ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತೀಯ ಕೃತಕ ಬುದ್ಧಿಮತ್ತೆ (ಎಐ) ಸ್ಟಾರ್ಟ್-ಅಪ್‌ಗಳೊಂದಿಗೆ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ಭಾರತದ ಕೃತಕ ಬುದ್ದಿಮತ್ತೆ ಪರಿಣಾಮ ಶೃಂಗಸಭೆ 2026 ರ 'ಫೌಂಡೇಶನ್ ಮಾಡೆಲ್' ವಿಭಾಗದ ಅಡಿಯಲ್ಲಿ ಆಯ್ಕೆಯಾದ 12 ಭಾರತೀಯ ಎಐ ನವೋಧ್ಯಮಗಳು ತಮ್ಮ ಆಲೋಚನೆಗಳು ಮತ್ತು ಕೆಲಸವನ್ನು ಪ್ರಸ್ತುತ ಪಡಿಸಿದವು

ಈ ನವೋದ್ಯಮಗಳು ಆರೋಗ್ಯ ರಕ್ಷಣೆ, ಬಹುಭಾಷಾ ಎಲ್ ಎಲ್ ಎಂಗಳು, ವಸ್ತುಗಳ ಸಂಶೋಧನೆ, ದತ್ತಾಂಶ ವಿಶ್ಲೇಷಣೆ, ಎಂಜಿನಿಯರಿಂಗ್ ಸಿಮ್ಯುಲೇಶನ್‌ಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ

ನವೋದ್ಯಮಗಳು ಕೃತಕ ಬುದ್ದಿಮತ್ತೆ ವಲಯದ ತ್ವರಿತ ಬೆಳವಣಿಗೆ ಮತ್ತು ವಿಶಾಲ ಭವಿಷ್ಯದ ಸಾಮರ್ಥ್ಯದ ಕುರಿತು ಉಲ್ಲೇಖಿಸುತ್ತವೆ, ಎಐ ನಾವೀನ್ಯತೆ ಮತ್ತು ನಿಯೋಜನೆಯ ಗುರುತ್ವಾಕರ್ಷಣೆ ಕೇಂದ್ರ ಬಿಂದುವು, ಭಾರತದೆಡೆಗೆ ಬದಲಾಗಲು ಆರಂಭಿಸುತ್ತಿದೆ ಎಂಬುದನ್ನು ಗಮನಿಸುತ್ತಿದೆ

ಕೃತಕ ಬುದ್ಧಿಮತ್ತೆ ಪೂರಕ ವ್ಯವಸ್ಥೆಯನ್ನು ಮುನ್ನಡೆಸುವ ಭಾರತದ ದೃಢ ಬದ್ಧತೆಯನ್ನು ಶ್ಲಾಘಿಸಿದ ಸ್ಟಾರ್ಟ್-ಅಪ್‌ಗಳು

ಸ್ಟಾರ್ಟ್-ಅಪ್‌ಗಳು ಮತ್ತು ಎಐ ಉದ್ಯಮಿಗಳು ಭಾರತದ ಭವಿಷ್ಯದ ಸಹ-ನಿರ್ಮಾತೃಗಳೆಂದು ಹೇಳಿದ ಪ್ರಧಾನಮಂತ್ರಿ

ಭಾರತೀಯ ಎಐ ಮಾದರಿಗಳು ಸ್ಥಳೀಯ ಮತ್ತು ದೇಶೀಯ ಕಂಟೆಂಟ್ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕೆಂದು ಪ್ರಧಾನಮಂತ್ರಿ ಸೂಚನೆ

ಭಾರತೀಯ ಎಐ ಮಾದರಿಗಳು ನೈತಿಕ, ಪಕ್ಷಪಾತವಿಲ್ಲದ, ಪಾರದರ್ಶಕ ಮತ್ತು ದತ್ತಾಂಶ ಗೌಪ್ಯತೆ ತತ್ವಗಳನ್ನು ಆಧರಿಸಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯವನ್ನು ಹೇಳಿದ ಪ್ರಧಾನಮಂತ್ರಿ

ತಮ್ಮ ಎಐ ಮಾದರಿಗಳ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದ ಪ್ರಧಾನಮಂತ್ರಿ

प्रविष्टि तिथि: 08 JAN 2026 2:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಭಾರತೀಯ ಕೃತಕ ಬುದ್ಧಿಮತ್ತೆ (ಎಐ) ನವೋದ್ಯಮಗಳೊಂದಿಗೆ (ಸ್ಟಾರ್ಟ್-ಅಪ್‌ಗಳೊಂದಿಗೆ) ನಡೆದ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಭಾರತದ ಕೃತಕ ಬುದ್ದಿಮತ್ತೆ ಪರಿಣಾಮ ಶೃಂಗಸಭೆ 2026' ಕ್ಕಿಂತ ಮುಂಚಿತವಾಗಿ, ಈ ಶೃಂಗಸಭೆಯ 'ಫೌಂಡೇಶನ್ ಮಾಡೆಲ್ ಪಿಲ್ಲರ್' ಅಡಿಯಲ್ಲಿ ಅರ್ಹತೆ ಪಡೆದ 12 ಭಾರತೀಯ ಎಐ ನವೋದ್ಯಮಗಳು ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ, ತಮ್ಮ ಆಲೋಚನೆಗಳು ಮತ್ತು ಸಾಧನೆಗಳನ್ನು ಪ್ರಸ್ತುತ ಪಡಿಸಿದವು.

ಈ ಸ್ಟಾರ್ಟ್-ಅಪ್‌ಗಳು ಭಾರತೀಯ ಭಾಷೆಗಳ ಮೂಲ ಮಾದರಿಗಳು, ಬಹುಭಾಷಾ ಎಲ್ ಎಲ್ ಎಂ ಗಳು, ಭಾಷಣದಿಂದ ಪಠ್ಯಕ್ಕೆ,  ಪಠ್ಯದಿಂದ ಆಡಿಯೋ ಮತ್ತು ಪಠ್ಯದಿಂದ ವೀಡಿಯೊಗೆ; ಇ-ಕಾಮರ್ಸ್, ಮಾರ್ಕೆಟಿಂಗ್ ಮತ್ತು ವೈಯಕ್ತಿಕ ಕಂಟೆಂಟ್‌ ಸೃಷ್ಟಿಗಾಗಿ ಜನರೇಟಿವ್ ಎಐ ಅನ್ನು ಬಳಸುವ 3D ಕಂಟೆಂಟ್; ಎಂಜಿನಿಯರಿಂಗ್ ಸಿಮ್ಯುಲೇಶನ್‌ಗಳು, ವಸ್ತುಗಳ ಸಂಶೋಧನೆ ಮತ್ತು ಕೈಗಾರಿಕೆಗಳಾದ್ಯಂತ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಸುಧಾರಿತ ವಿಶ್ಲೇಷಣೆಗಳು; ಆರೋಗ್ಯ ರಕ್ಷಣಾ ರೋಗಪತ್ತೆ ಮತ್ತು ವೈದ್ಯಕೀಯ ಸಂಶೋಧನೆ, ಇತ್ಯಾದಿ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ದೇಶದಲ್ಲಿ ಕೃತಕ ಬುದ್ಧಿಮತ್ತೆ ಪೂರಕ ವ್ಯವಸ್ಥೆಯನ್ನು ಮುನ್ನಡೆಸುವ ಭಾರತದ ದೃಢವಾದ ಬದ್ಧತೆಯನ್ನು ಎಐ ನವೋದ್ಯಮಗಳು ಶ್ಲಾಘಿಸಿದವು. ಕೃತಕ ಬುದ್ಧಿಮತ್ತೆ ನಾವೀನ್ಯತೆ ಮತ್ತು ನಿಯೋಜನೆಯ ಗುರುತ್ವಾಕರ್ಷಣೆಯ ಕೇಂದ್ರವು ಭಾರತದೆಡೆಗೆ ತಿರುಗಲಾರಂಭಿಸಿರುವುದನ್ನು ಗಮನಿಸುತತ್ತಾ, ಎಐ ವಲಯದ ಕ್ಷಿಪ್ರ ಬೆಳವಣಿಗೆ ಮತ್ತು ವಿಶಾಲ ಭವಿಷ್ಯದ ಸಾಮರ್ಥ್ಯವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತವು ಈಗ ಎಐ ಅಭಿವೃದ್ಧಿಗೆ ಉತ್ಕೃಷ್ಟ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸುತ್ತಿದೆ ಎಂದು ನಾಯಕರು ಹೇಳಿದದು, ಇದು ದೇಶವನ್ನು ಜಾಗತಿಕ ಎಐ ನಕ್ಷೆಯಲ್ಲಿ ದೃಢವಾಗಿ ಇರಿಸುತ್ತದೆ.

ಸಭೆಯ ವೇಳೆ ಪ್ರಧಾನಮಂತ್ರಿ ಅವರು ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಮುಂದಿನ ತಿಂಗಳು ಭಾರತವು ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಲಿದೆ,  ಈ ಮೂಲಕ ದೇಶವು ತಂತ್ರಜ್ಞಾನ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಎಐ ಬಳಸಿಕೊಂಡು ಪರಿವರ್ತನೆಯನ್ನು ತರಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು.

ನವೋದ್ಯಮಗಳು ಮತ್ತು ಕೃತಕ ಬುದ್ಧಿಮತ್ತೆ ಉದ್ಯಮಿಗಳು ಭಾರತದ ಭವಿಷ್ಯದ ಸಹ-ನಿರ್ಮಾತೃಗಳು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ದೇಶವು ನಾವೀನ್ಯತೆ ಮತ್ತು ದೊಡ್ಡ ಪ್ರಮಾಣದ ಅನುಷ್ಠಾನ ಎರಡಕ್ಕೂ ವಿಫುಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ”ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್‌’’ ಎಂಬ ಮನೋಭಾವವನ್ನು ಪ್ರತಿಬಿಂಬಿಸುವ ವಿಶಿಷ್ಟ ಕೃತಕ ಬುದ್ಧಿಮತ್ತೆ ಮಾದರಿಯನ್ನು ಭಾರತ ಜಗತ್ತಿಗೆ ಪ್ರಸ್ತುತಪಡಿಸಬೇಕು ಎಂದು ಅವರು ಹೇಳಿದರು.

ಭಾರತದ ಮೇಲೆ ವಿಶ್ವ ಇಟ್ಟಿರುವ ನಂಬಿಕೆಯೇ ದೇಶದ ಅತಿದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತೀಯ ಕೃತಕ ಬುದ್ಧಿಮತ್ತೆ ಮಾದರಿಗಳು ನೈತಿಕ, ಪಕ್ಷಪಾತವಿಲ್ಲದ, ಪಾರದರ್ಶಕ ಮತ್ತು ದತ್ತಾಂಶ ಗೌಪ್ಯತೆ ತತ್ವಗಳನ್ನು ಆಧರಿಸಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು. ಭಾರತವು ಜಾಗತಿಕ ನಾಯಕತ್ವದತ್ತ ಸ್ಟಾರ್ಟ್‌ಅಪ್‌ಗಳು ಸಹ ಕೆಲಸ ಮಾಡಬೇಕು ಮತ್ತು ಭಾರತವು ಕೈಗೆಟುಕುವ ಎಐ, ಎಲ್ಲವನ್ನೂ ಒಳಗೊಂಡ ಕೃತಕ ಬುದ್ಧಿಮತ್ತೆ ಮತ್ತು ಮಿತವ್ಯಯದ ನಾವೀನ್ಯತೆಯನ್ನು ಜಾಗತಿಕವಾಗಿ ಉತ್ತೇಜಿಸಬಹುದು ಎಂದು ಅವರು ಹೇಳಿದರು. ಭಾರತೀಯ ಕೃತಕ ಬುದ್ಧಿಮತ್ತೆ ಮಾದರಿಗಳು ವಿಭಿನ್ನವಾಗಿರಬೇಕು ಮತ್ತು ಸ್ಥಳೀಯ ಮತ್ತು ದೇಶೀಯ ಕಂಟೆಂಟ್ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕು ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ ಅವತಾರ್, ಭಾರತ್‌ಜೆನ್, ಫ್ರ್ಯಾಕ್ಟಲ್, ಗ್ಯಾನ್, ಜೆನ್‌ಲೂಪ್, ಜ್ಞಾನಿ, ಇಂಟೆಲ್ಲಿಹೆಲ್ತ್‌ , ಸರ್ವಮ್, ಶೋಧ್ ಎಐ, ಸೋಕೆಟ್ ಎಐ, ಟೆಕ್ ಮಹೀಂದ್ರಾ ಮತ್ತು ಝೆಂಟೀಕ್ ಸೇರಿದಂತೆ ಭಾರತೀಯ ಕೃತಕ ಬುದ್ಧಿಮತ್ತೆ (ಎಐ) ನವೋದ್ಯಮಗಳ  ಸಿಇಒಗಳು, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ ಕೂಡ ಉಪಸ್ಥಿತರಿದ್ದರು. 

 

*****


(रिलीज़ आईडी: 2212513) आगंतुक पटल : 34
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Telugu