ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿಂದೂಸ್ತಾನ್ ಟೈಮ್ಸ್ ಲೀಡರ್‌ ಶಿಪ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

प्रविष्टि तिथि: 06 DEC 2025 8:14PM by PIB Bengaluru

ಎಲ್ಲರಿಗೂ ನಮಸ್ಕಾರ.

ಹಿಂದೂಸ್ತಾನ್ ಟೈಮ್ಸ್ ಶೃಂಗಸಭೆಯಲ್ಲಿ ದೇಶ ಮತ್ತು ವಿದೇಶಗಳ ಅನೇಕ ಗಣ್ಯ ಅತಿಥಿಗಳು ಇಲ್ಲಿ ಉಪಸ್ಥಿತರಿದ್ದಾರೆ. ಆಯೋಜಕರಿಗೆ ಹಾಗೂ ಇಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶೋಭನಾ ಜೀ ಅವರು ಈಗಷ್ಟೇ ಎರಡು ವಿಷಯಗಳನ್ನು ಪ್ರಸ್ತಾಪಿಸಿದರು, ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದೆ.ಮೊದಲನೆಯದಾಗಿ, ಮೋದಿ ಜೀ ಕಳೆದ ಬಾರಿ ಭೇಟಿ ನೀಡಿದ್ದಾಗ ಅವರು ಈ ಸಲಹೆಯನ್ನು ನೀಡಿದ್ದರು ಎಂದು ಅವರು ಹೇಳಿದರು. ಸಾಮಾನ್ಯವಾಗಿ ಈ ದೇಶದಲ್ಲಿ ಮಾಧ್ಯಮ ಸಂಸ್ಥೆಗಳಿಗೆ "ನೀವು ಹೀಗೆ ಕೆಲಸ ಮಾಡಿ" ಎಂದು ಹೇಳುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಆದರೆ ನಾನು ಆ ಕೆಲಸ ಮಾಡಿದ್ದೆ. ಶೋಭನಾ ಜೀ ಮತ್ತು ಅವರ ತಂಡ ಆ ಸಲಹೆಯನ್ನು ಅತ್ಯಂತ ಉತ್ಸಾಹದಿಂದ ಜಾರಿಗೆ ತಂದಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಮತ್ತು ದೇಶದ ವಿಷಯಕ್ಕೆ ಬರುವುದಾದರೆ, ನಾನು ಈಗಷ್ಟೇ ಆ ವಸ್ತುಪ್ರದರ್ಶನವನ್ನು ವೀಕ್ಷಿಸಿ ಬಂದಿದ್ದೇನೆ. ನೀವೆಲ್ಲರೂ ಖಂಡಿತವಾಗಿಯೂ ಅದನ್ನು ಒಮ್ಮೆ ವೀಕ್ಷಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಆ ಛಾಯಾಗ್ರಾಹಕ ಮಿತ್ರರು ಆ ಕ್ಷಣಗಳನ್ನು ಎಷ್ಟೊಂದು ಅದ್ಭುತವಾಗಿ ಸೆರೆಹಿಡಿದಿದ್ದಾರೆ ಎಂದರೆ, ಅವೆಲ್ಲವೂ ಅಜರಾಮರವಾಗಿ ಉಳಿಯುವಂತಿವೆ. ಇನ್ನು ಅವರು ಹೇಳಿದ ಎರಡನೇ ವಿಷಯದ ಬಗ್ಗೆ ಹೇಳುವುದಾದರೆ, ನಾನಿಲ್ಲಿ ಅವರ ಪದಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅವರು "ನೀವು ರಾಷ್ಟ್ರ ಸೇವೆಯನ್ನು ಹೀಗೆಯೇ ಮುಂದುವರಿಸಿ" ಎಂದು ವೈಯಕ್ತಿಕವಾಗಿ ಹೇಳಬಹುದಿತ್ತು. ಆದರೆ ಅದರ ಬದಲಿಗೆ, "ನೀವು ಸೇವೆಯನ್ನು ಮುಂದುವರಿಸಬೇಕು" ಎಂದು ಸ್ವತಃ 'ಹಿಂದೂಸ್ತಾನ್ ಟೈಮ್ಸ್' ಸಂಸ್ಥೆಯೇ ಹೇಳುತ್ತಿದೆ ಎಂದು ನಾನಿದನ್ನು ಭಾವಿಸುತ್ತೇನೆ. ಇದಕ್ಕಾಗಿ ನಾನು ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, 

ಈ ಬಾರಿಯ ಶೃಂಗಸಭೆಯ ಧ್ಯೇಯವಾಕ್ಯ - 'ಟ್ರಾನ್ಸ್‌ ಫಾರ್ಮಿಂಗ್ ಟುಮಾರೋ' (ಭವಿಷ್ಯದ ಪರಿವರ್ತನೆ) ಎಂಬುದಾಗಿದೆ. 101 ವರ್ಷಗಳ ಸುದೀರ್ಘ ಇತಿಹಾಸವಿರುವ ಹಾಗೂ ಮಹಾತ್ಮ ಗಾಂಧೀಜಿ, ಮದನ್ ಮೋಹನ್ ಮಾಳವೀಯ ಜೀ, ಘನಶ್ಯಾಮ್ ದಾಸ್ ಬಿರ್ಲಾ ಜೀ ಮತ್ತು ಅಸಂಖ್ಯಾತ ಮಹಾನ್ ವ್ಯಕ್ತಿಗಳ ಆಶೀರ್ವಾದವನ್ನು ಪಡೆದಿರುವ 'ಹಿಂದೂಸ್ತಾನ್' ಪತ್ರಿಕೆಯು ಯಾವಾಗ 'ಟ್ರಾನ್ಸ್‌ ಫಾರ್ಮಿಂಗ್ ಟುಮಾರೋ' ಬಗ್ಗೆ ಮಾತನಾಡುತ್ತದೆಯೋ, ಆಗ ದೇಶಕ್ಕೆ ಒಂದು ಬಲವಾದ ಭರವಸೆ ಸಿಗುತ್ತದೆ. ಭಾರತದಲ್ಲಿ ಆಗುತ್ತಿರುವ ಈ ಬದಲಾವಣೆಯು ಕೇವಲ ಸಾಧ್ಯತೆಗಳ ಮಾತಲ್ಲ, ಬದಲಿಗೆ ಇದು ಜನರ ಬದುಕು, ಆಲೋಚನೆ ಮತ್ತು ದೇಶದ ಪಯಣದ ದಿಕ್ಕನ್ನೇ ಬದಲಿಸುತ್ತಿರುವ ನೈಜ ಕಥನವಾಗಿದೆ ಎಂದು ನಾನು ಬಲವಾಗಿ ನಂಬಿದ್ದೇನೆ.

ಸ್ನೇಹಿತರೇ, 

ಇಂದು ನಮ್ಮ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 'ಮಹಾಪರಿನಿರ್ವಾಣ'ವೂ ಹೌದು. ಸಮಸ್ತ ಭಾರತೀಯರ ಪರವಾಗಿ ನಾನು ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, 

ನಾವಿಂದು 21ನೇ ಶತಮಾನದ ಕಾಲು ಭಾಗ ಈಗಾಗಲೇ ಕಳೆದುಹೋಗಿರುವಂತಹ ಒಂದು ನಿರ್ಣಾಯಕ ಘಟ್ಟದಲ್ಲಿ ನಿಂತಿದ್ದೇವೆ. ಕಳೆದ ಈ 25 ವರ್ಷಗಳಲ್ಲಿ ಜಗತ್ತು ಅನೇಕ ಏಳು-ಬೀಳುಗಳನ್ನು ಕಂಡಿದೆ. ನಾವು ಆರ್ಥಿಕ ಬಿಕ್ಕಟ್ಟುಗಳು, ಜಾಗತಿಕ ಸಾಂಕ್ರಾಮಿಕ ಪಿಡುಗು, ತಾಂತ್ರಿಕ ವಲಯದ ಕ್ಷಿಪ್ರ ಬದಲಾವಣೆಗಳು, ಒಡೆದುಹೋಗುತ್ತಿರುವ ಜಗತ್ತು ಮತ್ತು ನಡೆಯುತ್ತಿರುವ ಯುದ್ಧಗಳಿಗೆ ಸಾಕ್ಷಿಯಾಗಿದ್ದೇವೆ. ಈ ಎಲ್ಲಾ ಸನ್ನಿವೇಶಗಳು ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿಗೆ ಸವಾಲಾಗಿ ಪರಿಣಮಿಸಿವೆ. ಇಂದು ಜಗತ್ತು ಅನಿಶ್ಚಿತತೆಗಳಿಂದ ತುಂಬಿದೆ. ಆದರೆ, ಅನಿಶ್ಚಿತತೆಯಿಂದ ಕೂಡಿದ ಈ ಯುಗದಲ್ಲೂ ನಮ್ಮ ಭಾರತವು ಒಂದು ವಿಶಿಷ್ಟ ಸ್ಥಾನದಲ್ಲಿ  ಕಾಣಿಸುತ್ತಿದೆ; ಭಾರತವು ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದೆ. ಜಗತ್ತು ಆರ್ಥಿಕ ಕುಸಿತದ  ಬಗ್ಗೆ ಮಾತನಾಡುತ್ತಿರುವಾಗ, ಭಾರತವು ಪ್ರಗತಿಯ ಕಥೆಯನ್ನು ಬರೆಯುತ್ತಿದೆ. ಜಗತ್ತಿನಲ್ಲಿ ನಂಬಿಕೆಯ ಬಿಕ್ಕಟ್ಟು ಎದುರಾದಾಗ, ಭಾರತವು ನಂಬಿಕೆಯ ಆಧಾರಸ್ತಂಭವಾಗುತ್ತಿದೆ. ಜಗತ್ತು ವಿಘಟನೆಯತ್ತ ಸಾಗುತ್ತಿರುವಾಗ, ಭಾರತವು ಎಲ್ಲರನ್ನೂ ಬೆಸೆಯುವ ಸೇತುವೆಯಾಗಿ ಹೊರಹೊಮ್ಮುತ್ತಿದೆ.

ಸ್ನೇಹಿತರೇ, 

ಕೆಲವೇ ದಿನಗಳ ಹಿಂದಷ್ಟೇ ಭಾರತದ ಎರಡನೇ ತ್ರೈಮಾಸಿಕದ ಜಿಡಿಪಿ (GDP) ಅಂಕಿಅಂಶಗಳು ಬಿಡುಗಡೆಯಾದವು. ಶೇಕಡಾ 8 ಕ್ಕಿಂತ ಹೆಚ್ಚಿನ ಬೆಳವಣಿಗೆ ದರವು ನಮ್ಮ ಪ್ರಗತಿಯ ಹೊಸ ಆವೇಗವನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಿತರೇ, 

ಇದು ಕೇವಲ ಒಂದು ಅಂಕಿ ಅಂಶವಲ್ಲ; ಇದೊಂದು ಪ್ರಬಲವಾದ ಸ್ಥೂಲ ಆರ್ಥಿಕ (macro-economic) ಸಂಕೇತವಾಗಿದೆ. ಇಂದಿನ ಭಾರತವು ಜಾಗತಿಕ ಆರ್ಥಿಕತೆಯ 'ಬೆಳವಣಿಗೆಯ ಚಾಲಕ ಶಕ್ತಿ'ಯಾಗಿ ಹೊರಹೊಮ್ಮುತ್ತಿದೆ ಎನ್ನುವ ಸಂದೇಶವನ್ನು ಇದು ಸಾರುತ್ತಿದೆ. ಮತ್ತು ಜಾಗತಿಕ ಬೆಳವಣಿಗೆ ದರವು ಶೇ. 3ರಷ್ಟಿರುವಾಗ ನಮ್ಮ ಈ ಅಂಕಿಅಂಶಗಳು ಹೊರಬಂದಿರುವುದು ಗಮನಾರ್ಹ. ಜಿ-7 (G-7) ರಾಷ್ಟ್ರಗಳ ಆರ್ಥಿಕತೆಗಳು ಸರಾಸರಿ ಶೇ. 1.5 ರಷ್ಟು, ಕೇವಲ 1.5 ರಷ್ಟು ದರದಲ್ಲಿ ಬೆಳೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ, ಭಾರತವು 'ಅಧಿಕ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ'ದ ಮಾದರಿಯಾಗಿ ಹೊರಹೊಮ್ಮಿದೆ. ಒಂದಾನೊಂದು ಕಾಲದಲ್ಲಿ ಅರ್ಥಶಾಸ್ತ್ರಜ್ಞರು, ಅದರಲ್ಲೂ ವಿಶೇಷವಾಗಿ ನಮ್ಮ ದೇಶದ ಅರ್ಥಶಾಸ್ತ್ರಜ್ಞರು ಅಧಿಕ ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು. ಆದರೆ ಇಂದು, ಅದೇ ಜನರು ಕಡಿಮೆ ಹಣದುಬ್ಬರದ ಬಗ್ಗೆ ಮಾತನಾಡುತ್ತಿದ್ದಾರೆ.

ಸ್ನೇಹಿತರೇ, 

ಭಾರತದ ಈ ಸಾಧನೆಗಳು ಸಾಮಾನ್ಯವಾದುದಲ್ಲ. ಇದು ಕೇವಲ ಅಂಕಿಅಂಶಗಳಿಗೆ ಸೀಮಿತವಾದುದಲ್ಲ; ಬದಲಿಗೆ ಇದು ಕಳೆದ ದಶಕದಲ್ಲಿ ಭಾರತವು ಕಂಡುಕೊಂಡ ಮೂಲಭೂತ ಬದಲಾವಣೆಯಾಗಿದೆ. ಈ ಮೂಲಭೂತ ಬದಲಾವಣೆಯು ದೇಶದ ದೃಢತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರವೃತ್ತಿ, ಆತಂಕದ ಕಾರ್ಮೋಡಗಳನ್ನು ಹೋಗಲಾಡಿಸುವುದು ಮತ್ತು ಆಶೋತ್ತರಗಳನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಮತ್ತು ಈ ಕಾರಣಕ್ಕಾಗಿಯೇ, ಇಂದಿನ ಭಾರತವು ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಿದ್ದು, ಮುಂಬರುವ ಭವಿಷ್ಯವನ್ನೂ  ಪರಿವರ್ತಿಸುತ್ತಿದೆ.

ಸ್ನೇಹಿತರೇ, 

ಇಂದು ನಾವು 'ಭವಿಷ್ಯದ ಪರಿವರ್ತನೆ'ಯ ಬಗ್ಗೆ ಚರ್ಚಿಸುವಾಗ, ಪರಿವರ್ತನೆಯ ಮೇಲಿನ ಈ ವಿಶ್ವಾಸವು ಇಂದು ನಡೆಯುತ್ತಿರುವ ಕಾರ್ಯಗಳ ಭದ್ರ ಬುನಾದಿಯನ್ನು ಆಧರಿಸಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಂದಿನ ಸುಧಾರಣೆಗಳು ಮತ್ತು ಇಂದಿನ ಕಾರ್ಯಕ್ಷಮತೆಯೇ ನಾಳಿನ ಪರಿವರ್ತನೆಗೆ ಹಾದಿ ಮಾಡಿಕೊಡುತ್ತಿವೆ. ನಾವು ಯಾವ ಮನಸ್ಥಿತಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕೆ ನಾನೊಂದು ಉದಾಹರಣೆಯನ್ನು ನೀಡುತ್ತೇನೆ.

ಸ್ನೇಹಿತರೇ,

ಭಾರತದ ಸಾಮರ್ಥ್ಯದ ಬಹುಪಾಲು ಭಾಗವು ದೀರ್ಘಕಾಲದವರೆಗೆ ಬಳಕೆಯಾಗದೆಯೇ ಉಳಿದಿತ್ತು ಎಂಬುದು ನಿಮಗೂ ತಿಳಿದಿದೆ. ಯಾವಾಗ ಈ ಬಳಕೆಯಾಗದ ಸಾಮರ್ಥ್ಯಕ್ಕೆ ಹೆಚ್ಚಿನ ಅವಕಾಶಗಳು ಸಿಗುತ್ತವೆಯೋ, ಯಾವಾಗ ಅದು ದೇಶದ ಅಭಿವೃದ್ಧಿಯಲ್ಲಿ ಪೂರ್ಣ ಶಕ್ತಿಯೊಂದಿಗೆ ಮತ್ತು ಯಾವುದೇ ಅಡೆತಡೆಯಿಲ್ಲದೆ ಪಾಲ್ಗೊಳ್ಳುತ್ತದೆಯೋ, ಆಗ ದೇಶದ ಪರಿವರ್ತನೆ ನಿಶ್ಚಿತ. ಒಮ್ಮೆ ನಮ್ಮ ಪೂರ್ವ ಭಾರತ, ನಮ್ಮ ಈಶಾನ್ಯ ಭಾಗ, ನಮ್ಮ ಹಳ್ಳಿಗಳು, ನಮ್ಮ ಎರಡನೇ ಮತ್ತು ಮೂರನೇ ಹಂತದ ನಗರಗಳು , ನಮ್ಮ ನಾರಿ ಶಕ್ತಿ, ಭಾರತದ ಆವಿಷ್ಕಾರಿ ಯುವ ಶಕ್ತಿ, ಭಾರತದ ಕಡಲ ಶಕ್ತಿ, ನೀಲಿ ಆರ್ಥಿಕತೆ ಮತ್ತು ಭಾರತದ ಬಾಹ್ಯಾಕಾಶ ವಲಯದ ಬಗ್ಗೆ ಯೋಚಿಸಿ ನೋಡಿ. ಹಿಂದಿನ ದಶಕಗಳಲ್ಲಿ ಇವುಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಭಾರತವು ಈ 'ಬಳಕೆಯಾಗದ ಸಾಮರ್ಥ್ಯ'ವನ್ನು ಸದ್ಬಳಕೆ ಮಾಡಿಕೊಳ್ಳುವ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದೆ. ಇಂದು ಪೂರ್ವ ಭಾರತದಲ್ಲಿ ಆಧುನಿಕ ಮೂಲಸೌಕರ್ಯ, ಸಂಪರ್ಕ ಮತ್ತು ಕೈಗಾರಿಕೆಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಇಂದು ನಮ್ಮ ಹಳ್ಳಿಗಳು ಮತ್ತು ನಮ್ಮ ಸಣ್ಣ ಪಟ್ಟಣಗಳನ್ನು ಸಹ ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ. ನಮ್ಮ ಸಣ್ಣ ಪಟ್ಟಣಗಳು ಸ್ಟಾರ್ಟಪ್‌ಗಳು ಮತ್ತು MSMEಗಳ ಹೊಸ ಕೇಂದ್ರಗಳಾಗಿ ಬದಲಾಗುತ್ತಿವೆ. ನಮ್ಮ ಹಳ್ಳಿಗಳಲ್ಲಿನ ರೈತರು FPOಗಳನ್ನು ರಚಿಸಿಕೊಳ್ಳುವ ಮೂಲಕ ಮಾರುಕಟ್ಟೆಯೊಂದಿಗೆ ನೇರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ ಮತ್ತು ಕೆಲವು FPOಗಳು ಜಾಗತಿಕ ಮಾರುಕಟ್ಟೆಗೂ ಸಂಪರ್ಕ ಸಾಧಿಸುತ್ತಿವೆ.

ಸ್ನೇಹಿತರೇ,

ಭಾರತದ ನಾರಿ ಶಕ್ತಿಯು ಇಂದು ಅದ್ಭುತಗಳನ್ನು ಮಾಡುತ್ತಿದೆ. ಇಂದು ನಮ್ಮ ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಈ ಪರಿವರ್ತನೆಯು ಇನ್ನು ಮುಂದೆ ಕೇವಲ ಮಹಿಳಾ ಸಬಲೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ಸಮಾಜದ ಆಲೋಚನೆ ಮತ್ತು ಸಾಮರ್ಥ್ಯಗಳೆರಡನ್ನೂ ಪರಿವರ್ತಿಸುತ್ತಿದೆ.

ಸ್ನೇಹಿತರೇ,

ಯಾವಾಗ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆಯೋ, ಯಾವಾಗ ಅಡೆತಡೆಗಳು ನಿವಾರಣೆಯಾಗುತ್ತವೆಯೋ, ಆಗ ಆಕಾಶದಲ್ಲಿ ಹಾರಲು ಹೊಸ ರೆಕ್ಕೆಗಳೂ ಮೂಡುತ್ತವೆ. ಭಾರತದ ಬಾಹ್ಯಾಕಾಶ ವಲಯವು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಮೊದಲು ಬಾಹ್ಯಾಕಾಶ ವಲಯವು ಸರ್ಕಾರದ ನಿಯಂತ್ರಣದಲ್ಲಿತ್ತು. ಆದರೆ ನಾವು ಬಾಹ್ಯಾಕಾಶ ವಲಯದಲ್ಲಿ ಸುಧಾರಣೆ ತಂದು, ಅದನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದೆವು. ಇಂದು ದೇಶವು ಅದರ ಫಲಿತಾಂಶಗಳನ್ನು ಕಣ್ಣಾರೆ ನೋಡುತ್ತಿದೆ. ಕೇವಲ 10-11 ದಿನಗಳ ಹಿಂದಷ್ಟೇ, ನಾನು ಹೈದರಾಬಾದ್‌ ನಲ್ಲಿ ಸ್ಕೈರೂಟ್‌ ನ (Skyroot) 'ಇನ್ಫಿನಿಟಿ ಕ್ಯಾಂಪಸ್' ಅನ್ನು ಉದ್ಘಾಟಿಸಿದೆ. ಸ್ಕೈರೂಟ್ ಭಾರತದ ಒಂದು ಖಾಸಗಿ ಬಾಹ್ಯಾಕಾಶ ಕಂಪನಿಯಾಗಿದೆ. ಈ ಕಂಪನಿಯು ಪ್ರತಿ ತಿಂಗಳು ಒಂದು ರಾಕೆಟ್ ತಯಾರಿಸುವ ಸಾಮರ್ಥ್ಯದ ಮೇಲೆ ಕೆಲಸ ಮಾಡುತ್ತಿದೆ. ಈ ಕಂಪನಿಯು ಹಾರಾಟಕ್ಕೆ ಸಿದ್ಧವಿರುವ 'ವಿಕ್ರಮ್-1' ಅನ್ನು ನಿರ್ಮಿಸುತ್ತಿದೆ. ಸರ್ಕಾರವು ವೇದಿಕೆಯನ್ನು ಒದಗಿಸಿತು, ಮತ್ತು ಭಾರತದ ಯುವಕರು ಅದರ ಮೇಲೆ ಹೊಸ ಭವಿಷ್ಯವನ್ನು ನಿರ್ಮಿಸುತ್ತಿದ್ದಾರೆ. ಇದೇ ನಿಜವಾದ ಪರಿವರ್ತನೆ.

ಸ್ನೇಹಿತರೇ,

ಭಾರತದಲ್ಲಿ ಆಗಿರುವ ಮತ್ತೊಂದು ಬದಲಾವಣೆಯ ಬಗ್ಗೆ ಇಲ್ಲಿ ಚರ್ಚಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಒಂದು ಕಾಲದಲ್ಲಿ ಭಾರತದಲ್ಲಿ ಸುಧಾರಣೆಗಳು 'ಪ್ರತಿಕ್ರಿಯಾತ್ಮಕ'ವಾಗಿದ್ದವು. ಅಂದರೆ, ದೊಡ್ಡ ನಿರ್ಧಾರಗಳ ಹಿಂದೆ ಯಾವುದಾದರೂ ರಾಜಕೀಯ ಹಿತಾಸಕ್ತಿ ಇರುತ್ತಿತ್ತು ಅಥವಾ ಯಾವುದೋ ಬಿಕ್ಕಟ್ಟನ್ನು ನಿಭಾಯಿಸುವ ಅನಿವಾರ್ಯತೆ ಇರುತ್ತಿತ್ತು. ಆದರೆ ಇಂದು, ರಾಷ್ಟ್ರೀಯ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಗದಿತ ಗುರಿಗಳೊಂದಿಗೆ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ. ದೇಶದ ಪ್ರತಿಯೊಂದು ವಲಯದಲ್ಲೂ ಏನಾದರೂ ಒಳ್ಳೆಯದಾಗುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ನಮ್ಮ ವೇಗ ಸ್ಥಿರವಾಗಿದೆ, ನಮ್ಮ ದಿಕ್ಕು ನಿರಂತರವಾಗಿದೆ ಮತ್ತು ನಮ್ಮ ಉದ್ದೇಶ 'ರಾಷ್ಟ್ರವೇ ಮೊದಲು' ಎಂಬುದಾಗಿದೆ. ಇಡೀ 2025ನೇ ವರ್ಷವು ಇಂತಹ ಸುಧಾರಣೆಗಳ ವರ್ಷವಾಗಿದೆ. ಅತ್ಯಂತ ದೊಡ್ಡ ಸುಧಾರಣೆ ಎಂದರೆ ಅದು 'ಮುಂದಿನ ಪೀಳಿಗೆಯ ಜಿ ಎಸ್‌ ಟಿ' (Next Generation GST). ಮತ್ತು ಇಡೀ ದೇಶವು ಈ ಸುಧಾರಣೆಗಳ ಪರಿಣಾಮವನ್ನು ಕಂಡಿದೆ. ಈ ವರ್ಷ, ನೇರ ತೆರಿಗೆ ವ್ಯವಸ್ಥೆಯಲ್ಲಿಯೂ ಒಂದು ದೊಡ್ಡ ಸುಧಾರಣೆಯನ್ನು ಜಾರಿಗೆ ತರಲಾಯಿತು. 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ 'ಶೂನ್ಯ ತೆರಿಗೆ' ವಿಧಿಸಿದ್ದು, ಒಂದು ದಶಕದ ಹಿಂದೆ ಊಹಿಸಲೂ ಅಸಾಧ್ಯವಾದ ಕ್ರಮವಾಗಿತ್ತು.

ಸ್ನೇಹಿತರೇ,

ಈ ಸುಧಾರಣೆಗಳ ಸರಣಿಯನ್ನು ಮುಂದುವರಿಸುತ್ತಾ, ಕೇವಲ ಮೂರು-ನಾಲ್ಕು ದಿನಗಳ ಹಿಂದಷ್ಟೇ 'ಸಣ್ಣ ಕಂಪನಿ'ಯ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ. ಇದರಿಂದಾಗಿ, ಸಾವಿರಾರು ಕಂಪನಿಗಳು ಈಗ ಸರಳ ನಿಯಮಗಳು, ತ್ವರಿತ ಪ್ರಕ್ರಿಯೆಗಳು ಮತ್ತು ಉತ್ತಮ ಸೌಲಭ್ಯಗಳ ವ್ಯಾಪ್ತಿಗೆ ಬಂದಿವೆ. ನಾವು ಸುಮಾರು 200 ಉತ್ಪನ್ನ ವರ್ಗಗಳನ್ನು 'ಕಡ್ಡಾಯ ಗುಣಮಟ್ಟ ನಿಯಂತ್ರಣ ಆದೇಶ'ದಿಂದ (Mandatory Quality Control Orders) ಹೊರಗಿಟ್ಟಿದ್ದೇವೆ.

ಸ್ನೇಹಿತರೇ,

ಇಂದಿನ ಭಾರತದ ಈ ಪಯಣವು ಕೇವಲ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ. ಇದು ಆಲೋಚನೆಯಲ್ಲಿನ ಬದಲಾವಣೆಯ ಪಯಣವೂ ಹೌದು, ಇದೊಂದು 'ಮಾನಸಿಕ ಪುನರುಜ್ಜೀವನ'ದ (Psychological Renaissance) ಪಯಣವೂ ಆಗಿದೆ. ಆತ್ಮವಿಶ್ವಾಸವಿಲ್ಲದೆ ಯಾವ ದೇಶವೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದು ನಿಮಗೂ ತಿಳಿದಿದೆ. ಆದರೆ ದುರದೃಷ್ಟವಶಾತ್, ಭಾರತದ ದೀರ್ಘಕಾಲದ ಗುಲಾಮಗಿರಿಯು ಈ ಆತ್ಮವಿಶ್ವಾಸವನ್ನೇ ಅಲುಗಾಡಿಸಿತ್ತು. ಮತ್ತು ಇದಕ್ಕೆ ಕಾರಣ 'ಗುಲಾಮಗಿರಿಯ ಮನಸ್ಥಿತಿ'. ಈ ಗುಲಾಮಗಿರಿಯ ಮನಸ್ಥಿತಿಯೇ 'ವಿಕಸಿತ ಭಾರತ'ದ ಗುರಿ ಸಾಧನೆಯಲ್ಲಿ ಒಂದು ದೊಡ್ಡ ಅಡೆತಡೆಯಾಗಿದೆ. ಹಾಗಾಗಿ, ಇಂದಿನ ಭಾರತವು ಈ ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತವಾಗಲು ಶ್ರಮಿಸುತ್ತಿದೆ.

ಸ್ನೇಹಿತರೇ,

ಭಾರತವನ್ನು ದೀರ್ಘಕಾಲ ಆಳಬೇಕೆಂದರೆ, ಭಾರತೀಯರ ಆತ್ಮವಿಶ್ವಾಸವನ್ನು ಕಸಿದುಕೊಳ್ಳಬೇಕು ಮತ್ತು ಅವರಲ್ಲಿ ಕೀಳರಿಮೆಯನ್ನು ತುಂಬಬೇಕು ಎಂಬುದು ಬ್ರಿಟಿಷರಿಗೆ ಚೆನ್ನಾಗಿ ತಿಳಿದಿತ್ತು. ಮತ್ತು ಆ ಕಾಲಘಟ್ಟದಲ್ಲಿ ಬ್ರಿಟಿಷರು ಮಾಡಿದ್ದು ಅದನ್ನೇ. ಆದ್ದರಿಂದಲೇ, ಭಾರತೀಯ ಕುಟುಂಬ ವ್ಯವಸ್ಥೆಯನ್ನು 'ಹಳತಾಗಿದೆ' (Outdated) ಎನ್ನಲಾಯಿತು, ಭಾರತೀಯ ಉಡುಪುಗಳನ್ನು 'ವೃತ್ತಿಪರವಲ್ಲದ್ದು' (Unprofessional) ಎಂದು ಘೋಷಿಸಲಾಯಿತು, ಭಾರತೀಯ ಹಬ್ಬಗಳು ಮತ್ತು ಸಂಸ್ಕೃತಿಯನ್ನು 'ತರ್ಕಹೀನ' (Irrational) ಎಂದು ಕರೆಯಲಾಯಿತು, ಯೋಗ ಮತ್ತು ಆಯುರ್ವೇದವನ್ನು 'ಅವೈಜ್ಞಾನಿಕ' (Unscientific) ಎಂದು ಬಿಂಬಿಸಲಾಯಿತು ಹಾಗೂ ಭಾರತೀಯ ಆವಿಷ್ಕಾರಗಳನ್ನು ಗೇಲಿ ಮಾಡಲಾಯಿತು. ಈ ವಿಷಯಗಳನ್ನು ಹಲವು ದಶಕಗಳ ಕಾಲ ನಿರಂತರವಾಗಿ ಪುನರಾವರ್ತಿಸಲಾಯಿತು, ಪೀಳಿಗೆಯಿಂದ ಪೀಳಿಗೆಗೆ ಇದು ಮುಂದುವರೆಯಿತು, ಅದನ್ನೇ ಓದಲಾಯಿತು ಮತ್ತು ಅದನ್ನೇ ಕಲಿಸಲಾಯಿತು. ಹೀಗೆಯೇ, ಭಾರತೀಯರ ಆತ್ಮವಿಶ್ವಾಸವನ್ನು ಛಿದ್ರಗೊಳಿಸಲಾಯಿತು.

ಸ್ನೇಹಿತರೇ,

ಈ ಗುಲಾಮಗಿರಿಯ ಮನಸ್ಥಿತಿಯ ಪ್ರಭಾವವು ಎಷ್ಟು ವ್ಯಾಪಕವಾಗಿತ್ತು ಎಂಬುದಕ್ಕೆ ನಾನು ನಿಮಗೆ ಕೆಲವು ಉದಾಹರಣೆಗಳನ್ನು ನೀಡಲು ಬಯಸುತ್ತೇನೆ. ಇಂದು, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಕೆಲವರು ಭಾರತವನ್ನು 'ಜಾಗತಿಕ ಬೆಳವಣಿಗೆಯ ಎಂಜಿನ್' ಎಂದು ಕರೆದರೆ, ಇನ್ನು ಕೆಲವರು 'ಜಾಗತಿಕ ಶಕ್ತಿಕೇಂದ್ರ' ಎಂದು ಬಣ್ಣಿಸುತ್ತಿದ್ದಾರೆ. ಇಂದು ಅನೇಕ ಅದ್ಭುತ ಸಂಗತಿಗಳು ಕಣ್ಣಮುಂದೆ ನಡೆಯುತ್ತಿವೆ.

ಆದರೆ ಸ್ನೇಹಿತರೇ,

ಇಂದು ಭಾರತ ಅನುಭವಿಸುತ್ತಿರುವ ಈ ತ್ವರಿತಗತಿಯ ಬೆಳವಣಿಗೆಯ ಬಗ್ಗೆ ನೀವೆಲ್ಲಾದರೂ ಓದಿದ್ದೀರಾ? ಅಥವಾ ಎಲ್ಲಾದರೂ ಕೇಳಿದ್ದೀರಾ? ಇಂದು ಯಾರಾದರೂ ಇದನ್ನು 'ಹಿಂದೂ ರೇಟ್ ಆಫ್ ಗ್ರೋತ್' ಎಂದು ಕರೆಯುತ್ತಾರೆಯೇ? ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಅತಿ ವೇಗದ ಬೆಳವಣಿಗೆ... ಆದರೂ ಯಾರಾದರೂ ಆ ಪದವನ್ನು ಬಳಸುತ್ತಿದ್ದಾರೆಯೇ? ಹಾಗಾದರೆ, ಯಾವಾಗ ಇದನ್ನು 'ಹಿಂದೂ ರೇಟ್ ಆಫ್ ಗ್ರೋತ್' ಎಂದು ಕರೆಯಲಾಗುತ್ತಿತ್ತು? ಭಾರತವು ಕೇವಲ ಎರಡು-ಮೂರು ಶೇಕಡಾ ಬೆಳವಣಿಗೆ ದರಕ್ಕಾಗಿ ಪರಿತಪಿಸುತ್ತಿದ್ದ ಕಾಲದಲ್ಲಿ ಆ ಪದವನ್ನು ಬಳಸಲಾಗುತ್ತಿತ್ತು. ನಿಮಗೇನು ಅನ್ನಿಸುತ್ತದೆ? ಒಂದು ದೇಶದ ಆರ್ಥಿಕ ಬೆಳವಣಿಗೆಯನ್ನು ಅಲ್ಲಿ ವಾಸಿಸುವ ಜನರ ನಂಬಿಕೆಯೊಂದಿಗೆ, ಅವರ ಗುರುತಿನೊಂದಿದೆ ತಳುಕು ಹಾಕುವುದು ಕೇವಲ ಆಕಸ್ಮಿಕವಾಗಿ ನಡೆದಿರಬಹುದೇ? ಇಲ್ಲ, ಇದು ಆ ಗುಲಾಮಗಿರಿಯ ಮನಸ್ಥಿತಿಯ ಪ್ರತಿಬಿಂಬವಾಗಿತ್ತು. ಒಂದು ಇಡೀ ಸಮಾಜವನ್ನು, ಇಡೀ ಪರಂಪರೆಯನ್ನು ಅನುತ್ಪಾದಕತೆ  ಮತ್ತು ಬಡತನಕ್ಕೆ ಪರ್ಯಾಯ ಎಂಬಂತೆ ಬಿಂಬಿಸಲಾಯಿತು. ಅಂದರೆ, ಭಾರತದ ನಿಧಾನಗತಿಯ ಬೆಳವಣಿಗೆಗೆ ನಮ್ಮ ಹಿಂದೂ ನಾಗರಿಕತೆ ಮತ್ತು ಹಿಂದೂ ಸಂಸ್ಕೃತಿಯೇ ಕಾರಣ ಎಂದು ಸಾಬೀತುಪಡಿಸಲು ಪ್ರಯತ್ನಿಸಲಾಯಿತು. ಮತ್ತು ವಿಪರ್ಯಾಸ ನೋಡಿ... ಎಲ್ಲದರಲ್ಲೂ ಕೋಮುವಾದವನ್ನು ಹುಡುಕುವ, ಇಂದು ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರಿಗೆ , ಅಂದು 'ಹಿಂದೂ ರೇಟ್ ಆಫ್ ಗ್ರೋತ್' ನಲ್ಲಿ ಕೋಮುವಾದ ಕಾಣಿಸಲೇ ಇಲ್ಲ. ಅವರ ಕಾಲದಲ್ಲಿ ಈ ಪದವನ್ನು ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಸೇರಿಸಲಾಗಿತ್ತು.

ಸ್ನೇಹಿತರೇ,

ಆ ದಾಸ್ಯದ ಮನಸ್ಥಿತಿಯು ಭಾರತದ ಉತ್ಪಾದನಾ ವ್ಯವಸ್ಥೆಯನ್ನು ಹೇಗೆ ಧ್ವಂಸಗೈಯಿತು ಮತ್ತು ನಾವದನ್ನು ಹೇಗೆ ಮತ್ತೆ ಪುನರುಜ್ಜೀವನಗೊಳಿಸುತ್ತಿದ್ದೇವೆ ಎನ್ನುವುದಕ್ಕೆ ನಾನಿಲ್ಲಿ ಕೆಲವು ಉದಾಹರಣೆಗಳನ್ನು ನೀಡಬಯಸುತ್ತೇನೆ. ಗುಲಾಮಗಿರಿಯ ಕಾಲಘಟ್ಟದಲ್ಲೂ ಭಾರತವು ಪ್ರಮುಖ ಶಸ್ತ್ರಾಸ್ತ್ರ ಉತ್ಪಾದಕ ರಾಷ್ಟ್ರವಾಗಿತ್ತು. ನಮ್ಮಲ್ಲಿ ಆಯುಧ ಕಾರ್ಖಾನೆಗಳ  ಬಲವಾದ ಜಾಲವಿತ್ತು. ಇಲ್ಲಿಂದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗುತ್ತಿತ್ತು. ಎಷ್ಟರಮಟ್ಟಿಗೆಂದರೆ, ವಿಶ್ವ ಯುದ್ಧಗಳ ಸಮಯದಲ್ಲೂ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳೇ ಪ್ರಮುಖವಾಗಿದ್ದವು. ಆದರೆ ಸ್ವಾತಂತ್ರ್ಯದ ನಂತರ, ನಮ್ಮ ರಕ್ಷಣಾ ಉತ್ಪಾದನಾ ವ್ಯವಸ್ಥೆಯನ್ನೇ ನಾಶಮಾಡಲಾಯಿತು. ಆ ದಾಸ್ಯದ ಮನಸ್ಥಿತಿ ಎಷ್ಟೊಂದು ಪ್ರಬಲವಾಯಿತೆಂದರೆ, ಸ್ವತಃ ಸರ್ಕಾರದಲ್ಲಿದ್ದವರೇ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಕೀಳಾಗಿ ಕಾಣತೊಡಗಿದರು. ಇದೇ ಮನಸ್ಥಿತಿಯು ಅಂತಿಮವಾಗಿ ಭಾರತವನ್ನು ವಿಶ್ವದ ಅತಿದೊಡ್ಡ ರಕ್ಷಣಾ ಆಮದುದಾರ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿತು.

ಸ್ನೇಹಿತರೇ,

ಇದೇ ದಾಸ್ಯದ ಮನಸ್ಥಿತಿಯು ನಮ್ಮ ಹಡಗು ನಿರ್ಮಾಣ ಉದ್ಯಮಕ್ಕೂ ಅದೇ ಗತಿಯನ್ನು ತಂದೊಡ್ಡಿತು. ಶತಮಾನಗಳಿಂದಲೂ ಭಾರತವು ಹಡಗು ನಿರ್ಮಾಣದ ಪ್ರಮುಖ ಕೇಂದ್ರವಾಗಿತ್ತು. ಐದಾರು ದಶಕಗಳ ಹಿಂದೆಯೂ, ಅಂದರೆ 50-60 ವರ್ಷಗಳ ಹಿಂದೆಯೂ ಸಹ, ಭಾರತದ ಶೇಕಡಾ 40 ರಷ್ಟು ವ್ಯಾಪಾರ-ವಹಿವಾಟು ನಮ್ಮದೇ ಆದ ಭಾರತೀಯ ಹಡಗುಗಳ ಮೂಲಕ ನಡೆಯುತ್ತಿತ್ತು. ಆದರೆ ಆ ದಾಸ್ಯದ ಮನಸ್ಥಿತಿಯು ವಿದೇಶಿ ಹಡಗುಗಳಿಗೆ ಆದ್ಯತೆ ನೀಡಲು ಪ್ರಾರಂಭಿಸಿತು. ಅದರ ಫಲಿತಾಂಶ ಇಂದು ಎಲ್ಲರ ಕಣ್ಣ ಮುಂದಿದೆ. ಒಂದು ಕಾಲದಲ್ಲಿ ತನ್ನ 'ಕಡಲ ಶಕ್ತಿ'ಗೆ ಹೆಸರಾಗಿದ್ದ ರಾಷ್ಟ್ರವು, ಇಂದು ತನ್ನ ಶೇಕಡಾ 95 ರಷ್ಟು ವ್ಯಾಪಾರಕ್ಕಾಗಿ ವಿದೇಶಿ ಹಡಗುಗಳನ್ನೇ ಅವಲಂಬಿಸುವಂತಾಗಿದೆ. ಇದರ ಪರಿಣಾಮವಾಗಿ, ಇಂದು ಭಾರತವು ವಿದೇಶಿ ಶಿಪ್ಪಿಂಗ್ ಕಂಪನಿಗಳಿಗೆ ಪ್ರತಿ ವರ್ಷ ಸರಿಸುಮಾರು 75 ಬಿಲಿಯನ್ ಡಾಲರ್, ಅಂದರೆ ಸುಮಾರು 6 ಲಕ್ಷ ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.

ಸ್ನೇಹಿತರೇ,

ಹಡಗು ನಿರ್ಮಾಣವೇ ಆಗಿರಲಿ ಅಥವಾ ರಕ್ಷಣಾ ಉತ್ಪಾದನೆಯೇ ಆಗಿರಲಿ, ಇಂದು ಪ್ರತಿಯೊಂದು ವಲಯದಲ್ಲೂ ಆ ದಾಸ್ಯದ ಮನಸ್ಥಿತಿಯನ್ನು ಹಿಂದೆ ಬಿಟ್ಟು, ಹೊಸ ವೈಭವವನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ.

ಸ್ನೇಹಿತರೇ,

ಭಾರತದ ಆಡಳಿತ ವ್ಯವಸ್ಥೆಯ ಮೇಲೂ ಈ ದಾಸ್ಯದ ಮನಸ್ಥಿತಿಯು ಗಂಭೀರ ಹಾನಿಯನ್ನುಂಟುಮಾಡಿದೆ. ದೀರ್ಘಕಾಲದವರೆಗೆ ನಮ್ಮ ಸರ್ಕಾರಿ ವ್ಯವಸ್ಥೆಯು ತನ್ನದೇ ನಾಗರಿಕರನ್ನು ಅಪನಂಬಿಕೆಯಿಂದ ನೋಡುತ್ತಿತ್ತು. ನಿಮಗೆ ನೆನಪಿರಬಹುದು, ಹಿಂದೆ ನಮ್ಮದೇ ದಾಖಲೆಗಳನ್ನು ದೃಢೀಕರಿಸಲು  ಸರ್ಕಾರಿ ಅಧಿಕಾರಿಯ ಹತ್ತಿರ ಹೋಗಬೇಕಿತ್ತು. ಅವರು ಮೊಹರು ಹಾಕದಿದ್ದರೆ, ಉಳಿದೆಲ್ಲವೂ ಸುಳ್ಳು ಎಂಬ ಭಾವನೆ ಇತ್ತು. ಅದು ನಿಮ್ಮ ಕಠಿಣ ಪರಿಶ್ರಮದ ಪ್ರಮಾಣಪತ್ರವೇ ಆಗಿರಬಹುದು. ನಾವು ಈ ಅಪನಂಬಿಕೆಯನ್ನು ಮುರಿದು ಹಾಕಿದೆವು ಮತ್ತು 'ಸ್ವಯಂ ದೃಢೀಕರಣ'ವೇ ಸಾಕು ಎಂಬ ನಿರ್ಧಾರವನ್ನು ಕೈಗೊಂಡೆವು. ನನ್ನ ದೇಶದ ನಾಗರಿಕರು 'ಸಹೋದರ, ನಾನು ಹೇಳುತ್ತಿರುವುದು ಇದನ್ನೇ' ಎಂದು ಹೇಳಿದರೆ, ನಾನು ಅವರನ್ನು ನಂಬುತ್ತೇನೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಎಂತಹ ಕಾನೂನುಗಳಿದ್ದವು ಎಂದರೆ, ಸಣ್ಣಪುಟ್ಟ ತಪ್ಪುಗಳನ್ನು ಸಹ ಗಂಭೀರ ಅಪರಾಧಗಳೆಂದು ಪರಿಗಣಿಸಲಾಗುತ್ತಿತ್ತು. ನಾವು 'ಜನ್ ವಿಶ್ವಾಸ್ ಕಾಯ್ದೆ'ಯನ್ನು ಜಾರಿಗೆ ತಂದೆವು ಮತ್ತು ಅಂತಹ ನೂರಾರು ನಿಯಮಗಳನ್ನು ಅಪರಾಧಮುಕ್ತಗೊಳಿಸಿದೆವು. 

ಸ್ನೇಹಿತರೇ,

ಹಿಂದೆ ಬ್ಯಾಂಕಿನಿಂದ ಒಂದು ಸಾವಿರ ರೂಪಾಯಿ ಸಾಲ ಬೇಕಿದ್ದರೂ, ಬ್ಯಾಂಕಿನವರು ಗ್ಯಾರಂಟಿ (ಭದ್ರತೆ) ಕೇಳುತ್ತಿದ್ದರು. ಇದಕ್ಕೆ ಕಾರಣ ವ್ಯವಸ್ಥೆಯಲ್ಲಿದ್ದ ಅತಿಯಾದ ಅಪನಂಬಿಕೆ. ಅಪನಂಬಿಕೆಯ ಈ ವಿಷವರ್ತುಲವನ್ನು ನಾವು 'ಮುದ್ರಾ ಯೋಜನೆ'ಯ ಮೂಲಕ ಭೇದಿಸಿದೆವು. ಈ ಯೋಜನೆಯಡಿ, ನಾವು ಈಗಾಗಲೇ ನಮ್ಮ ದೇಶವಾಸಿಗಳಿಗೆ 37 ಲಕ್ಷ ಕೋಟಿ ರೂಪಾಯಿಗಳಷ್ಟು ಭದ್ರತಾ ರಹಿತ ಸಾಲವನ್ನು ಒದಗಿಸಿದ್ದೇವೆ. ಈ ಹಣವು ಆ ಕುಟುಂಬಗಳ ಯುವಕರಲ್ಲಿ ಉದ್ಯಮಿಗಳಾಗುವ ಆತ್ಮವಿಶ್ವಾಸವನ್ನು ತುಂಬಿದೆ. ಇಂದು ಬೀದಿ ಬದಿಯ ವ್ಯಾಪಾರಿಗಳಿಗೆ ಮತ್ತು ಕೈಗಾಡಿ ನಡೆಸುವವರಿಗೂ ಸಹ ಬ್ಯಾಂಕುಗಳಿಂದ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ನೀಡಲಾಗುತ್ತಿದೆ. 

ಸ್ನೇಹಿತರೇ,

ನಮ್ಮ ದೇಶದಲ್ಲಿ ಒಂದು ಬಲವಾದ ನಂಬಿಕೆ ಇತ್ತು - ಸರ್ಕಾರಕ್ಕೆ ಏನನ್ನಾದರೂ ಕೊಟ್ಟರೆ, ಅದು 'ಏಕಮುಖ ಸಂಚಾರ' (One-way traffic) ಇದ್ದಂತೆ. ಒಮ್ಮೆ ಕೊಟ್ಟರೆ ಮುಗಿಯಿತು, ಅದು ಎಂದಿಗೂ ವಾಪಸ್ ಬರುವುದಿಲ್ಲ; ಹೋಯಿತು ಅಂದ್ರೆ ಹೋಯಿತು! ಇದು ಪ್ರತಿಯೊಬ್ಬರ ಅನುಭವವೂ ಆಗಿತ್ತು. ಆದರೆ, ಯಾವಾಗ ಸರ್ಕಾರ ಮತ್ತು ಜನರ ನಡುವಿನ ವಿಶ್ವಾಸ ದೃಢವಾಗುತ್ತದೆಯೋ, ಆಗ ಕೆಲಸಗಳು ಹೇಗೆ ನಡೆಯುತ್ತವೆ ನೋಡಿ... ನೀವು ನಾಳೆ ಏನಾದರೂ ಒಳಿತನ್ನು ಬಯಸುವುದಾದರೆ, ಇಂದೇ ಒಳ್ಳೆಯದನ್ನು ಮಾಡಲು ಮನಸ್ಸು ಮಾಡಬೇಕು (ಸಂಕಲ್ಪ ಮಾಡಬೇಕು). ಮನಸ್ಸು ಶುದ್ಧವಾಗಿದ್ದರೆ, ಭವಿಷ್ಯವೂ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ನಾವು ಮತ್ತೊಂದು ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇವೆ. ಇದರ ಬಗ್ಗೆ ಕೇಳಿದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಇಲ್ಲಿಯವರೆಗೂ ಪತ್ರಿಕೆಗಳಾಗಲಿ ಅಥವಾ ಮಾಧ್ಯಮದವರಾಗಲಿ ಇದನ್ನು ಗಮನಿಸಿಲ್ಲ. ಅವರು ಇದನ್ನು ಗಮನಿಸುತ್ತಾರೋ ಇಲ್ಲವೋ ನಾನರಿಯೆ, ಆದರೆ ಇಂದಿನ ನಂತರ ಬಹುಶಃ ಅವರು ಇದನ್ನು ಗಮನಿಸಬಹುದು.

ನಿಮಗೆ ಇದು ತಿಳಿದರೆ ಆಶ್ಚರ್ಯವಾಗಬಹುದು, ಇಂದು ದೇಶದ ಬ್ಯಾಂಕುಗಳಲ್ಲಿ ನಮ್ಮದೇ ನಾಗರಿಕರ 78 ಸಾವಿರ ಕೋಟಿ ರೂಪಾಯಿಗಳು ಯಾವುದೇ ವಾರಸುದಾರರಿಲ್ಲದೆ ಬಿದ್ದಿವೆ. ಅದು ಯಾರಿಗೆ ಸೇರಿದ್ದು, ಅದರ ಮಾಲೀಕರು ಯಾರು, ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಹಣದ ಬಗ್ಗೆ ವಿಚಾರಿಸುವವರೇ ಯಾರೂ ಇಲ್ಲ. ಅದೇ ರೀತಿ, ವಿಮಾ ಕಂಪನಿಗಳ ಬಳಿ ಸುಮಾರು 14 ಸಾವಿರ ಕೋಟಿ ರೂಪಾಯಿಗಳಿವೆ. ಮ್ಯೂಚುವಲ್ ಫಂಡ್ ಕಂಪನಿಗಳ ಬಳಿ ಸುಮಾರು 3 ಸಾವಿರ ಕೋಟಿ ರೂ. ಹಾಗೂ ಡಿವಿಡೆಂಡ್ (ಲಾಭಾಂಶ) ರೂಪದಲ್ಲಿ 9 ಸಾವಿರ ಕೋಟಿ ರೂಪಾಯಿಗಳು ಬಿದ್ದಿವೆ. ಇವೆಲ್ಲವೂ ಅನಾಥವಾಗಿ ಬಿದ್ದಿವೆ, ಇದಕ್ಕ್ಯಾರೂ ದಿಕ್ಕಿಲ್ಲ. ಈ ಹಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ್ದಾಗಿದೆ. ಬಹುಶಃ ಅವರು ಅದನ್ನು ಮರೆತುಬಿಟ್ಟಿರಬಹುದು. ಈಗ ನಮ್ಮ ಸರ್ಕಾರ ಅವರನ್ನು ದೇಶಾದ್ಯಂತ ಹುಡುಕುತ್ತಿದೆ. "ಸಹೋದರ, ಹೇಳಿ... ಈ ಹಣ ನಿಮ್ಮದಲ್ಲವೇ? ನಿಮ್ಮ ತಂದೆ-ತಾಯಿಗಳದ್ದಲ್ಲವೇ? ಯಾರಾದರೂ ಇದನ್ನು ಬಿಟ್ಟು ಹೋಗಿಲ್ಲವೇ?" ಎಂದು ನಾವೇ ಹುಡುಕಿಕೊಂಡು ಹೋಗುತ್ತಿದ್ದೇವೆ. ನಮ್ಮ ಸರ್ಕಾರವು ಈ ಹಣದ ನಿಜವಾದ ಮಾಲೀಕರನ್ನು ತಲುಪುವಲ್ಲಿ ನಿರತವಾಗಿದೆ. ಇದಕ್ಕಾಗಿ ಸರ್ಕಾರವು ವಿಶೇಷ ಶಿಬಿರಗಳನ್ನು ಆಯೋಜಿಸಲು ಪ್ರಾರಂಭಿಸಿದೆ. ಜನರಿಗೆ ತಿಳಿಹೇಳುತ್ತಿದ್ದೇವೆ - "ನೋಡಪ್ಪ, ನಿಮ್ಮವರಾರಾದರೂ ಇದ್ದಾರೆಯೇ? ನಿಮ್ಮ ಹಣ ಎಲ್ಲಾದರೂ ಬಾಕಿ ಉಳಿದಿದೆಯೇ? ಎಂದು ಪರಿಶೀಲಿಸಿ." ಇದುವರೆಗೆ ಸುಮಾರು 500 ಜಿಲ್ಲೆಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುವ ಮೂಲಕ, ನಾವು ಸಾವಿರಾರು ಕೋಟಿ ರೂಪಾಯಿಗಳನ್ನು ಅದರ ನಿಜವಾದ ಹಕ್ಕುದಾರರಿಗೆ ತಲುಪಿಸಿದ್ದೇವೆ. ಆ ಹಣ ಅಲ್ಲಿಯೇ ಬಿದ್ದಿತ್ತು, ಕೇಳುವವರಿರಲಿಲ್ಲ. ಆದರೆ ಇದು ಮೋದಿ... ಅವನು ಹುಡುಕುತ್ತಿದ್ದಾನೆ - "ಸ್ನೇಹಿತರೇ, ಇದು ನಿಮ್ಮದು, ಇದನ್ನು ತೆಗೆದುಕೊಳ್ಳಿ" ಎಂದು ತಲುಪಿಸುತ್ತಿದ್ದಾನೆ.

ಸ್ನೇಹಿತರೇ,

ಇದು ಕೇವಲ ಆಸ್ತಿಯನ್ನು ಹಿಂದಿರುಗಿಸುವ ವಿಷಯವಲ್ಲ, ಇದು ನಂಬಿಕೆಯ ವಿಷಯವಾಗಿದೆ. ಜನರ ನಂಬಿಕೆಯನ್ನು ನಿರಂತರವಾಗಿ ಗಳಿಸುವ ಬದ್ಧತೆ ಇದಾಗಿದೆ ಮತ್ತು ಜನರ ವಿಶ್ವಾಸವೇ ನಮ್ಮ ಅತಿದೊಡ್ಡ ಆಸ್ತಿಯಾಗಿದೆ. ಒಂದು ವೇಳೆ ಗುಲಾಮಗಿರಿಯ ಮನಸ್ಥಿತಿ ಇದ್ದಿದ್ದರೆ, ಸರ್ಕಾರವು 'ಸಾಹೇಬರಂತೆ' (ಒಡೆಯರಂತೆ) ವರ್ತಿಸುತ್ತಿತ್ತು ಮತ್ತು ಇಂತಹ ಅಭಿಯಾನಗಳು ಎಂದಿಗೂ ನಡೆಯುತ್ತಿರಲಿಲ್ಲ.

ಸ್ನೇಹಿತರೇ,

ನಾವು ನಮ್ಮ ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಗುಲಾಮಗಿರಿಯ ಮನಸ್ಥಿತಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕಿದೆ. ಕೆಲವೇ ದಿನಗಳ ಹಿಂದೆ, ನಾನು ರಾಷ್ಟ್ರಕ್ಕೆ ಒಂದು ಮನವಿ ಮಾಡಿದ್ದೆ. ಮುಂದಿನ 10 ವರ್ಷಗಳ ಕಾಲಮಿತಿಯನ್ನು ಇಟ್ಟುಕೊಂಡು, ನನ್ನ ದೇಶವಾಸಿಗಳಲ್ಲಿ ನಾನು ಪ್ರೀತಿಯಿಂದ ವಿನಂತಿಸುತ್ತಿದ್ದೇನೆ; ನನ್ನೊಂದಿಗೆ ಏನಾದರೂ ಮಾಡಿ, ನನ್ನ ಮಾತುಗಳನ್ನು ಕೇಳಿ ಎಂದು ನಾನು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. 140 ಕೋಟಿ ದೇಶವಾಸಿಗಳ ಸಹಾಯವಿಲ್ಲದೆ ನಾನು ಇದನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ದೇಶವಾಸಿಗಳಲ್ಲಿ ಪದೇ ಪದೇ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ... ಮತ್ತು ಈ 10 ವರ್ಷಗಳ ಕಾಲಾವಧಿಯಲ್ಲಿ ನಾನೇನು ಕೇಳುತ್ತಿದ್ದೇನೆ ಗೊತ್ತೇ? ಭಾರತದಲ್ಲಿ ಮಾನಸಿಕ ಗುಲಾಮಗಿರಿಯ ಬೀಜ ಬಿತ್ತಿದ ಮೆಕಾಲೆ ನೀತಿಗೆ (Macaulay’s policy) 2035 ರಲ್ಲಿ 200 ವರ್ಷ ತುಂಬಲಿದೆ. ಅಂದರೆ ಇನ್ನು 10 ವರ್ಷಗಳು ಬಾಕಿ ಉಳಿದಿವೆ. ಆದ್ದರಿಂದ, ಈ ಹತ್ತು ವರ್ಷಗಳಲ್ಲಿ, ನಾವೆಲ್ಲರೂ ಒಗ್ಗೂಡಿ ನಮ್ಮ ದೇಶವನ್ನು ಆ ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸಲು ಶ್ರಮಿಸಬೇಕು.

ಸ್ನೇಹಿತರೇ,

ನಾನು ಆಗಾಗ್ಗೆ ಹೇಳುತ್ತಿರುತ್ತೇನೆ, ನಾವು ಯಾರೂ ತುಳಿದ ಹಾದಿಯಲ್ಲೇ ಅಥವಾ ಸವಕಲು ಹಾದಿಯಲ್ಲೇ ಸಾಗುವವರಲ್ಲ. ಉತ್ತಮ ನಾಳೆಗಾಗಿ, ನಾವು ನಮ್ಮ ದಿಗಂತವನ್ನು ವಿಸ್ತರಿಸಿಕೊಳ್ಳಬೇಕು. ನಾವು ದೇಶದ ಭವಿಷ್ಯದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವರ್ತಮಾನದಲ್ಲೇ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಈ ದಿನಗಳಲ್ಲಿ ನಾನು ನಿರಂತರವಾಗಿ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ ಅಭಿಯಾನ'ದ ಬಗ್ಗೆ ಚರ್ಚಿಸುವುದನ್ನು ನೀವು ನೋಡುತ್ತೀರಿ. ಶೋಭನಾ ಜೀ ಅವರು ಕೂಡ ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದರು. ಇಂತಹ ಅಭಿಯಾನಗಳು 4-5 ದಶಕಗಳ ಹಿಂದೆಯೇ ಪ್ರಾರಂಭವಾಗಿದ್ದರೆ, ಇಂದಿನ ಭಾರತದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಆದರೆ ಅಂದು ಅಧಿಕಾರದಲ್ಲಿದ್ದ ಸರ್ಕಾರಗಳ ಆದ್ಯತೆಗಳೇ ಬೇರೆಯಾಗಿದ್ದವು. ಸೆಮಿಕಂಡಕ್ಟರ್ ಕಥೆ ನಿಮಗೂ ಗೊತ್ತಿದೆ. ಸುಮಾರು 50-60 ವರ್ಷಗಳ ಹಿಂದೆ, ಅಂದರೆ ಐದಾರು ದಶಕಗಳ ಹಿಂದೆ, ಕಂಪನಿಯೊಂದು ಭಾರತದಲ್ಲಿ ಸೆಮಿಕಂಡಕ್ಟರ್ ಸ್ಥಾವರವನ್ನು ಸ್ಥಾಪಿಸಲು ಮುಂದೆ ಬಂದಿತ್ತು. ಆದರೆ ಅದನ್ನು ಕಡೆಗಣಿಸಲಾಯಿತು. ಪರಿಣಾಮವಾಗಿ, ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ದೇಶವು ತುಂಬಾ ಹಿಂದೆ ಬಿತ್ತು.

ಸ್ನೇಹಿತರೇ,

ಇಂಧನ ವಲಯದ ಕಥೆಯೂ ಇದೇ ಆಗಿದೆ. ಇಂದು, ಭಾರತವು ಪ್ರತಿ ವರ್ಷ ಸರಿಸುಮಾರು 125 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಅನ್ನು ಆಮದು ಮಾಡಿಕೊಳ್ಳುತ್ತಿದೆ... ಹೌದು, 125 ಲಕ್ಷ ಕೋಟಿ ರೂಪಾಯಿ! ನಮ್ಮ ದೇಶದ ಮೇಲೆ ಸೂರ್ಯ ದೇವರ ದೊಡ್ಡ ಆಶೀರ್ವಾದವಿದೆ. ಆದರೂ 2014 ರವರೆಗೆ, ಭಾರತದಲ್ಲಿ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವು ಕೇವಲ 3 ಗಿಗಾವ್ಯಾಟ್ ಆಗಿತ್ತು. ನಾನು 2014ರ ಬಗ್ಗೆ ಮಾತನಾಡುತ್ತಿದ್ದೇನೆ, ಅಂದರೆ ನೀವು ನನ್ನನ್ನು ಇಲ್ಲಿಗೆ (ಅಧಿಕಾರಕ್ಕೆ) ಕರೆತರುವವರೆಗೆ. ಕೇವಲ 3 ಗಿಗಾವ್ಯಾಟ್... ಆದರೆ ಕಳೆದ 10 ವರ್ಷಗಳಲ್ಲಿ, ಅದು ಈಗ ಸುಮಾರು 130 ಗಿಗಾವ್ಯಾಟ್‌ ಗಳಿಗೆ ಏರಿಕೆಯಾಗಿದೆ. ಮತ್ತು ಅದರಲ್ಲಿ, ಭಾರತವು ಕೇವಲ 'ರೂಫ್‌ ಟಾಪ್ ಸೋಲಾರ್' (Rooftop Solar) ಮೂಲಕವೇ 22 ಗಿಗಾವ್ಯಾಟ್ ಸಾಮರ್ಥ್ಯವನ್ನು ಸೇರ್ಪಡೆ ಮಾಡಿದೆ. ಹೌದು, ರೂಫ್‌ಟಾಪ್ ಸೋಲಾರ್‌ನಿಂದಲೇ 22 ಗಿಗಾವ್ಯಾಟ್ ಇಂಧನ!

ಸ್ನೇಹಿತರೇ,

'ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ'ಯು ದೇಶದ ಜನರಿಗೆ ಇಂಧನ ಭದ್ರತೆಯ ಈ ಅಭಿಯಾನದಲ್ಲಿ ನೇರವಾಗಿ ಭಾಗವಹಿಸಲು ಒಂದು ಅದ್ಭುತ ಅವಕಾಶವನ್ನು ನೀಡಿದೆ. ನಾನು ಕಾಶಿಯ ಸಂಸದ. ಪ್ರಧಾನಮಂತ್ರಿಯಾಗಿ ನನಗೆ ನನ್ನದೇ ಆದ ಕೆಲಸಗಳಿವೆ, ಆದರೆ ಸಂಸದನಾಗಿಯೂ ನನಗೆ ಕೆಲವು ಜವಾಬ್ದಾರಿಗಳಿವೆ. ಕಾಶಿಯ ಸಂಸದನಾಗಿ ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನಿಮ್ಮ ಹಿಂದಿ ಪತ್ರಿಕೆ  ಬಹಳ ಶಕ್ತಿಶಾಲಿಯಾಗಿದೆ, ಹಾಗಾಗಿ ಈ ಮಾಹಿತಿ ಖಂಡಿತವಾಗಿಯೂ ಉಪಯೋಗಕ್ಕೆ ಬರುತ್ತದೆ. ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಕಾಶಿಯೊಂದರಲ್ಲೇ 26 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಮತ್ತು ಜನರು ಪ್ರತಿ ತಿಂಗಳು ಸುಮಾರು 5 ಕೋಟಿ ರೂಪಾಯಿ ಉಳಿಸುತ್ತಿದ್ದಾರೆ. ಅಂದರೆ ವರ್ಷಕ್ಕೆ ಬರೋಬ್ಬರಿ ಅರವತ್ತು ಕೋಟಿ ರೂಪಾಯಿ!

ಸ್ನೇಹಿತರೇ,

ಇಷ್ಟೊಂದು ಪ್ರಮಾಣದ ಸೌರಶಕ್ತಿ ಉತ್ಪಾದನೆಯಿಂದಾಗಿ, ಪ್ರತಿ ವರ್ಷ ಸರಿಸುಮಾರು 90 ಸಾವಿರ ಮೆಟ್ರಿಕ್ ಟನ್ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತಿದೆ. ಇಷ್ಟು ಪ್ರಮಾಣದ ಇಂಗಾಲದ ಹೊರಸೂಸುವಿಕೆಯನ್ನು ಹೀರಿಕೊಳ್ಳಲು, ನಾವು ಸಾಂಪ್ರದಾಯಿಕವಾಗಿ 40 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಬೇಕಾಗುತ್ತದೆ. ಮತ್ತು ನಾನು ಮತ್ತೊಮ್ಮೆ ಹೇಳುತ್ತೇನೆ, ನಾನು ನೀಡಿದ ಈ ಅಂಕಿಅಂಶಗಳು ಕೇವಲ ಕಾಶಿ ಮತ್ತು ಬನಾರಸ್‌ ಗೆ ಮಾತ್ರ ಸೀಮಿತ; ನಾನು ಇಡೀ ದೇಶದ ಬಗ್ಗೆ ಮಾತನಾಡುತ್ತಿಲ್ಲ. ಹಾಗಾದರೆ, ಈ 'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ'ಯು ಇಡೀ ದೇಶಕ್ಕೆ ಎಷ್ಟು ದೊಡ್ಡ ಲಾಭವನ್ನು ನೀಡುತ್ತಿದೆ ಎಂಬುದನ್ನು ನೀವೇ ಊಹಿಸಬಹುದು. ಇಂದಿನ ಒಂದು ಯೋಜನೆಯು ಭವಿಷ್ಯವನ್ನು ಬದಲಾಯಿಸುವ ಎಷ್ಟು ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಅಂದಹಾಗೆ ಸ್ನೇಹಿತರೇ,

ನೀವು ಮೊಬೈಲ್ ಉತ್ಪಾದನೆಯ ಅಂಕಿಅಂಶಗಳನ್ನು ನೋಡಿರಬಹುದು. 2014ಕ್ಕಿಂತ ಮೊದಲು, ನಾವು ನಮ್ಮ ಶೇಕಡಾ 75ರಷ್ಟು ಮೊಬೈಲ್ ಫೋನ್‌ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು... ಹೌದು, ಶೇಕಡಾ 75ರಷ್ಟು! ಮತ್ತು ಈಗ, ಭಾರತದ ಮೊಬೈಲ್ ಫೋನ್ ಆಮದು ಬಹುತೇಕ ಶೂನ್ಯಕ್ಕೆ ಇಳಿದಿದೆ. ಬದಲಿಗೆ, ನಾವೀಗ ಪ್ರಮುಖ ಮೊಬೈಲ್ ಫೋನ್ ರಫ್ತುದಾರರಾಗುತ್ತಿದ್ದೇವೆ. 2014 ರ ನಂತರ, ನಾವು ಸುಧಾರಣೆಯನ್ನು ತಂದೆವು, ದೇಶವು ಸಾಧನೆ  ಮಾಡಿತು ಮತ್ತು ಜಗತ್ತು ಇಂದು ಅದರ ಪರಿವರ್ತನಾತ್ಮಕ  ಫಲಿತಾಂಶಗಳನ್ನು ಕಣ್ಣಾರೆ ನೋಡುತ್ತಿದೆ.

ಸ್ನೇಹಿತರೇ,

'ಭವಿಷ್ಯದ ಪರಿವರ್ತನೆ'ಯ ಈ ಪಯಣವು ಅಂತಹ ಅನೇಕ ಯೋಜನೆಗಳು, ಅನೇಕ ನೀತಿಗಳು, ಅನೇಕ ನಿರ್ಧಾರಗಳು, ಜನರ ಆಕಾಂಕ್ಷೆಗಳು ಮತ್ತು ಜನರ ಪಾಲ್ಗೊಳ್ಳುವಿಕೆಯ ಪಯಣವಾಗಿದೆ. ಇದೊಂದು ನಿರಂತರತೆಯ ಪಯಣ. ಇದು ಕೇವಲ ಒಂದು ಶೃಂಗಸಭೆಯ ಚರ್ಚೆಗೆ ಸೀಮಿತವಾದುದಲ್ಲ; ಭಾರತಕ್ಕೆ ಇದೊಂದು 'ರಾಷ್ಟ್ರದ ಸಂಕಲ್ಪ'ವಾಗಿದೆ. ಈ ಸಂಕಲ್ಪದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ, ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಸಾಮೂಹಿಕ ಪ್ರಯತ್ನಗಳು ಖಂಡಿತವಾಗಿಯೂ ಬದಲಾವಣೆಯ ಈ ಎತ್ತರವನ್ನು ತಲುಪಲು ನಮಗೆ ಅವಕಾಶ ನೀಡುತ್ತವೆ.

ಸ್ನೇಹಿತರೇ,

ಮತ್ತೊಮ್ಮೆ, ನಿಮ್ಮೊಂದಿಗೆ ಇರುವ ಅವಕಾಶ ನೀಡಿದ್ದಕ್ಕಾಗಿ ಮತ್ತು ನಾನು ಆಗಾಗ್ಗೆ ನೀಡುವ ಸಲಹೆಗಳನ್ನು ಈಡೇರಿಸಿದ್ದಕ್ಕಾಗಿ ಶೋಭನಾ ಜೀ ಮತ್ತು ಹಿಂದೂಸ್ತಾನ್ ಟೈಮ್ಸ್‌ ಗೆ ನಾನು ಚಿರಋಣಿಯಾಗಿದ್ದೇನೆ. ಇದು ಬಹುಶಃ ದೇಶದ ಛಾಯಾಗ್ರಾಹಕರಿಗೆ ಒಂದು ಹೊಸ ಶಕ್ತಿಯಾಗಲಿದೆ ಎಂದು ನಾನು ನಂಬುತ್ತೇನೆ. ಭವಿಷ್ಯಕ್ಕಾಗಿ ನೀವು ಇಂತಹ ಅನೇಕ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯೋಚಿಸಬಹುದು. ನಿಮಗೆ ನನ್ನ ಸಹಾಯ ಬೇಕಿದ್ದರೆ ದಯವಿಟ್ಟು ತಿಳಿಸಿ, ಐಡಿಯಾ ಕೊಡುವುದಕ್ಕೆ ನಾನು ಯಾವುದೇ ರಾಯಲ್ಟಿ (ಶುಲ್ಕ) ತೆಗೆದುಕೊಳ್ಳುವುದಿಲ್ಲ! ಇದೊಂದು ಉಚಿತ ವ್ಯವಹಾರ, ಮತ್ತು ಇದೊಂದು ಮಾರ್ವಾಡಿ ಕುಟುಂಬ, ಹಾಗಾಗಿ ಅವರು ಈ ಅವಕಾಶವನ್ನು ಖಂಡಿತವಾಗಿಯೂ ಕಳೆದುಕೊಳ್ಳುವುದಿಲ್ಲ! ನಿಮ್ಮೆಲ್ಲರಿಗೂ ಧನ್ಯವಾದಗಳು. ನಮಸ್ಕಾರ.

 

*****


(रिलीज़ आईडी: 2200223) आगंतुक पटल : 5
इस विज्ञप्ति को इन भाषाओं में पढ़ें: Bengali , Bengali-TR , English , Urdu , Marathi , हिन्दी , Assamese , Manipuri , Punjabi , Gujarati , Odia , Telugu