ಪ್ರಧಾನ ಮಂತ್ರಿಯವರ ಕಛೇರಿ
ಮುಂದಿನ ದಶಕದ ಭಾರತ - ಜಪಾನ್ ಜಂಟಿ ಮುನ್ನೋಟ: ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮುನ್ನಡೆಸಲು ಎಂಟು ಮಾರ್ಗಗಳು
Posted On:
29 AUG 2025 7:10PM by PIB Bengaluru
ಕಾನೂನುಬದ್ಧ ಆಳ್ವಿಕೆಯ ಆಧಾರದ ಮೇಲೆ ಮುಕ್ತ, ತೆರೆದ, ಶಾಂತಿಯುತ, ಸಮೃದ್ಧ ಮತ್ತು ಸಂಘರ್ಷ-ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸಾಮಾನ್ಯ ದೃಷ್ಟಿಕೋನವನ್ನು ಹೊಂದಿರುವ ಎರಡು ದೇಶಗಳಾಗಿ, ಪೂರಕ ಸಂಪನ್ಮೂಲ ದತ್ತಿ, ತಾಂತ್ರಿಕ ಸಾಮರ್ಥ್ಯಗಳು ಮತ್ತು ವೆಚ್ಚ ಸ್ಪರ್ಧಾತ್ಮಕತೆಯನ್ನು ಹೊಂದಿರುವ ಎರಡು ಆರ್ಥಿಕತೆಗಳು ಮತ್ತು ಸ್ನೇಹ ಮತ್ತು ಪರಸ್ಪರ ಸದ್ಭಾವನೆಯ ದೀರ್ಘ ಸಂಪ್ರದಾಯವನ್ನು ಹೊಂದಿರುವ ಎರಡು ರಾಷ್ಟ್ರಗಳಾಗಿ, ಮುಂದಿನ ದಶಕದಲ್ಲಿ ನಮ್ಮ ದೇಶಗಳಲ್ಲಿ ಮತ್ತು ಪ್ರಪಂಚದಲ್ಲಿ ಒಟ್ಟಾರೆಯಾಗಿ ಬದಲಾವಣೆಗಳು ಮತ್ತು ಅವಕಾಶಗಳನ್ನು ಜಂಟಿಯಾಗಿ ನಿಭಾಯಿಸುವ ಉದ್ದೇಶವನ್ನು ಭಾರತ ಮತ್ತು ಜಪಾನ್ ವ್ಯಕ್ತಪಡಿಸುತ್ತವೆ, ನಮ್ಮ ಆಯಾ ದೇಶೀಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತವೆ ಮತ್ತು ನಮ್ಮ ದೇಶಗಳು ಹಾಗು ಮುಂದಿನ ಪೀಳಿಗೆಯ ಜನರನ್ನು ಹಿಂದೆಂದಿಗಿಂತಲೂ ಹೆಚ್ಚು ನಿಕಟವಾಗಿಸುತ್ತವೆ.
ಈ ನಿಟ್ಟಿನಲ್ಲಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ನಿರ್ಮಿಸುವ ಮೂಲಕ, ಮುಂದಿನ ದಶಕದಲ್ಲಿ ಗುರಿಗಳನ್ನು ನಿಗದಿ ಮಾಡಿ ಅವುಗಳನ್ನು ಸಾಧಿಸುವ ಮತ್ತು ಅವುಗಳ ಸಾಕ್ಷಾತ್ಕಾರದತ್ತ ಹೆಜ್ಜೆಗಳನ್ನಿಡಲು ಎಂಟು ಸರ್ವ-ರಾಷ್ಟ್ರ ಪ್ರಯತ್ನ ಮಾರ್ಗಗಳನ್ನು ನಾವು ಇಲ್ಲಿ ರೂಪಿಸುತ್ತಿದ್ದೇವೆ.
(I) ಮುಂದಿನ ಪೀಳಿಗೆಯ ಆರ್ಥಿಕ ಪಾಲುದಾರಿಕೆ
ವಿಶ್ವದ ನಾಲ್ಕನೇ ಮತ್ತು ಐದನೇ ಅತಿದೊಡ್ಡ ಆರ್ಥಿಕತೆಗಳಾಗಿ, ನಾವು ನಮ್ಮ ಪರಸ್ಪರ ಆರ್ಥಿಕ ಮತ್ತು ಹಣಕಾಸು ಬಲಗಳನ್ನು ಬಳಕೆ ಮಾಡುವ ಮತ್ತು ನಮ್ಮ ಪೂರಕ ಸಂಪನ್ಮೂಲಗಳು ಹಾಗು ಮಾರುಕಟ್ಟೆಗಳ ಸಾಮರ್ಥ್ಯವನ್ನು ಈ ಕೆಳಗಿನವುಗಳ ಮೂಲಕ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ:
• 2022-2026ರ ಅವಧಿಯಲ್ಲಿ ಜೆ.ಪಿ.ವೈ.5 ಟ್ರಿಲಿಯನ್ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಹಾಗು ಹಣಕಾಸು ಗುರಿಯಲ್ಲಿ ಸಾಧಿಸಿದ ಪ್ರಗತಿಯನ್ನು ಅನುಸರಿಸಿ ಜಪಾನ್‌ನಿಂದ ಭಾರತಕ್ಕೆ 10 ಟ್ರಿಲಿಯನ್ ಜೆ.ಪಿ.ವೈ. ಖಾಸಗಿ ಹೂಡಿಕೆಯ ಹೊಸ ಗುರಿಯನ್ನು ನಿಗದಿಪಡಿಸುವುದು;
• ಭಾರತ-ಜಪಾನ್ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿ.ಇ.ಪಿ.ಎ.) ಅನುಷ್ಠಾನದ ಪ್ರಗತಿ ಪರಿಶೀಲನೆಯನ್ನು ವೇಗಗೊಳಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವರ್ಧಿಸುವುದು ಮತ್ತು ವೈವಿಧ್ಯಗೊಳಿಸುವುದು;
• ಜಪಾನಿನ ಸಂಸ್ಥೆಗಳಿಗೆ ಅಗತ್ಯವಾದ ಉತ್ತಮ ಗುಣಮಟ್ಟದ ಉತ್ಪನ್ನಗಳಿಗಾಗಿ ಭಾರತದಲ್ಲಿ ಉತ್ಪನ್ನ ಗುಣಮಟ್ಟವನ್ನು ನವೀಕರಿಸಲು ಸಹಾಯ ಮಾಡಲು ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ (ಐ.ಜೆ.ಐ.ಸಿ.ಪಿ.) ಮೂಲಕ "ಮೇಕ್ ಇನ್ ಇಂಡಿಯಾ" ಉಪಕ್ರಮಕ್ಕಾಗಿ ಭಾರತ-ಜಪಾನ್ ಕೈಗಾರಿಕಾ ಸಹಕಾರವನ್ನು ಬಲಪಡಿಸುವುದು;
• ಭಾರತ-ಜಪಾನ್ ನಿಧಿಯ ಅಡಿಯಲ್ಲಿ ಹೊಸ ಯೋಜನೆಗಳನ್ನು ಅನ್ವೇಷಿಸುವುದು, ಭಾರತದ ಗಿಫ್ಟ್ (GIFT) ನಗರದ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ ಜಪಾನಿನ ನಿಗಮಗಳನ್ನು ಉತ್ತೇಜಿಸುವುದು ಮತ್ತು ಜಪಾನ್‌ನಲ್ಲಿ ಪ್ರಮುಖ ಭಾರತೀಯ ಉದ್ಯಮ ಸಂಘಗಳು, ವ್ಯಾಪಾರ ಮತ್ತು ಹೂಡಿಕೆ ಉತ್ತೇಜನ ಸಂಸ್ಥೆಗಳ ಉಪಸ್ಥಿತಿಯನ್ನು ವಿಸ್ತರಿಸುವುದು;
• ಸ್ಥಳೀಯ ಕರೆನ್ಸಿ ವಹಿವಾಟುಗಳು ಸೇರಿದಂತೆ ಜಪಾನ್ ಮತ್ತು ಭಾರತದ ನಡುವಿನ ಪಾವತಿ ವ್ಯವಸ್ಥೆಗಳ ಸಹಯೋಗವನ್ನು ಹೆಚ್ಚಿಸುವುದು;
• ಭಾರತಕ್ಕೆ ಜಪಾನಿನ ಎಸ್.ಎಂ.ಇ.ಗಳ ಭೇಟಿಗಳನ್ನು ಉತ್ತೇಜಿಸುವ ಮೂಲಕ, ತಳಮಟ್ಟದ ಕೈಗಾರಿಕೆಗಳನ್ನು ವಿಸ್ತರಿಸುವ ಮೂಲಕ ಹಾಗು ಭಾರತ-ಜಪಾನ್ ಎಸ್.ಎಂ.ಇ.ವೇದಿಕೆಯನ್ನು ಪ್ರಾರಂಭಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್.ಎಂ.ಇ.) ನಡುವಿನ ಸಹಕಾರವನ್ನು ಉತ್ತೇಜಿಸುವುದು;
• ನೀತಿ ಸಂವಾದ ಮತ್ತು ವ್ಯಾಪಾರ ವಿನಿಮಯದ ಮೂಲಕ ಆಹಾರ ಭದ್ರತೆಯನ್ನು ಉತ್ತೇಜಿಸುವುದು ಮತ್ತು ಕೃಷಿ-ವ್ಯವಹಾರ ಸಹಯೋಗವನ್ನು ಪ್ರೋತ್ಸಾಹಿಸುವುದು ಹಾಗು ಮಾದರಿ ಫಾರ್ಮ್‌ಗಳಲ್ಲಿ ಪ್ರದರ್ಶನ ಮತ್ತು ಭಾರತೀಯ ಮತ್ತು ಜಪಾನೀಸ್ ಪಾಕಪದ್ಧತಿಗಾಗಿ ಪಾಕಶಾಲೆಯ ವೃತ್ತಿಪರರ ಅಭಿವೃದ್ಧಿಯ ಆಧಾರದ ಮೇಲೆ ಹೂಡಿಕೆಯನ್ನು ಉತ್ತೇಜಿಸುವುದು; ಮತ್ತು
• ಖಾಸಗಿ ವಲಯದ ಸಂಸ್ಥೆಗಳಲ್ಲಿ ಐ.ಸಿ.ಟಿ. ಸಹಕಾರ ಹಾಗು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದು.
ಜಾಗತಿಕ ದಕ್ಷಿಣದೊಂದಿಗೆ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಮತ್ತು ಅದರ ಬೆಳವಣಿಗೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಮ್ಮ ದ್ವಿಪಕ್ಷೀಯ ಸಹಕಾರವನ್ನು ಮುಂದುವರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದನ್ನು ಅನುಸರಿಸುವ ಸಲುವಾಗಿ, ಆಫ್ರಿಕಾದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಭಾರತ-ಜಪಾನ್ ಸಹಕಾರ ಉಪಕ್ರಮವನ್ನು ಪ್ರಾರಂಭಿಸುವುದನ್ನು ನಾವು ಸ್ವಾಗತಿಸುತ್ತೇವೆ. ಈ ನಿಟ್ಟಿನಲ್ಲಿ, ಭಾರತದ ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿ (ಮಹಾಸಾಗರ್) ಮತ್ತು ಜಪಾನ್‌ನ ಹಿಂದೂ ಮಹಾಸಾಗರ-ಆಫ್ರಿಕಾದ ಆರ್ಥಿಕ ಪ್ರದೇಶ ಉಪಕ್ರಮದ ಚಿಂತನೆಯ ದೃಷ್ಟಿಕೋನದ ಅಡಿಯಲ್ಲಿ, ನಾವು ಭಾರತದಲ್ಲಿ ಖಾಸಗಿ ವಲಯದ ನೇತೃತ್ವದ ವ್ಯವಹಾರಗಳು ಮತ್ತು ಹೂಡಿಕೆಗಳನ್ನು ಉತ್ತೇಜಿಸುತ್ತೇವೆ ಮತ್ತು ದಕ್ಷಿಣ ಏಷ್ಯಾ ಹಾಗು ಆಫ್ರಿಕಾದ ಇತರ ದೇಶಗಳೊಂದಿಗೆ ವ್ಯಾಪಾರ ಸಹಯೋಗಗಳನ್ನು ಉತ್ತೇಜಿಸುವ ಕೇಂದ್ರವಾಗಿ ಭಾರತದಲ್ಲಿ ಜಪಾನಿನ ಕಂಪನಿಗಳ ದೃಢವಾದ ಕೇಂದ್ರೀಕರಣವನ್ನು ಉತ್ತೇಜಿಸುತ್ತೇವೆ.
(II) ಮುಂದಿನ ಪೀಳಿಗೆಯ ಆರ್ಥಿಕ ಭದ್ರತಾ ಪಾಲುದಾರಿಕೆ
ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಂತೆ, ಪ್ರಮುಖ ಸರಕುಗಳು ಮತ್ತು ವಸ್ತುಗಳ ಪೂರೈಕೆ ಸರಪಳಿಗಳನ್ನು ಬಲಪಡಿಸುವಲ್ಲಿ ಇಡೀ ರಾಷ್ಟ್ರದ ಪ್ರಯತ್ನಗಳ ಮೂಲಕ ಕಾರ್ಯತಂತ್ರದ ಸಹಕಾರಕ್ಕೆ ತ್ವರಿತಗತಿಯನ್ನು ಒದಗಿಸುವ ಭಾರತ-ಜಪಾನ್ ಆರ್ಥಿಕ ಭದ್ರತಾ ಉಪಕ್ರಮವನ್ನು ಪ್ರಾರಂಭಿಸುವ ಗುರಿಯನ್ನು ನಾವು ಹೊಂದಿದ್ದೇವೆ, ಇದು ಮಾರುಕಟ್ಟೆ ವೈವಿಧ್ಯೀಕರಣವನ್ನು ಉತ್ತೇಜಿಸುತ್ತದೆ ಮತ್ತು ಖಾಸಗಿ ವಲಯದ ನೇತೃತ್ವದ ಸಹಕಾರ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಮುನ್ನಡೆಸುತ್ತದೆ:
• ಕಾರ್ಯತಂತ್ರದ ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಆರ್ಥಿಕ ಭದ್ರತೆಯ ಕುರಿತಾದ ಸಂವಾದಕ್ಕೆ ಸಂಬಂಧಿಸಿ ಸರ್ಕಾರ ಮತ್ತು ವ್ಯವಹಾರ ಮಾರ್ಗಗಳ ಮೂಲಕ ಅರೆವಾಹಕಗಳು, ನಿರ್ಣಾಯಕ ಖನಿಜಗಳು, ಔಷಧಗಳು ಮತ್ತು ಜೈವಿಕ ತಂತ್ರಜ್ಞಾನ, ದೂರಸಂಪರ್ಕ, ಶುದ್ಧ ಇಂಧನ ಮತ್ತು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ದೃಢವಾದ ಯೋಜನೆಗಳನ್ನು ಗುರುತಿಸುವುದು ಮತ್ತು ಕಾರ್ಯಗತಗೊಳಿಸುವುದು,
• ಮೇಲಿನ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಹಾಗು ಉತ್ತಮ ಪದ್ದತಿಗಳ ಬಗ್ಗೆ ನೀತಿ ದೃಷ್ಟಿಕೋನಗಳು, ಗುಪ್ತಚರ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು;
• ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರ ಒಡಂಬಡಿಕೆ, ಭಾರತ-ಜಪಾನ್ ಡಿಜಿಟಲ್ ಪಾಲುದಾರಿಕೆ 2.0, ಸೆಮಿಕಂಡಕ್ಟರ್ ಸರಬರಾಜು ಸರಪಳಿ ಪಾಲುದಾರಿಕೆಯಲ್ಲಿ ಸಹಕಾರ ಒಡಂಬಡಿಕೆ ಮತ್ತು ಅಂತಹ ಇತರ ಕಾರ್ಯವಿಧಾನಗಳ ಮೂಲಕ ಸ್ಥಿತಿಸ್ಥಾಪಕತ್ವದ ಪೂರೈಕೆ ಸರಪಳಿಗಳು ಮತ್ತು ಮಾರುಕಟ್ಟೆ ವೈವಿಧ್ಯೀಕರಣದ ಕುರಿತು ಸಹಕಾರವನ್ನು ಉತ್ತೇಜಿಸುವುದು;
• ಜೆ.ಇ.ಟಿ.ಆರ್.ಒ (JETRO), ಸಿ.ಐ.ಐ. (CII) ಮತ್ತು ಜೆ.ಸಿ.ಸಿ.ಐ.ಐ. (JCCII) ಯಿಂದ ಆರ್ಥಿಕ ಭದ್ರತಾ ಸಹಕಾರದ ಜಂಟಿ ಕ್ರಿಯಾ ಯೋಜನೆಯನ್ನು ಬೆಂಬಲಿಸುವಿಕೆ ಸಹಿತ ಖಾಸಗಿ ವಲಯ ನೇತೃತ್ವದ ಸಹಕಾರವನ್ನು ಉತ್ತೇಜಿಸುವುದು;
• ಮೇಲಿನ ಜಂಟಿ ಕ್ರಿಯಾ ಯೋಜನೆಯನ್ನು ಪೋಷಿಸಲು ಕಾರ್ಯತಂತ್ರದ ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಆರ್ಥಿಕ ಭದ್ರತೆಯ ಕುರಿತಾದ ಭಾರತ-ಜಪಾನ್ ಸಂವಾದದ ಅಡಿಯಲ್ಲಿ ವ್ಯಾಪಾರ ಸ್ತಂಭವಾದ ಆರ್ಥಿಕ ಭದ್ರತೆಯ ಕುರಿತಾದ ಭಾರತ-ಜಪಾನ್ ಖಾಸಗಿ-ವಲಯದ ಸಂವಾದವನ್ನು ಪ್ರಾರಂಭಿಸುವುದನ್ನು ಸ್ವಾಗತಿಸುತ್ತೇವೆ;
• ಕೃತಕ ಬುದ್ಧಿಮತ್ತೆಯಲ್ಲಿ (ಎ.ಐ.) ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಮತ್ತು ನವೀನ ಮತ್ತು ವಿಶ್ವಾಸಾರ್ಹ ಎ.ಐ.ಪರಿಸರ ವ್ಯವಸ್ಥೆಯನ್ನು ಪೋಷಿಸಲು ಜಪಾನ್-ಭಾರತ ಎ.ಐ. ಸಹಕಾರ ಉಪಕ್ರಮವನ್ನು (ಜೆ.ಎ.ಐ.) ಕಾರ್ಯಗತಗೊಳಿಸುವುದು; ಮತ್ತು
• ಆರೋಗ್ಯಕರ ಬ್ಯಾಟರಿ ಮಾರುಕಟ್ಟೆ ಮತ್ತು ಪರಿಸರ ವ್ಯವಸ್ಥೆಯನ್ನು ಪೋಷಿಸಲು ಭಾರತ-ಜಪಾನ್ ಬ್ಯಾಟರಿ ಪೂರೈಕೆ ಸರಪಳಿ ಸಹಕಾರವನ್ನು ಉತ್ತೇಜಿಸುವುದು.
(III) ಮುಂದಿನ ಪೀಳಿಗೆಯ ಚಲನಶೀಲತೆ್
ಜಪಾನಿನ ಮುಂದುವರಿದ ತಂತ್ರಜ್ಞಾನಗಳು ಮತ್ತು ಭಾರತೀಯ ಪ್ರತಿಭೆಗಳ ಬಲವನ್ನು ಬಳಸಿಕೊಂಡು, ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಚಲನಶೀಲತೆಯಲ್ಲಿ ಸಮಗ್ರ ಸಹಕಾರಕ್ಕಾಗಿ ನಾವು ಮುಂದಿನ ಪೀಳಿಗೆಯ ಚಲನಶೀಲತೆ ಪಾಲುದಾರಿಕೆ (ಎನ್.ಜಿ.ಎಂ.ಪಿ.-NGMP) ಯನ್ನು ಒಂದು ಚೌಕಟ್ಟಾಗಿ ಸ್ಥಾಪಿಸುತ್ತೇವೆ. ಈ ಪಾಲುದಾರಿಕೆಯ ಮೂಲಕ, ಭಾರತದಲ್ಲಿ ಹೆಚ್ಚಿನ ಬೇಡಿಕೆಯಿರುವ ಚಲನಶೀಲತೆ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಪರಿಹರಿಸುವ ಪರಿಹಾರಗಳನ್ನು ಸಹ-ನಿರ್ಮಾಣ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಮತ್ತು ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಸಿ ಎಂಬ ಚಿಂತನೆಯನ್ನು ಪೂರೈಸುವ, ದೃಢವಾದ, ಮುಂದಿನ ಪೀಳಿಗೆಯ ಚಲನಶೀಲತೆ ಮತ್ತು ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗೆ ಚಾಲನೆ ನೀಡುತ್ತೇವೆ. ಡಿಜಿಟಲ್ ಮತ್ತು ಸ್ಮಾರ್ಟ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು, ಸುಸ್ಥಿರ ಮತ್ತು ಪರಿಸರ ಸ್ನೇಹಿ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಸುರಕ್ಷತೆ ಹಾಗು ವಿಪತ್ತು ಸ್ಥಿತಿಸ್ಥಾಪಕತ್ವಕ್ಕೆ ಆದ್ಯತೆ ನೀಡುವುದು ಸೇರಿದಂತೆ, ನಾವು ಈ ಕೆಳಗಿನ ಉದಾಹರಣೆಗಳನ್ನು ಒಳಗೊಂಡಂತೆ ಆದರೆ ಇವುಗಳಿಗೆ ಸೀಮಿತಗೊಳ್ಳದೆ ಸಹಯೋಗದ ಸಂಭಾವ್ಯ ಕ್ಷೇತ್ರಗಳನ್ನು ಅನ್ವೇಷಿಸುತ್ತೇವೆ:
• ರೈಲ್ವೆಯಲ್ಲಿ ಸಹಕಾರವನ್ನು ನಿರ್ಮಿಸುವ ಮೂಲಕ; "ಮೇಕ್ ಇನ್ ಇಂಡಿಯಾ" ಮುಂದಿನ ಪೀಳಿಗೆಯ ರೋಲಿಂಗ್ ಸ್ಟಾಕ್, ಕ್ರಿಯಾತ್ಮಕ ಸಿಗ್ನಲಿಂಗ್ ಮತ್ತು ಕಾರ್ಯಾಚರಣೆಯ ನಿಯಂತ್ರಣ ವ್ಯವಸ್ಥೆಗಳು, ಭೂಕಂಪ-ನಿರೋಧಕ, ಎ.ಐ.-ಆಧಾರಿತ ನಿರ್ವಹಣೆ ಮತ್ತು ಮೇಲ್ವಿಚಾರಣೆ, ರೈಲ್ವೆ ವಲಯದಲ್ಲಿ ಇಂಧನ ಪರಿವರ್ತನೆ, ಆಧುನಿಕ ಮೆಟ್ರೋ ರೈಲು ವ್ಯವಸ್ಥೆಗಳು ಮತ್ತು ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳು ಸೇರಿದಂತೆ ಹೈ-ಸ್ಪೀಡ್ ರೈಲು ವ್ಯವಸ್ಥೆಗಳು,
• ಸಮಗ್ರ ನಿಲ್ದಾಣ ಪ್ರದೇಶ ಅಭಿವೃದ್ಧಿ, ಮೊಬಿಲಿಟಿ-ಆಸ್-ಎ-ಸರ್ವಿಸ್ ಪ್ಲಾಟ್‌ಫಾರ್ಮ್‌ಗಳು, ಅಂತರ-ನಗರ ರಸ್ತೆ ಜಾಲಗಳು ಮತ್ತು ವೈಯಕ್ತಿಕ ಕ್ಷಿಪ್ರ ಸಾರಿಗೆ (ಪಿ.ಆರ್.ಟಿ. -PRT) ಯಂತಹ ಸಣ್ಣ-ಪ್ರಮಾಣದ ಸ್ವಯಂಚಾಲಿತ ನಗರ ಸಾರಿಗೆ ವ್ಯವಸ್ಥೆಗಳು ಸೇರಿದಂತೆ ಮೂಲದಿಂದ ತುದಿಯವರೆಗೆ (ಎಂಡ್-ಟು-ಎಂಡ್ ) ಸಂಪರ್ಕದ ಮೂಲಕ ಸಾರಿಗೆ-ಆಧಾರಿತ ಅಭಿವೃದ್ಧಿ;
• ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುವ ಸುಧಾರಿತ ಮಾದರಿಯ ಮೂಲಕ ಸ್ಮಾರ್ಟ್ ಸಿಟಿಗಳು ಮತ್ತು ನಗರ ಡಿಕಾರ್ಬೊನೈಸೇಶನ್ ವ್ಯವಸ್ಥೆಗಳನ್ನು ಯೋಜಿಸಲಾಗುವುದು;
• ಸಾಫ್ಟ್‌ವೇರ್ ಡಿಫೈನ್ಡ್ ವೆಹಿಕಲ್ (ಸಾಫ್ಟ್ವೇರ್ ನಿರ್ದೇಶಿತ ವ್ಯವಸ್ಥೆ) ನಿಂದ ನಿರ್ದೇಶಿಸಲ್ಪಡುವ ಸಂಪರ್ಕಿತ ತಂತ್ರಜ್ಞಾನಗಳ ಮೂಲಕ ಚಲನಶೀಲತೆ ಕ್ಷೇತ್ರದಲ್ಲಿ ಡೇಟಾ ಬಳಕೆ, ಚಲನಶೀಲತೆ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ;
• ಆಟೋಮೊಬೈಲ್‌ಗಳು ಮತ್ತು ವಿಮಾನಗಳ ತಯಾರಿಕೆ, ಹಡಗುಗಳು, ಸುಸ್ಥಿರ ಇಂಧನವನ್ನು ಬಳಸುವುದು ಮತ್ತು ಪರಿಸರ ಸ್ನೇಹಿ ಇಂಧನ ಸಂಗ್ರಹಣೆಯನ್ನು ಬಳಸುವುದು ಮತ್ತು ಸಾರಿಗೆ ಮೂಲಸೌಕರ್ಯವನ್ನು ವಿಸ್ತರಿಸುವುದು;
• ಆಹಾರ ಮತ್ತು ಔಷಧೀಯ ಸಾಗಣೆಗಾಗಿ ಕೋಲ್ಡ್-ಚೈನ್ ಲಾಜಿಸ್ಟಿಕ್ ಸೇವೆಗಳು; ಮತ್ತು
• ವಿಪತ್ತು ಸಿಮ್ಯುಲೇಶನ್‌ನಂತಹ ನಗರ ಯೋಜನೆ ಹಾಗು ಅಭಿವೃದ್ಧಿಯಲ್ಲಿ 3ಡಿ ನಗರ ಮಾದರಿಗಳನ್ನು ಬಳಸುವುದು ಮತ್ತು ವಿಪತ್ತಿನ ಸಂದರ್ಭದಲ್ಲಿ ಸ್ಥಳಾಂತರಿಸುವ ಮಾರ್ಗದರ್ಶಿ ಯೋಜನೆಗಳನ್ನು ರೂಪಿಸುವುದು.
ಮೇಲಿನ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲು ಮತ್ತು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಲು ನಾವು ಭಾರತೀಯ ಮತ್ತು ಜಪಾನಿನ ಕಂಪನಿಗಳ ನಡುವಿನ ಸಹಯೋಗವನ್ನು ಸಕ್ರಿಯವಾಗಿ ಉತ್ತೇಜಿಸುತ್ತೇವೆ. ಈ ಚಲನಶೀಲ ಪರಿಹಾರಗಳ ವಿನ್ಯಾಸ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ನುರಿತ ಸಿಬ್ಬಂದಿಯನ್ನು ಬೆಳೆಸುವ ನಿಟ್ಟಿನಲ್ಲಿ ತಾಂತ್ರಿಕ ತರಬೇತಿ ಮತ್ತು ಮಾನವ ಸಂಪನ್ಮೂಲ ವಿನಿಮಯದ ಮೂಲಕ ಭಾರತದಲ್ಲಿ ಸಾಮರ್ಥ್ಯ ವೃದ್ಧಿಗೆ ನಾವು ಆದ್ಯತೆ ನೀಡುತ್ತೇವೆ.
ಅದೇ ಸಮಯದಲ್ಲಿ, ಸ್ಥಿತಿಸ್ಥಾಪಕತ್ವದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ವಿಪತ್ತು ಅಪಾಯ ಕಡಿತಕ್ಕಾಗಿ ಸೆಂಡೈ ಚೌಕಟ್ಟಿನಂತಹ ಬಹುಪಕ್ಷೀಯ ಕಾರ್ಯವಿಧಾನಗಳಲ್ಲಿ ಸಹಕಾರವನ್ನು ಬಲಪಡಿಸುವ ಮೂಲಕ ವಿಪತ್ತು ಅಪಾಯ ಕಡಿಮೆ ಮಾಡುವಿಕೆಯನ್ನು ಮುಖ್ಯವಾಹಿನಿಗೆ ತರುವ ಗುರಿಯನ್ನು ನಾವು ಹೊಂದಿದ್ದೇವೆ.
(IV) ಮುಂದಿನ ಪೀಳಿಗೆಯ ಪರಿಸರ ಪರಂಪರೆಗಳು
ನಮ್ಮ ಭವಿಷ್ಯದ ಪೀಳಿಗೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್.ಡಿ.ಜಿ.-SDGs) ಉತ್ತೇಜಿಸುವ ಮೂಲಕ ಮತ್ತು ಪರಸ್ಪರರ ಹವಾಮಾನ ಹೊಂದಾಣಿಕೆ, ಇಂಧನ ಪರಿವರ್ತನೆ, ತ್ಯಾಜ್ಯ-ಕಡಿತ ಮತ್ತು ನಿವ್ವಳ-ಶೂನ್ಯ ಗುರಿಗಳನ್ನು ಪೂರೈಸಲು ಸಹಕಾರ ನೀಡುವ ಮೂಲಕ "ಒಂದು ಭೂಮಿ, ಒಂದು ಭವಿಷ್ಯ" ಎಂಬ ನಮ್ಮ ದೃಷ್ಟಿಕೋನವನ್ನು ಕಾರ್ಯಗತಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ:
• ಮಿಷನ್ ಲೈಫ್ ಮೂಲಕ ಇಂಧನ ಸುರಕ್ಷತೆ, ಕಡಿಮೆ ಇಂಗಾಲಾಂಶದ ಆರ್ಥಿಕತೆ ಬೆಳವಣಿಗೆ, ಸುಸ್ಥಿರ ಸಮುದಾಯಗಳು ಮತ್ತು ಜೀವನಶೈಲಿಯನ್ನು ಖಚಿತಪಡಿಸುವುದು;
• ನಿವ್ವಳ-ಶೂನ್ಯ ಆರ್ಥಿಕತೆಯನ್ನು ಸಾಧಿಸಲು ಪ್ರತಿ ದೇಶದ ರಾಷ್ಟ್ರೀಯ ಪರಿಸ್ಥಿತಿ/ಸಂದರ್ಭಗಳನ್ನು ಪ್ರತಿಬಿಂಬಿಸುವ ವಿವಿಧ ಮಾರ್ಗಗಳು;
• ಭಾರತ-ಜಪಾನ್ ಇಂಧನ ಸಂವಾದದ ಮೂಲಕ ಭಾರತ-ಜಪಾನ್ ಶುದ್ಧ ಇಂಧನ ಪಾಲುದಾರಿಕೆಯ ಅಡಿಯಲ್ಲಿ ಇಂಧನ ಸಹಕಾರವನ್ನು ಬಲಪಡಿಸುವುದು;
• ತ್ಯಾಜ್ಯದಿಂದ ಇಂಧನ ತಂತ್ರಜ್ಞಾನಗಳು, ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆ ವಿಧಾನಗಳ ಸಹಕಾರದ ಮೂಲಕ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುವುದು;
• ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸುಸ್ಥಿರ ಕೃಷಿ ಪದ್ಧತಿಗಳು, ಹವಾಮಾನ ಪರಿಣಾಮ ತಗ್ಗಿಸುವ ತಂತ್ರಜ್ಞಾನಗಳನ್ನು ಉತ್ತೇಜಿಸುವುದು, ಸಮುದ್ರ ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳ ರಕ್ಷಣೆ, ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣೆ, ಕೃಷಿ ಅರಣ್ಯೀಕರಣಕ್ಕೆ ಉತ್ತೇಜನ ಮತ್ತು ಬಿದಿರಿನಂತಹ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ;
• ಜಂಟಿ ಕ್ರೆಡಿಟ್ ಮೆಕ್ಯಾನಿಸಂ (ಜೆ.ಸಿ.ಎಂ.), ಮುಂದಿನ ಪೀಳಿಗೆಗೆ ಶುದ್ಧ ಇಂಧನ ಚಲನಶೀಲತೆ ಮತ್ತು ಮೂಲಸೌಕರ್ಯ ಉಪಕ್ರಮ (ಐ.ಸಿ.ಇ.ಎಂ.ಎ.ಎನ್.-ICEMAN), ಹಸಿರು ಹೈಡ್ರೋಜನ್ ಮೌಲ್ಯ ಸರಪಳಿ ಮತ್ತು ಹೊರಸೂಸುವಿಕೆಯ ಅಂದಾಜಿಗಾಗಿ ಉಪಗ್ರಹ ತಂತ್ರಜ್ಞಾನದ ಬಳಕೆಯಂತಹ ಉಪಕ್ರಮಗಳ ಮೂಲಕ ಶುದ್ಧ ಇಂಧನ ಮತ್ತು ಹೊರಸೂಸುವಿಕೆ ಹಾಗು ಮಾಲಿನ್ಯ ನಿಯಂತ್ರಣ/ ಕಡಿತದಲ್ಲಿ ಸಹಕಾರ; ಮತ್ತು
• ಲೀಡರ್‌ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್ (ಲೀಡ್ ಐ.ಟಿ- LeadIT) ಗುಂಪಿನಂತಹ ಬಹುಪಕ್ಷೀಯ ಪರಿಸರ ಸಂಸ್ಥೆಗಳಲ್ಲಿ ಪ್ರಯತ್ನಗಳನ್ನು ವರ್ಧಿಸುವುದು.
(V) ಮುಂದಿನ ಪೀಳಿಗೆಯ ತಂತ್ರಜ್ಞಾನ ಮತ್ತು ನಾವೀನ್ಯತಾ ಪಾಲುದಾರಿಕೆ
ಈ ಕೆಳಗಿನ ಹಂತಗಳ ಮೂಲಕ ಮೂಲಭೂತ ವಿಜ್ಞಾನಗಳಲ್ಲಿ ಗಡಿಯಾಚೆಗಿನ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ಮುಂದುವರಿಸುವ ಕುರಿತು ಅಂತರ-ವಲಯ ಸಹಯೋಗವನ್ನು ಉತ್ತೇಜಿಸಲು ನಾವು ಪರಸ್ಪರರ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳು, ಸಂಸ್ಥೆಗಳು ಮತ್ತು ಮಾನವಶಕ್ತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ:
• ಕೆ.ಇ.ಕೆ., ತ್ಸುಕುಬಾದಲ್ಲಿ ಭಾರತೀಯ ಬೀಮ್‌ಲೈನ್ ಮೂಲಕ ಮೂಲಭೂತ ಸಂಶೋಧನೆಯಲ್ಲಿ ಸಹಯೋಗ, ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಸಂಶೋಧನಾ ಪರಿಕರಗಳಿಗಾಗಿ ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ನಲ್ಲಿ ಸಹಕಾರ;
• ಜಪಾನ್ ಪ್ರಾರಂಭಿಸಿದ ಜಪಾನ್-ಭಾರತ ಸ್ಟಾರ್ಟ್‌ಅಪ್ ಬೆಂಬಲ ಉಪಕ್ರಮ (ಜಿಸ್ಸಿ-JISSI) ಮೂಲಕ ಮುಕ್ತ-ನಾವೀನ್ಯತೆ, ಸಾಮಾಜಿಕ ಸಮಸ್ಯೆ ಪರಿಹಾರ, ಮುಂದುವರಿದ-ತಂತ್ರಜ್ಞಾನ, ಡೇಟಾ-ಬಳಕೆ, ಇನ್ಕ್ಯುಬೇಶನ್ ಮತ್ತು ಹಣಕಾಸಿನ ಕುರಿತು ಸ್ಟಾರ್ಟ್‌ಅಪ್ ಸಹಯೋಗ, ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳ ಜೋಡಣೆ ಹಾಗು ಎರಡೂ ದೇಶಗಳಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಸ್ಟಾರ್ಟ್‌ಅಪ್‌ಗಳನ್ನು ಸಕ್ರಿಯಗೊಳಿಸುವುದು;
• "ಭಾರತ-ಜಪಾನ್ ನಿಧಿಗಳ ನಿಧಿ" ಮೂಲಕ ಎ.ಐ. ಕ್ಷೇತ್ರದಲ್ಲಿರುವ ಕಂಪನಿಗಳು ಸೇರಿದಂತೆ ಸ್ಟಾರ್ಟ್-ಅಪ್ ಕಂಪನಿಗಳಿಗೆ ಹಣವನ್ನು ಕ್ರೋಢೀಕರಿಸುವುದು;
• ಭಾರತ-ಜಪಾನ್ ಐಸಿಟಿ ಸಹಕಾರ ಚೌಕಟ್ಟಿನ ಅಡಿಯಲ್ಲಿ ಜಂಟಿ ಕಾರ್ಯನಿರತ ಗುಂಪಿನ ಮೂಲಕ ಐಸಿಟಿ ಸಹಕಾರವನ್ನು ಉತ್ತೇಜಿಸುವುದು;
• ಚಂದ್ರ ಧ್ರುವ ಪರಿಶೋಧನೆ (ಲೂಪೆಕ್ಸ್ -LUPEX) ಮಿಷನ್ ಮೂಲಕ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ವರ್ಧಿತ ಸಹಕಾರ ಮತ್ತು ಬಾಹ್ಯಾಕಾಶ ವಲಯದಲ್ಲಿ ಖಾಸಗಿ ವಾಣಿಜ್ಯ ಘಟಕಗಳು ಹಾಗು ಸ್ಟಾರ್ಟ್-ಅಪ್‌ಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸುವುದು;
• ಐಟಿಇಆರ್ ಸೇರಿದಂತೆ ವಿದಳನ ಮತ್ತು ಸಮ್ಮಿಳನ ತಂತ್ರಜ್ಞಾನದ ಕುರಿತು ಸಂವಾದ ಮತ್ತು ಸಣ್ಣ ಮಾಡ್ಯುಲರ್ ಮತ್ತು ಮುಂದುವರಿದ ರಿಯಾಕ್ಟರ್‌ಗಳ ಕುರಿತು ಜಂಟಿ ಸಂಶೋಧನೆ; ಹಾಗು
• ಆಹಾರ ತಂತ್ರಜ್ಞಾನ ಮತ್ತು ಕೃಷಿ ವಿಜ್ಞಾನಗಳಲ್ಲಿ ಜಂಟಿ ಸಂಶೋಧನೆ, ಇದರಲ್ಲಿ ಜಿ 20 ಹೊಸದಿಲ್ಲಿ ಘೋಷಣೆಗೆ ಅನುಗುಣವಾಗಿ ಸಿರಿಧಾನ್ಯಗಳು ಸೇರಿದಂತೆ ಮುಂದಿನ ಪೀಳಿಗೆಯ ಕೃಷಿಯನ್ನು ಸಬಲೀಕರಣಗೊಳಿಸಲು ನಾವೀನ್ಯತೆಗಳನ್ನು ಮುಂದುವರಿಸುವುದು (AI-ENGAGE)
(VI) ಮುಂದಿನ ಪೀಳಿಗೆಯ ಆರೋಗ್ಯದಲ್ಲಿ ಹೂಡಿಕೆ
ಕ್ಲಿನಿಕಲ್ ಮತ್ತು ವೈದ್ಯಕೀಯ ಸಂಶೋಧನಾ ಸಹಯೋಗವನ್ನು ಜಂಟಿಯಾಗಿ ಉತ್ತೇಜಿಸುವ ಮೂಲಕ, ಸಾಂಕ್ರಾಮಿಕ ರೋಗಗಳು ಮತ್ತು ಉದಯೋನ್ಮುಖ ಆರೋಗ್ಯ ಪ್ರವೃತ್ತಿಗಳನ್ನು ನಿಭಾಯಿಸುವ ಮೂಲಕ, ಜೀವ ಉಳಿಸುವ ಔಷಧಿಗಳಿಗೆ ಕೈಗೆಟುಕುವ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ಸಾಂಪ್ರದಾಯಿಕ ಹಾಗು ಪರ್ಯಾಯ ಔಷಧದ ಸಾಮರ್ಥ್ಯವನ್ನು ಈ ಕೆಳಗಿನ ಹಂತಗಳ ಮೂಲಕ ಬಳಸಿಕೊಂಡು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು (ಯು.ಎಚ್.ಸಿ.-UHC) ಸಾಧಿಸುವ ಗುರಿಯೊಂದಿಗೆ, ನಮ್ಮ ಜನರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಹೂಡಿಕೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ:
• ಭಾರತದ ಆಯುಷ್ಮಾನ್ ಭಾರತ್ ಉಪಕ್ರಮ ಮತ್ತು ಜಪಾನ್‌ನ ಏಷ್ಯಾ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಹಾಗೂ ಜಾಗತಿಕ ಆರೋಗ್ಯ ವಲಯದಲ್ಲಿ ಸಹಕಾರವನ್ನು ಬಲಪಡಿಸುವುದು;
• ನಿಯಮಿತವಾಗಿ ಜಂಟಿ ಸಮಿತಿ ಸಭೆಗಳನ್ನು ನಡೆಸುವ ಮೂಲಕ ಸಹಕಾರದ ಮತ್ತಷ್ಟು ಕ್ಷೇತ್ರಗಳನ್ನು ಗುರುತಿಸುವುದು;
• ವೃದ್ಧಾಪ್ಯದ ಔಷಧ, ಕಾಂಡಕೋಶ ಚಿಕಿತ್ಸೆ, ಪುನರುತ್ಪಾದಕ ಔಷಧ, ಜೀನ್ ಚಿಕಿತ್ಸೆ, ಸಂಶ್ಲೇಷಿತ ಜೀವಶಾಸ್ತ್ರ, ಕ್ಯಾನ್ಸರ್ ಚಿಕಿತ್ಸೆ, ಡಿಜಿಟಲ್ ಆರೋಗ್ಯ ಮತ್ತು ಸ್ವಯಂಚಾಲಿತ ರೋಗನಿರ್ಣಯ ಪರಿಹಾರಗಳ ಉದಯೋನ್ಮುಖ ಕ್ಷೇತ್ರಗಳ ಕುರಿತು ಜಂಟಿ ಸಂಶೋಧನೆ;
• ಯು.ಎಚ್.ಸಿ (UHC) ಯ ಪ್ರಚಾರವನ್ನು ತ್ವರಿತಗೊಳಿಸಲು "ಯು.ಎಚ್.ಸಿ. ಜ್ಞಾನ ಕೇಂದ್ರ" ದೊಂದಿಗೆ ಸಹಯೋಗವನ್ನು ಅನ್ವೇಷಿಸುವುದು;
• ವೈದ್ಯಕೀಯ ಸಂಸ್ಥೆಗಳ ನಡುವೆ ಹೆಚ್ಚಿನ ಸಹಯೋಗದ ಮೂಲಕ ವೈದ್ಯಕೀಯ ವೃತ್ತಿಪರರ ವಿನಿಮಯವನ್ನು ಉತ್ತೇಜಿಸುವುದು ಮತ್ತು ವೈದ್ಯಕೀಯ ವೃತ್ತಿಪರರಿಗೆ ಫೆಲೋಶಿಪ್ ಪ್ರಾರಂಭಿಸುವುದು;
• ನಮ್ಮ ಎರಡೂ ದೇಶಗಳಲ್ಲಿ ನಿರ್ಣಾಯಕ ಔಷಧಗಳು, ಎ.ಪಿ.ಐ. ಗಳು ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ಸುಗಮಗೊಳಿಸುವುದು ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸುವುದು; ಮತ್ತು
• ಭಾರತದಲ್ಲಿರುವ ಆಯುಷ್ ಸಚಿವಾಲಯದ ಬೆಂಬಲದೊಂದಿಗೆ ಜಪಾನ್‌ನಲ್ಲಿ ಯೋಗ, ಧ್ಯಾನ, ಆಯುರ್ವೇದ ಮತ್ತು ಸಮಗ್ರ ಸ್ವಾಸ್ಥ್ಯವನ್ನು ಉತ್ತೇಜಿಸುವ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವುದು.
(VII) ಮುಂದಿನ ಪೀಳಿಗೆಯ ಜನತೆ ಮತ್ತು ಜನತೆಯ ನಡುವಣ ಪಾಲುದಾರಿಕೆ
ನಮ್ಮ ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಪರ್ಕಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಗುರುತಿಸುವುದು ಮತ್ತು ನಮ್ಮ ಆಯಾ ಆರ್ಥಿಕ ಮತ್ತು ಜನಸಂಖ್ಯಾ ಸವಾಲುಗಳನ್ನು ನಿಭಾಯಿಸುವಲ್ಲಿ ನಮ್ಮ ಮಾನವ ಸಂಪನ್ಮೂಲಗಳ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಯತ್ನಿಸುವುದು, ನಮ್ಮ ಜನತೆ ಮತ್ತು ಜನತೆ ನಡುವಿನ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ:
• ಭಾರತದಿಂದ ಜಪಾನ್‌ಗೆ 50,000 ನುರಿತ ಸಿಬ್ಬಂದಿ ಮತ್ತು ಸಮರ್ಥ ಪ್ರತಿಭೆಗಳು ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ಎರಡೂ ದಿಕ್ಕುಗಳಲ್ಲಿ 500,000ಕ್ಕೂ ಹೆಚ್ಚು ಸಿಬ್ಬಂದಿಗಳ ವಿನಿಮಯವನ್ನು ಗುರಿಯಾಗಿಟ್ಟುಕೊಂಡು ಭಾರತ-ಜಪಾನ್ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಕಾರಕ್ಕಾಗಿ ಕ್ರಿಯಾ ಯೋಜನೆಯನ್ನು ಪ್ರಾರಂಭಿಸುವುದು;
• ಜಪಾನ್-ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜಿಮ್ –ಜೆ.ಐ.ಎಂ.) ಮತ್ತು ಜಪಾನೀಸ್ ಎಂಡೋವ್ಡ್ ಕೋರ್ಸ್‌ಗಳ (ಜೆ.ಇ.ಸಿ.) ಸಾಧನೆಗಳ ಮೇಲೆ ನಿರ್ಮಿಸಲಾದ ಭಾರತ-ನಿಪ್ಪಾನ್ ಪ್ರೋಗ್ರಾಂ ಫಾರ್ ಅಪ್ಲೈಡ್ ಕಾಂಪಿಟೆನ್ಸಿ ಟ್ರೈನಿಂಗ್ (ಇಂಪ್ಯಾಕ್ಟ್- INPACT) ಅಡಿಯಲ್ಲಿ ಭಾರತದಲ್ಲಿ ದತ್ತಿ ಕೋರ್ಸ್‌ಗಳು ಮತ್ತು ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸುವುದು ಮತ್ತು ಜಪಾನ್‌ನಲ್ಲಿ ಭಾರತೀಯ ಸಿಬ್ಬಂದಿಗೆ ತರಬೇತಿ ನೀಡುವುದು;
• ಜಪಾನ್‌ನ ಎಂ.ಇ.ಟಿ.ಐ.(METI) ನಿಂದ ಭಾರತ-ಜಪಾನ್ ಟ್ಯಾಲೆಂಟ್ ಬ್ರಿಡ್ಜ್ (ಐ.ಜೆ.ಟಿ.ಬಿ.-IJTB) ಅಡಿಯಲ್ಲಿ ಎರಡು ದೇಶಗಳ ನಡುವೆ ಪ್ರತಿಭಾ ಚಲನಶೀಲತೆಯನ್ನು ಉತ್ತೇಜಿಸುವುದಕ್ಕೆ ಮೀಸಲಾದ ವೆಬ್‌ಸೈಟ್ ಮೂಲಕ ಉದ್ಯೋಗ ಪ್ರಚಾರ ಕಾರ್ಯಕ್ರಮಗಳು, ಇಂಟರ್ನ್‌ಶಿಪ್ ಕಾರ್ಯಕ್ರಮಗಳು, ಉದ್ಯೋಗ ಸಮೀಕ್ಷೆಗಳು ಮತ್ತು ಮಾಹಿತಿ ಪ್ರಸರಣವನ್ನು ಪ್ರಾರಂಭಿಸುವುದು;
• ಜಪಾನ್‌ನ ಎಂ.ಇ.ಎಕ್ಸ್.ಟಿ (MEXT) ನಿಂದ ಸಕುರಾ ವಿಜ್ಞಾನ ವಿನಿಮಯ ಕಾರ್ಯಕ್ರಮ, ಲೋಟಸ್ (LOTUS) ಕಾರ್ಯಕ್ರಮ, ಹೋಪ್ (HOPE) ಸಭೆಗಳು ಮತ್ತು ಅಂತರ-ವಿಶ್ವವಿದ್ಯಾಲಯ ವಿನಿಮಯ ಯೋಜನೆಯ ಮೂಲಕ ಸಂಶೋಧಕರು ಮತ್ತು ವಿದ್ಯಾರ್ಥಿಗಳ ವಿನಿಮಯವನ್ನು ಬಲಪಡಿಸುವುದು ಮತ್ತು ಎಜು (EDU) -ಪೋರ್ಟ್ ಜಪಾನ್‌ನ ಉಪಕ್ರಮದ ಮೂಲಕ ಶೈಕ್ಷಣಿಕ ಸಹಯೋಗವನ್ನು ಬೆಂಬಲಿಸುವುದು;
• ಭಾರತದಲ್ಲಿ ಇ-ಮೈಗ್ರೇಟ್ ಪೋರ್ಟಲ್, ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ ಸಾಂಸ್ಥಿಕ ಸಹಯೋಗ ಮತ್ತು ಕೆಲಸದ ಸ್ಥಳಗಳನ್ನು ಹೆಚ್ಚಿಸುವುದು;
• ಪರಸ್ಪರರ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಮೂಲಕ ಹೆಚ್ಚಿನ ದ್ವಿಪಕ್ಷೀಯ ಪ್ರವಾಸಿ ಹರಿವನ್ನು ಸುಗಮಗೊಳಿಸುವುದು;
• ಜಪಾನೀ ಭಾಷಾ ಶಿಕ್ಷಕರಿಗೆ ತರಬೇತಿ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ ಜಪಾನೀ ಭಾಷಾ ಶಿಕ್ಷಣದ ತಜ್ಞರನ್ನು ಕಳುಹಿಸುವ ಮೂಲಕ ಪರಿಣಾಮಕಾರಿ ಪಠ್ಯಕ್ರಮ ಮತ್ತು ಸಾಮಗ್ರಿಗಳನ್ನು ವಿನ್ಯಾಸಗೊಳಿಸಲು ಬೆಂಬಲ ನೀಡುವುದು; ಮತ್ತು
• ಭಾರತೀಯ ಜಪಾನೀಸ್ ಭಾಷಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬೆಂಬಲಿಸಲು "ನಿಹೊಂಗೋ (NIHONGO) ಪಾಲುದಾರ” ರಾದ ಜಪಾನೀಸ್ ಭಾಷಾ ಬೋಧನಾ ಸಹಾಯಕರನ್ನು ಭಾರತಕ್ಕೆ ಕಳುಹಿಸುವುದು.
(VIII) ಮುಂದಿನ ಪೀಳಿಗೆಯ ರಾಜ್ಯ-ಸಹಕಾರ ಪಾಲುದಾರಿಕೆ
ಮೇಲಿನ ಹಲವು ಪ್ರಯತ್ನಗಳನ್ನು ಸಾಕಾರಗೊಳಿಸುವಲ್ಲಿ ಭಾರತೀಯ ರಾಜ್ಯಗಳು ಮತ್ತು ಜಪಾನೀ ಪ್ರಾಂತ್ಯಗಳು ವಹಿಸಿದ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತಾ, ಭಾರತ-ಜಪಾನ್ ಪಾಲುದಾರಿಕೆಗಾಗಿ ಹೆಚ್ಚು ಸಮಗ್ರ ದೃಷ್ಟಿಕೋನಕ್ಕಾಗಿ ಅವುಗಳ ಶಕ್ತಿಯನ್ನು ಬಳಸಿಕೊಳ್ಳಲು ಸೂಕ್ತವಾದ ವೇದಿಕೆಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ:
• ಪೂರಕ ಸಂಪನ್ಮೂಲ ದತ್ತಿ ಮತ್ತು ಐತಿಹಾಸಿಕ ಸಂಪರ್ಕಗಳ ಆಧಾರದ ಮೇಲೆ ಹೊಸ ಸಹೋದರಿ ನಗರ ಮತ್ತು ರಾಜ್ಯ-ಪ್ರಾಂತ್ಯ ಪಾಲುದಾರಿಕೆಗಳನ್ನು ಉತ್ತೇಜಿಸುವುದು;
• ಭಾರತೀಯ ಮತ್ತು ಜಪಾನಿನ ನಗರಗಳ ನಡುವೆ ನೇರ ವಿಮಾನ ಸಂಪರ್ಕವನ್ನು ಹೆಚ್ಚಿಸುವುದು;
• ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿದಂತೆ ವಾಣಿಜ್ಯ ಮತ್ತು ವ್ಯಾಪಾರ ಪಾಲುದಾರಿಕೆಗಳನ್ನು ಬಲಪಡಿಸುವುದು, ಸ್ಥಳೀಯ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಭಾರತ-ಕನ್ಸೈ ವ್ಯಾಪಾರ ವೇದಿಕೆಯ ಮೂಲಕ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು, ಹಾಗೆಯೇ ಭಾರತ ಮತ್ತು ಕ್ಯುಶು ನಡುವೆ ಇದೇ ರೀತಿಯ ವ್ಯವಸ್ಥೆಗಳನ್ನು ಅನ್ವೇಷಿಸುವುದು;
• ಭಾರತ ಮತ್ತು ಜಪಾನ್‌ನೊಳಗಿನ ಪ್ರಾದೇಶಿಕ ಅವಕಾಶಗಳ ಕುರಿತು ಹೆಚ್ಚಿನ ಮಾಹಿತಿ ವಿನಿಮಯವನ್ನು ಸುಗಮಗೊಳಿಸುವುದು ಮತ್ತು ಹಂಚಿಕೆಯ ಸವಾಲುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ರಾಜ್ಯಗಳು ಮತ್ತು ಪ್ರಾಂತ್ಯಗಳ ನಡುವೆ ಉತ್ತಮ ಅಭ್ಯಾಸಗಳ ಹಂಚಿಕೆ; ಮತ್ತು
• ಭಾರತದ ವಿದೇಶಾಂಗ ಸಚಿವಾಲಯ ಮತ್ತು ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ವರ್ಷಕ್ಕೆ 3 ಭೇಟಿಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯ-ಪ್ರಾಂತ್ಯ ಮಟ್ಟದ ನಿಯೋಗಗಳ ಭೇಟಿಗಳನ್ನು ಉತ್ತೇಜಿಸುವುದು;
ಮೇಲಿನ ಎಂಟು ಮಾರ್ಗಗಳ ಪ್ರಯತ್ನದ ಮೂಲಕ, ನಮ್ಮ ದ್ವಿಪಕ್ಷೀಯ ಸಂಬಂಧಗಳ ಸ್ಥಾಪನೆಯ ಎಂಟನೇ ದಶಕದಲ್ಲಿ ಭಾರತ-ಜಪಾನ್ ಜನ-ಆಧಾರಿತ ಪಾಲುದಾರಿಕೆಯ ಪರಿವರ್ತನಾತ್ಮಕ ಹಂತವನ್ನು ಪ್ರಾರಂಭಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಸ್ಪಷ್ಟ ಪ್ರಯೋಜನಗಳು ಮತ್ತು ಸಹಯೋಗದ ಅವಕಾಶಗಳನ್ನು ತರಲು ನಾವು ಆಶಿಸುತ್ತೇವೆ.
2025ರ ಆಗಸ್ಟ್ 29-30, ರಂದು ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಘನತೆವೆತ್ತ ಶ್ರೀ ಇಶಿಬಾ ಶಿಗೇರು ಅವರ ಆಹ್ವಾನದ ಮೇರೆಗೆ, 2025ರ ವಾರ್ಷಿಕ ಶೃಂಗಸಭೆಗಾಗಿ ಭಾರತದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನರೇಂದ್ರ ಮೋದಿ ಅವರು ಜಪಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮುಂಬರುವ ದಶಕದ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಈ ದಾಖಲೆಯನ್ನು ನಾವು ಈ ಮೂಲಕ ಅಂಗೀಕರಿಸುತ್ತೇವೆ.
*****
(Release ID: 2162203)
Visitor Counter : 23
Read this release in:
Punjabi
,
Odia
,
English
,
Urdu
,
हिन्दी
,
Marathi
,
Bengali
,
Assamese
,
Manipuri
,
Gujarati
,
Tamil
,
Telugu
,
Malayalam