ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯ ಭಾರತ್ ಮಂಟಪದಲ್ಲಿ ವಿಶ್ವ ಆಹಾರ ಭಾರತ - 2025 ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
25 SEP 2025 8:59PM by PIB Bengaluru
ರಷ್ಯಾದ ಉಪ ಪ್ರಧಾನಮಂತ್ರಿ ಶ್ರೀ ಡಿಮಿಟ್ರಿ ಪತ್ರುಶೇವ್ ಅವರೆ, ನನ್ನ ಸಂಪುಟ ಸಹೋದ್ಯೋಗಿಗಳಾದ ಚಿರಾಗ್ ಪಾಸ್ವಾನ್ ಮತ್ತು ಶ್ರೀ ರವನೀತ್, ಶ್ರೀ ಪ್ರತಾಪರಾವ್ ಜಾಧವ್, ವಿವಿಧ ದೇಶಗಳಿಂದ ಇಲ್ಲಿಗೆ ಬಂದಿರುವ ಸಚಿವರೆ ಮತ್ತು ಪ್ರತಿನಿಧಿಗಳೆ, ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!
ವರ್ಲ್ಡ್ ಫುಡ್ ಇಂಡಿಯಾ(ವಿಶ್ವ ಆಹಾರ ಭಾರತ) ಕಾರ್ಯಕ್ರಮಕ್ಕಾಗಿ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಇಂದು ಈ ಕಾರ್ಯಕ್ರಮದಲ್ಲಿ, ನಮ್ಮ ರೈತರು, ಉದ್ಯಮಿಗಳು, ಹೂಡಿಕೆದಾರರು ಮತ್ತು ಗ್ರಾಹಕರು ಎಲ್ಲರೂ ಒಂದೇ ಸೂರಿನಡಿ ಇದ್ದಾರೆ. ವರ್ಲ್ಡ್ ಫುಡ್ ಇಂಡಿಯಾ ಹೊಸ ಸಂಪರ್ಕಗಳು ಮತ್ತು ಸೃಜನಶೀಲತೆಯ ಸಂದರ್ಭವಾಗಿದೆ. ನಾನು ಇದೀಗ ಇಲ್ಲಿನ ವಸ್ತುಪ್ರದರ್ಶನಗಳಿಗೆ ಭೇಟಿ ನೀಡಿದೆ. ಪೌಷ್ಟಿಕಾಂಶ, ತೈಲ ಬಳಕೆ ಕಡಿಮೆ ಮಾಡುವುದು ಮತ್ತು ಪ್ಯಾಕೇಜ್ ಮಾಡಿದ ಉತ್ಪನ್ನಗಳು ಆರೋಗ್ಯವನ್ನು ಹೆಚ್ಚಿಸುವ ಮೇಲೆ ಹೆಚ್ಚಿನ ಗಮನ ಹರಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಪ್ರತಿಯೊಬ್ಬ ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು, ಅವರು ಹೂಡಿಕೆ ಮಾಡಲು ಉದ್ದೇಶಿಸಿರುವ ಸ್ಥಳದ ನೈಸರ್ಗಿಕ ಸಾಮರ್ಥ್ಯಗಳನ್ನು ನಿರ್ಣಯಿಸುತ್ತಾರೆ. ಇಂದು, ಜಗತ್ತು, ವಿಶೇಷವಾಗಿ ಆಹಾರ ವಲಯಕ್ಕೆ ಸಂಬಂಧಿಸಿದ ಹೂಡಿಕೆದಾರರು, ಭಾರತದತ್ತ ಹೆಚ್ಚಿನ ಭರವಸೆಯಿಂದ ನೋಡುತ್ತಿದ್ದಾರೆ. ಏಕೆಂದರೆ ಭಾರತವು ವೈವಿಧ್ಯತೆ, ಬೇಡಿಕೆ ಮತ್ತು ಪ್ರಮಾಣದ 3 ಪಟ್ಟು ಶಕ್ತಿ ಹೊಂದಿದೆ. ಪ್ರತಿಯೊಂದು ಧಾನ್ಯ, ಪ್ರತಿಯೊಂದು ಹಣ್ಣು ಮತ್ತು ಪ್ರತಿಯೊಂದು ತರಕಾರಿಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಈ ವೈವಿಧ್ಯತೆಯಿಂದಾಗಿ, ಭಾರತವು ಜಗತ್ತಿನಲ್ಲೇ ವಿಶಿಷ್ಟವಾಗಿದೆ. ಪ್ರತಿ 100 ಕಿಲೋಮೀಟರ್‌ಗೂ ನಮ್ಮ ದೇಶದಲ್ಲಿ ಆಹಾರ ಮತ್ತು ಅದರ ರುಚಿ ಬದಲಾಗುತ್ತದೆ. ಭಾರತದಲ್ಲಿ, ವಿವಿಧ ರೀತಿಯ ಆಹಾರಗಳಿಗೆ ಅಪಾರ ಬೇಡಿಕೆಯಿದೆ. ಈ ಬೇಡಿಕೆಯು ಭಾರತಕ್ಕೆ ಸ್ಪರ್ಧಾತ್ಮಕ ನೆಲೆ ನೀಡುತ್ತದೆ, ಈ ನೆಲೆಯನ್ನು ಹೂಡಿಕೆದಾರರಿಗೆ ಆದ್ಯತೆಯ ತಾಣವನ್ನಾಗಿ ಮಾಡುತ್ತಿದೆ.
ಸ್ನೇಹಿತರೆ,
ಇಂದು ಭಾರತವು ಕಾರ್ಯ ನಿರ್ವಹಿಸುತ್ತಿರುವ ಪ್ರಮಾಣವು ಅಭೂತಪೂರ್ವ ಮತ್ತು ಊಹಿಸಲಾಗದ ಮಟ್ಟದಲ್ಲಿದೆ. ಕಳೆದ 10 ವರ್ಷಗಳಲ್ಲಿ ಭಾರತದ 25 ಕೋಟಿ ಜನರು ಬಡತನವನ್ನು ಸೋಲಿಸಿದ್ದಾರೆ. ಈ ಎಲ್ಲಾ ನಾಗರಿಕರು ಈಗ ನವ ಮಧ್ಯಮ ವರ್ಗದ ಭಾಗವಾಗಿದ್ದಾರೆ. ಈ ನವ ಮಧ್ಯಮ ವರ್ಗವು ದೇಶದ ಅತ್ಯಂತ ಶಕ್ತಿಶಾಲಿ ಮತ್ತು ಮಹತ್ವಾಕಾಂಕ್ಷೆಯ ವಿಭಾಗವಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಜನರ ಆಕಾಂಕ್ಷೆಗಳು ನಮ್ಮ ಆಹಾರ ಪ್ರವೃತ್ತಿಗಳನ್ನು ರೂಪಿಸುತ್ತವೆ. ನಮ್ಮ ಬೇಡಿಕೆಯನ್ನು ಮುನ್ನಡೆಸುತ್ತಿರುವುದು ಈ ಮಹತ್ವಾಕಾಂಕ್ಷೆಯ ವರ್ಗವೇ ಆಗಿದೆ.
ಸ್ನೇಹಿತರೆ,
ಇಂದು, ದೇಶದ ಪ್ರತಿಭಾವಂತ ಯುವಕರು ಪ್ರತಿಯೊಂದು ವಲಯದಲ್ಲೂ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ. ನಮ್ಮ ಆಹಾರ ವಲಯವೂ ಇದಕ್ಕೆ ಹೊರತಾಗಿಲ್ಲ. ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ಈ ಸ್ಟಾರ್ಟಪ್‌ಗಳಲ್ಲಿ ಹಲವು ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. ಕೃತಕ ಬುದ್ಧಿಮತ್ತೆ, ಇ-ಕಾಮರ್ಸ್, ಡ್ರೋನ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಸಹ ಈ ವಲಯಕ್ಕೆ ಸಂಯೋಜಿಸಲಾಗುತ್ತಿದೆ. ನಮ್ಮ ಸ್ಟಾರ್ಟಪ್‌ಗಳು ಪೂರೈಕೆ ಸರಪಳಿಗಳು, ಚಿಲ್ಲರೆ ವ್ಯಾಪಾರ ಮತ್ತು ಸಂಸ್ಕರಣೆ ವಲಯಯನ್ನು ಪರಿವರ್ತಿಸುತ್ತಿವೆ. ಹೀಗಾಗಿ, ಭಾರತವು ವೈವಿಧ್ಯತೆ, ಬೇಡಿಕೆ ಮತ್ತು ನಾವೀನ್ಯತೆಗಳನ್ನು ಏಕಕಾಲದಲ್ಲಿ ಹೊಂದಿದೆ. ಈ ಅಂಶಗಳು ಭಾರತವನ್ನು ಹೂಡಿಕೆಗಳಿಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡುತ್ತವೆ. ಆದ್ದರಿಂದ, ಕೆಂಪುಕೋಟೆಯ ಮೇಲಿಂದ ನಾನು ಹೇಳಿದ್ದನ್ನು ಪುನರುಚ್ಚರಿಸಲು ಬಯಸುತ್ತೇನೆ: ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ವ್ಯವಹಾರ ವಿಸ್ತರಿಸಲು ಇದು ಸರಿಯಾದ ಸಮಯ.
ಸ್ನೇಹಿತರೆ,
21ನೇ ಶತಮಾನವು ಇಡೀ ವಿಶ್ವದ ಮುಂದೆ ಇರುವ ಅನೇಕ ಸವಾಲುಗಳ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ವಿಶ್ವದ ಮುಂದೆ ಸವಾಲುಗಳು ಉದ್ಭವಿಸಿದಾಗಲೆಲ್ಲಾ, ಭಾರತವು ಸಕಾರಾತ್ಮಕ ಪಾತ್ರ ವಹಿಸಲು ಮುಂದೆ ಬಂದಿದೆ ಎಂಬುದು ಸಹ ನಿಮಗೆ ತಿಳಿದಿದೆ. ಜಾಗತಿಕ ಆಹಾರ ಭದ್ರತೆಗೆ ಭಾರತವು ನಿರಂತರವಾಗಿ ಕೊಡುಗೆ ನೀಡುತ್ತಿದೆ. ನಮ್ಮ ರೈತರು, ಹೈನುಗಾರರು, ಮೀನುಗಾರರ ಕಠಿಣ ಪರಿಶ್ರಮ ಮತ್ತು ಬೆಂಬಲಿತ ಸರ್ಕಾರಿ ನೀತಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಭಾರತದ ಸಾಮರ್ಥ್ಯವು ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ದಶಕದಲ್ಲಿ, ನಮ್ಮ ಆಹಾರ ಧಾನ್ಯ ಉತ್ಪಾದನೆಯು ಗಮನಾರ್ಹವಾಗಿ ಹೆಚ್ಚಾಗಿದೆ. ಇಂದು ಭಾರತವು ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದು, ವಿಶ್ವದ ಹಾಲು ಪೂರೈಕೆಯಲ್ಲಿ ಶೇಕಡ 25ರಷ್ಟು ಕೊಡುಗೆ ನೀಡುತ್ತಿದೆ. ನಾವು ಸಿರಿಧಾನ್ಯಗಳ ಅತಿದೊಡ್ಡ ಉತ್ಪಾದಕರು. ಅಕ್ಕಿ ಮತ್ತು ಗೋಧಿಯಲ್ಲಿ, ನಾವು ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಹಣ್ಣುಗಳು, ತರಕಾರಿಗಳು ಮತ್ತು ಮೀನುಗಾರಿಕೆಯಲ್ಲೂ ಭಾರತವು ಗಮನಾರ್ಹ ಕೊಡುಗೆ ನೀಡುತ್ತಿದೆ. ಅದಕ್ಕಾಗಿಯೇ ಜಗತ್ತಿನಲ್ಲಿ ಬೆಳೆಗಳ ಬಿಕ್ಕಟ್ಟು ಉಂಟಾದಾಗಲೆಲ್ಲಾ, ಪೂರೈಕೆ ಸರಪಳಿಗಳು ಅಡ್ಡಿಪಡಿಸಿದಾಗಲೆಲ್ಲಾ, ಭಾರತವು ತನ್ನ ಜವಾಬ್ದಾರಿ ಪೂರೈಸಲು ಬಲಿಷ್ಠವಾಗಿ ಮುಂದೆ ಬರುತ್ತದೆ.
ಸ್ನೇಹಿತರೆ,
ಜಾಗತಿಕ ಕಲ್ಯಾಣದ ಹಿತದೃಷ್ಟಿಯಿಂದ, ಭಾರತದ ಸಾಮರ್ಥ್ಯ ಮತ್ತು ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಪ್ರಯತ್ನವಾಗಿದೆ. ಇದಕ್ಕಾಗಿ, ಸರ್ಕಾರವು ಪ್ರತಿಯೊಬ್ಬ ಪಾಲುದಾರರನ್ನು ಮತ್ತು ಆಹಾರ, ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ನಮ್ಮ ಸರ್ಕಾರ ಆಹಾರ ಸಂಸ್ಕರಣಾ ವಲಯವನ್ನು ಪ್ರೋತ್ಸಾಹಿಸುತ್ತಿದೆ. ಅದಕ್ಕಾಗಿಯೇ ಈ ವಲಯದಲ್ಲಿ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ. ಇದರ ಜತೆಗೆ, ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್‌ಐ) ಯೋಜನೆ ಮತ್ತು ಮೆಗಾ ಫುಡ್ ಪಾರ್ಕ್‌ಗಳ ವಿಸ್ತರಣೆಯು ಈ ವಲಯಕ್ಕೆ ಉತ್ತೇಜನ ನೀಡಿದೆ. ಇಂದು ಭಾರತವು ವಿಶ್ವದ ಅತಿದೊಡ್ಡ ಸಂಗ್ರಹಣಾ ಮೂಲಸೌಕರ್ಯ ಯೋಜನೆ ನಡೆಸುತ್ತಿದೆ. ಈ ಸರ್ಕಾರಿ ಪ್ರಯತ್ನಗಳ ಫಲಿತಾಂಶಗಳು ಸಹ ಗೋಚರಿಸುತ್ತಿವೆ. ಕಳೆದ 10 ವರ್ಷಗಳಲ್ಲಿ ಭಾರತದ ಸಂಸ್ಕರಣಾ ಸಾಮರ್ಥ್ಯ 20 ಪಟ್ಟು ಹೆಚ್ಚಾಗಿದೆ. ಸಂಸ್ಕರಿಸಿದ ಆಹಾರದ ನಮ್ಮ ರಫ್ತು ಕೂಡ 2 ಪಟ್ಟು ಹೆಚ್ಚಾಗಿದೆ.
ಸ್ನೇಹಿತರೆ,
ರೈತರು, ಹೈನುಗಾರರು, ಮೀನುಗಾರರು ಮತ್ತು ಸಣ್ಣ ಸಂಸ್ಕರಣಾ ಘಟಕಗಳು ಆಹಾರ ಪೂರೈಕೆ ಮತ್ತು ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಳೆದ ದಶಕದಲ್ಲಿ, ನಮ್ಮ ಸರ್ಕಾರ ಈ ಎಲ್ಲಾ ಪಾಲುದಾರರನ್ನು ಬಲಪಡಿಸಿದೆ. ಭಾರತದಲ್ಲಿ ಶೇಕಡ 85ಕ್ಕಿಂತ ಹೆಚ್ಚು ಜನರು ಸಣ್ಣ ಅಥವಾ ಅತಿಸಣ್ಣ ರೈತರು ಎಂಬುದು ನಿಮಗೂ ತಿಳಿದಿದೆ. ಆದ್ದರಿಂದ, ನಾವು ನೀತಿಗಳನ್ನು ರೂಪಿಸಿದ್ದೇವೆ ಮತ್ತು ಬೆಂಬಲ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ, ಅದರ ಮೂಲಕ ಈ ಸಣ್ಣ ರೈತರು ಈಗ ಮಾರುಕಟ್ಟೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
ಸ್ನೇಹಿತರೆ,
ಉದಾಹರಣೆಗೆ, ಅತಿಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ನಮ್ಮ ಸ್ವಸಹಾಯ ಗುಂಪುಗಳು ನಡೆಸುತ್ತಿವೆ. ಈ ಸ್ವಸಹಾಯ ಗುಂಪುಗಳು ನಮ್ಮ ಹಳ್ಳಿಗಳಲ್ಲಿರುವ ಲಕ್ಷಾಂತರ ಜನರೊಂದಿಗೆ ಸಂಬಂಧ ಹೊಂದಿವೆ. ಅವರನ್ನು ಬೆಂಬಲಿಸಲು ನಮ್ಮ ಸರ್ಕಾರವು ಸಾಲ-ಸಂಬಂಧಿತ ಸಬ್ಸಿಡಿಗಳನ್ನು ಒದಗಿಸುತ್ತಿದೆ. ಇಂದಿಗೂ ಸಹ ಸುಮಾರು 800 ಕೋಟಿ ರೂ. ಸಬ್ಸಿಡಿಗಳನ್ನು ನಿಮ್ಮ ಮುಂದೆಯೇ ಈ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ.
ಸ್ನೇಹಿತರೆ,
ಅದೇ ರೀತಿ, ನಮ್ಮ ಸರ್ಕಾರವು ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಒಗಳು)ಗಳನ್ನು ವಿಸ್ತರಿಸುತ್ತಿದೆ. 2014ರಿಂದ ದೇಶಾದ್ಯಂತ 10 ಸಾವಿರ ಎಫ್‌ಪಿಒಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಮೂಲಕ ಲಕ್ಷಾಂತರ ಸಣ್ಣ ರೈತರನ್ನು ಸಂಪರ್ಕಿಸಲಾಗಿದೆ. ಇವು ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ತರಲು ಸಹಾಯ ಮಾಡುತ್ತವೆ. ಅವರ ಪಾತ್ರ ಇದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಎಫ್‌ಪಿಒಗಳು ಆಹಾರ ಸಂಸ್ಕರಣಾ ವಲಯದಲ್ಲೂ ಗಮನಾರ್ಹ ಪಾತ್ರ ವಹಿಸುತ್ತಿ, ಬ್ರಾಂಡ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿವೆ. ನಮ್ಮ ಎಫ್‌ಪಿಒಗಳ ಬಲವನ್ನು ನೋಡಿ ನೀವು ಆಶ್ಚರ್ಯಚಕಿತರಾಗುವಿರಿ. ಇಂದು ನಮ್ಮ ಎಫ್‌ಪಿಒಗಳ 15,000ಕ್ಕೂ ಹೆಚ್ಚು ಉತ್ಪನ್ನಗಳು ಆನ್‌ಲೈನ್ ವೇದಿಕೆಗಳಲ್ಲಿ ಲಭ್ಯವಿದೆ. ಕಾಶ್ಮೀರದ ಬಾಸ್ಮತಿ ಅಕ್ಕಿ, ಕೇಸರಿ ಮತ್ತು ವಾಲ್ ನಟ್ಸ್, ಹಿಮಾಚಲದ ಜಾಮ್ ಮತ್ತು ಸೇಬಿನ ರಸ, ರಾಜಸ್ಥಾನದ ಸಿರಿಧಾನ್ಯ ಕುಕೀಸ್, ಮಧ್ಯಪ್ರದೇಶದಿಂದ ಸೋಯಾ ಗಟ್ಟಿಗಳು, ಬಿಹಾರದ ಉತ್ಕೃಷ್ಟ ಆಹಾರ(ಸೂಪರ್‌ಫುಡ್) ಮಖಾನಾ, ಮಹಾರಾಷ್ಟ್ರದ ನೆಲಗಡಲೆ ಎಣ್ಣೆ ಮತ್ತು ಬೆಲ್ಲ, ಕೇರಳದ ಬಾಳೆಹಣ್ಣು ಚಿಪ್ಸ್ ಮತ್ತು ತೆಂಗಿನ ಎಣ್ಣೆ ಸೇರಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಮ್ಮ ಎಫ್‌ಪಿಒಗಳು ಭಾರತದ ಕೃಷಿ ವೈವಿಧ್ಯತೆಯನ್ನು ಪ್ರತಿ ಮನೆಗೂ ತರುತ್ತಿವೆ, 1,100ಕ್ಕೂ ಹೆಚ್ಚು ಎಫ್‌ಪಿಒಗಳು ಕೋಟ್ಯಾಧಿಪತಿಗಳಾಗಿದ್ದಾರೆ, ಅಂದರೆ ಅವರ ವಾರ್ಷಿಕ ವಹಿವಾಟು ಒಂದು ಕೋಟಿ ರೂಪಾಯಿ ದಾಟಿದೆ ಎಂಬುದನ್ನು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಇಂದು ಎಫ್‌ಪಿಒಗಳು ರೈತರ ಆದಾಯ ಹೆಚ್ಚಿಸುವಲ್ಲಿ ಮತ್ತು ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಸ್ನೇಹಿತರೆ,
ಎಫ್‌ಪಿಒಗಳ ಜತೆಗೆ, ಸಹಕಾರಿ ಸಂಸ್ಥೆಗಳು ಭಾರತದ ದೊಡ್ಡ ಶಕ್ತಿಯಾಗಿದೆ. ಈ ವರ್ಷ ಅಂತಾರಾಷ್ಟ್ರೀಯ ಸಹಕಾರಿ ವರ್ಷವಾಗಿದೆ. ಭಾರತದಲ್ಲಿ, ಸಹಕಾರಿಗಳು ನಮ್ಮ ಡೇರಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೊಸ ಶಕ್ತಿಯೊಂದಿಗೆ ಸಬಲೀಕರಣಗೊಳಿಸುತ್ತಿವೆ. ಸಹಕಾರಿ ಸಂಸ್ಥೆಗಳ ಮಹತ್ವವನ್ನು ಗುರುತಿಸಿ, ನಮ್ಮ ನೀತಿಗಳನ್ನು ಅವರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲು ನಾವು ಅವುಗಳಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದೇವೆ. ಈ ವಲಯಕ್ಕಾಗಿ ತೆರಿಗೆ ಮತ್ತು ಪಾರದರ್ಶಕತೆಯ
ಸುಧಾರಣೆಗಳನ್ನು ಸಹ ಕೈಗೊಳ್ಳಲಾಗಿದೆ. ಈ ನೀತಿ ಮಟ್ಟದ ಬದಲಾವಣೆಗಳು ಸಹಕಾರಿ ವಲಯಕ್ಕೆ ಹೊಸ ಶಕ್ತಿ ನೀಡಿವೆ.
ಸ್ನೇಹಿತರೆ,
ಭಾರತದ ಸಮುದ್ರ ಮತ್ತು ಮೀನುಗಾರಿಕೆ ವಲಯದ ಬೆಳವಣಿಗೆಯೂ ಗಮನಾರ್ಹವಾಗಿದೆ. ಕಳೆದ ದಶಕದಲ್ಲಿ ನಾವು ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ವಿಸ್ತರಿಸಿದ್ದೇವೆ. ನಾವು ಮೀನುಗಾರರಿಗೆ ಹಣಕಾಸಿನ ಬೆಂಬಲ ಮತ್ತು ಆಳ ಸಮುದ್ರ ಮೀನುಗಾರಿಕೆ ದೋಣಿಗಳಿಗೆ ಸಹಾಯ ಒದಗಿಸಿದ್ದೇವೆ. ಇದು ನಮ್ಮ ಸಮುದ್ರ ಉತ್ಪಾದನೆ ಮತ್ತು ರಫ್ತು ಎರಡನ್ನೂ ಹೆಚ್ಚಿಸಿದೆ. ಇಂದು ಈ ವಲಯವು ಸುಮಾರು 3 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿದೆ. ಸಮುದ್ರ ಉತ್ಪನ್ನಗಳ ಸಂಸ್ಕರಣೆಯನ್ನು ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ, ಆಧುನಿಕ ಸಂಸ್ಕರಣಾ ಘಟಕಗಳು, ಶೀತಲ ಕೇಂದ್ರ ಸರಪಳಿಗಳು ಮತ್ತು ಸ್ಮಾರ್ಟ್ ಬಂದರುಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ.
ಸ್ನೇಹಿತರೆ,
ನಾವು ಬೆಳೆಗಳನ್ನು ಸಂರಕ್ಷಿಸಲು ಆಧುನಿಕ ತಂತ್ರಜ್ಞಾನದಲ್ಲೂ ಹೂಡಿಕೆ ಮಾಡುತ್ತಿದ್ದೇವೆ. ರೈತರನ್ನು ಆಹಾರ ವಿಕಿರಣ ತಂತ್ರಜ್ಞಾನದೊಂದಿಗೆ ಸಂಪರ್ಕಿಸಲಾಗುತ್ತಿದೆ. ಇದು ನಮ್ಮ ಕೃಷಿ ಉತ್ಪನ್ನಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಿದೆ, ಆಹಾರ ಭದ್ರತೆಯನ್ನು ಬಲಪಡಿಸಿದೆ. ಈ ಕೆಲಸದಲ್ಲಿ ತೊಡಗಿರುವ ಘಟಕಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲ ಒದಗಿಸುತ್ತಿದೆ.
ಸ್ನೇಹಿತರೆ,
ಇಂದಿನ ಭಾರತವು ನಾವೀನ್ಯತೆ ಮತ್ತು ಸುಧಾರಣೆಗಳ ಹೊಸ ಹಾದಿಯಲ್ಲಿ ಮುಂದುವರಿಯುತ್ತಿದೆ. ಪ್ರಸ್ತುತ, ನಮ್ಮ ದೇಶದಲ್ಲಿ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ರೈತರಿಗೆ, ಈ ಸುಧಾರಣೆಗಳು ಕಡಿಮೆ ವೆಚ್ಚ ಮತ್ತು ಹೆಚ್ಚಿನ ಪ್ರಯೋಜನಗಳ ಭರವಸೆ ತರುತ್ತಿವೆ. ಬೆಣ್ಣೆ ಮತ್ತು ತುಪ್ಪದ ಮೇಲೆ ಕೇವಲ 5 ಪ್ರತಿಶತ ಜಿಎಸ್‌ಟಿಯೊಂದಿಗೆ, ಅವರು ಅಪಾರ ಪ್ರಯೋಜನ ಪಡೆಯುತ್ತಾರೆ. ಹಾಲಿನ ಡಬ್ಬಿಗಳ ಮೇಲೂ ತೆರಿಗೆ ಕೇವಲ 5 ಪ್ರತಿಶತ. ಇದು ರೈತರು ಮತ್ತು ಉತ್ಪಾದಕರಿಗೆ ಉತ್ತಮ ಬೆಲೆ ಖಚಿತಪಡಿಸುತ್ತದೆ. ಇದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶವನ್ನು ಖಚಿತಪಡಿಸುತ್ತದೆ. ಆಹಾರ ಸಂಸ್ಕರಣಾ ವಲಯವು ಸಹ ಈ ಸುಧಾರಣೆಗಳಿಂದ ಗಮನಾರ್ಹವಾಗಿ ಲಾಭ ಪಡೆಯಲಿದೆ. ಸೇವಿಸಲು ಸಿದ್ಧ ಮತ್ತು ಸಂರಕ್ಷಿತ ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳು ಕೇವಲ 5 ಪ್ರತಿಶತ ಜಿಎಸ್‌ಟಿ ಆಕರ್ಷಿಸುತ್ತವೆ. ಇಂದು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಶೇಕಡ 90ಕ್ಕಿಂತ ಹೆಚ್ಚು ಉತ್ಪನ್ನಗಳು ಶೂನ್ಯ ಅಥವಾ ಶೇಕಡ 5ರಷ್ಟು ತೆರಿಗೆ ಶ್ರೇಣಿಯಲ್ಲಿ ಬರುತ್ತವೆ. ಜೈವಿಕ ಕೀಟನಾಶಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ಜಿಎಸ್‌ಟಿ ಸುಧಾರಣೆಗಳಿಂದಾಗಿ, ಜೈವಿಕ ಒಳಹರಿವು ಅಗ್ಗವಾಗಿದ್ದು, ಸಣ್ಣ ಸಾವಯವ ರೈತರು ಮತ್ತು ಎಫ್‌ಪಿಒಗಳಿಗೆ ನೇರವಾಗಿ ಪ್ರಯೋಜನ ನೀಡುತ್ತದೆ.
ಸ್ನೇಹಿತರೆ,
ಇಂದು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಕೂಡ ಈ ಕಾಲಘಟ್ಟದ ಬೇಡಿಕೆಯಾಗಿದೆ. ನಮ್ಮ ಉತ್ಪನ್ನಗಳು ತಾಜಾ ಮತ್ತು ಉತ್ತಮ ಗುಣಮಟ್ಟದ್ದಾಗಿರುವುದು ಮುಖ್ಯ, ಆದರೆ ಇದರ ಜತೆಗೆ, ಪ್ರಕೃತಿಯ ಬಗ್ಗೆ ನಮಗೂ ಜವಾಬ್ದಾರಿ ಇದೆ. ಆದ್ದರಿಂದ, ಸರ್ಕಾರವು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಮೇಲಿನ ಜಿಎಸ್ಟಿಯನ್ನು ಶೇಕಡ 18ರಿಂದ 5ಕ್ಕೆ ಇಳಿಸಿದೆ. ಜೈವಿಕ ವಿಘಟನೀಯ ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ನಾವೀನ್ಯತೆಗಳಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ಎಲ್ಲಾ ಉತ್ಪನ್ನ ಪ್ಯಾಕೇಜಿಂಗ್ ಅನ್ನು ಸಾಧ್ಯವಾದಷ್ಟು ಬೇಗ ಜೈವಿಕ ವಿಘಟನೀಯ ವಸ್ತುಗಳಿಗೆ ಬದಲಾಯಿಸಲು ನಾನು ಎಲ್ಲಾ ಉದ್ಯಮ ಪಾಲುದಾರರನ್ನು ಹೃತ್ಪೂರ್ವಕವಾಗಿ ಒತ್ತಾಯಿಸಲು ಬಯಸುತ್ತೇನೆ.
ಸ್ನೇಹಿತರೆ,
ಭಾರತವು ಉದಾರ ಮನೋಭಾವದಿಂದ ಜಗತ್ತಿಗೆ ತನ್ನ ಬಾಗಿಲುಗಳನ್ನು ತೆರೆದಿಟ್ಟಿದೆ. ಆಹಾರ ಸರಪಳಿಯೊಂದಿಗೆ ಸಂಬಂಧಿಸಿದ ಎಲ್ಲಾ ಹೂಡಿಕೆದಾರರಿಗೆ ನಾವು ಮುಕ್ತರಾಗಿದ್ದೇವೆ. ಮುಕ್ತ ಹೃದಯದಿಂದ ಸಹಭಾಗಿತ್ವಕ್ಕೆ ನಾವು ಸಿದ್ಧರಿದ್ದೇವೆ. ಮತ್ತೊಮ್ಮೆ, ಭಾರತದಲ್ಲಿ ಹೆಚ್ಚಿನದನ್ನು ಹೂಡಿಕೆ ಮಾಡಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಈ ವಲಯದಲ್ಲಿ ಅಪಾರ ಸಾಧ್ಯತೆಗಳಿವೆ. ಅವುಗಳ ಲಾಭ ಪಡೆದುಕೊಳ್ಳಿ. ಈ ಕಾರ್ಯಕ್ರಮದೊಂದಿಗೆ ಸಂಬಂಧಿಸಿದ ಎಲ್ಲ ಪಾಲುದಾರರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಧನ್ಯವಾದಗಳು.
*****
(Release ID: 2171608)
Visitor Counter : 5