ಪ್ರಧಾನ ಮಂತ್ರಿಯವರ ಕಛೇರಿ
ಜಾರ್ಖಂಡ್ ನ ಹಜಾರಿಬಾಗ್ ನಲ್ಲಿ 80,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು
ಸುಮಾರು 550 ಜಿಲ್ಲೆಗಳ 63000 ಬುಡಕಟ್ಟು ಗ್ರಾಮಗಳಿಗೆ ಅನುಕೂಲವಾಗುವಂತೆ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಚಾಲನೆ
40 ಏಕಲವ್ಯ ಶಾಲೆಗಳ ಉದ್ಘಾಟನೆ ಮತ್ತು 25 ಏಕಲವ್ಯ ಶಾಲೆಗಳಿಗೆ ಶಂಕುಸ್ಥಾಪನೆ
ಪಿಎಂ-ಜನಮಾನ್ ಅಡಿಯಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ
"ಇಂದಿನ ಯೋಜನೆಗಳು ಬುಡಕಟ್ಟು ಸಮಾಜದ ಬಗ್ಗೆ ಸರ್ಕಾರದ ಆದ್ಯತೆಗೆ ಪುರಾವೆಯಾಗಿವೆ"
Posted On:
02 OCT 2024 3:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾರ್ಖಂಡ್ ನ ಹಜಾರಿಬಾಗ್ ನಲ್ಲಿ 80,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಮೋದಿ ಅವರು ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಚಾಲನೆ ನೀಡಿದರು, 40 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (ಇಎಂಆರ್ ಎಸ್) ಉದ್ಘಾಟಿಸಿದರು ಮತ್ತು 25 ಇಎಂಆರ್ ಎಸ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗು ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮಾನ್) ಅಡಿಯಲ್ಲಿ ಅನೇಕ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜಾರ್ಖಂಡ್ ನ ಅಭಿವೃದ್ಧಿಯ ಪಯಣದ ಭಾಗವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ನೂರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಕೆಲವು ದಿನಗಳ ಹಿಂದೆ ಜೆಮ್ ಶೆಡ್ ಪುರಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಾರ್ಖಂಡ್ ನ ಸಾವಿರಾರು ಬಡವರಿಗೆ ಪಕ್ಕಾ ಮನೆಗಳನ್ನು ಹಸ್ತಾಂತರಿಸಿರುವುದನ್ನು ಶ್ರೀ ಮೋದಿ ಉಲ್ಲೇಖಿಸಿದರು. ಬುಡಕಟ್ಟು ಸಮುದಾಯಗಳ ಸಬಲೀಕರಣ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ 80,000 ಕೋಟಿ ರೂ.ಗೂ ಅಧಿಕ ಮೌಲ್ಯದ ಇಂದಿನ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಇದು ಬುಡಕಟ್ಟು ಸಮುದಾಯಗಳ ಬಗ್ಗೆ ಸರ್ಕಾರದ ಆದ್ಯತೆಗೆ ಪುರಾವೆಯಾಗಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನ ಯೋಜನೆಗಳಿಗಾಗಿ ಜಾರ್ಖಂಡ್ ಮತ್ತು ಭಾರತದ ಜನರನ್ನು ಅಭಿನಂದಿಸಿದರು.
ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆಯ ಇಂದಿನ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಬುಡಕಟ್ಟು ಕಲ್ಯಾಣದ ಬಗ್ಗೆ ಅವರ ದೃಷ್ಟಿಕೋನ/ಚಿಂತನೆ ಮತ್ತು ವಿಚಾರಗಳು ಭಾರತದ ಪ್ರಮುಖ ತಿರುಳಾಗಿದೆ ಎಂದರು. ಬುಡಕಟ್ಟು ಸಮಾಜಗಳು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ಭಾರತ ಪ್ರಗತಿ ಸಾಧಿಸಲು ಸಾಧ್ಯ ಎಂದು ಮಹಾತ್ಮಾ ಗಾಂಧಿ ನಂಬಿದ್ದರು ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಸರ್ಕಾರವು ಬುಡಕಟ್ಟು ಜನರ ಉನ್ನತಿಗೆ ಗರಿಷ್ಠ ಗಮನ ಹರಿಸುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ ಅವರು, ಸುಮಾರು 80,000 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 550 ಜಿಲ್ಲೆಗಳಲ್ಲಿ 63,000 ಬುಡಕಟ್ಟು ಪ್ರಾಬಲ್ಯದ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಧರ್ತಿ ಆಬಾ ಜನಜಾತಿ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಇಂದು ಚಾಲನೆ ನೀಡಿರುವುದನ್ನು ಉಲ್ಲೇಖಿಸಿದರು. ಬುಡಕಟ್ಟು ಪ್ರಾಬಲ್ಯದ ಈ ಹಳ್ಳಿಗಳಲ್ಲಿ ಸಾಮಾಜಿಕ-ಆರ್ಥಿಕ ಜೀವನವನ್ನು ಸುಧಾರಿಸುವ ಕೆಲಸ ಮಾಡಲಾಗುವುದು ಮತ್ತು ಪ್ರಯೋಜನಗಳು ದೇಶದ 5 ಕೋಟಿಗೂ ಹೆಚ್ಚು ಬುಡಕಟ್ಟು ಸಹೋದರ ಸಹೋದರಿಯರಿಗೆ ತಲುಪಲಿವೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. "ಜಾರ್ಖಂಡ್ ನ ಬುಡಕಟ್ಟು ಸಮಾಜಕ್ಕೂ ಇದರಿಂದ ಹೆಚ್ಚಿನ ಲಾಭವಾಗಲಿದೆ" ಎಂದು ಅವರು ಹೇಳಿದರು.
ಭಗವಾನ್ ಬಿರ್ಸಾ ಮುಂಡಾ ಅವರ ನೆಲದಿಂದ ಧರ್ತಿ ಅಬಾ ಜನಜಾತಿ ಗ್ರಾಮ ಉತ್ಕರ್ಷ್ ಅಭಿಯಾನವನ್ನು ಪ್ರಾರಂಭಿಸುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಜಾರ್ಖಂಡ್ ನಿಂದ ಪಿಎಂ-ಜನಮಾನ್ ಯೋಜನೆಯನ್ನು ಆರಂಭಿಸಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು. 2024 ರ ನವೆಂಬರ್ 15 ರಂದು, ಜನಜಾತಿ ಗೌರವ್ ದಿವಸದಂದು, ಭಾರತವು ಪಿಎಂ-ಜನಮಾನ್ ಯೋಜನೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಿದೆ ಎಂದು ಅವರು ಘೋಷಿಸಿದರು. ಪಿಎಂ-ಜನಮಾನ್ ಯೋಜನೆಯ ಮೂಲಕ ಅಭಿವೃದ್ಧಿಯ ಫಲಗಳು ದೇಶದ ಹಿಂದುಳಿದಿದ್ದ ಬುಡಕಟ್ಟು ಪ್ರದೇಶಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು. ಪಿಎಂ-ಜನಮಾನ್ ಯೋಜನೆಯಡಿ ಸುಮಾರು 1350 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂಬುದನ್ನು ಶ್ರೀ ಮೋದಿ ಒತ್ತಿ ಹೇಳಿದರು. ಯೋಜನೆಯ ಬಗ್ಗೆ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳಲ್ಲಿ ಉತ್ತಮ ಜೀವನಕ್ಕಾಗಿ ಶಿಕ್ಷಣ, ಆರೋಗ್ಯ ಮತ್ತು ರಸ್ತೆಗಳಂತಹ ಸೌಲಭ್ಯಗಳನ್ನು ನಿರ್ಮಿಸಲಾಗುವುದು ಎಂದೂ ಹೇಳಿದರು.
ಜಾರ್ಖಂಡ್ ನಲ್ಲಿ ಪಿಎಂ-ಜನಮಾನ್ ಯೋಜನೆಯ ಮೊದಲ ವರ್ಷದಲ್ಲೇ ಹಲವು ಸಾಧನೆಗಳನ್ನು ಸಾಧಿಸಲಾಗಿರುವುದರತ್ತ ಬೆಟ್ಟು ಮಾಡಿದ ಶ್ರೀ ಮೋದಿ, 950ಕ್ಕೂ ಹೆಚ್ಚು ಹಿಂದುಳಿದ ಹಳ್ಳಿಗಳ ಪ್ರತಿ ಮನೆಗೂ ನೀರು ಒದಗಿಸುವ ಕಾರ್ಯ ಪೂರ್ಣಗೊಂಡಿದೆ ಎಂದರು. ರಾಜ್ಯದಲ್ಲಿ 35 ವಂದನ್ ವಿಕಾಸ್ ಕೇಂದ್ರಗಳನ್ನು ಸಹ ಅನುಮೋದಿಸಲಾಗಿದೆ ಎಂದು ಅವರು ಹೇಳಿದರು. ದೂರದ, ದುರ್ಗಮ ಬುಡಕಟ್ಟು ಪ್ರದೇಶಗಳನ್ನು ಮೊಬೈಲ್ ಸಂಪರ್ಕದೊಂದಿಗೆ ಜೋಡಿಸುವ ಕಾರ್ಯವನ್ನು ಪ್ರಧಾನಿ ಒತ್ತಿ ಹೇಳಿದರು, ಇದು ಪ್ರಗತಿಗೆ ಸಮಾನ ಅವಕಾಶವನ್ನು ಒದಗಿಸುವ ಮೂಲಕ ಬುಡಕಟ್ಟು ಸಮಾಜವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದರು.
ಬುಡಕಟ್ಟು ಯುವಜನರಿಗೆ ಶಿಕ್ಷಣ ಮತ್ತು ಅವಕಾಶಗಳು ದೊರೆತಾಗ ಬುಡಕಟ್ಟು ಸಮಾಜ ಪ್ರಗತಿ ಸಾಧಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದಕ್ಕಾಗಿ, ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ವಸತಿ ಶಾಲೆಗಳನ್ನು ನಿರ್ಮಿಸುವ ಅಭಿಯಾನದಲ್ಲಿ ಸರ್ಕಾರ ತೊಡಗಿದೆ ಎಂದೂ ಶ್ರೀ ಮೋದಿ ಹೇಳಿದರು. ಇಂದು 40 ಏಕಲವ್ಯ ವಸತಿ ಶಾಲೆಗಳ ಉದ್ಘಾಟನೆ ಮತ್ತು 25 ಹೊಸ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಏಕಲವ್ಯ ಶಾಲೆಗಳು ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿರಬೇಕು ಮತ್ತು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬುದನ್ನು ಪುನರುಚ್ಚರಿಸಿದರು. ಇದಕ್ಕಾಗಿ, ಸರ್ಕಾರವು ಪ್ರತಿ ಶಾಲೆಯ ಬಜೆಟ್ ಅನ್ನು ಬಹುತೇಕ ದ್ವಿಗುಣಗೊಳಿಸಿದೆ ಎಂದರು.
ಸರಿಯಾದ ಪ್ರಯತ್ನಗಳನ್ನು ಮಾಡಿದಾಗ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದರತ್ತ ಗಮನ ಸೆಳೆದ ಪ್ರಧಾನಿ ಬುಡಕಟ್ಟು ಯುವಜನರು ಮುಂದೆ ಸಾಗುತ್ತಾರೆ ಮತ್ತು ಅವರ ಸಾಮರ್ಥ್ಯದಿಂದ ದೇಶವು ಪ್ರಯೋಜನ ಪಡೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಾರ್ಖಂಡ್ ರಾಜ್ಯಪಾಲ ಶ್ರೀ ಸಂತೋಷ್ ಗಂಗ್ವಾರ್ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುವಾಲ್ ಓರಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ದೇಶಾದ್ಯಂತ ಬುಡಕಟ್ಟು ಸಮುದಾಯಗಳ ಸಮಗ್ರ ಮತ್ತು ಪೂರ್ಣ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಒಟ್ಟು 80,000 ಕೋಟಿ ರೂ.ಗಳ ವೆಚ್ಚದಲ್ಲಿ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನವು ಸುಮಾರು 63,000 ಗ್ರಾಮಗಳನ್ನು ಒಳಗೊಂಡಿದ್ದು, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 549 ಜಿಲ್ಲೆಗಳು ಮತ್ತು 2,740 ಬ್ಲಾಕ್ಗಳಲ್ಲಿ 5 ಕೋಟಿಗೂ ಹೆಚ್ಚು ಬುಡಕಟ್ಟು ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಭಾರತ ಸರ್ಕಾರದ ವಿವಿಧ 17 ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿಗೆ ತಂದ 25 ಮಧ್ಯಪ್ರವೇಶಗಳ ಮೂಲಕ ಸಾಮಾಜಿಕ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯದಲ್ಲಿನ ನಿರ್ಣಾಯಕ ಕಂದಕ/ಅಂತರಗಳನ್ನು ನಿವಾರಿಸುವ/ ಪೂರೈಸುವ ಗುರಿಯನ್ನು ಇದು ಹೊಂದಿದೆ.
ಬುಡಕಟ್ಟು ಸಮುದಾಯಗಳ ಶೈಕ್ಷಣಿಕ ಮೂಲಸೌಕರ್ಯವನ್ನು ಹೆಚ್ಚಿಸುವ ಸಲುವಾಗಿ, ಪ್ರಧಾನಮಂತ್ರಿಯವರು 40 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (ಇಎಂಆರ್ ಎಸ್) ಉದ್ಘಾಟಿಸಿದರು ಮತ್ತು 2,800 ಕೋಟಿ ರೂ.ಗೂ ಹೆಚ್ಚು ಮೌಲ್ಯದ 25 ಇಎಂಆರ್ ಎಸ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮಾನ್) ಅಡಿಯಲ್ಲಿ 1360 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ 1380 ಕಿ.ಮೀ ರಸ್ತೆ, 120 ಅಂಗನವಾಡಿಗಳು, 250 ವಿವಿಧೋದ್ದೇಶ ಕೇಂದ್ರಗಳು ಮತ್ತು 10 ಶಾಲಾ ಹಾಸ್ಟೆಲ್ ಗಳು ಸೇರಿವೆ. ಇದಲ್ಲದೆ, ಪಿಎಂ ಜನಮಾನ್ ಅಡಿಯಲ್ಲಿ ಹಲವಾರು ಮೈಲಿಗಲ್ಲು ಸಾಧನೆಗಳನ್ನು ಅವರು ಅನಾವರಣಗೊಳಿಸಿದರು, ಇದರಲ್ಲಿ ಸುಮಾರು 3,000 ಹಳ್ಳಿಗಳಲ್ಲಿ 75,800 ಕ್ಕೂ ಹೆಚ್ಚು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಮನೆಗಳ ವಿದ್ಯುದ್ದೀಕರಣ, 275 ಸಂಚಾರಿ ವೈದ್ಯಕೀಯ ಘಟಕಗಳ ಕಾರ್ಯಾಚರಣೆ, 500 ಅಂಗನವಾಡಿ ಕೇಂದ್ರಗಳ ಕಾರ್ಯಾಚರಣೆ, 250 ವನ ಧನ್ ವಿಕಾಸ್ ಕೇಂದ್ರಗಳ ಸ್ಥಾಪನೆ ಮತ್ತು 5,550 ಕ್ಕೂ ಹೆಚ್ಚು ಪಿವಿಟಿಜಿ ಗ್ರಾಮಗಳನ್ನು 'ನಲ್ ಸೆ ಜಲ್' ನೊಂದಿಗೆ ಜೋಡಿಸುವಿಕೆಯೂ ಸೇರಿದೆ.
*****
(Release ID: 2061301)
Visitor Counter : 42
Read this release in:
English
,
Urdu
,
Marathi
,
Hindi
,
Bengali
,
Manipuri
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam