ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ 'ಆಪರೇಷನ್ ಸಿಂಧೂರ'ದ ಮೂಲಕ ಭಾರತ ನೀಡಿದ ದೃಢ, ಯಶಸ್ವಿ ಮತ್ತು ನಿರ್ಣಾಯಕ ಪ್ರತ್ಯುತ್ತರದ ಕುರಿತು ಇಂದು ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 'ಆಪರೇಷನ್ ಸಿಂಧೂರ'ದ ಮೂಲಕ ಉಗ್ರರ ಶಿಬಿರಗಳು ಮತ್ತು ಅವರ ಸೂತ್ರಧಾರರನ್ನು ಮಟ್ಟಹಾಕಿದರೆ, 'ಆಪರೇಷನ್ ಮಹಾದೇವ್' ಮೂಲಕ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಸದೆಬಡಿದರು

ಸೇನೆ, ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ 'ಆಪರೇಷನ್ ಮಹಾದೇವ್' ನಲ್ಲಿ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರೂ ಭಯೋತ್ಪಾದಕರಾದ ಸುಲೇಮಾನ್ ಅಲಿಯಾಸ್ ಫೈಜಲ್ ಜಟ್, ಹಮ್ಜಾ ಅಫ್ಘಾನಿ ಮತ್ತು ಝಿಬ್ರಾನ್ ಹತರಾಗಿದ್ದಾರೆ

ಭಯೋತ್ಪಾದಕರು ಹತರಾದ ಸುದ್ದಿ ಕೇಳಿ ವಿರೋಧ ಪಕ್ಷದಲ್ಲೂ ಸಂತಸದ ಅಲೆ ಮೂಡಬೇಕಿತ್ತು, ಆದರೆ ಅವರ ಮುಖದಲ್ಲಿ ಮ್ಲಾನತೆ ಆವರಿಸಿದೆ

ವಿರೋಧ ಪಕ್ಷದ ಸರ್ಕಾರದ ಆಗಿನ ಗೃಹ ಸಚಿವರು, "ಉಗ್ರರು ಪಾಕಿಸ್ತಾನದಿಂದ ಬಂದಿದ್ದಾರೆ" ಎಂಬುದಕ್ಕೆ ಪುರಾವೆ ಕೇಳುವ ಮೂಲಕ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಿದ್ದರು

ಪಾಕಿಸ್ತಾನವನ್ನು ರಕ್ಷಿಸುವ ವಿರೋಧ ಪಕ್ಷದ ಷಡ್ಯಂತ್ರವು 140 ಕೋಟಿ ಭಾರತೀಯರ ಮುಂದೆ ಬಯಲಾಗಿದೆ; ಇನ್ನು ವಿಪಕ್ಷಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಮೋದಿ ಸರ್ಕಾರದ ಅಡಿಯಲ್ಲಿ, ನಮ್ಮ ಸೇನೆಯು ಪಾಕಿಸ್ತಾನದೊಳಗೆ ನುಗ್ಗಿ, ವಿರೋಧ ಪಕ್ಷದ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಕಾರಣರಾದವರನ್ನು ಮಟ್ಟಹಾಕಿದೆ

ಮೋದಿ ಸರ್ಕಾರದ ಅಡಿಯಲ್ಲಿ, ಭಯೋತ್ಪಾದಕ ದಾಳಿಗಳಿಗೆ ಪ್ರತಿಯಾಗಿ ಕಡತಗಳನ್ನು ಕಳುಹಿಸಲಾಗುವುದಿಲ್ಲ; ಭಯೋತ್ಪಾದಕರು ಮತ್ತು ಅವರ ಅಡಗುತಾಣಗಳನ್ನೇ ಧ್ವಂಸ ಮಾಡಲಾಗುತ್ತದೆ

'ಆಪರೇಷನ್ ಸಿಂಧೂರ' ಇಡೀ ವಿಶ್ವದ ಮುಂದೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ ಮತ್ತು ನಮ್ಮ ಸೇನೆಯು ಪಾಕಿಸ್ತಾನದ ಯುದ್ಧ ಸಾಮರ್ಥ್ಯವನ್ನು ಪುಡಿಗೈದಿದೆ

ಇಂದು ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ಅಕ್ರಮ ಹಿಡಿತದಲ್ಲಿದ್ದರೆ, ಅದಕ್ಕೆ ಪಂಡಿತ್ ಜವಾಹರಲಾಲ್ ನೆಹರು ಅವರೇ ಏಕೈಕ ಕಾರಣ

ಪಿಒಕೆಯ ಅಸ್ತಿತ್ವಕ್ಕೆ ಜವಾಹರಲಾಲ್ ನೆಹರು ಅವರ ತಪ್ಪೇ ಕಾರಣ

1971ರ ಯುದ್ಧದಲ್ಲಿ ಸೇನೆಯು ಪಾಕಿಸ್ತಾನವನ್ನು ಸೋಲಿಸಿತು, ಆದರೆ ಆಗಿನ ವಿರೋಧ ಪಕ್ಷದ ಸರ್ಕಾರವು ವಶಪಡಿಸಿಕೊಂಡಿದ್ದ 15,000 ಚದರ ಕಿ.ಮೀ. ಭೂಮಿಯನ್ನು ಹಿಂತಿರುಗಿಸಿ, ಪಿಒಕೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ವಿಫಲವಾಯಿತು

Posted On: 29 JUL 2025 5:23PM by PIB Bengaluru

ಎಲ್ಲಾ ಭಯೋತ್ಪಾದನೆಗೆ ಪಾಕಿಸ್ತಾನವೇ ಮೂಲ, ಅದು ಸೃಷ್ಟಿಯಾಗಿದ್ದು ವಿರೋಧ ಪಕ್ಷದ ತಪ್ಪಿನಿಂದ; ದೇಶ ವಿಭಜನೆಯಾಗದಿದ್ದರೆ, ಇಂದು ಪಾಕಿಸ್ತಾನ ಅಸ್ತಿತ್ವದಲ್ಲಿರುತ್ತಿರಲಿಲ್ಲ

ಇಂದು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗಿದೆ, ಆದರೆ ಭಾರತವಾಗಿಲ್ಲ. ಇದಕ್ಕೆ ಜವಾಹರಲಾಲ್ ನೆಹರು ಒಬ್ಬರೇ ಕಾರಣ

ಭಾರತೀಯ ಸೇನೆಯು ಡೋಕ್ಲಾಮ್‌ನಲ್ಲಿ ಚೀನಾದೊಂದಿಗೆ ಹೋರಾಡುತ್ತಿದ್ದಾಗ, ವಿರೋಧ ಪಕ್ಷದ ನಾಯಕರು ಚೀನೀ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದರು

2004ರಲ್ಲಿ, ವಿರೋಧ ಪಕ್ಷದ ಸರ್ಕಾರವು ಪೋಟಾ ಕಾನೂನನ್ನು ರದ್ದುಗೊಳಿಸುವ ಮೂಲಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ದುರ್ಬಲಗೊಳಿಸಿತು

ಮೋದಿ ಸರ್ಕಾರದ ಅವಧಿಯಲ್ಲಿ, ಕಾಶ್ಮೀರ ಕೇಂದ್ರಿತ ಘಟನೆಗಳನ್ನು ಹೊರತುಪಡಿಸಿ, ದೇಶದ ಉಳಿದ ಭಾಗಗಳಲ್ಲಿ ಯಾವುದೇ ದೊಡ್ಡ ಭಯೋತ್ಪಾದಕ ಘಟನೆ ನಡೆದಿಲ್ಲ

ನಿನ್ನೆಯವರೆಗೂ ಬೈಸರನ್‌ನ ಭಯೋತ್ಪಾದಕರು ಪಾಕಿಸ್ತಾನಕ್ಕೆ ಓಡಿಹೋದರು ಎಂದು ವಿರೋಧ ಪಕ್ಷ ಹೇಳುತ್ತಿತ್ತು, ಆದರೆ ನಾವು ಆ ಭಯೋತ್ಪಾದಕರನ್ನು ಮಟ್ಟಹಾಕಿದ್ದೇವೆ

ದಾವೂದ್ ಇಬ್ರಾಹಿಂ, ಸೈಯದ್ ಸಲಾವುದ್ದೀನ್, ಟೈಗರ್ ಮೆಮನ್, ಅನೀಸ್ ಇಬ್ರಾಹಿಂ, ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಮಿರ್ಜಾ ಸಾದಾ ಬೇಗ್... ಈ ಎಲ್ಲಾ ಭಯೋತ್ಪಾದಕರು ವಿರೋಧ ಪಕ್ಷದ ಆಡಳಿತಾವಧಿಯಲ್ಲಿಯೇ ದೇಶದಿಂದ ಪಲಾಯನ ಮಾಡಿದರು

2004-2014ರ 10 ವರ್ಷಗಳಲ್ಲಿ 7,217 ಭಯೋತ್ಪಾದಕ ಘಟನೆಗಳು ನಡೆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಇದು ಶೇ. 70ರಷ್ಟು ಕಡಿಮೆಯಾಗಿದೆ

370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿನ ಭಯೋತ್ಪಾದಕ ಪರಿಸರ ವ್ಯವಸ್ಥೆ ನಾಶವಾಗಿದೆ

ಹಿಂದೆ, ಭಯೋತ್ಪಾದಕರ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಜನಸಮೂಹ ಸೇರುತ್ತಿತ್ತು, ಇಂದು ಭಯೋತ್ಪಾದಕರನ್ನು ಎಲ್ಲೇ ಹತ್ಯೆಗೈದರೂ ಅಲ್ಲೇ ಹೂಳಲಾಗುತ್ತದೆ

ವಿರೋಧ ಪಕ್ಷದ ಸರ್ಕಾರದ ಅವಧಿಯಲ್ಲಿ, ಒಂದು ವರ್ಷದಲ್ಲಿ 2,654 ಕಲ್ಲು ತೂರಾಟದ ಘಟನೆಗಳು ನಡೆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಅದರ ಸಂಖ್ಯೆ ಶೂನ್ಯವಾಗಿದೆ

ವಿರೋಧ ಪಕ್ಷದ ಸರ್ಕಾರದ ಅವಧಿಯಲ್ಲಿ, ಪಾಕ್ ಪ್ರಾಯೋಜಿತ ಬಂದ್‌ಗಳಿಂದಾಗಿ ಕಣಿವೆಯು ವರ್ಷದಲ್ಲಿ 132 ದಿನಗಳ ಕಾಲ ಮುಚ್ಚಿರುತ್ತಿತ್ತು, ಮೋದಿ ಸರ್ಕಾರದ ಕಳೆದ ಮೂರು ವರ್ಷಗಳಲ್ಲಿ ಕಣಿವೆಯಲ್ಲಿ ಒಂದೇ ಒಂದು ಬಂದ್ ನಡೆದಿಲ್ಲ

2019ರ ನಂತರ, ಮೋದಿ ಸರ್ಕಾರವು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಪೋಷಿಸುತ್ತಿದ್ದ ಹಲವು ಸಂಘಟನೆಗಳನ್ನು ನಿಷೇಧಿಸಿದೆ

ನಮ್ಮ ಗಡಿಯೊಳಗೆ ನುಸುಳಿದವನು ಹತನಾಗುತ್ತಾನೆ, ನಾವು ಭಯೋತ್ಪಾದನೆಯನ್ನು ಕೊನೆಗಾಣಿಸುತ್ತೇವೆ

ಪೋಟಾ ರದ್ದುಗೊಳಿಸಿದವರಿಗೆ ಮತ್ತು ಭಯೋತ್ಪಾದಕರನ್ನು ಸಮರ್ಥಿಸಿ ವೋಟ್ ಬ್ಯಾಂಕ್ ರಾಜಕೀಯ ಮಾಡುವವರಿಗೆ ಮೋದಿಜೀಯವರ ಭಯೋತ್ಪಾದನಾ-ವಿರೋಧಿ ನೀತಿ ಇಷ್ಟವಾಗುವುದಿಲ್ಲ

ಪಹಲ್ಗಾಮ್ ದಾಳಿಯ ನಂತರ ಬಿಹಾರದಲ್ಲಿ ಮೋದಿ ಅವರ ಭಾಷಣವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ 140 ಕೋಟಿ ಜನರ ಸೇಡು, ಇದು ವಿರೋಧ ಪಕ್ಷಕ್ಕೆ ಕಾಣುವುದಿಲ್ಲ... ನೀವು ಧರಿಸುವ ಕನ್ನಡಕದ ಮೇಲೆ ನಿಮ್ಮ ದೃಷ್ಟಿ ನಿಂತಿರುತ್ತದೆ

ವಿರೋಧ ಪಕ್ಷದ ಸರ್ಕಾರದಂತೆ, ಮೋದಿ ಸರ್ಕಾರವು ಭಯೋತ್ಪಾದಕರಿಗೆ ಆಶ್ರಯ ನೀಡುವವರಿಗೆ 'ಬಲಿಪಶು' ಪ್ರಮಾಣಪತ್ರ ನೀಡುವುದಿಲ್ಲ

 

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ದೃಢ, ಯಶಸ್ವಿ ಮತ್ತು ನಿರ್ಣಾಯಕ ಪ್ರತ್ಯುತ್ತರವಾದ ‘ಆಪರೇಷನ್ ಸಿಂಧೂರ’ ಕುರಿತು ಇಂದು ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದರು

ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಪಹಲ್ಗಾಮ್ ನಲ್ಲಿ ಧರ್ಮದ ಆಧಾರದ ಮೇಲೆ ನಿರಪರಾಧಿ ನಾಗರಿಕರನ್ನು ಹತ್ಯೆಗೈದಿದ್ದನ್ನು ತೀವ್ರವಾಗಿ ಖಂಡಿಸಿದರು ಮತ್ತು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಇದೇ ವೇಳೆ, ‘ಆಪರೇಷನ್ ಸಿಂಧೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ನಾಗರಿಕ ಗುರಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಭಾರತೀಯ ನಾಗರಿಕರಿಗೂ ಅವರು ಆಳವಾದ ಸಂತಾಪವನ್ನು ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವರು ನಿನ್ನೆ ಕಾಶ್ಮೀರದ ದಾಚಿಗಾಮ್ ನಲ್ಲಿ ಭಾರತೀಯ ಸೇನೆ, ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಾದ ಆಪರೇಷನ್ ಮಹಾದೇವ್‌ ನಲ್ಲಿ ಮೂವರು ಭಯೋತ್ಪಾದಕರಾದ - ಸುಲೇಮಾನ್, ಹಮ್ಜಾ ಅಫ್ಘಾನಿ (ಅಫ್ಘಾನ್) ಮತ್ತು ಜಿಬ್ರಾನ್ - ಹತ್ಯೆ ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು. ಸುಲೇಮಾನ್ ಲಷ್ಕರ್-ಎ-ತೊಯ್ಬಾದ 'ಎ' ವರ್ಗದ ಕಮಾಂಡರ್ ಆಗಿದ್ದು, ಪಹಲ್ಗಾಮ್ ಮತ್ತು ಗಗನ್‌ ಗಿರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಅಫ್ಘಾನ್ ಮತ್ತು ಜಿಬ್ರಾನ್ ಕೂಡ ಲಷ್ಕರ್-ಎ-ತೊಯ್ಬಾದ 'ಎ' ವರ್ಗದ ಭಯೋತ್ಪಾದಕರಾಗಿದ್ದು, ಬೈಸರನ್ ಕಣಿವೆಯಲ್ಲಿ ನಮ್ಮ ಅಮಾಯಕ ನಾಗರಿಕರನ್ನು ಕೊಂದಿದ್ದ. ಈ ಮೂವರು ಭಯೋತ್ಪಾದಕರನ್ನು ನಿನ್ನೆ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು. ಈ ಯಶಸ್ವಿ ಕಾರ್ಯಾಚರಣೆಗಾಗಿ ಸೇನೆಯ 4 ಪ್ಯಾರಾ, ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಯೋಧರನ್ನು ಸದನದ ಮತ್ತು ಇಡೀ ರಾಷ್ಟ್ರದ ಪರವಾಗಿ ಗೃಹ ಸಚಿವರು ಅಭಿನಂದಿಸಿದರು.

'ಆಪರೇಷನ್ ಮಹಾದೇವ್' ಅನ್ನು ಮೇ 22, 2025 ರಂದು ಪ್ರಾರಂಭಿಸಲಾಯಿತು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಪಹಲ್ಗಾಮ್ ದಾಳಿಯು ಏಪ್ರಿಲ್ 22, 2025 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಿತು ಮತ್ತು ಅದೇ ದಿನ ಸಂಜೆ 5:30ಕ್ಕೆ ತಾವೇ ಖುದ್ದಾಗಿ ಶ್ರೀನಗರವನ್ನು ತಲುಪಿದ್ದಾಗಿ ಅವರು ಹೇಳಿದರು. "ಏಪ್ರಿಲ್ 23 ರಂದು ಭದ್ರತಾ ಸಭೆಯನ್ನು ನಡೆಸಲಾಯಿತು. ಇದರಲ್ಲಿ ಎಲ್ಲಾ ಭದ್ರತಾ ಪಡೆಗಳು, ಸೇನೆ, ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾಗಿಯಾಗಿದ್ದರು. ಈ ಸಭೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಉಗ್ರರು ದೇಶವನ್ನು ತೊರೆದು ಪಾಕಿಸ್ತಾನಕ್ಕೆ ಪಲಾಯನ ಮಾಡದಂತೆ ತಡೆಯಲು ನಿರ್ಧರಿಸಲಾಯಿತು. ಇದಕ್ಕಾಗಿ ನಾವು ಬಿಗಿ ಭದ್ರತಾ ವ್ಯವಸ್ಥೆ ಮಾಡಿ, ಅವರು ದೇಶದಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಲಿಲ್ಲ," ಎಂದು ಅವರು ವಿವರಿಸಿದರು. ಅವರು ಮುಂದುವರಿಸಿ, "ಮೇ 22, 2025 ರಂದು, ಮಾನವ ಗುಪ್ತಚರ ಮಾಹಿತಿ  ಮೂಲಕ ದಾಚಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಇಲಾಖೆಗೆ (ಐಬಿ) ಮಾಹಿತಿ ಲಭಿಸಿತು. ದಾಚಿಗಾಮ್‌ನಲ್ಲಿ ಅಲ್ಟ್ರಾ ಸಿಗ್ನಲ್‌ ಗಳನ್ನು ಸೆರೆಹಿಡಿಯಲು ನಮ್ಮ ಏಜೆನ್ಸಿಗಳು ತಯಾರಿಸಿದ ಉಪಕರಣಗಳ ಮೂಲಕ ಬಂದ ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಮೇ 22 ರಿಂದ ಜುಲೈ 22 ರವರೆಗೆ ಐಬಿ ಮತ್ತು ಸೇನೆಯು ನಿರಂತರ ಪ್ರಯತ್ನಗಳನ್ನು ನಡೆಸಿದವು. ಅವರ ಸಿಗ್ನಲ್‌ ಗಳನ್ನು ಗ್ರಹಿಸಲು ಐಬಿ, ಸೇನೆ ಮತ್ತು ಸಿ ಆರ್‌ ಪಿ ಎಫ್ ನ ನಮ್ಮ ಅಧಿಕಾರಿಗಳು ಮತ್ತು ಯೋಧರು, ಅತಿಯಾದ ಚಳಿ ಹಾಗೂ ಎತ್ತರದ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಿದ್ದರು," ಎಂದರು. "ಜುಲೈ 22 ರಂದು, ಸೆನ್ಸರ್‌ಗಳ ಮೂಲಕ ನಮಗೆ ಯಶಸ್ಸು ಸಿಕ್ಕಿತು ಮತ್ತು ಭಯೋತ್ಪಾದಕರ ಇರುವಿಕೆ ಖಚಿತವಾಯಿತು. ನಂತರ 4 ಪ್ಯಾರಾ ನೇತೃತ್ವದಲ್ಲಿ ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಒಟ್ಟಾಗಿ ಭಯೋತ್ಪಾದಕರನ್ನು ಸುತ್ತುವರೆದರು. ನಮ್ಮ ನಿರಪರಾಧಿ ನಾಗರಿಕರನ್ನು ಕೊಂದಿದ್ದ ಆ ಮೂವರೂ ಉಗ್ರರನ್ನು ನಿನ್ನೆಯ (ಜುಲೈ 28) ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಯಿತು," ಎಂದು ಸಚಿವರು ಹೇಳಿದರು.

ಈ ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ದಳ (NIA) ಈಗಾಗಲೇ ಬಂಧಿಸಿದೆ ಎಂದು ಶ್ರೀ ಅಮಿತ್ ಶಾ ಸದನಕ್ಕೆ ತಿಳಿಸಿದರು. "ಈ ಮೂವರು ಉಗ್ರರ ಮೃತದೇಹಗಳನ್ನು ಶ್ರೀನಗರಕ್ಕೆ ತಂದಾಗ, ನಾಲ್ವರು ಅವರನ್ನು ಗುರುತಿಸಿ, ಪಹಲ್ಗಾಮ್ ನಲ್ಲಿ ಭಯೋತ್ಪಾದಕ ಕೃತ್ಯ ಎಸಗಿದ್ದು ಇದೇ ಉಗ್ರರು ಎಂದು ದೃಢಪಡಿಸಿದರು. ಇದರ ನಂತರ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸ್ಥಳದಲ್ಲಿ ಪತ್ತೆಯಾದ ಕಾಡತೂಸುಗಳ ವಿಧಿವಿಜ್ಞಾನ ಪ್ರಯೋಗಾಲಯ (FSL) ವರದಿಯ ಆಧಾರದ ಮೇಲೆ, ದಚಿಗಾಮ್ ನಲ್ಲಿ ಈ ಮೂವರು ಉಗ್ರರಿಂದ ವಶಪಡಿಸಿಕೊಂಡ ಮೂರು ರೈಫಲ್‌ಗಳೊಂದಿಗೆ ಹೋಲಿಕೆ ಮಾಡಲಾಯಿತು," ಎಂದು ಅವರು ಹೇಳಿದರು. "ನಿನ್ನೆ ರಾತ್ರಿ (ಜುಲೈ 28) ಈ ಮೂರು ರೈಫಲ್‌ ಗಳನ್ನು ವಿಶೇಷ ವಿಮಾನದ ಮೂಲಕ ಚಂಡೀಗಢಕ್ಕೆ ಸಾಗಿಸಿ, ಅವುಗಳಿಂದ ಗುಂಡು ಹಾರಿಸಿ ಖಾಲಿ ಕಾಡತೂಸುಗಳನ್ನು ಸಿದ್ಧಪಡಿಸಲಾಯಿತು. ನಂತರ, ಪಹಲ್ಗಾಮ್ ದಾಳಿಯಲ್ಲಿ ಸಿಕ್ಕಿದ ಕಾಡತೂಸುಗಳನ್ನು, ಈ ರೈಫಲ್‌ ಗಳ ಬ್ಯಾರೆಲ್ ಮತ್ತು ಹೊಸದಾಗಿ ಹಾರಿಸಿದ ಕಾಡತೂಸುಗಳೊಂದಿಗೆ ಹೋಲಿಸಲಾಯಿತು. ನಮ್ಮ ನಿರಪರಾಧಿ ನಾಗರಿಕರನ್ನು ಪಹಲ್ಗಾಮ್ ನಲ್ಲಿ ಹತ್ಯೆ ಮಾಡಿದ್ದು ಇದೇ ಮೂರು ರೈಫಲ್‌ಗಳಿಂದ ಎಂಬುದು ಆಗ ಖಚಿತವಾಯಿತು," ಎಂದು ಅವರು ವಿವರಿಸಿದರು.

"‘ಆಪರೇಷನ್ ಸಿಂಧೂರ’ದ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ಸೂತ್ರಧಾರರನ್ನು ಮಟ್ಟಹಾಕುವ ಕೆಲಸ ಮಾಡಿದರು ಮತ್ತು ನಿನ್ನೆ ನಮ್ಮ ಸೇನೆ ಹಾಗೂ ಸಿ ಆರ್‌ ಪಿ ಎಫ್ ಆ ಮೂವರು ಭಯೋತ್ಪಾದಕರನ್ನೂ ಸಹ ಹತ್ಯೆಗೈದಿವೆ," ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. "‘ಆಪರೇಷನ್ ಮಹಾದೇವ್’ ನಮ್ಮ ದೇಶದ ಸೇನೆ, ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಒಂದು ಅತಿದೊಡ್ಡ ಜಂಟಿ ಯಶಸ್ಸಾಗಿದ್ದು, ಇದರ ಬಗ್ಗೆ ದೇಶದ 140 ಕೋಟಿ ಜನ ಹೆಮ್ಮೆ ಪಡುತ್ತಾರೆ," ಎಂದರು. ಭಯೋತ್ಪಾದಕ ದಾಳಿಯ ನಂತರ ತಾವೇ ಖುದ್ದಾಗಿ ಪಹಲ್ಗಾಮ್‌ ಗೆ ತೆರಳಿ ಮೃತರ ಕುಟುಂಬಗಳನ್ನು ಭೇಟಿ ಮಾಡಿದ್ದಾಗಿ ಅವರು ತಿಳಿಸಿದರು. "'ಆಪರೇಷನ್ ಸಿಂಧೂರ’ದ ಮೂಲಕ ಭಯೋತ್ಪಾದಕರನ್ನು ಕಳುಹಿಸಿದವರನ್ನು ಪ್ರಧಾನಮಂತ್ರಿ ಮೋದಿ ಅವರು ಮಟ್ಟಹಾಕಿದರೆ, ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ನಮ್ಮ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ‘ಆಪರೇಷನ್ ಸಿಂಧೂರ’ದ ಮೂಲಕ ಭಯೋತ್ಪಾದಕರಿಗೆ ಮತ್ತು ಅವರ ಸೂತ್ರಧಾರರಿಗೆ ಎಂತಹ ಪಾಠ ಕಲಿಸಲಾಗಿದೆ ಎಂದರೆ, ಮುಂಬರುವ ದೀರ್ಘಕಾಲದವರೆಗೆ ಇಂತಹ ಕೃತ್ಯವೆಸಗಲು ಯಾರೂ ಧೈರ್ಯ ಮಾಡುವುದಿಲ್ಲ," ಎಂದು ಅವರು ಹೇಳಿದರು.

"ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಲಷ್ಕರ್ ಮತ್ತು ಅದರ ಅಂಗಸಂಸ್ಥೆಯಾದ ಟಿ ಆರ್ ಎಫ್ ಹೊತ್ತುಕೊಂಡ ದಿನವೇ, ಈ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ನಡೆಸಲಿದೆ ಎಂದು ನಾವು ನಿರ್ಧರಿಸಿದ್ದೆವು," ಎಂದು ಶ್ರೀ ಅಮಿತ್ ಶಾ ಹೇಳಿದರು. "ಭಯೋತ್ಪಾದಕ ಪ್ರಕರಣಗಳನ್ನು ವೈಜ್ಞಾನಿಕವಾಗಿ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಎನ್‌ ಐ ಎ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟ ಸಂಸ್ಥೆಯಾಗಿ ಪರಿಣತಿ ಹೊಂದಿದೆ ಮತ್ತು ಎನ್ ಐ ಎಯ ಶಿಕ್ಷೆಯ ಪ್ರಮಾಣವು ಶೇ. 96ಕ್ಕಿಂತ ಹೆಚ್ಚಿದೆ," ಎಂದು ಅವರು ತಿಳಿಸಿದರು.

ಅಲ್ಲದೆ "ಪಹಲ್ಗಾಮ್ ದಾಳಿಯ ತನಿಖೆಯನ್ನು ತಕ್ಷಣವೇ ಎ ನ್ ಐ ಎಗೆ ಹಸ್ತಾಂತರಿಸಲಾಯಿತು. ಈ ಭಯೋತ್ಪಾದಕರು ದೇಶವನ್ನು ಬಿಟ್ಟು ಪಾಕಿಸ್ತಾನಕ್ಕೆ ಪರಾರಿಯಾಗದಂತೆ ಸೇನೆ, ಬಿ ಎಸ್ ಎಫ್, ಸಿ ಆರ್‌ ಪಿ ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಂಪೂರ್ಣ ವ್ಯವಸ್ಥೆ ಮಾಡಿದ್ದರು," ಎಂದರು. ದಾಳಿಯ ತನಿಖೆಯ ಆರಂಭದಲ್ಲಿ ಮೃತರ ಕುಟುಂಬಗಳೊಂದಿಗೆ ಚರ್ಚಿಸಲಾಯಿತು; ಪ್ರವಾಸಿಗರು, ಹೇಸರಗತ್ತೆ ಮಾಲೀಕರು, ಕುದುರೆ ಮಾಲೀಕರು, ಛಾಯಾಗ್ರಾಹಕರು, ನೌಕರರು ಮತ್ತು ಅಂಗಡಿ ಕಾರ್ಮಿಕರು ಸೇರಿದಂತೆ ಒಟ್ಟು 1055 ಜನರನ್ನು 3000 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು ಮತ್ತು ಇದೆಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು. "ವಿಚಾರಣೆಯಿಂದ ಲಭ್ಯವಾದ ಮಾಹಿತಿಯ ಆಧಾರದ ಮೇಲೆ, ಭಯೋತ್ಪಾದಕರ ರೇಖಾಚಿತ್ರಗಳನ್ನು ರಚಿಸಲಾಯಿತು. ಪಹಲ್ಗಾಮ್ ದಾಳಿಯ ಮರುದಿನ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಬಶೀರ್ ಮತ್ತು ಪರ್ವೇಜ್ ಅವರನ್ನು ಜೂನ್ 22, 2025 ರಂದು ಗುರುತಿಸಲಾಯಿತು," ಎಂದು ಶ್ರೀ ಶಾ ಮಾಹಿತಿ ನೀಡಿದರು. "ಬಶೀರ್ ಮತ್ತು ಪರ್ವೇಜ್ ಅವರನ್ನು ಬಂಧಿಸಲಾಯಿತು. ಏಪ್ರಿಲ್ 21, 2025ರ ರಾತ್ರಿ 8 ಗಂಟೆಗೆ ಮೂವರು ಭಯೋತ್ಪಾದಕರು ತಮ್ಮ ಬಳಿ ಬಂದಿದ್ದರು ಮತ್ತು ಅವರ ಬಳಿ ಎಕೆ 47 ಹಾಗೂ ಎಂ9 ಕಾರ್ಬೈನ್ ಇದ್ದವು ಎಂದು ಅವರು ವಿಚಾರಣೆ ವೇಳೆ ಬಹಿರಂಗಪಡಿಸಿದರು," ಎಂದರು. "ಬಶೀರ್ ಮತ್ತು ಪರ್ವೇಜ್ ಅವರ ತಾಯಿಯೂ ಸಹ ಹತರಾದ ಮೂವರು ಉಗ್ರರನ್ನು ಗುರುತಿಸಿದ್ದಾರೆ ಮತ್ತು ಈಗ ವಿಧಿವಿಜ್ಞಾನ ಪ್ರಯೋಗಾಲಯವೂ (FSL) ಇದನ್ನು ಖಚಿತಪಡಿಸಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರು ಇವರೇ ಆಗಿದ್ದು, ಅವರಿಂದ ವಶಪಡಿಸಿಕೊಂಡ 2 ಎಕೆ 47 ಮತ್ತು ಒಂದು ಎಂ9 ಕಾರ್ಬೈನ್ ಅನ್ನು ಈ ದಾಳಿಯಲ್ಲಿ ಬಳಸಲಾಗಿತ್ತು," ಎಂದು ಶ್ರೀ ಶಾ ಹೇಳಿದರು.

"ನಿನ್ನೆ (ಜುಲೈ 28) ದೇಶದ ಮಾಜಿ ಗೃಹ ಸಚಿವರು 'ಈ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿದ್ದರೇ?' ಎಂದು ಪ್ರಶ್ನೆ ಎತ್ತಿದ್ದರು," ಎಂದು ಕೇಂದ್ರ ಗೃಹ ಸಚಿವರು ಹೇಳಿದರು. "ಈ ಮೂವರೂ ಪಾಕಿಸ್ತಾನಿಯರು ಎಂಬುದಕ್ಕೆ ನಮ್ಮ ಬಳಿ ಎಲ್ಲಾ ಸಾಕ್ಷ್ಯಗಳಿವೆ. ಏಕೆಂದರೆ, ಮೂವರಲ್ಲಿ ಇಬ್ಬರು ಭಯೋತ್ಪಾದಕರ ಪಾಕಿಸ್ತಾನಿ ಮತದಾರರ ಸಂಖ್ಯೆಗಳು ಲಭ್ಯವಿವೆ, ರೈಫಲ್‌ಗಳು ಲಭ್ಯವಿವೆ ಮತ್ತು ಅವರ ಬಳಿ ಸಿಕ್ಕಿದ ಚಾಕೊಲೇಟ್‌ ಗಳು ಕೂಡ ಪಾಕಿಸ್ತಾನದಲ್ಲೇ ತಯಾರಾಗಿದ್ದವು," ಎಂದು ಅವರು ವಿವರಿಸಿದರು. "ದೇಶದ ಮಾಜಿ ಗೃಹ ಸಚಿವರು ಇಡೀ ಪ್ರಪಂಚದ ಮುಂದೆ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಹೀಗೆ ಮಾಡುವ ಮೂಲಕ, 'ನಾವು ಪಾಕಿಸ್ತಾನದ ಮೇಲೆ ಏಕೆ ದಾಳಿ ಮಾಡಿದೆವು?' ಎಂಬ ಪ್ರಶ್ನೆಯನ್ನೂ ಅವರು ಎತ್ತುತ್ತಿದ್ದಾರೆ," ಎಂದು ಶ್ರೀ ಶಾ ಹೇಳಿದರು. "ನಮ್ಮ ಸಂಸದರು ಎಲ್ಲಿಗೆ ಹೋದರೂ, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನವೇ ಮಾಡಿದೆ ಎಂದು ಇಡೀ ವಿಶ್ವ ಒಪ್ಪಿಕೊಂಡಿದೆ" ಎಂದು ಶ್ರೀ ಶಾ ಹೇಳಿದರು. ದೇಶದ ಮಾಜಿ ಗೃಹ ಸಚಿವರು ಇದಕ್ಕೆ ಪುರಾವೆ ಕೇಳುತ್ತಾರೆ, ಆದರೆ ಇಂದು ದೇಶದ 140 ಕೋಟಿ ಜನರಿಗೆ ಪಾಕಿಸ್ತಾನವನ್ನು ಸಮರ್ಥಿಸುವ ಅವರ ಪಿತೂರಿಯ ಬಗ್ಗೆ ತಿಳಿದಿದೆ ಎಂದು ಅವರು ಹೇಳಿದರು.

ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಗೆ ಮಾಹಿತಿ ನೀಡಿದಂತೆ, 2025ರ ಏಪ್ರಿಲ್ 22ರಂದು ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ 25 ಮಂದಿ ಭಾರತೀಯ ನಾಗರಿಕರು ಮತ್ತು ಒಬ್ಬರು ನೇಪಾಳದ ಪ್ರಜೆ ಆಗಿದ್ದರು. ದಾಳಿಯ ನಂತರ ತಾವು ತಕ್ಷಣ ಶ್ರೀನಗರಕ್ಕೆ ತೆರಳಿ, ಭದ್ರತಾ ಪಡೆಗಳು ಮತ್ತು ಎಲ್ಲಾ ಏಜೆನ್ಸಿಗಳೊಂದಿಗೆ ರಾತ್ರಿ ಸಭೆ ನಡೆಸಿದೆ ಎಂದು ಅವರು ತಿಳಿಸಿದರು. ಈ ಸಭೆಯಲ್ಲಿ, ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರು ದೇಶದಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು ಎಂದು ಹೇಳಿದರು. ಪ್ರಧಾನಮಂತ್ರಿ ಮೋದಿ ಅವರು ಏಪ್ರಿಲ್ 23 ಮತ್ತು ಏಪ್ರಿಲ್ 30ರಂದು ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (CCS) ಸಭೆಗಳ ಅಧ್ಯಕ್ಷತೆ ವಹಿಸಿದ್ದರು ಎಂದು ಶಾ ಮಾಹಿತಿ ನೀಡಿದರು. ಏಪ್ರಿಲ್ 23ರ ಸಭೆಯಲ್ಲಿ, ಪ್ರಧಾನಮಂತ್ರಿ ಮೋದಿ ತೆಗೆದುಕೊಂಡ ಮೊದಲ ಕ್ರಮವೆಂದರೆ ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸುವುದು. ಇದರ ನಂತರ, ಅತ್ತಾರಿ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಸಂಯೋಜಿತ ಚೆಕ್ ಪೋಸ್ಟ್ ಅನ್ನು ಮುಚ್ಚಲಾಯಿತು, ಎಲ್ಲಾ ಪಾಕಿಸ್ತಾನಿ ನಾಗರಿಕರ ಸಾರ್ಕ್ ವೀಸಾಗಳನ್ನು ಅಮಾನತುಗೊಳಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಯಿತು, ಮತ್ತು ಪಾಕಿಸ್ತಾನಿ ಹೈಕಮಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಕ್ಷಣಾ, ಮಿಲಿಟರಿ ಮತ್ತು ನೌಕಾ ಸಲಹೆಗಾರರನ್ನು ವ್ಯಕ್ತಿ ಅಮಾನ್ಯ (persona non grata) ಎಂದು ಘೋಷಿಸಲಾಯಿತು. ಅವರ ಸಂಖ್ಯೆಯನ್ನು 55 ರಿಂದ 30ಕ್ಕೆ ಇಳಿಸಲಾಯಿತು. ಈ ಭಯೋತ್ಪಾದಕರು ಎಲ್ಲೆಲ್ಲಿ ಅಡಗಿದ್ದಾರೋ ಮತ್ತು ಅವರಿಗೆ ತರಬೇತಿ ನೀಡುವವರಿಗೆ, ಸೈನ್ಯ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿ ಆರ್‌ಪಿ ಎಫ್ ಮತ್ತು ಬಿ ಎಸ್ ಎಫ್‌ ನಿಂದ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಿ ಸಿ ಎಸ್ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಅವರು ತಿಳಿಸಿದರು.

ನಮ್ಮ ಸೇನೆಯು ಕೈಗೊಂಡ ಪ್ರತೀಕಾರದ ಕ್ರಮಗಳಿಗಿಂತ ಹೆಚ್ಚು ಸಂಯಮದ ಕ್ರಮ ಮತ್ತೊಂದಿರಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. "ನಮ್ಮ ಸೇನೆಯು ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಿದೆ ಮತ್ತು ಭಾರತದ ಈ ಕ್ರಮಗಳಲ್ಲಿ ಒಬ್ಬನೇ ಒಬ್ಬ ನಾಗರಿಕನೂ ಹತನಾಗಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು. ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಏರ್ ಸ್ಟ್ರೈಕ್’ ಎರಡರಲ್ಲೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಮಾತ್ರ ದಾಳಿ ನಡೆಸಲಾಗಿತ್ತು ಎಂದು ಅವರು ಉಲ್ಲೇಖಿಸಿದರು. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದೇ ಎಂದು ಅವರು ಒತ್ತಿ ಹೇಳಿದರು. "ಆದರೆ ಈ ಬಾರಿ, ‘ಆಪರೇಷನ್ ಸಿಂಧೂರ’ದ ಅಡಿಯಲ್ಲಿ ನಾವು ಪಾಕಿಸ್ತಾನದೊಳಗೆ 100 ಕಿಲೋಮೀಟರ್‌ ಗೂ ಹೆಚ್ಚು ಪ್ರವೇಶಿಸಿ ಭಯೋತ್ಪಾದಕರನ್ನು ಮಟ್ಟಹಾಕಿದ್ದೇವೆ," ಎಂದು ಹೇಳಿದರು. ಪಾಕಿಸ್ತಾನದೊಳಗೆ ಇರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ಭಾರತೀಯ ಪಡೆಗಳು ನಡೆಸಿದ ದಾಳಿಯಲ್ಲಿ, ಅನೇಕ ಕುಖ್ಯಾತ ಮತ್ತು ಅಪಾಯಕಾರಿ ಉಗ್ರರು ಹತರಾಗಿದ್ದಾರೆ. ವಿರೋಧ ಪಕ್ಷದ ಸರ್ಕಾರದ ಅವಧಿಯಲ್ಲಿ, ಭಾರತದ ನೆಲದ ಮೇಲೆ ಭಯೋತ್ಪಾದಕ ದಾಳಿಗಳ ನಂತರ ಅನೇಕ ಭಯೋತ್ಪಾದಕರು ತಲೆಮರೆಸಿಕೊಂಡಿದ್ದರು, ಇದೀಗ ನಮ್ಮ ಸೇನೆ ಅವರನ್ನು ಒಬ್ಬೊಬ್ಬರಾಗಿ ಮುಗಿಸಿದೆ ಎಂದು ಶ್ರೀ ಶಾ ಹೇಳಿದರು. ‘ಆಪರೇಷನ್ ಸಿಂಧೂರ’ದ ಅಡಿಯಲ್ಲಿ ಕನಿಷ್ಠ 125 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಸೇರಿಸಿದರು.

"ಮೇ 7 ರಂದು ಬೆಳಗಿನ ಜಾವ 1:22ಕ್ಕೆ, ನಮ್ಮ ಡಿಜಿಎಂಒ (ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರು) ಅವರು ಪಾಕಿಸ್ತಾನದ ಡಿಜಿಎಂಒಗೆ ಮಾಹಿತಿ ನೀಡಿ, ನಾವು ನಮ್ಮ ಸ್ವರಕ್ಷಣೆಯ ಹಕ್ಕಿನ ಅನ್ವಯ ಕೇವಲ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ಪ್ರಧಾನ ಕಚೇರಿಗಳ ಮೇಲೆ ಮಾತ್ರ ದಾಳಿ ಮಾಡಿದ್ದೇವೆ ಎಂದು ತಿಳಿಸಿದರು," ಎಂದು ಗೃಹ ಸಚಿವರು ಹೇಳಿದರು. "ಇಂದು ದೇಶದಲ್ಲಿರುವುದು ನರೇಂದ್ರ ಮೋದಿಯವರ ಸರ್ಕಾರ. ಅವರು ನಮ್ಮ ಮೇಲೆ ದಾಳಿ ಮಾಡಲು ಬಂದು, ನಾವು ಸುಮ್ಮನೆ ಕುಳಿತು ಚರ್ಚಿಸುವ ಕಾಲ ಮುಗಿದಿದೆ," ಎಂದು ಅವರು ಸ್ಪಷ್ಟಪಡಿಸಿದರು. "ಉರಿ ಭಯೋತ್ಪಾದಕ ದಾಳಿಯ ನಂತರ ನಾವು ಸರ್ಜಿಕಲ್ ಸ್ಟ್ರೈಕ್ ನಡೆಸಿದೆವು; ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಏರ್ ಸ್ಟ್ರೈಕ್ ಮಾಡಿದೆವು; ಮತ್ತು ಈಗ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ನಾವು ಪಾಕಿಸ್ತಾನದ ಗಡಿಯೊಳಗೆ 100 ಕಿಲೋಮೀಟರ್‌ ಗೂ ಹೆಚ್ಚು ನುಗ್ಗಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳು ಮತ್ತು 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ್ದೇವೆ," ಎಂದು ಶ್ರೀ ಶಾ ಹೇಳಿದರು.

"ನಾವು ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಿದೆವು. ಆದರೆ ಪಾಕಿಸ್ತಾನವು ಇದನ್ನು ತನ್ನ ಮೇಲಿನ ದಾಳಿ ಎಂದು ಪರಿಗಣಿಸಿ, ತನಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲ ಎಂದು ಇಡೀ ಜಗತ್ತಿಗೆ ಹೇಳಿಕೊಳ್ಳಲು ಪ್ರಾರಂಭಿಸಿತು," ಎಂದು ಶ್ರೀ ಅಮಿತ್ ಶಾ ಹೇಳಿದರು. "ಆದರೆ, ಯಾವಾಗ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರೋ, ಆಗ ಪಾಕಿಸ್ತಾನವು 'ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಕೇಂದ್ರ' ಎಂಬುದು ಇಡೀ ವಿಶ್ವದ ಮುಂದೆ ಬಯಲಾಯಿತು," ಎಂದು ಅವರು ಹೇಳಿದರು. "ಮೇ 8 ರಂದು, ಪಾಕಿಸ್ತಾನವು ನಮ್ಮ ವಸತಿ ಪ್ರದೇಶಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿ, ಒಂದು ಗುರುದ್ವಾರಕ್ಕೆ ಹಾನಿಯುಂಟುಮಾಡಿತು, ಒಂದು ದೇವಸ್ಥಾನವನ್ನು ಧ್ವಂಸಗೊಳಿಸಿತು ಮತ್ತು ನಮ್ಮ ನಾಗರಿಕರ ಸಾವುನೋವಿಗೂ ಕಾರಣವಾಯಿತು," ಎಂದು ಶ್ರೀ ಶಾ ಹೇಳಿದರು. "ಇದಕ್ಕೆ ಪ್ರತಿಯಾಗಿ, ಮರುದಿನವೇ ಭಾರತೀಯ ವಾಯುಪಡೆಯು ಪಾಕಿಸ್ತಾನದ 11 ವಾಯುನೆಲೆಗಳಿಗೆ ಹಾನಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು" ಎಂದು ಅವರು ತಿಳಿಸಿದರು.

"ಪಾಕಿಸ್ತಾನವು ನಮ್ಮ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿತು, ಆದರೆ ನಾವು ಎಂದಿಗೂ ಪಾಕಿಸ್ತಾನದ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಲಿಲ್ಲ," ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. "ಭಾರತವು ಕೇವಲ ಪಾಕಿಸ್ತಾನದ ವಾಯುನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಮಾತ್ರ ಗುರಿಯಾಗಿಸಿಕೊಂಡು, ಅವರ ದಾಳಿ ಮಾಡುವ ಸಾಮರ್ಥ್ಯವನ್ನು ಕುಗ್ಗಿಸಿತು," ಎಂದು ಅವರು ಹೇಳಿದರು. "ಇದರ ನಂತರ, ಪಾಕಿಸ್ತಾನಕ್ಕೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಅದಕ್ಕಾಗಿಯೇ ಮೇ 10 ರಂದು ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒಗೆ ದೂರವಾಣಿ ಕರೆ ಮಾಡಿದರು ಮತ್ತು ಸಂಜೆ 5 ಗಂಟೆಗೆ, ನಾವು ಸಂಘರ್ಷವನ್ನು ಕೊನೆಗೊಳಿಸಲು ಕದನ ವಿರಾಮ ಘೋಷಿಸಿದೆವು," ಎಂದು ಅವರು ಸೇರಿಸಿದರು. "ನಾವು ಇಷ್ಟು ಬಲಿಷ್ಠ ಸ್ಥಿತಿಯಲ್ಲಿದ್ದರೂ ಯುದ್ಧವನ್ನು ಏಕೆ ಮುಂದುವರಿಸಲಿಲ್ಲ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ," ಎಂದು ಶ್ರೀ ಶಾ ಹೇಳಿದರು. "ಆದರೆ, ಯುದ್ಧವು ಅನೇಕ ಪರಿಣಾಮಗಳನ್ನು ಹೊಂದಿರುತ್ತದೆ ಮತ್ತು ಅದರ ನಿರ್ಧಾರವನ್ನು ಬಹಳ ಆಲೋಚಿಸಿ ತೆಗೆದುಕೊಳ್ಳಬೇಕು," ಎಂದು ಅವರು ಉತ್ತರಿಸಿದರು. "ದೇಶದ ಇತಿಹಾಸವನ್ನು ನೋಡಿದರೆ, 1948ರಲ್ಲಿ ಕಾಶ್ಮೀರದಲ್ಲಿ ನಮ್ಮ ಪಡೆಗಳು ನಿರ್ಣಾಯಕ ಹಂತದಲ್ಲಿದ್ದವು. ಆದರೆ, ಸರ್ದಾರ್ ಪಟೇಲರ ವಿರೋಧದ ನಡುವೆಯೂ ಜವಾಹರಲಾಲ್ ನೆಹರು ಅವರು ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದರು. ಇಂದು ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಅಸ್ತಿತ್ವದಲ್ಲಿದ್ದರೆ, ಅದಕ್ಕೆ ನೆಹರು ಅವರ ಆ ಕದನ ವಿರಾಮವೇ ಏಕೈಕ ಕಾರಣ," ಎಂದು ಅವರು ಹೇಳಿದರು. "ಅದೇ ರೀತಿ, 1960ರಲ್ಲಿ, ಸಿಂಧೂ ನದಿ ನೀರಿನ ವಿಷಯದಲ್ಲಿ ನಾವು ಭೌಗೋಳಿಕವಾಗಿ ಮತ್ತು ವ್ಯೂಹಾತ್ಮಕವಾಗಿ ಬಹಳ ಬಲಿಷ್ಠರಾಗಿದ್ದೆವು. ಆದರೂ, ಸರ್ದಾರ್ ಪಟೇಲರ ವಿರೋಧದ ನಡುವೆಯೂ, ನೆಹರು ಅವರು ಸಿಂಧೂ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿ, ಭಾರತದ ಶೇ. 80ರಷ್ಟು ನೀರನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು," ಎಂದು ಅವರು ಸೇರಿಸಿದರು.

ಶ್ರೀ ಅಮಿತ್ ಶಾ ಅವರು, 1965ರ ಯುದ್ಧದ ಸಮಯದಲ್ಲಿ, ನಾವು ಹಾಜಿ ಪೀರ್‌ ನಂತಹ ಕಾರ್ಯತಂತ್ರದ ಸ್ಥಳಗಳನ್ನು ವಶಪಡಿಸಿಕೊಂಡಿದ್ದೆವು, ಆದರೆ 1966ರಲ್ಲಿ ಅವುಗಳನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಿದೆವು ಎಂದು ಹೇಳಿದರು. 1971ರ ಯುದ್ಧದಲ್ಲಿ, ನಮ್ಮ ಬಳಿ 93,000 ಪಾಕಿಸ್ತಾನಿ ಯುದ್ಧ ಕೈದಿಗಳು ಮತ್ತು 15,000 ಚದರ ಕಿಲೋಮೀಟರ್ ಪಾಕಿಸ್ತಾನಿ ಭೂಪ್ರದೇಶ ನಮ್ಮ ನಿಯಂತ್ರಣದಲ್ಲಿತ್ತು ಎಂದು ಅವರು ತಿಳಿಸಿದರು. ಆದರೂ, ಆಗಿನ ಸರ್ಕಾರ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಡೆಯಲು ಮರೆತುಬಿಟ್ಟಿತು. ಅಂದು ಪಾಕ್ ಆಕ್ರಮಿತ ಕಾಶ್ಮೀರವನ್ನು ಪಡೆದಿದ್ದರೆ, ಈಗಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರವನ್ನು ಪಡೆಯಲು ವಿಫಲರಾಗಿದ್ದಲ್ಲದೆ, ನಮ್ಮ ನಿಯಂತ್ರಣದಲ್ಲಿದ್ದ 15,000 ಚದರ ಕಿಲೋಮೀಟರ್ ಭೂಮಿಯನ್ನು ಸಹ ಪಾಕಿಸ್ತಾನಕ್ಕೆ ಹಿಂದಿರುಗಿಸಿದೆವು ಎಂದು ಶ್ರೀ ಶಾ ಸೇರಿಸಿದರು.

ಶ್ರೀ ಅಮಿತ್ ಶಾ ಅವರು ವಿರೋಧ ಪಕ್ಷವನ್ನು ಪ್ರಶ್ನಿಸುತ್ತಾ, 1962ರ ಯುದ್ಧದಲ್ಲಿ ಏನಾಯಿತು ಮತ್ತು 38,000 ಚದರ ಕಿಲೋಮೀಟರ್ ಅಕ್ಸಾಯ್ ಚಿನ್ ಅನ್ನು ಚೀನಾಕ್ಕೆ ಏಕೆ ನೀಡಲಾಯಿತು ಎಂದು ಕೇಳಿದರು. ಸಂಸತ್ತಿನಲ್ಲಿ ಚರ್ಚೆಯ ಸಮಯದಲ್ಲಿ, ಆಗಿನ ಪ್ರಧಾನಮಂತ್ರಿ ಶ್ರೀ ಜವಾಹರಲಾಲ್ ನೆಹರೂ ಅವರು, "ಅಲ್ಲಿ ಒಂದು ಹುಲ್ಲಿನ ಎಳೆಯೂ ಬೆಳೆಯುವುದಿಲ್ಲ, ಹಾಗಾದರೆ ಆ ಸ್ಥಳದ ಉಪಯೋಗವೇನು?" ಎಂದು ಹೇಳಿದ್ದರು ಎಂದು ಅವರು ತಿಳಿಸಿದರು. ನೆಹರೂ ಅವರು ಆಕಾಶವಾಣಿ ಮೂಲಕ ಅಸ್ಸಾಂಗೆ ಬಹುತೇಕ ವಿದಾಯ ಹೇಳಿದ್ದರು ಎಂದೂ ಶ್ರೀ ಶಾ ಹೇಳಿದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, " Selected Works of Jawaharlal Nehru" ಸರಣಿಯ ಸಂಪುಟ 29ರ ಪುಟ 231ನ್ನು ಉಲ್ಲೇಖಿಸಿ, ಚೀನಾವನ್ನು ವಿಶ್ವಸಂಸ್ಥೆಗೆ ಸೇರಿಸಿಕೊಳ್ಳಲು, ಆದರೆ ಭದ್ರತಾ ಮಂಡಳಿಯಲ್ಲಿ ಸೇರಿಸಬಾರದು ಎಂದು ಯುನೈಟೆಡ್ ಸ್ಟೇಟ್ಸ್ ಸೂಚಿಸಿತ್ತು ಎಂದು ಹೇಳಿದರು. ಆದರೆ, ನೆಹರೂ ಅವರು, ಇದು ಒಪ್ಪುವಂತಹದ್ದಲ್ಲ, ಏಕೆಂದರೆ ಇದು ಚೀನಾದೊಂದಿಗಿನ ನಮ್ಮ ಸಂಬಂಧಗಳಿಗೆ ಹಾನಿ ಮಾಡುತ್ತದೆ ಮತ್ತು ಚೀನಾದಂತಹ ದೊಡ್ಡ ದೇಶಕ್ಕೆ ಅಸಮಾಧಾನ ತರುತ್ತದೆ ಎಂದು ಹೇಳಿದ್ದರು. ಇಂದು ಚೀನಾ ಭದ್ರತಾ ಮಂಡಳಿಯ ಸದಸ್ಯನಾಗಿದೆ, ಆದರೆ ಭಾರತ ಇಲ್ಲ ಎಂದು ಶ್ರೀ ಶಾ ಹೇಳಿದರು.

ರಾಜೀವ್ ಗಾಂಧಿ ಫೌಂಡೇಶನ್ ಚೀನಾದೊಂದಿಗೆ ಒಂದು ಒಪ್ಪಂದಕ್ಕೆ (MOU) ಸಹಿ ಹಾಕಿತ್ತು, ಆದರೆ ಆ ಒಪ್ಪಂದದ ವಿವರಗಳನ್ನು ಎಂದಿಗೂ ಬಹಿರಂಗಪಡಿಸಲಿಲ್ಲ," ಎಂದು ಶ್ರೀ ಅಮಿತ್ ಶಾ ಹೇಳಿದರು. "ಡೋಕ್ಲಾಮ್ ನಲ್ಲಿ ನಮ್ಮ ಸೇನಾ ಸಿಬ್ಬಂದಿ ಚೀನೀ ಸೇನೆಯೊಂದಿಗೆ ಮುಖಾಮುಖಿಯಾಗಿದ್ದ ಸಮಯದಲ್ಲಿ, ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಚೀನೀ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದರು," ಎಂದು ಅವರು ತಿಳಿಸಿದರು. "ಎಲ್ಲಾ ರೀತಿಯ ಭಯೋತ್ಪಾದನೆಯ ಮೂಲ ಪಾಕಿಸ್ತಾನವೇ ಆಗಿದೆ ಮತ್ತು ಪಾಕಿಸ್ತಾನ ಅಸ್ತಿತ್ವಕ್ಕೆ ಬರಲು ವಿರೋಧ ಪಕ್ಷದ 'ಘೋರ ತಪ್ಪೇ' ಕಾರಣ. ವಿರೋಧ ಪಕ್ಷವು ದೇಶದ ವಿಭಜನೆಯನ್ನು ಒಪ್ಪಿಕೊಳ್ಳದಿದ್ದರೆ, ಪಾಕಿಸ್ತಾನವು ಎಂದಿಗೂ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ವಿರೋಧ ಪಕ್ಷವು ತನ್ನ ಆಡಳಿತಾವಧಿಯಲ್ಲಿ ದೇಶದ ವಿಭಜನೆಯನ್ನು ಒಪ್ಪಿಕೊಳ್ಳುವ ಮೂಲಕ ದೇಶವನ್ನು ತುಂಡರಿಸಿದೆ" ಎಂದು ಅವರು ಹೇಳಿದರು.

ಕೇಂದ್ರ ಗೃಹ ಸಚಿವರು 2002ರಲ್ಲಿ ಅಂದಿನ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಭಯೋತ್ಪಾದನೆಯನ್ನು ಕೊನೆಗೊಳಿಸಲು POTA (ಭಯೋತ್ಪಾದನೆ ತಡೆ ಕಾಯಿದೆ) ಕಾನೂನನ್ನು ತಂದಿತ್ತು, ಇದನ್ನು ವಿರೋಧ ಪಕ್ಷ ವಿರೋಧಿಸಿತ್ತು ಎಂದು ಹೇಳಿದರು. ರಾಜ್ಯಸಭೆಯಲ್ಲಿ ಅಟಲ್ ಜಿ ಸರ್ಕಾರಕ್ಕೆ ಬಹುಮತವಿರದ ಕಾರಣ ಕಾನೂನನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು. ನಂತರ, ಎರಡೂ ಸದನಗಳ ಜಂಟಿ ಅಧಿವೇಶನವನ್ನು ಕರೆಯಲಾಯಿತು ಮತ್ತು ಆಗ ಮಾತ್ರ POTA ಕಾನೂನನ್ನು ಅಂಗೀಕರಿಸಲು ಸಾಧ್ಯವಾಯಿತು. ದೇಶ ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. POTA ಕಾನೂನನ್ನು ತಡೆಯುವ ಮೂಲಕ ವಿರೋಧ ಪಕ್ಷ ಯಾರನ್ನು ಉಳಿಸಲು ಬಯಸಿದೆ ಎಂದು ಶ್ರೀ ಶಾ ಪ್ರಶ್ನಿಸಿದರು. POTA ಭಯೋತ್ಪಾದಕರ ವಿರುದ್ಧವಾಗಿತ್ತು, ಆದರೆ ವಿರೋಧ ಪಕ್ಷವು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ POTA ಅನ್ನು ತಡೆಯುವ ಮೂಲಕ ಭಯೋತ್ಪಾದಕರನ್ನು ಉಳಿಸಲು ಬಯಸಿತು. 2004ರಲ್ಲಿ ವಿರೋಧ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂತು ಮತ್ತು ಅದು POTA ಕಾನೂನನ್ನು ರದ್ದುಗೊಳಿಸಿತು ಎಂದು ಅವರು ಹೇಳಿದರು. POTA ಕಾನೂನನ್ನು ಯಾರ ಲಾಭಕ್ಕಾಗಿ ವಿರೋಧ ಪಕ್ಷ ರದ್ದುಗೊಳಿಸಿತು ಎಂದು ಅವರು ಪ್ರಶ್ನಿಸಿದರು. POTA ಕಾನೂನನ್ನು 2004ರ ಡಿಸೆಂಬರ್‌ ನಲ್ಲಿ ರದ್ದುಗೊಳಿಸಲಾಯಿತು ಮತ್ತು 2005ರಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾ ಅವರ ಡೇರೆಯ ಮೇಲೆ ದಾಳಿ ನಡೆದು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. 2006ರಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 187 ಜನರು ಸಾವನ್ನಪ್ಪಿದರು. 2006ರಲ್ಲಿಯೇ ಡೋಡಾ-ಉದಂಪುರದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯಿತು, ಇದರಲ್ಲಿ 34 ಜನರು ಸಾವನ್ನಪ್ಪಿದರು. 2007ರಲ್ಲಿ ಹೈದರಾಬಾದ್ ನಲ್ಲಿ ನಡೆದ ಸ್ಫೋಟದಲ್ಲಿ 44 ಜನರು ಸಾವನ್ನಪ್ಪಿದರು. 2007ರಲ್ಲಿ ಲಕ್ನೋ ಮತ್ತು ವಾರಣಾಸಿಯಲ್ಲಿ 13 ಜನರು ಸಾವನ್ನಪ್ಪಿದರು. 2008ರಲ್ಲಿ ರಾಂಪುರ್ ಸಿ ಆರ್‌ ಪಿ ಎಫ್ ಶಿಬಿರದ ಮೇಲೆ ದಾಳಿ ನಡೆಯಿತು, 2008ರಲ್ಲಿಯೇ ಶ್ರೀನಗರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದು 10 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು. 2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಿತು, ಇದರಲ್ಲಿ 246 ಜನರು ಸಾವನ್ನಪ್ಪಿದರು. ಜೈಪುರದಲ್ಲಿ ಎಂಟು ಬಾಂಬ್ ಸ್ಫೋಟಗಳು ನಡೆದವು, ಇದರಲ್ಲಿ 64 ಜನರು ಸಾವನ್ನಪ್ಪಿದರು. 2008ರಲ್ಲಿ ಅಹಮದಾಬಾದ್‌ನಲ್ಲಿ 21 ಬಾಂಬ್ ಸ್ಫೋಟಗಳು ನಡೆದವು, ಇದರಲ್ಲಿ 57 ಜನರು ಸಾವನ್ನಪ್ಪಿದರು. 2008ರಲ್ಲಿ ದೆಹಲಿಯಲ್ಲಿ 5 ಸ್ಫೋಟಗಳು ನಡೆದವು, ಇದರಲ್ಲಿ 22 ಜನರು ಸಾವನ್ನಪ್ಪಿದರು. ಪುಣೆಯ ಜರ್ಮನ್ ಬೇಕರಿಯಲ್ಲಿ 17 ಜನರು ಸಾವನ್ನಪ್ಪಿದರು. 2010ರಲ್ಲಿ ವಾರಣಾಸಿಯಲ್ಲಿ ಸ್ಫೋಟಗಳು ನಡೆದವು, 2011ರಲ್ಲಿ ಮುಂಬೈನಲ್ಲಿ 3 ಸ್ಫೋಟಗಳು ನಡೆದವು, ಇದರಲ್ಲಿ 27 ಜನರು ಸಾವನ್ನಪ್ಪಿದರು ಎಂದು ಅವರು ವಿವರಿಸಿದರು.

ಶ್ರೀ ಅಮಿತ್ ಶಾ ಅವರು, 2005 ರಿಂದ 2011 ರವರೆಗೆ ವಿರೋಧ ಪಕ್ಷದ ಆಡಳಿತಾವಧಿಯಲ್ಲಿ, ಭಯೋತ್ಪಾದಕರು 27 ಭೀಕರ ದಾಳಿಗಳನ್ನು ನಡೆಸಿ ಸುಮಾರು 1000 ಜನರನ್ನು ಬಲಿ ಪಡೆದರು, ಆದರೆ ಅಂದಿನ ಸರ್ಕಾರ ಏನು ಮಾಡಿದೆ ಎಂಬುದು ಪ್ರಶ್ನೆಯಾಗಿದೆ ಎಂದು ಹೇಳಿದರು. ಅಂದಿನ ಸರ್ಕಾರ ಆ ಭಯೋತ್ಪಾದಕ ದಾಳಿಗಳ ವಿರುದ್ಧ ಯಾವ ಕ್ರಮಗಳನ್ನು ಕೈಗೊಂಡಿತು ಎಂದು ಸದನದಲ್ಲಿ ನಿಂತು ದೇಶಕ್ಕೆ ಹೇಳುವಂತೆ ಅವರು ವಿರೋಧ ಪಕ್ಷದ ನಾಯಕರಿಗೆ ಸವಾಲು ಹಾಕಿದರು. ಅವರು ಕೇವಲ ಭಯೋತ್ಪಾದಕರ ಫೋಟೋಗಳು ಮತ್ತು ಡೋಸಿಯರ್‌ಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು ಎಂದು ಶಾ ಟೀಕಿಸಿದರು.

ಕೇಂದ್ರ ಗೃಹ ಸಚಿವರು, "ನಮ್ಮ ಅವಧಿಯಲ್ಲಿ ನಡೆದ ಭಯೋತ್ಪಾದಕ ಘಟನೆಗಳು ಪಾಕಿಸ್ತಾನ ಪ್ರಾಯೋಜಿತವಾಗಿದ್ದು, ಮುಖ್ಯವಾಗಿ ಕಾಶ್ಮೀರ ಕೇಂದ್ರಿತವಾಗಿವೆ" ಎಂದು ಹೇಳಿದರು. 2014 ರಿಂದ 2025 ರವರೆಗೆ ದೇಶದ ಬೇರೆ ಯಾವುದೇ ಭಾಗದಲ್ಲಿ ಭಯೋತ್ಪಾದಕ ಘಟನೆ ನಡೆದಿಲ್ಲ ಎಂದು ಅವರು ತಿಳಿಸಿದರು. ಇದು ನರೇಂದ್ರ ಮೋದಿ ಸರ್ಕಾರದಿಂದಾಗಿ, ಕಾಶ್ಮೀರದಲ್ಲಿ ಯುವಕರು ಇನ್ನು ಮುಂದೆ ಭಯೋತ್ಪಾದನೆಯ ಕಡೆಗೆ ತಿರುಗುತ್ತಿಲ್ಲ, ಆದರೆ ಪಾಕಿಸ್ತಾನದಿಂದ ಭಯೋತ್ಪಾದಕರನ್ನು ಕಳುಹಿಸುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.

ಶ್ರೀ ಅಮಿತ್ ಶಾ ಅವರು 1986ರಲ್ಲಿ ದಾವೂದ್ ಇಬ್ರಾಹಿಂ ಕಸ್ಕರ್ ದೇಶದಿಂದ ಪಲಾಯನ ಮಾಡಿದಾಗ, ವಿರೋಧ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು ಎಂದು ಹೇಳಿದರು. 1993ರಲ್ಲಿ ಸೈಯದ್ ಸಲಾಹುದ್ದೀನ್ ಪಲಾಯನ ಮಾಡಿದಾಗ, ವಿರೋಧ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. 1993ರಲ್ಲಿ ಟೈಗರ್ ಮೆಮೊನ್ ಪಲಾಯನ ಮಾಡಿದಾಗ, ವಿರೋಧ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. 1993ರಲ್ಲಿ ಅನೀಸ್ ಇಬ್ರಾಹಿಂ ಕಸ್ಕರ್ ಪಲಾಯನ ಮಾಡಿದಾಗಲೂ ವಿರೋಧ ಪಕ್ಷದ ಸರ್ಕಾರವೇ ಅಧಿಕಾರದಲ್ಲಿತ್ತು. 2007ರಲ್ಲಿ ರಿಯಾಜ್ ಭಟ್ಕಳ್ ಪಲಾಯನ ಮಾಡಿದಾಗಲೂ ವಿರೋಧ ಪಕ್ಷದ ಸರ್ಕಾರವೇ ಅಧಿಕಾರದಲ್ಲಿತ್ತು. 2010ರಲ್ಲಿ ಇಕ್ಬಾಲ್ ಭಟ್ಕಳ್ ಪಲಾಯನ ಮಾಡಿದಾಗಲೂ ವಿರೋಧ ಪಕ್ಷದ ಸರ್ಕಾರವೇ ಅಧಿಕಾರದಲ್ಲಿತ್ತು. ಈ ವಿಷಯದ ಬಗ್ಗೆ ವಿರೋಧ ಪಕ್ಷದ ನಾಯಕರು ಉತ್ತರಿಸಬೇಕು ಎಂದು ಶ್ರೀ ಶಾ ಹೇಳಿದರು.

ಮೋದಿ ಸರ್ಕಾರವು ಜನರಿಗೆ, ಸಂಸತ್ತಿಗೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಜವಾಬ್ದಾರಿಯಾಗಿದೆ," ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. "2004 ರಿಂದ 2014ರ ನಡುವೆ ಕಾಶ್ಮೀರದಲ್ಲಿ 7,217 ಭಯೋತ್ಪಾದಕ ಘಟನೆಗಳು ನಡೆದಿದ್ದವು. ಆದರೆ 2015 ರಿಂದ 2025ರ ನಡುವೆ 2,150 ಭಯೋತ್ಪಾದಕ ಘಟನೆಗಳು ನಡೆದಿವೆ. ಇದು ಭಯೋತ್ಪಾದಕ ಘಟನೆಗಳಲ್ಲಿ ಶೇ. 70ರಷ್ಟು ಇಳಿಕೆಯಾಗಿದೆ. 2004 ರಿಂದ 2014ರ ನಡುವೆ 1,770 ನಾಗರಿಕರು ಮೃತಪಟ್ಟಿದ್ದರೆ, 2015 ರಿಂದ 2025ರ ನಡುವೆ ಈ ಸಂಖ್ಯೆ 357 ಆಗಿದ್ದು, ಇದು ಶೇ. 80ರಷ್ಟು ಇಳಿಕೆಯಾಗಿದೆ," ಎಂದು ಅವರು ಹೇಳಿದರು. "2004 ರಿಂದ 2014ರ ನಡುವೆ 1,060 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರೆ, 2015 ರಿಂದ 2025ರ ನಡುವೆ 542 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ," ಎಂದು ಶ್ರೀ ಶಾ ಹೇಳಿದರು. "ನಮ್ಮ ಸರ್ಕಾರದ ಅವಧಿಯಲ್ಲಿ, ಭಯೋತ್ಪಾದಕರ ಸಾವಿನ ಸಂಖ್ಯೆ ಶೇ. 123ರಷ್ಟು ಹೆಚ್ಚಾಗಿದೆ. 370ನೇ ವಿಧಿಯ ರದ್ದತಿಯು ಕಾಶ್ಮೀರದಲ್ಲಿನ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು (ecosystem) ನಾಶಮಾಡಿದೆ. ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತಿದ್ದ 370ನೇ ವಿಧಿಯನ್ನು ವಿರೋಧ ಪಕ್ಷದ ಸರ್ಕಾರಗಳು ದೀರ್ಘಕಾಲದವರೆಗೆ ರಕ್ಷಿಸಿಕೊಂಡು ಬಂದಿದ್ದವು," ಎಂದು ಅವರು ಸೇರಿಸಿದರು.

"ನಮ್ಮ ಸರ್ಕಾರವು ಶೂನ್ಯ ಭಯೋತ್ಪಾದನಾ ಯೋಜನೆ, ಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಯೋಜನೆ, ಮತ್ತು ಬಹುಹಂತದ ಭದ್ರತಾ ನಿಯೋಜನೆಯನ್ನು ಮಾಡಿದೆ. ಭದ್ರತಾ ಜೈಲುಗಳನ್ನು ನಿರ್ಮಿಸಲಾಗಿದೆ ಮತ್ತು ಶೇ. 98ರಷ್ಟು ವಿಚಾರಣೆಗಳನ್ನು ಈಗ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ನಾವು ಸಂವಹನಕ್ಕಾಗಿ ಸಂಪನ್ಮೂಲಗಳನ್ನು ಸೃಷ್ಟಿಸಿದ್ದೇವೆ ಮತ್ತು 702 ಫೋನ್ ಮಾರಾಟಗಾರರನ್ನು ಜೈಲಿಗೆ ಹಾಕಿದ್ದೇವೆ ಹಾಗೂ 2666 ಸಿಮ್ ಕಾರ್ಡ್‌ ಗಳನ್ನು ಬ್ಲಾಕ್ ಮಾಡಿದ್ದೇವೆ," ಎಂದು ಶ್ರೀ ಅಮಿತ್ ಶಾ ಹೇಳಿದರು.

"ಈಗ ಭಯೋತ್ಪಾದಕ ಎಲ್ಲೇ ಹತನಾದರೂ, ಅವನನ್ನು ಅಲ್ಲೇ ಹೂಳಲಾಗುತ್ತದೆ. ಯಾವುದೇ ಭಯೋತ್ಪಾದಕನನ್ನು ವೈಭವೀಕರಿಸಲು ಅವನ ಅಂತ್ಯಕ್ರಿಯೆಯ ಮೆರವಣಿಗೆ ನಡೆಸಲು ನರೇಂದ್ರ ಮೋದಿಯವರ ಆಡಳಿತದಲ್ಲಿ ಅನುಮತಿ ಇಲ್ಲ," ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. "ನಾವು ಭಯೋತ್ಪಾದಕರ ಸಂಬಂಧಿಕರು ಮತ್ತು ಬೆಂಬಲಿಗರನ್ನು ಆಯ್ದು ಜೈಲಿಗೆ ಹಾಕಿದ್ದೇವೆ, ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಿದ್ದೇವೆ, ಹಾಗೂ ಅವರಿಗೆ ನೀಡಲಾಗಿದ್ದ ಸರ್ಕಾರಿ ಗುತ್ತಿಗೆಗಳನ್ನೂ ಸಹ ರದ್ದು ಮಾಡಿದ್ದೇವೆ. ನ್ಯಾಯಾಲಯದಿಂದ ಆದೇಶಗಳನ್ನು ಪಡೆದು, 75ಕ್ಕೂ ಹೆಚ್ಚು ಭಯೋತ್ಪಾದಕ ಬೆಂಬಲಿಗರನ್ನು ಸರ್ಕಾರಿ ಉದ್ಯೋಗಗಳಿಂದ ವಜಾಗೊಳಿಸಲಾಗಿದೆ," ಎಂದು ಅವರು ತಿಳಿಸಿದರು. "ವಕೀಲರ ಪರಿಷತ್ತು (Bar Council) ಭಯೋತ್ಪಾದಕರ ಬೆಂಬಲಿಗರಿಂದ ತುಂಬಿಹೋಗಿತ್ತು, ನಾವು ಅದನ್ನು ಅಮಾನತುಗೊಳಿಸಿ, ಹೊಸ ಜನಪ್ರಿಯ ಚುನಾವಣೆಯನ್ನು ನಡೆಸಿ, ಹಲವು ಸಂಘಟನೆಗಳನ್ನು ನಿಷೇಧಿಸಿದೆವು," ಎಂದು ಶ್ರೀ ಶಾ ಹೇಳಿದರು. "ವಿಶೇಷ ಯುಎಪಿಎ (UAPA) ನ್ಯಾಯಾಲಯವನ್ನು ರಚಿಸುವ ಮೂಲಕ, ನಾವು ಮಾರ್ಚ್ 2022 ರಿಂದ 2025ರ ನಡುವೆ ಸುಮಾರು 2,260 ಯುಎಪಿಎ ಪ್ರಕರಣಗಳನ್ನು ದಾಖಲಿಸಿದ್ದೇವೆ. 374 ಮುಟ್ಟುಗೋಲುಗಳನ್ನು ಸಹ ಹಾಕಲಾಗಿದೆ." "ಹಿಂದೆ ಸಂಘಟಿತ ಕಲ್ಲು ತೂರಾಟ ನಡೆಯುತ್ತಿತ್ತು, ಈಗ ಅದರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಹಿಂದೆ ಪಾಕಿಸ್ತಾನದಿಂದ ಬಂದ್‌ ಗಳಿಗೆ ಕರೆ ನೀಡಲಾಗುತ್ತಿತ್ತು ಮತ್ತು ಕಾಶ್ಮೀರ ಕಣಿವೆ ಸ್ತಬ್ಧವಾಗುತ್ತಿತ್ತು, ಆದರೆ ಈಗ ಪಾಕಿಸ್ತಾನದಲ್ಲಾಗಲೀ ಅಥವಾ ಕಣಿವೆಯಲ್ಲಾಗಲೀ ಯಾರೂ ಈ ರೀತಿ ಮಾಡಲು ಸಾಧ್ಯವಿಲ್ಲ. ವಿರೋಧ ಪಕ್ಷದ ಆಡಳಿತದಲ್ಲಿ, ಕಣಿವೆಯು ವರ್ಷದಲ್ಲಿ 132 ದಿನಗಳ ಕಾಲ ಮುಚ್ಚಿರುತ್ತಿತ್ತು, ಆದರೆ ಕಳೆದ ಮೂರು ವರ್ಷಗಳಿಂದ ಬಂದ್‌ಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಹಿಂದೆ, ಕಲ್ಲು ತೂರಾಟದಲ್ಲಿ ಪ್ರತಿ ವರ್ಷ 100ಕ್ಕೂ ಹೆಚ್ಚು ಜನರು ಸಾಯುತ್ತಿದ್ದರು, ಈಗ ನಾಗರಿಕರ ಸಾವು ಮತ್ತು ಗಾಯಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ," ಎಂದು ಅವರು ಹೇಳಿದರು.

"ಒಂದು ಕಾಲವಿತ್ತು, ಆಗ ಹುರಿಯತ್ ನಾಯಕರಿಗೆ ವಿಐಪಿ ಉಪಚಾರ ಸಿಗುತ್ತಿತ್ತು, ಹುರಿಯತ್ ಜೊತೆ ಚರ್ಚೆಗಳನ್ನು ನಡೆಸಲಾಗುತ್ತಿತ್ತು, ಹುರಿಯತ್ ನಾಯಕರು ಬಂದಾಗ ಅವರಿಗೆ ಕೆಂಪು ರತ್ನಗಂಬಳಿ ಹಾಸಲಾಗುತ್ತಿತ್ತು. ಆದರೆ ನಾವು ಹುರಿಯತ್‌ನ ಎಲ್ಲಾ ಅಂಗಸಂಸ್ಥೆಗಳನ್ನು ನಿಷೇಧಿಸಿದ್ದೇವೆ ಮತ್ತು ಅವರ ಎಲ್ಲಾ ನಾಯಕರು ಇಂದು ಜೈಲಿನಲ್ಲಿದ್ದಾರೆ. ನಾವು ಹುರಿಯತ್ ಜೊತೆ ಮಾತನಾಡಲು ಬಯಸುವುದಿಲ್ಲ," ಎಂದು ಶ್ರೀ ಅಮಿತ್ ಶಾ ಹೇಳಿದರು. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೀತಿಯನ್ನು ನಾನು ಸದನದಲ್ಲಿ ಪುನರುಚ್ಚರಿಸಲು ಬಯಸುತ್ತೇನೆ: ಹುರಿಯತ್ ಎಂಬುದು ಭಯೋತ್ಪಾದಕ ಸಂಘಟನೆಗಳ ಒಂದು ಅಂಗ, ನಾವು ಅವರೊಂದಿಗೆ ಮಾತನಾಡುವುದಿಲ್ಲ, ನಾವು ಕಣಿವೆಯ ಯುವಕರೊಂದಿಗೆ ಮಾತನಾಡುತ್ತೇವೆ," ಎಂದರು. "ಹಿಂದೆ ಕಾಶ್ಮೀರದಲ್ಲಿ ಚುನಾವಣೆಗಳ ಸಮಯದಲ್ಲಿ ಭಯದ ವಾತಾವರಣವಿರುತ್ತಿತ್ತು, ಆದರೆ ಈಗ ಪಂಚಾಯತ್ ಚುನಾವಣೆಗಳಲ್ಲಿ ಶೇ. 98.3 ರಷ್ಟು ಮತದಾನವಾಗಿದೆ. 2019ರ ನಂತರ, ನಮ್ಮ ಸರ್ಕಾರವು ಟಿ ಆರ್‌ ಎಫ್, ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್, ತೆಹ್ರೀಕ್-ಉಲ್-ಮುಜಾಹಿದ್ದೀನ್, ಜಮಾತ್-ಉಲ್-ಮುಜಾಹಿದ್ದೀನ್, ಬಾಂಗ್ಲಾದೇಶ್-ಹಿಂದುಸ್ತಾನ್ ಜಮ್ಮು-ಕಾಶ್ಮೀರ್ ಗಜ್ನವಿ ಫೋರ್ಸ್, ಖಲಿಸ್ತಾನ್ ಟೈಗರ್ ಫೋರ್ಸ್, ಹಿಜ್ಬ್ ಉಲ್ ತಹ್ರೀರ್ ಸೇರಿದಂತೆ ಅನೇಕ ಇತರ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಿದೆ" ಎಂದು ಅವರು ತಿಳಿಸಿದರು.

"ನಮ್ಮ ಸೈನಿಕರು ಮೈನಸ್ 43 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೆಟ್ಟಗಳ ಮೇಲೆ, ನದಿ-ಹಳ್ಳಗಳ ಬಳಿ ಇದ್ದುಕೊಂಡು ದೇಶವನ್ನು ರಕ್ಷಿಸುತ್ತಾರೆ," ಎಂದು ಕೇಂದ್ರ ಗೃಹ ಸಚಿವರು ಹೇಳಿದರು. "ಯಾರಾದರೂ ನಮ್ಮ ಭೂಪ್ರದೇಶವನ್ನು ಪ್ರವೇಶಿಸಿದರೆ, ಅವನು ಬದುಕುಳಿಯುವುದಿಲ್ಲ. ನಾವು ಒಂದೋ ಅವನನ್ನು ಬಂಧಿಸುತ್ತೇವೆ, ಅಥವಾ ಅವನು ಎನ್‌ ಕೌಂಟರ್‌ ನಲ್ಲಿ ಹತನಾಗುತ್ತಾನೆ. ಪೋಟಾವನ್ನು ವಿರೋಧಿಸುವವರಿಗೆ ನರೇಂದ್ರ  ಮೋದಿಯವರ ಈ ಭಯೋತ್ಪಾದನಾ-ವಿರೋಧಿ ನೀತಿ ಇಷ್ಟವಾಗುವುದಿಲ್ಲ. ಭಯೋತ್ಪಾದಕರನ್ನು ಸಮರ್ಥಿಸಿಕೊಂಡು ವೋಟ್ ಬ್ಯಾಂಕ್ ಸೃಷ್ಟಿಸುವವರಿಗೂ ಈ ನೀತಿ ಇಷ್ಟವಾಗುವುದಿಲ್ಲ. ಇದು ನರೇಂದ್ರ ಮೋದಿ ಸರ್ಕಾರ, ಭಯೋತ್ಪಾದನೆ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆಯ ನೀತಿ" ಎಂದರು.


*****


(Release ID: 2149992)