ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ  ನೀತಿ ಆಯೋಗದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞರ ಭೇಟಿ


ಸಂವಾದದ ವಿಷಯ : ಆತ್ಮನಿರ್ಭರತೆ ಮತ್ತು ರಚನಾತ್ಮಕ ರೂಪಾಂತರ- ವಿಕಸಿತ ಭಾರತಕ್ಕಾಗಿ ಕಾರ್ಯಸೂಚಿ

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಮುನ್ನೋಟವು ಸಾಮೂಹಿಕ ಆಕಾಂಕ್ಷೆಯಾಗಿದೆ: ಪ್ರಧಾನಮಂತ್ರಿ

ಸುಸ್ಥಿರ ದೀರ್ಘಕಾಲೀನ ಬೆಳವಣಿಗೆಗೆ ವಿವಿಧ ವಲಯಗಳಾದ್ಯಂತ ಮಿಷನ್-ಮೋಡ್ ಸುಧಾರಣೆಗಳಿಗೆ ಪ್ರಧಾನಮಂತ್ರಿ ಕರೆ 

ವಿವಿಧ ವಲಯಗಳಲ್ಲಿ 2025ರಲ್ಲಿನ ಅಭೂತಪೂರ್ವ ಸುಧಾರಣೆಗಳ ಬಗ್ಗೆ ಅರ್ಥಶಾಸ್ತ್ರಜ್ಞರ ಚರ್ಚೆ ಹಾಗೂ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ಬಗ್ಗೆ ಒಳನೋಟಗಳ ಹಂಚಿಕೆ

ಪ್ರಕಟಣಾ ದಿನಾಂಕ: 30 DEC 2025 6:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀತಿ ಆಯೋಗದ ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರ ಸಮೂಹದೊಂದಿಗೆ ಸಂವಾದ ನಡೆಸಿದರು. 'ಆತ್ಮನಿರ್ಭರತೆ ಮತ್ತು ರಚನಾತ್ಮಕ ಪರಿವರ್ತನೆ: ವಿಕಸಿತ ಭಾರತಕ್ಕಾಗಿ ಕಾರ್ಯಸೂಚಿ' ಎಂಬುದು ಚರ್ಚೆಯ ವಿಷಯವಾಗಿತ್ತು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 2047ರ ವಿಕಸಿತ ಭಾರತದ ಗುರಿಯತ್ತ ದೇಶದ ಪಯಣದ ಪ್ರಮುಖ ಸ್ತಂಭಗಳ ಬಗ್ಗೆ ವಿವರಿಸಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಮುನ್ನೋಟವು ಸರ್ಕಾರಿ ನೀತಿ ನಿರೂಪಣೆಗಳನ್ನು ಮೀರಿ ನಿಜವಾದ ಸಾಮೂಹಿಕ ಬಯಕೆಯಾಗಿದೆ ಎಂದು ಈ ಗುರಿಯು ರಾಷ್ಟ್ರೀಯ ಆಕಾಂಕ್ಷೆಯಾಗಿ ಹೊರಹೊಮ್ಮುತ್ತಿರುವ ಬಗ್ಗೆ ಪ್ರಧಾನಮಂತ್ರಿಗಳು ಪ್ರಸ್ತಾಪಿಸಿದರು. ಶಿಕ್ಷಣ, ಬಳಕೆ ಮತ್ತು ಜಾಗತಿಕ ಚಲನಶೀಲತೆಯ ವಿಕಸನಗೊಳ್ಳುತ್ತಿರುವ ಮಾದರಿಗಳಲ್ಲಿ ಈ ಬದಲಾವಣೆಯು ಸ್ಪಷ್ಟವಾಗಿ ಕಂಡುಬರುತ್ತಿದ್ದು, ಇದು ಹೆಚ್ಚುತ್ತಿರುವ ಆಕಾಂಕ್ಷಿ ಸಮಾಜದ ಅಗತ್ಯಗಳನ್ನು ಪೂರೈಸಲು ವರ್ಧಿತ ಸಾಂಸ್ಥಿಕ ಸಾಮರ್ಥ್ಯ ಮತ್ತು ಪೂರ್ವಭಾವಿ ಮೂಲಸೌಕರ್ಯ ಯೋಜನೆಯ ಅಗತ್ಯವನ್ನು ಮುನ್ನೆಲೆಗೆ ತಂದಿದೆ ಎಂದು ಅವರು ವಿವರಿಸಿದರು.

ಜಾಗತಿಕ ಸಾಮರ್ಥ್ಯ ಮತ್ತು ಜಾಗತಿಕ ಏಕೀಕರಣ ಸಾಧಿಸಲು ಮಿಷನ್-ಮೋಡ್ (ಗುರಿ ಆಧಾರಿತ, ಕಾಲಮಿತಿಯೊಂದಿಗೆ ಸಂಪನ್ಮೂಲ ಸಹಿತವಾಗಿ ಉದ್ದೇಶ ಸಾಧಿಸುವ ವಿಧಾನ) ಸುಧಾರಣೆಗಳ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸುಸ್ಥಿರ ದೀರ್ಘಕಾಲೀನ ಬೆಳವಣಿಗೆಗಾಗಿ, ವೈವಿಧ್ಯಮಯ ವಲಯಗಳಲ್ಲಿ ಮಿಷನ್-ಮೋಡ್ ಸುಧಾರಣೆಗಳಿಗೆ ಅವರು ಕರೆ ನೀಡಿದರು. ಭಾರತದ ನೀತಿ ನಿರೂಪಣೆ ಮತ್ತು ಬಜೆಟ್ ಗಳು 2047ರ ಮುನ್ನೋಟಕ್ಕೆ ಅನುಗುಣವಾಗಿರಬೇಕು ಎಂದು ಒತ್ತಿ ಹೇಳಿದ ಅವರು, ಜಾಗತಿಕ ಕಾರ್ಯಪಡೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಾಷ್ಟ್ರವು ಪ್ರಮುಖ ಕೇಂದ್ರವಾಗಿ ಮುಂದುವರಿಯುವುದನ್ನು ಖಾತರಿಪಡಿಸುವ ಅಗತ್ಯತೆಯ ಬಗ್ಗೆಯೂ ಪ್ರಸ್ತಾಪಿಸಿದರು. 

ಸಂವಾದದ ಸಮಯದಲ್ಲಿ, ಅರ್ಥಶಾಸ್ತ್ರಜ್ಞರು ತಯಾರಿಕಾ ವಲಯ ಮತ್ತು ಸೇವಾ ವಲಯಗಳಲ್ಲಿ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಕುರಿತು ಕಾರ್ಯತಂತ್ರದ ಒಳನೋಟಗಳನ್ನು ಹಂಚಿಕೊಂಡರು. ಕೌಟುಂಬಿಕ ಉಳಿತಾಯದಲ್ಲಿ ಹೆಚ್ಚಳ, ಸದೃಢ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯ ಮೂಲಕ ರಚನಾತ್ಮಕ ರೂಪಾಂತರವನ್ನು ವೇಗಗೊಳಿಸುವ ಬಗ್ಗೆ ಚರ್ಚೆ ಕೇಂದ್ರೀಕೃತವಾಗಿತ್ತು. ವಿವಿಧ ವಲಯಗಳ ಉತ್ಪಾದಕತೆಗೆ ಚುರುಕು ನೀಡಲಿಲು ಕೃತಕ ಬುದ್ಧಿಮತ್ತೆ (AI) ಪಾತ್ರದ ಬಗ್ಗೆ ಈ ತಜ್ಞರ ಗುಂಪು ಅನ್ವೇಷಣೆ ನಡೆಸಿತು ಮತ್ತು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಅನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುವ  ಬಗ್ಗೆಯೂ ಚರ್ಚಿಸಲಾಯಿತು.

2025 ರ ವಿವಿಧ ವಲಯಗಳ ಅಭೂತಪೂರ್ವ ಸುಧಾರಣೆಗಳು ಮತ್ತು ಮುಂಬರುವ ವರ್ಷದಲ್ಲಿ ಇವುಗಳ ಇನ್ನಷ್ಟು ಬಲವರ್ಧನೆಯಿಂದಾಗಿ, ಭಾರತವು ತನ್ನ ಅಡಿಪಾಯ ಬಲಪಡಿಸಿಕೊಳ್ಳುತ್ತಾ ಹೊಸ ಅವಕಾಶಗಳಿಗೆ ತೆರೆದುಕೊಳ್ಳುತ್ತಾ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಆರ್ಥಿಕತೆಗಳ ಪೈಕಿ ಒಂದಾಗಿ ತನ್ನ ಪಥ ರೂಪಿಸುವುದು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಶಂಕರ್ ಆಚಾರ್ಯ, ಶ್ರೀ ಅಶೋಕ್ ಕೆ ಭಟ್ಟಾಚಾರ್ಯ, ಶ್ರೀ ಎನ್ ಆರ್ ಭಾನುಮೂರ್ತಿ, ಶ್ರೀಮತಿ ಅಮಿತಾ ಬಾತ್ರಾ, ಶ್ರೀ ಜನಮೇಜಯ ಸಿನ್ಹಾ, ಶ್ರೀ ಅಮಿತ್ ಚಂದ್ರ, ಶ್ರೀಮತಿ ರಜನಿ ಸಿನ್ಹಾ, ಶ್ರೀ ದಿನೇಶ್ ಕಣಬರ್, ಶ್ರೀ ಬಸಂತ ಪ್ರಧಾನ್, ಶ್ರೀ ಮದನ್ ಸಬ್ನವಿಸ್, ಶ್ರೀಮತಿ ಅಶಿಮಾ ಗೋಯಲ್, ಶ್ರೀ ಧರ್ಮಕೀರ್ತಿ ಜೋಶಿ, ಶ್ರೀ ಉಮಾಕಾಂತ್ ದಾಶ್, ಶ್ರೀ ಪಿನಾಕಿ ಚಕ್ರಬರ್ತಿ, ಶ್ರೀ ಇಂದ್ರನೀಲ್ ಸೇನ್ ಗುಪ್ತಾ, ಶ್ರೀ ಸಮೀರನ್ ಚಕ್ರವರ್ತಿ, ಶ್ರೀ ಅಭಿಮಾನ್ ದಾಸ್, ಶ್ರೀ ರಾಹುಲ್ ಬಜೋರಿಯಾ, ಶ್ರೀಮತಿ ಮೋನಿಕಾ ಹಲಾನ್ ಮತ್ತು ಶ್ರೀ ಸಿದ್ಧಾರ್ಥ ಸನ್ಯಾಲ್ ಸೇರಿದಂತೆ ಹಲವು ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ವಿಷಯ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

 

*****


(ಪ್ರಕಟಣೆ ಐ.ಡಿ.: 2210009) ವಿಸಿಟರ್ ಕೌಂಟರ್ : 47