ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 08 APR 2025 11:20PM by PIB Bengaluru

ನಮಸ್ಕಾರ!

ಈ ಶೃಂಗಸಭೆಯ ಮೂಲಕ ದೇಶ ಮತ್ತು ವಿಶ್ವಾದ್ಯಂತದ ಗೌರವಾನ್ವಿತ ಅತಿಥಿಗಳೊಂದಿಗೆ ಮತ್ತು ನಿಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ನೀವು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು “ನೆಟ್‌ವರ್ಕ್ 18”ಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈ ವರ್ಷದ ಶೃಂಗಸಭೆಯನ್ನು ಭಾರತದ ಯುವಕರ ಆಕಾಂಕ್ಷೆಗಳೊಂದಿಗೆ ನೀವು ಸಂಪರ್ಕಿಸಿದ್ದೀರಿ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಈ ವರ್ಷದ ಆರಂಭದಲ್ಲಿ, ವಿವೇಕಾನಂದ ಜಯಂತಿಯಂದು, ಭಾರತ್ ಮಂಟಪದಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ ನಡೆಸಲಾಯಿತು. ಆ ಸಮಯದಲ್ಲಿ, ಯುವಕರ ಕಣ್ಣುಗಳಲ್ಲಿ ಕನಸುಗಳ ಮಿಂಚು, ಅವರ ಸಂಕಲ್ಪ ಶಕ್ತಿ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಅವರ ಉತ್ಸಾಹವನ್ನು ನಾನು ನೋಡಿದೆ. 2047ರ ವೇಳೆಗೆ ನಾವು ಭಾರತವನ್ನು ಕೊಂಡೊಯ್ಯಲು ಬಯಸುವ ಎತ್ತರ ಮತ್ತು ನಾವು ಅನುಸರಿಸುತ್ತಿರುವ ಮಾರ್ಗಸೂಚಿಯನ್ನು ನಾವು ಪ್ರತಿ ಹಂತದಲ್ಲೂ ಚರ್ಚಿಸುವುದನ್ನು ಮುಂದುವರಿಸಿದರೆ, 'ಅಮೃತ' (ಅಮೃತ ಕಾಲ) ಖಂಡಿತವಾಗಿಯೂ ಹೊರಹೊಮ್ಮುತ್ತದೆ. ಈ 'ಅಮೃತ'ವು 'ಅಮೃತ ಕಾಲ'ದ ಪೀಳಿಗೆಗೆ ಶಕ್ತಿ ಮತ್ತು ನಿರ್ದೇಶನ ನೀಡುವ ಜತೆಗೆ, ಭಾರತಕ್ಕೆ ಆವೇಗವನ್ನು ನೀಡುತ್ತದೆ. ಈ ಶೃಂಗಸಭೆಯಲ್ಲಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದು, ಇಡೀ ವಿಶ್ವದ ಚಿತ್ತ ಭಾರತದ ಮೇಲೆ ನೆಟ್ಟಿದೆ. ಪ್ರಪಂಚದ ಭರವಸೆಗಳು ಸಹ ಭಾರತದ ಮೇಲೆ ಇವೆ. ಕೆಲವೇ ವರ್ಷಗಳಲ್ಲಿ ನಾವು 11ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಅತಿದೊಡ್ಡ ಆರ್ಥಿಕತೆಗೆ ಏರಿದ್ದೇವೆ. ಹಲವಾರು ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತ ನಿಲ್ಲಲಿಲ್ಲ. ಬದಲಾಗಿ, ಅದು 2 ಪಟ್ಟು ವೇಗದಲ್ಲಿ ಮುಂದೆ ಸಾಗಿತು. ಕೇವಲ 1 ದಶಕದಲ್ಲಿ, ನಾವು ನಮ್ಮ ಆರ್ಥಿಕತೆಯ ಗಾತ್ರವನ್ನು 2 ಪಟ್ಟು ಹೆಚ್ಚಿಸಿದ್ದೇವೆ. ಭಾರತ ನಿಧಾನವಾಗಿ ಮತ್ತು ಸ್ಥಿರವಾಗಿ ಚಲಿಸುತ್ತದೆ ಎಂದು ಭಾವಿಸಿದ್ದವರು ಈಗ ವೇಗದ ಮತ್ತು ನಿರ್ಭೀತ ಭಾರತವನ್ನು ನೋಡುತ್ತಿದ್ದಾರೆ. ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಅಭೂತಪೂರ್ವ ಬೆಳವಣಿಗೆಗೆ ಯಾರು ಚಾಲನೆ ನೀಡುತ್ತಿದ್ದಾರೆ? ಇದು ಭಾರತದ ಯುವಕರಿಂದ ನಡೆಸಲ್ಪಡುತ್ತಿದೆ - ಅವರ ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳು. ಯುವ ಭಾರತದ ಈ ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳನ್ನು ಪರಿಹರಿಸುವುದು ಈಗ ದೇಶದ ಪ್ರಮುಖ ಆದ್ಯತೆಯಾಗಿದೆ.

ಸ್ನೇಹಿತರೆ,

ಇಂದು ಏಪ್ರಿಲ್ 8,  ಕೇವಲ ಒಂದೆರಡು ದಿನಗಳಲ್ಲಿ, 2025ರ ಮೊದಲ 100 ದಿನಗಳು ಪೂರ್ಣಗೊಳ್ಳುತ್ತವೆ - 2025ರ 100 ದಿನಗಳು ಮೊದಲ ಮೈಲಿಗಲ್ಲು. ಈ 100 ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಯುವಕರ ಆಕಾಂಕ್ಷೆಗಳನ್ನು ಸಹ ಪ್ರತಿಬಿಂಬಿಸುತ್ತವೆ ಎಂಬುದನ್ನು ನೀವು ಕಾಣಬಹುದು.

ಸ್ನೇಹಿತರೆ,

ಈ 100 ದಿನಗಳಲ್ಲಿ ನಾವು ಕೇವಲ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ - ಭವಿಷ್ಯಕ್ಕಾಗಿ ನಾವು ಬಲವಾದ ಅಡಿಪಾಯ ಹಾಕಿದ್ದೇವೆ. ನಾವು ನೀತಿಗಳನ್ನು ಸಾಧ್ಯತೆಗಳಾಗಿ ಪರಿವರ್ತಿಸಿದ್ದೇವೆ. 12 ಲಕ್ಷ ರೂಪಾಯಿಗಳವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ - ಯುವ ವೃತ್ತಿಪರರು ಮತ್ತು ಉದ್ಯಮಿಗಳಿಗೆ ಪ್ರಮುಖ ಪ್ರಯೋಜನ. 10,000 ಹೊಸ ವೈದ್ಯಕೀಯ ಸೀಟುಗಳು ಮತ್ತು 6,500 ಹೊಸ ಐಐಟಿ ಸೀಟುಗಳು – ಶಿಕ್ಷಣ ವಿಸ್ತರಿಸುವುದು ಮತ್ತು ನಾವೀನ್ಯತೆಯನ್ನು ವೇಗಗೊಳಿಸುವುದು. 50,000 ಹೊಸ ಅಟಲ್ ಟಿಂಕರಿಂಗ್   ಹೊತ್ತಿಸುತ್ತಿವೆ. ಒಂದು ದೀಪವು ಇತರ ಹಲವು ದೀಪಗಳನ್ನು ಬೆಳಗಿಸುವಂತೆ. ಎಐ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಶ್ರೇಷ್ಠತಾ ಕೇಂದ್ರಗಳು ಯುವಕರಿಗೆ ಭವಿಷ್ಯಕ್ಕಾಗಿ ತಯಾರಿ ನಡೆಸಲು ಅವಕಾಶವನ್ನು ನೀಡುತ್ತದೆ. 10,000 ಹೊಸ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್‌ಗಳು ಕಲ್ಪನೆಯಿಂದ ಪ್ರಭಾವಕ್ಕೆ ಪ್ರಯಾಣ ಸುಲಭಗೊಳಿಸುತ್ತವೆ. ಬಾಹ್ಯಾಕಾಶ ವಲಯವನ್ನು ತೆರೆದಂತೆಯೇ, ಪರಮಾಣು ಇಂಧನ ವಲಯವನ್ನು ಸಹ ತೆರೆಯಲಾಗಿದೆ. ನಾವೀನ್ಯತೆಯು ಈಗ ಬೆಂಬಲ ಪಡೆಯುತ್ತಿದೆ, ಮೊದಲ ಬಾರಿಗೆ, ಗಿಗ್ ಆರ್ಥಿಕತೆಯೊಂದಿಗೆ ಸಂಬಂಧ ಹೊಂದಿರುವ ಯುವಕರಿಗೆ ಸಾಮಾಜಿಕ ಭದ್ರತೆಯ ಗುರಾಣಿ ನೀಡಲಾಗುವುದು. ಈ ಹಿಂದೆ ಇತರರಿಗೆ ಅದೃಶ್ಯರಾಗಿದ್ದವರು ಈಗ ನೀತಿಗಳ ಕೇಂದ್ರದಲ್ಲಿದ್ದಾರೆ. ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ.ಗಳ ಅವಧಿ ಸಾಲಗಳನ್ನು ನೀಡಲಾಗುವುದು. ಎಲ್ಲರ ಒಳಗೊಳ್ಳುವಿಕೆ ಕೇವಲ ಭರವಸೆಯಲ್ಲ, ಇದು ಒಂದು ನೀತಿಯಾಗಿದೆ. ಭಾರತದ ಯುವಕರು ಈ ಎಲ್ಲಾ ನಿರ್ಧಾರಗಳಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ, ಏಕೆಂದರೆ ಯುವಕರು ಪ್ರಗತಿ ಹೊಂದಿದಾಗ ಮಾತ್ರ ಭಾರತ ಪ್ರಗತಿ ಹೊಂದುತ್ತದೆ.

ಸ್ನೇಹಿತರೆ,

ಈ 100 ದಿನಗಳಲ್ಲಿ, ಭಾರತ ಸಾಧಿಸಿರುವುದು ಏನೆಂದರೆ ಭಾರತ ನಿಲ್ಲುವುದಿಲ್ಲ, ತಲೆಬಾಗುವುದಿಲ್ಲ, ನಿಧಾನಗೊಳಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ. ಈ 100 ದಿನಗಳಲ್ಲಿ, ಉಪಗ್ರಹ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಸಾಮರ್ಥ್ಯವನ್ನು ಸಾಧಿಸಿದ ವಿಶ್ವದ 4ನೇ ದೇಶ ಭಾರತವಾಯಿತು. ಭಾರತವು ಅರೆ-ಕ್ರಯೋಜೆನಿಕ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಭಾರತವು 100 ಗಿಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಉತ್ಪಾದನೆಯ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು. 1,000 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸುವ ಮೂಲಕ ದೇಶ ದಾಖಲೆ ನಿರ್ಮಿಸಿತು. ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಅನ್ನು ಪ್ರಾರಂಭಿಸಲಾಯಿತು, ಈ 100 ದಿನಗಳಲ್ಲಿ ಉದ್ಯೋಗಿಗಳಿಗೆ 8ನೇ ವೇತನ ಆಯೋಗ ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ರೈತರಿಗೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಗಳನ್ನು ಹೆಚ್ಚಿಸಲು ನಿರ್ಧರಿಸಲಾಯಿತು, ಅಂದರೆ, ಸರ್ಕಾರವು ರೈತರ ಕಾಳಜಿಗೆ ಆದ್ಯತೆ ನೀಡಿತು. ಛತ್ತೀಸ್‌ಗಢದಲ್ಲಿ 3 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಏಕಕಾಲದಲ್ಲಿ ತಮ್ಮ ಹೊಸ ಮನೆಗಳಿಗೆ ಸ್ಥಳಾಂತರಗೊಂಡವು. ಸ್ವಾಮಿತ್ವ ಯೋಜನೆಯಡಿ, 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ವಿತರಿಸಲಾಯಿತು. ಇದು ಮಾತ್ರವಲ್ಲದೆ, ವಿಶ್ವದ ಅತಿ ಎತ್ತರದ ಸುರಂಗಗಳಲ್ಲಿ ಒಂದಾದ ಸೋನಾಮಾರ್ಗ್ ಸುರಂಗವನ್ನು ಈ 100 ದಿನಗಳಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಾಗ್ಶೀರ್ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆ ಮತ್ತಷ್ಟು ಬಲಗೊಂಡಿತು. ಸಶಸ್ತ್ರ ಪಡೆಗಳಿಗಾಗಿ ಭಾರತದಲ್ಲೇ ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗೆ ಅನುಮೋದನೆ ನೀಡಲಾಯಿತು. ಹೆಚ್ಚುವರಿಯಾಗಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ಮಸೂದೆ ಅಂಗೀಕರಿಸುವುದರೊಂದಿಗೆ ಸಾಮಾಜಿಕ ನ್ಯಾಯದ ಕಡೆಗೆ ಮಹತ್ವದ ಹೆಜ್ಜೆ ಇಡಲಾಯಿತು. ಈ 100 ದಿನಗಳು ಕೇವಲ 100 ನಿರ್ಧಾರಗಳಿಗಿಂತ ಹೆಚ್ಚಿನವು - ಅವು 100 ನಿರ್ಣಯ(ಸಂಕಲ್ಪ)ಗಳ ನೆರವೇರಿಕೆಯನ್ನು ಗುರುತಿಸುತ್ತವೆ!

ಸ್ನೇಹಿತರೆ,

ಕಾರ್ಯಕ್ಷಮತೆಯ ಮಂತ್ರವು ಪ್ರಗತಿ ಕಾಣುತ್ತಿರುವ ಭಾರತದ ಹಿಂದಿನ ನಿಜವಾದ ಶಕ್ತಿಯಾಗಿದೆ. ನಿಮಗೆಲ್ಲರಿಗೂ ತಿಳಿದಿದೆ, ಕೇವಲ 2 ದಿನಗಳ ಹಿಂದೆ ನಾನು ರಾಮೇಶ್ವರಂನಲ್ಲಿದ್ದೆ. ಅಲ್ಲಿ, ಐತಿಹಾಸಿಕ ಪಂಬನ್ ಸೇತುವೆ ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತು. ಸುಮಾರು 125 ವರ್ಷಗಳ ಹಿಂದೆ, ಬ್ರಿಟಿಷರು ಅಲ್ಲಿ ಸೇತುವೆ ನಿರ್ಮಿಸಿದರು. ಆ ಸೇತುವೆ ಇತಿಹಾಸಕ್ಕೆ ಸಾಕ್ಷಿಯಾಯಿತು, ಬಿರುಗಾಳಿಗಳನ್ನು ಸಹಿಸಿಕೊಂಡಿತು ಮತ್ತು ಒಮ್ಮೆ ಸುನಾಮಿ ಮತ್ತು ಚಂಡಮಾರುತದಿಂದ ತೀವ್ರ ಹಾನಿ ಅನುಭವಿಸಿತು. ಅನೇಕ ವರ್ಷಗಳ ಕಾಲ ದೇಶ ಕಾಯುತ್ತಿತ್ತು, ಜನರು ಹೊಸ ಸೇತುವೆಗಾಗಿ ಒತ್ತಾಯಿಸುತ್ತಲೇ ಇದ್ದರು, ಆದರೆ ಹಿಂದಿನ ಸರ್ಕಾರಗಳು ಉದಾಸೀನ ತೋರಿದ್ದವು. ಆದಾಗ್ಯೂ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ಹೊಸ ಪಂಬನ್ ಸೇತುವೆಯ ಕೆಲಸ ಪ್ರಾರಂಭವಾಯಿತು. ಮತ್ತು ಈಗ ದೇಶವು ತನ್ನ ಮೊದಲ ಲಂಬ ಲಿಫ್ಟ್ ರೈಲು-ಸಮುದ್ರ ಸೇತುವೆಯನ್ನು ಪಡೆದುಕೊಂಡಿದೆ!

ಸ್ನೇಹಿತರೆ,

ಯೋಜನೆಗಳನ್ನು ವಿಳಂಬ ಮಾಡಿದರೆ ಯಾವುದೇ ಒಂದು ದೇಶವು ಪ್ರಗತಿ ಸಾಧಿಸುವುದಿಲ್ಲ, ಅದು ಕಾರ್ಯಕ್ಷಮತೆ ಮತ್ತು ತ್ವರಿತ ಅನುಷ್ಠಾನದ ಮೂಲಕ ಮುಂದುವರಿಯುತ್ತದೆ. ವಿಳಂಬವು ಅಭಿವೃದ್ಧಿಯ ಶತ್ರು, ನಾವು ಈ ಶತ್ರುವನ್ನು ಸೋಲಿಸಲು ನಿರ್ಧರಿಸಿದ್ದೇವೆ. ನಾನು ನಿಮಗೆ ಹೆಚ್ಚಿನ ಉದಾಹರಣೆಗಳನ್ನು ನೀಡುತ್ತೇನೆ. ಅಸ್ಸಾಂನಲ್ಲಿರುವ ಬೋಗಿಬೀಲ್ ಸೇತುವೆಯನ್ನೇ ನೋಡಿ - ನಮ್ಮ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರು 1997ರಲ್ಲಿ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ವಾಜಪೇಯಿ ಜಿ ಅಧಿಕಾರಕ್ಕೆ ಬಂದಾಗ, ಅವರು ನಿರ್ಮಾಣ ಕಾರ್ಯ ಪ್ರಾರಂಭಿಸಿದರು. ವಾಜಪೇಯಿ ಅವರ ಸರ್ಕಾರ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ನಂತರ, ಯೋಜನೆ ಸ್ಥಗಿತಗೊಂಡಿತು. ಈ ವಿಳಂಬದಿಂದಾಗಿ ಅರುಣಾಚಲ ಮತ್ತು ಅಸ್ಸಾಂನಲ್ಲಿ ಲಕ್ಷಾಂತರ ಜನರು ತೊಂದರೆ ಅನುಭವಿಸಿದರು, ಆದರೆ ಆ ಸಮಯದಲ್ಲಿ ಸರ್ಕಾರವು ಅಸಡ್ಡೆ ತೋರಿತು. 2014ರಲ್ಲಿ ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾವು ಯೋಜನೆಯನ್ನು ಪುನರಾರಂಭಿಸಿದ್ದೇವೆ. ಕೇವಲ 4 ವರ್ಷಗಳಲ್ಲಿ ಸೇತುವೆ 2018ರ ವೇಳೆಗೆ ಪೂರ್ಣಗೊಂಡಿತು. ಕೇರಳದಲ್ಲಿ ಕೊಲ್ಲಂ ಬೈಪಾಸ್ ರಸ್ತೆ ಯೋಜನೆಯೂ ಇದೇ ರೀತಿಯದ್ದಾಗಿದೆ. ಇದು 1972ರಿಂದ ಸ್ಥಗಿತಗೊಂಡಿತ್ತು. ನೀವೇ  ಊಹಿಸಿ, 50 ವರ್ಷಗಳ ಕಾಲ! ಅದು ಎಲ್‌ಡಿಎಫ್ ಆಗಿರಲಿ ಅಥವಾ ಯುಡಿಎಫ್ ಆಗಿರಲಿ, ಯಾವುದೇ ಸರ್ಕಾರ ಅರ್ಧ ಶತಮಾನದವರೆಗೆ ಅದರ ಕೆಲಸ ಮಾಡಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ನಂತರ, ನಾವು ಅದನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಿದ್ದೇವೆ.

ಸ್ನೇಹಿತರೆ,

ನವಿ ಮುಂಬೈ ವಿಮಾನ ನಿಲ್ದಾಣದ ಬಗ್ಗೆ ಚರ್ಚೆಗಳು 1997ರ ಆರಂಭದಲ್ಲೇ ಪ್ರಾರಂಭವಾದವು, 2007ರಲ್ಲಿ ಅದಕ್ಕೆ ಅನುಮೋದನೆ ನೀಡಲಾಯಿತು. ಆದಾಗ್ಯೂ, ಕಾಂಗ್ರೆಸ್ ಸರ್ಕಾರ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ನಾವು ಈ ಯೋಜನೆಯನ್ನು ವೇಗಗೊಳಿಸಿದ್ದೇವೆ. ಈಗ ನವಿ ಮುಂಬೈ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಕಾರ್ಯ ನಿರ್ವಹಣೆ  ಪ್ರಾರಂಭಿಸುವ ದಿನ ದೂರವಿಲ್ಲ.

ಸ್ನೇಹಿತರೆ,

ನಾನು ಹಂಚಿಕೊಳ್ಳುತ್ತಿರುವ ಸಾಧನೆಗಳ ಪಟ್ಟಿಯಲ್ಲಿ ಹೊಸ ಸಂಸದ್ ಭವನ ಮತ್ತು ಭಾರತ್ ಮಂಟಪವೂ ಸೇರಿದೆ.

ಏಪ್ರಿಲ್ 8 ಮತ್ತೊಂದು ಕಾರಣಕ್ಕಾಗಿಯೂ ಬಹಳ ಮಹತ್ವದ್ದಾಗಿದೆ - ಇದು ಮುದ್ರಾ ಯೋಜನೆಯ 10 ವರ್ಷಗಳನ್ನು ಸೂಚಿಸುತ್ತದೆ. ಇಲ್ಲಿ ಕುಳಿತಿರುವ ಅನೇಕ ಯುವಕರು ತಮ್ಮ ಪೋಷಕರಿಂದ ಹಿಂದೆ, ಖಾತರಿದಾರರಿಲ್ಲದೆ ಬ್ಯಾಂಕ್ ಖಾತೆ ತೆರೆಯುವುದು ಸಹ ಅಸಾಧ್ಯವಾಗಿತ್ತು ಎಂಬ ಕಥೆಗಳನ್ನು ಕೇಳಿರಬೇಕು. ಜನರಿಗೆ ಖಾತರಿ, ಯಾರೊಬ್ಬರ ಶಿಫಾರಸು ಅಗತ್ಯವಿತ್ತು, ಬ್ಯಾಂಕ್ ಸಾಲ ಪಡೆಯುವುದು ಸಾಮಾನ್ಯ ಕುಟುಂಬದ ಪಾಲಿಗೆ ಕನಸಾಗಿತ್ತು. ಆದರೆ ಬಡ ಕುಟುಂಬಗಳು, ಎಸ್‌ಸಿ/ಎಸ್‌ಟಿ, ಒಬಿಸಿ ಸಮುದಾಯಗಳು, ಭೂರಹಿತ ಕಾರ್ಮಿಕರು ಮತ್ತು ಮೇಲಾಧಾರವಾಗಿ ನೀಡಲು ಏನೂ ಇಲ್ಲದ, ಆದರೆ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಿರುವ ಮಹಿಳೆಯರ ಬಗ್ಗೆ ಏನು? ಅವರ ಕನಸುಗಳು ಮುಖ್ಯವಲ್ಲವೇ? ಅವರ ಆಕಾಂಕ್ಷೆಗಳು ಕಡಿಮೆಯೇ? ಅವರ ಕಠಿಣ ಪರಿಶ್ರಮಕ್ಕೆ ಯಾವುದೇ ಮೌಲ್ಯವಿಲ್ಲವೇ? ನಮ್ಮ ಮುದ್ರಾ ಯೋಜನೆ ಈ ಆಕಾಂಕ್ಷೆಗಳನ್ನು ಪರಿಹರಿಸಿತು, ಯುವಕರಿಗೆ ಹೊಸ ಮಾರ್ಗವನ್ನು ನೀಡಿತು. ಕಳೆದ 10 ವರ್ಷಗಳಲ್ಲಿ, ಮುದ್ರಾ ಯೋಜನೆಯಡಿ 52 ಕೋಟಿ ಸಾಲಗಳನ್ನು ವಿತರಿಸಲಾಗಿದೆ, ಯಾವುದೇ ಮೇಲಾಧಾರವಿಲ್ಲದೆ. ಇದು ಕೇವಲ ಪ್ರಮಾಣದ ಬಗ್ಗೆಯಲ್ಲ, ಆದರೆ ವೇಗದ ಬಗ್ಗೆಯೂ ಇದೆ. ಸಂಚಾರ ದೀಪ ಕೆಂಪು ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗುವ ಹೊತ್ತಿಗೆ, 100 ಮುದ್ರಾ ಸಾಲಗಳು ಮಂಜೂರಾಗುತ್ತವೆ. ನೀವು ಹಲ್ಲುಜ್ಜುವುದನ್ನು ಮುಗಿಸುವ ಹೊತ್ತಿಗೆ, 200 ಮುದ್ರಾ ಸಾಲಗಳು ಮಂಜೂರಾಗುತ್ತವೆ. ನೀವು ರೇಡಿಯೊದಲ್ಲಿ ಹಾಡನ್ನು ಕೇಳುವ ಹೊತ್ತಿಗೆ, 400 ಮುದ್ರಾ ಸಾಲಗಳು ಮಂಜೂರಾಗುತ್ತವೆ. ಇತ್ತೀಚಿನ ದಿನಗಳಲ್ಲಿ, ತ್ವರಿತ ವಿತರಣಾ ಅಪ್ಲಿಕೇಶನ್‌ಗಳು ಜನಪ್ರಿಯವಾಗಿವೆ - ಸರಿ, ನಿಮ್ಮ ಆಹಾರ ವಿತರಣೆ ಬರುವ ಸಮಯದಲ್ಲಿ, 1,000 ಮುದ್ರಾ ಸಾಲಗಳು ಮಂಜೂರಾಗುತ್ತವೆ. ನೀವು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಸಂಚಿಕೆ ನೋಡಿ ಮುಗಿಸುವ ಹೊತ್ತಿಗೆ, 5,000 ಸಣ್ಣ ವ್ಯವಹಾರಗಳನ್ನು ಮುದ್ರಾ ಯೋಜನೆ ಮೂಲಕ ಮಾಡಲಾಗುತ್ತಿದೆ.

ಸ್ನೇಹಿತರೆ,

ಮುದ್ರಾ ಯೋಜನೆ ಖಾತರಿಗಳನ್ನು ಕೇಳುತ್ತಿಲ್ಲ - ಅದು ಜನರ ಮೇಲೆ ನಂಬಿಕೆ ಇಟ್ಟಿದೆ. ಮುದ್ರಾದಿಂದಾಗಿ 11 ಕೋಟಿ ಜನರು ತಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಲು ಅಥವಾ ಸ್ವಯಂ ಉದ್ಯೋಗಿಗಳಾಗಲು ತಮ್ಮ ಮೊದಲ ಸಾಲ ಪಡೆದಿದ್ದಾರೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಈ 11 ಕೋಟಿ ವ್ಯಕ್ತಿಗಳು ಈಗ ಮೊದಲ ಬಾರಿಗೆ ಉದ್ಯಮಶೀಲರಾಗಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 10 ವರ್ಷಗಳಲ್ಲಿ 11 ಕೋಟಿ ಹೊಸ ಕನಸುಗಳು ಹುಟ್ಟಿಕೊಂಡಿವೆ. ಮುದ್ರಾ ಯೋಜನೆಯು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳನ್ನು ಎಷ್ಟು ಹಣ ತಲುಪಿದೆ ಎಂದು ನಿಮಗೆ ತಿಳಿದಿದೆಯೇ? ಇದು ಸುಮಾರು 33 ಲಕ್ಷ ಕೋಟಿ ರೂಪಾಯಿಗಳು - 33 ಲಕ್ಷ ಕೋಟಿ ರೂಪಾಯಿ! ಅದು ಅನೇಕ ದೇಶಗಳ ಜಿಡಿಪಿಗಿಂತ ಹೆಚ್ಚಿದೆ. ಇದು ಕೇವಲ ಮೈಕ್ರೋಫೈನಾನ್ಸ್ ಅಲ್ಲ - ಇದು ತಳಮಟ್ಟದಲ್ಲಿ ಒಂದು ಬೃಹತ್ ರೂಪಾಂತರವಾಗಿದೆ!

ಸ್ನೇಹಿತರೆ,

ಇದೇ ರೀತಿಯ ಉದಾಹರಣೆಯೆಂದರೆ, ಆಕಾಂಕ್ಷಿತ ಜಿಲ್ಲೆಗಳು ಮತ್ತು ಆಕಾಂಕ್ಷಿತ ಬ್ಲಾಕ್‌ಗಳ ಕಾರ್ಯಕ್ರಮ. ಹಿಂದಿನ ಸರ್ಕಾರಗಳು 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಹಿಂದುಳಿದವು ಎಂದು ಹಣೆಪಟ್ಟಿ ಕಟ್ಟಿ ಅವುಗಳನ್ನು ಸ್ವಂತವಾಗಿ ಹೋರಾಡಲು ಬಿಟ್ಟವು. ಈ ಜಿಲ್ಲೆಗಳಲ್ಲಿ ಹಲವು ಈಶಾನ್ಯ ಮತ್ತು ಬುಡಕಟ್ಟು ಪ್ರದೇಶಗಳಲ್ಲಿದ್ದವು. ಆದರ್ಶಪ್ರಾಯವಾಗಿ, ಸರ್ಕಾರವು ತನ್ನ ಅತ್ಯುತ್ತಮ ಪ್ರತಿಭೆಯನ್ನು ಈ ಜಿಲ್ಲೆಗಳಿಗೆ ಕಳುಹಿಸಬೇಕಾಗಿತ್ತು, ಆದರೆ ಬದಲಾಗಿ, ಅಧಿಕಾರಿಗಳನ್ನು ಶಿಕ್ಷೆಯ ವರ್ಗಾವಣೆಯಾಗಿ ಅಲ್ಲಿಗೆ ನಿಯೋಜಿಸಲಾಯಿತು. ಇದು ಹಳೆಯ ಮನಸ್ಥಿತಿಯಾಗಿತ್ತು - "ಹಿಂದುಳಿದವರು ಹಿಂದುಳಿದವರಾಗಿ ಉಳಿಯಲಿ." ನಾವು ಈ ವಿಧಾನವನ್ನು ಬದಲಾಯಿಸಿದ್ದೇವೆ, ಈ ಪ್ರದೇಶಗಳನ್ನು ಆಕಾಂಕ್ಷಿತ ಜಿಲ್ಲೆಗಳೆಂದು ಘೋಷಿಸಿದ್ದೇವೆ. ನಾವು ಉತ್ತಮ ಆಡಳಿತದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ, ನಮ್ಮ ಪ್ರಮುಖ ಯೋಜನೆಗಳನ್ನು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್‌)ಯಲ್ಲಿ ಜಾರಿಗೆ ತಂದಿದ್ದೇವೆ. ನಾವು ಬಹು ನಿಯತಾಂಕಗಳನ್ನು ಆಧರಿಸಿ ಈ ಜಿಲ್ಲೆಗಳ ಬೆಳವಣಿಗೆಯ ಮೇಲ್ವಿಚಾರಣೆ ಮಾಡಿದ್ದೇವೆ. ಇಂದು, ಈ ಆಕಾಂಕ್ಷಿತ ಜಿಲ್ಲೆಗಳಲ್ಲಿ ಹಲವು ರಾಜ್ಯಗಳು ಸರಾಸರಿ ಬೆಳವಣಿಗೆಯನ್ನು ಮೀರಿವೆ,  ಮತ್ತೆ ಕೆಲವು ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಸರಾಸರಿಯನ್ನು ದಾಟಿವೆ. ಈ ರೂಪಾಂತರದ ಅತಿದೊಡ್ಡ ಫಲಾನುಭವಿಗಳು ಈ ಜಿಲ್ಲೆಗಳ ಯುವಕರು. ಈಗ, ಅಲ್ಲಿನ ಯುವಕರು ವಿಶ್ವಾಸದಿಂದ ಹೇಳುತ್ತಾರೆ, "ನಾವು ಕೂಡ ಯಶಸ್ಸನ್ನು ಸಾಧಿಸಬಹುದು. ನಾವು ಕೂಡ ಮುಂದುವರಿಯಬಹುದು ಎಂದು." ಇಂದು ಅನೇಕ ಪ್ರಸಿದ್ಧ ಜಾಗತಿಕ ಸಂಸ್ಥೆಗಳು ಮತ್ತು ನಿಯತಕಾಲಿಕೆಗಳು ಆಕಾಂಕ್ಷಿತ ಜಿಲ್ಲೆಗಳ ಕಾರ್ಯಕ್ರಮಗಳನ್ನು ಗುರುತಿಸಿ, ಹೊಗಳಿವೆ. ಈ ಯಶಸ್ಸಿನಿಂದ ಪ್ರೇರಿತರಾಗಿ, ನಾವು ಈಗ 500 ಆಕಾಂಕ್ಷಿತ ಬ್ಲಾಕ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಬೆಳವಣಿಗೆಯು ಆಕಾಂಕ್ಷೆಗಳಿಂದ ನಡೆಸಲ್ಪಟ್ಟಾಗ, ಅದು ಎಲ್ಲರನ್ನೂ ಒಳಗೊಳ್ಳುವ ಮತ್ತು ಸುಸ್ಥಿರ ಅಭಿವೃದ್ಧಿಯಾಗುತ್ತದೆ.

ಸ್ನೇಹಿತರೆ,

ಯಾವುದೇ ರಾಷ್ಟ್ರವು ವೇಗವಾಗಿ ಬೆಳೆಯಬೇಕಾದರೆ, ಶಾಂತಿ, ಸ್ಥಿರತೆ ಮತ್ತು ಭದ್ರತೆಯ ಪ್ರಜ್ಞೆಯನ್ನು ಹೊಂದಿರುವುದು ಅತ್ಯಗತ್ಯ. ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು "ಮನಸ್ಸು ಭಯವಿಲ್ಲದೆ ಮತ್ತು ತಲೆ ಎತ್ತರದಲ್ಲಿ ಇರಬೇಕು" ಎಂಬ ಪದವನ್ನು ಕಲ್ಪಿಸಿಕೊಂಡರು. ಆದರೆ ದಶಕಗಳಿಂದ, ಭಾರತವು ಭಯ, ಭಯೋತ್ಪಾದನೆ ಮತ್ತು ಹಿಂಸೆಯ ಏರಿಕೆಗೆ ಸಾಕ್ಷಿಯಾಗಿದೆ. ನಮ್ಮ ದೇಶದ ಯುವಕರು ಹೆಚ್ಚು ಬಳಲುತ್ತಿದ್ದರು. ಯುವ ಜೀವಗಳು ಹಿಂಸೆ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಗೆ ಆಹುತಿಯಾದವು. ಜಮ್ಮು-ಕಾಶ್ಮೀರದಲ್ಲಿ ಹಲವಾರು ದಶಕಗಳ ಕಾಲ ಯುವಕರ ತಲೆಮಾರುಗಳು ಸಂಪೂರ್ಣ ಬಾಂಬ್‌ಗಳು, ಬಂದೂಕುಗಳು ಮತ್ತು ಕಲ್ಲು ತೂರಾಟದ ಚಕ್ರದಲ್ಲಿ ಕಳೆದುಹೋದವು. ಆದರೂ, ದಶಕಗಳ ಕಾಲ ಆಳಿದ ಸರ್ಕಾರಗಳಿಗೆ ಇದನ್ನು ಕೊನೆಗೊಳಿಸುವ ಧೈರ್ಯವಿರಲಿಲ್ಲ. ಆದರೆ ನಮ್ಮ ಸರ್ಕಾರದ ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಸೂಕ್ಷ್ಮ ವಿಧಾನದ ಮೂಲಕ, ಅಲ್ಲಿ ಪರಿಸ್ಥಿತಿ ರೂಪಾಂತರಗೊಂಡಿದೆ. ಇಂದು ಜಮ್ಮು ಮತ್ತು ಕಾಶ್ಮೀರದ ಯುವಕರು ಅಭಿವೃದ್ಧಿಯನ್ನು ಅಪ್ಪಿಕೊಂಡಿದ್ದಾರೆ.

ಸ್ನೇಹಿತರೆ,

ನಕ್ಸಲೀಯ ಸಮಸ್ಯೆಯನ್ನು ನೋಡಿ—ಒಂದು ಹಂತದಲ್ಲಿ, ದೇಶದ 125ಕ್ಕೂ ಹೆಚ್ಚು ಜಿಲ್ಲೆಗಳು ಹಿಂಸಾಚಾರ ಮತ್ತು ಭಯೋತ್ಪಾದನೆಯಲ್ಲಿ ಮುಳುಗಿದ್ದವು. 125 ಜಿಲ್ಲೆಗಳು! ನಕ್ಸಲೀಯ ಚಟುವಟಿಕೆ ಪ್ರಾರಂಭವಾದ ಪ್ರದೇಶಗಳಲ್ಲಿ, ಸರ್ಕಾರದ ಉಪಸ್ಥಿತಿಯು ಪ್ರಾಯೋಗಿಕವಾಗಿ ಕೊನೆಗೊಂಡಿತು. ಈ ನಕ್ಸಲಿಸಂನಿಂದಾಗಿ ಹೆಚ್ಚಿನ ಸಂಖ್ಯೆಯ ಯುವಕರು ಬಳಲುತ್ತಿದ್ದರು. ಈ ಯುವಕರನ್ನು ಮತ್ತೆ ಮುಖ್ಯವಾಹಿನಿಗೆ ತರಲು ನಾವು ಗಂಭೀರ ಪ್ರಯತ್ನಗಳನ್ನು ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ, 8,000ಕ್ಕೂ ಹೆಚ್ಚು ನಕ್ಸಲರು ಶರಣಾಗಿ ಹಿಂಸಾಚಾರ ತ್ಯಜಿಸಿದ್ದಾರೆ. ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು ಈಗ 20ಕ್ಕಿಂತ ಕಡಿಮೆ ಮಾಡಲಾಗಿದೆ. ಅದೇ ರೀತಿ, ಈಶಾನ್ಯದಲ್ಲಿ, ದಶಕಗಳಿಂದ ಪ್ರತ್ಯೇಕತಾವಾದ ಮತ್ತು ಹಿಂಸಾಚಾರದ ಅಂತ್ಯವಿಲ್ಲದ ಕಾಲವಿತ್ತು. ಆದರೆ ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು 10 ಪ್ರಮುಖ ಶಾಂತಿ ಒಪ್ಪಂದಗಳಿಗೆ ಯಶಸ್ವಿಯಾಗಿ ಸಹಿ ಹಾಕಿದೆ. ಈ ಅವಧಿಯಲ್ಲಿ, 10,000ಕ್ಕೂ ಹೆಚ್ಚು ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿದ್ದಾರೆ. ನಿಜವಾದ ಯಶಸ್ಸು ಎಂದರೆ ಸಾವಿರಾರು ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಲ್ಲ, ನಿಜವಾದ ಗೆಲುವು ಎಂದರೆ ಸಾವಿರಾರು ಯುವ ಜೀವಗಳ ವರ್ತಮಾನ ಮತ್ತು ಭವಿಷ್ಯವನ್ನು ಉಳಿಸಲಾಗಿದೆ.

ಸ್ನೇಹಿತರೆ,

ದಶಕಗಳಿಂದ, ನಮ್ಮ ದೇಶದಲ್ಲಿ ರಾಷ್ಟ್ರೀಯ ಸವಾಲುಗಳನ್ನು ಪರಿಹರಿಸುವ ಬದಲು ಅವುಗಳನ್ನು ರಾಜಕೀಯ ಕಾರ್ಪೆಟ್ ಅಡಿ ಗುಡಿಸುವ ಪ್ರವೃತ್ತಿ ಇತ್ತು. ಆದರೆ ಈಗ, ಈ ಸಮಸ್ಯೆಗಳನ್ನು ನೇರವಾಗಿ ಎದುರಿಸುವ ಸಮಯ ಬಂದಿದೆ. 21ನೇ ಶತಮಾನದ ತಲೆಮಾರುಗಳು 20ನೇ ಶತಮಾನದ ರಾಜಕೀಯ ತಪ್ಪುಗಳ ಹೊರೆಯನ್ನು ಹೊರಲು ನಾವು ಬಿಡಲು ಸಾಧ್ಯವಿಲ್ಲ. ಭಾರತದ ಬೆಳವಣಿಗೆಗೆ ದೊಡ್ಡ ಅಡೆತಡೆಗಳಲ್ಲಿ ಒಂದೆಂದರೆ ತುಷ್ಟೀಕರಣದ(ಓಲೈಕೆ) ರಾಜಕೀಯ(ರಾಜಕಾರಣ)ವಾಗಿದೆ. ಇತ್ತೀಚೆಗೆ, ವಕ್ಫ್ ಕಾನೂನುಗಳನ್ನು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ, ಇದನ್ನು ನಿಮ್ಮ ನೆಟ್‌ವರ್ಕ್‌ಗಳಲ್ಲಿಯೂ ವ್ಯಾಪಕವಾಗಿ ಚರ್ಚೆಯಾಗಿದೆ. ವಕ್ಫ್ ಕಾನೂನುಗಳ ಸುತ್ತಲಿನ ಚರ್ಚೆಗಳು ತುಷ್ಟೀಕರಣದ ರಾಜಕೀಯದಲ್ಲಿ ಬೇರೂರಿದೆ. ಆದರೆ ಈ ರಾಜಕೀಯ ತುಷ್ಟೀಕರಣ ಹೊಸದಲ್ಲ - ಇದು ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೇ ಬಿತ್ತಲ್ಪಟ್ಟಿತು. ಅದರ ಬಗ್ಗೆ ಯೋಚಿಸಿ - ಅನೇಕ ದೇಶಗಳು ಭಾರತಕ್ಕಿಂತ ಮೊದಲು, ಸ್ವಾತಂತ್ರ್ಯವನ್ನು ಗಳಿಸಿದವು. ಆದರೆ ಅವುಗಳಲ್ಲಿ ಎಷ್ಟು ದೇಶಗಳು ಸ್ವಾತಂತ್ರ್ಯಕ್ಕಾಗಿ ವಿಭಜನೆಯನ್ನು ಷರತ್ತಾಗಿ ಒಪ್ಪಿಕೊಳ್ಳಬೇಕಾಯಿತು? ಸ್ವಾತಂತ್ರ್ಯ ಸಮಯದಲ್ಲಿ ಎಷ್ಟು ದೇಶಗಳು ವಿಭಜನೆಯಾದವು? ಭಾರತ ಏಕೆ ಒಂದೇ ಆಗಿತ್ತು? ಏಕೆಂದರೆ ಆ ಸಮಯದಲ್ಲಿ, ಅಧಿಕಾರದ ಲಾಲಸೆಯನ್ನು ರಾಷ್ಟ್ರೀಯ ಹಿತಾಸಕ್ತಿಗಿಂತ ಮೇಲಿಡಲಾಗಿತ್ತು. ಪ್ರತ್ಯೇಕ ರಾಷ್ಟ್ರದ ಕಲ್ಪನೆಯು ಸಾಮಾನ್ಯ ಮುಸ್ಲಿಂ ಕುಟುಂಬಗಳದ್ದಾಗಿರಲಿಲ್ಲ - ಅದನ್ನು ಬೆರಳೆಣಿಕೆಯಷ್ಟು ಉಗ್ರಗಾಮಿಗಳು ಪ್ರಚಾರ ಮಾಡಿದರು. ಕೆಲವು ಕಾಂಗ್ರೆಸ್ ನಾಯಕರು ಈ ಕಲ್ಪನೆಯನ್ನು ಪೋಷಿಸಿದರು, ಇದರಿಂದಾಗಿ ಅವರು ಅಧಿಕಾರದ ಏಕೈಕ ಹಕ್ಕುದಾರರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು.

ಸ್ನೇಹಿತರೆ,

ಈ ಓಲೈಕೆಯ ರಾಜಕೀಯದಲ್ಲಿ, ಕಾಂಗ್ರೆಸ್ ಅಧಿಕಾರ ಗಳಿಸಿತು, ಕೆಲವು ಮೂಲಭೂತ ನಾಯಕರು ಶಕ್ತಿ ಮತ್ತು ಸಂಪತ್ತನ್ನು ಗಳಿಸಿದರು, ಆದರೆ ನಿಜವಾದ ಪ್ರಶ್ನೆಯೆಂದರೆ - ಸಾಮಾನ್ಯ ಮುಸ್ಲಿಮರಿಗೆ ಏನು ಸಿಕ್ಕಿತು? ಬಡವರು, ಪಸ್ಮಾಂಡ(ಅಂಚಿನಲ್ಲಿರುವ) ಮುಸ್ಲಿಮರಿಗೆ ಏನು ಸಿಕ್ಕಿತು? ಅವರು ನಿರ್ಲಕ್ಷ್ಯ ಅನುಭವಿಸಿದರು. ಅವರು ಅಶಿಕ್ಷಿತರಾಗಿದ್ದರು. ಅವರು ನಿರುದ್ಯೋಗದಿಂದ ಬಳಲುತ್ತಿದ್ದರು. ಮುಸ್ಲಿಂ ಮಹಿಳೆಯರಿಗೆ ಏನು ಸಿಕ್ಕಿತು? ಶಾ ಬಾನೋ ಪ್ರಕರಣದಂತೆ ಅವರಿಗೆ ಅನ್ಯಾಯವಾಯಿತು, ಅಲ್ಲಿ ಅವರ ಸಾಂವಿಧಾನಿಕ ಹಕ್ಕುಗಳನ್ನು ಉಗ್ರವಾದದ ಬಲಿಪೀಠದಲ್ಲಿ ಬಲಿಕೊಡಲಾಯಿತು. ಅವರಿಗೆ ಮೌನವಾಗಿರುವಂತೆ ಬೆದರಿಸಲಾಯಿತು, ಪ್ರಶ್ನೆಗಳನ್ನು ಕೇಳದಂತೆ ಒತ್ತಡ ಹೇರಲಾಯಿತು. ಏತನ್ಮಧ್ಯೆ, ಮೂಲಭೂತವಾದಿಗಳಿಗೆ ಮಹಿಳಾ ಹಕ್ಕುಗಳನ್ನು ನಿಗ್ರಹಿಸಲು ಉಚಿತ ಪರವಾನಗಿ ನೀಡಲಾಯಿತು.

ಸ್ನೇಹಿತರೆ,

ಓಲೈಕೆ (ತುಷ್ಟೀಕರಣ) ರಾಜಕೀಯವು ಭಾರತದಲ್ಲಿ ಸಾಮಾಜಿಕ ನ್ಯಾಯದ ಮೂಲ ತತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಆದರೆ ಕಾಂಗ್ರೆಸ್ ಅದನ್ನು ಮತ-ಬ್ಯಾಂಕ್ ರಾಜಕೀಯಕ್ಕಾಗಿ ಸಾಧನವಾಗಿ ಪರಿವರ್ತಿಸಿತು. 2013ರ ವಕ್ಫ್ ಕಾಯ್ದೆಗೆ ತಿದ್ದುಪಡಿಯ ಮೂಲಭೂತ ಅಂಶಗಳು ಭೂ ಮಾಫಿಯಾಗಳನ್ನು ಮೆಚ್ಚಿಸುವ ಪ್ರಯತ್ನವಾಗಿತ್ತು. ಕಾನೂನನ್ನು ಸಂವಿಧಾನಕ್ಕಿಂತ ಮೇಲಿರುವಂತೆ ಕಾಣುವಂತೆ ರೂಪಿಸಲಾಯಿತು. ಸಂವಿಧಾನವು ನ್ಯಾಯದ ಬಾಗಿಲುಗಳನ್ನು ತೆರೆಯುವ ಉದ್ದೇಶ ಹೊಂದಿತ್ತು, ಆದರೆ ಈ ವಕ್ಫ್ ಕಾನೂನು ಆ ಮಾರ್ಗಗಳನ್ನು ಸಂಕುಚಿತಗೊಳಿಸಿತು. ಅದರ ಪರಿಣಾಮಗಳೇನು? ಮೂಲಭೂತವಾದಿಗಳು ಮತ್ತು ಭೂ ಮಾಫಿಯಾಗಳ ಆರ್ಭಟ ಹೆಚ್ಚಾಯಿತು. ಕೇರಳದಲ್ಲಿ, ಕ್ರೈಸ್ತ ಗ್ರಾಮಸ್ಥರ ಜಮೀನುಗಳ ಮೇಲೆ ವಕ್ಫ್ ಹಕ್ಕುಗಳನ್ನು ಮಾಡಲಾಯಿತು. ಹರಿಯಾಣದಲ್ಲಿ, ಗುರುದ್ವಾರ ಭೂಮಿಯನ್ನು ವಿವಾದಗಳಿಗೆ ಎಳೆಯಲಾಯಿತು. ಕರ್ನಾಟಕದಲ್ಲಿ, ರೈತರ ಜಮೀನುಗಳನ್ನು ವಕ್ಫ್ ಹಕ್ಕುಗಳ ಅಡಿ ತರಲಾಯಿತು. ಅನೇಕ ರಾಜ್ಯಗಳಲ್ಲಿ, ಇಡೀ ಹಳ್ಳಿಗಳು ಮತ್ತು ಸಾವಿರಾರು ಹೆಕ್ಟೇರ್ ಭೂಮಿ ಎನ್ಒಸಿ ಮತ್ತು ಕಾನೂನು ತೊಂದರೆಗಳಲ್ಲಿ ಸಿಲುಕಿಕೊಂಡವು. ಅವು ದೇವಾಲಯಗಳಾಗಿರಬಹುದು, ಚರ್ಚ್‌ಗಳು, ಗುರುದ್ವಾರಗಳು, ಹೊಲಗಳು ಅಥವಾ ಸರ್ಕಾರಿ ಜಮೀನುಗಳಾಗಿರಬಹುದು, ಜನರು ತಮ್ಮ ಸ್ವಂತ ಆಸ್ತಿಯ ಭದ್ರತೆಯಲ್ಲಿ ನಂಬಿಕೆ ಕಳೆದುಕೊಂಡರು. ಭೂಮಾಲೀಕರು ತಮ್ಮ ಸ್ವಂತ ಮಾಲೀಕತ್ವವನ್ನು ಸಾಬೀತುಪಡಿಸಲು ದಾಖಲೆಗಳಿಗಾಗಿ ಉದ್ರಿಕ್ತ ಹುಡುಕಾಟಕ್ಕೆ ಸಿಲುಕಲು ಒಂದೇ ಒಂದು ಸೂಚನೆ ಸಾಕು. ನ್ಯಾಯವನ್ನು ನೀಡಬೇಕಾಗಿದ್ದ ಕಾನೂನು ಭಯ ಹರಡಿತು - ಇದು ಯಾವ ರೀತಿಯ ಕಾನೂನು?

ಸ್ನೇಹಿತರೆ,

ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳ ಹಿತಾಸಕ್ತಿಗಳನ್ನು ಪೂರೈಸುವ ಗಮನಾರ್ಹ ಕಾನೂನನ್ನು ಅಂಗೀಕರಿಸಿದ್ದಕ್ಕಾಗಿ ದೇಶದ ಸಂಸತ್ತನ್ನು ನಾನು ಅಭಿನಂದಿಸುತ್ತೇನೆ. ಈ ಕಾನೂನು ಈಗ ಬಡವರು ಮತ್ತು ಪಸ್ಮಾಂಡ ಮುಸ್ಲಿಮರು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಸುರಕ್ಷಿತಗೊಳಿಸುವ ಜತೆಗೆ ವಕ್ಫ್‌ನ ನೈಜ ಮನೋಭಾವದ ರಕ್ಷಣೆಯನ್ನು ಖಚಿತಪಡಿಸುತ್ತದೆ. ಕಳೆದ 75 ವರ್ಷಗಳಲ್ಲಿ ವಕ್ಫ್ ಮಸೂದೆಯ ಮೇಲಿನ ಚರ್ಚೆಯು ನಮ್ಮ ಸಂಸತ್ತಿನ ಇತಿಹಾಸದಲ್ಲಿ 2ನೇ ಅತಿ ದೀರ್ಘ ಚರ್ಚೆಯಾಗಿದೆ. ಉಭಯ ಸದನಗಳಲ್ಲಿ 16 ಗಂಟೆಗಳ ಕಾಲ ಮಸೂದೆಯ ಬಗ್ಗೆ ಚರ್ಚಿಸಲಾಯಿತು, ಜಂಟಿ ಸಂಸದೀಯ ಸಮಿತಿ(ಜೆಪಿಸಿ) 38 ಸಭೆಗಳನ್ನು ನಡೆಸಿತು, 128 ಗಂಟೆಗಳ ಚರ್ಚೆಗಳಲ್ಲಿ ತೊಡಗಿತು, ದೇಶಾದ್ಯಂತ ಜನರಿಂದ ಸುಮಾರು 1 ಕೋಟಿ ಆನ್‌ಲೈನ್ ಸಲಹೆಗಳನ್ನು ಸ್ವೀಕರಿಸಿತು. ಇಂದು ಭಾರತದಲ್ಲಿ ಪ್ರಜಾಪ್ರಭುತ್ವವು ಸಂಸತ್ತಿನ 4 ಗೋಡೆಗಳಿಗೆ ಸೀಮಿತವಾಗಿಲ್ಲ ಎಂದು ಇದು ತೋರಿಸುತ್ತಿದೆ. ಸಾರ್ವಜನಿಕ ಭಾಗವಹಿಸುವಿಕೆಯು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತಿದೆ.

ಸ್ನೇಹಿತರೆ,

ಇಂದು ಜಗತ್ತು ತಂತ್ರಜ್ಞಾನ ಮತ್ತು ಎಐ ಕಡೆಗೆ ವೇಗವಾಗಿ ಚಲಿಸುತ್ತಿದೆ. ಅದಕ್ಕಾಗಿಯೇ ನಮ್ಮ ಕಲೆ, ಸಂಗೀತ, ಸಂಸ್ಕೃತಿ ಮತ್ತು ಸೃಜನಶೀಲತೆಯ ಮೇಲೆ ಗಮನ ಹರಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಏಕೆಂದರೆ ನಾವು ರೋಬೋಟ್‌ಗಳನ್ನು ಸಿದ್ಧಪಡಿಸಲು ಬಯಸುವುದಿಲ್ಲ, ನಾವು ಮನುಷ್ಯರನ್ನು ಸಿದ್ಧಪಡಿಸಲು ಬಯಸುತ್ತೇವೆ. ತಂತ್ರಜ್ಞಾನ ಮುಂದುವರೆದಂತೆ, ನಾವು ಸೃಜನಶೀಲತೆಯ ಮೂಲಕ ಮಾನವೀಯತೆ ಮತ್ತು ಸೂಕ್ಷ್ಮತೆಯನ್ನು ಹೆಚ್ಚಿಸಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಮನರಂಜನೆ ಈಗಾಗಲೇ ವಿಶ್ವದ ಅತಿದೊಡ್ಡ ಕೈಗಾರಿಕೆಗಳಲ್ಲಿ ಒಂದಾಗಿದೆ, ಭವಿಷ್ಯದಲ್ಲಿ ಅದು ವಿಸ್ತರಿಸುತ್ತಲೇ ಇರುತ್ತದೆ. ಈ ಯುಗದಲ್ಲಿ, ಕಲೆ ಮತ್ತು ಸಂಸ್ಕೃತಿಯನ್ನು ಆಚರಿಸಲು ಮತ್ತು ಪ್ರೋತ್ಸಾಹಿಸಲು ನಾವು ವೇವ್ಸ್(WAVES) - ವಿಶ್ವ ಆಡಿಯೊ ವಿಶುವಲ್ ಮತ್ತು ಮನರಂಜನಾ ಶೃಂಗಸಭೆ ಪ್ರಾರಂಭಿಸಿದ್ದೇವೆ. ರಾಹುಲ್ ಮಾತನಾಡುವಾಗ ನೀವು WAVES ಎಂಬ ಪದವನ್ನು ಹಲವು ಬಾರಿ ಕೇಳಿರಬಹುದು, ಆದರೆ ಈ ಉಪಕ್ರಮವನ್ನು 2014ರಲ್ಲಿ ನೀವೇಕೆ ಪ್ರಾರಂಭಿಸಲಿಲ್ಲ, ಇದು ಪ್ರತಿ ದಶಕದಲ್ಲಿ ಹೊಸ ರೂಪಗಳು ಮತ್ತು ನಾವೀನ್ಯತೆಗಳೊಂದಿಗೆ ವಿಕಸನಗೊಳ್ಳುತ್ತದೆ. ಇಂದು ನಾನು WAVES - ವಿಶ್ವ ಆಡಿಯೊ ವಿಶುವಲ್ ಮತ್ತು ಮನರಂಜನಾ ಶೃಂಗಸಭೆಯ ಬಗ್ಗೆ ಮಾತನಾಡುತ್ತಿದ್ದೇನೆ. ಈ ವೇದಿಕೆಯನ್ನು ರೂಪಿಸಲಾಗಿದೆ. ಮುಂದಿನ ತಿಂಗಳು ಮುಂಬೈ ಮಹಾನಗರಿಯು ವೇವ್ಸ್ ನ ಭವ್ಯ ಆವೃತ್ತಿಯನ್ನು ಆಯೋಜಿಸುತ್ತದೆ, ಇದು ನಿಯಮಿತ ಜಾಗತಿಕ ಕಾರ್ಯಕ್ರಮವಾಗಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಚಲನಚಿತ್ರಗಳು, ಪಾಡ್‌ಕ್ಯಾಸ್ಟ್‌ಗಳು, ಗೇಮಿಂಗ್, ಸಂಗೀತ, ಆಗ್ಮೆಂಟೆಡ್ ರಿಯಾಲಿಟಿ(ಎಆರ್) ಮತ್ತು ವರ್ಚುವಲ್ ರಿಯಾಲಿಟಿ(ವಿಆರ್) ಭಾರತದಲ್ಲಿ ಒಂದು ರೋಮಾಂಚಕ ಮತ್ತು ಸೃಜನಶೀಲ ಉದ್ಯಮವಾಗಿದೆ. ಭಾರತದಲ್ಲಿ ಸೃಜಿಸಿ("Create in India") ಎಂಬ ಮಂತ್ರದೊಂದಿಗೆ ನಾವು ಈ ಉದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ವೇವ್ಸ್ ಭಾರತೀಯ ಕಲಾವಿದರನ್ನು ವಿಷಯ ರಚಿಸಲು ಮತ್ತು ಜಾಗತಿಕವಾಗಿ ಹೋಗಲು ಪ್ರೋತ್ಸಾಹಿಸುತ್ತದೆ. "Create in India" ಪ್ರಪಂಚದಾದ್ಯಂತದ ಕಲಾವಿದರನ್ನು ಭಾರತಕ್ಕೆ ಆಹ್ವಾನಿಸುತ್ತದೆ. ವೇವ್ಸ್ ನ ಈ ವೇದಿಕೆಯನ್ನು ಜನಪ್ರಿಯಗೊಳಿಸಲು ಸಹಾಯ ಮಾಡುವಂತೆ ನೆಟ್‌ವರ್ಕ್18 ಅನ್ನು ಒತ್ತಾಯಿಸುತ್ತೇನೆ. ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಯುವಕರಿದ್ದಾರೆ. ಅವರಲ್ಲಿ ಕೆಲವರನ್ನು ಭೇಟಿ ಮಾಡುವ ಅವಕಾಶವೂ ನನಗಿದೆ. ಈ ಆಂದೋಲನದ ಭಾಗವಾಗಲು ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ. ವೇವ್ಸ್ ಪ್ರತಿ ಮನೆ ಮತ್ತು ಪ್ರತಿ ಹೃದಯವನ್ನು ತಲುಪಲಿ! ನೀವು ಇದನ್ನು ಸಾಧ್ಯವಾಗಿಸುತ್ತೀರಿ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಈ ಶೃಂಗಸಭೆಯ ಮೂಲಕ ನೆಟ್‌ವರ್ಕ್18 ನಮ್ಮ ರಾಷ್ಟ್ರದ ಯುವಕರ ಸೃಜನಶೀಲತೆ, ದೃಷ್ಟಿಕೋನ ಮತ್ತು ದೃಢಸಂಕಲ್ಪವನ್ನು ಅದ್ಭುತವಾಗಿ ಪ್ರದರ್ಶಿಸಿದೆ. ನೀವು ಯುವ ಮನಸ್ಸುಗಳನ್ನು ಹೇಗೆ ತೊಡಗಿಸಿಕೊಂಡಿದ್ದೀರಿ, ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಯೋಚಿಸಲು ಮತ್ತು ಪರಿಹಾರಗಳನ್ನು ಸೂಚಿಸಲು ಅವರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಅತ್ಯಂತ ಮಹತ್ವದ ಸಾಧನೆಯೆಂದರೆ ನೀವು ಅವರನ್ನು ಕೇವಲ ಕೇಳುಗರನ್ನಾಗಿ ಮಾಡಿಲ್ಲ, ಬದಲಾಗಿ ರೂಪಾಂತರದಲ್ಲಿ ಪಾಲುದಾರರನ್ನಾಗಿ ಮಾಡಿದ್ದೀರಿ. ಈಗ ದೇಶಾದ್ಯಂತದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಶೋಧನಾ ಸಂಸ್ಥೆಗಳು ಈ ಶೃಂಗಸಭೆಯ ಪಾಲ್ಗೊಳ್ಳುವಿಕೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ನಾನು ಒತ್ತಾಯಿಸುತ್ತೇನೆ. ಇಲ್ಲಿ ಹೊರಹೊಮ್ಮಿರುವ ಒಳನೋಟಗಳು ಮತ್ತು ಸಲಹೆಗಳನ್ನು ದಾಖಲಿಸಬೇಕು, ಅಧ್ಯಯನ ಮಾಡಬೇಕು ಮತ್ತು ನೀತಿ ನಿರೂಪಣೆಗಾಗಿ ಪ್ರಸ್ತುತಪಡಿಸಬೇಕು. ಆಗ ಮಾತ್ರ ಈ ಶೃಂಗಸಭೆ ಕೇವಲ ಒಂದು ಘಟನೆಯಾಗಿ ಉಳಿಯುವುದಿಲ್ಲ, ಬದಲಾಗಿ ಪ್ರಭಾವಿ ಶಕ್ತಿಯಾಗುತ್ತದೆ. ನಿಮ್ಮ ಉತ್ಸಾಹ, ಆಲೋಚನೆಗಳು ಮತ್ತು ಭಾಗವಹಿಸುವಿಕೆಯೇ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಭಾರತದ ಸಂಕಲ್ಪದ ಹಿಂದಿನ ನಿಜವಾದ ಶಕ್ತಿ. ಮತ್ತೊಮ್ಮೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ, ವಿಶೇಷವಾಗಿ ನಮ್ಮ ಯುವ ಪ್ರತಿನಿಧಿಗಳುಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(Release ID: 2120843) Visitor Counter : 15