ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11,000 ಕೋಟಿ ರೂಪಾಯಿ ಮೌಲ್ಯದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು


ನಾವು ದೆಹಲಿಯನ್ನು ಅಭಿವೃದ್ಧಿ ಹೊಂದುತ್ತಿರುವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುವ ಬೆಳವಣಿಗೆಯ ಮಾದರಿಯಾಗಿ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ

ಜನರ ಜೀವನವನ್ನು ಸುಗಮಗೊಳಿಸಲು  ಸರಕಾರ ನಿರಂತರ ಪ್ರಯತ್ನಿಸುತ್ತಿದೆ, ಪ್ರತಿಯೊಂದು ನೀತಿ ಮತ್ತು ಪ್ರತಿಯೊಂದು ನಿರ್ಧಾರಕ್ಕೆ ಮಾರ್ಗದರ್ಶನ ನೀಡುವ ಗುರಿಯೂ ಇದೇ ಆಗಿದೆ: ಪ್ರಧಾನಮಂತ್ರಿ

ನಮಗೆ ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆ: ಪ್ರಧಾನಮಂತ್ರಿ

ಮುಂದಿನ ತಲೆಮಾರಿನ ಜಿ.ಎಸ್‌.ಟಿ ಸುಧಾರಣೆಗಳು ದೇಶಾದ್ಯಂತ ನಾಗರಿಕರಿಗೆ ದ್ವಿಗುಣ ಪ್ರಯೋಜನಗಳನ್ನು ತರಲಿವೆ: ಪ್ರಧಾನಮಂತ್ರಿ

ಭಾರತವನ್ನು ಬಲಪಡಿಸಲು, ನಾವು ʻಚಕ್ರಧಾರಿ ಮೋಹನʼನಿಂದ (ಶ್ರೀ ಕೃಷ್ಣ) ಸ್ಫೂರ್ತಿ ಪಡೆಯಬೇಕು, ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ನಾವು ʻಚರಕಧಾರಿ ಮೋಹನʼ (ಮಹಾತ್ಮ ಗಾಂಧಿ) ಅವರ ಮಾರ್ಗವನ್ನು ಅನುಸರಿಸಬೇಕು: ಪ್ರಧಾನಮಂತ್ರಿ

ಸ್ಥಳೀಯರಿಗಾಗಿ ಧ್ವನಿ ಎತ್ತೋಣ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳ ಮೇಲೆ ವಿಶ್ವಾಸ ಇರಿಸೋಣ ಮತ್ತು ಅವುಗಳನ್ನೇ ಖರೀದಿಸೋಣ: ಪ್ರಧಾನಮಂತ್ರಿ

Posted On: 17 AUG 2025 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ರೋಹಿಣಿಯಲ್ಲಿ ಸುಮಾರು 11,000 ಕೋಟಿ ರೂ.ಗಳ ಒಟ್ಟಾರೆ ವೆಚ್ಚದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಮಹತ್ವವನ್ನು ಒತ್ತಿ ಹೇಳಿದರು. ಉದ್ಘಾಟಿಸಲಾದ ʻಎಕ್ಸ್‌ಪ್ರೆಸ್‌ ಹೆದ್ದಾರಿʼಯ ಹೆಸರು "ದ್ವಾರಕಾ" ಆಗಿರುವುದು ಮತ್ತು ಕಾರ್ಯಕ್ರಮವನ್ನು "ರೋಹಿಣಿ"ಯಲ್ಲಿ ನಡೆಸಲಾಗುತ್ತಿರುವುದು ವಿಶೇಷ ಎಂದು ಹೇಳಿದರು. ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಉತ್ಸಾಹವನ್ನು ಎತ್ತಿ ತೋರಿದ ಪ್ರಧಾನಮಂತ್ರಿ ಮೋದಿ ಸ್ವತಃ ತಾವು ಸಹ ದ್ವಾರಕಾಧೀಶನ ಭೂಮಿಯಿಂದ ಬಂದವರು ಎಂಬ ಕಾಕತಾಳೀಯತೆಯ ಬಗ್ಗೆ ಗಮನ ಸೆಳೆದರು. ಇಡೀ ವಾತಾವರಣವು ಭಗವಾನ್ ಕೃಷ್ಣನ ಸಾರದಿಂದ ಆಳವಾಗಿ ಆವರಿಸಿದೆ ಎಂದು ಪ್ರಧಾನಮಂತ್ರಿ ಗಮನಿಸಿದರು.

ಆಗಸ್ಟ್ ತಿಂಗಳು ಸ್ವಾತಂತ್ರ್ಯ ಮತ್ತು ಕ್ರಾಂತಿಯ ಬಣ್ಣಗಳಿಂದ ತುಂಬಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, ʻಆಜಾದಿ ಕಾ ಮಹೋತ್ಸವʼದ ಆಚರಣೆಗಳ ನಡುವೆ, ರಾಷ್ಟ್ರ ರಾಜಧಾನಿ ದೆಹಲಿ ಇಂದು ಅಭಿವೃದ್ಧಿಯ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದರು. ಇದಕ್ಕೂ ಮುನ್ನ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ನಗರ ವಿಸ್ತರಣೆ ರಸ್ತೆ (ಅರ್ಬನ್‌ ಎಕ್ಸ್‌ಟೆನ್ಷನ್‌ ರೋಡ್) ಮೂಲಕ ದೆಹಲಿ ಸುಧಾರಿತ ಸಂಪರ್ಕವನ್ನು ಪಡೆದುಕೊಂಡಿದೆ. ಇದು ದೆಹಲಿ, ಗುರುಗ್ರಾಮ್ ಮತ್ತು ಇಡೀ ಎನ್‌.ಸಿ.ಆರ್ ಪ್ರದೇಶದ ಜನರಿಗೆ ಅನುಕೂಲವನ್ನು ಸುಧಾರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಕಚೇರಿಗಳು ಮತ್ತು ಕಾರ್ಖಾನೆಗಳಿಗೆ ಪ್ರಯಾಣಿಸುವುದು ಸುಲಭವಾಗುತ್ತದೆ, ಪ್ರತಿಯೊಬ್ಬರಿಗೂ ಸಮಯವನ್ನು ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು. ಈ ಸಂಪರ್ಕದಿಂದ ವ್ಯಾಪಾರಿಗಳು, ಉದ್ಯಮಿಗಳು ಮತ್ತು ರೈತರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಆಧುನಿಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಳಿಗಾಗಿ ದೆಹಲಿ-ಎನ್‌.ಸಿ.ಆರ್‌ನ ಎಲ್ಲ ನಿವಾಸಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.

2025ರ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ರಾಷ್ಟ್ರದ ಆರ್ಥಿಕತೆ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಬಗ್ಗೆ ವಿವರವಾಗಿ ಮಾತನಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿ, "ಇಂದಿನ ಭಾರತವನ್ನು ಅದರ ಆಕಾಂಕ್ಷೆಗಳು, ಕನಸುಗಳು ಮತ್ತು ಸಂಕಲ್ಪಗಳಿಂದ ವ್ಯಾಖ್ಯಾನಿಸಲಾಗಿದೆ - ಇಡೀ ಜಗತ್ತು ಈಗ ಈ ಅಂಶಗಳನ್ನು ಅನುಭವಿಸುತ್ತಿದೆ," ಎಂದು ಹೇಳಿದರು. ಜಗತ್ತು ಭಾರತದತ್ತ ನೋಡಿದಾಗ ಮತ್ತು ಅದರ ಪ್ರಗತಿಯನ್ನು ಮೌಲ್ಯಮಾಪನ ಮಾಡಿದಾಗ, ಅದರ ಮೊದಲ ನೋಟವು ರಾಷ್ಟ್ರ ರಾಜಧಾನಿ ದೆಹಲಿಯ ಮೇಲೆ ಬೀಳುತ್ತದೆ ಎಂದು ಅವರು ಹೇಳಿದರು. ದೆಹಲಿಯನ್ನು ಬೆಳವಣಿಗೆಯ ಮಾದರಿಯಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು. ಇದು ಅಭಿವೃದ್ಧಿ ಹೊಂದುತ್ತಿರುವ ಮತ್ತು ಆತ್ಮವಿಶ್ವಾಸದ ಭಾರತದ ರಾಜಧಾನಿ ಎಂದು ಪ್ರತಿಯೊಬ್ಬರೂ ನಿಜವಾಗಿಯೂ ಭಾವಿಸುವಂತಾಗಬೇಕು ಎಂದರು.

ಕಳೆದ 11 ವರ್ಷಗಳಲ್ಲಿ, ಈ ಪ್ರಗತಿಯನ್ನು ಸಾಧಿಸಲು ಸರ್ಕಾರವು ವಿವಿಧ ಹಂತಗಳಲ್ಲಿ ನಿರಂತರವಾಗಿ ಕೆಲಸ ಮಾಡಿದೆ ಎಂದು ಹೇಳಿದ ಪ್ರಧಾನಮಂತ್ರಿ, ಸಂಪರ್ಕದ ವಿಷಯದಲ್ಲಿ, ದೆಹಲಿ-ಎನ್‌.ಸಿ.ಆರ್ ಕಳೆದ ದಶಕದಲ್ಲಿ ಅಭೂತಪೂರ್ವ ಸುಧಾರಣೆಗೆ ಸಾಕ್ಷಿಯಾಗಿದೆ ಎಂದರು. ಈ ಪ್ರದೇಶದಲ್ಲಿ ಆಧುನಿಕ ಮತ್ತು ವಿಶಾಲವಾದ ಎಕ್ಸ್‌ಪ್ರೆಸ್‌ವೇಗಳ ಉಪಸ್ಥಿತಿಯನ್ನು ಉಲ್ಲೇಖಿಸಿದರು. "ಮೆಟ್ರೋ ಜಾಲದ ವಿಷಯದಲ್ಲಿ ದೆಹಲಿ-ಎನ್‌.ಸಿ.ಆರ್ ಈಗ ವಿಶ್ವದ ಅತಿ ಹೆಚ್ಚು ಸಂಪರ್ಕಿತ ಪ್ರದೇಶಗಳಲ್ಲಿ ಒಂದಾಗಿದೆ," ಎಂದು ಶ್ರೀ ಮೋದಿ ಹೇಳಿದರು. ಈ ಪ್ರದೇಶವು ʻನಮೋ ಭಾರತ್ ರಾಪಿಡ್ ರೈಲ್‌ʼನಂತಹ ಸುಧಾರಿತ ವ್ಯವಸ್ಥೆಗಳಿಂದ ಸಜ್ಜುಗೊಂಡಿದೆ ಎಂದು ಅವರು ಹೇಳಿದರು. ಕಳೆದ 11 ವರ್ಷಗಳಲ್ಲಿ, ಹಿಂದಿನ ಸಮಯಕ್ಕೆ ಹೋಲಿಸಿದರೆ ದೆಹಲಿ-ಎನ್‌.ಸಿ.ಆರ್‌ನಲ್ಲಿ ಪ್ರಯಾಣವು ಗಮನಾರ್ಹ ಮಟ್ಟದಲ್ಲಿ ಸುಗಮವಾಗಿದೆ ಎಂದು ಅವರು ಒತ್ತಿ ಹೇಳಿದರು.

ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವ ಬದ್ಧತೆ ಮುಂದುವರೆದಿದೆ ಎಂದು ಪ್ರತಿಪಾದಿಸಿದ ಶ್ರೀ ಮೋದಿ ಅವರು, ಇಂದು ಪ್ರತಿಯೊಬ್ಬರೂ ಈ ಪ್ರಗತಿಯನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ ಎಂದರು. ʻದ್ವಾರಕಾ ಎಕ್ಸ್‌ಪ್ರೆಸ್‌ವೇʼ ಮತ್ತು ʻನಗರ ವಿಸ್ತರಣಾ ರಸ್ತೆʼಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಎರಡೂ ರಸ್ತೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದರು. ʻಪೆರಿಫೆರಲ್ ಎಕ್ಸ್‌ಪ್ರೆಸ್‌ವೇʼಯ ನಂತರ, ನಗರ ವಿಸ್ತರಣಾ ರಸ್ತೆಯು ಈಗ ದೆಹಲಿಯ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಗಮನಾರ್ಹ ನೆರವು ನೀಡುತ್ತದೆ ಎಂದು ಅವರು ಹೇಳಿದರು.

ʻನಗರ ವಿಸ್ತರಣಾ ರಸ್ತೆʼಯ ಪ್ರಮುಖ ವೈಶಿಷ್ಟ್ಯವನ್ನು ಒತ್ತಿಹೇಳುತ್ತಾ, ಇದು ದೆಹಲಿಯನ್ನು ಅದರ ಕಸದ ದಿಬ್ಬಗಳಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತಿದೆ. ನಗರ ವಿಸ್ತರಣಾ ರಸ್ತೆ ನಿರ್ಮಾಣದಲ್ಲಿ ಲಕ್ಷಾಂತರ ಟನ್ ತ್ಯಾಜ್ಯ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ತ್ಯಾಜ್ಯ ವಸ್ತುಗಳನ್ನು ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡುವ ಮೂಲಕ ಕಸದ ದಿಬ್ಬಗಳನ್ನು ಕರಗಿಸಲಾಗಿದೆ ಎಂದು ಅವರು ಹೇಳಿದರು. ಹತ್ತಿರದ ʻಭಲ್‌ಸ್ವಾ ಭೂಭರ್ತಿ ಸ್ಥಳʼದ ಬಗ್ಗೆ ಗಮನಸೆಳೆದ ಮತ್ತು ಅದರ ಸುತ್ತಮುತ್ತ ವಾಸಿಸುವ ಕುಟುಂಬಗಳು ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ಒಪ್ಪಿಕೊಂಡ ಶ್ರೀ ಮೋದಿ, ದೆಹಲಿ ನಿವಾಸಿಗಳನ್ನು ಇಂತಹ ಸವಾಲುಗಳಿಂದ ಮುಕ್ತಗೊಳಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದರು.

ಶ್ರೀಮತಿ ರೇಖಾ ಗುಪ್ತಾ ಅವರ ನಾಯಕತ್ವದಲ್ಲಿ ದೆಹಲಿ ಸರ್ಕಾರವು ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ಯಮುನಾ ನದಿಯಿಂದ ಈಗಾಗಲೇ 16 ಲಕ್ಷ ಮೆಟ್ರಿಕ್ ಟನ್ ಹೂಳನ್ನು ತೆಗೆದುಹಾಕಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡರು. ಕಡಿಮೆ ಅವಧಿಯಲ್ಲಿ ದೆಹಲಿಯಲ್ಲಿ 650 ʻದೇವಿʼ (ದೆಹಲಿ ಎಲೆಕ್ಟ್ರಿಕ್ ವೆಹಿಕಲ್ ಇಂಟರ್ ಕನೆಕ್ಟರ್) ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ ಶೀಘ್ರದಲ್ಲೇ 2,000 ದಾಟುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಈ ಉಪಕ್ರಮವು "ಹಸಿರು ದೆಹಲಿ-ಸ್ವಚ್ಛ ದೆಹಲಿ" ಮಂತ್ರವನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಹಲವು ವರ್ಷಗಳ ನಂತರ, ತಮ್ಮ ಪಕ್ಷವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರವನ್ನು ರಚಿಸಿದೆ ಎಂದು ಹೇಳಿದ ಪ್ರಧಾನಮಂತ್ರಿ, ದೆಹಲಿಯಲ್ಲಿ ಕುಂಠಿತ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರಗಳನ್ನು ಟೀಕಿಸಿದರು. ಹಿಂದಿನ ಸರ್ಕಾರಗಳ ಅವ್ಯವಸ್ಥೆಯಿಂದ ದೆಹಲಿಯನ್ನು ಮೇಲೆತ್ತುವುದು ಪ್ರಯಾಸಕರ ಕೆಲಸವಾಗಿದ್ದರೂ, ಪ್ರಸ್ತುತ ಸರ್ಕಾರವು ದೆಹಲಿಯ ಹೆಮ್ಮೆ ಮತ್ತು ಅಭಿವೃದ್ಧಿಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮ್ಮ ಸರ್ಕಾರಗಳಿಂದಾಗಿ ಪ್ರಸ್ತುತ ಜಾರಿಯಲ್ಲಿರುವ ವಿಶಿಷ್ಟ ಹೊಂದಾಣಿಕೆಯನ್ನು ಶ್ರೀ ಮೋದಿ ಎತ್ತಿ ತೋರಿದರು. ಇದು ಇಡೀ ಪ್ರದೇಶವು ತಮ್ಮ ಪಕ್ಷ ಮತ್ತು ಅದರ ನಾಯಕತ್ವಕ್ಕೆ ನೀಡಿದ ತುಂಬು ಆಶೀರ್ವಾದವನ್ನು ಸೂಚಿಸುತ್ತದೆ ಎಂದು ಎಂದರು. ಈ ಜವಾಬ್ದಾರಿಯನ್ನು ಗುರುತಿಸಿ,
ದೆಹಲಿ-ಎನ್‌.ಸಿ.ಆರ್ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೆಲವು ರಾಜಕೀಯ ಪಕ್ಷಗಳು ಇನ್ನೂ ಸಾರ್ವಜನಿಕರ ಆದೇಶವನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಪಕ್ಷಗಳು ಸಾರ್ವಜನಿಕ ವಿಶ್ವಾಸ ಮತ್ತು ತಳಮಟ್ಟದ ವಾಸ್ತವತೆಗಳಿಂದ ದೂರ ಉಳಿದಿವೆ ಎಂದು ಅವರು ಗಮನ ಸೆಳೆದರು. ಕೆಲವು ತಿಂಗಳ ಹಿಂದೆ, ದೆಹಲಿ ಮತ್ತು ಹರಿಯಾಣದ ಜನರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಲು ಹೇಗೆ ಪಿತೂರಿಗಳು ನಡೆದವು ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿ, ಹರಿಯಾಣ ನಿವಾಸಿಗಳು ದೆಹಲಿಯ ನೀರು ಸರಬರಾಜಿಗೆ ವಿಷ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸುಳ್ಳು ಹೇಳಿಕೆಗಳನ್ನು ನೀಡಲಾಯಿತು ಎಂದು ಉಲ್ಲೇಖಿಸಿದರು. ದೆಹಲಿ ಮತ್ತು ಇಡೀ ʻ ಎನ್‌.ಸಿ.ಆರ್ ʼ ಈಗ ಅಂತಹ ನಕಾರಾತ್ಮಕ ರಾಜಕೀಯದಿಂದ ಮುಕ್ತವಾಗಿವೆ ಎಂದು ಪ್ರತಿಪಾದಿಸಿದ ಅವರು, ಎನ್‌.ಸಿ.ಆರ್ ಅನ್ನು ಪರಿವರ್ತಿಸುವ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದರು. ಈ ದೃಷ್ಟಿಕೋನವು ಯಶಸ್ವಿಯಾಗಿ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

"ಉತ್ತಮ ಆಡಳಿತವು ನಮ್ಮ ಸರ್ಕಾರಗಳ ಹೆಗ್ಗುರುತಾಗಿದೆ ಮತ್ತು ನಮ್ಮ ಆಡಳಿತದಲ್ಲಿ, ಜನರು ಪರಮೋನ್ನತ ಆದ್ಯತೆ ಪಡೆಯುತ್ತಾರೆ," ಎಂದು ಶ್ರೀ ಮೋದಿ ಹೇಳಿದರು. ನಾಗರಿಕರ ಜೀವನವನ್ನು ಸುಗಮಗೊಳಿಸಲು ನಮ್ಮ ಪಕ್ಷ  ನಿರಂತರ ಪ್ರಯತ್ನ ಮುಂದುವರಿಸಿದೆ ಎಂದು ಅವರು ಹೇಳಿದರು. ಈ ಬದ್ಧತೆಯು ಪಕ್ಷದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಗಮನ ಸೆಳೆದರು. ಹರಿಯಾಣದ ಹಿಂದಿನ ಸರ್ಕಾರಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಪ್ರಭಾವ ಅಥವಾ ಶಿಫಾರಸು ಇಲ್ಲದೆ ಒಂದೇ ಒಂದು ನೇಮಕಾತಿಯೂ ಕಷ್ಟಕರವಾಗಿದ್ದ ಕಾಲವೊಂದಿತ್ತು ಎಂದರು. ಹರಿಯಾಣದಲ್ಲಿ ತಮ್ಮ ಸರ್ಕಾರದ ಅಡಿಯಲ್ಲಿ, ಸಂಪೂರ್ಣ ಪಾರದರ್ಶಕ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಯುವಕರು ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಈ ಉಪಕ್ರಮವನ್ನು ಸಮರ್ಪಣೆಯಿಂದ ಮುಂದುವರಿಸಿದ್ದಕ್ಕಾಗಿ ಅವರು ಶ್ರೀ ನಾಯಬ್ ಸಿಂಗ್ ಸೈನಿ ಅವರನ್ನು ಶ್ಲಾಘಿಸಿದರು.

ದೆಹಲಿಯಲ್ಲಿ, ಒಂದು ಕಾಲದಲ್ಲಿ ಶಾಶ್ವತ ವಸತಿಗಳಿಲ್ಲದೆ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದವರು ಈಗ ಶಾಶ್ವತ ಮನೆಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹಿಂದೆ ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದ್ದ ಪ್ರದೇಶಗಳನ್ನು ಈಗ ಈ ಅಗತ್ಯ ಸೇವೆಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಪ್ರಗತಿಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಕಳೆದ 11 ವರ್ಷಗಳಲ್ಲಿ ದೇಶಾದ್ಯಂತ ದಾಖಲೆ ಸಂಖ್ಯೆಯ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದರು. ರೈಲ್ವೆ ನಿಲ್ದಾಣಗಳ ರೂಪಾಂತರದ ಬಗ್ಗೆ ಗಮನ ಸೆಳದ ಅವರು, ʻವಂದೇ ಭಾರತ್ʼನಂತಹ ಆಧುನಿಕ ರೈಲುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಈಗ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ʻಎನ್‌.ಸಿ.ಆರ್ʼ ಪ್ರದೇಶವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳದ ಬಗ್ಗೆ ಉಲ್ಲೇಖಿಸಿದರು. ʻಹಿಂಡನ್ ವಿಮಾನ ನಿಲ್ದಾಣʼದಿಂದ ಹಲವಾರು ನಗರಗಳಿಗೆ ವಿಮಾನಗಳು ಈಗ ಹಾರಾಟ ನಡೆಸುತ್ತಿವೆ ಎಂಬ ವಿಷಯ ಉಲ್ಲೇಖಿಸಿದ ಅವರು, ನೋಯ್ಡಾ ವಿಮಾನ ನಿಲ್ದಾಣವೂ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಕಳೆದ ದಶಕದಲ್ಲಿ ದೇಶವು ತನ್ನ ಹಳೆಯ ಕಾರ್ಯವಿಧಾನಗಳನ್ನು ಬದಲಾಯಿಸಿದ್ದರಿಂದಲೇ ಇಂತಹ ಪ್ರಗತಿ ಸಾಧ್ಯವಾಗಿದೆ ಎಂದು ಶ್ರೀ ಮೋದಿ ಹೇಳಿದರು. ರಾಷ್ಟ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಮಟ್ಟ ಮತ್ತು ಅದನ್ನು ನಿರ್ಮಿಸಬೇಕಾದ ವೇಗವನ್ನು ಈ ಹಿಂದೆ ಸಾಧಿಸಲಿಲ್ಲ ಎಂದು ಅವರು ಒತ್ತಿ ಹೇಳಿದರು. ಪೂರ್ವ ಮತ್ತು ಪಶ್ಚಿಮ ʻಪೆರಿಫೆರಲ್ ಎಕ್ಸ್‌ಪ್ರೆಸ್‌ವೇʼಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ದೆಹಲಿ- ಎನ್‌.ಸಿ.ಆರ್ ಪ್ರದೇಶವು ಹಲವು ದಶಕಗಳಿಂದ ಈ ರಸ್ತೆಗಳ ಅಗತ್ಯವನ್ನು ಮನಗಂಡಿದೆ ಎಂದರು. ಹಿಂದಿನ ಸರ್ಕಾರದ ಅವಧಿಯಲ್ಲಿ, ಈ ಯೋಜನೆಗಳಿಗೆ ಸಂಬಂಧಿಸಿದ ಕಡತಗಳು ಚಲಿಸಲು ಪ್ರಾರಂಭಿಸಿದವು, ಆದರೆ ಜನರು ತಮ್ಮ ಪಕ್ಷಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ಮಾತ್ರ ನಿಜವಾದ ಕೆಲಸ ಪ್ರಾರಂಭವಾಯಿತು ಎಂದು ಅವರು ಉಲ್ಲೇಖಿಸಿದರು. ಕೇಂದ್ರ ಮತ್ತು ಹರಿಯಾಣ ಎರಡೂ ಕಡೆ ನಮ್ಮ ಸರ್ಕಾರಗಳು ರಚನೆಯಾದಾಗ ರಸ್ತೆ ಯೋಜನೆಗಳು ವಾಸ್ತವವಾದವು ಎಂದು ಅವರು ಒತ್ತಿ ಹೇಳಿದರು. ಇಂದು ಈ ಎಕ್ಸ್ ಪ್ರೆಸ್‌ವೇಗಳು ರಾಷ್ಟ್ರಕ್ಕೆ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿವೆ ಎಂದು ಪ್ರಧಾನಮಂತ್ರಿ ಹೆಮ್ಮೆಯಿಂದ ಹೇಳಿದರು.

ಅಭಿವೃದ್ಧಿ ಯೋಜನೆಗಳ ಬಗ್ಗೆ ಉದಾಸೀನತೆ ʻದೆಹಲಿ-ಎನ್‌.ಸಿ.ಆರ್ʼಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ದೇಶದಾದ್ಯಂತ ವ್ಯಾಪಿಸಿದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಈ ಹಿಂದೆ, ಮೂಲಸೌಕರ್ಯಕ್ಕಾಗಿ ನಿಗದಿಪಡಿಸಿದ ಬಜೆಟ್ ತುಂಬಾ ಕಡಿಮೆ ಇತ್ತು. ಜೊತೆಗೆ ಮಂಜೂರಾದ ಯೋಜನೆಗಳು ಸಹ ಪೂರ್ಣಗೊಳ್ಳಲು ವರ್ಷಗಳು ತೆಗೆದುಕೊಳ್ಳುತ್ತಿದ್ದವು ಎಂದರು. ಕಳೆದ 11 ವರ್ಷಗಳಲ್ಲಿ ಮೂಲಸೌಕರ್ಯ ಬಜೆಟ್ ಅನ್ನು ಆರು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರಸ್ತುತ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವತ್ತ ಗಮನ ಹರಿಸಲಾಗಿದೆ, ಅದಕ್ಕಾಗಿಯೇ ʻದ್ವಾರಕಾ ಎಕ್ಸ್‌ಪ್ರೆಸ್‌ವೇʼನಂತಹ ಉಪಕ್ರಮಗಳು ಈಗ ಸಾಕಾರಗೊಳ್ಳುತ್ತಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಯೋಜನೆಗಳಲ್ಲಿನ ಗಣನೀಯ ಹೂಡಿಕೆಯು ಮೂಲ ಸೌಲಭ್ಯಗಳನ್ನು ಸೃಷ್ಟಿಸುವುದಲ್ಲದೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. ಬೃಹತ್ ನಿರ್ಮಾಣ ಚಟುವಟಿಕೆಗಳು ಕಾರ್ಮಿಕರಿಂದ ಎಂಜಿನಿಯರ್‌ಗಳವರೆಗೆ ಲಕ್ಷಾಂತರ ವ್ಯಕ್ತಿಗಳಿಗೆ ಕೆಲಸವನ್ನು ಒದಗಿಸುತ್ತವೆ ಎಂದು ವಿವರಿಸಿದ ಶ್ರೀ ಮೋದಿ, ನಿರ್ಮಾಣ ಸಾಮಗ್ರಿಗಳ ಬಳಕೆಯು ಸಂಬಂಧಿತ ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಉದ್ಯೋಗವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಈ ಬೆಳವಣಿಗೆಗಳಿಂದಾಗಿ ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರಗಳು ಹೆಚ್ಚಿನ ಉದ್ಯೋಗಾವಕಾಶಗಳಿಗೆ ಸಾಕ್ಷಿಯಾಗುತ್ತಿವೆ ಎಂದು ಅವರು ಗಮನ ಸೆಳೆದರು.

ಈ ಹಿಂದೆ ದೀರ್ಘಕಾಲ ಆಡಳಿತ ನಡೆಸಿದವರು ಜನರಿಗಿಂತಲೂ ಅಧಿಕಾರ ಅಥವಾ ಆಡಳಿತವನ್ನು ತಮ್ಮ ಪ್ರಾಥಮಿಕ ಉದ್ದೇಶವಾಗಿ ನೋಡುತ್ತಿದ್ದರು ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ನಾಗರಿಕರ ಜೀವನದಿಂದ ಸರ್ಕಾರದ ಒತ್ತಡ ಮತ್ತು ಹಸ್ತಕ್ಷೇಪ ಎರಡನ್ನೂ ತೊಡೆದುಹಾಕಲು ತಮ್ಮ ಪಕ್ಷದ ಪ್ರಯತ್ನಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಹಿಂದಿನ ಪರಿಸ್ಥಿತಿಗಳನ್ನು ವಿವರಿಸಲು ಅವರು ಒಂದು ಉದಾಹರಣೆಯನ್ನು ಉಲ್ಲೇಖಿಸಿದರು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಜವಾಬ್ದಾರಿಯನ್ನು ಹೊತ್ತಿರುವ ದೆಹಲಿಯ ನೈರ್ಮಲ್ಯ ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಳ್ಳಲಾಯಿತು. ʻದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆʼಯಡಿ, ನೈರ್ಮಲ್ಯ ಕಾರ್ಮಿಕರು ಯಾವುದೇ ಮುನ್ಸೂಚನೆಯಿಲ್ಲದೆ ಕರ್ತವ್ಯಕ್ಕೆ ಹಾಜರಾಗಲು ವಿಫಲವಾದರೆ, ಅವರನ್ನು ಒಂದು ತಿಂಗಳ ಕಾಲ ಜೈಲಿಗೆ ಹಾಕಬಹುದಾಗಿತ್ತು ಎಂದು ಹೇಳುವ ಮೂಲಕ ಶ್ರೀ ಮೋದಿ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದರು. ಇಂತಹ ಕಾನೂನುಗಳ ಹಿಂದಿನ ಮನಸ್ಥಿತಿಯನ್ನು ಪ್ರಶ್ನಿಸಿದ ಪ್ರಧಾನಮಂತ್ರಿ, ಸಣ್ಣ ಲೋಪಕ್ಕಾಗಿ ನೈರ್ಮಲ್ಯ ಕಾರ್ಮಿಕರನ್ನು ಜೈಲಿಗೆ ದೂಡಬಹುದೇ ಎಂದು ಪ್ರಶ್ನಿಸಿದರು. ಈಗ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿರುವವರನ್ನು ಟೀಕಿಸಿದ ಅವರು, ಅಂಥವರು ದೇಶದಲ್ಲಿ ಇಂತಹ ಅನ್ಯಾಯದ ಕಾನೂನುಗಳನ್ನು ಉಳಿಸಿಕೊಂಡಿದ್ದಾರೆ ಎಂದು ಗಮನಸೆಳೆದರು. ಇಂತಹ ಪ್ರತಿಗಾಮಿ ಕಾನೂನುಗಳನ್ನು ಸಕ್ರಿಯವಾಗಿ ಗುರುತಿಸಿ ತಮ್ಮ ಸರ್ಕಾರ ರದ್ದುಪಡಿಸುತ್ತಿತ್ತಿದೆ ಎಂದು ಶ್ರೀ ಮೋದಿ ಘೋಷಿಸಿದರು. ಸರ್ಕಾರ ಈಗಾಗಲೇ ಇಂತಹ ನೂರಾರು ಕಾನೂನುಗಳನ್ನು ರದ್ದುಪಡಿಸಿದೆ ಮತ್ತು ಅಭಿಯಾನ ಮುಂದುವರೆದಿದೆ ಎಂದು ಅವರು ಮಾಹಿತಿ ನೀಡಿದರು.

"ನಮಗೆ ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆ" ಎಂದು ಉದ್ಗರಿಸಿದ ಪ್ರಧಾನಮಂತ್ರಿ ಅವರು, ಸುಧಾರಣೆಗಳ ಮೇಲೆ ನಿರಂತರ ಗಮನ ಹರಿಸಲಾಗುತ್ತಿದೆ ಎಂದು ಒತ್ತಿ ಹೇಳಿದರು. ಮುಂಬರುವ ದಿನಗಳಲ್ಲಿ, ಜೀವನ ಮತ್ತು ವ್ಯವಹಾರ ಎರಡನ್ನೂ ಸುಲಭಗೊಳಿಸಲು ಹಲವಾರು ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲಾಗುವುದು,ʼʼ ಎಂದು ಅವರು ಘೋಷಿಸಿದರು. "ಈ ಪ್ರಯತ್ನದ ಭಾಗವಾಗಿ, ಜಿ.ಎಸ್‌.ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಯನ್ನು ಜಾರಿಗೊಳಿಸಲು ಯೋಜಿಸಲಾಗಿದೆ. ಈ ದೀಪಾವಳಿಯಲ್ಲಿ, ಜಿ.ಎಸ್‌.ಟಿ ಸುಧಾರಣೆಯ ಮೂಲಕ ನಾಗರಿಕರು ಡಬಲ್ ಬೋನಸ್ ಪಡೆಯುತ್ತಾರೆ", ಎಂದು ಶ್ರೀ ಮೋದಿ ಹೇಳಿದರು. ಜಿ.ಎಸ್‌.ಟಿ ಸಂಪೂರ್ಣ ನಿಯಮಾವಳಿಯನ್ನು ಎಲ್ಲಾ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ ಶ್ರೀ ಮೋದಿ, ಭಾರತ ಸರ್ಕಾರದ ಈ ಉಪಕ್ರಮಕ್ಕೆ ಎಲ್ಲಾ ರಾಜ್ಯಗಳು ಸಹಕಾರ ನೀಡುತ್ತವೆ ಎಂಬ ಭರವಸೆ ವ್ಯಕ್ತಪಡಿಸಿದರು. ಈ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಲು ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅವರು ಒತ್ತಾಯಿಸಿದರು. ಜಿ.ಎಸ್‌.ಟಿಯನ್ನು ಮತ್ತಷ್ಟು ಸರಳೀಕರಿಸುವ ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಸುಧಾರಣೆಯ ಪ್ರಯೋಜನಗಳು ಪ್ರತಿ ಮನೆಗೆ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತವೆ ಎಂದು ಒತ್ತಿ ಹೇಳಿದರು. ಎಲ್ಲಾ ವರ್ಗದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಈ ಬದಲಾವಣೆಗಳಿಂದ ಲಾಭ ಪಡೆಯುತ್ತಾರೆ ಎಂದು ಅವರು ಹೇಳಿದರು.

ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯು ಭಾರತದ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ ಎಂದು ಒತ್ತಿಹೇಳಿದ ಶ್ರೀ ಮೋದಿ, ಈ ಸಾಂಸ್ಕೃತಿಕ ಪರಂಪರೆಯು ಜೀವನದ ಆಳವಾದ ತತ್ವವನ್ನು ಒಳಗೊಂಡಿದೆ ಎಂದು ಒತ್ತಿ ಹೇಳಿದರು. ಈ ತತ್ವದಲ್ಲಿ ನಾವು "ಚಕ್ರಧಾರಿ ಮೋಹನ" ಮತ್ತು "ಚರಕಧಾರಿ ಮೋಹನ" ಇಬ್ಬರನ್ನೂ ಹೊಂದಿದ್ದೇವೆ ಎಂದು ಅವರು ಹೇಳಿದರು. ಕಾಲಕಾಲಕ್ಕೆ, ರಾಷ್ಟ್ರವು ಈ ಎರಡೂ ವ್ಯಕ್ತಿಗಳ ಸಾರವನ್ನು ಅನುಭವಿಸುತ್ತದೆ ಎಂದು ಅವರು ಗಮನ ಸೆಳೆದರು. "ಚಕ್ರಧಾರಿ ಮೋಹನ" ಎಂಬುದು ಸುದರ್ಶನ ಚಕ್ರದ ಶಕ್ತಿಯನ್ನು ಪ್ರದರ್ಶಿಸಿದ ಭಗವಾನ್ ಶ್ರೀ ಕೃಷ್ಣನನ್ನು ಸೂಚಿಸುತ್ತದೆ ಎಂದು ವಿವರಿಸಿದ ಪ್ರಧಾನಮಂತ್ರಿ ಅವರು, "ಚರಕಧಾರಿ ಮೋಹನ" ಎಂಬುದು ನೂಲುವ ಚಕ್ರದ ಮೂಲಕ ಸ್ವದೇಶಿ ಶಕ್ತಿಯ ಬಗ್ಗೆ ರಾಷ್ಟ್ರವನ್ನು ಜಾಗೃತಗೊಳಿಸಿದ ಮಹಾತ್ಮ ಗಾಂಧಿಯನ್ನು ಸೂಚಿಸುತ್ತದೆ ಎಂದರು.

"ಭಾರತವನ್ನು ಸಬಲೀಕರಣಗೊಳಿಸಲು, ನಾವು ʻಚಕ್ರಧಾರಿ ಮೋಹನʼನಿಂದ ಸ್ಫೂರ್ತಿ ಪಡೆಯಬೇಕು, ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ನಾವು ʻಚರಕಧಾರಿ ಮೋಹನʼನ ಮಾರ್ಗವನ್ನು ಅನುಸರಿಸಬೇಕು," ಎಂದು ಪ್ರಧಾನಮಂತ್ರಿ ಉದ್ಗರಿಸಿದರು, "ವೋಕಲ್ ಫಾರ್ ಲೋಕಲ್" ಪ್ರತಿಯೊಬ್ಬ ನಾಗರಿಕನ ಜೀವನ ಮಂತ್ರವಾಗಬೇಕು ಎಂದು ಒತ್ತಾಯಿಸಿದರು. ಈ ಯೋಜನೆಯು ರಾಷ್ಟ್ರಕ್ಕೆ ಕಷ್ಟಕರವಲ್ಲ, ಏಕೆಂದರೆ ಭಾರತವು ಸದಾ ಯಾವುದೇ ಸಂಕಲ್ಪವನ್ನು ಮಾಡಿದಾಗಲೂ ಅದನ್ನು ಪೂರೈಸಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಅಳಿವಿನ ಅಂಚಿನಲ್ಲಿದ್ದ ಖಾದಿಯ ಉದಾಹರಣೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ರಾಷ್ಟ್ರಕ್ಕೆ ತಾವು ಮಾಡಿದ ಮನವಿಯನ್ನು ಸ್ಮರಿಸಿದರು. ಇದು ಸಾಮೂಹಿಕ ಸಂಕಲ್ಪ ಮತ್ತು ಕಣ್ಣಿಗೆ ಕಾಣುವ ಫಲಿತಾಂಶಗಳಿಗೆ ಕಾರಣವಾಯಿತು. ಕಳೆದ ದಶಕದಲ್ಲಿ ಖಾದಿ ಮಾರಾಟವು ಸುಮಾರು ಏಳು ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಭಾರತದ ಜನರು "ವೋಕಲ್ ಫಾರ್ ಲೋಕಲ್" ಎಂಬ ಮನೋಭಾವದಿಂದ ಖಾದಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಅವರು ಗಮನ ಸೆಳೆದರು. ʻಮೇಡ್ ಇನ್ ಇಂಡಿಯಾʼ ಮೊಬೈಲ್ ಫೋನ್‌ಗಳಲ್ಲಿ ನಾಗರಿಕರು ತೋರಿಸಿದ ವಿಶ್ವಾಸವನ್ನು ಪ್ರಧಾನಮಂತ್ರಿ ಎತ್ತಿ ತೋರಿದರು. "ಹನ್ನೊಂದು ವರ್ಷಗಳ ಹಿಂದೆ, ಭಾರತವು ತನ್ನ ಹೆಚ್ಚಿನ ಮೊಬೈಲ್ ಫೋನ್‌ಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು, ಹೆಚ್ಚಿನ ಭಾರತೀಯರು ʻಮೇಡ್ ಇನ್ ಇಂಡಿಯಾʼ ಫೋನ್‌ಗಳನ್ನು ಬಳಸುತ್ತಾರೆ. ಭಾರತವು ಈಗ ವಾರ್ಷಿಕವಾಗಿ 30 ರಿಂದ 35 ಕೋಟಿ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತದೆ ಮತ್ತು ರಫ್ತು ಮಾಡುತ್ತದೆಮ" ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಭಾರತದ್ದೇ ಆದ ಮೇಡ್ ಇನ್ ಇಂಡಿಯಾ ʻಯು.ಪಿ.ಐʼ ವ್ಯವಸ್ಥೆಯು ಇಂದು ವಿಶ್ವದ ಅತಿದೊಡ್ಡ ನೈಜ-ಸಮಯದ ಡಿಜಿಟಲ್ ಪಾವತಿ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದ ಪ್ರಧಾನಮಂತ್ರಿ, ಭಾರತೀಯ ನಿರ್ಮಿತ ರೈಲು ಬೋಗಿಗಳು ಮತ್ತು ಲೋಕೋಮೋಟಿವ್‌ಗಳಿಗೆ ಈಗ ಇತರ ದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದು ಒತ್ತಿ ಹೇಳಿದರು.

ರಸ್ತೆ ಮೂಲಸೌಕರ್ಯ ಮತ್ತು ಒಟ್ಟಾರೆ ಮೂಲಸೌಕರ್ಯದ ವಿಷಯಕ್ಕೆ ಬಂದಾಗ, ಭಾರತವು ʻಗತಿ ಶಕ್ತಿʼ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವೇದಿಕೆಯು 1,600 ಪದರಗಳ ದತ್ತಾಂಶವನ್ನು ಒಳಗೊಂಡಿದೆ ಎಂದು ಅವರು ಎತ್ತಿ ತೋರಿದರು. ಯಾವುದೇ ಯೋಜನೆಗೆ, ವೇದಿಕೆಯು ಎಲ್ಲಾ ಸಂಬಂಧಿತ ಪರಿಸ್ಥಿತಿಗಳು ಮತ್ತು ನಿಯಂತ್ರಕ ಅವಶ್ಯಕತೆಗಳಿಗೆ ತ್ವರಿತ ಪ್ರವೇಶವನ್ನು ಒದಗಿಸುತ್ತದೆ – ಆ ಪ್ರದೇಶಗಳು ವನ್ಯಜೀವಿ ಆವಾಸತಾಣ, ಅರಣ್ಯ ಪ್ರದೇಶಗಳು, ನದಿಗಳು ಅಥವಾ ಚರಂಡಿಗಳನ್ನು ಏನನ್ನೇ ಒಳಗೊಂಡಿದ್ದರೂ ಅಂತಹ ಎಲ್ಲಾ ಮಾಹಿತಿಯು ನಿಮಿಷಗಳಲ್ಲಿ ಲಭ್ಯವಾಗುತ್ತದೆ. ಇದು ಯೋಜನೆಗಳು ವೇಗವಾಗಿ ಪ್ರಗತಿ ಸಾಧಿಸಲು ಅನುವು ಮಾಡಿಕೊಡುತ್ತದೆ. ʻಗತಿ ಶಕ್ತಿʼಗಾಗಿ ವಿಶೇಷ ವಿಶ್ವವಿದ್ಯಾಲಯವನ್ನು ಈಗ ಸ್ಥಾಪಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ʻಗತಿ ಶಕ್ತಿʼಯು ರಾಷ್ಟ್ರದ ಪ್ರಗತಿಗೆ ಶಕ್ತಿಯುತ ಮತ್ತು ಕ್ರಾಂತಿಕಾರಿ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು.

ಒಂದು ದಶಕದ ಹಿಂದೆ ಆಟಿಕೆಗಳನ್ನು ಸಹ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಶ್ರೀ ಮೋದಿ, ಭಾರತೀಯರು "ವೋಕಲ್ ಫಾರ್ ಲೋಕಲ್" ಅನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದಾಗ ದೇಶೀಯ ಆಟಿಕೆಗಳ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಾಯಿತು. ಜೊತೆಗೆ, ಭಾರತವು ವಿಶ್ವದಾದ್ಯಂತ 100ಕ್ಕೂ ಹೆಚ್ಚು ದೇಶಗಳಿಗೆ ಆಟಿಕೆಗಳನ್ನು ರಫ್ತು ಮಾಡಲು ಪ್ರಾರಂಭಿಸಿತು ಎಂದು ಹೇಳಿದರು.

ಭಾರತದಲ್ಲಿ ತಯಾರಿಸಿದ ಉತ್ಪನ್ನಗಳ ಮೇಲೆ ವಿಶ್ವಾಸ ಇರಿಸುವಂತೆ ಎಲ್ಲಾ ನಾಗರಿಕರನ್ನು ಒತ್ತಾಯಿಸಿದ ಪ್ರಧಾನಮಂತ್ರಿ, ಭಾರತೀಯ ನಿರ್ಮಿತ ಸರಕುಗಳನ್ನು ಆಯ್ಕೆ ಮಾಡುವಂತೆ ಜನರಿಗೆ ಮನವಿ ಮಾಡಿದರು, "ನೀವು ಭಾರತೀಯರಾಗಿದ್ದರೆ, ಭಾರತದಲ್ಲಿ ತಯಾರಿಸಿದದನ್ನು ಖರೀದಿಸಿ," ಎಂದು ಕರೆ ನೀಡಿದರು. ಪ್ರಸ್ತುತ ನಡೆಯುತ್ತಿರುವ ಹಬ್ಬದ ಋತುವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಸ್ಥಳೀಯ ಉತ್ಪನ್ನಗಳ ಸಂತೋಷವನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವಂತೆ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು. ಭಾರತದಲ್ಲಿ ತಯಾರಿಸಿದ ಮತ್ತು ಭಾರತೀಯರು ತಯಾರಿಸಿದ ವಸ್ತುಗಳನ್ನು ಮಾತ್ರ ಉಡುಗೊರೆಯಾಗಿ ನೀಡುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಅವರು ನಾಗರಿಕರಿಗೆ ಕರೆ ನೀಡಿದರು.

ದೇಶಾದ್ಯಂತ ವರ್ತಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕೆಲವರು ಸ್ವಲ್ಪ ಹೆಚ್ಚಿನ ಲಾಭದ ಉದ್ದೇಶದಿಂದ ವಿದೇಶಿ ನಿರ್ಮಿತ ವಸ್ತುಗಳನ್ನು ಮಾರಾಟ ಮಾಡಿರಬಹುದು, ಆದರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಅವರೂ ಸಹ "ವೋಕಲ್ ಫಾರ್ ಲೋಕಲ್" ಮಂತ್ರವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. ಈ ಒಂದು ಹೆಜ್ಜೆಯು ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಮಾರಾಟವಾಗುವ ಪ್ರತಿಯೊಂದು ವಸ್ತುವು ಭಾರತೀಯ ಕಾರ್ಮಿಕ ಅಥವಾ ಬಡ ನಾಗರಿಕರನ್ನು ಬೆಂಬಲಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರತಿ ಮಾರಾಟದಿಂದ ಬರುವ ಹಣವು ಭಾರತದಲ್ಲಿಯೇ ಉಳಿಯುತ್ತದೆ ಮತ್ತು ಸಹ ಭಾರತೀಯರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಭಾರತೀಯ ನಾಗರಿಕರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳನ್ನು ಹೆಮ್ಮೆಯಿಂದ ಮಾರಾಟ ಮಾಡುವಂತೆ ಅವರು ವರ್ತಕರಿಗೆ ಮನವಿ ಮಾಡಿದರು.

"ದೆಹಲಿಯು ಭಾರತದ ಭವ್ಯ ಭೂತಕಾಲವನ್ನು ಅದರ ಭರವಸೆಯ ಭವಿಷ್ಯದೊಂದಿಗೆ ಬೆಸೆಯುವ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ," ಎಂದು ಹೇಳಿದ ಪ್ರಧಾನಮಂತ್ರಿ ಅವರು, ಹೊಸ ಕೇಂದ್ರ ಸಚಿವಾಲಯ - ʻಕರ್ತವ್ಯ ಭವನʼದ ಇತ್ತೀಚಿನ ಉದ್ಘಾಟನೆ ಮತ್ತು ಹೊಸ ಸಂಸತ್ ಭವನದ ಪೂರ್ಣಗೊಂಡಿರುವುದನ್ನು ಉಲ್ಲೇಖಿಸಿದರು. ʻಕರ್ತವ್ಯ ಪಥʼವು ಈಗ ನವೀಕೃತ ರೂಪದಲ್ಲಿ ರಾಷ್ಟ್ರದ ಮುಂದೆ ನಿಂತಿದೆ ಎಂದು ಅವರು ಗಮನ ಸೆಳೆದರು. ʻಭಾರತ್ ಮಂಟಪʼ ಮತ್ತು ʻಯಶೋಭೂಮಿʼಯಂತಹ ಆಧುನಿಕ ಸಮ್ಮೇಳನ ಕೇಂದ್ರಗಳು ದೆಹಲಿಯ ಘನತೆಯನ್ನು ಹೆಚ್ಚಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಈ ಬೆಳವಣಿಗೆಗಳು ವ್ಯಾಪಾರ ಮತ್ತು ವಾಣಿಜ್ಯದ ಪ್ರಧಾನ ತಾಣವಾಗಿ ದೆಹಲಿಗೆ ಸ್ಥಾನ ಕಲ್ಪಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಉಪಕ್ರಮಗಳ ಬಲ ಮತ್ತು ಸ್ಫೂರ್ತಿಯಿಂದ ದೆಹಲಿ ವಿಶ್ವದ ಅತ್ಯುತ್ತಮ ರಾಜಧಾನಿಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಹರಿಯಾಣ ಮುಖ್ಯಮಂತ್ರಿ ಶ್ರೀ ನಾಯಬ್ ಸಿಂಗ್ ಸೈನಿ, ಕೇಂದ್ರದ ಸಹಾಯ ಸಚಿವರಾದ ಶ್ರೀ ಅಜಯ್ ತಮ್ಟಾ, ಶ್ರೀ ಹರ್ಷ್ ಮಲ್ಹೋತ್ರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ರಾಜಧಾನಿಯ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸರ್ಕಾರದ ಸಮಗ್ರ ಯೋಜನೆಯ ಅಡಿಯಲ್ಲಿ ʻದ್ವಾರಕಾ ಎಕ್ಸ್‌ಪ್ರೆಸ್‌ವೇʼನ ದೆಹಲಿ ವಿಭಾಗ ಹಾಗೂ ʻನಗರ ವಿಸ್ತರಣಾ ರಸ್ತೆ-2ʼ(ಯು.ಇ.ಆರ್-2) ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಪರ್ಕವನ್ನು ಮತ್ತಷ್ಟು ಸುಧಾರಿಸುವುದು, ಪ್ರಯಾಣದ ಸಮಯವನ್ನು ತಗ್ಗಿಸುವುದು ಮತ್ತು ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಜನರ ಜೀವನವನ್ನು ಸುಗಮಗೊಳಿಸುವ ಮತ್ತು ತಡೆರಹಿತ ಸಾರಿಗೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಸೃಷ್ಟಿಸುವ ಪ್ರಧಾನಮಂತ್ರಿ ಮೋದಿಯವರ ದೃಷ್ಟಿಕೋನವನ್ನು ಈ ಉಪಕ್ರಮಗಳು ಪ್ರತಿಬಿಂಬಿಸುತ್ತವೆ.

ʻದ್ವಾರಕಾ ಎಕ್ಸ್‌ಪ್ರೆಸ್‌ವೇʼನ 10.1 ಕಿ.ಮೀ ಉದ್ದದ ದೆಹಲಿ ವಿಭಾಗವನ್ನು ಸುಮಾರು 5,360 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗವು ಯಶೋಭೂಮಿ, ʻಡಿ.ಎಂ.ಆರ್‌.ಸಿʼ ಬ್ಲೂಲೈನ್ ಮತ್ತು ಆರೆಂಜ್ ಲೈನ್, ಮುಂಬರುವ ಬಿಜ್ವಾಸನ್ ರೈಲ್ವೆ ನಿಲ್ದಾಣ ಹಾಗೂ ದ್ವಾರಕಾ ಕ್ಲಸ್ಟರ್ ಬಸ್ ಡಿಪೋಗೆ ಬಹು ಮಾದರಿ ಸಂಪರ್ಕವನ್ನು ಒದಗಿಸುತ್ತದೆ. ಈ ವಿಭಾಗವು ಇವುಗಳನ್ನು ಒಳಗೊಂಡಿದೆ:

  • ಪ್ಯಾಕೇಜ್ 1: ಶಿವಮೂರ್ತಿ ಜಂಕ್ಷನ್‌ನಿಂದ ʻದ್ವಾರಕಾ ಸೆಕ್ಟರ್-21ʼರ ರೋಡ್ ಅಂಡರ್ ಬ್ರಿಡ್ಜ್ (ಆರ್‌.ಯು.ಬಿ) ವರೆಗೆ 5.9 ಕಿ.ಮೀ.
  • ಪ್ಯಾಕೇಜ್ 2: ʻದ್ವಾರಕಾ ಸೆಕ್ಟರ್-21ʼರ ರೋಡ್‌ ಅಂಡರ್‌ ಬ್ರಿಡ್ಜ್‌ನಿಂದ(ಆರ್‌.ಯು.ಬಿ) ದೆಹಲಿ-ಹರಿಯಾಣ ಗಡಿಯವರೆಗೆ 4.2 ಕಿ.ಮೀ, ಇದು ʻನಗರ ವಿಸ್ತರಣೆ ರಸ್ತೆ -2ʼಕ್ಕೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ʻದ್ವಾರಕಾ ಎಕ್ಸ್‌ಪ್ರೆಸ್‌ವೇʼನ 19 ಕಿ.ಮೀ ಉದ್ದದ ಹರಿಯಾಣ ವಿಭಾಗವನ್ನು ಈ ಹಿಂದೆ ಮಾರ್ಚ್ 2024ರಲ್ಲಿ ಪ್ರಧಾನಮಂತ್ರಿ ಉದ್ಘಾಟಿಸಿದ್ದರು.

ಪ್ರಧಾನಮಂತ್ರಿ ಅವರು ಸುಮಾರು 5,580 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻನಗರ ವಿಸ್ತರಣಾ ರಸ್ತೆ-2ʼರ ಅಲಿಪುರ-ಡಿಚಾನ್‌ಕಲಾನ್ ವಿಸ್ತರಣೆಯನ್ನು ಉದ್ಘಾಟಿಸಿದರು. ಇದು ʻಬಹದ್ದೂರ್‌ಘರ್ʼ ಮತ್ತು ʻಸೋನಿಪತ್ʼ ನಡುವೆ ಹೊಸ ಸಂಪರ್ಕ ಕೊಂಡಿಯನ್ನು ಒದಗಿಸುತ್ತದೆ. ಇದು ದೆಹಲಿಯ ಒಳ ಮತ್ತು ಹೊರ ವರ್ತುಲ ರಸ್ತೆಗಳು ಹಾಗೂ ಜನನಿಬಿಡ ಸ್ಥಳಗಳಾದ ಮುಕಾರ್ಬಾ ಚೌಕ್, ಧೌಲಾ ಕುವಾನ್ ಮತ್ತು ರಾಷ್ಟ್ರೀಯ ಹೆದ್ದಾರಿ-09ರಲ್ಲಿ ಸಂಚಾರವನ್ನು ಸರಾಗಗೊಳಿಸುತ್ತದೆ. ಹೊಸ ಲಿಂಕ್‌ ರಸ್ತೆಯು ಬಹದ್ದೂರ್‌ಘರ್ ಮತ್ತು ಸೋನಿಪತ್‌ಗೆ ನೇರ ಪ್ರವೇಶವನ್ನು ಒದಗಿಸುತ್ತದೆ. ಆ ಮೂಲಕ ಕೈಗಾರಿಕಾ ಸಂಪರ್ಕವನ್ನು ಸುಧಾರಿಸುತ್ತದೆ, ನಗರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಜೊತೆಗೆ ʻಎನ್‌.ಸಿ.ಆರ್ʼನಲ್ಲಿ ಸರಕು ಸಾಗಣೆ ವೇಗವನ್ನು ಹೆಚ್ಚಿಸುತ್ತದೆ.

 

 

*****


(Release ID: 2157318)