ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ವಂದೇ ಮಾತರಂ' ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆ


ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ಮಾಧ್ಯಮವಾಗಿತ್ತು, ಇಂದಿಗೂ ಕೂಡ ಅದು ಹಾಗೆಯೇ ಇದೆ ಮತ್ತು 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣದಲ್ಲಿಯೂ ಅದು ಮುಂದುವರಿಯಲಿದೆ

ವಂದೇ ಮಾತರಂ ಭಾರತ ಮಾತೆಯ ಬಗ್ಗೆ ಭಕ್ತಿ, ಸಮರ್ಪಣೆ ಮತ್ತು ಕರ್ತವ್ಯದ ಭಾವನೆಗಳನ್ನು ಜಾಗೃತಗೊಳಿಸುವ ಒಂದು ಅಜರಾಮರ ಕೃತಿಯಾಗಿದೆ

'ವಂದೇ ಮಾತರಂ' ಕುರಿತ ಚರ್ಚೆಯ ಮೂಲಕ, ಮುಂದಿನ ಪೀಳಿಗೆಯವರು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಇದು ರಾಷ್ಟ್ರದ ಪುನರ್ನಿರ್ಮಾಣಕ್ಕೆ ಅಡಿಪಾಯವಾಗಲಿದೆ

ಅಂದಿನ ಪ್ರಮುಖ ರಾಜಕೀಯ ಪಕ್ಷದ ನಾಯಕರು 'ವಂದೇ ಮಾತರಂ' ಅನ್ನು ವಿಭಜಿಸಿ ಓಲೈಕೆಯನ್ನು ಪ್ರಾರಂಭಿಸದಿದ್ದರೆ, ದೇಶದ ವಿಭಜನೆ ಆಗುತ್ತಿರಲಿಲ್ಲ

ಗಾಂಧೀಜಿಯವರು ಯಾವ ಹಾಡನ್ನು 'ಅತ್ಯಂತ ಪರಿಶುದ್ಧ ಆತ್ಮದಿಂದ ಬಂದ ಹಾಡು' ಎಂದು ಕರೆದಿದ್ದರೋ, ಅಂತಹ 'ವಂದೇ ಮಾತರಂ' ಅನ್ನು ಅಂದಿನ ಪ್ರಮುಖ ರಾಜಕೀಯ ಪಕ್ಷವು ಎರಡು ಭಾಗಗಳಾಗಿ ವಿಭಜಿಸಿತು

ವಂದೇ ಮಾತರಂನ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಅವರು 'ವಂದೇ ಮಾತರಂ' ಎಂದು ಘೋಷಿಸಿದವರನ್ನು ಜೈಲಿಗೆ ಹಾಕಿದರು ಮತ್ತು ತುರ್ತು ಪರಿಸ್ಥಿತಿಯನ್ನು ಹೇರಿದರು

ಗುರುದೇವ ಟ್ಯಾಗೋರ್ ಅವರು ವಂದೇ ಮಾತರಂ ಹಾಡುವುದರೊಂದಿಗೆ ಯಾವ ವಿರೋಧ ಪಕ್ಷದ ಅಧಿವೇಶನಗಳು ಪ್ರಾರಂಭವಾಗುತ್ತಿದ್ದವೋ, ಅದೇ ವಂದೇ ಮಾತರಂ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾದಾಗ, ಆ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಮುಖ ಕುಟುಂಬದ ಸದಸ್ಯರು ಗೈರುಹಾಜರಾಗಿದ್ದರು

ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಪ್ರಮುಖ ವಿರೋಧ ಪಕ್ಷದ ನಾಯಕತ್ವದ ರಕ್ತದಲ್ಲಿ ವಂದೇ ಮಾತರಂ ಬಗೆಗಿನ ಅಗೌರವ ಮತ್ತು ಅವಮಾನ ಹರಿಯುತ್ತಿದೆ ಮತ್ತು ಅದು ಇಂದಿಗೂ ಮುಂದುವರಿದಿದೆ

ಇಸ್ಲಾಮಿಕ್ ಮತ್ತು ಬ್ರಿಟಿಷ್ ಆಕ್ರಮಣಗಳಿಂದ ನಮ್ಮ ಸಂಸ್ಕೃತಿ ಮತ್ತು ಇತಿಹಾಸವು ಧ್ವಂಸಗೊಂಡು ದುರ್ಬಲಗೊಂಡಿದ್ದಾಗ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ರಚಿಸುವ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪುನರುಜ್ಜೀವನಗೊಳಿಸಿದರು ಮತ್ತು ಮರುಸ್ಥಾಪಿಸಿದರು

ಇಂದಿಗೂ ಸಹ, ವಂದೇ ಮಾತರಂ ಸ್ವಾತಂತ್ರ್ಯ, ಸಂಸ್ಕೃತಿ ಮತ್ತು ದೇಶಭಕ್ತಿಯ ಅತ್ಯಂತ ಶಕ್ತಿಶಾಲಿ ಘೋಷಣೆಯಾಗಿ ಉಳಿದಿದೆ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಸ್ವಾತಂತ್ರ್ಯದ ಘೋಷಣೆಯಾಗಿತ್ತು, ಮತ್ತು ಈಗ ಅದು ವಿಕಸಿತ ಮತ್ತು ಶ್ರೇಷ್ಠ ಭಾರತದ ನಿರ್ಮಾಣಕ್ಕೆ ಸ್ಫೂರ್ತಿದಾಯಕ ಮಂತ್ರವಾಗಲಿದೆ

ಪ್ರತಿಯೊಂದು ಮಗು, ಯುವಕ ಮತ್ತು ಹದಿಹರೆಯದವರ ಹೃದಯ ಮತ್ತು ಮನಸ್ಸಿನಲ್ಲಿ 'ವಂದೇ ಮಾತರಂ' ಜಯಘೋಷದ ಜೊತೆಗೆ ರಾಷ್ಟ್ರದ ಕಡೆಗಿನ ಸಮರ್ಪಣೆ ಮತ್ತು ತ್ಯಾಗದ ಮೌಲ್ಯಗಳನ್ನು ತುಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ

प्रविष्टि तिथि: 09 DEC 2025 6:54PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ವಂದೇ ಮಾತರಂ' ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆಯನ್ನು ಆರಂಭಿಸಿದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, "ವಂದೇ ಮಾತರಂ ಗೀತೆಯು ರಚನೆಯಾದಾಗ, ಅದರ ಬಗ್ಗೆ ಚರ್ಚಿಸುವ ಮತ್ತು ಅದಕ್ಕೆ ಬದ್ಧರಾಗಿರುವ ಅಗತ್ಯವಿತ್ತು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಅದು ಮುಂದುವರಿದಿತ್ತು, ಇಂದಿಗೂ ಇದೆ ಮತ್ತು 2047ರಲ್ಲಿ ಭಾರತವು ನಿಜವಾದ ಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮುವಾಗಲೂ ಆ ಅಗತ್ಯ ಇರುತ್ತದೆ," ಎಂದು ಹೇಳಿದರು. ವಂದೇ ಮಾತರಂ ಭಾರತ ಮಾತೆಯ ಬಗ್ಗೆ ಸಮರ್ಪಣೆ, ಭಕ್ತಿ ಮತ್ತು ಕರ್ತವ್ಯದ ಭಾವನೆಗಳನ್ನು ಜಾಗೃತಗೊಳಿಸುವ ಒಂದು ಅಜರಾಮರ ಕೃತಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಂಬರುವ ಚುನಾವಣೆಗೆ ವಂದೇ ಮಾತರಂ ಅನ್ನು ತಳಕು ಹಾಕುವ ಮೂಲಕ ಕೆಲವರು ಅದರ ಹಿರಿಮೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ವಂದೇ ಮಾತರಂ ಕೇವಲ ಪಶ್ಚಿಮ ಬಂಗಾಳ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಪ್ರಪಂಚದ ಯಾವುದೇ ಮೂಲೆಯಲ್ಲಿ ಸ್ವಾತಂತ್ರ್ಯ ಪ್ರೇಮಿಗಳಿದ್ದರೂ, ಅವರು ತಮ್ಮ ಗುಪ್ತ ಸಭೆಗಳಲ್ಲೂ ವಂದೇ ಮಾತರಂ ಅನ್ನು ಹಾಡುತ್ತಿದ್ದರು ಎಂದು ಶ್ರೀ ಶಾ ತಿಳಿಸಿದರು. ಇಂದಿಗೂ ಗಡಿಯಲ್ಲಿರುವ ಸೈನಿಕನಾಗಲಿ ಅಥವಾ ಆಂತರಿಕ ಭದ್ರತೆಯಲ್ಲಿರುವ ಪೊಲೀಸ್ ಸಿಬ್ಬಂದಿಯಾಗಲಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡುವಾಗ ಅವರ ತುಟಿಯ ಮೇಲಿನ ಮಂತ್ರ 'ವಂದೇ ಮಾತರಂ' ಆಗಿರುತ್ತದೆ ಎಂದು ಗೃಹ ಸಚಿವರು ಹೇಳಿದರು.

ವಂದೇ ಮಾತರಂ ಗೀತೆಯು ಸ್ವಾತಂತ್ರ್ಯದ ಘೋಷಣೆಯಾಗಿ, ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಾಗಿ ಮತ್ತು ಭಾರತ ಮಾತೆಯನ್ನು ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಗೊಳಿಸಿದ ಶಕ್ತಿಯಾಗಿ ಹೊರಹೊಮ್ಮಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಹುತಾತ್ಮರು ತಮ್ಮ ಪ್ರಾಣವನ್ನೇ ಅರ್ಪಿಸುವಾಗಲೂ, ಮುಂದಿನ ಜನ್ಮದಲ್ಲೂ ಮರುಹುಟ್ಟು ಪಡೆದು ಭಾರತ ಮಾತೆಗಾಗಿ ತಮ್ಮ ಜೀವವನ್ನು ಸಮರ್ಪಿಸಲು ಸ್ಫೂರ್ತಿ ನೀಡುವ ಶಕ್ತಿ ವಂದೇ ಮಾತರಂ ಆಗಿದೆ. ನಮ್ಮ ಪ್ರಾಚೀನ ರಾಷ್ಟ್ರವನ್ನು ಶತಮಾನಗಳವರೆಗೆ ಅದರ ಸನಾತನ ಸಂಸ್ಕೃತಿಯ ಹಾದಿಯಲ್ಲಿ ಮುನ್ನಡೆಸಲು ಅನೇಕ ಮಹಾನ್ ಚಿಂತಕರು ಮತ್ತು ಋಷಿಗಳು ವಂದೇ ಮಾತರಂನಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಅವರು ಹೇಳಿದರು. ಸಂಸತ್ತಿನ ಉಭಯ ಸದನಗಳಲ್ಲಿ ನಡೆಯುತ್ತಿರುವ ವಂದೇ ಮಾತರಂ ಕುರಿತಾದ ಚರ್ಚೆ, ಗುಣಗಾನ ಮತ್ತು ಆಚರಣೆಯು ನಮ್ಮ ಮಕ್ಕಳು, ಹದಿಹರೆಯದವರು, ಯುವಕರು ಮತ್ತು ಮುಂಬರುವ ಅನೇಕ ಪೀಳಿಗೆಗಳಿಗೆ ಅದರ ಆಳವಾದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಹಾಗೂ ರಾಷ್ಟ್ರದ ಪುನರುಜ್ಜೀವನ ಮತ್ತು ಪುನರ್ನಿರ್ಮಾಣಕ್ಕೆ ಅಡಿಪಾಯ ಹಾಕಲು ನೆರವಾಗಲಿದೆ ಎಂದು ಶ್ರೀ ಶಾ ಅಭಿಪ್ರಾಯಪಟ್ಟರು.

ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ರಚಿಸಿದ 'ವಂದೇ ಮಾತರಂ' ಗೀತೆಯು ನವೆಂಬರ್ 7, 1875 ರಂದು ಮೊದಲು ಸಾರ್ವಜನಿಕವಾಯಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಚನೆಯಾದ ಕೂಡಲೇ, ವಂದೇ ಮಾತರಂ ಕ್ಷಿಪ್ರವಾಗಿ ದೇಶಭಕ್ತಿ, ತ್ಯಾಗ ಮತ್ತು ರಾಷ್ಟ್ರೀಯ ಪ್ರಜ್ಞೆಯ ಸಂಕೇತವಾಯಿತು ಹಾಗೂ ನಮ್ಮ ಸ್ವಾತಂತ್ರ್ಯ ಚಳುವಳಿಗೆ ದಾರಿ ಮಾಡಿಕೊಟ್ಟಿತು ಎಂದು ತಿಳಿಸಿದರು. ವಂದೇ ಮಾತರಂ ರಚನೆಯಾದ ಹಿನ್ನೆಲೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ಧ್ವಂಸಗೊಳಿಸಿದ ಶತಮಾನಗಳ ಇಸ್ಲಾಮಿಕ್ ದಾಳಿಗಳು ಮತ್ತು ನಂತರ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಹೊಸ ನಾಗರಿಕತೆ ಮತ್ತು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಲು ನಡೆಸಿದ ಪ್ರಯತ್ನಗಳೇ ಈ ಗೀತೆ ರಚನೆಯ ಸಂದರ್ಭವಾಗಿತ್ತು ಎಂದು ಅವರು ವಿವರಿಸಿದರು. ಅಂತಹ ಸಮಯದಲ್ಲೇ ಬಂಕಿಮ್ ಬಾಬು ಅವರು ವಂದೇ ಮಾತರಂ ಬರೆದರು. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ಅತ್ಯಂತ ಸೂಕ್ಷ್ಮವಾಗಿ ನಮ್ಮ ಪ್ರಾಚೀನ ನಾಗರಿಕತೆ, ಸಾಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆ ಮತ್ತು ಮಾತೃಭೂಮಿಯನ್ನು ದೈವ ಸ್ವರೂಪದಲ್ಲಿ (ತಾಯಿಯಂತೆ) ಪೂಜಿಸುವ ನಮ್ಮ ಚಿರಂತನ ಸಂಪ್ರದಾಯವನ್ನು ಪುನಃಸ್ಥಾಪಿಸಿದರು ಮತ್ತು ದೃಢಪಡಿಸಿದರು ಎಂದು ಶ್ರೀ ಶಾ ಹೇಳಿದರು. ಅಂದಿನ ಸರ್ಕಾರವು ಇದನ್ನು ಹತ್ತಿಕ್ಕಲು ಪ್ರಯತ್ನಿಸಿತು, ಹಾಡುವುದನ್ನು ನಿಷೇಧಿಸಿತು ಮತ್ತು ವಂದೇ ಮಾತರಂ ಎಂದು ಉಚ್ಚರಿಸಿದವರನ್ನು ಚಾಟಿಯಿಂದ ಹೊಡೆದು ಜೈಲಿಗೆ ಹಾಕಿತು. ಆದರೂ, ಈ ಎಲ್ಲಾ ನಿಷೇಧಗಳನ್ನು ಮೀರಿ ಮತ್ತು ಯಾವುದೇ ಸಂಘಟಿತ ಪ್ರಚಾರವಿಲ್ಲದೆ, ಈ ಹಾಡು ಪ್ರತಿಯೊಬ್ಬರ ಹೃದಯವನ್ನು ತಲುಪಿತು ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿತು. ಭಾರತದ ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರುವವರೆಲ್ಲರಿಗೂ ವಂದೇ ಮಾತರಂ ಪುನರುಜ್ಜೀವನದ ಮಂತ್ರವಾಗಿದೆ ಎಂದು ಹೇಳಿದರು.

ಗುಲಾಮಗಿರಿಯ ಕಾಲಘಟ್ಟದಲ್ಲಿ, ನಮ್ಮ ಅನೇಕ ದೇವಾಲಯಗಳು, ವಿಶ್ವವಿದ್ಯಾಲಯಗಳು, ಕಲಾ ಕೇಂದ್ರಗಳು, ಕೃಷಿ ಮತ್ತು ಶಿಕ್ಷಣ ವ್ಯವಸ್ಥೆಗಳು ನಾಶವಾದವು. ಆದರೂ, ಜನರ ಅಂತರಾಳದಿಂದ ನಮ್ಮ ಸಂಸ್ಕೃತಿಯ ಸಾರವನ್ನು ಅಳಿಸಿಹಾಕಲು ಯಾರಿಗೂ ಸಾಧ್ಯವಾಗಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಆ ಚೇತನವನ್ನು ಜಾಗೃತಗೊಳಿಸಿ, ಮರುಸಂಘಟಿಸುವ ಅಗತ್ಯವಿದ್ದ ಅದೇ ಸಂದರ್ಭದಲ್ಲಿ ಬಂಕಿಮ್ ಬಾಬು ಅವರು 'ವಂದೇ ಮಾತರಂ' ರಚಿಸಿದರು. ಬ್ರಿಟಿಷರಾಗಲಿ ಅಥವಾ ಅವರ ನಾಗರಿಕತೆಯನ್ನು ಒಪ್ಪಿಕೊಂಡವರಾಗಲಿ ಇದನ್ನು ತಡೆಯಲು ಸಾಧ್ಯವಾಗಲಿಲ್ಲ. ತನ್ನದೇ ಆದ ದೈವಿಕ ಶಕ್ತಿಯನ್ನು ಮರೆತಿದ್ದ ರಾಷ್ಟ್ರವನ್ನು ವಂದೇ ಮಾತರಂ ಜಾಗೃತಗೊಳಿಸಿತು ಎಂದು ಅವರು ಹೇಳಿದರು. ರಾಷ್ಟ್ರದ ಆತ್ಮಕ್ಕೆ ಮರುಜೀವ ತುಂಬುವ ಕಾರ್ಯವನ್ನು ವಂದೇ ಮಾತರಂ ಮಾಡಿತು. "ವಂದೇ ಮಾತರಂ ಭಾರತದ ಪುನರ್ಜನ್ಮದ ಮಂತ್ರವಾಗಿದೆ," ಎಂದು ಮಹರ್ಷಿ ಅರವಿಂದರು ಹೇಳಿದ್ದರು, ಮತ್ತು ಈ ಹೇಳಿಕೆಯು ವಂದೇ ಮಾತರಂನ ಹಿರಿಮೆಯನ್ನು ಸತ್ಯವಾಗಿಯೂ ಪ್ರತಿಬಿಂಬಿಸುತ್ತದೆ. ವಂದೇ ಮಾತರಂ ಬಗೆಗಿನ ಶ್ರೀ ಅರವಿಂದರ ಆಳವಾದ ಭಾವನೆಯು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿಯ ಮೂಲವಾಯಿತು ಮತ್ತು ಅದು ನಮ್ಮ ಸ್ವಾತಂತ್ರ್ಯದ ಮಂತ್ರವಾಗಿ ಮಾರ್ಪಟ್ಟಿತು ಎಂದು ಶ್ರೀ ಶಾ ತಿಳಿಸಿದರು.

ನಮ್ಮ ದೇಶವು ಇಡೀ ಪ್ರಪಂಚದಲ್ಲೇ ಅನನ್ಯವಾಗಿದೆ; ಭಾರತವು ತನ್ನ ಸಂಸ್ಕೃತಿಯಿಂದಲೇ ಗಡಿಗಳನ್ನು ವ್ಯಾಖ್ಯಾನಿಸಿಕೊಂಡಿರುವ ಏಕೈಕ ರಾಷ್ಟ್ರವಾಗಿದೆ, ಮತ್ತು ಇದೇ ಸಂಸ್ಕೃತಿಯೇ ಭಾರತವನ್ನು ಒಗ್ಗೂಡಿಸಿ ಇರಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಜಾಗೃತಗೊಳಿಸಿದವರು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು. ನಮ್ಮ ದೇಶವನ್ನು ಬೆಸೆಯುವ ಮಂತ್ರವೇ ನಮ್ಮ ಸಂಸ್ಕೃತಿ, ಮತ್ತು ವಂದೇ ಮಾತರಂನ ಘೋಷಣೆಯೇ ಮೊದಲ ಬಾರಿಗೆ ಸಾಂಸ್ಕೃತಿಕ ರಾಷ್ಟ್ರೀಯತೆಯ ತತ್ವವನ್ನು ದೃಢವಾಗಿ ಸ್ಥಾಪಿಸಿತು ಎಂದು ಅವರು ಹೇಳಿದರು. ಇಂದು ಇಡೀ ದೇಶವು ಸಾಂಸ್ಕೃತಿಕ ರಾಷ್ಟ್ರೀಯತೆಯ ದೃಷ್ಟಿಕೋನವನ್ನು ಅಪ್ಪಿಕೊಂಡು ಮುನ್ನಡೆಯುತ್ತಿದೆ ಎಂದು ಶ್ರೀ ಶಾ ತಿಳಿಸಿದರು. ಭಾರತವು ಕೇವಲ ಒಂದು ಭೂಮಿಯ ತುಂಡಲ್ಲ; ಅದು ನಮ್ಮ ತಾಯಿಯ ಸ್ವರೂಪವಾಗಿದೆ ಮತ್ತು ನಾವು ಅವಳಿಗೆ ಭಕ್ತಿಗೀತೆಗಳನ್ನು ಹಾಡುತ್ತೇವೆ ಎಂದು ಗೃಹ ಸಚಿವರು ಹೇಳಿದರು. ವಂದೇ ಮಾತರಂ ಅಂತಹ ಭಕ್ತಿಯ ಅಭಿವ್ಯಕ್ತಿಯಾಗಿದೆ. ವಂದೇ ಮಾತರಂ ರಚನೆಯಲ್ಲಿ, ಭಾರತ ಮಾತೆಯ ಪರಿಕಲ್ಪನೆಯನ್ನು ಆಳವಾದ ಭಾವನೆಯೊಂದಿಗೆ ವಿವರಿಸಲಾಗಿದೆ: ಆಕೆಯನ್ನು ನೀರು, ಹಣ್ಣುಗಳು ಮತ್ತು ಸಮೃದ್ಧಿಯನ್ನು ನೀಡುವವಳು; ಹೂವುಗಳಿಂದ ಅಲಂಕೃತಗೊಂಡವಳು, ಮನಸ್ಸಿಗೆ ಆನಂದ ನೀಡುವವಳು; ಮತ್ತು ಸರಸ್ವತಿ, ಲಕ್ಷ್ಮಿ ಹಾಗೂ ದುರ್ಗೆಯ ಸಾಕ್ಷಾತ್ ಸ್ವರೂಪ ಎಂದು ಬಣ್ಣಿಸಲಾಗಿದೆ. ಮೂಲಭೂತವಾಗಿ, ನಮ್ಮ ಸಮೃದ್ಧಿ, ಭದ್ರತೆ, ಜ್ಞಾನ ಮತ್ತು ಪ್ರಗತಿಯನ್ನು ಭಾರತ ಮಾತೆಯ ಕೃಪೆ ಮತ್ತು ಆರಾಧನೆಯ ಮೂಲಕ ಮಾತ್ರ ಪಡೆಯಲು ಸಾಧ್ಯ ಎಂದು ಅವರು ಹೇಳಿದರು. ದುರ್ಗೆಯ ಪರಾಕ್ರಮ, ಲಕ್ಷ್ಮಿಯ ಐಶ್ವರ್ಯ ಮತ್ತು ಸರಸ್ವತಿಯ ಬುದ್ಧಿಶಕ್ತಿಯನ್ನು ಭಾರತ ಮಾತೆ ಮತ್ತು ಈ ನೆಲದ ಪವಿತ್ರ ಮಣ್ಣಿನ ಕೃಪೆಯಿಂದ ಮಾತ್ರ ನಮಗೆ ಪಡೆಯಲು ಸಾಧ್ಯ. ಅದಕ್ಕಾಗಿಯೇ ನಾವು ಅವಳಿಗೆ ಮತ್ತೆ ಮತ್ತೆ ಗೌರವಪೂರ್ವಕವಾಗಿ ನಮಸ್ಕರಿಸಬೇಕು ಎಂದು ಹೇಳಿದರು.

ಮಾತೃಭೂಮಿಯು ನಮಗೆ ನಮ್ಮ ಅಸ್ಮಿತೆ (ಗುರುತು) ಮತ್ತು ಭಾಷೆಯನ್ನು ನೀಡುತ್ತದೆ, ಸುಸಂಸ್ಕೃತ ಜೀವನಶೈಲಿಗೆ ಅಡಿಪಾಯ ಹಾಕುತ್ತದೆ ಮತ್ತು ನಮ್ಮ ಜೀವನವನ್ನು ಉನ್ನತೀಕರಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾತೃಭೂಮಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ, ಮತ್ತು ಈ ಚಿರಂತನ ಭಾವನೆಗೆ ಬಂಕಿಮ್ ಚಂದ್ರ ಚಟರ್ಜಿ ಅವರು ಮರುಜೀವ ನೀಡಿದರು ಎಂದು ಅವರು ಹೇಳಿದರು. ಗುಲಾಮಗಿರಿಯ ಕತ್ತಲ ಯುಗದಲ್ಲಿ, ವಂದೇ ಮಾತರಂ ಮಿಂಚಿನಂತೆ ಕೆಲಸ ಮಾಡಿತು; ದಾಸ್ಯದ ಮನಸ್ಥಿತಿಯನ್ನು ತೊಡೆದುಹಾಕಲು ಸಹಾಯ ಮಾಡುವ ಮೂಲಕ ಜನರ ಹೃದಯದಲ್ಲಿ ಸ್ವರಾಜ್ಯ ಪಡೆಯುವ ಸ್ಫೂರ್ತಿಯನ್ನು ಅದು ಜಾಗೃತಗೊಳಿಸಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗುವಾಗ ಆಡಿದ ಕೊನೆಯ ಮಾತುಗಳು 'ವಂದೇ ಮಾತರಂ' ಆಗಿದ್ದವು ಎಂದು ಶ್ರೀ ಶಾ ಹೇಳಿದರು. 1907ರಲ್ಲಿ ಕಲ್ಕತ್ತಾದಲ್ಲಿ 'ವಂದೇ ಮಾತರಂ' ಎಂಬ ಆಂಗ್ಲ ಪತ್ರಿಕೆಯನ್ನು ಪ್ರಾರಂಭಿಸಲಾಯಿತು, ಮಹರ್ಷಿ ಅರವಿಂದರು ಅದರ ಸಂಪಾದಕರಾಗಿದ್ದರು ಎಂದು ಅವರು ತಿಳಿಸಿದರು. ಬ್ರಿಟಿಷ್ ಸರ್ಕಾರವು ಇದನ್ನು ಅತ್ಯಂತ ಅಪಾಯಕಾರಿ ರಾಷ್ಟ್ರೀಯವಾದಿ ಪತ್ರಿಕೆ ಎಂದು ಪರಿಗಣಿಸಿತ್ತು ಮತ್ತು ಶ್ರೀ ಅರವಿಂದರ ಮೇಲೆ ದೇಶದ್ರೋಹದ ಆರೋಪ ಹೊರಿಸಿ, ಅವರಿಗೆ ಶಿಕ್ಷೆ ವಿಧಿಸಿತು.

1896ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಗುರುದೇವ್ ಟ್ಯಾಗೋರ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ವಂದೇ ಮಾತರಂ ಹಾಡಿದರು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. 1905ರ ವಾರಣಾಸಿ ಅಧಿವೇಶನದಲ್ಲಿ ಮಹಾನ್ ಕವಯಿತ್ರಿ ಸರಳಾ ದೇವಿ ಚೌಧುರಾಣಿ ಅವರು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿದರು ಮತ್ತು 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ಬೆಳಿಗ್ಗೆ 6:30ಕ್ಕೆ ಸರ್ದಾರ್ ಪಟೇಲ್ ಅವರ ಕೋರಿಕೆಯ ಮೇರೆಗೆ ಪಂಡಿತ್ ಓಂಕಾರ್‌ನಾಥ್ ಠಾಕೂರ್ ಅವರು ಆಕಾಶವಾಣಿಯಲ್ಲಿ ತಮ್ಮ ಸುಮಧುರ ಕಂಠದಲ್ಲಿ ವಂದೇ ಮಾತರಂ ಹಾಡಿ ಇಡೀ ರಾಷ್ಟ್ರವನ್ನೇ ಭಾವಪರವಶಗೊಳಿಸಿದರು. 1950ರ ಜನವರಿ 24ರಂದು ಸಂವಿಧಾನ ರಚನಾ ಸಭೆಯ ಅಂತಿಮ ಸಭೆಯಲ್ಲಿ, ವಂದೇ ಮಾತರಂ ಅನ್ನು 'ರಾಷ್ಟ್ರೀಯ ಗೀತೆ' ಎಂದು ಘೋಷಿಸಿ, ಅದಕ್ಕೆ ರಾಷ್ಟ್ರಗೀತೆಗೆ ಸಮಾನವಾದ ಗೌರವವನ್ನು ನೀಡಲಾಯಿತು ಎಂದು ಹೇಳಿದರು.

ವಂದೇ ಮಾತರಂ ಬಗ್ಗೆ ಚರ್ಚಿಸುವುದನ್ನು ತಪ್ಪಿಸುವ ಪ್ರವೃತ್ತಿ ಹೊಸದೇನಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. 1925ರಲ್ಲಿ, ವಂದೇ ಮಾತರಂನ ಸುವರ್ಣ ಮಹೋತ್ಸವದಂದು, ಅಂದಿನ ಪ್ರಮುಖ ರಾಜಕೀಯ ಪಕ್ಷದ ನಾಯಕರು ವಂದೇ ಮಾತರಂ ಅನ್ನು ವಿಭಜಿಸಿ, ಓಲೈಕೆಯನ್ನು ಪ್ರಾರಂಭಿಸದಿದ್ದರೆ, ದೇಶದ ವಿಭಜನೆ ಆಗುತ್ತಿರಲಿಲ್ಲ. ಅದರ 50ನೇ ಮೈಲಿಗಲ್ಲಿನಲ್ಲಿ (ವರ್ಷದಲ್ಲಿ), ವಂದೇ ಮಾತರಂ ಅನ್ನು ಸೀಮಿತಗೊಳಿಸಲಾಯಿತು ಮತ್ತು ಅಲ್ಲಿಂದಲೇ ಓಲೈಕೆಯ ರಾಜಕಾರಣ ಪ್ರಾರಂಭವಾಯಿತು, ಅದು ನಂತರ ದೇಶದ ವಿಭಜನೆಗೆ ಕಾರಣವಾಯಿತು ಎಂದು ಅವರು ಹೇಳಿದರು. ಓಲೈಕೆ ನೀತಿಯ ಅಡಿಯಲ್ಲಿ ವಂದೇ ಮಾತರಂ ಅನ್ನು ಎರಡು ಭಾಗಗಳಾಗಿ ವಿಂಗಡಿಸದಿದ್ದರೆ, ದೇಶ ಇಬ್ಭಾಗವಾಗುತ್ತಿರಲಿಲ್ಲ ಎಂದು ಶ್ರೀ ಶಾ ಹೇಳಿದರು. ವಂದೇ ಮಾತರಂನ 100ನೇ ವರ್ಷದಲ್ಲಿ, ವಂದೇ ಮಾತರಂ ಎಂದು ಉಚ್ಚರಿಸಿದ ಎಲ್ಲರನ್ನೂ ಅಂದಿನ ಪ್ರಧಾನಮಂತ್ರಿ ಅವರು ಜೈಲಿಗೆ ಹಾಕಿದರು ಎಂದು ಅವರು ಹೇಳಿದರು. ಆ ಅವಧಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು ಮತ್ತು ಲಕ್ಷಾಂತರ ವಿರೋಧ ಪಕ್ಷದ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ಜೈಲಿಗೆ ತಳ್ಳಲಾಗಿತ್ತು ಎಂದು ಅವರು ತಿಳಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಯಾವುದೇ ಕಾರಣವಿಲ್ಲದೆ ಪತ್ರಿಕಾ ಕಚೇರಿಗಳಿಗೆ ಬೀಗ ಹಾಕಲಾಯಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆಕಾಶವಾಣಿಯಲ್ಲಿ ಕಿಶೋರ್ ಕುಮಾರ್ ಅವರ ಧ್ವನಿಯನ್ನು ಪ್ರಸಾರ ಮಾಡಲು ಸಹ ಬಿಡಲಿಲ್ಲ ಮತ್ತು ಯುಗಳ ಗೀತೆಗಳನ್ನು ಕೇವಲ ಲತಾ ಜೀ ಅವರ ಧ್ವನಿಯಲ್ಲಿ ಮಾತ್ರ ನುಡಿಸಲಾಗುತ್ತಿತ್ತು. ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ಇಡೀ ದೇಶವೇ ಪ್ರಾಯೋಗಿಕವಾಗಿ ಸೆರೆಯಲ್ಲಿತ್ತು. ಗುರುದೇವ ಟ್ಯಾಗೋರ್ ಅವರು ವಂದೇ ಮಾತರಂ ಹಾಡುವುದರೊಂದಿಗೆ ಯಾವ ವಿರೋಧ ಪಕ್ಷದ ಅಧಿವೇಶನಗಳು ಪ್ರಾರಂಭವಾಗುತ್ತಿದ್ದವೋ, ಅದೇ ವಂದೇ ಮಾತರಂ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾದಾಗ, ಆ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಮುಖ ಕುಟುಂಬದ ಸದಸ್ಯರು ಗೈರುಹಾಜರಾಗಿದ್ದರು ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಪ್ರಮುಖ ವಿರೋಧ ಪಕ್ಷದ ನಾಯಕತ್ವದ ರಕ್ತದಲ್ಲಿ ವಂದೇ ಮಾತರಂ ಬಗೆಗಿನ ಅಗೌರವ ಮತ್ತು ಅವಮಾನ ಹರಿಯುತ್ತಿದೆ ಮತ್ತು ಅದು ಇಂದಿಗೂ ಮುಂದುವರಿದಿದೆ ಎಂದು ಅವರು ಸೇರಿಸಿದರು.

ಪ್ರಮುಖ ವಿರೋಧ ಪಕ್ಷದ ನಾಯಕರೊಬ್ಬರು ಲೋಕಸಭೆಯಲ್ಲಿ, ಇಂದು ವಂದೇ ಮಾತರಂ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದರು, ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಿಳಿಸಿದರು. ಮಹಾತ್ಮ ಗಾಂಧೀಜಿಯವರು ಈ ಹಾಡನ್ನು 'ರಾಷ್ಟ್ರದ ಅತ್ಯಂತ ಶುದ್ಧ ಆತ್ಮದೊಂದಿಗೆ ಬೆಸೆದುಕೊಂಡಿದೆ' ಎಂದು ಬಣ್ಣಿಸಿದ್ದರು, ಮತ್ತು ಬಿಪಿನ್ ಚಂದ್ರ ಪಾಲ್ ಅವರು ಇದನ್ನು 'ರಾಷ್ಟ್ರಧರ್ಮದಲ್ಲಿನ ರಾಷ್ಟ್ರೀಯ ಭಕ್ತಿ ಮತ್ತು ಕರ್ತವ್ಯದ ಸಮಗ್ರ ಅಭಿವ್ಯಕ್ತಿ' ಎಂದು ಕರೆದಿದ್ದರು. ಅಂತಹ ಹಾಡನ್ನು ವಿರೋಧ ಪಕ್ಷವೇ ವಿಭಜಿಸಿತು. ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಶಕ್ತಿ ತುಂಬುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ಅವರು ಹೇಳಿದರು. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ, 1936ರ ಬರ್ಲಿನ್ ಒಲಿಂಪಿಕ್ಸ್‌ ನಲ್ಲಿಯೂ ಸಹ, ನಮ್ಮ ಹಾಕಿ ತಂಡವು ಗಾಢವಾದ ಭಾವನೆಯೊಂದಿಗೆ ವಂದೇ ಮಾತರಂ ಹಾಡಿತ್ತು ಮತ್ತು ನಾವು ಚಿನ್ನದ ಪದಕ ಗೆದ್ದಿದ್ದೆವು ಎಂದು ಶ್ರೀ ಶಾ ಹೇಳಿದರು.

ತಮ್ಮ ಪಕ್ಷದ ಅಡಿಪಾಯವೇ 'ಸಾಂಸ್ಕೃತಿಕ ರಾಷ್ಟ್ರೀಯತೆ'ಯ ತತ್ವದ ಮೇಲೆ ನಿರ್ಮಿತವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶವು ಪಾಶ್ಚಿಮಾತ್ಯ ಸಂಸ್ಕೃತಿಯ ಆಧಾರದ ಮೇಲೆ ನಡೆಯದೆ, ಬದಲಾಗಿ ತನ್ನದೇ ಆದ ಮೂಲ ಸಂಸ್ಕೃತಿ ಮತ್ತು ಮೂಲಭೂತ ವಿಚಾರಗಳ ಮೇಲೆ ನಡೆಯಬೇಕು ಎಂಬ ಉದ್ದೇಶದಿಂದಲೇ ತಮ್ಮ ಪಕ್ಷ ರಚನೆಯಾಗಿದೆ ಎಂದು ಅವರು ತಿಳಿಸಿದರು.

ಈ ಸಂಸತ್ತಿನಲ್ಲಿ ವಂದೇ ಮಾತರಂ ಹಾಡುವುದನ್ನು ನಿಲ್ಲಿಸಲಾಗಿತ್ತು ಎಂಬುದು ದಾಖಲೆಗಳಲ್ಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 1992ರಲ್ಲಿ ಸಂಸದ ಶ್ರೀ ರಾಮ್ ನಾಯಕ್ ಅವರು ಅಲ್ಪಾವಧಿ ಚರ್ಚೆಯ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿ, ಸಂಸತ್ತಿನಲ್ಲಿ ವಂದೇ ಮಾತರಂ ಅನ್ನು ಮತ್ತೆ ಹಾಡಬೇಕೆಂದು ಒತ್ತಾಯಿಸಿದರು ಎಂದು ಅವರು ತಿಳಿಸಿದರು. ಆ ಸಮಯದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರು, 'ಸಂವಿಧಾನ ರಚನಾ ಸಭೆಯು ಇದನ್ನು ಒಪ್ಪಿಕೊಂಡಿರುವುದರಿಂದ ಈ ಮಹಾನ್ ಸದನದಲ್ಲಿ ವಂದೇ ಮಾತರಂ ಅನ್ನು ಹಾಡಲೇಬೇಕು' ಎಂದು ಲೋಕಸಭಾ ಸ್ಪೀಕರ್ ಅವರಿಗೆ ಬಲವಾಗಿ ಪ್ರತಿಪಾದಿಸಿದ್ದರು. ಆಗಷ್ಟೇ, ಸರ್ವಾನುಮತದ ಒಪ್ಪಿಗೆಯೊಂದಿಗೆ 1992ರಲ್ಲಿ ಲೋಕಸಭೆಯು ವಂದೇ ಮಾತರಂ ಗಾಯನವನ್ನು ಪುನರಾರಂಭಿಸಿತು.

ತಾವು ವಂದೇ ಮಾತರಂ ಗಾಯನವನ್ನು ಪ್ರಾರಂಭಿಸಿದಾಗ, ವಿರೋಧ ಪಕ್ಷಗಳ ಮೈತ್ರಿಕೂಟದ ಅನೇಕ ಸದಸ್ಯರು ಆಗಲೂ ಸಹ ತಾವು ವಂದೇ ಮಾತರಂ ಹಾಡುವುದಿಲ್ಲ ಎಂದು ಹೇಳಿದ್ದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ವಂದೇ ಮಾತರಂ ಗಾಯನ ಪ್ರಾರಂಭವಾಗುವ ಮುನ್ನವೇ, ಸದನದಲ್ಲಿ ಕುಳಿತಿರುವ ಕೆಲವು ಸದಸ್ಯರು ಎದ್ದು ನಿಲ್ಲುತ್ತಾರೆ ಮತ್ತು ಹಾಡು ಆರಂಭವಾಗುತ್ತಿದ್ದಂತೆ ಹೊರನಡೆಯುತ್ತಾರೆ ಎಂಬುದನ್ನು ತಾವು ಗಮನಿಸಿರುವುದಾಗಿ ಕೇಂದ್ರ ಗೃಹ ಸಚಿವರು ಹೇಳಿದರು. ವಂದೇ ಮಾತರಂ ಗಾಯನದ ಸಮಯದಲ್ಲಿ ಎದ್ದು ನಿಲ್ಲದ ಒಬ್ಬನೇ ಒಬ್ಬ ಸದಸ್ಯನೂ ತಮ್ಮ ಪಕ್ಷದಲ್ಲಿ ಇಲ್ಲ ಎಂದು ಶ್ರೀ ಶಾ ಅವರು ಸ್ಪಷ್ಟಪಡಿಸಿದರು.

ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ 130ನೇ ಪುಣ್ಯತಿಥಿಯಂದು ಸರ್ಕಾರವು ಅಂಚೆ ಇಲಾಖೆಯ ಮೂಲಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಮತ್ತು ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 'ಹರ್ ಘರ್ ತಿರಂಗಾ' ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಆ ಸಮಯದಲ್ಲಿ, ರಾಷ್ಟ್ರಧ್ವಜವನ್ನು ಹಾರಿಸುವಾಗ 'ವಂದೇ ಮಾತರಂ' ಹೇಳುವುದನ್ನು ಮರೆಯಬಾರದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದರು.

ವಂದೇ ಮಾತರಂನ 150ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. 2025ರ ಅಕ್ಟೋಬರ್ 1ರಂದು ಕೇಂದ್ರ ಸಚಿವರಾದ ಸಂಪುಟವು ನಿರ್ಣಯವೊಂದನ್ನು ಅಂಗೀಕರಿಸಿದ್ದು, ಮುಂಬರುವ ಇಡೀ ವರ್ಷವನ್ನು ವಂದೇ ಮಾತರಂಗೆ ಗೌರವ ಸಲ್ಲಿಸುವ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು. 2025ರ ಅಕ್ಟೋಬರ್ 24ರಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಸಮನ್ವಯಕ್ಕಾಗಿ ರೂಪುರೇಷೆಯನ್ನು ಅಂತಿಮಗೊಳಿಸಲಾಯಿತು. 2025ರ ನವೆಂಬರ್ 7ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು ಎಂದು ಶ್ರೀ ಶಾ ತಿಳಿಸಿದರು. ಇದರ ಮೊದಲ ಹಂತವು ನವೆಂಬರ್‌ ನಲ್ಲಿ ಪೂರ್ಣಗೊಂಡಿದೆ; ಎರಡನೇ ಹಂತವು ಜನವರಿ 2026ರಲ್ಲಿ, ಮೂರನೇ ಹಂತವು ಆಗಸ್ಟ್ 2026ರಲ್ಲಿ ಮತ್ತು ನಾಲ್ಕನೇ ಹಂತವು ನವೆಂಬರ್ 2026ರಲ್ಲಿ ನಡೆಯಲಿದೆ. ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನೂ ಸಹ ಬಿಡುಗಡೆ ಮಾಡಲಾಗಿದೆ ಎಂದು ಅವರು ಸೇರಿಸಿದರು.

75 ಸಂಗೀತಗಾರರು ಸಂಯೋಜಿಸಿದ “ವಂದೇ ಮಾತರಂ – ನಾದ್ ಏಕಂ ರೂಪ್ ಅನೇಕಂ” ಎಂಬ ವಿಶೇಷ ಸಾಂಸ್ಕೃತಿಕ ಪ್ರಸ್ತುತಿಯನ್ನು ತಯಾರಿಸಲಾಗಿದೆ ಮತ್ತು ಭಾರತ ಸರ್ಕಾರದ ಕರೆಯ ಮೇರೆಗೆ ನವೆಂಬರ್ 7ರಂದು ದೇಶಾದ್ಯಂತ ಜನರು ಸಾಮೂಹಿಕವಾಗಿ ವಂದೇ ಮಾತರಂ ಹಾಡಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ವಂದೇ ಮಾತರಂನ 150 ವರ್ಷಗಳ ಸ್ಮರಣಾರ್ಥ ಒಂದು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ವಂದೇ ಮಾತರಂ ಕುರಿತಾದ ಪ್ರದರ್ಶನಗಳನ್ನು ಸಾರ್ವಜನಿಕರಿಗೆ ತೋರಿಸಲಾಗುವುದು. ಅಲ್ಲದೆ, ಈ ಪ್ರದರ್ಶನವನ್ನು ಡಿಜಿಟಲ್ ರೂಪದಲ್ಲಿ ಕೋಟ್ಯಂತರ ಜನರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಆಕಾಶವಾಣಿ, ದೂರದರ್ಶನ ಮತ್ತು ಎಫ್‌ಎಂ ರೇಡಿಯೋ ಚಾನೆಲ್‌ ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಚರ್ಚೆಗಳು ಮತ್ತು ಸಭೆಗಳನ್ನು ನಡೆಸಲಿದೆ ಎಂದು ಅವರು ಹೇಳಿದರು. ಎಲ್ಲಾ ಭಾರತೀಯ ರಾಯಭಾರ ಕಚೇರಿಗಳಲ್ಲಿ ವಂದೇ ಮಾತರಂ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 'ವಂದೇ ಮಾತರಂ: ಭೂತಾಯಿಗೆ ನಮನ' (Salute to Mother Earth) ಅಡಿಯಲ್ಲಿ ಸಸಿ ನೆಡುವ ಅಭಿಯಾನಗಳು ನಡೆಯುತ್ತಿವೆ. ಹೆದ್ದಾರಿಗಳ ಪಕ್ಕದಲ್ಲಿ ದೇಶಭಕ್ತಿಯ ಗೋಡೆ ಚಿತ್ರಗಳು ಮತ್ತು ವಂದೇ ಮಾತರಂ ಇತಿಹಾಸವನ್ನು ಸಾರುವ ಚಿತ್ರಣಗಳನ್ನು ಪ್ರದರ್ಶಿಸಲಾಗುವುದು. ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ LED ಡಿಸ್‌ ಪ್ಲೇಗಳ ಮೂಲಕ ಸಾರ್ವಜನಿಕ ಪ್ರಕಟಣೆಗಳನ್ನು ನೀಡಲಾಗುವುದು. ಹೆಚ್ಚುವರಿಯಾಗಿ, ವಂದೇ ಮಾತರಂ ಮತ್ತು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಜೀವನ ಆಧಾರಿತ 25 ಕಿರುಚಿತ್ರಗಳನ್ನು ನಿರ್ಮಿಸುವ ಕೆಲಸವೂ ಪ್ರಾರಂಭವಾಗಿದೆ.

ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದಾಗ, ಕೋವಿಡ್ ಕಾಲಘಟ್ಟವಿದ್ದರೂ, 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ರಾಷ್ಟ್ರದಾದ್ಯಂತ ಪ್ರತಿ ಹಳ್ಳಿಯಲ್ಲಿ ಎರಡು ಪೂರ್ಣ ವರ್ಷಗಳ ಕಾಲ ಆಚರಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಅಮೃತ ಮಹೋತ್ಸವದ ಮೂಲಕ, 1857 ರಿಂದ 1947 ರವರೆಗಿನ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಗಾಥೆಯನ್ನು ಈ ದೇಶದ ಯುವ ಪೀಳಿಗೆಗೆ ಪರಿಚಯಿಸಲಾಯಿತು. ಇತಿಹಾಸದಲ್ಲಿ ಹೆಸರು ದಾಖಲಾಗದ ಸ್ವಾತಂತ್ರ್ಯ ಹೋರಾಟದ ಅನೇಕ ಅಜ್ಞಾತ ವೀರರನ್ನು ಗುರುತಿಸಿ, ಅವರ ವಿವರಗಳನ್ನು ಪತ್ತೆಹಚ್ಚಿ, ಅವರ ಗೌರವಾರ್ಥ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಅಸಂಖ್ಯಾತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶಭಕ್ತಿಯ ಹೊಸ ಅಲೆಯನ್ನು ಸೃಷ್ಟಿಸಲು ಸಂಘಟಿತ ಪ್ರಯತ್ನ ನಡೆಸಲಾಯಿತು. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ವ್ಯಾಪಕವಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಅವರು ಸೇರಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ, ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರವೂ ದೇಶವನ್ನು ಬಹಳ ಮುಂದಕ್ಕೆ ಕೊಂಡೊಯ್ದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ನಾವು ನಮ್ಮ ಪ್ರಜಾಪ್ರಭುತ್ವವನ್ನು ಮಹತ್ತರವಾಗಿ ಬಲಪಡಿಸಿದ್ದೇವೆ ಮತ್ತು ಇಂದು ನಮ್ಮ ಪ್ರಜಾಪ್ರಭುತ್ವದ ಬೇರುಗಳು ಅತ್ಯಂತ ಸದೃಢವಾಗಿವೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ 75ನೇ ವರ್ಷದಿಂದ 100ನೇ ವರ್ಷದವರೆಗಿನ ಅವಧಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಅಮೃತ ಕಾಲ' ಎಂದು ಹೆಸರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. 'ಆಜಾದಿ ಕಾ ಅಮೃತ್ ಮಹೋತ್ಸವ'ದಿಂದ ಸ್ವಾತಂತ್ರ್ಯದ ಶತಮಾನೋತ್ಸವದವರೆಗಿನ ಈ ಅವಧಿಯನ್ನು ಸವಾಲುಗಳ ಪರ್ವವನ್ನಾಗಿ (Phase of challenges) ಪರಿಗಣಿಸುತ್ತೇವೆ ಎಂಬ ಸಂಕಲ್ಪವನ್ನು ಪ್ರಧಾನಮಂತ್ರಿ ಅವರು ದೇಶದ ಯುವಜನತೆಯ ಮುಂದಿಟ್ಟಿದ್ದಾರೆ. ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ, ನಮ್ಮ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಕೇವಲ ಪ್ರಧಾನಮಂತ್ರಿ ಮೋದಿ ಅವರ ಅಥವಾ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಸಂಕಲ್ಪವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೆಲವರು ಇದನ್ನು ಕೇವಲ ರಾಜಕೀಯ ಘೋಷಣೆ ಎಂದು ತಳ್ಳಿಹಾಕಬಹುದು, ಆದರೆ ಇದು ವಾಸ್ತವವಾಗಿ 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪವಾಗಿದೆ ಮತ್ತು ಇದು ಖಂಡಿತವಾಗಿಯೂ ಈಡೇರುತ್ತದೆ. ನಾವು ಅಮೃತ ಕಾಲವನ್ನು ಆಚರಿಸುತ್ತಿರುವಾಗಲೇ ವಂದೇ ಮಾತರಂನ 150ನೇ ವರ್ಷ ಬಂದಿರುವುದು ಒಂದು ದೈವಿಕ ಕಾಕತಾಳೀಯವೇ ಸರಿ ಎಂದು ಗೃಹ ಸಚಿವರು ಹೇಳಿದರು. ಈ ಮೈಲಿಗಲ್ಲಿನ ಮೂಲಕ, ನಾವು ಮತ್ತೊಮ್ಮೆ ದೇಶಾದ್ಯಂತ ದೇಶಭಕ್ತಿಯ ಜ್ವಾಲೆಯನ್ನು ಬೆಳಗಿಸುತ್ತೇವೆ ಎಂದು ಅವರು ಹೇಳಿದರು.

ವಂದೇ ಮಾತರಂ ಎಂದಿಗೂ ಅಪ್ರಸ್ತುತವಾಗುವುದಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಅದು ರಚನೆಯಾದಾಗ ಅದರ ಅಗತ್ಯ ಎಷ್ಟಿತ್ತೋ, ಇಂದಿಗೂ ಅಷ್ಟೇ ಇದೆ. ಆ ಸಮಯದಲ್ಲಿ ವಂದೇ ಮಾತರಂ ದೇಶವನ್ನು ಸ್ವತಂತ್ರಗೊಳಿಸಲು ಪ್ರೇರಕ ಶಕ್ತಿಯಾಗಿತ್ತು, ಆದರೆ ಈ ಅಮೃತ ಕಾಲದಲ್ಲಿ, ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ವಂದೇ ಮಾತರಂ ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬ ಮಗುವಿನ ಹೃದಯದಲ್ಲಿ ಮತ್ತೊಮ್ಮೆ ವಂದೇ ಮಾತರಂ ಚೇತನವನ್ನು ಜಾಗೃತಗೊಳಿಸುವುದು, ಪ್ರತಿಯೊಬ್ಬ ಹದಿಹರೆಯದವರ ಮನಸ್ಸಿನಲ್ಲಿ ವಂದೇ ಮಾತರಂ ಮಂತ್ರವನ್ನು ದೃಢವಾಗಿ ತುಂಬುವುದು ಮತ್ತು ವಂದೇ ಮಾತರಂನ ನಿಜವಾದ ಅರ್ಥವು ತೋರಿಸಿಕೊಟ್ಟ ಹಾದಿಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಡಲು ಪ್ರತಿಯೊಬ್ಬ ಯುವಕನಿಗೆ ಸ್ಫೂರ್ತಿ ನೀಡುವುದು ಈ ಸದನದ ಪ್ರತಿಯೊಬ್ಬ ಸದಸ್ಯರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡಿದ್ದ ಭಾರತವನ್ನು ನಿರ್ಮಿಸುವಲ್ಲಿ ವಂದೇ ಮಾತರಂನ ಕರೆಯು ಪ್ರೇರಕ ಶಕ್ತಿಯಾಗಬೇಕು ಎಂದು ಅವರು ಹೇಳಿದರು.

 

*****


(रिलीज़ आईडी: 2201168) आगंतुक पटल : 12
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Odia , Malayalam