ಪ್ರಧಾನ ಮಂತ್ರಿಯವರ ಕಛೇರಿ
15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಜಂಟಿ ಹೇಳಿಕೆ: ನಮ್ಮ ಮುಂದಿನ ಪೀಳಿಗೆಯ ಭದ್ರತೆ ಮತ್ತು ಸಮೃದ್ಧಿಗಾಗಿ ಸಹಭಾಗಿತ್ವ
Posted On:
29 AUG 2025 7:06PM by PIB Bengaluru
ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಇಶಿಬಾ ಶಿಗೇರು ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 29-30, ರಂದು 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಅಧಿಕೃತ ಭೇಟಿ ನೀಡಿದರು. 2025 ರ ಆಗಸ್ಟ್ 29 ರಂದು ಸಂಜೆ ಪ್ರಧಾನಮಂತ್ರಿ ಮೋದಿ ಅವರನ್ನು ಪ್ರಧಾನಮಂತ್ರಿ ಇಶಿಬಾ ಅವರು ಪ್ರಧಾನಮಂತ್ರಿ ಕಚೇರಿಯಲ್ಲಿ (ಕಾಂಟೆ) ಬರಮಾಡಿಕೊಂಡರು, ಅಲ್ಲಿ ಅವರಿಗೆ ವಿಧ್ಯುಕ್ತ ಗೌರವ ರಕ್ಷೆಯನ್ನು ನೀಡಲಾಯಿತು. ಇಬ್ಬರು ಪ್ರಧಾನಮಂತ್ರಿಗಳು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಅವರು ನಾಗರಿಕ ಸಂಬಂಧಗಳು, ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿಗಳು, ಸಾಮಾನ್ಯ ಕಾರ್ಯತಂತ್ರದ ದೃಷ್ಟಿಕೋನ ಮತ್ತು ಪರಸ್ಪರ ಗೌರವದಲ್ಲಿ ಬೇರೂರಿರುವ ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹವನ್ನು ನೆನಪಿಸಿಕೊಂಡರು. ಕಳೆದ ದಶಕದಲ್ಲಿ ಭಾರತ-ಜಪಾನ್ ಪಾಲುದಾರಿಕೆಯು ಮಾಡಿದ ಮಹತ್ವದ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಶ್ಲಾಘಿಸಿದರು ಮತ್ತು ಮುಂಬರುವ ದಶಕಗಳಲ್ಲಿ ಪರಸ್ಪರ ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ಕಾರ್ಯತಂತ್ರದ ಮತ್ತು ಭವಿಷ್ಯತ್ತಿನ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ರಚನಾತ್ಮಕ ಚರ್ಚೆ ನಡೆಸಿದರು.
ಪರಸ್ಪರ ನಂಬಿಕೆ ಮತ್ತು ಆಳವಾದ ಸಂಬಂಧವನ್ನು ಪ್ರತಿಬಿಂಬಿಸುವ ನಿರಂತರ ಉನ್ನತ ಮಟ್ಟದ ವಿನಿಮಯಗಳು ಮತ್ತು ಎರಡೂ ಕಡೆಯ ಸಚಿವ ಮತ್ತು ಸಂಸದೀಯ ಕಾರ್ಯಕ್ರಮಗಳನ್ನು ಉಭಯ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಕಳೆದ ದಶಕದಲ್ಲಿ ಈ ಪಾಲುದಾರಿಕೆಯು ಭದ್ರತೆ, ರಕ್ಷಣೆ, ವ್ಯಾಪಾರ, ಹೂಡಿಕೆ, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಮತ್ತು ಚಲನಶೀಲತೆ, ಹಾಗು ಸಾಂಸ್ಕೃತಿಕ ಮತ್ತು ಜನತೆ ಮತ್ತು ಜನತೆಯ ನಡುವಣ ಸಂಪರ್ಕಗಳಂತಹ ವ್ಯಾಪಕ ಕ್ಷೇತ್ರಗಳಿಗೆ ಗಮನಾರ್ಹವಾಗಿ ವಿಸ್ತರಿಸಿದೆ. ಭಾರತ ಮತ್ತು ಜಪಾನ್ ವಿವಿಧ ಕ್ಷೇತ್ರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಸಂವಾದ ಕಾರ್ಯವಿಧಾನಗಳು ಮತ್ತು ಕಾರ್ಯ ಗುಂಪುಗಳನ್ನು ಹೊಂದಿರುವುದನ್ನು ಗಮನಿಸಿದ ಇಬ್ಬರೂ ಪ್ರಧಾನಮಂತ್ರಿಗಳು ಅದನ್ನು ಶ್ಲಾಘಿಸಿದರು, ಇದು ಅಸಂಖ್ಯಾತ ಸಚಿವಾಲಯಗಳು, ಸಂಸ್ಥೆಗಳು ಮತ್ತು ಇಲಾಖೆಗಳ ನಡುವೆ ಪರಸ್ಪರ ತೊಡಗಿಸಿಕೊಳ್ಳುವಿಕೆ ಮತ್ತು ಸಹಯೋಗಕ್ಕೆ ಅನುಕೂಲಗಳನ್ನು ಮಾಡಿಕೊಡುತ್ತದೆ.
ಭಾರತ-ಜಪಾನ್ ಪಾಲುದಾರಿಕೆಯು ಒಂದು ಪ್ರಮುಖ ಹಂತದಲ್ಲಿದೆ ಮತ್ತು ನಮ್ಮ ಸಾಧನೆಗಳ ಮೇಲೆ ಅದನ್ನು ಕಟ್ಟುವ ಮೂಲಕ ಪರಸ್ಪರ ಪೂರಕ ಸಂಬಂಧವನ್ನು ಬೆಳೆಸುವುದು ಮತ್ತು ಮುಂದಿನ ಪೀಳಿಗೆಗೆ ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ನಮ್ಮ ಆಯಾ ಸಾಮರ್ಥ್ಯಗಳು ಮತ್ತು ಅತ್ಯುತ್ತಮ ಸಂಬಂಧಗಳನ್ನು ಬಳಸಿಕೊಳ್ಳುವುದು ಅತ್ಯಗತ್ಯ ಎಂಬ ಸಾಮಾನ್ಯ ತಿಳುವಳಿಕೆಗೆ ಇಬ್ಬರೂ ಪ್ರಧಾನಮಂತ್ರಿಗಳು ಬಂದರು. ಹಂಚಿಕೆಯ ಉದ್ದೇಶಗಳನ್ನು ಸಾಧಿಸಲು ಮತ್ತು ವಿಶೇಷ ಕಾರ್ಯತಂತ್ರದ ಹಾಗು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲು ಪರಸ್ಪರ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಅವರು ನಿರ್ಧರಿಸಿದರು. ಈ ನಿಟ್ಟಿನಲ್ಲಿ, ಇಬ್ಬರು ಪ್ರಧಾನಮಂತ್ರಿಗಳು ಮೂರು ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಸರಣಿ ಘೋಷಣೆಗಳನ್ನು ಮಾಡಿದರು: ನಮ್ಮ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವುದು, ನಮ್ಮ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ನಮ್ಮ ಜನತೆ ಮತ್ತು ಜನತೆಯ ನಡುವಣ ವಿನಿಮಯವನ್ನು ಗಾಢವಾಗಿಸುವುದು. ಶುದ್ಧ ಇಂಧನ, ನಿರ್ಣಾಯಕ ಖನಿಜಗಳು, ಡಿಜಿಟಲ್ ಪಾಲುದಾರಿಕೆ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಂಸ್ಕೃತಿಕ ವಿನಿಮಯ ಮತ್ತು ರಾಜತಾಂತ್ರಿಕ ತರಬೇತಿ ಸೇರಿದಂತೆ ಪ್ರಮುಖ ವಲಯಗಳಲ್ಲಿ ಪ್ರಮುಖ ದಾಖಲೆಗಳಿಗೆ ಅಂಕಿತ ಹಾಕುವುದನ್ನು ಅವರು ಸ್ವಾಗತಿಸಿದರು. ನಾಯಕರು ಈ ಕೆಳಗಿನ ಅಂಶಗಳನ್ನು ಅಂಗೀಕರಿಸಿದರು:
(i) ಮುಂದಿನ ದಶಕಕ್ಕಾಗಿ ಜಂಟಿ ದೃಷ್ಟಿಕೋನ, ಇದು ಆರ್ಥಿಕತೆ, ಆರ್ಥಿಕ ಭದ್ರತೆ, ಚಲನಶೀಲತೆ, ಪರಿಸರ, ತಂತ್ರಜ್ಞಾನ ಮತ್ತು ನಾವೀನ್ಯತೆ, ಆರೋಗ್ಯ, ಜನತೆ ಮತ್ತು ಜನತೆ ನಡುವಿನ ಸಂಬಂಧಗಳು ಮತ್ತು ರಾಜ್ಯ-ಪ್ರಾಂತ್ಯ ತೊಡಗಿಸಿಕೊಳ್ಳುವಿಕೆ ಎಂಬ ಎಂಟು ಸ್ತಂಭಗಳಲ್ಲಿ ಪಾಲುದಾರಿಕೆಯನ್ನು ಮುನ್ನಡೆಸಲು ಇಡೀ ರಾಷ್ಟ್ರದ ಪ್ರಯತ್ನಗಳ ಮಾರ್ಗಗಳನ್ನು ರೂಪಿಸುತ್ತದೆ;
(ii) ಈ ಪ್ರದೇಶದಲ್ಲಿನ ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವತೆಗಳು ಮತ್ತು ಭದ್ರತಾ ಸಂರಚನೆಗಳನ್ನು ಗಣನೆಗೆ ತೆಗೆದುಕೊಂಡು ನಮ್ಮ ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಮುಂದಿನ ಹಂತಕ್ಕೆ ಏರಿಸುವ ಭದ್ರತಾ ಸಹಕಾರದ ಕುರಿತಾದ ಜಂಟಿ ಘೋಷಣೆ; ಮತ್ತು
(iii) ಭಾರತ-ಜಪಾನ್ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಕಾರಕ್ಕಾಗಿ ಕ್ರಿಯಾ ಯೋಜನೆ, ಇದು ಪ್ರತಿಭಾ ಚಲನಶೀಲತೆಗಾಗಿ ಮತ್ತು ಐದು ವರ್ಷಗಳಲ್ಲಿ 500,000 ಕ್ಕೂ ಹೆಚ್ಚು ಸಿಬ್ಬಂದಿಗಳ ವಿನಿಮಯದ ಮೂಲಕ ಜನತೆ ಮತ್ತು ಜನತೆಯ ನಡುವಣ ಸಂಬಂಧಗಳನ್ನು ಗಾಢವಾಗಿಸಲು ಮಾರ್ಗಸೂಚಿಯನ್ನು ರೂಪಿಸುತ್ತದೆ, ಇದರಲ್ಲಿ ಭಾರತದಿಂದ ಜಪಾನ್‌ಗೆ 50,000 ನುರಿತ ಸಿಬ್ಬಂದಿ ಮತ್ತು ಸಾಮರ್ಥ್ಯಶೀಲ ಪ್ರತಿಭೆಗಳು ಸೇರಿವೆ.
ನಿರ್ಣಾಯಕ ಸರಕುಗಳು ಮತ್ತು ವಲಯಗಳಲ್ಲಿ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವುದು ಮತ್ತು ಬಲಪಡಿಸುವುದು ಹಾಗು ದೂರಸಂಪರ್ಕ, ಔಷಧಗಳು, ನಿರ್ಣಾಯಕ ಖನಿಜಗಳು, ಅರೆವಾಹಕಗಳು ಮತ್ತು ಶುದ್ಧ ಇಂಧನದ ಮೇಲೆ ಹೆಚ್ಚಿನ ಆದ್ಯತೆಯೊಂದಿಗೆ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ತ್ವರಿತಗೊಳಿಸುವುದು ಸೇರಿದಂತೆ ಆರ್ಥಿಕ ಭದ್ರತೆಯ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ವೇಗವನ್ನು ಒದಗಿಸಲು ಭಾರತ-ಜಪಾನ್ ಆರ್ಥಿಕ ಭದ್ರತಾ ಉಪಕ್ರಮವನ್ನು ಉಭಯ ಪ್ರಧಾನಮಂತ್ರಿಗಳು ಘೋಷಿಸಿದರು. 2024 ರ ನವೆಂಬರ್ ನಲ್ಲಿ ಕಾರ್ಯತಂತ್ರದ ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಆರ್ಥಿಕ ಭದ್ರತೆಯ ಕುರಿತು ಸಂವಾದವನ್ನು ಪ್ರಾರಂಭಿಸಿದ್ದನ್ನು ಅವರು ಶ್ಲಾಘಿಸಿದರು. ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರಗಳ ಜೊತೆಗೆ ಕಾರ್ಯತಂತ್ರದ ವಲಯಗಳಲ್ಲಿ ದೃಢವಾದ ಫಲಿತಾಂಶಗಳು ಮತ್ತು ಯೋಜನೆಗಳನ್ನು ಗುರುತಿಸುವ ದೃಷ್ಟಿಯಿಂದ ಆರ್ಥಿಕ ಭದ್ರತೆಯ ಕುರಿತು ನೀತಿ ಮಟ್ಟದ ವಿನಿಮಯವನ್ನು ವೇಗಗೊಳಿಸಲು ಇಬ್ಬರು ಪ್ರಧಾನಮಂತ್ರಿಗಳು ತಮ್ಮ ವಿದೇಶಾಂಗ ಸಚಿವಾಲಯಗಳಿಗೆ ಜವಾಬ್ದಾರಿ ವಹಿಸಿದರು. ಈ ಸಂದರ್ಭದಲ್ಲಿ, ರಫ್ತು ನಿಯಂತ್ರಣ ಸವಾಲುಗಳನ್ನು ಪರಸ್ಪರ ಸರಾಗಗೊಳಿಸುವ ಮೂಲಕ ಉನ್ನತ ತಂತ್ರಜ್ಞಾನ ವ್ಯಾಪಾರವನ್ನು ಮತ್ತಷ್ಟು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎರಡೂ ಕಡೆಯವರು ಸಮ್ಮತಿಸಿದರು. ಕಾರ್ಯತಂತ್ರದ ವಲಯಗಳಲ್ಲಿ ನಡೆಯುತ್ತಿರುವ ಕೆಲವು ಸಹಯೋಗವನ್ನು ವಿವರಿಸುವ ಆರ್ಥಿಕ ಭದ್ರತಾ ವಸ್ತುಸ್ಥಿತಿ ಪಟ್ಟಿ (ಫ್ಯಾಕ್ಟ್‌ಶೀಟ್) ಯನ್ನು ಎರಡೂ ಕಡೆಯವರು ಬಿಡುಗಡೆ ಮಾಡಿದರು. ಭಾರತೀಯ ಮತ್ತು ಜಪಾನೀ ಕಂಪನಿಗಳನ್ನು ಪೂರೈಕೆ ಸರಪಳಿ ವೈವಿಧ್ಯೀಕರಣ ಮತ್ತು ಸ್ಥಿತಿಸ್ಥಾಪಕತ್ವದ ಕಡೆಗೆ ಸಾಗುವಂತೆ ಪ್ರೋತ್ಸಾಹಿಸಲು ಆರ್ಥಿಕ ಭದ್ರತೆಯ ಕ್ಷೇತ್ರದಲ್ಲಿ ವ್ಯವಹಾರದಿಂದ ವ್ಯವಹಾರಕ್ಕೆ ಸಹಕಾರವನ್ನು ಉತ್ತೇಜಿಸುವ ಉಪಕ್ರಮಗಳನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ವ್ಯಾಪಾರ ಅವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತೇಜಿಸಲು ಎರಡೂ ಕಡೆಯವರ ನಡುವೆ ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು.
ಡಿಜಿಟಲ್ ಪ್ರತಿಭಾ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮಗಳು ಮತ್ತು ಕಾರ್ಪೊರೇಟ್ ಪಾಲುದಾರಿಕೆಗಳ ಮೂಲಕ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಸಹಯೋಗವನ್ನು ಉತ್ತೇಜಿಸುವ ಭಾರತ-ಜಪಾನ್ ಡಿಜಿಟಲ್ ಪಾಲುದಾರಿಕೆ ಅಡಿಯಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಇಬ್ಬರೂ ಪ್ರಧಾನಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಡಿಜಿಟಲ್ ಕ್ರಾಂತಿಯ ಮುಂದಿನ ಹಂತಕ್ಕೆ ಸಹಕಾರವನ್ನು ಹೆಚ್ಚಿಸುವ ಭಾರತ-ಜಪಾನ್ ಡಿಜಿಟಲ್ ಪಾಲುದಾರಿಕೆ 2.0 ವನ್ನು ಅವರು ಸ್ವಾಗತಿಸಿದರು. ಬೃಹತ್ ಭಾಷಾ ಮಾದರಿಗಳು (LLM ಗಳು) ಸೇರಿದಂತೆ ಕೃತಕ ಬುದ್ಧಿಮತ್ತೆಯ ಮೇಲೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಆಳಗೊಳಿಸುವ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ವಿನಿಮಯಕ್ಕಾಗಿ ವೇದಿಕೆಗಳನ್ನು ಸ್ಥಾಪಿಸುವ, ಜಂಟಿ ಸಂಶೋಧನಾ ಯೋಜನೆಗಳನ್ನು ಬೆಂಬಲಿಸುವ ಮತ್ತು ಭಾರತದಲ್ಲಿ ಡೇಟಾ ಕೇಂದ್ರಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಜಪಾನ್-ಭಾರತ ಕೃತಕ ಬುದ್ಧಿಮತ್ತೆ (ಎ.ಐ.) ಸಹಕಾರ ಉಪಕ್ರಮವನ್ನು ಪ್ರಾರಂಭಿಸುವುದಾಗಿಯೂ ಇಬ್ಬರು ಪ್ರಧಾನಮಂತ್ರಿಗಳು ಘೋಷಿಸಿದರು. 2026 ರ ಫೆಬ್ರವರಿ 19-20, ರಂದು ಭಾರತ ಆಯೋಜಿಸಲಿರುವ ಎ.ಐ. ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಇಶಿಬಾ ಅವರಿಗೆ ಆಹ್ವಾನ ನೀಡಿದರು. ಇದಲ್ಲದೆ, ಇಬ್ಬರೂ ಪ್ರಧಾನಮಂತ್ರಿಗಳು ನವೋದ್ಯಮಗಳಿಗೆ ಬೆಂಬಲದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಜಪಾನ್-ಭಾರತ ನವೋದ್ಯಮ ಬೆಂಬಲ ಉಪಕ್ರಮ (ಜಿಸ್ಸಿ-JISSI) ಸೇರಿದಂತೆ ಭಾರತದಲ್ಲಿ ಎರಡೂ ದೇಶಗಳ ನವೋದ್ಯಮಗಳ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕೆ ಸಮ್ಮತಿಸಿದರು.
ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಮತ್ತು ಕಡಲ ಭದ್ರತಾ ಸಹಕಾರವು ಅತ್ಯುತ್ತಮ ಪ್ರಗತಿ ಪಥದಲ್ಲಿದೆ ಎಂದು ಇಬ್ಬರೂ ಪ್ರಧಾನಮಂತ್ರಿಗಳು ತೀವ್ರ ತೃಪ್ತಿ ವ್ಯಕ್ತಪಡಿಸಿದರು. 2024 ರ ಆಗಸ್ಟ್ ನಲ್ಲಿ ಹೊಸದಿಲ್ಲಿಯಲ್ಲಿ ತಮ್ಮ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮೂರನೇ 2+2 ಸಭೆಯನ್ನು ನಡೆಸುವುದನ್ನು ಅವರು ಸ್ವಾಗತಿಸಿದರು ಮತ್ತು ಟೋಕಿಯೊದಲ್ಲಿ ನಾಲ್ಕನೇ ಸುತ್ತಿನ ಸಭೆಯನ್ನು ಆದಷ್ಟು ಬೇಗ ನಡೆಸುವಂತೆ ತಮ್ಮ ಸಚಿವರಿಗೆ ಸೂಚಿಸಿದರು. 2022ರ ಮಾರ್ಚ್ ನಲ್ಲಿ ನಡೆದ ಕೊನೆಯ ಶೃಂಗಸಭೆಯ ನಂತರ ಸೇವೆಗಳ ನಡುವಿನ ವಿನಿಮಯದ ಬಗ್ಗೆ ಅವರು ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಭಾರತ ಆಯೋಜಿಸಿದ್ದ ಬಹುಪಕ್ಷೀಯ ವ್ಯಾಯಾಮವಾದ ಮಿಲನ್ ಕವಾಯತಿನಲ್ಲಿ ಜಪಾನ್ ಸಾಗರ ಸ್ವರಕ್ಷಣಾ ಪಡೆ (ಜೆ.ಎಂ.ಎಸ್.ಡಿ.ಎಫ್) ಭಾಗವಹಿಸುವುದನ್ನು ಮತ್ತು ಭಾರತೀಯ ವಾಯುಪಡೆ ಆಯೋಜಿಸಿದ್ದ ಮೊದಲ ಬಹುಪಕ್ಷೀಯ ವ್ಯಾಯಾಮವಾದ ತರಂಗ್ ಶಕ್ತಿ ಕವಾಯತಿನಲ್ಲಿ ಜಪಾನಿನ ತಂಡದ ಭಾಗವಹಿಸುವಿಕೆಯನ್ನು ಅವರು ಸ್ವಾಗತಿಸಿದರು. ಜಪಾನ್ ವಾಯು ಸ್ವರಕ್ಷಣಾ ಪಡೆ (ಜೆ.ಎ.ಎಸ್.ಡಿ.ಎಫ್.) ಮತ್ತು ಭಾರತೀಯ ವಾಯುಪಡೆ (ಐ.ಎ.ಎಫ್) ನಡುವಿನ ದ್ವಿಪಕ್ಷೀಯ ಯುದ್ಧ ವ್ಯಾಯಾಮ 'ವೀರ್ ಗಾರ್ಡಿಯನ್ 2023' ರ ಉದ್ಘಾಟನಾ ಆವೃತ್ತಿಯನ್ನು ಮತ್ತು 2023 ರಲ್ಲಿ ಮೊದಲ ಬಾರಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಮೂರೂ ಸೇನಾ ಪಡೆಗಳ ದ್ವಿಪಕ್ಷೀಯ ವ್ಯಾಯಾಮಗಳನ್ನು ನಡೆಸಿರುವುದನ್ನು ಅವರು ಸ್ವಾಗತಿಸಿದರು. ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಯೋಗವನ್ನು ಅವರು ಒಪ್ಪಿಕೊಂಡರು ಮತ್ತು ಎರಡೂ ಕಡೆಯ ಕಾರ್ಯಾಚರಣೆಯ ವಿಧಾನಗಳನ್ನು ಪರಿಣಾಮಕಾರಿಯಾಗಿ ಬೆಂಬಲಿಸಲು ಭವಿಷ್ಯದಲ್ಲಿ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸುವುದರ ಜೊತೆಗೆ ನಡೆಯುತ್ತಿರುವ ಸಹಯೋಗದ ಮೂಲಕ ಭದ್ರವಾದ ಫಲಿತಾಂಶಗಳನ್ನು ಸಾಧ್ಯವಾದಷ್ಟು ಬೇಗ ಕಾರ್ಯಗತಗೊಳಿಸಲು ಎರಡೂ ಕಡೆಯ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಪ್ರಮುಖ ಆಧಾರಸ್ತಂಭವಾಗಿ ಆರ್ಥಿಕ ಸಹಕಾರದ ಮಹತ್ವವನ್ನು ಒಪ್ಪಿಕೊಂಡ ಇಬ್ಬರೂ ಪ್ರಧಾನಮಂತ್ರಿಗಳು, 2022 ರಿಂದ ಐದು ವರ್ಷಗಳಲ್ಲಿ ಜಪಾನ್‌ನಿಂದ ಭಾರತಕ್ಕೆ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಮತ್ತು ಹಣಕಾಸು ಕ್ಷೇತ್ರದಲ್ಲಿ 5 ಟ್ರಿಲಿಯನ್ ಯೆನ್‌ಗಳ ಗುರಿಯತ್ತ ಸಾಧಿಸಿದ ಪ್ರಗತಿಯನ್ನು ಸ್ವಾಗತಿಸಿದರು. ಭಾರತದಲ್ಲಿ ಜಪಾನಿನ ಹೂಡಿಕೆದಾರರಿಗೆ ವ್ಯಾಪಾರ ವಾತಾವರಣವನ್ನು ಸುಧಾರಿಸಲು ಭಾರತ ತೆಗೆದುಕೊಂಡ ಕ್ರಮಗಳು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಾಗು ವ್ಯವಹಾರಕ್ಕೆ ಅನುಕೂಲಕರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಸೇರಿದಂತೆ ಇತರ ಕ್ರಮಗಳನ್ನು ಗಮನಿಸಿದ ಉಭಯ ಪ್ರಧಾನಮಂತ್ರಿಗಳು, ಜಪಾನ್‌ನಿಂದ ಭಾರತದಲ್ಲಿ ಖಾಸಗಿ ಹೂಡಿಕೆಯಲ್ಲಿ 10 ಟ್ರಿಲಿಯನ್ ಯೆನ್‌ಗಳ ಹೊಸ ಗುರಿಯನ್ನು ನಿಗದಿಪಡಿಸಿದರು. ಭಾರತದಲ್ಲಿ ಜಪಾನಿನ ಕಂಪನಿಗಳಿಗೆ ತಮ್ಮ ಪೂರೈಕೆ ಸರಪಳಿಗಳನ್ನು ಆಳಗೊಳಿಸಲು ಇರುವ ಅಪಾರ ಸಾಧ್ಯತೆಗಳನ್ನು ಪ್ರಧಾನಮಂತ್ರಿ ಇಶಿಬಾ ಗುರುತಿಸಿದರು ಮತ್ತು ಈ ಉದ್ದೇಶವನ್ನು ಪೂರೈಸಲು ಭಾರತವು ತನ್ನ ನಿಯಂತ್ರಕ ಮತ್ತು ಇತರ ಸುಧಾರಣೆಗಳನ್ನು ಮುಂದುವರಿಸಬೇಕೆಂದು ವಿನಂತಿಸಿದರು. ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ಭಾರತದಲ್ಲಿ ಬೆಳವಣಿಗೆ ಹಾಗು ನಾವೀನ್ಯತೆಯನ್ನು ಬೆಳೆಸುವಲ್ಲಿ ಜಪಾನಿನ ಕಂಪನಿಗಳು ಮತ್ತು ಸಂಸ್ಥೆಗಳ ಕೊಡುಗೆಯನ್ನು ಪ್ರಧಾನಮಂತ್ರಿ ಮೋದಿ ಗುರುತಿಸಿದರು. ಭಾರತದಲ್ಲಿ ಹೂಡಿಕೆಯನ್ನು ಸುಗಮಗೊಳಿಸಲು ಹೆಚ್ಚುವರಿ ನಿಯಂತ್ರಕ ಮತ್ತು ಇತರ ಸುಧಾರಣೆಗಳನ್ನು ಕೈಗೊಳ್ಳುವ ತಮ್ಮ ಉದ್ದೇಶವನ್ನು ಅವರು ನೆನಪಿಸಿಕೊಂಡರು ಮತ್ತು ಇವುಗಳನ್ನು ಪಡೆಯಲು ಇನ್ನಷ್ಟು ಜಪಾನಿನ ವ್ಯವಹಾರೋದ್ಯಮಗಳನ್ನು ಆಹ್ವಾನಿಸಿದರು. ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ (ಐ.ಜೆ.ಐ.ಸಿ.ಪಿ) ಅಡಿಯಲ್ಲಿ ಜಪಾನ್ ಕೈಗಾರಿಕಾ ಪಟ್ಟಣಗಳನ್ನು (ಜೆ.ಐ.ಟಿ ಗಳು) ಬೆಂಬಲಿಸಲು ಮತ್ತು ಲಾಜಿಸ್ಟಿಕ್ಸ್, ಜವಳಿ, ಆಹಾರ ಸಂಸ್ಕರಣೆ, ಕೃಷಿ, ವಾಹನಗಳು, ಕೈಗಾರಿಕಾ ಬಂಡವಾಳ ಸರಕುಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ (ಎಂ.ಎಸ್.ಎಂ.ಇ ಗಳು) ಸಹಕಾರವನ್ನು ಬಲಪಡಿಸಲು ದ್ವಿಪಕ್ಷೀಯ ಪ್ರಯತ್ನಗಳನ್ನು ಅವರು ಅನುಮೋದಿಸಿದರು. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿ.ಇ.ಪಿ.ಎ) ಅನುಷ್ಠಾನದ ಪರಿಶೀಲನೆಯನ್ನು ಇನ್ನಷ್ಟು ತ್ವರಿತಗೊಳಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಮತ್ತು ವೈವಿಧ್ಯಗೊಳಿಸುವ ಅಗತ್ಯವನ್ನು ಇಬ್ಬರೂ ಪ್ರಧಾನಮಂತ್ರಿಗಳು ಗುರುತಿಸಿದರು.
ಕಳೆದ ದಶಕಗಳಲ್ಲಿ ಭಾರತಕ್ಕೆ ಜಪಾನ್ ನೀಡುತ್ತಿರುವ ಅಭಿವೃದ್ಧಿ ಸಹಕಾರ ಬೆಂಬಲವನ್ನು ಇಬ್ಬರೂ ಪ್ರಧಾನಮಂತ್ರಿಗಳು ತೃಪ್ತಿಯಿಂದ ಉಲ್ಲೇಖಿಸಿದರು. ಇದು ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹಾಗೂ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಗಣನೀಯ ಕೊಡುಗೆ ನೀಡಿದೆ. ಭಾರತದ ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ತಮ್ಮ ನಿರಂತರ ಬದ್ಧತೆಯನ್ನು ಅವರು ಪುನರುಚ್ಚರಿಸಿದರು, ಇದು ಈ ಪ್ರದೇಶದ ಆರ್ಥಿಕ ಸಮೃದ್ಧಿಗೆ ಕಾರಣವಾಗಿದೆ ಮತ್ತು ಅದನ್ನು ಮುನ್ನಡೆಸುತ್ತಿದೆ. ಜನತೆ ಮತ್ತು ಜನತೆಯ ನಡುವಿನ ಸಂಪರ್ಕವನ್ನು ಹೆಚ್ಚಿಸುವ ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಅವರು ಪುನರುಚ್ಚರಿಸಿದರು ಮತ್ತು ಹೀಗಾಗಿ, ಪ್ರಾದೇಶಿಕ ಪಾಲುದಾರರ ನಿಕಟ ಸಹಕಾರದೊಂದಿಗೆ ಆಕ್ಟ್ ಈಸ್ಟ್ ಫೋರಂ (ಎ.ಇ.ಎಫ್) ಮೂಲಕ ಈ ಪ್ರದೇಶದ ಅನೂಹ್ಯ ಸಾಮರ್ಥ್ಯವನ್ನು ಅನಾವರಣ ಮಾಡುವ ಬಗ್ಗೆ ಗಮನ ಸೆಳೆದರು.
ಭಾರತ ಮತ್ತು ಜಪಾನ್ ನಡುವಿನ ಪ್ರಮುಖ ಯೋಜನೆಯಾಗಿ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲಿನ ಮಹತ್ವವನ್ನು ಪ್ರಧಾನಮಂತ್ರಿಗಳು ಗಮನಿಸಿದರು. ಭಾರತದಲ್ಲಿ ಇತ್ತೀಚಿನ ಜಪಾನೀಸ್ ಶಿಂಕನ್ಸೆನ್ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಮತ್ತು ಸಹಕರಿಸಲು ಅವರು ಸಮ್ಮತಿಸಿದರು. 2030 ರ ದಶಕದ ಆರಂಭದಲ್ಲಿ, ಜಪಾನಿನ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಚಲಿಸುವ ಶಿಂಕನ್ಸೆನ್‌ನ ಇ 10 ಸರಣಿಯನ್ನು ಪರಿಚಯಿಸುವ ಜಪಾನ್‌ನ ಪ್ರಸ್ತಾಪವನ್ನು ಭಾರತದ ಕಡೆಯವರು ಶ್ಲಾಘಿಸಿದರು. ಈ ನಿಟ್ಟಿನಲ್ಲಿ, ಜಪಾನಿನ ವ್ಯವಸ್ಥೆ ಸೇರಿದಂತೆ ಸಿಗ್ನಲಿಂಗ್‌ನ ಆರಂಭಿಕ ಸ್ಥಾಪನೆಗೆ ಅಗತ್ಯವಾದ ಕೆಲಸವನ್ನು ತಕ್ಷಣ ಪ್ರಾರಂಭಿಸಲು ಹಾಗೂ ಸಾಮಾನ್ಯ ತಪಾಸಣೆ ರೈಲು (ಜಿ.ಐ.ಟಿ) ಮತ್ತು ಇ 5 ಸರಣಿಯ ಶಿಂಕನ್ಸೆನ್ ರೋಲಿಂಗ್ ಸ್ಟಾಕ್‌ನ ಒಂದು ಸೆಟ್ ಅನ್ನು ಪರಿಚಯಿಸಲು ಸಮ್ಮತಿಸಲಾಯಿತು.
2022 ರಲ್ಲಿ ಪ್ರಾರಂಭಿಸಲಾದ ಶುದ್ಧ ಇಂಧನ ಪಾಲುದಾರಿಕೆ ಮತ್ತು ದ್ವಿಪಕ್ಷೀಯ ಇಂಧನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ ಏಕಕಾಲದಲ್ಲಿ ಇಂಧನ ಭದ್ರತೆಯನ್ನು ಖಚಿತಪಡಿಸುವುದು, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಮಹತ್ವವನ್ನು ಒಪ್ಪಿಕೊಂಡ ಇಬ್ಬರೂ ಪ್ರಧಾನಮಂತ್ರಿಗಳು, ನಿವ್ವಳ-ಶೂನ್ಯ ಆರ್ಥಿಕತೆಯನ್ನು ಸಾಧಿಸಲು ಒಂದೇ ಮಾರ್ಗವಿಲ್ಲ, ಬದಲಿಗೆ ಪ್ರತಿ ದೇಶದ ರಾಷ್ಟ್ರೀಯ ಸಂದರ್ಭಗಳನ್ನು ಪ್ರತಿಬಿಂಬಿಸುವ ವಿವಿಧ ಮಾರ್ಗಗಳಿವೆ ಎಂಬ ತಮ್ಮ ಹಂಚಿಕೆಯ ಅಭಿಪ್ರಾಯವನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಜಂಟಿ ಕ್ರೆಡಿಟ್ ಮೆಕ್ಯಾನಿಸಂ (ಜೆ.ಸಿ.ಎಂ) ಮೇಲಿನ ಸಹಕಾರ ಒಡಂಬಡಿಕೆ ಹಾಗು ಶುದ್ಧ ಹೈಡ್ರೋಜನ್ ಮತ್ತು ಅಮೋನಿಯಾಕ್ಕೆ ಸಂಬಂಧಿಸಿದ ಜಂಟಿ ಉದ್ದೇಶದ ಘೋಷಣೆಗೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು.
ಜನರಿಂದ ಜನರಿಗೆ ಸಂಪರ್ಕ ಕ್ಷೇತ್ರದಲ್ಲಿ, ಇಬ್ಬರೂ ಪ್ರಧಾನಮಂತ್ರಿಗಳು ಮಾನವ ಸಂಪನ್ಮೂಲವನ್ನು ನೀಡುವಲ್ಲಿ ಆರ್ಥಿಕವಾಗಿ ಪ್ರಯೋಜನಕಾರಿ ಪೂರಕ ಅಂಶಗಳನ್ನು ಬಳಸಿಕೊಳ್ಳುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು, ಇದು ಜನರಿಂದ ಜನರಿಗೆ ವಿನಿಮಯದ ಹೊಸ ಅಲೆಯನ್ನು ಸೃಷ್ಟಿಸುತ್ತದೆ. ಜಪಾನ್‌ನ ಕ್ಯುಶು ಪ್ರದೇಶ ಮತ್ತು ಭಾರತದ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಫುಕುವೋಕಾದಲ್ಲಿ ಭಾರತೀಯ ದೂತಾವಾಸವನ್ನು ತೆರೆಯುವುದನ್ನು ಅವರು ಸ್ವಾಗತಿಸಿದರು. ನಿಹೊಂಗೊ ಪಾಲುದಾರರ ಕಾರ್ಯಕ್ರಮ ಮತ್ತು 360 ಗಂಟೆಗಳ ಶಿಕ್ಷಕರ ತರಬೇತಿ ಕೋರ್ಸ್ ಮೂಲಕ ಭಾರತದಲ್ಲಿ ಜಪಾನೀ ಭಾಷಾ ಶಿಕ್ಷಣದಲ್ಲಿ ಆಗಿರುವ ಪ್ರಗತಿಯನ್ನು ಅವರು ಶ್ಲಾಘಿಸಿದರು. ಜಪಾನ್-ಭಾರತ ಉತ್ಪಾದನಾ ಸಂಸ್ಥೆಗಳು ಮತ್ತು ಜಪಾನೀ ದತ್ತಿ ಕೋರ್ಸ್‌ಗಳ ಸಾಧನೆಗಳ ಮೇಲೆ ಮುನ್ನಡೆಯುವ ತಮ್ಮ ಹಂಚಿಕೆಯ ಸಂಕಲ್ಪವನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು, 2016 ರಲ್ಲಿ ಅವು ಪ್ರಾರಂಭವಾದಾಗಿನಿಂದ, ಜಪಾನಿನ ಉತ್ಪಾದನೆ ಮತ್ತು ನಿರ್ವಹಣಾ ಕೌಶಲ್ಯಗಳಲ್ಲಿ ಪ್ರವೀಣರಾದ 30,000 ಜನರ ಪ್ರತಿಭಾ ಪೈಪ್‌ಲೈನ್ ರಚಿಸಲಾಗಿದೆ. ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಪ್ರವಾಸಿ ಹರಿವಿನಲ್ಲಿ ಪರಸ್ಪರರ ದೇಶ ಮತ್ತು ಸಂಸ್ಕೃತಿಯನ್ನು ಅನ್ವೇಷಿಸಲು ಭಾರತ ಮತ್ತು ಜಪಾನ್‌ನ ಜನರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ತೃಪ್ತಿಯಿಂದ ಗಮನಿಸಿದರು. "ಹಿಮಾಲಯವನ್ನು ಮೌಂಟ್ ಫ್ಯೂಜಿಯೊಂದಿಗೆ ಸಂಪರ್ಕಿಸುವುದು" ಎಂಬ ಶೀರ್ಷಿಕೆ ಅಡಿಯಲ್ಲಿ ಭಾರತ-ಜಪಾನ್ ಪ್ರವಾಸೋದ್ಯಮ ವಿನಿಮಯ ವರ್ಷ (ಏಪ್ರಿಲ್ 2023-ಮಾರ್ಚ್ 2025) ಆಚರಣೆಯನ್ನು ಯಶಸ್ವಿಯಾಗಿಸಿದ್ದಕ್ಕಾಗಿ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಎರಡೂ ದೇಶಗಳ ನಡುವಿನ ಶತಮಾನಗಳಷ್ಟು ಹಳೆಯ ನಾಗರಿಕತೆಯ ಸಂಪರ್ಕಗಳನ್ನು ಉಲ್ಲೇಖಿಸುತ್ತ ಈ ಕ್ಷೇತ್ರದಲ್ಲಿ ಪ್ರವಾಸೋದ್ಯಮ ವಿನಿಮಯವನ್ನು ಉತ್ತೇಜಿಸಲು ನಾಯಕರು ಸಮ್ಮತಿಸಿದರು.
2025ನೇ ವರ್ಷವನ್ನು ಭಾರತ-ಜಪಾನ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ವಿನಿಮಯ ವರ್ಷವೆಂದು ಆಚರಿಸಲಾಗುತ್ತಿರುವುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಸಂತೋಷದಿಂದ ಉಲ್ಲೇಖಿಸಿದರು. ಇದು ಎರಡೂ ದೇಶಗಳ ನಡುವೆ ಸಹಿ ಹಾಕಲಾದ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಮೊದಲ ಒಪ್ಪಂದದ 40 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಶೈಕ್ಷಣಿಕ ಸಂಸ್ಥೆಗಳ ನಡುವಿನ ಜಂಟಿ ಸಂಶೋಧನಾ ಸಹಯೋಗಗಳು, ಎರಡೂ ದೇಶಗಳ ವಿಜ್ಞಾನಿಗಳು ಮತ್ತು ಸಂಶೋಧಕರ ವಿನಿಮಯ ಭೇಟಿಗಳು ಮತ್ತು ಲೋಟಸ್ (ಎಲ್.ಒ.ಟಿ.ಯು.ಎಸ್) ಕಾರ್ಯಕ್ರಮ ಮತ್ತು ಸಕುರಾ ವಿಜ್ಞಾನ ವಿನಿಮಯ ಕಾರ್ಯಕ್ರಮದ ಸಹಯೋಗದೊಂದಿಗೆ ಜಪಾನಿನ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಮೂಲಕ ಹೊಸದಾಗಿ ಪ್ರಾರಂಭಿಸಲಾದ ಉದ್ಯಮ-ಶೈಕ್ಷಣಿಕ ಸಹಯೋಗಗಳನ್ನು ಅವರು ಸ್ವಾಗತಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಜಪಾನ್ ಏರೋಸ್ಪೇಸ್ ಪರಿಶೋಧನಾ ಸಂಸ್ಥೆಯ ನಡುವಿನ ಚಂದ್ರ ಧ್ರುವ ಪರಿಶೋಧನೆ (ಎಲ್.ಯು.ಪಿ.ಇ.ಎಕ್ಸ್) ಕಾರ್ಯಾಚರಣೆಯಲ್ಲಿ ಆಗಿರುವ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ತೃಪ್ತಿಯಿಂದ ಗಮನಿಸಿದರು. ತ್ಸುಕುಬಾದ ಕೆಇಕೆಯಲ್ಲಿ ಭಾರತೀಯ ಬೀಮ್‌ಲೈನ್‌ನಲ್ಲಿ ಇತ್ತೀಚೆಗೆ ತಿಳುವಳಿಕಾ ಒಡಂಬಡಿಕೆಯನ್ನು ಇನ್ನೂ ಆರು ವರ್ಷಗಳ ಕಾಲ ವಿಸ್ತರಿಸಿರುವುದನ್ನು ಅವರು ಸ್ವಾಗತಿಸಿದರು. 2025ರ ಜೂನ್ 5 ರಂದು ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರದ 11 ನೇ ಜಂಟಿ ಸಮಿತಿ ಸಭೆಯಲ್ಲಿನ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಶ್ಲಾಘಿಸಿದರು - ವಿಶೇಷವಾಗಿ ಕ್ವಾಂಟಮ್ ತಂತ್ರಜ್ಞಾನ, ಸ್ವಚ್ಛ ತಂತ್ರಜ್ಞಾನ, ವಿಪತ್ತು ನಿರ್ವಹಣೆ, ಜೈವಿಕ ತಂತ್ರಜ್ಞಾನ ಮತ್ತು ಭೂ-ಪ್ರಾದೇಶಿಕ ತಂತ್ರಜ್ಞಾನಗಳಂತಹ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳ ಪ್ರಗತಿಯನ್ನು ಶ್ಲಾಘಿಸಿದರು.
ಪ್ರಾದೇಶಿಕ ಸಂಪರ್ಕಗಳು ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಜನರ ನಡುವಿನ ಸಂಪರ್ಕಗಳನ್ನು ಗಾಢವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಗುರುತಿಸಿದ ಪ್ರಧಾನಮಂತ್ರಿಗಳು, ಆಂಧ್ರಪ್ರದೇಶ ಮತ್ತು ಟೊಯಾಮಾ, ತಮಿಳುನಾಡಿನ ಎಹಿಮಾ ಮತ್ತು ಉತ್ತರ ಪ್ರದೇಶ ಮತ್ತು ಯಮನಾಶಿ, ಗುಜರಾತ್ ಮತ್ತು ಶಿಜುವೊಕಾ ನಡುವೆ ಇತ್ತೀಚೆಗೆ ಸ್ಥಾಪಿಸಲಾದ ರಾಜ್ಯ-ಪ್ರಿಫೆಕ್ಚರ್ (ಪ್ರಾಂತ್ಯ) ಪಾಲುದಾರಿಕೆಗಳನ್ನು ಹಾಗೂ ಕನ್ಸೈ ಪ್ರದೇಶದಲ್ಲಿ ಪ್ರಾದೇಶಿಕ ಪಾಲುದಾರಿಕೆಯಲ್ಲಿ ಭಾರತದೊಂದಿಗೆ ವ್ಯಾಪಾರ ವಿನಿಮಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕನ್ಸೈ ಸಮನ್ವಯ ಸಭೆಯನ್ನು ಸ್ವಾಗತಿಸಿದರು. ಕನ್ಸೈ, ಒಸಾಕಾದಲ್ಲಿ ನಡೆಯುತ್ತಿರುವ ಎಕ್ಸ್‌ಪೋ 2025 ಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಇಶಿಬಾ ಅವರನ್ನು ಅಭಿನಂದಿಸಿದರು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯ-ಪ್ರಿಫೆಕ್ಚರ್ ಪಾಲುದಾರಿಕೆಗಳಿಗೆ ಅಗಾಧವಾದ ತ್ವರಿತಗತಿಯನ್ನು ನೀಡಿರುವ ಎಕ್ಸ್‌ಪೋದಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆಗೆ ಜಪಾನ್ ನೀಡಿದ ಬೆಂಬಲವನ್ನು ಶ್ಲಾಘಿಸಿದರು. ಯೊಕೊಹಾಮಾದಲ್ಲಿ ನಡೆಯಲಿರುವ ಗ್ರೀನ್ ಎಕ್ಸ್ ಎಕ್ಸ್‌ಪೋ 2027 ರಲ್ಲಿ ಭಾರತದ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿ ಇಶಿಬಾ ಸ್ವಾಗತಿಸಿದರು.
ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಇಬ್ಬರೂ ಪ್ರಧಾನಮಂತ್ರಿಗಳು ಕಾನೂನಿನ ನಿಯಮದ ಆಧಾರದ ಮೇಲೆ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯಲು ನಿರ್ಧರಿಸಿದರು ಮತ್ತು ಶಾಂತಿಯುತ, ಸಮೃದ್ಧ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿರುವ ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್‌ಗೆ ತಮ್ಮ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಾಯೋಗಿಕ/ಅನುಷ್ಠಾನಕ್ಕೆ ತರಬಹುದಾದ ಯೋಜನೆಗಳ ಮೂಲಕ ಸ್ಪಷ್ಟ ಪ್ರಯೋಜನಗಳನ್ನು ಒದಗಿಸಿದಾಗ ಸಾಧ್ಯವಾಗುವ ಪ್ರದೇಶದ ಆರ್ಥಿಕ ಅಭಿವೃದ್ಧಿ ಮತ್ತು ಸಮೃದ್ಧಿಗೆ ಅವರು ತಮ್ಮ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು. ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಕ್ವಾಡ್‌ನಂತಹ ಬಹುಪಕ್ಷೀಯ ಚೌಕಟ್ಟುಗಳ ಮೂಲಕ ಸಮಾನ ಮನಸ್ಕ ದೇಶಗಳ ನಡುವೆ ಸಹಕಾರವನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಕ್ವಾಡ್ ಒಂದು ಪ್ರಮುಖ ಮತ್ತು ಶಾಶ್ವತ ಪ್ರಾದೇಶಿಕ ಗುಂಪಾಗಿ ವಿಕಸನಗೊಳ್ಳುವುದನ್ನು ಅವರು ಸ್ವಾಗತಿಸಿದರು ಮತ್ತು ಈ ವರ್ಷದ ಕೊನೆಯಲ್ಲಿ ಭಾರತ ಆಯೋಜಿಸುವ ಮುಂದಿನ ಕ್ವಾಡ್ ನಾಯಕರ ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. .
ಪೂರ್ವ ಚೀನಾ ಸಮುದ್ರ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಪರಿಸ್ಥಿತಿಯ ಬಗ್ಗೆ ಇಬ್ಬರೂ ಪ್ರಧಾನಮಂತ್ರಿಗಳು ಗಂಭೀರ ಕಳವಳ ವ್ಯಕ್ತಪಡಿಸಿದರು. ಸುರಕ್ಷತೆ ಹಾಗೂ ನೌಕಾಯಾನ ಮತ್ತು ವಾಯುಯಾನ ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟುಮಾಡುವ ಯಾವುದೇ ಏಕಪಕ್ಷೀಯ ಕ್ರಮಗಳಿಗೆ ಮತ್ತು ಬಲವಂತದಿಂದ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದಕ್ಕೆ ಅವರು ತಮ್ಮ ಬಲವಾದ ವಿರೋಧವನ್ನು ಪುನರುಚ್ಚರಿಸಿದರು. ವಿವಾದಿತ ಸ್ಥಳಗಳ ಮಿಲಿಟರೀಕರಣದ ಬಗ್ಗೆ ಅವರು ತಮ್ಮ ಗಂಭೀರ ಕಳವಳವನ್ನು ಹಂಚಿಕೊಂಡರು. ಸಮುದ್ರ ವಿವಾದಗಳನ್ನು ಶಾಂತಿಯುತವಾಗಿ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ವಿಶೇಷವಾಗಿ ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಸಮಾವೇಶ (ಯು.ಎನ್.ಸಿ.ಎಲ್.ಒ.ಎಸ್) ಕ್ಕೆ ಅನುಗುಣವಾಗಿ ಪರಿಹರಿಸಬೇಕು ಎಂಬುದನ್ನೂ ಅವರು ಪುನರುಚ್ಚರಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸುತ್ತಿರುವ ಅಸ್ಥಿರಗೊಳಿಸುವ ಉಡಾವಣೆಗಳನ್ನು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬಹು ನಿರ್ಣಯಗಳನ್ನು (ಯು.ಎನ್.ಎಸ್.ಸಿ.ಆರ್ ಗಳು) ಉಲ್ಲಂಘಿಸಿ ನಿರಂತರವಾಗಿ ಮಾಡಲಾಗುತ್ತಿರುವ ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆಯನ್ನು ಖಂಡಿಸಿದರು. ಸಂಬಂಧಿತ ಯು.ಎನ್.ಎಸ್.ಸಿ.ಆರ್. ಗಳಿಗೆ ಅನುಗುಣವಾಗಿ ಉತ್ತರ ಕೊರಿಯಾದ ಸಂಪೂರ್ಣ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಅವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಯು.ಎನ್.ಎಸ್.ಸಿ.ಆರ್. ಗಳ ಅಡಿಯಲ್ಲಿ ಉತ್ತರ ಕೊರಿಯಾ ತನ್ನ ಎಲ್ಲಾ ಬಾಧ್ಯತೆಗಳನ್ನು ಪಾಲಿಸಬೇಕೆಂದು ಒತ್ತಾಯಿಸಿದರು. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಉತ್ತರ ಕೊರಿಯಾ ಮಾತುಕತೆಗೆ ಮರಳಬೇಕೆಂದು ಅವರು ಕರೆ ನೀಡಿದರು. ಈ ಪ್ರದೇಶ ಮತ್ತು ಅದರಾಚೆಗೆ ಉತ್ತರ ಕೊರಿಯಾಕ್ಕೆ ಮತ್ತು ಅಲ್ಲಿಂದ ಪರಮಾಣು ಮತ್ತು ಕ್ಷಿಪಣಿ ತಂತ್ರಜ್ಞಾನಗಳ ಪ್ರಸರಣದ ಬಗ್ಗೆ ನಿರಂತರ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಉತ್ತರ ಕೊರಿಯಾಕ್ಕೆ ರಫ್ತು ಅಥವಾ ಉತ್ತರ ಕೊರಿಯಾದಿಂದ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಸಂಬಂಧಿತ ಸಾಮಗ್ರಿಗಳನ್ನು ಖರೀದಿಸುವುದನ್ನು ನಿಷೇಧಿಸುವುದು ಸೇರಿದಂತೆ ನಿರ್ಬಂಧಗಳನ್ನು ಜಾರಿಗೆ ತರಲು ಯು.ಎನ್.ಎಸ್.ಸಿ.ಆರ್. ಗಳ ಅಡಿಯಲ್ಲಿ ತಮ್ಮ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಪಾಲಿಸಬೇಕೆಂದು ಅವರು ಎಲ್ಲಾ ವಿಶ್ವಸಂಸ್ಥೆ (UN ) ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದರು. ಅಪಹರಣ ಸಮಸ್ಯೆಗೆ ತಕ್ಷಣದ ಪರಿಹಾರದ ಅಗತ್ಯವನ್ನು ಅವರು ಪುನರುಚ್ಚರಿಸಿದರು.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಇಬ್ಬರೂ ಪ್ರಧಾನಮಂತ್ರಿಗಳು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದರು. 2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದರು ಮತ್ತು ಜುಲೈ 29 ರಂದು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿ.ಆರ್.ಎಫ್) ಅನ್ನು ಉಲ್ಲೇಖಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲ್ವಿಚಾರಣಾ ತಂಡದ ವರದಿಯನ್ನು ಗಮನಿಸಿದರು. ಪ್ರಧಾನಮಂತ್ರಿ ಮೋದಿ ಮತ್ತಷ್ಟು ವಿವರಿಸಿ ಟಿ.ಆರ್.ಎಫ್. ( ಟಿ.ಆರ್.ಎಫ್) ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಎಂದರು. ಪ್ರಧಾನಮಂತ್ರಿ ಇಶಿಬಾ ಇದನ್ನು ಕಳವಳದಿಂದ ಗಮನಿಸಿದರು. ಈ ಖಂಡನೀಯ ಕೃತ್ಯದ ಅಪರಾಧಿಗಳು, ಸಂಘಟಕರು ಮತ್ತು ಹಣಕಾಸು ಒದಗಿಸುವವರನ್ನು ಯಾವುದೇ ವಿಳಂಬವಿಲ್ಲದೆ ನ್ಯಾಯದ ವ್ಯಾಪ್ತಿಗೆ ತರಬೇಕೆಂದು ಅವರು ಕರೆ ನೀಡಿದರು. ಅಲ್ ಖೈದಾ, ಐಸಿಸ್/ದಾಯಿಶ್, ಲಷ್ಕರ್-ಎ-ತಯ್ಯಿಬಾ (ಎಲ್.ಇ.ಟಿ), ಜೈಶ್-ಎ-ಮೊಹಮ್ಮದ್ (ಜೆ.ಇ.ಎಂ) ಮತ್ತು ಅವರ ಪ್ರಾಕ್ಸಿಗಳು ಸೇರಿದಂತೆ ಎಲ್ಲಾ ಯು.ಎನ್-ಪಟ್ಟಿಯಲ್ಲಿರುವ ಭಯೋತ್ಪಾದಕ ಗುಂಪುಗಳು ಮತ್ತು ಘಟಕಗಳ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು ಮತ್ತು ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ಬೇರುಸಹಿತ ನಿರ್ಮೂಲನೆ ಮಾಡಲು, ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಮಾರ್ಗಗಳನ್ನು ಮತ್ತು ಅಂತರರಾಷ್ಟ್ರೀಯ ಅಪರಾಧಗಳೊಂದಿಗೆ ಅದರ ಸಂಬಂಧವನ್ನು ತೊಡೆದುಹಾಕಲು ಹಾಗು ಭಯೋತ್ಪಾದಕರ ಗಡಿಯಾಚೆಗಿನ ಚಲನೆಯನ್ನು ನಿಲ್ಲಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್ (ಎಫ್.ಒ.ಐ.ಪಿ) ಮತ್ತು ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ (ಐ.ಪಿ.ಒ.ಐ) ನಡುವಿನ ನಿಕಟ ಸಹಕಾರವನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಆಸಿಯಾನ್‌ನ ಏಕತೆ ಮತ್ತು ಕೇಂದ್ರೀಯತೆಗೆ ತಮ್ಮ ಬಲವಾದ ಬೆಂಬಲವನ್ನು ಮತ್ತು "ಇಂಡೋ-ಪೆಸಿಫಿಕ್ (ಎ.ಒ.ಐ.ಪಿ) ಕುರಿತಾದ ಆಸಿಯಾನ್ ದೃಷ್ಟಿಕೋನ"ಕ್ಕೆ ತಮ್ಮ ಅಚಲ ಬೆಂಬಲವನ್ನು ಅವರು ಪುನರುಚ್ಚರಿಸಿದರು.
ಮ್ಯಾನ್ಮಾರ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ಅದರ ಪರಿಣಾಮ, ಜನರ ಸ್ಥಳಾಂತರ ಮತ್ತು ಅಂತರರಾಷ್ಟ್ರೀಯ ಅಪರಾಧಗಳ ಹೆಚ್ಚಳದ ಬಗ್ಗೆ ಇಬ್ಬರೂ ಪ್ರಧಾನಮಂತ್ರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷಗಳು ತಕ್ಷಣವೇ ಎಲ್ಲಾ ಹಿಂಸಾಚಾರಗಳನ್ನು ನಿಲ್ಲಿಸುವಂತೆ ಅವರು ಕರೆ ನೀಡಿದರು. ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸುವ ಇತ್ತೀಚಿನ ಘೋಷಣೆ ಮತ್ತು ಚುನಾವಣೆ ನಡೆಸುವ ಯೋಜನೆಗಳನ್ನು ಇಬ್ಬರೂ ಪ್ರಧಾನಮಂತ್ರಿಗಳು ಗಮನಿಸಿದರು. ಎಲ್ಲಾ ಪಾಲುದಾರರ ನಡುವೆ ಸಮಗ್ರ ಸಂವಾದ ಮತ್ತು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಅವಕಾಶ ನೀಡುವ ಪ್ರಜಾಪ್ರಭುತ್ವದ ಹಾದಿಗೆ ಮರಳಬೇಕೆಂದು ಇಬ್ಬರು ಪ್ರಧಾನಮಂತ್ರಿಗಳು ಬಲವಾಗಿ ಒತ್ತಾಯಿಸಿದರು ಮತ್ತು ಬಂಧನಕ್ಕೊಳಗಾದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಬಿಕ್ಕಟ್ಟಿಗೆ ಸಮಗ್ರ, ಬಾಳಿಕೆ ಬರುವ ಮತ್ತು ಶಾಂತಿಯುತ ಪರಿಹಾರವನ್ನು ಕಂಡು ಹುಡುಕುವಲ್ಲಿ ಐದು ಅಂಶಗಳ ಒಟ್ಟಾಭಿಪ್ರಾಯದ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ ನೀಡುವುದು ಸೇರಿದಂತೆ ಆಸಿಯಾನ್‌ನ ಪ್ರಯತ್ನಗಳಿಗೆ ಅವರು ತಮ್ಮ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು.
ಆಫ್ರಿಕಾ ಸೇರಿದಂತೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಯೋಗ ಯೋಜನೆಗಳ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಆಫ್ರಿಕಾದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಜಪಾನ್-ಭಾರತ ಸಹಕಾರ ಉಪಕ್ರಮವನ್ನು ಪ್ರಾರಂಭಿಸುವುದನ್ನು ಅವರು ಸ್ವಾಗತಿಸಿದರು. ಆಫ್ರಿಕಾದೊಂದಿಗೆ ವ್ಯಾಪಾರ ಮತ್ತು ಹೂಡಿಕೆಗಾಗಿ ಕೈಗಾರಿಕಾ ಕೇಂದ್ರವನ್ನು ಸ್ಥಾಪಿಸಲು ಭಾರತದಲ್ಲಿ ಕೈಗಾರಿಕಾ ಕೇಂದ್ರೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವುದನ್ನೂ ಅವರು ಸ್ವಾಗತಿಸಿದರು. 9 ನೇ ಟೋಕಿಯೊ ಅಂತರರಾಷ್ಟ್ರೀಯ ಆಫ್ರಿಕನ್ ಅಭಿವೃದ್ಧಿ ಸಮ್ಮೇಳನ (ಟಿ.ಐ.ಸಿ.ಎ.ಡಿ 9) ಯಶಸ್ವಿಯಾಗಿ ನಡೆದಿರುವುದನ್ನು ಅವರು ಸ್ವಾಗತಿಸಿದರು ಮತ್ತು ಹಿಂದೂ ಮಹಾಸಾಗರ ಪ್ರದೇಶ ಮತ್ತು ಆಫ್ರಿಕಾದಲ್ಲಿ ಸಂಪರ್ಕ ಮತ್ತು ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮಹತ್ವದ ಅವಕಾಶಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಮೋದಿ ಅವರು ಟಿ.ಐ.ಸಿ.ಎ.ಡಿ. 9 ರಲ್ಲಿ ಪ್ರಧಾನಮಂತ್ರಿ ಇಶಿಬಾ ಘೋಷಿಸಿದ ಹಿಂದೂ ಮಹಾಸಾಗರ-ಆಫ್ರಿಕಾದ ಆರ್ಥಿಕ ವಲಯ ಉಪಕ್ರಮವನ್ನು ಶ್ಲಾಘಿಸಿದರು. ಜಪಾನ್, ಭಾರತ ಮತ್ತು ಈ ಪ್ರದೇಶದ ಇತರ ದೇಶಗಳ ನಡುವಿನ ಸಹಯೋಗವು ಎಲ್ಲಾ ಪಾಲುದಾರರಿಗೆ ಸಮೃದ್ಧಿಯನ್ನು ತರಬಹುದು ಎಂದು ಅವರು ಒಪ್ಪಿಕೊಂಡರು.
ವಿಶ್ವಸಂಸ್ಥೆಯ ಚಾರ್ಟರ್ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಉಕ್ರೇನ್‌ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ಇಬ್ಬರೂ ಪ್ರಧಾನಮಂತ್ರಿಗಳು ಬೆಂಬಲ ವ್ಯಕ್ತಪಡಿಸಿದರು. ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸಾಧಿಸಲು ವಿವಿಧ ದೇಶಗಳು ನಡೆಸುತ್ತಿರುವ ರಾಜತಾಂತ್ರಿಕ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು.
ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ತಮ್ಮ ಬದ್ಧತೆಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು, ಸಂಯಮವನ್ನು ಕಾಪಾಡಿಕೊಳ್ಳಲು, ನಾಗರಿಕರನ್ನು ರಕ್ಷಿಸಲು, ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಲು ಕ್ರಮಗಳನ್ನು ಅನುಸರಿಸುವಂತೆ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಹಾಗು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವ ಕ್ರಮಗಳನ್ನು ತೆಗೆದುಕೊಳ್ಳದಂತೆ ಎಲ್ಲಾ ಪಕ್ಷಗಳಿಗೆ ಕರೆ ನೀಡಿದರು. ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ಸ್ವಾಗತಿಸಿದರು ಮತ್ತು ಕದನ ವಿರಾಮವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇರಾನ್‌ನ ಪರಮಾಣು ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವ ಮಹತ್ವವನ್ನು ಒತ್ತಿ ಹೇಳಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಇಬ್ಬರು ಪ್ರಧಾನಮಂತ್ರಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು. ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ತಕ್ಷಣದ ಹಾಗು ಸುಸ್ಥಿರ ಕದನ ವಿರಾಮಕ್ಕಾಗಿ ಸಂಬಂಧಪಟ್ಟ ಪಕ್ಷಗಳ ನಡುವೆ ಒಪ್ಪಂದ ಏರ್ಪಡಬೇಕಾದ ಪ್ರಾಮುಖ್ಯತೆಯನ್ನು ಮತ್ತು ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯನ್ನು ಪರಿಹರಿಸುವ ಮಹತ್ವವನ್ನು ಅವರು ಬಲವಾಗಿ ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ಬಯಸಿ ವಿವಿಧ ದೇಶಗಳು ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು.
ಪ್ರಸ್ತುತ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸಲು ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯ ವರ್ಗಗಳ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ (ಯು.ಎನ್.ಎಸ್.ಸಿ) ತುರ್ತು ಸುಧಾರಣೆಗಾಗಿ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಇಬ್ಬರೂ ಪ್ರಧಾನಮಂತ್ರಿಗಳು ನಿರ್ಧರಿಸಿದರು. ನಿರ್ದಿಷ್ಟವಾಗಿ ನಿಗದಿತ ಸಮಯದ ಚೌಕಟ್ಟಿನಲ್ಲಿ ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸುವ ಉದ್ದೇಶದೊಂದಿಗೆ ಅಂತರ-ಸರ್ಕಾರಿ ಮಾತುಕತೆಗಳ ಚೌಕಟ್ಟಿನ ಅಡಿಯಲ್ಲಿ ಲಿಖಿತ/ ಪಠ್ಯ ಆಧಾರಿತ ಮಾತುಕತೆಗಳನ್ನು ಪ್ರಾರಂಭಿಸುವ ಮೂಲಕ ಯು.ಎನ್.ಎಸ್.ಸಿ. ಸುಧಾರಣೆಗಳನ್ನು ವೇಗಗೊಳಿಸುವ ತಮ್ಮ ದೃಢನಿಶ್ಚಯವನ್ನು ಅವರು ವ್ಯಕ್ತಪಡಿಸಿದರು. ಸುಧಾರಿತ ಯು.ಎನ್.ಎಸ್.ಸಿ ಯಲ್ಲಿ ಖಾಯಂ ಸ್ಥಾನಕ್ಕೆ ಪರಸ್ಪರರ ಉಮೇದುವಾರಿಕೆಗೆ ಅವರು ಪರಸ್ಪರ ಬೆಂಬಲವನ್ನು ವ್ಯಕ್ತಪಡಿಸಿದರು. ಬದಲಾಗುತ್ತಿರುವ ಜಗತ್ತಿನಲ್ಲಿ ಜಾಗತಿಕ ಆಡಳಿತಕ್ಕೆ ಕೊಡುಗೆ ನೀಡುವುದಕ್ಕಾಗಿ ವಿಶ್ವಸಂಸ್ಥೆಯ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ವಿಶ್ವಸಂಸ್ಥೆಯ ಸುಧಾರಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸಹಕಾರ ಪ್ರಗತಿ ಸಾಧಿಸಲು ವಾರ್ಷಿಕ ಶೃಂಗಸಭೆಯ ಕಾರ್ಯವಿಧಾನದ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. 15ನೇ ವಾರ್ಷಿಕ ಶೃಂಗಸಭೆಯು 2014 ರಿಂದ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ಮತ್ತು ನಮ್ಮ ಮುಂದಿನ ಪೀಳಿಗೆ ಮತ್ತು ಅದರಾಚೆಗೆ ಪ್ರಯೋಜನಕಾರಿಯಾದ ನಿರಂತರ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ರಚಿಸಲು ಸಹಾಯ ಮಾಡಿತು. 2027ರಲ್ಲಿ ಭಾರತ-ಜಪಾನ್ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವದತ್ತ ಎರಡೂ ರಾಷ್ಟ್ರಗಳು ಒಟ್ಟಾಗಿ ಮುನ್ನಡೆಯುತ್ತಿವೆ ಎಂದು ಇಬ್ಬರೂ ಪ್ರಧಾನಮಂತ್ರಿಗಳು ಗಮನಿಸಿದರು, ಇದನ್ನು ಸೂಕ್ತ ರೀತಿಯಲ್ಲಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ, ಇಬ್ಬರೂ ನಾಯಕರು ಉತ್ಸಾಹಭರಿತ/ರೋಮಾಂಚಕ ದೃಷ್ಟಿಕೋನಗಳ ವಿನಿಮಯ, ವಿಚಾರಗಳು ಮತ್ತು ನೀತಿ ಶಿಫಾರಸುಗಳ ಗಣನೀಯ ಒಳಸುರಿ ಹಾಗೂ ವ್ಯಾಪಾರ, ಬೌದ್ಧಿಕ, ವಿಜ್ಞಾನ ಮತ್ತು ಸಂಸ್ಕೃತಿಯ ವಿವಿಧ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳ ಎಲ್ಲಾ ಪಾಲುದಾರರಲ್ಲಿ ಸಕ್ರಿಯ ಪರಸ್ಪರ ಸಹಯೋಗವನ್ನು ಸ್ವಾಗತಿಸಿದರು. ಜಪಾನ್ ಭೇಟಿಯ ಸಮಯದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಮೋದಿ ಪ್ರಧಾನಮಂತ್ರಿ ಇಶಿಬಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಈ ವರ್ಷದ ಕೊನೆಯಲ್ಲಿ ಆಯೋಜಿಸಲಾಗುವ ಕ್ವಾಡ್ ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಇಶಿಬಾ ಅವರಿಗೆ ಆಹ್ವಾನವನ್ನು ನೀಡಿದರು. ಪ್ರಧಾನಮಂತ್ರಿ ಇಶಿಬಾ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದರು. ಈ ಭೇಟಿಯು ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹಕ್ಕೆ ಬಲವಾದ ಅಡಿಪಾಯವನ್ನು ರೂಪಿಸುವ ಬಲವಾದ ನಾಗರಿಕ ಸಂಬಂಧಗಳು, ಜನರಿಂದ ಜನರಿಗೆ ಇರುವ ರೋಮಾಂಚಕ ಸಂಪರ್ಕಗಳು ಮತ್ತು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪುನರುಚ್ಚರಿಸಿತು.
*****
(Release ID: 2162462)
Visitor Counter : 7
Read this release in:
Malayalam
,
English
,
हिन्दी
,
Marathi
,
Punjabi
,
Gujarati
,
Tamil
,
Assamese
,
Bengali
,
Manipuri
,
Urdu
,
Odia