ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸ್ಸಾಂನ ದರ್ರಾಂಗ್‌ನಲ್ಲಿ ಸುಮಾರು 6,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶಂಕುಸ್ಥಾಪನೆ, ಉದ್ಘಾಟನೆ


ಭಾರತ ಈಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ; ಅಸ್ಸಾಂ ಕೂಡ ರಾಷ್ಟ್ರದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ

ಇಂದು ಇಡೀ ರಾಷ್ಟ್ರವು ಅಭಿವೃದ್ಧಿ ಹೊಂದಿದ ಭಾರತ ಕಟ್ಟಲು ಒಗ್ಗಟ್ಟಿನಿಂದ ಮುಂದುವರಿಯುತ್ತಿದೆ; ವಿಶೇಷವಾಗಿ ನಮ್ಮ ಯುವ ಸಮುದಾಯಕ್ಕೆ, ಅಭಿವೃದ್ಧಿ ಹೊಂದಿದ ಭಾರತವು ಒಂದು ಕನಸು ಮತ್ತು ಸಂಕಲ್ಪ ಎರಡೂ ಆಗಿದೆ. ಈ ಸಂಕಲ್ಪ ಈಡೇರಿಸಲು ಈಶಾನ್ಯ ಭಾರತವುವು ಮಹತ್ವದ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ

21ನೇ ಶತಮಾನದ 25 ವರ್ಷಗಳು ಕಳೆದಿವೆ, ಈ ಶತಮಾನದ ಮುಂದಿನ ಅಧ್ಯಾಯವು ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ಸೇರಿದೆ: ಪ್ರಧಾನಮಂತ್ರಿ

ಯಾವುದೇ ಪ್ರದೇಶದಲ್ಲಿ ತ್ವರಿತ ಅಭಿವೃದ್ಧಿಗೆ ಬಲವಾದ ಸಂಪರ್ಕದ ಅಗತ್ಯವಿದೆ, ಅದಕ್ಕಾಗಿಯೇ ನಮ್ಮ ಸರ್ಕಾರವು ಈಶಾನ್ಯದಲ್ಲಿ ಸಂಪರ್ಕ ಹೆಚ್ಚಿಸುವತ್ತ ಬಲವಾದ ಒತ್ತು ನೀಡಿದೆ: ಪ್ರಧಾನಮಂತ್ರಿ

ನಾವು ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳ ಜಾಲವನ್ನು ದೇಶದ ಪ್ರತಿಯೊಂದು ಮೂಲೆಗೂ ವಿಸ್ತರಿಸಿದ್ದೇವೆ, ಅಸ್ಸಾಂನಲ್ಲಿ ನಿರ್ದಿಷ್ಟವಾಗಿ, ಸಮರ್ಪಿತ ಕ್ಯಾನ್ಸರ್ ಆಸ್ಪತ್ರೆಗಳನ್ನು ಸಹ ಸ್ಥಾಪಿಸಲಾಗಿದೆ: ಪ್ರಧಾನಮಂತ್ರಿ

ಒಳನುಸುಳುವಿಕೆ ಮೂಲಕ ಗಡಿ ಪ್ರದೇಶಗಳ ಜನಸಂಖ್ಯೆಯನ್ನು ಬದಲಾಯಿಸಲು ಪಿತೂರಿಗಳು ನಡೆಯುತ್ತಿವೆ; ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿದೆ; ಆದ್ದರಿಂದ, ಈಗ ರಾಷ್ಟ್ರವ

Posted On: 14 SEP 2025 1:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ದರ್ರಾಂಗ್‌ನಲ್ಲಿ ಇಂದು ಸುಮಾರು 6,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂನ ಅಭಿವೃದ್ಧಿ ಪ್ರಯಾಣದ ಈ ಐತಿಹಾಸಿಕ ದಿನದಂದು ದರ್ರಾಂಗ್‌ ಜನರಿಗೆ ಮತ್ತು ಅಸ್ಸಾಂನ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸಿದರು.

ಆಪರೇಷನ್ ಸಿಂದೂರ್ ಯಶಸ್ಸಿನ ನಂತರ, ನಿನ್ನೆ ಮೊದಲ ಬಾರಿಗೆ ಅಸ್ಸಾಂಗೆ ಭೇಟಿ ನೀಡಿದ್ದಾಗಿ ಪ್ರಧಾನಮಂತ್ರಿ ಅವರು ಹೇಳಿದರು. ಕಾರ್ಯಾಚರಣೆಯ ಅದ್ಭುತ ಯಶಸ್ಸಿಗೆ ಮಾತೆ ಕಾಮಾಕ್ಯಳ ಆಶೀರ್ವಾದ ಕಾರಣ. ಆಕೆಯ ಪವಿತ್ರ ಭೂಮಿಯಲ್ಲಿ ಕಾಲಿಟ್ಟಾಗ ಆಳವಾದ ಆಧ್ಯಾತ್ಮಿಕ ತೃಪ್ತಿ ತಂದಿತು.  ಅಸ್ಸಾಂನಲ್ಲಿ ಆಚರಿಸಲಾಗುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳನ್ನು ಸಲ್ಲಿಸಿದರು. ಕೆಂಪುಕೋಟೆಯ ಮೇಲೆ ಮಾಡಿದ ಭಾಷಣವನ್ನು ಪುನರುಚ್ಚರಿಸಿದ ಶ್ರೀ ಮೋದಿ, ಭಾರತದ ಭದ್ರತಾ ಕಾರ್ಯತಂತ್ರದಲ್ಲಿ 'ಸುದರ್ಶನ-ಚಕ್ರ'ದ ಕಲ್ಪನೆಯನ್ನು ತಾವು ಪ್ರಸ್ತುತಪಡಿಸಿದೆವು. ಮಂಗಲ್ಡೋಯ್ ತಾಣವು ಸಂಸ್ಕೃತಿ, ಐತಿಹಾಸಿಕ ಹೆಮ್ಮೆ ಮತ್ತು ಭವಿಷ್ಯದ ಭರವಸೆಯ ಸಂಗಮ ಸ್ಥಳ. ಈ ಪ್ರದೇಶವು ಅಸ್ಸಾಂನ ಗುರುತಿನ ಕೇಂದ್ರದ ಸಂಕೇತವಾಗಿದೆ. ಸ್ಫೂರ್ತಿ ಮತ್ತು ಶೌರ್ಯದಿಂದ ತುಂಬಿರುವ ಈ ಭೂಮಿಯಲ್ಲಿ, ಜನರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಮಾತುಕತೆ ನಡೆಸಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಪ್ರಧಾನಮಂತ್ರಿ ಹೇಳಿದರು.

ಕೆಲವೇ ದಿನಗಳ ಹಿಂದೆ ದೇಶವು ಭಾರತ ರತ್ನ ಮತ್ತು ದಂತಕಥೆಯ ಧ್ವನಿ ಭೂಪೇನ್ ಹಜಾರಿಕಾ ಅವರ ಜನ್ಮ ದಿನ ಆಚರಿಸಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿ, ನಿನ್ನೆ ಅವರ ಗೌರವಾರ್ಥವಾಗಿ ನಡೆದ ವೈಭವದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.  ಅಸ್ಸಾಂನ ಅಂತಹ ಮಹಾನ್ ಪುತ್ರರು ಮತ್ತು ನಮ್ಮ ಪೂರ್ವಜರು ಕಂಡ ಕನಸುಗಳನ್ನು ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೂರ್ಣ ಪ್ರಾಮಾಣಿಕತೆಯಿಂದ ಅನುಸರಿಸುತ್ತಿವೆ ಎಂದರು.

ಅಸ್ಸಾಂನ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಉತ್ತೇಜನ, ಅದರ ತ್ವರಿತ ಅಭಿವೃದ್ಧಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಆದ್ಯತೆಗಳಾಗಿ ಉಳಿದಿವೆ. ಸರ್ಕಾರ ಮತ್ತು ಅಸ್ಸಾಂ ಜನರ ಜಂಟಿ ಪ್ರಯತ್ನಗಳ ಮೂಲಕ, ರಾಜ್ಯವು ಈಗ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪರಿಣಾಮ ಬೀರುತ್ತಿದೆ ಎಂದರು.

"ಭಾರತ ಪ್ರಸ್ತುತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ, ಅಸ್ಸಾಂ ಸಹ ರಾಷ್ಟ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ". ಅಸ್ಸಾಂ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಮತ್ತು ದೇಶದ ಉಳಿದ ಭಾಗಗಳೊಂದಿಗೆ ವೇಗ ಕಾಯ್ದುಕೊಳ್ಳಲು ಹೆಣಗಾಡುತ್ತಿದ್ದ ಸಮಯವಿತ್ತು. ಆದಾಗ್ಯೂ ಇಂದು, ಅಸ್ಸಾಂ ಸುಮಾರು 13 ಪ್ರತಿಶತದಷ್ಟು ಬೆಳವಣಿಗೆಯ ದರದೊಂದಿಗೆ ಮುನ್ನಡೆಯುತ್ತಿದೆ. ಇದು ಪ್ರಮುಖ ಸಾಧನೆ, ಈ ಯಶಸ್ಸಿಗೆ ಅಸ್ಸಾಂ ಜನರ ಕಠಿಣ ಪರಿಶ್ರಮ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನಗಳು ಕಾರಣ. ಅಸ್ಸಾಂನ ಜನರು ಈ ಪಾಲುದಾರಿಕೆ ಬಲಪಡಿಸುವುದನ್ನು ಮುಂದುವರಿಸುತ್ತಿದ್ದಾರೆ. ಅದಕ್ಕಾಗಿಯೇ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ತಂಡವು ಪ್ರತಿ ಚುನಾವಣೆಯಲ್ಲೂ ನಿರಂತರವಾಗಿ ಅಗಾಧವಾದ ಸಾರ್ವಜನಿಕ ಬೆಂಬಲ ಪಡೆಯುತ್ತಿದೆ. ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲೂ ಸಹ, ಅಸ್ಸಾಂ ಐತಿಹಾಸಿಕ ಗೆಲುವು ಸಾಧಿಸ, ಜನರು ಆಶೀರ್ವಾದ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಅಸ್ಸಾಂ ಅನ್ನು ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆಯ ಎಂಜಿನ್ ಮಾಡುವ ದೃಷ್ಟಿಕೋನದೊಂದಿಗೆ ತಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಇಂದಿನ ಕಾರ್ಯಕ್ರಮವು ಈ ಬದ್ಧತೆಯ ಒಂದು ಭಾಗವಾಗಿದೆ. "ಸ್ವಲ್ಪ ಸಮಯದ ಹಿಂದೆ, ಸುಮಾರು 6,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಯಿತು". ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸ್ಸಾಂ ಅನ್ನು ಅತ್ಯಂತ ಸಂಪರ್ಕಿತ ರಾಜ್ಯಗಳಲ್ಲಿ ಒಂದಾಗಿ ಮತ್ತು ಪ್ರಮುಖ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿವೆ. "ಈ ಯೋಜನೆಗಳು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ". ದರ್ರಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹೆದ್ದಾರಿ ಮತ್ತು ವರ್ತುಲ ರಸ್ತೆ ನಿರ್ಮಿಸಿರುವುದಕ್ಕೆ ಪ್ರಧಾನಮಂತ್ರಿ, ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

"ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಇಡೀ ರಾಷ್ಟ್ರವು ಒಗ್ಗಟ್ಟಿನಿಂದ ಮುಂದುವರಿಯುತ್ತಿದೆ. ಯುವ ಜನರಿಗೆ ಅಭಿವೃದ್ಧಿ ಹೊಂದಿದ ಭಾರತವು ಕೇವಲ ಕನಸಲ್ಲ, ಸಂಕಲ್ಪವಾಗಿದೆ. ಈ ರಾಷ್ಟ್ರೀಯ ಸಂಕಲ್ಪವನ್ನು ಈಡೇರಿಸುವಲ್ಲಿ ಈಶಾನ್ಯವು ಮಹತ್ವದ ಪಾತ್ರ ವಹಿಸುತ್ತಿದೆ". ಸ್ವಾತಂತ್ರ್ಯದ ನಂತರ ಪ್ರಮುಖ ನಗರಗಳು, ದೊಡ್ಡ ಆರ್ಥಿಕತೆಗಳು ಮತ್ತು ಕೈಗಾರಿಕಾ ಕೇಂದ್ರಗಳು ಪ್ರಾಥಮಿಕವಾಗಿ ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಹೊಂದಿದವು, ಆದರೆ ಪೂರ್ವ ಭಾರತದಲ್ಲಿ ವಿಶಾಲವಾದ ಪ್ರದೇಶ ಮತ್ತು ಜನಸಂಖ್ಯೆಯು ಅಭಿವೃದ್ಧಿಯ ಓಟದಲ್ಲಿ ಹಿಂದುಳಿದಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ತಮ್ಮ ಸರ್ಕಾರ ಈಗ ಕೆಲಸ ಮಾಡುತ್ತಿದೆ. "21ನೇ ಶತಮಾನದ 25 ವರ್ಷಗಳು ಈಗಾಗಲೇ ಕಳೆದಿವೆ, ಈ ಶತಮಾನದ ಮುಂದಿನ ಹಂತವು ಪೂರ್ವ ಮತ್ತು ಈಶಾನ್ಯಕ್ಕೆ ಸೇರಿದೆ". ಅಸ್ಸಾಂ ಮತ್ತು ಈಶಾನ್ಯವು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ಮುನ್ನಡೆಸುವ ಸಮಯ ಬಂದಿದೆ ಎಂದರು.

"ಯಾವುದೇ ಪ್ರದೇಶದ ತ್ವರಿತ ಅಭಿವೃದ್ಧಿಗೆ ತ್ವರಿತ ಸಂಪರ್ಕ ಅತ್ಯಗತ್ಯ, ಅದಕ್ಕಾಗಿಯೇ ನಮ್ಮ ಸರ್ಕಾರ ಈಶಾನ್ಯದಲ್ಲಿ ಸಂಪರ್ಕ ಹೆಚ್ಚಿಸುವತ್ತ ಬಲವಾದ ಗಮನ ಹರಿಸಿದೆ". ರಸ್ತೆ, ರೈಲು ಮತ್ತು ವೈಮಾನಿಕ ಮೂಲಸೌಕರ್ಯದ ಮೂಲಕ ಭೌತಿಕ ಸಂಪರ್ಕ ಸುಧಾರಣೆಗಳು ಹಾಗೂ 5ಜಿ ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಮೂಲಕ ಡಿಜಿಟಲ್ ಸಂಪರ್ಕ ಹೆಚ್ಚಿಸಲಾಗಿದೆ. ಈ ಪ್ರಗತಿಗಳು ಜನರಿಗೆ ಹೆಚ್ಚಿನ ಅನುಕೂಲತೆ ತಂದಿವೆ, ಜೀವನವನ್ನು ಸುಲಭಗೊಳಿಸಿವೆ ಮತ್ತು ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸಿವೆ. ಸುಧಾರಿತ ಸಂಪರ್ಕವು ಪ್ರಯಾಣವನ್ನು ಹೆಚ್ಚು ಪ್ರವೇಶಿಸುವಂತೆ ಮಾಡಿದೆ, ಪ್ರವಾಸೋದ್ಯಮವನ್ನು ವಿಸ್ತರಿಸಿದೆ ಮತ್ತು ಈ ಪ್ರದೇಶದ ಯುವಕರಿಗೆ ಹೊಸ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ರಾಷ್ಟ್ರವ್ಯಾಪಿ ಸಂಪರ್ಕ ಅಭಿಯಾನದಿಂದ ಅಸ್ಸಾಂ ಹೆಚ್ಚಿನ ಪ್ರಯೋಜನ ಪಡೆದಿದೆ. ದೆಹಲಿಯಲ್ಲಿ 6 ದಶಕಗಳ ವಿರೋಧ ಪಕ್ಷದ ಆಳ್ವಿಕೆ ಮತ್ತು ಅಸ್ಸಾಂನಲ್ಲಿ ದಶಕಗಳ ಆಡಳಿತದ ಹೊರತಾಗಿಯೂ, 60-65 ವರ್ಷಗಳಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ಕೇವಲ 3 ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೀಗ ಕೇವಲ ಒಂದು ದಶಕದೊಳಗೆ 6 ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗಿದೆ. ಗುವಾಹಟಿ ಮತ್ತು ದರ್ರಾಂಗ್ ನಡುವಿನ ಪ್ರಯಾಣದ ಸಮಯವನ್ನು ಕೆಲವೇ ನಿಮಿಷಗಳಿಗೆ ಗಮನಾರ್ಹವಾಗಿ ಕಡಿಮೆ ಮಾಡುವ ಕುರುವಾ-ನರೇಂಗಿ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಸೇತುವೆಯು ಸಾಮಾನ್ಯ ಜನರಿಗೆ ಸಮಯ ಮತ್ತು ಹಣ ಉಳಿಸುತ್ತದೆ, ಸಾರಿಗೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ, ಪ್ರಯಾಣದ ಸಮಯ ಕಡಿಮೆ ಮಾಡುತ್ತದೆ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಹೊಸ ವರ್ತುಲ ರಸ್ತೆಯು ಜನರಿಗೆ ಗಮನಾರ್ಹ ಪ್ರಯೋಜನಗಳನ್ನು ತರುತ್ತದೆ. ಒಮ್ಮೆ ಪೂರ್ಣಗೊಂಡ ನಂತರ, ಅಸ್ಸಾಂ ಕಡೆಗೆ ಹೋಗುವ ವಾಹನಗಳು ಇನ್ನು ಮುಂದೆ ನಗರ ಪ್ರವೇಶಿಸುವ ಅಗತ್ಯವಿಲ್ಲ, ಇದು ನಗರ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ. ವರ್ತುಲ ರಸ್ತೆಯು 5 ರಾಷ್ಟ್ರೀಯ ಹೆದ್ದಾರಿಗಳು, 2 ರಾಜ್ಯ ಹೆದ್ದಾರಿಗಳು, 1 ವಿಮಾನ ನಿಲ್ದಾಣ, 3 ರೈಲು ನಿಲ್ದಾಣಗಳು ಮತ್ತು 1 ಒಳನಾಡಿನ ಜಲ ಟರ್ಮಿನಲ್ ಸಂಪರ್ಕಿಸುತ್ತದೆ. ಇದು ಅಸ್ಸಾಂನ ಮೊದಲ ತಡೆರಹಿತ ಬಹುಮಾದರಿ ಸಂಪರ್ಕ ಜಾಲವನ್ನು ಸೃಷ್ಟಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ರೀತಿಯ ಅಭಿವೃದ್ಧಿಯನ್ನು ನೀಡುತ್ತಿವೆ ಎಂದು ಶ್ರೀ ಮೋದಿ ತಿಳಿಸಿದರು.

ಸರ್ಕಾರವು ಇಂದಿನ ಅಗತ್ಯಗಳಿಗಾಗಿ ಮಾತ್ರವಲ್ಲದೆ, ಮುಂದಿನ 25ರಿಂದ 50 ವರ್ಷಗಳ ಅಗತ್ಯಗಳಿಗಾಗಿ ರಾಷ್ಟ್ರವನ್ನು ಸಿದ್ಧಪಡಿಸುತ್ತಿದೆ. ಜಿ.ಎಸ್.ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳ ಕುರಿತು ಕೆಂಪುಕೋಟೆಯಿಂದ ಮಾಡಿದ ತಮ್ಮ ಘೋಷಣೆಯನ್ನು ನೆನಪಿಸಿಕೊಂಡರು. ಈ ಸುಧಾರಣೆಗಳನ್ನು ಈಗ ಜಾರಿಗೆ ತರಲಾಗುತ್ತಿದೆ. ಇಂದಿನಿಂದ 9 ದಿನಗಳ ನವರಾತ್ರಿಯ ಸಂದರ್ಭದಲ್ಲಿ ಜಿ.ಎಸ್.ಟಿ ದರಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು. ಈ ಕ್ರಮವು ಅಸ್ಸಾಂನ ಪ್ರತಿಯೊಂದು ಮನೆಗೆ ಪ್ರಯೋಜನ ನೀಡುತ್ತದೆ, ಅನೇಕ ದೈನಂದಿನ ವಸ್ತುಗಳನ್ನು ಕೈಗೆಟುಕುವಂತೆ ಮಾಡುತ್ತದೆ. ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ, ಇದು ಮನೆಗಳನ್ನು ನಿರ್ಮಿಸುವವರಿಗೆ ವೆಚ್ಚ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ದುಬಾರಿ ಔಷಧಿಗಳು ಅಗ್ಗವಾಗಲಿವೆ, ವಿಮಾ ಕಂತುಗಳು ಸಹ ಕಡಿಮೆಯಾಗಲಿವೆ. ಹೊಸ ಮೋಟಾರ್ ಸೈಕಲ್‌ಗಳು ಅಥವಾ ಕಾರುಗಳನ್ನು ಖರೀದಿಸಲು ಯೋಜಿಸುವವರಿಗೆ ಅವು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಮೋಟಾರ್ ಕಂಪನಿಗಳು ಈಗಾಗಲೇ ಈ ಪ್ರಯೋಜನಗಳ ಬಗ್ಗೆ ಜಾಹೀರಾತು ನೀಡಲು ಪ್ರಾರಂಭಿಸಿವೆ. ಈ ನಿರ್ಧಾರದಿಂದ ತಾಯಂದಿರು ಮತ್ತು ಸಹೋದರಿಯರು, ಯುವಕರು, ರೈತರು ಮತ್ತು ವರ್ತಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳು ಲಾಭ ಪಡೆಯುತ್ತಾರೆ. ಈ ಸುಧಾರಣೆಯು ಜನರ ಹಬ್ಬದ ಮೆರಗು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಹಬ್ಬದ ಋತುವಿನಲ್ಲಿ ನಾಗರಿಕರು ಒಂದು ಪ್ರಮುಖ ಸಂದೇಶ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಸ್ಥಳೀಯ ಉತ್ಪನ್ನಗಳನ್ನು ಆಯ್ಕೆ ಮಾಡುವ ಅಗತ್ಯವಿದೆ. ಜನರು ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಬೇಕು, ವರ್ತಕರು ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಉತ್ತೇಜಿಸಿ  ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ಸ್ಥಳೀಯವಾಗಿ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಅವರು ಕರೆ ನೀಡಿದರು, ಈ ದಿಕ್ಕಿನಲ್ಲಿ ಪ್ರತಿಯೊಂದು ಪ್ರಯತ್ನವೂ ರಾಷ್ಟ್ರವನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸಿದರು.

ಇತ್ತೀಚಿನ ವರ್ಷಗಳಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ, ಈ ಹಿಂದೆ ಆಸ್ಪತ್ರೆಗಳು ಪ್ರಮುಖ ನಗರಗಳಲ್ಲಿ ಕೇಂದ್ರೀಕೃತವಾಗಿದ್ದವು, ಅಲ್ಲಿ ಚಿಕಿತ್ಸೆ ಪಡೆಯುವುದು ಹೆಚ್ಚಾಗಿ ದುಬಾರಿಯಾಗಿತ್ತು. ಇದನ್ನು ಪರಿಹರಿಸಲು ಸರ್ಕಾರವು ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳ ಜಾಲವನ್ನು ದೇಶದ ಮೂಲೆ ಮೂಲೆಗಳಿಗೆ ವಿಸ್ತರಿಸಿತು. ಅಸ್ಸಾಂನಲ್ಲಿ ನಿರ್ದಿಷ್ಟವಾಗಿ, ಸಮರ್ಪಿತ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಕಳೆದ 11 ವರ್ಷಗಳಲ್ಲಿ ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ. ಸ್ವಾತಂತ್ರ್ಯದ ನಂತರದ 60-65 ವರ್ಷಗಳಲ್ಲಿ ನಿರ್ಮಿಸಲಾದ ಒಟ್ಟು ಮೊತ್ತಕ್ಕೆ ಇದು ಸಮನಾಗಿದೆ. 2014ರ ಮೊದಲು ಅಸ್ಸಾಂನಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳು ಇದ್ದವು, ದರ್ರಾಂಗ್ ವೈದ್ಯಕೀಯ ಕಾಲೇಜು ಪೂರ್ಣಗೊಂಡ ನಂತರ ರಾಜ್ಯದಲ್ಲಿ ಈಗ 24 ವೈದ್ಯಕೀಯ ಕಾಲೇಜುಗಳು ಇರುತ್ತವೆ. ವೈದ್ಯಕೀಯ ಕಾಲೇಜುಗಳ ಸ್ಥಾಪನೆಯು ಆರೋಗ್ಯ ಸೇವೆಯ ಮೂಲಸೌಕರ್ಯ ಸುಧಾರಿಸುವುದಲ್ಲದೆ, ಯುವಕರಿಗೆ ವೈದ್ಯರಾಗಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಈ ಹಿಂದೆ ವೈದ್ಯಕೀಯ ಸೀಟುಗಳ ಕೊರತೆಯಿದ್ದ ಕಾರಣ, ಅನೇಕ ಮಹತ್ವಾಕಾಂಕ್ಷಿ ವೈದ್ಯರು ತಮ್ಮ ವೃತ್ತಿಜೀವನ ಮುಂದುವರಿಸಲು ಸಾಧ್ಯವಾಗಲಿಲ್ಲ. ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಹೊಸ ಗುರಿ ಘೋಷಿಸಿದರು: ಮುಂದಿನ 4ರಿಂದ 5 ವರ್ಷಗಳಲ್ಲಿ, ಸರ್ಕಾರವು 1 ಲಕ್ಷ ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸುವ ಗುರಿ ಹೊಂದಿದೆ ಎಂದರು.

ಅಸ್ಸಾಂ ದೇಶಭಕ್ತರ ಭೂಮಿ ಎಂದು ವಿವರಿಸಿದ ಪ್ರಧಾನಮಂತ್ರಿ, ವಿದೇಶಿ ಆಕ್ರಮಣಕಾರರಿಂದ ರಾಷ್ಟ್ರವನ್ನು ರಕ್ಷಿಸುವಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಮಾಡಿದ ತ್ಯಾಗಗಳಲ್ಲಿ ಅಸ್ಸಾಂ ಮಹತ್ವದ ಪಾತ್ರ ವಹಿಸಿದೆ. ಪಥರುಘಾಟ್‌ನ ಐತಿಹಾಸಿಕ ರೈತ ಸತ್ಯಾಗ್ರಹವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಹುತಾತ್ಮರ ಈ ಪವಿತ್ರ ಭೂಮಿಯ ಮೇಲೆ ನಿಂತು, ವಿರೋಧದ ಮತ್ತೊಂದು ಕೃತ್ಯವನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ. ವಿರೋಧ ಪಕ್ಷವು ತನ್ನ ರಾಜಕೀಯ ಹಿತಾಸಕ್ತಿಗಳಿಗಾಗಿ ಭಾರತ ವಿರೋಧಿ ವ್ಯಕ್ತಿಗಳು ಮತ್ತು ಸಿದ್ಧಾಂತಗಳೊಂದಿಗೆ ಹೊಂದಿಕೊಂಡಿದೆ. ಆಪರೇಷನ್ ಸಿಂದೂರ್ ಬಗ್ಗೆ ಉಲ್ಲೇಖಿಸಿ, ಈ ಕಾರ್ಯಾಚರಣೆಯ ಸಮಯದಲ್ಲೂ ಸಹ ಅಂತಹ ಪ್ರವೃತ್ತಿಗಳು ಸ್ಪಷ್ಟವಾಗಿವೆ. ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ, ದೇಶವು ವ್ಯಾಪಕ ಭಯೋತ್ಪಾದನೆಯಿಂದ ಬಳಲುತ್ತಿತ್ತು, ಆಗ ವಿರೋಧ ಪಕ್ಷ ಮೌನವಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಇಂದು, ಪ್ರಸ್ತುತ ಸರ್ಕಾರದ ಅಡಿ, ಭಾರತೀಯ ಸೇನೆಯು ಸಿಂದೂರ್‌ನಂತಹ ಕಾರ್ಯಾಚರಣೆಗಳನ್ನು ನಡೆಸುತ್ತಿದೆ, ಪಾಕಿಸ್ತಾನದಾದ್ಯಂತ ಭಯೋತ್ಪಾದಕ ಸೂತ್ರಧಾರಿಗಳನ್ನು ನಿರ್ಮೂಲನೆ ಮಾಡುತ್ತಿದೆ. ವಿರೋಧ ಪಕ್ಷವು ಭಾರತದ ಬದಲು ಪಾಕಿಸ್ತಾನದ ಸೈನ್ಯದ ಜೊತೆ ಸೇರುತ್ತಿದೆ, ಭಯೋತ್ಪಾದಕರಿಗೆ ಆಶ್ರಯ ನೀಡುವವರ ಕಾರ್ಯಸೂಚಿಯನ್ನು ಉತ್ತೇಜಿಸುತ್ತಿದೆ. ಪಾಕಿಸ್ತಾನದ ಸುಳ್ಳುಗಳು ವಿರೋಧ ಪಕ್ಷದ ನಿರೂಪಣೆಯಾಗುತ್ತವೆ. ಹಾಗಾಗಿ, ಜನರು ವಿರೋಧ ಪಕ್ಷಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು.

ವಿರೋಧ ಪಕ್ಷಕ್ಕೆ, ಅದರ ಮತ ಬ್ಯಾಂಕ್‌ನ ಹಿತಾಸಕ್ತಿಗಳೇ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಿಂತ ಆದ್ಯತೆ ಪಡೆದಿವೆ. ವಿರೋಧ ಪಕ್ಷವು ಈಗ ರಾಷ್ಟ್ರವಿರೋಧಿ ಅಂಶಗಳು ಮತ್ತು ಒಳನುಸುಳುವವರ ಪ್ರಮುಖ ರಕ್ಷಕರಾಗಿ ಮಾರ್ಪಟ್ಟಿದೆ. ಅಧಿಕಾರದಲ್ಲಿರುವ ಅವಧಿಯಲ್ಲಿ, ವಿರೋಧ ಪಕ್ಷವು ಒಳನುಸುಳುವಿಕೆಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿತು, ಈಗ ಭಾರತದಲ್ಲಿ ಒಳನುಸುಳುವವರನ್ನು ಶಾಶ್ವತವಾಗಿ ನೆಲೆಗೊಳಿಸಲು ಪ್ರಯತ್ನಿಸುತ್ತಿದೆ. ಅಸ್ಸಾಂನ ಗುರುತು ರಕ್ಷಿಸಲು ಮತ್ತು ಅಕ್ರಮ ಒಳನುಸುಳುವಿಕೆ ವಿರೋಧಿಸಲು ಮಂಗಲ್ಡೋಯ್ ಒಂದು ಕಾಲದಲ್ಲಿ ಒಂದು ಪ್ರಮುಖ ಚಳುವಳಿಗೆ ಸಾಕ್ಷಿಯಾಗಿತ್ತು. ಆದಾಗ್ಯೂ, ಹಿಂದಿನ ವಿರೋಧ ಪಕ್ಷದ ನೇತೃತ್ವದ ಸರ್ಕಾರವಿದ್ದಾಗ ಈ ಪ್ರತಿರೋಧಕ್ಕಾಗಿ ಜನರನ್ನು ಶಿಕ್ಷಿಸಿತು. ಭೂಮಿಯ ಮೇಲೆ ಅಕ್ರಮ ಅತಿಕ್ರಮಣಗಳಿಗೆ ಅವಕಾಶ ನೀಡುವ ಮೂಲಕ ಪ್ರತೀಕಾರ ತೀರಿಸಿತು. ನಂಬಿಕೆಯ ಸ್ಥಳಗಳು(ತಾಣಗಳು), ರೈತರು ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಭೂಮಿಯ ಅತಿಕ್ರಮಣಕ್ಕೆ ವಿರೋಧ ಪಕ್ಷವು ಅವಕಾಶ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ತಮ್ಮ ಮೈತ್ರಿ ಸರ್ಕಾರ ರಚನೆಯಾದ ನಂತರ, ಈ ಪರಿಸ್ಥಿತಿಗಳು ಹಿಮ್ಮುಖವಾಗುತ್ತಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ, ದರ್ರಾಂಗ್ ಜಿಲ್ಲೆಯಲ್ಲಿ ಗಮನಾರ್ಹ ಚೇತರಿಕೆ ಸೇರಿದಂತೆ ಅಸ್ಸಾಂನಲ್ಲಿ ಲಕ್ಷಾಂತರ ಬಿಘಾ ಭೂಮಿಯನ್ನು ನುಸುಳುಕೋರರಿಂದ ಮುಕ್ತಗೊಳಿಸಲಾಗಿದೆ. ವಿರೋಧ ಪಕ್ಷದ ಆಳ್ವಿಕೆಯಲ್ಲಿ ನುಸುಳುಕೋರರ ನಿಯಂತ್ರಣದಲ್ಲಿದ್ದ ಗೋರುಖುತಿ ಪ್ರದೇಶವನ್ನು ಈಗ ಮರಳಿ ಪಡೆಯಲಾಗಿದೆ. ವಶಪಡಿಸಿಕೊಂಡ ಭೂಮಿ ಈಗ ಗೋರುಖುತಿ ಕೃಷಿ ಯೋಜನೆಗೆ ನೆಲೆಯಾಗಿದೆ, ಅಲ್ಲಿ ಸ್ಥಳೀಯ ಯುವಕರು 'ಕೃಷಿ ಸೈನಿಕರಾಗಿ' ಕೆಲಸ ಮಾಡುತ್ತಿದ್ದಾರೆ. ಸಾಸಿವೆ, ಜೋಳ, ಉದ್ದು, ಎಳ್ಳು ಮತ್ತು ಕುಂಬಳಕಾಯಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಕಾಲದಲ್ಲಿ ನುಸುಳುಕೋರರು ಆಕ್ರಮಿಸಿಕೊಂಡಿದ್ದ ಭೂಮಿ ಈಗ ಅಸ್ಸಾಂನಲ್ಲಿ ಕೃಷಿ ಅಭಿವೃದ್ಧಿಯ ಹೊಸ ಕೇಂದ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ನುಸುಳುಕೋರರು ದೇಶದ ಸಂಪನ್ಮೂಲಗಳು ಮತ್ತು ಆಸ್ತಿಗಳ ಮೇಲೆ ಹಿಡಿತ ಸಾಧಿಸಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಭಾರತದ ರೈತರು, ಯುವಕರು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳ ವಿಷಯದಲ್ಲಿ ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೇಲೆ ಒಳನುಸುಳುವವರು ನಡೆಸುವ ದೌರ್ಜನ್ಯಗಳು ಕಳವಳಕಾರಿ, ಅಂತಹ ಕೃತ್ಯಗಳನ್ನು ಸಹಿಸಲಾಗದು. ಒಳನುಸುಳುವಿಕೆಯ ಮೂಲಕ ಗಡಿ ಪ್ರದೇಶಗಳ ಜನಸಂಖ್ಯೆಯನ್ನು ಬದಲಾಯಿಸಲು ನಡೆಯುತ್ತಿರುವ ಪಿತೂರಿಗಳ ಬಗ್ಗೆ ಎಚ್ಚರದಿಂದಿರಿ. ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಷ್ಟ್ರವ್ಯಾಪಿ ಜನಸಂಖ್ಯೆ ದಾಖಲು ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದರು. ಒಳನುಸುಳುವವರಿಂದ ದೇಶವನ್ನು ರಕ್ಷಿಸಲು ಮತ್ತು ಭಾರತೀಯ ನೆಲದಿಂದ ಅವರನ್ನು ಸಂಪೂರ್ಣವಾಗಿ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಅವರು ಪುನರುಚ್ಚರಿಸಿದರು.

ಅಸ್ಸಾಂನ ಶ್ರೀಮಂತ ಪರಂಪರೆ ಸಂರಕ್ಷಿಸಲು ಮತ್ತು ಅದರ ಅಭಿವೃದ್ಧಿಯನ್ನು ವೇಗಗೊಳಿಸಲು ಸಾಮೂಹಿಕ ಜವಾಬ್ದಾರಿ ವಹಿಸಲಾಗಿದೆ. ಇದನ್ನು ಸಾಧಿಸಲು ಸಂಘಟಿತ ಪ್ರಯತ್ನಗಳು ಅತ್ಯಗತ್ಯ. ಅಸ್ಸಾಂ ಮತ್ತು ಈಶಾನ್ಯವನ್ನು ಅಭಿವೃದ್ಧಿ ಹೊಂದಿದ ಭಾರತದ ಪ್ರೇರಕ ಶಕ್ತಿಯಾಗಿ ಪರಿವರ್ತಿಸುವ ದೃಷ್ಟಿಕೋನವನ್ನು ಪುನರುಚ್ಚರಿಸುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಅಸ್ಸಾಂನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದರ್ರಾಂಗ್‌ನಲ್ಲಿ ಪ್ರಧಾನಮಂತ್ರಿ ಅವರು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ದರ್ರಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಜಿ.ಎನ್‌.ಎಂ ಶಾಲೆ ಮತ್ತು ಬಿ.ಎಸ್ಸಿ ನರ್ಸಿಂಗ್ ಕಾಲೇಜು ಸೇರಿವೆ. ಇದು ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಬಲಪಡಿಸುತ್ತದೆ. ನಗರ ಚಲನಶೀಲತೆ ಹೆಚ್ಚಿಸುವ, ಸಂಚಾರ ದಟ್ಟಣೆ ಕಡಿಮೆ ಮಾಡುವ ಮತ್ತು ರಾಜಧಾನಿ ಮತ್ತು ಸುತ್ತಮುತ್ತಲ ಸಂಪರ್ಕವನ್ನು ಸುಧಾರಿಸುವ ಗುವಾಹಟಿ ವರ್ತುಲ ರಸ್ತೆ ಯೋಜನೆ ಮತ್ತು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕುರುವಾ-ನರೇಂಗಿ ಸೇತುವೆ ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ, ಜತೆಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

****


(Release ID: 2166518) Visitor Counter : 2