ಹಣಕಾಸು ಸಚಿವಾಲಯ
azadi ka amrit mahotsav

ರಸ್ತೆಗಳು, ವಸತಿ, ನಲ್ಲಿ ನೀರು ಸೌಲಭ್ಯ ಮತ್ತು ಡಿಜಿಟಲ್ ಸಂಪರ್ಕ ಸೇರಿದಂತೆ ಗ್ರಾಮೀಣ ಮೂಲಸೌಕರ್ಯದಲ್ಲಿ ಕ್ಷಿಪ್ರ ಬೆಳವಣಿಗೆಗಳು


ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ (PMGSY) -‌ I ಅಡಿಯಲ್ಲಿ ಅರ್ಹ ಶೇ.99.6% ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಪರ್ಕ ಮಾರ್ಗ

PMGSY-II ರಡಿಯಲ್ಲಿ 6,664 ರಸ್ತೆಗಳು (49,791 ಕಿಮೀ) ಮತ್ತು 759 ಸೇತುವೆಗಳು ಪೂರ್ಣ - PMGSY I & II ರ ಯಶಸ್ವಿ ಅನುಷ್ಠಾನದ ನಂತರ ಅಂತಿಮ ಹಂತದತ್ತ PMGSY III

'ಎಲ್ಲರಿಗೂ ವಸತಿ' ಗುರಿ ಸಾಧಿಸಲು, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅನುಷ್ಠಾನ, ಕಳೆದ 11 ವರ್ಷಗಳಲ್ಲಿ 3.70 ಕೋಟಿ ಮನೆಗಳು ಪೂರ್ಣ 

ಗ್ರಾಮೀಣ ಪ್ರದೇಶಗಳಲ್ಲಿ 'ಹರ್ ಘರ್ ಜಲ್' ಆಶಯ  ಸಾಕಾರಕ್ಕೆ ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಸುಮಾರು 15.74 ಕೋಟಿ (ಶೇಕಡ 81.31) ಕುಟುಂಬಗಳ ಸೇರ್ಪಡೆ

ಸ್ವಾಮಿತ್ವ ಯೋಜನೆಯಡಿಯಲ್ಲಿ ಸುಮಾರು 3.44 ಲಕ್ಷ ಗ್ರಾಮಗಳ ಗುರಿ - ಈಗಾಗಲೇ 3.28 ಲಕ್ಷ ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣ

प्रविष्टि तिथि: 29 JAN 2026 1:58PM by PIB Bengaluru

ರಸ್ತೆ, ವಸತಿ, ನಲ್ಲಿ ನೀರು ಸಂಪರ್ಕ, ಡಿಜಿಟಲ್ ಸಂಪರ್ಕ ಸೇರಿದಂತೆ ಸದೃಢ ಮೂಲಸೌಕರ್ಯವು ಒಳಗೊಳ್ಳುವಿಕೆಗೆ ಅತ್ಯಗತ್ಯವಾಗಿದೆ. ಇವು ಮಾರುಕಟ್ಟೆಗಳು, ಸೇವೆಗಳು ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಅವಕಾಶಗಳಿಗೆ ಸಮುದಾಯಗಳನ್ನು ಸಂಪರ್ಕಿಸಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇಂದು ಮಂಡಿಸಿದ 2025-26 ರ ಆರ್ಥಿಕ ಸಮೀಕ್ಷೆ ತಿಳಿಸಿದೆ. 

2001 ರ ಜನಗಣತಿಯ ಪ್ರಕಾರ ಬಯಲು ಪ್ರದೇಶಗಳಲ್ಲಿ 500 ಮತ್ತು ಹೆಚ್ಚಿನ ಜನರು ಹಾಗೂ ಗುಡ್ಡಗಾಡು ಮತ್ತು ಈಶಾನ್ಯ ಪ್ರದೇಶಗಳಲ್ಲಿ 250 ಮತ್ತು ಹೆಚ್ಚಿನ ಜನರು ವಾಸಿಸುವ ಗ್ರಾಮೀಣ ಭಾರತದ ಅರ್ಹ ಸಂಪರ್ಕ ರಹಿತ ವಾಸಸ್ಥಳಗಳಿಗೆ ಎಲ್ಲಾ ಹವಾಮಾನಕ್ಕೂ ಸರಿಹೊಂದುವ ರಸ್ತೆ ಸಂಪರ್ಕವನ್ನು ಒದಗಿಸುವ ಮೂಲಭೂತ ಉದ್ದೇಶದೊಂದಿಗೆ ಸರ್ಕಾರವು 2000 ರ ಡಿಸೆಂಬರ್ 25 ರಂದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY-I ಎಂದು ಕರೆಯಲ್ಪಡುವ) ಯನ್ನು ಪ್ರಾರಂಭಿಸಿದೆ. 2026ರ ಜನವರಿ 15 ರ ವೇಳೆಗೆ, ಅರ್ಹ ಶೇಕಡ 99.6 ಕ್ಕಿಂತ ಹೆಚ್ಚು ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದಲ್ಲದೆ, PMGSY-I ಅಡಿಯಲ್ಲಿ, 1,64,581 ರಸ್ತೆಗಳು (6,44,735 ಕಿಮೀ) ಮತ್ತು 7,453 ಸೇತುವೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 1,63,665 ರಸ್ತೆಗಳು (6,25,117 ಕಿಮೀ) ಮತ್ತು 7,210 ಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ. 2013 ರಲ್ಲಿ ಪ್ರಾರಂಭಿಸಲಾದ PMGSY-II ಅಡಿಯಲ್ಲಿ 6,664 ರಸ್ತೆಗಳು (49,791 ಕಿಮೀ) ಮತ್ತು 759 ಸೇತುವೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 2026 ರ ಜನವರಿ 15 ರ ವೇಳೆಗೆ 6,612 ರಸ್ತೆಗಳು (49,087 ಕಿಮೀ) ಮತ್ತು 749 ಸೇತುವೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ.

ಗ್ರಾಮೀಣ ಕೃಷಿ ಮಾರುಕಟ್ಟೆಗಳು (GrAMs), ಪ್ರೌಢ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಜನವಸತಿಗಳನ್ನು ಸಂಪರ್ಕಿಸುವ 1,25,000 ಕಿಮೀ ಮಾರ್ಗಗಳು ಮತ್ತು ಪ್ರಮುಖ ಗ್ರಾಮೀಣ ಸಂಪರ್ಕಗಳ ಕ್ರೋಢೀಕರಣಕ್ಕಾಗಿ ಸರ್ಕಾರವು ಜುಲೈ 2019 ರಲ್ಲಿ PMGSY ಹಂತ III ಅನ್ನು ಅನುಮೋದಿಸಿತು. PMGSY-III ಅಡಿಯಲ್ಲಿ, 15,965 ರಸ್ತೆಗಳು (1,22,363 ಕಿಮೀ) ಮತ್ತು 3,211 ಸೇತುವೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 12,699 ರಸ್ತೆಗಳು (1,02,926 ಕಿಮೀ) ಮತ್ತು 1,734 ಸೇತುವೆಗಳು 2026ರ ಜನವರಿ 15 ರ ವೇಳೆಗೆ ಪೂರ್ಣಗೊಂಡಿವೆ.

'ಎಲ್ಲರಿಗೂ ವಸತಿ' ಎಂಬ ಗುರಿ ಸಾಧಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆ - ಗ್ರಾಮೀಣವನ್ನು 2016ರ ಏಪ್ರಿಲ್ 1 ರಿಂದ ಜಾರಿಗೆ ತರಲಾಗಿದೆ. ಇದರಡಿ, 2029 ರ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಮತ್ತು ಶಿಥಿಲಗೊಂಡ ಮನೆಗಳಲ್ಲಿ ವಾಸಿಸುವ ಎಲ್ಲಾ ಅರ್ಹ ವಸತಿರಹಿತ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಸಹಿತವಾದ 4.95 ಕೋಟಿ ಪುಕ್ಕಾ ಮನೆಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಒಟ್ಟು 4.14 ಕೋಟಿ ಮನೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದ್ದು, ಈ ಪೈಕಿ 3.86 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು ಇಲ್ಲಿಯವರೆಗೆ 2.93 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಇದಲ್ಲದೆ, ಹಿಂದಿನ ಯೋಜನೆಗಳಡಿಯಲ್ಲಿ ಬಾಕಿ ಉಳಿದಿದ್ದ 76.98 ಲಕ್ಷ ಮನೆಗಳ ನಿರ್ಮಾಣವನ್ನು ಸಹ ಪೂರ್ಣಗೊಳಿಸಲಾಗಿದೆ, ಹೀಗೆ ಕಳೆದ 11 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಒಟ್ಟು 3.70 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಮನೆಗಳಿಗೂ ನಲ್ಲಿ ನೀರು ಸೌಕರ್ಯದ 'ಹರ್ ಘರ್ ಜಲ್' ಆಕಾಂಕ್ಷೆಯನ್ನು ಪೂರೈಸಲು, ಸರ್ಕಾರವು ಆಗಸ್ಟ್ 2019 ರಲ್ಲಿ ರಾಜ್ಯಗಳ ಸಹಭಾಗಿತ್ವದಲ್ಲಿ ಜಲ್ ಜೀವನ್ ಮಿಷನ್ (ಜೆಜೆಎಂ) ಅನ್ನು ಜಾರಿಗೆ ತಂದಿದೆ. ಯೋಜನೆ ಆರಂಭವಾಗುವ ಸಂದರ್ಭದಲ್ಲಿ, ಕೇವಲ 3.23 ಕೋಟಿ (ಶೇ. 17) ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರು ಸಂಪರ್ಕಗಳನ್ನು ಹೊಂದಿದ್ದವು. 2025 ರ ನವೆಂಬರ್ 20 ರ ವೇಳೆಗೆ, 12.50 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ ನೀರು ಸೌಲಭ್ಯ ಒದಗಿಸಲಾಗಿದ್ದು, ಒಟ್ಟು ವ್ಯಾಪ್ತಿಯು ಸುಮಾರು 15.74 ಕೋಟಿಗೆ (ಶೇ. 81.31)  ಹೆಚ್ಚಾಗಿದ್ದು, ಗ್ರಾಮೀಣ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸಿದೆ.

ಗ್ರಾಮೀಣ ಭಾರತದ ತಂತ್ರಜ್ಞಾನ-ಚಾಲಿತ ಪಾಲ್ಗೊಳ್ಳುವಿಕೆ

ತಂತ್ರಜ್ಞಾನವು ಅಡೆತಡೆಗಳನ್ನು ತೊಡೆದು ಹಾಕುತ್ತಾ, ಎಲ್ಲರಿಗೂ ಪ್ರವೇಶಾವಕಾಶ ವಿಸ್ತರಿಸುತ್ತಾ ಎಲ್ಲರ ಒಳಗೊಳ್ಳುವಿಕೆಗೆ ಪ್ರಬಲ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಸುಧಾರಿತ ಮೊಬೈಲ್ ಫೋನ್‌ ಗಳು, ಉಪಗ್ರಹ ಅಂತರ್ಜಾಲ ಸೌಲಭ್ಯ ಮತ್ತು ಕೃಷಿಗಾಗಿ ಡಿಜಿಟಲ್ ಪರಿಕರಗಳಂತಹ ನಾವಿನ್ಯತೆಗಳು 'ಡಿಜಿಟಲ್ ವಿಭಜನೆ'ಯನ್ನು ತಡೆಯಲು ಮತ್ತು ಅತ್ಯಂತ ದೂರದ ಪ್ರದೇಶಗಳಿಗೂ ಪ್ರಮುಖ ಸೇವೆಗಳನ್ನು ಒದಗಿಸಲು ನೆರವಾಗಿವೆ. ಇತ್ತೀಚಿನ ʼಸಮಗ್ರ ಮಾಡ್ಯುಲರ್ ಸಮೀಕ್ಷೆ: ಟೆಲಿಕಾಂ 2025ʼ ಸಕಾರಾತ್ಮಕ ಪ್ರವೃತ್ತಿಯನ್ನು ದೃಢಪಡಿಸಿದೆ. ಜನವಸತಿ ಹಳ್ಳಿಗಳ ಸಮೀಕ್ಷೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ (SVAMITVA) ಮತ್ತು ನಮೋ ಡ್ರೋನ್ ದೀದಿ ಯೋಜನೆಗಳು ತಂತ್ರಜ್ಞಾನವು ಹಳ್ಳಿಯ ಜೀವನದಲ್ಲಿ ಒಳಗೊಳ್ಳುವಿಕೆಯನ್ನು ಹೇಗೆ ಪೋಷಿಸಬಲ್ಲದು ಎಂಬುದಕ್ಕೆ ಸೂಕ್ತ ಉದಾಹರಣೆಗಳಾಗಿವೆ.

SVAMITVA ಅಡಿಯಲ್ಲಿ ಡ್ರೋನ್ ಸಮೀಕ್ಷೆಗಾಗಿ ಸೂಚಿಸಲಾದ ಸುಮಾರು 3.44 ಲಕ್ಷ ಹಳ್ಳಿಗಳ ಪೈಕಿ ಡಿಸೆಂಬರ್ 2025 ರ ವೇಳೆಗೆ 3.28 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. ಸುಮಾರು 1.82 ಲಕ್ಷ ಹಳ್ಳಿಗಳಿಗೆ 2.76 ಕೋಟಿ ಆಸ್ತಿ ಕಾರ್ಡ್ ಗಳನ್ನು ಸಿದ್ಧಪಡಿಸಲಾಗಿದೆ. ಮುಂಚೂಣಿ ರಸಗೊಬ್ಬರ ಕಂಪನಿಗಳು 2023-24 ರಲ್ಲಿ ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಸಹಾಯ ಗುಂಪುಗಳ (SHG) ಡ್ರೋನ್ ದೀದಿಯರಿಗೆ 1,094 ಡ್ರೋನ್ ಗಳನ್ನು ವಿತರಿಸಿದ್ದು, ಈ ಪೈಕಿ 500 ಡ್ರೋನ್ ಗಳನ್ನು ನಮೋ ಡ್ರೋನ್ ದೀದಿ ಯೋಜನೆಯಡಿಯಲ್ಲಿ ಒದಗಿಸಲಾಗಿದೆ.

ಜೊತೆಗೆ, ಸರ್ಕಾರವು ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದ (DILRMP) ಮೂಲಕ ಹಣಕಾಸು ವರ್ಷ 08 ರಿಂದ ಗ್ರಾಮೀಣ ಭೂ ದಾಖಲೆಗಳ ಗಣಕೀಕರಣ ಮತ್ತು ಡಿಜಿಟಲೀಕರಣವನ್ನು ಜಾರಿಗೆ ತಂದಿದೆ. ಅಖಿಲ ಭಾರತ ಮಟ್ಟದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಒಡೆತನದ ದಾಖಲೆ ರೆಕಾರ್ಡ್‌ ಆಫ್‌ ರೈಟ್ಸ್ (RoRs) ಗಳ ಡಿಜಿಟಲೀಕರಣ ಕಾರ್ಯವು ಲಭ್ಯವಿರುವ ಭೂ ದಾಖಲೆಗಳ ಪೈಕಿ ಶೇಕಡ 99.8 ರಷ್ಟು ಪೂರ್ಣಗೊಂಡಿದೆ.

 

*****


(रिलीज़ आईडी: 2220217) आगंतुक पटल : 4
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Tamil , Telugu , Malayalam