ಹಣಕಾಸು ಸಚಿವಾಲಯ
2025-26ನೇ ಸಾಲಿನ ಕೇಂದ್ರ ಮುಂಗಡಪತ್ರದ ಸಾರಾಂಶ
1 ಲಕ್ಷ ರೂ.ವರೆಗಿನ ಸರಾಸರಿ ಮಾಸಿಕ ಆದಾಯದ ಮೇಲೆ ಆದಾಯ ತೆರಿಗೆ ಇಲ್ಲ; ಮಧ್ಯಮ ವರ್ಗದ ಕುಟುಂಬಗಳ ಉಳಿತಾಯ ಮತ್ತು ಬಳಕೆಗೆ ಉತ್ತೇಜನ
ಹೊಸ ತೆರಿಗೆ ವ್ಯವಸ್ಥೆಯಲ್ಲಿ, ವರ್ಷಕ್ಕೆ ₹12.75 ಲಕ್ಷದವರೆಗೆ ಸಂಬಳ ಪಡೆಯುವ ವರ್ಗಕ್ಕೆ ಶೂನ್ಯ ಆದಾಯ ತೆರಿಗೆ
ಕೇಂದ್ರ ಬಜೆಟ್ ನಲ್ಲಿ ಗುರುತಿಸಲಾದ ಬೆಳವಣಿಗೆಯ 4 ಎಂಜಿನ್ಗಳು - ಕೃಷಿ, ಎಂ ಎಸ್ ಎಂ ಇ, ಹೂಡಿಕೆ ಮತ್ತು ರಫ್ತು
ಕಡಿಮೆ ಕೃಷಿ ಉತ್ಪಾದಕತೆಯ 100 ಜಿಲ್ಲೆಗಳನ್ನು ಒಳಗೊಳ್ಳಲು ʼಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, 1.7 ಕೋಟಿ ರೈತರಿಗೆ ಪ್ರಯೋಜನ
ತೊಗರಿ, ಉದ್ದು ಮತ್ತು ಮಸೂರಗಳ ಮೇಲೆ ವಿಶೇಷ ಗಮನವನ್ನು ಹೊಂದಿರುವ "ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಮಿಷನ್" ಆರಂಭಿಸಲಾಗುವುದು
ಪರಿಷ್ಕೃತ ಬಡ್ಡಿ ಸಹಾಯಧನ ಯೋಜನೆಯಡಿ ಕೆಸಿಸಿ ಮೂಲಕ ಪಡೆದ ₹5 ಲಕ್ಷದವರೆಗಿನ ಸಾಲಗಳು
2025ನೇ ಹಣಕಾಸು ವರ್ಷವು ಶೇ.4.8 ವಿತ್ತೀಯ ಕೊರತೆಯೊಂದಿಗೆ ಕೊನೆಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ, 2026 ರಲ್ಲಿ ಅದನ್ನು ಶೇ.4.4 ಕ್ಕೆ ಇಳಿಸುವ ಗುರಿ
ಎಂ ಎಸ್ ಎಂ ಇ ಗಳಿಗೆ ಖಾತರಿಯೊಂದಿಗೆ ಸಾಲ ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಳ
Posted On:
01 FEB 2025 1:31PM by PIB Bengaluru
"ಮೇಕ್ ಇನ್ ಇಂಡಿಯಾ" ಮುಂದುವರಿಸಲು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ತಯಾರಿಕಾ ಮಿಷನ್
ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳು
ಒಟ್ಟು ₹500 ಕೋಟಿ ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ
ಬ್ಯಾಂಕುಗಳಿಂದ ವರ್ಧಿತ ಸಾಲಗಳೊಂದಿಗೆ ಪಿಎಂ ಸ್ವನಿಧಿ ಮತ್ತು ₹30,000 ಮಿತಿಯೊಂದಿಗೆ ಯುಪಿಐ ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್ ಗಳು
ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿಗಳು. ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ಆರೋಗ್ಯ ಸೇವೆ
'ಬೆಳವಣಿಗೆಯ ಕೇಂದ್ರಗಳಾಗಿ ನಗರಗಳು' ಯೋಜನೆಗಾಗಿ ₹1 ಲಕ್ಷ ಕೋಟಿಯ ಅರ್ಬನ್ ಚಾಲೆಂಜ್ ಫಂಡ್
₹20,000 ಕೋಟಿ ವೆಚ್ಚದಲ್ಲಿ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಮಿಷನ್
120 ಹೊಸ ಸ್ಥಳಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಉಡಾನ್ ಯೋಜನೆಯ ಪರಿಷ್ಕರಣೆ
ಸಂಕಷ್ಟದಲ್ಲಿರುವ 1 ಲಕ್ಷ ವಸತಿ ಘಟಕಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ₹15,000 ಕೋಟಿ ಸ್ವಾಮಿಹ್ ನಿಧಿಯ ಸ್ಥಾಪನೆ
ಖಾಸಗಿ ವಲಯವು ನಡೆಸುವ ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯತೆ ಉಪಕ್ರಮಗಳಿಗೆ ₹ 20,000 ಕೋಟಿ ಮೀಸಲು
ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಂಡ ಹಸ್ತಪ್ರತಿಗಳ ಸಮೀಕ್ಷೆ ಮತ್ತು ಸಂರಕ್ಷಣೆಗಾಗಿ ಜ್ಞಾನ್ ಭಾರತಂ ಮಿಷನ್
ವಿಮೆ ಕೇತ್ರದ ಎಫ್ ಡಿ ಐ ಮಿತಿ ಶೇ.74 ರಿಂದ ಶೇ.100 ಕ್ಕೆ ಹೆಚ್ಚಳ
ವಿವಿಧ ಕಾನೂನುಗಳಲ್ಲಿ 100 ಕ್ಕಿಂತ ಹೆಚ್ಚಿನ ನಿಬಂಧನೆಗಳನ್ನು ನಿರಪರಾಧೀಕರಣಗೊಳಿಸಲು ಜನ್ ವಿಶ್ವಾಸ್ ಮಸೂದೆ 2.0 ಅನ್ನು ಮಂಡಿಸಲಾಗುವುದು
ನವೀಕರಿಸಿದ ಆದಾಯ ತೆರಿಗೆ ಸಲ್ಲಿಕೆ ಸಮಯದ ಮಿತಿಯನ್ನು ಎರಡರಿಂದ ನಾಲ್ಕು ವರ್ಷಗಳವರೆಗೆ ಹೆಚ್ಚಿಸಲಾಗಿದೆ
ಟಿಸಿಎಸ್ ಪಾವತಿಯಲ್ಲಿನ ವಿಳಂಬವನ್ನು ನಿರಪರಾಧೀಕರಣಗೊಳಿಸಲಾಗಿದೆ
ಬಾಡಿಗೆಯ ಮೇಲಿನ ಟಿಡಿಎಸ್ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಳ
ಕ್ಯಾನ್ಸರ್, ಅಪರೂಪದ ಮತ್ತು ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗಾಗಿ 36 ಜೀವರಕ್ಷಕ ಔಷಧಗಳು ಮತ್ತು ಡ್ರಗ್ಸ್ ಮೇಲೆ ಬಿಸಿಡಿ ವಿನಾಯಿತಿ ನೀಡಲಾಗಿದೆ
ಐ ಎಫ್ ಪಿ ಡಿ ಯಲ್ಲಿ ಬಿಸಿಡಿ ಶೇ.20 ಕ್ಕೆ ಹೆಚ್ಚಿದೆ ಮತ್ತು ಓಪನ್ ಸೆಲ್ ಗಳಲ್ಲಿ ಶೇ.5 ಕ್ಕೆ ಕಡಿಮೆಯಾಗಿದೆ
ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಓಪನ್ ಸೆಲ್ ಬಿಡಿಭಾಗಗಳಿಗೆ ಬಿಸಿಡಿ ವಿನಾಯಿತಿ
ಬ್ಯಾಟರಿ ಉತ್ಪಾದನೆಯನ್ನು ಹೆಚ್ಚಿಸಲು, ಇವಿ ಮತ್ತು ಮೊಬೈಲ್ ಬ್ಯಾಟರಿ ತಯಾರಿಕೆಗೆ ಹೆಚ್ಚುವರಿ ಬಂಡವಾಳದ ಸರಕುಗಳಿಗೆ ವಿನಾಯಿತಿ ನೀಡಲಾಗಿದೆ
ಕಚ್ಚಾ ವಸ್ತುಗಳು ಮತ್ತು ಹಡಗು ನಿರ್ಮಾಣಕ್ಕಾಗಿ ಬಳಸುವ ಬಿಡಿಭಾಗಗಳ ಮೇಲೆ 10 ವರ್ಷಗಳವರೆಗೆ ಬಿಸಿಡಿ ವಿನಾಯಿತಿ ನೀಡಲಾಗಿದೆ
ಹೆಪ್ಪುಗಟ್ಟಿದ ಫಿಶ್ ಪೇಸ್ಟ್ ಗೆ ಶೇ.30 ರಿಂದ ಶೇ.5 ಕ್ಕೆ ಮತ್ತು ಫಿಶ್ ಹೈಡ್ರೊಲೈಜೆಟ್ ಗೆ ಶೇ.15 ರಿಂದ ಶೇ.5 ಕ್ಕೆ ಬಿಸಿಡಿ ಕಡಿಮೆಯಾಗಿದೆ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದರು. ಅವರ ಬಜೆಟ್ ಭಾಷಣದ ಸಾರಾಂಶ ಇಲ್ಲಿದೆ;
ಭಾಗ ಎ
ತೆಲುಗು ಕವಿ ಮತ್ತು ನಾಟಕಕಾರ ಶ್ರೀ ಗುರಜಾಡ ಅಪ್ಪಾ ರಾವ್ ಅವರ 'ದೇಶವೆಂದರೆ ಕೇವಲ ಅದರ ನೆಲವಲ್ಲ; ಅದರ ಜನರು ಒಂದು ದೇಶ’ ಎಂಬ ಪ್ರಸಿದ್ಧ ಮಾತುಗಳನ್ನು ಉಲ್ಲೇಖಿಸಿದ ಹಣಕಾಸು ಸಚಿವರು ಎಲ್ಲಾ ಪ್ರದೇಶಗಳ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸುವ "ಸಬ್ಕಾ ವಿಕಾಸ್" ಎಂಬ ಧ್ಯೇಯದೊಂದಿಗೆ 2025-26 ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದರು.
ಈ ಧ್ಯೇಯಕ್ಕೆ ಅನುಗುಣವಾಗಿ, ಹಣಕಾಸು ಸಚಿವರು ಈ ಕೆಳಗಿನವುಗಳನ್ನು ಒಳಗೊಂಡಿರುವ ವಿಕಸಿತ ಭಾರತದ ವಿಶಾಲ ತತ್ವಗಳನ್ನು ವಿವರಿಸಿದರು:
ಎ) ಶೂನ್ಯ ಬಡತನ;
ಬಿ) ನೂರು ಪ್ರತಿಶತ ಉತ್ತಮ ಗುಣಮಟ್ಟದ ಶಾಲಾ ಶಿಕ್ಷಣ;
ಸಿ) ಉತ್ತಮ ಗುಣಮಟ್ಟದ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ರಕ್ಷಣೆಗೆ ಪ್ರವೇಶ;
ಡಿ) ಅರ್ಥಪೂರ್ಣ ಉದ್ಯೋಗದೊಂದಿಗೆ ನೂರು ಪ್ರತಿಶತ ಕುಶಲ ಕಾರ್ಮಿಕರು;
ಇ) ಆರ್ಥಿಕ ಚಟುವಟಿಕೆಗಳಲ್ಲಿ ಎಪ್ಪತ್ತು ಪ್ರತಿಶತ ಮಹಿಳೆಯರು; ಮತ್ತು
ಎಫ್) ರೈತರು ನಮ್ಮ ದೇಶವನ್ನು 'ವಿಶ್ವದ ಆಹಾರ ಬುಟ್ಟಿ'ಯನ್ನಾಗಿ ಮಾಡುತ್ತಿದ್ದಾರೆ.
2025-2026ನೇ ಸಾಲಿನ ಮುಂಗಡಪತ್ರವು ಬೆಳವಣಿಗೆಯನ್ನು ವೇಗಗೊಳಿಸಲು, ಎಲ್ಲರನ್ನೂ ಳಗೊಂಡ ಬೆಳವಣಿಗೆಯನ್ನು ಸುರಕ್ಷಿತಗೊಳಿಸಲು, ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿಸಲು, ಕುಟುಂಬಗಳ ಭಾವನೆಗಳನ್ನು ಹೆಚ್ಚಿಸಲು ಮತ್ತು ಭಾರತದ ಬೆಳೆಯುತ್ತಿರುವ ಮಧ್ಯಮ ವರ್ಗದ ವೆಚ್ಚದ ಶಕ್ತಿಯನ್ನು ಹೆಚ್ಚಿಸಲು ಸರ್ಕಾರದ ಪ್ರಯತ್ನಗಳನ್ನು ಮುಂದುವರೆಸಿದೆ. ಬಡವರು, ಯುವಜನರು, ರೈತರು (ಅನ್ನದಾತ) ಮತ್ತು ಮಹಿಳೆಯರನ್ನು (ನಾರಿ) ಕೇಂದ್ರೀಕರಿಸುವ ಅಭಿವೃದ್ಧಿ ಕ್ರಮಗಳನ್ನು ಮುಂಗಡಪತ್ರ ಪ್ರಸ್ತಾಪಿಸಿದೆ.
ಭಾರತದ ಬೆಳವಣಿಗೆ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ತೆರಿಗೆ, ವಿದ್ಯುತ್ ಕ್ಷೇತ್ರ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ವಲಯ ಮತ್ತು ನಿಯಂತ್ರಕಗಳಲ್ಲಿ ಪರಿವರ್ತಕ ಸುಧಾರಣೆಗಳನ್ನು ಪ್ರಾರಂಭಿಸುವ ಗುರಿಯನ್ನು ಮುಂಗಡಪತ್ರ ಹೊಂದಿದೆ.
ವಿಕಸಿತ ಭಾರತ ಪ್ರಯಾಣದಲ್ಲಿ ಕೃಷಿ, ಎಂ ಎಸ್ ಎಂ ಇ, ಹೂಡಿಕೆ ಮತ್ತು ರಫ್ತುಗಳು ಎಂಜಿನ್ ಗಳಾಗಿದ್ದು, ಸುಧಾರಣೆಗಳು ಇಂಧನವಾಗಿವೆ, ಒಳಗೊಳ್ಳುವಿಕೆಯ ಮನೋಭಾವವು ಮಾರ್ಗದರ್ಶಿಯಾಗಿದೆ ಎಂದು ಕೇಂದ್ರ ಮುಂಗಡಪತ್ರ ಎತ್ತಿ ತೋರಿಸಿದೆ.
ಮೊದಲನೇ ಎಂಜಿನ್: ಕೃಷಿ
ಉತ್ಪಾದಕತೆಯನ್ನು ಹೆಚ್ಚಿಸಲು, ಬೆಳೆ ವೈವಿಧ್ಯೀಕರಣವನ್ನು ಅಳವಡಿಸಿಕೊಳ್ಳಲು, ಕೊಯ್ಲಿನ ನಂತರದ ಸಂಗ್ರಹಣೆಯನ್ನು ಹೆಚ್ಚಿಸಲು, ನೀರಾವರಿ ಸೌಲಭ್ಯಗಳನ್ನು ಸುಧಾರಿಸಲು ಮತ್ತು ದೀರ್ಘಾವಧಿ ಮತ್ತು ಅಲ್ಪಾವಧಿಯ ಸಾಲದ ಲಭ್ಯತೆಯನ್ನು ಸುಲಭಗೊಳಿಸಲು 100 ಜಿಲ್ಲೆಗಳನ್ನು ಒಳಗೊಂಡಿರುವ ರಾಜ್ಯಗಳ ಸಹಭಾಗಿತ್ವದಲ್ಲಿ 'ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ' ಘೋಷಿಸಲಾಗಿದೆ.
ಕೌಶಲ್ಯ, ಹೂಡಿಕೆ, ತಂತ್ರಜ್ಞಾನ ಮತ್ತು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಮೂಲಕ ಕೃಷಿಯಲ್ಲಿನ ಕೊರತೆಯನ್ನು ನಿವಾರಿಸಲು ರಾಜ್ಯಗಳ ಸಹಭಾಗಿತ್ವದಲ್ಲಿ ಸಮಗ್ರ ಬಹು-ವಲಯಗಳ 'ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ' ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಗ್ರಾಮೀಣ ಮಹಿಳೆಯರು, ಯುವ ರೈತರು, ಗ್ರಾಮೀಣ ಯುವಜನರು, ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಭೂರಹಿತ ಕುಟುಂಬಗಳನ್ನು ಕೇಂದ್ರೀಕರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುವುದು ಇದರ ಗುರಿಯಾಗಿದೆ.
ತೊಗರಿ, ಉದ್ದು ಮತ್ತು ಮಸೂರ್ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಸರ್ಕಾರವು 6 ವರ್ಷಗಳ “ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನಾ ಮಿಷನ್”ಅನ್ನು ಪ್ರಾರಂಭಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಘೋಷಿಸಿದರು. ಕೇಂದ್ರ ಏಜೆನ್ಸಿಗಳು (NAFED ಮತ್ತು NCCF) ಮುಂದಿನ 4 ವರ್ಷಗಳಲ್ಲಿ ರೈತರಿಂದ ಈ 3 ಬೇಳೆಕಾಳುಗಳನ್ನು ಖರೀದಿಸಲು ಸಿದ್ಧವಾಗಿದೆ.
ತರಕಾರಿಗಳು ಮತ್ತು ಹಣ್ಣುಗಳ ಸಮಗ್ರ ಕಾರ್ಯಕ್ರಮ, ಹೆಚ್ಚಿನ ಇಳುವರಿ ನೀಡುವ ಬೀಜಗಳ ರಾಷ್ಟ್ರೀಯ ಮಿಷನ್ ಮತ್ತು ಐದು ವರ್ಷಗಳ ಹತ್ತಿ ಉತ್ಪಾದಕತೆಯ ಮಿಷನ್ ಮತ್ತು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಪ್ರಮುಖ ರೀತಿಯಲ್ಲಿ ಉತ್ತೇಜಿಸಲು ಇತರ ಕ್ರಮಗಳ ಬಗ್ಗೆ ಮುಂಗಡಪತ್ರ ವಿವರಿಸಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕ ಪರಿಷ್ಕೃತ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಪಡೆದ ಸಾಲದ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸುವುದಾಗಿ ಶ್ರೀಮತಿ ಸೀತಾರಾಮನ್ ಅವರು ಘೋಷಿಸಿದರು.
2ನೇ ಎಂಜಿನ್: ಎಂ ಎಸ್ ಎಂ ಇ ಗಳು
ಎಂ ಎಸ್ ಎಂ ಇ ಗಳು ನಮ್ಮ ರಫ್ತಿನ ಶೇ.45 ರಷ್ಟು ಪಾಲು ಹೊಂದಿರುವುದರಿಂದ ಇವು ಅಭಿವೃದ್ಧಿಗೆ ಎರಡನೇ ಶಕ್ತಿಯ ಎಂಜಿನ್ ಎಂದು ಹಣಕಾಸು ಸಚಿವರು ವಿವರಿಸಿದರು. ಎಂ ಎಸ್ ಎಂ ಇ ಗಳು ಹೆಚ್ಚಿನ ದಕ್ಷತೆಯನ್ನು ಸಾಧಿಸಲು ಸಹಾಯ ಮಾಡಲು, ತಾಂತ್ರಿಕ ಉನ್ನತೀಕರಣ ಮತ್ತು ಬಂಡವಾಳಕ್ಕೆ ಉತ್ತಮ ಪ್ರವೇಶ, ಎಲ್ಲಾ ಎಂ ಎಸ್ ಎಂ ಇ ಗಳ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗಿದೆ. ಇದಲ್ಲದೆ, ಖಾತರಿಯೊಂದಿಗೆ ಸಾಲ ಲಭ್ಯತೆಯನ್ನು ಹೆಚ್ಚಿಸುವ ಕ್ರಮಗಳನ್ನು ಸಹ ಘೋಷಿಸಲಾಗಿದೆ.
5 ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೊದಲ ಬಾರಿಯ ಉದ್ಯಮಿಗಳಿಗೆ ಹೊಸ ಯೋಜನೆಯನ್ನು ಪ್ರಾರಂಭಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಇದು ಮುಂದಿನ 5 ವರ್ಷಗಳಲ್ಲಿ 2 ಕೋಟಿ ರೂ.ವರೆಗಿನ ಅವಧಿ ಸಾಲಗಳನ್ನು ಒದಗಿಸುತ್ತದೆ.
'ಮೇಡ್ ಇನ್ ಇಂಡಿಯಾ' ಬ್ರಾಂಡ್ ಅನ್ನು ಪ್ರತಿನಿಧಿಸುವ ಆಟಿಕೆಗಳಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಯೋಜನೆಯನ್ನು ಜಾರಿಗೊಳಿಸುತ್ತದೆ ಎಂದು ಶ್ರೀಮತಿ ಸೀತಾರಾಮನ್ ಘೋಷಿಸಿದರು. "ಮೇಕ್ ಇನ್ ಇಂಡಿಯಾ" ವನ್ನು ಮತ್ತಷ್ಟು ಉತ್ತೇಜಿಸಲು ಸರ್ಕಾರವು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ತಯಾರಿಕಾ ಮಿಷನ್ ಅನ್ನು ಸ್ಥಾಪಿಸುತ್ತದೆ ಎಂದು ಅವರು ಹೇಳಿದರು.
3ನೇ ಎಂಜಿನ್: ಹೂಡಿಕೆ
ಹೂಡಿಕೆಯನ್ನು ಬೆಳವಣಿಗೆಯ ಮೂರನೇ ಎಂಜಿನ್ ಎಂದು ವ್ಯಾಖ್ಯಾನಿಸಿದ ಕೇಂದ್ರ ಸಚಿವರು ಜನರು, ಆರ್ಥಿಕತೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಿದ್ದಾರೆ.
ಜನರ ಬಂಡವಾಳದ ಅಡಿಯಲ್ಲಿ, ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಘೋಷಿಸಿದರು.
ಭಾರತ್ ನೆಟ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಒದಗಿಸಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಡಿಜಿಟಲ್ ರೂಪದ ಭಾರತೀಯ ಭಾಷಾ ಪುಸ್ತಕಗಳನ್ನು ಒದಗಿಸಲು ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
"ಮೇಕ್ ಫಾರ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಉತ್ಪಾದನೆಗೆ ಅಗತ್ಯವಿರುವ ಕೌಶಲ್ಯಗಳೊಂದಿಗೆ ನಮ್ಮ ಯುವಕರನ್ನು ಸಜ್ಜುಗೊಳಿಸಲು ಜಾಗತಿಕ ಪರಿಣತಿ ಮತ್ತು ಪಾಲುದಾರಿಕೆಯೊಂದಿಗೆ ಕೌಶಲ್ಯಕ್ಕಾಗಿ ಐದು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಶಿಕ್ಷಣಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಒಟ್ಟು 500 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಗಿಗ್ ಕಾರ್ಮಿಕರ ಗುರುತಿನ ಚೀಟಿಗಳು, ಇ-ಶ್ರಮ್ ಪೋರ್ಟಲ್ನಲ್ಲಿ ಅವರ ನೋಂದಣಿ ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ರಕ್ಷಣೆಗಾಗಿ ಸರ್ಕಾರ ವ್ಯವಸ್ಥೆ ಮಾಡುತ್ತದೆ ಎಂದು ಮುಂಗಡಪತ್ರ ಘೋಷಿಸಿತು.
ಆರ್ಥಿಕತೆಯಲ್ಲಿ ಹೂಡಿಕೆಯ ಅಡಿಯಲ್ಲಿ, ಮೂಲಸೌಕರ್ಯ-ಸಂಬಂಧಿತ ಸಚಿವಾಲಯಗಳು ಪಿಪಿಪಿ ಮಾದರಿಯಲ್ಲಿ 3 ವರ್ಷಗಳ ಪೈಪ್ಲೈನ್ ನೊಂದಿಗೆ ಯೋಜನೆಗಳನ್ನು ರೂಪಿಸುತ್ತವೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಬಂಡವಾಳ ವೆಚ್ಚ ಮತ್ತು ಸುಧಾರಣೆಗಳ ಪ್ರೋತ್ಸಾಹಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂಪಾಯಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ಹೊಸ ಯೋಜನೆಗಳಲ್ಲಿ ರೂ 10 ಲಕ್ಷ ಕೋಟಿಗಳ ಬಂಡವಾಳವನ್ನು ಮರಳಿ ಪಡೆಯಲು 2025-30 ರ ಎರಡನೇ ಆಸ್ತಿ ನಗದೀಕರಣ ಯೋಜನೆಯನ್ನೂ ಅವರು ಘೋಷಿಸಿದರು.
"ಜನ ಭಾಗಿದಾರಿ" ಮೂಲಕ ಗ್ರಾಮೀಣ ಕೊಳವೆ ನೀರು ಸರಬರಾಜು ಯೋಜನೆಗಳ ಮೂಲಸೌಕರ್ಯ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಜಲ ಜೀವನ್ ಮಿಷನ್ ಅನ್ನು 2028 ರವರೆಗೆ ವಿಸ್ತರಿಸಲಾಗಿದೆ.
ʼನಗರಗಳು ಬೆಳವಣಿಗೆಯ ಕೇಂದ್ರಗಳಾಗಿʼ, ‘ನಗರಗಳ ಸೃಜನಾತ್ಮಕ ಪುನರಾಭಿವೃದ್ಧಿ’ಮತ್ತು ‘ನೀರು ಮತ್ತು ನೈರ್ಮಲ್ಯ’ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು 1 ಲಕ್ಷ ಕೋಟಿ ರೂ.ಗಳ ಅರ್ಬನ್ ಚಾಲೆಂಜ್ ಫಂಡ್ ಅನ್ನು ಸ್ಥಾಪಿಸುತ್ತದೆ.
ನಾವೀನ್ಯತೆಯಲ್ಲಿ ಹೂಡಿಕೆಯ ಅಡಿಯಲ್ಲಿ, ಖಾಸಗಿ ವಲಯದಿಂದ ನಡೆಸಲ್ಪಡುವ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಉಪಕ್ರಮಗಳನ್ನು ಕಾರ್ಯಗತಗೊಳಿಸಲು 20,000 ಕೋಟಿ ರೂ.ಗಳ ಹಂಚಿಕೆಯನ್ನು ಘೋಷಿಸಲಾಗಿದೆ.
ನಗರ ಯೋಜನೆಗೆ ಅನುಕೂಲವಾಗುವ ಮೂಲ ಭೂಗೋಳಿಕ ಮೂಲಸೌಕರ್ಯ ಮತ್ತು ದತ್ತಾಂಶವನ್ನು ಅಭಿವೃದ್ಧಿಪಡಿಸಲು ಹಣಕಾಸು ಸಚಿವರು ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಅನ್ನು ಪ್ರಸ್ತಾಪಿಸಿದರು.
ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಖಾಸಗಿ ಸಂಗ್ರಾಹಕರೊಂದಿಗೆ 1 ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಸಮೀಕ್ಷೆ ಮಾಡಲು, ದಾಖಲಿಸಲು ಮತ್ತು ಸಂರಕ್ಷಿಸಲು ಜ್ಞಾನ ಭಾರತಂ ಮಿಷನ್ ಅನ್ನು ಬಜೆಟ್ ಪ್ರಸ್ತಾಪಿಸಿದೆ. ಜ್ಞಾನ ಹಂಚಿಕೆಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು ಸಹ ಪ್ರಸ್ತಾಪಿಸಲಾಗಿದೆ.
4ನೇ ಎಂಜಿನ್: ರಫ್ತು
ಶ್ರೀಮತಿ ಸೀತಾರಾಮನ್ ರಫ್ತುಗಳನ್ನು ಬೆಳವಣಿಗೆಯ ನಾಲ್ಕನೇ ಎಂಜಿನ್ ಎಂದು ವ್ಯಾಖ್ಯಾನಿಸಿದರು. ಇವುಗಳನ್ನು ವಾಣಿಜ್ಯ, ಎಂ ಎಸ್ ಎಂ ಇ ಮತ್ತು ಹಣಕಾಸು ಸಚಿವಾಲಯಗಳು ಜಂಟಿಯಾಗಿ ನಡೆಸುತ್ತವೆ ಎಂದು ಹೇಳಿದರು; ರಫ್ತು ಉತ್ತೇಜನಾ ಮಿಷನ್ ರಫ್ತು ಮಾರುಕಟ್ಟೆಗೆ ಪ್ರವೇಶಿಸಲು ಎಂ ಎಸ್ ಎಂ ಇ ಗಳಿಗೆ ಸಹಾಯ ಮಾಡುತ್ತದೆ. ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, 'ಭಾರತ್ಟ್ರೇಡ್ನೆಟ್' (ಬಿಟಿಎನ್) ಅನ್ನು ವ್ಯಾಪಾರ ದಾಖಲಾತಿ ಮತ್ತು ಹಣಕಾಸು ಪರಿಹಾರಗಳಿಗಾಗಿ ಏಕೀಕೃತ ವೇದಿಕೆಯಾಗಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ನಮ್ಮ ಆರ್ಥಿಕತೆಯ ಸಂಯೋಜನೆಗಾಗಿ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಬೆಂಬಲವನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಕೈಗಾರಿಕೆ 4.0 ಗೆ ಸಂಬಂಧಿಸಿದ ಅವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರವು ದೇಶೀಯ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮವನ್ನು ಬೆಂಬಲಿಸುತ್ತದೆ ಎಂದು ಅವರು ಘೋಷಿಸಿದರು. ಉದಯೋನ್ಮುಖ ಶ್ರೇಣಿ 2 ನಗರಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಉತ್ತೇಜಿಸಲು ರಾಷ್ಟ್ರೀಯ ಚೌಕಟ್ಟನ್ನು ಸಹ ಪ್ರಸ್ತಾಪಿಸಲಾಗಿದೆ.
ಹೆಚ್ಚಿನ ಮೌಲ್ಯದ ಬೇಗ ಹಾಳಾಗುವ ತೋಟಗಾರಿಕಾ ಉತ್ಪನ್ನಗಳನ್ನು ಒಳಗೊಂಡಂತೆ ವಾಯು ಸರಕು ಸಾಗಣೆಗಾಗಿ ಮೂಲಸೌಕರ್ಯ ಮತ್ತು ಶೇಖರಣೆಯ ಉನ್ನತೀಕರಣವನ್ನು ಸರ್ಕಾರವು ಸುಗಮಗೊಳಿಸುತ್ತದೆ.
ಇಂಧನವಾಗಿ ಸುಧಾರಣೆಗಳು
ಸುಧಾರಣೆಗಳನ್ನು ಎಂಜಿನ್ ಗೆ ಇಂಧನ ಎಂದು ವ್ಯಾಖ್ಯಾನಿಸಿದ ಶ್ರೀಮತಿ ಸೀತಾರಾಮನ್, ಕಳೆದ 10 ವರ್ಷಗಳಲ್ಲಿ, ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಸರ್ಕಾರವು ಮುಖಾಮುಖಿರಹಿತ ಮೌಲ್ಯಮಾಪನ, ತೆರಿಗೆ ಪಾವತಿದಾರರ ಚಾರ್ಟರ್, ವೇಗದ ರಿಟರ್ನ್ಸ್, ಸುಮಾರು 99 ಪ್ರತಿಶತದಷ್ಟು ರಿಟರ್ನ್ಸ್, ಸ್ವಯಂ ಮೌಲ್ಯಮಾಪನ, ಮತ್ತು ವಿವಾದ್ ಸೆ ವಿಶ್ವಾಸ್ ಯೋಜನೆಯಂತಹ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು. ಈ ಪ್ರಯತ್ನಗಳನ್ನು ಮುಂದುವರೆಸುತ್ತಾ, "ಮೊದಲು ನಂಬಿ, ನಂತರ ಪರೀಕ್ಷಿಸಿ" ಎಂಬ ತೆರಿಗೆ ಇಲಾಖೆಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಹಣಕಾಸು ವಲಯದ ಸುಧಾರಣೆಗಳು ಮತ್ತು ಅಭಿವೃದ್ಧಿ
'ಸುಲಭ ವ್ಯವಹಾರ'ದೆಡೆಗಿನ ಸರ್ಕಾರದ ದೃಢವಾದ ಬದ್ಧತೆಯನ್ನು ಪ್ರದರ್ಶಿಸಿದ ಕೇಂದ್ರ ಹಣಕಾಸು ಸಚಿವರು, ಅನುಸರಣೆಯನ್ನು ಸುಲಭಗೊಳಿಸಲು, ಸೇವೆಗಳನ್ನು ವಿಸ್ತರಿಸಲು, ಬಲವಾದ ನಿಯಂತ್ರಕ ವಾತಾವರಣವನ್ನು ನಿರ್ಮಿಸಲು, ಅಂತರರಾಷ್ಟ್ರೀಯ ಮತ್ತು ದೇಶೀಯ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪುರಾತನ ಕಾನೂನು ನಿಬಂಧನೆಗಳ ನಿರಪರಾಧೀಕರಣಗೊಳಿಸಲು ಭಾರತದ ಆರ್ಥಿಕತೆಯಲ್ಲಿನ ಬದಲಾವಣೆಗಳನ್ನು ಪ್ರಸ್ತಾಪಿಸಿದರು.
ಭಾರತದಲ್ಲಿ ಸಂಪೂರ್ಣ ಬಂಡವಾಳವನ್ನು ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಾಗುವಂತೆ ವಿಮೆ ಕ್ಷೇತ್ರದ ವಿದೇಶಿ ನೇರ ಹೂಡಿಕೆ (ಎಫ್ ಡಿ ಐ) ಮಿತಿಯನ್ನು ಶೇಕಡಾ 74 ರಿಂದ 100 ಕ್ಕೆ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವರು ಪ್ರಸ್ತಾಪಿಸಿದರು.
ಶ್ರೀಮತಿ ಸೀತಾರಾಮನ್ ಅವರು ಉತ್ಪಾದಕತೆ ಮತ್ತು ಉದ್ಯೋಗವನ್ನು ಹೆಚ್ಚಿಸಲು ತತ್ವಗಳು ಮತ್ತು ನಂಬಿಕೆಯ ಆಧಾರದ ಮೇಲೆ ಲಘು ನಿಯಂತ್ರಣ ಚೌಕಟ್ಟನ್ನು ಪ್ರಸ್ತಾಪಿಸಿದರು. 21ನೇ ಶತಮಾನಕ್ಕೆ ಈ ಆಧುನಿಕ, ಹೊಂದಿಕೊಳ್ಳುವ, ಜನಸ್ನೇಹಿ ಮತ್ತು ನಂಬಿಕೆ ಆಧಾರಿತ ನಿಯಂತ್ರಣ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಅವರು ನಾಲ್ಕು ನಿರ್ದಿಷ್ಟ ಕ್ರಮಗಳನ್ನು ಪ್ರಸ್ತಾಪಿಸಿದರು, ಅವುಗಳೆಂದರೆ:
i. ನಿಯಂತ್ರಣ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿ
• ಎಲ್ಲಾ ಹಣಕಾಸೇತರ ವಲಯದ ನಿಯಮಗಳು, ಪ್ರಮಾಣೀಕರಣಗಳು, ಪರವಾನಗಿಗಳು ಮತ್ತು ಅನುಮತಿಗಳನ್ನು ಪರಿಶೀಲಿಸುವುದು.
• ವಿಶ್ವಾಸ-ಆಧಾರಿತ ಆರ್ಥಿಕ ಆಡಳಿತವನ್ನು ಬಲಪಡಿಸಲು ಮತ್ತು ವಿಶೇಷವಾಗಿ ತಪಾಸಣೆ ಮತ್ತು ಅನುಸರಣೆಯ ವಿಷಯಗಳಲ್ಲಿ 'ವ್ಯವಹಾರವನ್ನು ಸುಲಭಗೊಳಿಸಲು' ಪರಿವರ್ತನಾ ಕ್ರಮಗಳನ್ನು ತೆಗೆದುಕೊಳ್ಳುವುದು
• ಒಂದು ವರ್ಷದೊಳಗೆ ಶಿಫಾರಸುಗಳನ್ನು ಮಾಡುವುದು
• ರಾಜ್ಯಗಳನ್ನು ಸೇರ್ಪಡೆಯಾಗಲು ಪ್ರೋತ್ಸಾಹಿಸಲಾಗುವುದು
ii ರಾಜ್ಯಗಳ ಹೂಡಿಕೆ ಸ್ನೇಹಿ ಸೂಚ್ಯಂಕ
• ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯ ಉತ್ಸಾಹವನ್ನು ಹೆಚ್ಚಿಸಲು 2025 ರಲ್ಲಿ ರಾಜ್ಯಗಳ ಹೂಡಿಕೆ ಸ್ನೇಹಿ ಸೂಚ್ಯಂಕವನ್ನು ಪ್ರಾರಂಭಿಸಲಾಗುವುದು.
iii ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (FSDC) ಅಡಿಯಲ್ಲಿ ಕಾರ್ಯವಿಧಾನ
• ಪ್ರಸ್ತುತ ಹಣಕಾಸು ನಿಯಮಗಳು ಮತ್ತು ಅಂಗಸಂಸ್ಥೆ ಸೂಚನೆಗಳ ಪ್ರಭಾವವನ್ನು ಮೌಲ್ಯಮಾಪನ ಮಾಡುವ ಕಾರ್ಯವಿಧಾನ.
• ಅವರ ಜವಾಬ್ದಾರಿ ಮತ್ತು ಆರ್ಥಿಕ ವಲಯದ ಅಭಿವೃದ್ಧಿಯನ್ನು ಹೆಚ್ಚಿಸಲು ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.
iv. ಜನ್ ವಿಶ್ವಾಸ್ ಮಸೂದೆ 2.0
• ವಿವಿಧ ಕಾನೂನುಗಳಲ್ಲಿ 100 ಕ್ಕೂ ಹೆಚ್ಚು ನಿಬಂಧನೆಗಳನ್ನು ನಿರಪರಾಧೀಕರಣಗೊಳಿಸುವುದು.
ವಿತ್ತೀಯ ಬಲವರ್ಧನೆ
ವಿತ್ತೀಯ ಬಲವರ್ಧನೆಯ ಹಾದಿಯಲ್ಲಿ ಉಳಿಯುವ ಬದ್ಧತೆಯನ್ನು ಪುನರುಚ್ಚರಿಸಿದ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಸರ್ಕಾರದ ಸಾಲವು ಜಿಡಿಪಿಯ ಶೇಕಡಾವಾರು ಕುಸಿಯುತ್ತಲೇ ಇರುವ ರೀತಿಯಲ್ಲಿ ವಿತ್ತೀಯ ಕೊರತೆಯನ್ನು ಕಾಯ್ದುಕೊಳ್ಳಲು ಸರ್ಕಾರವು ಪ್ರತಿ ವರ್ಷ ಶ್ರಮಿಸುತ್ತಿದೆ ಎಂದು ಹೇಳಿದರು. ಮುಂದಿನ 6 ವರ್ಷಗಳ ವಿವರವಾದ ಮಾರ್ಗಸೂಚಿಯನ್ನು FRBM ಹೇಳಿಕೆಯಲ್ಲಿ ವಿವರವಾಗಿ ಪ್ರಸ್ತುತಪಡಿಸಲಾಗಿದೆ. 2024-25 ರ ವಿತ್ತೀಯ ಕೊರತೆಯ ಪರಿಷ್ಕೃತ ಅಂದಾಜು ಜಿಡಿಪಿಯ ಶೇಕಡಾ 4.8 ರಷ್ಟಿದ್ದರೆ, 2025-26 ರ ಬಜೆಟ್ ಅಂದಾಜನ್ನು ಜಿಡಿಪಿಯ ಶೇಕಡಾ 4.4 ಅಂದಾಜಿಸಲಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಪರಿಷ್ಕೃತ ಅಂದಾಜುಗಳು 2024-25
ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳ ಪರಿಷ್ಕೃತ ಅಂದಾಜು ₹31.47 ಲಕ್ಷ ಕೋಟಿಗಳಾಗಿದ್ದು, ಅದರಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು ₹25.57 ಲಕ್ಷ ಕೋಟಿಗಳಾಗಿವೆ ಎಂದು ಸಚಿವರು ಹೇಳಿದರು. ಒಟ್ಟು ವೆಚ್ಚದ ಪರಿಷ್ಕೃತ ಅಂದಾಜು ₹47.16 ಲಕ್ಷ ಕೋಟಿಗಳಾಗಿದ್ದು, ಅದರಲ್ಲಿ ಬಂಡವಾಳ ವೆಚ್ಚ ₹10.18 ಲಕ್ಷ ಕೋಟಿ ಎಂದು ಅವರು ಹೇಳಿದರು.
2025-26ರ ಬಜೆಟ್ ಅಂದಾಜುಗಳು
2025-26ನೇ ಸಾಲಿಗೆ, ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚಗಳು ಕ್ರಮವಾಗಿ ₹34.96 ಲಕ್ಷ ಕೋಟಿ ಮತ್ತು ₹50.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ನಿವ್ವಳ ತೆರಿಗೆ ಸ್ವೀಕೃತಿಗಳು ₹28.37 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
ಭಾಗ ಬಿ
ರಾಷ್ಟ್ರ ನಿರ್ಮಾಣದಲ್ಲಿ ಮಧ್ಯಮ ವರ್ಗದ ಮೇಲೆ ನಂಬಿಕೆ ಇರಿಸಿರುವ ಕೇಂದ್ರ ಬಜೆಟ್, ಹೊಸ ನೇರ ತೆರಿಗೆ ಸ್ಲ್ಯಾಬ್ ಗಳು ಮತ್ತು ಹೊಸ ಆದಾಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ದರಗಳನ್ನು ಪ್ರಸ್ತಾಪಿಸಿದೆ, ಇದರಿಂದಾಗಿ ವಾರ್ಷಿಕ ₹12 ಲಕ್ಷದವರೆಗಿನ ಒಟ್ಟು ಆದಾಯಕ್ಕೆ ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಅಂದರೆ ಬಂಡವಾಳ ಲಾಭದಂತಹ ವಿಶೇಷ ದರದ ಆದಾಯವನ್ನು ಹೊರತುಪಡಿಸಿ ಸರಾಸರಿ ತಿಂಗಳಿಗೆ ₹1 ಲಕ್ಷದ ಆದಾಯ ಇರುವವರು. ₹75,000 ಸ್ಟ್ಯಾಂಡರ್ಡ್ ಕಡಿತದಿಂದಾಗಿ ವಾರ್ಷಿಕ ₹12.75 ಲಕ್ಷದವರೆಗೆ ಗಳಿಸುವ ಸಂಬಳದ ವ್ಯಕ್ತಿಗಳು ಶೂನ್ಯ ತೆರಿಗೆಯನ್ನು ಪಾವತಿಸುತ್ತಾರೆ. ಹೊಸ ತೆರಿಗೆ ರಚನೆ ಮತ್ತು ಇತರ ನೇರ ತೆರಿಗೆ ಪ್ರಸ್ತಾವನೆಗಳಿಂದಾಗಿ ಸರ್ಕಾರವು ಸುಮಾರು ₹ 1 ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳಲಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸರ್ಕಾರವು ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಕ್ರಮಗಳನ್ನು ಕೈಗೊಂಡಿದೆ. ನೇರ ತೆರಿಗೆ ಪ್ರಸ್ತಾವನೆಗಳು ಮಧ್ಯಮ ವರ್ಗದ ಮೇಲೆ ವಿಶೇಷ ಗಮನವನ್ನು ಹೊಂದಿರುವ ವೈಯಕ್ತಿಕ ಆದಾಯ ತೆರಿಗೆ ಸುಧಾರಣೆಗಳು, ಟಿಡಿಎಸ್/ಟಿಸಿಎಸ್ ತರ್ಕಬದ್ಧಗೊಳಿಸುವಿಕೆ, ಸ್ವಯಂಪ್ರೇರಿತ ಅನುಸರಣೆಯ ಉತ್ತೇಜನದ ಜೊತೆಗೆ ಅನುಸರಣೆ ಹೊರೆಯಲ್ಲಿ ಕಡಿತ, ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಉದ್ಯೋಗ ಮತ್ತು ಹೂಡಿಕೆಯ ಉತ್ತೇಜನವನ್ನು ಒಳಗೊಂಡಿವೆ.
ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಪರಿಷ್ಕೃತ ತೆರಿಗೆ ದರ ರಚನೆಯನ್ನು ಬಜೆಟ್ ಈ ಕೆಳಗಿನಂತೆ ಪ್ರಸ್ತಾಪಿಸಿದೆ;
ವಾರ್ಷಿಕ ಒಟ್ಟು ಆದಾಯ
|
ತೆರಿಗೆ ದರ
|
₹ 0 - 4 ಲಕ್ಷ
|
ಶೂನ್ಯ
|
₹ 4 - 8 ಲಕ್ಷ
|
5%
|
₹ 8 - 12 ಲಕ್ಷ
|
10%
|
₹ 12 - 16 ಲಕ್ಷ
|
15%
|
₹ 16 - 20 ಲಕ್ಷ
|
20%
|
₹ 20 - 24 ಲಕ್ಷ
|
25%
|
₹ 24 ಲಕ್ಷಕ್ಕಿಂತ ಹೆಚ್ಚು
|
30%
|
ಟಿಡಿಎಸ್/ಟಿಸಿಎಸ್ ಅನ್ನು ತರ್ಕಬದ್ಧಗೊಳಿಸಲು, ಹಿರಿಯ ನಾಗರಿಕರು ಗಳಿಸುವ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ ₹50,000 ದಿಂದ ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಬಾಡಿಗೆಯ ಮೇಲಿನ ಟಿಡಿಎಸ್ ಮಿತಿಯನ್ನು ವಾರ್ಷಿಕ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇತರ ಕ್ರಮಗಳೆಂದರೆ, ಟಿಸಿಎಸ್ ಸಂಗ್ರಹದ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸುವುದು ಮತ್ತು PAN ಅಲ್ಲದ ಸಂದರ್ಭಗಳಲ್ಲಿ ಮಾತ್ರ ಹೆಚ್ಚಿನ ಟಿಡಿಎಸ್ ಕಡಿತಗಳೊಂದಿಗೆ ಮುಂದುವರಿಯುವುದು. ಟಿಡಿಎಸ್ ಪಾವತಿಯಲ್ಲಿನ ವಿಳಂಬವನ್ನು ನಿರಪರಾಧೀಕರಣಗೊಳಿಸಿದ ನಂತರ, ಈಗ ಟಿಸಿಎಸ್ ಪಾವತಿಗಳಲ್ಲಿನ ವಿಳಂಬವನ್ನು ಸಹ ನಿರಪರಾಧೀಕರಣಗೊಳಿಸಲಾಗಿದೆ.
ಸ್ವಯಂಪ್ರೇರಿತ ಅನುಸರಣೆಗೆ ಉತ್ತೇಜನ ನೀಡುತ್ತಾ, ಯಾವುದೇ ಮೌಲ್ಯಮಾಪನ ವರ್ಷಕ್ಕೆ ನವೀಕರಿಸಿದ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು ಎರಡು ವರ್ಷಗಳಿಂದ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗಿದೆ. 90 ಲಕ್ಷಕ್ಕೂ ಹೆಚ್ಚು ತೆರಿಗೆದಾರರು ತಮ್ಮ ಆದಾಯವನ್ನು ನವೀಕರಿಸಲು ಹೆಚ್ಚುವರಿ ತೆರಿಗೆಯನ್ನು ಪಾವತಿಸಿದ್ದಾರೆ. ಸಣ್ಣ ಚಾರಿಟಬಲ್ ಟ್ರಸ್ಟ್/ಸಂಸ್ಥೆಗಳು ಅವುಗಳ ನೋಂದಣಿ ಅವಧಿಯನ್ನು 5 ರಿಂದ 10 ವರ್ಷಗಳಿಗೆ ಹೆಚ್ಚಿಸುವ ಮೂಲಕ ಪ್ರಯೋಜನ ಪಡೆದಿವೆ, ಇದರಿಂದಾಗಿ ಅನುಸರಣೆ ಹೊರೆಯನ್ನು ಕಡಿಮೆ ಮಾಡಲಾಗಿದೆ. ಹೆಚ್ಚುವರಿಯಾಗಿ, ತೆರಿಗೆದಾರರು ಈಗ ಯಾವುದೇ ಷರತ್ತುಗಳಿಲ್ಲದೆ ಎರಡು ಸ್ವಯಂ-ಆಕ್ರಮಿತ ಆಸ್ತಿಗಳ ವಾರ್ಷಿಕ ಮೌಲ್ಯವನ್ನು ಶೂನ್ಯ ಎಂದು ಕ್ಲೈಮ್ ಮಾಡಬಹುದು. ಹಿಂದಿನ ಮುಂಗಡಪತ್ರದ ವಿವಾದ್ ಸೆ ವಿಶ್ವಾಸ್ ಯೋಜನೆಯು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ, ಸುಮಾರು 33,000 ತೆರಿಗೆದಾರರು ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಲು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ. ಹಿರಿಯ ಮತ್ತು ಅತ್ಯಂತ ಹಿರಿಯ ನಾಗರಿಕರಿಗೆ ಪ್ರಯೋಜನಗಳನ್ನು ನೀಡುವ ಮೂಲಕ, 29 ಆಗಸ್ಟ್, 2024 ರಂದು ಅಥವಾ ನಂತರ ರಾಷ್ಟ್ರೀಯ ಉಳಿತಾಯ ಯೋಜನೆ ಖಾತೆಗಳಿಂದ ಮಾಡಿದ ಹಿಂಪಡೆಯುವಿಕೆಗೆ ವಿನಾಯಿತಿ ನೀಡಲಾಗಿದೆ. ಎನ್ ಪಿ ಎಸ್ ವಾತ್ಸಲ್ಯ ಖಾತೆಗಳು ಸಹ ಇದೇ ರೀತಿಯ ಪ್ರಯೋಜನಗಳನ್ನು ಪಡೆಯುತ್ತವೆ.
ವ್ಯವಹಾರವನ್ನು ಸುಲಭಗೊಳಿಸಲು, ಬಜೆಟ್ ಮೂರು ವರ್ಷಗಳ ಅವಧಿಗೆ ಅಂತರರಾಷ್ಟ್ರೀಯ ವಹಿವಾಟುಗಳ ಬೆಲೆಯನ್ನು ನಿಗದಿಪಡಿಸುವ ಯೋಜನೆಯನ್ನು ಪರಿಚಯಿಸಿದೆ. ಇದು ಜಾಗತಿಕ ಉತ್ತಮ ಅಭ್ಯಾಸಗಳಿಗೆ ಅನುಗುಣವಾಗಿದೆ. ಇದಲ್ಲದೆ, ಅಂತರರಾಷ್ಟ್ರೀಯ ತೆರಿಗೆಯಲ್ಲಿ ಖಚಿತತೆಯನ್ನು ಒದಗಿಸಲು ಸೆಲ್ಫ್ ಹಾರ್ಬರ್ ನಿಯಮಗಳನ್ನು ವಿಸ್ತರಿಸಲಾಗುತ್ತಿದೆ.
ಉದ್ಯೋಗ ಮತ್ತು ಹೂಡಿಕೆಯನ್ನು ಉತ್ತೇಜಿಸಲು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಅಥವಾ ನಿರ್ವಹಿಸುತ್ತಿರುವ ನಿವಾಸಿ ಕಂಪನಿಗೆ ಸೇವೆಗಳನ್ನು ಒದಗಿಸುವ ಅನಿವಾಸಿಗಳಿಗೆ ಒಂದು ಊಹೆಯ ತೆರಿಗೆ ಪದ್ಧತಿಯನ್ನು ಕಲ್ಪಿಸಲಾಗಿದೆ. ಇದಲ್ಲದೆ, ಅಸ್ತಿತ್ವದಲ್ಲಿರುವ ಟನೇಜ್ ತೆರಿಗೆ ಯೋಜನೆಯ ಪ್ರಯೋಜನಗಳನ್ನು ಒಳನಾಡಿನ ಹಡಗುಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಸ್ಟಾರ್ಟ್-ಅಪ್ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಲು, ಸ್ಥಾಪನೆಯ ಅವಧಿಯನ್ನು 5 ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಮೂಲಸೌಕರ್ಯ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು, ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳಲ್ಲಿ ಹೂಡಿಕೆ ಮಾಡುವ ದಿನಾಂಕವನ್ನು ಇನ್ನೂ ಐದು ವರ್ಷಗಳವರೆಗೆ ಅಂದರೆ ಮಾರ್ಚ್ 31, 2030 ರವರೆಗೆ ವಿಸ್ತರಿಸಲಾಗಿದೆ.
ಕೈಗಾರಿಕಾ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕಗಳನ್ನು ತರ್ಕಬದ್ಧಗೊಳಿಸುವ ಭಾಗವಾಗಿ, ಬಜೆಟ್ ನಲ್ಲಿ ಈ ಕೆಳಗಿನ ಪ್ರಸ್ತಾವನೆಗಳನ್ನು ಮಾಡಲಾಗಿದೆ; (i) ಏಳು ಸುಂಕಗಳನ್ನು ತೆಗೆದುಹಾಕಲಾಗುತ್ತದೆ, (ii) ಪರಿಣಾಮಕಾರಿ ಸುಂಕದ ಹೊರೆಯನ್ನು ನಿರ್ವಹಿಸಲು ಸೂಕ್ತವಾದ ಸೆಸ್ ಅನ್ನು ವಿಧಿಸಲಾಗುತ್ತದೆ ಮತ್ತು (iii) ಒಂದಕ್ಕಿಂತ ಹೆಚ್ಚು ಸೆಸ್ ಅಥವಾ ಸರ್ಚಾರ್ಜ್ ವಿಧಿಸಲಾಗುವುದಿಲ್ಲ.
ಔಷಧಿಗಳು/ಡ್ರಗ್ಸ್ ಆಮದಿನ ಮೇಲಿನ ಪರಿಹಾರವಾಗಿ, ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆಗಾಗಿ 36 ಜೀವರಕ್ಷಕ ಡ್ರಗ್ಸ್ ಮತ್ತು ಔಷಧಿಗಳನ್ನು ಮೂಲಭೂತ ಕಸ್ಟಮ್ಸ್ ಸುಂಕ (ಬಿಸಿಡಿ) ಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಇದಲ್ಲದೆ, ರೋಗಿಗಳ ಸಹಾಯ ಕಾರ್ಯಕ್ರಮಗಳ ಅಡಿಯಲ್ಲಿ 13 ಹೊಸ ಡ್ರಗ್ಸ್ ಮತ್ತು ಔಷಧಿಗಳೊಂದಿಗೆ 37 ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ಸರಬರಾಜು ಮಾಡಿದರೆ ಮೂಲಭೂತ ಕಸ್ಟಮ್ಸ್ ಸುಂಕದಿಂದ (ಬಿಸಿಡಿ) ವಿನಾಯಿತಿ ನೀಡಲಾಗಿದೆ.
ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧನೆಯನ್ನು ಬೆಂಬಲಿಸಲು, ದೇಶೀಯವಾಗಿ ಲಭ್ಯವಿಲ್ಲದ 25 ನಿರ್ಣಾಯಕ ಖನಿಜಗಳ ಮೇಲೆ ಬಿಸಿಡಿಯನ್ನು ಜುಲೈ 2024 ರಲ್ಲಿ ವಿನಾಯಿತಿ ನೀಡಲಾಗಿದೆ. ಬಜೆಟ್ 2025-26 ಕೋಬಾಲ್ಟ್ ಪೌಡರ್ ಮತ್ತು ತ್ಯಾಜ್ಯ, ಲಿಥಿಯಂ-ಐಯಾನ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ, ಸತು ಮತ್ತು ಇತರ 12 ನಿರ್ಣಾಯಕ ಖನಿಜಗಳಿಗೆ ಸಂಪೂರ್ಣವಾಗಿ ವಿನಾಯಿತಿ ನೀಡುತ್ತದೆ. ದೇಶೀಯ ಜವಳಿ ಉತ್ಪಾದನೆಯನ್ನು ಉತ್ತೇಜಿಸಲು, ಸಂಪೂರ್ಣ ವಿನಾಯಿತಿ ಪಡೆದ ಜವಳಿ ಯಂತ್ರಗಳಿಗೆ ಇನ್ನೂ ಎರಡು ರೀತಿಯ ಶಟಲ್-ಲೆಸ್ ಲೂಮ್ ಗಳನ್ನು ಸೇರಿಸಲಾಗಿದೆ. ಇದಲ್ಲದೆ, "10% ರಿಂದ 20% ವರೆಗೆ" ಒಂಬತ್ತು ಸುಂಕದ ದರಗಳನ್ನು ಒಳಗೊಂಡಿರುವ ಹೆಣೆದ ಬಟ್ಟೆಗಳ ಮೇಲಿನ ಬಿಸಿಡಿಯನ್ನು " ಶೇ.20 ಅಥವಾ ₹115 ಕೆಜಿ, ಯಾವುದು ಹೆಚ್ಚು ಅದು" ಎಂದು ಪರಿಷ್ಕರಿಸಲಾಗಿದೆ.
ಇನ್ವರ್ಟೆಡ್ ಸುಂಕದ ರಚನೆಯನ್ನು ಸುಧಾರಿಸಲು ಮತ್ತು "ಮೇಕ್ ಇನ್ ಇಂಡಿಯಾ" ವನ್ನು ಉತ್ತೇಜಿಸಲು, ಇಂಟರ್ ಆಕ್ಟಿವ್ ಫ್ಲಾಟ್ ಪ್ಯಾನಲ್ ಡಿಸ್ಪ್ಲೇ (IFPD) ನಲ್ಲಿ ಬಿಸಿಡಿಯನ್ನು ಶೇ.20 ಕ್ಕೆ ಹೆಚ್ಚಿಸಲಾಗಿದೆ ಮತ್ತು ಓಪನ್ ಸೆಲ್ ಗಳಲ್ಲಿ 5% ಗೆ ಇಳಿಸಲಾಗಿದೆ. ಓಪನ್ ಸೆಲ್ ತಯಾರಿಕೆಯನ್ನು ಉತ್ತೇಜಿಸಲು, ಓಪನ್ ಸೆಲ್ ಗಳ ಕೆಲವು ಭಾಗಗಳಿಗೆ ಬಿಸಿಡಿಯಿಂದ ವಿನಾಯಿತಿ ನೀಡಲಾಗಿದೆ.
ದೇಶದಲ್ಲಿ ಲಿಥಿಯಾನ್-ಐಯಾನ್ ಬ್ಯಾಟರಿಯ ಉತ್ಪಾದನೆಯನ್ನು ಉತ್ತೇಜಿಸಲು, ಇವಿ ಬ್ಯಾಟರಿ ಉತ್ಪಾದನೆಗೆ 35 ಹೆಚ್ಚುವರಿ ಬಂಡವಾಳ ಸರಕುಗಳು ಮತ್ತು ಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಗಾಗಿ 28 ಹೆಚ್ಚುವರಿ ಬಂಡವಾಳ ಸರಕುಗಳನ್ನು ವಿನಾಯಿತಿ ಬಂಡವಾಳ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ. 2025-26ರ ಮುಂಗಡಪತ್ರವು ಇನ್ನೂ ಹತ್ತು ವರ್ಷಗಳವರೆಗೆ ಕಚ್ಚಾ ವಸ್ತುಗಳು, ಬಿಡಿಭಾಗಗಳು, ಉಪಭೋಗ್ಯ ವಸ್ತುಗಳು ಅಥವಾ ಭಾಗಗಳ ಮೇಲೆ ಬಿಸಿಡಿ ವಿನಾಯಿತಿಯನ್ನು ಮುಂದುವರಿಸುತ್ತದೆ. ಕ್ಯಾರಿಯರ್ ಗ್ರೇಡ್ ಈಥರ್ನೆಟ್ ಸ್ವಿಚ್ ಗಳಿಗೆ ಸಮಾನವಾಗಿ ಮಾಡಲು ಕ್ಯಾರಿಯರ್ ಗ್ರೇಡ್ ಈಥರ್ನೆಟ್ ಸ್ವಿಚ್ ಗಳ ಮೇಲಿನ ಬಿಸಿಡಿಯನ್ನು ಶೇ.20 ರಿಂದ ಶೇ.10 ಕ್ಕೆ ಕಡಿಮೆ ಮಾಡಲಾಗಿದೆ.
2025-26ರ ಮುಂಗಡಪತ್ರವು ರಫ್ತು ಉತ್ತೇಜನಕ್ಕಾಗಿ, ಕರಕುಶಲ ವಸ್ತುಗಳ ರಫ್ತುಗಳನ್ನು ಸುಗಮಗೊಳಿಸುತ್ತದೆ, ಮೌಲ್ಯವರ್ಧನೆ ಮತ್ತು ಉದ್ಯೋಗಕ್ಕಾಗಿ ವೆಟ್ ಬ್ಲೂ ಲೆದರ್ ಮೇಲಿನ ಬಿಸಿಡಿಗೆ ಸಂಪೂರ್ಣ ವಿನಾಯಿತಿ ನೀಡುತ್ತದೆ, ಫ್ರೋಜನ್ ಫಿಶ್ ಪೇಸ್ಟ್ ಮೇಲಿನ ಬಿಸಿಡಿಯನ್ನು ಶೇ.30 ರಿಂದ ಶೇ.5 ಕ್ಕೆ ಕಡಿಮೆ ಮಾಡಿದೆ ಮತ್ತು ಮೀನು ಮತ್ತು ಸಿಗಡಿ ಫೀಡ್ ಗಳ ತಯಾರಿಕೆಗಾಗಿ.ಮೀನಿನ ಹೈಡ್ರೊಲೈಜೆಟ್ ಮೇಲಿನ ಬಿಸಿಡಿಯನ್ನು ಶೇ.15 ರಿಂದ ಶೇ.5 ಕ್ಕೆ ಕಡಿಮೆ ಮಾಡಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯು ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣದ ಪ್ರಮುಖ ಆಧಾರ ಸ್ತಂಭಗಳಾಗಿವೆ ಎಂದು ಹೇಳಿದರು. ಮಧ್ಯಮ ವರ್ಗವು ಭಾರತದ ಅಭಿವೃದ್ಧಿಗೆ ಶಕ್ತಿ ನೀಡುತ್ತದೆ ಮತ್ತು ಸರ್ಕಾರವು ಕಾಲಕಾಲಕ್ಕೆ 'ಶೂನ್ಯ ತೆರಿಗೆ' ಸ್ಲ್ಯಾಬ್ ಅನ್ನು ಹೆಚ್ಚಿಸುವ ಮೂಲಕ ಅವರ ಕೊಡುಗೆಯನ್ನು ಗುರುತಿಸಿದೆ ಎಂದು ಅವರು ಹೇಳಿದರು. ಪ್ರಸ್ತಾವಿತ ಹೊಸ ತೆರಿಗೆ ರಚನೆಯು ಮಧ್ಯಮ ವರ್ಗದ ಕೈಯಲ್ಲಿ ಹೆಚ್ಚಿನ ಹಣವನ್ನು ಹಾಕುವ ಮೂಲಕ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
*****
(Release ID: 2098637)
Visitor Counter : 106
Read this release in:
Hindi
,
Khasi
,
English
,
Urdu
,
Marathi
,
Nepali
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam