ಪ್ರಧಾನ ಮಂತ್ರಿಯವರ ಕಛೇರಿ
ಭೂತಾನ್ ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಶತಮಾನಗಳಿಂದಲೂ, ಭಾರತ ಮತ್ತು ಭೂತಾನ್ ಅತ್ಯಂತ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹಂಚಿಕೊಂಡಿವೆ, ಮತ್ತು ಹಾಗಾಗಿಯೇ, ಈ ಮಹತ್ವದ ಸಂದರ್ಭದಲ್ಲಿ ಭಾಗವಹಿಸುವುದು ಭಾರತದ ಮತ್ತು ನನ್ನ ಬದ್ಧತೆಯಾಗಿತ್ತು, ಆದರೆ ಇಂದು, ನಾನು ಅತ್ಯಂತ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ: ಪ್ರಧಾನಮಂತ್ರಿ
ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಘೋರ ದುರ್ಘಟನೆಯು ಪ್ರತಿಯೊಬ್ಬರನ್ನೂ ಕಲಕಿದೆ, ನಮ್ಮ ತನಿಖಾ ಸಂಸ್ಥೆಗಳು ಈ ಪಿತೂರಿಯ ಆಳಕ್ಕಿಳಿಯಲಿವೆ, ಇದರ ಹಿಂದಿರುವ ಸೂತ್ರಧಾರರನ್ನು ಬಿಡುವುದಿಲ್ಲ, ಈ ಕೃತ್ಯಕ್ಕೆ ಕಾರಣರಾದ ಎಲ್ಲರನ್ನೂ ಕಾನೂನಿನ ಮುಂದೆ ತರಲಾಗುವುದು: ಪ್ರಧಾನಮಂತ್ರಿ
'ವಸುಧೈವ ಕುಟುಂಬಕಂ', ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ತನ್ನ ಪ್ರಾಚೀನ ಆದರ್ಶದಿಂದ ಭಾರತವು ಸ್ಫೂರ್ತಿ ಪಡೆಯುತ್ತದೆ, ನಾವು ಪ್ರತಿಯೊಬ್ಬರ ಸಂತೋಷಕ್ಕೂ ಒತ್ತು ನೀಡುತ್ತೇವೆ: ಪ್ರಧಾನಮಂತ್ರಿ
ಭೂತಾನ್ನ ಘನತೆವೆತ್ತ ದೊರೆಯವರು ಪ್ರಸ್ತಾಪಿಸಿದ "ಒಟ್ಟು ರಾಷ್ಟ್ರೀಯ ಸಂತೋಷ" ಎಂಬ ಪರಿಕಲ್ಪನೆಯು, ವಿಶ್ವಾದ್ಯಂತ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಒಂದು ಪ್ರಮುಖ ಮಾನದಂಡವಾಗಿದೆ: ಪ್ರಧಾನಮಂತ್ರಿ
ಭಾರತ ಮತ್ತು ಭೂತಾನ್ ಕೇವಲ ಗಡಿಗಳಿಂದ ಸಂಪರ್ಕ ಹೊಂದಿಲ್ಲ, ಅವು ಸಂಸ್ಕೃತಿಗಳಿಂದ ಬೆಸೆದುಕೊಂಡಿವೆ, ನಮ್ಮ ಸಂಬಂಧವು ಮೌಲ್ಯಗಳು, ಭಾವನೆಗಳು, ಶಾಂತಿ ಮತ್ತು ಪ್ರಗತಿಯ ಸಂಬಂಧವಾಗಿದೆ: ಪ್ರಧಾನಮಂತ್ರಿ
ಇಂದು, ಭೂತಾನ್ ವಿಶ್ವದ ಮೊದಲ ಇಂಗಾಲ-ಋಣಾತ್ಮಕ ದೇಶವಾಗಿ ಹೊರಹೊಮ್ಮಿದೆ, ಇದೊಂದು ಅಸಾಧಾರಣ ಸಾಧನೆಯಾಗಿದೆ: ಪ್ರಧಾನಮಂತ್ರಿ
ಭೂತಾನ್ ತಲಾ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಸ್ಥಾನ ಪಡೆದಿದೆ, ತನ್ನ 100% ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುತ್ತದೆ, ಈ ಸಾಮರ್ಥ್ಯವನ್ನು ವಿಸ್ತರಿಸುತ್ತಾ, ಇಂದು ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲಾಗುತ್ತಿದೆ: ಪ್ರಧಾನಮಂತ್ರಿ
ಸಂಪರ್ಕವು ಅವಕಾಶವನ್ನು ಸೃಷ್ಟಿಸುತ್ತದೆ, ಮತ್ತು ಅವಕಾಶವು ಸಮೃದ್ಧಿಯನ್ನು ತರುತ್ತದೆ, ಭಾರತ ಮತ್ತು ಭೂತಾನ್ ಶಾಂತಿ, ಸಮೃದ್ಧಿ ಮತ್ತು ಸಹಭಾಗಿತ್ವದ ಪ್ರಗತಿಯ ಪಥದಲ್ಲಿ ಮುನ್ನಡೆಯಲಿ: ಪ್ರಧಾನಮಂತ್ರಿ
Posted On:
11 NOV 2025 1:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್ ನ ಥಿಂಪು ನಗರದಲ್ಲಿರುವ ಚಾಂಗ್ಲಿಮೆಥಾಂಗ್ ಸಂಭ್ರಮಾಚರಣೆ ಮೈದಾನದಲ್ಲಿ ನಡೆದ, ಭೂತಾನ್ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭೂತಾನ್ನ ದೊರೆ, ಘನತೆವೆತ್ತ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರಿಗೆ ಹಾಗೂ ನಾಲ್ಕನೇ ದೊರೆ, ಘನತೆವೆತ್ತ ಜಿಗ್ಮೆ ಸಿಂಗ್ಯೆ ವಾಂ ಗ್ಚುಕ್ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು. ಅಲ್ಲದೆ, ರಾಜಮನೆತನದ ಗೌರವಾನ್ವಿತ ಸದಸ್ಯರು, ಭೂತಾನ್ ನ ಪ್ರಧಾನ ಮಂತ್ರಿಗಳಾದ ಘನತೆವೆತ್ತ ಶ್ರೀ ಶೆರಿಂಗ್ ತೊಬ್ಗೆ ಅವರು ಹಾಗೂ ಅಲ್ಲಿ ಉಪಸ್ಥಿತರಿದ್ದ ಇತರ ಗಣ್ಯಾತಿಗಣ್ಯರಿಗೆ ಪ್ರಧಾನಮಂತ್ರಿಗಳು ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು.
ಇಂದು ಭೂತಾನ್ ಗೆ, ಭೂತಾನ್ ನ ರಾಜಮನೆತನಕ್ಕೆ ಹಾಗೂ ವಿಶ್ವ ಶಾಂತಿಯಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವದ ದಿನವಾಗಿದೆ ಎಂದು ಪ್ರಧಾನಮಂತ್ರಿಗಳು ನುಡಿದರು. ಭಾರತ ಮತ್ತು ಭೂತಾನ್ ನಡುವಿನ ಶತಮಾನಗಳಷ್ಟು ಹಳೆಯದಾದ ಆಳವಾದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಅವರು ಪ್ರಸ್ತಾಪಿಸಿದರು, ಮತ್ತು ಈ ಮಹತ್ವಪೂರ್ಣ ಸಂದರ್ಭದಲ್ಲಿ ಭಾಗವಹಿಸುವುದು ಭಾರತದ ಹಾಗೂ ತಮ್ಮ ವೈಯಕ್ತಿಕ ಬದ್ಧತೆಯಾಗಿದೆ ಎಂದು ಹೇಳಿದರು. ಆದಾಗ್ಯೂ, ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಘೋರ ದುರ್ಘಟನೆಯು ಎಲ್ಲರನ್ನೂ ತೀವ್ರವಾಗಿ ಕದಡಿದೆ ಎಂದು ಹೇಳಿದ ಪ್ರಧಾನಮಂತ್ರಿ ಮೋದಿ ಅವರು, ತಾವೂ ಸಹ ಅತ್ಯಂತ ಭಾರವಾದ ಹೃದಯದಿಂದಲೇ ಭೂತಾನ್ ಗೆ ಬಂದಿರುವುದಾಗಿ ತಿಳಿಸಿದರು. ಸಂತ್ರಸ್ತ ಕುಟುಂಬಗಳ ನೋವನ್ನು ತಾವು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿದ ಅವರು, ಇಡೀ ರಾಷ್ಟ್ರವೇ ಅವರ ಬೆಂಬಲಕ್ಕೆ ದೃಢವಾಗಿ ನಿಂತಿದೆ ಎಂದು ಭರವಸೆ ನೀಡಿದರು. ಈ ಘಟನೆಯ ತನಿಖೆಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳೊಂದಿಗೆ ತಾವೂ ರಾತ್ರಿಯಿಡೀ ನಿರಂತರ ಸಂಪರ್ಕದಲ್ಲಿರುವುದಾಗಿ ಪ್ರಧಾನಮಂತ್ರಿ ಅವರು ಹಂಚಿಕೊಂಡರು. ಭಾರತೀಯ ತನಿಖಾ ಸಂಸ್ಥೆಗಳು ಈ ಸಂಪೂರ್ಣ ಕುತಂತ್ರವನ್ನು ಬಯಲಿಗೆಳೆಯಲಿವೆ ಎಂದು ಒತ್ತಿ ಹೇಳಿದ ಅವರು, ಈ ದಾಳಿಯ ಹಿಂದಿರುವ ಸೂತ್ರಧಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದರು. ಅಲ್ಲದೆ "ಈ ಕೃತ್ಯಕ್ಕೆ ಕಾರಣರಾದ ಎಲ್ಲರನ್ನೂ ಕಾನೂನಿನ ಮುಂದೆ ತರಲಾಗುವುದು" ಎಂದು ಪ್ರಧಾನಮಂತ್ರಿಗಳು ಘೋಷಿಸಿದರು.
ಇಂದು, ಗುರು ಪದ್ಮಸಂಭವರ ಕೃಪಾಶೀರ್ವಾದದೊಂದಿಗೆ, ಭೂತಾನ್ ನಲ್ಲಿ 'ಜಾಗತಿಕ ಶಾಂತಿ ಪ್ರಾರ್ಥನಾ ಮಹೋತ್ಸವ' ಜರುಗುತ್ತಿದ್ದು, ಇದರೊಟ್ಟಿಗೆ ಭಗವಾನ್ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳ ದರ್ಶನ ಭಾಗ್ಯವೂ ಒದಗಿರುವುದನ್ನು ಶ್ರೀ ಮೋದಿ ಅವರು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಶುಭ ಸಂದರ್ಭವು ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವ ಆಚರಣೆಗೂ ಸಾಕ್ಷಿಯಾಗಿದ್ದು, ಇಷ್ಟು ಬೃಹತ್ ಸಂಖ್ಯೆಯಲ್ಲಿ ನೆರೆದಿರುವ ಗಣ್ಯಾತಿಗಣ್ಯರ ಗೌರವಾನ್ವಿತ ಉಪಸ್ಥಿತಿಯು, ಭಾರತ-ಭೂತಾನ್ ಬಾಂಧವ್ಯದ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ನುಡಿದರು.
"ವಸುಧೈವ ಕುಟುಂಬಕಂ" – ಅಂದರೆ ‘ವಿಶ್ವವೇ ಒಂದು ಕುಟುಂಬ’ – ಎಂಬ ಪ್ರಾಚೀನ ಆದರ್ಶದಿಂದ ಭಾರತವು ಸ್ಫೂರ್ತಿ ಪಡೆಯುತ್ತದೆ ಎಂಬುದನ್ನು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. "ಸರ್ವೇ ಭವಂತು ಸುಖಿನಃ" (ಎಲ್ಲರೂ ಸುಖವಾಗಿರಲಿ) ಎಂಬ ಮಂತ್ರದ ಮೂಲಕ ಭಾರತವು ಸಾರ್ವತ್ರಿಕ ಒಳಿತಿಗಾಗಿ ಪ್ರಾರ್ಥಿಸುತ್ತದೆ ಎಂಬುದನ್ನು ಅವರು ಪುನರುಚ್ಚರಿಸಿದರು. ಅಲ್ಲದೆ, ಆಕಾಶ, ಅಂತರಿಕ್ಷ, ಭೂಮಿ, ಜಲ, ಔಷಧಿಗಳು, ವನಸ್ಪತಿಗಳು ಹಾಗೂ ಸಮಸ್ತ ಜೀವರಾಶಿಗಳಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುವ ವೈದಿಕ ಮಂತ್ರಗಳನ್ನು ಅವರು ಸ್ಮರಿಸಿಕೊಂಡರು. ಇದೇ ಸದ್ಭಾವನೆಗಳೊಂದಿಗೆ, ಭಾರತವು ಭೂತಾನ್ ನ ಈ 'ಜಾಗತಿಕ ಶಾಂತಿ ಪ್ರಾರ್ಥನಾ ಮಹೋತ್ಸವ'ದಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದರು. ಇಲ್ಲಿ ವಿಶ್ವದಾದ್ಯಂತದ ಸಂತರು ಜಾಗತಿಕ ಶಾಂತಿಗಾಗಿ ಒಗ್ಗೂಡಿ ಪ್ರಾರ್ಥಿಸುತ್ತಿದ್ದಾರೆ ಮತ್ತು ಈ ಸಾಮೂಹಿಕ ಸಂಕಲ್ಪದಲ್ಲಿ 140 ಕೋಟಿ ಭಾರತೀಯರ ಪ್ರಾರ್ಥನೆಗಳೂ ಸೇರಿಕೊಂಡಿವೆ ಎಂದು ಅವರು ತಿಳಿಸಿದರು. ತಮ್ಮ ಜನ್ಮಸ್ಥಳವಾದ ಗುಜರಾತ್ ನ ವಡ್ನಗರವು ಬೌದ್ಧ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಒಂದು ಪವಿತ್ರ ಕ್ಷೇತ್ರವಾಗಿದೆ ಮತ್ತು ತಮ್ಮ ಕರ್ಮಭೂಮಿಯಾದ ಉತ್ತರ ಪ್ರದೇಶದ ವಾರಣಾಸಿಯು ಬೌದ್ಧ ಶ್ರದ್ಧೆಯ ಶಿಖರಪ್ರಾಯ ಸ್ಥಳವಾಗಿದೆ ಎಂಬುದು ಬಹುಶಃ ಕೆಲವರಿಗೆ ಮಾತ್ರ ತಿಳಿದಿರಬಹುದು ಎಂದು ಶ್ರೀ ಮೋದಿ ಅವರು ಹೇಳಿದರು. ಆದ್ದರಿಂದ, ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದು ತಮಗೆ ವೈಯಕ್ತಿಕವಾಗಿಯೂ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ನುಡಿದ ಅವರು, ಈ ಶಾಂತಿಯ ದೀಪವು ಭೂತಾನ್ ನ ಹಾಗೂ ವಿಶ್ವದ ಪ್ರತಿ ಮನೆಯನ್ನೂ ಬೆಳಗಲಿ ಎಂದು ಹಾರೈಸಿದರು.
ಘನತೆವೆತ್ತ ಭೂತಾನ್ ನ ನಾಲ್ಕನೇ ದೊರೆಯವರಿಗೆ ಗೌರವಗಳನ್ನು ಸಲ್ಲಿಸಿದ ಶ್ರೀ ಮೋದಿ ಅವರು, ಅವರ ಜೀವನವನ್ನು ಜ್ಞಾನ, ಸರಳತೆ, ಧೈರ್ಯ ಮತ್ತು ರಾಷ್ಟ್ರಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯ ಸಂಗಮ ಎಂದು ಬಣ್ಣಿಸಿದರು. ಘನತೆವೆತ್ತ ದೊರೆಯವರು ತಮ್ಮ 16ನೇ ಎಳೆಯ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿಯನ್ನು ಹೊತ್ತು, ಪಿತೃವಾತ್ಸಲ್ಯದಿಂದ ಮತ್ತು ದಾರ್ಶನಿಕ ನಾಯಕತ್ವದಿಂದ ಈ ದೇಶವನ್ನು ಪೋಷಿಸಿದರು ಎಂದು ಶ್ರೀ ಮೋದಿ ಅವರು ಹೇಳಿದರು.ತಮ್ಮ 34 ವರ್ಷಗಳ ಆಳ್ವಿಕೆಯಲ್ಲಿ, ಘನತೆವೆತ್ತ ದೊರೆಯವರು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಭೂತಾನ್ ನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮೂಲಕ ದೇಶವನ್ನು ಮುನ್ನಡೆಸಿದರು ಎಂದು ಪ್ರಧಾನಮಂತ್ರಿಗಳು ಹೇಳಿದರು. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಹಿಡಿದು ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವವರೆಗೆ, ಘನತೆವೆತ್ತ ದೊರೆಯವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಘನತೆವೆತ್ತ ದೊರೆಯವರು ಪರಿಚಯಿಸಿದ "ಒಟ್ಟು ರಾಷ್ಟ್ರೀಯ ಸಂತೋಷ" (Gross National Happiness) ಪರಿಕಲ್ಪನೆಯು, ಇಂದು ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಜಾಗತಿಕವಾಗಿ ಮಾನ್ಯತೆ ಪಡೆದ ಮಾನದಂಡವಾಗಿದೆ ಎಂದು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣ ಎಂಬುದು ಕೇವಲ ಜಿಡಿಪಿ (GDP) ಬಗ್ಗೆ ಮಾತ್ರವಲ್ಲ, ಅದು ಮಾನವತೆಯ ಕಲ್ಯಾಣದ ಬಗ್ಗೆಯೂ ಆಗಿದೆ ಎಂಬುದನ್ನು ಘನತೆವೆತ್ತ ದೊರೆಯವರು ನಿರೂಪಿಸಿ ತೋರಿಸಿದ್ದಾರೆ ಎಂದು ಅವರು ಪ್ರಶಂಸಿಸಿದರು.
ಭಾರತ ಮತ್ತು ಭೂತಾನ್ ನಡುವಿನ ಸ್ನೇಹ ಬಾಂಧವ್ಯವನ್ನು ಬಲಪಡಿಸುವಲ್ಲಿ ಘನತೆವೆತ್ತ ಭೂತಾನ್ನ ನಾಲ್ಕನೇ ದೊರೆಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದರು. ಘನತೆವೆತ್ತ ದೊರೆಯವರು ಹಾಕಿದ ಬುನಾದಿಯು, ಉಭಯ ರಾಷ್ಟ್ರಗಳ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ನಿರಂತರವಾಗಿ ಪೋಷಿಸುತ್ತಿದೆ ಎಂದು ಅವರು ತಿಳಿಸಿದರು. ಸಮಸ್ತ ಭಾರತೀಯರ ಪರವಾಗಿ, ಪ್ರಧಾನಮಂತ್ರಿ ಅವರು ಘನತೆವೆತ್ತ ದೊರೆಯವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯವನ್ನು ಕೋರಿದರು.
"ಭಾರತ ಮತ್ತು ಭೂತಾನ್ ಕೇವಲ ಗಡಿಗಳಿಂದ ಸಂಪರ್ಕ ಹೊಂದಿಲ್ಲ, ಅವು ಸಂಸ್ಕೃತಿಗಳಿಂದಲೂ ಬೆಸೆದುಕೊಂಡಿವೆ. ನಮ್ಮ ಸಂಬಂಧವು ಮೌಲ್ಯಗಳು, ಭಾವನೆಗಳು, ಶಾಂತಿ ಮತ್ತು ಪ್ರಗತಿಯ ಸಂಬಂಧವಾಗಿದೆ" ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ವಿದೇಶಿ ಪ್ರವಾಸವಾಗಿ ಭೂತಾನ್ ಗೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಆ ಭೇಟಿಯ ನೆನಪುಗಳು ಇಂದಿಗೂ ತಮ್ಮನ್ನು ಭಾವನಾತ್ಮಕಗೊಳಿಸುತ್ತವೆ ಎಂದು ಹಂಚಿಕೊಂಡರು. ಭಾರತ-ಭೂತಾನ್ ಸಂಬಂಧಗಳ ಶಕ್ತಿ ಮತ್ತು ಶ್ರೀಮಂತಿಕೆಯನ್ನು ಅವರು ಒತ್ತಿಹೇಳುತ್ತಾ, ಕಷ್ಟದ ಕಾಲದಲ್ಲಿ ಉಭಯ ದೇಶಗಳೂ ಒಟ್ಟಿಗೆ ನಿಂತಿವೆ, ಸವಾಲುಗಳನ್ನು ಜಂಟಿಯಾಗಿ ಎದುರಿಸಿವೆ ಮತ್ತು ಇದೀಗ ಪ್ರಗತಿ ಹಾಗೂ ಸಮೃದ್ಧಿಯ ಪಥದಲ್ಲಿ ಒಟ್ಟಾಗಿ ಮುನ್ನಡೆಯುತ್ತಿವೆ ಎಂದು ತಿಳಿಸಿದರು. ಘನತೆವೆತ್ತ ದೊರೆಯವರು ಭೂತಾನ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದ ಶ್ರೀ ಮೋದಿ ಅವರು, ಭಾರತ ಮತ್ತು ಭೂತಾನ್ ನಡುವಿನ ವಿಶ್ವಾಸ ಮತ್ತು ಅಭಿವೃದ್ಧಿಯ ಪಾಲುದಾರಿಕೆಯು ಇಡೀ ಪ್ರದೇಶಕ್ಕೆ ಒಂದು ಗಮನಾರ್ಹ ಮಾದರಿಯಾಗಿ ನಿಂತಿದೆ ಎಂದು ನುಡಿದರು.
ಭಾರತ ಮತ್ತು ಭೂತಾನ್ ಕ್ಷಿಪ್ರವಾಗಿ ಮುನ್ನಡೆಯುತ್ತಿದ್ದು, ಅವುಗಳ ಇಂಧನ ಪಾಲುದಾರಿಕೆಯು ಈ ಬೆಳವಣಿಗೆಗೆ ಚಾಲನಾಶಕ್ತಿಯಾಗಿದೆ ಎಂದು ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಭಾರತ-ಭೂತಾನ್ ಜಲವಿದ್ಯುತ್ ಸಹಕಾರದ ಬುನಾದಿಯನ್ನು ಘನತೆವೆತ್ತ ನಾಲ್ಕನೇ ದೊರೆಯವರ
ನಾಯಕತ್ವದಲ್ಲಿಯೇ ಹಾಕಲಾಗಿತ್ತು ಎಂದು ತಿಳಿಸಿದರು. ಘನತೆವೆತ್ತ ನಾಲ್ಕನೇ ದೊರೆಯವರು ಮತ್ತು ಘನತೆವೆತ್ತ ಐದನೇ ದೊರೆಯವರು ಇಬ್ಬರೂ ಭೂತಾನ್ ನಲ್ಲಿ ಸುಸ್ಥಿರ ಅಭಿವೃದ್ಧಿ ಹಾಗೂ 'ಪರಿಸರವೇ ಮೊದಲು' ಎಂಬ ದೃಷ್ಟಿಕೋನವನ್ನು ಸದಾ ಎತ್ತಿ ಹಿಡಿದಿದ್ದಾರೆ. ಈ ದಾರ್ಶನಿಕ ಅಡಿಪಾಯವೇ ಭೂತಾನ್ ವಿಶ್ವದ ಮೊದಲ ಇಂಗಾಲ-ಋಣಾತ್ಮಕ (carbon-negative) ದೇಶವಾಗಿ ಹೊರಹೊಮ್ಮಲು ಅನುವು ಮಾಡಿಕೊಟ್ಟಿದೆ – ಇದೊಂದು ಅಸಾಧಾರಣ ಸಾಧನೆಯಾಗಿದೆ ಎಂದು ಶ್ರೀ ಮೋದಿ ಅವರು ಪ್ರಶಂಸಿಸಿದರು. ಭೂತಾನ್ ತಲಾ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಜಾಗತಿಕವಾಗಿ ಅಗ್ರ ಶ್ರೇಣಿಯಲ್ಲಿದೆ ಮತ್ತು ಪ್ರಸ್ತುತ ತನ್ನ 100% ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದಲೇ ಉತ್ಪಾದಿಸುತ್ತಿದೆ ಎಂದು ಅವರು ಸೇರಿಸಿದರು. ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುತ್ತಾ, ಇಂದು 1,000 ಮೆಗಾವ್ಯಾಟ್ ಗಳಿಗೂ ಹೆಚ್ಚಿನ ಸಾಮರ್ಥ್ಯದ ಹೊಸ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಇದು ಭೂತಾನ್ ನ ಜಲವಿದ್ಯುತ್ ಸಾಮರ್ಥ್ಯವನ್ನು 40% ರಷ್ಟು ಹೆಚ್ಚಿಸಲಿದೆ. ಹೆಚ್ಚುವರಿಯಾಗಿ, ದೀರ್ಘಕಾಲದಿಂದ ಬಾಕಿ ಉಳಿದಿದ್ದ ಮತ್ತೊಂದು ಜಲವಿದ್ಯುತ್ ಯೋಜನೆಯ ಕಾಮಗಾರಿಯೂ ಪುನರಾರಂಭಗೊಳ್ಳುತ್ತಿದೆ. ಈ ಪಾಲುದಾರಿಕೆಯು ಕೇವಲ ಜಲವಿದ್ಯುತ್ ಗೆ ಸೀಮಿತವಾಗಿಲ್ಲ; ಭಾರತ ಮತ್ತು ಭೂತಾನ್ ಈಗ ಸೌರಶಕ್ತಿ ಕ್ಷೇತ್ರದಲ್ಲೂ ಒಟ್ಟಾಗಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿವೆ, ಮತ್ತು ಈ ನಿಟ್ಟಿನಲ್ಲಿ ಇಂದು ಪ್ರಮುಖ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ ಎಂದು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು.
ಇಂಧನ ಸಹಕಾರದ ಜೊತೆಜೊತೆಗೆ, ಭಾರತ ಮತ್ತು ಭೂತಾನ್ ಸಂಪರ್ಕವನ್ನು ವೃದ್ಧಿಸುವುದರತ್ತಲೂ ಗಮನ ಹರಿಸುತ್ತಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, "ಸಂಪರ್ಕವು ಅವಕಾಶವನ್ನು ಸೃಷ್ಟಿಸುತ್ತದೆ, ಮತ್ತು ಅವಕಾಶವು ಸಮೃದ್ಧಿಯನ್ನು ತರುತ್ತದೆ" ಎಂಬ ನುಡಿಯನ್ನು ಪ್ರಸ್ತಾಪಿಸಿದರು. ಈ ದೃಷ್ಟಿಕೋನದ ಅಡಿಯಲ್ಲಿ, ಗೆಲೆಫು ಮತ್ತು ಸಮ್ತ್ಸೆ ನಗರಗಳನ್ನು ಭಾರತದ ಬೃಹತ್ ರೈಲ್ವೆ ಜಾಲಕ್ಕೆ ಜೋಡಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಯೋಜನೆ ಪೂರ್ಣಗೊಂಡ ಬಳಿಕ, ಇದು ಭೂತಾನ್ ನ ಕೈಗಾರಿಕೆಗಳಿಗೆ ಮತ್ತು ರೈತರಿಗೆ ಭಾರತದ ವಿಶಾಲವಾದ ಮಾರುಕಟ್ಟೆಯನ್ನು ತಲುಪಲು ಗಣನೀಯವಾಗಿ ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ರೈಲು ಮತ್ತು ರಸ್ತೆ ಸಂಪರ್ಕದ ಜೊತೆಯಲ್ಲೇ, ಉಭಯ ದೇಶಗಳು ಗಡಿ ಮೂಲಸೌಕರ್ಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸುತ್ತಿವೆ ಎಂದೂ ಅವರು ಸೇರಿಸಿದರು. ಘನತೆವೆತ್ತ ದೊರೆಯವರು ಪ್ರಾರಂಭಿಸಿರುವ ದಾರ್ಶನಿಕ 'ಗೆಲೆಫು ಮೈಂಡ್ ಫುಲ್ ನೆಸ್ ಸಿಟಿ' ಉಪಕ್ರಮವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಅದರ ಅಭಿವೃದ್ಧಿಗೆ ಭಾರತದ ಸಂಪೂರ್ಣ ಬೆಂಬಲವನ್ನು ದೃಢಪಡಿಸಿದರು. ಸಂದರ್ಶಕರು ಮತ್ತು ಹೂಡಿಕೆದಾರರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಗೆಲೆಫು ಬಳಿ ಭಾರತವು ಶೀಘ್ರದಲ್ಲೇ ವಲಸೆ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಅವರು ಘೋಷಿಸಿದರು.
"ಭಾರತ ಮತ್ತು ಭೂತಾನ್ ನ ಪ್ರಗತಿ ಮತ್ತು ಸಮೃದ್ಧಿಯು ಆಳವಾಗಿ ಹೆಣೆದುಕೊಂಡಿದೆ" ಎಂದು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಇದೇ ಸ್ಪೂರ್ತಿಯೊಂದಿಗೆ, ಭಾರತ ಸರ್ಕಾರವು ಕಳೆದ ವರ್ಷ ಭೂತಾನ್ ನ ಪಂಚವಾರ್ಷಿಕ ಯೋಜನೆಗಾಗಿ ₹10,000 ಕೋಟಿ ರೂಪಾಯಿಗಳ ನೆರವಿನ ಪ್ಯಾಕೇಜ್ ಅನ್ನು ಘೋಷಿಸಿತ್ತು ಎಂದೂ ಅವರು ಹೇಳಿದರು. ಈ ನಿಧಿಯನ್ನು ರಸ್ತೆಗಳಿಂದ ಕೃಷಿಯವರೆಗೆ, ಹಣಕಾಸಿನಿಂದ ಆರೋಗ್ಯದವರೆಗೆ – ಹೀಗೆ ವಿವಿಧ ವಲಯಗಳಲ್ಲಿ ಬಳಸಲಾಗುತ್ತಿದ್ದು, ಇದು ಭೂತಾನ್ ನ ನಾಗರಿಕರ 'ಸುಗಮ ಜೀವನಕ್ಕೆ' ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. ಭೂತಾನ್ ನ ಜನರಿಗೆ ಅಗತ್ಯ ವಸ್ತುಗಳ ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ಶ್ರೀ ಮೋದಿ ಅವರು ತಿಳಿಸಿದರು. ಇದಲ್ಲದೆ, ಭೂತಾನ್ ನಲ್ಲಿ ಯುಪಿಐ ಪಾವತಿಗಳ ವ್ಯಾಪ್ತಿಯು ವಿಸ್ತರಿಸುತ್ತಿದೆ ಎಂದ ಅವರು, ಭೂತಾನ್ ನ ನಾಗರಿಕರು ಭಾರತಕ್ಕೆ ಭೇಟಿ ನೀಡಿದಾಗ ಯುಪಿಐ ಸೇವೆಗಳನ್ನು ಬಳಸಲು ಅನುವು ಮಾಡಿಕೊಡುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಸೇರಿಸಿದರು.
ಬಲಿಷ್ಠ ಭಾರತ-ಭೂತಾನ್ ಪಾಲುದಾರಿಕೆಯ ಅತ್ಯಂತ ಪ್ರಬಲ ಫಲಾನುಭವಿಗಳು ಉಭಯ ರಾಷ್ಟ್ರಗಳ ಯುವಜನರೇ ಆಗಿದ್ದಾರೆ ಎಂದು ಒತ್ತಿ ನುಡಿದ ಶ್ರೀ ಮೋದಿ ಅವರು, ರಾಷ್ಟ್ರೀಯ ಸೇವೆ, ಸ್ವಯಂಸೇವೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಘನತೆವೆತ್ತ ದೊರೆಯವರ ಅನುಕರಣೀಯ ಕಾರ್ಯವನ್ನು ಮನಸಾರೆ ಶ್ಲಾಘಿಸಿದರು. ಹಾಗೆಯೇ, ತಂತ್ರಜ್ಞಾನದ ಮೂಲಕ ಯುವಜನರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಘನತೆವೆತ್ತ ದೊರೆಯವರು ಕೈಗೊಂಡಿರುವ ದಾರ್ಶನಿಕ ಪ್ರಯತ್ನಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ಭೂತಾನ್ ನ ಯುವಜನರು ಈ ದೃಷ್ಟಿಕೋನದಿಂದ ಆಳವಾಗಿ ಪ್ರೇರಿತರಾಗಿದ್ದಾರೆ ಎಂದ ಪ್ರಧಾನಮಂತ್ರಿ ಅವರು, ಶಿಕ್ಷಣ, ನಾವೀನ್ಯತೆ, ಕೌಶಲ್ಯಾಭೃದ್ಧಿ, ಕ್ರೀಡೆ, ಬಾಹ್ಯಾಕಾಶ, ಮತ್ತು ಸಂಸ್ಕೃತಿ ಸೇರಿದಂತೆ ಹಲವಾರು ವಲಯಗಳಲ್ಲಿ ಭಾರತೀಯ ಮತ್ತು ಭೂತಾನಿನ ಯುವಜನರ ನಡುವಿನ ಸಹಯೋಗವು ವೃದ್ಧಿಸುತ್ತಿದೆ ಎಂದು ತಿಳಿಸಿದರು. ಉಭಯ ದೇಶಗಳ ಯುವಜನರು ಪ್ರಸ್ತುತ ಉಪಗ್ರಹವೊಂದನ್ನು ನಿರ್ಮಿಸಲು ಒಟ್ಟಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಹಂಚಿಕೊಂಡರು. ಇದನ್ನು ಭಾರತ ಮತ್ತು ಭೂತಾನ್ ಉಭಯ ದೇಶಗಳಿಗೂ ಒಂದು ಮಹತ್ವಪೂರ್ಣ ಸಾಧನೆ ಎಂದು ಅವರು ಬಣ್ಣಿಸಿದರು.
ಭಾರತ-ಭೂತಾನ್ ಸಂಬಂಧಗಳ ಪ್ರಮುಖ ಬಲವು ಎರಡೂ ರಾಷ್ಟ್ರಗಳ ಜನರ ನಡುವಿನ ಆಳವಾದ ಭಾವನಾತ್ಮಕ ಬಾಂಧವ್ಯದಲ್ಲಿದೆ ಎಂದು ಪ್ರಧಾನಿ ಶ್ರೀ ಮೋದಿ ಹೇಳಿದರು. ಇತ್ತೀಚೆಗೆ ಭಾರತದ ರಾಜ್ ಗೀರ್ ನಲ್ಲಿ ರಾಯಲ್ ಭೂತಾನೀಸ್ ದೇವಾಲಯದ ಉದ್ಘಾಟನೆಯನ್ನು ಅವರು ಪ್ರಸ್ತಾಪಿಸಿದರು ಮತ್ತು ಈ ಉಪಕ್ರಮವು ಇದೀಗ ದೇಶದ ಇತರ ಭಾಗಗಳಿಗೂ ವಿಸ್ತರಣೆಗೊಳ್ಳುತ್ತಿದೆ ಎಂದು ತಿಳಿಸಿದರು. ಭೂತಾನ್ ಜನರ ಆಶೋತ್ತರಗಳಿಗೆ ಸ್ಪಂದಿಸಿ, ವಾರಣಾಸಿಯಲ್ಲಿ ಭೂತಾನೀಸ್ ದೇವಾಲಯ ಮತ್ತು ಅತಿಥಿಗೃಹ ನಿರ್ಮಾಣಕ್ಕಾಗಿ ಭಾರತ ಸರ್ಕಾರವು ಅಗತ್ಯವಿರುವ ಭೂಮಿಯನ್ನು ಒದಗಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಘೋಷಿಸಿದರು. ಈ ದೇವಾಲಯಗಳು ಭಾರತ ಮತ್ತು ಭೂತಾನ್ ನಡುವಿನ ಅಮೂಲ್ಯ ಹಾಗೂ ಐತಿಹಾಸಿಕ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ದೃಢಪಡಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಉಭಯ ದೇಶಗಳೂ ಶಾಂತಿ, ಸಮೃದ್ಧಿ ಮತ್ತು ಸಹಭಾಗಿತ್ವದ ಪ್ರಗತಿಯ ಪಥದಲ್ಲಿ ನಿರಂತರವಾಗಿ ಮುನ್ನಡೆಯಲಿ ಎಂದು ಪ್ರಧಾನಮಂತ್ರಿ ಅವರು ಆಶಯ ವ್ಯಕ್ತಪಡಿಸಿದರು. ಅಲ್ಲದೆ, ಉಭಯ ರಾಷ್ಟ್ರಗಳ ಮೇಲೆ ಭಗವಾನ್ ಬುದ್ಧ ಮತ್ತು ಗುರು ರಿನ್ಪೋಚೆ ಅವರ ಕೃಪಾಶೀರ್ವಾದವು ಸದಾ ಇರಲಿ ಎಂದು ಅವರು ಪ್ರಾರ್ಥಿಸಿದರು.
*****
(Release ID: 2188808)
Visitor Counter : 6
Read this release in:
English
,
Urdu
,
हिन्दी
,
Nepali
,
Marathi
,
Manipuri
,
Bengali
,
Assamese
,
Gujarati
,
Odia
,
Tamil
,
Telugu
,
Malayalam