ಪ್ರಧಾನ ಮಂತ್ರಿಯವರ ಕಛೇರಿ
ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸಭಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
01 NOV 2025 3:22PM by PIB Bengaluru
ಛತ್ತೀಸ್‌ಗಢ ರಾಜ್ಯಪಾಲರಾದ ರಮಣ್ ದೇಕಾ ಜಿ, ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಜಿ, ಛತ್ತೀಸ್‌ಗಢ ವಿಧಾನಸಭೆಯ ಸ್ಪೀಕರ್ ಮತ್ತು ನನ್ನ ಸ್ನೇಹಿತ ರಮಣ್ ಸಿಂಗ್ ಜಿ, ರಾಜ್ಯದ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿ ತೋಖಾನ್ ಸಾಹು ಜಿ, ಉಪಮುಖ್ಯಮಂತ್ರಿಗಳಾದ ವಿಜಯ್ ಶರ್ಮಾ ಜಿ ಮತ್ತು ಅರುಣ್ ಸಾವೋ ಜಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಾಂತ್ ಜಿ, ಇತರೆ ಗಣ್ಯ ಸಚಿವರೆ, ಜನಪ್ರತಿನಿಧಿಗಳೆ ಮತ್ತು ಇಲ್ಲಿ ಹಾಜರಿರುವ ಮಹಿಳೆಯರೆ ಮತ್ತು ಮಹನೀಯರೆ!
ಛತ್ತೀಸ್‌ಗಢದ ಅಭಿವೃದ್ಧಿಯ ಪಯಣಕ್ಕೆ ಇಂದು ಸುವರ್ಣ ಆರಂಭವಾಗಿದೆ. ವೈಯಕ್ತಿಕವಾಗಿ ಇದು ನನಗೆ ತುಂಬಾ ವಿಶೇಷ ಮತ್ತು ಸಂತೋಷದ ದಿನವಾಗಿದೆ. ಹಲವಾರು ದಶಕಗಳಿಂದ ನಾನು ಈ ಭೂಮಿಯೊಂದಿಗೆ ಸುದೀರ್ಘ ಭಾವನಾತ್ಮಕ ಬಾಂಧವ್ಯ ಹೊಂದಿದ್ದೇನೆ. ಒಬ್ಬ ಕೆಲಸಗಾರನಾಗಿ, ನಾನು ಛತ್ತೀಸ್‌ಗಢದಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ, ಈ ಸ್ಥಳದಿಂದ ನಾನು ಬಹಳಷ್ಟು ಕಲಿತಿದ್ದೇನೆ. ಛತ್ತೀಸ್‌ಗಢದ ಜನರು ಮತ್ತು ಮಣ್ಣು ನನ್ನ ಜೀವನವನ್ನು ಬಹಳ ಆಶೀರ್ವದಿಸಿದೆ ಮತ್ತು ರೂಪಿಸಿದೆ. ಛತ್ತೀಸ್‌ಗಢದ ಕಲ್ಪನೆ ಮತ್ತು ಪರಿಕಲ್ಪನೆಯಿಂದ, ಅದರ ರಚನೆಗೆ ಕಾರಣವಾದ ಸಂಕಲ್ಪದವರೆಗೆ ಮತ್ತು ಆ ಕನಸಿನ ಸಾಕಾರದವರೆಗೆ, ರಾಜ್ಯದ ರೂಪಾಂತರದ ಪ್ರತಿಯೊಂದು ಹಂತಕ್ಕೂ ನಾನು ಸಾಕ್ಷಿಯಾಗಿದ್ದೇನೆ. ಇಂದು ಛತ್ತೀಸ್‌ಗಢವು ತನ್ನ 25 ವರ್ಷಗಳ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ತಲುಪುತ್ತಿರುವಾಗ, ಈ ಐತಿಹಾಸಿಕ ಕ್ಷಣದ ಭಾಗವಾಗಲು ನನಗೆ ಮತ್ತೊಮ್ಮೆ ಗೌರವ ದೊರೆತಿದೆ. ಈ ಬೆಳ್ಳಿ ಮಹೋತ್ಸವ ಆಚರಣೆ ಗುರುತಿಸಲು ರಾಜ್ಯದ ಜನರಿಗಾಗಿ ಈ ಹೊಸ ಶಾಸಕಾಂಗ ಕಟ್ಟಡವನ್ನು ಉದ್ಘಾಟಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಈ ಶುಭ ಸಂದರ್ಭದಲ್ಲಿ ಛತ್ತೀಸ್‌ಗಢದ ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
2025ನೇ ವರ್ಷವು ಭಾರತೀಯ ಗಣರಾಜ್ಯದ ಅಮೃತ ವರ್ಷವೂ ಆಗಿದೆ. 75 ವರ್ಷಗಳ ಹಿಂದೆ ಭಾರತವು ತನ್ನ ನಾಗರಿಕರಿಗೆ ತನ್ನ ಸಂವಿಧಾನವನ್ನು ಅರ್ಪಿಸಿತು. ಈ ಐತಿಹಾಸಿಕ ಸಂದರ್ಭದಲ್ಲಿ, ನಾನು ಈ ಪ್ರದೇಶದಿಂದ ಸಂವಿಧಾನ ಸಭೆಯ ಗಣ್ಯ ಸದಸ್ಯರಾದ ಪಂಡಿತ್ ರವಿಶಂಕರ್ ಶುಕ್ಲಾ ಜಿ, ಬ್ಯಾರಿಸ್ಟರ್ ಠಾಕೂರ್ ಚೆದಿಲಾಲ್ ಜಿ, ಘನಶ್ಯಾಮ್ ಸಿಂಗ್ ಗುಪ್ತಾ ಜಿ, ಕಿಶೋರಿ ಮೋಹನ್ ತ್ರಿಪಾಠಿ ಜಿ, ರಾಮಪ್ರಸಾದ್ ಪೊಟೈ ಜಿ ಮತ್ತು ರಘುರಾಜ್ ಸಿಂಗ್ ಜಿ ಅವರಿಗೆ ಗೌರವ ಸಲ್ಲಿಸುತ್ತೇನೆ. ಹೆಚ್ಚು ಅಭಿವೃದ್ಧಿ ಕಾಣದ ಈ ಪ್ರದೇಶದಿಂದ ಬಂದ ಈ ದಾರ್ಶನಿಕರು ದೆಹಲಿಯನ್ನು ತಲುಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಸಂವಿಧಾನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸ್ನೇಹಿತರೆ,
ಇಂದು ಛತ್ತೀಸ್‌ಗಢದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ. ಈ ಭವ್ಯ ಮತ್ತು ಆಧುನಿಕ ವಿಧಾನಸಭಾ ಕಟ್ಟಡದ ಉದ್ಘಾಟನೆಯು ಕೇವಲ ಒಂದು ಕಟ್ಟಡ ರಚನೆಯ ಸಮರ್ಪಣೆಯಲ್ಲ, ಆದರೆ ಇದು 25 ವರ್ಷಗಳ ಜನರ ಆಕಾಂಕ್ಷೆಗಳು, ಹೋರಾಟಗಳು ಮತ್ತು ಹೆಮ್ಮೆಯ ಆಚರಣೆಯಾಗಿದೆ. ಇಂದು ಛತ್ತೀಸ್‌ಗಢ ತನ್ನ ಕನಸುಗಳ ಹೊಸ ಶಿಖರದಲ್ಲಿ ನಿಂತಿದೆ. ಈ ಹೆಮ್ಮೆಯ ಕ್ಷಣದಲ್ಲಿ, ದೂರದೃಷ್ಟಿ ಮತ್ತು ಕರುಣೆಯಿಂದ ಈ ರಾಜ್ಯವನ್ನು ಸೃಷ್ಟಿಸಿದ ಮಹಾನ್ ದಾರ್ಶನಿಕ ಮತ್ತು ಈ ಮಹಾನ್ ರಾಜನೀತಿಜ್ಞ ಭಾರತ ರತ್ನ, ಪೂಜ್ಯ ಅಟಲ್ ಬಿಹಾರಿ ವಾಜಪೇಯಿ ಜಿ ಅವರಿಗೆ ನಾನು ನಮಿಸುತ್ತೇನೆ.
ಸ್ನೇಹಿತರೆ,
2000ರಲ್ಲಿ ಅಟಲ್ ಜಿ ಛತ್ತೀಸ್‌ಗಢ ರಾಜ್ಯ ರಚಿಸಿದಾಗ, ಅವರ ನಿರ್ಧಾರವು ಕೇವಲ ಆಡಳಿತಾತ್ಮಕ ನಿರ್ಧಾರವಾಗಿರಲಿಲ್ಲ. ಆ ನಿರ್ಧಾರವು ಅಭಿವೃದ್ಧಿಯ ಹೊಸ ಮಾರ್ಗಗಳನ್ನು ತೆರೆಯಲು ಮತ್ತು ಛತ್ತೀಸ್‌ಗಢದ ಆತ್ಮಕ್ಕೆ ಗುರುತು ನೀಡುವ ಒಂದು ದಾರ್ಶನಿಕ ಹೆಜ್ಜೆಯಾಗಿತ್ತು. ಅದಕ್ಕಾಗಿಯೇ ಇಂದು ಅಟಲ್ ಜಿ ಪ್ರತಿಮೆಯ ಅನಾವರಣದೊಂದಿಗೆ ಭವ್ಯವಾದ ಹೊಸ ವಿಧಾನಸಭಾ ಕಟ್ಟಡ ಉದ್ಘಾಟನೆಯಾಗುತ್ತಿದ್ದಂತೆ, ನನ್ನ ಹೃದಯವು ಭಾವನೆಗಳಿಂದ ತುಂಬಿದೆ. ನಾನು ಹೇಳಲು ಬಯಸುತ್ತೇನೆ: ಅಟಲ್ ಜಿ, ನೀವು ಎಲ್ಲಿದ್ದರೂ ನೋಡಿ ನಿಮ್ಮ ಕನಸು ನನಸಾಗುತ್ತಿದೆ. ನೀವು ನಿರ್ಮಿಸಿದ ಛತ್ತೀಸ್‌ಗಢ ಇಂದು ಆತ್ಮವಿಶ್ವಾಸದಿಂದ ಬೀಗುತ್ತಿದೆ, ಪ್ರಗತಿಯ ಹೊಸ ಎತ್ತರವನ್ನು ತಲುಪುತ್ತಿದೆ.
ಸ್ನೇಹಿತರೆ,
ಛತ್ತೀಸ್‌ಗಢ ವಿಧಾನಸಭೆಯ ಇತಿಹಾಸವೇ ಒಂದು ಸ್ಫೂರ್ತಿಯಾಗಿದೆ. ಈ ಸುಂದರ ರಾಜ್ಯವು 2000ರಲ್ಲಿ ರಚನೆಯಾದಾಗ, ಮೊದಲ ವಿಧಾನಸಭೆ ಅಧಿವೇಶನವು ರಾಯ್‌ಪುರದ ರಾಜ್‌ಕುಮಾರ್ ಕಾಲೇಜಿನ ಜಶ್‌ಪುರ ಸಭಾಂಗಣದಲ್ಲಿ ನಡೆಯಿತು. ಅವು ಸೀಮಿತ ಸಂಪನ್ಮೂಲಗಳ ದಿನಗಳಾಗಿದ್ದವು, ಆದರೆ ಅಪರಿಮಿತ ಕನಸುಗಳಾಗಿದ್ದವು. ಆ ಸಮಯದಲ್ಲಿ ಒಂದೇ ಒಂದು ಭಾವನೆಯೆಂದರೆ, ನಾವು ನಮ್ಮ ಹಣೆಬರಹವನ್ನು ರೂಪಿಸುತ್ತೇವೆ ಮತ್ತು ಅದನ್ನು ವೇಗವಾಗಿ ಹೊಳೆಯುವಂತೆ ಮಾಡುತ್ತೇವೆ. ನಂತರ, ಬಂದ ವಿಧಾನಸಭೆ ಕಟ್ಟಡವು ಮೂಲತಃ ಮತ್ತೊಂದು ಇಲಾಖೆಯ ಆವರಣದ ಭಾಗವಾಗಿತ್ತು. ಅಲ್ಲಿಂದ ಛತ್ತೀಸ್‌ಗಢದ ಪ್ರಜಾಸತ್ತಾತ್ಮಕ ಪ್ರಯಾಣ ಪ್ರಾರಂಭವಾಯಿತು, ಹೊಸ ಶಕ್ತಿಯಿಂದ ತುಂಬಿತ್ತು. ಇಂದು 25 ವರ್ಷಗಳ ನಂತರ, ಅದೇ ಪ್ರಜಾಪ್ರಭುತ್ವ ಮತ್ತು ಅದೇ ಜನರು ಆಧುನಿಕ, ಡಿಜಿಟಲ್ ಮತ್ತು ಸ್ವಾವಲಂಬಿ ವಿಧಾನಸಭಾ ಸಂಕೀರ್ಣವನ್ನು ಉದ್ಘಾಟಿಸುತ್ತಿದ್ದಾರೆ.
ಸ್ನೇಹಿತರೆ,
ಈ ಕಟ್ಟಡವು ಪ್ರಜಾಪ್ರಭುತ್ವದ ಪವಿತ್ರ ಸ್ಥಳವಾಗಿದೆ. ಇಲ್ಲಿರುವ ಪ್ರತಿಯೊಂದು ಕಂಬವು ಪಾರದರ್ಶಕತೆಯ ಸಂಕೇತವಾಗಿ ನಿಂತಿದೆ. ಪ್ರತಿಯೊಂದು ಕಾರಿಡಾರ್ ನಮಗೆ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಪ್ರತಿಯೊಂದು ಕೊಠಡಿಯು ಜನರ ಧ್ವನಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು ಮುಂಬರುವ ದಶಕಗಳಲ್ಲಿ ಛತ್ತೀಸ್‌ಗಢದ ಭವಿಷ್ಯವನ್ನು ರೂಪಿಸುತ್ತವೆ. ಇಲ್ಲಿ ಮಾತನಾಡುವ ಪ್ರತಿಯೊಂದು ಮಾತು ಛತ್ತೀಸ್‌ಗಢದ ಭೂತ, ವರ್ತಮಾನ ಮತ್ತು ಭವಿಷ್ಯದ ಪ್ರಮುಖ ಭಾಗವಾಗುತ್ತದೆ. ಈ ಕಟ್ಟಡವು ಪೀಳಿಗೆಯಿಂದ ಪೀಳಿಗೆಗೆ ರಾಜ್ಯದ ನೀತಿ, ಹಣೆಬರಹ ಮತ್ತು ನೀತಿ ನಿರೂಪಕರ ಕೇಂದ್ರಬಿಂದುವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ಇಂದು ಇಡೀ ರಾಷ್ಟ್ರವು 'ವಿರಾಸತ್' (ಪರಂಪರೆ) ಮತ್ತು 'ವಿಕಾಸ್' (ಅಭಿವೃದ್ಧಿ) ಎರಡನ್ನೂ ಅಳವಡಿಸಿಕೊಳ್ಳುವ ಮೂಲಕ ಮುಂದುವರಿಯುತ್ತಿದೆ. ಈ ಚೈತನ್ಯವು ಸರ್ಕಾರದ ಪ್ರತಿಯೊಂದು ನೀತಿ ಮತ್ತು ನಿರ್ಧಾರದಲ್ಲಿ ಗೋಚರಿಸುತ್ತದೆ. ಪವಿತ್ರ ಸೆಂಗೋಲ್ ನಮ್ಮ ಹೊಸ ಸಂಸತ್ತಿಗೆ ಸ್ಫೂರ್ತಿ ನೀಡುತ್ತಿದೆ. ಸಂಸತ್ತಿನ ಹೊಸ ಗ್ಯಾಲರಿಗಳು ಇಡೀ ಜಗತ್ತನ್ನು ಭಾರತೀಯ ಪ್ರಜಾಪ್ರಭುತ್ವದ ಪ್ರಾಚೀನ ಬೇರುಗಳೊಂದಿಗೆ ಸಂಪರ್ಕಿಸುತ್ತಿವೆ. ಸಂಸತ್ತಿನ ಸಂಕೀರ್ಣದಲ್ಲಿ ಸ್ಥಾಪಿಸಲಾದ ಪ್ರತಿಮೆಗಳು ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಎಷ್ಟು ಆಳವಾಗಿ ಹರಡಿವೆ ಎಂಬುದನ್ನು ಜಗತ್ತಿಗೆ ನೆನಪಿಸುತ್ತವೆ.
ಸ್ನೇಹಿತರೆ,
ಭಾರತದ ಈ ದೃಷ್ಟಿಕೋನ ಮತ್ತು ಚೈತನ್ಯವು ಛತ್ತೀಸ್‌ಗಢದ ಹೊಸ ವಿಧಾನಸಭಾ ಕಟ್ಟಡದಲ್ಲಿಯೂ ಪ್ರತಿಫಲಿಸುತ್ತದೆ ಎಂಬುದರಿಂದ ನನಗೆ ಸಂತೋಷವಾಗಿದೆ.
ಸ್ನೇಹಿತರೆ,
ಛತ್ತೀಸ್‌ಗಢದ ಹೊಸ ವಿಧಾನಸಭಾ ಸಂಕೀರ್ಣವು ರಾಜ್ಯದ ಶ್ರೀಮಂತ ಸಂಸ್ಕೃತಿಯ ನಿಜವಾದ ಪ್ರತಿಬಿಂಬವಾಗಿದೆ. ಈ ವಿಧಾನಸಭೆಯ ಪ್ರತಿಯೊಂದು ಮೂಲೆಯೂ ಛತ್ತೀಸ್‌ಗಢದ ಪವಿತ್ರ ಮಣ್ಣಿನಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳ ಸ್ಫೂರ್ತಿ ಹೊಂದಿದೆ. ವಂಚಿತರಿಗೆ ಆದ್ಯತೆ ನೀಡುತ್ತಾ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' (ಎಲ್ಲರ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವುದು) ಬಿಜೆಪಿ ಸರ್ಕಾರದ ಉತ್ತಮ ಆಡಳಿತದ ಲಕ್ಷಣಗಳಾಗಿವೆ. ಅವು ರಾಷ್ಟ್ರದ ಸಂವಿಧಾನದ ಚೈತನ್ಯವನ್ನು ಸಹ ಪ್ರತಿನಿಧಿಸುತ್ತವೆ. ಈ ಮೌಲ್ಯಗಳು ನಮ್ಮ ಋಷಿಗಳು, ಮುನಿಗಳು, ಸಾಧು ಸಂತರು ಮತ್ತು ಮಹಾನ್ ನಾಯಕರ ಶಾಶ್ವತ ಬೋಧನೆಗಳಾಗಿವೆ.
ಸ್ನೇಹಿತರೆ,
ಈ ಭವ್ಯ ಕಟ್ಟಡವನ್ನು ನಾನು ವೀಕ್ಷಿಸುತ್ತಿರುವಾಗ, ಬಸ್ತಾರ್ ಕಲೆಯ ಸುಂದರ ಕೆತ್ತನೆಗಳನ್ನು ನಾನು ನೋಡಿದೆ. ಕೆಲವು ತಿಂಗಳ ಹಿಂದೆ ನಾನು ಥಾಯ್ಲೆಂಡ್ ಪ್ರಧಾನಿಗೆ ಬಸ್ತಾರ್ ಕಲೆಯ ಒಂದು ತುಣುಕನ್ನು ಉಡುಗೊರೆಯಾಗಿ ನೀಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಬಸ್ತಾರ್‌ನ ಈ ಕಲಾ ಪ್ರಕಾರವು ನಮ್ಮ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಶಕ್ತಿಯ ಸಂಕೇತವಾಗಿದೆ.
ಸ್ನೇಹಿತರೆ,
ಈ ಕಟ್ಟಡದ ಗೋಡೆಗಳು ಬಾಬಾ ಗುರು ಘಾಸಿದಾಸ್ ಅವರ "ಮಾಣಿಖೇ-ಮಾಣಿಖೇ ಏಕ್ ಸಮಾನ್" (ಪ್ರತಿಯೊಬ್ಬ ಮನುಷ್ಯನೂ ಸಮಾನ) ಸಂದೇಶವನ್ನು ಹೊತ್ತಿವೆ, ಇದು ನಮಗೆ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ಸಮ್ಮಾನ್ (ಒಟ್ಟಾಗಿರುವಿಕೆ, ಎಲ್ಲರಿಗೂ ಅಭಿವೃದ್ಧಿ ಮತ್ತು ಎಲ್ಲರಿಗೂ ಗೌರವ)ನ ಸಾರವನ್ನು ಕಲಿಸುತ್ತದೆ. ಈ ಕಟ್ಟಡದ ಪ್ರತಿಯೊಂದು ದ್ವಾರವು ಮಾತಾ ಶಬರಿ ಕಲಿಸಿದ ಹುರುಪು ಮತ್ತು ನಮ್ರತೆಯನ್ನು ಸಾಕಾರಗೊಳಿಸುತ್ತದೆ, ಇದು ಪ್ರತಿಯೊಬ್ಬ ಅತಿಥಿಯನ್ನು, ಪ್ರತಿಯೊಬ್ಬ ನಾಗರಿಕನನ್ನು ಪ್ರೀತಿಯಿಂದ ಸ್ವಾಗತಿಸುವುದನ್ನು ನಮಗೆ ನೆನಪಿಸುತ್ತದೆ. ಈ ಸಭೆಯ ಪ್ರತಿಯೊಂದು ಆಸನವು ಸಂತ ಕಬೀರ್ ಕಲಿಸಿದ ಸತ್ಯ ಮತ್ತು ನಿರ್ಭಯತೆಯ ಮನೋಭಾವ ಹೊಂದಿದೆ. ಈ ಕಟ್ಟಡದ ಅಡಿಪಾಯದಲ್ಲೇ ಮಹಾಪ್ರಭು ವಲ್ಲಭಾಚಾರ್ಯ ಜಿ ಅವರ ಸಂಕಲ್ಪವಿದೆ, ಅದು 'ನಾರ್ ಸೇವೆ, ನಾರಾಯಣ ಸೇವೆ'(ಮಾನವತೆಯ ಸೇವೆಯೇ ದೇವರ ಸೇವೆ)ಯಾಗಿದೆ.
ಸ್ನೇಹಿತರೆ,
ಭಾರತ ಪ್ರಜಾಪ್ರಭುತ್ವದ ತಾಯಿ. ನಮ್ಮ ಬುಡಕಟ್ಟು ಸಮಾಜವು ತಲೆಮಾರುಗಳಿಂದ ಈ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಬದುಕಿದೆ ಮತ್ತು ಪಾಲಿಸಿದೆ. ಬಸ್ತಾರ್‌ನ 'ಆದಿಮ್ ಸಂಸದ್'(ಪ್ರಾಚೀನ ಸಂಸತ್ತು) ಎಂದು ಕರೆಯಲ್ಪಡುವ ಮುರಿಯಾ ದರ್ಬಾರ್ ಈ ಪರಂಪರೆಯ ಜೀವಂತ ಉದಾಹರಣೆಯಾಗಿದೆ. ಶತಮಾನಗಳಿಂದ, ನಮ್ಮ ಸಮಾಜ ಮತ್ತು ಆಡಳಿತವು 'ಆದಿಮ್ ಸಂಸದ್' ಮೂಲಕ ಸಾಮೂಹಿಕ ಪರಿಹಾರಗಳನ್ನು ಕಂಡುಕೊಳ್ಳಲು ಒಟ್ಟಿಗೆ ಬಂದಿದೆ. ಈ ಹೊಸ ಸಭೆಯು ಮುರಿಯಾ ದರ್ಬಾರ್‌ನ ಸಂಪ್ರದಾಯಕ್ಕೆ ಸರಿಯಾದ ಸ್ಥಳ ಮತ್ತು ಗೌರವವನ್ನು ನೀಡುತ್ತದೆ ಎಂಬುದರಿಂದ ನನಗೆ ಸಂತೋಷವಾಗಿದೆ.
ಸ್ನೇಹಿತರೆ,
ಒಂದೆಡೆ, ಈ ಸಭೆಯ ಪ್ರತಿಯೊಂದು ಮೂಲೆಯೂ ನಮ್ಮ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ, ಮತ್ತೊಂದೆಡೆ, ಸ್ಪೀಕರ್ ಕುರ್ಚಿಯನ್ನು ರಮಣ್ ಸಿಂಗ್ ಜಿ ಅವರ ಅನುಭವಿ ನಾಯಕತ್ವವು ಅಲಂಕರಿಸಿದೆ. ಪಕ್ಷದ ಸಮರ್ಪಿತ ಕಾರ್ಯಕರ್ತ, ಕಠಿಣ ಪರಿಶ್ರಮ ಮತ್ತು ಭಕ್ತಿಯ ಮೂಲಕ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದರ ನಿಜವಾದ ಉತ್ಸಾಹದಲ್ಲಿ ಹೇಗೆ ಬಲಪಡಿಸಬಹುದು ಮತ್ತು ಎತ್ತಿ ಹಿಡಿಯಬಹುದು ಎಂಬುದಕ್ಕೆ ರಮಣ್ ಜಿ ಒಂದು ಉಜ್ವಲ ಉದಾಹರಣೆಯಾಗಿ ನಿಂತಿದ್ದಾರೆ.
ಸ್ನೇಹಿತರೆ,
ಕ್ರಿಕೆಟ್‌ನಲ್ಲಿ ಒಂದು ಕಾಲದಲ್ಲಿ ನಾಯಕರಾಗಿದ್ದವರು ನಂತರ ತಂಡದ ಸದಸ್ಯರಾಗಿ ಆಡುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ, ಆದರೆ ರಾಜಕೀಯದಲ್ಲಿ ಅಂತಹ ಉದಾಹರಣೆಗಳು ವಿರಳವಾಗಿ ಕಂಡುಬರುತ್ತವೆ. ಆದರೂ ರಮಣ್ ಸಿಂಗ್ ಜಿ ಅವರು ನಿಖರವಾಗಿ ಇದೇ ಮಾದರಿಯನ್ನು ಹೊಂದಿದ್ದಾರೆ. ಒಮ್ಮೆ ನಾಯಕರಾಗಿದ್ದ ಅವರು ಈಗ ಛತ್ತೀಸ್‌ಗಢದ ಪ್ರಗತಿಗೆ ನಿಜವಾದ ಉತ್ಸಾಹ ಮತ್ತು ಬದ್ಧತೆಯೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಸೇವೆಗೆ ಮೀಸಲಾಗಿರುವ ಪ್ರತಿಯೊಬ್ಬ ಕೆಲಸಗಾರರಿಗೂ ಅವರು ಸ್ಫೂರ್ತಿಯಾಗಿ ನಿಂತಿದ್ದಾರೆ.
ಸ್ನೇಹಿತರೆ,
ರಾಷ್ಟ್ರಕವಿ ನಿರಾಲ ಜಿ ಒಮ್ಮೆ ಸರಸ್ವತಿ ದೇವಿಯನ್ನು ತಮ್ಮ ಶ್ಲೋಕದಲ್ಲಿ ಪ್ರಾರ್ಥಿಸಿದರು: प्रिय स्वतंत्र-रव अमृत-मंत्र नव भारत में भर दे (ಪ್ರೀತಿಯ ಸ್ವತಂತ್ರ ಧ್ವನಿಯ ಅಮೃತದಿಂದ ನವ ಭಾರತವನ್ನು ತುಂಬಿರಿ.). ಇವು ಕೇವಲ ಕಾವ್ಯಾತ್ಮಕ ಸಾಲುಗಳಾಗಿರದೆ, ಅವು ಹೊಸ, ಮುಕ್ತ ಭಾರತವನ್ನು ನಿರ್ಮಿಸುವ ಮಂತ್ರವಾಗಿದ್ದವು. ಅವರು ಹೊಸ ಲಯ, ಹೊಸ ವೇಗ ಮತ್ತು ಹೊಸ ಧ್ವನಿಯ ಬಗ್ಗೆ ಮಾತನಾಡಿದ್ದರು. ಅಂದರೆ, ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಭಾರತದ ದೃಷ್ಟಿಕೋನ, ಆದರೆ ಭವಿಷ್ಯದ ಕಡೆಗೆ ಸಂಪೂರ್ಣ ವಿಶ್ವಾಸದಿಂದ ಮುಂದುವರಿಯುವುದಾಗಿದೆ. ಇಂದು ನಾವು ಛತ್ತೀಸ್‌ಗಢದ ಈ ಹೊಸ ವಿಧಾನಸಭಾ ಕಟ್ಟಡದಲ್ಲಿ ನಿಂತಿರುವಾಗ, ಆ ಚೈತನ್ಯವು ಇಲ್ಲಿ ಜೀವಂತವಾಗಿದೆ. ಈ ಕಟ್ಟಡವು ಆ 'ಹೊಸ ಧ್ವನಿ'ಯ ಸಂಕೇತವಾಗಿದೆ, ಅಲ್ಲಿ ಹಳೆಯ ಅನುಭವಗಳ ಪ್ರತಿಧ್ವನಿ ಹೊಸ ಕನಸುಗಳ ಶಕ್ತಿಯನ್ನು ಪೂರೈಸುತ್ತದೆ. ಈ ಶಕ್ತಿಯೊಂದಿಗೆ, ನಾವು ಭಾರತವನ್ನು ನಿರ್ಮಿಸಬೇಕು. 'ವಿರಾಸತ್'(ಪರಂಪರೆ)ಗೆ ಸಂಪರ್ಕ ಹೊಂದಿರುವ, ಆದರೆ 'ವಿಕಾಸ್'(ಅಭಿವೃದ್ಧಿ) ಹಾದಿಯಲ್ಲಿ ವಿಶ್ವಾಸದಿಂದ ಮುಂದಕ್ಕೆ ಸಾಗುವ ಛತ್ತೀಸ್‌ಗಢಕ್ಕೆ ಭದ್ರ ಅಡಿಪಾಯ ಹಾಕಬೇಕು.
ಸ್ನೇಹಿತರೆ,
‘ನಾಗರಿಕ ದೇವೋ ಭವ’(ನಾಗರಿಕನೇ ದೈವ) ನಮ್ಮ ಉತ್ತಮ ಆಡಳಿತದ ಮಾರ್ಗದರ್ಶಿ ಮಂತ್ರವಾಗಿದೆ. ಅದಕ್ಕಾಗಿಯೇ ಈ ಸಭೆಯಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಜನರ ಕಲ್ಯಾಣ ಆಧರಿಸಿರಬೇಕು. ಇಲ್ಲಿ ಸುಧಾರಣೆಗಳನ್ನು ವೇಗಗೊಳಿಸುವ, ಜನರ ಜೀವನವನ್ನು ಸರಳಗೊಳಿಸುವ ಮತ್ತು ಅನಗತ್ಯ ಸರ್ಕಾರಿ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಕಾನೂನುಗಳನ್ನು ರೂಪಿಸಸಬೇಕು. ಸರ್ಕಾರದ ಅನುಪಸ್ಥಿತಿ ಅಥವಾ ಅತಿಯಾದ ಆಡಳಿತ ಇರಬಾರದು. ತ್ವರಿತ ಪ್ರಗತಿಗೆ ಇದು ಏಕೈಕ ನಿಜವಾದ ಮಂತ್ರ.
ಸ್ನೇಹಿತರೆ,
ನಮ್ಮ ಛತ್ತೀಸ್‌ಗಢ ಭಗವಾನ್ ಶ್ರೀ ರಾಮನ ತಾಯಿಯ ಮನೆ. ಭಗವಾನ್ ರಾಮ ಈ ಭೂಮಿಯ ಪ್ರೀತಿಯ ಸೋದರಳಿಯ. ಈ ಹೊಸ ವಿಧಾನಸಭಾ ಸಂಕೀರ್ಣದಲ್ಲಿ ಭಗವಾನ್ ಶ್ರೀರಾಮನ ಆದರ್ಶಗಳನ್ನು ನೆನಪಿಸಿಕೊಳ್ಳಲು ಇಂದಿಗಿಂತ ಹೆಚ್ಚಿನ ಶುಭ ಸಂದರ್ಭ ಬರಬೇಕೆ? ಭಗವಾನ್ ರಾಮನ ಆದರ್ಶಗಳು ನಮಗೆ ಉತ್ತಮ ಆಡಳಿತದ ತತ್ವಗಳನ್ನು ಕಲಿಸುತ್ತವೆ.
ಸ್ನೇಹಿತರೆ,
ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ನಾವೆಲ್ಲರೂ "ದೇವರಿಂದ ದೇಶಕ್ಕೆ" ಮತ್ತು "ರಾಮನಿಂದ ರಾಷ್ಟ್ರಕ್ಕೆ" (ದೇವರಿಂದ ರಾಷ್ಟ್ರಕ್ಕೆ, ರಾಮನಿಂದ ಗಣರಾಜ್ಯಕ್ಕೆ) ಎಂಬ ಸಂಕಲ್ಪ ಸ್ವೀಕರಿಸಿದೆವು. "ರಾಮನಿಂದ ರಾಷ್ಟ್ರ" ಎಂದರೆ ರಾಮರಾಜ್ಯ ಅಂದರೆ ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದ ಆಳ್ವಿಕೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದರರ್ಥ ಸಬ್‌ಕಾ ಸಾಥ್, ಸಬ್ಕಾ ವಿಕಾಸ್ ಮಾರ್ಗದರ್ಶನದ ನಿಯಮ. "ರಾಮನಿಂದ ರಾಷ್ಟ್ರದವರೆಗೆ" ಎಂದರೆ ಯಾರೂ ಬಡವರಲ್ಲದ, ಯಾರೂ ದುಃಖಿತರಲ್ಲದ ರಾಷ್ಟ್ರ. ಬಡತನದಿಂದ ಮುಕ್ತವಾದ ಸಮೃದ್ಧ ಭಾರತ. "ರಾಮನಿಂದ ರಾಷ್ಟ್ರಕ್ಕೆ" ಎಂದರೆ ಅಕಾಲಿಕ ಮರಣ ಬಾರದಿರುವುದು, ರೋಗದಿಂದ ಬಳಲುತ್ತಿರಬಾರದು, ಆರೋಗ್ಯಕರ ಮತ್ತು ಸಂತೋಷ ತುಂಬಿದ ಭಾರತದ ಸೃಷ್ಟಿ. "ರಾಮನಿಂದ ರಾಷ್ಟ್ರಕ್ಕೆ" ಎಂದರೆ ತಾರತಮ್ಯದಿಂದ ಮುಕ್ತವಾದ, ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಸಮಾನತೆಯ ಅಡಿಪಾಯದ ಮೇಲೆ ನಿರ್ಮಿಸಲಾದ ಸಮಾಜವಾಗಬೇಕು.
ಸ್ನೇಹಿತರೆ,
“ರಾಮನಿಂದ ರಾಷ್ಟ್ರ” ಎಂದರೆ “ನಿಸಿಚಾರ್ ಹೀನ್ ಕರೂನ್ ಮಹಿ ಭುಜ್ ಉಥಾಯ್ ಪನ್ ಕಿನ್” ಅಂದರೆ, ಮಾನವತೆಯ ವಿರುದ್ಧದ ಶಕ್ತಿಗಳನ್ನು ನಿರ್ಮೂಲನೆ ಮಾಡುವ, ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಂಕಲ್ಪ. ಇದು ನಿಖರವಾಗಿ ನಾವು ಆಪರೇಷನ್ ಸಿಂದೂರ್‌ನಲ್ಲಿ ನೋಡಿದ್ದೇವೆ. ಭಯೋತ್ಪಾದನೆ ನಿರ್ಮೂಲನೆ ಮಾಡುವ ಸ್ಕಲ್ಪ ತೆಗೆದುಕೊಂಡು, ಭಾರತವು ಭಯೋತ್ಪಾದಕ ಜಾಲಗಳ ಬೆನ್ನೆಲುಬು ಮುರಿಯುತ್ತಿದೆ. ಭಾರತವು ಈಗ ನಕ್ಸಲಿಸಂ ಮತ್ತು ಮಾವೋವಾದಿ ಹಿಂಸಾಚಾರವನ್ನು ಕೊನೆಗೊಳಿಸುವತ್ತ ನಿರ್ಣಾಯಕವಾಗಿ ಸಾಗುತ್ತಿದೆ. ಭಾರತವು ಇಂದು ತನ್ನ ಅಭೂತಪೂರ್ವ ವಿಜಯಗಳಿಂದ ಹೆಮ್ಮೆಯಿಂದ ಬೀಗುತ್ತಿದೆ. ಈ ಹೊಸ ಛತ್ತೀಸ್‌ಗಢ ವಿಧಾನಸಭಾ ಸಂಕೀರ್ಣದಾದ್ಯಂತ ಅದೇ ಹೆಮ್ಮೆಯ ಮನೋಭಾವ ಹರಡಿದೆ.
ಸ್ನೇಹಿತರೆ,
ಕಳೆದ 25 ವರ್ಷಗಳಲ್ಲಿ ಛತ್ತೀಸ್‌ಗಢವು ಗಮನಾರ್ಹ ಮತ್ತು ಸ್ಫೂರ್ತಿದಾಯಕ ಪರಿವರ್ತನೆಗೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ನಕ್ಸಲ್‌ವಾದ ಮತ್ತು ಹಿಂದುಳಿದಿರುವಿಕೆಗೆ ಹೆಸರುವಾಸಿಯಾಗಿದ್ದ ಅದೇ ರಾಜ್ಯವು ಇಂದು ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆಯ ಸಂಕೇತವಾಗಿದೆ. ಬಸ್ತಾರ್ ಒಲಿಂಪಿಕ್ಸ್ ಬಗ್ಗೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಒಂದು ಕಾಲದಲ್ಲಿ ನಕ್ಸಲ್‌ವಾದದಿಂದ ಪ್ರಭಾವಿತವಾಗಿದ್ದ ಪ್ರದೇಶಗಳು ಈಗ ಅಭಿವೃದ್ಧಿಯ ಅಲೆಯನ್ನು ಮತ್ತು ಶಾಂತಿಯ ನಗು ಕಾಣುತ್ತಿವೆ. ಈ ಪರಿವರ್ತನೆಯ ಹಿಂದೆ ಛತ್ತೀಸ್‌ಗಢದ ಜನರ ಕಠಿಣ ಪರಿಶ್ರಮ ಮತ್ತು ಬಿಜೆಪಿ ಸರ್ಕಾರಗಳ ದೂರದೃಷ್ಟಿಯ ನಾಯಕತ್ವವಿದೆ.
ಸ್ನೇಹಿತರೆ,
ಛತ್ತೀಸ್‌ಗಢದ ಬೆಳ್ಳಿ ಮಹೋತ್ಸವ ಆಚರಣೆಗಳು ಕೇವಲ ಒಂದು ಮೈಲಿಗಲ್ಲು ಅಲ್ಲ, ಬದಲಾಗಿ ಒಂದು ದೊಡ್ಡ ಪ್ರಯಾಣದ ಆರಂಭವನ್ನು ಸೂಚಿಸುತ್ತವೆ. 2047ರ ಹೊತ್ತಿಗೆ, ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, ಛತ್ತೀಸ್‌ಗಢವು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ದೃಷ್ಟಿಕೋನವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಇಲ್ಲಿ ಹಾಜರಿರುವ ಪ್ರತಿಯೊಬ್ಬರೂ, ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯೂ, 'ವಿಕಸಿತ ಭಾರತ'ದಲ್ಲಿ ಪ್ರತಿಯೊಂದು ರಾಜ್ಯವನ್ನು ಹೊಸ ಎತ್ತರವನ್ನು ಸಾಧಿಸಲು ಪ್ರೇರೇಪಿಸುವ ವ್ಯವಸ್ಥೆ ಮತ್ತು ವಿಧಾನಸಭೆಯನ್ನು ನಿರ್ಮಿಸುವಂತೆ ನಾನು ಕರೆ ನೀಡುತ್ತೇನೆ. ಈ ಸದನದಲ್ಲಿ ನಡೆಯುವ ಪ್ರತಿಯೊಂದು ಚರ್ಚೆ, ಎತ್ತಲಾದ ಪ್ರತಿಯೊಂದು ಪ್ರಶ್ನೆ ಮತ್ತು ಪ್ರತಿಯೊಂದು ಚರ್ಚೆಯಲ್ಲಿ ಶ್ರೇಷ್ಠತೆ ಇರಲಿ. ನಾವು ಏನೇ ಮಾಡಿದರೂ, ಯಾವುದೇ ರೂಪದಲ್ಲಿ ಮಾಡಿದರೂ, ನಮ್ಮ ಅಂತಿಮ ಗುರಿ "ವಿಕಸಿತ ಛತ್ತೀಸ್‌ಗಢ, ವಿಕಸಿತ ಭಾರತ" (ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಛತ್ತೀಸ್‌ಗಢ) ಆಗಿರಬೇಕು.
ಸ್ನೇಹಿತರೆ,
ಈ ಹೊಸ ವಿಧಾನಸಭೆಯ ನಿಜವಾದ ಶ್ರೇಷ್ಠತೆಯನ್ನು ಅದರ ವಾಸ್ತುಶಿಲ್ಪ ಭವ್ಯತೆಯಿಂದ ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ಇಲ್ಲಿ ತೆಗೆದುಕೊಳ್ಳಲಾದ ಕಲ್ಯಾಣ-ಆಧಾರಿತ ನಿರ್ಧಾರಗಳಿಂದ ವ್ಯಾಖ್ಯಾನಿಸಲಾಗುತ್ತದೆ. ಈ ಸದನವು ಜನರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಎಷ್ಟು ಆಳವಾಗಿ ಅರ್ಥ ಮಾಡಿಕೊಳ್ಳುತ್ತದೆ, ಅವುಗಳನ್ನು ಪೂರೈಸಲು ಅದು ಎಷ್ಟು ದೃಢನಿ ಶ್ಚಯದಿಂದ ಕಾರ್ಯ ನಿರ್ವಹಿಸುತ್ತದೆ ಎಂಬುದರ ಮೂಲಕ ಇದನ್ನು ಅಳೆಯಲಾಗುತ್ತದೆ. ಇಲ್ಲಿನ ಪ್ರತಿಯೊಂದು ನಿರ್ಧಾರವು ರೈತರ ಶ್ರಮವನ್ನು ಗೌರವಿಸಬೇಕು, ಯುವಕರ ಆಕಾಂಕ್ಷೆಗಳಿಗೆ ಮಾರ್ಗದರ್ಶನ ನೀಡಬೇಕು, 'ನಾರಿ ಶಕ್ತಿ' (ಮಹಿಳಾ ಸಬಲೀಕರಣ)ಗೆ ಹೊಸ ಭರವಸೆ ತರಬೇಕು, ಸಮಾಜದ ಬಡವರನ್ನು ಉನ್ನತೀಕರಿಸಬೇಕು. ಈ ಸಭೆಯು ಕಾನೂನುಗಳನ್ನು ರೂಪಿಸುವ ಸ್ಥಳವಲ್ಲ, ಆದರೆ ಛತ್ತೀಸ್‌ಗಢದ ಹಣೆಬರಹವನ್ನು ರೂಪಿಸುವ ಜೀವಂತ ಕೇಂದ್ರವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇಲ್ಲಿ ಹುಟ್ಟುವ ಪ್ರತಿಯೊಂದು ಆಲೋಚನೆಯೂ ಸಾರ್ವಜನಿಕ ಸೇವೆಯ ಮನೋಭಾವ, ಅಭಿವೃದ್ಧಿಯ ಸಂಕಲ್ಪ ಮತ್ತು ಭಾರತವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಹೊಂದಿರಬೇಕು. ಅದು ನಮ್ಮ ಸಾಮೂಹಿಕ ಸಂಕಲ್ಪವಾಗಬೇಕು.
ಸ್ನೇಹಿತರೆ,
ಪ್ರಜಾಪ್ರಭುತ್ವದಲ್ಲಿ, ಕರ್ತವ್ಯವೇ ಸದಾ ಮೊದಲು ಬರಬೇಕು. ಹೊಸ ವಿಧಾನಸಭೆಯ ಉದ್ಘಾಟನೆಯ ಈ ಕ್ಷಣದಲ್ಲಿ, ನಮ್ಮ ಸಾರ್ವಜನಿಕ ಜೀವನವನ್ನು ಸಮಗ್ರತೆ ಮತ್ತು ಬದ್ಧತೆಯಿಂದ ನಮ್ಮ ಜವಾಬ್ದಾರಿಗಳನ್ನು ಪೂರೈಸಲು ಮುಡಿಪಾಗಿಡಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ನಮ್ಮ ಗಣರಾಜ್ಯದ ಅಮೃತ ವರ್ಷದಲ್ಲಿ, ಈ ಪವಿತ್ರ ಸಂಕೀರ್ಣದಿಂದ, ಜನರ ಸೇವೆಯನ್ನು ನಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ. ಪ್ರಜಾಪ್ರಭುತ್ವದ ಈ ಸುಂದರವಾದ ಹೊಸ ದೇವಾಲಯದ ಉದ್ಘಾಟನೆಗಾಗಿ ನಾನು ಮತ್ತೊಮ್ಮೆ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ದೃಷ್ಟಿಕೋನವನ್ನು ವಾಸ್ತವಕ್ಕೆ ತಂದಿರುವುದಕ್ಕಾಗಿ ನಾನು ವಿಶೇಷವಾಗಿ ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ರಮಣ್ ಸಿಂಗ್ ಜಿ ಅವರನ್ನು ಅಭಿನಂದಿಸುತ್ತೇನೆ. ಜೈ ಭಾರತ್! ಜೈ ಛತ್ತೀಸ್‌ಗಢ! ತುಂಬು ಧನ್ಯವಾದಗಳು.
*****
(Release ID: 2185619)
Visitor Counter : 4