ಸಂಪುಟ

ಪುಣೆ ಮೆಟ್ರೋ ಹಂತ-1 ಯೋಜನೆಯನ್ನು ದಕ್ಷಿಣದೆಡೆಗೆ ಸ್ವಾರ್ಗೇಟ್ ನಿಂದ ಕಾತ್ರಾಜ್ ವರೆಗೆ 5.46 ಕಿಮೀ ವಿಸ್ತರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ


ಯೋಜನೆಯ ಒಟ್ಟು ವೆಚ್ಚ ರೂ.2954.53 ಕೋಟಿ. 2029ರ ವೇಳೆಗೆ ಕಾರ್ಯನಿರ್ವಹಿಸಲಿದೆ

Posted On: 16 AUG 2024 8:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಪುಣೆ ಮೆಟ್ರೋ ಹಂತ-1 ಯೋಜನೆಯ ಅಸ್ತಿತ್ವದಲ್ಲಿರುವ ಪಿಸಿಎಂಸಿ- ಸ್ವಾರ್ಗೇಟ್ ಮೆಟ್ರೋ ಲೈನಿನ ಸ್ವಾರ್ಗೇಟ್ ನಿಂದ ಕಾತ್ರಾಜ್ ಅಂಡರ್ಗ್ರೌಂಡ್ ಲೈನ್ ವಿಸ್ತರಣೆಗೆ ಅನುಮೋದನೆ ನೀಡಿದೆ. ಈ ಹೊಸ ವಿಸ್ತರಣೆಯನ್ನು ಲೈನ್-ಎಲ್ ಬಿ ವಿಸ್ತರಣೆ ಎಂದು ಕರೆಯಲಾಗುತ್ತದೆ ಮತ್ತು ಇದು 5.46 ಕಿಮೀ ಇರುತ್ತದೆ ಮತ್ತು ಮೂರು ಭೂಗತ ನಿಲ್ದಾಣಗಳನ್ನು ಒಳಗೊಂಡಿದ್ದು, ಮಾರುಕಟ್ಟೆ ಯಾರ್ಡ್, ಬಿಬ್ವೆವಾಡಿ, ಬಾಲಾಜಿ ನಗರ ಮತ್ತು ಕಾತ್ರಾಜ್ ಉಪನಗರಗಳಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಪುಣೆಯಲ್ಲಿ ತಡೆರಹಿತ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯು ಫೆಬ್ರವರಿ, 2029ರೊಳಗೆ ಪೂರ್ಣಗೊಳ್ಳಲಿದೆ.

ಯೋಜನೆಯ ಅಂದಾಜು ವೆಚ್ಚ ರೂ.2954.53 ಕೋಟಿಗಳಾಗಿದ್ದು, ದ್ವಿಪಕ್ಷೀಯ ಏಜೆನ್ಸಿಗಳ ಕೊಡುಗೆಗಳೊಂದಿಗೆ ಆರ್ಥಿಕ ಬೆಂಬಲವನ್ನು ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರವು ಸಮಾನವಾಗಿ ಹಂಚಿಕೊಳ್ಳಬೇಕು.

ಈ ವಿಸ್ತರಣೆಯು ಮೆಟ್ರೋ ನಿಲ್ದಾಣ, ಎಂಎಸ್ ಆರ್ ಟಿ ಸಿ  ಬಸ್ ನಿಲ್ದಾಣ ಮತ್ತು ಪಿಎಂಪಿಎಂಎಲ್  ಬಸ್ ನಿಲ್ದಾಣವನ್ನು ಒಳಗೊಂಡಿರುವ ಸ್ವಾರ್ಗೇಟ್ ಮಲ್ಟಿಮೋಡಲ್ ಹಬ್ ನೊಂದಿಗೆ ಸಂಯೋಜಿಸುತ್ತದೆ, ಪುಣೆ ನಗರದ ಒಳಗಿನ ಮತ್ತು ಹೊರಗಿನ ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಈ ವಿಸ್ತರಣೆಯು ಪುಣೆಯ ದಕ್ಷಿಣ ಭಾಗ, ಪುಣೆಯ ಉತ್ತರ ಭಾಗಗಳು ಮತ್ತು ಪೂರ್ವ ಮತ್ತು ಪಶ್ಚಿಮ ಪ್ರದೇಶಗಳ ನಡುವೆ ಜಿಲ್ಲಾ ನ್ಯಾಯಾಲಯದ ಇಂಟರ್ ಚೇಂಜ್ ನಿಲ್ದಾಣದ ಮೂಲಕ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು  ಪುಣೆ ನಗರದ ಒಳಗೆ ಮತ್ತು ಹೊರಗೆ ಪ್ರಯಾಣಿಸಲು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.

ಸ್ವಾರ್ಗೇಟ್ ನಿಂದ ಕಾತ್ರಾಜ್ ಅಂಡರ್ ಗ್ರೌಂಡ್ ಲೈನ್ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ನಿವಾರಿಸುತ್ತದೆ ಮತ್ತು ಅಪಘಾತ  ಹಾಗು ಮಾಲಿನ್ಯದ ಅಪಾಯವನ್ನು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಸುರಕ್ಷಿತ, ಹೆಚ್ಚು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ಒದಗಿಸುತ್ತದೆ, ಹೀಗಾಗಿ ಸುಸ್ಥಿರ ನಗರಾಭಿವೃದ್ಧಿಯನ್ನು ಬೆಂಬಲಿಸುತ್ತದೆ.

ಹೊಸ ಕಾರಿಡಾರ್ ವಿವಿಧ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ರಾಜೀವ್ ಗಾಂಧಿ ಝೂಲಾಜಿಕಲ್ ಪಾರ್ಕ್, ತಲಜೈಹಿಲ್ಲಾಕ್ (ಟೆಕ್ಡಿ), ಮಾಲ್ ಗಳು ಮುಂತಾದ ಮನರಂಜನಾ ಕೇಂದ್ರಗಳು, ವಿವಿಧ ವಸತಿ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಮತ್ತು ಪ್ರಮುಖ ವ್ಯಾಪಾರ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಇದು ವೇಗವಾದ ಮತ್ತು ಹೆಚ್ಚು ಮಿತವ್ಯಯದ ಸಾರಿಗೆ ಆಯ್ಕೆಯನ್ನು ಒದಗಿಸುತ್ತದೆ, ಸಾವಿರಾರು ದೈನಂದಿನ ಪ್ರಯಾಣಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳು,  ಕಚೇರಿಗಳು ಮತ್ತು ವ್ಯಾಪಾರ ಕೇಂದ್ರಗಳಿಗೆ ಪ್ರಯಾಣಿಸುವ ವೃತ್ತಿಪರರಿಗೆ ಪ್ರಯೋಜನವನ್ನು ನೀಡುತ್ತದೆ. 2027, 2037, 2047, ಮತ್ತು 2057 ರಲ್ಲಿ  ಸ್ವಾರ್ಗೇಟ್ - ಕಾತ್ರಾಜ್ ಮಾರ್ಗದ ನಿರೀಕ್ಷಿಸಬಹುದಾದ ದೈನಂದಿನ ಪ್ರಯಾಣಿಕರು ಕ್ರಮವಾಗಿ 95,000,1.58 ಲಕ್ಷ, 1.87 ಲಕ್ಷ ಮತ್ತು 1.97 ಲಕ್ಷ ಪ್ರಯಾಣಿಕರು ಎಂದು ಅಂದಾಜಿಸಲಾಗಿದೆ.

ಯೋಜನೆಯನ್ನು ʼಮಹಾ-ಮೆಟ್ರೊʼದಿಂದ ಕಾರ್ಯಗತಗೊಳಿಸಲಾಗುವುದು, ಇದು ಸಿವಿಲ್, ಎಲೆಕ್ಟ್ರೋ-ಮೆಕಾನಿಕಲ್ ಮತ್ತು ಇತರ ಸಂಬಂಧಿತ ಸೌಲಭ್ಯಗಳು ಮತ್ತು ಕೆಲಸಗಳನ್ನು ನೋಡಿಕೊಳ್ಳುತ್ತದೆ. ಮಹಾ-ಮೆಟ್ರೊ ಈಗಾಗಲೇ ಪೂರ್ವ ಬಿಡ್ ಚಟುವಟಿಕೆಗಳನ್ನು ಪ್ರಾರಂಭಿಸಿದೆ ಮತ್ತು ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ, ಶೀಘ್ರದಲ್ಲೇ ಬಿಡ್ಡಿಂಗ್ ಗಾಗಿ ಒಪ್ಪಂದಗಳನ್ನು  ಪ್ರಕಟಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಕಾರ್ಯತಂತ್ರದ ವಿಸ್ತರಣೆಯು ಪುಣೆಯ ಆರ್ಥಿಕ ಸಾಮರ್ಥ್ಯವನ್ನು ಅನಾವರಣ ಮಾಡುವ ನಿರೀಕ್ಷೆಯಿದೆ, ಇದು ನಗರದ ಮೂಲಸೌಕರ್ಯಕ್ಕೆ ಗಮನಾರ್ಹವಾದ ಉತ್ತೇಜನವನ್ನು ನೀಡುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
 

*****



(Release ID: 2046181) Visitor Counter : 16