ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಬಿಹಾರ ರಾಜ್ಯ ಜೀವಿಕಾ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಉದ್ಘಾಟನೆ 


ಸಬಲೀಕರಣಗೊಂಡ ಮಹಿಳೆಯರು ವಿಕಸಿತ ಭಾರತದ ಅಡಿಪಾಯ, ದೇಶದ ಮಹಿಳಾ ಸಬಲೀಕರಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆ: ಪ್ರಧಾನಮಂತ್ರಿ

ಜೀವನದಲ್ಲಿನ ತೊಂದರೆಗಳನ್ನು ನಿವಾರಿಸಲು ಸರ್ಕಾರವು ನಿರಂತರ ಕೆಲಸ ಮಾಡುತ್ತಿದೆ ಮತ್ತು ಆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ: ಪ್ರಧಾನಮಂತ್ರಿ

ನಮ್ಮ ಸರ್ಕಾರಕ್ಕೆ, ತಾಯಂದಿರ ಘನತೆ, ಅವರ ಗೌರವ, ಅವರ ಸ್ವಾಭಿಮಾನವು ಅತ್ಯಂತ ಪ್ರಮುಖ ಆದ್ಯತೆಯಾಗಿದೆ: ಪ್ರಧಾನಮಂತ್ರಿ

Posted On: 02 SEP 2025 2:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬಿಹಾರ ರಾಜ್ಯ ಜೀವಿಕ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಈ ಶುಭ ಮಂಗಳವಾರದಂದು, ಹೆಚ್ಚು ಭರವಸೆಯ ಉಪಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು  ಹೇಳಿದರು. ಬಿಹಾರದ ತಾಯಂದಿರು ಮತ್ತು ಸಹೋದರಿಯರಿಗೆ ಜೀವಿಕ ನಿಧಿ ಸಖ್ ಸಹಕಾರಿ ಸಂಘದ ಮೂಲಕ ಹೊಸ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಅವರು ಪ್ರಕಟಿಸಿದರು. ಈ ಉಪಕ್ರಮವು ಜೀವಿಕ ನಿಧಿಯೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರು ಹಳ್ಳಿಗಳಾದ್ಯಂತ ಆರ್ಥಿಕ ಸಹಾಯವನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ, ಮತ್ತು ಅವರ ಕೆಲಸ ಹಾಗೂ ವ್ಯವಹಾರಗಳನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಜೀವಿಕ ನಿಧಿ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ದೈಹಿಕ ಭೇಟಿಯ ಅಗತ್ಯತೆ ನಿವಾರಿಸುತ್ತದೆ - ಈಗ ಎಲ್ಲ ಕೆಲಸಗಳನ್ನು ಮೊಬೈಲ್ ಫೋನ್ ಮೂಲಕ ಮಾಡಬಹುದು ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಜೀವಿಕ ನಿಧಿ ಸಖ್ ಸಹಕಾರಿ ಸಂಘದ ಆರಂಭಕ್ಕಾಗಿ ಅವರು ಬಿಹಾರದ ತಾಯಂದಿರು ಮತ್ತು ಸಹೋದರಿಯರನ್ನು ಅಭಿನಂದಿಸಿದರು ಮತ್ತು ಈ ಮಹತ್ವದ ಉಪಕ್ರಮಕ್ಕಾಗಿ ಶ್ರೀ ನಿತೀಶ್ ಕುಮಾರ್ ಮತ್ತು ಬಿಹಾರ ಸರ್ಕಾರವನ್ನು ಅವರು ಶ್ಲಾಘಿಸಿದರು.

“ಸಬಲೀಕರಣಗೊಂಡ ಮಹಿಳೆಯರು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಅಡಿಗಲ್ಲು" ಎಂದು ಬಣ್ಣಿಸಿದ ಶ್ರೀ ನರೇಂದ್ರ ಮೋದಿ ಮಹಿಳೆಯರನ್ನು ಸಬಲೀಕರಣಗೊಳಿಸಲು, ಅವರ ಜೀವನದಲ್ಲಿನ ಸಂಕಷ್ಟಗಳನ್ನು ತಗ್ಗಿಸುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಜೀವನವನ್ನು ಸುಲಭಗೊಳಿಸಲು ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಮಹಿಳೆಯರನ್ನು ಬಯಲು ಬಹಿರ್ದೆಸೆಯ ಅನಿವಾರ್ಯತೆಯಿಂದ ಮುಕ್ತಗೊಳಿಸಲು ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೋಟ್ಯಂತರ ಶಾಶ್ವತ ಮನೆಗಳನ್ನು ನಿರ್ಮಿಸಲಾಗಿದೆ, ಆ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ವಿಶೇಷ ಗಮನ ಹರಿಸಲಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಮಹಿಳೆಯು ಮನೆಯ ಮಾಲೀಕರಾದಗ ಅವರ ಧ್ವನಿಯ ತೂಕವೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಶುದ್ಧ ಕುಡಿಯುವ ನೀರಿನ ಲಭ್ಯತೆಯ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಹರ್ ಘರ್ ಜಲ ಉಪಕ್ರಮವನ್ನು ಆರಂಭಿಸಿತು ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ತಾಯಂದಿರು ಮತ್ತು ಸಹೋದರಿಯರು ಆರೋಗ್ಯ ರಕ್ಷಣೆ ಪಡೆಯುವಾಗ ಸಂಕಷ್ಟಗಳು ಎದುರಾಗದಂತೆ ನೋಡಿಕೊಳ್ಳಲು ಆಯುಷ್ಮಾನ್ ಭಾರತ್ ಯೋಜನೆ ಪರಿಚಯಿಸಲಾಗಿದ್ದು, ಅದರಡಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಒತ್ತಿ ಹೇಳಿದರು. ಕೇಂದ್ರ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಸಹ ಮುನ್ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು, ಇದು ಪ್ರತಿಯೊಬ್ಬ ತಾಯಿಯನ್ನು ಪ್ರತಿದಿನ ತನ್ನ ಮಕ್ಕಳಿಗೆ ಹೇಗೆ ಆಹಾರವನ್ನು ನೀಡುವುದು ಎಂಬ ಚಿಂತೆಯಿಂದ ಮುಕ್ತಗೊಳಿಸಿದೆ ಎಂದರು. ಮಹಿಳೆಯರ ಆದಾಯ ವೃದ್ಧಿಸಲು ದೇಶಾದ್ಯಂತ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿರುವ ಲಖ್ಪತಿ ದೀದಿ, ಡ್ರೋನ್ ದೀದಿ ಮತ್ತು ಬ್ಯಾಂಕ್ ಸಖಿಯಂತಹ ಉಪಕ್ರಮಗಳನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಈ ಯೋಜನೆಗಳನ್ನು ತಾಯಂದಿರು ಮತ್ತು ಸಹೋದರಿಯರಿಗೆ ಸೇವೆ ಸಲ್ಲಿಸಲು ನಿರ್ದಿಷ್ಟ ಭವ್ಯ ಅಭಿಯಾನದ ಭಾಗವೆಂದು ಅವರು ವಿವರಿಸಿದರು. ಮುಂಬರುವ ತಿಂಗಳುಗಳಲ್ಲಿ ಬಿಹಾರದಲ್ಲಿರುವ ತಮ್ಮ ಸರ್ಕಾರವು ಈ ಕಾರ್ಯಾಚರಣೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಭರವಸೆ ನೀಡಿದರು.

“ಬಿಹಾರವು ಮಾತೃಶಕ್ತಿ- ಮಾತೆಯರ ಶಕ್ತಿ ಮತ್ತು ತಾಯಂದಿರ ಗೌರವಕ್ಕೆ ಸದಾ ಅತ್ಯುನ್ನತ ಸ್ಥಾನವನ್ನು ನೀಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಬಿಹಾರದಲ್ಲಿ ಗಂಗಾ ಮೈಯಾ, ಕೋಸಿ ಮೈಯಾ, ಗಂಡಕಿ ಮೈಯಾ ಮತ್ತು ಪನ್ಪುನ್ ಮೈಯಾ ಮುಂತಾದ ದೇವತೆಗಳನ್ನು ಭಾರಿ ಭಕ್ತಿಯಿಂದ ಪೂಜಿಸಲಾಗುತ್ತದೆ ಎಂದು ಅವರು ಉಲ್ಲೇಖಿಸಿದರು. ಜಾನಕಿ ಜಿ ಬಿಹಾರದ ಮಗಳು, ಅದರ ಸಾಂಸ್ಕೃತಿಕ ನೀತಿಯಲ್ಲಿ ಆಕೆ ಪೋಷಿಸಲ್ಪಟ್ಟಿದ್ದಾರೆ - ಈ ಭೂಮಿಯ ಸಿಯಾ ಧಿಯಾರನ್ನು ವಿಶ್ವದಾದ್ಯಂತ ಸೀತಾ ಮಾತೆ ಎಂದು ಪೂಜಿಸಲ್ಪಡುತ್ತಾರೆ ಎಂದು ಅವರು ಹೇಳಿದರು. ಛಠಿ ಮೈಯಾಗೆ ಪ್ರಾರ್ಥನೆ ಸಲ್ಲಿಸುವುದು ಎಲ್ಲರಿಗೂ ಆಶೀರ್ವಾದವೆಂದು ಪರಿಗಣಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ನವರಾತ್ರಿಯ ಪವಿತ್ರ ಹಬ್ಬ ಸಮೀಪಿಸುತ್ತಿದೆ ಎಂದ ಅವರು ಈ ಸಮಯದಲ್ಲಿ ದೇಶಾದ್ಯಂತ ಮಾತೆ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಬಿಹಾರ ಮತ್ತು ಪೂರ್ವಾಂಚಲ್ ಪ್ರದೇಶಗಳಲ್ಲಿ ದೈವಿಕ ತಾಯಿಯ ಅಭಿವ್ಯಕ್ತಿಗಳಾಗಿ ಏಳು ಸಹೋದರಿಯರನ್ನು ಪೂಜಿಸುವ ಸತ್ಬಾಹಿನಿ ಪೂಜಾ ಪೀಳಿಗೆಯ ಸಂಪ್ರದಾಯವೂ ಇದೆ ಎಂದು ಅವರು ಹೇಳಿದರು. ತಾಯಿಯ ಮೇಲಿನ ಈ ಗಾಢವಾದ ನಂಬಿಕೆ ಮತ್ತು ಭಕ್ತಿ ಬಿಹಾರದ ನಿರ್ಣಾಯಕ ಗುರುತಾಗಿದೆ ಎಂದು ಅವರು ಒತ್ತಿ ಹೇಳಿದರು. ಸ್ಥಳೀಯ ಶ್ಲೋಕವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, “ಯಾರೂ, ಎಷ್ಟೇ ಪ್ರಿಯರಾಗಿದ್ದರೂ, ತಾಯಿಯ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ’’ ಎಂದು ಒತ್ತಿ ಹೇಳಿದರು. 

ತಾಯಂದಿರ ಘನತೆ, ಗೌರವ ಮತ್ತು ಹೆಮ್ಮೆ ತಮ್ಮ ಸರ್ಕಾರಕ್ಕೆ ಅತ್ಯಂತ ಆದ್ಯತೆಯ ವಿಷಯವಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ತಾಯಿ ನಮ್ಮ ಪ್ರಪಂಚದ ಮೂಲತತ್ವ ಮತ್ತು ಅವರು ನಮ್ಮ ಸ್ವಾಭಿಮಾನವನ್ನು ಸಾಕಾರಗೊಳಿಸುತ್ತಾರೆ ಎಂದರು. ಬಿಹಾರದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯವನ್ನು ಉಲ್ಲೇಖಿಸಿದ ಅವರು,  ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು, ಅದನ್ನು ತಾವು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು. ಬಿಹಾರದಲ್ಲಿ ವಿರೋಧ ಪಕ್ಷದ ಮೈತ್ರಿಕೂಟದ ವೇದಿಕೆಯಿಂದ ತಮ್ಮ ತಾಯಿಯ ವಿರುದ್ಧವೇ ನಿಂದನೀಯ ಹೇಳಿಕೆಗಳನ್ನು ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಅವಹೇಳನ ಕೇವಲ ತಮ್ಮ ತಾಯಿಗೆ ಮಾಡಿದ ಅವಮಾನವಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಮಾಡಿದ ಅವಮಾನ ಎಂದು ಅವರು ಒತ್ತಿ ಹೇಳಿದರು. ಬಿಹಾರದ ಜನರು, ವಿಶೇಷವಾಗಿ ಅಲ್ಲಿನ ತಾಯಂದಿರು, ಅಂತಹ ಹೇಳಿಕೆಗಳನ್ನು ನೋಡಿದಾಗ ಮತ್ತು ಕೇಳಿದಾಗ ಅನುಭವಿಸಿದ ನೋವನ್ನು ಶ್ರೀ ನರೇಂದ್ರ ಮೋದಿ ವಿವರಿಸಿದರು. ತಮ್ಮ ಹೃದಯದಲ್ಲಿ ಅನುಭವಿಸುವ ದುಃಖವನ್ನು ಬಿಹಾರದ ಜನರು ಸಮಾನವಾಗಿ ಹಂಚಿಕೊಳ್ಳುತ್ತಾರೆ ಮತ್ತು ಈ ದುಃಖವನ್ನು ಇಂದು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದರು. 

ಸುಮಾರು 55 ವರ್ಷಗಳಿಂದ ತಾವು ಸಮಾಜ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ, ಪ್ರತಿದಿನ, ಪ್ರತಿ ಕ್ಷಣವೂ ದೇಶಕ್ಕಾಗಿ ಸಂಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಿದ್ದೇನೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಪಯಣದಲ್ಲಿ ತಮ್ಮ ತಾಯಿ ವಹಿಸಿದ ಮಹತ್ವದ ಪಾತ್ರವನ್ನು ಅವರು ಒಪ್ಪಿಕೊಂಡರು. ಮಾತೆ ಭಾರತಿಗೆ ಸೇವೆ ಸಲ್ಲಿಸುವ ಸಲುವಾಗಿ, ತಮ್ಮ ಹೆತ್ತ ತಾಯಿ ತಮ್ಮನ್ನು ಕೌಟುಂಬಿಕ ಬಾಧ್ಯತೆಗಳಿಂದ ಮುಕ್ತಗೊಳಿಸಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ತಮ್ಮನ್ನು ರಾಷ್ಟ್ರ ಸೇವೆಗಾಗಿ ಆಶೀರ್ವದಿಸಿ ಈ ಜಗತ್ತಿನಲ್ಲಿ ದೈಹಿಕವಾಗಿಲ್ಲದ ತಾಯಿಯನ್ನು ವಿರೋಧ ಪಕ್ಷದ ಮೈತ್ರಿಕೂಟದ ವೇದಿಕೆಯಿಂದ ನಿಂದಿಸಲಾಗಿದೆ ಎಂದು ಅವರು ತೀವ್ರ ದುಃಖ ವ್ಯಕ್ತಪಡಿಸಿದರು. ಅದನ್ನು ಅವರು ಅತ್ಯಂತ ನೋವಿನಿಂದ ಕೂಡಿದ, ದುಃಖಕರ ಮತ್ತು ತೀವ್ರವಾಗಿ ನೋವುಂಟುಮಾಡುವ ಸಂಗತಿ ಎಂದು ಬಣ್ಣಿಸಿದರು.

ಪ್ರತಿ ತಾಯಿಯೂ ತನ್ನ ಮಕ್ಕಳನ್ನು ಅಪಾರ ತ್ಯಾಗದ ಮೂಲಕ ಬೆಳೆಸುತ್ತಾರೆ ಮತ್ತು ಅವಳಿಗೆ ತನ್ನ ಮಕ್ಕಳಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಬಾಲ್ಯದಿಂದಲೂ ತಮ್ಮ ತಾಯಿಯನ್ನು ಬಡತನ ಮತ್ತು ಕಷ್ಟಗಳನ್ನು ಸಹಿಸಿಕೊಂಡು, ತನ್ನ ಕುಟುಂಬ ಮತ್ತು ಮಕ್ಕಳನ್ನು ಪೋಷಿಸಲು ಹೆಣಗಾಡುತ್ತಿದ್ದ  ರೂಪದಲ್ಲಿ ನೋಡಿದ್ದೇನೆ ಎಂದು ಹಂಚಿಕೊಂಡರು. ಮಳೆಗಾಲ ಆರಂಭವಾಗುವ ಮೊದಲು, ತನ್ನ ಮಕ್ಕಳು ಶಾಂತಿಯುತವಾಗಿ ಮಲಗಲು ತನ್ನ ತಾಯಿ ಛಾವಣಿ ಸೋರದಂತೆ ನೋಡಿಕೊಳ್ಳಲು ಹೇಗೆ ಕೆಲಸ ಮಾಡುತ್ತಿದ್ದಳು ಎಂಬುದನ್ನು ಅವರು ನೆನಪಿಸಿಕೊಂಡರು. ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಸಹ ಒಂದು ದಿನ ವಿಶ್ರಾಂತಿ ಪಡೆದರೂ ತನ್ನ ಮಕ್ಕಳು ಕಷ್ಟಪಡಬೇಕಾಗುತ್ತದೆ ಎಂದು ತಿಳಿದಿದ್ದರೂ ಅವರು ಕೆಲಸಕ್ಕೆ ಹೋಗುತ್ತಿದ್ದರು. ಅವರು ತನಗಾಗಿ ಎಂದಿಗೂ ಹೊಸ ಸೀರೆಯನ್ನು ಖರೀದಿಸಲಿಲ್ಲ, ತಮ್ಮ ಮಕ್ಕಳಿಗೆ ಒಂದು ಜೊತೆ ಬಟ್ಟೆ ಹೊಲಿಯಲು ಪ್ರತಿ ಪೈಸೆಯನ್ನೂ ಉಳಿಸುತ್ತಿದ್ದರು ಎಂದು ಅವರು ಉಲ್ಲೇಖಿಸಿದರು. ಬಡ ತಾಯಿಯೊಬ್ಬರು ಜೀವಮಾನದ ತ್ಯಾಗದ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಸದೃಢ ಮೌಲ್ಯಗಳನ್ನು ನೀಡುತ್ತಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅದಕ್ಕಾಗಿಯೇ ತಾಯಿಯ ಸ್ಥಾನವನ್ನು ದೇವರುಗಳಿಗಿಂತಲೂ ಮಿಗಿಲಾಗಿ ಪರಿಗಣಿಸಲಾಗುತ್ತದೆ ಎಂದು ಅವರು ದೃಢಪಡಿಸಿದರು. ಬಿಹಾರದ ಸಾಂಸ್ಕೃತಿಕ ನೀತಿಯನ್ನು ನೆನಪಿಸಿಕೊಂಡು ಒಂದು ಶ್ಲೋಕವನ್ನು ಉಲ್ಲೇಖಿಸಿ ಶ್ರೀ ನರೇಂದ್ರ ಮೋದಿ ಅವರು, “ವಿರೋಧ ಪಕ್ಷದ ನಾಯಕರು ವೇದಿಕೆಯಲ್ಲಿ ಮಾಡಿದ ನಿಂದನೆ ಕೇವಲ ತನ್ನ ತಾಯಿಯ ಮೇಲೆ ಅಲ್ಲ - ಅದು ದೇಶಾದ್ಯಂತದ ಕೋಟ್ಯಂತರ ತಾಯಂದಿರಿಗೆ ಮಾಡಿದ ಅವಮಾನ’ ಎಂದು ಹೇಳಿದರು.

ಬಡ ತಾಯಿಯ ತ್ಯಾಗ ಮತ್ತು ಆಕೆಯ ಮಗನ ನೋವನ್ನು ರಾಜಮನೆತನಗಳಲ್ಲಿ ಜನಿಸಿದವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೀ ನರೇಂದ್ರ ಮೋದಿ, ಈ ಸವಲತ್ತು ಪಡೆದ ವ್ಯಕ್ತಿಗಳು ಬೆಳ್ಳಿ ಮತ್ತು ಚಿನ್ನದ ಚಮಚಗಳೊಂದಿಗೆ ಜನಿಸಿರುತ್ತಾರೆ ಮತ್ತು ಬಿಹಾರ ಮತ್ತು ದೇಶಾದ್ಯಂತ ಅಧಿಕಾರವನ್ನು ತಮ್ಮ ಕುಟುಂಬದ ಆನುವಂಶಿಕತೆಯಾಗಿ ನೋಡುತ್ತಾರೆ ಎಂದು ಹೇಳಿದರು. ಅಧಿಕಾರದ ಸ್ಥಾನವು ಅವರ ಜನ್ಮಸಿದ್ಧ ಹಕ್ಕು ಎಂದು ಅವರು ನಂಬುತ್ತಾರೆ ಎಂದು ಅವರು ಹೇಳಿದರು. ಆದರೂ ಭಾರತದ ಜನರು ಬಡ ತಾಯಿಯ ಮಗನನ್ನು - ಕಠಿಣ ಪರಿಶ್ರಮಿ ವ್ಯಕ್ತಿಯನ್ನು-ಆಶೀರ್ವದಿಸಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಸವಲತ್ತು ಪಡೆದ ವರ್ಗವು ಈ ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಅವರು ಪ್ರತಿಪಾದಿಸಿದರು. ಸಮಾಜದ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಏಳಿಗೆಯನ್ನು ವಿರೋಧ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಹೇಳಿದರು. ಕಷ್ಟಪಟ್ಟು ಕೆಲಸ ಮಾಡುವವರನ್ನು ಅವಮಾನಿಸುವ ಹಕ್ಕು ತಮಗೆ ಇದೆ ಎಂದು ಆ ವ್ಯಕ್ತಿಗಳು ನಂಬುತ್ತಾರೆ ಮತ್ತು ಹೀಗಾಗಿ ನಿಂದನೆಗಳ ಸುರಿಮಳೆಗೈಯುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಬಿಹಾರ ಚುನಾವಣೆಯ ಸಮಯದಲ್ಲಿಯೂ ಸಹ, ಅವರನ್ನು ಅಗೌರವ ಮತ್ತು ನಿಂದನೀಯ ಭಾಷೆಯಿಂದ ಸಂಬೋಧಿಸಲಾಯಿತು, ಅದು ಆ ವ್ಯಕ್ತಿಗಳ ಕೆಟ್ಟ ಮನಸ್ಥಿತಿಯನ್ನು ಪದೇ ಪದೇ ಬಹಿರಂಗಪಡಿಸಲಾಯಿತು ಎಂದು ಅವರು ಉಲ್ಲೇಖಿಸಿದರು. ಆ ಮನಸ್ಥಿತಿಯೇ ಇದೀಗ ತಮ್ಮ ದಿವಂಗತ ತಾಯಿಯ ಮೇಲೆ ರಾಜಕೀಯ ವೇದಿಕೆಗಳಿಂದ ನಿಂದನೆಗಳನ್ನು ಮಾಡಲು ಕಾರಣವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ತಾಯಂದಿರು ಮತ್ತು ಸಹೋದರಿಯರನ್ನು ನಿಂದಿಸುವ ಮನಸ್ಥಿತಿಯು, ಮಹಿಳೆಯರನ್ನು ದುರ್ಬಲರೆಂದು ನೋಡುವ ಮತ್ತು ಅವರನ್ನು ಶೋಷಣೆ ಮತ್ತು ದಬ್ಬಾಳಿಕೆಯ ವಸ್ತುಗಳಂತೆ ಪರಿಗಣಿಸುವ ಮನಸ್ಥಿತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತಹ ಮಹಿಳಾ ವಿರೋಧಿ ಮನಸ್ಥಿತಿ ಅಧಿಕಾರಕ್ಕೆ ಬಂದಾಗಲೆಲ್ಲಾ ಹೆಚ್ಚು ಸಂಕಷ್ಟಕೆ ಒಳಗಾಗಿರುವವರು ಮಹಿಳೆಯರೇ ಎಂದು ಅವರು ಒತ್ತಿ ಹೇಳಿದರು. ಈ ವಾಸ್ತವವನ್ನು ಬಿಹಾರದ ಜನರಿಗಿಂತ ಚೆನ್ನಾಗಿ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ಬಿಹಾರದಲ್ಲಿ ವಿರೋಧ ಪಕ್ಷದ ಯುಗವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ, ಆ ಸಮಯದಲ್ಲಿ ಅಪರಾಧ ಮತ್ತು ಅಪರಾಧಿಗಳನ್ನು ನಿಯಂತ್ರಿಸಲಾಗುತ್ತಿರಲಿಲ್ಲ ಮತ್ತು ಕೊಲೆ, ಸುಲಿಗೆ ಮತ್ತು ಅತ್ಯಾಚಾರ ಘಟನೆಗಳು ಸಾಮಾನ್ಯವಾಗಿದ್ದವು ಎಂದು ಹೇಳಿದರು. ಆಗಿನ ಸರ್ಕಾರ ಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿತ್ತು ಮತ್ತು ಆ ಆಡಳಿತದ ಹೊರೆಯನ್ನು ಬಿಹಾರದ ಮಹಿಳೆಯರು ಹೊರುತ್ತಿದ್ದರು ಎಂದು ಅವರು ಆರೋಪಿಸಿದರು. ಮಹಿಳೆಯರು ತಮ್ಮ ಮನೆಗಳಿಂದ ಹೊರಗೆ ಕಾಲಿಡುವುದಷ್ಟು ಪರಿಸ್ಥಿತಿ ಸುರಕ್ಷಿತವಾಗಿರಲಿಲ್ಲ ಮತ್ತು ಕುಟುಂಬಗಳು ನಿರಂತರ ಭಯದಲ್ಲಿ ವಾಸಿಸುತ್ತಿದ್ದವು - ಸಂಜೆಯ ವೇಳೆಗೆ ತಮ್ಮ ಗಂಡ ಅಥವಾ ಗಂಡು ಮಕ್ಕಳು ಜೀವಂತವಾಗಿ ಮನೆಗೆ ಮರಳುತ್ತಾರೆಯೇ ಎಂದು ಖಚಿತವಿರಲಿಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮಹಿಳೆಯರು ತಮ್ಮ ಕುಟುಂಬಗಳನ್ನು ಕಳೆದುಕೊಳ್ಳುವ, ಸುಲಿಗೆಗಾಗಿ ತಮ್ಮ ಆಭರಣಗಳನ್ನು ಮಾರಾಟ ಮಾಡುವ, ಮಾಫಿಯಾದವರಿಂದ ಅಪಹರಿಸಲ್ಪಡುವ ಅಥವಾ ತಮ್ಮ ವೈವಾಹಿಕ ಸಂತೋಷ ಕಳೆದುಕೊಳ್ಳುವ ಭಯದಲ್ಲಿ  ಹೇಗೆ ಬದುಕುತ್ತಿದ್ದರು ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು. ಆ ಕತ್ತಲೆಯಿಂದ ಹೊರಬರಲು ಬಿಹಾರ ದೀರ್ಘ ಹೋರಾಟ ನಡೆಸಿದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು. ವಿರೋಧ ಪಕ್ಷಗಳನ್ನು ಅಧಿಕಾರದಿಂದ ಕಿತ್ತೊಗೆಯುವಲ್ಲಿ ಮತ್ತು ಪದೇ ಪದೇ ಸೋಲಿಸುವಲ್ಲಿ ಬಿಹಾರದ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ವಿರೋಧ ಪಕ್ಷಗಳು ಇಂದು ಬಿಹಾರದ ಮಹಿಳೆಯರ ವಿರುದ್ಧ ಹೆಚ್ಚು ಆಕ್ರೋಶಗೊಂಡಿರುವುದಕ್ಕೆ ಅದೇ ಕಾರಣ ಎಂದು ಅವರು ಪ್ರತಿಪಾದಿಸಿದರು. ಬಿಹಾರದ ಪ್ರತಿಯೊಬ್ಬ ಮಹಿಳೆಯೂ ತಮ್ಮ ಉದ್ದೇಶವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದು ಶ್ರೀ ನರೇಂದ್ರ ಮೋದಿ ಕರೆ ನೀಡಿದರು ಮತ್ತು ಆ ಪಕ್ಷಗಳು ಸೇಡು ತೀರಿಸಿಕೊಳ್ಳಲು ಮತ್ತು ಅವರನ್ನು ಶಿಕ್ಷಿಸಲು ಬಯಸುತ್ತಿದ್ದವು ಎಂದು ಹೇಳಿದರು. 

ಕೆಲವು ವಿರೋಧ ಪಕ್ಷಗಳು ಮಹಿಳೆಯರ ಪ್ರಗತಿಯನ್ನು ನಿರಂತರವಾಗಿ ವಿರೋಧಿಸುತ್ತಿವೆ ಎಂದ ಅವರು,  ಅದಕ್ಕಾಗಿಯೇ ಅವರು ಮಹಿಳಾ ಮೀಸಲಾತಿಯಂತಹ ಉಪಕ್ರಮಗಳನ್ನು ಪ್ರಬಲವಾಗಿ ವಿರೋಧಿಸುತ್ತಾರೆ, ಬಡ ಮನೆಯಿಂದ ಬಂದ ಮಹಿಳೆಯೊಬ್ಬರಿಗೆ ಪ್ರಾಮುಖ್ಯತೆಗೆ ದೊರೆತಾಗಲೂ ಅವರ ಹತಾಶೆ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಬುಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಗಳಾದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ವಿರೋಧ ಪಕ್ಷಗಳು ಪದೇ ಪದೇ ಅವಮಾನಿಸುತ್ತಿರುವುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. ಮಹಿಳೆಯರ ಮೇಲಿನ ದ್ವೇಷ ಮತ್ತು ತಿರಸ್ಕಾರದ ರಾಜಕೀಯವನ್ನು ನಿಗ್ರಹಿಸಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 20 ದಿನಗಳಲ್ಲಿ ನವರಾತ್ರಿ ಆರಂಭವಾಗುತ್ತದೆ, ನಂತರ 50 ದಿನಗಳಲ್ಲಿ ಛಾತ್ ಪವಿತ್ರ ಹಬ್ಬ ಬರುತ್ತದೆ, ಆಗ ಛಠ್ ಮೈಯಾಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು. ಬಿಹಾರದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ತಮ್ಮ ತಾಯಿಯನ್ನು ಅವಮಾನಿಸಿದವರನ್ನು ಕ್ಷಮಿಸಬಹುದಾದರೂ, ಭಾರತದ ನೆಲ ತಾಯಂದಿರ ಮೇಲಿನ ಅಗೌರವವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು. ವಿರೋಧ ಪಕ್ಷಗಳು ತಮ್ಮ ಕೃತ್ಯಗಳಿಗಾಗಿ ಸತ್ಬಾಹಿನಿ ಮತ್ತು ಛಠ್ ಮೈಯಾರಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಪ್ರತಿಪಾದಿಸಿದರು.

ತಾಯಂದಿರಿಗೆ ಮಾಡಿದ ಅವಮಾನಕ್ಕೆ ಪ್ರತಿಕ್ರಿಯೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಬಿಹಾರದ ಜನರಿಗೆ, ವಿಶೇಷವಾಗಿ ಅದರ ಪುತ್ರರಿಗೆ ಪ್ರಧಾನಮಂತ್ರಿ ಕರೆ ನೀಡಿದರು. ವಿರೋಧ ಪಕ್ಷಗಳ ನಾಯಕರು ಎಲ್ಲಿಗೆ ಹೋದರೂ - ಅದು ಯಾವುದೇ ಬೀದಿಯಾಗಿರಲಿ ಅಥವಾ ನಗರವಾಗಿರಲಿ - ತಾಯಂದಿರಿಗೆ ಮಾಡುವ ಅವಮಾನ ಸಹಿಸುವುದಿಲ್ಲ ಮತ್ತು ಅವರ ಘನತೆಯ ಮೇಲಿನ ಯಾವುದೇ ದಾಳಿಯನ್ನು ಸಹಿಸುವುದಿಲ್ಲ ಎಂದು ಹೇಳುವ ಜನರ ಧ್ವನಿಯನ್ನು ಅವರು ಕೇಳಬೇಕು ಎಂದು ಅವರು ಹೇಳಿದರು. ವಿರೋಧ ಪಕ್ಷಗಳ ದಬ್ಬಾಳಿಕೆ ಮತ್ತು ಹಲ್ಲೆಯನ್ನು ಸಹಿಸುವುದಿಲ್ಲ ಮತ್ತು ಒಪ್ಪಲಾಗದು ಎಂದು ಅವರು ಹೇಳಿದರು. 

ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸುವುದು ತಮ್ಮ ಸರ್ಕಾರದ ಅಗ್ರ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಮಹಿಳೆಯರು ಎದುರಿಸುತ್ತಿರುವ ಕಷ್ಟಗಳನ್ನು ತಗ್ಗಿಸಲು ತಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು ಪೂರ್ಣ ಬದ್ಧತೆಯಿಂದ ಅದನ್ನು ಮುಂದುವರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಜನರು ತಮ್ಮ ಸರ್ಕಾರವನ್ನು ಆಶೀರ್ವದಿಸುವುದನ್ನು ಮುಂದುವರಿಸಬೇಕು ಎಂದು ಕರೆ ನೀಡಿದ ಅವರು, ರಾಷ್ಟ್ರದ ಪ್ರತಿಯೊಬ್ಬ ತಾಯಿಗೂ ಗೌರವಯುತ ನಮನಗಳನ್ನು ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿನ ಇತ್ತೀಚಿನ ರಾಷ್ಟ್ರೀಯ ಭಾವನೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಅಲ್ಲಿ "ಹರ್ ಘರ್ ತಿರಂಗ" ಎಂಬ ಘೋಷಣೆ ಹಳ್ಳಿಗಳು ಮತ್ತು ಬೀದಿಗಳಲ್ಲಿ ಪ್ರತಿಧ್ವನಿಸಿದವು, ಸದ್ಯದ ಈಗಿನ ಅಗತ್ಯವೆಂದರೆ "ಹರ್ ಘರ್ ಸ್ವದೇಶಿ, ಘರ್-ಘರ್ ಸ್ವದೇಶಿ" ಎಂದು ಪುನರುಚ್ಚರಿಸಿದರು. ತಾಯಂದಿರು ಮತ್ತು ಸಹೋದರಿಯರನ್ನು ಸಬಲೀಕರಣಗೊಳಿಸಲು ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಈ ಹೊಸ ಮಂತ್ರ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಈ ಧ್ಯೇಯದಲ್ಲಿ ಮಹಿಳೆಯರ ಆಶೀರ್ವಾದಕ್ಕಾಗಿ ಅವರು ಮನವಿ ಮಾಡಿದರು.  ಸ್ಥಳೀಯ ಮತ್ತು 'ಭಾರತದಲ್ಲಿ ತಯಾರಿಸಿದ' ಉತ್ಪನ್ನಗಳಿಗೆ ಧ್ವನಿಯನ್ನು ಒತ್ತಿ ಹೇಳುವ "ಇದು ಸ್ವದೇಶಿ" ಎಂದು ಹೆಮ್ಮೆಯಿಂದ ಘೋಷಿಸುವ ಫಲಕಗಳನ್ನು ಪ್ರದರ್ಶಿಸುವಂತೆ ಪ್ರಧಾನಮಂತ್ರಿ ಪ್ರತಿಯೊಬ್ಬ ಅಂಗಡಿ ಮಳಿಗೆಗಳವರು ಮತ್ತು ವ್ಯಾಪಾರಿಗಳಿಗೆ ಕರೆ ನೀಡಿದರು. ಭಾರತವು ಸ್ವಾವಲಂಬನೆಯ ಹಾದಿಯಲ್ಲಿ ಸದೃಢವಾಗಿ ಮುನ್ನಡೆಯಬೇಕು ಎಂದು ಪುನಃ ಪ್ರತಿಪಾದಿಸುವ ಮೂಲಕ ಅವರು ಭಾಷಣ ಮುಕ್ತಾಯಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್‌, ಉಪಮುಖ್ಯಮಂತ್ರಿ ಶ್ರೀ ಸಾಮ್ರಾಟ್ ಚೌಧರಿ, ಶ್ರೀ ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರ ರಾಜ್ಯ ಜೀವಿಕ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಅನ್ನು ಉದ್ಘಾಟಿಸಿದರು. ಜೀವಿಕ ನಿಧಿಯನ್ನು ಸ್ಥಾಪಿಸುವ ಉದ್ದೇಶವು ಜೀವಿಕದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸಮುದಾಯಗಳ ಸದಸ್ಯರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಸುಲಭ ಸಾಲ ಪಡೆಯಲು ಅನುವು ಮಾಡಿಕೊಡುವುದು, ಜೀವಿಕದ ಎಲ್ಲಾ ನೋಂದಾಯಿತ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಸೊಸೈಟಿಯ ಸದಸ್ಯರಾಗಿರುತ್ತವೆ. ಈ ಸಂಸ್ಥೆಯ ಕಾರ್ಯಾಚರಣೆಗಾಗಿ, ಬಿಹಾರ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಆರ್ಥಿಕ ನೆರವನ್ನು ಕೊಡುಗೆಯಾಗಿ ನೀಡುತ್ತವೆ.

ಜೀವಿಕದ ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರಲ್ಲಿ ಉದ್ಯಮಶೀಲತೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ಹಲವರು ಸಣ್ಣ ಉದ್ಯಮಗಳು ಮತ್ತು ಉತ್ಪಾದಕ ಕಂಪನಿಗಳ ಸ್ಥಾಪನೆಗೆ ಕಾರಣವಾಗಿದೆ. ಆದರೂ ಮಹಿಳಾ ಉದ್ಯಮಿಗಳು ಹೆಚ್ಚಾಗಿ ಶೇ.18–ಶೇ.24ರಷ್ಟು   ಹೆಚ್ಚಿನ ಬಡ್ಡಿದರಗಳನ್ನು ವಿಧಿಸುವ ಕಿರುಬಂಡವಾಳ ಸಂಸ್ಥೆಗಳನ್ನು ಅವಲಂಬಿಸಬೇಕಾಗಿದೆ. ಜೀವಿಕ ನಿಧಿಯನ್ನು ಎಂ.ಎಫ್.ಐ ಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ಕಡಿಮೆ ಬಡ್ಡಿದರಗಳಲ್ಲಿ ದೊಡ್ಡ ಸಾಲದ ಮೊತ್ತದ ಸಕಾಲಿಕ ಲಭ್ಯತೆ ಖಾತ್ರಿಪಡಿಸಿಕೊಳ್ಳಲು ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ, ಜೀವಿಕ ದಿದೀಗಳು ಅವರ ಬ್ಯಾಂಕ್ ಖಾತೆಗಳಿಗೆ ವೇಗವಾಗಿ ಮತ್ತು ಹೆಚ್ಚು ಪಾರದರ್ಶಕವಾಗಿ ನಿಧಿ ವರ್ಗಾವಣೆ ಮಾಡಬಹುದಾಗಿದೆ. ಅದನ್ನು ಸುಗಮಗೊಳಿಸಲು 12 ಸಾವಿರ ಸಮುದಾಯ ಕಾರ್ಯಕರ್ತರಿಗೆ ಟ್ಯಾಬ್ಲೆಟ್‌ಗಳನ್ನು ನೀಡಿ ಸಜ್ಜುಗೊಳಿಸಲಾಗಿದೆ. 

ಈ ಉಪಕ್ರಮವು ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬಲವರ್ಧನೆಗೊಳಿಸುವ ಮತ್ತು ಸಮುದಾಯ ನೇತೃತ್ವದ ಉದ್ಯಮಗಳ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆಯಿದೆ. ಬಿಹಾರ ರಾಜ್ಯದಾದ್ಯಂತ ಸುಮಾರು 20 ಲಕ್ಷ ಮಹಿಳೆಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿಲಿದ್ದಾರೆ.

 

 

*****

 


(Release ID: 2163115) Visitor Counter : 5