ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಯುರೋಪಿಯನ್ ಆಯೋಗದ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ. (ಫೆಬ್ರವರಿ 28, 2025)
Posted On:
28 FEB 2025 3:04PM by PIB Bengaluru
ಘನತೆವೆತ್ತ ಯುರೋಪಿಯನ್ ಆಯೋಗದ ಅಧ್ಯಕ್ಷರೇ,
ಯುರೋಪಿಯನ್ ಕಾಲೇಜ್ ಆಫ್ ಕಮಿಷನರ್ ಗಳೇ,
ಪ್ರತಿನಿಧಿಗಳೇ ,
ಮಾಧ್ಯಮದ ಮಿತ್ರರೇ,
ನಮಸ್ಕಾರ!
ಯುರೋಪಿಯನ್ ಆಯೋಗದ ಅಧ್ಯಕ್ಷರು ಮತ್ತು ಕಾಲೇಜ್ ಆಫ್ ಕಮಿಷನರ್‌ಗಳ ಈ ಭಾರತ ಭೇಟಿ ಅಭೂತಪೂರ್ವವಾಗಿದೆ.
ಯುರೋಪಿಯನ್ ಆಯೋಗ ಭಾರತಕ್ಕೆ ನೀಡಿರುವುದು ಇದೇ ಮೊದಲ ಸಲವಲ್ಲ, ಆದರೆ ಯಾವುದೇ ಒಂದು ದೇಶದಲ್ಲಿ ಯುರೋಪಿಯನ್ ಆಯೋಗದ ಮೊದಲ ಸಮಗ್ರ ಪಾಲುದಾರಿಕೆ ಇದಾಗಿದೆ. ಅಲ್ಲದೆ, ಇದು ಹೊಸ ಆಯೋಗದ ಇತ್ತೀಚಿನ ಅವಧಿಯಲ್ಲಿನ ಮೊದಲ ಭೇಟಿಗಳಲ್ಲಿ ಒಂದಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಯುರೋಪಿಯನ್ ಆಯೋಗದ ಅಧ್ಯಕ್ಷರು ಹಾಗೂ ಕಾಲೇಜ್ ಆಫ್ ಕಮಿಷನರ್‌ಗಳನ್ನು ನಾನು ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ಮಿತ್ರರೇ,
ಭಾರತ ಮತ್ತು ಇಯು ನಡುವಿನ ಎರಡು ದಶಕಗಳ ಕಾರ್ಯತಂತ್ರದ ಪಾಲುದಾರಿಕೆಯು ನೈಸರ್ಗಿಕ ಮತ್ತು ಸಾವಯವವಾಗಿದೆ. ಇದರ ಮೂಲವು ನಂಬಿಕೆ, ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಹಂಚಿಕೆಯ ಮೇಲಿನ ವಿಶ್ವಾಸ ಮತ್ತು ಸಮೃದ್ಧಿ ಮತ್ತು ಪ್ರಗತಿಯ ಸಮಾನ ಹಂಚಿಕೆಯ ಪರಸ್ಪರ ಬದ್ಧತೆಯಾಗಿದೆ.
ಈ ಉತ್ಸಾಹದಲ್ಲಿ, ನಾವು ನಿನ್ನೆ ಮತ್ತು ಇಂದಿನ ನಡುವೆ ವಿವಿಧ ಕ್ಷೇತ್ರಗಳ ಸುಮಾರು 20 ಸಚಿವ ಮಟ್ಟದ ಸಭೆಗಳನ್ನು ನಡೆಸಿದ್ದೇವೆ. ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಪ್ರಾಮಾಣಿಕ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆದವು. ನಮ್ಮ ಪಾಲುದಾರಿಕೆಯನ್ನು ಉನ್ನತೀಕರಿಸಲು ಮತ್ತು ವೇಗಗೊಳಿಸಲು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ನಾವೀನ್ಯತೆ, ಹಸಿರು ಬೆಳವಣಿಗೆ, ಭದ್ರತೆ, ಕೌಶಲ್ಯ ಮತ್ತು ಸಂಚಾರ ವಲಯಗಳಲ್ಲಿ ಸಹಯೋಗಕ್ಕಾಗಿ ನಾವು ನೀಲನಕ್ಷೆಯನ್ನು ಸಿದ್ಧಪಡಿಸಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಆಖೈರುಗೊಳಿಸಲು ನಾವು ನಮ್ಮ ತಂಡಗಳಿಗೆ ನಿರ್ದೇಶನ ನೀಡಿದ್ದೇವೆ.
ಮಿತ್ರರೇ,
ಹೂಡಿಕೆ ಚೌಕಟ್ಟನ್ನು ಬಲವರ್ಧನೆಗೊಳಿಸಲು, ಹೂಡಿಕೆ ರಕ್ಷಣೆ ಮತ್ತು ಜಿಐ ಒಪ್ಪಂದದ ಕುರಿತು ಮುಂದುವರಿಯುವ ಬಗ್ಗೆಯೂ ಚರ್ಚೆ ನಡೆದಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಮೌಲ್ಯ ಸರಣಿಯು ನಮ್ಮ ಸಾಮಾನ್ಯ ಆದ್ಯತೆಯಾಗಿದೆ.
ಅರೆವಾಹಕಗಳು, ಕೃತಕ ಬುದ್ಧಿಮತ್ತೆ(ಎಐ), ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಮತ್ತು 6ಜಿ ಗಳಲ್ಲಿ ಸಹಕಾರವನ್ನು ವೃದ್ಧಿಸಲೂ ಸಹ ನಾವು ಒಪ್ಪಿಕೊಂಡಿದ್ದೇವೆ. ಬಾಹ್ಯಾಕಾಶ ವಲಯದ ಕುರಿತಂತೆ ಸಂವಾದವನ್ನು ಆರಂಭಿಸಲು ಸಹ ನಾವು ನಿರ್ಧರಿಸಿದ್ದೇವೆ.
ಮಿತ್ರರೇ,
ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವಿನ ಸಮತೋಲನವು ನಮ್ಮ ಹಂಚಿಕೆಯ ಬದ್ಧತೆಯಾಗಿದೆ ಮತ್ತು ಆ ನಿಟ್ಟಿನಲ್ಲಿ ನಮ್ಮ ಸಹಕಾರವು ಸದೃಢವಾಗಿದೆ. ನಾವು ಹಸಿರು ಹೈಡ್ರೋಜನ್ ವೇದಿಕೆ ಮತ್ತು ಕಡಲಾಚೆಯ ಪವನ ಶಕ್ತಿ ವ್ಯವಹಾರ ಶೃಂಗಸಭೆ ನಡೆಸಲು ನಿರ್ಧರಿಸಿದ್ದೇವೆ. ಇವಿ ಬ್ಯಾಟರಿಗಳು, ಸಾಗರ ಪ್ಲಾಸ್ಟಿಕ್‌ಗಳು ಮತ್ತು ಹಸಿರು ಹೈಡ್ರೋಜನ್ ಕುರಿತು ಜಂಟಿ ಸಂಶೋಧನೆಯನ್ನು ಕೈಗೊಳ್ಳಲಾಗುವುದು. ಸುಸ್ಥಿರ ನಗರಾಭಿವೃದ್ಧಿಯ ಕುರಿತು ನಮ್ಮ ಜಂಟಿ ಯೋಜನೆಯನ್ನು ಸಹ ನಾವು ಮುಂದೆ ಕೊಂಡೊಯ್ಯುತ್ತೇವೆ.
ಸಂಪರ್ಕ ವಲಯದಲ್ಲಿ ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ ಅಥವಾ ‘ಐಎಂಇಇಸಿ’ ಅನ್ನು ಮುಂದಕ್ಕೆ ಕೊಂಡೊಯ್ಯಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುವುದು. ಐಎಂಇಇಸಿ ಮುಂದಿನ ದಿನಗಳಲ್ಲಿ ಜಾಗತಿಕ ವಾಣಿಜ್ಯ, ಸುಸ್ಥಿರ ಬೆಳವಣಿಗೆ ಮತ್ತು ಸಮೃದ್ಧಿಗೆ ಶಕ್ತಿ ನೀಡುವ ಎಂಜಿನ್ ಆಗಿ ಕಾರ್ಯನಿರ್ವಹಿಸುತ್ತದೆಂದು ನಾನು ದೃಢವಾಗಿ ನಂಬಿದ್ದೇನೆ.
ಮಿತ್ರರೇ,
ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ನಮ್ಮ ಬೆಳೆಯುತ್ತಿರುವ ಸಹಕಾರವು ನಮ್ಮ ಪರಸ್ಪರ ನಂಬಿಕೆಯ ದ್ಯೋತಕವಾಗಿದೆ. ಸೈಬರ್ ಭದ್ರತೆ, ಸಾಗರ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ನಾವು ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯ ಮಹತ್ವವನ್ನು ಎರಡೂ ದೇಶಗಳೂ ಒಪ್ಪಿವೆ. "ಇಂಡೋ ಪೆಸಿಫಿಕ್ ಸಾಗರಗಳ ಉಪಕ್ರಮ"ಕ್ಕೆ ಸೇರುವ ಇಯು ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಆಫ್ರಿಕಾದಲ್ಲಿ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗಾಗಿ ತ್ರಿಕೋನ ಅಭಿವೃದ್ಧಿ ಯೋಜನೆಗಳಲ್ಲಿ ನಾವು ಒಗ್ಗೂಡಿ ಕೆಲಸ ಮಾಡುತ್ತೇವೆ.
ಮಿತ್ರರೇ,
ಜನರ-ಜನರ ನಡುವಿನ ಸಂಪರ್ಕವು ನಮ್ಮ ಸಂಬಂಧದ ಬಲವಾದ ಆಸ್ತಿಯಾಗಿದೆ. ಇಂದು ನಮ್ಮ ನಡುವೆ ಶೈಕ್ಷಣಿಕ, ಸಂಶೋಧನೆ ಮತ್ತು ಕೈಗಾರಿಕಾ ಪಾಲುದಾರಿಕೆಯನ್ನು ವೃದ್ಧಿಸಲು ನಾವು ಹೊಸ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ. ಭಾರತದ ಯುವ ಪ್ರತಿಭೆ ಮತ್ತು ಯುರೋಪಿನ ನಾವೀನ್ಯತೆ ಒಟ್ಟಾಗಿ ಅಪರಿಮಿತ ಸಾಧ್ಯತೆಗಳನ್ನು ಸೃಷ್ಟಿಸಬಹುದೆಂದು ನಾನು ನಂಬಿದ್ದೇನೆ.
ಇಯು ನ ಹೊಸ ವೀಸಾ ಕ್ಯಾಸ್ಕೇಡ್ ಆಡಳಿತವನ್ನು ನಾವು ಸ್ವಾಗತಿಸುತ್ತೇವೆ. ಇದು ಭಾರತದ ಪ್ರತಿಭಾನ್ವಿತ ಯುವಕರ ಸಾಮರ್ಥ್ಯಗಳಿಗೆ ಉತ್ತಮ ಸಂಚಾರವನ್ನು ಒದಗಿಸುತ್ತದೆ.
ನಾವು ಇಂದು 2025ರ ನಂತರದ ಅವಧಿಗೆ ಭಾರತ-ಇಯು ಪಾಲುದಾರಿಕೆಗಾಗಿ ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಲು ನಿರ್ಧರಿಸಿದ್ದೇವೆ. ಇದನ್ನು ಮುಂದಿನ ಭಾರತ-ಇಯು ಶೃಂಗಸಭೆಯ ವೇಳೆ ಆರಂಭಿಸಲಾಗುವುದು.
ಗೌರವಾನ್ವಿತರೇ,
ನಿಮ್ಮ ಭಾರತ ಭೇಟಿಯು ನಮ್ಮ ಪಾಲುದಾರಿಕೆಗೆ ಹೊಸ ವೇಗ, ಶಕ್ತಿ ಮತ್ತು ಉತ್ಸಾಹವನ್ನು ನೀಡಿದೆ. ನಿಮ್ಮ ಈ ಪಯಣವು ನಮ್ಮ ಮಹತ್ವಾಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರುವ ಅತಿದೊಡ್ಡ ವೇಗವರ್ಧಕವಾಗಲಿದೆ.
ಮುಂಬರುವ ಭಾರತ-ಯುರೋಪಿಯನ್ ಒಕ್ಕೂಟದ ಶೃಂಗಸಭೆಗೆ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುವ ಅವಕಾಶಕ್ಕಾಗಿ ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.
ತುಂಬಾ ತುಂಬಾ ಧನ್ಯವಾದಗಳು.
*****
(Release ID: 2107013)
Visitor Counter : 19
Read this release in:
Odia
,
Assamese
,
English
,
Urdu
,
Marathi
,
Hindi
,
Bengali
,
Manipuri
,
Gujarati
,
Tamil
,
Telugu
,
Malayalam