನು ಮತ್ತಷ್ಟು ವರ್ಧಿಸುವ ತಮ್ಮ ಬದ್ಧತೆಯನ್ನು ಉಭಯರು ಪುನರುಚ್ಚರಿಸಿದರು.

2026ರ ಜನವರಿಯಲ್ಲಿ ನಡೆದ 16 ನೇ ಭಾರತ - ಯೂರೋಪಿಯನ್ ಒಕ್ಕೂಟ (ಇಯು) ಶೃಂಗಸಭೆಯ ಸಂದರ್ಭದಲ್ಲಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಯಶಸ್ವಿ ಮುಕ್ತಾಯದೊಂದಿಗೆ ಭಾರತ-ಇಯು ಬಾಂಧವ್ಯದಲ್ಲಿ ಕಾರ್ಯತಂತ್ರದ ಉನ್ನತಿ ಗಮನಾರ್ಹವಾಗಿರುವುದನ್ನು ನಾಯಕರು ಸ್ವಾಗತಿಸಿದ್ದಾರೆ.

ಉಭಯ ನಾಯಕರು ದ್ವಿಪಕ್ಷೀಯ ಬಾಂಧವ್ಯದ ಪರಾಮರ್ಶೆ ನಡೆಸಿದರು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೀಕರಣದಲ್ಲಿನ ಪ್ರಸ್ತುತದ ಸಹಯೋಗವನ್ನು ಪರಿಶೀಲಿಸಿದರು ಹಾಗೂ ಶಿಕ್ಷಣ ಮತ್ತು ಕೌಶಲ್ಯ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳು, ಇ-ಆಡಳಿತ, ಸೈಬರ್ ಭದ್ರತೆ, ನವೋದ್ಯಮಗಳು ಮತ್ತು ಎಐ ಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಸಾಮರ್ಥ್ಯದ  ಬಗ್ಗೆ ಉಲ್ಲೇಖಿಸಿದರು. ಶುದ್ಧ ಇಂಧನ ಮತ್ತು ಚತುರ ಇಂಧನ ನಿರ್ವಹಣೆಯಲ್ಲಿ ಸಹಯೋಗದ ಸಂಭಾವ್ಯತೆಯ ಬಗ್ಗೆಯೂ ಅವರು ಚರ್ಚಿಸಿದರು.

ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಭಾರತ ಮತ್ತು ಎಸ್ಟೋನಿಯಾ ನಡುವೆ ಬೆಳೆಯುತ್ತಿರುವ ಸಾಂಸ್ಕೃತಿಕ ಮತ್ತು ಜನರ ನಡುವಿನ ಬಾಂಧವ್ಯದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಎಸ್ಟೋನಿಯಾದಲ್ಲಿ ಭಾರತೀಯ ವೃತ್ತಿಪರರ ಕೊಡುಗೆಗೆ ಅಧ್ಯಕ್ಷ ಕಾರಿಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಭಾ ಚಲನಶೀಲತೆ ಹೆಚ್ಚಿಸುವ ಮತ್ತು ಪ್ರವಾಸೋದ್ಯಮ ಸುಗಮಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಉಭಯರು ಸಮ್ಮತಿಸಿದರು.

 

******


(ಪ್ರಕಟಣೆ ಐ.ಡಿ.: 2230183) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , Marathi , हिन्दी , Punjabi , Gujarati , Telugu , Malayalam