ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಧಾರ್ ನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
Posted On:
17 SEP 2025 4:18PM by PIB Bengaluru
ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ!
ನರ್ಮದಾ ಮೈಯಾ ಕೀ ಜೈ! ನರ್ಮದಾ ಮೈಯಾ ಕೀ ಜೈ! ನರ್ಮದಾ ಮೈಯಾ ಕೀ ಜೈ!
ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್ ಜೀ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಮೋಹನ್ ಯಾದವ್ ಜೀ, ಕೇಂದ್ರದಲ್ಲಿ ನನ್ನ ಸಹೋದ್ಯೋಗಿಗಳಾದ ಸಹೋದರಿ ಸಾವಿತ್ರಿ ಠಾಕೂರ್ ಜೀ, ದೇಶದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕೇಂದ್ರ ಸಚಿವರೇ, ರಾಜ್ಯಗಳ ರಾಜ್ಯಪಾಲರೇ, ರಾಜ್ಯಗಳ ಮುಖ್ಯಮಂತ್ರಿಗಳೇ, ವೇದಿಕೆಯ ಮೇಲೆ ಉಪಸ್ಥಿತರಿರುವ ಇತರ ಎಲ್ಲ ಗಣ್ಯರೇ ಮತ್ತು ದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!
ಜ್ಞಾನದ ದೇವತೆಯಾದ, ಧಾರಾ ಭೋಜ್ ಶಾಲೆಯ ಮಾತೆಯಾದ ವಾಗ್ದೇವಿಯ ಪಾದಗಳಿಗೆ ನಾನು ನಮಿಸುತ್ತೇನೆ. ಇಂದು, ಕೌಶಲ್ಯ ಮತ್ತು ನಿರ್ಮಾಣದ ದೇವರಾದ ಭಗವಾನ್ ವಿಶ್ವಕರ್ಮರ ಜಯಂತಿ. ನಾನು ಭಗವಾನ್ ವಿಶ್ವಕರ್ಮರಿಗೆ ನಮಸ್ಕರಿಸುತ್ತೇನೆ. ಇಂದು, ವಿಶ್ವಕರ್ಮ ಜಯಂತಿಯ ಈ ಸಂದರ್ಭದಲ್ಲಿ, ತಮ್ಮ ಕೌಶಲ್ಯದಿಂದ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಕೋಟ್ಯಂತರ ಸಹೋದರ ಸಹೋದರಿಯರಿಗೆ ನಾನು ಗೌರವಪೂರ್ವಕವಾಗಿ ನಮಿಸುತ್ತೇನೆ.
ಸ್ನೇಹಿತರೇ,
ಧಾರಾದ ಈ ಭೂಮಿಯು ಸದಾ ಶೌರ್ಯದ ನಾಡು, ಸ್ಫೂರ್ತಿಯ ನೆಲವಾಗಿದೆ. ಮಹಾರಾಜ ಭೋಜರ ಶೌರ್ಯ... ಬಹುಶಃ ಅಲ್ಲಿ ನಿಮಗೆ ಕೇಳಿಸುತ್ತಿಲ್ಲವೇನೋ ಅಥವಾ ಕಾಣಿಸುತ್ತಿಲ್ಲವೇನೋ. ನೀವು ಎಷ್ಟೇ ದೂರವಿರಲಿ, ನಿಮ್ಮ ಹೃದಯದಲ್ಲಿ ಏನಿದೆ ಎಂಬುದು ನನಗೆ ಅರ್ಥವಾಗುತ್ತದೆ. ಇಲ್ಲಿರುವ ತಂತ್ರಜ್ಞರು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾದರೆ, ದಯವಿಟ್ಟು ಮಾಡಬೇಕು. ಇಲ್ಲದಿದ್ದರೆ, ಇವರೆಲ್ಲಾ ಮಧ್ಯಪ್ರದೇಶದ ಜನರು, ಬಹಳ ಶಿಸ್ತಿನವರು. ತೊಂದರೆಯಾದರೂ ಸಹಿಸಿಕೊಳ್ಳುವ ಸ್ವಭಾವ ಮಧ್ಯಪ್ರದೇಶಕ್ಕೆ ಮೊದಲಿನಿಂದಲೂ ಇದೆ, ಮತ್ತು ಅದನ್ನು ನಾನು ಇಲ್ಲಿಯೂ ನೋಡುತ್ತಿದ್ದೇನೆ.
ಸ್ನೇಹಿತರೇ,
ಮಹಾರಾಜ ಭೋಜರ ಶೌರ್ಯವು ರಾಷ್ಟ್ರೀಯ ಸ್ವಾಭಿಮಾನವನ್ನು ರಕ್ಷಿಸಲು ದೃಢವಾಗಿ ನಿಲ್ಲುವುದನ್ನು ನಮಗೆ ಕಲಿಸುತ್ತದೆ. ಮಹರ್ಷಿ ದಧೀಚಿಯವರ ತ್ಯಾಗವು ಮಾನವ ಕುಲದ ಸೇವೆ ಮಾಡುವ ಸಂಕಲ್ಪವನ್ನು ನಮಗೆ ನೀಡುತ್ತದೆ. ಈ ಪರಂಪರೆಯಿಂದ ಸ್ಫೂರ್ತಿ ಪಡೆದು, ಇಂದು ದೇಶವು ಭಾರತ ಮಾತೆಯ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡುತ್ತಿದೆ. ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಬಾಳಿನ ಸಿಂಧೂರವನ್ನು ಅಳಿಸಿದ್ದರು; ನಾವು ‘ಆಪರೇಷನ್ ಸಿಂಧೂರ’ ನಡೆಸಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿದ್ದೇವೆ. ನಮ್ಮ ವೀರ ಯೋಧರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದರು. ನಿನ್ನೆಯಷ್ಟೇ, ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕನು ಕಣ್ಣೀರಿಡುತ್ತಾ ತನ್ನ ದುರವಸ್ಥೆಯನ್ನು ಹೇಳಿಕೊಳ್ಳುವುದನ್ನು ರಾಷ್ಟ್ರ ಮತ್ತು ಇಡೀ ಜಗತ್ತು ನೋಡಿದೆ.
ಸ್ನೇಹಿತರೇ,
ಇದು ನವ ಭಾರತ, ಇದು ಯಾರೊಬ್ಬರ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ. ಇದು ನವ ಭಾರತ, ಇದು ಮನೆಗೆ ನುಗ್ಗಿ ಕೊಲ್ಲುತ್ತದೆ.
ಸ್ನೇಹಿತರೇ,
ಇಂದು, ಸೆಪ್ಟೆಂಬರ್ 17, ಮತ್ತೊಂದು ಐತಿಹಾಸಿಕ ದಿನವಾಗಿದೆ. ಇದೇ ದಿನ, ರಾಷ್ಟ್ರವು ಸರ್ದಾರ್ ಪಟೇಲರ ಉಕ್ಕಿನ ಸಂಕಲ್ಪಕ್ಕೆ ಸಾಕ್ಷಿಯಾಗಿತ್ತು. ಭಾರತೀಯ ಸೇನೆಯು ಹೈದರಾಬಾದನ್ನು ಅನೇಕ ದೌರ್ಜನ್ಯಗಳಿಂದ ಮುಕ್ತಗೊಳಿಸಿ, ಅದರ ಹಕ್ಕುಗಳನ್ನು ರಕ್ಷಿಸುವ ಮೂಲಕ ಭಾರತದ ಹೆಮ್ಮೆಯನ್ನು ಮರುಸ್ಥಾಪಿಸಿತು. ದೇಶದ ಈ ಮಹಾನ್ ಸಾಧನೆಯಾಗಿ ಹಲವು ದಶಕಗಳು ಕಳೆದಿವೆ, ಆದರೆ ಆ ಸಾಧನೆಯನ್ನು, ಸೇನೆಯ ಆ ಮಹಾನ್ ಶೌರ್ಯವನ್ನು ಸ್ಮರಿಸುವವರು ಯಾರೂ ಇರಲಿಲ್ಲ. ಆದರೆ ನೀವು ನನಗೆ ಅವಕಾಶ ನೀಡಿದಿರಿ, ನಮ್ಮ ಸರ್ಕಾರವು ಸೆಪ್ಟೆಂಬರ್ 17, ಸರ್ದಾರ್ ಪಟೇಲ್ ಮತ್ತು ಹೈದರಾಬಾದ್ ಘಟನೆಯನ್ನು ಅಮರವಾಗಿಸಿದೆ. ಭಾರತದ ಏಕತೆಯ ಸಂಕೇತವಾದ ಈ ದಿನವನ್ನು ನಾವು 'ಹೈದರಾಬಾದ್ ವಿಮೋಚನಾ ದಿನ'ವನ್ನಾಗಿ ಆಚರಿಸಲು ಪ್ರಾರಂಭಿಸಿದ್ದೇವೆ. ಮತ್ತು ಇಂದು, ಹೈದರಾಬಾದ್ ನಲ್ಲಿ ವಿಮೋಚನಾ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹೈದರಾಬಾದ್ ವಿಮೋಚನಾ ದಿನವು ನಮಗೆ ಸ್ಫೂರ್ತಿ ನೀಡುತ್ತದೆ - ಭಾರತ ಮಾತೆಯ ಗೌರವ ಮತ್ತು ಕೀರ್ತಿಗಿಂತ ದೊಡ್ಡದು ಯಾವುದೂ ಇಲ್ಲ, ನಾವು ಬದುಕಿದರೆ ಅದು ದೇಶಕ್ಕಾಗಿ ಇರಬೇಕು, ನಮ್ಮ ಜೀವನದ ಪ್ರತಿ ಕ್ಷಣವೂ ದೇಶಕ್ಕೆ ಸಮರ್ಪಿತವಾಗಿರಬೇಕು.
ಸ್ನೇಹಿತರೇ,
ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಮಡಿಯಲು ಶಪಥ ಮಾಡಿ, ತಮ್ಮ ಸರ್ವಸ್ವವನ್ನೂ ರಾಷ್ಟ್ರಕ್ಕೆ ಸಮರ್ಪಿಸಿದರು. ಅವರ ಕನಸು ‘ವಿಕಸಿತ ಭಾರತ’ವಾಗಿತ್ತು. ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತವಾಗಿ, ಕ್ಷಿಪ್ರ ಗತಿಯಲ್ಲಿ ಮುನ್ನಡೆಯುವ ರಾಷ್ಟ್ರದ ಕನಸನ್ನು ಅವರು ಕಂಡಿದ್ದರು. ಇಂದು, ಇದೇ ಸ್ಫೂರ್ತಿಯೊಂದಿಗೆ, 140 ಕೋಟಿ ಭಾರತೀಯರಾದ ನಾವು ಭಾರತವನ್ನು ವಿಕಸಿತವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ. ಮತ್ತು ವಿಕಸಿತ ಭಾರತದತ್ತ ಸಾಗುವ ಈ ಪಯಣದ ನಾಲ್ಕು ಪ್ರಮುಖ ಸ್ತಂಭಗಳೆಂದರೆ – ಭಾರತದ ನಾರಿ ಶಕ್ತಿ, ಯುವ ಶಕ್ತಿ, ಬಡವರು ಮತ್ತು ರೈತರು. ಇಂದು, ಈ ಕಾರ್ಯಕ್ರಮದಲ್ಲಿ, ವಿಕಸಿತ ಭಾರತದ ಈ ನಾಲ್ಕು ಸ್ತಂಭಗಳಿಗೆ ಹೊಸ ಶಕ್ತಿಯನ್ನು ನೀಡುವ ಕೆಲಸ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಯಲ್ಲಿ ನನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಇಲ್ಲಿಗೆ ಬಂದಿದ್ದಾರೆ. ಇಂದಿನ ಈ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ಈ ಕಾರ್ಯಕ್ರಮವು ಧಾರಾದಲ್ಲಿ ನಡೆಯುತ್ತಿದೆ, ಆದರೆ ಇದು ಇಡೀ ದೇಶಕ್ಕಾಗಿ, ಇಡೀ ರಾಷ್ಟ್ರಕ್ಕಾಗಿ, ಸಮಗ್ರ ರಾಷ್ಟ್ರದ ತಾಯಂದಿರು ಮತ್ತು ಸಹೋದರಿಯರಿಗಾಗಿ ಆಗಿದೆ. ಇಲ್ಲಿಂದ ‘ಸ್ವಸ್ಥ ನಾರಿ-ಸಶಕ್ತ ಪರಿವಾರ’ (ಆರೋಗ್ಯವಂತ ಮಹಿಳೆ-ಸಶಕ್ತ ಕುಟುಂಬ) ಎಂಬ ಬೃಹತ್ ಅಭಿಯಾನ ಪ್ರಾರಂಭವಾಗುತ್ತಿದೆ. ವಾಗ್ದೇವಿಯ ಆಶೀರ್ವಾದದೊಂದಿಗೆ, ಇದಕ್ಕಿಂತ ದೊಡ್ಡ ಕೆಲಸ ಇನ್ನೇನಿದೆ?
ಸ್ನೇಹಿತರೇ,
ದೇಶದಾದ್ಯಂತ ವಿವಿಧ ಹಂತಗಳಲ್ಲಿ ‘ಆದಿ ಸೇವಾ ಪರ್ವ’ದ ಪ್ರತಿಧ್ವನಿ ಈಗಾಗಲೇ ಕೇಳಿಬರುತ್ತಿದೆ. ಇದರ ಮಧ್ಯಪ್ರದೇಶ ಆವೃತ್ತಿಯು ಕೂಡಾ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಅಭಿಯಾನವು, ಧಾರಾ ಸೇರಿದಂತೆ ಮಧ್ಯಪ್ರದೇಶದ ನಮ್ಮ ಬುಡಕಟ್ಟು ಸಮುದಾಯಗಳನ್ನು ವಿವಿಧ ಯೋಜನೆಗಳಿಗೆ ನೇರವಾಗಿ ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.
ಸ್ನೇಹಿತರೇ,
ವಿಶ್ವಕರ್ಮ ಜಯಂತಿಯ ಈ ಸಂದರ್ಭದಲ್ಲಿ, ಇಂದು ಒಂದು ಪ್ರಮುಖ ಕೈಗಾರಿಕಾ ಉಪಕ್ರಮಕ್ಕೂ ಚಾಲನೆ ದೊರೆಯಲಿದೆ. ಇಲ್ಲಿ ದೇಶದ ಅತಿದೊಡ್ಡ ಸಮಗ್ರ ಜವಳಿ ಪಾರ್ಕ್ ಗೆ ಶಂಕುಸ್ಥಾಪನೆ ನೆರವೇರಿದೆ. ಈ ಪಾರ್ಕ್ ಭಾರತದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯವನ್ನು ನೀಡಲಿದೆ. ರೈತರು ತಮ್ಮ ಬೆಳೆಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ, ಮತ್ತು ನನಗೆ ಸಂತೋಷವೆಂದರೆ, ಕೇವಲ ಧಾರಾದಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಲಕ್ಷಾಂತರ ರೈತರು ಈ ಕಾರ್ಯಕ್ರಮದೊಂದಿಗೆ ಜೊತೆಗೂಡಿದ್ದಾರೆ.
ಸ್ನೇಹಿತರೇ,
ಈ ಪಿಎಂ ಮಿತ್ರ ಪಾರ್ಕ್, ಈ ಜವಳಿ ಪಾರ್ಕ್ನಿಂದ ಆಗುವ ಅತಿದೊಡ್ಡ ಪ್ರಯೋಜನವೆಂದರೆ, ನಮ್ಮ ಯುವಕ-ಯುವತಿಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಲಭಿಸಲಿವೆ. ಈ ಯೋಜನೆಗಳು ಮತ್ತು ಅಭಿಯಾನಗಳಿಗಾಗಿ ನನ್ನ ಎಲ್ಲಾ ದೇಶವಾಸಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಧ್ಯಪ್ರದೇಶಕ್ಕೆ ನನ್ನ ವಿಶೇಷ ಅಭಿನಂದನೆಗಳು.
ಸ್ನೇಹಿತರೇ,
ನಮ್ಮ ತಾಯಂದಿರು ಮತ್ತು ಸಹೋದರಿಯರು, ನಮ್ಮ ನಾರಿ ಶಕ್ತಿಯೇ ರಾಷ್ಟ್ರದ ಪ್ರಗತಿಯ ಮುಖ್ಯ ಆಧಾರಸ್ತಂಭ. ಮನೆಯಲ್ಲಿ ತಾಯಿ ಆರೋಗ್ಯವಾಗಿದ್ದರೆ, ಇಡೀ ಮನೆಯೇ ಆರೋಗ್ಯವಾಗಿರುತ್ತದೆ ಎಂಬುದನ್ನು ನಾವೆಲ್ಲರೂ ನೋಡುತ್ತೇವೆ.
ಆದರೆ ಸ್ನೇಹಿತರೇ,
ಒಬ್ಬ ತಾಯಿ ಅನಾರೋಗ್ಯಕ್ಕೆ ಒಳಗಾದರೆ, ಇಡೀ ಕುಟುಂಬದ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಆದ್ದರಿಂದ, ‘ಸ್ವಸ್ಥ ನಾರಿ-ಸಶಕ್ತ ಪರಿವಾರ’ ಅಭಿಯಾನವನ್ನು ತಾಯಂದಿರು ಮತ್ತು ಸಹೋದರಿಯರಿಗೆ, ಅವರ ಉಜ್ವಲ ಭವಿಷ್ಯಕ್ಕಾಗಿ ಸಮರ್ಪಿಸಲಾಗಿದೆ. ಮಾಹಿತಿ ಅಥವಾ ಸಂಪನ್ಮೂಲಗಳ ಕೊರತೆಯಿಂದಾಗಿ ಒಬ್ಬೇ ಒಬ್ಬ ಮಹಿಳೆಯೂ ಯಾವುದೇ ಗಂಭೀರ ಕಾಯಿಲೆಗೆ ತುತ್ತಾಗಬಾರದು ಎನ್ನುವುದೇ ನಮ್ಮ ಗುರಿ. ಅನೇಕ ರೋಗಗಳು ಸದ್ದಿಲ್ಲದೆ ಬರುತ್ತವೆ ಮತ್ತು ಸಕಾಲದಲ್ಲಿ ಪತ್ತೆಯಾಗದ ಕಾರಣ ಕ್ರಮೇಣ ಗಂಭೀರ ಸ್ವರೂಪ ಪಡೆದು, ಜೀವನ್ಮರಣದ ಹೋರಾಟವೇ ಪ್ರಾರಂಭವಾಗುತ್ತದೆ. ಮಹಿಳೆಯರಿಗೆ ಅತಿ ಹೆಚ್ಚು ಅಪಾಯವನ್ನುಂಟುಮಾಡುವ ಇಂತಹ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಬಹಳ ಮುಖ್ಯ. ಆದ್ದರಿಂದ, ಈ ಅಭಿಯಾನದ ಅಡಿಯಲ್ಲಿ, ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಕ್ಷಯರೋಗ, ಅಥವಾ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯ ಸಾಧ್ಯತೆಯೇ ಆಗಿರಲಿ, ಎಲ್ಲವನ್ನೂ ಪರೀಕ್ಷಿಸಲಾಗುವುದು. ಮತ್ತು ನನ್ನ ತಾಯಂದಿರೇ, ಸಹೋದರಿಯರೇ, ದೇಶದ ನನ್ನ ತಾಯಂದಿರೇ ಮತ್ತು ಸಹೋದರಿಯರೇ, ನೀವು ನನಗೆ ಯಾವಾಗಲೂ ಬಹಳಷ್ಟು ಕೊಟ್ಟಿದ್ದೀರಿ. ನಿಮ್ಮ ಆಶೀರ್ವಾದವೇ ನನಗೆ ದೊಡ್ಡ ರಕ್ಷಾಕವಚ. ದೇಶದ ಕೋಟ್ಯಂತರ ತಾಯಂದಿರು-ಸಹೋದರಿಯರು ನನ್ನ ಮೇಲೆ ತಮ್ಮ ಆಶೀರ್ವಾದದ ಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ ತಾಯಂದಿರೇ, ಸಹೋದರಿಯರೇ, ಇಂದು, ಸೆಪ್ಟೆಂಬರ್ 17, ವಿಶ್ವಕರ್ಮ ಜಯಂತಿಯಂದು, ನಾನು ನಿಮ್ಮಲ್ಲಿ ಏನನ್ನೋ ಕೇಳಲು ಬಂದಿದ್ದೇನೆ. ದೇಶದಾದ್ಯಂತ ಇರುವ ತಾಯಂದಿರು ಮತ್ತು ಸಹೋದರಿಯರಲ್ಲಿ ಏನನ್ನೋ ಕೇಳಲು ಬಂದಿದ್ದೇನೆ. ತಾಯಂದಿರೇ, ಸಹೋದರಿಯರೇ, ಹೇಳಿ? ನೀವು ಅದನ್ನು ನನಗೆ ನೀಡುತ್ತೀರೋ ಇಲ್ಲವೋ? ದಯವಿಟ್ಟು ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ನನಗೆ ಹೇಳಿ. ವಾಹ್, ಎಲ್ಲರ ಕೈಗಳು ಮೇಲಕ್ಕೆ ಏರುತ್ತಿವೆ. ನೀವು ಯಾವುದೇ ಹಿಂಜರಿಕೆಯಿಲ್ಲದೆ ಈ ಶಿಬಿರಗಳಿಗೆ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಒಬ್ಬ ಮಗನಾಗಿ, ಒಬ್ಬ ಸಹೋದರನಾಗಿ, ನಾನು ನಿಮ್ಮಿಂದ ಇಷ್ಟನ್ನಾದರೂ ಕೇಳಬಹುದಲ್ಲವೇ? ನಾನು ನಿಮಗೆ ಹೇಳುವುದಿಷ್ಟೇ, ಈ ಆರೋಗ್ಯ ಶಿಬಿರಗಳಲ್ಲಿ ಪರೀಕ್ಷೆಗಳು ಎಷ್ಟೇ ದುಬಾರಿಯಾಗಿದ್ದರೂ, ನೀವು ಒಂದು ಪೈಸೆಯನ್ನೂ ಪಾವತಿಸಬೇಕಾಗಿಲ್ಲ. ಯಾವುದೇ ಶುಲ್ಕ ಇರುವುದಿಲ್ಲ. ಪರೀಕ್ಷೆಗಳು ಉಚಿತವಾಗಿರುತ್ತವೆ, ಅಷ್ಟೇ ಅಲ್ಲ, ಔಷಧಿಗಳೂ ಕೂಡ ಉಚಿತವಾಗಿರುತ್ತವೆ. ನಿಮ್ಮ ಉತ್ತಮ ಆರೋಗ್ಯಕ್ಕಿಂತ ಸರ್ಕಾರದ ಖಜಾನೆ ದೊಡ್ಡದಲ್ಲ. ಈ ಖಜಾನೆ ನಿಮಗಾಗಿ, ನಿಮ್ಮಂತಹ ತಾಯಂದಿರು ಮತ್ತು ಸಹೋದರಿಯರಿಗಾಗಿಯೇ ಇದೆ. ಮತ್ತು ಮುಂದಿನ ಚಿಕಿತ್ಸೆಯಲ್ಲಿ ಆಯುಷ್ಮಾನ್ ಕಾರ್ಡ್ನ ರಕ್ಷಣಾ ಕವಚವು ನಿಮಗೆ ಬಹಳ ಉಪಯುಕ್ತವಾಗಲಿದೆ.
ಇಂದಿನಿಂದ ಪ್ರಾರಂಭವಾಗುವ ಈ ಅಭಿಯಾನವು, ವಿಜಯ ಸಾಧಿಸುವ ಸಂಕಲ್ಪದೊಂದಿಗೆ ವಿಜಯದಶಮಿಯಾದ ಅಕ್ಟೋಬರ್ 2 ರವರೆಗೆ, ಎರಡು ವಾರಗಳ ಕಾಲ ನಡೆಯಲಿದೆ. ದೇಶದಾದ್ಯಂತ ಇರುವ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ - ನೀವು ಯಾವಾಗಲೂ ನಿಮ್ಮ ಕುಟುಂಬದ ಬಗ್ಗೆ ಚಿಂತಿಸುತ್ತೀರಿ. ನಿಮ್ಮ ಆರೋಗ್ಯಕ್ಕಾಗಿಯೂ ಸ್ವಲ್ಪ ಸಮಯ ಮೀಸಲಿಡಿ. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರಗಳಿಗೆ ಭೇಟಿ ನೀಡಿ; ಲಕ್ಷಾಂತರ ಶಿಬಿರಗಳನ್ನು ಸ್ಥಾಪಿಸಲಾಗುತ್ತಿದೆ. ಇಂದೇ, ಕೆಲವು ಶಿಬಿರಗಳಲ್ಲಿ ಜನರು ಈಗಾಗಲೇ ತಮ್ಮ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ನಿಮ್ಮ ಪ್ರದೇಶದ ಇತರ ಮಹಿಳೆಯರೊಂದಿಗೆ ಈ ಮಾಹಿತಿಯನ್ನು ಖಂಡಿತವಾಗಿ ಹಂಚಿಕೊಳ್ಳಿ. ಮತ್ತು ಪ್ರತಿಯೊಬ್ಬ ತಾಯಿ-ಸಹೋದರಿಗೆ, ‘ನಮ್ಮ ಮೋದಿ ಜೀ ಧಾರಾಗೆ ಬಂದಿದ್ದರು, ನಮ್ಮ ಮಗ ಧಾರಾಗೆ ಬಂದಿದ್ದ, ನಮ್ಮ ಸಹೋದರ ಧಾರಾಗೆ ಬಂದಿದ್ದ, ಮತ್ತು ಬಂದು ನಮ್ಮೆಲ್ಲರನ್ನೂ ಪರೀಕ್ಷೆ ಮಾಡಿಸಿಕೊಳ್ಳಲು ಕೇಳಿಕೊಂಡಿದ್ದಾನೆ’ ಎಂದು ಹೇಳಿ. ದಯವಿಟ್ಟು ಎಲ್ಲರಿಗೂ ತಿಳಿಸಿ. ಯಾವುದೇ ತಾಯಿ ಹಿಂದುಳಿಯಬಾರದು, ಯಾವುದೇ ಮಗಳು ಹಿಂದುಳಿಯಬಾರದು ಎಂದು ನಾವು ಪ್ರತಿಜ್ಞೆ ಮಾಡಬೇಕು.
ಸ್ನೇಹಿತರೇ,
ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ ನಮ್ಮ ಆದ್ಯತೆಯಾಗಿದೆ. ನಮ್ಮ ಸರ್ಕಾರವು ಗರ್ಭಿಣಿಯರು ಮತ್ತು ಹೆಣ್ಣುಮಕ್ಕಳಿಗೆ ಸರಿಯಾದ ಪೋಷಣೆ ಸಿಗುವುದನ್ನು ಖಚಿತಪಡಿಸಲು ಮಿಷನ್ ಮೋಡ್ ನಲ್ಲಿ ಕೆಲಸ ಮಾಡುತ್ತಿದೆ. ಇಂದು ನಾವು ಎಂಟನೇ 'ರಾಷ್ಟ್ರೀಯ ಪೋಷಣಾ ಮಾಸಾಚರಣೆ'ಯನ್ನು ಪ್ರಾರಂಭಿಸುತ್ತಿದ್ದೇವೆ. ವಿಕಾಸಶೀಲ ಭಾರತದಲ್ಲಿ, ನಾವು ತಾಯಂದಿರ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಾಗಿದೆ. ಇದೇ ಉದ್ದೇಶಕ್ಕಾಗಿ, ನಾವು 2017 ರಲ್ಲಿ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ಯನ್ನು ಪ್ರಾರಂಭಿಸಿದೆವು. ಈ ಯೋಜನೆಯಡಿಯಲ್ಲಿ, ಮೊದಲ ಮಗುವಿನ ಜನನಕ್ಕೆ ಐದು ಸಾವಿರ ರೂಪಾಯಿ ಮತ್ತು ಎರಡನೇ ಹೆಣ್ಣು ಮಗುವಿನ ಜನನಕ್ಕೆ ಆರು ಸಾವಿರ ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲಿಯವರೆಗೆ, ನಾಲ್ಕೂವರೆ ಕೋಟಿ ಗರ್ಭಿಣಿ ತಾಯಂದಿರು ‘ಮಾತೃ ವಂದನಾ ಯೋಜನೆ’ಯ ಪ್ರಯೋಜನ ಪಡೆದಿದ್ದಾರೆ. ಮತ್ತು ಇಲ್ಲಿಯವರೆಗೆ, 19 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ. ಕೆಲವರಿಗೆ ಈ ಅಂಕಿ-ಅಂಶದ ಅರ್ಥವೇ ಆಗದಿರಬಹುದು. 19 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಹಣ ನನ್ನ ತಾಯಂದಿರು ಮತ್ತು ಸಹೋದರಿಯರ ಬ್ಯಾಂಕ್ ಖಾತೆಗಳನ್ನು ತಲುಪಿದೆ. ನಾನಿಲ್ಲಿ ಕ್ಲಿಕ್ ಮಾಡಿದಂತೆಯೇ, ಇಂದೂ ಕೂಡ ಒಂದೇ ಒಂದು ಕ್ಲಿಕ್ನಲ್ಲಿ 15 ಲಕ್ಷಕ್ಕೂ ಹೆಚ್ಚು ಗರ್ಭಿಣಿ ತಾಯಂದಿರಿಗೆ ಸಹಾಯವನ್ನು ಕಳುಹಿಸಲಾಗಿದೆ. ಈ ಧಾರಾದ ಭೂಮಿಯಿಂದಲೇ, ಇಂದು 450 ಕೋಟಿ ರೂಪಾಯಿಗೂ ಹೆಚ್ಚು ಹಣ ಅವರ ಖಾತೆಗಳಿಗೆ ಜಮಾ ಆಗಿದೆ.
ಸ್ನೇಹಿತರೇ,
ಇಂದು ನಾನು ಮಧ್ಯಪ್ರದೇಶದ ಈ ನೆಲದಿಂದಲೇ ಮತ್ತೊಂದು ಅಭಿಯಾನದ ಬಗ್ಗೆ ಪ್ರಸ್ತಾಪಿಸಲು ಬಯಸುತ್ತೇನೆ. ನಿಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಬುಡಕಟ್ಟು ಪ್ರದೇಶಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಒಂದು ದೊಡ್ಡ ಸಂಕಷ್ಟವಾಗಿದೆ. ನಮ್ಮ ಆದಿವಾಸಿ ಸಹೋದರ ಸಹೋದರಿಯರನ್ನು ಈ ರೋಗದಿಂದ ರಕ್ಷಿಸಲು ನಮ್ಮ ಸರ್ಕಾರವು ಒಂದು ರಾಷ್ಟ್ರೀಯ ಮಿಷನ್ ಅನ್ನು ನಡೆಸುತ್ತಿದೆ. ನಾವು 2023 ರಲ್ಲಿ ಮಧ್ಯಪ್ರದೇಶದ ಶಹಡೋಲ್ ನಿಂದ ಈ ಮಿಷನ್ ಅನ್ನು ಪ್ರಾರಂಭಿಸಿದೆವು. ಶಹಡೋಲ್ ನಲ್ಲೇ ನಾವು ಮೊದಲ ಸಿಕಲ್ ಸೆಲ್ ಸ್ಕ್ರೀನಿಂಗ್ ಕಾರ್ಡ್ ಅನ್ನು ವಿತರಿಸಿದ್ದು. ಮತ್ತು ಇಂದು, ಮಧ್ಯಪ್ರದೇಶದಲ್ಲಿ 1 ಕೋಟಿ ಸಿಕಲ್ ಸೆಲ್ ಸ್ಕ್ರೀನಿಂಗ್ ಕಾರ್ಡನ್ನು ವಿತರಿಸಲಾಗಿದೆ. ಈಗಷ್ಟೇ ವೇದಿಕೆಗೆ ಬಂದ ಮಗಳಿಗೆ ನೀಡಿದ ಕಾರ್ಡ್ 1 ಕೋಟಿ ಕಾರ್ಡ್ ಆಗಿತ್ತು, ಮತ್ತು ನಾನು ಮಾತನಾಡುತ್ತಿರುವುದು ಕೇವಲ ಮಧ್ಯಪ್ರದೇಶದ ಬಗ್ಗೆ. ಇಲ್ಲಿಯವರೆಗೆ, ಈ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ 5 ಕೋಟಿಗೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ. ಸಿಕಲ್ ಸೆಲ್ ತಪಾಸಣೆಯು ನಮ್ಮ ಆದಿವಾಸಿ ಸಮುದಾಯಗಳಲ್ಲಿ ಲಕ್ಷಾಂತರ ಜನರ ಜೀವವನ್ನು ಉಳಿಸಿದೆ, ಮತ್ತು ಈ ವಿಷಯ ಬಹುಶಃ ಅನೇಕರಿಗೆ ತಿಳಿದಿಲ್ಲದಿರಬಹುದು.
ಸ್ನೇಹಿತರೇ,
ನಾವು ಮಾಡುತ್ತಿರುವ ಈ ಕೆಲಸವು ಮುಂದಿನ ಪೀಳಿಗೆಗಳಿಗೆ ಒಂದು ದೊಡ್ಡ ವರದಾನವಾಗಲಿದೆ. ಇನ್ನೂ ಹುಟ್ಟದವರಿಗಾಗಿ ನಾವು ಇಂದು ಕೆಲಸ ಮಾಡುತ್ತಿದ್ದೇವೆ, ಏಕೆಂದರೆ ಇಂದಿನ ಪೀಳಿಗೆ ಆರೋಗ್ಯವಂತರಾದರೆ, ಅದು ಭವಿಷ್ಯದಲ್ಲಿ ಅವರ ಮಕ್ಕಳ ಆರೋಗ್ಯಕ್ಕೆ ಖಾತರಿ ನೀಡುತ್ತದೆ. ನಮ್ಮ ಆದಿವಾಸಿ ತಾಯಂದಿರು ಮತ್ತು ಸಹೋದರಿಯರಿಗೆ ನಾನು ವಿಶೇಷವಾಗಿ ಮನವಿ ಮಾಡುವುದೇನೆಂದರೆ, ದಯವಿಟ್ಟು ಸಿಕಲ್ ಸೆಲ್ ಅನೀಮಿಯಾ ಪರೀಕ್ಷೆ ಮಾಡಿಸಿಕೊಳ್ಳಿ.
ಸ್ನೇಹಿತರೇ,
ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಕಷ್ಟಗಳನ್ನು ಕಡಿಮೆ ಮಾಡುವುದೇ ನನ್ನ ನಿರಂತರ ಪ್ರಯತ್ನವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಿರ್ಮಿಸಲಾದ ಲಕ್ಷಾಂತರ ಶೌಚಾಲಯಗಳು, ಉಜ್ವಲ ಯೋಜನೆಯ ಮೂಲಕ ನೀಡಲಾದ ಲಕ್ಷಾಂತರ ಉಚಿತ ಗ್ಯಾಸ್ ಸಂಪರ್ಕಗಳು, ಪ್ರತಿ ಮನೆಗೆ ನೀರು ಒದಗಿಸುವ ಜಲ ಜೀವನ್ ಮಿಷನ್, ಮತ್ತು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಯೋಜನೆ, ಇವೆಲ್ಲವೂ ತಾಯಂದಿರು ಮತ್ತು ಸಹೋದರಿಯರ ಜೀವನದ ಕಷ್ಟಗಳನ್ನು ಕಡಿಮೆ ಮಾಡಿ ಅವರ ಆರೋಗ್ಯವನ್ನು ಸುಧಾರಿಸಿವೆ. ಮತ್ತು ಇಲ್ಲಿ ಅನೇಕ ಸಹೋದರರಿದ್ದೀರಿ, ನಿಮ್ಮ ಕುಟುಂಬಗಳಲ್ಲಿಯೂ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳಿದ್ದಾರೆ. ನಾನು ಸಹೋದರರನ್ನೂ ಕೇಳಿಕೊಳ್ಳುವುದೇನೆಂದರೆ, ನೀವು ನನಗೆ ಬೆಂಬಲ ನೀಡಿ, ನಿಮ್ಮ ಮನೆಯ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ ತಪಾಸಣೆ ನಡೆಯುವಂತೆ ನೋಡಿಕೊಳ್ಳಿ.
ಸ್ನೇಹಿತರೇ,
ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅಂಕಿ-ಅಂಶಗಳನ್ನು ಜಗತ್ತಿನ ಜನರು ಕೇಳಿದಾಗ, ಅಂತಹ ದೊಡ್ಡ ಸಂಖ್ಯೆಯನ್ನು ಕಂಡು ಅವರು ದಂಗಾಗಿ ಹೋಗುತ್ತಾರೆ. ಸ್ನೇಹಿತರೇ, ಕರೋನಾದ ಕಷ್ಟದ ದಿನಗಳಲ್ಲಿ ಈ ಉಚಿತ ಪಡಿತರ ಯೋಜನೆಯು ಬಡ ತಾಯಿಯ ಮನೆಯ ಒಲೆ ಆರಲು ಬಿಡಲಿಲ್ಲ. ಈ ಯೋಜನೆಯಡಿಯಲ್ಲಿ ಇಂದಿಗೂ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಪಿಎಂ ಆವಾಸ್ ಯೋಜನೆಯಡಿಯಲ್ಲಿ ನೀಡಲಾದ ಕೋಟ್ಯಂತರ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿಯೇ ಇವೆ.
ಸ್ನೇಹಿತರೇ,
ನಮ್ಮ ಸರ್ಕಾರವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಹೆಚ್ಚು ಒತ್ತು ನೀಡುತ್ತದೆ. ನಮ್ಮ ಕೋಟ್ಯಂತರ ಸಹೋದರಿಯರು ಮುದ್ರಾ ಯೋಜನೆಯ ಮೂಲಕ ಸಾಲ ಪಡೆದು ಹೊಸ ವ್ಯವಹಾರಗಳನ್ನು ಪ್ರಾರಂಭಿಸುತ್ತಿದ್ದಾರೆ ಮತ್ತು ಹೊಸ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ.
ಸ್ನೇಹಿತರೇ,
ನಮ್ಮ ಸರ್ಕಾರವು 3 ಕೋಟಿ ಗ್ರಾಮೀಣ ಸಹೋದರಿಯರನ್ನು, ಹಳ್ಳಿಗಳಲ್ಲಿ ವಾಸಿಸುವ ತಾಯಂದಿರು-ಸಹೋದರಿಯರನ್ನು, 3 ಕೋಟಿ ಸಹೋದರಿಯರನ್ನು 'ಲಕ್ಷಾಧಿಪತಿ ದೀದಿ'ಯರನ್ನಾಗಿ ಮಾಡುವ ಅಭಿಯಾನದಲ್ಲಿ ತೊಡಗಿದೆ. ಮತ್ತು ನಾನು ಬಹಳ ಹೆಮ್ಮೆಯಿಂದ ಹೇಳಬಲ್ಲೆ, ಈ ಅಭಿಯಾನದಲ್ಲಿ ದೊರೆತ ಯಶಸ್ಸಿನಿಂದಾಗಿ, ಅತಿ ಕಡಿಮೆ ಸಮಯದಲ್ಲಿ, ಸುಮಾರು ಎರಡು ಕೋಟಿ ಸಹೋದರಿಯರು ಈಗಾಗಲೇ 'ಲಕ್ಷಾಧಿಪತಿ ದೀದಿ'ಯರಾಗಿದ್ದಾರೆ. ನಾವು ಮಹಿಳೆಯರನ್ನು ‘ಬ್ಯಾಂಕ್ ಸಖಿ’ ಮತ್ತು ‘ಡ್ರೋನ್ ದೀದಿ’ಯರನ್ನಾಗಿ ಮಾಡುವ ಮೂಲಕ ಗ್ರಾಮೀಣ ಆರ್ಥಿಕತೆಯ ಕೇಂದ್ರಕ್ಕೆ ತರುತ್ತಿದ್ದೇವೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಹೊಸ ಕ್ರಾಂತಿಯನ್ನು ತರುತ್ತಿದ್ದಾರೆ.
ಸಹೋದರ-ಸಹೋದರಿಯರೇ,
ಕಳೆದ 11 ವರ್ಷಗಳಿಂದ, ಬಡವರ ಕಲ್ಯಾಣ, ಬಡವರ ಸೇವೆ, ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವುದೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ. ದೇಶದ ಬಡವರು ಬಡತನದಿಂದ ಹೊರಬಂದು ವೇಗವಾಗಿ ಮುನ್ನಡೆದಾಗ ಮಾತ್ರ ದೇಶ ಪ್ರಗತಿ ಸಾಧಿಸುತ್ತದೆ ಎಂಬುದು ನಮ್ಮ ನಂಬಿಕೆ. ಬಡವರ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ನಾವು ನೋಡಿದ್ದೇವೆ. ಒಬ್ಬ ಬಡವನಿಗೆ ಸ್ವಲ್ಪ ಬೆಂಬಲ, ಸ್ವಲ್ಪ ಸಹಾಯ ಸಿಕ್ಕರೆ ಸಾಕು, ಅವನು ತನ್ನ ಪರಿಶ್ರಮದಿಂದ ಸಮುದ್ರವನ್ನೇ ದಾಟುವ ಧೈರ್ಯವನ್ನು ಹೊಂದಿದ್ದಾನೆ. ಬಡವರ ಈ ಭಾವನೆಗಳನ್ನು ನಾನು ಸ್ವತಃ ಅನುಭವಿಸಿದ್ದೇನೆ. ಆದ್ದರಿಂದ, ಬಡವರ ಸಂಕಟವೇ ನನ್ನ ಸಂಕಟ. ಬಡವರ ಸೇವೆ ಮಾಡುವುದೇ ನನ್ನ ಜೀವನದ ಅತಿ ದೊಡ್ಡ ಧ್ಯೇಯ. ಆದ್ದರಿಂದ, ನಮ್ಮ ಸರ್ಕಾರವು ಬಡವರನ್ನೇ ಕೇಂದ್ರವಾಗಿಟ್ಟುಕೊಂಡು ನಿರಂತರವಾಗಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ.
ಸ್ನೇಹಿತರೇ,
ಈ ಕೆಲಸವನ್ನು ನಿರಂತರವಾಗಿ, ಸಮರ್ಪಣಾ ಭಾವದಿಂದ ಮತ್ತು ಶುದ್ಧ ಮನಸ್ಸಿನಿಂದ ಮಾಡಿದ್ದರಿಂದ, ಇಂದು ನಮ್ಮ ನೀತಿಗಳ ಫಲಿತಾಂಶಗಳು ಜಗತ್ತಿಗೆ ಕಾಣಿಸುತ್ತಿವೆ. ಕಳೆದ 11 ವರ್ಷಗಳ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದಾಗಿ, ಇಂದು ದೇಶದ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂಬುದು ಇಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ಹೆಮ್ಮೆ ತರುವ ವಿಷಯ. ನಮ್ಮ ಇಡೀ ಸಮಾಜವು ಹೊಸ ಆತ್ಮವಿಶ್ವಾಸವನ್ನು ಪಡೆದಿದೆ.
ಸ್ನೇಹಿತರೇ,
ನಮ್ಮ ಸರ್ಕಾರದ ಈ ಎಲ್ಲಾ ಪ್ರಯತ್ನಗಳು ಕೇವಲ ಯೋಜನೆಗಳಲ್ಲ, ಅವು ಬಡ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಜೀವನವನ್ನು ಪರಿವರ್ತಿಸುವ 'ಮೋದಿಯ ಗ್ಯಾರಂಟಿ'. ಬಡವರ ಮುಖದಲ್ಲಿ ನಗು ತರುವುದು, ತಾಯಂದಿರು ಮತ್ತು ಸಹೋದರಿಯರ ಗೌರವವನ್ನು ಕಾಪಾಡುವುದು, ಇದೇ ನನ್ನ ಪೂಜೆ, ಇದೇ ನನ್ನ ವ್ರತ.
ಸ್ನೇಹಿತರೇ,
ಮಧ್ಯಪ್ರದೇಶವು ಮಹೇಶ್ವರಿ ಜವಳಿಯ ಸುದೀರ್ಘ ಪರಂಪರೆಯನ್ನು ಹೊಂದಿದೆ. ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರು ಮಹೇಶ್ವರಿ ಸೀರೆಗೆ ಹೊಸ ಆಯಾಮವನ್ನು ನೀಡಿದರು. ಇತ್ತೀಚೆಗೆ, ನಾವು ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ಜಯಂತಿಯನ್ನು ಆಚರಿಸಿದ್ದೇವೆ. ಈಗ ಧಾರಾದಲ್ಲಿನ ಪಿಎಂ ಮಿತ್ರ ಪಾರ್ಕ್ ಮೂಲಕ, ಒಂದು ರೀತಿಯಲ್ಲಿ ನಾವು ದೇವಿ ಅಹಲ್ಯಾಬಾಯಿ ಅವರ ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ. ಪಿಎಂ ಮಿತ್ರ ಪಾರ್ಕ್, ಹತ್ತಿ ಮತ್ತು ರೇಷ್ಮೆಯಂತಹ ನೇಯ್ಗೆಯ ಕಚ್ಚಾ ವಸ್ತುಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಗುಣಮಟ್ಟದ ಪರೀಕ್ಷೆಗಳು ಸುಲಭವಾಗುತ್ತವೆ. ಮಾರುಕಟ್ಟೆ ಪ್ರವೇಶ ಹೆಚ್ಚಾಗುತ್ತದೆ. ಇಲ್ಲೇ ನೂಲುವುದು ನಡೆಯುತ್ತದೆ, ಇಲ್ಲೇ ವಿನ್ಯಾಸ ಮಾಡಲಾಗುತ್ತದೆ, ಇಲ್ಲೇ ಸಂಸ್ಕರಣೆ ನಡೆಯುತ್ತದೆ, ಮತ್ತು ಇಲ್ಲಿಂದಲೇ ರಫ್ತು ಕೂಡ ಆಗುತ್ತದೆ. ಇದರರ್ಥ, ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಸಾಮರ್ಥ್ಯವೂ ಮಿಂಚಲಿದೆ. ಇದರರ್ಥ, ಈಗ ಜವಳಿ ಉದ್ಯಮದ ಸಂಪೂರ್ಣ ಮೌಲ್ಯ ಸರಪಳಿ (value chain) ಒಂದೇ ಸ್ಥಳದಲ್ಲಿ ಲಭ್ಯವಿರುತ್ತದೆ. ಜವಳಿ ಉದ್ಯಮಕ್ಕಾಗಿ ನಮ್ಮ ಸರ್ಕಾರವು ಕೆಲಸ ಮಾಡುತ್ತಿರುವ '5F' ದೃಷ್ಟಿಕೋನ, '5F' ಎಂದರೆ, ಮೊದಲನೆಯದು ಫಾರ್ಮ್ (ಕೃಷಿ), ಎರಡನೆಯದು ಫೈಬರ್ (ನೂಲು), ಮೂರನೆಯದು ಫ್ಯಾಕ್ಟರಿ (ಕಾರ್ಖಾನೆ), ನಾಲ್ಕನೆಯದು ಫ್ಯಾಷನ್, ಮತ್ತು ಐದನೆಯದು ಫಾರಿನ್ (ವಿದೇಶ). ಹಾಗಾಗಿ ಫಾರ್ಮ್ನಿಂದ ಫೈಬರ್ಗೆ, ಫೈಬರ್ನಿಂದ ಫ್ಯಾಕ್ಟರಿಗೆ, ಫ್ಯಾಕ್ಟರಿಯಿಂದ ಫ್ಯಾಷನ್ಗೆ, ಮತ್ತು ಫ್ಯಾಷನ್ನಿಂದ ಫಾರಿನ್ಗೆ ಸಾಗುವ ಪಯಣವು ವೇಗವಾಗಿ ಮತ್ತು ಸುಲಭವಾಗಿ ಪೂರ್ಣಗೊಳ್ಳುತ್ತದೆ.
ಸ್ನೇಹಿತರೇ,
ನನಗೆ ತಿಳಿಸಿರುವ ಪ್ರಕಾರ, ಧಾರಾದ ಈ ಪಿಎಂ ಮಿತ್ರ ಪಾರ್ಕ್ ನಲ್ಲಿ ಸುಮಾರು 1,300 ಎಕರೆ ಭೂಮಿಯನ್ನು 80ಕ್ಕೂ ಹೆಚ್ಚು ಘಟಕಗಳಿಗೆ ಹಂಚಿಕೆ ಮಾಡಲಾಗಿದೆ. ಇದರರ್ಥ, ಅಗತ್ಯ ಮೂಲಸೌಕರ್ಯಗಳ ಕಾಮಗಾರಿ ಮತ್ತು ಕಾರ್ಖಾನೆ ನಿರ್ಮಾಣ ಎರಡೂ ಏಕಕಾಲದಲ್ಲಿ ನಡೆಯಲಿವೆ. ಈ ಪಾರ್ಕ್ ನಲ್ಲಿ 3 ಲಕ್ಷ ಹೊಸ ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗಲಿವೆ. ಮತ್ತು ಇದು ಲಾಜಿಸ್ಟಿಕ್ಸ್ ವೆಚ್ಚದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪಿಎಂ ಮಿತ್ರ ಪಾರ್ಕ್ ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ, ತಯಾರಿಕಾ ವೆಚ್ಚವನ್ನು ಇಳಿಸುತ್ತದೆ, ಮತ್ತು ನಮ್ಮ ಉತ್ಪನ್ನಗಳನ್ನು ಜಾಗತಿಕವಾಗಿ ಅಗ್ಗವಾಗಿಸಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ. ಆದ್ದರಿಂದ, ಪಿಎಂ ಮಿತ್ರ ಪಾರ್ಕ್ಗಾಗಿ ನಾನು ಮಧ್ಯಪ್ರದೇಶದ ಜನರನ್ನು, ವಿಶೇಷವಾಗಿ ನನ್ನ ರೈತ ಸಹೋದರ-ಸಹೋದರಿಯರನ್ನು ಮತ್ತು ಯುವಕ-ಯುವತಿಯರನ್ನು ಅಭಿನಂದಿಸುತ್ತೇನೆ. ನಮ್ಮ ಸರ್ಕಾರವು ದೇಶದಲ್ಲಿ ಇದೇ ರೀತಿಯ ಇನ್ನೂ 6 ಪಿಎಂ ಮಿತ್ರ ಪಾರ್ಕ್ ಗಳನ್ನು ನಿರ್ಮಿಸಲಿದೆ.
ಸ್ನೇಹಿತರೇ,
ಇಂದು ದೇಶದಾದ್ಯಂತ ವಿಶ್ವಕರ್ಮ ಪೂಜೆಯನ್ನು ಆಚರಿಸಲಾಗುತ್ತಿದೆ. ಇದು ‘ಪಿಎಂ ವಿಶ್ವಕರ್ಮ ಯೋಜನೆ’ಯ ಯಶಸ್ಸನ್ನು ಸಂಭ್ರಮಿಸುವ ಸಮಯವೂ ಆಗಿದೆ. ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಗಾರೆ ಕೆಲಸದವರು, ತಾಮ್ರ ಮತ್ತು ಕಂಚಿನ ಕೆಲಸ ಮಾಡುವವರು ಹಾಗೂ ತಮ್ಮ ಕೈಚಳಕದಿಂದ ಅದ್ಭುತಗಳನ್ನು ಸೃಷ್ಟಿಸುವ ದೇಶದಾದ್ಯಂತ ಇರುವ ನನ್ನ ಎಲ್ಲಾ ವಿಶ್ವಕರ್ಮ ಸಹೋದರ-ಸಹೋದರಿಯರಿಗೆ ನಾನು ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ‘ಮೇಕ್ ಇన్ ಇಂಡಿಯಾ’ದ ಅತಿ ದೊಡ್ಡ ಶಕ್ತಿ ನೀವೇ. ಹಳ್ಳಿಯಾಗಿರಲಿ ಅಥವಾ ನಗರವಾಗಿರಲಿ, ನೀವು ತಯಾರಿಸುವ ಉತ್ಪನ್ನಗಳಿಂದ ಮತ್ತು ನಿಮ್ಮ ಕಲೆಗಳಿಂದಲೇ ದೈನಂದಿನ ಅಗತ್ಯಗಳು ಪೂರೈಸಲ್ಪಡುತ್ತವೆ. ಅತಿ ಕಡಿಮೆ ಸಮಯದಲ್ಲಿ ‘ಪಿಎಂ ವಿಶ್ವಕರ್ಮ ಯೋಜನೆ’ಯು 30 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಸಹಾಯ ಮಾಡಿದೆ ಎಂಬುದು ನನಗೆ ತೃಪ್ತಿ ತಂದಿದೆ. ಈ ಯೋಜನೆಯ ಮೂಲಕ ಅವರು ಕೌಶಲ್ಯ ತರಬೇತಿಯನ್ನು ಪಡೆದರು ಮತ್ತು ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಆಧುನಿಕ ಉಪಕರಣಗಳೊಂದಿಗೆ ಸಂಪರ್ಕ ಹೊಂದಿದರು. 6 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಸ್ನೇಹಿತರಿಗೆ ಹೊಸ ಉಪಕರಣಗಳನ್ನು ನೀಡಲಾಯಿತು. ಇಲ್ಲಿಯವರೆಗೆ, 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಸಾಲ ವಿಶ್ವಕರ್ಮ ಸಹೋದರ-ಸಹೋದರಿಯರನ್ನು ತಲುಪಿದೆ.
ಸ್ನೇಹಿತರೇ,
ದಶಕಗಳಿಂದ ಕಡೆಗಣಿಸಲ್ಪಟ್ಟಿದ್ದ ಸಮಾಜದ ಒಂದು ವರ್ಗಕ್ಕೆ ಪಿಎಂ ವಿಶ್ವಕರ್ಮ ಯೋಜನೆಯು ಪ್ರಯೋಜನವನ್ನು ನೀಡಿದೆ. ನಮ್ಮ ಬಡ ವಿಶ್ವಕರ್ಮ ಸಹೋದರ ಸಹೋದರಿಯರಲ್ಲಿ ಕೌಶಲ್ಯವಿತ್ತು, ಆದರೆ ಅವರ ಕೌಶಲ್ಯವನ್ನು ಉತ್ತೇಜಿಸಲು, ಅವರ ಜೀವನವನ್ನು ಸುಧಾರಿಸಲು ಹಿಂದಿನ ಸರ್ಕಾರಗಳ ಬಳಿ ಯಾವುದೇ ಯೋಜನೆಯಿರಲಿಲ್ಲ. ಅವರು ತಮ್ಮ ಪ್ರಗತಿಗಾಗಿ ತಮ್ಮ ಪ್ರತಿಭೆಯನ್ನು ಬಳಸಿಕೊಳ್ಳಲು ನಾವು ದಾರಿಗಳನ್ನು ತೆರೆದೆವು. ಅದಕ್ಕಾಗಿಯೇ ನಾನು ಹೇಳುವುದು – ಯಾರು ಹಿಂದುಳಿದಿದ್ದಾರೋ, ಅವರೇ ನಮ್ಮ ಆದ್ಯತೆ.
ಸ್ನೇಹಿತರೇ,
ನಮ್ಮ ಧಾರಾ, ಪೂಜ್ಯ ಕುಶಾಭಾವು ಠಾಕ್ರೆ ಅವರ ಜನ್ಮಸ್ಥಳವೂ ಆಗಿದೆ. ಅವರು ‘ರಾಷ್ಟ್ರವೇ ಮೊದಲು’ ಎಂಬ ಭಾವನೆಯೊಂದಿಗೆ ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಸಮರ್ಪಿಸಿದರು. ಇಂದು ನಾನು ಅವರಿಗೆ ನನ್ನ ವಿನಮ್ರ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಈ ‘ರಾಷ್ಟ್ರವೇ ಮೊದಲು’ ಎಂಬ ಭಾವನೆಯೇ ಸ್ಫೂರ್ತಿಯಾಗಿದೆ.
ಸ್ನೇಹಿತರೇ,
ಇದು ಹಬ್ಬಗಳ ಸಮಯ, ಮತ್ತು ಈ ಸಮಯದಲ್ಲಿ ನೀವು ‘ಸ್ವದೇಶಿ’ ಮಂತ್ರವನ್ನು ನಿರಂತರವಾಗಿ ಜಪಿಸಬೇಕು, ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮೆಲ್ಲರಲ್ಲಿ ನನ್ನ ವಿನಮ್ರ ವಿನಂತಿ, 140 ಕೋಟಿ ದೇಶವಾಸಿಗಳಲ್ಲಿ ನನ್ನ ವಿನಂತಿ, ನೀವು ಏನೇ ಖರೀದಿಸಿದರೂ, ಅದು ದೇಶದಲ್ಲಿಯೇ ತಯಾರಿಸಿದ್ದಾಗಿರಬೇಕು. ನೀವು ಏನೇ ಖರೀದಿಸಿದರೂ, ಅದರಲ್ಲಿ ಯಾವುದಾದರೊಬ್ಬ ಭಾರತೀಯನ ಬೆವರು ಇರಬೇಕು. ನೀವು ಏನೇ ಖರೀದಿಸಿದರೂ, ಅದರಲ್ಲಿ ಮಣ್ಣಿನ ವಾಸನೆ ಇರಬೇಕು, ನನ್ನ ಭಾರತದ ಮಣ್ಣಿನ ಸುವಾಸನೆ ಇರಬೇಕು.ಮತ್ತು ಇಂದು ನಾನು ನನ್ನ ವ್ಯಾಪಾರಿ ಸಹೋದರರಲ್ಲಿಯೂ ವಿನಂತಿಸಿಕೊಳ್ಳಲು ಬಯಸುತ್ತೇನೆ, ನೀವು ಕೂಡ ದೇಶಕ್ಕಾಗಿ ನನಗೆ ಸಹಾಯ ಮಾಡಿ, ದೇಶಕ್ಕಾಗಿ ನನಗೆ ಬೆಂಬಲ ನೀಡಿ, ಮತ್ತು ನನಗೆ ದೇಶಕ್ಕಾಗಿ ನಿಮ್ಮ ಸಹಾಯ ಬೇಕು, ಏಕೆಂದರೆ ನಾನು 2047ರ ವೇಳೆಗೆ ಭಾರತವನ್ನು ವಿಕಸಿತವನ್ನಾಗಿ ಮಾಡಬೇಕಿದೆ. ಮತ್ತು ಅದಕ್ಕೆ ದಾರಿ ಇರುವುದು ಆತ್ಮನಿರ್ಭರ ಭಾರತದ ಮೂಲಕ. ಆದ್ದರಿಂದ, ನನ್ನ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿ ಸಹೋದರ-ಸಹೋದರಿಯರೇ, ನೀವು ಮಾರಾಟ ಮಾಡುವ ಪ್ರತಿಯೊಂದು ವಸ್ತುವೂ ನಮ್ಮ ದೇಶದಲ್ಲೇ ತಯಾರಿಸಿದ್ದಾಗಿರಬೇಕು. ಮಹಾತ್ಮ ಗಾಂಧಿಯವರು ಸ್ವದೇಶಿಯನ್ನು ಸ್ವಾತಂತ್ರ್ಯದ ಮಾಧ್ಯಮವನ್ನಾಗಿ ಮಾಡಿದ್ದರು. ಈಗ ನಾವು ಸ್ವದೇಶಿಯನ್ನು ವಿಕಸಿತ ಭಾರತದ ಅಡಿಪಾಯವನ್ನಾಗಿ ಮಾಡಬೇಕಿದೆ.ಮತ್ತು ಇದು ಹೇಗೆ ಸಾಧ್ಯವಾಗುತ್ತದೆ? ನಮ್ಮ ದೇಶದಲ್ಲಿ ತಯಾರಾದ ಪ್ರತಿಯೊಂದು ವಸ್ತುವಿನ ಬಗ್ಗೆ ನಾವು ಹೆಮ್ಮೆಪಟ್ಟಾಗ ಇದು ಸಾಧ್ಯವಾಗುತ್ತದೆ. ನಾವು ಖರೀದಿಸುವ ಅತಿ ಸಣ್ಣ ವಸ್ತುವಿನಿಂದ ಹಿಡಿದು - ಮಕ್ಕಳ ಆಟಿಕೆಗಳು, ದೀಪಾವಳಿಯ ಮೂರ್ತಿಗಳು, ಮನೆ ಅಲಂಕರಿಸುವ ವಸ್ತುಗಳು, ಅಥವಾ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್ನಂತಹ ಯಾವುದೇ ದೊಡ್ಡ ವಸ್ತುವೇ ಆಗಿರಲಿ - ಅದು ನಮ್ಮ ದೇಶದಲ್ಲಿ ತಯಾರಾಗಿದೆಯೇ ಎಂದು ನಾವು ಮೊದಲು ಪರಿಶೀಲಿಸಬೇಕು. ಅದರಲ್ಲಿ ನನ್ನ ದೇಶವಾಸಿಗಳ ಬೆವರಿನ ಸುವಾಸನೆ ಇದೆಯೇ? ಏಕೆಂದರೆ, ನಾವು ಸ್ವದೇಶಿ ವಸ್ತುಗಳನ್ನು ಖರೀದಿಸಿದಾಗ, ನಮ್ಮ ಹಣ ದೇಶದಲ್ಲೇ ಉಳಿಯುತ್ತದೆ. ನಮ್ಮ ಹಣ ವಿದೇಶಕ್ಕೆ ಹೋಗುವುದರಿಂದ ಉಳಿತಾಯವಾಗುತ್ತದೆ. ಅದೇ ಹಣ ಮತ್ತೆ ದೇಶದ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಆ ಹಣದಿಂದ ರಸ್ತೆಗಳು ನಿರ್ಮಾಣವಾಗುತ್ತವೆ, ಹಳ್ಳಿಗಳಲ್ಲಿ ಶಾಲೆಗಳು ನಿರ್ಮಾಣವಾಗುತ್ತವೆ, ಬಡ ವಿಧವೆ ತಾಯಂದಿರಿಗೆ ಸಹಾಯ ಸಿಗುತ್ತದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣವಾಗುತ್ತವೆ, ಅದೇ ಹಣ ಬಡವರ ಕಲ್ಯಾಣ ಯೋಜನೆಗಳಿಗೆ ಬಳಕೆಯಾಗಿ ನಿಮ್ಮನ್ನು ತಲುಪುತ್ತದೆ. ನನ್ನ ಮಧ್ಯಮ ವರ್ಗದ ಸಹೋದರ ಸಹೋದರಿಯರ ಕನಸುಗಳು, ನನ್ನ ಮಧ್ಯಮ ವರ್ಗದ ಯುವಕರ ಕನಸುಗಳು, ಆ ಕನಸುಗಳನ್ನು ನನಸಾಗಿಸಲು ಬಹಳಷ್ಟು ಹಣ ಬೇಕು. ಮತ್ತು ಈ ಸಣ್ಣ ಸಣ್ಣ ಕೆಲಸಗಳನ್ನು ಮಾಡುವ ಮೂಲಕ ನಾವು ಇದನ್ನು ಸಾಧಿಸಬಹುದು. ನಮಗೆ ಬೇಕಾದ ವಸ್ತುಗಳು ದೇಶದಲ್ಲೇ ತಯಾರಾದಾಗ, ಅದರಿಂದ ಸೃಷ್ಟಿಯಾಗುವ ಉದ್ಯೋಗವೂ ನಮ್ಮ ದೇಶವಾಸಿಗಳಿಗೇ ಸಿಗುತ್ತದೆ.
ಆದ್ದರಿಂದ, ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22 ರಿಂದ ಕಡಿಮೆ ಜಿ ಎಸ್ ಟಿ ದರಗಳು ಜಾರಿಗೆ ಬರಲಿರುವುದರಿಂದ, ಕೇವಲ ದೇಶೀಯ ಉತ್ಪನ್ನಗಳನ್ನೇ ಖರೀದಿಸುವ ಮೂಲಕ ನಾವು ಅದರ ಲಾಭವನ್ನು ಪಡೆದುಕೊಳ್ಳಬೇಕು. ನಾವು ಒಂದು ಮಂತ್ರವನ್ನು ನೆನಪಿನಲ್ಲಿಡಬೇಕು, ಮತ್ತು ಅದು ಪ್ರತಿಯೊಂದು ಅಂಗಡಿಯಲ್ಲೂ ಬರೆದಿರಬೇಕೆಂದು ನಾನು ಬಯಸುತ್ತೇನೆ, ರಾಜ್ಯ ಸರ್ಕಾರವೂ ಈ ಬಗ್ಗೆ ಒಂದು ಅಭಿಯಾನವನ್ನು ನಡೆಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಪ್ರತಿಯೊಂದು ಅಂಗಡಿಯಲ್ಲೂ ಒಂದು ಫಲಕವಿರಬೇಕು, ಹೆಮ್ಮೆಯಿಂದ ಹೇಳಿ – ಇದು ಸ್ವದೇಶಿ!
ನೀವೆಲ್ಲರೂ ನನ್ನೊಂದಿಗೆ ಹೇಳುತ್ತೀರಾ? ನೀವೆಲ್ಲರೂ ನನ್ನೊಂದಿಗೆ ಹೇಳುತ್ತೀರಾ? ನಾನು ‘ಹೆಮ್ಮೆಯಿಂದ ಹೇಳಿ’ ಎನ್ನುತ್ತೇನೆ, ನೀವು ‘ಯೇ ಸ್ವದೇಶಿ ಹೈ’ ಎಂದು ಹೇಳಬೇಕು. ಹೆಮ್ಮೆಯಿಂದ ಹೇಳಿ – ಯೇ ಸ್ವದೇಶಿ ಹೈ! ಹೆಮ್ಮೆಯಿಂದ ಹೇಳಿ – ಯೇ ಸ್ವದೇಶಿ ಹೈ! ಹೆಮ್ಮೆಯಿಂದ ಹೇಳಿ – ಯೇ ಸ್ವದೇಶಿ ಹೈ! ಹೆಮ್ಮೆಯಿಂದ ಹೇಳಿ – ಯೇ ಸ್ವದೇಶಿ ಹೈ! ಹೆಮ್ಮೆಯಿಂದ ಹೇಳಿ – ಯೇ ಸ್ವದೇಶಿ ಹೈ!
ಸ್ನೇಹಿತರೇ,
ಇದೇ ಭಾವನೆಯೊಂದಿಗೆ, ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಮತ್ತು ನನ್ನ ಮಾತನ್ನು ಮುಗಿಸುತ್ತೇನೆ. ಹೇಳಿ: ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ. ಧನ್ಯವಾದಗಳು.
ಸೂಚನೆ - ಇದು ಪ್ರಧಾನಮಂತ್ರಿ ಅವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿತ್ತು.
*****
(Release ID: 2168360)
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu