ಹಣಕಾಸು ಸಚಿವಾಲಯ

2024-25ನೇ ಸಾಲಿನ ಬಜೆಟ್ ನಲ್ಲಿ ಬಂಡವಾಳ ವೆಚ್ಚಕ್ಕೆ ₹ 11,11,111 ಕೋಟಿ ರೂ. ಹಂಚಿಕೆ


ರಾಜ್ಯ ಸರ್ಕಾರಗಳಿಂದ ಮೂಲಸೌಕರ್ಯ ಹೂಡಿಕೆ ಉತ್ತೇಜಿಸಲು ದೀರ್ಘಾವಧಿಯ ಬಡ್ಡಿ ರಹಿತ ಸಾಲಗಳಿಗೆ ₹ 1.5 ಲಕ್ಷ ಕೋಟಿ ರೂ. ಒದಗಿಸುವುದು

25,000 ಗ್ರಾಮೀಣ ವಸತಿಗಳಿಗೆ ಸರ್ವಋತು ಸಂಪರ್ಕ ಒದಗಿಸಲು ಪಿಎಂಜಿಎಸ್ ವೈ- IV ಹಂತ ಆರಂಭಿಸಲಾಗುವುದು

Posted On: 23 JUL 2024 12:43PM by PIB Bengaluru

ಮೂಲಸೌಕರ್ಯಗಳ ನಿರ್ಮಾಣ ಮತ್ತು ಸುಧಾರಣೆ ಆರ್ಥಿಕತೆಯ ಮೇಲೆ ಸಧೃಢ ಗುಣಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ಗುರುತಿಸಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ 2024-25ರ ಬಜೆಟ್ ನಲ್ಲಿ ಬಂಡವಾಳ ವೆಚ್ಚಕ್ಕಾಗಿ  11,11,111 ಕೋಟಿ ರೂ.ಗಳನ್ನು ಒದಗಿಸುವುದಾಗಿ ಘೋಷಿಸಿದರು. ಇದು ದೇಶದ ಜಿಡಿಪಿಯ ಶೇಕಡ 3.4 ರಷ್ಟಾಗಿರುತ್ತದೆ. ಇದರಿಂದ ಮುಂದಿನ 5 ವರ್ಷಗಳಲ್ಲಿ ಮೂಲಸೌಕರ್ಯಕ್ಕೆ ದೃಢ ಆರ್ಥಿಕ ನೆರವನ್ನು ನಿರ್ವಹಿಸಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.

ಇದೇ ಪ್ರಮಾಣದ ಮೂಲಸೌಕರ್ಯಕ್ಕಾಗಿ ಬೆಂಬಲ ನೀಡಲು ರಾಜ್ಯಗಳನ್ನು ಉತ್ತೇಜಿಸಲು, ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ವರ್ಷ ದೀರ್ಘಾವಧಿಯ ಬಡ್ಡಿ ರಹಿತ ಸಾಲಕ್ಕಾಗಿ ₹ 1.5 ಲಕ್ಷ ಕೋಟಿ ರೂ. ಗಳನ್ನು ಒದಗಿಸುವುದಾಗಿ ಘೋಷಿಸಿದರು. ಇದು ಮೂಲಸೌಕರ್ಯಕ್ಕಾಗಿ ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಗಳಿಗೆ  ನೆರವು ನೀಡುತ್ತದೆ.

ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಕುರಿತು ಮಾತನಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಖಾಸಗಿ ವಲಯದಿಂದ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಕಾರ್ಯಸಾಧ್ಯತೆಯ ಅಂತರ ನಿಧಿ ಮತ್ತು ನೀತಿಗಳು ಮತ್ತು ನಿಬಂಧನೆಗಳನ್ನು ಸಕ್ರಿಯಗೊಳಿಸುವ ಮೂಲಕ ಉತ್ತೇಜಿಸಲಾಗುವುದು ಎಂದು ಹೇಳಿದರು. ಮಾರುಕಟ್ಟೆ ಆಧಾರಿತ ಹಣಕಾಸು ನೀತಿಯನ್ನು ಹೊರತರಲಾಗುವುದು ಎಂದು ಅವರು ಉಲ್ಲೇಖಿಸಿದರು.

ಜನಸಂಖ್ಯೆಯ ಹೆಚ್ಚಳದ ದೃಷ್ಟಿಯಿಂದ ಅರ್ಹತೆ ಪಡೆದಿರುವ 25,000 ಗ್ರಾಮೀಣ ಜನವಸತಿಗಳಿಗೆ ಸರ್ವಋತು ಸಂಪರ್ಕವನ್ನು ಒದಗಿಸಲು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ)ಯ  4ನೇ ಹಂತವನ್ನು ಆರಂಭಿಸಲಾಗುವುದು ಎಂದು ಹಣಕಾಸು ಸಚಿವರು ಪ್ರಸ್ತಾಪಿಸಿದರು.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ನೀರಾವರಿ ಮತ್ತು ಪ್ರವಾಹ ನಿರ್ವಹಣೆಗೆ ಮೂಲಸೌಕರ್ಯಗಳ ಸೃಷ್ಟಿಯ ಬಗ್ಗೆಯೂ ಗಮನ ಹರಿಸಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಹಲವಾರು ರಾಜ್ಯಗಳಿಗೆ ಅವರು ಹಣಕಾಸಿನ ನೆರವು ಮತ್ತು ಸಹಾಯವನ್ನು ಘೋಷಿಸಿದರು.

ಬಿಹಾರದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಪ್ರವಾಹಗಳನ್ನು ಉಲ್ಲೇಖಿಸಿದ ಹಣಕಾಸು ಸಚಿವರು 11,500 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗಳಾದ ಕೋಸಿ-ಮೆಚಿ ಅಂತರ-ರಾಜ್ಯ ಸಂಪರ್ಕ ಮತ್ತು ಬ್ಯಾರೇಜ್‌ಗಳು, ನದಿ ಮಾಲಿನ್ಯ ತಗ್ಗಿಸುವುದು ಮತ್ತು ನೀರಾವರಿ ಸೇರಿದಂತೆ 20 ಇತರ ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಆರ್ಥಿಕ ನೆರವು ಘೋಷಿಸಿದರು. ಅಲ್ಲದೆ, ಕೋಸಿ ಸಂಬಂಧಿತ ಪ್ರವಾಹ ತಗ್ಗಿಸಲು ಮತ್ತು ನೀರಾವರಿ ಯೋಜನೆಗಳ ಸಮೀಕ್ಷೆ ಮತ್ತು ಪರಿಶೀಲನೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇದು ಭಾರತದ ಹೊರಗೆ ಹುಟ್ಟುವ ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳಿಂದ ಅಸ್ಸಾಂನಲ್ಲಿ ಅಗ್ಗಾಗ್ಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ನಿದರ್ಶನಗಳನ್ನು ಒಪ್ಪಿಕೊಂಡರು. "ನಾವು ಅಸ್ಸಾಂಗೆ ಪ್ರವಾಹ ನಿರ್ವಹಣೆ ಮತ್ತು ಸಂಬಂಧಿತ ಯೋಜನೆಗಳಿಗೆ ನೆರವು ನೀಡುತ್ತೇವೆ" ಎಂದು ಅವರು ಬಲವಾಗಿ ಪ್ರತಿಪಾದಿಸಿದರು.  

ಅಲ್ಲದೆ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರವಾಹ, ಮೇಘ ಸ್ಫೋಟಗಳು ಮತ್ತು ಭಾರಿ ಪ್ರಮಾಣದ ಭೂಕುಸಿತದಿಂದ ಅಪಾರ ನಷ್ಟವನ್ನು ಉಲ್ಲೇಖಿಸಿದ ಹಣಕಾಸು ಸಚಿವರು, ಪುನರ್ ನಿರ್ಮಾಣ ಮತ್ತು ಪುನರ್ವಸತಿಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೆರವು ನೀಡಲಿದೆ ಎಂದು ಹೇಳಿದರು. ಸಿಕ್ಕಿಂನಲ್ಲಿ ದಿಢೀರ್ ಪ್ರವಾಹಗಳು ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ಪರಿಗಣಿಸಿ, ಅವರು ಸಿಕ್ಕಿಂ ರಾಜ್ಯಕ್ಕೂ ನೆರವು ನೀಡುವುದಾಗಿ ಘೋಷಿಸಿದರು.

 

*****



(Release ID: 2035692) Visitor Counter : 6