ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ 2025ರ ಮೊದಲ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ನಟಿ ದೀಪಿಕಾ ಪಡುಕೋಣೆ ಅವರು ಪರೀಕ್ಷಾ ಪೇ ಚರ್ಚಾ 2025ರ 2ನೇ ಸಂಚಿಕೆಯಲ್ಲಿ ಭಾಗವಹಿಸಿದರು
Posted On:
12 FEB 2025 7:35PM by PIB Bengaluru
ಫೆಬ್ರವರಿ 10, 2025 ರಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಸುಂದರ್ ನರ್ಸರಿಯಲ್ಲಿ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 8ನೇ ಆವೃತ್ತಿಯ ಮೊದಲ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಅನೌಪಚಾರಿಕ ಆದರೆ ತಿಳಿವಳಿಕೆ ನೀಡುವ ಅಧಿವೇಶನದಲ್ಲಿ, ಪ್ರಧಾನಿಯವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳನ್ನು ಚರ್ಚಿಸಿದರು. ಹಾಜರಿದ್ದ 36 ವಿದ್ಯಾರ್ಥಿಗಳು ಪೌಷ್ಠಿಕಾಂಶ ಮತ್ತು ಆರೋಗ್ಯದ ಕುರಿತು ಪ್ರಧಾನ ಮಂತ್ರಿಯವರಿಂದ ಒತ್ತಡವನ್ನು ನಿರ್ವಹಿಸುವುದು; ತಮಗೆ ತಾವೇ ಸವಾಲು ಹಾಕಿಕೊಳ್ಳುವುದು; ನಾಯಕತ್ವದ ಕಲೆ; ಪುಸ್ತಕಗಳ ಆಚೆಗೆ - 360º ಬೆಳವಣಿಗೆ; ಸಕಾರಾತ್ಮಕತೆಯನ್ನು ಕಂಡುಹಿಡಿಯುವುದು ಮತ್ತು ಇನ್ನಿತರ ಅಮೂಲ್ಯವಾದ ಪಾಠಗಳನ್ನು ಕಲಿತರು. ಈ ಸಂವಾದಾತ್ಮಕ ಅಧಿವೇಶನವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಾಲುಗಳನ್ನು ಆತ್ಮವಿಶ್ವಾಸ ಮತ್ತು ಬೆಳವಣಿಗೆಯ ಮನಸ್ಥಿತಿಯೊಂದಿಗೆ ಎದುರಿಸಲು ಮೌಲ್ಯಯುತವಾದ ಒಳನೋಟಗಳನ್ನು ಮತ್ತು ಪ್ರಾಯೋಗಿಕ ಕಾರ್ಯತಂತ್ರಗಳನ್ನು ಒದಗಿಸಿತು.
ಇಂದು ಖ್ಯಾತ ನಟಿ ಮತ್ತು ಮಾನಸಿಕ ಆರೋಗ್ಯ ಚಾಂಪಿಯನ್ ದೀಪಿಕಾ ಪಡುಕೋಣೆ ಅವರು ಪರೀಕ್ಷಾ ಪೆ ಚರ್ಚಾದ 8ನೇ ಆವೃತ್ತಿಯ ಎರಡನೇ ಸಂಚಿಕೆಯಲ್ಲಿ ಭಾಗವಹಿಸಿದರು. ಸಂವಾದದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾನಸಿಕ ಆರೋಗ್ಯದ ಸವಾಲುಗಳನ್ನು ನಿಭಾಯಿಸುವುದು ಸಬಲೀಕರಣಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ದೀಪಿಕಾ ವಿವರಿಸಿದರು ಮತ್ತು ತಮ್ಮ ಸ್ವಂತ ಹೋರಾಟದಿಂದ ಕಲಿತ ಅಮೂಲ್ಯ ಪಾಠಗಳನ್ನು ಹಂಚಿಕೊಂಡರು. ತಮ್ಮ ಒತ್ತಡ ನಿರ್ವಹಣಾ ತಂತ್ರಗಳನ್ನು ಹಂಚಿಕೊಳ್ಳುತ್ತಾ, ಸಾಕಷ್ಟು ನಿದ್ರೆ ಮಾಡುವುದು, ನೈಸರ್ಗಿಕ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯಲ್ಲಿ ಸಮಯ ಕಳೆಯುವುದು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಆರೋಗ್ಯಕರ ದೈನಂದಿನ ದಿನಚರಿಯನ್ನು ನಿರ್ವಹಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನಸ್ಥಿತಿಯೇ ಯಶಸ್ಸಿನ ಕೀಲಿಕೈ ಎಂದು ಅವರು ಹೇಳಿದರು. ವೈಫಲ್ಯಗಳನ್ನು ಕಲಿಕೆಯ ಅವಕಾಶಗಳಾಗಿ ನೋಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಅವರು, ದೃಢಸಂಕಲ್ಪದೊಂದಿಗೆ ಮುಂದುವರಿಯುವಂತೆ ಅವರನ್ನು ಪ್ರೇರೇಪಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ವ್ಯಕ್ತಪಡಿಸಿ, ಎಂದಿಗೂ ನಿಗ್ರಹಿಸಬೇಡಿ" (ಎಕ್ಸ್‌ಪ್ರೆಸ್ ನೆವರ್ ಸಪ್ರೆಸ್) ಎಂಬ ಸಂದೇಶವನ್ನು ಪುನರುಚ್ಚರಿಸಿದ ದೀಪಿಕಾ, ಅಗತ್ಯವಿದ್ದಾಗ ಸಹಾಯವನ್ನು ಪಡೆಯುವ ಮಹತ್ವವನ್ನು ಒತ್ತಿ ಹೇಳಿದರು. ತಮ್ಮ ಸಾಮರ್ಥ್ಯಗಳನ್ನು ಬರೆದು ವೇದಿಕೆಯ ಮೇಲೆ ಬೋರ್ಡ್ ನಲ್ಲಿ ಅಂಟಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ ಅವರು, ಸ್ವಯಂ ಅರಿವು ಮತ್ತು ಒಬ್ಬರ ಸಾಮರ್ಥ್ಯಗಳನ್ನು ಗುರುತಿಸುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಅವರು 54321 ಎಂಬ ಚಟುವಟಿಕೆಯ ಮೂಲಕ ಲೈವ್ ಗ್ರೌಂಡಿಂಗ್ ಅಧಿವೇಶನವನ್ನು ನಡೆಸಿದರು, ಪರೀಕ್ಷೆಗಳ ಸಮಯದಲ್ಲಿ ಏಕಾಗ್ರತೆಯನ್ನು ಸುಧಾರಿಸುವ ತಂತ್ರಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಭೌತಿಕವಾಗಿ ಹಾಜರಿದ್ದ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಮುಂದಿಟ್ಟರು, ಮತ್ತು ದೀಪಿಕಾ ಅವರು ತಮ್ಮ ವೈಯಕ್ತಿಕ ಅನುಭವಗಳಿಂದ, ಅಮೂಲ್ಯವಾದ ಒಳನೋಟಗಳು ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದರು. ಹೆಚ್ಚುವರಿಯಾಗಿ, ಅಂತರರಾಷ್ಟ್ರೀಯ ಸಿ ಬಿ ಎಸ್ ಇ ಶಾಲೆಯ ವಿದ್ಯಾರ್ಥಿಯು ಪ್ರಶ್ನೆಯನ್ನು ಕೇಳಲು ಅವಕಾಶವನ್ನು ಹೊಂದಿದ್ದರು, ಇದು ಚರ್ಚೆಯನ್ನು ವಿಶಾಲ ದೃಷ್ಟಿಕೋನದಿಂದ ಮತ್ತಷ್ಟು ಉತ್ಕೃಷ್ಟಗೊಳಿಸಿತು.
ಪಿಪಿಸಿಯ 8ನೇ ಆವೃತ್ತಿಯು ಹೊಸ ಮಾನದಂಡವನ್ನು ಸ್ಥಾಪಿಸಿದೆ. 5 ಕೋಟಿಗೂ ಹೆಚ್ಚು ಭಾಗವಹಿಸುವವರೊಂದಿಗೆ, ಈ ವರ್ಷದ ಕಾರ್ಯಕ್ರಮವು ಜನಾಂದೋಲನವಾಗಿ ತನ್ನ ಸ್ಥಾನವನ್ನು ಸ್ಥಾಪಿಸುತ್ತಿದೆ, ಕಲಿಕೆಯ ಸಾಮೂಹಿಕ ಆಚರಣೆಯನ್ನು ಪ್ರೇರೇಪಿಸುತ್ತಿದೆ. ಪ್ರಧಾನಮಂತ್ರಿಯವರೊಂದಿಗಿನ ಸಂಚಿಕೆಗಾಗಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 36 ವಿದ್ಯಾರ್ಥಿಗಳನ್ನು ರಾಜ್ಯ/ಕೇಂದ್ರಾಡಳಿತ ಬೋರ್ಡ್ ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಸೈನಿಕ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳು, ಸಿ ಬಿ ಎಸ್ ಇ ಮತ್ತು ನವೋದಯ ವಿದ್ಯಾಲಯಗಳಿಂದ ಆಯ್ಕೆ ಮಾಡಲಾಯಿತು. ಪರೀಕ್ಷಾ ಪೇ ಚರ್ಚಾ 2025 ಆರು ಹೆಚ್ಚುವರಿ ಪ್ರಾಯೋಗಿಕ ಸಂಚಿಕೆಗಳನ್ನು ಒಳಗೊಂಡಿರುತ್ತದೆ, ಜೀವನ ಮತ್ತು ಕಲಿಕೆಯ ಅಗತ್ಯ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ವಿವಿಧ ಕ್ಷೇತ್ರಗಳ ಖ್ಯಾತನಾಮರನ್ನು ಒಟ್ಟುಗೂಡಿಸುತ್ತದೆ. ಪ್ರತಿ ಸಂಚಿಕೆಯಲ್ಲಿ ಮುಖ್ಯ ವಿಷಯಗಳನ್ನು ಚರ್ಚಿಸಲಾಗುತ್ತದೆ.
ಮೊದಲನೇ ಸಂಚಿಕೆ ವೀಕ್ಷಿಸಲು ಲಿಂಕ್: https://www.youtube.com/watch?v=G5UhdwmEEls
2ನೇ ಸಂಚಿಕೆ ವೀಕ್ಷಿಸಲು ಲಿಂಕ್: https://www.youtube.com/watch?v=DrW4c_ttmew
*****
(Release ID: 2102616)
Visitor Counter : 16
Read this release in:
Odia
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Tamil
,
Telugu
,
Malayalam