ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ʻಪರೀಕ್ಷಾ ಪೇ ಚರ್ಚಾʼ 9ನೇ ಆವೃತ್ತಿಯು 2026ರ ಫೆಬ್ರವರಿ 6 ರಂದು ನಡೆಯಲಿದೆ
‘ಪರೀಕ್ಷಾ ಪೇ ಚರ್ಚಾ’ ಮೊದಲ ಬಾರಿಗೆ ಬಹು-ಸ್ಥಳಗಳಲ್ಲಿ, ರಾಷ್ಟ್ರವ್ಯಾಪಿ ಕಾರ್ಯಕ್ರಮವಾಗಿ ನಡೆಯಲಿದೆ
ಪ್ರಕಟಣಾ ದಿನಾಂಕ:
05 FEB 2026 4:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸುತ್ತಿರುವ ವಿಶಿಷ್ಟ ಸಂವಾದ ಕಾರ್ಯಕ್ರಮವಾದ ʻ ಪರೀಕ್ಷಾ ಪೇ ಚರ್ಚಾ’ದ (ಪಿಪಿಸಿ) 2026ರ ಫೆಬ್ರವರಿ 6ರ ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ತನ್ನ 9ನೇ ಆವೃತ್ತಿ ರೂಪದಲ್ಲಿ ಮರಳಲಿದೆ. ಪರೀಕ್ಷೆಯ ಒತ್ತಡವನ್ನು ಚರ್ಚಿಸಲು ಮತ್ತು ಪರೀಕ್ಷೆಗಳನ್ನು ಉತ್ಸವ ಹಾಗೂ ಜೀವನದ ಅವಿಭಾಜ್ಯ ಅಂಗವಾಗಿ ಆಚರಿಸಲು ವೇದಿಕೆ ಸಜ್ಜಾಗಿದೆ.
ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್, ದೂರದರ್ಶನ (ಡಿಡಿ) ಮತ್ತು ಶಿಕ್ಷಣ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು. ಹೆಚ್ಚುವರಿಯಾಗಿ, ʻವೇವ್ಸ್ʼ ಒಟಿಟಿ, ʻಅಮೆಜಾನ್ ಪ್ರೈಮ್ ವಿಡಿಯೋʼ, ಜಿಯೋ, ಝೀ 5, ʻಸೋನಿ ಲಿವ್ʼ ಮತ್ತು ಸ್ಪಾಟಿಫೈ (ಆಡಿಯೊ ವೇದಿಕೆ) ನಂತಹ ಒಟಿಟಿ ವೇದಿಕೆಗಳು ಸಹ ʻಪರೀಕ್ಷಾ ಪೇ ಚರ್ಚಾʼ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿವೆ.
ರಾಷ್ಟ್ರೀಯ ಶಿಕ್ಷಣ ನೀತಿ- 2020ಕ್ಕೆ ಅನುಗುಣವಾಗಿ, ʻಪರೀಕ್ಷಾ ಪೇ ಚರ್ಚಾʼ ಪರಿಕಲ್ಪನೆಯು ಆತ್ಮವಿಶ್ವಾಸ, ಸಕಾರಾತ್ಮಕತೆ ಮತ್ತು ಸಮಗ್ರ ಯೋಗಕ್ಷೇಮವನ್ನು ಬೆಳೆಸುವ ಮೂಲಕ ಮತ್ತು ಪರೀಕ್ಷಾ ಋತುವನ್ನು ಉತ್ಸವವಾಗಿ ಆಚರಿಸುವ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಅನುಭವವನ್ನು ಮರುರೂಪಿಸುವ ಗುರಿ ಹೊಂದಿದೆ. ಅನೇಕ ಭಾಷೆಗಳು ಮತ್ತು ಬ್ರೈಲ್ ಲಿಪಿಯಲ್ಲಿ ಲಭ್ಯವಿರುವ "ಎಕ್ಸಾಂ ವಾರಿಯರ್ಸ್" ಎಂಬ ತಮ್ಮ ಪುಸ್ತಕದಲ್ಲಿ ಪ್ರಧಾನಮಂತ್ರಿಯವರು ತಮ್ಮ ಅಭಿಪ್ರಾಯಗಳನ್ನು ವಿವರಿಸಿದ್ದಾರೆ. ಅಲ್ಲಿ ಅವರು ಆತ್ಮವಿಶ್ವಾಸದ ಬಗ್ಗೆ ಮತ್ತು ಈ ವಿಷಯಗಳ ಬಗ್ಗೆ ಮಾತನಾಡುವ ಅಗತ್ಯವನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಪರಿಕಲ್ಪನೆಯಾದ ʻಪರೀಕ್ಷಾ ಪೇ ಚರ್ಚಾʼ ಕ್ರಿಯಾತ್ಮಕ ಮತ್ತು ನವೀನವಾಗಿದೆ. ಪ್ರತಿವರ್ಷ ಹೊಸ ಅಂಶಗಳನ್ನು ಪರಿಚಯಿಸುತ್ತದೆ. ಮೊದಲ ಬಾರಿಗೆ, ʻಪರೀಕ್ಷಾ ಪೇ ಚರ್ಚಾ-2026ʼ ದೇಶದ ಎಲ್ಲಾ ಭಾಗಗಳನ್ನು ಒಳಗೊಂಡ ಅನೇಕ ಸ್ಥಳಗಳಲ್ಲಿ ಪರಿಚಯಿಸಲಾಗುತ್ತಿದೆ. ದೆಹಲಿ ಹೊರತುಪಡಿಸಿ, ʻಪಿಪಿಸಿ-2026ʼ 4 (ನಾಲ್ಕು) ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ - ತಮಿಳುನಾಡಿನ ಕೊಯಮತ್ತೂರು, ಛತ್ತೀಸ್ ಗಢದ ರಾಯ್‌ಪುರ, ಗುಜರಾತ್ ನ ದೇವ್ ಮೋಗ್ರಾ ಮತ್ತು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯವನ್ನು ಈ ಸ್ಥಳಗಳು ಪ್ರತಿನಿಧಿಸುತ್ತವೆ.

ʻಪರೀಕ್ಷಾ ಪೇ ಚರ್ಚಾ-2026ʼರ ಭಾಗವಾಗಿ, ಸ್ವಾವಲಂಬನೆಯ ಮನೋಭಾವವನ್ನು ಉತ್ತೇಜಿಸುವ ವಿದ್ಯಾರ್ಥಿ ನೇತೃತ್ವದ ʻಸ್ವದೇಶ್ ಸಂಕಲ್ಪ ಓಟʼವನ್ನು ನಡೆಸಲಾಯಿತು. ಜೊತೆಗೆ ʻಪರಾಕ್ರಮ್ ದಿವಸ್ʼ ದಂದು ಆಯ್ದ ಕೇಂದ್ರೀಯ ವಿದ್ಯಾಲಯಗಳಲ್ಲಿ ರಸಪ್ರಶ್ನೆ ಮತ್ತು ಬರವಣಿಗೆ ಸ್ಪರ್ಧೆಗಳು ಸೇರಿದಂತೆ ದೇಶಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಸುಮಾರು 2.26 ಕೋಟಿ ವಿದ್ಯಾರ್ಥಿಗಳು ಈ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಹಲವು ವರ್ಷಗಳಲ್ಲಿ, ಈ ಕಾರ್ಯಕ್ರಮವು ರಾಷ್ಟ್ರವ್ಯಾಪಿ ಜನಾಂದೋಲನವಾಗಿ ವಿಕಸನಗೊಂಡಿದೆ. ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಅಭೂತಪೂರ್ವ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಈ ವರ್ಷ, ʻಪರೀಕ್ಷಾ ಪೇ ಚರ್ಚಾʼದ 9ನೇ ಆವೃತ್ತಿಯ ನೋಂದಣಿಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿವೆ. ಈ ಬಾರಿ 4.50 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ʻಮೈ ಗವರ್ನಮೆಂಟ್ʼ (MyGov) ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಈ ಅಗಾಧ ಭಾಗವಹಿಸುವಿಕೆಯು ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಈ ಉಪಕ್ರಮದ ಉದ್ದೇಶಗಳನ್ನು ಮುನ್ನಡೆಸುವಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಗಳ ನಿರಂತರ ಬೆಂಬಲ ಮತ್ತು ಹಂಚಿಕೆಯ ಬದ್ಧತೆಯನ್ನು ಸೂಚಿಸುತ್ತದೆ. ʻಪರೀಕ್ಷಾ ಪೇ ಚರ್ಚಾʼ ಕಾರ್ಯಕ್ರಮದೊಂದಿಗೆ ಹೆಚ್ಚು ಮಧ್ಯಸ್ಥಗಾರರ ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳುವಿಕೆಯು, ಕಾಲಾನಂತರದಲ್ಲಿ ಈ ಕಾರ್ಯಕ್ರಮವು ಎಲ್ಲರ ಜೀವನದಲ್ಲಿ ತರುತ್ತಿರುವ ಮೌಲ್ಯದ ಖಚಿತ ಸಂಕೇತವಾಗಿದೆ.
*****
(ಪ್ರಕಟಣೆ ಐ.ಡಿ.: 2223954)
ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
Bengali
,
Bengali-TR
,
Odia
,
English
,
हिन्दी
,
Khasi
,
Urdu
,
Marathi
,
Punjabi
,
Gujarati
,
Tamil
,
Telugu