ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿ ಹೊರಹೊಮ್ಮಿದೆ. 2014ರಲ್ಲಿ ಇದ್ದ 2 ಘಟಕಗಳಿಂದ, ಇಂದು ದೇಶಾದ್ಯಂತ 300 ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸುತ್ತಿವೆ: ಶ್ರೀ ಅಶ್ವಿನಿ ವೈಷ್ಣವ್


ಆಮದುಗಳಿಂದ ಸ್ವಾತಂತ್ರ್ಯದವರೆಗೆ: ಭಾರತದಲ್ಲಿ ಮಾರಾಟವಾಗುವ 99.2% ಮೊಬೈಲ್ ಫೋನ್ ಗಳು ಈಗ ಸ್ಥಳೀಯವಾಗಿ ತಯಾರಿಸಲ್ಪಟ್ಟಿವೆ, ಉತ್ಪಾದನಾ ಮೌಲ್ಯವು 4,22,000 ಕೋಟಿ ರೂ.ಗೆ ಏರಿದೆ, ರಫ್ತು 2024 ರಲ್ಲಿ 1,29,000 ಕೋಟಿ ರೂ.ಗಳನ್ನು ದಾಟಿದೆ

'ಮೇಕ್ ಇನ್ ಇಂಡಿಯಾ' ಉಪಕ್ರಮವು ಚಾರ್ಜರ್ ಗಳು, ಬ್ಯಾಟರಿ ಪ್ಯಾಕ್ ಗಳಿಂದ ಹಿಡಿದು ಕ್ಯಾಮೆರಾ ಮಾಡ್ಯೂಲ್ ಗಳು, ಡಿಸ್ಪ್ಲೇ (ಪರದೆ/ಪ್ರದರ್ಶನ) ಮಾಡ್ಯೂಲ್ ಗಳು ಇತ್ಯಾದಿಗಳವರೆಗಿನ ಪ್ರಮುಖ ಎಲೆಕ್ಟ್ರಾನಿಕ್ಸ್ ಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿದೆ

ಸೆಮಿಕಂಡಕ್ಟರ್ ಚಿಪ್ ಗಳು ಮತ್ತು ಉತ್ತಮ ಘಟಕಗಳ/ಬಿಡಿ ಭಾಗಗಳ ಅಭಿವೃದ್ಧಿಗೆ ಆದ್ಯ ಗಮನ ಹರಿಸುವ ಮೂಲಕ ಭಾರತವು ಉತ್ಪಾದನೆಯ ಮೌಲ್ಯ ಸರಪಳಿಯನ್ನು ಬಲಗೊಳಿಸುವ ಮೂಲಕ ಗೇರ್ ಗಳನ್ನು ಬದಲಾಯಿಸುತ್ತಿದೆ

Posted On: 04 FEB 2025 5:03PM by PIB Bengaluru

ಪ್ರಧಾನಮಂತ್ರಿಯವರ 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನವು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ಪ್ರಾರಂಭವಾದ ಒಂದು ದಶಕದೊಳಗೆ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸುತ್ತಿದೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತಿದೆ ಮಾತ್ರವಲ್ಲದೆ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ದತ್ತಾಂಶವನ್ನು ಹಂಚಿಕೊಂಡ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ವಾರ್ತಾ ಹಾಗು ಪ್ರಸಾರ ಸಚಿವಾರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಕಳೆದ ದಶಕದಲ್ಲಿ ಭಾರತದ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದ ಗಮನಾರ್ಹ ಪರಿವರ್ತನೆಯ ಬಗ್ಗೆ ಬೆಳಕು ಚೆಲ್ಲಿದರು.

ಆಮದಿನಿಂದ ಸ್ವಾತಂತ್ರ್ಯದವರೆಗೆ: ಮೊಬೈಲ್ ಉತ್ಪಾದನೆಯಲ್ಲಿ ಭಾರತದ ಪ್ರಗತಿ

ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಮತ್ತು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ದೇಶವಾಗಿದೆ. 2014ರಲ್ಲಿ, ಭಾರತವು ಕೇವಲ 2 ಮೊಬೈಲ್ ಉತ್ಪಾದನಾ ಘಟಕಗಳನ್ನು ಹೊಂದಿತ್ತು ಆದರೆ ಇಂದು, ರಾಷ್ಟ್ರವು 300ಕ್ಕೂ ಹೆಚ್ಚು ಉತ್ಪಾದನಾ ಘಟಕಗಳನ್ನು ಹೊಂದಿದೆ, ಇದು ಪ್ರಮುಖ ವಲಯದಲ್ಲಿ ಗಮನಾರ್ಹ ವಿಸ್ತರಣೆಯನ್ನು ಒತ್ತಿಹೇಳುತ್ತದೆ.

 

2014-15ರಲ್ಲಿ ಭಾರತದಲ್ಲಿ ಮಾರಾಟವಾಗುತ್ತಿದ್ದ ಮೊಬೈಲ್ ಫೋನ್ ಗಳಲ್ಲಿ ಕೇವಲ ಶೇ.26ರಷ್ಟು ಮಾತ್ರ ಭಾರತದಲ್ಲಿ ತಯಾರಾಗುತ್ತಿದ್ದವು, ಉಳಿದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಂದು, ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಫೋನ್ ಗಳಲ್ಲಿ 99.2% ಭಾರತದಲ್ಲಿ ತಯಾರಾದವುಗಳಾಗಿವೆ. ಮೊಬೈಲ್ ಫೋನ್ ಗಳ ಉತ್ಪಾದನಾ ಮೌಲ್ಯವು 2014ರ ಹಣಕಾಸು ವರ್ಷದಲ್ಲಿ 18,900 ಕೋಟಿ ರೂ.ಗಳಷ್ಟಾಗಿದ್ದರೆ  2024ರ ಹಣಕಾಸು ವರ್ಷದಲ್ಲಿ 4,22,000 ಕೋಟಿ ರೂ.ಗೆ ಏರಿದೆ.

 

ಭಾರತದಲ್ಲಿ ವರ್ಷಕ್ಕೆ 325 ರಿಂದ 330 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಫೋನ್ ಗಳನ್ನು ತಯಾರಿಸಲಾಗುತ್ತಿದೆ ಮತ್ತು ಭಾರತದಲ್ಲಿ ಸರಾಸರಿ ಒಂದು ಬಿಲಿಯನ್ ಮೊಬೈಲ್ ಫೋನ್ ಗಳು ಬಳಕೆಯಲ್ಲಿವೆ. ಭಾರತೀಯ ಮೊಬೈಲ್ ಫೋನ್ ಗಳು ದೇಶೀಯ ಮಾರುಕಟ್ಟೆಯನ್ನು ಅಕ್ಷರಶಃ ಸಂತೃಪ್ತಗೊಳಿಸಿವೆ ಮತ್ತು ಮೊಬೈಲ್ ಫೋನ್ ಗಳ ರಫ್ತಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2014ರಲ್ಲಿ ಬಹುತೇಕ ಅಸ್ತಿತ್ವದಲ್ಲಿಲ್ಲದ ಈ ಕ್ಷೇತ್ರದ   ರಫ್ತು ಈಗ 1,29,000 ಕೋಟಿ ರೂ.ಗಳನ್ನು ಮೀರಿದೆ.

ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿಯ ಒಂದು ದಶಕ

ವಲಯದ ವಿಸ್ತರಣೆಯು ಪ್ರಮುಖ ಉದ್ಯೋಗ ಚಾಲಕ ಶಕ್ತಿಯಾಗಿ ಮಾರ್ಪಟ್ಟಿದೆ. ದಶಕದಲ್ಲಿ ಸರಿಸುಮಾರು 12 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಈ ಉದ್ಯೋಗಾವಕಾಶಗಳು ಹಲವಾರು ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಿರುವುದಲ್ಲದೆ ದೇಶದ ಸಾಮಾಜಿಕ-ಆರ್ಥಿಕ ರಚನೆಗೆ ಕೊಡುಗೆ ನೀಡಿವೆ.

 

ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ 'ಮೇಕ್ ಇನ್ ಇಂಡಿಯಾ' ಉಪಕ್ರಮವು ಪ್ರಮುಖ ಪಾತ್ರವಹಿಸಿದೆ. ಇದು ಚಾರ್ಜರ್ ಗಳು, ಬ್ಯಾಟರಿ ಪ್ಯಾಕ್ ಗಳು, ಎಲ್ಲಾ ರೀತಿಯ ಮೆಕ್ಯಾನಿಕ್ಸ್, ಯುಎಸ್ ಬಿ ಕೇಬಲ್ ಗಳು ಮತ್ತು ಲಿಥಿಯಂ ಐಯಾನ್ ಸೆಲ್ ಗಳು, ಸ್ಪೀಕರ್ ಮತ್ತು ಮೈಕ್ರೊಫೋನ್ ಗಳು, ಪ್ರದರ್ಶನ/ಪರದೆ ಜೋಡಣೆಗಳು ಮತ್ತು ಕ್ಯಾಮೆರಾ ಮಾಡ್ಯೂಲ್ ಗಳಂತಹ ಹೆಚ್ಚು ಸಂಕೀರ್ಣ ಘಟಕಗಳಂತಹ ನಿರ್ಣಾಯಕ ಘಟಕಗಳು ಮತ್ತು ಉಪ-ಜೋಡಣೆಗಳ ದೇಶೀಯ ಉತ್ಪಾದನೆಯನ್ನು ಸಕ್ರಿಯಗೊಳಿಸಿದೆ.

ಮುಂದಿನ ಹಂತದಲ್ಲಿ, ಮೌಲ್ಯ ಸರಪಳಿಯಲ್ಲಿ, ವಿಶೇಷವಾಗಿ ಬಿಡಿ-ಭಾಗಗಳು/ಘಟಕಗಳು ಮತ್ತು ಅರೆವಾಹಕಗಳ ಉತ್ಪಾದನೆಯಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟು  ಮುಂದುವರಿಯುವತ್ತ ಗಮನ ಕೇಂದ್ರೀಕರಿಸುತ್ತದೆ. ಈ ಬದಲಾವಣೆಯು ಸ್ವಾವಲಂಬನೆಯನ್ನು ಹೆಚ್ಚಿಸುವ ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ಆಟಗಾರನಾಗಿ ಸ್ಥಾಪಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ.

ಮೌಲ್ಯ ಸರಪಳಿಯನ್ನು ಬಲಗೊಳಿಸುವುದು: ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಮುನ್ನಡೆಸುವುದು

ಶ್ರೀ ಅಶ್ವಿನಿ ವೈಷ್ಣವ್ ಅವರು, ಉತ್ತಮ ಘಟಕಗಳು ಮತ್ತು ಅರೆವಾಹಕ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮೌಲ್ಯ ಸರಪಳಿಯಲ್ಲಿ ಆಳವಾಗಿ ಮುಂದುವರಿಯುವತ್ತ ಈಗ ಗಮನ ಹರಿಸಲಾಗಿದೆ, ಆ ಮೂಲಕ ಎಲೆಕ್ಟ್ರಾನಿಕ್ ಘಟಕ ಪರಿಸರ ವ್ಯವಸ್ಥೆಯ ಸ್ಥಳೀಯ ಅಭಿವೃದ್ಧಿಯನ್ನು ಖಚಿತಪಡಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು. ಇದು ಜಾಗತಿಕವಾಗಿ ಪ್ರಮುಖ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಾಗಿ ಭಾರತದ ನಿಲುವನ್ನು ಬಲಪಡಿಸುತ್ತದೆ.

1950 ಮತ್ತು 1990ರ ನಡುವೆ, ನಿರ್ಬಂಧಿತ ನೀತಿಗಳು ಉತ್ಪಾದನೆಯನ್ನು ನಿಗ್ರಹಿಸಿದ್ದವು. ಆದಾಗ್ಯೂ, 'ಮೇಕ್ ಇನ್ ಇಂಡಿಯಾ' ಮೌಲ್ಯ ಸರಪಳಿಯಲ್ಲಿ ದೃಢವಾಗಿ ಚಲಿಸುವ ಮೂಲಕ ಮತ್ತು ಬಿಡಿ ಭಾಗಗಳು/ಘಟಕಗಳು ಮತ್ತು ಚಿಪ್ ಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹಿಂದಿನ ಪ್ರವೃತ್ತಿಯನ್ನು ಹಿಮ್ಮೆಟ್ಟಿಸುತ್ತಿದೆ.

 

ದೇಶದಲ್ಲಿ ಅರೆವಾಹಕ ಉತ್ಪಾದನಾ ನೆಲೆಯನ್ನು ಸ್ಥಾಪಿಸುವುದು ಮೇಕ್ ಇನ್ ಇಂಡಿಯಾದ ಪ್ರಮುಖ ಭಾಗವಾಗಿದೆ, ಇದನ್ನು ಭಾರತವು ಆರು ದಶಕಗಳಿಂದ ಸಾಧಿಸಲು ಪ್ರಯತ್ನಿಸುತ್ತಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು ಅನುಮೋದಿಸಲಾದ ಐದು ಪ್ರಮುಖ ಯೋಜನೆಗಳೊಂದಿಗೆ, ಮೈಕ್ರಾನ್ ನಿಂದ ಪ್ರಾರಂಭಿಸಿ, ಟಾಟಾ ಎಲೆಕ್ಟ್ರಾನಿಕ್ಸ್ ಎರಡು ಯೋಜನೆಗಳು, ಸಿ ಜಿ ಪವರ್ ಒಂದು ಯೋಜನೆ ಮತ್ತು ಕೀನ್ಸ್ ಕೊನೆಯ ಯೋಜನೆಯೊಂದಿಗೆ, ಈ ದೇಶದಲ್ಲಿ ಅರೆವಾಹಕಗಳ ನೈಜ ಉತ್ಪಾದನಾ ನೆಲೆಯನ್ನು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ.

ಹೊಸ ಆರ್ಥಿಕ ಯುಗವನ್ನು ರೂಪಿಸುತ್ತಿರುವ ಮೇಕ್ ಇನ್ ಇಂಡಿಯಾ

ಆಟಿಕೆಗಳಿಂದ ಮೊಬೈಲ್ ಫೋನ್ ಗಳವರೆಗೆ, ರಕ್ಷಣಾ ಉಪಕರಣಗಳಿಂದ ಇವಿ ಮೋಟರ್ ಗಳವರೆಗೆ, ಉತ್ಪಾದನೆಯು ಭಾರತಕ್ಕೆ ಮರಳುತ್ತಿದೆ. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನವು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದಾಗಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ಸ್ವಾವಲಂಬನೆಯನ್ನು ಹೆಚ್ಚಿಸುತ್ತಿದೆ, ಉತ್ಪಾದನೆಯನ್ನು ಹೆಚ್ಚಿಸುತ್ತಿದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ, ಆ ಮೂಲಕ ರಾಷ್ಟ್ರದ ಆರ್ಥಿಕ ಸ್ಥೈರ್ಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ.

 

 

*****


(Release ID: 2099865) Visitor Counter : 24