ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯು.ಇ.ಆರ್-II ಮತ್ತು ದ್ವಾರಕಾ ಎಕ್ಸ್‌ಪ್ರೆಸ್‌ವೇಯ ದೆಹಲಿ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಇಂಗ್ಲೀಷ್ ಅನುವಾದ

Posted On: 17 AUG 2025 4:19PM by PIB Bengaluru

ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜೀ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜೀ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಜೀ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಜೀ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಅಜಯ್ ತಮ್ತಾ ಜೀ, ಹರ್ಷ ಮಲ್ಹೋತ್ರಾ ಜೀ, ದೆಹಲಿ ಮತ್ತು ಹರಿಯಾಣದ ಸಂಸದರು, ಉಪಸ್ಥಿತರಿರುವ ಸಚಿವರು, ಇತರ ಜನಪ್ರತಿನಿಧಿಗಳು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಎಕ್ಸ್‌ಪ್ರೆಸ್‌ವೇಯ ಹೆಸರು ದ್ವಾರಕಾ, ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಹೆಸರು ರೋಹಿಣಿ, ಇದು ಜನ್ಮಾಷ್ಟಮಿಯ ಸಂತೋಷ ಮತ್ತು ಕಾಕತಾಳೀಯವಾಗಿ ನಾನು ಕೂಡ ದ್ವಾರಕಾಧೀಶನ ಭೂಮಿಯವನು, ಇಡೀ ವಾತಾವರಣವು ಕೃಷ್ಣಮಯ (ಕೃಷ್ಣನಿಂದ ತುಂಬಿದೆ)ವಾಗಿದೆ.

ಸ್ನೇಹಿತರೇ,

ಆಗಸ್ಟ್ ತಿಂಗಳು ಸ್ವಾತಂತ್ರ್ಯ ಮತ್ತು ಕ್ರಾಂತಿಯ ಬಣ್ಣಗಳಿಂದ ಕೂಡಿದೆ. ಈ ಸ್ವಾತಂತ್ರ್ಯೋತ್ಸವದ ಮಧ್ಯೆ, ಇಂದು ದೇಶದ ರಾಜಧಾನಿ ದೆಹಲಿಯು ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಸ್ವಲ್ಪ ಸಮಯದ ಹಿಂದೆ, ದೆಹಲಿಗೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ನಗರ ವಿಸ್ತರಣಾ ರಸ್ತೆಯ ಸಂಪರ್ಕ ಸಿಕ್ಕಿತು. ಇದು ದೆಹಲಿ, ಗುರುಗ್ರಾಮ್ ಮತ್ತು ಇಡೀ ಎನ್.ಸಿ.ಆರ್. ಜನರ ಅನುಕೂಲತೆಯನ್ನು ಹೆಚ್ಚಿಸುತ್ತದೆ. ಕಚೇರಿ ಮತ್ತು ಕಾರ್ಖಾನೆಗೆ ಪ್ರಯಾಣ ಸುಲಭವಾಗುತ್ತದೆ, ಪ್ರತಿಯೊಬ್ಬರ ಸಮಯ ಉಳಿತಾಯವಾಗುತ್ತದೆ. ವ್ಯಾಪಾರ ವರ್ಗ ಮತ್ತು ನಮ್ಮ ರೈತರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಆಧುನಿಕ ರಸ್ತೆಗಳು ಮತ್ತು ಆಧುನಿಕ ಮೂಲಸೌಕರ್ಯಕ್ಕಾಗಿ ನಾನು ದೆಹಲಿ-ಎನ್.ಸಿ.ಆರ್. ಎಲ್ಲಾ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಮೊನ್ನೆ, ಆಗಸ್ಟ್ 15 ರಂದು, ಕೆಂಪು ಕೋಟೆಯಿಂದ, ನಾನು ದೇಶದ ಆರ್ಥಿಕತೆ, ದೇಶದ ಸ್ವಾವಲಂಬನೆ ಮತ್ತು ದೇಶದ ಆತ್ಮವಿಶ್ವಾಸದ ಬಗ್ಗೆ ಭರವಸೆಯಿಂದ ಮಾತನಾಡಿದೆ. ಇಂದಿನ ಭಾರತ ಏನು ಯೋಚಿಸುತ್ತಿದೆ, ಅದರ ಕನಸುಗಳೇನು, ಅದರ ನಿರ್ಣಯಗಳೇನು, ಇಡೀ ಜಗತ್ತು ಇಂದು ಇದನ್ನೆಲ್ಲ ಅನುಭವಿಸುತ್ತಿದೆ.

ಮತ್ತು ಸ್ನೇಹಿತರೇ,

ಜಗತ್ತು ಭಾರತದತ್ತ ನೋಡಿದಾಗ, ಮೌಲ್ಯಮಾಪನ ಮಾಡಿದಾಗ, ಅದರ ಮೊದಲ ನೋಟ ನಮ್ಮ ರಾಜಧಾನಿಯಾದ ನಮ್ಮ ದೆಹಲಿಯ ಮೇಲೆ ಬೀಳುತ್ತದೆ. ಆದ್ದರಿಂದ, ನಾವು ದೆಹಲಿಯನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಮಾಡಬೇಕು, ಅಲ್ಲಿ ಎಲ್ಲರೂ ಹೌದು, ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ರಾಜಧಾನಿ ಎಂದು ಭಾವಿಸುತ್ತಾರೆ.

ಸ್ನೇಹಿತರೇ,

ಕಳೆದ 11 ವರ್ಷಗಳಿಂದ, ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರವು ವಿವಿಧ ಹಂತಗಳಲ್ಲಿ ಇದಕ್ಕಾಗಿ ನಿರಂತರವಾಗಿ ಕೆಲಸ ಮಾಡಿದೆ. ಸಂಪರ್ಕದ ಸಮಸ್ಯೆ ಇದ್ದುದರಿಂದ, ಕಳೆದ ದಶಕದಲ್ಲಿ ದೆಹಲಿ-ಎನ್‌.ಸಿ.ಆರ್‌.ನ ಸಂಪರ್ಕವು ಅಭೂತಪೂರ್ವ ಸುಧಾರಣೆಯನ್ನು ಕಂಡಿದೆ. ಇಲ್ಲಿ ಆಧುನಿಕ ಮತ್ತು ವಿಶಾಲವಾದ ಎಕ್ಸ್‌ಪ್ರೆಸ್‌ವೇಗಳಿವೆ, ದೆಹಲಿ-ಎನ್‌.ಸಿ.ಆರ್‌. ಮೆಟ್ರೋ ನೆಟ್‌ವರ್ಕ್ ವಿಷಯಕ್ಕೆ ಬಂದರೆ, ಇದು ವಿಶ್ವದ ಅತಿದೊಡ್ಡ ನೆಟ್‌ವರ್ಕ್ ಪ್ರದೇಶಗಳಲ್ಲಿ ಒಂದಾಗಿದೆ. ನಮೋ ಭಾರತ್‌ನಂತಹ ಆಧುನಿಕ ಕ್ಷಿಪ್ರ ರೈಲು ವ್ಯವಸ್ಥೆ ಇಲ್ಲಿದೆ. ಅಂದರೆ, ಕಳೆದ 11 ವರ್ಷಗಳಲ್ಲಿ, ದೆಹಲಿ-ಎನ್‌.ಸಿ.ಆರ್‌.ನಲ್ಲಿ ಪ್ರಯಾಣವು ಮೊದಲಿಗಿಂತ ಸುಲಭವಾಗಿದೆ.

ಸ್ನೇಹಿತರೇ,

ದೆಹಲಿಯನ್ನು ಶ್ರೇಷ್ಠ ನಗರವನ್ನಾಗಿ ಮಾಡಲು ನಾವು ಕೈಗೊಂಡ ಕಾರ್ಯ ಮುಂದುವರೆದಿದೆ. ಇಂದಿಗೂ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ ಆಗಿರಲಿ ಅಥವಾ ನಗರ ವಿಸ್ತರಣಾ ರಸ್ತೆಯಾಗಿರಲಿ, ಎರಡೂ ರಸ್ತೆಗಳನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ನಂತರ, ಈಗ ನಗರ ವಿಸ್ತರಣಾ ರಸ್ತೆ ದೆಹಲಿಗೆ ಸಾಕಷ್ಟು ಸಹಾಯ ಮಾಡಲಿದೆ.

ಸ್ನೇಹಿತರೇ,

ನಗರ ವಿಸ್ತರಣಾ ರಸ್ತೆಯು ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಇದು ದೆಹಲಿಯನ್ನು ಕಸದ ಬೆಟ್ಟಗಳಿಂದ ಮುಕ್ತಗೊಳಿಸುವಲ್ಲಿಯೂ ಸಹಾಯ ಮಾಡುತ್ತಿದೆ. ನಗರ ವಿಸ್ತರಣಾ ರಸ್ತೆಯ ನಿರ್ಮಾಣದಲ್ಲಿ ಲಕ್ಷಾಂತರ ಟನ್ ತ್ಯಾಜ್ಯವನ್ನು ಬಳಸಲಾಗಿದೆ. ಅಂದರೆ, ಕಸದ ಬೆಟ್ಟಗಳನ್ನು ಕಡಿಮೆ ಮಾಡುವ ಮೂಲಕ, ಆ ತ್ಯಾಜ್ಯವನ್ನು ರಸ್ತೆ ನಿರ್ಮಿಸಲು ಬಳಸಲಾಗಿದೆ ಮತ್ತು ಇದನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಭಲ್ಸ್ವಾ ಲ್ಯಾಂಡ್ ಫಿಲ್ ಅಂದರೆ ಭೂಮಿಯ ಕಂದಕ ತುಂಬಿಸುವ ಸ್ಥಳವು ಹತ್ತಿರದಲ್ಲಿದೆ. ಇಲ್ಲಿ ವಾಸಿಸುವ ಕುಟುಂಬಗಳಿಗೆ ಇದು ಎಷ್ಟು ಸಮಸ್ಯೆಯಾಗಿತ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಸರ್ಕಾರ ದೆಹಲಿಯ ಜನರನ್ನು ಅಂತಹ ಪ್ರತಿಯೊಂದು ಸಮಸ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ರೇಖಾ ಗುಪ್ತಾ ಜೀ ಅವರ ನೇತೃತ್ವದಲ್ಲಿ ದೆಹಲಿಯ ಬಿಜೆಪಿ ಸರ್ಕಾರವು ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂಬುದು ನನಗೆ ಸಂತೋಷ ತಂದಿದೆ. ಇಷ್ಟು ಕಡಿಮೆ ಸಮಯದಲ್ಲಿ ಯಮುನಾ ನದಿಯಿಂದ 16 ಲಕ್ಷ ಮೆಟ್ರಿಕ್ ಟನ್ ಹೂಳು ತೆಗೆಯಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಅಷ್ಟೇ ಅಲ್ಲ, ಬಹಳ ಕಡಿಮೆ ಅವಧಿಯಲ್ಲಿ, ದೆಹಲಿಯಲ್ಲಿ 650 ದೇವಿ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲಾಗಿದೆ ಮತ್ತು ಇದು ಮಾತ್ರವಲ್ಲದೆ, ಭವಿಷ್ಯದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯಲಿವೆ. ಅಂದರೆ ಆಗ ಆ ಸಂಖ್ಯೆ ಸುಮಾರು ಎರಡು ಸಾವಿರವನ್ನು ದಾಟುತ್ತದೆ. ಇದು ಹಸಿರು ದೆಹಲಿ-ಸ್ವಚ್ಛ ದೆಹಲಿಯ ಮಂತ್ರವನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೇ,

ಹಲವು ವರ್ಷಗಳ ನಂತರ, ರಾಜಧಾನಿ ದೆಹಲಿಯಲ್ಲಿ ಬಿ.ಜೆ.ಪಿ ಸರ್ಕಾರ ರಚನೆಯಾಗಿದೆ. ನಾವು ದೀರ್ಘಕಾಲ ಅಧಿಕಾರದಲ್ಲಿ ಇರಲಿಲ್ಲ ಮತ್ತು ಹಿಂದಿನ ಸರ್ಕಾರಗಳು ದೆಹಲಿಯನ್ನು ಹೇಗೆ ಹಾಳುಮಾಡಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ, ದೆಹಲಿಯನ್ನು ಎಂತಹ ಗುಂಡಿಗೆ ತಳ್ಳಲಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಬಹಳ ದೀರ್ಘಕಾಲದಿಂದ ಕಾಡುತ್ತಿರುವ ಸಮಸ್ಯೆಗಳಿಂದ ದೆಹಲಿಯನ್ನು ಹೊರತರುವುದು ಹೊಸ ಸರಕಾರಕ್ಕೆ ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ಮೊದಲನೆಯದಾಗಿ, ಗುಂಡಿಯನ್ನು ತುಂಬಲು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಮತ್ತು ನಂತರ ಬಹಳ ಕಷ್ಟದಿಂದ ಮಾಡಿದ ಕೆಲವು ಕೆಲಸಗಳು ಗೋಚರವಾಗುತ್ತವೆ. ಆದರೆ ನೀವು ದೆಹಲಿಯಲ್ಲಿ ಆಯ್ಕೆ ಮಾಡಿರುವ ತಂಡವು ಕಠಿಣ ಪರಿಶ್ರಮ ವಹಿಸಿ ದೆಹಲಿಯನ್ನು ಕಳೆದ ಹಲವಾರು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರತರುತ್ತದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ದೆಹಲಿ, ಹರಿಯಾಣ, ಯು.ಪಿ. ಮತ್ತು ರಾಜಸ್ಥಾನದಲ್ಲಿ ಎಲ್ಲೆಡೆ ಬಿ.ಜೆ.ಪಿ ಸರ್ಕಾರ ಇರುವಾಗ ಕಾಕತಾಳೀಯ ಮೊದಲ ಬಾರಿಗೆ ಸಂಭವಿಸಿದೆ. ಈ ಇಡೀ ಪ್ರದೇಶವು ಬಿ.ಜೆ.ಪಿಯನ್ನು, ನಮ್ಮೆಲ್ಲರನ್ನೂ ಎಷ್ಟು ಆಶೀರ್ವದಿಸಿದೆ ಎಂಬುದನ್ನು ಇದು ತೋರಿಸುತ್ತದೆ. ಆದ್ದರಿಂದ, ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು, ನಾವು ದೆಹಲಿ-ಎನ್‌.ಸಿ.ಆರ್‌. ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದಾಗ್ಯೂ, ಜನರ ಆಶೀರ್ವಾದವನ್ನು ಇನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ರಾಜಕೀಯ ಪಕ್ಷಗಳಿವೆ. ಅವರು ಜನರ ನಂಬಿಕೆ ಮತ್ತು ನೆಲದ ವಾಸ್ತವದಿಂದ ಸಂಪರ್ಕ ಕಳೆದುಕೊಂಡಿದ್ದಾರೆ; ಅವರು ದೂರ ಹೋಗಿದ್ದಾರೆ. ಕೆಲವು ತಿಂಗಳ ಹಿಂದೆ ದೆಹಲಿ ಮತ್ತು ಹರಿಯಾಣದ ಜನರನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು, ಅವರ ನಡುವೆ ದ್ವೇಷವನ್ನು ಸೃಷ್ಟಿಸಲು ಪಿತೂರಿಗಳನ್ನು ಹೇಗೆ ರೂಪಿಸಲಾಗಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬಲ್ಲಿರಿ. ಹರಿಯಾಣದ ಜನರು ದೆಹಲಿಯ ನೀರನ್ನು ವಿಷಪೂರಿತಗೊಳಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ದೆಹಲಿ ಮತ್ತು ಇಡೀ ಎನ್‌.ಸಿ.ಆರ್‌. ಅನ್ನು ಅಂತಹ ನಕಾರಾತ್ಮಕ ರಾಜಕೀಯದಿಂದ ಮುಕ್ತಗೊಳಿಸಲಾಗಿದೆ. ಈಗ ನಾವು ಎನ್‌.ಸಿ.ಆರ್‌. ಪರಿವರ್ತಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದೇವೆ. ಮತ್ತು ನಾವು ಅದನ್ನು ಮಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಉತ್ತಮ ಆಡಳಿತವು ಬಿ.ಜೆ.ಪಿ ಸರ್ಕಾರಗಳ ಗುರುತು. ಬಿ.ಜೆ.ಪಿ ಸರ್ಕಾರಗಳಿಗೆ, ಸಾರ್ವಜನಿಕರೇ ಸರ್ವೋಚ್ಚ. ನೀವು ನಮ್ಮ ಹೈಕಮಾಂಡ್; ಜನರ ಜೀವನವನ್ನು ಸುಲಭಗೊಳಿಸುವುದು ನಮ್ಮ ನಿರಂತರ ಪ್ರಯತ್ನ. ಇದು ನಮ್ಮ ನೀತಿಗಳಲ್ಲಿ ಪ್ರತಿಫಲಿಸುತ್ತದೆ, ನಮ್ಮ ನಿರ್ಧಾರಗಳಲ್ಲಿ ಇದು ಗೋಚರಿಸುತ್ತದೆ. ಕಾಂಗ್ರೆಸ್ ಹರಿಯಾಣವನ್ನು ಆಳುತ್ತಿದ್ದ ಕಾಲವಿತ್ತು, ಆಗ ಯಾವುದೇ ಖರ್ಚಿ-ಪಾರ್ಚಿ ಇಲ್ಲದೆ (ಸ್ವಲ್ಪ ಹಣ ಅಥವಾ ಇತರ ಅನುಕೂಲಗಳನ್ನು ನೀಡದೆ) ನೇಮಕಾತಿ ಪಡೆಯುವುದು ಕಷ್ಟಕರವಾಗಿತ್ತು. ಆದರೆ ಹರಿಯಾಣದಲ್ಲಿ, ಬಿ.ಜೆ.ಪಿ ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಲಕ್ಷಾಂತರ ಯುವಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದೆ. ನಾಯಬ್ ಸಿಂಗ್ ಸೈನಿ ಜೀ ಅವರ ನೇತೃತ್ವದಲ್ಲಿ ಪ್ರಕ್ರಿಯೆಯು ಮುಂದುವರೆದಿದೆ.

ಸ್ನೇಹಿತರೇ,

ಇಲ್ಲಿ ದೆಹಲಿಯಲ್ಲೂ ಸಹ, ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದವರಿಗೆ, ಸ್ವಂತ ಮನೆಗಳಿಲ್ಲದವರಿಗೆ ಕಾಂಕ್ರೀಟ್ ಮನೆಗಳು ಸಿಗುತ್ತಿವೆ. ವಿದ್ಯುತ್, ನೀರು, ಅನಿಲ ಸಂಪರ್ಕವಿಲ್ಲದಿದ್ದ ಕಡೆ, ಈ ಎಲ್ಲಾ ಸೌಲಭ್ಯಗಳನ್ನು ಅಲ್ಲಿ ಒದಗಿಸಲಾಗುತ್ತಿದೆ. ಮತ್ತು ನಾನು ದೇಶದ ಬಗ್ಗೆ ಹೇಳುವುದಾದರೆ, ಕಳೆದ 11 ವರ್ಷಗಳಲ್ಲಿ, ದೇಶದಲ್ಲಿ ದಾಖಲೆ ಸಂಖ್ಯೆಯ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು ನಮ್ಮ ರೈಲು ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ. ವಂದೇ ಭಾರತ್‌ನಂತಹ ಆಧುನಿಕ ರೈಲುಗಳು ನಮಗೆ ಹೆಮ್ಮೆಯನ್ನು ತರುತ್ತಿವೆ. ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಎನ್.ಸಿ.ಆರ್. ನಲ್ಲಿ ಎಷ್ಟು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ನೋಡಿ. ಈಗ ಹಿಂಡನ್ ವಿಮಾನ ನಿಲ್ದಾಣದಿಂದಲೂ ಅನೇಕ ನಗರಗಳಿಗೆ ವಿಮಾನಗಳು ಹೋಗಲು ಪ್ರಾರಂಭಿಸಿವೆ. ನೋಯ್ಡಾ ವಿಮಾನ ನಿಲ್ದಾಣವು ಶೀಘ್ರದಲ್ಲೇ ಸಿದ್ಧವಾಗಲಿದೆ.

ಸ್ನೇಹಿತರೇ,                  

ಕಳೆದ ದಶಕದಲ್ಲಿ ದೇಶವು ತನ್ನ ಹಳೆಯ ಪದ್ಧತಿಗಳನ್ನು ಬದಲಾಯಿಸಿದ್ದರಿಂದ ಮಾತ್ರ ಇದು ಸಾಧ್ಯವಾಗಿದೆ. ದೇಶಕ್ಕೆ ಅಗತ್ಯವಿರುವ ಮೂಲಸೌಕರ್ಯದ ಮಟ್ಟ, ಅದನ್ನು ನಿರ್ಮಿಸಬೇಕಾದ ವೇಗ, ಹಿಂದೆ ಇರಲಿಲ್ಲ. ಈಗ ನಮಗೆ ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಇದೆ. ದೆಹಲಿ-ಎನ್‌.ಸಿ.ಆರ್‌. ಹಲವು ದಶಕಗಳಿಂದ ಇದರ ಅಗತ್ಯವನ್ನು ಅನುಭವಿಸುತ್ತಿತ್ತು. ಯು.ಪಿ.ಎ ಸರ್ಕಾರದ ಅವಧಿಯಲ್ಲಿ, ಇದರ ಬಗ್ಗೆ ಫೈಲ್‌ಗಳು ಚಲಿಸಲು ಪ್ರಾರಂಭಿಸಿದವು. ಆದರೆ ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ಕೆಲಸ ಪ್ರಾರಂಭವಾಯಿತು. ಕೇಂದ್ರದಲ್ಲಿ ಮತ್ತು ಹರಿಯಾಣದಲ್ಲಿ ಬಿಜೆಪಿ ಸರ್ಕಾರಗಳು ರಚನೆಯಾದಾಗ ಇದು ಸಾಧ್ಯವಾಯಿತು. ಇಂದು ರಸ್ತೆಗಳು ಬಹಳ ಹೆಮ್ಮೆಯಿಂದ ಸೇವೆಗಳನ್ನು ಒದಗಿಸುತ್ತಿವೆ.

ಸ್ನೇಹಿತರೇ,

ಅಭಿವೃದ್ಧಿ ಯೋಜನೆಗಳ ಬಗ್ಗೆ ರೀತಿಯ ಅಸಡ್ಡೆ ಪರಿಸ್ಥಿತಿ ದೆಹಲಿ-ಎನ್‌.ಸಿ.ಆರ್‌.ನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿತ್ತು. ಮೊದಲನೆಯದಾಗಿ, ಮೂಲಸೌಕರ್ಯಕ್ಕಾಗಿ ಬಜೆಟ್ ಹಿಂದೆ ತುಂಬಾ ಕಡಿಮೆ ಇತ್ತು. ಮಂಜೂರಾದ ಯೋಜನೆಗಳು ಸಹ ವರ್ಷಗಳವರೆಗೆ ಪೂರ್ಣಗೊಳ್ಳುತ್ತಿರಲಿಲ್ಲ. ಕಳೆದ 11 ವರ್ಷಗಳಲ್ಲಿ, ನಾವು ಮೂಲಸೌಕರ್ಯ ಬಜೆಟ್ 6 ಪಟ್ಟು ಹೆಚ್ಚಿಸಿದ್ದೇವೆ. ಈಗ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವತ್ತ ಒತ್ತು ನೀಡಲಾಗಿದೆ. ಅದರಿಂದಾಗಿಯೇ ಇಂದು ದ್ವಾರಕಾ ಎಕ್ಸ್‌ಪ್ರೆಸ್‌ವೇಯಂತಹ ಯೋಜನೆಗಳು ಪೂರ್ಣಗೊಳ್ಳುತ್ತಿವೆ.

ಮತ್ತು ಸಹೋದರರೇ ಮತ್ತು  ಸಹೋದರಿಯರೇ,

ಎಲ್ಲಾ ಹಣವನ್ನು ಹೂಡಿಕೆ ಮಾಡುವುದರಿಂದ, ಅದು ಸೌಲಭ್ಯಗಳನ್ನು ಸೃಷ್ಟಿಸುವುದಲ್ಲದೆ, ಈ ಯೋಜನೆಗಳು ಅಪಾರ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಇಷ್ಟೊಂದು ನಿರ್ಮಾಣ ಕಾರ್ಯಗಳು ನಡೆದಾಗ, ಕಾರ್ಮಿಕರಿಂದ ಎಂಜಿನಿಯರ್‌ಗಳವರೆಗೆ ಲಕ್ಷಾಂತರ ಜನರು ಉದ್ಯೋಗ ಪಡೆಯುತ್ತಾರೆ. ಬಳಸಿದ ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಉದ್ಯೋಗಗಳು ಹೆಚ್ಚಾಗುತ್ತವೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ.

ಸ್ನೇಹಿತರೇ,

ದೀರ್ಘಕಾಲ ಸರ್ಕಾರಗಳನ್ನು ನಡೆಸುತ್ತಿರುವವರಿಗೆ, ಜನರನ್ನು ಆಳುವುದು ಅತ್ಯಂತ ದೊಡ್ಡ ಗುರಿಯಾಗಿತ್ತು. ಜನರ ಜೀವನದಲ್ಲಿ ಸರ್ಕಾರದ ಒತ್ತಡ ಮತ್ತು ಹಸ್ತಕ್ಷೇಪ ಎರಡನ್ನೂ ಕೊನೆಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ದೆಹಲಿಯಲ್ಲಿ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂಬುದಕ್ಕೆ ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ಇದನ್ನು ಕೇಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ದೆಹಲಿಯಲ್ಲಿ ನಮ್ಮ ಸ್ವಚ್ಛತಾ ಮಿತ್ರರು, ಶುಚಿಗೊಳಿಸುವ ಕೆಲಸದಲ್ಲಿ ತೊಡಗಿರುವ ಸಹೋದ್ಯೋಗಿಗಳು, ಅವರೆಲ್ಲರೂ ದೆಹಲಿಯಲ್ಲಿ ಬಹಳ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಾವು ಬೆಳಿಗ್ಗೆ ಎದ್ದ ತಕ್ಷಣ, ನಾವು ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಆದರೆ ಹಿಂದಿನ ಸರ್ಕಾರಗಳು ಜನರನ್ನು ತಮ್ಮ ಗುಲಾಮರೆಂದು ಪರಿಗಣಿಸಿದ್ದವು. ನಾನು ನನ್ನ ಸಣ್ಣ ಶುಚಿಗೊಳಿಸುವ ಸಹೋದರರ ಬಗ್ಗೆ ಮಾತನಾಡುತ್ತಿದ್ದೇನೆ. ಸಂವಿಧಾನವನ್ನು ತಲೆಯ ಮೇಲೆ ಹೊತ್ತುಕೊಂಡು ನೃತ್ಯ ಮಾಡುವ ಜನರು, ಅವರು ಸಂವಿಧಾನವನ್ನು ಹೇಗೆ ಪುಡಿಮಾಡಿದರು, ಬಾಬಾ ಸಾಹೇಬರ ಭಾವನೆಗಳಿಗೆ ಅವರು ಹೇಗೆ ದ್ರೋಹ ಬಗೆದರು, ಇಂದು ನಾನು ನಿಮಗೆ ಸತ್ಯವನ್ನು ಹೇಳಲಿದ್ದೇನೆ. ನಾನು ಹೇಳುವುದನ್ನು ಕೇಳಿ ನೀವು ದಿಗ್ಭ್ರಮೆಗೊಳ್ಳುವಿರಿ. ದೆಹಲಿಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುವ ನನ್ನ ಸಹೋದರ ಸಹೋದರಿಯರಿಗೆ, ಈ ದೇಶದಲ್ಲಿ, ದೆಹಲಿಯಲ್ಲಿ ಅವರಿಗೆ ಅಪಾಯಕಾರಿ ಕಾನೂನು ಇತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಲ್ಲಿ ಒಂದು ವಿಷಯವನ್ನು ಬರೆಯಲಾಗಿದೆ, ನೈರ್ಮಲ್ಯ ಕಾರ್ಮಿಕರು ಮಾಹಿತಿ ನೀಡದೆ ಕೆಲಸಕ್ಕೆ ಬರದಿದ್ದರೆ, ಅವರನ್ನು ಒಂದು ತಿಂಗಳು ಜೈಲಿಗೆ ಹಾಕಬಹುದು. ನೀವೇ ಹೇಳಿ, ನೀವೇ ಯೋಚಿಸಿ, ಈ ಜನರು ಸಫಾಯಿ ಕರ್ಮಚಾರಿಗಳ ಬಗ್ಗೆ ಏನು ಯೋಚಿಸುತ್ತಿದ್ದರು. ನೀವು ಅವರನ್ನು ಜೈಲಿಗೆ ಹಾಕುತ್ತೀರಾ, ಅದೂ ಒಂದು ಸಣ್ಣ ತಪ್ಪಿಗೆ? ಇಂದು ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡದಾಗಿ ಮಾತನಾಡುವವರು ದೇಶದಲ್ಲಿ ಅಂತಹ ಅನೇಕ ನಿಯಮಗಳು ಮತ್ತು ಕಾನೂನುಗಳನ್ನು ನಿರ್ವಹಿಸುತ್ತಿದ್ದರು. ಅಂತಹ ತಪ್ಪು ಕಾನೂನುಗಳನ್ನು ಅಗೆದು ಹುಡುಕುತ್ತಿರುವವರು ಮತ್ತು ಅವುಗಳನ್ನು ತೆಗೆದುಹಾಕುತ್ತಿರುವವರು ಮೋದಿ. ನಮ್ಮ ಸರ್ಕಾರ ಈಗಾಗಲೇ ಅಂತಹ ನೂರಾರು ಕಾನೂನುಗಳನ್ನು ರದ್ದುಗೊಳಿಸಿದೆ ಮತ್ತು ಅಭಿಯಾನ ಮುಂದುವರೆದಿದೆ.

ಸ್ನೇಹಿತರೇ,

ನಮಗೆ, ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆ. ಆದ್ದರಿಂದ, ನಾವು ನಿರಂತರವಾಗಿ ಸುಧಾರಣೆಗೆ ಒತ್ತು ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ, ಜೀವನ ಮತ್ತು ವ್ಯವಹಾರ ಎರಡೂ ಎಲ್ಲವೂ ಸುಲಭವಾಗುವಂತೆ ನಾವು ಅನೇಕ ದೊಡ್ಡ ಸುಧಾರಣೆಗಳನ್ನು ಮಾಡಲಿದ್ದೇವೆ.

ಸ್ನೇಹಿತರೇ,

ಅನುಕ್ರಮದಲ್ಲಿ, ಮುಂದಿನ ಪೀಳಿಗೆಯ ಸುಧಾರಣೆ ಜಿ.ಎಸ್‌.ಟಿಯಲ್ಲಿ ಆಗಲಿದೆ. ಈ ದೀಪಾವಳಿಯಲ್ಲಿ, ದೇಶವಾಸಿಗಳು ಜಿ.ಎಸ್‌.ಟಿ ಸುಧಾರಣೆಯಿಂದ ಡಬಲ್ ಬೋನಸ್ ಪಡೆಯಲಿದ್ದಾರೆ. ನಾವು ಅದರ ಸಂಪೂರ್ಣ ಸ್ವರೂಪವನ್ನು ರಾಜ್ಯಗಳಿಗೆ ಕಳುಹಿಸಿದ್ದೇವೆ. ಭಾರತ ಸರ್ಕಾರದ ಉಪಕ್ರಮದೊಂದಿಗೆ ಎಲ್ಲಾ ರಾಜ್ಯಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಈ ದೀಪಾವಳಿ ಹೆಚ್ಚು ಅದ್ಭುತವಾಗುವಂತೆ ನಾವು ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ಜಿ.ಎಸ್‌.ಟಿಯನ್ನು ಮತ್ತಷ್ಟು ಸರಳೀಕರಿಸುವುದು ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸುವುದು ನಮ್ಮ ಪ್ರಯತ್ನ. ಪ್ರತಿಯೊಂದು ಕುಟುಂಬ, ಬಡವರು ಮತ್ತು ಮಧ್ಯಮ ವರ್ಗ, ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ಉದ್ಯಮಿ, ಪ್ರತಿಯೊಬ್ಬ ವ್ಯಾಪಾರಿ ಮತ್ತು ಉದ್ಯಮಿ ಇದರಿಂದ ಪ್ರಯೋಜನ ಪಡೆಯುತ್ತಾರೆ.

ಸ್ನೇಹಿತರೇ,

ಭಾರತದ ಅತ್ಯಂತ ದೊಡ್ಡ ಶಕ್ತಿ ನಮ್ಮ ಪ್ರಾಚೀನ ಸಂಸ್ಕೃತಿ, ನಮ್ಮ ಪ್ರಾಚೀನ ಪರಂಪರೆ. ಈ ಸಾಂಸ್ಕೃತಿಕ ಪರಂಪರೆಯು ಜೀವನ ತತ್ವಶಾಸ್ತ್ರ, ಜೀವಂತ ತತ್ವಶಾಸ್ತ್ರವನ್ನು ಹೊಂದಿದೆ ಮತ್ತು ಜೀವನ ತತ್ವಶಾಸ್ತ್ರದಲ್ಲಿ ನಾವು ಚಕ್ರಧಾರಿ ಮೋಹನ ಮತ್ತು ಚರಖಾಧಾರಿ ಮೋಹನ ಇಬ್ಬರನ್ನೂ ತಿಳಿದುಕೊಳ್ಳುವ ಅವಕಾಶ ಪಡೆದಿದ್ದೇವೆ. ಕಾಲಕಾಲಕ್ಕೆ, ನಾವು ಚಕ್ರಧಾರಿ ಮೋಹನನಿಂದ ಚರಖಾಧಾರಿ ಮೋಹನರವರೆಗೆ ಇಬ್ಬರನ್ನೂ ಅನುಭವವನ್ನು ಪಡೆಯುತ್ತೇವೆ. ಚಕ್ರಧಾರಿ ಮೋಹನ ಎಂದರೆ ಸುದರ್ಶನ ಚಕ್ರವನ್ನು ಹೊತ್ತ ಶ್ರೀಕೃಷ್ಣ, ಅವರು ಜನರಿಗೆ ಸುದರ್ಶನ ಚಕ್ರದ ಶಕ್ತಿಯ ಅನುಭವವನ್ನು ನೀಡಿದರು. ಮತ್ತು ಚರಖಾಧಾರಿ ಮೋಹನ ಎಂದರೆ ಮಹಾತ್ಮ ಗಾಂಧಿ, ಅವರು ಚರಖಾವನ್ನು ತಿರುಗಿಸುವ ಮೂಲಕ ಜನರಿಗೆ ಸ್ವದೇಶಿ ಶಕ್ತಿಯ ಅನುಭವ ಲಭ್ಯವಾಗುವಂತೆ ಮಾಡಿದರು.

ಸ್ನೇಹಿತರೇ,

ಭಾರತವನ್ನು ಸಬಲೀಕರಣಗೊಳಿಸಲು, ನಾವು ಚಕ್ರಧಾರಿ ಮೋಹನರಿಂದ ಸ್ಫೂರ್ತಿ ಪಡೆದು ಮುಂದುವರಿಯಬೇಕು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ನಾವು ಚರಖಾಧಾರಿ ಮೋಹನರ ಮಾರ್ಗವನ್ನು ಅನುಸರಿಸಬೇಕು. ನಾವು ವೋಕಲ್ ಫಾರ್ ಲೋಕಲ್ ಅನ್ನು ನಮ್ಮ ಜೀವನ ಮಂತ್ರವನ್ನಾಗಿ ಮಾಡಿಕೊಳ್ಳಬೇಕು.

ಸ್ನೇಹಿತರೇ,

ಕೆಲಸ ನಮಗೆ ಕಷ್ಟಕರವಲ್ಲ. ನಾವು ಪ್ರತಿಜ್ಞೆ ಮಾಡಿದಾಗಲೆಲ್ಲಾ ಅದನ್ನು ಮಾಡಿದ್ದೇವೆ. ಖಾದಿಗೆ ಒಂದು ಸಣ್ಣ ಉದಾಹರಣೆ ನೀಡುತ್ತೇನೆ, ಖಾದಿ ಅಳಿವಿನ ಅಂಚಿಗೆ ತಲುಪಿತ್ತು, ಅದರ ಬಗ್ಗೆ ಕೇಳಲು ಯಾರೂ ಇರಲಿಲ್ಲ, ನೀವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾನು ದೇಶಕ್ಕೆ ಮನವಿ ಮಾಡಿದೆ, ದೇಶವು ಪ್ರತಿಜ್ಞೆ ಮಾಡಿತು ಮತ್ತು ಅದರ ಫಲಿತಾಂಶವೂ ಕಂಡುಬಂದಿದೆ. ಒಂದು ದಶಕದಲ್ಲಿ ಖಾದಿ ಮಾರಾಟವು ಸುಮಾರು 7 ಪಟ್ಟು ಹೆಚ್ಚಾಗಿದೆ. ದೇಶದ ಜನರು ಸ್ಥಳೀಯರಿಗೆ ಆದ್ಯತೆ ಎಂಬ ಮಂತ್ರದೊಂದಿಗೆ ಖಾದಿಯನ್ನು ಅಳವಡಿಸಿಕೊಂಡಿದ್ದಾರೆ. ಅದೇ ರೀತಿ, ದೇಶವು ಮೇಡ್ ಇನ್ ಇಂಡಿಯಾ ಫೋನ್‌ಗಳ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದೆ. 11 ವರ್ಷಗಳ ಹಿಂದೆ, ನಮಗೆ ಅಗತ್ಯವಿರುವ ಹೆಚ್ಚಿನ ಫೋನ್‌ಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ಇಂದು, ಹೆಚ್ಚಿನ ಭಾರತೀಯರು ಮೇಡ್ ಇನ್ ಇಂಡಿಯಾ ಫೋನ್‌ಗಳನ್ನು ಬಳಸುತ್ತಾರೆ. ಇಂದು ನಾವು ಪ್ರತಿ ವರ್ಷ 30-35 ಕೋಟಿ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿದ್ದೇವೆ, 30-35 ಕೋಟಿ, 30-35 ಕೋಟಿ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿದ್ದೇವೆ ಮತ್ತು ಅವುಗಳನ್ನು ರಫ್ತು ಮಾಡುತ್ತಿದ್ದೇವೆ.

ಸ್ನೇಹಿತರೇ,

ನಮ್ಮ ಮೇಡ್ ಇನ್ ಇಂಡಿಯಾ, ನಮ್ಮ ಯು.ಪಿ.ಐ, ಇಂದು ವಿಶ್ವದ ಅತಿದೊಡ್ಡ ನೈಜ ಸಮಯದ ಡಿಜಿಟಲ್ ಪಾವತಿ ವೇದಿಕೆಯಾಗಿದೆ, ಇದು ವಿಶ್ವದಲ್ಲಿಯೇ ಅತಿದೊಡ್ಡದಾಗಿದೆ. ರೈಲ್ವೆ ಬೋಗಿಗಳಾಗಲಿ ಅಥವಾ ಭಾರತದಲ್ಲಿ ತಯಾರಾದ ಲೋಕೋಮೋಟಿವ್‌ಗಳಾಗಲಿ, ಈಗ ಪ್ರಪಂಚದ ಇತರ ದೇಶಗಳಲ್ಲಿಯೂ ಅವುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಸ್ನೇಹಿತರೇ,

ರಸ್ತೆ ಮೂಲಸೌಕರ್ಯ, ಮೂಲಸೌಕರ್ಯ ವಿಷಯಕ್ಕೆ ಬಂದಾಗ, ಭಾರತವು ಗತಿ ಶಕ್ತಿ ವೇದಿಕೆಯನ್ನು ರಚಿಸಿದೆ, ಅದು 1600 ಪದರಗಳನ್ನು ಹೊಂದಿದೆ, ಸಾವಿರದ ಆರುನೂರು ಪದರಗಳ ದತ್ತಾಂಶವನ್ನು ಹೊಂದಿದೆ ಮತ್ತು ಯಾವುದೇ ಯೋಜನೆಯು ಯಾವ ರೀತಿಯ ಪರಿಸ್ಥಿತಿಗಳ ಮೂಲಕ ಹೋಗಬೇಕಾಗುತ್ತದೆ, ಯಾವ ನಿಯಮಗಳನ್ನು ಅನುಸರಿಸಬೇಕು, ಅದು ವನ್ಯಜೀವಿಗಳಿರಲಿ ಅಥವಾ ಅರಣ್ಯವಿರಲಿ, ಅದು ನದಿಯಾಗಿರಲಿ ಅಥವಾ ಚರಂಡಿಯಾಗಿರಲಿ, ಇವೆಲ್ಲವನ್ನೂ ನಿಮಿಷಗಳಲ್ಲಿ ಕಂಡುಕೊಳ್ಳಬಹುದು ಮತ್ತು ಯೋಜನೆಗಳು ವೇಗವಾಗಿ ಮುಂದುವರಿಯುತ್ತವೆ. ಇಂದು, ಗತಿ ಶಕ್ತಿಯ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ರಚಿಸಲಾಗಿದೆ ಮತ್ತು ಗತಿ ಶಕ್ತಿಯು ದೇಶದ ಪ್ರಗತಿಗೆ ಅತ್ಯಂತ ಶಕ್ತಿಶಾಲಿ ಮಾರ್ಗವಾಗಿದೆ.

ಸ್ನೇಹಿತರೇ,

ಒಂದು ದಶಕದ ಹಿಂದಿನವರೆಗೂ, ನಾವು ವಿದೇಶಗಳಿಂದ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ನಾವು ಭಾರತೀಯರು ಸ್ಥಳೀಯರಿಗೆ ಆದ್ಯತೆ ನೀಡಲು ಪ್ರತಿಜ್ಞೆ ಮಾಡಿದಾಗ, ಭಾರತದಲ್ಲಿ ಆಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಪ್ರಾರಂಭಿಸಿದ್ದು ಮಾತ್ರವಲ್ಲದೆ, ಇಂದು ನಾವು ಪ್ರಪಂಚದ 100 ಕ್ಕೂ ಹೆಚ್ಚು ದೇಶಗಳಿಗೆ ಆಟಿಕೆಗಳನ್ನು ರಫ್ತು ಮಾಡಲು ಪ್ರಾರಂಭಿಸಿದ್ದೇವೆ.

ಸ್ನೇಹಿತರೇ,

ಆದ್ದರಿಂದ, ನಾನು ನಿಮ್ಮೆಲ್ಲರನ್ನೂ, ಎಲ್ಲಾ ದೇಶವಾಸಿಗಳನ್ನು, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ನಾವು ನಂಬಬೇಕೆಂದು ಮತ್ತೊಮ್ಮೆ ವಿನಂತಿಸುತ್ತೇನೆ. ನೀವು ಭಾರತೀಯರಾಗಿದ್ದರೆ, ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರ ಖರೀದಿಸಿ, ಈಗ ಹಬ್ಬದ ಋತು ನಡೆಯುತ್ತಿದೆ. ನಿಮ್ಮ ಸ್ಥಳೀಯ ಉತ್ಪನ್ನಗಳ ಸಂತೋಷವನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ, ನೀವು ನಿರ್ಧರಿಸಿ, ನೀವು ಭಾರತದಲ್ಲಿ ತಯಾರಾದ, ಭಾರತೀಯರು ತಯಾರಿಸಿದ ಉಡುಗೊರೆಗಳನ್ನು ನೀಡಬೇಕು ಎಂಬುದಾಗಿ.

ಸ್ನೇಹಿತರೇ,

ಇಂದು, ನಾನು ವ್ಯಾಪಾರಿ ಸಮುದಾಯ ಮತ್ತು ಅಂಗಡಿಯವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ; ಒಂದು ಸಮಯದಲ್ಲಿ, ನೀವು ವಿದೇಶದಲ್ಲಿ ತಯಾರಿಸಿದ ಸರಕುಗಳನ್ನು ಮಾರಾಟ ಮಾಡಿರಬಹುದು, ಇದರಿಂದ ನೀವು ಸ್ವಲ್ಪ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ನೀವು ಭಾವಿಸಿರಬಹುದು. ಆಗ ನೀವು ಏನೇ ಮಾಡಿದ್ದರೂ ಈಗ ಅದು ಮುಗಿದ ಅಧ್ಯಾಯ, ಆದರೆ ಈಗ ನೀವು ಸಹ ವೋಕಲ್ ಫಾರ್ ಲೋಕಲ್ ಮಂತ್ರದ ಮೇಲೆ ನನ್ನನ್ನು ಬೆಂಬಲಿಸಬೇಕು. ನಿಮ್ಮ ಒಂದು ಹೆಜ್ಜೆ ದೇಶಕ್ಕೆ ಮಾತ್ರವಲ್ಲದೆ ನಿಮ್ಮ ಕುಟುಂಬ ಮತ್ತು ನಿಮ್ಮ ಮಕ್ಕಳಿಗೂ ಪ್ರಯೋಜನವನ್ನು ನೀಡುತ್ತದೆ. ನೀವು ಮಾರಾಟ ಮಾಡುವ ಪ್ರತಿಯೊಂದು ವಸ್ತುವು ದೇಶದ ಕೆಲವು ಕಾರ್ಮಿಕರು ಅಥವಾ ಕೆಲವು ಬಡವರಿಗೆ ಪ್ರಯೋಜನವನ್ನು ನೀಡುತ್ತದೆ. ನೀವು ಮಾರಾಟ ಮಾಡುವ ಪ್ರತಿಯೊಂದಕ್ಕೂ ಬರುವ ಹಣವು ಭಾರತದಲ್ಲಿಯೇ ಉಳಿಯುತ್ತದೆ ಮತ್ತು ಅದನ್ನು ಕೆಲವು ಭಾರತೀಯರೇ ಪಡೆಯುತ್ತಾರೆ. ಅಂದರೆ ಇದು ಭಾರತೀಯರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ, ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಆದ್ದರಿಂದ ಪೂರ್ಣ ಹೆಮ್ಮೆಯಿಂದ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ.

ಸ್ನೇಹಿತರೇ,

ಇಂದು, ದೆಹಲಿಯು ಭಾರತದ ಭೂತಕಾಲವನ್ನು ಅದರ ಭವಿಷ್ಯದೊಂದಿಗೆ ಒಟ್ಟುಗೂಡಿಸುವ ರಾಜಧಾನಿಯಾಗುತ್ತಿದೆ. ಕೆಲವೇ ದಿನಗಳ ಹಿಂದೆ, ದೇಶವು ಹೊಸ ಕೇಂದ್ರ ಸಚಿವಾಲಯ, ಕರ್ತವ್ಯ ಭವನವನ್ನು ಪಡೆದುಕೊಂಡಿದೆ. ಹೊಸ ಸಂಸತ್ತನ್ನು ನಿರ್ಮಿಸಲಾಗಿದೆ. ಕರ್ತವ್ಯ ಮಾರ್ಗವು ಹೊಸ ರೂಪದಲ್ಲಿ ನಮ್ಮ ಮುಂದೆ ಇದೆ. ಭಾರತ್ ಮಂಟಪ ಮತ್ತು ಯಶೋಭೂಮಿಯಂತಹ ಆಧುನಿಕ ಸಮ್ಮೇಳನ ಕೇಂದ್ರಗಳು ಇಂದು ದೆಹಲಿಯ ವೈಭವವನ್ನು ಹೆಚ್ಚಿಸುತ್ತಿವೆ. ಇವು ದೆಹಲಿಯನ್ನು ವ್ಯಾಪಾರ ಮತ್ತು ಉದ್ಯಮಕ್ಕೆ ಉತ್ತಮ ಸ್ಥಳವನ್ನಾಗಿ ಮಾಡುತ್ತಿವೆ. ಈ ಎಲ್ಲ ಜನರ ಶಕ್ತಿ ಮತ್ತು ಸ್ಫೂರ್ತಿಯಿಂದ ನಮ್ಮ ದೆಹಲಿ ವಿಶ್ವದ ಅತ್ಯುತ್ತಮ ರಾಜಧಾನಿಯಾಗಿ ಹೊರಹೊಮ್ಮುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ಹಾರೈಕೆಯೊಂದಿಗೆ ಈ ಅಭಿವೃದ್ಧಿ ಕಾರ್ಯಗಳಿಗಾಗಿ ಮತ್ತೊಮ್ಮೆ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಇಡೀ ಪ್ರದೇಶವು ಅಭಿವೃದ್ಧಿ ಹೊಂದಲಿದೆ ಎಂದು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!

 

*****


(Release ID: 2157385)