ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 06 AUG 2025 9:20PM by PIB Bengaluru

ಕೇಂದ್ರ ಸಚಿವ ಸಂಪುಟದ ನನ್ನೆಲ್ಲಾ ಸಹೋದ್ಯೋಗಿಗಳೆ, ಇಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂಸತ್ ಸದಸ್ಯರೆ, ಎಲ್ಲಾ ಸರ್ಕಾರಿ ನೌಕರರೆ, ಇತರೆ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

ಆಗಸ್ಟ್ ತಿಂಗಳು - ಕ್ರಾಂತಿಯ ತಿಂಗಳು - ಆಗಸ್ಟ್ 15ರ ಮೊದಲು, ಈ ಐತಿಹಾಸಿಕ ಸಂದರ್ಭ ಒದಗಿ ಬಂದಿದೆ! ಒಂದರ ನಂತರ ಒಂದರಂತೆ, ಆಧುನಿಕ ಭಾರತದ ನಿರ್ಮಾಣಕ್ಕೆ ಸಂಬಂಧಿಸಿದ ಸಾಧನೆಗಳನ್ನು ನಾವು ನೋಡುತ್ತಿದ್ದೇವೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಾವು, ಹೊಸ ಸಂಸತ್ ಭವನ, ಹೊಸ ರಕ್ಷಾ ಭವನ(ರಕ್ಷಣಾ ಕಚೇರಿ ಸಂಕೀರ್ಣ), ಭಾರತ್ ಮಂಟಪ, ಯಶೋಭೂಮಿ, ಹುತಾತ್ಮರಿಗೆ ಸಮರ್ಪಿತವಾದ ರಾಷ್ಟ್ರೀಯ ಯುದ್ಧ ಸ್ಮಾರಕ, ನೇತಾಜಿ ಸುಭಾಷ್ ಬಾಬು ಅವರ ಪ್ರತಿಮೆ ಮತ್ತು ಇದೀಗ ಈ ಕರ್ತವ್ಯ ಭವನವನ್ನು ನೋಡುತ್ತಿದ್ದೇವೆ. ಇವು ಕೇವಲ ಹೊಸ ಕಟ್ಟಡಗಳು ಅಥವಾ ಸಾಮಾನ್ಯ ಮೂಲಸೌಕರ್ಯಗಳಲ್ಲ - ಈ ಕಟ್ಟಡಗಳಲ್ಲಿಯೇ 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ನೀತಿಗಳನ್ನು ಈ ಅಮೃತ ಕಾಲದಲ್ಲಿ ರೂಪಿಸಲಾಗುತ್ತಿದೆ, 'ವಿಕಸಿತ ಭಾರತ'ಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಲ್ಲಿಂದ ಮುಂಬರುವ ದಶಕಗಳವರೆಗೆ ರಾಷ್ಟ್ರದ ಸ್ಪಷ್ಟವಾದ ದಿಕ್ಕನ್ನು ನಿರ್ಧರಿಸಲಾಗುತ್ತದೆ. ಕರ್ತವ್ಯ ಭವನದ ಉದ್ಘಾಟನೆಗಾಗಿ ನಾನು ನಿಮ್ಮೆಲ್ಲರಿಗೂ ಮತ್ತು ನನ್ನ ಎಲ್ಲಾ ದೇಶವಾಸಿಗಳಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದಿನ ಈ ಹಂತದಿಂದಲೇ, ಅದರ ನಿರ್ಮಾಣದಲ್ಲಿ ಭಾಗಿಯಾಗಿದ್ದ ಎಲ್ಲಾ ಎಂಜಿನಿಯರ್‌ಗಳು ಮತ್ತು ಎಲ್ಲಾ ಕಾರ್ಮಿಕ ಸಹೋದ್ಯೋಗಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೆ,

ಬಹಳಷ್ಟು ಚರ್ಚೆ ನಡೆಸಿದ ನಂತರ, ನಾವು ಈ ಕಟ್ಟಡಕ್ಕೆ "ಕರ್ತವ್ಯ ಭವನ" ಎಂದು ಹೆಸರಿಸಿದ್ದೇವೆ. ಕರ್ತವ್ಯ ಪಥ ಮತ್ತು ಕರ್ತವ್ಯ ಭವನ ಮುಂತಾದ ಹೆಸರುಗಳು ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದ ಸಾರವನ್ನು ಸಾರುತ್ತವೆ. ಗೀತೆಯಲ್ಲಿ, ಭಗವಾನ್ ಶ್ರೀ ಕೃಷ್ಣ ಹೀಗೆ ಹೇಳುತ್ತಾನೆ: न मे पर्थ अस्ति कर्तव्यं त्रिषु लोकेषु केषु कून, नान-वाप्तं अ-वाप्तव्यं वर्त अवच कर्मणिथ - ಅಂದರೆ, ನಾವು "ನಾವು ಏನು ಸಾಧಿಸಬೇಕು" ಅಥವಾ "ನಾವು ಇನ್ನೂ ಏನನ್ನು ಸಾಧಿಸಿಲ್ಲ" ಎಂಬ ಆಲೋಚನೆಯನ್ನು ಮೀರಿ ಕರ್ತವ್ಯದ ಮನೋಭಾವದಿಂದ ವರ್ತಿಸಬೇಕು. "ಕರ್ತವ್ಯ" ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಜವಾಬ್ದಾರಿಗೆ ಸೀಮಿತವಾಗಿಲ್ಲ. ಕರ್ತವ್ಯವು ನಮ್ಮ ಕ್ರಿಯಾ-ಆಧಾರಿತ ತತ್ವಶಾಸ್ತ್ರದ ಮೂಲ ಚೈತನ್ಯವಾಗಿದೆ - ಅದು ಸ್ವಯಂ ಮೀರಿದ ಮತ್ತು ಸಂಪೂರ್ಣತೆಯನ್ನು ಅಳವಡಿಸಿಕೊಳ್ಳುವ ಒಂದು ಭವ್ಯ ದೃಷ್ಟಿ. ಅದು ಕರ್ತವ್ಯದ ನಿಜವಾದ ವ್ಯಾಖ್ಯಾನ. ಆದ್ದರಿಂದ, ಕರ್ತವ್ಯವು ಕೇವಲ ಒಂದು ಕಟ್ಟಡದ ಹೆಸರಲ್ಲ - ಇದು ಕೋಟ್ಯಂತರ ಭಾರತೀಯರ ಕನಸುಗಳು ನನಸಾಗುವ ಪವಿತ್ರ ನೆಲ. ಕರ್ತವ್ಯವು ಆರಂಭವಾಗಿದೆ ಮತ್ತು ಕರ್ತವ್ಯವು ಧ್ಯೇಯವಾಗಿದೆ. ಕರುಣೆ ಮತ್ತು ಸಮರ್ಪಣೆಯ ಬಂಧದಿಂದ ಬಂಧಿಸಲ್ಪಟ್ಟ ಕೆಲಸ - ಅದು ಕರ್ತವ್ಯ. ಕರ್ತವ್ಯವು ಕನಸುಗಳ ಒಡನಾಡಿ, ಸಂಕಲ್ಪಗಳ ಭರವಸೆ, ಕಠಿಣ ಪರಿಶ್ರಮದ ಶಿಖರ, ಪ್ರತಿ ಜೀವನದಲ್ಲಿ ದೀಪ ಅಥವಾ ಬೆಳಕು ಬೆಳಗಿಸುವ ಇಚ್ಛಾಶಕ್ತಿ. ಲಕ್ಷಾಂತರ ದೇಶವಾಸಿಗಳ ಹಕ್ಕುಗಳನ್ನು ರಕ್ಷಿಸಲು ಕರ್ತವ್ಯವೇ ಅಡಿಪಾಯವಾಗಿದೆ. ಇದು ಭಾರತ ಮಾತೆಯ ಪ್ರಮುಖ ಶಕ್ತಿಯ ಧ್ವಜಾರೋಹಣವಾಗಿದೆ. ಇದು ನಾಗರೀಕ ದೇವೋ ಭವ (ನಾಗರಿಕನೇ ದೇವರು) ಎಂಬ ಮಂತ್ರದ ಪಠಣವಾಗಿದೆ. ಇದು ರಾಷ್ಟ್ರದ ಕಡೆಗೆ ಭಕ್ತಿಯಿಂದ ಮಾಡುವ ಪ್ರತಿಯೊಂದು ಕಾಯಕವಾಗಿದೆ.

ಸ್ನೇಹಿತರೆ,

ಸ್ವಾತಂತ್ರ್ಯದ ನಂತರ ದಶಕಗಳವರೆಗೆ, ದೇಶದ ಆಡಳಿತ ಯಂತ್ರವು ಬ್ರಿಟಿಷ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಕಟ್ಟಡಗಳಿಂದಲೇ ಕಾರ್ಯ ನಿರ್ವಹಿಸುತ್ತಲೇ ಇತ್ತು. ದಶಕಗಳ ಹಿಂದೆ ನಿರ್ಮಿಸಲಾದ ಈ ಆಡಳಿತ ಕಟ್ಟಡಗಳಲ್ಲಿ ಕೆಲಸದ ಪರಿಸ್ಥಿತಿಗಳು ಎಷ್ಟು ಕಳಪೆಯಾಗಿವೆ ಎಂಬುದು ನಿಮಗೂ ತಿಳಿದಿದೆ, ನಾವು ಅದರ ಒಂದು ನೋಟವನ್ನು ವೀಡಿಯೊದಲ್ಲಿ ನೋಡಿದ್ದೇವೆ. ಅಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಸ್ಥಳಾವಕಾಶವಿಲ್ಲ, ಸರಿಯಾದ ಬೆಳಕು ಇಲ್ಲ, ಅಥವಾ ಸಾಕಷ್ಟು ಗಾಳಿ ಇಲ್ಲ. ನೀವು ಊಹಿಸಬಹುದು - ಗೃಹ ಮಂತ್ರಾಲಯದಂತಹ ಪ್ರಮುಖ ಸಚಿವಾಲಯವು ಸುಮಾರು 100 ವರ್ಷಗಳಿಂದ ಒಂದೇ ಕಟ್ಟಡದಲ್ಲಿ ಅಸಮರ್ಪಕ ಸಂಪನ್ಮೂಲಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲ, ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ದೆಹಲಿಯಾದ್ಯಂತ 50 ವಿಭಿನ್ನ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಸಚಿವಾಲಯಗಳಲ್ಲಿ ಹಲವು ಬಾಡಿಗೆ ಕಟ್ಟಡಗಳಲ್ಲಿವೆ. ಇವುಗಳಿಗೆ ಪಾವತಿಸಲಾಗುತ್ತಿರುವ ಬಾಡಿಗೆ ಮೊತ್ತವೇ ಬಹುದೊಡ್ಡ ಅಂಕಿಅಂಶವಾಗಿದೆ. ವಾಸ್ತವವಾಗಿ, ನೀವು ಒಟ್ಟು ಲೆಕ್ಕ ಹಾಕಿದರೆ, ಅದು ದೊಡ್ಡ ಮೊತ್ತವಾಗಿದೆ. ಅದರ ಸ್ಥೂಲ ಅಂದಾಜು ಮಾಡಿದರೆ, ಇದು ವರ್ಷಕ್ಕೆ ಸುಮಾರು 1,500 ಕೋಟಿ ರೂಪಾಯಿಗಳಷ್ಟಿದೆ. ಇದು ಭಾರತ ಸರ್ಕಾರವು ವಿವಿಧ ಸಚಿವಾಲಯಗಳಿಗೆ ಬಾಡಿಗೆಗೆ ವಾರ್ಷಿಕವಾಗಿ ಖರ್ಚು ಮಾಡುವ ಮೊತ್ತವಾಗಿದೆ. ಇನ್ನೊಂದು ಸಮಸ್ಯೆ ಇದೆ, ಸ್ವಾಭಾವಿಕವಾಗಿ, ಕೆಲಸದ ಅವಶ್ಯಕತೆಗಳಿಂದಾಗಿ, ನೌಕರರು ಒಂದು ಸಚಿವಾಲಯದಿಂದ ಇನ್ನೊಂದಕ್ಕೆ ಪ್ರಯಾಣಿಸಬೇಕಾಗುತ್ತದೆ. ಪ್ರತಿದಿನ 8,000ದಿಂದ 10,000 ಉದ್ಯೋಗಿಗಳು ಒಂದು ಸಚಿವಾಲಯದಿಂದ ಮತ್ತೊಂದು ಸಚಿವಾಲಯಕ್ಕೆ ಪ್ರಯಾಣಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ನೂರಾರು ವಾಹನಗಳ ಚಲನೆ, ಹೆಚ್ಚುವರಿ ವೆಚ್ಚಗಳು, ಹೆಚ್ಚಿದ ರಸ್ತೆ ಸಂಚಾರ, ಸಮಯ ವ್ಯರ್ಥ, ಕೊನೆಯದಾಗಿ ಇವೆಲ್ಲವೂ ಕೆಲಸದ ಅದಕ್ಷತೆಗೆ ಕಾರಣವಾಗುತ್ತಿದೆ.

ಸ್ನೇಹಿತರೆ,

21ನೇ ಶತಮಾನದ ಭಾರತಕ್ಕೆ 21ನೇ ಶತಮಾನದ ಆಧುನಿಕ ವ್ಯವಸ್ಥೆಗಳು ಬೇಕಾಗುತ್ತವೆ, ಅದಕ್ಕೆ ಅದೇ ಗುಣಮಟ್ಟದ ಕಟ್ಟಡಗಳು ಸಹ ಬೇಕಾಗುತ್ತವೆ. ತಂತ್ರಜ್ಞಾನ, ಭದ್ರತೆ ಮತ್ತು ಅನುಕೂಲತೆಯ ವಿಷಯದಲ್ಲಿ ಅತ್ಯುತ್ತಮವಾದ ಕಟ್ಟಡಗಳು. ಉದ್ಯೋಗಿಗಳು ಆರಾಮದಾಯಕವಾಗಿರುವ, ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಬಹುದಾದ ಮತ್ತು ಸೇವೆಗಳನ್ನು ಸುಲಭವಾಗಿ ಪ್ರವೇಶಿಸಬಹುದಾದ ಕಟ್ಟಡಗಳು. ಅದಕ್ಕಾಗಿಯೇ, ಕರ್ತವ್ಯ ಪಥದ ಸುತ್ತಲಿನ ಪ್ರದೇಶಕ್ಕೆ ಸಮಗ್ರ ದೃಷ್ಟಿಕೋನದೊಂದಿಗೆ, ಕರ್ತವ್ಯ ಭವನದಂತಹ ಭವ್ಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದು ಪೂರ್ಣಗೊಂಡಿರುವ ಮೊದಲ ಕರ್ತವ್ಯ ಭವನದಂತಿದೆ. ಇನ್ನೂ ಅನೇಕ ಕಟ್ಟಡಗಳ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿದೆ. ಈ ಕಚೇರಿಗಳನ್ನು ಪರಸ್ಪರ ಹತ್ತಿರಕ್ಕೆ ಸ್ಥಳಾಂತರಿಸಿದ ನಂತರ, ಉದ್ಯೋಗಿಗಳಿಗೆ ಸರಿಯಾದ ಕೆಲಸದ ವಾತಾವರಣ, ಅಗತ್ಯ ಸೌಲಭ್ಯಗಳು ಸಿಗುತ್ತವೆ, ಜತೆಗೆ ಅವರ ಒಟ್ಟು ಕೆಲಸದ ಉತ್ಪಾದಕತೆಯೂ ಹೆಚ್ಚಾಗುತ್ತದೆ. ಸರ್ಕಾರವು ಪ್ರಸ್ತುತ ಬಾಡಿಗೆಗೆ ಖರ್ಚು ಮಾಡುವ 1,500 ಕೋಟಿ ರೂಪಾಯಿಗಳನ್ನು ಸಹ ಉಳಿಸಲಾಗುತ್ತದೆ.

ಈ ಭವ್ಯವಾದ ಕರ್ತವ್ಯ ಭವನ, ಈ ಯೋಜನೆಗಳು, ಹೊಸ ರಕ್ಷಣಾ ಸಂಕೀರ್ಣ ಮತ್ತು ದೇಶದ ಎಲ್ಲಾ ಪ್ರಮುಖ ಮೂಲಸೌಕರ್ಯ ಯೋಜನೆಗಳು - ಅವು ಭಾರತದ ಪ್ರಗತಿಯ ವೇಗಕ್ಕೆ ಪುರಾವೆಯಾಗಿಲ್ಲ, ಆದರೆ ಭಾರತದ ಜಾಗತಿಕ ದೃಷ್ಟಿಕೋನದ ಪ್ರತಿಬಿಂಬವೂ ಆಗಿದೆ. ಭಾರತವು ಜಗತ್ತಿಗೆ ನೀಡುವ ದೃಷ್ಟಿಕೋನಗಳನ್ನು ಹೇಗೆ ಅಳವಡಿಸಿಕೊಳ್ಳುತ್ತಿದೆ ಎಂಬುದನ್ನು ಅವು ತೋರಿಸುತ್ತವೆ. ಇದು ನಮ್ಮ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗೋಚರಿಸುತ್ತದೆ. ನಾವು ಜಗತ್ತಿಗೆ ಮಿಷನ್ ಲೈಫ್ ನೀಡಿದ್ದೇವೆ. ನಾವು ಜಗತ್ತಿಗೆ ಒಂದು ಭೂಮಿ, ಒಂದು ಸೂರ್ಯ, ಒಂದು ಗ್ರಿಡ್ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದ್ದೇವೆ - ಇವು ಮಾನವತೆಯ ಭವಿಷ್ಯದ ಬಗ್ಗೆ ಭರವಸೆ ಹೊಂದಿರುವ ದೃಷ್ಟಿಕೋನಗಳಾಗಿವೆ. ಇಂದು, ಕರ್ತವ್ಯ ಭವನದಂತಹ ನಮ್ಮ ಆಧುನಿಕ ಮೂಲಸೌಕರ್ಯವು ಜನರ ಪರವಾಗಿರುವ ಮತ್ತು ಪೃಥ್ವಿಯ ಪರವಾಗಿರುವ ಸಂರಚನೆ ಹೊಂದಿರುವ ಮೂಲಸೌಕರ್ಯವಾಗಿದೆ ಎಂದು ನೀವು ನೋಡಬಹುದು. ಕರ್ತವ್ಯ ಭವನದ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ಸುಧಾರಿತ ವ್ಯವಸ್ಥೆಗಳನ್ನು ಸಂಯೋಜಿಸಲಾಗಿದೆ. ಹಸಿರು ಕಟ್ಟಡಗಳ ದೃಷ್ಟಿಕೋನವು ಈಗ ಭಾರತದಲ್ಲಿ ವಿಸ್ತರಿಸುತ್ತಿದೆ.

ಸ್ನೇಹಿತರೆ,

ನಮ್ಮ ಸರ್ಕಾರವು ಸಮಗ್ರ ದೃಷ್ಟಿಕೋನದೊಂದಿಗೆ ರಾಷ್ಟ್ರದ ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಇಂದು ದೇಶದ ಯಾವುದೇ ಭಾಗವು ಅಭಿವೃದ್ಧಿಯ ಪ್ರವಾಹದಿಂದ ಮುಟ್ಟದೆ ಹಿಂದುಳಿದಿಲ್ಲ. ದೆಹಲಿಯಲ್ಲಿ ಹೊಸ ಸಂಸತ್ತು ಕಟ್ಟಡ ನಿರ್ಮಿಸಿದ್ದರೆ, ದೇಶಾದ್ಯಂತ 30,000ಕ್ಕೂ ಹೆಚ್ಚು ಪಂಚಾಯಿತಿ ಕಟ್ಟಡಗಳನ್ನು ಸಹ ನಿರ್ಮಿಸಲಾಗಿದೆ. ಇಲ್ಲಿ ಕರ್ತವ್ಯ ಭವನ ನಿರ್ಮಿಸಲಾಗಿದೆ, ಅದೇ ಸಮಯದಲ್ಲಿ, ಬಡವರಿಗಾಗಿ 4 ಕೋಟಿಗೂ ಹೆಚ್ಚು ಶಾಶ್ವತ ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಪೊಲೀಸ್ ಸ್ಮಾರಕ ನಿರ್ಮಿಸಲಾಗಿದ್ದರೆ, ದೇಶಾದ್ಯಂತ 300ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಭಾರತ್ ಮಂಟಪವನ್ನು ನಿರ್ಮಿಸಲಾಗಿದ್ದು, ದೇಶಾದ್ಯಂತ 1,300ಕ್ಕೂ ಹೆಚ್ಚು ಹೊಸ ಅಮೃತ್ ಭಾರತ್ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ನಿರ್ಮಿಸಲಾದ ಸುಮಾರು 90 ಹೊಸ ವಿಮಾನ ನಿಲ್ದಾಣಗಳಲ್ಲಿಯೂ ಯಶೋಭೂಮಿಯ ಭವ್ಯತೆಯನ್ನು ಕಾಣಬಹುದು.

ಸ್ನೇಹಿತರೆ,

ಮಹಾತ್ಮ ಗಾಂಧಿ ಅವರು ಹಕ್ಕುಗಳು ಮತ್ತು ಕರ್ತವ್ಯಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳುತ್ತಿದ್ದರು. ಕರ್ತವ್ಯಗಳನ್ನು ಪೂರೈಸಿದಾಗ ಮಾತ್ರ ನಮ್ಮ ಹಕ್ಕುಗಳು ಬಲಗೊಳ್ಳುತ್ತವೆ. ನಾಗರಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ, ಆದರೆ ಸರ್ಕಾರಕ್ಕೂ ಕರ್ತವ್ಯವು ಅತ್ಯಂತ ಮುಖ್ಯವಾದ ಆದ್ಯತೆಯಾಗಿದೆ. ಸರ್ಕಾರವು ತನ್ನ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಪೂರೈಸಿದಾಗ, ಅದು ಆಡಳಿತದಲ್ಲಿ ಪ್ರತಿಫಲಿಸುತ್ತದೆ. ಕಳೆದ ದಶಕವು ದೇಶದ  ಉತ್ತಮ ಆಡಳಿತದ ದಶಕವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಹರಿವು ಸುಧಾರಣೆಗಳ ಮೂಲದಿಂದ ಹುಟ್ಟಿಕೊಂಡಿದೆ. ಸುಧಾರಣೆಗಳು ಸ್ಥಿರ ಮತ್ತು ಸಮಯಕ್ಕೆ ಸೀಮಿತವಾದ ಪ್ರಕ್ರಿಯೆಯಾಗಿದೆ. ಅದಕ್ಕಾಗಿಯೇ ದೇಶವು ನಿರಂತರವಾಗಿ ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ನಮ್ಮ ಸುಧಾರಣೆಗಳು ಸ್ಥಿರ, ಕ್ರಿಯಾಶೀಲ(ಕ್ರಿಯಾತ್ಮಕ) ಮತ್ತು ಉಜ್ವಲ ಭವಿಷ್ಯವನ್ನು ಆಧರಿಸಿವೆ. ಸರ್ಕಾರ ಮತ್ತು ಜನರ ನಡುವಿನ ಸಂಬಂಧ ಬಲಪಡಿಸುವುದು, ಜೀವನ ಸುಲಭತೆ ಸುಧಾರಿಸುವುದು, ಹಿಂದುಳಿದವರಿಗೆ ಆದ್ಯತೆ ನೀಡುವುದು, ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಸರ್ಕಾರದ ಕಾರ್ಯ ನಿರ್ವಹಣೆಯನ್ನು ಸುಧಾರಿಸುವುದು - ದೇಶವು ನವೀನ ವಿಧಾನಗಳ ಮೂಲಕ ಈ ದಿಕ್ಕುಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ 11 ವರ್ಷಗಳಲ್ಲಿ ದೇಶವು ಪಾರದರ್ಶಕ, ಸೂಕ್ಷ್ಮ ಮತ್ತು ನಾಗರಿಕ ಕೇಂದ್ರಿತ ಆಡಳಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ.

ಸ್ನೇಹಿತರೆ,

ನಾನು ಜಗತ್ತಿನ ಎಲ್ಲೇ ಹೋದರೂ, ಜನ್ ಧನ್, ಆಧಾರ್ ಮತ್ತು ಮೊಬೈಲ್ - ಜೆಎಎಂ ತ್ರಿಮೂರ್ತಿಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಇದನ್ನು ಜಾಗತಿಕವಾಗಿ ಪ್ರಶಂಸಿಸಲಾಗುತ್ತದೆ. ಇದು ಭಾರತದಲ್ಲಿ ಸರ್ಕಾರಿ ಯೋಜನೆಗಳ ವಿತರಣೆಯನ್ನು ಪಾರದರ್ಶಕವಾಗಿಸಿ, ಸೋರಿಕೆಗಳಿಂದ ಮುಕ್ತಗೊಳಿಸಿದೆ. ದೇಶದಲ್ಲಿ ಅದು ಪಡಿತರ ಚೀಟಿಗಳಾಗಲಿ, ಅನಿಲ ಸಬ್ಸಿಡಿ ಸ್ವೀಕರಿಸುವವರಾಗಲಿ ಅಥವಾ ವಿದ್ಯಾರ್ಥಿವೇತನ ಫಲಾನುಭವಿಗಳಾಗಲಿ – ಜನನ ಕಾಣದ ಸುಮಾರು 10 ಕೋಟಿ ನಕಲಿ ಫಲಾನುಭವಿಗಳಿದ್ದಾರೆ ಎಂದು ತಿಳಿದು ಜನರು ಆಶ್ಚರ್ಯಚಕಿತರಾಗಿದ್ದಾರೆ. ಹೌದು, ಈ ಅಂಕಿಅಂಶದಿಂದ ನೀವು ಆಘಾತಕ್ಕೊಳಗಾಗುತ್ತೀರಿ - ಹಿಂದಿನ ಸರ್ಕಾರಗಳು 10 ಕೋಟಿ ನಕಲಿ ಫಲಾನುಭವಿಗಳ ಹೆಸರಿಗೆ ಹಣ ಕಳುಹಿಸುತ್ತಿದ್ದವು, ಅದು ಆಗ ಮಧ್ಯವರ್ತಿಗಳ ಖಾತೆಗಳಿಗೆ ಬರುತ್ತಿತ್ತು. ನಮ್ಮ ಸರ್ಕಾರವು ಅಂತಹ ಎಲ್ಲಾ 10 ಕೋಟಿ ನಕಲಿ ಹೆಸರುಗಳನ್ನು ತೆಗೆದುಹಾಕಿದೆ. ಇತ್ತೀಚಿನ ಅಂಕಿಅಂಶವು ಇದು ದೇಶವನ್ನು 4.3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವು ನಕಲಿ ಫಲಾನುಭವಿಗಳ ಕೈಗಳಿಗೆ ಹೋಗುವುದನ್ನು ತಪ್ಪಿಸಿದೆ ಎಂದು ತೋರಿಸುತ್ತಿದೆ. ಊಹಿಸಿ 4.3 ಲಕ್ಷ ಕೋಟಿ ರೂಪಾಯಿಗಳ ಕಳ್ಳತನ. ಈಗ ಈ ಹಣವನ್ನು ರಾಷ್ಟ್ರದ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಇದರರ್ಥ ನೈಜ ಫಲಾನುಭವಿಗಳು ಸಂತೋಷವಾಗಿದ್ದಾರೆ ಮತ್ತು ದೇಶದ ಸಂಪನ್ಮೂಲಗಳನ್ನು ಸಂರಕ್ಷಿಸಲಾಗಿದೆ.

ಸ್ನೇಹಿತರೆ,

ಇದು ಭ್ರಷ್ಟಾಚಾರ ಮತ್ತು ಸೋರಿಕೆಗಳು ಮಾತ್ರವಲ್ಲ, ನಾಗರಿಕರಿಗೆ ತೊಂದರೆ ನೀಡಲು ಅನಗತ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ಸಹ ಬಳಸಲಾಗುತ್ತಿತ್ತು. ಅವರು ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದರು. ಅದಕ್ಕಾಗಿಯೇ ನಾವು 1,500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಈ ಕಾನೂನುಗಳಲ್ಲಿ ಹಲವು ಬ್ರಿಟಿಷ್ ಯುಗದ ಹಿಂದಿನವು ಮತ್ತು ಹಲವು ದಶಕಗಳ ನಂತರವೂ ಇನ್ನೂ ಅಡೆತಡೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ನಮ್ಮ ದೇಶವು ಕಾನೂನು ಅನುಸರಣೆಯ ದೊಡ್ಡ ಹೊರೆಯನ್ನು ಸಹ ಹೊಂದಿದೆ. ಯಾವುದೇ ಕೆಲಸ ಪ್ರಾರಂಭಿಸಲು, ಒಬ್ಬರು ಡಜನ್ಗಟ್ಟಲೆ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಕಳೆದ 11 ವರ್ಷಗಳಲ್ಲಿ, 40,000ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ಈ ಕೆಲಸ ಇನ್ನೂ ಪೂರ್ಣಗೊಂಡಿಲ್ಲ, ಇದು ಇನ್ನೂ ಮುಂದುವರೆದಿದೆ.

ಸ್ನೇಹಿತರೆ,

ಭಾರತ ಸರ್ಕಾರದ ಹಿರಿಯ ಕಾರ್ಯದರ್ಶಿಗಳು ಇಲ್ಲಿದ್ದಾರೆ, ಹಿಂದೆ ಅನೇಕ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ, ಜವಾಬ್ದಾರಿಗಳು ಮತ್ತು ಅಧಿಕಾರಗಳು ಹೇಗೆ ಅತಿಕ್ರಮಿಸುತ್ತಿದ್ದವು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಇದು ನಿರ್ಧಾರಗಳನ್ನು ಸ್ಥಗಿತಗೊಳಿಸಲು ಮತ್ತು ಕೆಲಸ ವಿಳಂಬವಾಗಲು ಕಾರಣವಾಯಿತು. ನಕಲು ಅನುಸರಣೆ ತೆಗೆದುಹಾಕಲು ನಾವು ವಿವಿಧ ಇಲಾಖೆಗಳನ್ನು ಸಂಯೋಜಿಸಿದ್ದೇವೆ. ಕೆಲವು ಸಚಿವಾಲಯಗಳನ್ನು ವಿಲೀನಗೊಳಿಸಲಾಯಿತು, ಅಗತ್ಯವಿದ್ದೆಡೆ, ಹೊಸ ಸಚಿವಾಲಯಗಳನ್ನು ಸ್ಥಾಪಿಸಲಾಯಿತು. ಉದಾಹರಣೆಗೆ, ನೀರಿನ ಸುರಕ್ಷತೆ ಖಚಿತಪಡಿಸಿಕೊಳ್ಳಲು ಜಲಶಕ್ತಿ ಸಚಿವಾಲಯ ಸ್ಥಾಪಿಸಲಾಯಿತು; ಸಹಕಾರಿ ಚಳುವಳಿ ಬಲಪಡಿಸಲು ಸಹಕಾರ ಸಚಿವಾಲಯ ರೂಪಿಸಲಾಯಿತು. ಮೊದಲ ಬಾರಿಗೆ, ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಸ್ಥಾಪಿಸಲಾಯಿತು. ನಮ್ಮ ಯುವಕರಿಗಾಗಿ ಕೌಶಲ್ಯ ಅಭಿವೃದ್ಧಿ ಸಚಿವಾಲಯ ರೂಪಿಸಲಾಯಿತು. ಈ ನಿರ್ಧಾರಗಳು ಸರ್ಕಾರದ ದಕ್ಷತೆಯನ್ನು ಹೆಚ್ಚಿಸಿವೆ ಮತ್ತು ವಿತರಣೆಯನ್ನು ವೇಗಗೊಳಿಸಿವೆ.

ನಾವು ಸರ್ಕಾರದ ಕೆಲಸದ ಸಂಸ್ಕೃತಿಯನ್ನು ನವೀಕರಿಸಲು ಸಹ ಕೆಲಸ ಮಾಡುತ್ತಿದ್ದೇವೆ. ಮಿಷನ್ ಕರ್ಮಯೋಗಿ ಮತ್ತು ಐ-ಜಿಒಟಿಯಂತಹ ಡಿಜಿಟಲ್ ವೇದಿಕೆಗಳ ಮೂಲಕ, ನಮ್ಮ ಸರ್ಕಾರಿ ನೌಕರರನ್ನು ತಾಂತ್ರಿಕವಾಗಿ ಸಬಲೀಕರಣಗೊಳಿಸಲಾಗುತ್ತಿದೆ. ಇ-ಆಫೀಸ್ ವ್ಯವಸ್ಥೆಗಳು, ಫೈಲ್ ಟ್ರ್ಯಾಕಿಂಗ್ ಮತ್ತು ಡಿಜಿಟಲ್ ಅನುಮೋದನೆಗಳು ವೇಗವಾಗಿ ಮತ್ತು ಪತ್ತೆ ಹಚ್ಚಬಹುದಾದ ಮಾರ್ಗಸೂಚಿಯನ್ನು ರೂಪಿಸುತ್ತಿವೆ.

ಸ್ನೇಹಿತರೆ,

ನಾವು ಹೊಸ ಮನೆಗೆ ಹೋದಾಗ, ನಮ್ಮಲ್ಲಿ ಒಂದು ಹೊಸ ಉತ್ಸಾಹ ಇರುತ್ತದೆ, ಆಗ ನಮ್ಮ ಶಕ್ತಿಯು ಹಲವು ಪಟ್ಟು ಹೆಚ್ಚಾಗುತ್ತದೆ. ಈಗ ಅದೇ ಉತ್ಸಾಹದಿಂದ, ನೀವು ಈ ಹೊಸ ಕಟ್ಟಡದಲ್ಲಿ ನಿಮ್ಮ ಜವಾಬ್ದಾರಿಗಳನ್ನು ಮುಂದುವರಿಸುತ್ತೀರಿ. ನೀವು ಯಾವುದೇ ಹುದ್ದೆ ಹೊಂದಿದ್ದರೂ, ನಿಮ್ಮ ಅಧಿಕಾರಾವಧಿಯನ್ನು ಸ್ಮರಣೀಯವಾಗಿಸುವ ರೀತಿಯಲ್ಲಿ ಕೆಲಸ ಮಾಡಿ. ನೀವು ಇಲ್ಲಿಂದ ಹೊರಡುವಾಗ, ನೀವು ರಾಷ್ಟ್ರ ಸೇವೆಯಲ್ಲಿ ನಿಮ್ಮ 100% ನ್ಯಾಯ ಒದಗಿಸಿದ್ದೀರಿ ಎಂದು ಭಾಸವಾಗಬೇಕು.

ಸ್ನೇಹಿತರೆ,

ನಾವು ಫೈಲ್‌ಗಳ ಕಡೆಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸಬೇಕಾಗಿದೆ. ಒಂದು ಫೈಲ್, ದೂರು, ಅರ್ಜಿ - ಇವು ದಿನಚರಿಯಂತೆ, ದೈನಂದಿನ ವಿಷಯಗಳಂತೆ ಕಾಣಿಸಬಹುದು. ಆದರೆ ಯಾರಿಗಾದರೂ, ಆ ಒಂದೇ ಕಾಗದದ ತುಂಡು ಅವರ ಭರವಸೆಯಾಗಿರಬಹುದು; ಒಂದೇ ಫೈಲ್ ಅನೇಕ ಜನರ ಜೀವನಕ್ಕೆ ಸಂಪರ್ಕ ಹೊಂದಿರಬಹುದು. ಉದಾಹರಣೆಗೆ, 1,00,000 ಜನರ ಮೇಲೆ ಪರಿಣಾಮ ಬೀರುವ ಫೈಲ್ ಇದ್ದರೆ ಮತ್ತು ಅದು ನಿಮ್ಮ ಮೇಜಿನ ಮೇಲೆ ಒಂದು ದಿನವಾದರೂ ವಿಳಂಬವಾದರೆ, ಅದು 1,00,000 ಮಾನವ-ದಿನಗಳ ನಷ್ಟವನ್ನು ಸೂಚಿಸುತ್ತದೆ. ನೀವು ನಿಮ್ಮ ಕೆಲಸವನ್ನು ಈ ದೃಷ್ಟಿಕೋನದಿಂದ ನೋಡಿದಾಗ, ಯಾವುದೇ ಅನುಕೂಲತೆ ಅಥವಾ ವೈಯಕ್ತಿಕ ಆಲೋಚನೆಯನ್ನು ಮೀರಿ, ಅದು ಸೇವೆ ಸಲ್ಲಿಸಲು ಒಂದು ದೊಡ್ಡ ಅವಕಾಶ ಎಂದು ನೀವು ಅರಿತುಕೊಳ್ಳುತ್ತೀರಿ. ನೀವು ಹೊಸ ಕಲ್ಪನೆಯನ್ನು ಸೃಷ್ಟಿಸಿದರೆ, ನೀವು ಒಂದು ಪ್ರಮುಖ ಪರಿವರ್ತನೆಗೆ ಅಡಿಪಾಯ ಹಾಕುತ್ತಿರಬಹುದು. ಈ ಕರ್ತವ್ಯ ಪ್ರಜ್ಞೆಯೊಂದಿಗೆ, ನಾವೆಲ್ಲರೂ ಯಾವಾಗಲೂ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತರಾಗಿರಬೇಕು. ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು - 'ವಿಕಸಿತ ಭಾರತ'ದ ಕನಸುಗಳು ಕರ್ತವ್ಯದ ಗರ್ಭದಲ್ಲಿಯೇ ನನಸಾಗುತ್ತವೆ ಎಂದು.

ಸ್ನೇಹಿತರೆ,

ಇಂದು ಟೀಕೆಗೆ ಅವಕಾಶವಿಲ್ಲದಿದ್ದರೂ, ಆತ್ಮಾವಲೋಕನಕ್ಕೆ ಅವಕಾಶವಿದೆ. ನಮ್ಮಂತೆಯೇ ಸ್ವತಂತ್ರವಾದ ಅನೇಕ ದೇಶಗಳು ವೇಗವಾಗಿ ಪ್ರಗತಿ ಸಾಧಿಸಿವೆ. ಆದರೆ ಭಾರತ ಆ ವೇಗದಲ್ಲಿ ಮುನ್ನಡೆಯಲು ಸಾಧ್ಯವಾಗಲಿಲ್ಲ, ಅದಕ್ಕೆ ಹಲವು ಕಾರಣಗಳಿರಬೇಕು. ಆದಾಗ್ಯೂ, ಭವಿಷ್ಯದ ಪೀಳಿಗೆಗೆ ಸಮಸ್ಯೆಗಳನ್ನು ಬಿಡದಿರುವುದು ನಮ್ಮ ಜವಾಬ್ದಾರಿಯಾಗಿದೆ. ಹಳೆಯ ಕಟ್ಟಡಗಳಿಂದ, ನಾವು ತೆಗೆದುಕೊಂಡ ನಿರ್ಧಾರಗಳು ಮತ್ತು ನಾವು ಮಾಡಿದ ನೀತಿಗಳು ನಮ್ಮ 25 ಕೋಟಿ ನಾಗರಿಕರನ್ನು ಬಡತನದಿಂದ ಹೊರತರಲು ನಮಗೆ ಧೈರ್ಯ ನೀಡಿತು. 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂಬುದು ಒಂದು ದೊಡ್ಡ ಸಾಧನೆ. ಆದರೆ ಪ್ರತಿ ಯಶಸ್ಸಿನ ನಂತರವೂ, ನಾನು ಹೊಸದನ್ನು ಯೋಚಿಸುತ್ತಲೇ ಇರುತ್ತೇನೆ. ಈಗ, ಈ ಹೊಸ ಕಟ್ಟಡಗಳಲ್ಲಿ, ಹೆಚ್ಚಿನ ದಕ್ಷತೆಯೊಂದಿಗೆ ದೇಶಕ್ಕೆ ಸಾಧ್ಯವಾದಷ್ಟು ಕೊಡುಗೆ ನೀಡುವ ಮನಸ್ಥಿತಿಯೊಂದಿಗೆ ನಾವು ಕೆಲಸ ಮಾಡಬೇಕು, ಇದರಿಂದ ನಾವು ಭಾರತವನ್ನು ಬಡತನದಿಂದ ಸಂಪೂರ್ಣವಾಗಿ ಮುಕ್ತಗೊಳಿಸಬಹುದು. ಈ ಕಟ್ಟಡಗಳಿಂದಲೇ, 'ವಿಕಸಿತ ಭಾರತ'ದ ಕನಸು ನನಸಾಗುತ್ತದೆ. ನಮ್ಮೆಲ್ಲರ ಸಂಯೋಜಿತ ಪ್ರಯತ್ನಗಳ ಮೂಲಕ ಮಾತ್ರ ಈ ಗುರಿ ಸಾಧಿಸಲಾಗುತ್ತದೆ. ಒಟ್ಟಾಗಿ, ನಾವು ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತದ  ಯಶೋಗಾಥೆಗಳನ್ನು ಬರೆಯಬೇಕು. ನಮ್ಮ ಸ್ವಂತ ಉತ್ಪಾದಕತೆಯನ್ನು ಮತ್ತು ದೇಶದ ಉತ್ಪಾದಕತೆಯನ್ನು ಹೆಚ್ಚಿಸುವುದು ನಮ್ಮ ಸಂಕಲ್ಪವಾಗಿರಬೇಕು. ಪ್ರವಾಸೋದ್ಯಮದ ವಿಷಯಕ್ಕೆ ಬಂದಾಗ, ಪ್ರಪಂಚದಾದ್ಯಂತದ ಜನರು ಭಾರತಕ್ಕೆ ಬರಬೇಕು; ಬ್ರ್ಯಾಂಡ್‌ಗಳ ವಿಷಯಕ್ಕೆ ಬಂದಾಗ, ಪ್ರಪಂಚದ ಕಣ್ಣುಗಳು ಭಾರತೀಯ ಬ್ರ್ಯಾಂಡ್‌ಗಳ ಮೇಲೆ ನೆಟ್ಟಿರಬೇಕು; ಶಿಕ್ಷಣದ ವಿಷಯಕ್ಕೆ ಬಂದಾಗ, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಲು ಬರಬೇಕು. ಭಾರತದ ಶಕ್ತಿಯನ್ನು ಬಲಪಡಿಸುವುದು ನಮ್ಮ ಜೀವನದ ಧ್ಯೇಯವಾಗಬೇಕು.

ಸ್ನೇಹಿತರೆ,

ಯಶಸ್ವಿ ರಾಷ್ಟ್ರಗಳು ಮುಂದೆ ಸಾಗಿದಾಗ, ಅವರು ತಮ್ಮ ಸಕಾರಾತ್ಮಕ ಪರಂಪರೆಯನ್ನು ತ್ಯಜಿಸುವುದಿಲ್ಲ, ಅವರು ಅದನ್ನು ಉಳಿಸಿಕೊಳ್ಳುತ್ತಾರೆ. ಇಂದು, ಭಾರತವು 'ವಿಕಾಸ ಮತ್ತು ವಿರಾಸತ್'(ಅಭಿವೃದ್ಧಿ ಮತ್ತು ಪರಂಪರೆ) ಎಂಬ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ. ಹೊಸ ಕರ್ತವ್ಯ ಭವನದ ನಂತರ, ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳು ಸಹ ಭಾರತದ ಮಹಾನ್ ಪರಂಪರೆಯ ಭಾಗವಾಗುತ್ತವೆ. ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳನ್ನು "ಯುಗೇ ಯುಗೀನ್ ಭಾರತ್" ಆಗಿ ಪರಿವರ್ತಿಸಲಾಗುತ್ತಿದೆ, ಅದು ದೇಶದ ಜನರಿಗೆ ವಸ್ತುಸಂಗ್ರಹಾಲಯ. ಪ್ರತಿಯೊಬ್ಬ ನಾಗರಿಕನು ನಮ್ಮ ರಾಷ್ಟ್ರದ ಐತಿಹಾಸಿಕ ಪ್ರಯಾಣಕ್ಕೆ ಭೇಟಿ ನೀಡಲು ಮತ್ತು ವೀಕ್ಷಿಸಲು ಸಾಧ್ಯವಾಗುತ್ತದೆ. ಕರ್ತವ್ಯ ಭವನದೊಳಗೆ ಪ್ರವೇಶಿಸುವಾಗ ನಾವೆಲ್ಲರೂ ಸಹ ಈ ಸ್ಥಳದ ಸ್ಫೂರ್ತಿ ಮತ್ತು ಪರಂಪರೆಯನ್ನು ನಮ್ಮೊಂದಿಗೆ ಕೊಂಡೊಯ್ಯುತ್ತೇವೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ಕರ್ತವ್ಯ ಭವನದ ಉದ್ಘಾಟನೆಯ ಈ ಸುಸಂದರ್ಭದಲ್ಲಿ ನನ್ನ ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು.

 

 

*****


(Release ID: 2154037)