ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗಿ


ಶೌರ್ಯ ಯಾತ್ರೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಸಾಂಕೇತಿಕ ಮೆರವಣಿಗೆ ಒಳಗೊಂಡ ಯಾತ್ರೆ

ಸೋಮನಾಥ ದೇವಾಲಯದ ಮೊದಲ ಆಕ್ರಮಣದ ನಂತರ 1,000 ವರ್ಷಗಳ ಅಚಲ ಚೈತನ್ಯ ಮತ್ತು ನಾಗರಿಕತೆಯ ನಿರಂತರತೆ ಗುರುತಿಸುವ ಕಾರ್ಯಕ್ರಮ ಆಯೋಜನೆ

ಪ್ರಧಾನಮಂತ್ರಿಯವರ ಭಾಗವಹಿಸುವಿಕೆಯಿಂದ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆ ಸಂರಕ್ಷಿಸುವ ಮತ್ತು ಆಚರಿಸುವ ಬದ್ಧತೆ ಪುನರುಚ್ಛಾರ

ಸೋಮನಾಥ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸಲಿರುವ ಪ್ರಧಾನಮಂತ್ರಿ

ಸೋಮನಾಥ ದೇವಾಲಯದಲ್ಲಿ ಓಂಕಾರ ಮಂತ್ರ ಪಠಣದಲ್ಲಿ ಪ್ರಧಾನಮಂತ್ರಿ ಭಾಗಿ

प्रविष्टि तिथि: 09 JAN 2026 12:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 10 ರಂದು ರಾತ್ರಿ 8 ಗಂಟೆಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಸೋಮನಾಥ ದೇವಾಲಯದಲ್ಲಿ ಡ್ರೋಣ್‌  ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.

ಜನವರಿ 11 ರಂದು ಬೆಳಿಗ್ಗೆ 9:45 ರ ಸುಮಾರಿಗೆ ಪ್ರಧಾನಮಂತ್ರಿ ಅವರು ಸೋಮನಾಥ ದೇವಾಲಯವನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಯೋಧರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ ಮೆರವಣಿಗೆಯಾದ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಶೌರ್ಯ ಯಾತ್ರೆಯು ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಸಾಂಕೇತಿಕ ಮೆರವಣಿಗೆ ಒಳಗೊಂಡಿದೆ. ನಂತರ ಬೆಳಿಗ್ಗೆ 10:15ರ ಸುಮಾರಿಗೆ ಪ್ರಧಾನಮಂತ್ರಿ ಸೋಮನಾಥ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಸೋಮನಾಥದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು ಮತ್ತು ಭಾಷಣ ಮಾಡಲಿದ್ದಾರೆ.

2026ರ ಜನವರಿ 8 ರಿಂದ 11 ರವರೆಗೆ ನಡೆಯಲಿರುವ ಸೋಮನಾಥ ಸ್ವಾಭಿಮಾನ ಪರ್ವವನ್ನು ಸೋಮನಾಥದಲ್ಲಿ ಆಯೋಜಿಸಲಾಗಿದೆ. ದೇವಾಲಯವನ್ನು ರಕ್ಷಿಸಲು ಭಾರತದ ಅಸಂಖ್ಯಾತ ನಾಗರಿಕರು ಮಾಡಿದ ತ್ಯಾಗವನ್ನು ಸ್ಮರಿಸಲು ಮತ್ತು ಭವಿಷ್ಯದ ಪೀಳಿಗೆಯ ಸಾಂಸ್ಕೃತಿಕ ಪ್ರಜ್ಞೆಗೆ ಸ್ಪೂರ್ತಿಯನ್ನು ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

1026ರಲ್ಲಿ ಘಜ್ನಿಯ ಮಹಮೂದ್ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿ 1,000 ವರ್ಷಗಳ ಪೂರೈಸಿರುವುದನ್ನು ಗುರುತಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶತ ಶತಮಾನಗಳಿಂದ ಅದರ ನಾಶಕ್ಕೆ ಪದೇ ಪದೇ ಪ್ರಯತ್ನಗಳು ನಡೆದಿದ್ದರೂ, ಸೋಮನಾಥ ದೇವಾಲಯವು ಇಂದು ಸ್ಥಿತಿಸ್ಥಾಪಕತ್ವ, ನಂಬಿಕೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿ ನಿಂತಿದೆ, ಅದಕ್ಕೆ ಸಾಮೂಹಿಕ ಸಂಕಲ್ಪ ಮತ್ತು ಅದರ ಪ್ರಾಚೀನ ವೈಭವವನ್ನು ಪುನಃಸ್ಥಾಪಿಸುವ ಪ್ರಯತ್ನಗಳು ಕಾರಣವಾಗಿವೆ.

ಸ್ವಾತಂತ್ರ್ಯಾ ನಂತರ ದೇವಾಲಯದ ಪುನಃಸ್ಥಾಪನೆಗೆ ಸರ್ದಾರ್ ಪಟೇಲ್ ಅವರು ಪ್ರಯತ್ನಗಳನ್ನು ಕೈಗೊಂಡಿದ್ದರು. ಆ ಪುನರುಜ್ಜೀವನದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲುನ್ನು 1951ರಲ್ಲಿ ಸಾಧಿಸಲಾಯಿತು, ಅಂದಿನ ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮಕ್ಷಮದಲ್ಲಿ ಮರು ಸ್ಥಾಪಿಸಲಾದ ಸೋಮನಾಥ ದೇವಾಲಯವನ್ನು ಭಕ್ತರಿಗಾಗಿ ಅನಾವರಣಗೊಳಿಸಲಾಯಿತು.ಆ ಐತಿಹಾಸಿಕ ಪುನಃಸ್ಥಾಪನೆಯ 2026ರಲ್ಲಿ 75 ವರ್ಷಗಳು ಪೂರ್ಣಗೊಂಡಿರುವುದು ಸೋಮನಾಥ ಸ್ವಾಭಿಮಾನ ಪರ್ವಕ್ಕೆ ವಿಶೇಷ ಮಹತ್ವವನ್ನು ನೀಡುತ್ತಿದೆ.

ಈ ಸಂಭ್ರಮಾಚರಣೆಯು ದೇಶಾದ್ಯಂತದ ನೂರಾರು ಸಾಧು ಸಂತರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ, ಜೊತೆಗೆ ದೇವಾಲಯದ ಆವರಣದಲ್ಲಿ 72 ಗಂಟೆಗಳ ನಿರಂತರ 'ಓಂ' ಪಠಣವೂ ನಡೆಯಲಿದೆ.

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಮಂತ್ರಿ ಅವರ ಭಾಗವಹಿಸುವಿಕೆಯು ಭಾರತದ ನಾಗರಿಕತೆಯ ಶಾಶ್ವತ ಸ್ಫೂರ್ತಿಯನ್ನು ಒತ್ತಿಹೇಳುತ್ತದೆ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಆಚರಿಸುವ ಅವರ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

 

*****


(रिलीज़ आईडी: 2212890) आगंतुक पटल : 12
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Manipuri , Assamese , Punjabi , Gujarati , Odia , Tamil , Telugu , Malayalam