ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2026-27ರ ಸಾರಾಂಶ


ಯುವಶಕ್ತಿ ಚಾಲಿತ ಕೇಂದ್ರ ಬಜೆಟ್ ಬಡವರು, ಹಿಂದುಳಿದವರು ಮತ್ತು ಸೌಲಭ್ಯ ವಂಚಿತರ ಮೇಲೆ ಗಮನ ಕೇಂದ್ರೀಕರಿಸಲು ಸರ್ಕಾರದ 'ಸಂಕಲ್ಪ'ಕ್ಕೆ ಒತ್ತು ನೀಡಿದೆ

ಕರ್ತವ್ಯ ಭವನದಲ್ಲಿ ಸಿದ್ಧಪಡಿಸಲಾದ ಮೊದಲ ಬಜೆಟ್ 3 ಕರ್ತವ್ಯಗಳಿಂದ ಸ್ಫೂರ್ತಿ ಪಡೆದಿದೆ

ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವುದು ಮೊದಲ ಕರ್ತವ್ಯವಾಗಿದೆ

ಜನರ ಆಶೋತ್ತರಗಳನ್ನು ಪೂರೈಸುವುದು ಮತ್ತು ಅವರ ಸಾಮರ್ಥ್ಯವನ್ನು ನಿರ್ಮಿಸುವುದು 2ನೇ ಕರ್ತವ್ಯವಾಗಿದೆ

ಸಬ್ಕಾ ಸಾಥ್, ಸಬ್ಕಾ ವಿಕಾಸ್‌ನ ದೃಷ್ಟಿಕೋನದೊಂದಿಗೆ 3ನೇ ಕರ್ತವ್ಯವನ್ನು ಸಂಯೋಜಿಸಲಾಗಿದೆ

ಹೊಸ ಆದಾಯ ತೆರಿಗೆ ಕಾಯ್ದೆ-2025  2026 ಏಪ್ರಿಲ್ ನಿಂದ  ಜಾರಿಗೆ ಬರಲಿದೆ, ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳನ್ನು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು

ದಂಡ ಮತ್ತು ವಿಚಾರಣೆಯನ್ನು ತರ್ಕಬದ್ಧಗೊಳಿಸಲು ಬಹುಸಂಖ್ಯೆಯ ವಿಚಾರಣೆಗಳನ್ನು ಕಡಿಮೆ ಮಾಡಲಾಗುವುದು

ಕೆಲವು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಈಗಾಗಲೇ ಕಡಿತ ಲಭ್ಯವಿದ್ದು, ಅದನ್ನು ಜಾನುವಾರು ಮೇವು ಮತ್ತು ಹತ್ತಿ ಬೀಜಕ್ಕೆ ವಿಸ್ತರಿಸಲಾಗುವುದು

ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಎಲ್ಲಾ ಸೇವೆಗಳನ್ನು ಒಂದೇ ವರ್ಗದ ಸೇವೆಗಳೆಂದು ಒಟ್ಟುಗೂಡಿಸಿ, ಸಾಮಾನ್ಯ ಪೂರ್ವಾನುಮೋದಿತ ಕನಿಷ್ಠ ಕಾರ್ಯಾಚರಣೆ ಲಾಭಾಂಶ (COMMON SAFE HARBOUR MARGIN)ವನ್ನು 15.5%ಗೆ ನಿಗದಿಪಡಿಸಲಾಗುವುದು

ಕನಿಷ್ಠ ಕಾರ್ಯಾಚರಣೆ ಲಾಭಾಂಶ(ಸೇಫ್ ಹಾರ್ಬರ್) ಪಡೆಯುವ ಐಟಿ ಸೇವೆಗಳಿಗೆ ಮಿತಿಯನ್ನು 300 ಕೋಟಿಯಿಂದ 2,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ

ವಿದೇಶಿ ಕ್ಲೌಡ್ ಸೇವಾ ಪೂರೈಕೆದಾರರಿಗೆ 2047ರ ವರೆಗೆ ತೆರಿಗೆ ರಜೆ ನೀಡಲಾಗುವುದು

ಪ್ರಕಟಣಾ ದಿನಾಂಕ: 01 FEB 2026 1:14PM by PIB Bengaluru

ಪೂರ್ವಭಾವಿ ಆಧಾರದ ಮೇಲೆ ತೆರಿಗೆ ಪಾವತಿಸುವ ಎಲ್ಲಾ ಅನಿವಾಸಿಗಳಿಗೆ ಕನಿಷ್ಠ ಪರ್ಯಾಯ ತೆರಿಗೆಯಿಂದ ವಿನಾಯಿತಿ

2027-28ರ ತೆರಿಗೆ ವರ್ಷದಿಂದ ಐಸಿಡಿಎಸ್ ಆಧಾರಿತ ಪ್ರತ್ಯೇಕ ಲೆಕ್ಕಪತ್ರ ಅಗತ್ಯವನ್ನು ತೆಗೆದುಹಾಕಲು ಮತ್ತು ಭಾರತೀಯ ರಾಷ್ಟ್ರೀಯ ಲೆಕ್ಕಪತ್ರಗಳ ನಿರ್ವಹಣಾ ಕಾರ್ಯವಿಧಾನ(ಇಂಡ್ ಎಎಸ್)ಕ್ಕೆ ಮಾರ್ಪಡಿಸಲು ಹಣಕಾಸು ಸಚಿವಾಲಯಲು ಜಂಟಿ ಸಮಿತಿ ಸ್ಥಾಪಿಸಲಿದೆ

ಹಣಕಾಸು ಉತ್ಪನ್ನ(ಡೆರಿವೇಟಿವ್ಸ್)ಗಳ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆ(ಎಸ್ ಟಿ ಟಿ) ಈಗಿರುವ 0.02%ನಿಂದ 0.05%ಗೆ ಏರಿಕೆ

ಬ್ಯಾಟರಿಗಳಿಗಾಗಿ ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಸುವ ಬಂಡವಾಳ ಸರಕುಗಳಿಗೆ ನೀಡಲಾಗಿರುವ ಮೂಲ ಸೀಮಾ(ಕಸ್ಟಮ್ಸ್) ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗುವುದು

ನಿರ್ಣಾಯಕ ಖನಿಜಗಳ ಸಂಸ್ಕರಣೆಗೆ ಅಗತ್ಯವಿರುವ ಬಂಡವಾಳ ಸರಕುಗಳ ಆಮದಿಗೆ ವಿಧಿಸುತ್ತಿರುವ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು

ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ  ಸುಂಕ ವಿಧಿಸಬಹುದಾದ ಎಲ್ಲಾ ಸರಕುಗಳ ಮೇಲಿನ ಸುಂಕ ದರವನ್ನು 20%ನಿಂದ 10%ಗೆ ಇಳಿಸಲಾಗುವುದು

17 ಔಷಧಗಳು ಅಥವಾ ಮದ್ದುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ  ವಿನಾಯಿತಿ ನೀಡಲಾಗುವುದು

ಜೈವಿಕಶಾಸ್ತ್ರ(ಬಯೋಲಾಜಿಕ್ಸ್) ಮತ್ತು ಜೈವಿಕ ರಚನಾಶಾಸ್ತ್ರ(ಬಯೋಸಿಮಿಲರ್ಸ್)ಗಳ ದೇಶೀಯ ಉತ್ಪಾದನೆಯ ಪರಿಸರ ವ್ಯವಸ್ಥೆ ನಿರ್ಮಿಸಲು 10,000 ಕೋಟಿ ರೂ. ಆರ್ಥಿಕ ಗಾತ್ರದಲ್ಲಿ ಜೈವಿಕ ಔಷಧ(ಬಯೋಫಾರ್ಮ) ಶಕ್ತಿ ಸ್ಥಾಪನೆ

ಎಂಎಸ್ಎಂಇಗಳನ್ನು ದೇಶದ ಭವಿಷ್ಯದ ಚಾಂಪಿಯನ್ ‌ಗಳನ್ನಾಗಿ ಮಾಡಲು 10,000 ಕೋಟಿ ರೂ. ಮೊತ್ತದ ಎಸ್ಎಂಇ ಬೆಳವಣಿಗೆಯ ನಿಧಿ ಸ್ಥಾಪಿಸಲು ಪ್ರಸ್ತಾಪ

2025-26ರಲ್ಲಿ ಇದ್ದ 11.2 ಲಕ್ಷ ಕೋಟಿ ರೂ. ಸಾರ್ವಜನಿಕ ಬಂಡವಾಳ ವೆಚ್ಚವನ್ನು 2026-27ರ ಹಣಕಾಸು ವರ್ಷದಲ್ಲಿ 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ

ದೇಶದಲ್ಲಿ ಪರಿಸರ ಸುಸ್ಥಿರ ಪ್ರಯಾಣಿಕ ವ್ಯವಸ್ಥೆಗಳನ್ನು ಉತ್ತೇಜಿಸಲು ಪ್ರಮುಖ ನಗರಗಳ ನಡುವೆ  7 ಹೈ-ಸ್ಪೀಡ್ ರೈಲು ಕಾರಿಡಾರ್ ‌ಗಳನ್ನು 'ಬೆಳವಣಿಗೆಯ ಕನೆಕ್ಟರ್‌'ಗಳಾಗಿ ಅಭಿವೃದ್ಧಿಪಡಿಸಲಾಗುವುದು

ಮುಂಬೈನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಸಂಸ್ಥೆಯು 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಎವಿಜಿಸಿ (ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ವಿಷಯ ರಚನೆಕಾರ ಪ್ರಯೋಗಾಲಯಗಳನ್ನು ಸ್ಥಾಪಿಸಲಿದೆ.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಬೋಧಿಸುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳು ಎದುರಿಸುವ ಸವಾಲುಗಳನ್ನು ಪರಿಹರಿಸಲು, ಪ್ರತಿ ಜಿಲ್ಲೆಯಲ್ಲಿ ಒಂದು ಹೆಣ್ಣು ಮಕ್ಕಳ ಹಾಸ್ಟೆಲ್ ಸ್ಥಾಪಿಸಲಾಗುವುದು

ಐಐಎಂ ಸಹಯೋಗದೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಪ್ರಮಾಣೀಕೃತ,  ಗುಣಮಟ್ಟದ 12 ವಾರಗಳ ತರಬೇತಿ ಕೋರ್ಸ್ ಮೂಲಕ 20 ಪ್ರವಾಸೋದ್ಯಮ ತಾಣಗಳಲ್ಲಿ 10,000 ಮಾರ್ಗದರ್ಶಕರನ್ನು ಉನ್ನತೀಕರಿಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ

ಖೇಲೋ ಇಂಡಿಯಾ ಮಿಷನ್ ಮುಂದಿನ ದಶಕದಲ್ಲಿ ಕ್ರೀಡಾ ವಲಯವನ್ನು ಪರಿವರ್ತಿಸಲಿದೆ

ಬಹುಭಾಷಾ ಕೃತಕ ಬುದ್ಧಿಮತ್ತೆ ಸಾಧನವಾದ “ಭಾರತ್-ವಿಸ್ತಾರ್” ಕೃಷಿ ಪೋರ್ಟಲ್ ‌ಗಳು ಮತ್ತು ಕೃಷಿ ಪದ್ಧತಿಗಳ ಕುರಿತಾದ ಐಸಿಎಆರ್ ಪ್ಯಾಕೇಜ್ ಅನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ

ವಿದೇಶಿ ಪ್ರವಾಸ ಕಾರ್ಯಕ್ರಮ ಪ್ಯಾಕೇಜ್ ಪ್ರಸ್ತುತ ಶೇಕಡ 5 ಮತ್ತು ಶೇಕಡ 20ರಿಂದ ಶೇಕಡ 2ಕ್ಕೆ ಇಳಿದಿದೆ

ಕಸ್ಟಮ್ಸ್ ವೇರ್ ‌ಹೌಸಿಂಗ್ ಮಾರ್ಗಸೂಚಿಯನ್ನು ಸ್ವಯಂ ಘೋಷಣೆಗಳು, ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಮತ್ತು ಅಪಾಯ ಆಧಾರಿತ ಲೆಕ್ಕಪರಿಶೋಧನೆಯೊಂದಿಗೆ ವೇರ್ ‌ಹೌಸ್ ಆಪರೇಟರ್-ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗುವುದು

ಹಣಕಾಸು ವರ್ಷದ ಅಂತ್ಯದ ವೇಳೆಗೆ ವಿವಿಧ ಸರ್ಕಾರಿ ಸಂಸ್ಥೆಗಳ ಸರಕು ಸಾಗಣೆ ತೆರವು ಅಥವಾ ತೀರುವಳಿ ಅನುಮೋದನೆಗಳನ್ನು ಏಕ ಮತ್ತು ಪರಸ್ಪರ ಸಂಪರ್ಕಿತ ಡಿಜಿಟಲ್ ಗವಾಕ್ಷಿ ಮೂಲಕ ತಡೆರಹಿತವಾಗಿ(ಸರಾಗವಾಗಿ) ಸಂಸ್ಕರಿಸಲಾಗುವುದು

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2026-2027ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು.

ಭಾಗ-ಎ

ಮಾಘ ಪೂರ್ಣಿಮೆ ಮತ್ತು ಗುರು ರವಿದಾಸರ ಜನ್ಮ ದಿನಾಚರಣೆಯ ಪವಿತ್ರ ಸಂದರ್ಭದಲ್ಲಿ ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿರುವ ಮೊದಲ ಬಜೆಟ್ ಇದಾಗಿರುವುದರಿಂದ, ಇದು 3 ಕರ್ತವ್ಯಗಳಿಂದ ಪ್ರೇರಿತವಾಗಿದೆ ಎಂದು ಹಣಕಾಸು ಸಚಿವರು ಹೇಳಿದರು:

1. ಮೊದಲ ಕರ್ತವ್ಯವೆಂದರೆ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ಮೂಲಕ, ಅಸ್ಥಿರ ಜಾಗತಿಕ ಚಲನಶೀಲತೆಗೆ ಚೇತರಿಕೆ ನಿರ್ಮಿಸುವ ಮೂಲಕ ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವುದಾಗಿದೆ.

2. ಎರಡನೇ ಕರ್ತವ್ಯವೆಂದರೆ ಜನರ ಆಕಾಂಕ್ಷೆಗಳನ್ನು ಪೂರೈಸುವುದು ಮತ್ತು ಅವರ ಸಾಮರ್ಥ್ಯವನ್ನು ನಿರ್ಮಿಸುವುದು, ಅವರನ್ನು ಭಾರತದ ಸಮೃದ್ಧಿಯ ರಾಜ ಮಾರ್ಗದಲ್ಲಿ ಬಲಿಷ್ಠ ಪಾಲುದಾರರನ್ನಾಗಿ ಮಾಡುವುದಾಗಿದೆ.

3. ಮೂರನೇ ಕರ್ತವ್ಯವೆಂದರೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್  ದೃಷ್ಟಿಕೋನದೊಂದಿಗೆ ಹೊಂದಿಕೊಂಡು ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯವು ಅರ್ಥಪೂರ್ಣವಾಗಿ ಭಾಗವಹಿಸುವಂತೆ ಸಂಪನ್ಮೂಲಗಳು, ಸೌಕರ್ಯಗಳು ಮತ್ತು ಅವಕಾಶಗಳನ್ನು ನೀಡುವುದನ್ನು ಖಚಿತಪಡಿಸುವುದಾಗಿದೆ ಎಂದರು.

ಯುವ ಶಕ್ತಿ ಚಾಲಿತ ಬಜೆಟ್ ಇದಾಗಿದ್ದು ಬಡವರು, ದೀನದಲಿತರು ಮತ್ತು ಸೌಲಭ್ಯವಂಚಿತರ ಮೇಲೆ ಗಮನ ಕೇಂದ್ರೀಕರಿಸುವ ಸರ್ಕಾರದ 'ಸಂಕಲ್ಪ'ಕ್ಕೆ ಒತ್ತು ನೀಡುವ ಮೂಲಕ, ಭಾರತವು ವಿಕಸಿತ ಭಾರತದ ಕಡೆಗೆ ಸಾಗುವ ಆತ್ಮವಿಶ್ವಾಸದ ಹೆಜ್ಜೆಗಳನ್ನು ಇಡುವುದನ್ನು ಮುಂದುವರಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ವಿಸ್ತರಿಸುತ್ತಿರುವ ವ್ಯಾಪಾರ ಮತ್ತು ಬಂಡವಾಳದ ಅಗತ್ಯಗಳೊಂದಿಗೆ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿ, ಭಾರತವು ಜಾಗತಿಕ ಮಾರುಕಟ್ಟೆಗಳೊಂದಿಗೆ ಆಳವಾಗಿ ಸಂಯೋಜಿಸಲ್ಪಡಬೇಕು, ಹೆಚ್ಚಿನ ರಫ್ತು ಮಾಡಬೇಕು ಮತ್ತು ಸ್ಥಿರವಾದ ದೀರ್ಘಕಾಲೀನ ಹೂಡಿಕೆ ಆಕರ್ಷಿಸಬೇಕು ಎಂದರು.

ಅಪಾಯದಲ್ಲಿರುವ ವ್ಯಾಪಾರ ಮತ್ತು ಬಹುಪಕ್ಷೀಯತೆ, ಸಂಪನ್ಮೂಲಗಳು ಮತ್ತು ಪೂರೈಕೆ ಸರಪಳಿಗಳಿಗೆ ಪ್ರವೇಶವನ್ನು ಅಡ್ಡಿಪಡಿಸುವ ಬಾಹ್ಯ ವಾತಾವರಣವನ್ನು ದೇಶವು ಎದುರಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ನೀರು, ಇಂಧನ ಮತ್ತು ನಿರ್ಣಾಯಕ ಖನಿಜಗಳ ಮೇಲಿನ ಬೇಡಿಕೆಗಳು ತೀವ್ರ ತರವಾಗಿ ಹೆಚ್ಚುತ್ತಿರುವಾಗ ಹೊಸ ತಂತ್ರಜ್ಞಾನಗಳು ಉತ್ಪಾದನಾ ವ್ಯವಸ್ಥೆಗಳನ್ನು ಪರಿವರ್ತಿಸುತ್ತಿವೆ ಎಂದರು.

2025ರ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ಅವರು ಘೋಷಿಸಿದ ನಂತರ, 350ಕ್ಕೂ ಹೆಚ್ಚು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಇವುಗಳಲ್ಲಿ ಜಿಎಸ್ಟಿ ಸರಳೀಕರಣ, ಕಾರ್ಮಿಕ ಸಂಹಿತೆಗಳ ಅಧಿಸೂಚನೆ ಮತ್ತು ಕಡ್ಡಾಯ ಗುಣಮಟ್ಟ ನಿಯಂತ್ರಣ ಆದೇಶಗಳ ತರ್ಕಬದ್ಧಗೊಳಿಸುವಿಕೆ ಸೇರಿವೆ. ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸಮಾನಾಂತರವಾಗಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಕಟ್ಟುಪಾಡುಗಳ ಅನಿಯಂತ್ರಣ ಮತ್ತು ಅನುಸರಣೆ ಅವಶ್ಯಕತೆಗಳನ್ನು ಕಡಿಮೆ ಮಾಡುವ ಕುರಿತು ಕೆಲಸ ಮಾಡುತ್ತಿದೆ ಎಂದರು.

ಆರ್ಥಿಕ ಬೆಳವಣಿಗೆ ವೇಗಗೊಳಿಸಲು ಮತ್ತು ಬೆಳವಣಿಗೆ ದರ ಉಳಿಸಿಕೊಳ್ಳಲು ಮೊದಲ ಕರ್ತವ್ಯದ ಅಡಿ, 6 ಕ್ಷೇತ್ರಗಳ ಮಧ್ಯಸ್ಥಿಕೆ ಉಪಕ್ರಮಗಳನ್ನು ಪ್ರಸ್ತಾಪಿಸಿದರು:

i. 7 ಕಾರ್ಯತಂತ್ರ ಮತ್ತು ಗಡಿ ನಾಡು ವಲಯಗಳಲ್ಲಿ ಉತ್ಪಾದನೆ ಹೆಚ್ಚಿಸುವುದು;

ii. ಪರಂಪರಾನುಗತ ಕೈಗಾರಿಕಾ ವಲಯಗಳನ್ನು ಪುನರುಜ್ಜೀವನಗೊಳಿಸುವುದು;

iii. "ಎಂಎಸ್ಎಂಇಗಳನ್ನು ಚಾಂಪಿಯನ್" ಆಗಿ ರೂಪಿಸುವುದು;

iv. ಮೂಲಸೌಕರ್ಯಕ್ಕೆ ಪ್ರಬಲ ಉತ್ತೇಜನ ನೀಡುವುದು;

v. ದೀರ್ಘಕಾಲೀನ ಇಂಧನ ಭದ್ರತೆ ಮತ್ತು ಸ್ಥಿರತೆ ಖಚಿತಪಡಿಸುವುದು, ಮತ್ತು

vi. ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು.

ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ತಾಣವಾಗಿ ಅಭಿವೃದ್ಧಿಪಡಿಸಲು, ದೇಶೀಯ ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್ ‌ಗಳ ಉತ್ಪಾದನೆ ಪರಿಸರ ವ್ಯವಸ್ಥೆ ನಿರ್ಮಿಸಲು 10,000 ಕೋಟಿ ರೂ. ವೆಚ್ಚದಲ್ಲಿ “ಬಯೋಫಾರ್ಮಾ ಶಕ್ತಿ”ಯನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲಾಗುವುದು. ಈ ಕಾರ್ಯತಂತ್ರವು 3 ಹೊಸ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ(NIPER) ಬಯೋಫಾರ್ಮಾ-ಕೇಂದ್ರಿತ ಜಾಲ ಮತ್ತು ಅಸ್ತಿತ್ವದಲ್ಲಿರುವ 7 ಸಂಸ್ಥೆಗಳನ್ನು ನವೀಕರಿಸುವುದನ್ನು ಒಳಗೊಂಡಿದೆ. ಇದು 1000ಕ್ಕೂ ಹೆಚ್ಚು ಮಾನ್ಯತೆ ಪಡೆದ ಭಾರತ ಕ್ಲಿನಿಕಲ್ ಪ್ರಯೋಗ ತಾಣಗಳ ಜಾಲವನ್ನು ಸಹ ನಿರ್ಮಿಸುತ್ತದೆ. ಸಮರ್ಪಿತ ವೈಜ್ಞಾನಿಕ ವಿಮರ್ಶೆ ಕೇಡರ್ ಮತ್ತು ತಜ್ಞರ ಮೂಲಕ ಜಾಗತಿಕ ಮಾನದಂಡಗಳು ಮತ್ತು ಅನುಮೋದನೆಯ ಸಮಯದ ಮಾರ್ಗಸೂಚಿಗಳನ್ನು ಪೂರೈಸಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯನ್ನು ಬಲಪಡಿಸಲಾಗುತ್ತದೆ.

ಕಾರ್ಮಿಕ-ತೀವ್ರ ಜವಳಿ ವಲಯಕ್ಕಾಗಿ 5 ಉಪ-ವಿಭಾಗಗಳ ಸಂಯೋಜಿತ ಕಾರ್ಯಕ್ರಮ ರೂಪಿಸುವುದಾಗಿ ಸಚಿವರು ಪ್ರಸ್ತಾಪಿಸಿದರು. ರೇಷ್ಮೆ, ಉಣ್ಣೆ ಮತ್ತು ಸೆಣಬು, ಮಾನವ ನಿರ್ಮಿತ ನಾರುಗಳು ಮತ್ತು ಹೊಸ-ಯುಗದ ನಾರುಗಳಂತಹ ನೈಸರ್ಗಿಕ ನಾರುಗಳಲ್ಲಿ ಸ್ವಾವಲಂಬನೆ ಸಾಧಿಸಲು ರಾಷ್ಟ್ರೀಯ ನಾರು ಯೋಜನೆ; ಯಂತ್ರೋಪಕರಣಗಳು, ತಂತ್ರಜ್ಞಾನ ನವೀಕರಣ ಮತ್ತು ಸಾಮಾನ್ಯ ಪರೀಕ್ಷೆ ಮತ್ತು ಪ್ರಮಾಣೀಕರಣ ಕೇಂದ್ರಗಳಿಗೆ ಬಂಡವಾಳ ಬೆಂಬಲದೊಂದಿಗೆ ಸಾಂಪ್ರದಾಯಿಕ ಕ್ಲಸ್ಟರ್ ‌ಗಳನ್ನು ಆಧುನೀಕರಿಸಲು ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ; ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಸಂಯೋಜಿಸಲು ಮತ್ತು ಬಲಪಡಿಸಲು, ನೇಕಾರರು ಮತ್ತು ಕುಶಲಕರ್ಮಿಗಳಿಗೆ ಉದ್ದೇಶಿತ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮ; ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಸುಸ್ಥಿರ ಜವಳಿ ಮತ್ತು ಉಡುಪುಗಳನ್ನು ಉತ್ತೇಜಿಸಲು ಟೆಕ್ಸ್-ಇಕೋ ಉಪಕ್ರಮ; ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದ ಮೂಲಕ ಜವಳಿ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ನವೀಕರಿಸಲು ಸಮರ್ಥ್ 2.0 ಯೋಜನೆ ರೂಪಿಸಲಾಗುವುದು.

ಎಂಎಸ್ಎಂಇಗಳನ್ನು ಬೆಳವಣಿಗೆಯ ಪ್ರಮುಖ ಎಂಜಿನ್ ಎಂದು ಗುರುತಿಸಿ, ಭವಿಷ್ಯದ ಚಾಂಪಿಯನ್ ‌ಗಳಾಗಿ ಸಿದ್ಧಪಡಿಸಲು, ಆಯ್ದ ಮಾನದಂಡಗಳ ಆಧಾರದ ಮೇಲೆ ಉದ್ಯಮಗಳನ್ನು ಪ್ರೋತ್ಸಾಹಿಸಲು ಸಮರ್ಪಿತ 10,000 ಕೋಟಿ ರೂ. ಮೊತ್ತದ ಎಸ್ಎಂಇ ಬೆಳವಣಿಗೆ ನಿಧಿ ಸ್ಥಾಪಿಸುವುದಾಗಿ ಪ್ರಸ್ತಾಪಿಸಿದರು.

2014-15ನೇ ಹಣಕಾಸು ವರ್ಷದಲ್ಲಿ ಇದ್ದ ಸಾರ್ವಜನಿಕ ಬಂಡವಾಳ ವೆಚ್ಚವು 2 ಲಕ್ಷ ಕೋಟಿ ರೂ.ನಿಂದ 2025-26ನೇ ಹಣಕಾಸು ವರ್ಷದಲ್ಲಿ 11.2 ಲಕ್ಷ ಕೋಟಿ ರೂ.ಗೆ ಹಲವು ಪಟ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. 2026-27ನೇ ಹಣಕಾಸು ವರ್ಷದಲ್ಲಿ, ಆವೇಗ ಮುಂದುವರಿಸಲು ಅದನ್ನು 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದಾಗಿ ಅವರು ಪ್ರಸ್ತಾಪಿಸಿದರು.

Capital-Expenditure.jpg

ಪರಿಸರಸ್ನೇಹಿ ಸರಕು ಸಾಗಣೆ ಉತ್ತೇಜಿಸಲು ಹಣಕಾಸು ಸಚಿವರು, ಎ)ಪೂರ್ವದ ಡಂಕುನಿಯಿಂದ ಪಶ್ಚಿಮದ ಸೂರತ್ ‌ಗೆ ಸಂಪರ್ಕಿಸುವ ಹೊಸ ಸಮರ್ಪಿತ ಸರಕು ಕಾರಿಡಾರ್ ‌ಗಳನ್ನು ಪ್ರಸ್ತಾಪಿಸಿದರು; ಬಿ) ಒಡಿಶಾದ ಎನ್ ಡಬ್ಲ್ಯು-5ರಿಂದ ಪ್ರಾರಂಭಿಸಿ, ಮುಂದಿನ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು(ಎನ್ ಡಬ್ಲ್ಯು) ಕಾರ್ಯಗತಗೊಳಿಸಲಾಗುವುದು, ಇದು ತಲ್ಚರ್ ಮತ್ತು ಅಂಗುಲ್ ‌ನ ಖನಿಜ ಸಮೃದ್ಧ ಪ್ರದೇಶಗಳು ಮತ್ತು ಕಳಿಂಗ ನಗರದಂತಹ ಕೈಗಾರಿಕಾ ಕೇಂದ್ರಗಳನ್ನು ಪರದೀಪ್ ಮತ್ತು ಧಮ್ರಾ ಬಂದರುಗಳಿಗೆ ಸಂಪರ್ಕಿಸುತ್ತದೆ. ಅಗತ್ಯವಿರುವ ಮಾನವಶಕ್ತಿ ಅಭಿವೃದ್ಧಿಗಾಗಿ ಪ್ರಾದೇಶಿಕ ಶ್ರೇಷ್ಠತೆಯ ಕೇಂದ್ರಗಳಾಗಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.

ನಗರ ಆರ್ಥಿಕ ಪ್ರದೇಶ(ಸಿಇಆರ್)ಗಳನ್ನು ಅವುಗಳ ನಿರ್ದಿಷ್ಟ ಬೆಳವಣಿಗೆಯ ಚಾಲನಾ ಶಕ್ತಿಗಳ ಆಧಾರದ ಮೇಲೆ ನಕ್ಷೆ ಮಾಡುವ ಮೂಲಕ ಒಟ್ಟುಗೂಡಿದ ಆರ್ಥಿಕ ಶಕ್ತಿ ತಲುಪಿಸಲು ನಗರಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ   ಗುರಿಯನ್ನು ಬಜೆಟ್ ಹೊಂದಿದೆ. ಸುಧಾರಣೆ-ಮತ್ತು-ಫಲಿತಾಂಶ ಆಧಾರಿತ ಹಣಕಾಸು ಕಾರ್ಯವಿಧಾನದ ಸವಾಲಿನ ವಿಧಾನದ ಮೂಲಕ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು 5 ವರ್ಷಗಳಲ್ಲಿ ಪ್ರತಿ ಸಿಇಆರ್ ಗೆ 5000 ಕೋಟಿ ರೂ. ಹಂಚಿಕೆ ಮಾಡುವುದಾಗಿ ಪ್ರಸ್ತಾಪಿಸಿದರು.

ಪರಿಸರ ಸುಸ್ಥಿರ ಪ್ರಯಾಣಿಕ ವ್ಯವಸ್ಥೆಗಳನ್ನು ಉತ್ತೇಜಿಸಲು, ನಗರಗಳ ನಡುವೆ 7 ಹೈ-ಸ್ಪೀಡ್ ರೈಲು ಕಾರಿಡಾರ್ ‌ಗಳನ್ನು 'ಬೆಳವಣಿಗೆಯ ಕನೆಕ್ಟರ್‌'ಗಳಾಗಿ ಅಭಿವೃದ್ಧಿಪಡಿಸಲಾಗುವುದು, ಅವುಗಳೆಂದರೆ i)ಮುಂಬೈ-ಪುಣೆ, ii)ಪುಣೆ-ಹೈದರಾಬಾದ್, iii)ಹೈದರಾಬಾದ್-ಬೆಂಗಳೂರು, iv)ಹೈದರಾಬಾದ್-ಚೆನ್ನೈ, v)ಚೆನ್ನೈ-ಬೆಂಗಳೂರು, vi)ದೆಹಲಿ-ವಾರಣಾಸಿ, vii)ವಾರಣಾಸಿ-ಸಿಲಿಗುರಿ.

2ನೇ ಕರ್ತವ್ಯವೆಂದರೆ ಆಕಾಂಕ್ಷೆಗಳನ್ನು ಪೂರೈಸುವುದು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಸರ್ಕಾರದ 1 ದಶಕದ ನಿರಂತರ ಮತ್ತು ಸುಧಾರಣಾ-ಆಧಾರಿತ ಪ್ರಯತ್ನಗಳ ಮೂಲಕ ಸುಮಾರು 25 ಕೋಟಿ ವ್ಯಕ್ತಿಗಳು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದರು.

ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳ ತಾಣವಾಗಿ ಉತ್ತೇಜಿಸಲು, ಖಾಸಗಿ ವಲಯದ ಸಹಭಾಗಿತ್ವದಲ್ಲಿ 5 ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡುವ ಯೋಜನೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಈ ಕೇಂದ್ರಗಳು ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ರಕ್ಷಣಾ ಸಂಕೀರ್ಣಗಳಾಗಿ ಕಾರ್ಯ ನಿರ್ವಹಿಸುತ್ತವೆ. ಅವು ಆಯುಷ್ ಕೇಂದ್ರಗಳು, ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳು ಮತ್ತು ರೋಗ ನಿರ್ಣಯ(ಪತ್ತೆ), ನಂತರದ ಆರೈಕೆ ಮತ್ತು ಪುನರ್ವಸತಿಯ ಮೂಲಸೌಕರ್ಯ ಹೊಂದಿರುತ್ತವೆ. ಈ ಕೇಂದ್ರಗಳು ವೈದ್ಯರು ಮತ್ತು ಎಎಚ್ ಪಿಗಳು ಸೇರಿದಂತೆ ಆರೋಗ್ಯ ವೃತ್ತಿಪರರಿಗೆ ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.

ಪಶುವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು 20,000 ಮಟ್ಟಕ್ಕಿಂತ ಹೆಚ್ಚಿಸಲು, ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಮತ್ತು ಪ್ಯಾರಾ ವೆಟ್ ಕಾಲೇಜುಗಳು, ಪಶುವೈದ್ಯಕೀಯ ಆಸ್ಪತ್ರೆಗಳು, ರೋಗ ಪತ್ತೆ ಪ್ರಯೋಗಾಲಯಗಳು ಮತ್ತು ಸಂತಾನೋತ್ಪತ್ತಿ ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆ ಬೆಂಬಲಿಸಲು ಸಾಲ-ಸಂಬಂಧಿತ ಬಂಡವಾಳ ಸಬ್ಸಿಡಿಯನ್ನು ಪ್ರಸ್ತಾಪಿಸಿದರು.

ಭಾರತದ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯವು ವಿಫುಲವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, 2030ರ ವೇಳೆಗೆ 2 ದಶಲಕ್ಷ ವೃತ್ತಿಪರರು ಬೇಕಾಗುವ ನಿರೀಕ್ಷೆಯಿದೆ. 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಎವಿಜಿಸಿ ವಿಷಯ ಸೃಷ್ಟಿಕರ್ತ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್ ‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಸಂಸ್ಥೆ ಬೆಂಬಲ ನೀಡಲಿದೆ ಎಂದು ಹಣಕಾಸು ಸಚಿವರು ಪ್ರಸ್ತಾಪಿಸಿದರು.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(ಸ್ಟೆಮ್) ಬೋಧಿಸುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದೀರ್ಘಾವಧಿಯ ಅಧ್ಯಯನ ಮತ್ತು ಪ್ರಯೋಗಾಲಯದ ಕೆಲಸವು ವಿದ್ಯಾರ್ಥಿನಿಯರಿಗೆ ಕೆಲವು ಸವಾಲುಗಳನ್ನು ಒಡ್ಡುತ್ತಿದೆ. ಇಂತಹ ಸವಾಲುಗಳನ್ನು ಪರಿಹರಿಸುವ ಸಲುವಾಗಿ ವಿಜಿಎಫ್/ಬಂಡವಾಳ ಬೆಂಬಲದ ಮೂಲಕ, ಪ್ರತಿ ಜಿಲ್ಲೆಯಲ್ಲಿ 1 ಬಾಲಕಿಯರ ಹಾಸ್ಟೆಲ್ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.

ಅಸ್ತಿತ್ವದಲ್ಲಿರುವ ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನದ ರಾಷ್ಟ್ರೀಯ ಮಂಡಳಿಯನ್ನು ಮೇಲ್ದರ್ಜೆಗೇರಿಸುವ ಮೂಲಕ ರಾಷ್ಟ್ರೀಯ ಆತಿಥ್ಯ ಸಂಸ್ಥೆ ಸ್ಥಾಪಿಸುವುದಾಗಿ ಹಣಕಾಸು ಸಚಿವರು ಪ್ರಸ್ತಾಪಿಸಿದರು. ಇದು ಶೈಕ್ಷಣಿಕ, ಉದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಭಾರತೀಯ ನಿರ್ವಹಣಾ ಸಂಸ್ಥೆಯ ಸಹಯೋಗದೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಪ್ರಮಾಣೀಕೃತ, ಗುಣಮಟ್ಟದ 12 ವಾರಗಳ ತರಬೇತಿ ಕೋರ್ಸ್ ಮೂಲಕ 20 ಪ್ರವಾಸಿ ತಾಣಗಳಲ್ಲಿ 10,000 ಮಾರ್ಗದರ್ಶಕರ ಕೌಶಲ್ಯ ಹೆಚ್ಚಿಸುವ ಪ್ರಾಯೋಗಿಕ ಯೋಜನೆ ತರುವುದಾಗಿ ಅವರು ಪ್ರಸ್ತಾಪಿಸಿದರು.

ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಚಾಲನೆಯಲ್ಲಿರುವ ಕ್ರೀಡಾ ಪ್ರತಿಭೆಗಳ ವ್ಯವಸ್ಥಿತ ಪೋಷಣೆಯನ್ನು ಮುಂದುವರಿಸುತ್ತಾ, ಮುಂದಿನ ದಶಕದಲ್ಲಿ ಕ್ರೀಡಾ ವಲಯವನ್ನು ಪರಿವರ್ತಿಸಲು ಖೇಲೋ ಇಂಡಿಯಾ ಮಿಷನ್ ಸ್ಥಾಪಿಸುವುದಾಗಿ ಹಣಕಾಸು ಸಚಿವರು ಪ್ರಸ್ತಾಪಿಸಿದರು. ಈ ಮಿಷನ್ ಈ ಕೆಳಗಿನವುಗಳನ್ನು ಸುಗಮಗೊಳಿಸುತ್ತದೆ: ಎ)ತರಬೇತಿ ಕೇಂದ್ರಗಳಿಂದ ಬೆಂಬಲಿತವಾದ ಸಮಗ್ರ ಪ್ರತಿಭೆಗಳ ಅಭಿವೃದ್ಧಿ ಮಾರ್ಗ. ಬಿ)ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ವ್ಯವಸ್ಥಿತ ಅಭಿವೃದ್ಧಿ; ಸಿ)ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನದ ಏಕೀಕರಣ; ಡಿ)ಕ್ರೀಡಾ ಸಂಸ್ಕೃತಿ ಉತ್ತೇಜಿಸಲು ಮತ್ತು ವೇದಿಕೆಗಳನ್ನು ಒದಗಿಸಲು ಸ್ಪರ್ಧೆಗಳು ಮತ್ತು ಲೀಗ್ ‌ಗಳು; ಮತ್ತು ಇ) ತರಬೇತಿ ಮತ್ತು ಸ್ಪರ್ಧೆಗಾಗಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ.

ಬಜೆಟ್ ‌ನ 3ನೇ ಕರ್ತವ್ಯವು "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎಂಬ "ವಿಕಸಿತ ಭಾರತ"ದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಇದರಲ್ಲಿ ರೈತರ ಆದಾಯ ಹೆಚ್ಚಿಸುವುದು, ದಿವ್ಯಾಂಗ ಜನರನ್ನು ಸಬಲೀಕರಣಗೊಳಿಸುವುದು, ದುರ್ಬಲರಿಗೆ ಮಾನಸಿಕ ಆರೋಗ್ಯ ಮತ್ತು ಆಘಾತ ಆರೈಕೆ ಪಡೆಯಲು ಅಧಿಕಾರ ನೀಡುವುದು, ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ವೇಗಗೊಳಿಸಲು ಪೂರ್ವೋದಯ ರಾಜ್ಯಗಳು ಮತ್ತು ಈಶಾನ್ಯ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸುವುದು ಸೇರಿದಂತೆ ಗುರಿಯಿಟ್ಟುಕೊಂಡ ಪ್ರಯತ್ನಗಳು ಬೇಕಾಗುತ್ತವೆ.

ಭಾರತ್-ವಿಸ್ತಾರ್(ವರ್ಚುವಲಿ ಇಂಟಿಗ್ರೇಟೆಡ್ ಸಿಸ್ಟಮ್ ಟು ಆಕ್ಸೆಸ್ ಅಗ್ರಿಕಲ್ಚರಲ್ ರಿಸೋರ್ಸಸ್) ಎಂಬ ಬಹುಭಾಷಾ ಎಐ ಸಾಧನ ಹೊರತರುವುದಾಗಿ ಹಣಕಾಸು ಸಚಿವರು ಪ್ರಸ್ತಾಪಿಸಿದರು, ಇದು ಕೃಷಿ ಪದ್ಧತಿಗಳ ಕುರಿತು ಅಗ್ರಿಸ್ಟ್ಯಾಕ್ ಪೋರ್ಟಲ್ ‌ಗಳು ಮತ್ತು ಐಸಿಎಆರ್ ಪ್ಯಾಕೇಜ್ ಅನ್ನು ಎಐ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಇದು ಕೃಷಿ ಉತ್ಪಾದಕತೆ ಹೆಚ್ಚಿಸುತ್ತದೆ, ರೈತರಿಗೆ ಉತ್ತಮ ನಿರ್ಧಾರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಅಗತ್ಯಕ್ಕೆ ತಕ್ಕಂತೆ ರೂಪಿಸಿದ(ಕಸ್ಟಮೈಸ್ ಮಾಡಿದ) ಸಲಹಾ ಬೆಂಬಲ ಒದಗಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡುತ್ತದೆ.

ಲಖ್ಪತಿ ದೀದಿ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ, ಸ್ವ-ಸಹಾಯ ಉದ್ಯಮಿ(SHE) ಮಾರ್ಟ್(ಮಾರಾಟ ಮಳಿಗೆ)‌ಗಳನ್ನು ವರ್ಧಿತ ಮತ್ತು ನವೀನ ಹಣಕಾಸು ಸಾಧನಗಳ ಮೂಲಕ ಕ್ಲಸ್ಟರ್ ಮಟ್ಟದ ಒಕ್ಕೂಟಗಳಲ್ಲಿ ಸಮುದಾಯ ಸ್ವಾಮ್ಯದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಸ್ಥಾಪಿಸಲಾಗುವುದು.

ಮಾನಸಿಕ ಆರೋಗ್ಯ ಮತ್ತು ಆಘಾತ ಆರೈಕೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಹಣಕಾಸು ಸಚಿವರು, ನಿಮ್ಹಾನ್ಸ್(NIMHANS)-2 ಸ್ಥಾಪಿಸುವುದಾಗಿ, ರಾಂಚಿ ಮತ್ತು ತೇಜ್‌ಪುರದಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಪ್ರಾದೇಶಿಕ ಉನ್ನತ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದರು.

ದುರ್ಗಾಪುರದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಸಮಗ್ರ ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ, 5 ಪೂರ್ವೋದಯ ರಾಜ್ಯಗಳಲ್ಲಿ 5 ಪ್ರವಾಸೋದ್ಯಮ ತಾಣಗಳ ಸ್ಥಾಪನೆ ಮತ್ತು 4,000 ಇ-ಬಸ್ ‌ಗಳನ್ನು ಒದಗಿಸುವುದಾಗಿಯೂ ಅವರು ಪ್ರಸ್ತಾಪಿಸಿದರು. ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಬೌದ್ಧ ಸರ್ಕ್ಯೂಟ್ ‌ಗಳ ಅಭಿವೃದ್ಧಿಗಾಗಿ 1 ಯೋಜನೆ ಪ್ರಾರಂಭಿಸುವುದಾಗಿ ಅವರು ಪ್ರಸ್ತಾಪಿಸಿದರು. ಈ ಯೋಜನೆಯು ದೇವಾಲಯಗಳು ಮತ್ತು ಮಠಗಳ ಸಂರಕ್ಷಣೆ, ತೀರ್ಥಯಾತ್ರೆ ವ್ಯಾಖ್ಯಾನ ಕೇಂದ್ರಗಳು, ಸಂಪರ್ಕ ಮತ್ತು ಯಾತ್ರಾ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಹಣಕಾಸು ಸದೃಢತೆ

2025-26ರ ಆರ್ಥಿಕ ವರ್ಷದ ಬಜೆಟ್ ಅಂದಾಜಿನಂತೆ ಇದ್ದ ಜಿಡಿಪಿ-ಸಾಲ ಅನುಪಾತವು ಜಿಡಿಪಿಯ ಶೇಕಡ 56.1ಕ್ಕೆ ಹೋಲಿಸಿದರೆ, 2026-27ರ ಬಜೆಟ್ ಅಂದಾಜಿನಂತೆ ಜಿಡಿಪಿ-ಸಾಲ ಅನುಪಾತವು ಜಿಡಿಪಿಯ ಶೇಕಡ 55.6ರಷ್ಟಿದೆ.   ಜಿಡಿಪಿ-ಸಾಲ ಅನುಪಾತ ಕಡಿಮೆ ಆಗಿರುವುದರಿಂದ ಬಡ್ಡಿ ಪಾವತಿಗಳ  ಹೊರೆ  ಕಡಿಮೆ ಆಗಿ ಆದ್ಯತಾ ವಲಯದ ವೆಚ್ಚಗಳಿಗೆ ಸಂಪನ್ಮೂಲಗಳು ಕ್ರಮೇಣ ಮುಕ್ತವಾಗಿವೆ. 2025-26ರ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜಿನಲ್ಲಿ, ವಿತ್ತೀಯ ಕೊರತೆಯನ್ನು 2025-26ರ ಬಜೆಟ್ ಅಂದಾಜಿ‌ಗೆ ತಕ್ಕಂತೆ ಜಿಡಿಪಿಯ ಶೇಕಡ 4. ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ಸರ್ಕಾರ ಹೊಂದಿರುವ ಸಾಲಗಳನ್ನು ಪರಿಗಣಿಸುತ್ತಾ ಹೊಸ ಆರ್ಥಿಕ ಸದೃಢತೆಯ ಪಥದಲ್ಲಿ ಸಾಗಿದರೆ, 2026-27ರ ಬಜೆಟ್ ಅಂದಾಜಿನಂತೆ ವಿತ್ತೀಯ ಕೊರತೆಯು ಬಜೆಟ್ ನ ಶೇಕಡ 4.3ರಷ್ಟಿದೆ ಎಂದು ಸಚಿವರು ತಿಳಿಸಿದರು.

2025-26ರ ಪರಿಷ್ಕೃತ ಅಂದಾಜುಗಳು

ಸಾಲಯೇತರ ರಶೀದಿ(ಸ್ವೀಕೃತಿ)ಗಳ ಪರಿಷ್ಕೃತ ಅಂದಾಜು 34 ಲಕ್ಷ ಕೋಟಿ ರೂ. ಆಗಿದೆ. ಅದರಲ್ಲಿ ಕೇಂದ್ರದ ನಿವ್ವಳ ತೆರಿಗೆ ಸ್ವೀಕೃತಿಗಳು 26.7 ಲಕ್ಷ ಕೋಟಿ ರೂ. ಆಗಿದೆ. ಒಟ್ಟು ವೆಚ್ಚದ ಪರಿಷ್ಕೃತ ಅಂದಾಜು 49.6 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಬಂಡವಾಳ ವೆಚ್ಚವೇ ಸುಮಾರು 11 ಲಕ್ಷ ಕೋಟಿ ರೂ. ಆಗಿದೆ.

2026-27ನೇ ಸಾಲಿನ ಬಜೆಟ್ ಅಂದಾಜುಗಳು

2026-27ಕ್ಕೆ ಬಂದರೆ, ಸಾಲಯೇತರ ಸ್ವೀಕೃತಿ(ರಶೀದಿಗಳು) ಮತ್ತು ವೆಚ್ಚಗಳನ್ನು ಕ್ರಮವಾಗಿ 36.5 ಲಕ್ಷ ಕೋಟಿ ರೂ. ಮತ್ತು 53.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೇಂದ್ರದ ನಿವ್ವಳ ತೆರಿಗೆ ರಶೀದಿಗಳು 28.7 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ವಿತ್ತೀಯ ಕೊರತೆ ನೀಗಿಸಲು, ದಿನಾಂಕವಾರು ಭದ್ರತಾ ಪತ್ರ(ಸೆಕ್ಯುರಿಟೀಸ್)ಗಳಿಂದ ನಿವ್ವಳ ಮಾರುಕಟ್ಟೆ ಸಾಲ ಪ್ರಮಾಣ 11.7 ಲಕ್ಷ ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ. ಸಣ್ಣ ಉಳಿತಾಯ ಮತ್ತು ಇತರೆ ಮೂಲಗಳಿಂದ ಬಾಕಿ ಹಣಕಾಸು ಬರುವ ನಿರೀಕ್ಷೆಯಿದೆ. ಒಟ್ಟು ಮಾರುಕಟ್ಟೆ ಸಾಲಗಳು 17.2 ಲಕ್ಷ ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ.

ಭಾಗ-ಬಿ

ನೇರ ತೆರಿಗೆಗಳು:

2026-27ರ ಕೇಂದ್ರ ಬಜೆಟ್ ‌ನಲ್ಲಿ ನೇರ ತೆರಿಗೆಗಳಿಗೆ ಸಂಬಂಧಿಸಿದ  ಹಲವು ಹೊಸ ಸುಧಾರಣೆಗಳನ್ನು ಪ್ರಸ್ತಾಪಿಸಲಾಗಿದೆ. 2025ರ ಹೊಸ ಆದಾಯ ತೆರಿಗೆ ಕಾಯ್ದೆಯು 2026 ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಸಾಮಾನ್ಯ ನಾಗರಿಕರ ಸುಲಭ ಅನುಸರಣೆಯ ಉದ್ದೇಶಕ್ಕಾಗಿ ನಮೂನೆಗಳನ್ನು ಮರುವಿನ್ಯಾಸಗೊಳಿಸಲಾಗಿದೆ.

ಟಿಸಿಎಸ್ ದರಗಳಲ್ಲಿ ಪ್ರಸ್ತಾವಿತ ಕಡಿತವೂ ಇದೆ. ಯಾವುದೇ ಮೊತ್ತದ ನಿಬಂಧನೆಯಿಲ್ಲದೆ ಸಾಗರೋತ್ತರ ಪ್ರವಾಸ ಕಾರ್ಯಕ್ರಮದ ಪ್ಯಾಕೇಜ್ ಅನ್ನು 2 ಹಂತದಲ್ಲಿರುವ ಪ್ರಸ್ತುತ 5 ಪ್ರತಿಶತ ಮತ್ತು 20 ಪ್ರತಿಶತದಿಂದ 2 ಪ್ರತಿಶತಕ್ಕೆ ಇಳಿಸಲಾಗಿದೆ. ಇದಲ್ಲದೆ, ಉದಾರೀಕೃತ ರವಾನೆ ಯೋಜನೆ(ಎಲ್‌ಆರ್ ‌ಎಸ್) ಅಡಿ, ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ಅನ್ನು 5 ಪ್ರತಿಶತದಿಂದ 2 ಪ್ರತಿಶತಕ್ಕೆ ಇಳಿಸಲಾಗಿದೆ.

ಟಿಡಿಎಸ್ ಉದ್ದೇಶಕ್ಕಾಗಿ ಗುತ್ತಿಗೆದಾರರಿಗೆ ಪಾವತಿ ವ್ಯಾಪ್ತಿಗೆ ಮಾನವಶಕ್ತಿ ಸೇವೆಗಳ ಪೂರೈಕೆಯನ್ನು ತರಲು ಸಹ ಪ್ರಸ್ತಾಪಿಸಲಾಗಿದೆ. ಈ ಸೇವೆಗಳ ಮೇಲಿನ ಟಿಡಿಎಸ್ ಶೇಕಡ 1 ಅಥವಾ 2 ಪ್ರತಿಶತ ದರದಲ್ಲಿ ಮಾತ್ರ ಇರುತ್ತದೆ. ಸಣ್ಣ ತೆರಿಗೆದಾರರಿಗೆ, ನಿಯಮ ಆಧಾರಿತ ಸ್ವಯಂಚಾಲಿತ ಪ್ರಕ್ರಿಯೆಯು ಮೌಲ್ಯಮಾಪನ ಅಧಿಕಾರಿಗೆ ಅರ್ಜಿ ಸಲ್ಲಿಸುವ ಬದಲು ಕಡಿಮೆ ಅಥವಾ ಶೂನ್ಯ ಕಡಿತ ಪ್ರಮಾಣಪತ್ರ ಪಡೆಯಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಆದಾಯ ತೆರಿಗೆ ವಿವರ(ರಿಟರ್ನ್ಸ್) ಪರಿಷ್ಕರಣೆಗೆ ಲಭ್ಯವಿರುವ ಸಮಯವನ್ನು ಡಿಸೆಂಬರ್ 31ರಿಂದ ಮಾರ್ಚ್ 31ರ ವರೆಗೆ ನಾಮಮಾತ್ರ ಶುಲ್ಕ ಪಾವತಿ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ತೆರಿಗೆ ರಿಟರ್ನ್ಸ್ ಸಲ್ಲಿಸುವ ಕಾಲಮಿತಿಯನ್ನು ಬದಲಾಯಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.

ಸಣ್ಣ ತೆರಿಗೆದಾರರ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು, ವಿದ್ಯಾರ್ಥಿಗಳು, ಯುವ ವೃತ್ತಿಪರರು, ತಾಂತ್ರಿಕ ಉದ್ಯೋಗಿಗಳು, ಸ್ಥಳಾಂತರಗೊಂಡ ಅನಿವಾಸಿ ಭಾರತೀಯರು ಮತ್ತು ಇತರರಿಗೆ ಒಂದು ಬಾರಿ 6 ತಿಂಗಳ ವಿದೇಶಿ ಸ್ವತ್ತು ಬಹಿರಂಗಪಡಿಸುವ ಯೋಜನೆ ಪರಿಚಯಿಸಲಾಗುವುದು, ಇದು ನಿರ್ದಿಷ್ಟ ಗಾತ್ರಕ್ಕಿಂತ ಕಡಿಮೆ ಆದಾಯ ಅಥವಾ ಆಸ್ತಿಗಳನ್ನು ಬಹಿರಂಗಪಡಿಸಲು ಅನುವು ಮಾಡಿಕೊಡುತ್ತದೆ.

ವಿಚಾರಣೆ ಮತ್ತು ದಂಡವನ್ನು ತರ್ಕಬದ್ಧಗೊಳಿಸುವುದು

ದಂಡ ಮತ್ತು ವಿಚಾರಣೆಯನ್ನು ತರ್ಕಬದ್ಧಗೊಳಿಸುವ ಉದ್ದೇಶದಿಂದ 2026-27ರ ಕೇಂದ್ರ ಬಜೆಟ್, ಬಹು ಹಂತದ ವಿಚಾರಣೆ ಪ್ರಕ್ರಿಯೆ ಕಡಿಮೆ ಮಾಡುವುದಾಗಿ ಪ್ರಸ್ತಾಪಿಸಿದೆ. ಮೌಲ್ಯಮಾಪನ ಮತ್ತು ದಂಡದ ವಿಚಾರಣೆ ಎರಡಕ್ಕೂ ಸಾಮಾನ್ಯ ಆದೇಶದ ಮೂಲಕ ಸಂಯೋಜಿಸಲಾಗುತ್ತದೆ. ಇದಲ್ಲದೆ, ಪೂರ್ವಪಾವತಿಯ ಪ್ರಮಾಣವನ್ನು ಶೇಕಡ 20ರಿಂದ 10ಕ್ಕೆ ಇಳಿಸಲಾಗುತ್ತದೆ, ಇದನ್ನು ಪ್ರಮುಖ ತೆರಿಗೆ ಬೇಡಿಕೆಯ ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ. ವ್ಯಾಜ್ಯಗಳನ್ನು ಕಡಿಮೆ ಮಾಡಲು, ತೆರಿಗೆದಾರರು ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರವೂ, ಸಂಬಂಧಿತ ವರ್ಷಕ್ಕೆ ಅನ್ವಯವಾಗುವ ದರಕ್ಕಿಂತ ಹೆಚ್ಚುವರಿ ಶೇಕಡ 10 ತೆರಿಗೆ ದರದಲ್ಲಿ ತಮ್ಮ ರಿಟರ್ನ್ ‌ಗಳನ್ನು ನವೀಕರಿಸಲು ಅನುಮತಿ ನೀಡಲಾಗುತ್ತದೆ.

ಬಜೆಟ್ ವರದಿ ಮಾಡದ ಪ್ರಕರಣಗಳಲ್ಲಿ ದಂಡ ಮತ್ತು ವಿಚಾರಣೆಯಿಂದ ವಿನಾಯಿತಿ ನೀಡುವ ನಿಬಂಧನೆಗಳನ್ನು ತಪ್ಪಾಗಿ ವರದಿ ಮಾಡುವುದಕ್ಕೂ ವಿಸ್ತರಿಸುವುದಾಗಿ ಸಚಿವರು ಪ್ರಸ್ತಾಪಿಸಿದರು. ತೆರಿಗೆದಾರರು ತೆರಿಗೆ ಮೊತ್ತದ 100 ಪ್ರತಿಶತ ಬಾಕಿ ಇರುವ ತೆರಿಗೆ ಮತ್ತು ಬಡ್ಡಿಯ ಜೊತೆಗೆ ಹೆಚ್ಚುವರಿ ಆದಾಯ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಆದಾಯ ತೆರಿಗೆ ಕಾಯ್ದೆಯ ಅಡಿ, ವಿಚಾರಣೆ ಮಾರ್ಗಸೂಚಿ ತರ್ಕಬದ್ಧಗೊಳಿಸಲಾಗುತ್ತದೆ. ಲೆಕ್ಕಪತ್ರ ಪುಸ್ತಕಗಳು ಮತ್ತು ದಾಖಲೆಗಳನ್ನು ಸಲ್ಲಿಸದಿರುವುದು ಮತ್ತು ವಸ್ತು ರೂಪದಲ್ಲಿ ಪಾವತಿ ಮಾಡಲಾದ ಟಿಡಿಎಸ್ ಪಾವತಿ ಅಗತ್ಯವನ್ನು ಅಪರಾಧ ಮುಕ್ತಗೊಳಿಸಲಾಗುತ್ತದೆ. 20 ಲಕ್ಷ ರೂಪಾಯಿಗಿಂತ ಕಡಿಮೆ ಒಟ್ಟು ಮೌಲ್ಯದ ಸ್ಥಿರವಲ್ಲದ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸದ ಪ್ರಕರಣಗಳಿಗೆ 1.10.2024ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗುವುದು.

ಸಹಕಾರಿಗಳು

ಸಂಸತ್ತಿನಲ್ಲಿಂದು ಬಜೆಟ್ ಭಾಷಣದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಹಾಲು, ಎಣ್ಣೆಕಾಳುಗಳು, ಹಣ್ಣುಗಳು ಅಥವಾ ತರಕಾರಿಗಳ ಪೂರೈಕೆಯಲ್ಲಿ ತೊಡಗಿರುವ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಈಗಾಗಲೇ ಲಭ್ಯವಿರುವ ಕಡಿತವನ್ನು ಅದರ ಸದಸ್ಯರು ಬೆಳೆಸಿದ ಜಾನುವಾರು ಮೇವು ಮತ್ತು ಹತ್ತಿ ಬೀಜ ಪೂರೈಕೆಗೂ ವಿಸ್ತರಿಸಲಾಗುವುದು ಎಂದು ಹೇಳಿದರು. ಹೊಸ ತೆರಿಗೆ ಪದ್ಧತಿಯ ಅಡಿ, ಅಂತರ-ಸಹಕಾರಿ ಸಂಘದ ಲಾಭಾಂಶ ಆದಾಯವನ್ನು ಅದರ ಸದಸ್ಯರಿಗೆ ಮತ್ತಷ್ಟು ವಿತರಿಸುವ ಮಟ್ಟಿಗೆ ಕಡಿತ ಒದಗಿಸಲು ಅನುಮತಿ ನೀಡಲಾಗುತ್ತದೆ. ಇದರ ಜೊತೆಗೆ, ಅಧಿಸೂಚಿತ ರಾಷ್ಟ್ರೀಯ ಸಹಕಾರಿ ಒಕ್ಕೂಟವು 31.1.2026ರ ವರೆಗೆ ಕಂಪನಿಗಳಲ್ಲಿ ಮಾಡಿದ ಹೂಡಿಕೆಗಳ ಮೇಲೆ ಪಡೆದ ಆದಾಯವನ್ನು ಅದರ ಸದಸ್ಯ ಸಹಕಾರಿಗಳಿಗೆ ಮತ್ತಷ್ಟು ವಿತರಿಸಲಾದ ಲಾಭಾಂಶ ನೀಡಲು 3 ವರ್ಷಗಳ ವಿನಾಯಿತಿಗೆ ಅನುಮತಿ ನೀಡಲಾಗುತ್ತದೆ.

ಭಾರತದ ಬೆಳವಣಿಗೆಯ ಎಂಜಿನ್ ಆಗಿ ಐಟಿ ವಲಯಕ್ಕೆ ಬೆಂಬಲ

ಭಾರತದ ಬೆಳವಣಿಗೆ ಪಥದಲ್ಲಿ ಐಟಿ ಕ್ಷೇತ್ರದ ಮಹತ್ವವನ್ನು ಒತ್ತಿಹೇಳಿದ ಹಣಕಾಸು ಸಚಿವರು, ಸಾಫ್ಟ್ ‌ವೇರ್ ಅಭಿವೃದ್ಧಿ ಸೇವೆಗಳು, ಐಟಿ-ಸಂಬಂಧಿತ ಸೇವೆಗಳು, ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ ಸೇವೆಗಳು ಮತ್ತು ಸಾಫ್ಟ್ ‌ವೇರ್ ಅಭಿವೃದ್ಧಿಗೆ ಸಂಬಂಧಿಸಿದ ಆರ್ & ಡಿ ಸೇವೆ ಸೇರಿದಂತೆ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಎಲ್ಲಾ ಸೇವೆಗಳನ್ನು ಒಂದೇ ವರ್ಗದ ಸೇವೆಗಳೆಂದು ಒಟ್ಟುಗೂಡಿಸಿ, ಸಾಮಾನ್ಯ ಪೂರ್ವಾನುಮೋದಿತ ಕನಿಷ್ಠ ಕಾರ್ಯಾಚರಣೆ ಲಾಭಾಂಶ(COMMON SAFE HARBOUR MARGIN)ವನ್ನು 15.5%ಗೆ ನಿಗದಿಪಡಿಸಲಾಗುವುದು ಎಂದು ಪ್ರಸ್ತಾಪಿಸಿದರು. ಇದಲ್ಲದೆ, ಕನಿಷ್ಠ ಕಾರ್ಯಾಚರಣೆ ಲಾಭಾಂಶ(ಸೇಫ್ ಹಾರ್ಬರ್) ಪಡೆಯುವ ಐಟಿ ಸೇವೆಗಳಿಗೆ ಮಿತಿಯನ್ನು 300 ಕೋಟಿಯಿಂದ 2,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಐಟಿ ಸೇವೆಗಳಿಗೆ ಕನಿಷ್ಠ ಕಾರ್ಯಾಚರಣೆ ಲಾಭಾಂಶವನ್ನು ಸ್ವಯಂಚಾಲಿತ ನಿಯಮ-ಚಾಲಿತ ಪ್ರಕ್ರಿಯೆಯಿಂದ ಅನುಮೋದಿಸಲಾಗುತ್ತದೆ. ಐಟಿ ಸೇವೆಗಳ ಕಂಪನಿಗೆ ಒಮ್ಮೆ ಅನ್ವಯಿಸಿದ ನಂತರ, ಅದೇ ಕನಿಷ್ಠ ಕಾರ್ಯಾಚರಣೆ ಲಾಭಾಂಶವನ್ನು 5 ವರ್ಷಗಳ ಅವಧಿಗೆ ಮುಂದುವರಿಸಬಹುದು.

ಐಟಿ ಸೇವೆಗಳಿಗೆ ಏಕಪಕ್ಷೀಯ ಸುಧಾರಿತ ಬೆಲೆ ಒಪ್ಪಂದ(ಎಪಿಎ) ಪ್ರಕ್ರಿಯೆಯನ್ನು 2 ವರ್ಷಗಳಲ್ಲಿ ತೀರ್ಮಾನಿಸುವ ಪ್ರಯತ್ನದೊಂದಿಗೆ ತ್ವರಿತಗೊಳಿಸಲು ಪ್ರಸ್ತಾಪಿಸಲಾಗಿದೆ, ಇದನ್ನು ತೆರಿಗೆದಾರರ ಕೋರಿಕೆಯ ಮೇರೆಗೆ 6 ತಿಂಗಳು ವಿಸ್ತರಿಸಬಹುದು. ಇದಲ್ಲದೆ, ಎಪಿಎಗೆ ಪ್ರವೇಶಿಸುವ ಘಟಕಕ್ಕೆ ಲಭ್ಯವಿರುವ ಮಾರ್ಪಡಿಸಿದ ರಿಟರ್ನ್ ‌ಗಳ ಸೌಲಭ್ಯವನ್ನು ಅದರ ಸಂಬಂಧಿತ ಘಟಕಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ಪ್ರಸ್ತಾಪಿಸಿದರು.

ಜಾಗತಿಕ ವ್ಯವಹಾರ ಮತ್ತು ಹೂಡಿಕೆ ಆಕರ್ಷಣೆ

ಸಂಸತ್ತಿನಲ್ಲಿಂದು 2026-27ರ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು, ಭಾರತದ ಡೇಟಾ ಸೆಂಟರ್ ಸೇವೆಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ 2047ರ ವರೆಗೆ ತೆರಿಗೆ ರಜೆ ನೀಡಲಾಗುವುದು ಎಂದು ಹೇಳಿದರು. ಭಾರತದಿಂದ ಡೇಟಾ ಸೆಂಟರ್ ಸೇವೆಗಳನ್ನು ಒದಗಿಸುವ ಕಂಪನಿಯು ಸಂಬಂಧಿತ ಸಂಸ್ಥೆಯಾಗಿದ್ದರೆ, ವೆಚ್ಚದಲ್ಲಿ ಶೇಕಡ 15ರಷ್ಟು ಕನಿಷ್ಠ ಕಾರ್ಯಾಚರಣೆ ಲಾಭಾಂಶ(ಸೇಫ್ ಹಾರ್ಬರ್) ಒದಗಿಸಲಾಗುವುದು ಎಂದು ಅವರು ಹೇಳಿದರು. ಇದಲ್ಲದೆ, ಬಾಂಡೆಡ್ ಗೋದಾಮಿನಲ್ಲಿ ಘಟಕ ಹೊಂದಿರುವ ಅನಿವಾಸಿಗಳಿಗೆ ಇನ್ ‌ವಾಯ್ಸ್ ಮೌಲ್ಯದ ಶೇಕಡ 2ರಷ್ಟು ಸುರಕ್ಷಿತ ಲಾಭಾಂಶ ಒದಗಿಸಲಾಗುವುದು. ಸುಮಾರು ಶೇಕಡ 0.7ರಷ್ಟು ತೆರಿಗೆ ಪ್ರಮಾಣವು ಸ್ಪರ್ಧಾತ್ಮಕ ನ್ಯಾಯ ವ್ಯಾಪ್ತಿಗಳಿಗಿಂತ ತೀರಾ ಕಡಿಮೆ ಇರುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ತೆರಿಗೆ ಆಡಳಿತ

ತೆರಿಗೆ ಆಡಳಿತ ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಭಾರತೀಯ ರಾಷ್ಟ್ರೀಯ  ಲೆಕ್ಕಪತ್ರಗಳ ಮಾಪನ ಕಾರ್ಯವಿಧಾನ ಅಥವಾ ಮಾನದಂಡಗಳಲ್ಲಿ (ಇಂಡ್ ಎಸ್) ಆದಾಯ ಲೆಕ್ಕಾಚಾರ ಮತ್ತು ಬಹಿರಂಗಪಡಿಸುವಿಕೆ ಮಾನದಂಡಗಳ (ಐಸಿಡಿಎಸ್) ಅವಶ್ಯಕತೆಗಳನ್ನು ಸೇರಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ನೇರ ತೆರಿಗೆ ಮಂಡಳಿಯ ಒಟ್ಟುಗೂಡಿದ ಜಂಟಿ ಸಮಿತಿ ರಚಿಸುವುದಾಗಿ ಬಜೆಟ್ ಪ್ರಸ್ತಾಪಿಸಿದೆ. 2027-28ರ ತೆರಿಗೆ ವರ್ಷದಿಂದ ಐಸಿಡಿಎಸ್ ಆಧಾರಿತ ಪ್ರತ್ಯೇಕ ಲೆಕ್ಕಪತ್ರ ಅಗತ್ಯವನ್ನು ಇದು ತೆಗೆದುಹಾಕಲಾಗುತ್ತದೆ. ಸುರಕ್ಷಿತ ತೆರಿಗೆ(ಸೇಫ್ ಹಾರ್ಬರ್) ನಿಯಮಗಳ ಉದ್ದೇಶಗಳಿಗಾಗಿ ಲೆಕ್ಕಪತ್ರಗಾರನ ವ್ಯಾಖ್ಯಾನವನ್ನು ಸಹ ತರ್ಕಬದ್ಧಗೊಳಿಸಲಾಗುತ್ತದೆ.

ಇತರೆ ತೆರಿಗೆ ಪ್ರಸ್ತಾವನೆಗಳು

ಅಲ್ಪಸಂಖ್ಯಾತ ಷೇರುದಾರರ ಹಿತದೃಷ್ಟಿಯಿಂದ 2026-27ರ ಕೇಂದ್ರ ಬಜೆಟ್, ಎಲ್ಲಾ ರೀತಿಯ ಷೇರುದಾರರ ಮರುಖರೀದಿ ಷೇರುಗಳಿಗೆ ಬಂಡವಾಳ ಗಳಿಕೆ ತೆರಿಗೆ ವಿಧಿಸಲಾಗುವುದು ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರವರ್ತಕರು ಹೆಚ್ಚುವರಿ ಮರುಖರೀದಿ ತೆರಿಗೆ ಪಾವತಿಸಬೇಕಾಗುತ್ತದೆ, ಇದರಿಂದಾಗಿ ಕಾರ್ಪೊರೇಟ್ ಪ್ರವರ್ತಕರಿಗೆ ಪರಿಣಾಮಕಾರಿ 22% ತೆರಿಗೆ ಮತ್ತು ಕಾರ್ಪೊರೇಟ್ ಯೇತರ ಪ್ರವರ್ತಕರಿಗೆ 30% ತೆರಿಗೆ ವಿಧಿಸಲಾಗುತ್ತದೆ.

ಮದ್ಯ, ರದ್ದಿ(ಸ್ಕ್ರ್ಯಾಪ್) ಮತ್ತು ಖನಿಜಗಳಂತಹ ನಿರ್ದಿಷ್ಟ ಸರಕುಗಳ ಮಾರಾಟಗಾರರಿಗೆ ಟಿಸಿಎಸ್ ದರವನ್ನು ಶೇಕಡ 2ಕ್ಕೆ ಇಳಿಸಲಾಗುವುದು ಮತ್ತು ಬೀಡಿ ಅಥವಾ ಕೆಂಡು ಎಲೆಗಳ ಮೇಲಿನ ತೆರಿಗೆಯನ್ನು ಶೇಕಡ 5ರಿಂದ 2ಕ್ಕೆ ಇಳಿಸಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಮತ್ತೊಂದು ಗಮನಾರ್ಹ ತೆರಿಗೆ ಪ್ರಸ್ತಾವನೆಯೆಂದರೆ, ಫ್ಯೂಚರ್(ಹಣಕಾಸು ಉತ್ಪನ್ನ)‌ಗಳ ಮೇಲಿನ ಎಸ್ ‌ಟಿಟಿ ತೆರಿಗೆಯನ್ನು ಪ್ರಸ್ತುತ 0.02%ನಿಂದ 0.05%ಗೆ ಹೆಚ್ಚಿಸುವ ಕ್ರಮ. ಆಯ್ಕೆಗಳ ಪ್ರೀಮಿಯಂ ಮತ್ತು ಆಯ್ಕೆಗಳ ಅಭ್ಯಾಸದ ಮೇಲಿನ ಎಸ್ ‌ಟಿಟಿಯನ್ನು ಕ್ರಮವಾಗಿ 0.1% ಮತ್ತು 0.125%ನಿಂದ 0.15%ಗೆ ಹೆಚ್ಚಿಸಲಾಗುವುದು.

ಹೊಸ ತೆರಿಗೆ ಪದ್ಧತಿಗೆ ಕಂಪನಿಗಳು ಬದಲಾಗುವಂತೆ ಪ್ರೋತ್ಸಾಹಿಸಲು, ಬಜೆಟ್ ‌ನಲ್ಲಿ ಮುಂದಕ್ಕೆ ತಂದ ಕನಿಷ್ಠ ಪರ್ಯಾಯ ತೆರಿಗೆ ಕ್ರೆಡಿಟ್(ಎಂಎಟಿ) ಕ್ರೆಡಿಟ್ ವ್ಯವಸ್ಥೆಯನ್ನು ಹೊಸ ತೆರಿಗೆ ಪದ್ಧತಿಗೆ ಬರುವ ಕಂಪನಿಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಪ್ರಸ್ತಾಪಿಸಿದರು. ಲಭ್ಯವಿರುವ ಎಂಎಟಿ ಕ್ರೆಡಿಟ್ ಬಳಸಿದರೆ ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಹೊಣೆಗಾರಿಕೆಯ 1/4 ನೇ ಭಾಗದವರೆಗೆ ಅನುಮತಿಸಲಾಗುವುದು. ಎಂಎಟಿ ಅನ್ನು ಅಂತಿಮ ತೆರಿಗೆಯನ್ನಾಗಿ ಮಾಡುವುದಾಗಿ ಪ್ರಸ್ತಾಪಿಸಿದ ಸೀತಾರಾಮನ್, 2026 ಏಪ್ರಿಲ್ 1 ರಿಂದ ಯಾವುದೇ ಕ್ರೆಡಿಟ್ ಸಂಗ್ರಹಣೆ ಇರುವುದಿಲ್ಲ ಎಂದರು. ಅಂತಿಮ ತೆರಿಗೆಯ ದರವನ್ನು ಪ್ರಸ್ತುತ ಎಂಎಟಿ ದರ 15%ನಿಂದ 14%ಗೆ ಇಳಿಸಲಾಗುತ್ತದೆ. ಇದಲ್ಲದೆ, 2026 ಮಾರ್ಚ್ 31ರ ವರೆಗೆ ಸಂಗ್ರಹವಾದ ತೆರಿಗೆದಾರರ ಮುಂದೆ ತಂದ ಎಂಎಟಿ ಕ್ರೆಡಿಟ್ ವ್ಯವಸ್ಥೆ ಮೇಲಿನಂತೆ ಅವರಿಗೆ ಲಭ್ಯವಿರುತ್ತದೆ.

ಪರೋಕ್ಷ ತೆರಿಗೆಗಳು:

ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಸುಂಕದ ಪ್ರಸ್ತಾವನೆಗಳು ಸುಂಕ ರಚನೆಯನ್ನು ಮತ್ತಷ್ಟು ಸರಳಗೊಳಿಸುವ, ದೇಶೀಯ ಉತ್ಪಾದನೆ ಬೆಂಬಲಿಸುವ, ರಫ್ತು ಸ್ಪರ್ಧಾತ್ಮಕತೆ ಉತ್ತೇಜಿಸುವ ಮತ್ತು ಸುಂಕವನ್ನು ಸರಿ ದಾರಿಗೆ ತರುವ ಗುರಿ ಹೊಂದಿವೆ ಎಂದು ಹಣಕಾಸು ಸಚಿವರು ಹೇಳಿದರು.

ಸೀಮಾ(ಕಸ್ಟಮ್ಸ್)ಸುಂಕಗಳ ತರ್ಕಬದ್ಧಗೊಳಿಸುವಿಕೆ:

ಸಾಗರ, ಚರ್ಮ ಮತ್ತು ಜವಳಿ ಉತ್ಪನ್ನಗಳಲ್ಲಿ, ರಫ್ತಿಗಾಗಿ ಸಮುದ್ರಾಹಾರ ಉತ್ಪನ್ನಗಳನ್ನು ಸಂಸ್ಕರಿಸಲು ಬಳಸುವ ನಿರ್ದಿಷ್ಟ ಒಳಹರಿವಿನ ಸುಂಕ-ಮುಕ್ತ ಆಮದು ಮಿತಿಯನ್ನು ಉಚಿತ ಆನ್ ಬೋರ್ಡ್(ಎಫ್ಒಬಿ) ಮೌಲ್ಯದ ಪ್ರಸ್ತುತ ಶೇ. 1ರಿಂದ ಶೇ.3ಕ್ಕೆ ಹೆಚ್ಚಿಸಲಾಗುವುದು. ಚರ್ಮ ಅಥವಾ ಸಂಶ್ಲೇಷಿತ ಪಾದರಕ್ಷೆಗಳ ರಫ್ತಿಗೆ ಪ್ರಸ್ತುತ ಲಭ್ಯವಿರುವ ನಿರ್ದಿಷ್ಟ ಒಳಹರಿವಿನ ಸುಂಕ-ಮುಕ್ತ ಆಮದುಗಳಿಗೆ ಅನುಮತಿ ನೀಡಲಾಗುವುದು.

ಇಂಧನ ವಲಯದಲ್ಲಿ, ಬ್ಯಾಟರಿಗಳಿಗೆ ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಸುವ ಬಂಡವಾಳ ಸರಕುಗಳಿಗೆ ನೀಡಲಾಗುವ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗುವುದು, ಸೌರ ಗಾಜಿನ ತಯಾರಿಕೆಯಲ್ಲಿ ಬಳಸಲು ಸೋಡಿಯಂ ಆಂಟಿಮೋನೇಟ್ ಆಮದು ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೂ ವಿನಾಯಿತಿ ನೀಡಲಾಗುವುದು.

ಪರಮಾಣು ವಿದ್ಯುತ್ ಯೋಜನೆಗಳಿಗೆ ಅಗತ್ಯವಿರುವ ಸರಕುಗಳ ಆಮದಿನ ಮೇಲಿನ ಅಸ್ತಿತ್ವದಲ್ಲಿರುವ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು 2035ರ ವರೆಗೆ ವಿಸ್ತರಿಸಲಾಗುವುದು, ಮೈಕ್ರೋವೇವ್ ಓವನ್ ತಯಾರಿಕೆಯಲ್ಲಿ ಬಳಸುವ ನಿರ್ದಿಷ್ಟ ಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವರು ಪ್ರಕಟಿಸಿದರು.

ನಿರ್ಣಾಯಕ ಖನಿಜಗಳ ಸಂಸ್ಕರಣೆಗೆ ಅಗತ್ಯವಿರುವ ಬಂಡವಾಳ ಸರಕುಗಳ ಆಮದು ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುತ್ತದೆ,  ಜೈವಿಕ ಅನಿಲ ಮಿಶ್ರಿತ ಸಿ ಎನ್ ಜಿ ಮೇಲೆ ಪಾವತಿಸಬೇಕಾದ ಕೇಂದ್ರ ಅಬಕಾರಿ ಸುಂಕವನ್ನು ಲೆಕ್ಕಾಚಾರ ಮಾಡುವಾಗ ಜೈವಿಕ ಅನಿಲದ ಸಂಪೂರ್ಣ ಮೌಲ್ಯವನ್ನು ಹೊರಗಿಡಲಾಗುತ್ತದೆ.

ನಾಗರಿಕ ಮತ್ತು ರಕ್ಷಣಾ ವಿಮಾನಯಾನ ವಲಯದಲ್ಲಿ ನಾಗರಿಕ, ತರಬೇತಿ ಮತ್ತು ಇತರೆ ವಿಮಾನಗಳ ತಯಾರಿಕೆಗೆ ಅಗತ್ಯವಿರುವ ಘಟಕಗಳು ಮತ್ತು ಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುತ್ತದೆ.  ರಕ್ಷಣಾ ವಲಯದ ಘಟಕಗಳ ನಿರ್ವಹಣೆ, ದುರಸ್ತಿ ಅಥವಾ ಕೂಲಂಕುಷ ಪರೀಕ್ಷೆಯ ಅವಶ್ಯಕತೆಗಳಲ್ಲಿ ಬಳಸಬೇಕಾದ ವಿಮಾನದ ಭಾಗಗಳ ತಯಾರಿಕೆಗೆ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕಕ್ಕೆ ವಿನಾಯಿತಿ ನೀಡಲಾಗುತ್ತದೆ.

ಇದಲ್ಲದೆ, ವಿಶೇಷ ಆರ್ಥಿಕ ವಲಯದಲ್ಲಿನ ಅರ್ಹ ಉತ್ಪಾದನಾ ಘಟಕಗಳಿಂದ ದೇಶೀಯ ಸುಂಕ ಪ್ರದೇಶಕ್ಕೆ(DTA) ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ವಿಶೇಷ ಒಂದು-ಬಾರಿಯ ಕ್ರಮ ಪ್ರಸ್ತಾಪಿಸಲಾಗಿದೆ.

ಜೀವನದ ಸುಲಭತೆ ಹೆಚ್ಚಿಸಲು, ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸುಂಕ ವಿಧಿಸಬಹುದಾದ ಎಲ್ಲಾ ಸರಕುಗಳ ಮೇಲಿನ ಸುಂಕ ದರವನ್ನು ಶೇಕಡ 20ರಿಂದ ಶೇಕಡ 10ಕ್ಕೆ ಇಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. 17 ಔಷಧಗಳು ಅಥವಾ ಮದ್ದುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುತ್ತದೆ. ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ವೈಯಕ್ತಿಕ ಆಮದು ಮೊಡಿಕೊಳ್ಳುವ ಔಷಧಗಳು, ಮದ್ದುಗಳು ಮತ್ತು  ಆಹಾರ(FSMP)ಗಳಿಗೆ ನೀಡುವ  ಸುಂಕ ವಿನಾಯಿತಿಗೆ  ಇನ್ನೂ 7 ಅಪರೂಪದ ಕಾಯಿಲೆಗಳನ್ನು ಸೇರಿಸಲಾಗುತ್ತದೆ.

ಕಸ್ಟಮ್ ಪ್ರಕ್ರಿಯೆಗಳು:

ಸರಕುಗಳ ಸುಗಮ ಮತ್ತು ವೇಗದ ಚಲನೆಗೆ ಕನಿಷ್ಠ ಹಸ್ತಕ್ಷೇಪ ಹೊಂದಿರುವ ಸೀಮಾಸುಂಕ(ಕಸ್ಟಮ್) ಪ್ರಕ್ರಿಯೆಗಳಿರಬೇಕು. ಇದಲ್ಲದೆ, ಅಧಿಕೃತ ಆರ್ಥಿಕ ನಿರ್ವಾಹಕರು(ಎಇಒಗಳು) ಎಂದು ಕರೆಯಲ್ಪಡುವ 2 ಮತ್ತು 3ನೇ ಶ್ರೇಣಿಯ ಅಧಿಕೃತ ಆರ್ಥಿಕ ನಿರ್ವಾಹಕರಿಗೆ ಸುಂಕ ಮುಂದೂಡಿಕೆ ಅವಧಿಯನ್ನು 15 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಲಾಗುವುದು. ಅರ್ಹ ತಯಾರಕ-ಆಮದುದಾರರಿಗೂ ಇದನ್ನು ವಿಸ್ತರಿಸಲಾಗುವುದು. ಕಸ್ಟಮ್ಸ್ ಮೇಲೆ ಬದ್ಧವಾಗಿರುವ ಮುಂಗಡ ತೀರ್ಪಿನ ಮಾನ್ಯತೆ ಅವಧಿಯನ್ನು ಪ್ರಸ್ತುತ 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಸರ್ಕಾರಿ ಸಂಸ್ಥೆಗಳು ತಮ್ಮ ಸರಕುಗಳನ್ನು ತೆರವುಗೊಳಿಸಲು ಆದ್ಯತೆಯಾಗಿ ಎಇಒ ಮಾನ್ಯತೆ ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸಲಾಗುತ್ತದೆ..

ಕಸ್ಟಮ್ಸ್ ಗೋದಾಮು ಮಾರ್ಗಸೂಚಿಯನ್ನು ಸ್ವಯಂ ಘೋಷಣೆಗಳು, ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಮತ್ತು ಅಪಾಯ-ಆಧಾರಿತ ಲೆಕ್ಕ ಪರಿಶೋಧನೆಯೊಂದಿಗೆ ಗೋದಾಮು ನಿರ್ವಾಹಕ-ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಬಜೆಟ್ ಪ್ರಸ್ತಾಪಿಸಿದೆ.

ವ್ಯವಹಾರ ಸುಗಮಗೊಳಿಸುವಿಕೆ:

ವ್ಯವಹಾರ ಸುಗಮಗೊಳಿಸುವಿಕೆ ವಲಯದಲ್ಲಿ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉದಾಹರಣೆಗೆ, ವಿವಿಧ ಸರ್ಕಾರಿ ಸಂಸ್ಥೆಗಳಿಂದ ಸರಕು ಸಾಗಣೆ ಅನುಮತಿಗಳನ್ನು ಹಣಕಾಸು ವರ್ಷದ ಅಂತ್ಯದ ವೇಳೆಗೆ ಒಂದೇ ಮತ್ತು ಪರಸ್ಪರ ಸಂಪರ್ಕಿತ ಡಿಜಿಟಲ್ ಗವಾಕ್ಷಿ ಮೂಲಕ ಸರಾಗವಾಗಿ ಸಂಸ್ಕರಣೆಗೊಳಿಸಲಾಗುತ್ತದೆ. ಯಾವುದೇ ಅನುಸರಣೆ ಅವಶ್ಯಕತೆಯಿಲ್ಲದ ಸರಕುಗಳಿಗೆ, ಆಮದುದಾರರು ಆನ್ ‌ಲೈನ್ ನೋಂದಣಿ ಪೂರ್ಣಗೊಳಿಸಿದ ತಕ್ಷಣ ಕಸ್ಟಮ್ಸ್ ಮೂಲಕ ಕ್ಲಿಯರೆನ್ಸ್ ಮಾಡಬೇಕು. ಕಸ್ಟಮ್ಸ್ ಇಂಟಿಗ್ರೇಟೆಡ್ ಸಿಸ್ಟಮ್(ಸಿಐಎಸ್) ಅನ್ನು ಎಲ್ಲಾ ಕಸ್ಟಮ್ಸ್ ಪ್ರಕ್ರಿಯೆಗಳಿಗೆ ಒಂದೇ, ಸಂಯೋಜಿತ ಮತ್ತು ಅಳೆಯಬಹುದಾದ ವೇದಿಕೆಯಾಗಿ 2 ವರ್ಷಗಳಲ್ಲಿ ಜಾರಿಗೆ ತರಲಾಗುವುದು. ಅಲ್ಲದೆ, ಅಪಾಯ ಮೌಲ್ಯಮಾಪನಕ್ಕಾಗಿ ಸುಧಾರಿತ ಇಮೇಜಿಂಗ್ ಮತ್ತು ಎಐ ತಂತ್ರಜ್ಞಾನದೊಂದಿಗೆ ಸ್ಕ್ಯಾನಿಂಗ್ ಬಳಕೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು, ಇದರಿಂದಾಗಿ ಎಲ್ಲಾ ಪ್ರಮುಖ ಬಂದರುಗಳಲ್ಲಿ ಪ್ರತಿಯೊಂದು ಹಡಗನ್ನು ಸ್ಕ್ಯಾನ್ ಮಾಡುವ ಗುರಿ ಹೊಂದಿದೆ.

2026-27ರ ಕೇಂದ್ರ ಬಜೆಟ್, ವಿಶೇಷ ಆರ್ಥಿಕ ವಲಯ(EEZ)ದಲ್ಲಿ ಅಥವಾ ಬೃಹತ್ ಸಾಗರಗಳಲ್ಲಿ ಭಾರತೀಯ ಮೀನುಗಾರಿಕಾ ಹಡಗಿನಿಂದ ಮೀನು ಹಿಡಿಯುವುದನ್ನು ಸುಂಕ ಮುಕ್ತಗೊಳಿಸುತ್ತದೆ. ವಿದೇಶಿ ಬಂದರಿನಲ್ಲಿ ಅಂತಹ ಮೀನುಗಾರಿಕೆಯನ್ನು ಸರಕುಗಳ ರಫ್ತು ಎಂದು ಪರಿಗಣಿಸಲಾಗುತ್ತದೆ. ಕೊರಿಯರ್ ರಫ್ತಿನ ಮೇಲಿನ ಪ್ರತಿ ರವಾನೆಗೆ 10 ಲಕ್ಷ ರೂ. ಮೌಲ್ಯದ ಪ್ರಸ್ತುತ ಮಿತಿಯನ್ನು ಸಂಪೂರ್ಣ ತೆಗೆದುಹಾಕಲು ಬಜೆಟ್ ಪ್ರಸ್ತಾಪಿಸಿದೆ - ಇದು ಭಾರತದ ಸಣ್ಣ ವ್ಯವಹಾರಗಳು, ಕುಶಲಕರ್ಮಿಗಳು ಮತ್ತು ಸ್ಟಾರ್ಟಪ್ ‌ಗಳು ಇ-ಕಾಮರ್ಸ್ ಮೂಲಕ ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸುವ ಆಕಾಂಕ್ಷೆಗಳನ್ನು ಬೆಂಬಲಿಸುತ್ತದೆ.

ಅಂತಾರಾಷ್ಟ್ರೀಯ ಪ್ರಯಾಣ ಸಮಯದಲ್ಲಿ ಸಾಮಾನು(ಸರಕು-ಬ್ಯಾಗೇಜ್)ಗಳ ಕ್ಲಿಯರೆನ್ಸ್ ನಿಯಂತ್ರಿಸುವ ನಿಬಂಧನೆಗಳನ್ನು ಸಹ ಪರಿಷ್ಕರಿಸಲಾಗುವುದು. ಇಂದಿನ ಪ್ರಯಾಣ ವಾಸ್ತವಗಳಿಗೆ ಅನುಗುಣವಾಗಿ ಸುಂಕ-ಮುಕ್ತ ಭತ್ಯೆಗಳನ್ನು ಹೆಚ್ಚಿಸಲು ಪರಿಷ್ಕೃತ ನಿಯಮಗಳಾಗಲಿವೆ. ಇದಲ್ಲದೆ, ವಿವಾದಗಳನ್ನು ಬಗೆಹರಿಸಲು ಸಿದ್ಧರಿರುವ ಪ್ರಾಮಾಣಿಕ ತೆರಿಗೆದಾರರು ದಂಡದ ಬದಲಿಗೆ ಹೆಚ್ಚುವರಿ ಮೊತ್ತ ಪಾವತಿಸುವ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸಾಧ್ಯವಾಗುತ್ತದೆ.

 

*****


(ಪ್ರಕಟಣೆ ಐ.ಡಿ.: 2222002) ವಿಸಿಟರ್ ಕೌಂಟರ್ : 389