ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025 ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ


ಪ್ರಧಾನಮಂತ್ರಿ, ಸಚಿವರು ಮತ್ತು ಮುಖ್ಯಮಂತ್ರಿಗಳು ಜೈಲಿನಿಂದ ಸರ್ಕಾರವನ್ನು ನಡೆಸುವುದು ದೇಶದ ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ

ಪ್ರಧಾನ ಮಂತ್ರಿ, ಸಚಿವರು, ಮುಖ್ಯಮಂತ್ರಿ ಮತ್ತು ಸಚಿವರ ಆದೇಶಕ್ಕಾಗಿ ಸರ್ಕಾರದ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿ ಜೈಲಿಗೆ ಹೋಗುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ

ಮೋದಿ ಅವರು ಈ ಮಸೂದೆಯಲ್ಲಿ ಮುಖ್ಯಮಂತ್ರಿ ಮತ್ತು ಮಂತ್ರಿಗಳೊಂದಿಗೆ ಪ್ರಧಾನಮಂತ್ರಿಯನ್ನು ಸೇರಿಸಿದ್ದಾರೆ. 39ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಆಗಿನ ಪ್ರಧಾನಿಯವರು ಪ್ರಧಾನಮಂತ್ರಿಯನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಟ್ಟಿದ್ದರು

ಮಸೂದೆಯ ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಮತ್ತು ಅದರ ವಿರುದ್ಧ ಮತ ಚಲಾಯಿಸುವುದು ಸಾಂವಿಧಾನಿಕ ವ್ಯಾಪ್ತಿಯಲ್ಲಿದೆ, ಆದರೆ ಸದನವು ಕಾರ್ಯನಿರ್ವಹಿಸದಂತೆ ತಡೆಯುವ ಮನಸ್ಥಿತಿ ಸರಿಯಲ್ಲ

ದೇಶದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕುರುಡಾಗಿ ಕುಳಿತಿಲ್ಲ. ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ವಿರುದ್ಧ ನಕಲಿ ಪ್ರಕರಣ ದಾಖಲಾಗಿದ್ದರೆ, ನ್ಯಾಯಾಲಯಕ್ಕೆ ಜಾಮೀನು ನೀಡುವ ಹಕ್ಕಿದೆ

ಸಂವಿಧಾನ ರಚನೆಯಾದಾಗ, ಸಂವಿಧಾನ ರಚನಾಕಾರರು ಭವಿಷ್ಯದಲ್ಲಿ ಜೈಲಿನಲ್ಲಿಯೇ ಸರ್ಕಾರ ನಡೆಸುವಂತಹ ನಾಯಕರು ಇರುತ್ತಾರೆ ಎಂದು ಊಹಿಸಿರಲಿಲ್ಲ

ನಮ್ಮ ನೈತಿಕ ಮೌಲ್ಯಗಳ ಮಟ್ಟ ಕುಸಿಯಲು ನಾವು ಬಿಡಬಾರದು

Posted On: 25 AUG 2025 3:32PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025 ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ದೇಶದ ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಜೈಲಿನಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಸ್ಪಷ್ಟವಾಗಿ ನಂಬಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025 ರಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಭಾರತ ಸರ್ಕಾರದ ಸಚಿವರು ಅಥವಾ ರಾಜ್ಯ ಸರ್ಕಾರದ ಸಚಿವರು ಯಾವುದೇ ಗಂಭೀರ ಆರೋಪದಡಿಯಲ್ಲಿ ಬಂಧಿಸಲ್ಪಟ್ಟರೆ ಮತ್ತು 30 ದಿನಗಳಲ್ಲಿ ಜಾಮೀನು ಸಿಗದಿದ್ದರೆ, ಅವರನ್ನು ಅವರ ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂಬ ನಿಬಂಧನೆ ಇದೆ. ಇದು ಸಂಭವಿಸದಿದ್ದರೆ ಅವರು ಕಾನೂನುಬದ್ಧವಾಗಿ ತಮ್ಮ ಹುದ್ದೆಯಿಂದ ಸ್ವಯಂಚಾಲಿತವಾಗಿ ಬಿಡುಗಡೆ ಹೊಂದುತ್ತಾರೆ ಎಂದು ಅವರು ಹೇಳಿದರು. ಚುನಾಯಿತ ಸರ್ಕಾರವು ಸದನದಲ್ಲಿ ಮಸೂದೆ ಅಥವಾ ಸಾಂವಿಧಾನಿಕ ತಿದ್ದುಪಡಿಯನ್ನು ಮಂಡಿಸುವುದನ್ನು ವಿರೋಧ ಪಕ್ಷಗಳು ವಿರೋಧಿಸಬಾರದು ಎಂದು ಶ್ರೀ ಶಾ ಹೇಳಿದರು.

ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಉಭಯ ಸದನಗಳ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಸ್ವತಃ ತಾವೇ ಸ್ಪಷ್ಟಪಡಿಸಿರುವುದಾಗಿ ಶ್ರೀ ಅಮಿತ್ ಶಾ ಹೇಳಿದರು. ಈ ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಮತ್ತು ಮತದಾನ ನಡೆದಾಗ, ಎಲ್ಲಾ ಪಕ್ಷಗಳು ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಬಹುದು ಎಂದು ಅವರು ಹೇಳಿದರು. ಸರ್ಕಾರದ ಯಾವುದೇ

ಮಸೂದೆ ಅಥವಾ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಲು ಬಿಡದಿರುವುದು ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳು ಪ್ರದರ್ಶಿಸುವ ಸರಿಯಾದ ನಡವಳಿಕೆಯಲ್ಲ ಎಂದು ಶ್ರೀ ಶಾ ಹೇಳಿದರು. ದೇಶದ ಸಂಸತ್ತಿನ ಎರಡೂ ಸದನಗಳು ಇರುವುದು ಚರ್ಚೆ ಮತ್ತು ಸಂವಾದಕ್ಕಾಗಿಯೇ ಹೊರತು, ಗದ್ದಲ ಮತ್ತು ಕೋಲಾಹಲ ನಡೆಸಲು ಅಲ್ಲ ಎಂದು ಅವರು ಹೇಳಿದರು. ಮಸೂದೆಯನ್ನು ಮಂಡಿಸಲು ಬಿಡದಿರುವ ಈ ಮನಸ್ಥಿತಿ ಪ್ರಜಾಸತ್ತಾತ್ಮಕವಲ್ಲ ಮತ್ತು ವಿರೋಧ ಪಕ್ಷಗಳು ದೇಶದ ಜನರಿಗೆ ತಮ್ಮ ಕಾರ್ಯಗಳ ವಿವರಿಸಬೇಕಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.

ಈ ಮಸೂದೆ ಯಾವುದೇ ವಿರೋಧ ಪಕ್ಷದ ವಿರುದ್ಧವಲ್ಲ ಮತ್ತು ಇದು ನಮ್ಮ ಪಕ್ಷ್ದ ಮುಖ್ಯಮಂತ್ರಿಗಳನ್ನು ಸಹ ತನ್ನ ವ್ಯಾಪ್ತಿಗೆ ತರುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸರ್ಕಾರದಲ್ಲಿರುವವರ ವಿರುದ್ಧ ಎಫ್‌ ಐ ಆರ್ ದಾಖಲಿಸುವುದಿಲ್ಲ ಎಂದು ಹೇಳುವ ಮೂಲಕ ವಿರೋಧ ಪಕ್ಷವು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ಹೇಳಿದರು. 30 ದಿನಗಳಲ್ಲಿ ಜಾಮೀನು ನೀಡಿದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬ ನಿಬಂಧನೆ ಈ ಮಸೂದೆಯಲ್ಲಿದೆ ಎಂದು ಅವರು ಹೇಳಿದರು. ಅಲ್ಲದೆ, ನಕಲಿ ಪ್ರಕರಣವಿದ್ದರೆ, ಜಾಮೀನು ನೀಡಲು ದೇಶದಲ್ಲಿ ನ್ಯಾಯಾಲಯಗಳಿವೆ. ಯಾವುದೇ ಪ್ರಕರಣದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಜಾಮೀನು ನೀಡುವ ಹಕ್ಕನ್ನು ಹೊಂದಿವೆ ಮತ್ತು ಜಾಮೀನು ನೀಡದಿದ್ದರೆ, ಆ ವ್ಯಕ್ತಿ ಹುದ್ದೆಯನ್ನು ತೊರೆಯಬೇಕಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಯಾವುದೇ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅಥವಾ ಸಚಿವರು ಜೈಲಿನಲ್ಲಿದ್ದಾಗ ಸರ್ಕಾರವನ್ನು ನಡೆಸಬೇಕೇ? ಇದು ದೇಶದ ಪ್ರಜಾಪ್ರಭುತ್ವಕ್ಕೆ ಸೂಕ್ತವೇ? ಎಂದು ಅವರು ಪ್ರಶ್ನಿಸಿದರು. 30 ದಿನಗಳ ನಂತರ ಜಾಮೀನು ಪಡೆದರೆ, ಅವರು ಮತ್ತೆ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಗೃಹ ಸಚಿವರು ಹೇಳಿದರು.

ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ನಮ್ಮ ಸರ್ಕಾರ ರೂಪಿಸಿಲ್ಲ, ಅದು ಹಲವು ವರ್ಷಗಳಿಂದ ಜಾರಿಯಲ್ಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 130ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಗಂಭೀರ ಅಪರಾಧ ಎಂದರೆ 5 ವರ್ಷಗಳಿಗಿಂತ ಹೆಚ್ಚು ಶಿಕ್ಷೆ ವಿಧಿಸುವ ಅವಕಾಶವಿದ್ದರೆ, ಆ ವ್ಯಕ್ತಿಯು ರಾಜೀನಾಮೆ ನೀಡಬೇಕಾಗುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ ಎಂದು ಅವರು ಹೇಳಿದರು. ಭ್ರಷ್ಟಾಚಾರ ಅಥವಾ 5 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳ ಆರೋಪ ಹೊತ್ತಿರುವ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಜೈಲಿನಿಂದ ಸರ್ಕಾರವನ್ನು ನಡೆಸುವುದು ಸರಿಯಲ್ಲ. ಚುನಾಯಿತ ಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಿದರೆ, ಅವರನ್ನು ಸಂಸದ ಹುದ್ದೆಯಿಂದ ಬಿಡುಗಡೆ ಮಾಡುವ ನಿಬಂಧನೆ ಇಂದಿಗೂ ಭಾರತದ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿದೆ ಎಂದು ಅವರು ಹೇಳಿದರು. ನೈತಿಕತೆಯ ಆಧಾರದ ಮೇಲೆ, ಈ ಕಾನೂನು ಸ್ವಾತಂತ್ರ್ಯದ ಕಾಲದಿಂದಲೂ ಜಾರಿಯಲ್ಲಿದೆ ಎಂದು ಅವರು ಹೇಳಿದರು. ಅನೇಕ ಜನರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಮತ್ತು ಅವರನ್ನು ಖುಲಾಸೆಗೊಳಿಸಿದ ನಂತರ ಅವರನ್ನು ಪುನರ್‌ ಸ್ಥಾಪಿಸಲಾಗಿದೆ ಎಂದು ಶ್ರೀ ಶಾ ಹೇಳಿದರು.

ಸ್ವಾತಂತ್ರ್ಯಾನಂತರ ಅನೇಕ ನಾಯಕರು, ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆದರೆ ಈಗ ಜೈಲಿಗೆ ಹೋದ ನಂತರವೂ ಅವರು ರಾಜೀನಾಮೆ ನೀಡದ ಪ್ರವೃತ್ತಿ ಆರಂಭವಾಗಿದೆ. ತಮಿಳುನಾಡಿನ ಕೆಲವು ಸಚಿವರು ಮತ್ತು ದೆಹಲಿಯ ಮುಖ್ಯಮಂತ್ರಿ ಮತ್ತು ಸಚಿವರು ರಾಜೀನಾಮೆ ನೀಡಲಿಲ್ಲ. ಸರ್ಕಾರದ ಕಾರ್ಯದರ್ಶಿ, ಡಿಜಿಪಿ, ಮುಖ್ಯ ಕಾರ್ಯದರ್ಶಿ ಆದೇಶಗಳನ್ನು ಪಡೆಯಲು ಜೈಲಿಗೆ ಹೋಗಬೇಕೇ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಕಾಳಜಿ ತೋರಬೇಕು ಮತ್ತು ಚರ್ಚೆ ನಡೆಯಬೇಕು ಎಂದು ಶ್ರೀ ಶಾ ಹೇಳಿದರು.

ಪ್ರಧಾನಿ ಮೋದಿಯವರು ಸ್ವತಃ ಪ್ರಧಾನಿ ಹುದ್ದೆಯನ್ನು ಈ ಸಾಂವಿಧಾನಿಕ ತಿದ್ದುಪಡಿಯ ವ್ಯಾಪ್ತಿಗೆ ತಂದಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಆಗಿನ ಪ್ರಮುಖ ವಿರೋಧ ಪಕ್ಷದ ಪ್ರಧಾನಿಯವರು 39ನೇ ಸಾಂವಿಧಾನಿಕ ತಿದ್ದುಪಡಿಯನ್ನು ತಂದಿದ್ದರು, ಇದರಲ್ಲಿ ಅವರು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳೊಂದಿಗೆ ತಮ್ಮನ್ನೂ ಮೊಕದ್ದಮೆಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದರು ಎಂದು ಅವರು ಹೇಳಿದರು. ಜೈಲಿಗೆ ಕಳುಹಿಸಿದರೆ ಪ್ರಧಾನಿಯೂ ರಾಜೀನಾಮೆ ನೀಡಬೇಕು ಎಂದು ಆದೇಶಿಸುವ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೇ ತಂದಿದ್ದಾರೆ ಎಂದು ಶ್ರೀ ಶಾ ಹೇಳಿದರು. ನ್ಯಾಯಾಲಯವು ತಕ್ಷಣವೇ ಮಧ್ಯಪ್ರವೇಶಿಸಬೇಕಾಗಿರುವುದರಿಂದ ಈ ಕಾನೂನಿನಲ್ಲಿ ನ್ಯಾಯಾಲಯದಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ಅವರು ಹೇಳಿದರು. ಇದು ತ್ವರಿತ ನಿರ್ಧಾರಕ್ಕೆ ಕಾರಣವಾಗುತ್ತದೆ ಏಕೆಂದರೆ ನಮ್ಮ ನ್ಯಾಯಾಲಯಗಳು ಸಹ ಕಾನೂನಿನ ಗಂಭೀರತೆಯನ್ನು ಅರ್ಥಮಾಡಿಕೊಂಡಿವೆ ಎಂದು ಅವರು ಹೇಳಿದರು.

ದೇಶದ ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಜೈಲಿನಲ್ಲಿದ್ದಾಗ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ನಂಬಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಂವಿಧಾನ ರಚನೆಯಾದಾಗ, ಸಂವಿಧಾನ ರಚನೆಕಾರರು ಸಹ ಯಾವುದೇ ವ್ಯಕ್ತಿ ಜೈಲಿಗೆ ಹೋದ ನಂತರವೂ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಅವರು ಹೇಳಿದರು. ನಮ್ಮ ನೈತಿಕ ಮೌಲ್ಯಗಳ ಮಟ್ಟ ಕುಸಿಯಲು ನಾವು ಬಿಡಬಾರದು ಎಂದು ಅವರು ಹೇಳಿದರು. ಈ ಕಾನೂನು ನೈತಿಕ ಮೌಲ್ಯಗಳ ಮಟ್ಟಕ್ಕೆ ಒಂದು ಆಧಾರವನ್ನು ಒದಗಿಸುತ್ತದೆ ಮತ್ತು ಖಂಡಿತವಾಗಿಯೂ ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ನ್ಯಾಯಾಲಯಗಳು ಸೂಕ್ಷ್ಮವಾಗಿರುತ್ತವೆ ಮತ್ತು ಯಾರಾದರೂ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾದಾಗ, ಖಂಡಿತವಾಗಿಯೂ ನ್ಯಾಯಾಲಯಗಳು ಸಮಯದ ಮಿತಿಯೊಳಗೆ ಜಾಮೀನಿನ ಬಗ್ಗೆ ನಿರ್ಧರಿಸುತ್ತವೆ ಎಂದು ಅವರು ಹೇಳಿದರು.

ಮುಖ್ಯ ವಿರೋಧ ಪಕ್ಷವು ಸೇಡಿನ ರಾಜಕಾರಣದ ಬಗ್ಗೆ ಮಾತನಾಡುವುದು ಯೋಗ್ಯವಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿರೋಧ ಪಕ್ಷದ ಸರ್ಕಾರದ ಅವಧಿಯಲ್ಲಿ, ನ್ಯಾಯಾಲಯದ ಆದೇಶದ ನಂತರ ಕನಿಷ್ಠ 12 ಪ್ರಕರಣಗಳಲ್ಲಿ ಸಿಬಿಐ ತನಿಖೆ ನಡೆಸಲಾಯಿತು ಮತ್ತು ಅನೇಕ ಜನರು ಇದರಲ್ಲಿ ಸಿಕ್ಕಿಬಿದ್ದರು ಎಂದು ಅವರು ಹೇಳಿದರು. ಪ್ರಸ್ತಾವಿತ ಕಾನೂನಿನ ಮೇಲೆ ಜೆಪಿಸಿ ರಚಿಸುವ ನಿರ್ಧಾರದ ನಂತರವೂ, ಯಾವುದೇ ಪಕ್ಷವು ಅದನ್ನು ಬಹಿಷ್ಕರಿಸಿದರೆ, ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು. ಈ ಮಸೂದೆ ಮಹತ್ವದ್ದಾಗಿದೆ ಮತ್ತು ಎಲ್ಲಾ ಪಕ್ಷಗಳ ಸದಸ್ಯರೊಂದಿಗೆ ಚರ್ಚಿಸಿದ ನಂತರ ಜೆಪಿಸಿ ಒಂದು ಅಭಿಪ್ರಾಯಕ್ಕೆ ಬರಬೇಕು ಶ್ರೀ ಶಾ ಹೇಳಿದರು. ಸರ್ಕಾರವು ವಿರೋಧ ಪಕ್ಷಕ್ಕೆ ತನ್ನ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶವನ್ನು ನೀಡುತ್ತದೆ ಆದರೆ ವಿರೋಧ ಪಕ್ಷವು ತನ್ನ ಅಭಿಪ್ರಾಯಗಳನ್ನು ಮಂಡಿಸಲು ಬಯಸುವುದಿಲ್ಲ ಎಂದು ತೋರುತ್ತದೆ ಮತ್ತು ದೇಶದ ಜನರು ಇದನ್ನು ನೋಡುತ್ತಿದ್ದಾರೆ ಎಂದು ಅವರು ಹೇಳಿದರು. ಯಾರಾದರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಅವರನ್ನು ಬಂಧಿಸಲಾಗುತ್ತದೆ, ಅವರು ಜೈಲಿಗೆ ಹೋಗಬೇಕಾಗುತ್ತದೆ ಮತ್ತು ಅವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.

ವಿರೋಧ ಪಕ್ಷಗಳು ತಮಗೆ ನೈತಿಕತೆಯ ಬಗ್ಗೆ ಪಾಠ ಮಾಡಬಾರದು ಎಂದು ಶ್ರೀ ಅಮಿತ್ ಶಾ ಹೇಳಿದರು. ತಮ್ಮ ಮೇಲೆ ಆರೋಪ ಹೊರಿಸಿ ಸಿಬಿಐ ಸಮನ್ಸ್‌ ಕಳುಹಿಸಿದಾಗ ಮರುದಿನವೇ ತಾವು ರಾಜೀನಾಮೆ ನೀಡಿದ್ದಾಗಿ ಶ್ರೀ ಶಾ ಹೇಳಿದರು. ಪ್ರಕರಣ ಮುಂದುವರೆದು, ತಾವು ಸಂಪೂರ್ಣವಾಗಿ ನಿರಪರಾಧಿ ಎಂದು ತೀರ್ಪು ಬಂದಿತು. ಆ ತೀರ್ಪಿನಲ್ಲಿ ಇದು ರಾಜಕೀಯ ದ್ವೇಷದ ಪ್ರಕರಣವಾಗಿದ್ದು, ಆ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಹೇಳಲಾಗಿದೆ ಎಂದು ಅವರು ಹೇಳಿದರು. ಅನುಮಾನದ ಆಧಾರದ ಮೇಲೆ ತಮ್ಮನ್ನು ಖುಲಾಸೆಗೊಳಿಸಲಾಗಿಲ್ಲ ಆದರೆ ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. 96ನೇ ದಿನದಂದು ತಮಗೆ ಜಾಮೀನು ಸಿಕ್ಕಿತು ಆದರೆ ಅದರ ನಂತರವೂ ತಾವು ಗೃಹ ಸಚಿವರಾಗಲು ಪ್ರಮಾಣ ವಚನ ಸ್ವೀಕರಿಸಲಿಲ್ಲ ಎಂದು ಶ್ರೀ ಶಾ ಹೇಳಿದರು. ಅಷ್ಟೇ ಅಲ್ಲ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಿಸುವವರೆಗೂ ತಾವು ಯಾವುದೇ ಸಾಂವಿಧಾನಿಕ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.

ನೈತಿಕತೆಯ ಮಾನದಂಡವು ಚುನಾವಣಾ ಗೆಲುವು ಅಥವಾ ಸೋಲಿಗೆ ಸಂಬಂಧಿಸಿಲ್ಲ, ಆದರೆ ಅದು ಸೂರ್ಯ ಮತ್ತು ಚಂದ್ರನಂತೆ ಯಾವಾಗಲೂ ಅದರ ಸ್ಥಾನದಲ್ಲಿ ಸ್ಥಿರವಾಗಿರುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಎಲ್ಲಾ ಮಿತ್ರಪಕ್ಷಗಳು ಈ ಕಾನೂನನ್ನು ಸಂಪೂರ್ಣವಾಗಿ ಒಪ್ಪುತ್ತವೆ ಎಂದು ಅವರು ಹೇಳಿದರು. ಸಂಸತ್ತು ಹೇಗೆ ನಡೆಯಬೇಕು ಎಂಬುದನ್ನು ಆಡಳಿತ ಪಕ್ಷ ಮಾತ್ರ ನಿರ್ಧರಿಸುವುದಿಲ್ಲ ಎಂದು ಶ್ರೀ ಶಾ ಹೇಳಿದರು. ವಿರೋಧ ಪಕ್ಷವು ಯಾವುದೇ ಮಸೂದೆ ಅಥವಾ ಸಾಂವಿಧಾನಿಕ ತಿದ್ದುಪಡಿಗೆ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸದಿದ್ದರೆ, ದೇಶದ ಜನರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಈ ಮಸೂದೆ ಅಂಗೀಕಾರಗೊಳ್ಳುತ್ತದೆ ಮತ್ತು ನೈತಿಕತೆಯ ಆಧಾರದ ಮೇಲೆ ಅದನ್ನು ಬೆಂಬಲಿಸುವ ಅನೇಕರು ವಿರೋಧ ಪಕ್ಷದಲ್ಲೂ ಇರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

*****


(Release ID: 2160643)