ಪ್ರಧಾನ ಮಂತ್ರಿಯವರ ಕಛೇರಿ
7ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
ಬಿಹಾರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭಾಶಯಗಳು, ಈ ವೇದಿಕೆಯು ನಿಮ್ಮ ಅತ್ಯುತ್ತಮತೆಯನ್ನು ಹೊರತರಲಿ ಮತ್ತು ನಿಜವಾದ ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸಲಿ: ಪ್ರಧಾನಮಂತ್ರಿ
ಭಾರತವು 2036ರಲ್ಲಿ ನಮ್ಮ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಪ್ರಯತ್ನಿಸುತ್ತಿದೆ: ಪ್ರಧಾನಮಂತ್ರಿ
ದೇಶದಲ್ಲಿ ಕ್ರೀಡಾ ಮೂಲಸೌಕರ್ಯ ಆಧುನೀಕರಿಸಲು ಸರ್ಕಾರ ಗಮನ ಹರಿಸುತ್ತಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ಕ್ರೀಡಾ ಬಜೆಟ್ ಅನ್ನು 3 ಪಟ್ಟು ಹೆಚ್ಚು ಹೆಚ್ಚಿಸಲಾಗಿದೆ, ಈ ವರ್ಷ ಕ್ರೀಡಾ ಬಜೆಟ್ ಸುಮಾರು 4,000 ಕೋಟಿ ರೂ. ಆಗಿದೆ: ಪ್ರಧಾನಮಂತ್ರಿ
ದೇಶದಲ್ಲಿ ಉತ್ತಮ ಕ್ರೀಡಾಪಟುಗಳು ಮತ್ತು ಅತ್ಯುತ್ತಮ ಕ್ರೀಡಾ ವೃತ್ತಿಪರರನ್ನು ಸೃಜಿಸುವ ಗುರಿಯೊಂದಿಗೆ ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಭಾಗವಾಗಿ ಮಾಡಿದ್ದೇವೆ: ಪ್ರಧಾನಮಂತ್ರಿ
Posted On:
04 MAY 2025 8:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 7ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತದ ಕ್ರೀಡಾಪಟಗಳು ಇಲ್ಲಿ ನೆರೆದಿದ್ದು, ಅಸಾಧಾರಣ ಪ್ರತಿಭೆ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಲಿದ್ದಾರೆ, ಅವರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ತೋರಿಸಲಿದ್ದಾರೆ. ರಾಷ್ಟ್ರದ ಕ್ರೀಡಾ ಮನೋಭಾವಕ್ಕೆ ಅವರ ಕೊಡುಗೆ ಶ್ಲಾಘಿಸಿದ ಪ್ರಧಾನಿ, ಕ್ರೀಡಾಪಟುಗಳ ಗಮನಾರ್ಹ ಕೌಶಲ್ಯ ಮತ್ತು ಬದ್ಧತೆ ಅತ್ಯಗತ್ಯ. ಅವರ ಕ್ರೀಡೆಯ ಮೇಲಿನ ಉತ್ಸಾಹ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆ ರಾಷ್ಟ್ರಕ್ಕೆ ಹೆಮ್ಮೆ ತರುತ್ತದೆ ಎಂದರಲ್ಲದೆ, ಕ್ರೀಡಾಪಟುಗಳ ಭವಿಷ್ಯದ ಎಲ್ಲ ಪ್ರಯತ್ನಗಳಿಗೆ ತಮ್ಮ ಶುಭಾಶಯಗಳನ್ನು ಕೋರಿದರು.
ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಸಂದರ್ಭದಲ್ಲಿ ಪಾಟ್ನಾ, ರಾಜಗೀರ್, ಗಯಾ, ಭಾಗಲ್ಪುರ್ ಮತ್ತು ಬಿಗುಸರಾಯ್ ಸೇರಿದಂತೆ ಬಿಹಾರದ ಅನೇಕ ನಗರಗಳಲ್ಲಿ ನಡೆಯಲಿರುವ ವ್ಯಾಪಕ ಸ್ಪರ್ಧೆಗಳನ್ನು ಪ್ರಸ್ತಾಪಿಸಿ ಶ್ರೀ ಮೋದಿ, ಮುಂಬರುವ ದಿನಗಳಲ್ಲಿ 6 ಸಾವಿರಕ್ಕೂ ಹೆಚ್ಚು ಯುವ ಕ್ರೀಡಾಪಟುಗಳು ತಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಹೊತ್ತು ಭಾಗವಹಿಸಲಿದ್ದಾರೆ, ಎಲ್ಲಾ ಆಟಗಾರರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ಭಾರತದಲ್ಲಿ ಕ್ರೀಡೆಗಳು ಈಗ ವಿಶಿಷ್ಟ ಸಾಂಸ್ಕೃತಿಕ ಗುರುತಾಗಿ ವಿಕಸನಗೊಳ್ಳುತ್ತಿವೆ. "ಭಾರತದ ಕ್ರೀಡಾ ಸಂಸ್ಕೃತಿ ಬೆಳೆದಂತೆ, ಜಾಗತಿಕ ವೇದಿಕೆಯಲ್ಲಿ ದೇಶದ ಮೃದು ಶಕ್ತಿಯೂ ಬೆಳೆಯುತ್ತದೆ". ದೇಶದ ಯುವಕರಿಗೆ ಪ್ರಮುಖ ವೇದಿಕೆ ಒದಗಿಸುವಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಮಹತ್ವದ್ದಾಗಿದೆ ಎಂದರು.
ಕ್ರೀಡಾಪಟುಗಳಿಗೆ ನಿರಂತರ ಸುಧಾರಣೆ ಮಹತ್ವದ್ದಾಗಿದೆ. ಹೆಚ್ಚಿನ ಪಂದ್ಯಗಳನ್ನು ಆಡುವ ಮತ್ತು ಅವರ ಕೌಶಲ್ಯಗಳನ್ನು ಪರಿಷ್ಕರಿಸಲು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಗತ್ಯವಿದೆ. ತಮ್ಮ ಸರ್ಕಾರವು ತನ್ನ ನೀತಿಗಳಲ್ಲಿ ಈ ಅಂಶಕ್ಕೆ ಯಾವಾಗಲೂ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಖೇಲೋ ಇಂಡಿಯಾ ಅಡಿ, ವಿವಿಧ ಕ್ರೀಡಾಕೂಟಗಳು - ವಿಶ್ವವಿದ್ಯಾಲಯ ಕ್ರೀಡಾಕೂಟಗಳು, ಯುವ ಕ್ರೀಡಾಕೂಟಗಳು, ಚಳಿಗಾಲದ ಕ್ರೀಡಾಕೂಟಗಳು ಮತ್ತು ಪ್ಯಾರಾ ಕ್ರೀಡಾಕೂಟಗಳು ವರ್ಷವಿಡೀ ದೇಶಾದ್ಯಂತ ಬಹು ಹಂತಗಳಲ್ಲಿ ನಡೆಯುತ್ತವೆ. ಈ ಸ್ಥಿರವಾದ ಸ್ಪರ್ಧೆಗಳು ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಮತ್ತು ಅವರ ಪ್ರತಿಭೆಯನ್ನು ಮುಂಚೂಣಿಗೆ ತರುತ್ತವೆ. ಕ್ರಿಕೆಟ್‌ನ ಒಂದು ಉದಾಹರಣೆ ಉಲ್ಲೇಖಿಸಿದ ಪ್ರಧಾನಿ, ಬಿಹಾರದ ವೈಭವ್ ಸೂರ್ಯವಂಶಿ ಅವರು ಐಪಿಎಲ್‌ನಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು. ವೈಭವ್ ಅವರ ಕಠಿಣ ಪರಿಶ್ರಮ ನಿರ್ಣಾಯಕವಾಗಿದ್ದರೂ, ಬಹು ಸ್ಪರ್ಧೆಗಳಿಗೆ ಒಡ್ಡಿಕೊಳ್ಳುವುದು ಅವರ ಪ್ರತಿಭೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕ್ರೀಡಾಪಟು ಹೆಚ್ಚು ಆಡಿದಷ್ಟೂ ಅವರು ಹೆಚ್ಚು ಅಭಿವೃದ್ಧಿ ಹೊಂದುತ್ತಾರೆ, ಖೇಲೋ ಇಂಡಿಯಾ ಯುವ ಕ್ರೀಡಾಕೂಟವು ಯುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮಟ್ಟದ ಕ್ರೀಡೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅಮೂಲ್ಯವಾದ ಅನುಭವ ಪಡೆಯಲು ಅವಕಾಶ ಒದಗಿಸುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಪ್ರತಿಯೊಬ್ಬ ನಾಗರಿಕನ ಬಹುಕಾಲದ ಕನಸಾಗಿದೆ, 2036ರಲ್ಲಿ ದೇಶದಲ್ಲಿ ಒಲಿಂಪಿಕ್ಸ್ ಆಯೋಜಿಸುವ ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸುವ ದೇಶದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಶಾಲಾ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರಿಗೆ ರಚನಾತ್ಮಕ ತರಬೇತಿ ನೀಡುವತ್ತ ಸರ್ಕಾರ ಗಮನ ನೀಡುತ್ತಿದೆ. ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ(TOP) ಯೋಜನೆಯಂತಹ ಉಪಕ್ರಮಗಳು ಬಲವಾದ ಕ್ರೀಡಾ ಪರಿಸರ ವ್ಯವಸ್ಥೆ ನಿರ್ಮಿಸಲು ಕೊಡುಗೆ ನೀಡಿವೆ, ಇದು ಬಿಹಾರ ಮತ್ತು ದೇಶದ ಉಳಿದ ಭಾಗಗಳಲ್ಲಿ ಸಾವಿರಾರು ಕ್ರೀಡಾಪಟುಗಳಿಗೆ ಪ್ರಯೋಜನ ನೀಡುತ್ತದೆ. ವೈವಿಧ್ಯಮಯ ಕ್ರೀಡೆಗಳನ್ನು ಅನ್ವೇಷಿಸಲು ಕ್ರೀಡಾಪಟುಗಳಿಗೆ ಅವಕಾಶಗಳನ್ನು ನೀಡುವ ಮಹತ್ವವಿದೆ. ಭಾರತದ ಶ್ರೀಮಂತ ಕ್ರೀಡಾ ಪರಂಪರೆ ಉತ್ತೇಜಿಸಲು ಖೇಲೋ ಇಂಡಿಯಾ ಯೂತ್ ಗೇಮ್ಸ್ ಗಟ್ಕಾ, ಕಲರಿಪಯಟ್ಟು, ಖೋ-ಖೋ, ಮಲ್ಲಕಂಬ ಮತ್ತು ಯೋಗಾಸನದಂತಹ ಸಾಂಪ್ರದಾಯಿಕ ಮತ್ತು ಸ್ಥಳೀಯ ಕ್ರೀಡೆಗಳನ್ನು ಸಂಯೋಜಿಸಲಾಗಿದೆ. ಹೊಸ ಮತ್ತು ಉದಯೋನ್ಮುಖ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳ ಉಪಸ್ಥಿತಿಯನ್ನು ಹೆಚ್ಚುತ್ತಿದೆ, ವುಶು, ಸೆಪಕ್ ಟಕ್ರಾ, ಪೆನ್ಕಾಕ್ ಸಿಲಾಟ್, ಲಾನ್ ಬೌಲ್ಸ್ ಮತ್ತು ರೋಲರ್ ಸ್ಕೇಟಿಂಗ್‌ನಂತಹ ವಿಭಾಗಗಳಲ್ಲಿ ಇತ್ತೀಚಿನ ಶ್ಲಾಘನೀಯ ಪ್ರದರ್ಶನಗಳನ್ನು ಅವರು ಪ್ರಸ್ತಾಪಿಸಿದರು. 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ತಂಡ ಲಾನ್ ಬೌಲ್ಸ್ ನಲ್ಲಿ ಪದಕ ಗೆದ್ದ ಐತಿಹಾಸಿಕ ಕ್ಷಣವನ್ನು ಅವರು ನೆನಪಿಸಿಕೊಂಡರು, ಇದು ಭಾರತದಲ್ಲಿ ಕ್ರೀಡೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ ಎಂದರು.
ಭಾರತದ ಕ್ರೀಡಾ ಮೂಲಸೌಕರ್ಯ ಆಧುನೀಕರಿಸುವತ್ತ ಸರ್ಕಾರ ಗಮನ ಹರಿಸಿದೆ. ಕಳೆದ ದಶಕದಲ್ಲಿ ಕ್ರೀಡಾ ಬಜೆಟ್ 3 ಪಟ್ಟು ಹೆಚ್ಚು ಹೆಚ್ಚಾಗಿದೆ, ಈ ವರ್ಷ ಸುಮಾರು 4,000 ಕೋಟಿ ರೂ.ಗೆ ತಲುಪಿದೆ, ಇದರಲ್ಲಿ ಗಮನಾರ್ಹ ಭಾಗವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ. ಬಿಹಾರದಲ್ಲಿ 3 ಡಜನ್‌ಗೂ ಹೆಚ್ಚು ಸೇರಿದಂತೆ ದೇಶಾದ್ಯಂತ 1,000ಕ್ಕೂ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಿಹಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಯೋಜನ ಪಡೆಯುತ್ತಿದೆ. ರಾಜ್ಯ ಸರ್ಕಾರವು ತನ್ನ ಮಟ್ಟದಲ್ಲಿ ಹಲವಾರು ಉಪಕ್ರಮಗಳನ್ನು ವಿಸ್ತರಿಸುತ್ತಿದೆ. ರಾಜಗೀರ್‌ನಲ್ಲಿ ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರ ಮತ್ತು ಬಿಹಾರ ಕ್ರೀಡಾ ವಿಶ್ವವಿದ್ಯಾಲಯ ಮತ್ತು ರಾಜ್ಯ ಕ್ರೀಡಾ ಅಕಾಡೆಮಿಯಂತಹ ಸಂಸ್ಥೆಗಳ ಸ್ಥಾಪನೆ ಮಾಡಲಾಗಿದೆ. ಪಾಟ್ನಾ-ಗಯಾ ಹೆದ್ದಾರಿಯ ಉದ್ದಕ್ಕೂ ನಡೆಯುತ್ತಿರುವ ಕ್ರೀಡಾ ನಗರದ ನಿರ್ಮಾಣ ಮತ್ತು ಬಿಹಾರದ ಹಳ್ಳಿಗಳಲ್ಲಿ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿ ಆಗುತ್ತಿದೆ. ಖೇಲೋ ಇಂಡಿಯಾ ಯುವ ಕ್ರೀಡಾಕೂಟವು ರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಬಿಹಾರದ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.
"ಕ್ರೀಡಾ ಜಗತ್ತು ಮತ್ತು ಅದರ ಸಂಬಂಧಿತ ಆರ್ಥಿಕತೆಯು ಆಟದ ಮೈದಾನವನ್ನು ಮೀರಿ ವಿಸ್ತರಿಸಿದೆ, ಕ್ರೀಡೆಗಳು ಯುವ ವ್ಯಕ್ತಿಗಳಿಗೆ ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿವೆ". ಭೌತಚಿಕಿತ್ಸೆ, ದತ್ತಾಂಶ ವಿಶ್ಲೇಷಣೆ, ಕ್ರೀಡಾ ತಂತ್ರಜ್ಞಾನ, ಪ್ರಸಾರ, ಇ-ಕ್ರೀಡೆಗಳು ಮತ್ತು ನಿರ್ವಹಣೆಯಂತಹ ವಿವಿಧ ಉದಯೋನ್ಮುಖ ಕ್ಷೇತ್ರಗಳು ವೈವಿಧ್ಯಮಯ ವೃತ್ತಿ ಅವಕಾಶಗಳನ್ನು ನೀಡುತ್ತಿವೆ. ಯುವ ವೃತ್ತಿಪರರು ತರಬೇತುದಾರರು, ಫಿಟ್‌ನೆಸ್ ತರಬೇತುದಾರರು, ನೇಮಕಾತಿ ಏಜೆಂಟ್‌ಗಳು, ಈವೆಂಟ್ ಮ್ಯಾನೇಜರ್‌ಗಳು, ಕ್ರೀಡಾ ವಕೀಲರು ಮತ್ತು ಮಾಧ್ಯಮ ತಜ್ಞರ ಪಾತ್ರಗಳನ್ನು ಅನ್ವೇಷಿಸಬಹುದು. "ಇಂದು, ಕ್ರೀಡಾಂಗಣವು ಇನ್ನು ಮುಂದೆ ಪಂದ್ಯಗಳಿಗೆ ಒಂದು ಸ್ಥಳವಾಗಿರದೆ, ಸಾವಿರಾರು ಉದ್ಯೋಗಗಳ ಮೂಲವಾಗಿದೆ". ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಮುಖ್ಯವಾಹಿನಿಯ ಶಿಕ್ಷಣದಲ್ಲಿ ಕ್ರೀಡೆಗಳನ್ನು ಸಂಯೋಜಿಸುವಂತಹ ಉಪಕ್ರಮಗಳೊಂದಿಗೆ ಕ್ರೀಡಾ ಉದ್ಯಮಶೀಲತೆಯಲ್ಲಿ ಸಾಧ್ಯತೆಗಳು ಬೆಳೆಯುತ್ತಿವೆ. ಜೀವನದ ಪ್ರತಿಯೊಂದು ಅಂಶದಲ್ಲೂ ಕ್ರೀಡಾ ಮನೋಭಾವ ಮಹತ್ವದ್ದಾಗಿದೆ. ಕ್ರೀಡೆಗಳು ತಂಡದ ಕೆಲಸ, ಸಹಯೋಗ ಮತ್ತು ಪರಿಶ್ರಮವನ್ನು ಹೇಗೆ ತುಂಬುತ್ತವೆ ಎಂಬುದನ್ನು ಎತ್ತಿ ತೋರಿಸಿದ ಪ್ರಧಾನಿ, ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಮತ್ತು 'ಏಕ್ ಭಾರತ್, ಶ್ರೇಷ್ಠ ಭಾರತ'ದ ಮನೋಭಾವವನ್ನು ಬ್ರಾಂಡ್ ರಾಯಭಾರಿಗಳಾಗಿ ಪ್ರತಿನಿಧಿಸಬೇಕು ಎಂದು ಒತ್ತಾಯಿಸಿದರು. ಕ್ರೀಡಾಪಟುಗಳು ಬಿಹಾರದ ಪ್ರೀತಿಯ ನೆನಪುಗಳನ್ನು ಹೊತ್ತೊಯ್ಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದ ಹೊರಗಿನಿಂದ ಬಂದಿರುವವರು ಲಿಟ್ಟಿ ಚೋಖಾ ಮತ್ತು ಬಿಹಾರದ ಪ್ರಸಿದ್ಧ ಮಖಾನಾ ರುಚಿ ಸವಿಯಬೇಕು ಎಂದು ಅವರು ಪ್ರೋತ್ಸಾಹಿಸಿದರು.
ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಸ್ಪರ್ಧಿಗಳಲ್ಲಿ ಕ್ರೀಡಾ ಮನೋಭಾವ ಮತ್ತು ದೇಶಭಕ್ತಿಯ ಮನೋಭಾವವನ್ನು ಹೆಚ್ಚಿಸುತ್ತದೆ ಎಂಬ ಆಶಯ ವ್ಯಕ್ತಪಡಿಸಿದ ಪ್ರಧಾನಿ, ಖೇಲೋ ಇಂಡಿಯಾ ಯುವ ಕ್ರೀಡಾಕೂಟದ 7ನೇ ಆವೃತ್ತಿಯ ಆರಂಭವನ್ನು ಅಧಿಕೃತವಾಗಿ ಘೋಷಿಸಿದರು.
ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ, ಶ್ರೀಮತಿ ರಕ್ಷಾ ಖಾಡ್ಸೆ, ಶ್ರೀ ರಾಮ್ ನಾಥ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****
(Release ID: 2126969)
Visitor Counter : 5
Read this release in:
Malayalam
,
Tamil
,
Telugu
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati