ಹಣಕಾಸು ಸಚಿವಾಲಯ
azadi ka amrit mahotsav

ವಿಕಸಿತ ಭಾರತ ಕಡೆಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದರ ಕರ್ತವ್ಯವನ್ನು 2026-27ರ ಕೇಂದ್ರ ಸರ್ಕಾರದ ಬಜೆಟ್ ವಿವರಿಸುತ್ತದೆ


ರೈತರ ಆದಾಯವನ್ನು ಹೆಚ್ಚಿಸಲು, ದಿವ್ಯಾಂಗಜನರಿಗೆ ಸಬಲೀಕರಣ ನೀಡಲು, ದುರ್ಬಲರನ್ನು ಸಬಲೀಕರಣಗೊಳಿಸಲು, ಪೂರ್ವೋದಯ ರಾಜ್ಯಗಳು ಮತ್ತು ಈಶಾನ್ಯ ಪ್ರದೇಶದ ಮೇಲೆ ಕೇಂದ್ರೀಕರಿಸಲು ಗುರಿಯಿಟ್ಟುಕೊಂಡ ಪ್ರಯತ್ನಗಳು ಈ ಬಜೆಟ್ ನಲ್ಲಿ ಇದೆ

ತೆಂಗು ಪ್ರಚಾರ ಯೋಜನೆ, ಭಾರತೀಯ ಗೋಡಂಬಿ ಮತ್ತು ಕೋಕೋಗೆ ಮೀಸಲಾದ ಕಾರ್ಯಕ್ರಮ, ಶ್ರೀಗಂಧದ ಕೃಷಿಯನ್ನು ಉತ್ತೇಜಿಸುವುದು ಮತ್ತು ವಾಲ್ನಟ್, ಬಾದಾಮಿ ಮತ್ತು ಪೈನ್ ಅಡಿಕೆಗೆ ಮೀಸಲಾದ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ

ಪ್ರಕಟಣಾ ದಿನಾಂಕ: 01 FEB 2026 12:50PM by PIB Bengaluru

ಇಂದು ಸಂಸತ್ತಿನಲ್ಲಿ 2026-27ರ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ  ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರದ ಮೂರನೇ ಕರ್ತವ್ಯವು ಸರ್ಕಾರದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಹೇಳಿದರು. ಈ ಮೂಲಕ ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯವು ಅರ್ಥಪೂರ್ಣ ಭಾಗವಹಿಸುವಿಕೆಗಾಗಿ ಸಂಪನ್ಮೂಲಗಳು, ಸೌಲಭ್ಯಗಳು ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ ಎಂದು ಹೇಳಿದರು.

ಮೂರನೇ ಕರ್ತವ್ಯವನ್ನು ಸಾಧಿಸಲು ಹಣಕಾಸು ಸಚಿವರು ವಿಶಾಲವಾದ ಮಾರ್ಗಸೂಚಿಯನ್ನು ರೂಪಿಸಿದರು. ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, "ಇದಕ್ಕೆ ಉದ್ದೇಶಿತ ಪ್ರಯತ್ನಗಳು ಬೇಕಾಗುತ್ತವೆ, ಎ) ಉತ್ಪಾದಕತೆ ವರ್ಧನೆ ಮತ್ತು ಉದ್ಯಮಶೀಲತೆಯ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಪ್ರವೇಶದ ಗಮನ; ಬಿ) ಜೀವನೋಪಾಯದ ಅವಕಾಶಗಳು, ತರಬೇತಿ ಮತ್ತು ಉತ್ತಮ ಗುಣಮಟ್ಟದ ಸಹಾಯಕ ಸಾಧನಗಳ ಮೂಲಕ ದಿವ್ಯಾಂಗರನ್ನು ಸಬಲೀಕರಣಗೊಳಿಸುವುದು; ಸಿ) ದುರ್ಬಲರಿಗೆ ಮಾನಸಿಕ ಆರೋಗ್ಯ ಮತ್ತು ಆಘಾತ ಆರೈಕೆಯನ್ನು ಪಡೆಯಲು ಸಬಲೀಕರಣಗೊಳಿಸುವುದು; ಡಿ) ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ವೇಗಗೊಳಿಸಲು ಪೂರ್ವೋದಯ ರಾಜ್ಯಗಳು ಮತ್ತು ಈಶಾನ್ಯ ಪ್ರದೇಶದ ಮೇಲೆ ಕೇಂದ್ರೀಕರಿಸುವುದು" ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು 

ರೈತರ ಆದಾಯವನ್ನು ಹೆಚ್ಚಿಸುವುದು

ರೈತರ ಆದಾಯವನ್ನು ಹೆಚ್ಚಿಸುವ ವಿಶಾಲ ಉದ್ದೇಶದಡಿಯಲ್ಲಿ, ಬಜೆಟ್ 500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ, ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸುವುದು ಮತ್ತು ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳೊಂದಿಗೆ ನವೋದ್ಯಮಗಳು ಮತ್ತು ಮಹಿಳಾ ನೇತೃತ್ವದ ಗುಂಪುಗಳನ್ನು ಒಳಗೊಂಡ ಮಾರುಕಟ್ಟೆ ಸಂಪರ್ಕವನ್ನು ಸಕ್ರಿಯಗೊಳಿಸುವ ನಿಬಂಧನೆಗಳನ್ನು ಒಳಗೊಂಡಿದೆ.

ರೈತರ ಆದಾಯವನ್ನು ಹೆಚ್ಚಿಸುವ ಪ್ರಮುಖ ಕ್ಷೇತ್ರಗಳಲ್ಲಿ ಪಶುಸಂಗೋಪನೆಯೂ ಒಂದು ಪ್ರಮುಖ ವಿಷಯವಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. "ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸಲು, ಸರ್ಕಾರವು ಉದ್ಯಮಶೀಲತಾ ಅಭಿವೃದ್ಧಿಯಲ್ಲಿ ಪಶುಸಂಗೋಪನಾ ವಲಯವನ್ನು ಈ ಕೆಳಗಿನವುಗಳ ಮೂಲಕ ಬೆಂಬಲಿಸುತ್ತದೆ: (ಎ) ಕ್ರೆಡಿಟ್-ಸಂಬಂಧಿತ ಸಬ್ಸಿಡಿ ಕಾರ್ಯಕ್ರಮ (ಬಿ) ಜಾನುವಾರು ಉದ್ಯಮಗಳ ಸ್ಕೇಲಿಂಗ್-ಅಪ್ ಮತ್ತು ಆಧುನೀಕರಣ (ಸಿ) ಜಾನುವಾರು, ಡೈರಿ ಮತ್ತು ಕೋಳಿ-ಕೇಂದ್ರಿತ ಸಮಗ್ರ-ಮೌಲ್ಯ ಸರಪಳಿಗಳ ಸೃಷ್ಟಿಯನ್ನು ಹೆಚ್ಚಿಸುವುದು ಮತ್ತು (ಡಿ) ಜಾನುವಾರು ರೈತ ಉತ್ಪಾದಕರ ಸಂಸ್ಥೆಗಳ ರಚನೆಯನ್ನು ಉತ್ತೇಜಿಸುವುದು ಇದರಲ್ಲಿ ಸೇರಿದೆ" ಎಂದು ಹೇಳಿದರು.

ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳನ್ನು ಬೆಂಬಲಿಸುವ ಮೂಲಕ ಕೇಂದ್ರ ಹಣಕಾಸು ಸಚಿವರು ಹೆಚ್ಚಿನ ಮೌಲ್ಯದ ಕೃಷಿಗೆ ಒತ್ತು ನೀಡಿದರು. ಈಶಾನ್ಯದಲ್ಲಿ ಅಗರ್ ಮರಗಳು ಮತ್ತು ನಮ್ಮ ಗುಡ್ಡಗಾಡು ಪ್ರದೇಶಗಳಲ್ಲಿ ಬಾದಾಮಿ, ವಾಲ್ನಟ್ ಮತ್ತು ಪೈನ್ ಬೀಜಗಳಂತಹ ಬೀಜಗಳನ್ನು ಸಹ ಬೆಂಬಲಿಸಲಾಗುವುದು ಎಂದು ಹೇಳಿದರು.

"ಭಾರತವು ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ರಾಷ್ಟ್ರ. ಸುಮಾರು 10 ದಶಲಕ್ಷ ರೈತರು ಸೇರಿದಂತೆ ಸುಮಾರು 30 ದಶಲಕ್ಷ ಜನರು ತಮ್ಮ ಜೀವನೋಪಾಯಕ್ಕಾಗಿ ತೆಂಗಿನಕಾಯಿಯನ್ನು ಅವಲಂಬಿಸಿದ್ದಾರೆ. ತೆಂಗಿನಕಾಯಿ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲು, ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಹೊಸ ಸಸಿಗಳು/ ಸಸ್ಯಗಳು/ ಪ್ರಭೇದಗಳೊಂದಿಗೆ ಬದಲಾಯಿಸುವುದು ಸೇರಿದಂತೆ ವಿವಿಧ ಮಧ್ಯಸ್ಥಿಕೆಗಳ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ತೆಂಗಿನಕಾಯಿ ಉತ್ತೇಜನ ಯೋಜನೆಯನ್ನು ನಾನು ಪ್ರಸ್ತಾಪಿಸುತ್ತೇನೆ" ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಅವರು ಹೇಳಿದರು.

ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದತ್ತ ಮತ್ತೊಂದು ಹೆಜ್ಜೆಯಾಗಿ, 2026-27 ರ ಕೇಂದ್ರ ಬಜೆಟ್, 2030 ರ ವೇಳೆಗೆ ಕಚ್ಚಾ ಗೋಡಂಬಿ ಮತ್ತು ಕೋಕೋ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತೀಯ ಗೋಡಂಬಿ ಮತ್ತು ಭಾರತೀಯ ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರಾಂಡ್‌ಗಳಾಗಿ ಪರಿವರ್ತಿಸಲು ಭಾರತೀಯ ಗೋಡಂಬಿ ಮತ್ತು ಕೋಕೋಗೆ ಮೀಸಲಾದ ಕಾರ್ಯಕ್ರಮವನ್ನು ಪ್ರಸ್ತಾಪಿಸಿದೆ.

ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯ ವೈಭವವನ್ನು ಪುನಃಸ್ಥಾಪಿಸಲು ಕೇಂದ್ರೀಕೃತ ಕೃಷಿ ಮತ್ತು ಕೊಯ್ಲಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತದೆ.

ಹಳೆಯ, ಕಡಿಮೆ ಇಳುವರಿ ನೀಡುವ ತೋಟಗಳನ್ನು ಪುನರುಜ್ಜೀವನಗೊಳಿಸಲು ಮತ್ತು ವಾಲ್ನಟ್ಸ್, ಬಾದಾಮಿ ಮತ್ತು ಪೈನ್ ಬೀಜಗಳ ಹೆಚ್ಚಿನ ಸಾಂದ್ರತೆಯ ಕೃಷಿಯನ್ನು ವಿಸ್ತರಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯನ್ನು ತರಲು ಮೀಸಲಾದ ಕಾರ್ಯಕ್ರಮವನ್ನು ಬೆಂಬಲಿಸಲು ಬಜೆಟ್ ಪ್ರಸ್ತಾಪಿಸುತ್ತದೆ.

ಭಾರತ್-ವಿಸ್ತಾರ್ (ಕೃಷಿ ಸಂಪನ್ಮೂಲಗಳನ್ನು ಪ್ರವೇಶಿಸಲು ವಾಸ್ತವಿಕವಾಗಿ ಸಂಯೋಜಿತ ವ್ಯವಸ್ಥೆ)

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾರತ್-ವಿಸ್ತಾರ್ (ಕೃಷಿ ಸಂಪನ್ಮೂಲಗಳನ್ನು ಪ್ರವೇಶಿಸಲು ವಾಸ್ತವಿಕವಾಗಿ ಸಂಯೋಜಿತ ವ್ಯವಸ್ಥೆ) ಅನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಘೋಷಿಸಿದರು. ವಿಸ್ತಾರ್ ಅನ್ನು ಬಹುಭಾಷಾ ಕೃತಕ ಬುದ್ಧಿಮತ್ತೆ (ಎಐ) ಸಾಧನವಾಗಿ ಕಲ್ಪಿಸಲಾಗಿದೆ, ಇದು ಎಗ್ರಿಸ್ಟಾಕ್ ಪೋರ್ಟಲ್‌ ಗಳು ಮತ್ತು ಕೃಷಿ ಪದ್ಧತಿಗಳ ಕುರಿತು ಐಕಾರ್ ಪ್ಯಾಕೇಜ್ ಅನ್ನು ಎಐ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ರೈತರಿಗೆ ಉತ್ತಮ ನಿರ್ಧಾರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಗ್ರಾಹಕರ ಬೇಡಿಕೆ ಅನುಸಾರವಾಗಿ ತಯಾರು (ಕಸ್ಟಮೈಸ್) ಮಾಡಿದ ಸಲಹಾ ಬೆಂಬಲವನ್ನು ಒದಗಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡುತ್ತದೆ.

 

*****


(ಪ್ರಕಟಣೆ ಐ.ಡಿ.: 2221775) ವಿಸಿಟರ್ ಕೌಂಟರ್ : 43