ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 20ರಂದು ಗುಜರಾತ್‌ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


'ಸಮುದ್ರದಿಂದ ಸಮೃದ್ಧಿ' ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಭಾವನಗರದಲ್ಲಿ 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಈ ಯೋಜನೆಗಳು ಸಾಗರ, ಎಲ್ಎನ್‌ಜಿ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಹೆದ್ದಾರಿಗಳು, ಆರೋಗ್ಯ ರಕ್ಷಣೆ ಮತ್ತು ನಗರ ಸಾರಿಗೆ ಸೇರಿದಂತೆ ಅನೇಕ ವಲಯಗಳನ್ನು ಅಗತ್ಯಗಳನ್ನು ಪೂರೈಸುತ್ತವೆ

ಲೋಥಾಲ್‌ನಲ್ಲಿರುವ ʻರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣʼಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಿರುವ ಪ್ರಧಾನಮಂತ್ರಿ

ಹಡಗು ನಿರ್ಮಾಣ, ಬಂದರು ಆಧುನೀಕರಣ, ಹಸಿರು ಇಂಧನ ಮತ್ತು ಕರಾವಳಿ ಸಂಪರ್ಕದ ಮೂಲಕ ಸಮದ್ರ ಆಧರಿತ ಪ್ರಗತಿಯತ್ತ ಗಮನ ಹರಿಸಲಾಗುವುದು

ಧೋಲೆರಾದಲ್ಲಿ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿರುವ ಪ್ರಧಾನಮಂತ್ರಿ

Posted On: 19 SEP 2025 5:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 20ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅವರು ಭಾವನಗರದಲ್ಲಿ ಬೆಳಗ್ಗೆ 10:30ರ ಸುಮಾರಿಗೆ 'ಸಮುದ್ರದಿಂದ ಸಮೃದ್ಧಿ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನಂತರ ಪ್ರಧಾನಮಂತ್ರಿ ಅವರು ಧೋಲೆರಾದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ ಅವರು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಲೋಥಾಲ್‌ನಲ್ಲಿರುವ ʻರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣʼಕ್ಕೆ ಭೇಟಿ ನೀಡಲಿದ್ದಾರೆ.

ಕಡಲ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಕಡಲ ವಲಯಕ್ಕೆ ಸಂಬಂಧಿಸಿದ 7,870 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ʻಇಂದಿರಾ ಡಾಕ್‌ʼನಲ್ಲಿ ಅವರು ʻಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ʼ ಅನ್ನು ಉದ್ಘಾಟಿಸಲಿದ್ದಾರೆ. ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೈನರ್ ಟರ್ಮಿನಲ್ ಮತ್ತು ಪೂರಕ ಸೌಲಭ್ಯಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಾರಾದೀಪ್ ಬಂದರಿನಲ್ಲಿ ಹೊಸ ಕಂಟೈನರ್ ಬರ್ತ್, ಸರಕು ನಿರ್ವಹಣೆ ಸೌಲಭ್ಯಗಳು ಮತ್ತು ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳು; ಎನ್ನೋರ್‌ನ ಕಾಮರಾಜರ್ ಬಂದರಿನಲ್ಲಿ ಟ್ಯೂನಾ ಟೆಕ್ರಾ ಮಲ್ಟಿ-ಕಾರ್ಗೋ ಟರ್ಮಿನಲ್, ಅಗ್ನಿಶಾಮಕ ಸೌಲಭ್ಯಗಳು ಮತ್ತು ಆಧುನಿಕ ರಸ್ತೆ ಸಂಪರ್ಕ; ಚೆನ್ನೈ ಬಂದರಿನಲ್ಲಿ ಸಮುದ್ರ ತಡೆಗೋಡೆಗಳು ಮತ್ತು ಅಡ್ಡಗೋಡೆಗಳು ಸೇರಿದಂತೆ ಕರಾವಳಿ ಸಂರಕ್ಷಣಾ ಕಾಮಗಾರಿಗಳು; ಕಾರ್ ನಿಕೋಬಾರ್ ದ್ವೀಪದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ; ಕಾಂಡ್ಲಾದ ದೀನದಯಾಳ್ ಬಂದರಿನಲ್ಲಿ ವಿವಿಧೋದ್ದೇಶ ಸರಕು ಬರ್ತ್ ಮತ್ತು ಹಸಿರು ಜೈವಿಕ-ಮೆಥನಾಲ್ ಸ್ಥಾವರ; ಜೊತೆಗೆ ಪಾಟ್ನಾ ಮತ್ತು ವಾರಣಾಸಿಯಲ್ಲಿ ಹಡಗು ದುರಸ್ತಿ ಸೌಲಭ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಗುಜರಾತ್‌ನ ವಿವಿಧ ವಲಯಗಳ ಅಗತ್ಯಗಳನ್ನು ಪೂರೈಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ 26,354 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಛಾರಾ ಬಂದರಿನಲ್ಲಿ ʻಎಚ್‌ಪಿಎಲ್ಎನ್‌ಜಿ ರೀಗ್ಯಾಸಿಫಿಕೇಶನ್ ಟರ್ಮಿನಲ್ʼ, ಗುಜರಾತ್ ಐಒಸಿಎಲ್ ರಿಫೈನರಿಯಲ್ಲಿ ಅಕ್ರಿಲಿಕ್ಸ್ ಮತ್ತು ಆಕ್ಸೊ ಆಲ್ಕೋಹಾಲ್ ಯೋಜನೆ; 600 ಮೆಗಾವ್ಯಾಟ್ ʻಗ್ರೀನ್ ಶೂ ಇನಿಶಿಯೇಟಿವ್ʼ, ʻಪಿಎಂ-ಕುಸುಮ್ʼ 475 ಮೆಗಾವ್ಯಾಟ್ ಕಾಂಪೊನೆಂಟ್ ಸಿ ಸೋಲಾರ್ ಫೀಡರ್, 45 ಮೆಗಾವ್ಯಾಟ್ ಬಡೇಲಿ ಸೋಲಾರ್ ಪಿವಿ ಯೋಜನೆ, ಧೋರ್ಡೊ ಗ್ರಾಮದ ಸಂಪೂರ್ಣ ಸೌರೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಭಾವನಗರದ ಸರ್ ಟಿ. ಜನರಲ್ ಆಸ್ಪತ್ರೆ, ಜಾಮ್‌ನಗರದ ಗುರು ಗೋವಿಂದ್ ಸಿನ್ಹ್ ಸರ್ಕಾರಿ ಆಸ್ಪತ್ರೆಗಳ ವಿಸ್ತರಣೆ; 70 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ಚತುಷ್ಪಥ ವಿಸ್ತರಣೆ ಸೇರಿದಂತೆ ಎನ್‌ಎಲ್‌ಜಿ ಮೂಲಸೌಕರ್ಯ, ಹೆಚ್ಚುವರಿ ನವೀಕರಿಸಬಹುದಾದ ಇಂಧನ ಯೋಜನೆಗಳು, ಕರಾವಳಿ ಸಂರಕ್ಷಣಾ ಕಾಮಗಾರಿಗಳು, ಹೆದ್ದಾರಿಗಳು ಆರೋಗ್ಯ ಮತ್ತು ನಗರಸಾರಿಗೆ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸುಸ್ಥಿರ ಕೈಗಾರಿಕೀಕರಣ, ಸ್ಮಾರ್ಟ್ ಮೂಲಸೌಕರ್ಯ ಮತ್ತು ಜಾಗತಿಕ ಹೂಡಿಕೆಯೊಂದಿಗೆ ʻಗ್ರೀನ್‌ಫೀಲ್ಡ್ ಕೈಗಾರಿಕಾ ನಗರʼವಾಗಿ ನಿರ್ಮಿಸಲಾದ ʻಧೋಲೆರಾ ವಿಶೇಷ ಹೂಡಿಕೆ ಪ್ರದೇಶʼದಲ್ಲಿ(ಡಿಎಸ್ಐಆರ್) ಪ್ರಧಾನಿ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ. ಭಾರತದ ಪ್ರಾಚೀನ ಕಡಲ ಸಂಪ್ರದಾಯಗಳನ್ನು ಆಚರಿಸಲು ಮತ್ತು ಸಂರಕ್ಷಿಸಲು ಹಾಗೂ ಪ್ರವಾಸೋದ್ಯಮ, ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವಾಗಿ ಕಾರ್ಯನಿರ್ವಹಿಸಲು ಸುಮಾರು 4,500 ಕೋಟಿ ರೂ.ಗಳ ವೆಚ್ಚದಲ್ಲಿ ಲೋಥಾಲ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ʻರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣʼಕ್ಕೆ ಭೇಟಿ ನೀಡಿ,  (ಎನ್ಎಚ್ಎಂಸಿ) ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.

 

*****


(Release ID: 2168606)