ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ಭಾರತೀಯ ಸಿನೆಮಾದಲ್ಲಿ ಉತ್ತುಂಗ ಶಿಖರವನ್ನು ತಲುಪಲು ಮಿಥುನ್ ದಾ ಅವರು ಭರವಸೆ, ಪರಿಶ್ರಮ ಮತ್ತು ಕನಸಿನ ಅನ್ವೇಷಣೆಯ ಮೂಲಕ ಪರಿಕ್ರಮಿಸಿದ ಪ್ರಯಾಣದ ಸಂಭ್ರಮಾಚರಣೆ  


2022ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನಾ  ಪ್ರಶಸ್ತಿಗೆ ಖ್ಯಾತ ನಟ ಮಿಥುನ್ ಚಕ್ರವರ್ತಿ ಆಯ್ಕೆ

ಈ ನಟನ ಸಿನಿಮಾ ಪ್ರಯಾಣವು ಗಾಢ, ಗಮನಾರ್ಹ ಮತ್ತು ಸ್ಪೂರ್ತಿದಾಯಕವಾಗಿದೆ; ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ಅವರನ್ನು ಮಹತ್ವಾಕಾಂಕ್ಷೆಯ ನಟರು ಮತ್ತು ಕಲಾವಿದರಿಗೆ ಮಾದರಿಯನ್ನಾಗಿ ಮಾಡಿದೆ: ಶ್ರೀ ಅಶ್ವಿನಿ ವೈಷ್ಣವ್

ದಂತಕತೆಯಂತಹ ನಟ ತನ್ನ ಸಿನಿಮಾ ಕೊಡುಗೆಗಳ ಮೂಲಕ ತಲೆಮಾರುಗಳಿಗೆ ಸ್ಫೂರ್ತಿ ಒದಗಿಸುತ್ತಾರೆ ಮತ್ತು ಲೋಕೋಪಕಾರಿ ಹಾಗೂ  ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡುವ ಮೂಲಕ  ಶ್ರೇಷ್ಠತ್ವ ಮತ್ತು ಸಹಾನುಭೂತಿಯ ಶಾಶ್ವತ ಪರಂಪರೆಯನ್ನು ಸೃಷ್ಟಿಸುತ್ತಾರೆ

Posted On: 30 SEP 2024 9:58AM by PIB Bengaluru

ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರಿಗೆ 2022ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಹಾಗು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು,  ಮಿಥುನ್ ಚಕ್ರವರ್ತಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಇಂದು ಪ್ರಶಸ್ತಿಯನ್ನು ಘೋಷಿಸಿದರು. ಬಹುಮುಖ ಅಭಿನಯ ಮತ್ತು ಬೆಳ್ಳಿ ಪರದೆಯಲ್ಲಿ  ತಮ್ಮ  ವರ್ಚಸ್ವೀ ಉಪಸ್ಥಿತಿಯ ಮೂಲಕ  ಹೆಸರುವಾಸಿಯಾದ ಚಲನಚಿತ್ರೋದ್ಯಮದ ಅತ್ಯಂತ ಪ್ರೀತಿಪಾತ್ರ ಮತ್ತು ಅಪ್ರತಿಮ ವ್ಯಕ್ತಿಗಳಲ್ಲಿ ಒಬ್ಬರನ್ನು ಗೌರವಿಸುವಲ್ಲಿ ತಮಗೆ ಸಂತೋಷವಾಗುತ್ತಿದೆ ಎಂದು ಸಚಿವರು ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು.

 

ಮಿಥುನ್ ದಾ ಅವರ ಗಮನಾರ್ಹ ಪ್ರಯಾಣ

ಮಿಥುನ್ ದಾ ಎಂದೂ ಕರೆಯಲ್ಪಡುವ ಮಿಥುನ್ ಚಕ್ರವರ್ತಿ ಒಬ್ಬ ಅಪ್ರತಿಮ ಭಾರತೀಯ ನಟ, ನಿರ್ಮಾಪಕ ಮತ್ತು ರಾಜಕಾರಣಿ, ಅವರು  ಬಹುಮುಖೀ  ಪಾತ್ರಗಳು ಮತ್ತು ವಿಶಿಷ್ಟ ನೃತ್ಯ ಶೈಲಿಯಿಂದಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ತಮ್ಮ ಚಲನಚಿತ್ರಗಳಲ್ಲಿ ವೈವಿಧ್ಯಮಯ ಶ್ರೇಣಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಕ್ಷನ್-ಪ್ಯಾಕ್ಡ್ ಪಾತ್ರಗಳನ್ನು ಮಾರ್ಮಿಕ ನಾಟಕೀಯ ಅಭಿನಯದ  ಮೂಲಕ  ಪ್ರದರ್ಶಿಸಿದ್ದಾರೆ.
ಯುವಕನಾಗಿ ವಿನಮ್ರ ಆರಂಭವನ್ನು ಮಾಡಿ  ಪ್ರಸಿದ್ಧ ಚಲನಚಿತ್ರ ಐಕಾನ್ ಆಗಿ ಮಿಥುನ್ ಚಕ್ರವರ್ತಿಯವರ  ಪ್ರಯಾಣವು ಭರವಸೆ ಮತ್ತು ಪರಿಶ್ರಮದ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಉತ್ಸಾಹ ಮತ್ತು ಸಮರ್ಪಣೆಯಿಂದ ಒಬ್ಬರು ಅತ್ಯಂತ ಮಹತ್ವಾಕಾಂಕ್ಷೆಯ ಕನಸುಗಳನ್ನು ಸಹ ಸಾಧಿಸಬಹುದು ಎಂಬುದನ್ನು ಇದು  ಸಾಬೀತುಪಡಿಸುತ್ತದೆ ಎಂದು ಸಚಿವರು ಹೇಳಿದರು. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ಅವರನ್ನು ಮಹತ್ವಾಕಾಂಕ್ಷೆಯ ನಟರು ಮತ್ತು ಕಲಾವಿದರಿಗೆ ಮಾದರಿಯನ್ನಾಗಿ ಮಾಡಿದೆ ಎಂದರು. 

1950ರ ಜೂನ್ 16 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ಗೌರಂಗ್ ಚಕ್ರವರ್ತಿ, ತಮ್ಮ ಮೊದಲ ಚಿತ್ರ "ಮೃಗಯಾ" (1976) ದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದರು. ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ .ಟಿ .ಐ. ಐ) ಹಳೆಯ ವಿದ್ಯಾರ್ಥಿಯಾಗಿರುವ ಮಿಥುನ್ ಚಕ್ರವರ್ತಿ ತಮ್ಮ ಕಲಾಕೌಶಲ್ಯವನ್ನು  ಮೆರೆದರು  ಮತ್ತು ಚಿತ್ರರಂಗದಲ್ಲಿ ತಮ್ಮ  ಪ್ರಸಿದ್ಧ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದರು.

ಮೃಣಾಲ್ ಸೇನ್ ಅವರ ಚಿತ್ರದಲ್ಲಿ ಸಂತಾಲ್ ಬಂಡಾಯಗಾರನ ಪಾತ್ರವು ಅವರಿಗೆ ರಾಷ್ಟ್ರೀಯ ಮೆಚ್ಚುಗೆಯನ್ನು ತಂದಿತು. ಮಿಥುನ್ 1980 ರ ದಶಕದಲ್ಲಿ "ಡಿಸ್ಕೋ ಡ್ಯಾನ್ಸರ್" (1982) ಚಿತ್ರದಲ್ಲಿನ ಪಾತ್ರದೊಂದಿಗೆ ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದರು, ಇದು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಯಶಸ್ಸನ್ನು ಗಳಿಸಿತು, ಅವರನ್ನು ನೃತ್ಯ ಕೌಶಲ್ಯದ ಬಹಳ ದೊಡ್ಡ ’ಸೆನ್ಸೇಶನ್” ಆಗಿ ಸ್ಥಾಪಿಸಿತು. ಡಿಸ್ಕೋ ಡ್ಯಾನ್ಸರ್ (1982) ಚಿತ್ರದಲ್ಲಿನ ಅಪ್ರತಿಮ ಪಾತ್ರದೊಂದಿಗೆ ಅವರು ಮನೆಮಾತಾದರು. ಇದು ಅವರ ಅಸಾಧಾರಣ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿತು ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿತು. ಅಗ್ನಿಪಥ್ ಚಿತ್ರದಲ್ಲಿನ ಅವರ ಅಭಿನಯವು ಅವರಿಗೆ 1990 ರಲ್ಲಿ ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.

ಬಳಿಕ, ಅವರು ತಹದೇರ್ ಕಥಾ (1992) ಮತ್ತು ಸ್ವಾಮಿ ವಿವೇಕಾನಂದ (1998) ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಇನ್ನೂ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು. ಹಿಂದಿ, ಬಂಗಾಳಿ, ಒಡಿಯಾ, ಭೋಜ್ಪುರಿ ಮತ್ತು ತೆಲುಗು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಥುನ್ ನಟಿಸಿದ್ದಾರೆ. ಅವರು ಆಕ್ಷನ್ ನಿಂದ ನಾಟಕ ಮತ್ತು ಹಾಸ್ಯದವರೆಗೆ ವೈವಿಧ್ಯಮಯ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅತ್ಯುತ್ತಮ ನಟನೆಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 

ಮಿಥುನ್ ದಾ ಅವರ ದ್ವಿಪರಂಪರೆ

ಮಿಥುನ್ ದಾ ಅವರನ್ನು ಅವರ ಸಿನಿಮೀಯ ಸಾಧನೆಗಳಿಗಾಗಿ ಮಾತ್ರವಲ್ಲದೆ ಸಾಮಾಜಿಕ ಕಾರಣಗಳಿಗಾಗಿ ಅವರ ಬದ್ಧತೆಗಾಗಿಯೂ ಸಂಭ್ರಮಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಅವರು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ದೀನದಲಿತ ಸಮುದಾಯಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ವಿವಿಧ ದತ್ತಿ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದು ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಹಿಂದಿರುಗಿಸುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರು ಸಂಸತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಸಾರ್ವಜನಿಕ ಸೇವೆ ಮತ್ತು ಆಡಳಿತಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಸುಮಾರು ಐದು ದಶಕಗಳ ವೃತ್ತಿಜೀವನದಲ್ಲಿ, ಭಾರತೀಯ ಚಿತ್ರರಂಗಕ್ಕೆ ತಮ್ಮ ಗಮನಾರ್ಹ ಕೊಡುಗೆಗಳಿಗಾಗಿ ಮಿಥುನ್ ಚಕ್ರವರ್ತಿ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪ್ರಶಸ್ತಿಗಳು ಮತ್ತು ಪ್ರಶಂಸೆಗಳನ್ನು ಪಡೆದಿದ್ದಾರೆ.  ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. "ಡಿಸ್ಕೋ ಡ್ಯಾನ್ಸರ್" ಮತ್ತು "ಘರ್ ಏಕ್ ಮಂದಿರ್" ನಂತಹ ಕ್ಲಾಸಿಕ್ ಗಳನ್ನು ಒಳಗೊಂಡಿರುವ ಫಿಲ್ಮೋಗ್ರಫಿಯೊಂದಿಗೆ, ಅವರು ಲಕ್ಷಾಂತರ ಜನರನ್ನು ರಂಜಿಸಿದ್ದಾರೆ ಮಾತ್ರವಲ್ಲದೆ ಬಾಲಿವುಡ್ ಮತ್ತು ಪ್ರಾದೇಶಿಕ ಸಿನೆಮಾದ ಭೂದೃಶ್ಯವನ್ನು ರೂಪಿಸಿದ್ದಾರೆ. ಅವರ ಪ್ರಭಾವವು ಬೆಳ್ಳಿ ಪರದೆಯ ಆಚೆಗೂ ವಿಸ್ತರಿಸಿದೆ, ಏಕೆಂದರೆ, ಅವರು ಚಲನಚಿತ್ರ ಮತ್ತು ಲೋಕೋಪಕಾರದಲ್ಲಿ ತಮ್ಮ ಕೆಲಸದ ಮೂಲಕ ತಲೆಮಾರುಗಳನ್ನು ಪ್ರೇರೇಪಿಸುತ್ತಿದ್ದಾರೆ.

2024ರ ಅಕ್ಟೋಬರ್ 8ರ ಮಂಗಳವಾರ ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಕೆಳಗಿನ ಸದಸ್ಯರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಭಾಗವಾಗಿದ್ದರು:

1. ಆಶಾ ಪರೇಖ್
2. ಖುಷ್ಬೂ ಸುಂದರ್
3. ವಿಪುಲ್ ಅಮೃತಲಾಲ್ ಶಾ

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನಾ  ಪ್ರಶಸ್ತಿಯು ಮಿಥುನ್ ಚಕ್ರವರ್ತಿ ಅವರ ಕಲಾತ್ಮಕ ಪರಾಕ್ರಮವನ್ನು ಗುರುತಿಸುವುದಲ್ಲದೆ, ಅನೇಕರ ಜೀವನದಲ್ಲಿ ಬದಲಾವಣೆ ತಂದ ಸಹಾನುಭೂತಿಪರ ಮತ್ತು ಸಮರ್ಪಿತ ವ್ಯಕ್ತಿಯಾಗಿ ಅವರ ಶಾಶ್ವತ ಪರಂಪರೆಯನ್ನು ಗುರುತಿಸುತ್ತದೆ.

 

*****
 



(Release ID: 2060325) Visitor Counter : 16