ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಭಾರತದ ರಾಷ್ಟ್ರಪತಿಗಳು  'ಸ್ವಚ್ಛ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮಿಕತೆ' ಕುರಿತು ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿದರು

Posted On: 04 OCT 2024 11:36AM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ. ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 4, 2024) ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಆಯೋಜಿಸಲಾಗುತ್ತಿರುವ 'ಸ್ವಚ್ಛ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮಿಕತೆ' ಕುರಿತ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು  ಅಧ್ಯಾತ್ಮ ಎಂದರೆ ಧರ್ಮಶ್ರದ್ಧೆಯಿಂದ ಇರುವುದು  ಅಥವಾ ಲೌಕಿಕ ಚಟುವಟಿಕೆಗಳನ್ನು ತ್ಯಜಿಸುವುದು ಎಂದಲ್ಲ. ಆಧ್ಯಾತ್ಮಿಕತೆ ಎಂದರೆ ಅಂತರಂಗದ  ಶಕ್ತಿಯನ್ನು ಗುರುತಿಸುವುದು ಮತ್ತು ನಡವಳಿಕೆ ಮತ್ತು ಆಲೋಚನೆಗಳಲ್ಲಿ ಶುದ್ಧತೆಯನ್ನು ತರುವುದು. ಆಲೋಚನೆಗಳು ಮತ್ತು ಕಾರ್ಯಗಳಲ್ಲಿನ ಶುದ್ಧತೆಯು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಮತೋಲನ ಮತ್ತು ಶಾಂತಿಯನ್ನು ತರುವ ಮಾರ್ಗವಾಗಿದೆ. ಸ್ವಸ್ಥ ಹಾಗೂ ಸ್ವಚ್ಛ ಸಮಾಜ ನಿರ್ಮಾಣಕ್ಕೂ ಇದು ಅಗತ್ಯವಾಗಿದೆ.

ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಚ್ಛತೆ ಆರೋಗ್ಯಕರ ಜೀವನಕ್ಕೆ ಬಹು ಮುಖ್ಯವಾಗಿದೆ ಎಂದು ರಾಷ್ಟ್ರಪತಿಗಳು  ಹೇಳಿದರು.  ನಾವು ಬಾಹ್ಯ ಶುಚಿತ್ವದ ಮೇಲೆ ಮಾತ್ರ ಗಮನಹರಿಸದೆ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಶುದ್ಧವಾಗಿರಬೇಕು. ಸಮಗ್ರ ಆರೋಗ್ಯವು ಶುದ್ಧ ಮನಸ್ಥಿತಿಯ ಮೇಲೆ ಆಧರಿಸಿದೆ. ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯವು ಸರಿಯಾದ ಚಿಂತನೆಯ ಮೇಲೆ ಅವಲಂಬಿತವಾಗಿರುತ್ತದೆ ಏಕೆಂದರೆ ಆಲೋಚನೆಗಳು ಮಾತ್ರ  ಮಾತು ಮತ್ತು ನಡವಳಿಕೆಯ ರೂಪವನ್ನು ಪಡೆದುಕೊಳ್ಳುತ್ತವೆ. ಇತರರ ಬಗ್ಗೆ ಅಭಿಪ್ರಾಯವನ್ನು ಹೊಂದುವ ಮೊದಲು, ನಾವು ನಮ್ಮ ಅಂತರಂಗವನ್ನು ನೋಡಿಕೊಳ್ಳಬೇಕು. ಬೇರೊಬ್ಬರ ಪರಿಸ್ಥಿತಿಯಲ್ಲಿ ನಮ್ಮನ್ನು ಇರಿಸಿಕೊಳ್ಳುವ ಮೂಲಕ, ನಾವು ಸರಿಯಾದ ಅಭಿಪ್ರಾಯವನ್ನು ರೂಪಿಸಲು ಸಾಧ್ಯವಾಗುತ್ತದೆ.

ಅಧ್ಯಾತ್ಮವು ಕೇವಲ ವೈಯಕ್ತಿಕ ಬೆಳವಣಿಗೆಯ ಸಾಧನವಾಗಿರದೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮಾರ್ಗವಾಗಿದೆ ಎಂದು ರಾಷ್ಟ್ರಪತಿಗಳು  ಹೇಳಿದರು. ನಾವು ನಮ್ಮ ಆಂತರಿಕ ಶುದ್ಧತೆಯನ್ನು ಗುರುತಿಸಿದಾಗ ಮಾತ್ರ ಆರೋಗ್ಯಕರ ಮತ್ತು ಶಾಂತಿಯುತ ಸಮಾಜದ ಸ್ಥಾಪನೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕತೆಯು ಸಮಾಜ ಮತ್ತು ಭೂಮಿಗೆ ಸಂಬಂಧಿಸಿದ ಅನೇಕ  ಅಂಶಗಳಿಗೆ ಬಲನೀಡುತ್ತದೆ, ಉದಾಹರಣೆಗೆ ಸುಸ್ಥಿರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯ.

ಲೌಕಿಕವಾದವು ಕ್ಷಣಿಕ ದೈಹಿಕ ಮತ್ತು ಮಾನಸಿಕ ತೃಪ್ತಿಯನ್ನು ನೀಡುತ್ತದೆ, ಅದನ್ನು ನಾವು ನಿಜವಾದ ಸಂತೋಷವೆಂದು ಪರಿಗಣಿಸುತ್ತೇವೆ ಮತ್ತು ಅದರೊಂದಿಗೆ ಅಂಟಿಕೊಳ್ಳುತ್ತೇವೆ ಎಂದು ರಾಷ್ಟ್ರಪತಿಗಳು  ಹೇಳಿದರು. ಈ   ನಮ್ಮ ಬಂಧನವು ಅತೃಪ್ತಿ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಮತ್ತೊಂದೆಡೆ, ಆಧ್ಯಾತ್ಮಿಕತೆಯು ನಮ್ಮನ್ನು ನಾವು  ತಿಳಿದುಕೊಳ್ಳಲು, ನಮ್ಮ ಆಂತರಂಗವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ.

ಇಂದಿನ ಜಗತ್ತಿನಲ್ಲಿ ಶಾಂತಿ ಮತ್ತು ಏಕತೆಯ ಮಹತ್ವ ಮತ್ತಷ್ಟು ಹೆಚ್ಚಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಾವು ಶಾಂತಿಯುತವಾಗಿದ್ದಾಗ ಮಾತ್ರ, ನಾವು ಇತರರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿಯನ್ನು ಅನುಭವಿಸಬಹುದು. ಯೋಗ ಮತ್ತು ಬ್ರಹ್ಮಕುಮಾರಿಯಂತಹ ಆಧ್ಯಾತ್ಮಿಕ ಸಂಸ್ಥೆಗಳ ಬೋಧನೆಗಳು ನಮಗೆ ಆಂತರಿಕ ಶಾಂತಿಯನ್ನು ಅನುಭವಿಸುವಂತೆ ಮಾಡುತ್ತದೆ. ಈ ಶಾಂತಿಯು ನಮ್ಮೊಳಗೆ ಮಾತ್ರವಲ್ಲದೆ ಇಡೀ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರಬಲ್ಲದು ಎಂದು ಹೇಳಿದರು.

ರಾಷ್ಟ್ರಪತಿಗಳ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ:

 

*****



(Release ID: 2062327) Visitor Counter : 7