ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ ನೀಡಿದರು


ಈ ತಿಂಗಳ ಆರಂಭದಲ್ಲಿ ಜೀವಿಕಾ ನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತು, ಈಗ, ಈ ಉಪಕ್ರಮದ ಬಲವು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯೊಂದಿಗೆ ಮತ್ತಷ್ಟು ಹೆಚ್ಚಾಗುತ್ತದೆ: ಪ್ರಧಾನಮಂತ್ರಿ

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯು ಕೇಂದ್ರ ಸರ್ಕಾರದ ಲಖ್‌ಪತಿ ದೀದಿ ಅಭಿಯಾನವನ್ನು ಮತ್ತಷ್ಟು ಬಲಪಡಿಸಿದೆ: ಪ್ರಧಾನಮಂತ್ರಿ

ಸರ್ಕಾರವು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಿದಾಗ, ಪ್ರಯೋಜನಗಳು ಸಮಾಜದ ಇತರೆ ಭಾಗಗಳಿಗೂ ವಿಸ್ತರಿಸುತ್ತದೆ, ಉಜ್ವಲ ಯೋಜನೆಯ ಪರಿವರ್ತನಾತ್ಮಕ ಪರಿಣಾಮವನ್ನು ಈಗ ವಿಶ್ವಾದ್ಯಂತ ಗುರುತಿಸಲಾಗುತ್ತಿದೆ: ಪ್ರಧಾನಮಂತ್ರಿ

ಸ್ವಸ್ಥ ನಾರಿ, ಸಶಕ್ತ್ ಪರಿವಾರ್ ಅಭಿಯಾನದ ಅಡಿ ರಕ್ತಹೀನತೆ, ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸ್ಥಿತಿಗಳಿಗಾಗಿ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ 4.25 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ: ಪ್ರಧಾನಮಂತ್ರಿ

ಮಹಿಳೆ ಪ್ರಗತಿ ಹೊಂದಿದಾಗ, ಇಡೀ ಸಮಾಜವು ಮುಂದುವರಿಯುತ್ತದೆ: ಪ್ರಧಾನಮಂತ್ರಿ

प्रविष्टि तिथि: 26 SEP 2025 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರಿಗೂ ನವರಾತ್ರಿಯ ಶುಭಾಶಯ ಕೋರಿದರು. ಬಿಹಾರದ ಮಹಿಳೆಯರೊಂದಿಗೆ ಈ ಆಚರಣೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಇಂದು ಪ್ರಾರಂಭಿಸಲಾಗುತ್ತಿದೆ. 75 ಲಕ್ಷ ಮಹಿಳೆಯರು ಈಗಾಗಲೇ ಈ ಉಪಕ್ರಮಕ್ಕೆ ಸೇರಿದ್ದಾರೆ . ಈ 75 ಲಕ್ಷ ಮಹಿಳೆಯರಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ 10,000 ರೂ. ವರ್ಗಾಯಿಸಲಾಗಿದೆ ಎಂದು ಘೋಷಿಸಿದರು.

ಈ ಪ್ರಕ್ರಿಯೆ ನಡೆಯುತ್ತಿರುವಾಗ ತಮಗೆ 2 ಆಲೋಚನೆಗಳು ಇದ್ದವು. ಮೊದಲನೆಯದಾಗಿ, ಇಂದು ಬಿಹಾರದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನಿಜವಾಗಿಯೂ ಮಹತ್ವದ ಮೈಲಿಗಲ್ಲಾಗಿದೆ. ಒಬ್ಬ ಮಹಿಳೆ ಉದ್ಯೋಗ ಅಥವಾ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡಾಗ, ಆಕೆಯ ಕನಸುಗಳು ಹೊಸ ರೆಕ್ಕೆಪುಕ್ಕ ಪಡೆಯುತ್ತವೆ, ಸಮಾಜದಲ್ಲಿ ಆಕೆಯ ಗೌರವ ಬೆಳೆಯುತ್ತದೆ. ಎರಡನೆಯದಾಗಿ, ಸರ್ಕಾರವು 11 ವರ್ಷಗಳ ಹಿಂದೆ ಜನ ಧನ್ ಯೋಜನೆ ಪ್ರಾರಂಭಿಸಲು ದೃಢನಿಶ್ಚಯ ಮಾಡದಿದ್ದರೆ, ಈ ಯೋಜನೆಯಡಿ 30 ಕೋಟಿಗೂ ಹೆಚ್ಚು ಮಹಿಳೆಯರು ಬ್ಯಾಂಕ್ ಖಾತೆಗಳನ್ನು ತೆರೆಯದಿದ್ದರೆ, ಈ ಖಾತೆಗಳನ್ನು ಮೊಬೈಲ್ ಫೋನ್‌ಗಳು ಮತ್ತು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಇಂದು ಅಂತಹ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮೂಲಸೌಕರ್ಯವಿಲ್ಲದಿದ್ದರೆ, ಹಣವು ಮಧ್ಯವರ್ತಿಗಳ ಪಾಲಾಗುತ್ತಿತ್ತು, ಇದು ಫಲಾನುಭವಿಗಳಿಗೆ ನಿಜಕ್ಕೂ ಅನ್ಯಾಯವಾಗುತ್ತಿತ್ತು ಎಂದು ಹೇಳಿದರು.

ತನ್ನ ಸಹೋದರಿ ಆರೋಗ್ಯವಾಗಿ, ಸಮೃದ್ಧಿಯಾಗಿದ್ದಾಗ ಮತ್ತು ಆಕೆಯ ಕುಟುಂಬ ಆರ್ಥಿಕವಾಗಿ ಸದೃಢವಾಗಿದ್ದಾಗ ಸಹೋದರ ನಿಜವಾದ ಸಂತೋಷ ಕಂಡುಕೊಳ್ಳುತ್ತಾನೆ. ಈ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಒಬ್ಬ ಸಹೋದರ ತನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡುತ್ತಾನೆ. ಇಂದು ಇಬ್ಬರು ಸಹೋದರರು, ತಾವು ಮತ್ತು ಶ್ರೀ ನಿತೀಶ್ ಕುಮಾರ್ ಅವರು ಬಿಹಾರದ ಮಹಿಳೆಯರ ಸೇವೆ, ಸಮೃದ್ಧಿ ಮತ್ತು ಘನತೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇಂದಿನ ಕಾರ್ಯಕ್ರಮವು ಈ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಮೊದಲು ಅವರು ಪ್ರಸ್ತುತಪಡಿಸಿದಾಗ ಅದರ ದೃಷ್ಟಿಕೋನದಿಂದ ಪ್ರಭಾವಿತನಾದೆ. ಈ ಯೋಜನೆಯಡಿ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ಮಹಿಳಾ ಫಲಾನುಭವಿ ಇರುತ್ತಾರೆ. 10,000 ರೂ. ಆರಂಭಿಕ ಆರ್ಥಿಕ ನೆರವಿನೊಂದಿಗೆ ಪ್ರಾರಂಭಿಸಿ, ಈ ಯೋಜನೆಯು ಉದ್ಯಮದ ಯಶಸ್ಸಿನ ಆಧಾರದ ಮೇಲೆ 2 ಲಕ್ಷ ರೂ. ವರೆಗೆ ಸಾಲ ಒದಗಿಸಬಹುದು. ಈ ಉಪಕ್ರಮದ ಪ್ರಮಾಣವನ್ನು ಎಲ್ಲರೂ ಪರಿಗಣಿಸಬೇಕು, ಬಿಹಾರದ ಮಹಿಳೆಯರು ಈಗ ದಿನಸಿ, ಪಾತ್ರೆಗಳು, ಸೌಂದರ್ಯವರ್ಧಕಗಳು, ಆಟಿಕೆಗಳು ಮತ್ತು ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಬಹುದು. ಅವರು ಜಾನುವಾರು ಸಾಕಣೆ ಮತ್ತು ಕೋಳಿ ಸಾಕಣೆಯಂತಹ ಜಾನುವಾರು ಸಂಬಂಧಿತ ವ್ಯವಹಾರಗಳನ್ನು ಸಹ ಮುಂದುವರಿಸಬಹುದು. ಈ ಎಲ್ಲಾ ಉದ್ಯಮಗಳಿಗೆ, ಅಗತ್ಯ ತರಬೇತಿ ನೀಡಲಾಗುವುದು. ಬಿಹಾರದಲ್ಲಿ ಈಗಾಗಲೇ ಸ್ವಸಹಾಯ ಗುಂಪುಗಳ ಬಲಿಷ್ಠ ಜಾಲವಿದ್ದು, ಸುಮಾರು 11 ಲಕ್ಷ ಗುಂಪುಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರರ್ಥ ಸುಸ್ಥಾಪಿತ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. "ಈ ತಿಂಗಳ ಆರಂಭದಲ್ಲಿ, ಜೀವಿಕಾ ನಿಧಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತು. ಈ ವ್ಯವಸ್ಥೆಯ ಬಲವನ್ನು ಈಗ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯೊಂದಿಗೆ ಸಂಯೋಜಿಸಲಾಗುವುದು, ಇದರಿಂದಾಗಿ ಯೋಜನೆಯು ಆರಂಭದಿಂದಲೇ ಬಿಹಾರದಾದ್ಯಂತ ಪರಿಣಾಮಕಾರಿಯಾಗಿರುತ್ತದೆ" ಎಂದು ಪ್ರಧಾನಿ ಹೇಳಿದರು.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯು ಕೇಂದ್ರ ಸರ್ಕಾರದ ಲಖ್‌ಪತಿ ದೀದಿ ಅಭಿಯಾನವನ್ನು ಮತ್ತಷ್ಟು ಬಲಪಡಿಸಿದೆ, ಕೇಂದ್ರ ಸರ್ಕಾರವು ದೇಶಾದ್ಯಂತ 3 ಕೋಟಿ ಲಕ್ಷಪತಿ ದೀದಿಗಳನ್ನು ರೂಪಿಸುವ ಗುರಿ ಹೊಂದಿದೆ, 2 ಕೋಟಿಗೂ ಹೆಚ್ಚು ಮಹಿಳೆಯರು ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ. ಅವರ ಕಠಿಣ ಪರಿಶ್ರಮವು ಹಳ್ಳಿಗಳನ್ನು ಪರಿವರ್ತಿಸಿದೆ ಮತ್ತು ಸಮಾಜವನ್ನು ಪುನರೂಪಿಸಿದೆ. ಬಿಹಾರದಲ್ಲೂ ಲಕ್ಷಾಂತರ ಮಹಿಳೆಯರು ಲಖ್‌ಪತಿ ದೀದಿಗಳಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಉಪಕ್ರಮವನ್ನು ಮುನ್ನಡೆಸುತ್ತಿರುವ ರೀತಿ ನೋಡಿದರೆ, ಬಿಹಾರವು ದೇಶದಲ್ಲಿ ಅತಿ ಹೆಚ್ಚು ಲಕ್ಷಪತಿ ದೀದಿಗಳನ್ನು ಹೊಂದುವ ದಿನ ದೂರವಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಡ್ರೋನ್ ದೀದಿ ಅಭಿಯಾನ, ಬಿಮಾ ಸಖಿ ಅಭಿಯಾನ ಮತ್ತು ಬ್ಯಾಂಕ್ ದೀದಿ ಅಭಿಯಾನ ಮುಂತಾದ ಉಪಕ್ರಮಗಳು ಮಹಿಳೆಯರಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗ ವಿಸ್ತರಿಸುವ ಮಾರ್ಗಗಳಾಗಿವೆ. ಈ ಪ್ರಯತ್ನಗಳ ಹಿಂದಿನ ಏಕೈಕ ಗುರಿ ಮಹಿಳೆಯರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವುದಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಪ್ರಯತ್ನಗಳು ದೇಶಾದ್ಯಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಹೊಸ ವಲಯಗಳನ್ನು ತೆರೆದಿವೆ. ಇಂದು ಹೆಚ್ಚಿನ ಸಂಖ್ಯೆಯ ಯುವತಿಯರು ಸಶಸ್ತ್ರ ಪಡೆಗಳು ಮತ್ತು ಪೊಲೀಸ್ ಸೇವೆಗೆ ಸೇರುತ್ತಿದ್ದಾರೆ, ಯುದ್ಧ ವಿಮಾನಗಳ ಹಾರಾಟ ನಡೆಸುತ್ತಿದ್ದಾರೆ. ಆದಾಗ್ಯೂ, ಬಿಹಾರವು ವಿರೋಧ ಪಕ್ಷದ ಆಳ್ವಿಕೆಯಲ್ಲಿದ್ದ ಆ ದಿನಗಳನ್ನು – ಲಾಟೀನು ಆಡಳಿತದ ಯುಗವನ್ನು - ಎಲ್ಲರೂ ಮರೆಯಬಾರದು. ಆ ಸಮಯದಲ್ಲಿ, ಬಿಹಾರದ ಮಹಿಳೆಯರು ಕಾನೂನುಬಾಹಿರ ಮತ್ತು ಭ್ರಷ್ಟಾಚಾರದ ಹೊರೆ ಹೊತ್ತುಕೊಂಡರು. ಬಿಹಾರದಲ್ಲಿ ಪ್ರಮುಖ ರಸ್ತೆಗಳು ಹೇಗೆ ಹಾಳಾಗಿದ್ದವು, ಸೇತುವೆಗಳು ಇರಲಿಲ್ಲ, ಕಳಪೆ ಮೂಲಸೌಕರ್ಯದಿಂದಾಗಿ ಮಹಿಳೆಯರು ಹೆಚ್ಚು ಬಳಲುತ್ತಿದ್ದರು. ಪ್ರವಾಹ ಸಮಯದಲ್ಲಿ ಕಷ್ಟಗಳು ಹೆಚ್ಚಾದವು. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗಲಿಲ್ಲ, ನಿರ್ಣಾಯಕ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆಗೆ ಅವಕಾಶವಿರಲಿಲ್ಲ. ಮಹಿಳೆಯರು ಈ ಕಠಿಣ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡಿದ್ದು ತಮ್ಮ ಸರ್ಕಾರ. ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮ ಸರ್ಕಾರ ಬಂದ ನಂತರ, ಬಿಹಾರದಲ್ಲಿ ರಸ್ತೆ ನಿರ್ಮಾಣವು ವೇಗ ಪಡೆದುಕೊಂಡಿತು. ಬಿಹಾರದಲ್ಲಿ ಸಂಪರ್ಕ ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ, ಈ ಎಲ್ಲಾ ಬೆಳವಣಿಗೆಗಳು ರಾಜ್ಯದ ಮಹಿಳೆಯರ ಜೀವನವನ್ನು ಸುಲಭಗೊಳಿಸಿವೆ ಎಂದು ಅವರು ಹೇಳಿದರು.

ಬಿಹಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರದರ್ಶನದ ಬಗ್ಗೆ ತಮಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದ ಶ್ರೀ ಮೋದಿ, ಈ ಪ್ರದರ್ಶನವು ಹಳೆಯ ಪತ್ರಿಕೆಗಳ ಮುಖ್ಯಾಂಶಗಳನ್ನು ಪ್ರದರ್ಶಿಸುತ್ತದೆ, ಇದು ಬಿಹಾರದಲ್ಲಿ ವಿರೋಧ ಪಕ್ಷದ ಆಡಳಿತದ ಸಮಯದಲ್ಲಿ ಭಯದ ವಾತಾವರಣವನ್ನು ಸ್ಪಷ್ಟವಾಗಿ ನೆನಪಿಸುತ್ತದೆ. ಆ ಸಮಯದಲ್ಲಿ ಯಾವುದೇ ಮನೆ ಸುರಕ್ಷಿತವಾಗಿರಲಿಲ್ಲ, ನಕ್ಸಲರ ಹಿಂಸಾಚಾರ ಭಯೋತ್ಪಾದನೆಯನ್ನು ನಿಯಂತ್ರಿಸಲಾಗಿರಲಿಲ್ಲ. ಆ ವರ್ಷಗಳಲ್ಲಿ ಮಹಿಳೆಯರು ಅತ್ಯಂತ ದೊಡ್ಡ ನೋವು ಅನುಭವಿಸಿದರು. ಬಡವರಿಂದ ಹಿಡಿದು ವೈದ್ಯರು ಮತ್ತು ಐಎಎಸ್ ಅಧಿಕಾರಿಗಳ ಕುಟುಂಬಗಳವರೆಗೆ, ವಿರೋಧ ಪಕ್ಷದ ನಾಯಕರು ಮಾಡಿದ ದೌರ್ಜನ್ಯಗಳಿಂದ ಯಾರೂ ತಪ್ಪಿಸಿಕೊಳ್ಳಲಾಗಲಿಲ್ಲ.

ಶ್ರೀ ನಿತೀಶ್ ಕುಮಾರ್ ನೇತೃತ್ವದಲ್ಲಿ, ಬಿಹಾರದಲ್ಲಿ ಕಾನೂನನ್ನು ಪುನಃಸ್ಥಾಪಿಸಲಾಗಿದೆ, ಮಹಿಳೆಯರು ಈ ಬದಲಾವಣೆಯ ಪ್ರಾಥಮಿಕ ಫಲಾನುಭವಿಗಳಾಗಿದ್ದಾರೆ. ಬಿಹಾರದ ಹೆಣ್ಣು ಮಕ್ಕಳು ಈಗ ಭಯವಿಲ್ಲದೆ ತಮ್ಮ ಮನೆಗಳಿಂದ ಹೊರಬರುತ್ತಾರೆ, ತಡರಾತ್ರಿಯೂ ಕೆಲಸ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಬಿಹಾರಕ್ಕೆ ಭೇಟಿ ನೀಡಿದಾಗ ಮಹಿಳಾ ಪೊಲೀಸ್ ಸಿಬ್ಬಂದಿಯ ದೊಡ್ಡ ನಿಯೋಜನೆಯನ್ನು ವೀಕ್ಷಿಸಿದ್ದಕ್ಕೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. ಬಿಹಾರವು ಎಂದಿಗೂ ಹಿಂದಿನ ಕತ್ತಲೆಗೆ ಮರಳಬಾರದು ಎಂದು ಎಲ್ಲರೂ ಸಾಮೂಹಿಕವಾಗಿ ಪ್ರತಿಜ್ಞೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನೀತಿಗಳನ್ನು ರೂಪಿಸಿದಾಗ, ಅದರ ಪ್ರಯೋಜನಗಳು ಸಮಾಜದ ಇತರೆ ವರ್ಗಗಳಿಗೂ ವಿಸ್ತರಿಸುತ್ತವೆ. ಉಜ್ವಲ ಯೋಜನೆಯು ಅಂತಹ ಪರಿವರ್ತನಾತ್ಮಕ ಬದಲಾವಣೆಯ ಪ್ರಬಲ ಉದಾಹರಣೆಯಾಗಿದೆ, ಇದನ್ನು ಈಗ ಜಾಗತಿಕವಾಗಿ ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನಿಲ ಸಂಪರ್ಕ ಹೊಂದುವುದು ದೂರದ ಕನಸೆಂದು ಪರಿಗಣಿಸಲಾಗಿದ್ದ ಕಾಲವಿತ್ತು. ಬಡ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಹೊಗೆ ತುಂಬಿದ ಅಡುಗೆ ಮನೆಗಳಲ್ಲಿ ಕೆಮ್ಮುತ್ತಾ ತಮ್ಮ ಜೀವನವನ್ನು ಹೇಗೆ ಕಳೆದರು, ಶ್ವಾಸಕೋಶದ ಕಾಯಿಲೆಗಳು ಸಾಮಾನ್ಯವಾಗುತ್ತಿದ್ದವು, ದೃಷ್ಟಿಯೇ ಹೋಗುತ್ತಿತ್ತು. ಬಿಹಾರದಲ್ಲಿ, ಉರುವಲು ಸಂಗ್ರಹಿಸುವ ಹೊರೆಯಿಂದ ಮಹಿಳೆಯರ ಜೀವನವು ಸವೆಯುತ್ತಿತ್ತು. ಮಳೆಯ ಸಮಯದಲ್ಲಿ, ಒದ್ದೆಯಾದ ಕಟ್ಟಿಗೆ ಸುಡುವುದಿಲ್ಲ; ಪ್ರವಾಹ ಸಮಯದಲ್ಲಿ, ಉರುವಲು ನೆನೆಯುತ್ತದೆ. ಅನೇಕ ಬಾರಿ, ಮನೆಯಲ್ಲಿರುವ ಮಕ್ಕಳು ಹಸಿವಿನಿಂದ ಮಲಗಬೇಕಾಗಿತ್ತು ಅಥವಾ ರಾತ್ರಿಯಿಡೀ ಹಳಸಿದ ಅನ್ನ ತಿಂದು ಬದುಕಬೇಕಾಗಿತ್ತು.

ಈ ನೋವು ಯಾವುದೇ ಪುಸ್ತಕದಲ್ಲಿ ಬರೆದಿಲ್ಲ, ಆದರೆ ಇದನ್ನು ಬಿಹಾರದ ಮಹಿಳೆಯರು ಅನುಭವಿಸಿ ಬದುಕಿದ್ದಾರೆ. ತಮ್ಮ ಸರ್ಕಾರವು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಲು ಪ್ರಾರಂಭಿಸಿದಾಗ, ಚಿತ್ರಣ ಬದಲಾಗಲು ಪ್ರಾರಂಭಿಸಿತು.  ಕೋಟ್ಯಂತರ ಮನೆಗಳಿಗೆ ಏಕಕಾಲದಲ್ಲಿ ಅನಿಲ ಸಂಪರ್ಕಗಳನ್ನು ತಲುಪಿಸಲಾಯಿತು. ಇಂದು ಕೋಟ್ಯಂತರ ಮಹಿಳೆಯರು ಅನಿಲ ಒಲೆಗಳ ಮೇಲೆ ಶಾಂತಿಯುತವಾಗಿ ಅಡುಗೆ ಮಾಡುತ್ತಿದ್ದಾರೆ, ಹೊಗೆಯಿಂದ ಮುಕ್ತರಾಗಿದ್ದಾರೆ, ಉಸಿರಾಟ ಮತ್ತು ಕಣ್ಣಿನ ಕಾಯಿಲೆಗಳಿಂದ ಮುಕ್ತರಾಗಿದ್ದಾರೆ. ಮನೆಯಲ್ಲಿರುವ ಮಕ್ಕಳು ಈಗ ಪ್ರತಿದಿನ ಬಿಸಿ ಊಟ ಪಡೆಯುತ್ತಿದ್ದಾರೆ. ಉಜ್ವಲ ಅನಿಲ ಸಂಪರ್ಕಗಳು ಬಿಹಾರದಲ್ಲಿ ಅಡುಗೆ ಮನೆಗಳನ್ನು ಬೆಳಗಿಸುವುದಲ್ಲದೆ, ಮಹಿಳೆಯರ ಜೀವನವನ್ನು ಸಹ ಪರಿವರ್ತಿಸಿವೆ ಎಂದು ಪ್ರಧಾನಿ ಹೇಳಿದರು.

ನಾಗರಿಕರು ಎದುರಿಸುತ್ತಿರುವ ಪ್ರತಿಯೊಂದು ಕಷ್ಟವನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿ ಎಂದು ದೃಢಪಡಿಸಿದ ಶ್ರೀ ಮೋದಿ, ಕೋವಿಡ್-19 ಸಾಂಕ್ರಾಮಿಕ ರೋಗದ ಸವಾಲಿನ ಸಮಯದಲ್ಲಿ ಸರ್ಕಾರವು ಉಚಿತ ಆಹಾರ ಧಾನ್ಯ ಯೋಜನೆ ಪ್ರಾರಂಭಿಸಿತು. ಅದು ಒದಗಿಸಿದ ಅಪಾರ ಪರಿಹಾರವನ್ನು ಪರಿಗಣಿಸಿ, ಈ ಉಪಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಯಿತು. ಇಂದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ, ಬಿಹಾರದಲ್ಲಿ 8.5 ಕೋಟಿಗೂ ಹೆಚ್ಚು ಸಂಕಷ್ಟದಲ್ಲಿರುವ ಕುಟುಂಬಗಳು ಉಚಿತ ಪಡಿತರ ಪಡೆಯುತ್ತಿದ್ದಾರೆ. ಈ ಯೋಜನೆಯು ಸಾರ್ವಜನಿಕ ಕಳವಳಗಳನ್ನು ಎಷ್ಟು ಕಡಿಮೆ ಮಾಡಿವೆ. ಇನ್ನೊಂದು ಉದಾಹರಣೆ ಉಲ್ಲೇಖಿಸಿದ ಪ್ರಧಾನಿ, ಬಿಹಾರದ ಒಂದು ದೊಡ್ಡ ಪ್ರದೇಶವು ಉಸ್ನಾ ಅಕ್ಕಿಗೆ ಆದ್ಯತೆ ನೀಡುತ್ತದೆ. ಹಿಂದೆ, ತಾಯಂದಿರು ಮತ್ತು ಸಹೋದರಿಯರಿಗೆ ಸರ್ಕಾರಿ ಪಡಿತರ ಮೂಲಕ ಅರ್ವಾ ಅಕ್ಕಿ ನೀಡಲಾಗುತ್ತಿತ್ತು,  ಮಾರುಕಟ್ಟೆಯಲ್ಲಿ ಉಸ್ನಾ ಅಕ್ಕಿಗೆ ವಿನಿಮಯ ಮಾಡಿಕೊಳ್ಳಬೇಕಾಗಿತ್ತು - ಆಗಾಗ್ಗೆ 20 ಕೆಜಿ ಅರ್ವಾ ಅಕ್ಕಿಗೆ ಪ್ರತಿಯಾಗಿ ಕೇವಲ 10 ಕೆಜಿ ಉಸ್ನಾ ಅಕ್ಕಿನ್ನು ಪಡೆಯಲಾಗುತ್ತಿತ್ತು. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ, ಈಗ ಪಡಿತರ ವ್ಯವಸ್ಥೆಯ ಮೂಲಕ ನೇರವಾಗಿ ಉಸ್ನಾ ಅಕ್ಕಿ ನೀಡಲು ಪ್ರಾರಂಭಿಸಿದೆ ಎಂದು ಪ್ರಧಾನಿ ಹೇಳಿದರು.

ಸಾಂಪ್ರದಾಯಿಕವಾಗಿ, ಭಾರತದಲ್ಲಿ ಆಸ್ತಿ - ಅದು ಮನೆ, ಅಂಗಡಿ ಅಥವಾ ಭೂಮಿಯಾಗಿರಬಹುದು - ಪುರುಷರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿತ್ತು. ಆದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಾರಂಭಿಸುವುದರೊಂದಿಗೆ, ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಸಹ ಈ ಮನೆಗಳ ಮಾಲೀಕರಾಗಿ ಹೆಸರಿಸುವುದನ್ನು ಖಚಿತಪಡಿಸಿಕೊಳ್ಳಲು ಹೊಸ ನಿಬಂಧನೆ ಪರಿಚಯಿಸಲಾಗಿದೆ.  ಬಿಹಾರದಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರಧಾನ ಮಂತ್ರಿ ಆವಾಸ್ ಮನೆಗಳನ್ನು ನಿರ್ಮಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವುಗಳಲ್ಲಿ ಮಹಿಳೆಯರನ್ನು ಸಹ-ಮಾಲೀಕರನ್ನಾಗಿ ಪಟ್ಟಿ ಮಾಡಲಾಗಿದೆ. ಮಹಿಳೆಯರು ಈಗ ತಮ್ಮ ಮನೆಗಳ ನಿಜವಾದ ಮಾಲೀಕರಾಗಿದ್ದಾರೆ ಎಂದು ಅವರು ದೃಢಪಡಿಸಿದರು.

ಮಹಿಳೆಯ ಆರೋಗ್ಯ ಹದಗೆಟ್ಟಾಗ, ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ, ಮಹಿಳೆಯರು ಮೌನವಾಗಿ ಅನಾರೋಗ್ಯ ಸಹಿಸಿಕೊಂಡು, ಮನೆಯ ಹಣವನ್ನು ತಮ್ಮ ಚಿಕಿತ್ಸೆಗೆ ಖರ್ಚು ಮಾಡಲು ಇಚ್ಛಿಸದೆ ಇದ್ದ ಕಾಲವಿತ್ತು. ಆಯುಷ್ಮಾನ್ ಭಾರತ್ ಯೋಜನೆಯು ಈ ಕಾಳಜಿಯನ್ನು ಪರಿಹರಿಸಿದೆ, ಬಿಹಾರದ ಲಕ್ಷಾಂತರ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ, ಗರ್ಭಿಣಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್ಥಿಕ ಸಹಾಯ ವರ್ಗಾಯಿಸಲಾಗುತ್ತಿದೆ ಎಂದರು.

ನಾಗರಿಕರ, ವಿಶೇಷವಾಗಿ ಮಹಿಳೆಯರ ಆರೋಗ್ಯವು ಸರ್ಕಾರಕ್ಕೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ವಿಶ್ವಕರ್ಮ ಜಯಂತಿಯಂದು ಸೆಪ್ಟೆಂಬರ್ 17, 2025ರಂದು ಪ್ರಾರಂಭವಾದ ಪ್ರಮುಖ ಉಪಕ್ರಮ - ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಘೋಷಿಸಿದರು. ಈ ಅಭಿಯಾನದಡಿ, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ 4.25 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಶಿಬಿರಗಳು ರಕ್ತಹೀನತೆ, ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತಪಾಸಣೆ ನಡೆಸುತ್ತಿವೆ. ಈ ಉಪಕ್ರಮದ ಮೂಲಕ ಈಗಾಗಲೇ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಆರೋಗ್ಯ ತಪಾಸಣೆಗಳನ್ನು ಪಡೆದಿದ್ದಾರೆ. ಬಿಹಾರದ ಎಲ್ಲಾ ಮಹಿಳೆಯರು ಈ ಶಿಬಿರಗಳಲ್ಲಿ ಭಾಗವಹಿಸಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಹಬ್ಬದ ಋತು ಆರಂಭವಾಗಿದೆ. ನವರಾತ್ರಿ ನಡೆಯುತ್ತಿದೆ, ದೀಪಾವಳಿ ಸಮೀಪಿಸುತ್ತಿದೆ ಮತ್ತು ಛಠ್ ಪೂಜೆ ಸಮೀಪಿಸುತ್ತಿದೆ. ಈ ಸಮಯದಲ್ಲಿ ಮಹಿಳೆಯರು ಮನೆಯ ವೆಚ್ಚವನ್ನು ಹೇಗೆ ನಿರ್ವಹಿಸುವುದು ಮತ್ತು ಉಳಿಸುವುದು ಎಂಬುದರ ಕುರಿತು ನಿರಂತರವಾಗಿ ಯೋಚಿಸುತ್ತಾರೆ. ಈ ಕಳವಳ ಕಡಿಮೆ ಮಾಡಲು, ನಮ್ಮ ಸರ್ಕಾರವು ಸೆಪ್ಟೆಂಬರ್ 22 2025 ರಿಂದ ದೇಶಾದ್ಯಂತ ಜಿಎಸ್ಟಿ ದರಗಳನ್ನು ಕಡಿಮೆ ಮಾಡುವ ಮೂಲಕ ಪ್ರಮುಖ ಹೆಜ್ಜೆ ಇಟ್ಟಿದೆ. ಇದರ ಪರಿಣಾಮವಾಗಿ, ಟೂತ್‌ಪೇಸ್ಟ್, ಸೋಪ್, ಶಾಂಪೂ, ತುಪ್ಪ ಮತ್ತು ಆಹಾರ ಪದಾರ್ಥಗಳಂತಹ ದೈನಂದಿನ ಅಗತ್ಯ ವಸ್ತುಗಳು ಈಗ ಕಡಿಮೆ ಬೆಲೆಗೆ ಸಿಗುತ್ತಿವೆ.  ಮಕ್ಕಳ ಶಿಕ್ಷಣಕ್ಕಾಗಿ ಲೇಖನ ಸಾಮಗ್ರಿಗಳು, ಹಾಗೆಯೇ ಹಬ್ಬದ ಸಂದರ್ಭಗಳಲ್ಲಿ ಬಟ್ಟೆ ಮತ್ತು ಪಾದರಕ್ಷೆಗಳ ಬೆಲೆಯೂ ಕಡಿಮೆಯಾಗಿದೆ. ಈ ಕ್ರಮವು ಮನೆ ಮತ್ತು ಅಡುಗೆಮನೆ ಬಜೆಟ್‌ಗಳನ್ನು ನಿರ್ವಹಿಸುವ ಮಹಿಳೆಯರಿಗೆ ಗಮನಾರ್ಹ ಪರಿಹಾರ ನೀಡುತ್ತದೆ.  ಹಬ್ಬಗಳ ಸಮಯದಲ್ಲಿ ಮಹಿಳೆಯರ ಮೇಲಿನ ಹೊರೆ ಕಡಿಮೆ ಮಾಡುವುದು ಮತ್ತು ಅವರ ಮುಖದಲ್ಲಿ ಸಂತೋಷ ತರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸುವ ಜವಾಬ್ದಾರಿಯಾಗಿದೆ ಎಂದು ಅವರು ದೃಢಪಡಿಸಿದರು.

ಬಿಹಾರದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ನೀಡಿದಾಗಲೆಲ್ಲಾ, ಅವರು ತಮ್ಮ ಧೈರ್ಯ ಮತ್ತು ದೃಢಸಂಕಲ್ಪದ ಮೂಲಕ ಪರಿವರ್ತನಾತ್ಮಕ ಬದಲಾವಣೆ ತಂದಿದ್ದಾರೆ. ಮಹಿಳೆಯರ ಪ್ರಗತಿಯು ಇಡೀ ಸಮಾಜದ ಪ್ರಗತಿಗೆ ಕಾರಣವಾಗುತ್ತದೆ. ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಪ್ರಾರಂಭಿಸಿದ್ದಕ್ಕಾಗಿ ಬಿಹಾರದ ಜನರಿಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಪ್ರಧಾನಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಬಿಹಾರದಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ನಂತೆ ಒಟ್ಟು 7,500 ಕೋಟಿ ರೂ. ನೇರವಾಗಿ ವರ್ಗಾಯಿಸಿದರು,

ಬಿಹಾರ ಸರ್ಕಾರದ ಉಪಕ್ರಮವಾದ ಈ ಯೋಜನೆಯು ಮಹಿಳೆಯರನ್ನು ಆತ್ಮನಿರ್ಭರವನ್ನಾಗಿ ಮಾಡುವುದು, ಸ್ವ-ಉದ್ಯೋಗ ಮತ್ತು ಜೀವನೋಪಾಯ ಅವಕಾಶಗಳ ಮೂಲಕ ಮಹಿಳಾ ಸಬಲೀಕರಣ ಉತ್ತೇಜಿಸುವ ಗುರಿ ಹೊಂದಿದೆ. ಇದು ರಾಜ್ಯದ ಪ್ರತಿ ಕುಟುಂಬದಿಂದ ಒಬ್ಬ ಮಹಿಳೆಗೆ ಆರ್ಥಿಕ ನೆರವು ನೀಡುತ್ತದೆ, ಅವರು ತಮ್ಮ ಆಯ್ಕೆಯ ಉದ್ಯೋಗ ಅಥವಾ ಜೀವನೋಪಾಯ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ.

ಈ ಯೋಜನೆಯಡಿ, ಪ್ರತಿಯೊಬ್ಬ ಫಲಾನುಭವಿಯು ನೇರ ನಗದು ವರ್ಗಾವಣೆಯ ಮೂಲಕ 10,000 ರೂ. ಆರಂಭಿಕ ಅನುದಾನ ಪಡೆಯುತ್ತಾರೆ, ನಂತರದ ಹಂತಗಳಲ್ಲಿ 2 ಲಕ್ಷ ರೂ.ವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲದ ಸಾಧ್ಯತೆಯಿದೆ. ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ ಪ್ರಮಾಣದ ಉದ್ಯಮಗಳು ಸೇರಿದಂತೆ ಫಲಾನುಭವಿಯ ಆಯ್ಕೆಯ ಕ್ಷೇತ್ರಗಳಲ್ಲಿ ಈ ಸಹಾಯವನ್ನು ಬಳಸಿಕೊಳ್ಳಬಹುದು.

ಈ ಯೋಜನೆಯು ಸಮುದಾಯ ಚಾಲಿತವಾಗಿದ್ದು, ಆರ್ಥಿಕ ನೆರವಿನ ಜತೆಗೆ, ಸ್ವಸಹಾಯ ಗುಂಪುಗಳಿಗೆ ಸಂಪರ್ಕ ಹೊಂದಿದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪ್ರಯತ್ನಗಳಿಗೆ ಬೆಂಬಲ ನೀಡಲು ತರಬೇತಿ ನೀಡುತ್ತಾರೆ. ತಮ್ಮ ಉತ್ಪನ್ನಗಳ ಮಾರಾಟ ಬೆಂಬಲಿಸಲು, ರಾಜ್ಯದಲ್ಲಿ ಗ್ರಾಮೀಣ ಹಾತ್-ಬಜಾರ್‌ಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯ ಉದ್ಘಾಟನೆಯು ರಾಜ್ಯದ ಬಹು ಆಡಳಿತ ಹಂತಗಳಲ್ಲಿ - ಜಿಲ್ಲೆ, ಬ್ಲಾಕ್, ಕ್ಲಸ್ಟರ್ ಮತ್ತು ಗ್ರಾಮ ಮಟ್ಟದಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ಒಳಗೊಂಡಿರುತ್ತದೆ, 1 ಕೋಟಿಗೂ ಹೆಚ್ಚು ಮಹಿಳೆಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಾರೆ.

 

 

*****


(रिलीज़ आईडी: 2171708) आगंतुक पटल : 37
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Manipuri , Assamese , Bengali-TR , Bengali , Punjabi , Gujarati , Tamil , Telugu , Malayalam