ಹಣಕಾಸು ಸಚಿವಾಲಯ
azadi ka amrit mahotsav

ಜಗಿಯುವ ತಂಬಾಕು, ಜರ್ದಾ ಸುವಾಸಿತ ತಂಬಾಕು ಮತ್ತು ಗುಟ್ಕಾಗಳ ಮೇಲಿನ ಯಂತ್ರಾಧಾರಿತ ತೆರಿಗೆಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

प्रविष्टि तिथि: 01 JAN 2026 11:32AM by PIB Bengaluru

 

ಪ್ರಶ್ನೆ 1: ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಕೇಂದ್ರ ಅಬಕಾರಿ ಸುಂಕದ ಜಾರಿಯಲ್ಲಿರುವ ದರಗಳು ಯಾವುವು?

ಉತ್ತರ: ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಜಾರಿಯಲ್ಲಿರುವ ಸುಂಕದ ದರಗಳನ್ನು ದಿನಾಂಕ 31 ಡಿಸೆಂಬರ್, 2025ರ ಅಧಿಸೂಚನೆ ಸಂಖ್ಯೆ: 03/2025-ಕೇಂದ್ರ ಅಬಕಾರಿ ಮೂಲಕ ಅಧಿಸೂಚಿಸಲಾಗಿದೆ. ಈ ಸುಂಕದ ದರಗಳು 1 ಫೆಬ್ರವರಿ, 2026 ರಿಂದ ಜಾರಿಗೆ ಬರಲಿವೆ.

ಪ್ರಶ್ನೆ 2: ಜಗಿಯುವ ತಂಬಾಕು, ಜರ್ದಾ ಸುವಾಸಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಧಾರ ಮತ್ತು ಸುಂಕದ ಸಂಗ್ರಹಣೆ) ನಿಯಮಗಳು 2025 ಅನ್ನು ಎಲ್ಲಿ ಒದಗಿಸಲಾಗಿದೆ?

ಉತ್ತರ: ಈ ನಿಯಮಗಳನ್ನು ದಿನಾಂಕ 31 ಡಿಸೆಂಬರ್, 2025ರ ಅಧಿಸೂಚನೆ ಸಂಖ್ಯೆ: 05/2025-ಕೇಂದ್ರ ಅಬಕಾರಿ (N.T.) ಮೂಲಕ ಅಧಿಸೂಚಿಸಲಾಗಿದೆ. ಈ ನಿಯಮಗಳು 1 ಫೆಬ್ರವರಿ, 2026 ರಿಂದ ಜಾರಿಗೆ ಬರಲಿವೆ.

ಪ್ರಶ್ನೆ 3: ಈ ನಿಯಮಗಳ ಅಡಿಯಲ್ಲಿ ಬರುವ ಸರಕುಗಳು ಯಾವುವು?

ಉತ್ತರ: ಈ ನಿಯಮಗಳು ದಿನಾಂಕ 31.12.2025ರ ಅಧಿಸೂಚನೆ ಸಂಖ್ಯೆ: 04/2025-ಕೇಂದ್ರ ಅಬಕಾರಿ (N.T.)ರ ಮೂಲಕ ಕೇಂದ್ರ ಅಬಕಾರಿ ಕಾಯ್ದೆ, 1944ರ ಸೆಕ್ಷನ್ 3A ಅಡಿಯಲ್ಲಿ ಅಧಿಸೂಚಿಸಲಾದ ಸರಕುಗಳನ್ನು ಒಳಗೊಂಡಿವೆ. ಅವುಗಳೆಂದರೆ, ಜಗಿಯುವ ತಂಬಾಕು (ಫಿಲ್ಟರ್ ಖೈನಿ ಸೇರಿದಂತೆ), ಜರ್ದಾ ಸುವಾಸಿತ ತಂಬಾಕು ಮತ್ತು ಗುಟ್ಕಾ.

ಪ್ರಶ್ನೆ 4: ಜಗಿಯುವ ತಂಬಾಕು, ಜರ್ದಾ ಸುವಾಸಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಧಾರ ಮತ್ತು ಸುಂಕದ ಸಂಗ್ರಹಣೆ) ನಿಯಮಗಳು 2025 ಯಾವುದರ ಬಗ್ಗೆ ತಿಳಿಸುತ್ತವೆ?

ಉತ್ತರ: ಈ ನಿಯಮಗಳು ಅಧಿಸೂಚಿಸಲಾದ ಸರಕುಗಳಾದ ಜಗಿಯುವ ತಂಬಾಕು (ಫಿಲ್ಟರ್ ಖೈನಿ ಸೇರಿದಂತೆ), ಜರ್ದಾ ಸುವಾಸಿತ ತಂಬಾಕು ಮತ್ತು ಗುಟ್ಕಾಗಳ ಮೇಲೆ ಸಾಮರ್ಥ್ಯ ನಿರ್ಧಾರ ಮಾಡುವ ವಿಧಾನ ಮತ್ತು ಕೇಂದ್ರ ಅಬಕಾರಿ ಸುಂಕದ ಸಂಗ್ರಹಣೆಯ ಬಗ್ಗೆ ಕ್ರಮಗಳನ್ನು ಒದಗಿಸುತ್ತವೆ.

ಪ್ರಶ್ನೆ 5: ಈಗಾಗಲೇ ಕೇಂದ್ರ ಅಬಕಾರಿ ನೋಂದಣಿ ಹೊಂದಿರುವ ತೆರಿಗೆದಾರರು ಈ ನಿಯಮಗಳ ಅಡಿಯಲ್ಲಿ ಪ್ರತ್ಯೇಕ ನೋಂದಣಿ ಪಡೆಯುವ ಅಗತ್ಯವಿದೆಯೇ?

ಉತ್ತರ: ಈಗಾಗಲೇ ಕೇಂದ್ರ ಅಬಕಾರಿ ನೋಂದಣಿ ಹೊಂದಿರುವ ತೆರಿಗೆದಾರರಿಗೆ ಯಾವುದೇ ಪ್ರತ್ಯೇಕ ನೋಂದಣಿಯ ಅಗತ್ಯವಿರುವುದಿಲ್ಲ.

ಪ್ರಶ್ನೆ 6: ಅಧಿಸೂಚಿಸಲಾದ ಸರಕುಗಳ ಎಲ್ಲಾ ತಯಾರಕರು ಈ ನಿಯಮಗಳಲ್ಲಿ ಸೂಚಿಸಿದಂತೆ 'ಪರಿಗಣಿತ ಸುಂಕವನ್ನು' (Deemed Duty) ಪಾವತಿಸಬೇಕೇ?

ಉತ್ತರ: ಇಲ್ಲ, ಈ ನಿಯಮಗಳು ಅಧಿಸೂಚಿಸಲಾದ ಸರಕುಗಳ 'ಪೌಚ್‌' (Pouches) ತಯಾರಕರಿಗೆ ಮಾತ್ರ ಅನ್ವಯಿಸುತ್ತವೆ. ಇತರ ರೂಪಗಳಲ್ಲಿ (ಉದಾಹರಣೆಗೆ ಟಿನ್‌ ಗಳು) ತಯಾರಿಸುವವರು ಮೌಲ್ಯಮಾಪನ ಮೌಲ್ಯದ ಮೇಲೆ ಅನ್ವಯವಾಗುವ ಸುಂಕವನ್ನು ಪಾವತಿಸಬೇಕಾಗುತ್ತದೆ.

ಪ್ರಶ್ನೆ 7: ಸುಂಕದ ಲೆಕ್ಕಾಚಾರಕ್ಕಾಗಿ ಅಧಿಸೂಚಿಸಲಾದ ಸರಕುಗಳ ಚಿಲ್ಲರೆ ಮಾರಾಟದ ಬೆಲೆಯ ಮೇಲೆ ಯಾವುದೇ 'ಅಬೇಟ್‌ಮೆಂಟ್' (ರಿಯಾಯಿತಿ) ಇದೆಯೇ?

ಉತ್ತರ: ಹೌದು, ಅಬೇಟ್‌ಮೆಂಟ್ ಲಭ್ಯವಿದೆ ಮತ್ತು ಇದನ್ನು 31.12.2025ರ ಅಧಿಸೂಚನೆ ಸಂಖ್ಯೆ: 01/2022-ಕೇಂದ್ರ ಅಬಕಾರಿ (N.T.)ರ ರಲ್ಲಿ ಉತ್ಪನ್ನಗಳಿಗೆ ಅನ್ವಯವಾಗುವ ಸುಂಕದ ದರಗಳನ್ನು ಅಧಿಸೂಚಿಸುವಾಗಲೇ ಪರಿಗಣಿಸಲಾಗಿದೆ.

ಪ್ರಶ್ನೆ 8: ಅಧಿಸೂಚಿಸಲಾದ ಸರಕುಗಳ ಅಸ್ತಿತ್ವದಲ್ಲಿರುವ ತಯಾರಕರು ಯಾವ ದಿನಾಂಕದೊಳಗೆ ಘೋಷಣೆಯನ್ನು ಸಲ್ಲಿಸಬೇಕು?

ಉತ್ತರ: Form CE DEC-01 ರಲ್ಲಿನ ಘೋಷಣೆಯನ್ನು ನಿಯಮಗಳು ಜಾರಿಗೆ ಬಂದ ಏಳು ದಿನಗಳೊಳಗೆ, ಅಂದರೆ 7 ಫೆಬ್ರವರಿ, 2026 ರೊಳಗೆ ಪೋರ್ಟಲ್‌ ನಲ್ಲಿ ಸಲ್ಲಿಸಬೇಕು.

ಪ್ರಶ್ನೆ 9: FORM CE DEC-01 ಅನ್ನು ಸಲ್ಲಿಸುವುದು ಕಡ್ಡಾಯವೇ?

ಉತ್ತರ: ಹೌದು, ಇದನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಪ್ರಶ್ನೆ 10: ಘೋಷಣೆಯಲ್ಲಿ ತಿಳಿಸಬೇಕಾದ ನಿಯತಾಂಕಗಳು (Parameters) ಯಾವುವು?

ಉತ್ತರ: ನಿಯತಾಂಕಗಳಲ್ಲಿ ಯಂತ್ರಗಳ ಸಂಖ್ಯೆ, ಯಂತ್ರಗಳ ತಾಂತ್ರಿಕ ವಿವರಗಳಾದ ಗರಿಷ್ಠ ಸಾಮರ್ಥ್ಯ ಮತ್ತು ಗೇರ್ ಬಾಕ್ಸ್ ಅನುಪಾತಗಳು ಹಾಗೂ ಉಲ್ಲೇಖಿಸಲಾದ ಚಿಲ್ಲರೆ ಮಾರಾಟದ ಬೆಲೆಗಳ ವಿವರಗಳು ಸೇರಿವೆ.

ಪ್ರಶ್ನೆ 11: ಚಾರ್ಟರ್ಡ್ ಇಂಜಿನಿಯರ್ ಪ್ರಮಾಣಪತ್ರದ ಅಗತ್ಯವಿರುವುದು ಏಕೆ?

ಉತ್ತರ: ಯಂತ್ರದ ಟ್ರ್ಯಾಕ್‌ ಗಳು/ಫನಲ್‌ ಗಳ ಸಂಖ್ಯೆ, ಗೇರ್ ಬಾಕ್ಸ್ ಅನುಪಾತಗಳು ಮತ್ತು ಮುಖ್ಯ ಮೋಟಾರಿನ ಪ್ರತಿ ನಿಮಿಷದ ಪರಿಭ್ರಮಣದ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಒದಗಿಸಲು ಈ ಪ್ರಮಾಣಪತ್ರದ ಅಗತ್ಯವಿದೆ.

ಪ್ರಶ್ನೆ 12: ವಾಸ್ತವಿಕ ಉತ್ಪಾದನೆಯು ಪ್ರಸ್ತುತವೇ?

ಉತ್ತರ: ಇಲ್ಲ, ಸುಂಕವು ಯಂತ್ರದ ಗರಿಷ್ಠ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ಪಾದಿಸಲಾದ 'ಪರಿಗಣಿತ ಪ್ರಮಾಣದ' ಮೇಲೆ ಆಧಾರಿತವಾಗಿರುತ್ತದೆ.

ಪ್ರಶ್ನೆ 13: ಪಾವತಿಸಬೇಕಾದ ಸುಂಕವನ್ನು ಹೇಗೆ ಲೆಕ್ಕಹಾಕಲಾಗುತ್ತದೆ?

ಉತ್ತರ: ಕೇಂದ್ರ ಅಬಕಾರಿ ಕಾಯ್ದೆಯ ಸೆಕ್ಷನ್ 3A ರ ಪ್ರಕಾರ, ತಯಾರಕರು ನಿರ್ಧರಿಸಲಾದ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಸುಂಕವನ್ನು ಪಾವತಿಸಬೇಕಾಗುತ್ತದೆ.

ಆದಾಗ್ಯೂ, ಸಲ್ಲಿಸಿದ ಘೋಷಣೆಯ ಪರಿಶೀಲನೆಯು ಬಾಕಿ ಇರುವವರೆಗೆ, ತಯಾರಕರು ಆ ತಿಂಗಳ ಅವಧಿಯಲ್ಲಿ ತಯಾರಾದ ಪೌಚ್‌ ಗಳ ಚಿಲ್ಲರೆ ಮಾರಾಟ ಬೆಲೆ ಮತ್ತು ಪ್ಯಾಕಿಂಗ್ ಯಂತ್ರದ ಗರಿಷ್ಠ ವೇಗದ - ಪ್ರತಿ ನಿಮಿಷಕ್ಕೆ ತಯಾರಾಗುವ ಪೌಚ್‌ ಗಳ ಸಂಖ್ಯೆಯ ಆಧಾರದ ಮೇಲೆ ಸುಂಕವನ್ನು ಪಾವತಿಸಬೇಕು.

ಉದಾಹರಣೆ: ಜಗಿಯುವ ತಂಬಾಕು ತಯಾರಿಸುವ ಯಂತ್ರದ ಗರಿಷ್ಠ ಸಾಮರ್ಥ್ಯವು ಪ್ರತಿ ನಿಮಿಷಕ್ಕೆ 500 ಪೌಚ್‌ ಗಳಾಗಿದ್ದು, ಅದರ ಚಿಲ್ಲರೆ ಮಾರಾಟ ಬೆಲೆ ₹2 ಆಗಿದ್ದರೆ, ಪ್ರತಿ ಯಂತ್ರಕ್ಕೆ ತಿಂಗಳಿಗೆ ಸುಂಕದ ದರವು ₹0.83 ಕೋಟಿ ಆಗಿರುತ್ತದೆ.

ಜಗಿಯುವ ತಂಬಾಕು ತಯಾರಿಸುವ ಯಂತ್ರದ ಗರಿಷ್ಠ ಸಾಮರ್ಥ್ಯವು 500 ಪೌಚ್‌ ಗಳಾಗಿದ್ದು, ಅದರ ಚಿಲ್ಲರೆ ಮಾರಾಟ ಬೆಲೆ ₹4 ಆಗಿದ್ದರೆ, ಪ್ರತಿ ಯಂತ್ರಕ್ಕೆ ತಿಂಗಳಿಗೆ ಸುಂಕದ ದರವು ₹1.52 ಕೋಟಿ ಆಗಿರುತ್ತದೆ (ಅಂದರೆ, ₹0.83 ಕೋಟಿ ಅಥವಾ 0.38 *ಚಿಲ್ಲರೆ ಮಾರಾಟ ಬೆಲೆ – ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ತೆಗೆದುಕೊಳ್ಳಬೇಕು).

ಪ್ರಶ್ನೆ 14: ಮೊದಲ ಘೋಷಣೆಯನ್ನು ಸಲ್ಲಿಸಿದ ನಂತರ ಮತ್ತು ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು ಅಥವಾ ಕೇಂದ್ರ ಅಬಕಾರಿ ಸಹಾಯಕ ಆಯುಕ್ತರು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ನಿರ್ಧರಿಸುವ ಆದೇಶವನ್ನು ಹೊರಡಿಸುವ ಮೊದಲು, ತೆರಿಗೆದಾರರು ಹೊಸ ಘೋಷಣೆಯನ್ನು ಸಲ್ಲಿಸಬಹುದೇ?

ಉತ್ತರ: ಸದರಿ ನಿಯಮಗಳ ನಿಯಮ 6ರ ಪ್ರಕಾರ, ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು ಅಥವಾ ಕೇಂದ್ರ ಅಬಕಾರಿ ಸಹಾಯಕ ಆಯುಕ್ತರು ಅವರು ಹಿಂದಿನ ಘೋಷಣೆಗೆ ಸಂಬಂಧಿಸಿದಂತೆ ನಿಯಮ 8ರ ಅಡಿಯಲ್ಲಿ ಆದೇಶವನ್ನು ಹೊರಡಿಸುವವರೆಗೆ ಹೊಸ ಘೋಷಣೆಯನ್ನು ಸಲ್ಲಿಸಲು ಸಾಧ್ಯವಿಲ್ಲ.

ಪ್ರಶ್ನೆ 15: ಇಲಾಖೆಯು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೇಗೆ ನಿರ್ಧರಿಸುತ್ತದೆ?

ಉತ್ತರ: ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು ಅಥವಾ ಕೇಂದ್ರ ಅಬಕಾರಿ ಸಹಾಯಕ ಆಯುಕ್ತರು ಕಾರ್ಖಾನೆಯ ಭೌತಿಕ ತಪಾಸಣೆ ಮತ್ತು ಯಂತ್ರಗಳ ತಾಂತ್ರಿಕ ವಿವರಗಳ ಪರಿಶೀಲನೆಯನ್ನು ನಡೆಸಿದ ನಂತರ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ನಿರ್ಧರಿಸುತ್ತಾರೆ. ಸದರಿ ನಿಯಮಗಳ ನಿಯಮ 5ರ ಅನುಸಾರ, ಒಂದು ತಿಂಗಳಲ್ಲಿ ಉತ್ಪಾದಿಸಲಾಗಿದೆ ಎಂದು ಪರಿಗಣಿಸಲಾದ ಅಧಿಸೂಚಿತ ಸರಕುಗಳ ಪ್ರಮಾಣವನ್ನು 12 (ತಿಂಗಳುಗಳು) ರಿಂದ ಗುಣಿಸುವ ಮೂಲಕ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ.

ಪ್ರಶ್ನೆ 16: ಇಲಾಖೆಯು ನಿರ್ಧರಿಸಿದ ವಾರ್ಷಿಕ ಸಾಮರ್ಥ್ಯವು, ತಯಾರಕರು ಸ್ವಯಂ-ಘೋಷಿಸಿದ ಸಾಮರ್ಥ್ಯಕ್ಕಿಂತ ಹೆಚ್ಚಾಗಿದ್ದರೆ ಏನಾಗುತ್ತದೆ?

ಉತ್ತರ: ಅಂತಹ ಸಂದರ್ಭದಲ್ಲಿ, ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು  ಅಥವಾ ಸಹಾಯಕ ಆಯುಕ್ತರು, ತಯಾರಕರಿಗೆ ವಿಚಾರಣೆಯ ಸಮಂಜಸವಾದ ಅವಕಾಶವನ್ನು ನೀಡಿದ ನಂತರ, ಪರಿಶೀಲನೆಯಾದ ಮೂವತ್ತು ದಿನಗಳೊಳಗೆ ಆದೇಶವನ್ನು ಹೊರಡಿಸುತ್ತಾರೆ. ಯಂತ್ರವನ್ನು ಅಳವಡಿಸಿದ ದಿನಾಂಕದಿಂದ ಅಥವಾ ಉತ್ಪಾದನೆಗೆ ಸಂಬಂಧಿಸಿದ ಅಂಶಗಳಲ್ಲಿ ಬದಲಾವಣೆಯಾದ ದಿನಾಂಕದಿಂದ, ವಾಸ್ತವಿಕವಾಗಿ ಪಾವತಿ ಮಾಡುವ ದಿನಾಂಕದವರೆಗೆ ಅನ್ವಯವಾಗುವ ಬಡ್ಡಿಯೊಂದಿಗೆ ವ್ಯತ್ಯಾಸದ ಸುಂಕವನ್ನು ಪಾವತಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ತಯಾರಕರಿಗೆ ಸಂಬಂಧಿಸಿದಂತೆ, ಮೊದಲ ಬಾರಿ ಸಾಮರ್ಥ್ಯ ನಿರ್ಧಾರವಾದ ಸಂದರ್ಭದಲ್ಲಿ, ವ್ಯತ್ಯಾಸದ ಸುಂಕ ಮತ್ತು ಬಡ್ಡಿಯನ್ನು 1 ಫೆಬ್ರವರಿ 2026 ರಿಂದ ಪಾವತಿಸಬೇಕಾಗುತ್ತದೆ.

ಪ್ರಶ್ನೆ 17: ಉಪ ಆಯುಕ್ತರು  ಅಥವಾ ಸಹಾಯಕ ಆಯುಕ್ತರು  ಮಾಡಿದ ಸಾಮರ್ಥ್ಯ ನಿರ್ಧಾರದ ವಿರುದ್ಧ ತಯಾರಕರು ಮೇಲ್ಮನವಿ ಸಲ್ಲಿಸಲು ಇಚ್ಛಿಸಿದರೆ ಏನಾಗುತ್ತದೆ?

ಉತ್ತರ: ತೆರಿಗೆದಾರರು ಮೇಲ್ಮನವಿ ಸಲ್ಲಿಸಲು ಇಚ್ಛಿಸಿದರೂ ಸಹ, ಆದೇಶದ ನಂತರದ ಅವಧಿಗೆ ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು  ಅಥವಾ ಸಹಾಯಕ ಆಯುಕ್ತರು  ನಿರ್ಧರಿಸಿದಂತೆಯೇ ಸುಂಕವನ್ನು ಪಾವತಿಸಬೇಕಾಗುತ್ತದೆ.

ಪ್ರಶ್ನೆ 18: ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ತಿಂಗಳು ಉತ್ಪಾದನಾ ಸಾಮರ್ಥ್ಯದ ನಿರ್ಧಾರವನ್ನು ಮಾಡುತ್ತಾರೆಯೇ?

ಉತ್ತರ: ಇಲ್ಲ. ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಉತ್ಪಾದನಾ ಅಂಶಗಳಲ್ಲಿ ಬದಲಾವಣೆಯಾದಾಗ ಮಾತ್ರ (ಅಂದರೆ, ಪ್ಯಾಕಿಂಗ್ ಯಂತ್ರಗಳ ಸಂಖ್ಯೆ ಮತ್ತು ಯಂತ್ರಗಳ ಗರಿಷ್ಠ ಉತ್ಪಾದನಾ ಸಾಮರ್ಥ್ಯದಲ್ಲಿ ಬದಲಾವಣೆಯಾದಾಗ) ಹೊಸದಾಗಿ ಸಾಮರ್ಥ್ಯ ನಿರ್ಧಾರವನ್ನು ಮಾಡಲಾಗುತ್ತದೆ.

ಪ್ರಶ್ನೆ 19: 1 ಫೆಬ್ರವರಿ 2026ರ ನಂತರ ನೋಂದಾಯಿಸಿಕೊಂಡ ತಯಾರಕರು, ತಿಂಗಳ 10ನೇ ದಿನಾಂಕದಂದು ಯಂತ್ರಗಳನ್ನು ಅಳವಡಿಸಿ ಉತ್ಪಾದನೆಯನ್ನು ಪ್ರಾರಂಭಿಸಿದರೆ, ಅವರು ಇಡೀ ತಿಂಗಳ ಸುಂಕವನ್ನು ಪಾವತಿಸಬೇಕೇ?

ಉತ್ತರ: ಹೌದು. ಸದರಿ ನಿಯಮ 13(3)ರ ಪ್ರಕಾರ, ಯಾವ ತಿಂಗಳಿನಲ್ಲಿ ಯಂತ್ರಗಳನ್ನು ಅಳವಡಿಸಲಾಗಿದೆಯೋ, ಆ ಸಂಪೂರ್ಣ ತಿಂಗಳ ಸುಂಕವನ್ನು ತಯಾರಕರು ಪೂರ್ಣವಾಗಿ ಪಾವತಿಸಬೇಕು.

ಪ್ರಶ್ನೆ 20: ಸುಂಕದ ಲೆಕ್ಕಾಚಾರದ ಉದ್ದೇಶಕ್ಕಾಗಿ ಯಂತ್ರಗಳ ಸಂಖ್ಯೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಉತ್ತರ: ಒಂದು ತಿಂಗಳ ಅವಧಿಯಲ್ಲಿ ಅಳವಡಿಸಲಾದ ಯಂತ್ರಗಳ ಸಂಖ್ಯೆಯನ್ನು, ಆ ತಿಂಗಳ ಯಾವುದೇ ಒಂದು ದಿನದಂದು ಇದ್ದ ಗರಿಷ್ಠ ಸಂಖ್ಯೆಯ ಯಂತ್ರಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

ಪ್ರಶ್ನೆ 21: ಪ್ರತಿ ತಿಂಗಳು ಸಲ್ಲಿಸಬೇಕಾದ ಫಾರ್ಮ್‌ ಗಳು ಮತ್ತು ರಿಟರ್ನ್‌ ಗಳು ಯಾವುವು?

ಉತ್ತರ: ತಯಾರಕರು ಪ್ರತಿ ತಿಂಗಳ 10 ನೇ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು FORM CE STR-1 ರಲ್ಲಿ ಮಾಸಿಕ ಫಾರ್ಮ್ ಅನ್ನು ಸಲ್ಲಿಸಬೇಕು. ಇದು ಕೇಂದ್ರ ಅಬಕಾರಿ ನಿಯಮಗಳ ನಿಯಮ 12 ರ ಪ್ರಕಾರ ಅವರು ಸಲ್ಲಿಸಬೇಕಾದ ಮಾಸಿಕ ರಿಟರ್ನ್ ಜೊತೆಗೆ ಹೆಚ್ಚುವರಿಯಾಗಿ ಸಲ್ಲಿಸಬೇಕಾದ ಫಾರ್ಮ್ ಆಗಿದೆ.

ಪ್ರಶ್ನೆ 22: ಅಬೇಟ್‌ಮೆಂಟ್ (ಸುಂಕದ ರಿಯಾಯಿತಿ) ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಉತ್ತರ: ಅಬೇಟ್‌ಮೆಂಟ್ ಅನ್ನು ಪ್ರಮಾಣಾನುಗುಣವಾಗಿ ಈ ಕೆಳಗಿನ ಸೂತ್ರವನ್ನು ಬಳಸಿ ಲೆಕ್ಕ ಹಾಕಲಾಗುತ್ತದೆ:

ಅಬೇಟ್‌ಮೆಂಟ್ = (ಮಾಸಿಕ ಸುಂಕದ ಹೊಣೆಗಾರಿಕೆ × ಯಂತ್ರ ಕಾರ್ಯನಿರ್ವಹಿಸದ ದಿನಗಳ ಸಂಖ್ಯೆ) ÷ ತಿಂಗಳ ಒಟ್ಟು ದಿನಗಳ ಸಂಖ್ಯೆ.

ಪ್ರಶ್ನೆ 23: ಒಂದು ವೇಳೆ ಯಂತ್ರವು ಫೆಬ್ರವರಿ 15 ರಿಂದ ಮಾರ್ಚ್ 5 ರವರೆಗೆ ಕಾರ್ಯನಿರ್ವಹಿಸದಿದ್ದರೆ, ಎಷ್ಟು ಅಬೇಟ್‌ಮೆಂಟ್ ಅನ್ನು ಪಡೆಯಬಹುದು?

ಉತ್ತರ: ಸತತ ಹದಿನೈದು ದಿನಗಳ ಕಾಲ ಯಂತ್ರ ಕಾರ್ಯನಿರ್ವಹಿಸದಿದ್ದಲ್ಲಿ ಅಬೇಟ್‌ಮೆಂಟ್ ಅನ್ನು ಪಡೆಯಬಹುದು. ಈ ಅವಧಿಯು ಒಂದೇ ಕ್ಯಾಲೆಂಡರ್ ತಿಂಗಳೊಳಗೆ ಇರಬೇಕೆಂದೇನೂ ಇಲ್ಲ (ಅಂದರೆ ಎರಡು ತಿಂಗಳುಗಳ ನಡುವೆ ಈ ಅವಧಿ ಹಂಚಿಹೋಗಿದ್ದರೂ ರಿಯಾಯಿತಿ ಸಿಗುತ್ತದೆ).

ಪ್ರಶ್ನೆ 24: ಅಬೇಟ್‌ಮೆಂಟ್ (ಸುಂಕದ ರಿಯಾಯಿತಿ) ಪಡೆಯಲು ಇರುವ ಷರತ್ತುಗಳು ಯಾವುವು?

ಉತ್ತರ: ಅಬೇಟ್‌ಮೆಂಟ್ ಪಡೆಯಲು, ತಯಾರಕರು ಕನಿಷ್ಠ ಮೂರು ಕೆಲಸದ ದಿನಗಳ ಮುಂಚಿತವಾಗಿ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಆ ಯಂತ್ರವನ್ನು ಇಲಾಖೆಯು ಸೀಲ್ ಮಾಡಬೇಕು.

ಪ್ರಶ್ನೆ 25: ಯಂತ್ರಗಳು ಬಳಕೆಯಲ್ಲಿಲ್ಲದಿದ್ದರೂ ಅವುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪರಿಗಣಿಸಲಾಗುತ್ತದೆಯೇ?

ಉತ್ತರ: ಹೌದು. ಕಾರ್ಖಾನೆಯಲ್ಲಿ ಅಳವಡಿಸಲಾದ ಯಾವುದೇ ಪ್ಯಾಕಿಂಗ್ ಯಂತ್ರವನ್ನು, ನಿಯಮಗಳ ನಿಬಂಧನೆಗಳ ಪ್ರಕಾರ ಸೀಲ್ ಮಾಡದ ಹೊರತು, ಅದು ಕಾರ್ಯನಿರ್ವಹಿಸುತ್ತಿದೆ ಎಂದೇ ಪರಿಗಣಿಸಲಾಗುತ್ತದೆ.

ಪ್ರಶ್ನೆ 26: ಯಂತ್ರಗಳನ್ನು ಸೀಲ್ ಮಾಡುವ ವಿಧಾನವೇನು?

ಉತ್ತರ: ಅಳವಡಿಸಲಾದ ಯಂತ್ರವು ಸತತ ಹದಿನೈದು ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಕಾರ್ಯನಿರ್ವಹಿಸದಿದ್ದರೆ, ಅಂತಹ ಸ್ಥಗಿತಕ್ಕೆ ಕನಿಷ್ಠ 3 ಕೆಲಸದ ದಿನಗಳ ಮೊದಲು ತಯಾರಕರು ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು  ಅಥವಾ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಬೇಕು.

ಪ್ರಶ್ನೆ 27: ಸೀಲ್ ಮಾಡಲಾದ ಯಂತ್ರದ ಸೀಲ್ ಅನ್ನು ಹೇಗೆ ತೆರೆಯಬಹುದು?

ಉತ್ತರ: ಯಂತ್ರದ ಕಾರ್ಯಾಚರಣೆಯನ್ನು ಪುನರಾರಂಭಿಸಲು ಉದ್ದೇಶಿಸಿರುವ ದಿನಾಂಕಕ್ಕಿಂತ ಕನಿಷ್ಠ 3 ಕೆಲಸದ ದಿನಗಳ ಮೊದಲು ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು  ಅಥವಾ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಬೇಕು. ಸಂಬಂಧಪಟ್ಟ ಕೇಂದ್ರ ಅಬಕಾರಿ ಅಧೀಕ್ಷಕರ ಸಮ್ಮುಖದಲ್ಲಿ ಯಂತ್ರದ ಸೀಲ್ ಅನ್ನು ತೆರೆಯಲಾಗುವುದು.

ಪ್ರಶ್ನೆ 28: ಮಾರಾಟ ಅಥವಾ ವಿಲೇವಾರಿಗಾಗಿ ಕಾರ್ಖಾನೆಯಿಂದ ಯಂತ್ರಗಳನ್ನು ತೆಗೆದುಹಾಕುವ ವಿಧಾನವೇನು?

ಉತ್ತರ: ಯಂತ್ರವನ್ನು ಅನ್-ಇನ್ಸ್ಟಾಲ್ ಮಾಡಲು ಉದ್ದೇಶಿಸಿರುವ ದಿನಾಂಕಕ್ಕಿಂತ ಕನಿಷ್ಠ 3 ಕೆಲಸದ ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಕೇಂದ್ರ ಅಬಕಾರಿ ಉಪ ಆಯುಕ್ತರು  ಅಥವಾ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಬೇಕು.

ಪ್ರಶ್ನೆ 29: ಸಿಸಿಟಿವಿಗಳ ಅಳವಡಿಕೆ ಕಡ್ಡಾಯವೇ?

ಉತ್ತರ: ಹೌದು. ಪ್ಯಾಕಿಂಗ್ ಯಂತ್ರವನ್ನು ನಿರ್ವಹಿಸುವ ಪ್ರತಿಯೊಬ್ಬ ತಯಾರಕರು ಎಲ್ಲಾ ಪ್ಯಾಕಿಂಗ್ ಯಂತ್ರದ ಪ್ರದೇಶಗಳನ್ನು ಒಳಗೊಳ್ಳುವಂತೆ ಕಾರ್ಯಕ್ಷಮತೆಯುಳ್ಳ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ ಮತ್ತು ಈ ದೃಶ್ಯಾವಳಿಯನ್ನು ಕನಿಷ್ಠ ಇಪ್ಪತ್ತನಾಲ್ಕು ತಿಂಗಳುಗಳ ಕಾಲ ಸಂರಕ್ಷಿಸಿಡಬೇಕು.

ಪ್ರಶ್ನೆ 30: ರಿಯಾಯಿತಿ ಲಭ್ಯವಿದೆಯೇ?

ಉತ್ತರ: ಕೇಂದ್ರ ಅಬಕಾರಿ ನಿಯಮಗಳ ನಿಯಮ 18 ರ ಅಡಿಯಲ್ಲಿ ಕೇಂದ್ರ ಅಬಕಾರಿ ಸುಂಕದ ಯಾವುದೇ 'ರಿಯಾಯಿತಿ' ಲಭ್ಯವಿರುವುದಿಲ್ಲ.

ಪ್ರಶ್ನೆ 31: ಒಂದು ವೇಳೆ ಕಾರ್ಖಾನೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ಮುಂಗಡವಾಗಿ ಪಾವತಿಸಿದ ಸುಂಕ ಏನಾಗುತ್ತದೆ?

ಉತ್ತರ: ತಯಾರಕರು ನೋಂದಣಿಯನ್ನು ಹಿಂತಿರುಗಿಸಲು (Surrender of registration) ಮಾಹಿತಿಯನ್ನು ಸಲ್ಲಿಸಬೇಕು. ಮುಂಗಡವಾಗಿ ಪಾವತಿಸಿದ ಸುಂಕವನ್ನು ಸದರಿ ನಿಯಮಗಳ ನಿಯಮ 21 ರಲ್ಲಿ ಸೂಚಿಸಲಾದ ವಿಧಾನದಂತೆ ಹೊಂದಾಣಿಕೆ ಮಾಡಲಾಗುತ್ತದೆ ಅಥವಾ ಮರುಪಾವತಿ ಮಾಡಲಾಗುತ್ತದೆ.

ಪ್ರಶ್ನೆ 32: ಸುಂಕ ಪಾವತಿಸದೆ ರಫ್ತು ಮಾಡಲು ಅನುಮತಿ ಇದೆಯೇ?

ಉತ್ತರ: ಇಲ್ಲ. ಸಾಮರ್ಥ್ಯ ಆಧಾರಿತ ತೆರಿಗೆ ಯೋಜನೆಯಡಿ (Capacity-based levy scheme), ಅಧಿಸೂಚಿತ ಸರಕುಗಳನ್ನು ಸುಂಕ ಪಾವತಿಸದೆ ರಫ್ತು ಮಾಡಲು ಅನುಮತಿ ಇರುವುದಿಲ್ಲ.

ಕೇಂದ್ರ ಅಬಕಾರಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

****


(रिलीज़ आईडी: 2210423) आगंतुक पटल : 22
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Manipuri , Punjabi , Gujarati , Odia , Tamil , Malayalam