ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಫಿಜಿ ಜಂಟಿ ಹೇಳಿಕೆ: ʻವೀಲೋಮನಿ ದೋಸ್ತಿʼಯ ಸ್ಫೂರ್ತಿಯೊಂದಿಗೆ ಪಾಲುದಾರಿಕೆ
Posted On:
25 AUG 2025 1:52PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಫಿಜಿ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ಸಿಟಿವೇನಿ ರಬೂಕಾ ಅವರು 2025ರ ಆಗಸ್ಟ್ 24 ರಿಂದ 26ರವರೆಗೆ ಭಾರತ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಿದರು. ಪ್ರಸ್ತುತ ತಮ್ಮ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ರಬುಕಾ ಅವರು ತಮ್ಮ ಪತ್ನಿಯ ಸಂಗಡವಾಗಿ ನವದೆಹಲಿಗೆ ಭೇಟಿ ನೀಡಿದ್ದಾರೆ. ಫಿಜಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ಸಚಿವರಾದ ಗೌರವಾನ್ವಿತ ಶ್ರೀ ಆಂಟೋನಿಯೊ ಲಾಲಬಲಾವು ಮತ್ತು ಫಿಜಿ ಗಣರಾಜ್ಯದ ಸರ್ಕಾರದ ಹಿರಿಯ ಅಧಿಕಾರಿಗಳ ನಿಯೋಗ ಅವರ ಜೊತೆಯಲ್ಲಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಬುಕಾ ಮತ್ತು ಅವರ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ನಾಯಕರು ದ್ವಿಪಕ್ಷೀಯ ವಿಷಯಗಳು ಹಾಗೂ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸಮಗ್ರ ಮತ್ತು ದೂರದೃಷ್ಟಿಯ ಚರ್ಚೆಗಳನ್ನು ನಡೆಸಿದರು. ಉಭಯ ನಾಯಕರು ಎರಡೂ ದೇಶಗಳ ನಡುವೆ ಸಂಬಂಧದ ಬೆಳವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಜೊತೆಗೆ ರಕ್ಷಣೆ, ಆರೋಗ್ಯ, ಕೃಷಿ, ಕೃಷಿ ಸಂಸ್ಕರಣೆ, ವ್ಯಾಪಾರ ಮತ್ತು ಹೂಡಿಕೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ, ಸಹಕಾರಿಗಳು, ಸಂಸ್ಕೃತಿ, ಕ್ರೀಡೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ವಿಶಾಲ, ಎಲ್ಲರನ್ನೂ ಒಳಗೊಂಡ ಮತ್ತು ಮುಂದಾಲೋಚನೆಯ ಪಾಲುದಾರಿಕೆಯನ್ನು ನಿರ್ಮಿಸುವ ತಮ್ಮ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು.
2024ರ ಆಗಸ್ಟ್‌ನಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಫಿಜಿಗೆ ಕೈಗೊಂಡ ತಮ್ಮ ಐತಿಹಾಸಿಕ ಮೊದಲ ಭೇಟಿ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ವಿನಿಮಯದಲ್ಲಿ ಕಂಡುಬಂದಿರುವ ವೇಗದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. 2023ರ ಫೆಬ್ರವರಿಯಲ್ಲಿ ಫಿಜಿಯ ʻನಡಿʼ ನಗರದಲ್ಲಿ ನಡೆದ ʻ12ನೇ ವಿಶ್ವ ಹಿಂದಿ ಸಮ್ಮೇಳನʼವನ್ನು ಯಶಸ್ವಿಯಾಗಿ ಆಯೋಜಿಸಿದ್ದನ್ನು ಅವರು ಸ್ಮರಿಸಿದರು. ಈ ಸಮ್ಮೇಳನವು ಭಾರತ ಮತ್ತು ಫಿಜಿ ನಡುವಿನ ಪರಸ್ಪರ ಸಮಾನ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಿತು.
ಭಾರತ ಮತ್ತು ಫಿಜಿ ನಡುವೆ ಆಳವಾಗಿ ಬೇರೂರಿರುವ ಮತ್ತು ದೀರ್ಘಕಾಲೀನ ಸಂಬಂಧ ಹಾಗೂ ಜನರ ನಡುವಿನ ಬಲವಾದ ಬಾಂಧವ್ಯವನ್ನು ನಾಯಕರು ಪುನರುಚ್ಚರಿಸಿದರು. ಫಿಜಿಯ ಬಹುಸಂಸ್ಕೃತಿಯ ಅಸ್ಮಿತೆ, ವೈವಿಧ್ಯಮಯ ಸಮಾಜ ಮತ್ತು ಆರ್ಥಿಕತೆಯನ್ನು ರೂಪಿಸುವಲ್ಲಿ 1879 ಮತ್ತು 1916ರ ನಡುವೆ ಫಿಜಿಗೆ ಆಗಮಿಸಿದ 60,000ಕ್ಕೂ ಹೆಚ್ಚು ಭಾರತೀಯ ಗುತ್ತಿಗೆ ಕಾರ್ಮಿಕರಾದ ʻಗಿರ್ಮಿಟಿಯಾʼಗಳ ಕೊಡುಗೆಯನ್ನು ಅವರು ಶ್ಲಾಘಿಸಿದರು. 2025ರ ಮೇ ತಿಂಗಳಲ್ಲಿ ನಡೆದ 146ನೇ ʻಗಿರ್ಮಿಟ್ ದಿನʼದ ಸ್ಮರಣೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರ ಮತ್ತು ಜವಳಿ ಖಾತೆ ಸಹಾಯಕ ಸಚಿವರಾದ ಶ್ರೀ ಪಬಿತ್ರ ಮಾರ್ಗರಿಟಾ ಅವರು ಫಿಜಿ ಗಣರಾಜ್ಯಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಮಂತ್ರಿ ರಬುಕಾ ಶ್ಲಾಘಿಸಿದರು.
2025ರ ಜುಲೈನಲ್ಲಿ 6ನೇ ಸುತ್ತಿನ ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದನ್ನು ನಾಯಕರು ಉಲ್ಲೇಖಿಸಿದರು, ಇದು ಪ್ರಗತಿಯನ್ನು ಪರಿಶೀಲಿಸಲು ಮತ್ತು ಸಹಕಾರದ ಹೊಸ ಕ್ಷೇತ್ರಗಳನ್ನು ಗುರುತಿಸಲು ಪ್ರಮುಖ ವೇದಿಕೆಯನ್ನು ಒದಗಿಸಿದೆ.
ಉಭಯ ನಾಯಕರು ಭಯೋತ್ಪಾದನೆಯ ವಿರುದ್ಧದ ಸಹಕಾರವನ್ನು ಬಲಪಡಿಸಲು ಸಹಮತಿಸಿದರು ಮತ್ತು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸಿದರು. 26 ಮುಗ್ಧ ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಇಬ್ಬರೂ ನಾಯಕರು ಬಲವಾಗಿ ಖಂಡಿಸಿದರು; ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಪುನರುಚ್ಚರಿಸಿದರು ಮತ್ತು ಭಯೋತ್ಪಾದನೆಯ ಬಗ್ಗೆ ದ್ವಂದ್ವ ಮಾನದಂಡಗಳನ್ನು ತಿರಸ್ಕರಿಸಿದರು. ಮೂಲಭೂತವಾದವನ್ನು ಎದುರಿಸುವುದು; ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವುದು; ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ತಡೆಗಟ್ಟುವುದು ಹಾಗೂ ಜಂಟಿ ಪ್ರಯತ್ನಗಳು ಮತ್ತು ಸಾಮರ್ಥ್ಯ ವರ್ಧನೆಯ ಮೂಲಕ ಭಯೋತ್ಪಾದಕ ನೇಮಕಾತಿ ಮತ್ತು ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳನ್ನು ನಿಭಾಯಿಸುವುದರ ಅಗತ್ಯವನ್ನು ಉಭಯ ದೇಶಗಳು ಅಂಗೀಕರಿಸಿದವು. ಭಯೋತ್ಪಾದನೆಯನ್ನು ಎದುರಿಸಲು ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು.
ಭಾರತದ ʻಮಿಷನ್ ಲೈಫ್(LiFE)ʼ ಮತ್ತು ʻನೀಲಿ ಪೆಸಿಫಿಕ್ ಖಂಡಕ್ಕಾಗಿ 2050ರ ಕಾರ್ಯತಂತ್ರʼದ ಆಶಯದಡಿ ಹವಾಮಾನ ಉಪಕ್ರಮ, ಸ್ಥಿತಿಸ್ಥಾಪಕತ್ವ ನಿರ್ಮಾಣ ಮತ್ತು ಸುಸ್ಥಿರ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ʻಅಂತಾರಾಷ್ಟ್ರೀಯ ಸೌರ ಮೈತ್ರಿʼ (ಐ.ಎಸ್.ಎ), ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟʼ (ಸಿ.ಡಿ.ಆರ್.ಐ) ಮತ್ತು ʻಜಾಗತಿಕ ಜೈವಿಕ ಇಂಧನ ಒಕ್ಕೂಟʼದಲ್ಲಿ(ಜಿ.ಬಿ.ಎ) ಫಿಜಿ ಸದಸ್ಯತ್ವ ಪಡೆದಿರುವುದನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು. ʻಐ.ಎಸ್.ಎʼ ಜೊತೆ ತ್ರಿಪಕ್ಷೀಯ ಒಪ್ಪಂದದ ಮೂಲಕ ʻಫಿಜಿ ರಾಷ್ಟ್ರೀಯ ವಿಶ್ವವಿದ್ಯಾಲʼಯದಲ್ಲಿ ʻಸ್ಟಾರ್(STAR)-ಕೇಂದ್ರʼದ ಸ್ಥಾಪನೆ ಮತ್ತು ಫಿಜಿಯಲ್ಲಿನ ಆದ್ಯತೆಯ ಕ್ಷೇತ್ರಗಳಲ್ಲಿ ಸೌರಶಕ್ತಿ ನಿಯೋಜನೆಯನ್ನು ಹೆಚ್ಚಿಸಲು ದೇಶದ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕುವುದು ಸೇರಿದಂತೆ ʻಐ.ಎಸ್.ಎʼನಲ್ಲಿ ಹೆಚ್ಚುತ್ತಿರುವ ಸಹಯೋಗವನ್ನು ನಾಯಕರು ಸ್ವಾಗತಿಸಿದರು. ತಾಂತ್ರಿಕ ನೆರವು, ಸಾಮರ್ಥ್ಯವರ್ಧನೆ ಮತ್ತು ಜಾಗತಿಕ ವೇದಿಕೆಗಳಲ್ಲಿ ವಕಾಲತ್ತು ಮಾಡುವ ಮೂಲಕ ʻಸಿ.ಡಿ.ಆರ್.ಐʼ ನೀತಿ ವ್ಯಾಪ್ತಿಯೊಳಗೆ ಫಿಜಿಯ ರಾಷ್ಟ್ರೀಯ ಸ್ಥಿತಿಸ್ಥಾಪಕತ್ವ ಗುರಿಗಳನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಮೋದಿ ಅವರು ಪುನರುಚ್ಚರಿಸಿದರು.
ʻಜಾಗತಿಕ ಜೈವಿಕ ಇಂಧನ ಒಕ್ಕೂಟʼದ (ಜಿ.ಬಿ.ಎ) ನೀತಿ ಚೌಕಟ್ಟಿನ ಅಡಿಯಲ್ಲಿ, ಸುಸ್ಥಿರ ಇಂಧನ ಪರಿಹಾರವಾಗಿ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸುವ ತಮ್ಮ ಸಮಾನ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಒಕ್ಕೂಟದ ಸಂಸ್ಥಾಪಕ ಮತ್ತು ಸಕ್ರಿಯ ಸದಸ್ಯರಾಗಿ, ಉಭಯ ನಾಯಕರೂ ಇಂಧನ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಎಲ್ಲರನ್ನೂ ಒಳಗೊಂಡ ಗ್ರಾಮೀಣಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಜೈವಿಕ ಇಂಧನಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಫಿಜಿಯಲ್ಲಿ ಸುಸ್ಥಿರ ಜೈವಿಕ ಇಂಧನ ಉತ್ಪಾದನೆ ಮತ್ತು ನಿಯೋಜನೆಯನ್ನು ಬೆಂಬಲಿಸಲು ಸಾಮರ್ಥ್ಯವರ್ಧನೆ, ತಾಂತ್ರಿಕ ನೆರವು ಮತ್ತು ನೀತಿ ಚೌಕಟ್ಟುಗಳ ಸಹಕಾರವನ್ನು ಬಲಪಡಿಸಲು ಅವರು ಒಪ್ಪಿಕೊಂಡರು.
ದ್ವಿಪಕ್ಷೀಯ ವ್ಯಾಪಾರದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ನಾಯಕರು ಒಪ್ಪಿಕೊಂಡರು. ಇದೇ ವೇಳೆ, ಭಾರತ ಮತ್ತು ಫಿಜಿ ನಡುವೆ ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಬಳಕೆಯಾಗದೆ ಉಳಿದ ಗಣನೀಯ ಸಾಮರ್ಥ್ಯವನ್ನು ಗುರುತಿಸಿದರು. ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಕ್ರೋಢೀಕರಿಸಲು, ವ್ಯಾಪಾರ ಬಂಡವಾಳಗಳನ್ನು ವೈವಿಧ್ಯಗೊಳಿಸಲು ಮತ್ತು ಪೂರೈಕೆ ಸರಪಳಿಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು. ಫಿಜಿ ಸರ್ಕಾರವು ಭಾರತೀಯ ತುಪ್ಪಕ್ಕೆ ಮಾರುಕಟ್ಟೆ ಪ್ರವೇಶವನ್ನು ನೀಡಿರುವುದನ್ನು ಪ್ರಧಾನಮಂತ್ರಿ ಮೋದಿ ಸ್ವಾಗತಿಸಿದರು.
ದೃಢವಾದ, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ʻಇಂಡೋ-ಪೆಸಿಫಿಕ್ ಆರ್ಥಿಕ ಯೋಜನೆʼಗಾಗಿ ತಮ್ಮ ಸಮಾನ ದೃಷ್ಟಿಕೋನವನ್ನು ಪುನರುಚ್ಚರಿಸಿದ ಉಭಯ ನಾಯಕರು, ಪರಸ್ಪರ ಸಮೃದ್ಧಿಯನ್ನು ಉತ್ತೇಜಿಸಲು ನಿಕಟವಾಗಿ ಕೆಲಸ ಮಾಡಲು ಬದ್ಧರಾಗಿರುವುದಾಗಿ ತಿಳಿಸಿದರು. ʻಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕಾಗಿ ಕ್ರಿಯೆ ಆಧಾರಿತ ವೇದಿಕೆʼ (ಎಫ್.ಐ.ಪಿ.ಐ.ಸಿ) ಮೂಲಕ ʻಆಕ್ಟ್ ಈಸ್ಟ್ ಪಾಲಿಸಿʼ ಅಡಿಯಲ್ಲಿ ಫಿಜಿ ಸೇರಿದಂತೆ ಪೆಸಿಫಿಕ್ ದ್ವೀಪ ರಾಷ್ಟ್ರಗಳೊಂದಿಗೆ ಭಾರತದ ಹೆಚ್ಚುತ್ತಿರುವ ಸಂಬಂಧವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಜೊತೆಗೆ, ಪೆಸಿಫಿಕ್ ದ್ವೀಪಗಳ ವೇದಿಕೆಯಲ್ಲಿ (ಪಿ.ಐ.ಎಫ್) ಸಂವಾದ ಪಾಲುದಾರರಾಗಿ ಭಾರತದ ಭಾಗವಹಿಸುವಿಕೆಯನ್ನು ಒಪ್ಪಿಕೊಂಡರು. 2023ರ ಮೇ ತಿಂಗಳಲ್ಲಿ ನಡೆದ 3ನೇ ʻಎಫ್.ಐ.ಪಿ.ಐ.ಸಿʼ ಶೃಂಗಸಭೆಯ ಫಲಶ್ರುತಿಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಮೋದಿ ಅವರು, ಫಿಜಿಯ ಆದ್ಯತೆಗಳನ್ನು ಕೇಂದ್ರವಾಗಿಟ್ಟುಕೊಂಡು, ವ್ಯಾಪಕ ಉಪಕ್ರಮಗಳ ಮೂಲಕ ಈ ಪ್ರದೇಶದಲ್ಲಿ ಅಭಿವೃದ್ಧಿ ಪಾಲುದಾರಿಕೆಗೆ ಭಾರತ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದರು. ಆರೋಗ್ಯ ರಕ್ಷಣೆಯನ್ನು ಪ್ರಮುಖ ಆದ್ಯತೆಯ ಕ್ಷೇತ್ರವೆಂದು ಪುನರುಚ್ಚರಿಸಿದ ಇಬ್ಬರೂ ನಾಯಕರು, ʻಸುವಾʼ ನಗರದಲ್ಲಿ 100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿನ್ಯಾಸ, ನಿರ್ಮಾಣ, ಕಾರ್ಯಾರಂಭ, ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಇದು ಪೆಸಿಫಿಕ್ ಭಾಗದಲ್ಲಿ ಭರತ ತನ್ನ ಧನಸಹಾಯ ಕಾರ್ಯಕ್ರಮದ ಅಡಿಯಲ್ಲಿ ಕೈಗೊಂಡ ಅತಿದೊಡ್ಡ ಯೋಜನೆಯಾಗಿದೆ.
ಔಷಧೀಯ ಕ್ಷೇತ್ರದಲ್ಲಿ ಸಹಯೋಗವನ್ನು ಬಲಪಡಿಸುವ ಮತ್ತು ಫಿಜಿ ಗಣರಾಜ್ಯದಲ್ಲಿ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ 2025ರ ಮೇ ತಿಂಗಳಲ್ಲಿ ʻಭಾರತೀಯ ʻಫಾರ್ಮಾಕೊಪೊಯಿಯಾʼವನ್ನು ಗುರುತಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಪ್ರಧಾನಮಂತ್ರಿ ಮೋದಿ ಸ್ವಾಗತಿಸಿದರು. ಕಡಿಮೆ ಬೆಲೆಯ ಜೆನೆರಿಕ್ ಔಷಧಿಗಳನ್ನು ಒದಗಿಸಲು ಫಿಜಿಯಲ್ಲಿ ʻಜನೌಷಧಿ ಕೇಂದ್ರʼಗಳನ್ನು (ಪೀಪಲ್ಸ್ ಫಾರ್ಮಸಿ) ಸ್ಥಾಪಿಸಲು ಭಾರತದ ಬೆಂಬಲವನ್ನು ಅವರು ಪುನರುಚ್ಚರಿಸಿದರು. 2025ರ ಆಗಸ್ಟ್ 13ರಂದು ಭಾರತ ಗಣರಾಜ್ಯ ಮತ್ತು ಫಿಜಿ ಗಣರಾಜ್ಯದ ನಡುವೆ ಆರೋಗ್ಯ ಕುರಿತ 3ನೇ ಜಂಟಿ ಕಾರ್ಯಪಡೆ ಸಭೆ ನಡೆಸಿರುವುದನ್ನು ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೂರ ಪ್ರದೇಶಗಳಿಗೆ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ಬಗ್ಗೆ ಹಾಗೂ ಭಾರತ ಮತ್ತು ಫಿಜಿ ನಡುವೆ ಡಿಜಿಟಲ್ ಆರೋಗ್ಯ ಸಂಪರ್ಕವನ್ನು ಹೆಚ್ಚಿಸಲು ಭಾರತದ ಪ್ರಮುಖ ಟೆಲಿಮೆಡಿಸಿನ್ ಉಪಕ್ರಮವಾದ ʻಇ-ಸಂಜೀವನಿʼ ಅಡಿಯಲ್ಲಿ ಸಹಯೋಗದ ಬಗ್ಗೆ ಚರ್ಚಿಸಲಾಯಿತು. ಆರೋಗ್ಯ ಸಹಕಾರವನ್ನು ಬಲಪಡಿಸಲು, ಫಿಜಿಯಲ್ಲಿ 2ನೇ ʻಜೈಪುರ ಕಾಲು ಶಿಬಿರʼ ಆಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದರು. ಫಿಜಿಯ ಸಾಗರೋತ್ತರ ವೈದ್ಯಕೀಯ ರೆಫರಲ್ ಕಾರ್ಯಕ್ರಮಕ್ಕೆ ಪೂರಕವಾಗಿ ಭಾರತವು 'ಹೀಲ್ ಇನ್ ಇಂಡಿಯಾ' ಕಾರ್ಯಕ್ರಮದ ಅಡಿಯಲ್ಲಿ 10 ಫಿಜಿಯನ್ನರಿಗೆ ಭಾರತೀಯ ಆಸ್ಪತ್ರೆಗಳಲ್ಲಿ ವಿಶೇಷ / ತೃತೀಯ ವೈದ್ಯಕೀಯ ಆರೈಕೆ ಸೇವೆಗಳನ್ನು ವಿಸ್ತರಿಸಲಿದೆ.
ಭಾರತ-ಫಿಜಿ ಸಹಕಾರದ ಮೂಲಾಧಾರವಾಗಿ ಅಭಿವೃದ್ಧಿ ಪಾಲುದಾರಿಕೆಯನ್ನು ನಾಯಕರು ಪುನರುಚ್ಚರಿಸಿದರು. 2024ರಲ್ಲಿ ಟೋಂಗಾದಲ್ಲಿ ನಡೆದ 53ನೇ ʻಪೆಸಿಫಿಕ್ ದ್ವೀಪಗಳ ವೇದಿಕೆಯ ನಾಯಕರ ಸಭೆʼಯಲ್ಲಿ ಭಾರತ ಘೋಷಿಸಿದಂತೆ ಫಿಜಿ ಗಣರಾಜ್ಯದಲ್ಲಿ ಮೊದಲ ತ್ವರಿತ ಪರಿಣಾಮ ಯೋಜನೆ(ಕ್ಯೂ.ಐ.ಪಿ) ಅಡಿಯಲ್ಲಿ ʻತುಬಾಲೆವು ಗ್ರಾಮ ಅಂತರ್ಜಲ ಸರಬರಾಜು ಯೋಜನೆʼಗಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಇದು ಸ್ಥಳೀಯ ಸಮುದಾಯಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
ದ್ವಿಪಕ್ಷೀಯ ರಕ್ಷಣಾ ಸಂಬಂಧಗಳಲ್ಲಿ ಹೆಚ್ಚುತ್ತಿರುವ ವೇಗವನ್ನು ಉಭಯ ನಾಯಕರು ಒಪ್ಪಿಕೊಂಡರು. ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಮುನ್ನಡೆಸುವಲ್ಲಿ ತಮ್ಮ ಪರಸ್ಪರ ಸಮಾನ ಹಿತಾಸಕ್ತಿಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. 2017ರಲ್ಲಿ ಸಹಿ ಹಾಕಲಾದ ರಕ್ಷಣಾ ಸಹಕಾರ ಕುರಿತ ಒಪ್ಪಂದದಲ್ಲಿ ವಿವರಿಸಿರುವಂತೆ, ಸಹಕಾರದ ಆದ್ಯತೆಯ ಕ್ಷೇತ್ರಗಳನ್ನು ಮುನ್ನಡೆಸಲು ಮತ್ತು ಈ ಕ್ಷೇತ್ರಗಳಲ್ಲಿ ಫಿಜಿಯ ಕಾರ್ಯತಂತ್ರದ ಆದ್ಯತೆಗಳನ್ನು ಬೆಂಬಲಿಸಲು ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಮೋದಿ ಅವರು ಪುನರುಚ್ಚರಿಸಿದರು. ʻವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆʼಗಳು (ಯು.ಎನ್.ಪಿ.ಕೆ.ಒ), ಮಿಲಿಟರಿ ಔಷಧ, ವೈಟ್ ಶಿಪ್ಪಿಂಗ್ ಮಾಹಿತಿ ವಿನಿಮಯ (ಡಬ್ಲ್ಯು.ಎಸ್.ಐ.ಇ) ಮತ್ತು ಫಿಜಿ ಗಣರಾಜ್ಯದ ಮಿಲಿಟರಿ ಪಡೆಗಳ ಸಾಮರ್ಥ್ಯವರ್ಧನೆಯಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ಸೇರಿದಂತೆ ʻರಕ್ಷಣೆ ಕುರಿತ ಮೊದಲ ಜಂಟಿ ಕಾರ್ಯಪಡೆʼಯ (ಜೆ.ಡಬ್ಲ್ಯು.ಜಿ) ಸಭೆಯ ಫಲಶ್ರುತಿಗಳನ್ನು ನಾಯಕರು ಸ್ವಾಗತಿಸಿದರು.
ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಸಹಯೋಗದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಈ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ರಕ್ಷಣೆ ಮತ್ತು ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಫಿಜಿಯ ವಿಶೇಷ ಆರ್ಥಿಕ ವಲಯದ (ಇ.ಇ.ಝಡ್) ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಪ್ರಧಾನಮಂತ್ರಿ ರಬುಕಾ ಅವರು ಒತ್ತಿ ಹೇಳಿದರು ಮತ್ತು ಫಿಜಿ ಗಣರಾಜ್ಯದ ಭದ್ರತಾ ಅಗತ್ಯಗಳನ್ನು ಪೂರೈಸಲು ಸಹಾಯವನ್ನು ವಿಸ್ತರಿಸುವ ಭಾರತದ ಭರವಸೆಯನ್ನು ಸ್ವಾಗತಿಸಿದರು. ಫಿಜಿಗೆ ಭಾರತೀಯ ನೌಕಾ ಹಡಗು ಯೋಜಿತ ಬಂದರು ಕರೆಯನ್ನು ಪ್ರಧಾನಮಂತ್ರಿ ರಬುಕಾ ಅವರು ಸ್ವಾಗತಿಸಿದರು, ಇದು ಕಡಲ ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲಿದೆ.
ದ್ವಿಪಕ್ಷೀಯ ರಕ್ಷಣಾ ಪ್ರಯತ್ನಗಳಿಗೆ ವೇಗ ನೀಡುವ ಗುರಿಯೊಂದಿಗೆ ಮತ್ತು ಪರಸ್ಪರ ಪ್ರಯೋಜನಗಳನ್ನು ಉತ್ತೇಜಿಸುವ ಹಾಗೂ ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಮುನ್ನಡೆಸುವ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾದ ಹೊಸ ಉಪಕ್ರಮಗಳ ಮೂಲಕ ಉಭಯ ದೇಶಗಳ ರಕ್ಷಣಾ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಫಿಜಿ ಗಣರಾಜ್ಯದ ಮಿಲಿಟರಿ ಪಡೆಗಳಿಗೆ ಎರಡು ಆಂಬ್ಯುಲೆನ್ಸ್‌ಗಳನ್ನು ಉಡುಗೊರೆಯಾಗಿ ನೀಡುವುದಾಗಿ ಮತ್ತು ʻಸುವಾʼದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ರಕ್ಷಣಾ ವಿಭಾಗವನ್ನು ಸ್ಥಾಪಿಸುವುದಾಗಿ ಪ್ರಧಾನಮಂತ್ರಿ ಮೋದಿ ಘೋಷಿಸಿದರು. ಸೈಬರ್ ಭದ್ರತೆಯು ಎರಡೂ ದೇಶಗಳ ನಡುವಿನ ಸಹಕಾರದ ಉದಯೋನ್ಮುಖ ಕ್ಷೇತ್ರವಾಗಿರುವುದರಿಂದ, ಫಿಜಿಯಲ್ಲಿ ಸೈಬರ್ ಭದ್ರತಾ ತರಬೇತಿ ಕೋಶ (ಸಿ.ಎಸ್.ಟಿ.ಸಿ) ಸ್ಥಾಪನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಪ್ರಸ್ತುತ ಮತ್ತು ಉದಯೋನ್ಮುಖ ಸವಾಲುಗಳನ್ನು ಎದುರಿಸಲು, ವಿಶೇಷವಾಗಿ ಕಡಲ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್.ಎ.ಡಿ.ಆರ್) ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಇರುವ ಗಮನಾರ್ಹ ಅವಕಾಶವನ್ನು ಅವರು ಒತ್ತಿ ಹೇಳಿದರು.
ಮುಕ್ತ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶದ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವ ಪ್ರಾದೇಶಿಕ ಕಡಲ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕರಿಸುವ ಉದ್ದೇಶವನ್ನು ಅವರು ಘೋಷಿಸಿದರು.
ಭಾರತ-ಫಿಜಿ ಸಂಬಂಧವನ್ನು, ವಿಶೇಷವಾಗಿ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಆಳಗೊಳಿಸಲು ಜನರ ನಡುವಿನ ಬಾಂಧವ್ಯವು ಸ್ವಾಭಾವಿಕ ಅಡಿಪಾಯವಾಗಿದೆ ಎಂದು ನಾಯಕರು ಗುರುತಿಸಿದರು. ಭಾರತ ಮತ್ತು ಫಿಜಿ ನಡುವೆ ವಲಸೆ ಮತ್ತು ಸಂಚಾರ ಕುರಿತ ಉದ್ದೇಶಿತ ಘೋಷಣೆಗೆ ಅಂಕಿತ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದರಿಂದ ಎರಡೂ ದೇಶಗಳ ನಡುವೆ ವೃತ್ತಿಪರರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲಿದೆ.
ಭಾಷಾ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸುವ ʻಹಿಂದಿ ಅಧ್ಯಯನ ಕೇಂದ್ರʼದ ಅಭಿವೃದ್ಧಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ʻಫಿಜಿ ವಿಶ್ವವಿದ್ಯಾಲಯʼಕ್ಕೆ ಹಿಂದಿ ಮತ್ತು ಸಂಸ್ಕೃತ ಶಿಕ್ಷಕರ ನಿಯೋಜನೆಯನ್ನು ನಾಯಕರು ಸ್ವಾಗತಿಸಿದರು. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ 'ಅಂತಾರಾಷ್ಟ್ರೀಯ ಗೀತಾ ಮಹೋತ್ಸವ'ದಲ್ಲಿ (ಐ.ಜಿ.ಎಂ-2025) ಭಾಗವಹಿಸಲಿರುವ ಭಾರತದಲ್ಲಿನ ಫಿಜಿ ಪಂಡಿತರ ಸಮುದಾಯಕ್ಕೆ ತರಬೇತಿ ನೀಡುವ ನಿಟ್ಟಿನಲ್ಲಿ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಮೋದಿ ಅವರು ವಿಸ್ತರಿಸಿದರು. ಭಾರತದಲ್ಲಿ ʻಐ.ಜಿ.ಎಂ-2025ʼ ಆಚರಣೆಯ ಸಂದರ್ಭದಲ್ಲಿ ಫಿಜಿಯಲ್ಲಿ ಸಹ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಫಿಜಿ ಗಣರಾಜ್ಯದೊಂದಿಗಿನ ಭಾರತದ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿ ಸಾಮರ್ಥ್ಯ ವರ್ಧನೆಯನ್ನು ನಾಯಕರು ಗುರುತಿಸಿದರು. ʻಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರʼ (ಐ.ಟಿ.ಇ.ಸಿ) ಕಾರ್ಯಕ್ರಮದ ಮೂಲಕ ಫಿಜಿಯಲ್ಲಿನ ಸರ್ಕಾರಿ ವೃತ್ತಿಪರರಿಗೆ ಸಾಮರ್ಥ್ಯವರ್ಧನೆ ಅವಕಾಶಗಳನ್ನು ಭಾರತ ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಅವರು ಪುನರುಚ್ಚರಿಸಿದರು.
ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳಾಗಿ ಕೃಷಿ ಮತ್ತು ಆಹಾರ ಭದ್ರತೆಯ ಮಹತ್ವವನ್ನು ನಾಯಕರು ಗುರುತಿಸಿದರು. ಫಿಜಿಯಲ್ಲಿ ಆಹಾರ ಭದ್ರತೆ ಮತ್ತು ಕೃಷಿ ಸ್ಥಿತಿಸ್ಥಾಪಕತ್ವವನ್ನು ಬೆಂಬಲಿಸಲು 2025ರ ಜುಲೈನಲ್ಲಿ ಭಾರತವು ಕಳುಹಿಸಿದ 5 ಮೆಟ್ರಿಕ್ ಟನ್ ಉತ್ತಮ ಗುಣಮಟ್ಟದ ಅಲಸಂದೆ ಬೀಜಗಳ ನೆರವಿಗಾಗಿ ಪ್ರಧಾನಮಂತ್ರಿ ರಬುಕಾ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
ಫಿಜಿಯ ಸಕ್ಕರೆ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಭಾರತದ ಅನುದಾನ-ನೆರವು ಕಾರ್ಯಕ್ರಮದ ಅಡಿಯಲ್ಲಿ 12 ಕೃಷಿ ಡ್ರೋನ್‌ಗಳು ಮತ್ತು 2 ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಉಡುಗೊರೆಯಾಗಿ ನೀಡುವುದಾಗಿ ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದರು. ಈ ವಲಯವನ್ನು ಮತ್ತಷ್ಟು ಬೆಂಬಲಿಸಲು, ಫಿಜಿ ಸಕ್ಕರೆ ವಲಯದ ವೃತ್ತಿಪರರಿಗೆ ವಿಶೇಷ ʻಐ.ಟಿ.ಇ.ಸಿʼ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಫಿಜಿ ಸಕ್ಕರೆ ನಿಗಮಕ್ಕೆ ʻಐ.ಟಿ.ಇ.ಸಿʼ ತಜ್ಞರನ್ನು ಕಳುಹಿಸುವ ಉದ್ದೇಶವನ್ನು ಪ್ರಧಾನಮಂತ್ರಿ ಮೋದಿ ವ್ಯಕ್ತಪಡಿಸಿದರು.
ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಕ್ರೀಡಾ ಸಂಪರ್ಕಗಳ ಬಗ್ಗೆ ನಾಯಕರು ಒತ್ತಿ ಹೇಳಿದರು, ವಿಶೇಷವಾಗಿ ಫಿಜಿಯಲ್ಲಿ ಕ್ರಿಕೆಟ್ ಮತ್ತು ಭಾರತದಲ್ಲಿ ರಗ್ಬಿಗೆ ಹೆಚ್ಚುತ್ತಿರುವ ಉತ್ಸಾಹವನ್ನು ಉಲ್ಲೇಖಿಸಿದರು. ಫಿಜಿಯ ಕೋರಿಕೆಯ ಮೇರೆಗೆ, ಭಾರತೀಯ ಕ್ರಿಕೆಟ್ ತರಬೇತುದಾರರು ಸ್ಥಳೀಯ ಪ್ರತಿಭೆ ಅಭಿವೃದ್ಧಿಯ ಮೂಲಕ ಫಿಜಿ ಕ್ರಿಕೆಟ್ ತಂಡಗಳನ್ನು ಬೆಂಬಲಿಸಲಿದ್ದಾರೆ, ಆ ಮೂಲಕ ಕ್ರೀಡೆಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತಾರೆ.
ʻಸುವಾʼದಲ್ಲಿ ಭಾರತೀಯ ರಾಯಭಾರ ಕಚೇರಿಗಾಗಿ ʻಚಾನ್ಸರಿ ಮತ್ತು ಸಾಂಸ್ಕೃತಿಕ ಕೇಂದ್ರʼ ನಿರ್ಮಿಸಲು ಫಿಜಿ ಸರ್ಕಾರವು ಭೂಮಿ ಮಂಜೂರು ಮಾಡಿರುವುದನ್ನು ಪ್ರಧಾನಮಂತ್ರಿ ಮೋದಿ ಅವರು ಶ್ಲಾಘಿಸಿದರು. ಇದೇ ವೇಳೆ, ಗುತ್ತಿಗೆ ಹಕ್ಕುಪತ್ರದ ಹಸ್ತಾಂತರವನ್ನು ಅವರು ಸ್ವಾಗತಿಸಿದರು. ಫಿಜಿ ಗಣರಾಜ್ಯದ ಸರ್ಕಾರಕ್ಕೆ ಭಾರತದಲ್ಲಿ ತನ್ನ ಹೈಕಮಿಷನ್ ಚಾನ್ಸರಿ ನಿರ್ಮಿಸಲು 2015ರಲ್ಲಿ ನವದೆಹಲಿಯಲ್ಲಿ ಈಗಾಗಲೇ ಭೂಮಿಯನ್ನು ಹಂಚಿಕೆ ಮಾಡಲಾಗಿದೆ.
ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸುವ ಗುರಿಯನ್ನು ಹೊಂದಿರುವ ಈ ಕೆಳಗಿನವುಗಳಿಗೆ ಅಂಕಿತ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು: (i) ಗ್ರಾಮೀಣಾಭಿವೃದ್ಧಿ, ಕೃಷಿ ಹಣಕಾಸು ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಸಹಯೋಗವನ್ನು ಹೆಚ್ಚಿಸಲು ಫಿಜಿ ಅಭಿವೃದ್ಧಿ ಬ್ಯಾಂಕ್ (ಎಫ್.ಡಿ.ಬಿ) ಮತ್ತು ಭಾರತದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಡುವೆ ಒಪ್ಪಂದ; (ii) ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿ.ಐ.ಎಸ್) ಮತ್ತು ಫಿಜಿ ಗಣರಾಜ್ಯದ ರಾಷ್ಟ್ರೀಯ ವ್ಯಾಪಾರ ಮಾಪನ ಮತ್ತು ಗುಣಮಟ್ಟ ಇಲಾಖೆ (ಡಿ.ಎನ್.ಟಿ.ಎಂ.ಎಸ್) ನಡುವೆ ಪ್ರಮಾಣೀಕರಣ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಒಪ್ಪಂದ; (iii) ಮಾನವ ಸಾಮರ್ಥ್ಯವರ್ಧನೆ, ಕೌಶಲ್ಯವರ್ಧನೆ ಹಾಗೂ ಕೌಶಲ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂ.ಇ.ಐ.ಟಿ.ವೈ) ಅಡಿಯಲ್ಲಿ ಬರುವ ʻರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆʼ (ಎನ್.ಐ.ಇ.ಎಲ್.ಐ.ಟಿ) ಮತ್ತು ಫಿಜಿಯ ʻಪೆಸಿಫಿಕ್ ಪಾಲಿಟೆಕ್ನಿಕ್ʼ ನಡುವೆ ಒಪ್ಪಂದ; (iv) ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ಕೈಗಾರಿಕಾ ಒಕ್ಕೂಟ (ಸಿ.ಐ.ಐ) ಮತ್ತು ಫಿಜಿ ವಾಣಿಜ್ಯ ಮತ್ತು ಉದ್ಯೋಗದಾತರ ಒಕ್ಕೂಟ (ಎಫ್.ಸಿ.ಇ.ಎಫ್) ನಡುವೆ ಒಪ್ಪಂದ; ಮತ್ತು (v) ʻಜನೌಷಧಿ ಯೋಜನೆʼಯಡಿ ಔಷಧಗಳ ಪೂರೈಕೆಗೆ ಸಂಬಂಧಿಸಿದಂತೆ ʻಮೆಸರ್ಸ್ ಎಚ್.ಎಲ್.ಎಲ್ ಲೈಫ್ ಕೇರ್ ಲಿಮಿಟೆಡ್ʼ ಮತ್ತು ಫಿಜಿ ಗಣರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ಸಚಿವಾಲಯದ ನಡುವೆ ಒಪ್ಪಂದ.
ಪ್ರಜಾಪ್ರಭುತ್ವ ಮತ್ತು ಶಾಸಕಾಂಗ ವಿನಿಮಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಸದೀಯ ವಿನಿಮಯದ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು. 2026ರಲ್ಲಿ ಫಿಜಿ ಸಂಸದರ ನಿಯೋಗ ಭಾರತಕ್ಕೆ ಭೇಟಿ ನೀಡುವ ಪ್ರಸ್ತಾಪವನ್ನು ಪ್ರಧಾನಮಂತ್ರಿ ಮೋದಿ ಅವರು ಸ್ವಾಗತಿಸಿದರು. ಫಿಜಿಯಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತು ಸಮುದಾಯ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ʻಗ್ರೇಟ್ ಕೌನ್ಸಿಲ್ ಆಫ್ ಚೀಫ್ಸ್ʼ (ಜಿ.ಸಿ.ಸಿ) ವಹಿಸಿರುವ ಪ್ರಮುಖ ಪಾತ್ರವನ್ನು ಪ್ರಧಾನಮಂತ್ರಿ ರಬುಕಾ ಅವರು ಒತ್ತಿ ಹೇಳಿದರು. ಉಭಯ ದೇಶಗಳ ನಡುವಿನ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ʻಜಿ.ಸಿ.ಸಿʼ ನಿಯೋಗದ ಉದ್ದೇಶಿತ ಭಾರತ ಭೇಟಿಯನ್ನು ಪ್ರಧಾನಮಂತ್ರಿ ಮೋದಿ ಅವರು ಸ್ವಾಗತಿಸಿದರು.
ನಾಯಕರು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಜೊತೆಗೆ, ಶಾಂತಿ, ಹವಾಮಾನ ನ್ಯಾಯ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಜಾಗತಿಕ ದಕ್ಷಿಣದ ಧ್ವನಿಗೆ ಶಕ್ತಿ ನೀಡಲು ತಮ್ಮ ಸಮಾನ ಬದ್ಧತೆಯನ್ನು ಪುನರುಚ್ಚರಿಸಿದರು. ಜಾಗತಿಕ ದಕ್ಷಿಣದಲ್ಲಿ ಭಾರತದ ನಾಯಕತ್ವದ ಪಾತ್ರವನ್ನು ಪ್ರಧಾನಮಂತ್ರಿ ರಬೂಕಾ ಅವರು ಶ್ಲಾಘಿಸಿದರು. ಬಹುಪಕ್ಷೀಯ ವೇದಿಕೆಗಳಲ್ಲಿ ನೀಡಲಾದ ಪರಸ್ಪರ ಮೌಲ್ಯಯುತ ಬೆಂಬಲದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಗಳ ತುರ್ತು ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡರು. ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸಲು ʻವಿಶ್ವಸಂಸ್ಥೆಯ ಭದ್ರತಾ ಮಂಡಳಿʼಯ ಎರಡೂ ವರ್ಗಗಳ ಸದಸ್ಯತ್ವದ ವಿಸ್ತರಣೆಯೂ ಇದರಲ್ಲಿ ಸೇರಿದೆ. ಸುಧಾರಿತ ಮತ್ತು ವಿಸ್ತೃತ ವಿಶ್ವಸಂಸ್ಥೆಯ ʻಭದ್ರತಾ ಮಂಡಳಿʼಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯ ಸ್ಥಾನಕ್ಕಾಗಿ ಫಿಜಿ ತನ್ನ ಬೆಂಬಲವನ್ನು ಪುನರುಚ್ಚರಿಸಿತು. 2028-29ರ ಅವಧಿಗೆ ʻಯು.ಎನ್.ಎಸ್.ಸಿʼಯ ಶಾಶ್ವತವಲ್ಲದ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಗೆ ತನ್ನ ಬೆಂಬಲವನ್ನು ಫಿಜಿ ಪುನರುಚ್ಚರಿಸಿತು.
ಸಮಕಾಲೀನ ಜಾಗತಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಾದ ಹೆಜ್ಜೆಯಾಗಿ ʻದಕ್ಷಿಣ-ದಕ್ಷಿಣʼ ಸಹಕಾರವನ್ನು ಬಲಪಡಿಸಬೇಕೆಂದು ನಾಯಕರು ಪುನರುಚ್ಚರಿಸಿದರು. ಜಾಗತಿಕ ಆಡಳಿತದ ಸಂಸ್ಥೆಗಳಲ್ಲಿ ಸುಧಾರಿತ, ಸಮಾನ ಪ್ರಾತಿನಿಧ್ಯ ಸೇರಿದಂತೆ ಜಾಗತಿಕ ದಕ್ಷಿಣಕ್ಕೆ ಸಾಮಾನ್ಯ ಕಾಳಜಿಯ ವಿಷಯಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು. ʻವಾಯ್ಸ್ ಆಫ್ ಗ್ಲೋಬಲ್ ಸೌತ್ʼ ಶೃಂಗಸಭೆಗಳನ್ನು ಆಯೋಜಿಸುವಲ್ಲಿ ಭಾರತದ ಉಪಕ್ರಮ ಮತ್ತು ನಾಯಕತ್ವವನ್ನು ಪ್ರಧಾನಮಂತ್ರಿ ರಬೂಕಾ ಶ್ಲಾಘಿಸಿದರು, ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಪರಸ್ಪರ ಸಮಾನ ಕಾಳಜಿಗಳು, ಸವಾಲುಗಳು ಮತ್ತು ಅಭಿವೃದ್ಧಿಯ ಆದ್ಯತೆಗಳ ಬಗ್ಗೆ ಚರ್ಚಿಸಲು ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ʻವಾಯ್ಸ್ ಆಫ್ ಗ್ಲೋಬಲ್ ಸೌತ್ʼ ಶೃಂಗಸಭೆಗಳಲ್ಲಿ ಫಿಜಿಯ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು ಮತ್ತು ಶೃಂಗಸಭೆಯ ನಾಯಕರ ಅಧಿವೇಶನದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಮಂತ್ರಿ ರಬುಕಾ ಅವರಿಗೆ ಧನ್ಯವಾದ ಅರ್ಪಿಸಿದರು. ಜಾಗತಿಕ ದಕ್ಷಿಣ ರಾಷ್ಟ್ರಗಳ ಸಮಾನ ಅನುಭವದಲ್ಲಿ ಬೇರೂರಿರುವ ಅನನ್ಯ ಅಭಿವೃದ್ಧಿ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ʻಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ - ದಕ್ಷಿಣ್(DAKSHIN)ʼ ಜೊತೆ ಫಿಜಿಯ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು.
ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮುಕ್ತ, ಎಲ್ಲರನ್ನು ಒಳಗೊಂಡ, ಸ್ಥಿರ ಮತ್ತು ಸಮೃದ್ಧ ʻಇಂಡೋ-ಪೆಸಿಫಿಕ್ʼ ಅನ್ನು ಬೆಂಬಲಿಸುವ ಬದ್ಧತೆಯನ್ನು ಉಭಯ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ʻಇಂಡೋ-ಪೆಸಿಫಿಕ್ ಸಾಗರ ಉಪಕ್ರಮʼಕ್ಕೆ (ಐ.ಪಿ.ಒ.ಐ) ಸೇರಲು ಫಿಜಿ ಆಸಕ್ತಿ ಹೊಂದಿದೆ ಎಂದು ಪ್ರಧಾನಮಂತ್ರಿ ರಬುಕಾ ಅವರು ಹೇಳಿದರು. ಕಡಲ ಕ್ಷೇತ್ರವನ್ನು ನಿರ್ವಹಿಸಲು, ಸಂರಕ್ಷಿಸಲು ಮತ್ತು ಉಳಿಸಿಕೊಳ್ಳಲು ಬಯಸುವ ಸಮಾನ ಮನಸ್ಕ ರಾಷ್ಟ್ರಗಳೊಂದಿಗಿನ ಈ ಪಾಲುದಾರಿಕೆಗೆ ಫಿಜಿಯನ್ನು ಪ್ರಧಾನಮಂತ್ರಿ ಮೋದಿ ಅವರು ಸ್ವಾಗತಿಸಿದರು. ನಮ್ಮ ಪ್ರದೇಶಕ್ಕೆ ಶಾಂತಿಯುತ, ಸ್ಥಿರ, ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯ ಹಾಗೂ ಯೋಗಕ್ಷೇಮವನ್ನು ನೀಡುವತ್ತ ಒತ್ತು ನೀಡುವ 'ಶಾಂತಿಯ ಸಾಗರ' ಪರಿಕಲ್ಪನೆಯನ್ನು ಪ್ರಧಾನಮಂತ್ರಿ ರಬೂಕಾ ಅವರು ಎತ್ತಿ ತೋರಿದರು. ಪೆಸಿಫಿಕ್ ವಲಯದಲ್ಲಿ 'ಶಾಂತಿಯ ಸಾಗರ'ವನ್ನು ಮುನ್ನಡೆಸುವಲ್ಲಿ ಪ್ರಧಾನಮಂತ್ರಿ ರಬುಕಾ ಅವರ ನಾಯಕತ್ವವನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು.
ಪ್ರಧಾನಮಂತ್ರಿ ರಬೂಕಾ ಅವರು ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಭಾರತ ಸರ್ಕಾರ ಮತ್ತು ಜನತೆಗೆ ಹೃತ್ಪೂರ್ವಕ ಮೆಚ್ಚುಗೆ ಸೂಚಿಸಿದರು. ಫಿಜಿಗೆ ಭೇಟಿ ನೀಡುವಂತೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದರು.
****
(Release ID: 2160731)
Read this release in:
Punjabi
,
English
,
Urdu
,
Hindi
,
Bengali
,
Manipuri
,
Assamese
,
Gujarati
,
Odia
,
Tamil
,
Telugu
,
Malayalam