ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಗೋವಾದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ನ 19ನೇ ಆವೃತ್ತಿಯಲ್ಲಿ ಸಹ-ನಿರ್ಮಾಣ ಕೈಗೊಳ್ಳುವವರಿಗೆ ವೇವ್ಸ್ ಫಿಲ್ಮ್ ಬಜಾರ್ $20,000 ನಗದು ಅನುದಾನವನ್ನು ಪ್ರಕಟಿಸಿದೆ

Posted On: 30 AUG 2025 1:46PM by PIB Bengaluru

ಮುಂಬೈ, ಆಗಸ್ಟ್ 30, 2025 – ದಕ್ಷಿಣ ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆ ಮತ್ತು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ತರಬೇತಿಯ ಅವಿಭಾಜ್ಯ ಅಂಗವಾದ ವೇವ್ಸ್ ಫಿಲ್ಮ್ ಬಜಾರ್, 19ನೇ ಆವೃತ್ತಿಯಲ್ಲಿ ತನ್ನ ಸಹ-ನಿರ್ಮಾಣ ಮಾರುಕಟ್ಟೆಗೆ ಅಧಿಕೃತ ಅರ್ಜಿ ಆಹ್ವಾನಿಸಿದೆ. ಈ ಕಾರ್ಯಕ್ರಮವು ನವೆಂಬರ್ 20–24, 2025 ರವರೆಗೆ ಗೋವಾದ ಮ್ಯಾರಿಯಟ್ ರೆಸಾರ್ಟ್‌ನಲ್ಲಿ ನಡೆಯಲಿದೆ.

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಜೊತೆ ಜೊತೆಗೆ, ಭಾರತವನ್ನು ವಿಷಯ ವಸ್ತು, ಸೃಜನಶೀಲತೆ ಮತ್ತು ಸಹ-ನಿರ್ಮಾಣಗಳಿಗೆ ಜಾಗತಿಕ ಕೇಂದ್ರವಾಗಿಸುವ ವಿಶಾಲ ಕಾರ್ಯತಂತ್ರದ ದೃಷ್ಟಿಕೋನದ ಭಾಗವಾಗಿ ಫಿಲ್ಮ್ ಬಜಾರ್ ಅನ್ನು ವೇವ್ಸ್ ಫಿಲ್ಮ್ ಬಜಾರ್ ಎಂದು ಮರುನಾಮಕರಣ ಮಾಡಲಾಗಿದೆ. ಭಾರತೀಯ ಮತ್ತು ದಕ್ಷಿಣ ಏಷ್ಯಾದ ಚಲನಚಿತ್ರ ನಿರ್ಮಾಣ ಪ್ರತಿಭೆಗಳನ್ನು ಅಂತರರಾಷ್ಟ್ರೀಯ ವೃತ್ತಿಪರರೊಂದಿಗೆ ಸಂಪರ್ಕಿಸುವ ಪ್ರಮುಖ ವೇದಿಕೆಯಾಗಿ ವೇವ್ಸ್ ಫಿಲ್ಮ್ ಬಜಾರ್ ತನ್ನನ್ನು ತಾನು ರೂಪಿಸಿಕೊಂಡಿದೆ. ಕಳೆದ ವರ್ಷ, ಚಲನಚಿತ್ರೋದ್ಯಮದಲ್ಲಿ ತನ್ನ ಮಹತ್ವ ಮತ್ತು ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುವಂತೆ ಫಿಲ್ಮ್ ಬಜಾರ್ 40 ಕ್ಕೂ ಹೆಚ್ಚು ದೇಶಗಳಿಂದ 1,800 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಆಕರ್ಷಿಸಿತ್ತು.

ವೇವ್ಸ್ ಫಿಲ್ಮ್ ಬಜಾರ್‌ನ ಪ್ರಮುಖ ವೈಶಿಷ್ಟ್ಯವಾದ ಸಹ-ನಿರ್ಮಾಣ ಮಾರುಕಟ್ಟೆಯು, ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. 2007ರಲ್ಲಿ ಪ್ರಾರಂಭವಾದಾಗಿನಿಂದ, ಈ ವೇದಿಕೆಯು ಚಲನಚಿತ್ರ ನಿರ್ಮಾಪಕರಿಗೆ ಕಲಾತ್ಮಕ ಮತ್ತು ಆರ್ಥಿಕ ಬೆಂಬಲವನ್ನು ಪಡೆಯಲು ಸಂಘಟಿತ ಅವಕಾಶಗಳನ್ನು ಒದಗಿಸುತ್ತಿದೆ. ವಿಶ್ವಾದ್ಯಂತ ಚಲನಚಿತ್ರ ವೃತ್ತಿಪರರನ್ನು ಒಂದುಗೂಡಿಸಲು ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳು ಹಾಗೂ ಸಹಯೋಗದ ಸಹ-ನಿರ್ಮಾಣಗಳನ್ನು ವೃದ್ಧಿಸಲು ಈ ವೇದಿಕೆ ಶ್ರಮಿಸುತ್ತಿದೆ.

ದಿ ಲಂಚ್‌ಬಾಕ್ಸ್, ದಮ್ ಲಗಾಕೆ ಹೈಶಾ, ನ್ಯೂಟನ್, ಶಿರ್ಕೋವಾ: ಇನ್ ಲೈಸ್ ವಿ ಟ್ರಸ್ಟ್, ಗರ್ಲ್ಸ್ ವಿಲ್ ಬಿ ಗರ್ಲ್ಸ್, ಮತ್ತು ಇನ್ ದಿ ಬೆಲ್ಲಿ ಆಫ್ ಎ ಟೈಗರ್ ಸೇರಿದಂತೆ ಹಲವಾರು ಮೆಚ್ಚುಗೆ ಪಡೆದ ಚಲನಚಿತ್ರಗಳ ಯಶಸ್ಸಿನ ಒಂದು ಭಾಗ ವೇವ್ಸ್ ಫಿಲ್ಮ್ ಬಜಾರ್‌ ಗೆ ಸಲ್ಲುತ್ತದೆ, ಇದು ಜಾಗತಿಕ ಸಿನಿಮಾ ಜಗತ್ತಿನ ಮೇಲೆ ಫಿಲ್ಮ್ ಬಜಾರ್‌ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

2025ರ ಸಹ-ನಿರ್ಮಾಣ ಮಾರುಕಟ್ಟೆಗೆ ನಗದು ಅನುದಾನ:

2025ರ ಆವೃತ್ತಿಗಾಗಿ, ವೇವ್ಸ್ ಫಿಲ್ಮ್ ಬಜಾರ್ ಸಹ-ನಿರ್ಮಾಣ ಮಾರುಕಟ್ಟೆಯಿಂದ ಮೂರು ವಿಜೇತ ಯೋಜನೆಗಳಿಗೆ ಒಟ್ಟು $20,000 ನಗದು ಅನುದಾನವನ್ನು ನೀಡಲಿದೆ, ಇದನ್ನು ಈ ಕೆಳಗಿನಂತೆ ವಿತರಿಸಲಾಗುತ್ತದೆ:

1ನೇ ಬಹುಮಾನ: ಸಹ-ನಿರ್ಮಾಣ ಮಾರುಕಟ್ಟೆ ಚಲನಚಿತ್ರ - $10,000

2ನೇ ಬಹುಮಾನ: ಸಹ-ನಿರ್ಮಾಣ ಮಾರುಕಟ್ಟೆ ಚಲನಚಿತ್ರ - $5,000

ವಿಶೇಷ ನಗದು ಅನುದಾನ: ಸಹ-ನಿರ್ಮಾಣ ಮಾರುಕಟ್ಟೆ ಸಾಕ್ಷ್ಯಚಿತ್ರ - $5,000

2024ರಲ್ಲಿ ಪ್ರಾರಂಭವಾದ ಈ ನಗದು ಅನುದಾನ ಉಪಕ್ರಮವು ಸೂಕ್ತ ಅಭಿವೃದ್ಧಿ ನಿಧಿಯನ್ನು ಒದಗಿಸುವ ಮೂಲಕ ಸೃಜನಶೀಲ ದೃಷ್ಟಿ ಮತ್ತು ನಿರ್ಮಾಣದ ಮಧ್ಯದ ಅಂತರವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಕಳೆದ ಆವೃತ್ತಿಯಲ್ಲಿ, ಪಾಯಲ್ ಸೇಠಿ ನಿರ್ದೇಶಿಸಿದ ಕುರಿಂಜಿ (ದಿ ಡಿಸಪಿಯರಿಂಗ್ ಫ್ಲವರ್) ಮೊದಲ ಬಹುಮಾನವನ್ನು ಗೆದ್ದುಕೊಂಡಿತ್ತು. ಎರಡನೇ ಬಹುಮಾನವನ್ನು ಸಂಜು ಸುರೇಂದ್ರನ್ ನಿರ್ದೇಶಿಸಿದ ಮತ್ತು ಪ್ರಮೋದ್ ಶಂಕರ್ ನಿರ್ಮಿಸಿದ ಕೋಥಿಯಾನ್ - ಫಿಶರ್ಸ್ ಆಫ್ ಮೆನ್‌ಗೆ ನೀಡಲಾಗಿತ್ತು, ಆದರೆ ಪ್ರಾಂಜಲ್ ದುವಾ ನಿರ್ದೇಶಿಸಿದ ಮತ್ತು ಬಿಚ್-ಕ್ವಾನ್ ಟ್ರಾನ್ ನಿರ್ಮಿಸಿದ ಆಲ್ ಟೆನ್ ಹೆಡ್ಸ್ ಆಫ್ ರಾವಣ ಮೂರನೇ ಬಹುಮಾನವನ್ನು ಪಡೆದುಕೊಂಡಿತು.

ಸಲ್ಲಿಕೆಗೆ ಕೊನೆ ದಿನಾಂಕ: 

ಚಲನಚಿತ್ರ ಸಲ್ಲಿಕೆಗೆ ಸೆಪ್ಟೆಂಬರ್ 7, 2025 ರವರೆಗೆ, ಸಾಕ್ಷ್ಯಚಿತ್ರ ಯೋಜನೆ ಸಲ್ಲಿಕೆಗೆ ಸೆಪ್ಟೆಂಬರ್ 13, 2025 ರವರೆಗೆ ಗಡುವು ನೀಡಲಾಗಿದೆ. ಆಯ್ದ ಚಲನಚಿತ್ರ ನಿರ್ಮಾಪಕರಿಗೆ, ನಿರ್ಮಾಪಕರು, ವಿತರಕರು, ಮಾರಾಟ ಏಜೆಂಟ್‌ಗಳು ಮತ್ತು ಬಂಡವಾಳ ಹೂಡಿಕೆದಾರರ ಸಹಯೋಗ ಮತ್ತು ಸಹ-ನಿರ್ಮಾಣ ಒಪ್ಪಂದಗಳನ್ನು ಬಲಪಡಿಸಲು ಅಮೂಲ್ಯವಾದ ಅವಕಾಶಗಳು ಲಭಿಸುತ್ತವೆ.

ವೇವ್ಸ್ ಫಿಲ್ಮ್ ಬಜಾರ್ ಹೆಚ್ಚುವರಿ ಚಟುವಟಿಕೆಗಳು:

ಸಹ-ನಿರ್ಮಾಣ ಮಾರುಕಟ್ಟೆಯ ಹೊರತಾಗಿ, ವೇವ್ಸ್ ಫಿಲ್ಮ್ ಬಜಾರ್ ಮಾರುಕಟ್ಟೆ ಪ್ರದರ್ಶನಗಳು, ವೀಕ್ಷಣಾ ಕೊಠಡಿ - ಸುಮಾರು 200 ಹೊಸ ಮತ್ತು ನೋಡಿರಲಾರದ ಭಾರತೀಯ ಮತ್ತು ದಕ್ಷಿಣ ಏಷ್ಯಾದ ಚಲನಚಿತ್ರಗಳನ್ನುಳ್ಳ ವೀಡಿಯೊ ಲೈಬ್ರರಿ - ಜೊತೆಗೆ ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್, ನಾಲೆಜ್ ಸೀರಿಸ್, ನಿರ್ಮಾಪಕರ ಕಾರ್ಯಾಗಾರ, ಕಂಟ್ರಿ ಪೆವಿಲಿಯನ್‌ಗಳು ಮತ್ತು ಮಾರುಕಟ್ಟೆ ಮಳಿಗೆಗಳಂತಹ ಹಲವಾರು ಉದ್ಯಮ-ಕೇಂದ್ರಿತ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಈ ಚಟುವಟಿಕೆಗಳು ಪ್ರತಿಭಾ ಪೋಷಣೆ, ಉದ್ಯಮ ಸಂವಹನ ವೃದ್ಧಿ ಮತ್ತು ಜಾಗತಿಕ ವೇದಿಕೆಯಲ್ಲಿ ದಕ್ಷಿಣ ಏಷ್ಯಾದ ಸಿನಿಮಾಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ವೇವ್ಸ್ ಫಿಲ್ಮ್ ಬಜಾರ್‌ನ ಬದ್ಧತೆಯನ್ನು ಬಲಪಡಿಸುತ್ತವೆ.

ಹೆಚ್ಚಿನ ಮಾಹಿತಿ ಮತ್ತು ಸಲ್ಲಿಕೆಗಳಿಗಾಗಿ, films.wavesbazaar.com ಗೆ ಭೇಟಿ ನೀಡಿ.

 

*****
 


(Release ID: 2162291) Visitor Counter : 28